Sunday, December 30, 2018

ಕಿತ್ತಯನ ಕನಸು / KITTAYYA’S DREAM

ಕಿತ್ತಯನ ಕನಸು  


ತಂಗಾಳಿಯಲ್ಲಿ ತೂಗುತ್ತಿದ್ದ ಹಸಿರು ತೋರಣಗಳು -
ಹೂ ರಾಶಿ ಹಾಸಿದ್ದ ರಾಜಬೀದಿಗಳು -
ಕೊಂಬು ಕಹಳೆಗಳ ಮೇಳ -
ಮದ್ದಳೆ ನಗಾರಿಗಳ ತಾಳ -
ಎಲ್ಲೆಲ್ಲೂ ರಣವೀರರು ಮೊಳಗಿದ ಉತ್ಸಾಹದ ಜಯಗೋಷ -
'ಪಲ್ಲವನ ಸೊಕ್ಕು ಮುರಿದು ವಿಜಯಂಗೈದ 'ಪೆರ್ಮಾಡಿ' ಪರಾಕು !'
'ರಾಜಕೇಸರಿ ಶ್ರೀವಲ್ಲಭ ಭೀಮಕೋಪ ರಣಭಾಜನ ಬಿರುದಾಂಕಿತ ಗಂಗರಸ ಪರಾಕು !'
'ಮಹಾರಾಜಾಧಿರಾಜ ಪರಮೇಶ್ವರ ಕೊಂಗುಣಿ ಮುತ್ತರಸ ಶ್ರೀಪುರಷ ಬಹು ಪರಾಕು !' 


