Wednesday, January 20, 2021

ಅಂತಿಮ ತಿರುಗು / THE LAST SPIN

 ಅಂತಿಮ ತಿರುಗು  

ಹದಿನೇಳನೆ  ಶತಮಾನ  

'' ಎಂಟು ಸೀಮೆಯಾಗೆ ದೊಂಬರಾಟದಲ್ಲಿ ನಿನ್ನ ಮೀರಿಸೋರಿಲ್ಲ ವೆಂಗಟ  ! '' ಯಜಮಾನ ಸೋಮಲರಾಜುವಿನ ಪ್ರಶಂಸೆಗೆ ಸಂತೋಷದಿಂದ ಹಿಗ್ಗಿದ ವೆಂಗಟರೆಡ್ಡಿಯ ಮನಸ್ಸು,  ಸ್ಪರ್ಧೆಯ ಬಗ್ಗೆ ಅವನು  ಪ್ರಸ್ತಾಪಿಸಿದ ಕೂಡಲೇ  ಆತಂಕಗೊಂಡಿತು . 

ದೊಂಬರಾಟ ಎನ್ನುವುದು ಬರಿ ಆಟವಲ್ಲ . ಅದೊಂದು ಕಲೆ . ವೆಂಗಟರೆಡ್ಡಿ ಮತ್ತು ಅವನ ಮಕ್ಕಳು ದೊಂಬರಾಟದಲ್ಲಿ ಪ್ರವೀಣರು . ಬಿದಿರು ಕಂಬ ಹತ್ತುವುದು , ಅದರಿಂದ ಕೆಳಕ್ಕೆ ಜಾರುವುದು , ಕಂಬ ಹಿಡಿದು ವಿವಿಧ ರೀತಿಯಲ್ಲಿ ಲಾಗ ಹಾಕುವುದು , ಹೇಗಂದರೆ ಹಾಗೆ ಮೈಕೈ ಬಗ್ಗಿಸುವುದು , ಹಗ್ಗದ ನಡಿಗೆ ಮುಂತಾದ ಕಸರತ್ತುಗಳಲ್ಲಿ ಚೆನ್ನಾಗಿ ಪಳಗಿದ್ದ ತಜ್ಞರಾಗಿದ್ದರು . ತಮ್ಮ ಕೌಶಲ್ಯ ಪ್ರದರ್ಶಿಸಿ ವಸೂಲಾಗುವ ದುಡ್ಡಿನಿಂದ ತೃಪ್ತಿಯಾಗಿ ಜೀವನ ಸಾಗಿಸುತ್ತಿದ್ದರು . ಹಾಗಾಗಿ ಈ  ಸ್ಪರ್ಧೆಯ ಉಸಾಬರಿಯೆಲ್ಲ ವೆಂಗಟರೆಡ್ಡಿಗೆ ಬೇಡವಾಗಿತ್ತು . 

                                                                                                        

                                    

ಅಲೆಮಾರಿ ಜೀವನ ತೊರೆದು , ಜಯಮಂಗಲಿ ನದಿ ತೀರದ ಹಚ್ಚೆ ಹಸಿರಾದ ಗ್ರಾಮ ಪರಿಸರದಲ್ಲಿ ಕುಟುಂಬದೊಂದಿಗೆ ನಿರಂತರವಾಗಿ ನೆಲೆಯೂರಿ ನೆಮ್ಮದಿಯ ಜೀವನ ನಡೆಸುತ್ತಿದ್ದ ವೆಂಗಟರೆಡ್ಡಿಗೆ  ಕಂಡಕಂಡವರೊಂದಿಗೆ ಬಾಜಿ ಕಟ್ಟಿ ತನ್ನ ನಿಪುಣತೆಯನ್ನು ಸಾಬೀತುಪಡಿಸಬೇಕಾದ ಅಗತ್ಯತಾನೇ ಎಲ್ಲಿತ್ತು   ?

ಆದರೆ ಗುಂಪಿನ ನಾಯಕನಾದ ಯಜಮಾನನಿಗೆ ಅದರ ಅಗತ್ಯವಿತ್ತು ! ತುರುವೇಕೆರೆಯ ಪಂಗಡದವರಿಗಿಂತ ತನ್ನ ಪಂಗಡದವರೇ ಮಿಗಿಲು ಎಂದು ಸಾಬೀತುಪಡಿಸಬೇಕಾದ ಅಗತ್ಯವಿತ್ತು ! ಯಾವನೋ ಸಂಕಲರಾಯು ಅಂತೆ ! ತನ್ನ ಕಸರತ್ತುಗಳಿಂದ ಜನರ ಮನ ರಂಜಿಸಿ ಖ್ಯಾತಿಯ ಮೆಟ್ಟಿಲನ್ನು  ಒಂದೊಂದೇ ಏರುತ್ತಿರುವನು  ! ಮಿಡಗೇಸೀ ಪಾಳೇಗಾರರು ಅವನ ಕೌಶಲ್ಯವನ್ನು ಮೆಚ್ಚಿ ನಾಲಕ್ಕು ಬೆಳ್ಳಿ ನಾಣ್ಯಗಳನ್ನು ಅವನಿಗೆ ಬಹುಮಾನವಾಗಿ ನೀಡಿದ್ದರು ! ಅವನು ಜಂಬದಿಂದ ಮೆರೆಯಲು ಇಷ್ಟು ಸಾಲದೇನು ? ! ಆ ಪ್ರದೇಶದ ಜಾತ್ರಗಳಲ್ಲೆಲ್ಲ ಇವನದ್ದೇ ಆಟ ! ಇವನದ್ದೇ ಮಾತು !

ಅಂತಹವನನ್ನು ಸ್ಪರ್ಧೆಗೆ ಆಹ್ವಾನಿಸಲೇ  ಬೇಕಿತ್ತು ! ಸ್ಪರ್ಧೆಯಲ್ಲಿ ಅವನನ್ನು ಸೋಲಿಸಿ ಅವನ ಸೊಕ್ಕಡಗಿಸಲೇ ಬೇಕಿತ್ತು ! ತನ್ನ ಪಂಗಡದ ಹಿರಿಮೆಯನ್ನು ಊರ್ಜಿತಪಡಿಸಲೇ  ಬೇಕಿತ್ತು !

" ಯಾಕೆ  ವೆಂಗಟ ? " ಎಂದು ಪ್ರಶ್ನಿಸಿದ ಸೋಮಲರಾಜು . " ಆತ  ಕಿರಿಯವ , ಬಲಶಾಲಿ ಅನ್ನೋ   ಚಿಂತೆನಾ  ?  ಯೋಚ್ನೆ  ಬಿಡು . ಕಂಬದ ತುದಿ ತಿರುಗಲ್ಲಿ ನಿನ್ಗೆ  ಸರಿಸಾಟಿ ಯಾರಿಲ್ಲ  ! ನಿನ್  ತಾತನ್   ಕಾಲದಿಂದ ನಿನ್ ಕುಟುಂಬಕ್ಕೆ ಕರಗತವಾಗೈತೆ ಈ  ಕಲೆ !  "

ಸ್ಪರ್ಧೆಯನ್ನು ನಿರ್ಧರಿಸುವ ಮೊದಲು ನನ್ನನ್ನು ಒಂದು ಮಾತು ಕೇಳಲಿಲ್ಲವಲ್ಲ ಯಜಮಾನ ಎಂದು ಮನಸಲ್ಲೇ ಕೊರಗಿಕೊಂಡರೂ ಮೌನವಾಗಿಯೇ  ನಿಂತಿದ್ದನು ವೆಂಗಟಿರೆಡ್ಡಿ . 

" ಆ ಪೋರ ಅತೀ ಆಡ್ತಾವ್ನೆ  !" ಎಂದು ಮಾತು ಮುಂದುವರೆಸಿದ ಯಜಮಾನ . " ಭಾನುವಾರದಂದು ಮೂಲಶಂಕರ ಪೂರ್ಣಿಮ ಅಬ್ಬಕ್ಕೆ ಓಗಿದ್ನಾ ? ಅಲ್ಲಿ ಅವನ ಮೆರ್ದಾಟ  ಕಂಡು ಸೈಸಕ್ಕಾಗ್ಲಿಲ್ಲ !  ಅವನ ಸೊಕ್ಕಡಗಿಸ್ಲೇ ಬೇಕು ! ಅದಕ್ಕೆಯಾ  ಈ ಸ್ಪರ್ಧೆ ! ನಿನ್ನಿಂದ್ಲೇ  ಇದು ಸಾಧ್ಯ !"  

