ಕೀರ್ತಿ ನಿಧಿ ಕೇಸರಿ ಸಿಂಘ
ಹಪ್ಪಳ ಸಂಡಿಗೆಗಳ ಗರಿಮುರಿ -
ಪಾಯಸ ಭಕ್ಷ್ಯಗಳ ಮಿತ ಸಿಹಿ -
ಸೊಪ್ಪು ಪಲ್ಯಗಳ ಸವಿ ರುಚಿ-
ಮೆಣಸಿನ ಸಾರಿನ ಘಮ ಘಮ -
ಬಿಸಿಯೂಟದ ಸಂಭ್ರಮ !
" ಸ್ವಾದಿಷ್ಟವಾದ ಭೋಜನ ! ಮಧುರವಾಗಿತ್ತಮ್ಮ !'' ಎಂದು ತೃಪ್ತಿಯ ತೇಗನ್ನು ನಾಜೂಕಾಗಿ ಹೊರ ಹಾಕಿದ ನಂಜಪ್ಪೈಯನವರು,''ಅನ್ನ ದಾತಾ ಸುಖವಾಗಿರಲಿ!" ಎಂದು ಹರಸಿದರು.
ಕ್ಷೇತ್ರಪಾಲೈಯನ ಮಡದಿ ಸಂತೋಷಗೊಂಡು ಸಂಕೋಚದ ನಗೆ ಬೀರಿದಳು.
ಅಡಿಕೆ ಮತ್ತು ವೀಳ್ಯಗಳೊಡನೆ ಹಣ್ಣನ್ನೂ ತಂದು, ಹಜಾರದ ಕಂಬಕ್ಕೆ ಒರಗಿ ಕುಳಿತ ನಂಜಪ್ಪೈಯನವರ ಮುಂದೆ ಇಟ್ಟು ತಾನೂ ಕುಳಿತುಕೊಂಡ ಕ್ಷೇತ್ರಪಾಲೈಯ.
" ನಿಮ್ಮ ಮನೆಯ ಊಟಕ್ಕಿಂತಲೇ? ರುಕ್ಮಿಣಿ ಅಮ್ಮನವರ ಕೈ ಪಾಕ ಯಾರಿಗೆ ಬರುತ್ತದೆ?" ಎಂದು ಶ್ಲಾಘಿಸಿದ.
"ನೀವು ಬರುವ ದಾರಿಯಲ್ಲಿ ಹೊಸ ಭೋಜನ ಶಾಲೆಗಳು ಹುಟ್ಟಿಕೊಂಡಿವೆಯಂತೆ? ಇವರಂತೂ ಅಲ್ಲಿಯ ತಿಂಡಿಗಳನ್ನ ಹೊಗಳಿದ್ದೂ ಹೊಗಳಿದ್ದೇ! ಎಲ್ಲಾದರು ಊರು ಬಿಟ್ಟು ಹೋಗಬೇಕಿದ್ದರೆ ನಾನು ಕಟ್ಟಿ ಕೊಡುವ ಬುತ್ತಿ ಊಟ ಇತ್ತೀಚಿಗೆ ಇವರಿಗೆ ಬೇಕೇ ಇರುವುದಿಲ್ಲ! " ನೀರಿನ ಕುಡಿಕೆಯನ್ನು ತಂದಿಟ್ಟ ಕ್ಷೇತ್ರಪಾಲೈಯನ ಮಡದಿ ಕುತೂಹಲದಿಂದ ವಿಚಾರಿಸಿದಳು.
" ಹೌದೌದು! ನಾವೂ ಕೂಡ ಒಂದು ಕಡೆ ಊಟ ಮಾಡಿದೆವಮ್ಮ. ಊಟ ಬಿಸಿಯಾಗೆನೋ ಇತ್ತು. ಆದರೆ ನೀನು ಉಪಯೋಗಿಸಿದ್ದ ಒಂದು ವಿಶಿಷ್ಟ ಸಾಮಗ್ರಿ ಅದರಲ್ಲಿ ಇರಲೇ ಇಲ್ಲ. ಆದ್ದರಿಂದ ಊಟದ ರುಚಿ ಅಷ್ಟಕ್ಕಷ್ಟೇ !"
" ನಾನು ಮಾಮೂಲು ಅಡಿಗೆಯನ್ನೇ ಮಾಡಿದ್ದೆ ! ಅದ್ಯಾವ ವಿಶಿಷ್ಟ ಸಾಮಗ್ರಿಯನ್ನು ನೀವು ಅದರಲ್ಲಿ ಕಂಡಿರಿ ?"
"ಆ ಸಾಮಗ್ರಿಯನ್ನ ನಿನ್ನ ದೊಡ್ಡ ಮನಸ್ಸು ಎನ್ನುವುದೋ, ಇಲ್ಲ ಪ್ರೀತ್ಯಾದರ ಎನ್ನುವುದೋ, ಅಥವಾ ವಾತ್ಸಲ್ಯವೆನ್ನಬೇಕೋ ತಿಳಿಯುತ್ತಿಲ್ಲ !" ಭಾವುಕರಾಗಿ ನುಡಿದರು ನಂಜಪ್ಪೈಯ.
" ಓಹೋಹೋ! ಅಂದರೆ ದೊಡ್ಡ ಮನಸ್ಸನ್ನು ಹಾಕಿ ಕಲಕಿದರೆ ಮೆಣಸಿನ ಸಾರು ಕೂಡ ಮಧುರವಾಗಿರುತ್ತದೆ ಅನ್ನಿ!" ಬೆರಗಾದವನಂತೆ ಕಣ್ಣರಳಿಸಿ ನಾಟಕೀಯವಾಗಿ ನುಡಿದ ಕ್ಷೇತ್ರಪಾಲೈಯ.
" ದಿನ ನಿತ್ಯದ ಅಡುಗೆಯಲ್ಲಿ ಇವಳು ಅದೇನನ್ನು ಹಾಕಿ ಕಲಕುತ್ತಾಳೋ ಏನೋ! ಆದರೆ ನೋಡಿ, ಊಟ ತಿಂದ ಕೂಡಲೇ ತಪ್ಪದೇ ನನ್ನ ಹೊಟ್ಟೆ ಕಲಕುವುದು ಮಾತ್ರ ನಿಜ !"
ಕ್ಷೇತ್ರಪಾಲೈಯನ ಮಾತಿನಿಂದ ಆತನ ಮಡದಿ ಹುಸಿಗೋಪಗೊಂಡು ಒಳಕ್ಕೆ ಹೊರಟು ಹೋದಳು.
ಬಿಸಿ ಸ್ನಾನ ಮತ್ತು ಬಿಸಿಯೂಟದ ನಂತರ ನಂಜಪ್ಪೈಯನವರ ದಣಿವು ಅಗಲಿದಂತೆಯೇ, ಕೇಸರಿಯ ಬಗೆ ಅವರ ಮನಸ್ಸನ್ನು ಹಿಂಡುತ್ತಿದ್ದ ಆತಂಕವೂ ಕೂಡ ಸ್ವಲ್ಪ ಕಡಿಮೆಯಾದಂತಿತ್ತು.