ಪರಮ ದಯಾವಂತನೂ, ಅತಿಬಲನೂ, ಪರಾಕ್ರಮಶಾಲಿಯೂ, 'ಗಜಶಾಸ್ತ್ರ' ವೆಂಬ ಕೃತಿಯನ್ನು ರಚಿಸಿದ ಗಜಶಾಸ್ರ ಪಾರಂಗತನೂ ಆಗಿದ್ದ ಗಂಗದೊರೆಯನ್ನು ಬೆನ್ನ ಮೇಲೆ ಹೊತ್ತು  ರಾಜಲಾಂಛನವಾದ ಮದಗಜವೇ ಜೀವಂತ ಎದ್ದುಬಂದಂತೆ ಗನ ಗಂಭೀರ ನಡಿಗೆಯಲ್ಲಿ ಮೆರವಣಿಗೆಯನ್ನು ಹಿಂಬಾಲಿಸಿ ಬರುತ್ತಿದ್ದ ಪಟ್ಟಗಜ - 
ಪದೇ ಪದೇ ದಂಡೆತ್ತಿ ಬರುತ್ತಿದ್ದ ಪಾಂಡ್ಯರು, ಪಲ್ಲವರು, ಮತ್ತು ರಾಷ್ಟ್ರಕೂಟರಿಂದ ಗಂಗವಾಡಿ ರಾಜ್ಯವನ್ನು ಸಂರಕ್ಷಿಸಿ, ವಿಸ್ತರಿಸಿ, ಆ ರಾಜ್ಯವನ್ನು ಶ್ರೀರಾಜ್ಯವೆಂದೇ ಕೊಂಡಾಡುವಷ್ಟು ದಕ್ಷತೆಯಿಂದ ಆಳಿದ ಗಂಗರಾಜ ಶ್ರೀಪುರುಷನು ಪಟ್ಟಗಜದ ಅಂಬಾರಿಯಲ್ಲಿ ಕುಳಿತು ತನ್ನ ರಾಜಧಾನಿಯಾದ ಮಾನ್ಯಪುರದ ರಾಜಬೀದಿಗಳಲ್ಲಿ ಸಾಗಿದ ಆ ಅದ್ಬುದ ದೃಶ್ಯ -
ಕಿತ್ತಯನ  ಮನದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿತ್ತು.
ಸಮೀಪದ ಯುದ್ಧದಲ್ಲಿ ಬಾಗವಹಿಸಿದ್ದ ತನ್ನ ಬಾವ ಕಮ್ಮೊರನನ್ನೂ ವಿಜಯೋತ್ಸವವನ್ನೂ  ಕಾಣಲೆಂದು ಮಾನ್ಯಪುರಕ್ಕೆ ತೆರಳಿದ್ದ ಕಿತ್ತಯನ ಮನದಲ್ಲಿ ಮೂಡಿ ಬಂದಿತು ಒಂದು ಸುಂದರವಾದ ವೀರ ಕನಸು. 
ತಾನೂ ವೀರನಾಗಬೇಕು! ರಾಜಸೇವಕನಾಗಬೇಕು! ನಾಡಸೇವೆ ಮಾಡಬೇಕು! ವಿಜಯ ವೈಭವವನ್ನು ವೀಕ್ಷಿಸುವ ಸಾಮಾನ್ಯ ಪ್ರಜೆಯಾಗಿರದೆ, ಆ ವೈಭವದಲ್ಲಿ ಪಾಲ್ಗೊಂಡು ಜಯಘೋಷ ಮಾಡುವ ರಣವೀರನಾಗಬೇಕು! ಬಾವನಂತೆ ಪುರಸ್ಕಾರವನ್ನು ಪಡೆಯಬೇಕು! ಎಲ್ಲಕ್ಕಿಂತ ಮಿಗಿಲಾಗಿ ದೊರೆಗಳ ಪ್ರಶಂಸೆಗೆ ಪಾತ್ರನಾಗಬೇಕು!
ಇಂತಹ ಒಂದು ಮಹತ್ವಾಕಾಂಕ್ಷೆ ಆ ಕ್ಷಣದಲ್ಲೇ  ಅವನ ಮನದಲ್ಲಿ ಅಂಕುರಿಸಿ ಬೇರೂರಿತ್ತು.
ವಿಜಯವೈಭವಗಳನ್ನು ಕಂಡನಂತರ ಪೆರ್ಬ್ಬೊಳಲ್ ನಾಡಿಗೆ ಹಿಂದಿರುಗಿದ ಕಿತ್ತಯ ತನ್ನ ಹೆಬ್ಬಯಕೆಯನ್ನು ತಂದೆಯ ಮುಂದಿಟ್ಟನು.    
"ಊಂ ! ಆಗುವೆಯಂತೆ ! ಬಾವನಂತೆ ಮೈದುನ !" ಎಂದಷ್ಟೇ ಹೇಳಿ ಮುಸಿನಗುತ್ತ ಅವನ ಬೆನ್ನು ತಟ್ಟಿದ್ದರು ಗ್ರಾಮಾಧಿಕಾರಿಯಾಗಿದ್ದ ಅವನ ತಂದೆ. ದೊರೆಗಳಿಂದ ಸನ್ಮಾನಿತನಾಗಿದ್ದ ಅಳಿಯ ಕಮ್ಮೊರನ ಬಗ್ಗೆ ಅವರಿಗೆ ಬಹಳ ಸಂತೋಷ. ಅಂತೆಯೇ ತನ್ನ ಪುತ್ರನಾದ ಕಿತ್ತಯನೂ ಮಾನ್ಯತೆ ಪಡೆದು ತಮ್ಮ ಕೊಡನ್ದಲೆ ವಂಶಕ್ಕೆ ಪೆರ್ಮೆ ತಂದರೆ ಆ ಸಂತಸ ನೂರ್ಮಡಿಯಾಗುವುದಿಲ್ಲವೇನು?
ಅಪ್ಪನ ಮಾತು ಕಿತ್ತಯನ ಕನಸಿಗೆ ಪೋಷಣೆ ನೀಡಿತ್ತು. ಅವನು ಕನಸು ಕಾಣುವುದನ್ನು ಮುಂದುವರಿಸಲು ಅನುಕೂಲವಾಯಿತು!
"ಓ ಮಗ! ಅಂಬಲಿ ಕುಡಿದು ಬೇಗನೆ ಎದ್ದು ಪೋಗು! ಗೋವುಗಳೆಲ್ಲ ಮೇವಿಗಾಗೆ ತಳಮಳಿಸ್ತಿವೆ!"
ಅವ್ವನ ದನಿ ಕಿತ್ತಯನನ್ನು ಕನಸಿನ ಲೋಕದಿಂದ ಹೊರಕ್ಕೆ ಸೆಳೆಯಿತು.
"ಸದಾ ಇಂಗೆ ಮನೋರಾಜ್ಯ ಮಾಡ್ತಾ ಕುಂತಿದ್ರೆ ಮುಂದಿನ ಸಲ ದಂಡಿನ ಆಯ್ಕೆಗೆ ಕರೆ ಬಂದಾಗ ನಿನ್ನ ಕಳಿಸೋದಾದ್ರೂ ಎಂಗೆ? "
"ಅವ್ವ? "  ಆಶ್ಚರ್ಯದಿಂದ ಕಿತ್ತಯನ ಕಣ್ಣುಗಳು ಅರಳಿದವು.
"ಉಮ್! ನಿನ್ನ ಅಪ್ಪ ಪೆರ್ನಾಗತ್ತರಸರ ಬಳಿ ಮನವಿ ಮಾಡ್ಕೊಂಡವ್ರೆ! ಇನ್ನೇನು? ನೀನು ದಂಡಿಗೆ ಸೇರ್ಕೊಂಡಂಗೇ! ಅಲ್ಲಿತಂಕ ಕನಸು ಕಾಣ್ತಾ ಕೂರದೆ ಗೋವುಗಳ ಸಂರಕ್ಷಣೆ ಮಾಡೊಗು ನನ್ನಪ್ಪ! "
ಶ್ರೀಪುರಷ ಮಹಾರಾಜನ ಆಳ್ವಿಕೆಯಲ್ಲಿದ್ದ ಗಂಗವಾಡಿ ಬಹು ದೊಡ್ಡ ರಾಜ್ಯವಾಗಿದ್ದಿತು. ಆಡಳಿತದ ಅನುಕೂಲಕ್ಕಾಗಿ ರಾಜ್ಯವನ್ನು ಅನೇಕ ನಾಡುಗಳನ್ನಾಗಿ ವಿಭಾಗ ಮಾಡಿ, ಒಂದೊಂದು ವಿಭಾಗಕ್ಕೂ  ಓರ್ವ ರಾಜ ಪ್ರತಿನಿಧಿಯನ್ನು ನೇಮಿಸಲಾಗಿತ್ತು. ಮೂವತ್ತು ಊರುಗಳನ್ನೊಳಗೊಂಡ ಪೆರ್ಬ್ಬೊಳಲ್ನಾಡು-೩೦ ಎಂಬ ಪ್ರದೇಶವನ್ನು ಪೆರ್ನಾಗತ್ತರಸನು   ಆಳುತ್ತಿದ್ದನು.
ಅಪ್ಪ ಅವರಲ್ಲಿ ಮನವಿ ಮಾಡಿಕೊಂಡಮೇಲೆ ತನ್ನ ಕೆಲಸ ಕೈಗೂಡಿದಂತೆಯೇ!
ಕಿತ್ತಯನಿಗೆ ಬಲು ಖುಷಿಯಾಯಿತು. ಈಗಲೇ ಈ ವಿಷಯವನ್ನು ತನ್ನ ಗೆಳೆಯರಿಗೆ ತಿಳಿಸಬೇಕು! ಒಂದೇ ಗುಟುಕಲ್ಲಿ ಅಂಬಲಿ ಕಾಲಿ ಮಾಡಿ ಕುಡುಗೋಲು ಬಿಲ್ಲು ಬಾಣಗಳ ಸಹಿತ ಗೋವುಗಳನ್ನು ಅಟ್ಟಿಕೊಂಡು ಹುಲ್ಲುಗಾವಲನ್ನು ಕುರಿತು ಹೊರಟೇಬಿಟ್ಟನು.
ಬೇಸಾಯಕ್ಕೂ ವಾಣಿಜ್ಯಕ್ಕೂ ಬೇಕಾದ ಎಲ್ಲ ಬಗ್ಗೆಯ ಸೌಲಭ್ಯಗಳನ್ನೂ ಒದಗಿಸಿಕೊಟ್ಟು ಪ್ರಜೆಗಳಿಗೆ ಉತ್ತೇಜನ ನೀಡಿದ್ದರು ಗಂಗರಸರು. ರಾಜ್ಯದ  ಉನ್ನತಿಗಾಗಿ ವಿಶೇಷ ಆಯೋಜನೆಗಳನ್ನೂ ಅಣಿಮಾಡಿಕೊಂಡಿದ್ದರು. ಅವರು ಏರ್ಪಡಿಸಿದ್ದ ನೀರಾವರಿ ವ್ಯವಸ್ಥೆಯಿಂದ ಕೆರೆ, ಕಟ್ಟೆ ಮತ್ತು ಕಾಲುವೆಗಳು ಸದಾ ತುಂಬಿದ್ದು ಪೆರ್ಬ್ಬೊಳಲ್ನಾಡು ಬಲು ಫಲವತ್ತಾದ ನಾಡಾಗಿದ್ದಿತು.
ಪೆರ್ಬ್ಬೊಳಲ್ನಾಡು ಎಂಬ ಆ ನಾಡಿನ ಹೆಸರಿಗೆ ಕಾರಣವಾಗಿದ್ದ ಪೆರ್ಬ್ಬೊಳಲು ಕಣ್ಣಿಗೆ ಕಂಡಷ್ಟು ದೂರ ವಿಶಾಲವಾದ ಪ್ರದೇಶವನ್ನು ವ್ಯಾಪಿಸಿಕೊಂಡು ಸಮುದ್ರದಂತೆ ಗೋಚರಿಸುತ್ತಿತ್ತು. ತಂಗಾಳಿಯಲ್ಲಿ ಅದರಲ್ಲೆದ್ದ ಕಿರು ಅಲೆಗಳು ನಿರ್ಮಲವಾದ ನೀಲಿ ಬಣ್ಣದ ನೀರಿಗೆ ಬೆಳ್ಳಿಯ ಅಂಚನ್ನು ಕಟ್ಟುತ್ತಿದ್ದವು.
ಕೆರೆಯ ಸುತ್ತಲೂ ಹಚ್ಛೆ ಹಸಿರಾಗಿ ಹರಡಿಕೊಂಡಿದ್ದ ಹುಲ್ಲುಗಾವಲುಗಳು, ಹೊಲಗದ್ದೆಗಳು, ಮಾವು ಮತ್ತು ಹುಣಸೆ ತೋಪುಗಳು. ನಂತರ ಬಂಡೆಗಳಿಂದ ಕೂಡಿದ್ದ ಗುಡ್ಡ ಬೆಟ್ಟಗಳು. ಅದರಾಚೆ ಇದ್ದದ್ದೆಲ್ಲ ಬರಿ ಕಗ್ಗಾಡು.


