Friday, February 28, 2014

Sooji Subba Raayana Kathe.

                                ಸೂಜಿ ಸುಬ್ಬ ರಾಯನ  ಕಥೆ 

" ಅಜ್ಜಿ! ಅಜ್ಜಿ ! ಬತ್ತದ ರೂಮಲ್ಲಿ ಈ ಪುಸ್ತಕ ಸಿಕ್ತು ! " ಪುಟ್ಟಿ ಉತ್ಸಾಹದಿಂದ ಕೂಗುತ್ತ ಓಡಿ  ಬಂದಳು . 

" ಅಯ್ಯೋ ! ಅಲ್ಲೆಲ್ಲ ಬರಿ ಧೂಳು ! ನೀನ್ಯಾಕೆ ಅಲ್ಲಿಗ್ ಹೋಗಿದ್ದೆ   ?"

" ತಾತ ಅಲ್ಲಿ ಕ್ಲೀನ್ ಮಾಡಿಸ್ತಿದ್ರು ಅಜ್ಜಿ. ನಾನು ಅಟ್ಟ ಹತ್ತ್ತಿ ನಿನ್ ಹಳೇ ಟ್ರಂಕ್ನ ಕೆದಕ್ತಿದ್ದಾಗ  ಈ ಪುಸ್ತಕಾ ಸಿಕ್ತು ! ತಗೊಂಡ್ಬಂದೆ ! ಎಷ್ಟ್ ಚೆನ್ನಾಗಿದೆ ನೋಡಜ್ಜಿ ಕಥೆ ಪುಸ್ತಕ !" ಪುಟ್ಟಿ ಆ ಹಳೇ ಪುಸ್ತಕದ  ಹಾಳೆಗಳನ್ನು ತಿರುವಿ ಹಾಕುತ್ತ ಹೇಳಿದಳು . 

" ಆ  ಪುಸ್ತ್ಕ  ಬರೆದು ಚಿತ್ರಗಳ್ನೂ ಬಿಡ್ಸಿ ಬೈಂಡ್ ಮಾಡಿದ್ದು ಯಾರು ಅಂದ್ಕೊಂಡೆ ? ಎಲ್ಲ ನಿಮ್ಮಜ್ಜಿನೇ !" ಎನ್ನುತ್ತಾ ಪ್ರತ್ಯಕ್ಷರಾದರು ತಾತ . 

" ಹೌದಾ ಅಜ್ಜಿ?" ಪುಟ್ಟಿ  ಆಶ್ಚರ್ಯದಿಂದ   ಕೇಳಿದಳು . 

" ಹೌದು ಪುಟ್ಟಿ.  ನಾನು ಚಿಕ್ಕವಳಿದ್ದಾಗ  ನನ್  ಮೆಡ್ರಾಸ್ ತಾತ ತುಂಬಾ  ಕಥೆಗಳ್ನ  ಹೇಳ್ತಿದ್ರು. 'ಊಸಿ ಪುಳ್ಳೆ ನಾಚಿಯಾರ್'- ಅಂದ್ರೆ 'ಸೂಜಿ ಸುಬ್ಬ ರಾಯ' ಅನ್ನೋ   ಕಥೆ ನನ್ಗೆ ತುಂಬಾ ಇಷ್ಟ ಆಗಿತ್ತು . ನಿಮ್ಮಪ್ಪ ಚಿಕ್ಕಪ್ಪ ಸರಸು ಎಲ್ರೂ ಮಕ್ಳಾಗಿದ್ದಾಗ ಅವ್ರಿಗೆಲ್ಲ  ಈ ಕಥೆ ಹೇಳಿ, ಪುಸ್ತ್ಕಾನೂ ತಯಾರ್  ಮಾಡ್ಕೊಟ್ಟಿದ್ದೇ  ."

" ನನ್ಗೂ ಈ ಕಥೆ ಓದಿ ಹೇಳಜ್ಜಿ !" ಪುಟ್ಟಿ ಬಹಳ ಆಸಕ್ತಳಾಗಿ ಅಜ್ಜಿಯ ಬಳಿ ಕುಳಿತಳು. 