ಕೇಸರಿಗೆ ಪಾಠದ ಸಮಯವಾದ್ದರಿಂದ, ಸಂಜೆಯ ವೇಳೆಗೆ ಆತನನ್ನು ಕಾಣಲು ಹೋಗುವುದೇ ಶ್ಲಾಘ್ಯವೆಂದು ಕ್ಷೇತ್ರಪಾಲೈಯ ಹೇಳಿದ್ದ. ಮಗನನ್ನು ಕಾಣುವ ಆಸೆಯಿಂದ ಹಾತೊರೆಯುತ್ತಿದ್ದ ಮನಸ್ಸನ್ನು ಬಹಳ ಕಷ್ಟಪಟ್ಟು ಹತೋಟೆಯಲ್ಲಿಟ್ಟುಕೊಂಡು ಸಹಜವಾದ ಮಾತು ಕಥೆಯಲ್ಲಿ ಪಾಲ್ಗೊಂಡಿದ್ದರು ನಂಜಪ್ಪೈಯನವರು. ಕ್ಷೇತ್ರಪಾಲೈಯನ ಹಾಸ್ಯಕಾರಕ ಚಟಾಕಿಗಳಿಗೆ ಹೃತ್ಪೂರ್ವಕವಾಗಿ ನಕ್ಕಾಗ ನಂಜಪ್ಪೈಯನವರ ಮನಸ್ಸು ಸಂಪೂರ್ಣವಾಗಿ ಹಗುರವಾಯಿತು.
" ಅಯ್ಯೋ ಅಮ್ಮಾ !"
ಇದ್ದಕ್ಕಿದ್ದಹಾಗೆಯೇ ಪೊನ್ನನ ಚೀತ್ಕಾರ ಕೇಳಿಸಿತು. ಕೈಯಲ್ಲಿದ್ದ ವೀಳ್ಯ ಕೆಳಕ್ಕೆ ಜಾರಲು, ಗೆಳೆಯರಿಬ್ಬರೂ ಥಟ್ಟನೆ ಎದ್ದರು .
" ಅಯ್ಯೋ! ಪೊನ್ನ ! ಎಲ್ಲಿಗೆ ಹೋದನಪ್ಪ ಇವನು!" ಗಾಬರಿಗೊಂಡು ಉದ್ಗರಿಸಿದರು ನಂಜಪ್ಪೈಯನವರು.
" ಇಲ್ಲೇ , ಲಾಯದಲ್ಲಿ ಕುದುರೆ ಮರಿಯನ್ನ ನೋಡುತ್ತ ನಿಂತಿದ್ದನಲ್ಲ!''
ತ್ವರಿತವಾಗಿ ಲಾಯದ ಕಡೆ ನಡೆದ ಕ್ಷೇತ್ರಪಾಲೈಯನನ್ನು ಚಡಪಡಿಸುತ್ತಲೇ ಹಿಂಬಾಲಿಸಿದರು ನಂಜಪ್ಪೈಯ.
ಲಾಯದಲ್ಲಿ -
ಗಾಬರಿಗೊಂಡು ನಿಂತಿದ್ದ ಪೋನ್ನನ ಕೈಯನ್ನು ಪರಿಶೀಲಿಸುತ್ತಿದ್ದ ಒಬ್ಬ ವ್ಯಕ್ತಿ .
"ಸುಲೈಮಾನ್! ಏನಾಯಿತು?" ಕಳವಳಗೊಂಡು ಆತನನ್ನು ಪ್ರಶ್ನಿಸಿದ ಕ್ಷೇತ್ರಪಾಲೈಯ.
"ಹುರುಳಿ ಮೂಟೆ ಇಳಿಸಿದೆನಾ ಜನಾಬ್? ನೀರಿನ ಬಾನಿ ಉರುಳಿತೇ? ಆ ಗದ್ದಲಕ್ಕೆ ಹೆದರಿಬಿಟ್ಟಳು ''ಬಿಜಿಲಿ"! ಪಾಪ ! ಇವರು ಪಕ್ಕದಲ್ಲೇ ನಿಂತಿದ್ದರಾ? 'ಗಬಕ್'ಅಂತ ಇವರನ್ನ ಕಚ್ಚಿಬಿಟ್ಟಳು!"
ಸುಲೈಮಾನನ ಆರಾಮವಾದ ವರ್ಣನೆಯನ್ನು ಲೆಕ್ಕಿಸದೆ, ಪೊನ್ನನ ಕೈಯನ್ನು ಹಿಡಿದು ಪರೀಕ್ಷಿಸಿದ ಕ್ಷೇತ್ರಪಾಲೈಯ.
" ಸಧ್ಯ! ಚರ್ಮ ಒಡೆದಿಲ್ಲ! ರಕ್ತ ಸ್ರಾವವಾಗಿಲ್ಲ. ಆದ್ದರಿಂದ ಸೋಂಕು ಅಂಟುವ ಅಪಾಯವಿಲ್ಲ." ಎಂದು ನೆಮ್ಮದಿಯ ನಿಟ್ಟುಸಿರೆಳೆದ.
"ಅಲ್ಲ ಸುಲೈಮಾನ್! ಲಾಯಕ್ಕೆ ಬರುವಾಗ ನಿಧಾನ ಬೇಡವೇ? ಸದ್ದು ಗದ್ದಲ ಮಾಡ ಬೇಡವೆಂದು ಬಾರಿ ಬಾರಿಗೂ ಹೇಳುತ್ತಿರಬೇಕೆ? ಮರಿ ಹಾಕಿರುವ ಕುದುರೆಯ ವಿಚಾರದಲ್ಲಿ ನೀನು ಸ್ವಲ್ಪ ಹುಷಾರಾಗಿರ ಬೇಡವೇ ?"
ಅಸಮಾಧಾನದಿಂದ ನುಡಿದ ಕ್ಷೇತ್ರಪಾಲೈಯ, ಪೋನ್ನನನ್ನು ಮನೆಯೊಳಕ್ಕೆ ಕರೆದುಕೊಂಡು ನಡೆದ.
" ಹೆದರಿ ಬಿಟ್ಟೆಯಾ ಪೊನ್ನ? ಈ ಮಜ್ಜಿಗೆ ಕುಡಿದು ಸುಧಾರಿಸಿಕೋ."