ಗೋವುಗಳನ್ನು ಮೇಯಲು ಬಿಟ್ಟನಂತರ ಒಂದು ಹೆಮ್ಮರದ ಕೆಳಗೆ ಕಿತ್ತಯನದ್ದೇ ರಾಜ್ಯಬಾರ!  ಮರಿ, ಗುಣಾ, ನಾಗಾ, ಶಿವ, ಮಾಧವ, ರನ್ನ ಮತ್ತು ಮಾರಾ ಅವನ ಮಾತುಗಳಿಂದ ಪ್ರಭಾವಿತರಾಗಿ ಕಿತ್ತಯನ ಅನುಯಾಯಿಗಳಾಗಿದ್ದರು. ಎಲ್ಲರೂ ಗೋವುಗಳನ್ನು ಮೇವಿಗೆ ಬಿಟ್ಟನಂತರ ಕಿತ್ತಯನ ಬಳಿ ಕೂಡಿ ಕುಳಿತು ತಮ್ಮ ತಮ್ಮ ಕನಸುಗಳನ್ನು ಹಂಚಿಕೊಳ್ಳುತ್ತಿದ್ದರು.
ಕಿತ್ತಯ ಬರಿ ಹಗಲುಗನಸು ಕಾಣುವವನಲ್ಲ. ತನ್ನ ಆಕಾಂಕ್ಷೆ ಈಡೇರಬೇಕಾದರೆ ತಾನು ಬಲಶಾಲಿಯಾಗಬೇಕು! ರಣ ವಿದ್ಯೆಯಲ್ಲಿ ಪ್ರವೀಣನಾಗಬೇಕು! ನುರಿತ ಬಿಲ್ಲುಗಾರನಾಗಬೇಕು! ಅನುದಿನವೂ ತನ್ನ ಸಹಪಾಠಿಗಳೊಂದಿಗೆ ಪೆರ್ಬ್ಬೊಳಲ ದಂಡೆಯಲ್ಲಿ ಅದಕ್ಕಾದ ಕಸರತ್ತುಗಳಲ್ಲಿ ತೊಡಗಿಕೊಂಡಿದ್ದ ಆ ಎಳೆಯ.
ದಂಡ ಯುದ್ಧ, ಕತ್ತಿವರಸೆ, ಈಟಿಗಾರಿಕೆ -
ಈ ಎಲ್ಲ ಕಾಳಗಗಳನ್ನೂ ಕಿತ್ತಯನ ಮಾರ್ಗದರ್ಶನದಲ್ಲಿ ತಮ್ಮ ತಮ್ಮ ಕೈಕೋಲುಗಳನ್ನು  ಹಿಡಿದೇ ಅಭ್ಯಾಸಮಾಡುತ್ತಿದ್ದರು ಹುಡುಗರು.
ಚಿಕ್ಕಂದಿನಿಂದ  ಬಿದಿರು ಬಿಲ್ಲು ಬಾಣಗಳನ್ನು ಬಳಸಿ ಬಿಲ್ಲುಗಾರಿಕೆ ಅಭ್ಯಾಸ ಮಾಡ್ಡುತ್ತಿದ್ದ ಕಿತ್ತಯನ ಉತ್ಸಾಹವನ್ನು ಕಂಡ ಆತನ ಬಾವ ಕಮ್ಮೊರ ತನ್ನ ಪ್ರೀತಿಯ ಮೈದುನನಿಗೆ ತನ್ನದ್ದೇ ಆದ ಒಂದು ಅಸಲೀ ಬಿಲ್ಲನ್ನೂ ಬತ್ತಳಿಕೆಯ ತುಂಬ ಬಾಣಗಳನ್ನೂ ಉಡುಗೊರೆಯಾಗಿ ಕೊಟ್ಟಿದ್ದನು.
ತನ್ನ ಗೆಳೆಯರನ್ನೂ ಬಿಲ್ಲುಗಾರಿಕೆಯಲ್ಲಿ ಪಳಗಿಸಬೇಕೆಂದುಕೊಂಡ ಕಿತ್ತಯ ಕಾಡಿನಿಂದ ಬಿದಿರು ಕಡಿದು ತಂದು ಎಲ್ಲರಿಗೂ ಬಿಲ್ಲು ಬಾಣಗಳನ್ನು ತಯಾರಿಸಿ ಕೊಟ್ಟು ತರಬೇತಿಯನ್ನೂ ಪ್ರಾರಂಭಿಸಿದ್ದನು.
" ಕಿತ್ತಯ ! ನಮಗೆ ಈಪಾಟಿ ಕಸರತ್ತು ಮಾಡಿಸ್ತಿಯಲ್ಲ! ಅದೇಂಗೆ ? "
" ಅದು ಅಂಗೇ! " ಕಿತ್ತಯ ಕಿರುನಗೆ ಬೀರಿ ಉತ್ತರಿಸುತ್ತಿದ್ದನು!
ನಾಡಿನ  ರಕ್ಷಣೆಗಾಗಿ ಸದಾ ಸಿದ್ದವಾಗಿತ್ತು ಗಂಗವಾಡಿಯ ಸೈನ್ಯ.  ಪಾಂಡ್ಯ ಪಲ್ಲವ ರಟ್ಟವಾಡಿ ವೈರಿಗಳು ಪದೇ ಪದೇ ಧಾಳಿ ಮಾಡುವ ಸಂಭವವಿದ್ದ ಕಾರಣ ವ್ಯಾಯಾಮಗಳನ್ನೂ, ಕವಾಯತ್ತುಗಳನ್ನೂ ವಿವಿಧ ಬಗ್ಗೆಯ ಕಾಳಗಗಳ ಅಭ್ಯಾಸಗಳನ್ನೂ ಮಾಡುವುದು ಸೈನಿಕರ ದಿನಚರಿಯಾಗಿ ಹೋಗಿತ್ತು.
ಪೆರ್ಬ್ಬೊಳಲ್ನಾಡಿನ ಸೈನಿಕರಿಗೆ ರಣವಿದ್ಯಾ ಪಾರಂಗತರಾಗಿದ್ದ ಪೆರ್ಗುನ್ದಿ ಕಿರುಗುನ್ದಿ ಸೋದರರು ದಿನ ನಿತ್ಯ ನೀಡುತ್ತಿದ್ದ  ತರಬೇತುಗಳನ್ನು ಎವೆಯಿಕ್ಕದೆ ನೋಡುತ್ತ ಬೆಳೆದವನಲ್ಲವೇ ಅವನು? ಅಲ್ಲಿ ಕೋಟೆ ಮೈದಾನದಲ್ಲಿ ತಾನು ಕಂಡದ್ದನ್ನು ಇಲ್ಲಿ ಪೆರ್ಬ್ಬೊಳಲ ದಂಡೆಯಲ್ಲಿ  ಶ್ರದ್ದೆಯಿಂದ ಅಭ್ಯಾಸ ಮಾಡಿ ನೋಡಿ ಸ್ವತಃ ಕಲಿತಿದ್ದನು ಕಿತ್ತಯ.
ದಿನೇ ದಿನೇ ಮಾಡುತ್ತಿದ್ದ ವ್ಯಾಮಾಮದಿಂದಲೂ ಕಸರತ್ತುಗಳಿಂದಲೂ ಕಿತ್ತಯ ಮೈಕೈ ತುಂಬಿಕೊಂಡು ಬಲಶಾಲಿಯಾಗುತ್ತಿದ್ದುದ್ದನ್ನು ಪ್ರತ್ಯಕ್ಷವಾಗಿ ಕಂಡಳು ಅವ್ವ.  ಮಗನಿಗೆ ಕೆಟ್ಟ ಕಣ್ಣು  ಬಿದ್ದೀತೆಂದು ನೀವಾಳಿಸಿ ತನ್ನ ಬೆರಳುಗಳಿಂದ ಲಟಿಕೆ ತೆಗೆದು ಹಾಕಿದಳು.
"ಭಲಾ! ಸೈನ್ಯಕ್ಕೆ ಸೇರಕ್ಕೆ ತಯಾರಾದಾಂಗಿದೆ! " ಎಂದು ಶ್ಲಾಘಿಸಿದರು ಅಪ್ಪ.
 ಆ ದಿನ ಬರುವುದೆಂದು ಎಂಬ ನಿರೀಕ್ಷೆಯಲ್ಲಿ ಕಿತ್ತಯನ ಮನಸ್ಸು ಸದಾ ತವಕಿಸುತ್ತಿತ್ತು.
ಎಂದಿನಂತೆ ಪೆರ್ಬ್ಬೊಳಲ ದಂಡೆಯಲ್ಲಿ ಕಿತ್ತಯನ ದರ್ಬಾರು ಸೇರಿತು.
"ಪೆರ್ನಾಗತ್ತರಸರ ಬಳಿ ಅಪ್ಪ ಮನವಿ ಮಾಡ್ಕೊಂಡವ್ರೆ. ಈ ಬಾರಿ ದಂಡಿಗೆ ನಾನೂ ಆಯ್ಕೆ ಆಗ್ತೀನಿ!"
ಕಿತ್ತಯನ ಮಾತು ಕೇಳಿ ಗೆಳೆಯರಿಗೆಲ್ಲ ಉತ್ಸಾಹ .
"ಅಂಗಾರೆ ಮುಂದಿನಸಾರಿ ನೀನೂ ದಂಡಿನ ಜೊತೆಗೂಡಿ ಒಂಟೋಯ್ತಿಯ ಅನ್ನು!"
"ಒಂಟೋಗೋದು ಯಾಕೆ? ಯುದ್ಧ ಮುಗಿಸ್ಕಂಡ್ ಬಂದೇ ಬಂದಾನು!" ಮರಿಯ ಮಾತಿಗೆ ಪ್ರತಿ ನುಡಿದನು ರನ್ನ.  
"ದಂಡು ಅಂತಂದ್ರ ಸಾಕು! ನಮ್ಮಪ್ಪ ಕೆಂಡದ್ ಕಣ್ ಮಾಡ್ತಾನೆ! 'ಒಲ ಗದ್ದೆ ನೋಡ್ಕಂಡ್ ಸುಕ್ವಾಗಿ ಉಂಡ್ಕಂಡ್ ಬಿದ್ದಿರೋದ್ ಬುಟ್ಟು ದಂಡಂತೆ ದಂಡು' ಅಂತಾನೆ! " ಎನ್ನುತ್ತ ಮಾರ ತನ್ನ ತಂದೆಯನ್ನು ಅನುಕರಣೆ ಮಾಡಿದಾಗ ಎಲ್ಲ ಹುಡುಗರೂ ಗೊಳ್ಳೆಂದು ನಕ್ಕರು.
