Sunday, February 25, 2018

ಸೀತೆಮಣೆ - Seethemane

ಸೀತೆಮಣೆ


 ಹೆಬ್ಬಲೆಗಳು ಉರುಳಿ ಬಂದು ಮರಳು ದಡದ ಮೇಲೆ ಆಕ್ರೋಶದಿಂದ ಅಪ್ಪಳಿಸುತ್ತಿದ್ದವು. ಜುಳು ಜುಳು ಓಡಿಬಂದ ಕಿರು ಅಲೆ ಸಿಯಾಳ ಕಾಲುಗಳನ್ನು ತೊಳೆದಾಗ ಅವಳಿಗೆ ರೋಮಾಂಚನವುಂಟಾಯಿತು. ಉದ್ದ ಲಂಗವನ್ನು ಮೊಳಕಾಲವರೆಗೆ ಎತ್ತಿ ಹಿಡಿದುಕೊಂಡು ಅಲುಗಾಡದೆ ನಿಂತಳು ಸಿಯಾ. ಅವಳ ಪಾದಗಳಿಗೆ ಕಚಗುಳಿ ಇಟ್ಟು ಅಡಿಯಲ್ಲಿದ್ದ ಮರಳನ್ನು ಕೊರೆದುಕೊಂಡು ಹಿಮ್ಮೆಟ್ಟಿ ಓಡಿತು ಆ ತುಂಟ ಅಲೆ. ಸಿಯಾ  ಕಿಲಕಿಲನೆ  ನಕ್ಕಳು. ಸಧ್ಯ! ಅವಳ ಮತ್ತೊಂದು ಕೈ ಜೋಪಾನವಾಗಿ ಅಪ್ಪನ ಬಿಗಿಯಾದ ಹಿಡಿತದಲ್ಲಿತ್ತು. ಮತ್ತೊಂದು ಅಲೆ ಎದ್ದು ಬರಲು ಇನ್ನೂ ಸ್ವಲ್ಪ ಹೊತ್ತು ಆಗಬಹುದು. ಸಿಯಾ  ಅಪ್ಪನ ಕೈಯಿಂದ ತನ್ನ ಪುಟ್ಟ ಕೈಯನ್ನು ಬಿಡಿಸಿಕೊಂಡು ಸರಸರನೆ ಬಗ್ಗಿ ಕೈಯ್ಗೆ ಸಿಕ್ಕ ಕಪ್ಪೆಚಿಪ್ಪುಗಳನ್ನು ಆರಿಸಿ ಚೀಲದಂತೆ ಮಡಚಿದ್ದ ತನ್ನ ಲಂಗದ ಮಡಿಕೆಯಲ್ಲಿ ಮೊದಲೇ ಸಂಗ್ರಹವಾಗಿದ್ದ ಚಿಪ್ಪುಗಳೊಂದಿಗೆ ಹಾಕಿಕೊಂಡಳು.
"ಸಿಯಾ! ಆಡಿದ್ದು ಸಾಕು! ನಿನ್ನ ಲಂಗ ಪೂರಾ ಒದ್ದೆಯಾಗಿದೆ ನೋಡು. ಇಲ್ಬಂದು  ಒಣಗಕ್ಕೆ ಬಿಡು. ಬದಲಾಯಿಸಕ್ಕೆ ಬೇರೆ ಬಟ್ಟೆ ಏನೂ ತಂದಿಲ್ಲ ನಾನು." ದಡದ ಮೇಲೆ ಕುಳಿತಿದ್ದ ಅಮ್ಮ ಕೂಗಿ ಎಚ್ಚರಿಸಿದಳು.
"ಅಜ್ಜಿ ಬಂದಿದ್ರೆ ಚೆನ್ನಾಗಿರ್ತಿತ್ತು. ಯಾವಾಗ ಇಲ್ಲಿಗೆ ಬಂದ್ರೂ ಅವರು  ಎರೆಡೆರಡು ಜೊತೆ ಬಟ್ಟೆ ತರ್ತಿದ್ರು. " ಎಂದು ಮೆಲುದನಿಯಲ್ಲಿ ನುಡಿದಳು ಸಿಯಾ.
"ನಾನೂ ಸಹ ಅಜ್ಜೀನ ಮಿಸ್ ಮಾಡ್ತಿದ್ದೀನಿ ಸಿಯಾ. ಮೈಯ್ಗೆ  ಹುಷಾರಾಗಿದ್ದಿದ್ದ್ರೆ  ಬುಟ್ಟಿ ತುಂಬ  ಪಿಕ್ನಿಕ್ ತಿಂಡಿ ಕಟ್ಕೊಂಡು ಎಲ್ರಿಗೂ ಮುಂಚೆ  ರೆಡಿಯಾಗ್ತಿದ್ಲು. ಅಜ್ಜಿಗೆ ಸೀತಾರಾಮಸಂದ್ರ ಅಂದ್ರೆ  ಅಷ್ಟೊಂದು ಪ್ರೀತಿ." ಎನ್ನುತ್ತ ನಿಟ್ಟುಸಿರೆಳೆದರು ಅಪ್ಪ.
ತಮ್ಮ ಪೂರ್ವಿಕರು ವಾಸವಾಗಿದ್ದ ಸೀತಾರಾಮಸಂದ್ರ ಸಿಯಾಳ ಮನೆಯವರಿಗೆಲ್ಲ ಅಚ್ಚುಮೆಚ್ಚಿನ ಊರಾಗಿತ್ತು.  ಸಮುದ್ರ ತೀರದಲ್ಲಿದ್ದ ಸ್ವಚ್ಛವಾದ ಮರಳು ದಂಡೆಗೂ, ಮನೆ ದೇವರಾದ ಸೀತಾರಾಮ ಪ್ರತಿಷ್ಠೆಯಾಗಿದ್ದ ಹತ್ತನೆಯ ಶತಮಾನದ ಒಂದು ಸುಂದರ ದೇಗುಲಕ್ಕೂ ಮದ್ಯೆ ಹಸಿರು ಗದ್ದೆಗಳು ಮತ್ತು ತೆಂಗಿನ ತೋಪುಗಳ ನಡುವೆ ಹುದುಗಿಕೊಂಡಿದ್ದ ಗ್ರಾಮ ಸೀತಾರಾಮಸಂದ್ರ.
ಅಜ್ಜಿ ಆ ಊರ ಬಗ್ಗೆ  ಅನೇಕ ಕಥೆಗಳನ್ನು ಸಿಯಾಳಿಗೆ ಹೇಳಿದ್ದಳು. ವನವಾಸದ ಸಮಯ ಸೀತಾ ಮತ್ತು ರಾಮ ಇಲ್ಲೇ ತಂಗಿದ್ದರಂತೆ.  ರಾಮ ರಾಕ್ಷಸರೊಂದಿಗೆ ಯುದ್ಧವಿಲ್ಲದ ಸಮಯಗಳಲ್ಲಿ ಇಲ್ಲೇ ಕೂತು ಸೀತೆಯೊಂದಿಗೆ ಅಳಗುಳಿಮಣೆ ಆಡುತ್ತಿದ್ದನಂತೆ. ಆ ನೆನಪಿನ ಕುರುಹಾಗಿ ಹತ್ತನೆಯ ಶತಮಾನದಲ್ಲಿದ್ದ ಸ್ಥಳೀಯ ಚಕ್ರವರ್ತಿಯೊಬ್ಬ ಬೃಹದಾಕಾರದ ಸೀತಾರಾಮ ಗುಡಿಯನ್ನು  ಕಟ್ಟಿಸಿದ್ದನಂತೆ. ಅಜ್ಜಿ ಕಥೆ ಹೇಳಿದ್ದು ಮಾತ್ರವಲ್ಲದೆ ಸಿಯಾಳಿಗೆ ಅಳಗುಳಿಮಣೆ ಆಡುವುದನ್ನೂ ಕಲಿಸಿದ್ದಳು.