ಕ್ಷೇತ್ರಪಾಲೈಯನ ಮಡದಿ ಆದರದಿಂದ ಬಿಸಿ ಮಾಡಿಕೊಂಡು ತಂದಿಟ್ಟ ಮಜ್ಜಿಗೆಯನ್ನು ಅವಸರವಸರವಾಗಿ ಗುಟುಕರಿಸಿದ ಪೊನ್ನ. ಪುರಾತನವಾದ ವೈದ್ಯ ಪದ್ದತಿಯಂತೆ ಬಿಸಿ ಮಾಡಲ್ಪಟ್ಟ ಮಜ್ಜಿಗೆ, ಭಯದಲ್ಲಿ ತಳಮಳಗೊಂಡಿದ್ದ ಆತನ ಹೊಟ್ಟೆಗೆ ಸಾಂತ್ವನ ನೀಡಿತು.
"ಯಾಕೋ ಪೊನ್ನ ಕುದುರೆಯ ಬಳಿ ಹೋಗಿದ್ದೆ?" ವ್ಯಾಕುಲದಿಂದ ಪೊನ್ನನ ಕೈ ಹಿಡಿದೆತ್ತಿ ಕುದುರೆ ಕಚ್ಚಿದ ಗಾಯವನ್ನು ಆತಂಕದೊಡನೆ ವೀಕ್ಷಿಸಿದರು ನಂಜಪ್ಪೈಯನವರು.
"ನಂಜಪ್ಪೈಯನವರೆ ! ಗಾಬರಿಯಾಗ ಬೇಡಿ. ಸಧ್ಯ! ಏನೂ ಅನಾಹುತವಾಗಿಲ್ಲ."
ಔಷದದ ಸೀಸೆಯಿಂದ ಮುಲಾಮನ್ನು ತೆಗೆದು ಪೊನ್ನನ ಗಾಯದ ಮೇಲೆ ಲೇಪಿಸುತ್ತಲೇ ಅವರನ್ನು ಸಂತೈಸಿದ ಕ್ಷೇತ್ರಪಾಲೈಯ.
" ಕುದುರೆ ಸಾಧು ಪ್ರಾಣಿ ಎಂದುಕೊಂಡು ಅದರ ಬೆನ್ನು ಸವರಲು ಹೊರಟಿದ್ದೆ. ಹೀಗೆ ಕಚ್ಚುತ್ತದೆ ಎಂದುಕೊಂಡಿರಲಿಲ್ಲ.'' ಮಜ್ಜಿಗೆ ಲೋಟ ಕೆಳಗಿಟ್ಟು, ಸಹಜಸ್ಥಿತಿಗೆ ಹಿಂದಿರುಗಿದ್ದ ಪೊನ್ನ ಆಶ್ಚರ್ಯ ವ್ಯಕ್ತ ಪಡಿಸಿದ.
" ಕುದುರೆಗಳು ಸ್ವಾಭಾವಿಕವಾಗಿ ಧೈರ್ಯ ಹೀನ ಜೀವಿಗಳು ಪೊನ್ನ. ಕಚ್ಚುವುದು, ಒದೆಯುವುದು, ತುಳಿಯುವುದು ಎಲ್ಲ ಅವುಗಳು ಭಯದಿಂದ, ಆತ್ಮರಕ್ಷಣೆಗಾಗಿ ಕೈಗೊಳ್ಳುವ ಕೃತ್ಯಗಳಷ್ಟೇ. ನೀರಿನ ಬಾನಿ ಉರುಳಿದ ಶಬ್ದ ಕೇಳಿ ತನಗೂ ತನ್ನ ಮರಿಗೂ ಏನೋ ಅಪಾಯವಾಗಲಿದೆ ಎಂದು ಹೆದರಿ, ತನ್ನನ್ನು ಕಾದುಕೊಳ್ಳಲು, ಪಕ್ಕದಲ್ಲಿದ್ದ ನಿನ್ನನ್ನು ಕಚ್ಚಲು ಹೊರಟಿತ್ತು ."
ಕ್ಷೇತ್ರಪಾಲೈಯ ವೀಳ್ಯವನ್ನ ಬಾಯಿಗೆ ಹಾಕಿ ಸವಿಯುತ್ತ ನುಡಿದ.
" ಆದರೆ ನಮ್ಮ ಸುಲ್ತಾನರ ಅಶ್ವದಳದ ಖ್ಯಾತಿ ದೇಶ ವಿದೆಶಗಳಲ್ಲೆಲ್ಲ ಹರಡಿದೆ! ಕುದುರೆಗಳು ಬಾನಿ ಉರುಳಿದ ಶಬ್ಧಕ್ಕೆ ಹೆದರುವಷ್ಟು ಧೈರ್ಯಹೀನ ಪ್ರಾಣಿಗಳಾದರೆ, ಅವು ಯುದ್ಧದಲ್ಲಿ ಪಾಲ್ಗೊಳ್ಳುವುದು ಹೇಗೆ ಸಾಧ್ಯ?" ಕುತೂಹಲದೊಡನೆ ಪ್ರಶ್ನಿಸಿದ ಪೊನ್ನ.
" ಅದೆಲ್ಲ ಕ್ಷೇತ್ರಪಾಲೈಯನವರ ಪವಾಡ ಪೊನ್ನ!" ಪೊನ್ನನ ಉತ್ಸಾಹ ಕಂಡು ನೆಮ್ಮದಿಯಿಂದ ನುಡಿದರು ನಂಜಪ್ಪೈಯನವರು.
" ಪಳಗಿಸ ಬೇಕು ಪೊನ್ನ. ನಮ್ಮ ಸುಲ್ತಾನರು ನನ್ನಂತಹ ಇನ್ನೂ ಅನೇಕ ತರಬೇತುಗಾರರನ್ನು ಇದಕ್ಕಾಗಿ ನೇಮಿಸಿದ್ದಾರೆ. ದೇಶ ವಿದೇಶಗಳಿಂದ ತರಿಸಿದ ಕುದುರೆಗಳು ಅವುಗಳ ಎತ್ತರ ಮತ್ತು ಗಾತ್ರಕ್ಕೆ ತಕ್ಕಂತೆ, ಗಾಡಿ ಎಳೆಯ ತಕ್ಕ ಕುದುರೆಗಳು, ಮಾಮೂಲೀ ಸವಾರಿ ಮಾಡ ತಕ್ಕ ಕುದುರೆಗಳು, ಮತ್ತು ರಣ ಭೂಮಿಗೆ ಕಳುಹಿಸ ತಕ್ಕ ಯುದ್ಧಾಶ್ವಗಳು ಎಂದು ವಿಂಗಡಿಸಲ್ಪಡುತ್ತವೆ. ನಂತರ ಅವಕ್ಕೆ ಅನುಗುಣವಾದ ತರಬೇತಿಯೂ ನೀಡಲ್ಪಡುತ್ತದೆ. ಯುದ್ಧಾಶ್ವಗಳಿಗೆ ಫಿರಂಗಿಗಳ ಶಬ್ದಕ್ಕೆ ಹಿಂಜರಿಯದ ಎದೆಗಾರಿಕೆಯನ್ನು ತುಂಬುವುದು ಮಾತ್ರವಲ್ಲದೆ, ಎದುರಾಳಿಯನ್ನು ಕಚ್ಚಲು ಮತ್ತು ಒದ್ದು ತುಳಿದು ಹಾಕಲೂ ಕೂಡ, ವಿಶೇಷವಾದ ಶಿಕ್ಷಣ ನೀಡಲ್ಪಡುತ್ತದೆ. ಸುಲ್ತಾನರ ಅಶ್ವದಳದ ಖ್ಯಾತಿಯ ಗುಟ್ಟು ಈಗ ಅರಿವಾಯಿತೆ?"