"ಕಿತ್ತಯನ ಅಪ್ಪನ್ಗೆ ಕಿತ್ತಯ ರಣವೀರನಾದ್ರೆ ಪೆರ್ಮೆ! ನಿನ್ನ ಅಪ್ಪನ್ಗೆ ನೀನು ಉಂಡಾಡಿಗುಂಡನಾದ್ರೆ ಪೆರ್ಮೆ!" ಶಿವನ ಮಾತು ಕೇಳಿ ಮತ್ತೊಮ್ಮೆ ಎಲ್ಲರೂ ನಕ್ಕರು.
"ಈಗ ನಾವೆಲ್ರೂನೂ ವಸಿ ಉಂಡಾಡಿಗುಂಡ್ರೇ ಆಗೋಣ! ಅವ್ವ ಕಜ್ಜಯಾ ಮಾಡಿ ಕೊಟ್ಟವ್ಳೆ! " ಎನ್ನುತ್ತ ತನ್ನ ತಿಂಡಿ ಗಂಟನ್ನು ಬಿಚ್ಚಿದನು ಗುಣಾ.
ಎಲ್ಲರೂ ಉಲ್ಲಾಸದಿಂದ ಕಜ್ಜಾಯವನ್ನು ಸವಿಯ ತೊಡಗಿದರು.
ಕಾಡಿನಿಂದ ಪುಷ್ಪಗಳ ಸುಗಂಧಗಳನ್ನು ಹೊತ್ತು ಬಂದ ತಂಗಾಳಿ -
ಮರಗಳ ಮರೆಯಿಂದ ಕಾಜಾಣಗಳೂ ಕೋಗಿಲೆಗಳೂ ಉಲಿಯುತ್ತಿದ್ದ ಇಂಪಾದ ದನಿ  -
ಪೆರ್ಬ್ಬೊಳಲ ಅಲೆಗಳು ಎಬ್ಬಿಸಿದ ಮೃದು ಮದುರ  ನಾದ -
ಮೀನುಗಳಿಗಾಗಿ ಹಾರಾಡುತ್ತಿದ್ದ ಮಿಂಚುಳ್ಳಿಗಳ ಕೂಗು -
ಆ ಸುಂದರವಾದ ನೀರವತೆಯ ರಾಗವನ್ನು ಭೇದಿಸುವಂತೆ ಇದ್ದಕ್ಕಿದ್ದಂತೆ ಕೇಳಿಬಂದ  ಗದ್ದಲ ಹುಡುಗರನ್ನು ಚಕಿತಗೊಳಿಸಿತು.
 ಹುಡುಗರು ಗಲಿಬಿಲಿಗೊಂಡು ಒಬ್ಬರ ಮುಖ ಒಬ್ಬರು ನೋಡಿಕೊಂಡರು.
" ಏನ್ಲಾ ಗದ್ದಲ ಅದು? "
" ಗೋವುಗಳು! "
" ಕೊರಳ ಗಂಟೆ ಸದ್ದು ಕೇಳಿದ್ರೆ, ಅವು ಬೆದರಿ ಓಡಿ ಬರಾಂಗೆ ಕಾಣಿಸ್ತದ! "
" ಚಿರತೆ ಅಟ್ಟಿತೋ? "
" ಕಾಡಂದಿ ಏನಾರ ಮಂದೆಯೊಳ್ ನುಗ್ಗಿತೋ? "
ಹುಡುಗರು ಚರ್ಚಿಸುತ್ತಿರಲು ಕಿತ್ತಯ ಸರ ಸರನೆ ಮರವನ್ನೇರಿ ಕೊಂಬೆಯ ತುತ್ತ ತುದಿಯಲ್ಲಿ ನಿಂತು ನಾನಾ ಕಡೆಯೂ ದೃಷ್ಟಿ ಬೀರಿದನು. ಗೋವುಗಳು ದೌಡಾಯಿಸಿ ಬರುತ್ತಿದ್ದ ದಿಕ್ಕಿನಲ್ಲಿ ಅವನ ಗಮನ ಹರಿಯಿತು. ಧೂಳಿನ ಮಂಡಲದಲ್ಲಿ ಮೊದಲು ಏನೂ ಕಾಣಿಸದಾಯಿತು. ಧೂಳಿನ ಪರದೆ ಸ್ವಲ್ಪ ಸರಿದಾಗ ಗುಡ್ಡವನ್ನು ಸುತ್ತಿ ಬಳಸಿಕೊಂಡು ಈಟಿ ಗುರಾಣಿ ಹಿಡಿದ ಕಾಲಾಳುಗಳ ಪಡೆ ಇರುವೆ ಸಾಲಿನಂತೆ ಬರುತ್ತಿರಿವುದು ಕಂಡಿತು. ಹಿಂದೆ ಹಿಂದೆಯೇ  ರಾವುತರ ಸೈನ್ಯ! ಕಿತ್ತಯನ ಎದೆ ಝಲ್ ಎಂದಿತು. ಇದೇನು? ಯಾರೋ ಸೈನಿಕರು ಆಕ್ರಮಣ ಮಾಡುವುದಕ್ಕೆ ಬರುತ್ತಿರುವಂತೆ ಕಾಣಿಸುತ್ತದಲ್ಲ! ಮುನ್ಸೂಚನೆ ಇಲ್ಲದೆ ಹಠಾತ್ತನೆ ಧಾಳಿ ಮಾಡುವುದೂ ಉಂಟೆ?  ಇದೀಗತಾನೇ  ಪಲ್ಲವರೊಡನೆ ಸೆಣಸಿ 'ಉಸ್' ಎಂದು ಉಸಿರಾಡುತ್ತಿದೆ ಗಂಗವಾಡಿ! ಅಷ್ಟರಲ್ಲಿ ಮತ್ತೊಂದು ಧಾಳಿಯೇ?
ತಮ್ಮ ಬಳಿ ಬಂದೂ ನಿಲ್ಲದೆ ಗೋವುಗಳೆಲ್ಲ 'ಅಂಬಾ' ಎಂದು ಆರ್ತನಾದ ಮಾಡುತ್ತ ಊರನ್ನು ಕುರಿತು 'ದಬ ದಬ' ಓಡುವುದನ್ನು ಕಂಡು ಹುಡುಗರೆಲ್ಲ ಗಾಬರಿಗೊಂಡರು.
ಮರದಿಂದ ಜಿಗಿದ ಕಿತ್ತಯನನ್ನು ಸುತ್ತುವರೆದುಕೊಂಡ ಹುಡುಗರು " ಕಿತ್ತಯ! ಗೋವುಗಳು ಯಾಕೆ ಇಂಗೆ ಓಡ್ತಾವೆ? " ಎಂದು ಕಳವಳದಿಂದ ಪ್ರಶ್ನಿಸಿದರು.
ಏದುಸಿರು ಬಿಡುತ್ತಿದ್ದ ಕಿತ್ತಯನ ಕಾಲುಗಳಲ್ಲಿ ಶಕ್ತಿ ಕುಂದಿದಂತೆ  ಅನ್ನಿಸಿತು. ಅವನು ಸುಸ್ತಾಗಿ ಇದ್ದಲ್ಲೇ ಕುಸಿದು ಕುಳಿತನು. ಹುಡುಗರ ಪ್ರಶ್ನೆಗೆ ಉತ್ತರಿಸಲಾರದೆ ನಾಲಿಗೆ ಒಣಗಿತ್ತು. ಅವನು ಮಾಡಿದ ಕೈಸನ್ನೆಗಳನ್ನು ಅರ್ಥೈಸಿಕೊಳ್ಳಲಾರದೆ ಹುಡುಗರು ಮಿಕಮಿಕ ಕಣ್ಣು ಬಿಟ್ಟರು. ಕಡೆಗೊಮ್ಮೆ ಕಿತ್ತಯ ಕಷ್ಟಪಟ್ಟು ತನ್ನನ್ನು ಚೇತರಿಸಿಕೊಂಡನು.
"ಓಡಿ! ಓಡಿ! ಊರಮಂದಿಗೆ  ಎಚ್ಚರ ಮಾಡಿ! ಧಾಳಿ! ಧಾಳಿ ಮಾಡಕ್ಕೆ ದಂಡು ಬಂದಾಂಗಿದೆ! "
"ಅಯ್ಯೋ ಅಂಗಾ? ಅಂಗಾರೆ ಬಾರ್ಲಾ ಎಲ್ರೂ ಓಡೋಗೋಣ!"
"ನೀವೆಲ್ಲ ಬಿರ್ರನೆ ಊರಿಗೆ ಓಡಿ! ಸುದ್ದಿ ತಿಳಿಸಿ! ತಡ ಮಾಡ್ಬ್ಯಾಡಿ! " ಕಿತ್ತಯ ಹುಡುಗರನ್ನು ತ್ವರಿತಪಡಿಸಿದನು.
" ಅಂಗಾರ ನೀನು?"
"ನಮ್ಮ ದಂಡು ಬರೋತನಕ  ವೈರಿಗಳನ್ನ ತಡೆಗಟ್ಟಿ ನಾನಿಲ್ಲೇ ನಿಲ್ವೆ!" ಕಿತ್ತಯನ ಮಾತಿನಲ್ಲಿ ತೀರ್ಮಾನವಿತ್ತು.
"ಅಯ್ಯೋ! ಅದೇಂಗೋ ಸಾಧ್ಯ? ಮೊದ್ಲೇ ಕಾಲು ಸೋತು ಕುಂತಿದ್ದೀ!"
"ಸಾಧ್ಯ! ಎಲ್ಲ ಸಾಧ್ಯ! ಇದು ನನ್ನ ಮಾವ ಕೊಟ್ಟ ಅಸಲೀ ಬಿಲ್ಲು! ಸಾಲದ್ದಕ್ಕೆ ಈ ಕೋಲು, ಕುಡುಗೋಲು .. ! " ಎನ್ನುತ್ತ ಬಿಲ್ಲನ್ನು ಹೆಗಲಿಗೆ ಏರಿಸಿಕೊಂಡು ದೃಢವಾಗಿ ಎದ್ದು ನಿಂತನು ಕಿತ್ತಯ.