" ಸರಿ ಯಜಮಾನರೇ  ! ಆದ್ರ ಇದಕ್ಕೆ ಗಾಳಿಗಾ ಇದ್ದಿದ್ರ ಇನ್ನೂ ಚೆನ್ನಿತ್ತು   ! " ಎಂದು ತಡವರಿಸುತ್ತ ನುಡಿದ  ವೆಂಗಟರೆಡ್ಡಿ . 

" ನೀನೋ ನಿನ್ ಪಿಳ್ಳೆಗಳೋ ! ಯಾರಾದ್ರೇನಂತೆ  ? ! ನಿನ್ ಕೈಲಿ ಆಗಕ್ಕಿಲ್ಲಾಂದ್ರ  ಮಾರನ್ನ  ತಯಾರಿ ಮಾಡೋಗು  ! ಸ್ಪರ್ಧೆಗೆ ಇನ್ನೂ  ಮೂರೇ ದಿನಗಳು  ಉಳಿದವೆ ! ಓಗು  ! ಓಗಿ ನಮ್ಮ ಪಂಗಡಕ್ಕೆ ಕೀರ್ತಿಯನ್ನ  ತಾ ! " ಎಂದು ದೃಢವಾಗಿ ನುಡಿದ ಯಜಮಾನ . 

------------------------------------------------------------------------------------------

 ಅಮ್ಮ ತಯಾರಿಸಿದ್ದ  ಮರದ ಬಾಚಣಿಗೆ ಮತ್ತು ಗಾಜಿನ ಸರಗಳನ್ನು ಮಾರಲು ಸಂತೆ ಕಟ್ಟೆಗೆ ಹೊರಟಿದ್ದ  ಎಲ್ಲಕ್ಕ , ಚಿಂತಯಿಂದ ಸೊರಗಿದ್ದ  ತಂದೆಯ ಮೊಗವನ್ನು ಕಂಡಿದ್ದಳು . ಮಧ್ಯಾಹ್ನ  ಹಿಂದಿರುಗಿದಾಗಲೂ ಅವರ ಮೊಗದಲ್ಲಿ ಚಿಂತೆಯ ರೇಖೆಗಳು ಹಾಗೆಯೇ ಉಳಿದಿರುವುದನ್ನು ಕಂಡಾಗ  ಏನೋ ಸಮಸ್ಯೆ ಅಬ್ಬನನ್ನು ಕಾಡುತ್ತಿರುವ ಅರಿವಾಯಿತು . ಜೋಳಿಗೆಯನ್ನು ಬದಿಗಿಟ್ಟು ಅಮ್ಮನನ್ನು ವಿಚಾರಿಸಿದಳು . 

" ನೋಡು ಮಗ ! ಅಬ್ಬನಿಗೆ ಈಚೆಗೆ ಮೈಗೆ ಉಶಾರಿಲ್ಲ ! ಬೆನ್ನು ನೋವು ಬಾಳ ಕಾಟ ಕೊಡತೈತೆ ! " ಎಂದಳು ಅಮ್ಮ . 

" ಹಾಂ ! ಚಿಮ್ಮಿಯಕ್ಕ ಉಡದ್ ತೈಲ ನೀವಿ ಕೋಣನ  ಕೋಡು ಚಿಕಿತ್ಸೆ ಕೊಟ್ಟಾವಳಲ್ಲ  ! ನೋವು ವಾಸಿಯೂ ಆಗಿತ್ತಲ್ಲ ! "

" ಹಾಂ !  ಆಗ ವಾಸಿಯಾತು ! ಆದ್ರ ಪದೇ ಪದೇ ಮರುಕಳಿಸ್ತದಲ್ಲಾ ! ಈ ಎಜಮಾನ ಒಂದ್ಕಡೆ ಸ್ಪರ್ಧೆ ಸ್ಪರ್ಧೆ ಅಂತ ಒತ್ತಾಯ ಮಾಡ್ತಾವ್ನೆ ! ಅದ್ರಲ್ಲೂ ಕಂಬದ್ ತುದಿ ತಿರುಗನ್ನೇ ಮಾಡ್ಬೇಕಂತ  ಕುಂತಾವ್ನೆ".  

ಎಲ್ಲಕ್ಕ ತಂದೆಯ ಬಳಿ ಕುಳಿತು ಮೃದುವಾಗಿ ಅವನ ಕೈ ಒತ್ತಿದಳು . " ಅಬ್ಬ ! ಉಸಾರಿಲ್ಲ ! ತಿರುಗಕ್ಕೆ ಆಗಕ್ಕಿಲ್ಲ ಅನ್ನಕ್ಕೆ ಆಗಕಿಲ್ವಾ ? ! "

ವೆಂಗಟ ನಿಟ್ಟುಸಿರೆಳೆದ .  " ಇಲ್ಲ ಪಿಂಕ ! ಅಂಗೆಲ್ಲಾ ಏಳಂಗಿಲ್ಲ  ! ನಮ್ ಗುಂಪಿನೋರು ಯಾರೂ ಯಜಮಾನನ ಸೊಲ್ಲು ಮೀರೋ ಆಂಗಿಲ್ಲ ! ನಮ್ ಗ್ರಾಚಾರಕ್ಕೆ  ಕಂಬದ್ ತುದಿ ತಿರುಗನ್ನೇ  ಸ್ಪರ್ಧೆಗೆ ಆಯ್ಕೊಂಡವ್ನೆ  ಯಜಮಾನ ! ತುರುವೇಕೆರೆಯವ ಒಮ್ಮೆಗೆ ಇಪ್ಪತ್ತು ಬಾರಿ ತಿರುಗ್ತಾವನಂತೆ ! ನಾವು ಅವನನ್ನ ಮೀರಿಸೋದಿರ್ಲಿ, ಅವ್ನಿಗೆ ಸರಿಸಮ ತಿರುಗಕ್ಕಾದ್ರೂ ಆಯ್ತದಾ ? "

ಎಲ್ಲಕ್ಕನ ಮುಖ ಕಳೆಗುಂದಿತು. ನಿಜ ! ತಮ್ಮ ಪ್ರದರ್ಶನಗಳಲ್ಲಿ  ಈ ಕಂಬದ ತುದಿ ತಿರುಗು ಎಂಬ ಆಟವೇ  ಕಟ್ಟಕಡೆಯ ಆಟವಾಗಿದ್ದಿತು.  ಬಹಳ ಅಪಾಯಕರವಾದ ಕಷ್ಟಕರ ವಿದ್ಯೆ ! ಮೂರು ಉದ್ದವಾದ ಕಂಬಗಳಿಂದಾದ ಮುಕ್ಕಾಲಿಗೆ ಮತ್ತೊಂದು ಉದ್ದವಾದ ಕಂಬವನ್ನು ಜೋಡಿಸಿ ಕಟ್ಟಲಾಗುತ್ತದೆ . ಹೀಗೆ ನಿರ್ಮಿಸಲಾದ  ಹದಿನೆಂಟು ಅಡಿ ಎತ್ತರದ ಕಂಬದ ತುದಿಯಲ್ಲಿ ಒಂದು ಲೋಹದ ಬುಗುಟೆ ಅಳವಡಿಸಲಾಗಿರುತ್ತದೆ . ಈ ಬುಗುಟೆಯನ್ನು ಸೊಂಟಪಟ್ಟಿಯಲ್ಲಿರುವ ಕುಳಗೆ ಸರಿಯಾಗಿ  ಕೂರಿಸಿ , ಅದರ ಆಧಾರದಮೇಲೆ  ಆಟಗಾರ ಕಂಬದ ತುದಿಯಲ್ಲಿ ಅಂಗಾತ ಮಲಗುತ್ತಾನೆ . ನಂತರ ಮೈದೂಡಿ ಒಡಲಿಗೆ ಚಾಲನೆ ಕೊಟ್ಟು ಗಿರಗಿರನೆ ತಿರುಗುತ್ತಾನೆ ! ಇದೇ ಕಂಬದ ತುದಿ ತಿರುಗು ಎಂಬ ಸಾಹಸಮಯವಾದ ದೊಂಬರ  ಆಟ !