" ನಾನೂ ಈ ಕಥೆ ಕೇಳಿ ಬಾಳ ದಿವ್ಸ ಆಯ್ತು . " ಎನ್ನುತ್ತಾ ತಾತ ಕೂಡ ಅಲ್ಲೇ ಕುಳಿತರು . 

ಅಜ್ಜಿ ಕಥೆ ಓದಲು ಪ್ರಾರಂಭ ಮಾಡಿದಳು . 


                                                     


 ಹಿಂದಿನ ಕಾಲದ ಮಾತಣ್ಣಾ 
 ಸಣಕಲ ಹುಡುಗನ  ಕಥೆಯಣ್ಣ !
 ಸಣಕಲ ಕಡ್ಡಿ ಸುಬ್ಬಣ್ಣಾ ,  
 ಸಕಲರಿಗೂ ಆವ ಮುದ್ದಣ್ಣಾ !
 ಸೂಜಿ ಗಾತ್ರದ ಒಡಲಣ್ಣಾ  
 ಅವನೇ ಸೂಜಿ ಸುಬ್ಬ ರಾಯನಣ್ಣ !                                                     


  ಹಾಡಲು   ಕುಣಿಯಲು ಆಡಲು ಇಷ್ಟ ,
  ಸೂಜಿಗೆ ಸುಮ್ಮನೆ  ಕೂರಲು  ಕಷ್ಟ !
  ತುಂಟ  ಸುಬ್ಬ ರಾಯನು  ಮಾತಿನ ಮಲ್ಲ,
  ಅಂಜಿಕೆ  ಹೆದರಿಕೆ ಎಳ್ಳಷ್ಟೂ  ಇಲ್ಲ  !
   
                                                   
   

 ಕಾಡಾಚೆಯಲ್ಲೊಂದು ಹಳ್ಳಿ ,
 ಅಜ್ಜಿಯ ವಾಸವು  ಅದರಲ್ಲಿ  !
 ಅಜ್ಜಿಯ  ಪ್ರೀತಿಯ ನೆನಪಿನಲ್ಲಿ, 
 ಸೂಜಿ ಸುಬ್ಬ ಹೊರಟನು  ಮುಂಜಾವಿನಲಿ!

                                                   
 

  ಜಿಗಿಯುತ  ನೆಗೆಯುತ   ಉತ್ಸಾಹದಲ್ಲಿ ,
   ಸೂಜಿ ಸುಬ್ಬ ನಡೆದನು  ಕಾಡಿನಲ್ಲಿ !
  ಥಟ್ಟನೆ ಎರಗಿದ ಹುಲಿಯೊಂದು , 
  ಗರ್ಜಿಸಿ ಕೇಳಿತು ಸಂದೇಹಗೊಂಡು  !
  "ಯಾರದು ಕಾಡಲ್ಲಿ ನಡೆದಿರುವೇ   ?
   ನಾ ನಿನ್ನ ಕೂಡಲೇ  ನುಂಗಿಬಿಡುವೆ  !''

" ಗರ್ರ್ !"

" ಅಯ್ಯೋ! "  ಕಥೆಯಲ್ಲಿ ತಲ್ಲೀನಳಾಗಿದ್ದ ಪುಟ್ಟಿ, ಹಿಂದಿನಿಂದ ಕೇಳಿಸಿದ ಗರ್ಜನೆಯಿಂದ  ಬೆಚ್ಚಿ  ಕಿಟಾರನೆ ಕಿರುಚಿದಳು.  

" ಪುಟ್ಟಣ್ಣ ! ಹಾಗೆಲ್ಲಾ ಹೆದರಿಸ್ಬಾರ್ದು ಕಣೋ ಮಗೂನ ! " ಎನ್ನುತ್ತ  ಪುಟ್ಟಣ್ಣನ ಕಿವಿ ಹಿಂಡಿದರು ತಾತ.  ಸದ್ದಿಲ್ಲದೇ ಪುಟ್ಟಿಯ ಹಿಂದೆ ಕಥೆ ಕೇಳುತ್ತ ಕುಳಿತಿದ್ದು, ಪುಟ್ಟಿಯನ್ನು ಬೆದರಿಸಿದ್ದ ಆವ.  