"ನನ್ ತವ ಕೋಲು ಕುಡುಗೋಲು ಇವೆ! ನಾನೂ ಕಿತ್ತಯನ ಜೊತೆ ಇಲ್ಲೇ ನಿಲ್ತೀನಿ! " ಎಂದನು ಮಾರ.
"ಇಲ್ಲ! ಇಲ್ಲ! ನಿನ್ನಪ್ಪನ್ ಮಾತು ಮೀರ್ಬಾರ್ದು! ಈ ದಂಡಿನ್ ತಂಟೆ ಎಲ್ಲ ನಿನ್ಗೆ ಬ್ಯಾಡ. ನೀನೂ  ಓಗೂ! ಉಸಾರಾಗ್ ಓಗೂ!"
ಬಲವಂತದಿಂದ ಎಲ್ಲರನ್ನೂ ಹೊರಡಿಸಿದ ಕಿತ್ತಯ.
ಬೆದರಿದ್ದ ಗೋವುಗಳು ಊರೊಳಗೆ ನುಗ್ಗಿದ ಕೂಡಲೇ ಊರ ಮಂದಿಯೆಲ್ಲ ಚುರುಕಾದರು. ಹುಡುಗರು ತಂದ ಸುದ್ದಿ ಕೇಳಿದಾಕ್ಷಣ ಗಂಗರ ದಂಡು ತರಾತುರಿಯಿಂದ ಹೊರಟು  ಪೆರ್ಬ್ಬೊಳಲನ್ನು ಕುರಿತು ಧಾವಿಸಿತು.
ಇತ್ತ -
 ಸೈನಿಕರ ಮೇಲೆ ಬಾಣದಮಳೆಗರೆದು ಕೆಲವರನ್ನು ಆಗಲೇ ಕೆಳಕ್ಕುರುಳಿಸಿದ್ದ ಕಿತ್ತಯ.
ಇದ್ದಕ್ಕಿದ್ದಂತೆ ಆ ನಿರ್ಮಾನುಷ್ಯವಾದ ಪ್ರದೇಶದಲ್ಲಿ ತಮ್ಮ ಮೇಲೆ ಬಾಣಗಳನ್ನು ಪ್ರಯೋಗಿಸಿದವರ್ಯಾರು ಎಂದರಿಯದೆ ದಿಗ್ಬ್ರಾಂತರಾದರು ರಟ್ಟವಾಡಿಯ ಕಾಲಾಳುಗಳು. ಗೊಂದಲಗೊಂಡಿದ್ದ ಸೈನಿಕರ ಮುಂದೆ ಮರದ ಮೇಲಿಂದ 'ಹೊಯ್ ' ಎಂದು ಉದ್ಗರಿಸುತ್ತ ದುಮುಕಿದ ಕಿತ್ತಯ. ತಮ್ಮ ಮುಂದೆ ಪ್ರತ್ಯಕ್ಷನಾದ ವೈರಿಯನ್ನು ಕಂಡ ಸೈನಿಕರು ಕೂಡಲೇ ಅವನ ಮೇಲೆರಗಲು ಅನುವಾದರು.
ಬಿಲ್ಲನ್ನು ಹೆಗಲಿಗೇರಿಸಿ ಕುಡುಗೋಲು ಒಂದು ಕೈಯಲ್ಲಿ ಬಿದಿರಿನ ದಂಡ ಮತ್ತೊಂದು ಕೈಯಲ್ಲಿ ಹಿಡಿದು ಗಿರಗಿರನೆ ತಿರುಗಿಸುತ್ತ ತನ್ನ ಸುತ್ತ  ವ್ಯೂಹ ರಚಿಸಿಕೊಂಡವನ ಬಳಿ ಸುಳಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಮೀರಿ ಬಂದವರ ಹೊಟ್ಟೆಯಮೇಲೆ ಕಿತ್ತಯನ ಬಲಿಷ್ಠ ಕಾಲುಗಳು ಒಂದರನಂತರ ಒಂದು ಒನಕೆಯಂತೆ ಎರಗಿ ಕೆಳಕ್ಕುರುಳಿಸುತ್ತಿದ್ದಂತೆಯೇ, ಕೈಗಳಲ್ಲಿ ತಿರುಗುತ್ತಿದ್ದ ಆಯುಧಗಳೂ ಇನ್ನೂ ಕೆಲವರನ್ನು ಮಣ್ಣು ಮುಕ್ಕಿಸುತ್ತಿದ್ದವು. ಕಿತ್ತಯ ಅಡ್ಡಲಾಗಿ ಬಲವಾಗಿ  ಜಾಡಿಸಿದ  ದಂಡ ಒಮ್ಮೆಗೇ ಮೂರು ನಾಲ್ಕು ಮಂದಿಯನ್ನು ಒಟ್ಟಿಗೆ ಕೆಳಕ್ಕುರುಳಿಸಿತು.
'ಹೊ' ಎಂದು ಸಾಗರದಂತೆ ಭೋರ್ಗರೆಯುತ್ತ ಧಾವಿಸಿ ಬಂದ ಗಂಗರ ಸೈನ್ಯವು ರಟ್ಟವಾಡಿ ಸೈನ್ಯವನ್ನು ಆಕ್ರೋಶದಿಂದ ಎದುರುರಿಸಿದ್ದನ್ನು ನೋಡುತ್ತ ಕಿತ್ತಯ ಇನ್ನಷ್ಟು ಉತ್ಸುಕನಾಗಿ ಸೆಣಸಾಟವನ್ನು ಮುಂದುವರಿಸಿದನು.
ಆ ವೇಳೆಗೆ ಅಲ್ಲಿಗೆ ರವಾನೆಯಾದ ಕುದುರೆ ಸವಾರರಿಗೆ ಅಲ್ಲಿ ನಡೆಯುತ್ತಿದ್ದ ಪ್ರಚಂಡ ಕಾಳಗ ಕಂಡು ಆತಂಕವೂ ಆಶ್ಚರ್ಯವೂ ಒಮ್ಮೆಗೆ ಉಂಟಾಯಿತು. ಗಂಗರ ಈ ಅನಿರೀಕ್ಷಿತವಾದ ಪ್ರತಿಭಟನೆ ಅವರ ಆಕ್ರೋಶವನ್ನು  ಕೆರಳಿಸಿತು. ಸೆಣಸಾಟದ ನಡುವೆ ತಾವೂ ನುಗ್ಗಿದರು.
ಮಿಂಚಿನಂತೆ ಅತ್ತ ಇತ್ತ ಜಿಗಿದು ವೈರಿಗಳನ್ನು ನೆಲಕ್ಕುರುಳಿಸುತ್ತಿದ್ದ ಕಿತ್ತಯ ಖಡ್ಗಧಾರಿಯಾಗಿ ತನ್ನನ್ನು ಕುರಿತು ಮುನ್ನುಗ್ಗುತ್ತಿದ್ದ ಕುದುರೆ ಸವಾರನನ್ನ ಕಂಡನು.
'ಮೊದಲು ಅವನ ಕುದುರೆ ಉರುಳಿಸಬೇಕು! ನಂತರ ಅವನನ್ನು ನಿಭಾಯಿಸುವುದು ಸುಲಭ!'
ಬಿರ್ರನೆ ಚಲಿಸಿದ  ಕಿತ್ತಯನ ಬಾಣ  ಮುನ್ನುಗ್ಗಿ ಬರುತ್ತಿದ್ದ ಕುದುರೆಯ ಎದೆಗೆ ನಾಟಿತು. ಕುದುರೆ ತತ್ತರಿಸಿ ಬೀಳುವ ಮುನ್ನ ಕಿತ್ತಯನ ಮೇಲೆರಗಿತು ಸವಾರನ ಕೈ ಖಡ್ಗ. ಆಘಾತಕ್ಕೊಳಗಾದ ಕಿತ್ತಯ ವೈರಿಯಮೇಲೆ ಕುಡುಗೋಲನ್ನು ಬೀಸಿ ಮಣ್ಣಿಗೆ ಸರಿದನು.
ಕನಸುಗಾರ ಕಿತ್ತಯ ಅಮರನಾದನು.
ಗಂಗವಾಡಿಯ ಸೈನ್ಯವು ರಟ್ಟವಾಡಿ ಸೈನ್ಯವನ್ನು ಸೋಲಿಸಿ ರಾಜ್ಯದ ಗಡಿಯವರೆಗೆ ಹಿಂಬಾಲಿಸಿ ಹೊರಗಟ್ಟಿ ಬಂದಿದ್ದರೂ ಕಿತ್ತಯನ ಪ್ರಾಣತ್ಯಾಗದಿಂದ ಸಹಿಸಲಾರದ ದುಃಕ್ಕವನ್ನು ಊರಿಗೆ ಊರೇ ಅನುಭವಿಸಿತು. ಅವನ  ಸಾಹಸವನ್ನೂ ತ್ಯಾಗವನ್ನೂ ಮೆಚ್ಚದವರೇ ಇಲ್ಲ.ಗಂಗ ದೊರೆಗಳ ಆದೇಶದ ಮೇರೆಗೆ ಪೆರ್ನಾಗತ್ತರಸನು ಕಿತ್ತಯನಿಗಾಗಿ ಒಂದು ವೀರಗಲ್ಲನ್ನು ಕೆತ್ತಿಸಿದನು. ಕಿತ್ತಯನ ಕಥೆ ಪೇಳುವ ಅವನ ವೀರಗಲ್ಲು ಆತನಿಗೆ ಬಹು ಪ್ರಿಯವಾದ ಪೆರ್ಬ್ಬೊಳಲ ದಂಡೆಯಲ್ಲಿ ಪೆರ್ಗುನ್ದಿ ಕಿರುಗುನ್ದಿ ಸೋದರರಿಂದ ಸಕಲ ರಾಜ  ಗೌರವಗಳೊಂದಿಗೆ ಪ್ರತಿಷ್ಠಾಪನೆಯಾಯಿತು. 