ವೆಂಗಟ ತನ್ನ ಮಕ್ಕಳನ್ನು ತರಬೇತಿಗೆಂದು ಸಮೀಪವಿದ್ದ ಬೆಟ್ಟದ ತಪ್ಪಲಿಗೆ ಕರೆದೊಯ್ಯುತ್ತಿದ್ದನು.  ಹೊಲವನಹಳ್ಳಿ ನಾಯಕನ ಕೋಟೆಯ ಪಶ್ಚಿಮಬಾಗದಲ್ಲಿದ್ದ ಹಸಿರು ಹುಲ್ಲು ಹಾಸಿನಮೇಲೆ , ತಣ್ಣಗೆ ಮೈಸೋಕುವ ತಂಗಾಳಿ ಬೀಸುವ ಪ್ರಶಾಂತವಾದ ವಾತಾವರಣದಲ್ಲಿ ಅವರುಗಳ ತರಬೇತಿ ನೆಮ್ಮದಿಯಾಗಿ ನಡೆಯುತ್ತಿತ್ತು . 

                                                                                                              

ತನ್ನ ತಂದೆ ಮತ್ತು ತಾತನ ಸಾಹಸಗಳ ಬಗ್ಗೆಯೂ , ದೊಂಬರ ಕುಲದ ಮೂಲದ ಬಗ್ಗೆಯೂ ಸ್ವಾರಸ್ಯಕರವಾದ ವಿಷಯಗಳನ್ನು ಹೇಳಿ ಮಕ್ಕಳನ್ನು ಉತ್ಸಾಹಪಡಿಸುತ್ತಿದ್ದ ವೆಂಗಟ . ರೆಡ್ಡಿ ವಂಶದ ಮೂಲಪುರುಷನ ಕಥೆ ವಿಸ್ಮಯಕಾರಿ ದಂತಕಥೆಯಾಗಿತ್ತು .  ಕೈಕಾಲುಗಳಿಲ್ಲದೆ ಹುಟ್ಟಿದ ಒಂದು ಮಗುವನ್ನು ಅದರ ದುಷ್ಟ ಬಂಧುಗಳು ಬಾವಿಗೆ ಎಸೆದುಬಿಟ್ಟರು . ತಾಯಿ ಮಹಾಶಕ್ತಿ ಕರುಣಿಸಿ ಮಗುವಿಗೆ ಕೈಕಾಲುಗಳನ್ನು ದಯಪಾಲಿಸಿದಳು . ಮಗು  ಹಠಾತ್ತನೆ ಹಿಂದಕ್ಕೆ  ಪಲ್ಟಿ ಹೊಡೆದು ಬಾವಿಯಿಂದ ಹೊರಕ್ಕೆ  ನೆಗೆಯಿತು .  ನಂತರ  ಮುಂದಕ್ಕೆ ಮತ್ತೊಂದು  ಪಲ್ಟಿ ಹೊಡೆದು ಮಹಾಶಕ್ತಿಯ  ಪಾದಕ್ಕೆರಗಿ  ನಮಿಸಿತು !  ಅವನ ಆ ಸಾಹಸವನ್ನು ಮೆಚ್ಚಿದ ಶಕ್ತಿದೇವಿ ,  ದೊಂಬರಾಟದಲ್ಲಿ ಸರಿಸಾಟಿ ಇಲ್ಲದ ಒಂದು ವಂಶಕ್ಕೆ ಅವನೇ ಮೂಲಪುರುಷನಾಗುವಂತೆ ಆಶೀರ್ವದಿಸಿದಳು !

ಈ ಕಥಾನಕವನ್ನು ಕೇಳಿದಾಗಲೆಲ್ಲ ಎಲ್ಲಕ್ಕ ಹೆಮ್ಮೆಯಿಂದ ಬೀಗಿದಳು .  ವಿಶಿಷ್ಟವಾದ ಆಶೀರ್ವಾದವನ್ನು  ಪಡೆದುಕೊಂಡಿದ್ದ ವಂಶ ತಮ್ಮದ್ದು ! ದೊಂಬರಾಟ ರಕ್ತಗತವಾಗಿ ತಮಗೆ ಬಂದಿರುವ ಬಳುವಳಿ !

ಕಂಬದ ಎತ್ತರವನ್ನು ಕ್ರಮವಾಗಿ ಹೆಚ್ಚಿಸುತ್ತ ಹೋಗಿ  ಕಂಬದ ತುದಿ ಕಸರತ್ತುಗಳಲ್ಲಿ ತನ್ನ ಮಕ್ಕಳಿಗೆ ತೀವ್ರವಾದ ತರಬೇತಿಯನ್ನು ನೀಡಿದ್ದನು ವೆಂಗಟ  . ಮರಗಾಲು ಕುಣಿತ , ಹಗ್ಗದ ನಡಿಗೆ ಮುಂತಾದ ಕಲೆಗಳಲ್ಲಿ, ನಡೆಯಲು ಕಲಿತ ವಯಸ್ಸಿನಿಂದಲೇ ಅವರುಗಳಿಗೆ ಅಭ್ಯಾಸವಾಗಿದ್ದಿತು . ಆದ್ದರಿಂದ ಎತ್ತರವಾದ ಕಂಬವನ್ನು ಹತ್ತುವುದಕ್ಕೆ ಅವರಿಗೆ ಯಾವ ಅಡ್ಡಿ ಆತಂಕಗಳೂ ಇರಲಿಲ್ಲ . ಆದರೆ ಕಂಬದ ತುದಿಯಲ್ಲಿ ತಿರುಗುವಾಗ ಉಂಟಾಗುವ ಹೊಟ್ಟೆ ತೊಳೆಸುವಿಕೆ , ಓಕರಿಕೆ , ತಲೆ ಸುತ್ತಿನಂತಹ ಅಸ್ವಸ್ಥತೆಯನ್ನು ನಿಭಾಯಿಸಲು ಅವರುಗಳು ಕಲಿಯಬೇಕಿತ್ತು . 

ಮನೆಯ ಹಿರಿಯ ಮಗ ಗಾಳಿಗಾ  ಎಲ್ಲ ಕಲೆಗಳಲ್ಲೂ ನಿಪುಣನಾಗಿದ್ದ .  ಮುಖ್ಯವಾಗಿ ಕಂಬದ  ತಿರುಗು ಅವನಿಗೆ ನೀರು ಕುಡಿದಷ್ಟು ಸುಲಭವಾದ ಕಸರತ್ತಾಗಿತ್ತು . ಆದರೆ ಅವರುಗಳ ಕುಲದ ಪದ್ದತಿಯಂತೆ  ಬೇರೆ ಬೇರೆ ಊರುಗಳನ್ನು ನೋದುತ್ತ  , ವಿವಿಧ ಹೊಸ ಕಲೆಗಳನ್ನು ಕಲಿಯುತ್ತ ತನ್ನ ಜೀವನೋಪಾಯವನ್ನು ಸ್ವತಃ ತಾನೇ ರೂಪಿಸಿಕೊಳ್ಳುವುದರ ಸಲುವಾಗಿ ಐದು ವರ್ಷಗಳ ಹಿಂದೆಯೇ ಮನೆ ಬಿಟ್ಟು ಪ್ರಯಾಣ ಬೆಳೆಸಿದ್ದನು. ಕಣ್ಣಾರೆ  ಕಾಣದಿದ್ದರೂ ,  ಅವರುಗಳ ಪೂರ್ವಜರ ನೆಲೆಯಾದ ಪುಥಲಪಟ್ಟು ಪ್ರದೇಶದಲ್ಲಿ ಆತ  ಕ್ಷೇಮವಾಗಿರುವನೆಂಬ ಸುದ್ದಿ ಮನೆಯವರನ್ನು ತಲುಪಿತ್ತು . 