" ಅಯ್ಯೋ ! ಸುಮ್ನಿರೋ  ಅಣ್ಣಾ ! ಆಮೇಲೇನಾಯ್ತು ಅಜ್ಜಿ? ಸೂಜಿ  ಸುಬ್ಬ  ಎನ್ ಮಾಡ್ದಾ ?" ಪುಟ್ಟಿ ಅಜ್ಜಿಯ ಮಡಿಲಲ್ಲಿ ಮೊಳಕೈಗಳನ್ನು  ಊರಿಕೊಂಡು  ಕಾತರದಿಂದ ಕೇಳಿದಳು . 

" ಸೂಜಿ ಸುಬ್ಬ  ನಿನ್ಹಾಗೆ ಹೆದರ್ಪುಕ್ಳು ಅಂದ್ಕೊಂಡ್ಯಾ ?"  ಎಂದು ಕೆಣಕಲು ಎತ್ನಿಸಿದ  ಪುಟ್ಟಣ್ಣ .  ಅವನನ್ನು  ಲೆಕ್ಕಿಸದೆ  ಅಜ್ಜಿಯನ್ನು ಕುರಿತು "ಮ್ , ಆಮೇಲ?" ಎಂದಳು ಪುಟ್ಟಿ . 

                                                   ೫

   ಹೆದರದೆ ಬೆದರದೆ ಉತ್ತರಿಸಿದ
   ಕಿರುನಗೆ ಬೀರಿದ  ಸೂಜಿ ಸುಬ್ಬ ! 
   "ಹುಲಿಯಣ್ಣ ಕೇಳಣ್ಣ, 
   ಸೂಜಿ ಸುಬ್ಬ ರಾಯ ನಾನಣ್ಣ . 
   ಸವಿಯಲು ತವಕಿಸಿ ಹೊರಟಿಹೆ  ನಾ  ,
   ಅಜ್ಜಿಯ ಕೈ  ಸವಿಯೂಟವನ್ನ! 
   ಕೇಸರಿ ಬಾತು  ಪೊಂಗಲ್ ವಡೆ 
   ತಿಂದು ಕೊಬ್ಬಿ ನಾ ಹಿಂದಿರುಗುವೆ ! 
   ಈ  'ಸೂಜಿ' ನೀನೀಗ  ನುಂಗಿದರೆ, 
   ಗಂಟಲಿಗೆ ಚುಚ್ಚಿಕೊಂಡು ಬಲು ತೊಂದರೆ!" 

" ಸಾಕು ಪುಟ್ಟಿ . ಹೋಮ್ ವರ್ಕ್ ಮಾಡಿ ಊಟ ಮಾಡು . " ಅಮ್ಮ ಕರೆದಳು .  

" ಇರಮ್ಮಾ ! ಅಜ್ಜಿ ! ಇನೊಂದೇ ಒಂದು ಪೇಜ್ ಓದೋಣ ... " 

" ಸಾಕು ಪುಟ್ಟಿ . ತಾತನ್ಗೆ ಪಲ್ಹಾರ ಕೊಡ್ಬೇಕು . ನಾಳೆ ಓದೋಣ. ಈಗ 
ಸಸೇಷ !" ಎನ್ನುತ್ತಾ ಎದ್ದಳು ಅಜ್ಜಿ . 

ಪುಟ್ಟಿ ಮನಸ್ಸಿಲ್ಲದೆ ಎದ್ದಳು . 

ಅಂದು ರಾತ್ರಿ ಸೂಜಿ ಸುಬ್ಬ ರಾಯನ ಕಥೆ ಪುಸ್ತಕವನ್ನು ದಿಂಬಿನ ಕೆಳಗಿಟ್ಟು ಮಲಗಿದಳು  ಪುಟ್ಟಿ. ಸೂಜಿ ಸುಬ್ಬ ರಾಯನ ಕಥೆ ಬಣ್ಣದ  ಸಿನೆಮಾ ಹಾಗೆ ಕನಸಲ್ಲಿ ಚಲಿಸ ತೊಡಗಿತು !   