"ಸಿಯಾ ! ಇದೇನೂ ಸಾಮಾನ್ಯವಾದ ಆಟ ಅನ್ಕೋಬೇಡ. ಈ ಆಟದಲ್ಲಿ ಗೆಲ್ಲಬೇಕಾದ್ರೆ ಗಣಿತ ಶಾಸ್ತ್ರದ ಅರಿವು ಅತ್ಯಗತ್ಯ. ಆಡಿದ್ರೆ ನಿನ್ನ ಏಕಾಗ್ರತೆ ಅಭಿವೃದ್ಧಿಯಾಗತ್ತೆ. ಗಮನದ ಅವಧಿ ಹೆಚ್ಚಾಗತ್ತೆ. ಮುಂದಾಲೋಚನೆ, ನೆನಪಿನ ಶಕ್ತಿ ಎಲ್ಲವೂ ಕೂಡ ಅಭಿವ್ರಿದ್ಧಿಯಾಗತ್ತೆ! ಆಗಾಗ್ಗೆ ಆಡು! ಆಮೇಲೆ ಶಾಲೆಯಲ್ಲಿ ಹೇಗೆ ಸ್ಕೋರ್ ಮಾಡ್ತೀಯ ನೋಡು!"
'ಕಂಪ್ಯೂಟರ್ ಗೇಮ್ಸ್'  ಮತ್ತು 'ಪ್ಲೇ ಸ್ಟೇಷನ್' ಅಂತಹ ವೇಗವಾದ  ಸ್ವಾರಸ್ಯಕರವಾದ ಆಟಗಳೆಲ್ಲ ಇರೋವಾಗ ಅಳಗುಳಿಮಣೆಯಾಟವನ್ನ ಯಾರಾದ್ರೂ ಆಡ್ತಾರೆಯೇ? ಈ ಹೈದರ್ ಕಾಲದ ಆಟ ಅಜ್ಜಿಗೇ ಸರಿ!' ಎಂದುಕೊಂಡರೂ ಪ್ರೀತಿಯ ಅಜ್ಜಿಗೆ ಎದುರು ಮಾತನಾಡಲು   ಸಿಯಾಳಿಗೆ  ಇಷ್ಟವೇ ಇಲ್ಲ.  ಹಾಗಾಗಿ ಒಮ್ಮೊಮ್ಮೆ ಅಜ್ಜಿಯೊಂದಿಗೆ ಅಳಗುಳಿಮಣೆಯಾಟವನ್ನ  ಆಡುತ್ತಲೇ ಇದ್ದಳು. ಅಜ್ಜಿಯ ಜೊತೆ ಸಮಯ ಕಳೆಯಲು ಇದೂ ಒಂದು ಮಾರ್ಗವಾಗಿತ್ತು.
 ಸೀತಾರಾಮಸಂದ್ರಕ್ಕೆ ಆಗಮಿಸಿದಾಗಲೆಲ್ಲ ಅಜ್ಜಿಯೊಡನೆ  ಕಡಲ ನೀರಿನಲ್ಲಿ
ಕುಣಿದಾಡುವುದು, ಕಪ್ಪೆಚಿಪ್ಪುಗಳನ್ನು ಸಂಗ್ರಹಿಸುವುದು, ಅಂತಾಕ್ಷರಿ ಹಾಡುವುದು, ನಕ್ಕು ನಲಿಯುವುದು, ಅಜ್ಜಿ  ತಾನೇ ಸ್ವತಃ ಮಾಡಿಕೊಂಡು ಬಂದು ತಿನ್ನಿಸಿದ ತಿಂಡಿಗಳನ್ನು ಸವಿಯುವುದು ಇವೆಲ್ಲ ಸಿಯಾಳಿಗೆ ಬಹು ಇಷ್ಟವಾದ ಚಟುವಟಿಕೆಗಳಾಗಿದ್ದವು.
"ಅಜ್ಜಿ ಯಾವಗ ಹುಷಾರಾಗ್ತಾಳೆ ಅಪ್ಪ? ಹಾಳಾದ ಜ್ವರ ಯಾಕಾದ್ರೂ ಬಂತೋ! ಅಜ್ಜಿ ಪಾಪ ಹೀಗೆ ಹಾಸಿಗೆ ಹಿಡಿಯೋ ಹಾಗಾಯ್ತಲ್ಲ!"
"ಬೇಗ ಹುಷಾರಾಗ್ತಾಳೆ ಪುಟ್ಟಿ. ಡಾಕ್ಟರ್ ಅಂಕಲ್ ಚೆನ್ನಾಗಿ ನೋಡ್ಕೊತಿದ್ದಾರೆ. ಸೀತಾರಾಮಸಂದ್ರಕ್ಕೆ ಮುಂದಿನ ಸರ್ತಿ  ನಾವು ಬರೋವಾಗ ಅಜ್ಜಿ ನಮ್ಮೊಂದಿಗೆ ಬಂದೇ  ಬರ್ತಾಳೆ ನೋಡ್ತಿರು!" ಸಿಯಾಳ ತಲೆಯನ್ನು ನೇವರಿಸಿ ಅಪ್ಪ ಆಶ್ವಾಸನೆ ನೀಡಿದರು.
ಇದ್ದಕ್ಕಿದಂತೆ ಗುಡಿಯ ಬೃಹದಾಕಾರದ ಮರದ ಬಾಗಿಲುಗಳಲ್ಲಿ ಕಟ್ಟಿದ್ದ ಕಂಚಿನ ಗಂಟೆಗಳ 'ಗಲಗಲ' ನಾದ ಕೇಳಿಬಂದಿತು.
"ಓ! ಗುಡಿಯ ಬಾಗಿಲು ತೆರೆದಾಯ್ತು. ಜನರ ಗಿಜಿ ಗಿಜಿ ಶುರುವಾಗೋದ್ರೊಳಗೆ ನಾವು ಹೋಗಿ ಬಂದ್ಬಿಡೋಣ ನಡಿ." ಅಪ್ಪ ಸಿಯಾಳನ್ನು ಕರೆದುಕೊಂಡು ದಡ ಸೇರಿದರು. ಅಪ್ಪ ಹರಡಿದ ಕರವಸ್ತ್ರದಲ್ಲಿ ತನ್ನ ಲಂಗದ ಮಡಿಕೆಯಲ್ಲಿದ್ದ ಕಪ್ಪೆಚಿಪ್ಪಿನ ಸಂಗ್ರಹವನ್ನೆಲ್ಲ ಒದರಿದಳು ಸೀಯಾ. ಅಪ್ಪ ಅವನ್ನು ಭದ್ರವಾಗಿ ಗಂಟು ಕಟ್ಟಿ ಅವಳ ಕೈಗೆ ಕೊಟ್ಟರು.
"ನೋಡು! ತಲೆಯೆಲ್ಲಾ ಮರಳು! ಲಂಗವೆಲ್ಲಾ ಒದ್ದೆ!" ಅಮ್ಮ ಅಂಗಲಾಚುತ್ತ ಅವಳ ಕೂದಲನ್ನು ಹಿಂದೆ ಸರಿಸಿ ಲಂಗವನ್ನೂ ಒದರಿ ನೀವಿದಳು.
ಸಿಯಾ  ತನ್ನ ಕಪ್ಪೆಚಿಪ್ಪಿನ ಗಂಟನ್ನು ಎದೆಗವಚಿಕೊಂಡು ಅಪ್ಪ ಅಮ್ಮನೊಂದಿಗೆ ಗುಡಿಯನ್ನು ಕುರಿತು ಬೇಗಬೇಗನೆ ನಡೆದಳು.
--------------------------------------------------------------------------------------------------------------------------
 ಪ್ರಶಾಂತವಾದ ಸೀತಾರಾಮಸಂದ್ರಲ್ಲಿ  ವಾರಾಂತ್ಯ ಬಂದರೆ ಪ್ರವಾಸಿಕರ ಜನಜಾತ್ರೆಯೇ  ಸೇರಿಬಿಡುತ್ತಿತ್ತು. ಅವರುಗಳಿಗಾಗಿಯೇ ಗುಡಿಗೆ ಹೋಗುವ ದಾರಿಯ ಎರಡು ಬದಿಯಲ್ಲೂ ಹಣ್ಣು, ಹೂವು, ಕಾಯಿಗಳ ಜೊತೆ ಬಳೆಗಳು, ಕಡಲೆಪುರಿ, ಅರಿಶಿನ ಕುಂಕುಮ ಮಾರುವ ಅಂಗಡಿಗಳೂ ಹುಟ್ಟಿಕೊಳ್ಳುತ್ತಿದ್ದವು. ಜೊತೆಗೆ  ಇನ್ನೇನೇನೋ ಕರಕುಶಲ ವಸ್ತುಗಳೂ ಮಾರಾಟಕ್ಕೆ ಬಂದವು.
"ಅಪ್ಪ! ಅಲ್ನೋಡು! ಅಳಗುಳಿಮಣೆ !" ಸಿಯಾ  ಅಪ್ಪನ ಕೈಹಿಡಿದೆಳೆದು ಉತ್ಸಾಹದಿಂದ  ಅಂಗಡಿಯಕಡೆ  ಬೆರಳುಮಾಡಿ ತೋರಿಸಿದಳು.
"ಮನೇಲೇ ಅಜ್ಜಿಯ ಹಿತ್ತಾಳೆ ಅಳಗುಳಿಮಣೆ ಇದೆ. ಈಚೆಗೆ ನೀನು ಅದನ್ನ ಮುಟ್ಟೋದೇ ಇಲ್ವಲ್ಲ!" ಅಮ್ಮ ಆಕ್ಷೇಪಿಸಿದಳು.
ಹುರುಪು ಉತ್ಸಾಹಗಳಿಂದ ಕೂಡಿದ್ದ ಅಜ್ಜಿಯ ಜೊತೆಗೆ  ಆಟವಾಡುವುದೂ ಚೆಲ್ಲಾಟವಾಡುವುದೂ ಸಿಯಾಳಿಗೆ ಬಹು ಪ್ರಿಯವಾದ ಚಟುವಟಿಕೆಗಳು. ಆ ಮೋಜಿನ ದಿನಗಳೆಲ್ಲ ಅಜ್ಜಿ ಖಾಯಿಲೆ ಬಿದ್ದ ನಂತರ ಮಾಯವಾಗಿದ್ದವು.
