Sunday, April 20, 2014

Kaayi Kadubina Kathe - The Dumpling Story

ಕಾಯಿ ಕಡುಬಿನ ಕಥೆ 

ಕಾಯಿ ಹೂರಣದ ಘಮ ಘಮ ಇಡೀ ಮನೆಯನ್ನೇ ಆವರಿಸಿತ್ತು. ಸುಕ್ಕು ಮಾಡಿಕೊಂಡ ಮೂಗಿನಿಂದ  ಆ ಸ್ವಾಧವನ್ನು  ಹೀರುತ್ತ ಅಡುಗೆ ಮನೆಯ ಕಡೆ ಓಡಿದಳು ಪುಟ್ಟಿ .  

" ಅಜ್ಜಿ !  ಏನ್ ಮಾಡ್ತಿದ್ದೀಯ ? ಘಮ ಘಮಾಂತ ಸೀ ತಿಂಡಿ ವಾಸ್ನೆ ಬರ್ತಿದೆ !" 

" ಬಂದ್ಬಿಟ್ಯಾ  ವಾಸ್ನೆ ಹಿಡ್ಕೊಂಡು ?! ಕಾಯಿ   ಕಡುಬು ಮಾಡ್ತಿದ್ದೀನಿ ಪುಟ್ಟಿ ! ನಿನ್ಗೆ  ತುಂಬಾ ಇಷ್ಟ ಅಲ್ವ ?" ಅಜ್ಜಿ  ಕಾಯಿ ಹೂರಣವನ್ನು ಪುಟ್ಟ ಕಣಕದ ಬಟ್ಟಲಿಗೆ  ತುಂಬಿ, ಬಟ್ಟಲಿನ ತುದಿಗಳನ್ನ ಎಳೆದು ಸೇರಿಸಿ  ಮುಚ್ಚಿದಳು . 

"ಹಾ ! ಸಿಹಿ ಸಿಹಿ ಕಾಯಿ ಕಡುಬು ! ನಾನೂ ಮಾಡ್ತಿನಜ್ಜಿ !" ಪುಟ್ಟಿ ಉತ್ಸಾಹದಿಂದ ಅಜ್ಜಿಯ ಜೊತೆ ಕುಳಿತು ತಾನೂ ಕಡುಬು ಮಾಡಲು ಮುಂದಾದಳು . 

ಪುಟ್ಟಿ ಹೂರಣವನ್ನ ಕಣಕದ ಬಟ್ಟಲಿಗೆ ತುಂಬಿ ಕಡುಬು ಮಾಡಿ ಅಜ್ಜಿಗೆ ತೋರಿಸಿ  " ಅಜ್ಜಿ ! ನನ್ ಕಡುಬು ರೆಡಿ !" ಎಂದಳು . 

"ಇದು ಉಂಡೆ ಆಯ್ತಲ್ಲಾ ! ಹೂರಣ ಒಳಗೆ ಸೇರ್ಸಿ, ಕಣಕದ ಬಟ್ಟಲ ತುದಿಗ್ಳನ್ನ  ಒಟ್ಟಿಗೆ ಸೇರ್ಸಿ ಜಿಗುಟಿ  ಒಂದು ಮೂಗು ಇಟ್ರೆ , ಆವಾಗ ಅದು ಕಡುಬು !" 

"ಕಡುಬಿಗೇಕೆ ಮೂಗು ಇರ್ಬೇಕು ಅಜ್ಜಿ ?" ಸ್ವಾರಸ್ಯದಿಂದ ಕಣಕದ ತುದಿಗಳನ್ನ ಒಟ್ಟಿಗೆ  ಸೇರಿಸಿ ಜಿಗುಟಿ ತನ್ನ ಕಡುಬಿಗೆ  ಮೂಗನ್ನು ರಚಿಸುತ್ತ ಪ್ರಶ್ನಿಸಿದಳು   ಪುಟ್ಟಿ .

"ಅದೇಕೋ, ಅದೇನ್ ಕಥೆಯೋ ನಾ ಕಾಣೆ ! ಆದ್ರೆ ನಿನ್ ಹಾಗೆ ಒಬ್ಬ ಪುಟ್ ಹುಡುಗಿ 'ಕಡುಬಿಗೆ ಮೂಗು ಉಂಟೇ' ಅಂತ ಅವಳ ಅಮ್ಮನ್ನ ಕೇಳಿದ್ಳಂತೆ ! ಆ ಕಥೆ ಮಾತ್ರ   ನನಗ್ಗೊತ್ತು  !"