Tuesday, February 18, 2014

ಮೊಗ್ಗಿನ ಜಡೆ ! /Moggina Jade

ಮೊಗ್ಗಿನ ಜಡೆ !

ಹೂವು ಹೂವು ಬಣ್ಣದ  ಹೂವು !
ಬುಟ್ಟಿಯ ತುಂಬ ಚೆಂದದ ಹೂವು !
ಚಮ ಚಮ ಅರಳಿದ ಸೇವಂತಿಗೆ ಹೂವು !
ಘಮ ಘಮ ಸೂಸುವ ಗುಂಡು ಮಲ್ಲಿಗೆ ಹೂವು !
ಕಿಡಿ ಕಿಡಿ ಕೆಂಡವೋ ಕೆಂಡಸಂಪಿಗೆ ಹೂವು !
ಗುಲ್ಕಂದಿನ ಸವಿ ಗುಲಾಬಿ ಹೂವು !
ರಂಗುರಂಗಿನ ಸ್ಪಟಿಕದ ಹೂವು!
ಶಂಕು  ಪುಷ್ಪವೀ  ನೀಲಿ ಹೂವು !
ಕಿತ್ತಳೆ ಬಣ್ಣದ ಕನಕಾಂಬರ ಹೂವು !
ನೇರಳೆ ವರ್ಣದ  ರುದ್ರಾಕ್ಷಿ ಹೂವು !
ಹೂವು ಹೂವು ಬಣ್ಣದ ಹೂವು !
ಬುಟ್ಟಿಯ ತುಂಬ ಚೆಂದದ ಹೂವು ! 

ಬುಟ್ಟಿಯ ತುಂಬ ತೋಟದಿಂದ ಕಿತ್ತು ತಂದಿದ್ದ  ಹೂವುಗಳನ್ನು ತನ್ನ ಮುಂದೆ ಗುಡ್ಡೆ ಹಾಕಿಕೊಂಡು  ಅಜ್ಜಿ ಆನಂದದಿಂದ ಹಾಡಿದಳು . " ಘಮ ಘಮ ಚಮ ಚಮ  ಹಾಡು ತುಂಬಾ ಚೆನ್ನಾಗಿದೆ ಅಜ್ಜಿ!" ಅಜ್ಜಿ ಕೆನ್ನೆಗೆ ಮುತ್ತಿಟ್ಟು ಪುಟ್ಟಿ  ಹೂವುಗಳನ್ನ ವಿಂಗಡಿಸಿ  ಬೇರೆ ಬೇರೆ ತಟ್ಟೆಗಳಲ್ಲಿಟ್ಟಳು.  
  
  "ಬಾಳೇ ತೊಗಟೆ ನಾರು ತರಕ್ಕೆ  ಎಷ್ಟ್ ಹೊತ್ತು ಮಾಡ್ತಿದ್ದಾಳೆ ಈ ರಾಣಿ! ಲೋ ! ಪುಟ್ಟಣ್ಣ ! ತೋಟದ ಕಡೆ ಹೋಗಿ ಅವಳನ್ನ ಬೇಗ ಬಾ ಅನ್ನು .'' 

ತನ್ನ ಪಾಡಿಗೆ ಎಲ್ಲಿಗೋ ಬರ್ರೆಂದು ಓಡುತ್ತಿದ್ದ ಪುಟ್ಟಣ್ಣ ಬ್ರೇಕ್ ಹಾಕಿದಂತೆ ನಿಂತ .
" ಯಾಕಜ್ಜಿ ನಾರು, ತೊಗಟೆ ?" ಎಂದು ಕುತೂಹಲದಿಂದ ವಿಚಾರಿಸಿದ . 

" ಪುಟ್ಟಿಗೆ ಇವತ್ತು ಮೊಗ್ಗಿನ್  ಜಡೆ ಹಾಕ್ತಿನೊ ಮರಿ!" ಎಂದಳು ಅಜ್ಜಿ . ಮಲ್ಲಿಗೆ ಮೊಗ್ಗುಗಳನ್ನು ಆರಿಸಿಡುತ್ತಿದ್ದ ಪುಟ್ಟಿ ಜಂಬದಿಂದ ಬೀಗಿದಳು .