"ಬೆರಳುಗಳನ್ನ ದಿನಾಲು ನೀವಿದರೆ ಒಳ್ಳೇದು. ಫಿಸಿಯೋ ಥೆರಪಿಸ್ಟ್ ಒಬ್ಬರನ್ನು ಏರ್ಪಾಟು ಮಾಡ್ತೀನಿ. .. " ಮಾತನಾಡುತ್ತಿದ್ದ ಡಾಕ್ಟರ್ ಪಕ್ಕದ ಟೇಬಲ್ ಮೇಲಿದ್ದ ಅಳಗುಳಿಮಣೆಯನ್ನು ಕಂಡು ಹುಬ್ಬೇರಿಸಿದರು.
"ಅರೆ! ಅಳಗುಳಿಮಣೆ! ದುರ್ಬಲಗೊಂಡಿರೋ ಬೆರಳುಗಳಿಗೆ ಚಲನಾ ಶಕ್ತಿಯನ್ನು ಮತ್ತೆ ತುಂಬ ಬಲ್ಲದ್ದು ಅಲುಗುಳಿಮಣೆಯಾಟ! ಆಡಿಸಿ ಸಾರ್. "
ಡಾಕ್ಟರ ಸಲಹೆಯಂತೆ ಅಪ್ಪ ಅಜ್ಜಿಯ ಹಿತ್ತಾಳೆ ಅಳಗುಳಿಮಣೆಯನ್ನು ಅವಳ ಹಾಸಿಗೆಯ ಮೇಲೆ ತೆಗೆದಿಟ್ಟರು. ತಾಳೆ ಎಲೆ ಬುಟ್ಟಿಯಿಂದ ಕವಡೆಗಳನ್ನು ತೆಗೆದು ಅಳಗುಳಿಮಣೆಯ ಗುಳಿಗಳಲ್ಲಿ  ತುಂಬಿದರು.
"ಸಿಯಾ! ಪ್ರತಿದಿನವೂ  ಸ್ಕೂಲಿಂದ ಬಂದ್ಮೇಲೆ ಅಜ್ಜಿ ಜೊತೆ ಆಡು. ಅವಳ ಬೆರಳುಗಳಿಗೆ ಒಳ್ಳೆ ವ್ಯಾಯಾಮವಾಗತ್ತೆ. ನಿನ್ನೊಂದಿಗೆ ಆಡೋದಂದ್ರೆ ಅವಳಿಗೂ ಭಾರಿ ಖುಷಿ. ಬೇಗ
ಹುಷಾರಾಗ್ತಾಳೆ." ಎಂದಿದ್ದರು ಅಪ್ಪ.
ಅಜ್ಜಿಯನ್ನು ಎಷ್ಟೇ ಪ್ರೋತ್ಸಾಹಿಸಿದ್ದರೂ ಮುದುಡಿಕೊಂಡಿದ್ದ ತನ್ನಬೆರಳುಗಳನ್ನು ಬಿಡಿಸಿ  ಕವಡೆಗಳನ್ನು ಗುಳಿಗೆ ಹಾಕುವುದು ಅವಳಿಗೆ ಒಂದು ಸಾಹಸವೇ ಆಗಿತ್ತು. ಅಜ್ಜಿಯ ಬಲು ನಿಧಾನವಾದ ಆಟವನ್ನು ಸಹಿಸೊ ತಾಳ್ಮೆ ಇಲ್ಲದೆ, ಕ್ರಮೇಣ ಅವಳೊಂದಿಗೆ ಅಳಗುಳಿಮಣೆಯಾಟ ಆಡುವುದನ್ನೇ ಬಿಟ್ಟಿದ್ದಳು ಸಿಯಾ. ಹಾಗಂತ ಅಜ್ಜಿಯ ಮೇಲೆ ಅವಳಿಗಿದ್ದ ಪ್ರೀತಿ ಏನೂ ಕಡಿಮೆಯಾಗಿಲ್ಲ.
ಅಜ್ಜಿ ಸಂತೋಷವಾಗಿರಬೇಕು, ಆರೋಗ್ಯವಾಗಿರಬೇಕು, ನಗುನಗುತ್ತಿರಬೇಕು! ಅಂಗಡಿಯಲ್ಲಿ ಕಂಡ ಅಳಗುಳಿಮಣೆಯನ್ನು ಅಜ್ಜಿಗೆ ಕೊಂಡು ಕೊಟ್ಟರೆ ಖಂಡಿತ  ಸಂತೋಷ ಪಡುತ್ತಾಳೆ.
"ಎಷ್ಟು ಸುಂದರವಾದ ಕೆತ್ತನೆಗಳಿವೆ ನೋಡಮ್ಮ ಈ ಮರದ ಅಳಗುಳಿಮಣೆಯಲ್ಲಿ. ನಾನು ಅಜ್ಜಿಗೆ ಇದನ್ನ ಗಿಫ್ಟ್ ಮಾಡ್ಬೇಕು. ಅಜ್ಜಿಯ ಮೆಚ್ಚಿನ ಸೀತಾರಾಮಸಂದ್ರದಿಂದ ಅವಳ ಮೆಚ್ಚಿನ ಅಳಗುಳಿಮಣೆ ಕೊಂಡು ಕೊಟ್ರೆ ಅವಳಿಗೆ ಅದೆಷ್ಟು  ಖುಷಿಯಾಗತ್ತೆ!" ಅಜ್ಜಿಯ ಸಂತೋಷವಾದ ಮುಖವನ್ನು ಕಲ್ಪಿಸಿಕೊಂಡಾಗ ಸಿಯಾಳ ಮುಖವೂ ಪ್ರಕಾಶವಾಯಿತು.
"ಖಂಡಿತ ಕೊಂಡ್ಕೊಳ್ಳೋಣ! ಮೊದ್ಲು ಗುಡಿಯೊಳಗೆ ಹೋಗಿ ಪೂಜೆ ಮುಗಿಸ್ಕೊಳ್ಳೋಣ. ಟೂರಿಸ್ಟ್ ಬಸ್ ಬಂದ್ಬಿಟ್ರೆ ರಷ್ ಆಗ್ಬಿಡತ್ತೆ." 
ಅಪ್ಪ ಸಿಯಾಳ ಕೈ ಹಿಡಿದೆಳೆದುಕೊಂಡು ಸರಸರನೆ ಗುಡಿಯ ಮೆಟ್ಟಲುಗಳನ್ನು ಹತ್ತಿ ಒಳಕ್ಕೆ  ನಡೆದರು. ಸಭಾಮಂಟಪದಲ್ಲಿದ್ದ  ದೊಡ್ಡ ಕಂಬಗಳಲ್ಲಿ ಕೆತ್ತಲ್ಪಟ್ಟಿದ್ದ  ರಾಮಾಯಣದ ಪಾತ್ರಗಳ ಶಿಲ್ಪಗಳನ್ನು ಬೆರಗಿನಿಂದ  ಕಣ್ಣರಳಿಸಿ ನೋಡುತ್ತ ನಡೆದಳು ಸಿಯಾ.
ಇದ್ದಕ್ಕಿದ್ದಹಾಗೆಯೇ ಗುಡಿಯಾಚೆ  ಜೋರಾದ ಗದ್ದಲ ಎದ್ದಿದು. ಓ! ಬಸ್ಸುಗಳು ಬಂದಿರಬೇಕು! ಚೇತರಿಸಿಕೊಳ್ಳುವುದರಲ್ಲಿ  ಗುಡಿಯೊಳಕ್ಕೆ ನುಗ್ಗಿ ಬಂದ ಜನ ಸಮುದ್ರವು ಅಲೆಯಾಲೆಯಾಗಿ
ಮೇಲೆದ್ದು ಅಪ್ಪಳಿಸಿ  ಅಪ್ಪ ಅಮ್ಮನೊಂದಿಗೆ ಸಿಯಾಳನ್ನೂ  ಕೊಚ್ಚಿಕೊಂಡು ಗರ್ಭಗುಡುಯತ್ತ ಸಾಗಿತು. ಈ ನೂಕುನುಗ್ಗಾಟದಲ್ಲಿ ಸಿಯಾಳ ಕೈಯಲ್ಲಿದ್ದ ಚಿಪ್ಪಿನ ಗಂಟು ಕೆಳಕ್ಕೆ ಜಾರಿ ಬಿದ್ದಿದ್ತು. ಜನರ ಕಾಲುಗಳಿಗೆ ಸಿಕ್ಕಿ ಅದು ದೂರ ದೂರ ಸರಿದು ಹೋಗತೊಡಗಿತು.
"ಅಪ್ಪಾ! ನನ್ನ ಗಂಟು! "  ಎಂದು ಕೂಗುತ್ತ ಅಪ್ಪನ ಭದ್ರವಾದ ಹಿಡಿತದಲ್ಲಿದ್ದ ತನ್ನ ಕೈಯನ್ನು ಬಿಡಿಸಿಕೊಂಡು ಗಂಟನ್ನು ಕುರಿತು ಧಾವಿಸಲೆತ್ನಿಸಿದಳು  ಸಿಯಾ. ಜನಸಂದಣಿಯ ನಡುವೆ ಹೇಗೋ ನುಸುಳಿಕೊಂಡು ಹೋಗಿ ತನ್ನ ಗಂಟನ್ನು ಅವಳು ಕೈಗೆತ್ತಿಕೊಂಡಾಗ ಅಪ್ಪ ಅಮ್ಮ ಕಾಣೆಯಾಗಿದ್ದರು!
"ಸಿಯಾ! ಎಲ್ಲಿದ್ದೀ? ಸಿಯಾ! ಸಿಯಾ!" ಕಳವಳಗೊಂಡು ಅಪ್ಪ ಕೂಗಿದ್ದು ಕೇಳಿಸಿತು.
"ಅಪ್ಪಾ! ಅಪ್ಪಾ! ಇಲ್ಲಿದ್ದೀನಿ!" ಆ  ಗಲಭೆಯಲ್ಲಿ ಅವಳ ದನಿ ಅಪ್ಪನಿಗೆ ಕೇಳಿಸಿತೋ ಇಲ್ಲವೋ? 
ತಾನು ಕಳೆದುಹೋಗಿದ್ದು ತಿಳಿದಾಗ ಸಿಯಾಳಿಗೆ ತುಂಬ ಭಯವಾಯಿತು.