" ಆಹಾ  ! ಕಥೆ ! ಕಡುಬಿನ ಕಥೆ ! ಇದೂ ನಿಮ್ ತಾತ ಹೇಳಿದ್ ಕಥೆಯೇ ಅಜ್ಜಿ ? " ಬಲು  ಖುಷಿಯಿಂದ ಕೇಳಿದಳು ಪುಟ್ಟಿ . 

"ಹುಮ್ ! ನನ್ ಮೆಡ್ರಾಸ್ ತಾತ ಹೇಳಿದ್ ಕಥೆ !"
  
" ಹೇಳಜ್ಜಿ ! ಈಗಲೇ ಹೇಳು  !" ಒತ್ತಾಯ ಮಾಡಿದಳು ಪುಟ್ಟಿ . 

ಅಜ್ಜಿ  ಮಾಡಿದ ಕಡುಬುಗಳನ್ನು ಹಬೆಯಲ್ಲಿಟ್ಟು ಬಂದು ಪುಟ್ಟಿಯ ಸಮೀಪ ಕುಳಿತಳು .   

"ಕಾಯಿ ಕಡುಬಿನ ಕಥೆ ! ಹೇಳುವೆ ! ಕೇಳು !"ಕಥೆ ಪ್ರಾರಂಭವಾಯಿತು . 


   ಒಂದಾನೊಂದು ಕಾಲದಲ್ಲಿ  ಗುಣವತಿಯಾದ ಒಬ್ಬ ತಾಯಿ  ಇದ್ದಳಂತೆ. 


ಅವಳಿಗೆ ಜಾಣಮರಿಯಾದ ಒಬ್ಬ ಮಗಳು  ಮತ್ತು 


ತುಂಟಮರಿಯಾದ ಮತ್ತೊಬ್ಬ ಮಗಳೂ  ಇದ್ದರಂತೆ . 


ಒಂದಾನೊಂದು ದಿವಸ ರುಚಿ ರುಚಿಯಾದ ಹತ್ತು ಕಾಯಿ ಕಡುಬುಗಳನ್ನು ಮಾಡಿ ಡಬ್ಬಿಗೆ ಹಾಕಿಟ್ಟಳು  ಅಮ್ಮ . 

'ಹುಡುಗಿಯರೇ ! ನಾನು ಹಣ್ಣು ತರಲು ಅಂಗಡಿಗೆ ಹೋಗುತ್ತಿರುವೆ  . ರಾತ್ರಿಯ ಪೂಜೆಗಾಗಿ ಕಾಯಿ ಕಡುಬು ಮಾಡಿಟ್ಟಿರುವೆ  . ನಾನು ಬರುವುದರಲ್ಲಿ ಅದನ್ನ ತಿಂದೀರಾ ! ಹುಷಾರ್  !' ಎಂದು ಎಚ್ಚರಿಸಿ ಹೊರಟು  ಹೋದಳು  . 

ಬಲವಾಗಿ ತಲೆದೂಗಿ ಆಟವಾಡಲು  ಹೊರಟರು ಹುಡುಗಿಯರು . 


ಮಧ್ಯಾಹ್ನದ ಉರಿ ಬಿಸಿಲಿನ ಬೇಗೆಯನ್ನ   ಸಹಿಸಲಾರದ ತುಂಟಮರಿ,  ಮಡಿಕೆಯಲ್ಲಿದ್ದ  ತಣ್ಣನೆಯ ನೀರನ್ನು  ಕುಡಿಯಲೆಂದು ಅಡುಗೆ ಮನೆಯನ್ನು  ಹೊಕ್ಕಳು. ಅಡುಗೆ ಮನೆಯಲ್ಲಿದ್ದ ಸಿಹಿ ತಿಂಡಿಯ ಘಮ ಘಮ ಅವಳ ಬಾಯಲ್ಲಿ ನೀರೂರಿಸಿತು !


"ಆಮೇಲೆ ಏನಾಯ್ತು ಗೊತ್ತೇ ?" ಎಂದಳು ಅಜ್ಜಿ . 

Saturday, March 29, 2014

Sooji Subba Rayana Kathe - 5

ಸೂಜಿ ಸುಬ್ಬ ರಾಯನ ಕಥೆ 

" ಸೂಜಿ ಸುಬ್ಬನ್ನ ಹುಲಿ ಏನ್ ಮಾಡ್ತಜ್ಜಿ ?" ಪುಟ್ಟಿ ಭಯದಿಂದ ಕೇಳಿದಳು. 