" ಅಯ್ಯೋ ! ಈ  ಕೋಡ್ಬಳೆಗೆ   ಮೊಗ್ಗಿನ್  ಜಡೆಯೇ ?" ಪುಟ್ಟಿಯ ಎತ್ತಿ ಕಟ್ಟಿದ್ದ ಎರಡು ಪುಟ್ಟ ಜಡೆಗಳನ್ನು ಎಳೆದು ಕೀಟಲೆ ಮಾಡಿದ ಪುಟ್ಟಣ್ಣ .

" ನೋಡಜ್ಜಿ ಪುಟ್ಟಣ್ಣ ಜಡೆ ಎಳಿತಾನೆ ! ಸರಸು ಅತ್ತೆ ಕಾಲೇಜ್ಗೆ ಹೋಗೋವಾಗ ಹೀಗೇ ಕಟ್ಕೊಂಡ್ ಹೋಗ್ತಾಳೆ ಅಲ್ವೇ ಅಜ್ಜಿ?"

" ಅತ್ತೆ ಜಡೆ ಚಾವಟಿ ಇದ್ದಂತೆ ! ಆದ್ರೆ ಇದು ? ಕೋಡ್ಬಳೆ ! ಕೋಡ್ಬಳೆ ! ಬಿಸಿ ಬಿಸಿ  ಕೋಡ್ಬಳೆ !  " ಎಂದು ಮತ್ತೆ ರೇಗಿಸಿದ   ಪುಟ್ಟಣ್ಣ . 

"ನೋಡಜ್ಜಿ !" ಪುಟ್ಟಿ ಮುಖ ಊದಿಸಿಕೊಂಡು  ರಾಗವೆಳೆದಳು . 

" ಲೋ ! ಯಾಕೋ ಅವಳನ್ನ ರೇಗಿಸ್ತಿಯ ? ನೋಡ್ತಿರು ! ಈಗ  ಕೋಡ್ಬಳೆ ಹೇಗೆ  ಚಾವಟಿ  ಆಗತ್ತೇಂತ !"

ಅಷ್ಟೊತ್ತಿಗೆ ರಾಣಿ ಬಾಳೆ  ನಾರು ತೊಗಟೆ ತಂದಳು . ತೊಗಟೆ ಸೀಳಿಟ್ಟು  , ನಾರು ಬಿಡಿಸಿ ನೀರಿಗೆ ಅದ್ದಿ ಸೂಜಿ ಪೋಣಿಸಿದಳು ಅಜ್ಜಿ. 

ಕುಣಿಕುಣಿಯೋ ಕೃಷ್ಣ ಕುಣಿಕುಣಿಯೋ !
ಫಣಿ ಫಣದಲಿ ನೀ 
ಠಣ ಠಣ ಕುಣಿದಂತೆ 
ಕುಣಿ ಕುಣಿಯೋ ಕೃಷ್ಣ 
ಕುಣಿಕುಣಿಯೋ !

ಹಾಲಲ್ಲಿ ಕುಳಿತು ಸರಸು ಅತ್ತೆಗೆ ಮೇಷ್ಟ್ರು  ಕಲಿಸುತ್ತಿದ್ದ ಹಾಡನ್ನ ತಾನೂ ಗುನುಗುತ್ತ, ಪುಟ್ಟಿ ತೆಗೆದು ಕೊಟ್ಟ ಮೊಗ್ಗುಗಳನ್ನು ಸೀಳಿದ್ದ ಬಾಳೆ  ತೊಗಟೆಗೆ ಟಾಕು ಹಾಕ ತೊಡಗಿದಳು ಅಜ್ಜಿ . ಸಂಗೀತ  ಪಾಠ ಮುಗಿಸಿ  ಸರಸು ಅತ್ತೆ ಎದ್ದು ಬಂದಾಗ ಮೊಗ್ಗಿನ ಜಡೆ ತಯಾರಾಗಿತ್ತು . 