-----------------------------------------------------------------------------------------------------------------------

ನಿಮಿಷಗಳ ಹಿಂದೆತಾನೇ ಸದ್ದು ಗದ್ದಲದಿಂದ ನೆರೆದಿದ್ದ  ಸಭಾಮಂಟಪ ಇದ್ದಕ್ಕಿದ್ದಂತೆ ನಿರ್ಜನವಾಗಿಬಿಟ್ಟಿತ್ತು. ಜನರೆಲ್ಲಾ ಒಟ್ಟಿಗೆ ಗುಡಿಯೊಳಕ್ಕೆ ನುಗ್ಗಿ ಅಂತರ್ದಾನವಾಗಿದ್ದರು. ಅಷ್ಟು ದೊಡ್ಡ ಮಂಟಪದಲ್ಲಿ ಒಂಟಿಯಾಗಿ ನಿಂತ ಸಿಯಾಳಿಗೆ ಗಾಬರಿಯಾಯಿತು. ಅಪ್ಪನ ಕೈ ಬಿಟ್ಟೆನಲ್ಲಾ ಎಂದು ಆತಂಕವುಂಟಾಯಿತು. ಭಯದಿಂದ ಕಣ್ಣುಗಳು ತುಂಬಿಬಂದವು. ಅಪ್ಪ ಅಮ್ಮ ತನ್ನನ್ನು ಕಂಡು ಹಿಡಿಯುವುರೆ?  ಬಿಕ್ಕಿ ಬಿಕ್ಕಿ ಅತ್ತು ಸುಸ್ತಾಗಿ ಸೊರಗಿ ಮಂಟಪದ ಒಂದು ಕಂಬಕ್ಕೆ ಒರಗಿ ಕುಳಿತುಕೊಂಡಳು ಸಿಯಾ.  ಅತ್ತು ಮುಗಿಸಿ ಕಣ್ಣೊರಸಿಕೊಂಡ ಮೇಲೆ ಸ್ವಲ್ಪ ನೆಮ್ಮದಿ ಎನ್ನಿಸಿತು. ಬುದ್ಧಿಯೂ ಚುರುಕಾಯಿತು. ಅಪ್ಪ ಅಮ್ಮನನ್ನು ಒಳಕ್ಕೆ ನೂಕಿಕೊಂಡು ಹೋದ ಜನ ಸಮುದ್ರ ದೇವರ ದರ್ಶನದನಂತರ ಅವರನ್ನು ಮತ್ತೆ ಹೊರಗಡೆ  ದಬ್ಬಿಕೊಂಡು ಬರುವುದು ಗ್ಯಾರಂಟಿ. ಹೊರಬಂದಕೂಡಲೇ ತನ್ನನ್ನು ಹುಡುಕಿಕೊಂಡು ಇಲ್ಲಿಗೆ ಬಂದೇಬರುತ್ತಾರೆ. ತಾನು ಇಲ್ಲೇ ಇರಬೇಕು. ತಾನೇನೂ ಹೆದರುಪುಕ್ಲಿ ಅಲ್ಲ! ಇಲ್ಲೇ  ಕಾದು ಕುಳಿತಿರಬೇಕು! ಈ ತೀರ್ಮಾನ ಮಾಡಿದ ಕೂಡಲೇ ಸಿಯಾಳ ಭಯವೆಲ್ಲ ಮಾಯವಾಯಿತು. 
ಸಭಾಮಂಟಪದ ಶಿಲೆಗಳನ್ನೆಲ್ಲ ಎವೆಯಿಕ್ಕದೆ ನೋದುತ್ತ ಕುಳಿತಿದ್ದಳು ಸಿಯಾ.  ನೋಡನೋಡುತ್ತ ಅವಳಿಗೆ ಬಹಳ ಪರಿಚಯವಾದ ವಸ್ತು ಒಂದು ಅವಳ ಕಣ್ಣುಗಳಿಗೆ  ಕಾಣಿಸಿಕೊಂಡಿತು. ಉತ್ಸಾಹದಿಂದ ಎದ್ದು ಅದರ ಬಳಿ ಓಡಿದಳು ಸಿಯಾ. ಕಲ್ಲಿನ ನೆಲಹಾಸಿನ ಮೇಲೆ ಮೀನಿನಾಕಾರದ ಒಂದು ದೊಡ್ಡ ಉಬ್ಬು ಶಿಲ್ಪ ಕಂಡುಬಂದಿತು. ಅದರ ಹೊಟ್ಟೆಯಮೇಲೆ ಎರಡು ಸಾಲು ಗುಳಿಗಳಿದ್ದವು! ಒಂದೊಂದು ಸಾಲಲ್ಲೂ ಐದೈದು  ಗುಳಿಗಳು! ಓ ಅಳಗುಳಿಮಣೆ! ಕಲ್ಲಲ್ಲಿ ಕೆತ್ತಲ್ಪಟ್ಟ ಅಳಗುಳಿಮಣೆ! ಸಿಯಾ ಉತ್ಸಾಹದಿಂದ ಅದರ ಬಳಿ ಕುಳಿತಳು. ತನ್ನ ಗಂಟನ್ನು ಬಿಚ್ಚಿ ತಾನು ಸಂಗ್ರಹಿಸಿದ್ದ ಚಿಪ್ಪುಗಳಿಂದ ಆಟಕ್ಕೆ ಬೇಕಾದ ಚಿಪ್ಪುಗಳನ್ನು ಎಣಿಸಿ ತೆಗೆದು ಗುಳಿಗಳಿಗೆ ಹಾಕಿದಳು. ಅಪ್ಪ ಅಮ್ಮ ಬರುವವರೆಗೆ ಸಮಯ ಕಳೆಯಲು ಅವಳು ಸೀತೆಮಣೆಯಾಟ ಆಡಬಹುದು. ರಾಮನ ಆಗಮನವನ್ನು ಎದುರುನೋಡುತ್ತ ಅಶೋಕವನದಲ್ಲಿ ಒಬ್ಬಳೇ ಕುಳಿತಿದ್ದ ಸೀತೆ ಈ ಆಟವನ್ನು ಆಡುತ್ತಿದ್ದಳಂತೆ. ಅದಕ್ಕೆ ಇದನ್ನು ಸೀತೆಮಣೆ, ಸೀತೆಯಾಟ ಅನ್ನುತ್ತಾರಂತೆ. ಇದೆಲ್ಲ ಅಜ್ಜಿ ಹೇಳಿದ್ದ ಕಥೆಗಳು. 