 ಹಿರಿಯ ಮಗನ ನೆನಪು ಅಬ್ಬನನ್ನು ಕಾಡುತ್ತಿರುವುದು ಎಲ್ಲಕ್ಕಳಿಗೆ  ಅರಿವಾಯಿತು . ಗಾಳಿಗಾ  ಇದ್ದಿದ್ದರೆ ಸ್ಪರ್ಧೆಯಲ್ಲಿ ಎದುರಾಳಿಯನ್ನು ನೆಲ ಕಚ್ಚಿಸಿ  ತಮ್ಮ ಕುಲದ ಹೆಮ್ಮೆಯನ್ನು ಉಳಿಸುತ್ತಿದ್ದನು . ಎರಡನೇಯವನು ಮಾರಾ . ತನ್ನ ಸಾಮರ್ಥ್ಯದ ಬಗ್ಗೆ ಅವನಿಗಿನ್ನೂ ಅನುಮಾನವಿತ್ತು . 

 ಇರುಳು ಕವಿಯುವ ಹೊತ್ತಿಗೆ ಯಂಕ್ಟಿ  ಎಲ್ಲರನ್ನೂ ಊಟಕ್ಕೆ ಕೂರಿಸಿ  ಕಿವುಳು ( ಕಿರು ಧಾನ್ಯದಿಂದಾದ ಮುದ್ದೆ ), ಪಪ್ಪು ಚಾರು ( ಬೇಳೆ ಸಾರು ) ಮತ್ತು ಒಣ ಮೀನು ಬಡಿಸಿದಳು . 

"ಇನ್ನೂ ಮೂರ್ದಿವ್ಸಕ್ಕೆ ಸ್ಪರ್ಧೆ ಅದೇ ಗೊತ್ತೇನು? " ಮಾರನನ್ನು ಕುರಿತು ಪ್ರಶ್ನಿಸಿದ ವೆಂಗಟ . 

" ಹೂಂ ಅಬ್ಬ ! "

" ನಾಳೆ ಚಂದ ಅಭ್ಯಾಸ ಮಾಡೋಣು, ಆಯ್ತಾ ? ಇಪ್ಪತ್ತೈದು ಸುತ್ತಿಗಾದ್ರೂ ತಯಾರಿ ಇರ್ಬೇಕ್ಲಾ   ! " 

" ಅಬ್ಬಾ ! ನಾವು ಯಾರ್ಗೂ ಬಾಜಿ ಕಟ್ಟಿ ನೋಡು ಬಾ ಅಂದಿಲ್ಲ !  ಈ ಸ್ಪರ್ಧೆಗೆ  ವಲ್ಲೆ ಅನ್ನಕ್ಕೆ ಆಗಕ್ಕಿಲ್ವೇ ? " 

ವೆಂಗಟ ತುಸು ಕೋಪದಿಂದಲೇ  ಮಗನನ್ನು ದಿಟ್ಟಿಸಿದ . " ನಮ್ ವಂಸದ್ ಮರ್ವಾದೆ  ನಾವ್ ಕಾಪಾಡ್ಕೋಬೇಕ್ಲಾ  ಮಗ ! ಕೊಟ್ಟ ಮಾತು ಉಳಸ್ಕ ಬೇಕು  ! ನಿನ್ ಕೈಲಾಗಲ್ಲ ಅನ್ನು ! ನಾನೇ ಪೋಟಿ  ಎದುರಿಸ್ತೀವ್ನಿ  ! "

" ಅಬ್ಬಾ ! ಅವ ಆಗಲ್ಲಾ ಅನ್ಲಿಲ್ಲವಲ್ಲ ! ಅಲ್ವೇ  ಮಾರಾ ? " ಅವಸವಸರವಾಗಿ ಮಧ್ಯೆ ಬಾಯಿ ಹಾಕಿದಳು ಎಲ್ಲಕ್ಕಾ .  

ಮಾರಾ ಏನೊಂದನ್ನೂ ಹೇಳಲಾರದೆ ಮೌನವಾಗಿ ಮೀನನ್ನು ಸವಿಯುತೊಡಗಿದ . 

ಮಾರನಿಗೆ ತನ್ನ ಪಾರಂಪರಿಕ ಕಲೆಯಾದ ದೊಂಬರಾಟದಲ್ಲಿ ಎಳ್ಳಷ್ಟೂ ಆಸಕ್ತಿ ಇರಲಿಲ್ಲ . ನೋಡುಗರು ಕೊಡುವ ಕೆಲವು ನಾಣ್ಯಗಳು , ಹಿಡಿ ಧಾನ್ಯಗಳು ಮತ್ತು ಹಳೆ ಬಟ್ಟೆಗಾಗಿ ತನ್ನ ಜೀವಮಾನವನ್ನೆಲ್ಲ ಹಗ್ಗಗಳ ಮೇಲೂ ಕಂಬದ ತುದಿಯಲ್ಲೂ ಕಳೆಯಲು ಅವನಿಗೆ ಸುತರಾಂ ಇಷ್ಟವಿರಲಿಲ್ಲ . ತನ್ನ ಬದುಕನ್ನು ಬೇರೆಯೇ ವಿಧವಾಗಿ ರೂಪಿಸಿಕೊಳ್ಳಬೇಕು ಎನಿಸಿದರೂ , ಏನು ಮಾಡಬೇಕೆಂದು ಮನಸಲ್ಲಿ ಹೊಳೆದಿರಲಿಲ್ಲ , ಮೂಲಶಂಕರ ಜಾತ್ರೆಯಲ್ಲಿ ತೊಗಲು ಬೊಂಬೆಯಾಟವನ್ನು ಕಾಣುವ ತನಕ !

                                                                                                     

ನಾಟಕ , ಸಂಗೀತ , ನೃತ್ಯ ಮತ್ತು  ತೊಗಲು ಬೊಂಬೆಗಳ ಆಟವನ್ನೊಳಗೊಂಡ ಆ ಪ್ರದರ್ಶನ ಅವನನ್ನು ಒಂದು ಮಾಯಾಲೋಕಕ್ಕೇ  ಕರೆದೊಯ್ದಿತ್ತು  ! ಹೇಗಾದರೂ ಸಿರುಗುಪ್ಪಕ್ಕೆ ತೆರೆಳಿ , ಪಯಣಮಾಡುತ್ತಿದ್ದ ಬಳ್ಳಾರಿ ತೊಗಲು ಗೊಂಬೆಯಾಟಗಾರರೊಂದಿಗೆ  ಸೇರಿಕೊಳ್ಳುವ ಧೃಡ ನಿರ್ಧಾರ ಮಾಡಿಕೊಂಡಿದ್ದನು . 

ಊಟದನಂತರ ತನ್ನ ಹೆಬ್ಬಯಕೆಯನ್ನು ತಾಯಿಯ ಮುಂದಿಟ್ಟನು ಮಾರಾ . ಗಾಳಿಗನನ್ನು ಕಳುಹಿಸಿಕೊಟ್ಟ ಹಾಗೆ ಎಲ್ಲಮ್ಮಾ ಮತ್ತು ಕೊರಟಗೆರೆಯಮ್ಮನ ಆಶೀರ್ವಾದಗಳೊಂದಿಗೆ ತನ್ನನ್ನೂ ಅವಳು ಕಳುಹಿಸಿಕೊಡಲಾರಳೇ ? ದುರದೃಷ್ಟವಶಾತ್ ಅದಕ್ಕೆಲ್ಲ ಇದು ಸೂಕ್ತ ಸಮಯವಾಗಿರಲಿಲ್ಲ . 

" ನಿನ್ ದಾರಿ ನೀನು ನೋಡ್ಕಳಕ್ಕೆ ಯಾವ ಅಡ್ಡಿಯೂ ಇಲ್ಲ ಮಾರಾ ! ಆದ್ರ ಇಷ್ಟವಿಲ್ದಿದ್ರೂ ಇದೊಂದು ಸತಿ ನಿನ್ ಅಬ್ಬನ ಮಾತು ನಡೆಸ್ಕೊಟ್ಟು, ಆಮೇಕೇ ನಿನ್ ಇಸ್ಟಬಂದಂಗೆ   ಓಗುವ್ಯಂತೆ ಮಗಾ !"