" ಅಯ್ಯೋ ಅಯ್ಯೋ ! ಎಷ್ಟ್ ಚೆನ್ನಾಗಿದೆ ಮೊಗ್ಗಿನ್  ಜಡೆ !"

" ಸರಸು ! ಕುಚ್ಚು ಚೌರಿ ಎಲ್ಲ ತರ್ತಿಯಾ ?  ಪುಟ್ಟಿಗೆ ಜಡೆ ಹಾಕೋಣ !" ಎಂದಳು ಅಜ್ಜಿ.

  ಬಾಚಣಿಗೆ , ಕುಚ್ಚು , ಚೌರಿ ಎಲ್ಲ ತಂದು ತಾನೂ ಅಲ್ಲೇ ಕೂತಳು  ಸರಸು ಅತ್ತೆ. 

ಅಜ್ಜಿ ಅತ್ತೆ ಇಬ್ಬರೂ  ಸೇರಿ ಪುಟ್ಟಿಗೆ ತಲೆ ಬಾಚಿ, ಚೌರಿ ಕುಚ್ಚು ಸೇರಿಸಿ  ಉದ್ದ ಜಡೆ ಹೆಣೆದರು.  ಮೊಗ್ಗು ಜಡೆಯನ್ನು ಜಡೆಗೆ ಜೋಡಿಸಿ ಕಟ್ಟಿದರು . 

" ಬರಿ ಜಡೆ ಸಾಲ್ದು ಪುಟ್ಟಿ ! ತಡಿ ! ಕಣ್ಣಿಗೆ ಕಾಡ್ಗೆ , ಹಣೆಗೆ ತಿಲಕ, ಕೈ ಬಳೆ , ಕಾಲ್ಗೆಜ್ಜೆ ಎಲ್ಲ ಹಾಕ್ಕೋಬೇಕು ! "ಎಂದ ಅತ್ತೆ ಪುಟ್ಟಿಗೆ  ಎಲ್ಲ ಅಲಂಕಾರ ಮಾಡಿದಳು .

"ಜರತಾರಿ ಲಂಗಾನೂ ಹಾಕು ." ಎಂದಳು ಅಜ್ಜಿ. 

ಅಲಂಕಾರ ಮುಗಿಯಿತು . 

" ಎಷ್ಟ್ ಚೆನ್ನಾಗ್ ಕಾಣ್ತಿದ್ದೀಯ ಪುಟ್ಟಿ !" ಎನ್ನುತ್ತಾ  ಅಜ್ಜಿ ಪುಟ್ಟಿಯ ಮುಖ ನೀವಾಳಿಸಿ ದೃಷ್ಟಿ ಕಳೆದಳು .  

ಪುಟ್ಟಿಗೆ ನಾಚಿಕೆ !  ಎದೆ ತುಂಬಿದ ಸಂತೋಷ !

" ವಾರೆ ವಾ ! ಕೋಡ್ಬಳೆ ಚಾವಟಿ ಆಗೇ ಬಿಟ್ಟಿದೆ ! ಎಂತಾ ಮ್ಯಾಜಿಕ್ಕು !" ಎಂದ ಪುಟ್ಟಣ್ಣ . 

ತಾತ, ಅಪ್ಪ, ಅಮ್ಮ ಎಲ್ಲರೂ ಅಲಂಕಾರವಲ್ಲಿಯಾಗಿದ್ದ ಪುಟ್ಟಿಯನ್ನು  ಕೊಂಡಾಡಿದ್ದೂ ಕೊಂಡಾಡಿದ್ದೆ ! 

ಸರಸು ಅತ್ತೆ ಗುಡು ಗುಡು ಓಡಿ ಹೋಗಿ ತನ್ನ  ಅಗ್ಫಾ  ಪೆಟ್ಟಿ ಕ್ಯಾಮರಾ ತಂದು ಬಗೆ ಬಗೆ ಬಂಗಿಗಳಲ್ಲಿ  ಪುಟ್ಟಿಯನ್ನು ನಿಲ್ಲಿಸಿ ಫೋಟೋ ತೆಗೆದಳು . " ಪುಟ್ಟಿ ! ತುಂಬಾ ಚೆನ್ನಾಗ್ ಕಾಣ್ತೀ ಮರಿ !   ರಾಧೆ ಹಾಗೆ !  'ಕೃಷ್ಣಾ ನೀ ಬೇಗನೆ ಬಾರೋ' ಹೇಳ್ತೀನಿ . ಒಂದ್ ಡ್ಯಾನ್ಸ್ ಮಾಡು ನೋಡೋಣ !" ಎಂದಳು ಅಜ್ಜಿ .