ಸಿಯಾ ಆಡುತ್ತ ಆಡುತ್ತ ಸೀತೆಯಾಟದಲ್ಲೇ ಮಗ್ನಳಾದಳು. ಒಂದು ಸುತ್ತು ಮುಗಿದು ಎರಡನೇಯ  ಸುತ್ತೂ ಮುಗಿಯುತ್ತಿತ್ತು. ಸಿಯಾಳ ಏಕಾಗ್ರತೆ ಕದಲಲಿಲ್ಲ. ಆಟ ಮುಂದುವರೆಯುತ್ತಲೇ ಇತ್ತು. ಅವಳು ಐದನೇ ಸುತ್ತನ್ನು ಆಡತೊಡಗಿದಾಗ  ಅಮ್ಮನ ಕಾತರ ತುಂಬಿದ ದನಿ ಕೇಳಿಸಿ ತಲೆ ಎತ್ತಿದಳು ಸಿಯಾ. 
"ಸಿಯಾ! ಸಧ್ಯ ಇಲ್ಲೇ ಇದ್ದೀಯಲ್ಲ! ನಮ್ಮನ್ನ  ಹುಡುಕ್ಕೊಂಡು ನೀನು ಎಲ್ಲಿಗಾದ್ರೂ ಹೋಗ್ಬಿಟ್ಟಿದ್ರೆ ಅಂತ ತುಂಬ ಗಾಬರಿಯಾಯ್ತು!" ಅಮ್ಮ ಕಣ್ಣೀರು ಹಾಕುತ್ತ ಓಡಿ ಬಂದು ಅವಳನ್ನು ತಬ್ಬಿಕೊಂಡಳು. 
"ತುಂಬಾ ಭಯವಾಯಿತೇ ಪುಟ್ಟಿ?" ಅಪ್ಪ ಅವಳನ್ನು ಎಳೆದು ಅಪ್ಪಿಕೊಂಡರು. 
"ಸ್ವಲ್ಪ ಭಯವಾಯ್ತು! ಆದ್ರೆ ಇಲ್ನೋಡು! ನೆಲದ ಮೇಲೆ ಅಳಗುಳಿಮಣೆ! ರಾಮಾಯಣದ ಸೀತೆಯ ಹಾಗೆ ನಾನೂ ಒಬ್ಬಳೇ ಕೂತು ಸೀತೆಮಣೆ ಆಡ್ತಿದ್ದೆ! ಅವಳ ತರಾನೇ ನಾನೂ ನಿಮಗಾಗಿ ಕಾಯ್ತಿದ್ದೆ!"
"ಮೈ ಡಿಯರ್ ಬ್ರೇವ್ ಗರ್ಲ್!" ಎನ್ನುತ್ತಾ ಅಪ್ಪ ಅವಳನ್ನು ಎತ್ತಿಕೊಂಡು ಮುದ್ದಿಸಿದರು. 

--------------------------------------------------------------------------------------------------------------------------

ಸೀತಾರಾಮಸಂದ್ರದಿಂದ ಮನೆಗೆ ಹಿಂದಿರುಗಿದಾಗ ಕತ್ತಲಾಗಿತ್ತು. ಗೌರಮ್ಮ ಮನೆಯವರಿಗೆಲ್ಲ ಅಡುಗೆ ಮಾಡುತ್ತಿದ್ದರು. ಅಜ್ಜಿಯ ಬಗ್ಗೆ ಅಪ್ಪ ವಿಚಾರಿಸಿದಾಗ "ದೊಡ್ಡಮ್ಮಅವ್ರ ಊಟ ಆಯ್ತು. ಮಂಚದಮೇಲೆ ಕೂರಿಸಿದ್ದೀನಿ."ಎಂದರು. 
ಸಿಯಾ ನೇರವಾಗಿ ಅಜ್ಜಿಯ ಕೋಣೆಗೆ ಓಡಿ ಹೋದಳು. ಅಜ್ಜಿ ಮಂಚದಮೇಲೆ ದಿಂಬಿಗೆ ಒರಗಿ  ಕುಳಿತುಕೊಂಡಿದ್ದಳು. ಮಂಚಕ್ಕೆ ಅಡ್ಡವಾಗಿರಿಸಿದ್ದ ಊಟದ ಹಲಗೆಯಮೇಲೆ ಅವಳ ಹಿತ್ತಾಳೆ ಅಳಗುಳಿಮಣೆ ಇತ್ತು. ಬಹಳ ನಿಧಾನದಿಂದ ಒಂದು ಕವಡೆಯನ್ನು ಅಳಗುಳಿಮಣೆಯ ಒಂದು ಗುಳಿಗೆ ಹಾಕಲು ಯತ್ನಿಸುತ್ತಿದ್ದಳು. ಒಬ್ಬಂಟಿಯಾಗಿ ಆಡುವ ಸೀತೆಯಾಟವನ್ನು ಆಡಲು ಪ್ರಯತ್ನಿಸುತ್ತಿದ್ದಳು ಅಜ್ಜಿ. 
ಸಿಯಾಳಿಗೆ ತಾನು ಒಬ್ಬಳೇ  ಸಭಾಮಂಟಪದಲ್ಲಿ ಕುಳಿತಿದ್ದ ನೆನಪಾಯಿತು. ಆತಂಕ, ಗಾಬರಿ, ಒಂಟಿತನ ಇವೆಲ್ಲ ಕಾಡುತ್ತಿರಲು  ಕಣ್ಣೀರಿಡುತ್ತ ತಾನು ಅನುಭವಿಸಿದ ಕಷ್ಟವೆಲ್ಲ
ನೆನಪಾಯಿತು.  
ಮರುಕ್ಷಣ ಮನಸಲ್ಲಿ ಪ್ರೀತಿ ಅನುಕಂಪಗಳು ಉಕ್ಕಿಬರಲು, ಸಿಯಾ ಅಜ್ಜಿಯ ಬಳಿ ಧಾವಿಸಿದಳು. 
"ಅಜ್ಜಿ! ನಿನಗೆ ಏನು ತಂದಿದ್ದೀನಿ ನೋಡು!  ಸುಂದರವಾದ ಕೆತ್ತನೆಗಳಿರೋ ಅಳಗುಳಿಮಣೆ! ಸೀತೆಯಾಟ ಆಡಿದ್ದು ಸಾಕು. ಈಗ ನನಗೂ ನಿನಗೂ ಪಂದ್ಯ! ಆಡಕ್ಕೆ ರೆಡಿನಾ?"
ಸಿಯಾ ತಾನು ತಂದಿದ್ದ ಹೊಸ ಅಳಗುಳಿಮಣೆಯನ್ನು ಅಜ್ಜಿಯ ಮುಂದೆ ತೆರೆದಿಟ್ಟಳು.
ಅಜ್ಜಿಯ ಮುಖ ಸೂರ್ಯಕಾಂತಿಯಂತೆ  ಅರಳಿತು. 


" ಥ್ಯಾಂಕ್ಯೂ .... ಮೈ....  ಸ್ವೀಟ್...  ಸಿಯಾ !" ಎಂದು ತೊದಲುನುಡಿಯಲ್ಲಿ ಹೇಳಿ, ಮೆಲ್ಲನೆ ಬಾಗಿ  ಸಿಯಾಳ ಹಣೆಯಮೇಲೆ ಮುತ್ತಿಟ್ಟಳು ಅವಳ ಪ್ರೀತಿಯ ಅಜ್ಜಿ. 
------------------------------------------------------------------------------------------------------------------------- 

SEETHEMANE


The waves roared, rolled and crashed ferociously on the sandy shores of the beach. Sia was thrilled! She stood still with excitement, her long skirt doubled up over her knees and its gathered edges clasped in one hand.   The waves gently receded scraping away a clump of sand from under her feet.  She giggled and squealed when her ticklish feet gradually sank into the sand. She was happy that her other hand was secure in the firm grip of her father. There was still time for another wave to strike! Sia wriggled her hand out of her father's grip. She quickly bent down, picked up more shells and dropped them into the collection already tucked away in the folds of her doubled up skirt.
"Sia!  You are drenched! Your skirt is wet. Come out of the waves NOW and let it dry! I have not brought any change for you!" Mother hollered at her from the shore.
"I wish grandma were here. She always packed two extra sets of skirts for me whenever we visited the beach." grumbled Sia.
"I miss her too Sia. But for her illness she would have been the first one to hop into the car with a basketful of yummy picnic food. She had never missed a trip to Sitaramasandra even once in all her life. She loves this place so much!" Father heaved a sigh as he spoke.
They all loved their native village Sitaramasandra ! The remote village was sandwiched between an unpolluted stretch of sandy beach and a ten century old massive stone temple where Sita and Lord Rama were enshrined.
Grandma  had narrated many stories about the place. She would animatedly describe how Sita and Rama played the game of Alagulimane at this very place during their exile, of course whenever Rama was not fighting a demon! She told her about the king who built the temple ten centuries ago to commemorate the legend ! She had also taught Sia to play the game.