ಮರುಮಾತಿಲ್ಲದೆ ಸಪ್ಪೆ ಮುಖ ಹೊತ್ತು  ಹೊಂಗೆ ಮರದ ಕೆಳಗೆ ಮಲಗಿದ ಮಾರಾ .  ಮರುದಿನ ಅಬ್ಬನ ನೇತೃತ್ವದಲ್ಲಿ  ಮೌನವಾಗಿಯೇ ಅಭ್ಯಾಸ ಮಾಡಿದ . ಸ್ಪರ್ಧೆಯ ದಿನ ಬೆಳಕು ಹರಿವ  ಮುನ್ನವೇ ತನ್ನ ಗಂಟುಮೂಟೆಯನ್ನು  ಕಟ್ಟಿಕೊಂಡವನು ,  ಧಾನ್ಯ ಮೂಟೆಗಳನ್ನು ಹೊತ್ತು  ಉತ್ತರ ದಿಕ್ಕನ್ನು ಕುರಿತು ಹೊರಟಿದ್ದ ವರ್ತಕರ ತಂಡದ ಗಾಡಿಯೊಂದರಲ್ಲಿ ಹತ್ತಿ  ಹೇಳದೆ ಕೇಳದೆ  ಮನೆ ಬಿಟ್ಟು , ಊರು ಬಿಟ್ಟು ಹೊರಟೇ ಹೋದನು . 

-----------------------------------------------------------------------------------------------------------------

ಹಬ್ಬದ ಸಡಗರವೋ ಎಂಬಂತೆ ಜಯಮಂಗಲಿ ನದಿ ತೀರದಲ್ಲಿ ಗಿಜಿಗುಟ್ಟುತ್ತಿತ್ತು ಜನ ಸಂದಣಿ .  ಜನರ ಮನಗಳಲ್ಲಿ ವೆಂಗಟನೋ ಮಾರನೋ ಆ ತುರುವೇಕೆರೆಯ ದುರಹಂಕಾರಿಯನ್ನು ಸೋಲಿಸಿ ಮಣ್ಣು ಮುಕ್ಕಿಸುವುದು ಖಚಿತ ಎಂಬ ನಿರೀಕ್ಷೆಯಿತ್ತು . ಮಹತ್ವಪೂರ್ಣವಾದ  ಸ್ಪರ್ಧೆಯೊಂದನ್ನು ಕಾಣುವ ಉತ್ಸಾಹದಲ್ಲಿ  ನೆರೆಹೊರೆ ಗ್ರಾಮಳಿಂದಲೂ ಜನ ಬಂದು ಕೂಡಿದ್ದರು .   

ಇತ್ತೀಚಿನ ದಿನಗಳಲ್ಲಿ ಮಾರಾ ಮಾತ್ರವೇ ಕಸರತ್ತುಗಳನ್ನು ಮಾಡುತ್ತಿದ್ದನು .  ಬೆನ್ನು ನೋವಿನಿಂದ ಕುಗ್ಗಿಹೋಗಿದ್ದ ವೆಂಗಟ ತಮಟೆ ಬಾರಿಸುವುದನ್ನಷ್ಟೇ ಮಾಡುತ್ತಿದ್ದನು. ಈ ವಿಷಯ ಅವರುಗಳಿಗೆ ಹೇಗೆ ತಿಳಿದಿರಬೇಕು ?

 ಅಂದು ಮುಂಜಾವಿನಲ್ಲಿ ಮಾರಾ ಕಾಣೆಯಾಗಿದ್ದ ವಿಷಯ ತಿಳಿದುಬಂದಾಗ ವೆಂಗಟನ ಮನೆಯಲ್ಲಿ  ಅಲ್ಲೋಲಕಲ್ಲೋಲವಾಗಿತ್ತು  ! ಕಡೆಗೆ  ಯಜಮಾನನ ಬಗ್ಗೆ ತನಗಿದ್ದ ವಿಶ್ವಾಸದಿಂದಲೂ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂಬ ಹಠದಿಂದಲೂ ವೆಂಗಟ ತಾನೇ ಸ್ವತಃ ಸ್ಪರ್ಧೆಯಲ್ಲಿ ಬಾಗವಹಿಸಲು ಮನಸ್ಸು ಗಟ್ಟಿ ಮಾಡಿ ನಿರ್ಧರಿಸಿದ .  

 ಎಲ್ಲಕ್ಕಾ  ತನ್ನ ಅಣ್ಣಂದಿರಂತೆಯೇ  ಎಲ್ಲ ಕಸರತ್ತುಗಳಲ್ಲೂ ತರಬೇತಿ ಪಡೆದಿದ್ದಳು . ಅಬ್ಬನನ್ನು  ಬಿಕ್ಕಟ್ಟಿನಿಂದ ಪಾರು ಮಾಡಲು ತಾನೇ ಮುಂದಾದಳು . ತಾನು ಸ್ಪರ್ಧೆಯಲ್ಲಿ ಬಾಗವಹಿಸುವುದಾಗಿ  ಅಬ್ಬನಿಗೆ ಭರವಸೆ ನೀಡಿದಳು . 

ವೆಂಗಟನ  ಕಣ್ಣುಗಳು ತುಂಬಿಬಂದವು . " ನೀನಿನ್ನ ಸಣ್ಣುಡ್ಗಿ ಪಿಂಕಾ ( ಮಗಳೇ ) ! ಸ್ಪರ್ಧೆಯ  ಕಂಬ ನೆಲದ್ ಮ್ಯಾಕೆ  ಇಪ್ಪತ್ತೆರಡು ಅಡಿ ಎತ್ತರ ಅದ !  ಅಭ್ಯಾಸ ಮಾಡ್ತಿದ್ದಾಗೇ  ನಿನ್ಗೆ ಒಮ್ಮೊಮ್ಮೆ ಆಯಾ ತಪ್ತೈತೆ  ! ನೀನು ಅದೆಂಗೆ ... "

" ಅವ್ಳು ಮಾಡ್ಲಿ !  ಕೊಟ್ಟ  ಮಾತು ಉಳಿಸಕ್ಕಾರ ಅವ್ಳು ಮಾಡ್ಲಿ ! ಸೋಲೋ ಗೆಲುವೋ ಏನಾರ ಆಗ್ಲಿ ! " ಎಂದಳು  ಅಮ್ಮ . 

ವೆಂಕಟರೆಡ್ಡಿಯ ಮನಸು ಸ್ವಲ್ಪ ಹಗುರವಾಯಿತು . ಎಲ್ಲಕ್ಕನನ್ನು ಕುರಿತು ಧನ್ಯತೆಯಿಂದ ಕಿರುನಗೆ ಬೀರಿದ . " ನನ್ ತರಬೇತಿಲಿ ತಯಾರಾದ ನನ್ನ ಪಿಂಕಾ ! ಅವ್ಳು ಚಂದ ತಿರುಗ್ತಾವಳೇ ! ನನ್ಗೆ  ಗೊತ್ತು  ! ಎಲ್ಲಾ ! ಕಂಬ ಏರು ! ನಿಧಾನ ಮಾಡಿ ಎರಡು ಮೂರು ಸುತ್ತು ತಿರುಗು ! ಅಷ್ಟಕ್ಕೇ ಸಾಕು ಮಾಡು ! ಆಯ್ತಾ  ? "

ಎಲ್ಲಕ್ಕ ಸಂತೋಷದಿಂದ ತಲೆದೂಗಿದಳು . 

ಸಾಮಾನ್ಯವಾಗಿ ದೊಂಬರ ಮನೆ ಹೆಣ್ಣು ಮಕ್ಕಳೂ ಸಹ ಎಲ್ಲ ಕಸರತ್ತುಗಳಲ್ಲೂ ತಜ್ಞರಾಗಿರುವುದು  ಅಪರೂಪವೇನಲ್ಲ  . ಆದರೂ  ವೆಂಗಟರೆಡ್ಡಿಗೆ ಬದಲಾಗಿ  ಚಿಕ್ಕ ಹುಡುಗಿ ಎಲ್ಲಕ್ಕಾ  ಸ್ಪರ್ಧೆಯಲ್ಲಿ ಬಾಗವಹಿಸುವಳೆಂಬ ಸುದ್ದಿ ಕೂಡಿದ್ದ ಜನರೆಲ್ಲರಿಗೂ ಆಶ್ಚರ್ಯವನ್ನೇರ್ಪಡಿಸಿತು . 