ಆ ಸಮಯ ಮನೆಯ ಬಾಗಿಲಾಚೆಯಿಂದ ಯಾರೋ ಕರೆದ ಹಾಗಾಯಿತು.
'ಇಗೋ ಬಂದೆ!' ಎಂದು ಹೊರಗೆ ಎದ್ದು ಹೋದ ಕ್ಷೇತ್ರಪಾಲೈಯ. ಕೆಲವೇ ನಿಮಿಷಗಳಲ್ಲಿ ಆತ ಹಿಂದಿರುಗಿದಾಗ, ಆತನ ಮುಖ ಬಸವಳಿದು ಬಹಳ ಗಂಭೀರವಾಗಿ ಬಿಟ್ಟಿತ್ತು.
'' ಒಂದು ತುರ್ತಿನ ಕೆಲಸದ ಮೇಲೆ ಕೂಡಲೇ ಹೊರಗೆ ಹೋಗ ಬೇಕಿದೆ."
ಕುತೂಹಲದಿಂದ ತನ್ನನ್ನು ದಿಟ್ಟಿಸಿದ ನಂಜಪ್ಪೈಯವನವರನ್ನು ನೇರವಾಗಿ ನೋಡದೆ, ಮೇಲ್ವಸ್ತ್ರವನ್ನು ಧರಿಸಿ ಅವಸರವಸರವಾಗಿ ಹೊರಟ ಕ್ಷೇತ್ರಪಾಲೈಯ.
"ಇವತ್ತಾದರೂ ಬೇಗ ಬಂದು ಬಿಡಿ ಅಂದರೆ ! ಅಣ್ಣಾವ್ರು ಬಂದಿರೋದನ್ನ ಮರೆತುಬಿಡ ಬೇಡಿ".
ಮಡದಿಯ ಮಾತು ಕೇಳಿಸಲೇ ಇಲ್ಲವೋ ಎಂಬಂತೆ ಬಿರಬಿರನೆ ಹೊರಟೇ ಹೋದ ಕ್ಷೇತ್ರಪಾಲೈಯ.
"ಬರಲಿ ಬಿಡಮ್ಮ. ಏನು ಅವಸರ ಕಾರ್ಯವೋ ಏನೋ!" ನಂಜಪ್ಪೈಯನವರು ಸಮಾಧಾನ ಹೇಳಿದರು.
"ನಿಮಗೆ ಗೊತ್ತಿಲ್ಲ ಅಣ್ಣ! ಹೀಗೇ ತುರ್ತಿನ ಕೆಲಸವೆಂದು ಹೊರಟರೆ ದಿನಗಟ್ಟಲೆ ಕಾಣಿಸಿಕೊಳ್ಳುವುದೇ ಇಲ್ಲ ಈ ಮನುಷ್ಯ."
ಕ್ಷೇತ್ರಪಾಲೈಯನ ಮಡದಿ ಬೇಸರದಿಂದ ಹೀಗೆ ನುಡಿದಾಗ ನಂಜಪ್ಪೈಯನವರ ಮನಸ್ಸು 'ಧಿಗ್' ಎಂದಿತು.
'ಹಾಗಾದರೆ ತಾನು ಕೇಸರಿಯನ್ನು ನೋಡುವುದೆಂತು? ಸಂಜೆಯೊಳಗೆ ಈತ ಬಾರದೆ ಹೋದಲ್ಲಿ ತಾನು ಸರದಾರ್ ಅಸ್ಲಾಮ್ ಜಾನನನ್ನು ಹುಡುಕಿಕೊಂಡು ಹೋಗಬೇಕಷ್ಟೆ.' ಎಂದು ಮನದಲ್ಲೇ ತೀರ್ಮಾನ ಮಾಡಿಕೊಂಡು ಚಾಪೆಯ ಮೇಲೆ ಮಲಗಿಕೊಂಡರು ನಂಜಪ್ಪೈಯನವರು.
ಪಕ್ಕದಲ್ಲಿ ಮಲಗಿದ್ದ ಪೊನ್ನನ ಮನಸ್ಸಲ್ಲಿ ಕುದುರೆಗಳ ಬಗ್ಗೆ ಕ್ಷೇತ್ರಪಾಲೈಯ ತಿಳಿಸಿಕೊಟ್ಟ ವಿಷಯಗಳೇ ತುಂಬಿಕೊಂಡಿದ್ದವು. ಮನಸ್ಸು ಚಿಂತೆಗಳ ಸರಪಳಿಯನ್ನು ಪೋಣಿಸ ತೊಡಗಿತು.
ಕೇಸರಿ ಕುದುರೆ ಸವಾರಿಯಲ್ಲಿ ಪ್ರವೀಣನಂತೆ! ಅವನೂ ಯಾವತ್ತಾದರೂ ತನ್ನಂತೆಯೇ ಕುದುರೆಯಿಂದ ಕಚ್ಚಿಸಿಕೊಂಡಿರ ಬಹುದೇ? ಆತನದ್ದು ಯಾವ ಬಗ್ಗೆಯ ಕುದುರೆ ಇರ ಬಹುದು? ತಾನು ಕೂಡ ಸವಾರಿ ಮಾಡಲು ಸಾಧ್ಯವಾಗ ಬಹುದೇ? ಆದರೆ ಅಪ್ಪ ತನ್ನನ್ನು ಮಾತ್ರವಲ್ಲದೆ ಕೇಸರಿಯನ್ನೂ ವಾಪಸ್ಸು ಕರೆದುಕೊಂಡು ಹೋಗುತ್ತಾರಂತಲ್ಲ !
---------------------------------------------------------------------------------
ಸೆಣಸಿ ಸೆಣಸಿ ಕೈಗಳು ಸೋತು ಹೋಗ ತೊಡಗಿದವು !
ಜ್ವರದಲ್ಲಿ ಬೆಂದ ಒಡಲ ಶಕ್ತಿ ಬಸಿದು ಹೋಗಲಾರಂಭಿಸಿತು !
ಈ ತೋಳಗಳ ಹಿಂಡನ್ನ ಇನ್ನೂ ಎಷ್ಟು ಹೊತ್ತು ತಾನೆ ನಿಭಾಯಿಸಲು ಸಾಧ್ಯ?