" Sia ! This is no ordinary game! You need mathematical skills to win the game. It improves your focus and attention span. Play this game often and see how you score in your subjects at school! "
  Alagulimane was a 'sissy’ and dull game according to Sia. She knew that she could play better games on her computer and play station. But she loved grandma so much that she hated even the idea of snubbing her.  Though she just smiled and brushed aside grandma's stories, she always played the match when grandma challenged her. For her  this was another  way to enjoy grandma’s company. Wading in the waves, building sand castles, picking up shells, giggling and singing were the other activities they enjoyed together during their visits to  Sitaramasandra. Sia wished that those happy days would return soon.
"When will she be alright Papa?"  How she hated that dreadful illness which had left her grandma partially crippled and bed ridden!
 "Very soon dear. Doctor Uncle is taking good care of her.  She is going to be fine! She will be with us during our next visit to Sitaramasandra. " Father  assured her as he stroked her head lovingly.
" She better be !" said Sia dreamily .
Suddenly they heard the clanging and the jingling of the bells that were studded on the huge wooden doors of the temple.
" Oh ! They have opened the temple door! Let us move fast before it becomes too crowded !" Father and daughter hurried to the shore. Sia lowered the edge of her skirt and the shells fell on to the handkerchief father had spread out for the purpose. He bundled up the shells and held it out to Sia.
" Look at you ! All disheveled and sandy !" Mother shook away the sand from Sia's skirt and patted back her hair with her fingers.
All three of them walked towards the ancient Sitarama temple while Sia held the bundle of shells close to her bosom.
----------------------------------------------------------------------------------------------------------
Temporary stalls had cropped up on either sides of the lane leading to the temple. Flowers, fruits, coconuts, bangles, vermilion and many more articles were stacked up in the stalls. It was a long weekend! The locals knew that the tourist buses - which were otherwise a very rare sight at the village - would definitely stopover at their legendary temple for at least a short while.
"Papa ! Look ! Alagulimane boards !" Cried out an excited Sia.
"We already have grandma’s brass Alagulimane at home! And I don’t even see you playing the game these days!" Mother remarked in a complaining tone.
Sia had enjoyed playing the game with grandma when she was hale and healthy, giggly and gregarious, until the illness took the toll.
"Give her a good massage. Physio therapy will help." Doctor Uncle was scribbling the names of a few exercises when his eyes accidentally fell on the Alagulimane board on the table. "Oh! This will help revive her fine motor skills! "
Father had placed the Brass Alagulimane board on grandma’s bed. He removed the cowries from the palm leaf pouch and spoke to Sia as he filled up the pits in the board.
"Sia ! Please play with grandma daily. Her fingers need the exercise. She loves your company, and it will help her  recover fast."
Sia had tried her best to make grandma play. But grandma’s fingers were unsteady and  curled up. They were unable to stretch and drop the cowries into the pits of the board. It seemed like an eon before one cowrie could slip out of grandma’s fingers. The game was too slow for an active and vivacious girl like Sia.  Sia had gradually stopped playing Alagulimane with grandma. But that did not mean she did not love her.
Sia wanted grandma to be happy, healthy and cheerful. She was sure that the beautiful Alagulimane she had spotted  would make her happy.
"This wooden board has beautiful carvings mother! I want to gift it to grandma! Her favourite game board from her favourite Sitaramasandra! It will make her happy !" Sia bubbled with excitement when she imagined grandma’s happy face.
"Alright! We shall buy it! But first we shall go into the temple and finish our prayers, before the tourist bus arrives and the sanctum gets crowded ."  Father firmly held Sia’s hand and gently dragged her away into the temple.
It was a massive temple indeed! Sia looked at the huge pillars that stood in the courtyard with wide eyes! Beautiful sculptures of the characters from the Ramayana adorned each and every pillar.
Suddenly there was a commotion outside the temple. The buses had arrived! Sia was bewildered when the crowd surged in like the enormous wave she had seen at the beach. It rolled, roared and lashed in, pushing her and her parents forward. Before they could steady themselves the restless crowd had carried them towards a bottle neck at the door of the sanctum.  There was no way they could come out.
In all the confusion Sia’s bundle of shells fell to the ground and was tossed around by the milling crowd.  Sia  tried to recover her possession and at the same time lost her father’s secure grip.
"Sia! Where are you ? Sia ....! " She could hear her father crying out to her.
Sia could not spot her parents in the jostling crowd."Papa!Papa!" Her shouts never seemed to reach him.
Sia knew that she was lost!
-------------------------------------------------------------------------------------------------------------------
The huge courtyard which was so full of people a moment ago looked frighteningly vacant now! The entire crowd had disappeared into the sanctum like a magic.
Sia was scared! She was bewildered! She felt lonely and teary! Will Papa and Mama be able to find her at all? She suddenly felt weak and tired. She slowly walked towards a pillar and slumped beside it, still holding her lost and found bundle of shells close to her chest. She sobbed and sobbed until the tears had finally dried up. Now she felt a little better and could think clearly. Papa and Mama will surely be pushed out as they had been pushed in by the crowd. Once they were out they would definitely find her in this courtyard. She would stay here! She was a brave girl and she would wait for them right here!
  Sia sat gazing at all the sculptures in the huge courtyard when a familiar object caught her eye! She eagerly got up and ran towards it. It was a huge fish embossed on the rough granite floor ! Two rows of five cup like pits were carved out on its belly! Yes! It was an Alagulimane! An artistically carved out game board on the temple floor!  
Sia sat beside the stone Alagulimane, her heart thumping with excitement. She opened her bundle and filled up the pits with the required number of shells from her collection. Yes ! She would play Seethemane  which was a different version of Alagulimane game taught by her grandma ! The  game Sita had played in solitude  at Ashokavana while she was waiting  to be rescued by Lord Rama ! That was another story grandma had narrated!


Sia was totally involved in the game. She finished playing one round of the game which ended at hundred and five laps. She was in her second round when people started pouring out of the sanctum.  Sia was so focused in the game that she never noticed them.  There were only five more laps left to finish the second round of the game when she heard Mother’s voice.
"Sia !" Mother was running towards her.
"Thank God! You are here! I was afraid that you would stray away somewhere searching for us!" Mother hugged her and wept.
"Weren’t you afraid to be alone my dear? " It was father’s turn to hug her.
"I was afraid for a while ! But look what I found! I was playing Seethemane just like Sita of Ramayana ! And like her I was also  waiting for you! "
"My little brave girl!"  Father smiled and hugged her once more .
---------------------------------------------------------------------
It was dark when they reached home after the hectic trip. Gowri the care taker was busy preparing dinner for the family. Sia went straight to grandma’s room.
Grandma was sitting on the bed propped up by two pillows. Her dining board rested across her bed. The brass Alagulimane was placed on the board. Grandma was very slowly trying to drop a cowrie into one of the pits. She was playing Seethemane, a solitary version of the game all by herself.
Suddenly Sia remembered how she had felt at the temple. Scared, bewildered, lonely and teary! Love and  compassion gushed through her heart at once  as she ran towards her dear grandma.
"Grandma ! Look what I got for you ! A carved wooden Alagulimane! Now stop playing Seethemane!  Let us play a match together."
Grandma’s face lit up as Sia placed the new Alagulimane board in front of her .