 ಆಹ್ವಾನಿತ ಸ್ಪರ್ಧಿ ತುರುವೇಕೆರೆ ಸಂಕಲರಾಯು ಮೊದಲು ಕಂಬವನ್ನೇರಲು ಅಣಿಯಾದ . ಕಸರತ್ತಿಗೆ ಯೋಗ್ಯವಾದ ಗಟ್ಟಿಮುಟ್ಟಾದ  ಮೈಕಟ್ಟನ್ನು ಹೊಂದಿದ್ದ ಅವನು ಸರಸರನೆ ಕಂಬವನ್ನು ಹತ್ತಿದ . ಈಟಿಯಂತೆ ನೇರವಾಗಿ  ಕೈಕಾಲು ಚಾಚಿಕೊಂಡು ಕಂಬದ ತುದಿಯಲ್ಲಿ ಅಂಗಾತ ಮಲಗಿ ಸರಸರನೆ ತಿರುಗ ತೊಡಗಿದ . 

" ೨೧ !" ಕೂಡಿದ್ದ ಜನರೆಲ್ಲ ಬೆರಗಿನಿಂದ ಘೋಷಿಸಿದರು.  ಅವನು ತಿರುಗುವುದನ್ನು ನಿಲ್ಲಿಸಿ ಕಂಬದಿಂದ ಸರಿದು ಇಳಿದ.  ಸೊಕ್ಕಿನಿಂದ ಮೈಕೈ ಕೊಡವಿಕೊಂಡು ನಿಂಬೆ ತುಂಡನ್ನು ಚೀಪುತ್ತ  ಹುಲ್ಲಿನ  ಮೇಲೆ ಮಲಗಿದ . 

" ಕವು - ಲೇ ಕಸಿಕಮ್ (ಓಗವ್ವ ಕೊತ್ತಿಮರಿ ) ! ಹತ್ತು ಸುತ್ತಾನ ತಿರುಗು ನೋಡುವ ! " ಎಲ್ಲಕ್ಕಳನ್ನು ಕುರಿತು ತಾತ್ಸಾರದಿಂದ ನುಡಿದ . 

ಎಲ್ಲಕ್ಕಳ ಮೂಗಿನ ಹೊಳ್ಳೆಗಳು ಬೀರಿದವು ! ಕಣ್ಣುಗಳು ಕೆಂಡ  ಕಾರಿದವು ! 

" ಸಂಕಲಾ ! ಅತಿ ಆಡ್ಬ್ಯಾಡ !  ಮತ್ತೊಬ್ಬ ಶೂರ ಬರಾತಂಕ ಅಸ್ಟೇ ನಿನ್ ಜಂಬ ಎಲ್ಲ ! ದೇವ್ರ ಆಸೀರ್ವಾದ ಪಡ್ಕಂಡ್ ಬಂದಿರೋ ವಂಸ ನಮ್ದು ! ನೂರ್ವರ್ಸಕಾಲ ನಮ್ ಕೀರ್ತಿ ಬೆಳಗಿರ್ತದೆ ! "

ಅಬ್ಬ ಅಮ್ಮನನ್ನು ಕುರಿತು ತಲೆದೂಗಿ ಬಿರ ಬಿರನೆ  ಕಂಬವನ್ನು ಹತ್ತಿದಳು ಎಲ್ಲಕ್ಕಾ . ಕಂಬದ ತುದಿಯಲ್ಲಿದ್ದ ಬುಗುಟೆಗೆ ತನ್ನ ಸೊಂಟದ ಪಟ್ಟಿಯಲ್ಲಿದ್ದ ಲೋಹದ ಗುಳಿಯನ್ನು ಹೊಂದಿಸಿ ಭದ್ರಪಡಿಸಿ ಅಂಗಾತ ಮಲಗಿದಳು . ಮತ್ತೊಮ್ಮೆ ಅಬ್ಬ ಅಮ್ಮನಕಡೆ ದೃಷ್ಟಿಬೀರಿ, ಮೈಯನ್ನೊಮ್ಮೆ  ದೂಡಿ ಅದಕ್ಕೆ ಚಾಲನೆ ಕೊಟ್ಟು ಕಣ್ಮುಚ್ಚಿ ತಿರುಗತೊಡಗಿದಳು . 

                                                                                                                               

ವೆಂಗಟ ಉದ್ವೇಗದಿಂದ ತಮಟೆ ಬಾರಿಸುತ್ತಿದ್ದ . ಉಸಿರನ್ನು ಬಿಗಿ ಹಿಡಿದು ನಿಂತಿದ್ದ ಜನ ಎಲ್ಲಕ್ಕ ತಿರುಗುವ ಪರಿಗೆ ಬೆರಗಾಗಿ ಉತ್ಸಾಹದಿಂದ ಸುತ್ತುಗಳನ್ನು ಎಣಿಸತೊಡಗಿದರು . 

".... ೨೦... ೨೧ .... ೨೨ ..... ೨೩ ... "

ಇದ್ದಕ್ಕಿದ್ದಹಾಗೆಯೇ 'ದೊಪ್ ' ಎಂಬ ಶಬ್ದ . 

ಸ್ಪರ್ಧೆಯಲ್ಲಿ ಗೆದ್ದು ತಂದೆಯ ಮಾತನ್ನು ಉಳಿಸಿಕೊಟ್ಟ ಆ ವೀರಾಂಗನೆ ಕಂಬದ ತುದಿಯಿಂದ ನೆಲಕ್ಕೆ ಬಿದ್ದಿದ್ದಳು ! 

-------------------------------------------------------------- ---------------------------------------------------------

ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲೊಂದು ದಿನ 

ರಾಮಪ್ಪನಿಗೆ ತಡೆಯಲಾರದ ಕುತೂಹಲ !  ಊರಿಗೆ ಹೊಸಬರಂತೆ ಕಂಡ ಕೆಲ ವ್ಯಕ್ತಿಗಳು  ನೆರೆ  ಮನೆಯ ಗಾರೆ ನಾರಾಣಪ್ಪನ ಗದ್ದೆಯಲ್ಲಿ  ನಿಂತಿದ್ದರು ! ಬೇಲಿಯ ಸಮೀಪ ಅರ್ಧಂಬರ್ಧ ಮಣ್ಣಲ್ಲಿ ಹೂತುಹೋಗಿದ್ದ ಒಂದು ಕಲ್ಲನ್ನು ತೊಳೆದು ಅಳೆದು ಅರ್ಧ ತಾಸಿನಿಂದ  ಪರಿಶೀಲಿಸುತ್ತಿದ್ದರು . ಓರ್ವ ವ್ಯಕ್ತಿ ಏನನ್ನೋ ಬರೆದುಕೊಳ್ಳುತ್ತಿದ್ದ . ಟೋಪಿ ಧರಿಸಿ 'ಇಂಗ್ಲಿಸ್ ಆಫೀಸರ್ ' ನಂತೆ ಕಂಡ ಮತ್ತೋರ್ವ ವ್ಯಕ್ತಿ ನಾರಾಣಪ್ಪನಿಗೆ ಏನನ್ನೋ ವಿವರಿಸಿ  ಹೇಳುತ್ತಿದ್ದ . ನಾರಾಣಪ್ಪನ ಮೊಗ ಹೆಮ್ಮೆಯಿಂದ ಅರಳಿತ್ತು.  

ಹೊಸ ವ್ಯಕ್ತಿಗಳು ಹೊರಟು ಹೋದನಂತರ ರಾಮಪ್ಪ ನಾರಣಪ್ಪನ ಗದ್ದೆಯನ್ನು ಕುರಿತು ಅವಸರವಸರವಾಗಿ ಹೆಜ್ಜೆ ಹಾಕಿದ . 