ಅಯ್ಯೋ! ಇಂತಹ ಸಮಯದಲ್ಲಿ ಮಾಯಾ ತನ್ನ ಜೊತೆಗೂಡಿ ಇದ್ದಿದ್ದರೆ ?
ಇಷ್ಟು ಹೊತ್ತಿಗಾಗಲೇ ಈ ದುಷ್ಟ ದುರಾಚಾರಿಗಳ ನಿರ್ನಾಮ ಮಾಡಿ ತಾನೂ ಅಲ್ಲಿಂದ ಪಾರಾಗ ಬಹುದಿತ್ತು.
ತಾನು ಪಾಂಡುರಂಗಾಚಾರ್ಯರನ್ನು ಹಿಂಬಾಲಿಸಿ ಹೊರಟಾಗ ಮಾಯಾಳನ್ನೂ ಕರೆ ತರ ಬೇಕಿತ್ತು.
ಮರು ಕ್ಷಣವೇ ಕೇಸರಿ ತನ್ನ ಮೂರ್ಖತನಕ್ಕೆ ತಾನೇ ನೊಂದುಕೊಂಡ.
ಎಲ್ಲ ನಿಯೋಜಿಸಿಕೊಂಡು ಪೂರ್ವ ಸಿದ್ಧತೆಗಳೊಡನೆ ಹೊರಡಲು, ಇದೇನು ಶುದ್ಧ ವೀರರ ನಡುವೆ ಸಾಗುತ್ತಿರುವ ಧರ್ಮ ಯುದ್ಧವೇ?
" ಹಾ!"
ಕೇಸರಿ ತನ್ನನ್ನರಿಯದೆಯೇ ಚೀರಿದ !
ತನ್ನ ಭುಜದ ಮೇಲೆ ಬರೆ ಎಳೆದವರಾರು? ಅಯ್ಯೋ! ಉರಿ! ತಡೆಯಲಾರದ ಉರಿ!
ಕೇಸರಿ ತನ್ನನ್ನರಿಯದೆಯೇ ಚೀರಿದ !
ತನ್ನ ಭುಜದ ಮೇಲೆ ಬರೆ ಎಳೆದವರಾರು? ಅಯ್ಯೋ! ಉರಿ! ತಡೆಯಲಾರದ ಉರಿ!
ಕೇಸರಿಯ ಬಲ ಹೀನ ಸ್ಥಿತಿಯನ್ನು ಕಂಡು ಕೊಂಡು ಮುನ್ನುಗ್ಗಿದ್ದ ಒಬ್ಬ ಎದುರಾಳಿ, ತನ್ನ ಖಡ್ಗವನ್ನು ಅವನ ಭುಜದ ಮೇಲೆರಗಿಸಿದ್ದನು.
ಭುಜದಿಂದ ಕುಪ್ಪಳಿಸಿದ ರಕ್ತ ಕೇಸರಿಯ ಅಂಗಿಯನ್ನು ತೊಯ್ಯಿಸ ತೊಡಗಿತು. ಮತ್ತೊಂದು ಏಟು ಎರಗುವ ಮುನ್ನ ಕೇಸರಿ ತಾನು ಹಿಡಿದಿದ್ದ ಖಡ್ಗ ಮತ್ತು ಈಟಿಯನ್ನು ಎತ್ತಿ ಹಿಡಿದು ತಡೆಗಟ್ಟಿ, ಹೊಡೆಯಲು ಬಂದವನ ಹೊಟ್ಟೆಯ ಕೆಳ ಬಾಗಕ್ಕೆ ಗುರಿ ಇಟ್ಟು ಜಾಡಿಸಿ ಓದ್ದನು.
ಆತ 'ಅಯ್ಯೋ' ಎಂದು ಕೂಗಿ ನೆಲಕ್ಕೆ ಉರುಳಿ ವಿಲಿವಿಲಿ ಒದ್ದಾಡಿದನು.
ಅಷ್ಟರಲ್ಲಿ ಕೇಸರಿಯ ಮೇಲೆ ಮತ್ತೊಬ್ಬ ಹಲ್ಲೆ ಮಾಡಲು ಮುನ್ನುಗ್ಗಿದ.
" ಮಾರೋ! ಮಾರೋ! ಸೈತಾನ್ ಕೋ ಮಾರೋ!"
ಊದಿಕೊಂಡಿದ್ದ ತನ್ನ ಉಳುಕಿದ್ದ ಕಾಲನ್ನೆಳೆದುಕೊಂಡು ಅತ್ತಿಂದಿತ್ತ ಇತ್ತಿಂದತ್ತ ಕುಂಟುತ್ತಲೇ ಆವೇಶಗೊಂಡು ಅಬ್ಬರಿಸಿದ ಸುಬ್ಭಾನ್.
" ಸುಭಾನ್! ಥೈಲಿ ನಮಗೆ ಮುಖ್ಯ. ಅದನ್ನು ಮೊದಲು ವಶಪಡಿಸಿಕೊ. ಸುಮ್ಮನೆ ಆ ಹುಡುಗನಿಗೇಕೆ ಹಿಂಸೆ ಕೊಡುತ್ತಿರುವೆ ?"
ಈ ಗಲಭೆಯಿಂದಾದ ಕಾಲಹರಣ ಸಹಿಸಲಾರದೆ ಪಾಂಡುರಂಗಾಚಾರ್ಯರು ಸುಭಾನನ ಹಿಂದೆ ಹಿಂದೆಯೇ ನಡೆಯುತ್ತ ಚಡಪಡಿಸಿದರು.
" ಥೈಲಿ ನನ್ನ ವಶವಾಗುವುದು ಮುಖ್ಯ." ನನ್ನ ಎಂಬ ಪದವನ್ನು ಒತ್ತಿ ಹೇಳಿದ ಸುಭಾನ್.
"ಪದೇ ಪದೇ ನನ್ನ ದಾರಿಗೆ ಅಡ್ಡ ಬರುತ್ತಿರುವ ಈ ಚೊಕ್ರಾನ ಕಥಮ್ ಮಾಡುವುದೂ ನನಗೆ ಅಷ್ಟೇ ಮುಖ್ಯ."
ಪಾಂಡುರಂಗಾಚಾರ್ಯರನ್ನು ಬದಿಗೆ ನೂಕಿ ' ಮಾರೋ ! ಮಾರೋ!' ಎಂದು ಮತ್ತೆ ಕಿರುಚ ತೊಡಗಿದ ಸುಬ್ಭಾನ್.
'ಪಾಪಿ!ಪಾಪಿ! '
ಈತ ಥೈಲಿಯನ್ನು ವಶಪದಿಸಿಕೊಂಡರೂ ಅದು ತನಗೆ ಸಿಕ್ಕುವುದು ದುರ್ಲಭ ಎಂದರಿತುಕೊಂಡರು ಪಾಂಡುರಂಗಾಚಾರ್ಯರು.