"Thank you my sweet little girl!" mumbled grandma softly , and planted a kiss on her forehead.
-------------------------------------------------------------

Tuesday, February 6, 2018

ವಪ್ಪಟ್ಟೂ ದ್ವೀಪದಲ್ಲಿ ಕುಂಬಳಕಾಯಿ ಹಬ್ಬ - Pumpkin Festival at Wappattoo Island

ವಪ್ಪಟ್ಟೂ ದ್ವೀಪದಲ್ಲಿ ಕುಂಬಳಕಾಯಿ ಹಬ್ಬ 
ಕಾರ್ಮೋಡ ಕವಿದಿದ್ದ ಕತ್ತಲಾದ ವಾತಾವರಣ -
ಹಸಿರು ವೃಕ್ಷಗಳು ದಟ್ಟೈಸಿದ್ದ  ಕಾಡು ಪ್ರದೇಶ -
ದಾರಿ ಕಾಣದಷ್ಟು ಚಟ ಪಟ ಬೀಳುತ್ತಿದ್ದ ಮಳೆ ಹನಿಗಳು -
ಹೆಡ್ ಲೈಟಿನಲ್ಲಿ ಕಂಡೂ ಕಾಣದಂತೆ ಗೋಚರವಾದ ಕಡಿದಾದ ಹೇರ ಪಿನ್ ತಿರುವುಗಳು - 
ಪೋರ್ಟ್ಲ್ಯಾನ್ಡ್ ವೆಸ್ಟ್ ಹಿಲ್ಸ್ (Portland West Hills) ಎಂಬ ಪರ್ವತ ಶ್ರೇಣಿಯಿಂದ ಕೆಳಗಿಳಿಯುವುದೇ ಒಂದು ಸಾಹಸದ  ಕಾರ್ಯ! ಪರ್ವತದ ಬುಡದಲ್ಲಿಯ  ಹೆದ್ದಾರಿಯ ಜೊತೆ ಜೊತೆಯಾಗಿ  ಹರಿದು ಬರುತ್ತದೆ  ಮಲ್ಟ್ನೋಮ   ಚ್ಯಾನಲ್ (Multnomah Channel) ಎಂಬ ನಾಲೆ. ಕೆಲವೇ ನಿಮಿಷಗಳಲ್ಲಿ ಸಾವಿ ಐಲಂಡ್ ಸೇತುವೆಯನ್ನು (Sauvie Island Bridge) ಹಾದು ನಾವು ತಲಪುವುದು ಪ್ರಾಚೀನದಲ್ಲಿ ವಪ್ಪಟ್ಟೂ ಐಲ್ಯಾಂಡ್ ಎನ್ನಿಸಿಕೊಂಡಿದ್ದ ಇಂದಿನ  ಸಾವಿ ಐಲಂಡನ್ನ!
ದಿಗಂತದ ವರೆಗೆ  ಹರಡಿಕೊಂಡಿರುವ ಅಖಂಡವಾದ ಹಚ್ಛೆ ಹಸಿರಾದ  ಪ್ರದೇಶ ನಮಗೆ ಸುಸ್ವಾಗತ ನೀಡುತ್ತದೆ! ವಲಸೆ ಹೋಗುವ ಪಕ್ಷಿ ಪ್ರಾಣಿಗಳಿಗೆ ತಾತ್ಕಾಲಿಕ ತಂಗುದಾಣವಾಗಿರುವ ಸಂರಕ್ಷಿಸಲ್ಪಟ್ಟ ಈ ಆರ್ದ್ರ  ಭೂಮಿ ಅನೇಕ ಸಸ್ಯಾಗಾರಗಳಿಗೆ  ನೆಲೆಬೀಡಾಗಿದೆ. ಸ್ಟ್ರಾ ಬೆರಿ, ರಾಸ್ಪ್ ಬೆರಿ, ಬ್ಲೂ ಬೆರಿ, ಬ್ಲ್ಯಾಕ್ ಬೆರಿ, ಪೀಚ್, ಪೇರ್  ಮುಂತಾದ ಅನೇಕ ಹಣ್ಣುಗಳನ್ನೂ ಜೋಳ ಮತ್ತು ಇತರ ತರಕಾರಿಗಳನ್ನೂ ಉತ್ಪನ್ನ ಮಾಡುವ ಫಲವತ್ತಾದ ಮಣ್ಣನ್ನು ಹೊಂದಿದೆ ಸಾವಿ ಐಲಂಡ್. ಈ ದ್ವೀಪವು  ಪೋರ್ಟ್ಲ್ಯಾನ್ಡ್ನ ವಾಯವ್ಯಕ್ಕೆ ಹತ್ತು ಮೈಲಿ ದೂರದಲ್ಲಿ ಕೊಲಂಬಿಯ ನದಿ ಮತ್ತು  ವಿಲ್ಲಾಮೆಟ್ ನದಿಗಳು ಸಂಗಮವಾಗುವ ಪ್ರದೇಶದಲ್ಲಿದೆ.
ಸೆಪ್ಟಮ್ಬರ್ - ಅಕ್ಟೋಬರ್ ತಿಂಗಳು ಎಂದರೆ  ಪೋರ್ಟ್ಲ್ಯಾನ್ಡ್ ವಾಸಿಗಳಿಗೆ ಎಲ್ಲಿಲ್ಲದ  ಸಂಭ್ರಮ! ಏಕೆಂದರೆ ಅದು ಕುಂಬಳಕಾಯಿಯ ಸುಗ್ಗಿ ಕಾಲ! ಸುತ್ತಮುತ್ತಲಿನ ಕುಂಬಳಕಾಯಿ ತೋಟಗಳು  ಕುಂಬಳಕಾಯಿ ಉತ್ಸವಕ್ಕೆ ಸಡಗರದಿಂದ ಅಣಿಯಾಗುವ ಕಾಲ. ವಪ್ಪಟ್ಟೂ  ದ್ವೀಪದಲ್ಲಿಯ 'ಬೆಲ್ಲಾ ಆರ್ಗಾನಿಕ್ಸ್' ಏರ್ಪಡಿಸಿದ್ದ ಕುಂಬಳಕಾಯಿ ಹಬ್ಬಕ್ಕೆ  ಪರಿವಾರ ಸಮೇತರಾಗಿ ನಾವು ಹಾಜರಾದಾಗ ಆವರೆಗೂ ಕಾರ್ಮುಗಿಲಲ್ಲಿ ಬಚ್ಚಿಟ್ಟುಕೊಂಡಿದ್ದ ಸೂರ್ಯ ಕಣ್ಣು ಕುಕ್ಕುವಂತಹ  ಬೆಳಕನ್ನು ಚೆಲ್ಲುತ್ತ  ಹೊರಗೆ ಇಣುಕಿದ! ಒಂದು ಕ್ಷಣ ಮಳೆಯಾದರೆ ಮರು ಕ್ಷಣವೇ ಎಲ್ಲಿಂದಲೋ ತೂರಿ ಬಂದು  ಜಾಜ್ವಲ್ಯವಾದ ಪ್ರಕಾಶವನ್ನು ಬೀರುವ ಪೋರ್ಟ್ಲ್ಯಾನ್ಡ್  ಸೂರ್ಯನ  ಕಣ್ಣಾಮುಚ್ಚಿ  ಆಟಕ್ಕೆ ನಾವು ಈಗಾಗಲೇ ಹೊಂದಿಕೊಂಡಿದ್ದೆವು!  ಬಿಸಿಲಾದರೇನು? ಮಳೆಯಾದರೇನು? ವಾರದ ಅಂತ್ಯದಲ್ಲಿ  ಆಚರಿಸಲ್ಪಡುವ ಎಲ್ಲ ಹಬ್ಬಗಳಿಗೂ ನಗರಪುರವಾಸಿಗಳು ಮಕ್ಕಳು ಮರಿಗಳೊಂದಿಗೆ ಹಾಜರಾಗುತ್ತಾರೆ!