" ಇಲ್ಲಿ ಏನಾಗತೈತೆ ನಾರಣ ? ನಿನ್ ಗದ್ದೇನ ಆ ದೊರೆಗೆ ಮಾರಿಬಿಟ್ಟಾ ? ದೊರೆ ಕೈತುಂಬ ನಗದು ಕೊಟ್ಟನೇನು ? "

" ಏನ್ ಮಾತಾಡ್ತೀ ರಾಮಪ್ಪಾ ? ಏನೇ ಆಗ್ಲಿ ! ನನ್ ಪಾರಂಪರಿಕ ಭೂಮಿ ಮಾರಕ್ಕಿಲ್ಲಾಂತ ನಮ್ಮಪ್ಪಂಗೆ ಮಾತು ಕೊಟ್ಟೀವ್ನಿ ! ಅದು ನಿನ್ಗೂ ಗೊತ್ತೈತೆ ಅಲ್ವೇ ? "

" ಮತ್ತೇನು ಅಳತೆ ಪಳತೆ ಮಾಡ್ಕಂತಿದ್ರು ? "?

" ಕಲ್ಲು ಓದೋ ಪಂಡಿತ್ರಂತೆ ಅವ್ರು ! ಈ ಕಲ್ಲಿನ ಮ್ಯಾಗೆ ಅವ್ರಿಗೆ ಆಸಕ್ತಿ !  ಪುರಾತನ ಕಲ್ಲುಗಳ್ನ ಓದ್ತಾವರಂತೆ ಅವ್ರು !"

" ತಥ್ ! ಈ ಶಾಪದ್ ಕಲ್ಲು ಕಾಣಕ್ಕೆ ಅಲ್ಲಿಂದ ಬಂದ್ರಂತಾ   ?  ಇದನ್ನ ಅವ್ರಿಗೇ ಮಾರಿ ಕೈತುಂಬ  ಕಾಸು ಈಸ್ಕೋಬೇಕಿತ್ತು  ! " 

" ನಾನ್ಯಾಕೆ ಮಾರ್ಲಿ ? ಈ ಕಲ್ಲು ಇನ್ನೂರು ವರ್ಸದಿಂದ ಇಲ್ಲೇ ಕುಂತದ ! ಇದು ಶಾಪದ್  ಕಲ್ಲು ಅಲ್ವಂತೆ ! ಯಾರೋ ವೀರ ಮಹಿಳೆಯ ವೀರಗಲ್ಲಂತೆ ! ಅಂಗಂದ ಆ ದೊರೆ ! "

" ಹಾಂ !ಅಂಗಾ ? ಯಾರಂತೆ ಅವ್ಳು ? "

                                                                                               

" ಆಕೀ ಎಸರು ಎಲ್ಲಕ್ಕಾ ಅಂದ್ರು  ! ಮುತ್ತಜ್ಜಿ  ಇದ್ದಿದ್ರ  ಅವಳಬಗ್ಗೆ ಯೋಳ್ತಿತ್ತೋ ಏನೋ ! " ನಾರಣಪ್ಪ ತನ್ನ ದೊಡ್ಡದಾದ ಬಿಳಿ  ಮೀಸೆಯನ್ನು ನೀವುತ್ತಲೇ ನುಡಿದನು . " ನಂಗೀಗ ಇವ್ಳು ನನ್ ಭೂಮಿ ಕಾಯೋ  ದೇವತೆ ಇರ್ಬೇಕು ಅನ್ನಿಸತೈತೆ  !" 

" ಲೇ ಸೀತಮ್ಮಾ ! ವಸಿ ಕುಂಕ್ಮ  ಕರ್ಪೂರ  ತತ್ತಾ ಇಲ್ಲಿ ! " ದೂರದಲ್ಲಿ ಗದ್ದೆಯ ಮೂಲೆಯಲ್ಲಿದ್ದ  ತನ್ನ ಮನೆಯನ್ನು ಕುರಿತು  ದನಿಯೆತ್ತಿ ಕೂಗಿದ ನಾರಣಪ್ಪ !

------------------------------------------------------------------------------------------------------------------

The stone slab , measuring 4x1.5 feet , found in Gare Naranappa’s land, on the southern bank of River Jayamangali  , records the death of Yellakka , daughter of Vengatareddi Yellareddi , as a result of a fall from a high pole during an acrobatic performance put up  by the Dombars .

References :

Epigraphia Carnatica

Castes and Tribes of Southern India ( Thurston)

Mysore Castes and Tribes , Vol 3 ( 1930) 

-----------------------------------------------------------------------------------------------------------------------


THE  LAST  SPIN

 Seventeenth Century

 Vengatareddi had been very pleased when the Yajamana praised his  acrobatic  skills , remarking that he was the best in eight ‘seeme’s .

But very soon the mood turned anxious when Somalaraju , the Yajamana , in great spirits, declared that he had set up a contest !

                                                                                                      

Professional acrobats like Vengatareddi  never participated in contests because Dombaraata was not a game . It was the livelihood of his people. What use did they have for contests ? It was enough that he and his sons  were known for their skills on the tightrope and the pole , their body contortions and magic tricks . People enjoyed these street performances and paid  them in cash and kind.  

In fact , life had become smooth enough for him to give up nomadic wandering  and set up home on the banks of river Jayamangali , in this beautiful, green countryside . He had no desire to prove himself to anyone in any contest .

But there  was the Yajmana , the Headman  of their group , organizing a contest , a Challenge against Sankalarayu  of the Turuvekere clan . This young man was gaining fame  in recent times as a very skillful acrobat . He had  even impressed the family of  Midagesi palegars who , reportedly, had presented him four Silver coins in appreciation . His performances in every  jaatre in the region drew admiring crowds .

“ Why are you looking worried , Vengata ?” Remarked Somalaraju , the Yajamana “ Is it because Sankalarayu  is younger and stronger than you? But he is certainly no match to you in Spinning on The Pole . This is your family’s strength and specialty since your grandfather’s time !”

Vengata was thinking    he dint even ask me before throwing that challenge ! , but remained silent .

“ That young man brags too much ! ” Continued the Yajamana , “ I did not like the way he gloated when I was at the Mulashankara purnima festival this Sunday . He has to be cut down to size , that is why I issued the challenge ! …..You can do it ! ”

“ Yes, Yajaman ….but I would have been happier if Gaaliga had been here to take up the contest , not me ….”

The other man waved him off “ Don’t fuss, my good man ! You or your family member , it makes no difference who performs  ….there are still 3 days to go , you can get Maara ready if you will not Spin . …….go now , do me proud ! 

-------------------------------------------------------------------------------------

Yellakka had noticed the thoughtful look on her father’s face that morning before she left for the marketplace with the wares to sell- wooden combs and glass bead chains  made by her mother .

She  could sense something was not right . Especially when he was  still in the same mood when she returned  home in the afternoon .

She put down the bundle and asked  her mother what the matter was .

Yenkti spread her hand in despair . “See, girl , Abba is not keeping well  for sometime now , that back pain is very troubling .”

“Yes, I  know he got treated two months ago by Chimmiyakka, the medicine woman . She applied iguana oil and did the buffalo horn treatment to pull out the pain . He got better .”

“ Got better then   , but pain returns often  ! And now this Yajmana wants him to do the Spin to satisfy his own challenge ! 

Yellakka went up to her father , put her hand on his , “ Abba, Can you not tell him you are not well enough to spin ? 

Vengata sighed deeply . “ No , pinka ( daughter )  . It is not done . The Yajamana’s word is the group’s honour . We , the family,  have to uphold it . And unfortunately , he chose The Spin as the item of challenge . That Turuvekere fellow spins 20 at a go it seems ………….Can any of us match it , let alone surpass it?”

Yellakka’s face fell. It was true . The Spin was the Grand Finale in any performance and it was the trickiest .

A six to ten  feet long pole was attached to a tripod made of three long poles , taking the total height to more than 18 feet . The tip of the pole had a small  metal knob . A metal disc with a socket matching the knob was tied to the performer’s middle, in the front . With the knob fitting into the socket , the performer had to stretch out straight and spin round and round like a propeller  without losing balance .

Vengata would take his children to the nearby hill where the old  Holavanahalli Chief’s Fort was situated, to train them . There was a flat grassy patch by the western rampart where they could practice in peace, in the pleasant breeze and shade of the walls .