ಈತ ಥೈಲಿಯನ್ನು ವಶಪದಿಸಿಕೊಂಡರೂ ಅದು ತನಗೆ ಸಿಕ್ಕುವುದು ದುರ್ಲಭ ಎಂದರಿತುಕೊಂಡರು ಪಾಂಡುರಂಗಾಚಾರ್ಯರು.
'ದೇವರೇ! ಥೈಲಿ ಕೇಸರಿಯ ಬಳಿಯೇ ಬದ್ರವಾಗಿರಲಪ್ಪ!'
ಕೇಸರಿ ಹೇಗೂ ತನ್ನ ಮನೆಯ ಹುಡುಗ. ಹೇಗಾದರೂ ಅವನನ್ನು ಪುಸಲಾಯಿಸಿ ಅವನಿಂದ ತಾನೇ ಥೈಲಿಯನ್ನು ಪಡೆದುಕೊಳ್ಳ ಬೇಕು!
ಕೇಸರಿ ಹೇಗೂ ತನ್ನ ಮನೆಯ ಹುಡುಗ. ಹೇಗಾದರೂ ಅವನನ್ನು ಪುಸಲಾಯಿಸಿ ಅವನಿಂದ ತಾನೇ ಥೈಲಿಯನ್ನು ಪಡೆದುಕೊಳ್ಳ ಬೇಕು!
'ಶ್ರೀ ರಂಗನಾಥಾ! ಕೇಸರಿಯನ್ನು, ಮುಖ್ಯವಾಗಿ ಥೈಲಿಯನ್ನ, ಈ ಪಾಪಿಷ್ಟರಿಂದ ಕಾಪಾಡಿ ಕೊಡಪ್ಪಾ!' ಮಾನಸಿಕವಾಗಿ ಬೇಡಿಕೊಳ್ಳ ತೊಡಗಿದರು ಪಾಂಡು ರಂಗಾಚಾರ್ಯರು!
ಈ ವರೆಗೆ ಎದುರಾಳಿಗಳಿಂದ ಸಾಮರ್ಥ್ಯವಾಗಿ ತಪ್ಪಿಸಿಕೊಂಡು ಬಂದಿದ್ದ ಕೇಸರಿ, ಭುಜ ಬಲ ಕುಂದಿರುವ ಈ ಪರಿಸ್ಥಿತಿಯಲ್ಲಿ ಅವರುಗಳ ಹೊಡೆತಗಳಿಗೆ ಗುರಿಯಾಗ ತೊಡಗಿದನು . ಪ್ರತಿಭಟಿಸುವ ತ್ರಾಣ ಕ್ಷೀಣವಾಗ ತೊಡಗಿತ್ತು.
ಕೇಸರಿ ತೂರಾಡಿ ಪೆಟ್ಟು ತಿನ್ನುತ್ತಿರುವುದನ್ನು ಕಾಣ ಸಹಿಸದ ಸುಲೋಚನ ದುಃಖ ತಡೆಯಲಾರದೆ ಅಳ ತೊಡಗಿದಳು. ಒಬ್ಬೊಂಟಿಗನಾದ ಚಿಕ್ಕ ಹುಡುಗನನ್ನು ಇಷ್ಟು ಜನ ಮೆತ್ತಿಕೊಂಡು ಸತಾಯಿಸುವುದು ಯಾವ ನ್ಯಾಯ? ಅದರಲ್ಲೂ ಜ್ವರದಿಂದ ಬಳಲುತ್ತಿರುವ ಹಸುಳೆ ಹುಡುಗ!
ಗಂಗಾಧರನಿಗೋ ಭಯದಲ್ಲಿ ಮಾತೆ ಹೊರಡಲಿಲ್ಲ. ಏನು ಮಾಡಲೂ ತೋಚಲಿಲ್ಲ. ತಾನು ಬಲಶಾಲಿಯೂ ಅಲ್ಲ. ಶಸ್ತ್ರ ವಿದ್ಯೆಯನ್ನು ಕಲಿತವನೂ ಅಲ್ಲ. ಈ ಹುಡುಗನಿಗೆ ತಾನು ಏನು ಸಹಾಯತಾನೇ ಮಾಡ ಬಲ್ಲ?
" ಅಯ್ಯೋ! ಅನ್ಯಾಯ! ಈ ಅನ್ಯಾಯ ಕೇಳುವವರಾರೂ ಇಲ್ಲವೇ? ಚಕ್ರ ವ್ಯೂಹದಲ್ಲಿ ಸಿಕ್ಕಿದ ಅಭಿಮನ್ಯುವಿನಂತೆ ಈ ಮಗು ಸಿಕ್ಕಕೊಂಡಿದೆಯಲ್ಲಾ ! "
ಜೋರಾಗಿ ರೋದಿಸ ತೊಡಗಿದಳು ಸುಲೋಚನ.
ಸುಲೋಚನಳ ದನಿ ಕಿವಿ ಮುಟ್ಟಿದಾಕ್ಷಣ ಕೇಸರಿಗೆ ಯಾರೋ ತನ್ನನ್ನು ಬಲವಾಗಿ ಚಿವುಟಿದಂತೆ ಅನ್ನಿಸಿತು .
ಅಭಿಮನ್ಯು!
ಚಕ್ರವ್ಯೂಹ!
ಮಹಾಭಾರತ!
ಗದಾಯುದ್ಧ!
'ದಪ್ಪರಿ ದಟ್ಟುಂ ಪೊಟ್ಟನೆ .....
ದೊಪ್ಪ ಧೊಗಪ್ಪನೆ ದಿಧಿಲ್ಬುಧಿಲೆನೆ ಗದೆಗಳ್ ---'
ಯುದ್ಧ ರಾಗದಲ್ಲಿ ರಾಜ್ಯಲಕ್ಷ್ಮಿ ಅಕ್ಕಳ ದಿವ್ಯವಾಣಿ ಕಿವಿಗಳ ತುಂಬ ಉಲಿ ದಂತಾಯಿತು
' ಸೊಪ್ಪು ಸೊವಡಪ್ಪಿನಮ್ ಸೂಳ್ತಪ್ಪದೆ-'
' ಸೊಪ್ಪು ಸೊವಡಪ್ಪಿನಮ್ ಸೂಳ್ತಪ್ಪದೆ-'
ಕೇಸರಿಯ ಮೈ 'ಝುಮ್' ಎಂದಿತು.
'ಕಡೆ ಕೆಯ್ದು ಪೊಯ್ದರೊರ್ವರನೋರ್ವರ್ !'
ದಿವ್ಯ ಶಕ್ತಿ ಒಂದು ಅವನ ಒಡಲನ್ನು ಹೊಕ್ಕಿದಂತಾಯಿತು.
ಹೊಸ ಹುರುಪು ಅವನ ಮನವ ತುಂಬಿತು.