" ತುಂಟ ಸುಬ್ಬ ರಾಯನು ಮಾತಿನ ಮಲ್ಲ ,

  ಅಂಜಿಕೆ ಹೆದರಿಕೆ ಎಳ್ಳಷ್ಟೂ ಇಲ್ಲ !" 

  ಪುಟ್ಟಣ್ಣ ರಾಗವಾಗಿ ನುಡಿದ . 

" ಕರೆಕ್ಟ್ ! " ಎಂದ ಅಜ್ಜಿ ಮುಂದಕ್ಕೆ ಓದಿದಳು . 

                            ೨೧

ಹೊರಬಿದ್ದ ಸೂಜಿ ಸುಬ್ಬ ಕೂಗಾಡಿದನು !

ಜೋರಾಗಿ ರಂಪಾಟವ  ಮಾಡಿದನು !

" ಕರಡಿಯಣ್ಣ , ನರಿಯಣ್ಣ , ಮೊಸಳೆಯಣ್ಣಾ !

  ಹಿಡಿದುಕೊಂಡ  ಹುಲಿಯಣ್ಣ 

  ಸೂಜಿ ಸುಬ್ಬ ರಾಯನನ್ನಾ  !"

                                             ೨೨


ಕೂಡಲೇ ಧಾವಿಸಿ ಬಂದ ಪ್ರಾಣಿಗಳು ,

ಹುಲಿಯ ಮೇಲೆರಗಿ ಕಚ್ಚಾಡಿದವು !

                                               ೨೩

ಸೂಜಿ ಗಾತ್ರದ ಸೂಜಿ ಸುಬ್ಬ ರಾಯನು , 

ಅರಸುತ ರಾತ್ರಿಯ  ಊಟವನ್ನು,

ನುಸುಳಿಕೊಂಡು ಅಲ್ಲಿಂದ ಪಾರಾದನು !


ಅಜ್ಜಿ ಮುಗಿಸಿದಾಗ ಎಲ್ಲರೂ ' ಸೂಜಿ ಸುಬ್ಬ ರಾಯನಿಗೆ ಜೇಯ್ ! ' ಎಂದು  ಉತ್ಸಾಹದಿಂದ ಘೋಷಣೆ ಮಾಡಿದರು . 

" ಪ್ರಾಣಿಗಳೆಲ್ಲ ಕಾಡಲ್ಲಿ  ಇನ್ನೂ ಕಾದಾಡ್ತಾನೆ ಇತ್ವಂತೆ  ! ನನ್  ತಾತ ಹೇಳ್ತಿದ್ರು !"

" ಈಗ್ಲೂ ?" ಪುಟ್ಟಿ ಕಣ್ಣಗಲಿಸಿ ಕೇಳಿದಳು . 

" ಹುಂ! ಈಗ್ಲೂ ಕಾದಾಡ್ತಾನೇ ಇವ್ಯಂತೆ !" ಎಂದಳು ಅಜ್ಜಿ !

Thursday, March 27, 2014

Sooji Subba Rayana Kathe - 4

ಸೂಜಿ ಸುಬ್ಬ ರಾಯನ ಕಥೆ 

ನೆಂಟರು ಊಟ ಮಾಡಿ ಹೊರಟು  ಹೋದರು .

" ಅಜ್ಜಿ ಕಥೆ !" ಎನ್ನುತ್ತ ಅಜ್ಜಿಯ ಬಳಿ ಓಡಿ ಬಂದಳು ಪುಟ್ಟಿ .

" ಇರು ಪುಟ್ಟಿ ! ಅಮ್ಮ ಪಾಪುನ ಮಲ್ಗ್ಸಕ್ಕೆ ಹೋದ್ಳು. ಪಾತ್ರೆ ಎಲ್ಲ ಹಾಗೇ ಬಿದ್ದಿದೆ .  ಎಲ್ಲ ತೆಗ್ದಿಟ್ಟು ಬರ್ತೀನಿ ."

" ಆಮೇಲ್  ಮಾಡು ಅಜ್ಜಿ . ಮೊದ್ಲು ಕಥೆ !'' ಪುಟ್ಟಿ ಹಠದಿಂದ ಅಜ್ಜಿಯ  ಸೆರಗನ್ನು   ಗಟ್ಟಿಯಾಗಿ  ಹಿಡಿದು ನಿಂತಳು. 

" ಸರಿ ಸರಿ ! ನೀನು ಕಥೆ ಮುಂದ್ವರ್ಸು ! ನಾನು ಎಲ್ಲ ತೆಗ್ದಿಡ್ತೀನಿ ! ಪುಟ್ಟಣ್ಣ !ಬಾರೋ ! ನನ್ಗೆ  ಸಹಾಯ ಮಾಡು ." ಎಂದು ನಗುತ್ತ ನುಡಿದರು ತಾತ.