----------------------------------------------------------------------------------------------------------------------
ಹಿನ್ನುಡಿ 
ಇತ್ತೀಚಿಗೆ ಹೆಬ್ಬಾಳಿನಲ್ಲಿ ಪತ್ತೆಯಾದ ಪುರಾತನವಾದ ವೀರಗಲ್ಲು ದೊಡ್ಡ ಸುದ್ದಿಯನ್ನು ಮಾಡಿರುವುದು ನೀವೆಲ್ಲ ಅರಿತ ವಿಷಯವೇ ಆಗಿರಬಹುದು. ಅದರ ಬಗ್ಗೆಗಿನ ಮಾಹಿತಿಯನ್ನು ಇಲ್ಲಿ ಓದಿ. ೮ ನೇ ಶತಮಾನದ ವೀರಗಲ್ಲಿನ ನಾಯಕ ಕಿತ್ತಯನನ್ನು ನಮಗೆ ಪರಿಚಯ ಮಾಡಿಸಿಕೊಟ್ಟವರು 'ಇನ್ಸ್ಕೃಪ್ಷನ್ ಸ್ಟೋನ್ಸ್ ಆಫ್ ಬೆಂಗಳೂರು' ವೇದಿಕೆಯ ಪಿ. ಎಲ್. ಉದಯ ಕುಮಾರ್ ಮತ್ತು ವಿನಯ್ ಕುಮಾರ್ ಅವರುಗಳು. ಶಾಸನದ ಮೇಲೆ ಹೋರಾಡುವ ಬಂಗಿಯಲ್ಲಿ ಕಿತ್ತಯನನ್ನು ಕಂಡೊಡನೆ ಅವನ ಬಗ್ಗೆ ಒಂದು ಕಥೆಯನ್ನು ರಚಿಸಬೇಕೆಂಬ  ಪ್ರೇರಣೆಯುಂಟಾಯಿತು. 
ಶಾಸನದಲ್ಲಿ ಪೂರ್ವ ಹಳೆಗನ್ನಡದಲ್ಲಿ ಕೆತ್ತಲ್ಪಟ್ಟಿದ್ದ ವಿಷಯವನ್ನು ಇತಿಹಾಸಗಾರರೂ ಶಿಲಾಶಾಸನ ಶಾಸ್ತ್ರ ತಜ್ಞರೂ  ಆದ ಮಾನ್ಯ ಶ್ರೀ. ಪಿ. ವಿ . ಕೃಷ್ಣಮೂರ್ತಿಯವರು ಪರೀಕ್ಷಿಸಿ ಅದರ ಸಾರಾಂಶವನ್ನು ಪ್ರಕಟಿಸಿದ್ದಾರೆ. 
ಕಿತ್ತಯನ ಕಥೆಯನ್ನು ರಚಿಸಲು ನಮಗಿದ್ದ ಉತ್ಸಾಹವನ್ನು ಕಂಡು ಆ ಮಾಹಿತಿಗಳನ್ನೆಲ್ಲ ನಮಗೆ ಒದಗಿಸಿಕೊಟ್ಟ ಶ್ರೀ. ಉದಯ ಕುಮಾರ್ ಅವರಿಗೆ ನಮ್ಮ ಹೃತ್ಪೂರ್ವಕವಾದ ವಂದನೆಗಳು. 
ಶಾಸನದ ಸಾರಾಂಶ ಹೀಗಿದೆ:
"ಸಿರಿಪುರುಷ (ಶ್ರೀ - ಸಿರಿ) ಮಹಾರಾಜನು ಭೂಮಿಯನ್ನು (ರಾಜ್ಯವನ್ನು) ಆಳುತ್ತಿದ್ದಾಗ ಪೆರ್ಬ್ಬೊಳಲ ನಾಡು ೩೦ನ್ನು ಪೆರ್ನಾಗತ್ತರಸನು ಆಳುತ್ತಿರಲು ಅರ (ಎಂಬ ಮನೆತನದ - ?) ಕಮ್ಮೊರ ಎಂಬ ವ್ಯಕ್ತಿಯ ಮೈದುನ ಕೊಡನ್ದಲೆ (ವಂಶದ) ಕಿತ್ತಯನು ರಟ್ಟವಾಡಿಯ ದಂಡು ಬಂದಾಗ ಊರಿನ ನಾಶವನ್ನು ತಡೆಯಲು ಹೋರಾಡಿ ಸತ್ತು  ಇನ್ದ್ರ ಲೋಕವನ್ನು ಸೇರಿದ = ? = ಸ್ವರ್ಗಸ್ತನಾದ. ಪ್ರಾಯಃ ವೀರನ ಬಂಧುಗಳಾದ ಪೆರ್ಗುನ್ದಿ ಮತ್ತು ಕಿರುಗುನ್ದಿ ತಮ್ಮ ಎಂಬುವರು ಕುಳ್ನಿರಿದ  (ಕುಳ್ + ನಿರಿದ = ಕುಳ್ಳರಿಸಿದ - ಸ್ಥಾಪಿಸಿದ)ಕಲ್ಲು ಇದಾಗಿದೆ." 
ಐದು ಸಾಲುಗಳಲ್ಲಿ ಶಾಸನದಲ್ಲಿ ಹೇಳಿರುವ ಕಥೆಯನ್ನು ಕಲ್ಪನೆಯಿಂದ ಪುಷ್ಟಿಗೊಳಿಸಿ 'ಕಿತ್ತಯನ ಕನಸು' ಎಂಬ ಕೆಥೆಯನ್ನಾಗಿ ರಚಿಸಲಾಗಿದೆ. 
 ಕಥೆಗೆ ತಕ್ಕಂತೆ ಗಂಗರ ಕಾಲದ ಶಿಲ್ಪಗಳನ್ನು ಅಳವಡಿಸಿಕೊಂಡು ಕಥೆಗೆ ಕೊಲಾಜ್ ಶೈಲಿಯ ಚಿತ್ರಗಳನ್ನು ರಚಿಸಲಾಗಿದೆ. 
ಕಿತ್ತಯನನ್ನು ನೀವೂ ಒಮ್ಮೆ ಭೆಟ್ಟಿಯಾಗಿ. ನಮ್ಮ ಇತಿಹಾಸ, ಕಲಾಚಾರ, ಅಂದಿನ ಆಡಳಿತಲ್ಲಿಯ ವಾಣಿಜ್ಯ, ನೀರಾವರಿ ವ್ಯವಸ್ಥೆ, ಅಷ್ಟೇ ಏಕೆ ನಮ್ಮ ಮೂಲಗಳನ್ನೂ ಸಹ  ಹೇಳುವ ವೀರಗಲ್ಲುಗಳ ಬಗ್ಗೆ ಅಧ್ಯಯನಮಾಡಿ ಸಂರಕ್ಷಿಸಿ.  ಜ್ಞಾನಕೋಶವಾಗಿರುವ ಇಂತಹ ಕಲ್ಲುಗಳಿಗೆ ತಕ್ಕಂತಹ ಸ್ಥಾನ ಮಾನ ಗೌರವಗಳನ್ನು ನೀಡಿ ಅವುಗಳ ಸಂರಕ್ಷಣೆಯ ಕಾರ್ಯಕ್ರಮದಲ್ಲಿ ಹೆಗಲು ಕೊಟ್ಟು ನೀವೂ ಬಾಗಿಯಾಗಿ.  