ಕಣ ಕಣದಲ್ಲೂ ಅಡಗಿದ್ದ ಕೆಚ್ಚಿನ ಕಿಡಿ ಆವೇಶದಿಂದ ಹೊರ ಹೊಮ್ಮಿತು.
'ಕಡೆ ಕೆಯ್ದು ಪೊಯ್ದರೊರ್ವರನೋರ್ವರ್ !'
ದಿವ್ಯ ಶಕ್ತಿ ಒಂದು ಅವನ ಒಡಲನ್ನು ಹೊಕ್ಕಿದಂತಾಯಿತು.
ಹೊಸ ಹುರುಪು ಅವನ ಮನವ ತುಂಬಿತು.
ಕಣ ಕಣದಲ್ಲೂ ಅಡಗಿದ್ದ ಕೆಚ್ಚಿನ ಕಿಡಿ ಆವೇಶದಿಂದ ಹೊರ ಹೊಮ್ಮಿತು.
ರಭಸದಿಂದೆದ್ದಿತು ಚಂಡ ಮಾರುತ !
ಝಣ ಝಣ ಘರ್ಷಿಸಿ ಮಿಂಚಿತು ವೀರ ಖಡ್ಗ!
ಕೇಸರಿಯ ಅವತಾರವೋ ಚಂಡ ಪ್ರಚಂಡ!
ಎದುರಾಳಿಗಳಿಗೆಲ್ಲ ನಂಬಲಾರದ ವಿಸ್ಮಯ!
ಎದುರಿಸಿದವರೆಲ್ಲರನ್ನೂ ಸದೆ ಬಡಿದು ಕೊಚ್ಚಿ ಹಾಕ ತೊಡಗಿದ ಕೇಸರಿ. ಚದುರಿ ಓಡ ಹತ್ತಿದರು ಸುಭಾನನ ಸೇವಕರು .
" ಕೀರ್ತಿ ನಿಧಿ ಕೇಸರಿ ಸಿಂಘ! ಶಹಭಾಶ್ !''
ನಿಧಾನವಾಗಿ ತನ್ನ ಕುದುರೆಯನ್ನು ಚಲಿಸುತ್ತ ಅಲ್ಲಿ ಪ್ರತ್ಯಕ್ಷನಾದ ಶಿವನಾಯಕ, ತನ್ನ ಕುದುರೆಯಿಂದ ಜಿಗಿದಿಳಿದ !
ಶಿವನಾಯಕನ ದನಿ ಕೇಳಿ ಎಲ್ಲರೂ ತಟಸ್ತರಾದರು. ಎಲ್ಲರ ಮನಗಳಲ್ಲೂ ಒಂದೇ ಪ್ರಶ್ನೆ.
' ಇವನು ಯಾವಾಗ ಇಲ್ಲಿಗೆ ಆಗಮಿಸಿದ?'
" ಕೀರ್ತಿ ನಿಧಿ ಕೇಸರಿ ಸಿಂಘ! ನಿನ್ನ ಪರಾಕ್ರಮ ನನ್ನನ್ನು ಬೆರಗುಗೊಳಿಸಿದೆ. ನನಗೆ ಶುದ್ಧ ವೀರರಲ್ಲಿ ಬಹಳ ಪ್ರೀತಿ, ವಿಶ್ವಾಸ.
ಶಿವ ನಾಯಕನನ್ನು ಕಂಡ ಕೂಡಲೇ ಕೇಸರಿಯ ರಕ್ತ ಮತ್ತಷ್ಟು ಕುದಿಯ ತೊಡಗಿತು. ಕಣ್ಣಿನಿಂದಲೇ ಆತನನ್ನು ಸುಟ್ಟು ಬೂದಿ ಮಾಡುವವನಂತೆ ದಿಟ್ಟಿಸಿ ನಿಂತ .
"ನಾಯಕರೆ! ಸಮಯಕ್ಕೆ ಸರಿಯಾಗಿ ಬಂದಿರಿ. ವೆಂಕಟರಾವ್ ಅವರು ಈ ಕಾರ್ಯಕ್ಕೆ ನನ್ನನ್ನು ನೇಮಿಸಿರುವುದು ನೀವೂ ಅರಿತಿರುವ ವಿಷಯವೇ. ಈ ಸುಭಾನ್ ನಮ್ಮ ಜೊತೆಯಲ್ಲೇ ಇದ್ದು ನಮಗೆ ಮೋಸ ಮಾಡಲು ಹೊರಟಿದ್ದಾನೆ..."
ಪ್ರಲಾಪ ತೆಗೆದ ಪಾಂಡುರಂಗಾಚಾರ್ಯರನ್ನು ಕೈ ಸನ್ನೆಯಿಂದಲೇ ಬಾಯಿ ಮುಚ್ಚಿಸಿದ ಶಿವ ನಾಯಕ.
ಶಿವನಾಯಕನ ಸಿಪಾಯಿಗಳು ಕ್ರಮವಾಗಿ ಯುದ್ಧ ಶಾಸ್ತ್ರ ಅಭ್ಯಸಿಸಿದ್ದ ನಿಜವಾದ ವೀರರು. ತನ್ನವರೆಲ್ಲ ನಿಯಮ ನಿಷ್ಠೆ ಇಲ್ಲದೇ ಕಾದಾಡ ಬಲ್ಲ ಬರಿ ಬೀದಿ ಪುಂಡರು. ಕುತಂತ್ರ ಒಂದೇ ತನ್ನ ಪರಿವಾರದ ಬಲ. ಶಿವ ನಾಯಕನನ್ನು ಮುಖಾಮುಖಿ ಎದುರಿಸಲು ತನ್ನಿಂದ ಸಾಧ್ಯವೇ?
ಸುಭಾನ್ ಮೌನವಾಗಿ ಚಿಂತಿಸ ತೊಡಗಿದ.
ಶಿವನಾಯಕನ ಸಿಪಾಯಿಗಳು ಕ್ರಮವಾಗಿ ಯುದ್ಧ ಶಾಸ್ತ್ರ ಅಭ್ಯಸಿಸಿದ್ದ ನಿಜವಾದ ವೀರರು. ತನ್ನವರೆಲ್ಲ ನಿಯಮ ನಿಷ್ಠೆ ಇಲ್ಲದೇ ಕಾದಾಡ ಬಲ್ಲ ಬರಿ ಬೀದಿ ಪುಂಡರು. ಕುತಂತ್ರ ಒಂದೇ ತನ್ನ ಪರಿವಾರದ ಬಲ. ಶಿವ ನಾಯಕನನ್ನು ಮುಖಾಮುಖಿ ಎದುರಿಸಲು ತನ್ನಿಂದ ಸಾಧ್ಯವೇ?
ಸುಭಾನ್ ಮೌನವಾಗಿ ಚಿಂತಿಸ ತೊಡಗಿದ.