He would often enthuse them with reminiscences about the feats of his father and grandfather . And the story of their origin . The Reddi branch of Dombars originated with a miraculous baby , he told them . This legendary boy was born without limbs and so,  thrown into a well by some evil uncles . But the Goddess took pity and blessed  him with limbs. Whereupon , as their Heroic Ballad went, the boy leapt out of the deep well  in one somersault backwards and , with a second somersault forwards,  fell at the feet of the Goddess . She applauded this wonderful feat and blessed him to become the ancestor of skilled acrobats no one could match !

                                                                                                              

Every time she heard this story  , Yellakka’s heart swelled with pride.

‘ We are the specially Blessed ! Acrobatics is in our blood ! 

Vengata trained them methodically, increasing  the height of the pole  gradually over time . Since the children were used to walking on tightrope and stilts from the time they were toddlers , they were not afraid of heights. But  the spins caused nausea and faintness , which they had to learn  to deal with and get used to.

The family’s eldest son, Gaaliga had become an expert , but as per their tradition, he had left home to make a life of his own , traveling , seeing new places ,  learning new skills and earning his food . They had not seen him since he left  five years ago  , but had heard he was doing well in the Puthalapattu  region, the native land  of their ancestors .

 Yellakka could see that Abba missed him now . Gaaliga would have upheld the family’s name in this contest .

Maara , the second son , was still  unsure of himself .

As darkness fell ,  Yankti served them all a meal of kivulu (a millet dish ) with watery lentils and dried fish.

While they all sat around eating , Vengata asked Maara : “You heard about the contest , boy?”

“ Yes, Abba”

“We  will do some rigorous practice tomorrow . You should be able to do at least 25 spins “

“ It was not our challenge  ……Can’t  we refuse , Abba ?

Vengata shot him a sharp look . “ We are bound by clan honour , son. Word has to be kept . If you do not want to do it , I shall do it myself.”

 Yellakka intervened hurriedly  : “ Abba ! He dint say he will not do it . What , Maara ? “

 Maara opened his mouth  to say something, but swallowed his words . He merely nodded and focused on chewing the fish .

 Maara  had no interest at all in following the acrobatic tradition of his family. He did not want to spend his life on poles and tightropes , gathering the  handfuls of coins, grains and old clothes the townsfolk gave. He wanted a different life , but had not been sure of what he actually wanted .

                                                                                                         

Till he saw the Togalu  Gombeyaata ( shadow puppet show)  during the Mulashankara festival  . It was something magical ! So totally enchanting that  he became sure of what he wanted : it was Drama, Song, Dance and the sheer magic of animated puppets ! He had made up his mind to go away to Siruguppa and join the troupe of the traveling Ballari  puppeteers .

 After dinner , he sought out his Mother and told her his dreams . She would have sent him off with blessings of Yellamma and Koratageramma , just as she had done for Gaaliga , but unfortunately , the timing was bad .

“ You can follow your own path , Maara , no one can  stop you . But just fulfill this one  wish of your father before you go  , even if you don’t like acrobatics”.

The lad  pouted and walked away to his bed under the honge tree.

Throughout the practice session the next day , he did not utter a word .

At very early  dawn , on the day of  the contest , Maara tied up his clothes in a bundle , hopped on a saartha (caravan) cart carrying grains northwards , and disappeared into the darkness .

-----------------------------------------------------------------------------------------

The banks of River Jayamangali hummed with the babble of people gathering to witness the contest . They were sure that either Vengata or Maara would easily outdo that upstart from Turuvekere .

They had no way of knowing that Vengata was out of touch and also incapacitated by back pain . Which was why they were seeing more of Maara performing in recent times , with Vengata  only providing  the tamate beat .

They could not know the turmoil caused  in Vengata’s house that morning because of Maara’s disappearance .

They did not know that Vengata’s sense of loyalty to the Yajamana had made him steel himself to take up the contest himself .

Nor did they know that Yellaka , trained the same way as her brothers , had decided to relieve her father of his problems.

“ You are still young , my child ! And today’s pole is a good 22 feet above ground …….sometimes during practice , the Spin makes you dizzy and lose control ….”

“ Let her do it ,” said Yenkti “only to keep the word of Yajmana . Lets not worry about winning or losing .”

Vengatareddi Yellareddi smiled , feeling light hearted . “ She is my pinka  , trained by me ! She will do well ……but, don’t push yourself too much , Yella . Go up there , spin a few times and come down .”

Yellakka nodded and smiled .

The small crowd was surprised when it was announced that the contestant would be Yellakka , not Vengatareddi . But it was nothing unusual . The Dombars were all good acrobats , men or women .

The first to perform was the guest , Sankalarayu  of Tiruvekere . He looked fit and athletic as he scampered up the pole . He lay his body straight as an arrow across the tip of the pole and started spinning ….

“ 21 !” Shouted the crowd when he stopped . That was quite a feat !

The young man got  down, steadied himself  and stretched out on the grass, sucking a lemon .

 Looking towards Yellakka , he smirked :

“ Kavu-le kasikem   !( “ Go on, kitten “)  ….Show us if you can  you manage 10 !”

Yellakka’s eyes flashed fire and her nostrils flared . “ Sankala ! Your name and fame will last only till the next champion appears . We are of the Blessed blood and our names will last a hundred years . Be not proud .”

 She nodded to her parents and scampered up the pole. Fixing the socket of the metal disc sewn tight to her dress   to the pivot of the pole , she lay flat and straight as a needle . She glanced down only once at her parents and then closed her eyes . Jerking her body into motion, she began to spin …..

                                                                                                        
“20 …..21….22…23…”

The wild cheering of the crowd  was cut short suddenly by a heavy thud.  

 -----------------------------------------------------------------------------------------    

Late Nineteenth Century

 Ramappa could not contain his curiosity .

Some  outsiders had  gathered in the field of his neighbour , Gare Naranappa and , for close to half an hour , they were seen measuring rubbing and examining something in the muddy bed by the fence . One of them was writing down something , while  another, an ‘English-Apisar’  in a Sola Topee,  was talking animatedly . Naranappa was standing aside , beaming with importance .

As soon as they left , Ramappa hurried over to the field .

“ What's happening Narana ? Are you selling your land to that dore ? Did he offer you good price ? 

“ Nonsense, Ramappa .  You know very well I will never sell my ancestor’s land , I have given my word to my father,  don’t you know ! 

“ What were they measuring , then ? 

“ They were interested in this stone , they are big panditaru  who read these ancient stones it seems. 

“ Oh , this Curse Stone ? They came all the way from the Big City to see this? You could have sold it off to them  for a good price ! ”

“ Why would I sell it ! It has been in this  zamin  for 200 years and belongs here . The  Dore’  told me its not a Curse Stone , but a Veeragallu for a brave girl ! 

“ Waa ! Who was she ? ”

                                                                                         

“ They said her name was Yellakka ……perhaps my great grandmother would have known who she was …..” Said Naranappa , smoothing down his big white moustache “ but , now I feel she is the Guardian spirit who protects my field …….” He turned towards the house at the far end of the field and called out : “ Le , Seethamma , bring some kunkuma and  camphor …..”

------------------------------------------------------------------------------------------ 

The stone slab , measuring 4x1.5 feet , found in Gare Naranappa’s land, on the southern bank of River Jayamangali  , records the death of Yellakka , daughter of Vengatareddi Yellareddi , as a result of a fall from a high pole during an acrobatic performance put up  by the Dombars .

References :

Epigraphia Carnatica

Castes and Tribes of Southern India ( Thurston)

Mysore Castes and Tribes , Vol 3 ( 1930)

-------------------------------------------------------------------------------------------- 

2 comments:

  1. ಕಥೆ ಬಹಳ ಚೆನ್ನಾಗಿದೆ, ಶಾಸನಗಳಲ್ಲಿ ಈ ರೀತಿಯ ಕಥೆಗಳು ಬಹಳ ಇವೆ
    ನಿಮಗೆ ಅಭಿನಂದನೆಗಳು

    ReplyDelete
    Replies
    1. ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು .

      Delete