'girigitlay' 

************************************************************************

KITTAYYA’S  DREAM

( Original Kannada story “ Kittayana Kanasu”
  by Chitra Ramachandran .
  Translation and Illustrations : Vidya Murali )


What a glorious sight it was !
Festoons of  green leaves and colourful flowers swaying  in the breeze ;
The heraldic  sounds of Nagari pipes and celebratory drums reverberating all over town ;
Victorious Soldiers marching in procession , raising  jubiliant cries:
“ Glory be to the Permadi who broke the pride of the Pallavas !
Glory be to the Rajakesari SriVallabha Bheemakopa Ranabaajana   Ganga Raja !
Long Live our beloved King, Maharajadiraja Parameshwara Konguni Muttharasa Sripurusha ! Hail Hail ! The majestic Royal Elephant  strode victoriously,  carrying The King who was not only a kind, just and valorous monarch, but also the composer of “Gaja Shastra an excellent treatise on elephant rearing.

It was the Victory March of King Sripurusha  after defeating the armies of The Pallavas, The Rashtrakutas and The Pandyas who had been  repeatedly invading the Ganga territories. Gangavaadi was safe now. No invader  could stand up to the might of Permadi Sripurusha ! And here he was,  entering his Capital, Manyapura, on the back of his Royal Elephant, which looked as though the Royal Emblem itself had come alive !
What  a glorious sight it was !

Kittaya, watching the procession,  was awe struck and thrilled beyond words.
He had come to Manyapura to see his brother-in-law, Kammura,  a soldier who had fought in the recent war, and to participate in the victory celebrations.
Seeing the King’s  splendid procession, his mind was filled with a colourful Dream !
I want to become a brave soldier too ! Like Kammura, I must also fight heroically, win battles and  get awards   ! And I must gain the admiration of our Beloved King !
The dream , that sprouted as a thought in his mind , took root and grew into a huge, unshakeable ambition by the time Kittaya returned  to Perbolalu town.
Once home, he shared his dream with his father.
His father, the village adminstrator, smiled at the boy and patted his back affectionately : “ yes, yes ! Why not ! 
The Administrator was proud of his Son -In -Law Kammura’s accomplishment and would certainly be more proud if his own son, Kittaya, became an accomplished soldier and brought  glory to their Kodandale  clan !
Father’s encouragement added fuel to the  boy’s  ambition and his glorious dream grew by leaps and bounds.