" ನಾನೂ ಕಥೆ ಕೇಳ್ಬೇ ಕು ತಾತ !" ಎಂದ ಪುಟ್ಟಣ್ಣ .

" ನಾನೂ ಕೂಡ ಕೇಳ್ಬೇಕೋ ! ಅಜ್ಜಿ ಊಟದ್ ಮನೇಲಿ ಕೂತು ಓದ್ತಾಳೆ  . ನಾವು ಕಥೆ ಕೇಳ್ತಾ ಕೇಳ್ತಾ ಕೆಲ್ಸ ಮಾಡೋಣ ."

ಅಜ್ಜಿ ನಗುತ್ತ ಪುಸ್ತಕ ಹಿಡಿದು ಕುಳಿತಳು . ಪುಟ್ಟಿ ಅವಳಿಗಂಟಿಕೊಂಡು ಕೂತಳು .

                                                       ೧೬


ಒಣ ಸೋರೆ ಕಾಯನ್ನು  ಕತ್ತರಿಸಿ ,

ಸೂಜಿ ಸುಬ್ಬ ರಾಯನನ್ನು  ಒಳಗಿರಿಸಿ , 

ಅಜ್ಜಿಯು  ಕಾಯನ್ನು  ಮುಚ್ಚಿದಳು, 

ಕಾಡು ಮಾರ್ಗದಲ್ಲಿ  ಉರುಳಿಸಿದಳು ! 

                                                       ೧೭


  ಉರುಳುತ  ಉರುಳುತ ಸೋರೆ ಕಾಯಿ, 

  ಪೋದೆಗಳ ಪಕ್ಕ ಬಂತು   ಹುಷಾರಾಗಿ . 

" ಯಾರದು ಪೋದೆಯೊಳು ಉರುಳುತ್ತಿರುವೆ   ?"

   ಜಿಗಿಯಿತು  ಕರಡಿಯು   ಪ್ರಶ್ನಿಸುತ್ತಲೇ !

  " ನಾನೇ ನಾನೇ ! ಸೋರೆ ಸುಬ್ಬ ರಾಯನು!"
  
   ಒಳಗಿನಿಂದ ಸೂಜಿ ಸುಬ್ಬ ಉತ್ತರವ  ಕೊಟ್ಟನು !

  " ಸೋರೆ ಸುಬ್ಬರಾಯರೇ ! ಸೋರೆ ಸುಬ್ಬರಾಯರೇ !

    ಸೂಜಿ ಸುಬ್ಬ ರಾಯನ ಕಂಡೀರೇ ?"
    
    ಉರುಳುತ ಉರುಳುತ ತಡ ಮಾಡದೇ ,

   ಸೂಜಿ ಸುಬ್ಬ ರಾಯನೆಂದ " ಕಾಣಲಿಲ್ಲವೇ !"

   " ಸೂಜಿ ಇಲ್ಲ , ಬೆಲ್ಲ  ಇಲ್ಲ ಏನೂ ಇಲ್ಲಾ !"

     ಕರಡಿಯು  ಮಲಗಗಿತು ನಿರಾಶೆಯಿಂದ !

                                                    ೧೮

ಉರುಳಿತು ಉರುಳಿತು ಸೋರೆ ಕಾಯಿ ,

ಬಂಡೆಗಳ ಮಧ್ಯದಲ್ಲಿ  ಅವಸರವಾಗಿ  !

" ಯಾರದು ಕಾಡಲಿ ಉರುಳುವುದು ?"

ಹಾರಿ ಬಂದ ನರಿಯು ವಿಚಾರಿಸಿತು !

" ನಾನೇ ! ನಾನೇ !ಸೋರೆ ಸುಬ್ಬರಾಯನು !"

ಒಳಗಿನಿಂದ ಸೂಜಿ ಸುಬ್ಬ ಉತ್ತರವ  ಕೊಟ್ಟನು . 

ಸೂಜಿ ಸುಬ್ಬ ರಾಯನನ್ನು ಕಾಣದೆ,

ಕೇಳಿತು ನರಿಯು ಕೋಪ  ತಾಳದೆ !

" ಸೋರೆ ಸುಬ್ಬ ರಾಯರೇ !ಸೋರೆಸುಬ್ಬ ರಾಯರೇ !

  ಸೂಜಿ ಸುಬ್ಬ ರಾಯನ ಕಂಡೀರೇ ?"