" ಕೇಸರಿ ನಾನು ನಿನ್ನನ್ನು ನನ್ನ ಆಪ್ತನನ್ನಾಗಿ ಆರಿಸಿದ್ದೇನೆ. ನೀನು ನನ್ನ ಪರಿವಾರದಲ್ಲಿ ಸೇರ ಬೇಕಾದ ವೀರ. ನಾನು, ಈ ವಂಚಕರಿಂದ ನಿನ್ನನ್ನು ಪಾರು ಮಾಡಲು ಬಯಸಿದ್ದೇನೆ. ನನ್ನ ಪಡೆ ನನ್ನ ಒಂದು ಕೈ ಸನ್ನೆಗಾಗಿ ಕಾಯುತ್ತಿದೆ ನೋಡು. ನಿಮಿಷದಲ್ಲಿ ಇವರುಗಳನ್ನೆಲ್ಲ ನಿರ್ನಾಮ ಮಾಡಿ ಬಿಡುತ್ತಾರೆ."
ನಿಧಾನವಾಗಿ ನಯವಾಗಿ ನುಡಿದ ಶಿವನಾಯಕ.
"ಅದಕ್ಕೆ ಪ್ರತಿಯಾಗಿ, ಅಗೋ! ಅದನ್ನು ಮಾತ್ರ ನನ್ನ ವಶ ಒಪ್ಪಿಸಿಬಿಡು."
ಶಿವನಾಯಕ ಕೊನೆಯದಾಗಿ ಹೇಳಿದ ಮಾತು ಕೇಸರಿಯ ಹೃದಯವನ್ನು ಹರಿತವಾದ ಬಾಣದಂತೆ ಇರಿಯಿತು.
ನಿಧಾನವಾಗಿ ನಯವಾಗಿ ನುಡಿದ ಶಿವನಾಯಕ.
"ಅದಕ್ಕೆ ಪ್ರತಿಯಾಗಿ, ಅಗೋ! ಅದನ್ನು ಮಾತ್ರ ನನ್ನ ವಶ ಒಪ್ಪಿಸಿಬಿಡು."
ಶಿವನಾಯಕ ಕೊನೆಯದಾಗಿ ಹೇಳಿದ ಮಾತು ಕೇಸರಿಯ ಹೃದಯವನ್ನು ಹರಿತವಾದ ಬಾಣದಂತೆ ಇರಿಯಿತು.
ಕೇಸರಿಯ ಕೊರಳಲ್ಲಿ ಹಾರದಂತೆ ಹೊರಳುತ್ತಿದ್ದ ಪತ್ರದ ಥೈಲಿಯನ್ನು ಬೆರಳು ಮಾಡಿ ತೋರಿಸಿಸುತ್ತಿದ್ದ ಶಿವನಾಯಕನ ಕೈಯನ್ನು ತುಂಡರಿಸಲು ಹವಣಿಸಿತು ಮನಸ್ಸು .
ನಯವಂಚಕ!
ತಂದೆಯನ್ನು ಕೊಂದು ತನ್ನನ್ನು ತಬ್ಬಲಿ ಮಾಡಿದ ಕೊಲೆಕಟುಕ !
ತನ್ನ ಮನೆಗೆ ಕಿಚ್ಚಿಟ್ಟು ತನ್ನನ್ನು ಭಿಕಾರಿ ಮಾಡಿದ ಮನೆ ಹಾಳ !
ಸುಲ್ತಾನರಿಗೆದುರು ಸಂಚು ಮಾಡುತ್ತಿರುವ ರಾಜ ದ್ರೋಹಿ !
ದಾಸ್ಯದ ಪಥಕ್ಕೆ ನಾಡನ್ನು ನೂಕಲು ಹೊರಟಿರುವ ದೇಶ ದ್ರೋಹಿ!
ತಂದೆಯನ್ನು ಕೊಂದು ತನ್ನನ್ನು ತಬ್ಬಲಿ ಮಾಡಿದ ಕೊಲೆಕಟುಕ !
ತನ್ನ ಮನೆಗೆ ಕಿಚ್ಚಿಟ್ಟು ತನ್ನನ್ನು ಭಿಕಾರಿ ಮಾಡಿದ ಮನೆ ಹಾಳ !
ಸುಲ್ತಾನರಿಗೆದುರು ಸಂಚು ಮಾಡುತ್ತಿರುವ ರಾಜ ದ್ರೋಹಿ !
ದಾಸ್ಯದ ಪಥಕ್ಕೆ ನಾಡನ್ನು ನೂಕಲು ಹೊರಟಿರುವ ದೇಶ ದ್ರೋಹಿ!
ಮೊದಲೇ ಜ್ವರದಿಂದ ಕೆಂಡದ ಚೆಂಡಾಗಿ ಕುದಯುತ್ತಿದ್ದ ಕೇಸರಿ, ದ್ವೇಷ ಕಕ್ಕುವ ಜ್ವಾಲಾಮುಖಿಯಾಗಿ ಸಿಡಿದೆದ್ದ.
" ಏ-----ಯ್!"
" ಏ-----ಯ್!"
ಪೆಟ್ಟು ತಿಂದ ಕಾಡು ಪ್ರಾಣಿಯ ಹಾಗೆ ವಿಕಾರವಾಗಿ ಕೂಗುತ್ತ , ಈಟಿಯನ್ನು ನೆಲಕ್ಕೆ ಊರಿ, ಮತ್ತೊಂದು ಕೈ ಖಡ್ಗವನ್ನು ಎತ್ತಿ ಹಿಡಿದಿರಲು, ಹಟಾತ್ತನೆ ಆಕ್ರೋಶದಿಂದ ಶಿವನಾಯಕನನ್ನು ಕುರಿತು ಹಾರಿದ ಕೇಸರಿ!
----------------------------------------ಆಮೇಲೆ?-------------------------------











ಬ್ಲಾಗ್ ಇಸ್ಟ ಆಯ್ತು..ಇವೆಲ್ಲ ನೀವೆ ಬಿಡಿಸಿರೊ ಚಿತ್ರ ಅನ್ಸುತ್ತೆ ಅಲ್ವಾ..? ಹೇಗೆ ಬಿಡಿಸ್ತಿರಿ ಮ್ಯಾನುವಲ್ ಆಗಿ ಬಿಡಿಸಿ ಸ್ಕಾನಿಂಗಾ ಅಥ್ವಾ ಎಮ್.ಎಸ್ ಪೈಂಟ್?
ReplyDeleteವಂದನೆಗಳೊಂದಿಗೆ
ಕಂಡಷ್ಟೂ ಖಗೋಳ
ಧನ್ಯವಾದಗಳು, ವಿದ್ಯಾಕುಮಾರ್ !
ReplyDeleteಹೌದು , ಚಿತ್ರಗಳು ಎಲ್ಲವೂ ನಮ್ಮದೇ . MS PAINT ನಲ್ಲಿ ಬಿಡಿಸಿದವು. ಕೆಲವು, DRAW CAST ( I PAD ) apps .