“ O Son ! Lost in thought again ! Drink this ambali and take the cows to graze . Look , they  are getting restless.
Mother’s loving voice pulled Kittaya out of his daydreaming.
“ yes , Avva ”.
“ You are becoming very distracted these days” said Mother, “If you continue  like this, how can we send you to The Selection  the next time  the army comes for recruiting  ? 
“ Avva ! What are you saying ! ??  Kittaya jumped up, astounded.
She laughed and ruffled his hair “ Yes, My Child ! Your Father has sent a request to Pernagattarasa about your recruitment. Its almost certain you will be inducted into the army  ! ........till then , leave your daydreams in that  basket and go graze the cows , dear ! 

The Kingdom of Gangavaadi , ruled by Emperor Sripurusha , was a very huge territory. For efficient administration, it was divided into smaller units, each under a Governor appointed by the king. Pernagattarasa was responsible for Perbolalu - 30, a region comprising 30 villages. A word to him was as good as an Appointment order !
Kittaya’s joy knew no bounds. He wanted to share this good news with his friends immediately.
He gulped down the ambali, gathered his  staff, bow and arrows and drove the cows to the pastureland.

The efficient and benevolent Ganga Raja had made all facilities for his subjects  to pursue agriculture and trade profitably. His water management policies saw to it that many  tanks and canals made the land lush and fertile in all seasons.
Perbolalu , the tank that gave the district its name Perbolalnaadu, was very huge  and brimming with fresh water which rose in little silvery waves when it got breezy. All around it were cultivated fields, pastures, orchards of mango and tamarind  and shady woods. Farther lay the rocky hills,  beyond which all was jungle land.


The pasture north of the tank was where the boys of the town took their cows to graze. Kittaya and his friends, Mari, Guna, Naga, Siva, Madhava, Ranna and Mara would leave their cows in the grass and gather under the huge old tree to chat about their doings and dreams.
The boys loved weaponry and idolised soldiers.
All of Kittaya’s friends were greatly impressed by the idea of his dreams coming true soon. They too shared such ambitions and agreed when Kittaya said mere dreams would not be enough. They needed physical fitness and  training in handling weapons.
Everyday, the boys trained themselves with good exercises and practiced combat, spear throwing  and swords fighting , using their shepherding staff as the weapons. They also learnt to shoot arrows expertly as they were used to handling bamboo bows and arrows since childhood. Seeing Kittaya’s enthusiasm, his brother-in-law had even presented a real bow and arrow set to him, so practice was for real.
Since the rich land of Gangavaadi was always the target of its enemies,  who made repeated attempts to invade, its Army  had to be ever on alert. The military experts Pergundi and Kirugundi  put the soldiers through drills   everyday on the grounds by the Fort, to keep them ever ready for battle. This is where the boys had watched them and learnt the techniques. Kittaya was the keenest learner  of all  and soon became the leader teaching his friends.

Father and Mother were proud to see their son becoming muscular, fit and energetic. Mother, fearing Evil Eye on her son, cracked her knuckles over him, while Father congratulated him “ You will make a wonderful soldier my boy ! 
“ ...and when will that day arrive ! I cant wait for it !  sighed the impatient boy.
“ Soon  said Father.

When Kittaya shared this with his friends, some of them were sad.
“ When  you become a soldier, will you leave our town  ? 
“ Why should I ? I will fight a war, win and return. Perbolalnaadu is my Home. 
“ Lucky you !  sighed Mara “ Your father supports your dream. My father gave me an earful - ‘ just look after our vast fields and lands, eat well and live like a happy prince here itself. Of what use is soldiering to you !’he says ! Mara sulked.
“ Kittaya’s father will be proud to see him fight for the king. Your father will be proud to see you eat and be merry like a king!Laughed Siva.
“ Why not we all eat and be merry now !  declared Guna , opening his bundle, “ Avva has sent some kajjaya for us all .....here, enjoy !
The boys sat around enjoying the snack and sharing stories. A cool breeze blew over the water, bearing scents of wild flowers. Unseen birds sent out calls to each other, while a stork waited silently for fish.
Suddenly, shattering this peace, came the sharp sound of confusion. 
The startled boys jumped  up : “ Whats that ! 
“Our  cows ! 
“ By the way their bells are jangling , looks like they are in panic! 
“ A leopard, perhaps ! .....or wild boars ! .....”
Kittaya leapt up the tree and quickly crawled to the end of the highest branch. He looked all around and spotted a cloud of dust kicked up by the rushing cows. As the thick dust settled a bit, he could see what looked like a line of men holding spears and shields coming from behind a hillock. Behind them, barely visible, were foot soldiers !

Kittaya’s heart froze for a moment. “ Ayyo ! What is this ? Who are they ? ? .....our kingdom has just  sat down to rest after  a war ....an invasion again !!! .....” His throat went dry and his legs buckled under him as he jumped down :  ‘How could  they sneak in without getting noticed ?! ‘
His bewildered friends were trying to catch the cows that  were all thundering towards the town in utter panic.
“ What is it Kittaya ? ....whats happening ?..”
 “ Invaders  ! Enemies are here ! 
“ Invaders ?..Run ...Run...” Cried the boys.
“ Yes ! Run, everyone ! Shouted Kittaya, “ Run as fast as you can to the town and alert everyone !”
“ And you , Kittayya ? Why are you not running ? 
“ I will keep watch here and fight them off, till our army arrives !
“ Ayyo ! How is that possible ? Your legs can hardly hold you up! 
“ Possible ! Everything is Possible ! This is a real bow with real arrows given by my Bava ( brother-in-law ). And I can shoot ! .....and I have my staff  and baton too ! Kittaya, gathered his things and stood up.
“ I too have a staff and this bamboo bow  !  said Mara , “ and I will stay back with you ! 
“ No ! You have to go back. Obey your father’s wishes, Mara. These fights are not for you . Go, and be careful as you go . 
Kittaya forced all his friends to leave.

As soon as the cows rushed into town, all the people became alert. The news of invaders, given by the boys who followed the cows, reached the  army head quarters in no time. The soldiers sprang to action and started gathering  at Perbolalu.

Meanwhile at the pasture, Kittaya had already shot and downed a few invaders  who had come nearer.
As a flank of soldiers  advanced, searching for the source of the deadly arrows, Kittaya jumped down with a ferocious howl “Hoooyyyyy!!!”

Just as the startled soldiers prepared to fall upon him, Kittaya spun like lightning. Turning his baton like a wheel, he cleared a space all around himself and those who were able to get near were kicked in the stomach by him so powerfully that they staggered and fell backwards. His long staff sliced across, disabling three or four at a time.

Very soon, a battallion of Ganga soldiers flooded  the scene like a wild,  roaring sea. The invading Rattavadi men were bashed soundly and beaten back.
Seeing the Ganga armymen  filled Kittaya with more energy and he fought with renewed vigour.
By this time, a group of Rattavadi cavalry men had entered the fray, to face the Gangas who seemed to have appeared by magic.
Furiously fighting Kittaya noticed a horseman approaching him with a drawn sword.
‘ I need to disable  that horse first and I can then tackle the man easily ...’
He positioned his bow and shot an arrow straight at the horseman advancing towards him. The arrow hit the horse in the chest and it crashed down with a neigh, throwing off the rider. But before  it fell, the rider’s sword plunged into Kittaya. Reacting instantaneously, Kittaya sent his baton spinning at the enemy, knocking him out.
Then he sank to the ground.
Kittaya, The Dreamer, became a martyr.

The Ganga Army fought well and chased the Rattavadi invaders out of the kingdom’s boundaries. The battle was won.
Though it was a moment of pride, the loss of Kittaya’s life caused great pain among the people. They mourned for the brave boy and praised him as a Veera, hero.


News of his bravery spread all through the kingdom. Upon the advise of the king, Pernagattarasa had a Veeragal ( Herostone) carved and inscribed  for Kittaya.
Pergundi and Kirugundi installed the Veeragal, with all state honours, at the place most loved by Kittaya : the banks of Perbolalu. 
--------------------------------------------------------------------------

Epilogue
This is a work of fiction, written for children, pre-teens and anyone with a child’s sense of wonder, using only the names and scene  given in the Hebbal Inscription Stone.