ಕಾರ್ಮುಗಿಲ ಕಿರೀಟ ಧರಿಸಿದ್ದ ಪರ್ವತಶ್ರೇಣಿಗಳ ಹಿನ್ನೆಲೆಯಲ್ಲಿ ಹಚ್ಛೆ ಹಸಿರಾದ ಹುಲ್ಲು ಹಾಸಿನ ಮೇಲೆ ಚಿನ್ನದ ಚೆಂಡುಗಳಂತೆ ಉರುಳಿಕೊಂಡಿರುವ  ಕುಂಬಳಕಾಯಿಗಳು -


ಪಂಪ್ಕಿನ್ ಪ್ಯಾಚ್ ಎಂಬ ಕುಂಬಳ ಬಳ್ಳಿಗಳ ತೋಟದಿಂದ ನಾವೇ ಸ್ವತಃ ನಮಗೆ ಬೇಕಾದ ಕಾಯಿಗಳನ್ನು ಆರಿಸಿ ತೆಗೆದುಕೊಳ್ಳುಬಹುದಾದ  ಸೌಲಭ್ಯ -


ತೋಟದ ವರೆಗೆ ನಮ್ಮನ್ನು ಒಯ್ಯಲು ಹುಲ್ಲು ಮೆದೆ  ಹಾಸಿದ  ಟ್ರೈಲರೊಂದಿಗೆ ತಯಾರಾಗಿರುವ ಟ್ರ್ಯಾಕ್ಟರ್ -


 

ಉತ್ಸವಕ್ಕಾಗಿ ಸಜ್ಜುಗೊಳಿಸಲ್ಪಟ್ಟಿದ್ದ  ಮಾರುಕಟ್ಟೆಯಲ್ಲಿ ವಿವಿಧ ಗಾತ್ರಗಳಲ್ಲಿ, ವಿವಿಧ ಆಕಾರಗಳಲ್ಲಿ, ಕಣ್ಣುಗಳನ್ನು ಕೋರೈಸುವಂತಹ  ವಿವಿಧ ಬಣ್ಣಗಳಿಂದ ಕೂಡಿದ  ಕುಂಬಳಕಾಯಿಗಳ  ರಾಶಿ - 


ವಿಶೇಷವಾದ ಹ್ಯಾಲೋವೀನ್  ಅಲಂಕಾರದಲ್ಲಿ ಕಂಗೊಳಿಸುವ  ಮಾರ್ಕೆಟ್ ಚೌಕ -


ಬಗೆ ಬಗೆಯ ಪಾನೀಯಗಳು, ಆಹಾರಗಳು ಮತ್ತು ತಿಂಡಿಗಳನ್ನು ಬಿಸಿ ಬಿಸಿಯಾಗಿ ಸರಬರಾಜು ಮಾಡುವ ಫುಡ್ ಪೆವಿಲಿಯನ್ಗಳು -


ಮಕ್ಕಳಿಗಾಗಿ ಹಸುವಿನಾಕಾರದ ಬೋಗಿಗಳೊಂದಿಗೆ ಪುಟಾಣಿ ಎಕ್ಸ್ಪ್ರೆಸ್ -


ಶುಭ್ರವಾದ ಪುಟ್ಟ ಮೃಗಾಲಯದಲ್ಲಿ ಮಕ್ಕಳಿಗಾಗಿ, ಅವರುಗಳು  ಮುದ್ದಿಸಿ, ತಿನ್ನಿಸಿ ಆಡಿಸಲೆಂದು  ಬೇಲಿಯೊಳಗೆ ಕೂಡಿಡಲ್ಪಟ್ಟಿದ್ದ ಕರುಗಳು, ಕುರಿಮರಿಗಳು ಮತ್ತು ಮರಿಹಂದಿಗಳು -
ಮಕ್ಕಳಿಗೆಂದೇ ಏರ್ಪಡಿಸಲಾಗಿದ್ದ  ಬೊಂಬೆ  ಬಾತುಗಳ ಈಜುವ ಸ್ಪರ್ಧೆ (ರಬ್ಬರ್ ಡಕ್ ರೇಸ್)- 
ಅದಲ್ಲದೆ ಮಕ್ಕಳಿಗೆ ಬಹು ಪ್ರಿಯವಾದ ಫೇಸ್ ಪೇಂಟಿಂಗ್ ಮತ್ತು ಪಾಪ್ ಕಾರ್ನ್ ಸ್ಟಾಲ್ಗಳು -
'ಕಾರ್ನ್ ಮೇಜ್' (corn maze) ಎಂಬ ಸಾಹಸದಾಟ ಮಕ್ಕಳನ್ನಲ್ಲದೆ ಹಿರಿಯರನ್ನೂ ಆಕರ್ಷಿಸುತ್ತದೆ. 


ಜೋಳದ ಗದ್ದೆಗಳಲ್ಲಿ ಏರ್ಪಡಿಸಲಾಗಿದ್ದ ಚಕ್ರ ವ್ಯೂಹದೊಳಗೆ  ಹೊಕ್ಕು ನಿರ್ದಿಷ್ಟ ಕಾಲದೊಳಗೆ ಹೊರ ಬರ ಬೇಕಾದಂತಹ ಆಟ ಇದು. 'ಹಾಂಟೆಡ್ ಕಾರ್ನ್ ಮೇಜ್' (haunted corn maze) ಎಂಬ ರೋಮಾಂಚಕಾರೀ ಚಕ್ರವ್ಯೂಹ ಹೃದಯ ಗಟ್ಟಿ ಇದ್ದವರಿಗೆ ಮಾತ್ರ! ಹ್ಯಾಲೋವೀನ್ ಪ್ರಯುಕ್ತ ಈ ವ್ಯೂಹದೊಳಗೆ ಭಯಾನಕ  ಭೂತಗಳು ಅನಿರೀಕ್ಷಿತವಾಗಿ ನಮ್ಮ ಮುಂದೆ ಪ್ರತ್ಯಕ್ಷವಾಗಿ ದಿಗಿಲುಗೊಳಿಸುತ್ತವೆ!
ಗಲ್ಲಾದಲ್ಲಿ  ಕುಂಬಳಕಾಯಿಗಳಿಗೆ ಬೆಲೆ ನಿರ್ಣಯಿಸುವ ರೀತಿ  ವಿಚಿತ್ರವೆನಿಸುತ್ತದೆ.  


ಪ್ರತ್ಯೇಕವಾದ ಟೇಬಲ್ (pricing table) ಮೇಲೆ ಒಂದೊಂದು ಕಾಯನ್ನೂ ಕೂರಿಸಿ, ಅದರ ಸುತ್ತಳತೆಗೆ ತಕ್ಕಂತೆ ಬೆಲೆ ನಿರ್ಣಯಿಸಲ್ಪಡುತ್ತದೆ!
ಕುಂಬಳಕಾಯಿ ಕಾಲದಲ್ಲಿ ಸೂಪರ್ ಮಾರ್ಕೆಟ್ಗಳಲ್ಲಿ  ಮಾರಾಟವಾಗುವ ಎಲ್ಲ ತಿಂಡಿ
ತಿನಿಸುಗಳಲ್ಲೂ  ಕುಂಬಳಕಾಯಿಯೇ ಪ್ರಧಾನ ಪದಾರ್ಥವಾಗಿದೆ. ಪಂಪ್ಕಿನ್ ಬ್ರೆಡ್, ಪಂಪ್ಕಿನ್ ಕೇಕ್, ಪಂಪ್ಕಿನ್ ಕುಕ್ಕಿ, ಪಂಪ್ಕಿನ್ ಪೈ, ಪಂಪ್ಕಿನ್ ಸೂಪ್ ಇನ್ನೂ ಎಷ್ಟೋ ಪದಾರ್ಥಗಳು! ಸ್ಟಾರ್ ಬಕ್ಸ್ ಕಾಫಿ ಶಾಪಲ್ಲಿ ಪಂಪ್ಕಿನ್ ಲಾಟ್ಟೆ  ಎಂಬ ಪೇಯ ಸಹ ದೊರಕುತ್ತದೆ ಎಂದರೆ ಕುಂಬಳಕಾಯಿಯ ವಿಶಾಲವಾದ  ವ್ಯಾಪಕವನ್ನು ಏನೆಂದು ಹೇಳುವುದು? ಇಷ್ಟೆಲ್ಲಾ ದೊರಕಿದರೂ ಕುಂಬಳಕಾಯಿ ಹಬ್ಬಕ್ಕೆ ಆಗಮಿಸಿದವರೆಲ್ಲಾ  ಕೈಬಂಡಿಯ ತುಂಬ ಕುಂಬಳಕಾಯಿಗಳನ್ನು ಕೊಂಡುಕೊಂಡೇ ಹೋಗುತ್ತಾರೆ! ಕೊಂಡೊಯ್ದ ಕುಂಬಳಕಾಯಿಗಳನ್ನು ಸುಂದರವಾಗಿ ಕೆತ್ತಿ ಹ್ಯಾಲೋವೀನ್ ಸಮಯ ಅವುಗಳಲ್ಲಿ ದೀಪಗಳನ್ನು ಹಚ್ಚಿಟ್ಟು, ಆ ಜಾಕ್ ಆ ಲ್ಯಾಂಟರ್ನ್ ಗಳನ್ನು  ಮನೆಯ ಮುಂದೆ ಅಲಂಕಾರವಾಗಿ ಇಡುತ್ತಾರೆ! 
ಸುಂದರವಾದ ವಪ್ಪಟ್ಟೂ ದ್ವೀಪದಲ್ಲಿ ನಾವು  ಕಂಡ ಕುಂಬಳಕಾಯಿ ಹಬ್ಬ ನಿಜಕ್ಕೂ ಬಹಳ ಮೋಜಿನ ಹಬ್ಬವೇ ಆಗಿತ್ತು!