" ಹೋಗಜ್ಜಿ !  ಆ ಹಾಡು ಬೇಡ ! ಘಮ ಘಮ ಆಯ್ತು ! ಅತ್ತೆ ಠಣ ಠಣ ಹೇಳಿದ್ಳು ! ನಾನು ಝಣಾ  ಝಣಾ  ಝಣಾ  ಹೇಳ್ತಿನಿ . "

ಝಣಾ ಝಣಾ  ಝಣಾ ,
 ಜೇಬು  ತುಂಬ ಹಣ !
ಮೇಲಕ್ಕೆತ್ತಿ  ಬಿಡಲು ಸದ್ದು 
ಟಣ್  ಟಣಾ ಟಣಾ !

 ನದಿಯಲ್ಲೊಂದು ಬಕ ,
 ಮುದುರಿಕೊಂಡು ಮುಖ,
ಕಾಲನ್ನೆತ್ತಿ  ಕುಣಿಯುತ್ತಿತ್ತು 
ತೈ ತಕಾ ತಕಾ !

ಸುತ್ತ ಹಸಿರು  ವನ,
ನಡುವೆ  ಮೇವ ದನ , 
ಕೊಳಲನೂದಿ ಗೊಲ್ಲನೊಬ್ಬ 
ತಾನ ನಾನ ನಾ !

ಪುಟ್ಟಿ ಅಭಿನಯದೊಡನೆ ಹಾಡಿ ಮುಗಿಸಿದಳು .  ಎಲ್ಲರೂ ಸಂತೋಷದಿಂದ ಚಪ್ಪಾಳೆ ತಟ್ಟಿದರು .

 ಅಂಬೆಗಾಲಿಟ್ಟು ಪುಟ್ಟಿಯ ಬಳಿ ಸರ ಸರ ಬಂದ ಪಾಪು , ಅವಳ ಲಂಗ ಹಿಡಿದುಕೊಂಡು ಎದ್ದು ನಿಂತು ತಾನೂ ತೈ ತಕ ಕುಣಿಯಿತು . ಪುಟ್ಟಿಯ ಮುಖದ ತುಂಬ ಸಂತೋಷದ ಹೂವು ಅರಳಿತು ! 

Sunday, February 9, 2014

ಕರಡಿ ಬೆಟ್ಟಕ್ಕೆ ಹೋಯಿತು

ಶಿಬಿರಾಗ್ನಿ ಕಾರ್ಯಕ್ರಮದಲ್ಲಿ ಪುಟ್ಟಿ !

 ಪುಟ್ಟಣ್ಣ ಒಬ್ಬ ಬಾಯ್ ಸ್ಕೌಟ್ .  ಶಾಲೆಯಲ್ಲಿ ನಡೆಯಲಿದ್ದ ಶಿಬಿರಾಗ್ನಿ ಕಾರ್ಯಕ್ರಮದಲ್ಲಿ ಬಾಗವಹಿಸಲು  ಮಧ್ಯಾಹ್ನವೇ ಆತ  ಗಡಿಬಿಡಿಯಿಂದ  ಹೊರಟು ಹೋಗಿದ್ದ. ಮನೆಯವರಿಗೆಲ್ಲ  ಆಹ್ವಾನವಿತ್ತು.  ಅಪ್ಪ ಬರುವುದನ್ನೇ ಕಾದಿದ್ದು , ಪಾಪುವನ್ನು ಅಜ್ಜಿಗೆ ಒಪ್ಪಿಸಿ, ಅಮ್ಮ ಪುಟ್ಟಿ ಇಬ್ಬರೂ ಅವರೊಡನೆ ಹೊರಟು ಶಾಲೆ ತಲುಪಿದಾಗ ನಕಲೀ  ಯುದ್ಧ ಮುಗಿದಿತ್ತು. ಸ್ಕೌಟ್ಗಳೆಲ್ಲ ಸೇರಿ ಡೇರೆಗಳನ್ನು ನಿರ್ಮಿಸಿ, ನಕಲೀ ಪೆಟ್ಟು ತಿಂದವರನ್ನ  ತಾವೇ ರಚಿಸಿದ ಕೈ ಮಂಚದಲ್ಲಿ ಒಯ್ದು ,  ಪ್ರಥಮ ಚಿಕಿತ್ಸೆ ನೀಡಿ ನಕಲೀ ಘಾಯಗಳಿಗೆ ತಾವು ಅಭ್ಯಾಸ ಮಾಡಿದ್ದ ಬ್ಯಾಂಡೇಜ್ ಪಟ್ಟಿಗಳನ್ನೂ ಕಟ್ಟುತ್ತಿದ್ದರು.  