ಉರುಳುತ ಉರುಳುತ ನಿಲ್ಲದೆ , 

ಸೂಜಿ ಸುಬ್ಬ ರಾಯನೆಂದ   " ಕಾಣಲಿಲ್ಲವೇ !"

" ಸೂಜಿ ಇಲ್ಲ !ಸುಬ್ಬನಿಲ್ಲ ! ತಿಂಡಿಯೂ  ಇಲ್ಲ !"

ನಿರಾಶೆಗೊಂಡು  ಮಲಗಿತು ನರಿ ದುಃಕ್ಕದಿಂದ !

                                       ೧೯


ಉರುಳಿತು   ಉರುಳಿತು   ಸೋರೆ ಕಾಯಿ ,

ಹೊಳೆಯತ್ತ ಉರುಳಿ ಬಂತು ಎಚ್ಚರವಾಗಿ !

" ಯಾರದು ಹೊಳೆಯತ್ತ  ಉರುಳುವುದು ?"

ಹೊರ ಬಂದ ಮೊಸಳೆಯು  ವಿಚಾರಿಸಿತು !

" ನಾನೇ ! ನಾನೇ !ಸೋರೆ ಸುಬ್ಬರಾಯನು !"

ಒಳಗಿನಿಂದ ಸೂಜಿ ಸುಬ್ಬ ಉತ್ತರವ  ಕೊಟ್ಟನು . 

ಸೂಜಿ ಸುಬ್ಬ ರಾಯನನ್ನು ಕಾಣದೆ ,

ಕೇಳಿತು ಮೊಸಳೆಯು ಕೋಪ ತಾಳದೆ !

" ಸೋರೆ ಸುಬ್ಬ ರಾಯರೇ !ಸೋರೆಸುಬ್ಬ ರಾಯರೇ !

  ಸೂಜಿ ಸುಬ್ಬ ರಾಯನ ಕಂಡೀರೇ ?"

ಉರುಳುತ ಉರುಳುತ ನಿಲ್ಲದೆ , 

ಸೂಜಿ ಸುಬ್ಬ ರಾಯನೆಂದ  " ಕಾಣಲಿಲ್ಲವೇ !"

" ಸೂಜಿ ಇಲ್ಲ ! ಸುಬ್ಬನಿಲ್ಲ ! ಕಡುಬೂ ಇಲ್ಲ !"

  ಮಲಗಿದ  ಮೊಸಳೆಗೆ ನೆಮ್ಮದಿಯೂ  ಇಲ್ಲ !

                                      ೨೦
ಉರುಳಿತು ಉರುಳಿತು ಸೋರೆ ಕಾಯಿ ,

ಮನೆಗೆ ಮತ್ತೆ ಮರಳೋ ಸಂಭ್ರಮದಲ್ಲಿ !

" ಯಾರದು ಕಾಡಲ್ಲಿ ಉರುಳುವುದು ?"

 ಎರಗಿ  ಬಂದ ಹುಲಿಯು ವಿಚಾರಿಸಿತು !

" ನಾನೇ ! ನಾನೇ !ಸೋರೆ ಸುಬ್ಬರಾಯನು !"

ಒಳಗಿನಿಂದ ಸೂಜಿ ಸುಬ್ಬ ಉತ್ತರವ  ಕೊಟ್ಟನು . 

ಸೂಜಿ ಸುಬ್ಬ ರಾಯನನ್ನು ಕಾಣದೆ ,

 ಗರ್ಜಿಸಿತು ಹುಲಿ ರೋಷ ತಾಳದೆ !

" ಸೋರೆ ಸುಬ್ಬ ರಾಯರೇ !ಸೋರೆ ಸುಬ್ಬ ರಾಯರೇ !

  ಸೂಜಿ ಸುಬ್ಬ ರಾಯನ ಕಂಡೀರೇ ?"

  ಉರುಳುತ ಉರುಳುತ ನಿಲ್ಲದೆ , 

  ಸೂಜಿ ಸುಬ್ಬ ರಾಯನೆಂದ  " ಕಾಣಲಿಲ್ಲವೇ!"

" ಸೂಜಿ ಇಲ್ಲ ! ಸುಬ್ಬನಿಲ್ಲ ! ವಡೆಯೂ ಇಲ್ಲವೇ ?"

  ಹುಲಿಯು  ಜಜ್ಜಿ  ಹಾಕಿತಲ್ಲ  ಸೋರೆ ಕಾಯನ್ನೇ ! 


"ಅಯ್ಯೋ !" ಎಂದು ಕೂಗಿದಳು  ಪುಟ್ಟಿ !