 


" ಸ್ಕೌಟ್ಸ್ ಇದೆಲ್ಲ ಯಾಕಪ್ಪ ಮಾಡ್ತಾರೆ ?" ಕುತೂಹಲದಿಂದ ಕೇಳಿದಳು ಪುಟ್ಟಿ .
ಮೈದಾನದ ಸುತ್ತಲೂ ಹಾಕಿದ್ದ ಕುರ್ಚಿಗಳಲ್ಲಿ ಪ್ರೇಕ್ಷಕರಾಗಿ ಎಲ್ಲ ಹುಡುಗರ ತಂದೆ ತಾಯಂದಿರೂ ಸೋದರ ಸೊದರಿಯರೂ, ಇನ್ನಿತರರೂ    ಕುಳಿತಿದ್ದರು. ತಾವೂ ಒಂದು ಕಡೆ ಕುಳಿತುಕೊಂಡು ಪುಟ್ಟಿಗೆ ಸ್ಕೌಟಿಂಗ್ ಬಗ್ಗೆ ವಿವರಿಸಿದರು ಅಪ್ಪ. 

"ಇಂತಾ  ತರಬೇತಿಗಳಿಂದ  ಯುವಕರು  ಅಪಘಾತಗಳಾಗೋ   ಸಮಯಗ್ಳಲ್ಲಿ ಕಷ್ಟಕ್ಕೆ ಸಿಕ್ಕಿದವರ್ಗೆ  ಉಪ್ಕಾರ ಮಾಡ್ಬೋದು . ಜನರ ಸೇವೆ ಮಾಡ್ಬೋದು .  "

" ಅದಕ್ಕೇ  ಬೇರೆ ಬೇರೆ ಜನ ಇದ್ದಾರಲ್ಲ  ..ಪುಟ್ಟಣ್ಣ ಯಾಕೆ ಅದೆಲ್ಲ ಮಾಡ್ಬೇಕು ?"

" ಇದ್ದಾರೆ ಪುಟ್ಟಿ . ಆದ್ರೂ  ಪ್ರತ್ಯೊಬ್ಬ ಹುಡುಗನೂ ಕೂಡ ತನ್ನಿಂದಾದ ಸೇವೆಯನ್ನ ಮಾಡ್ಬೇಕು ಅನ್ನೋದೇ ಸ್ಕೌಟ್ಗಳ ಉದ್ದೇಶ. ಸ್ಕೌಟ್ಗಳು ಹೊರಾಂಗಣದಲ್ಲಿ ಜೇವಿಸೋದನ್ನ ಕಲೀತಾರೆ.  ಕಷ್ಟಗಳನ್ನ ಎದಿರ್ಸೋದನ್ನ ಕಲೀತಾರೆ.  ಸೊದರತ್ವದಿಂದ  ಇರೋದು , ಹಿತವಾಗ್ಮಾತಾಡೋದು , ಪರೋಪಕಾರ ಮಾಡೋದು , ಸ್ವಚ್ಛವಾಗಿರೋದು, ಶಿಸ್ತಿನಿಂದ ಇರೋದು, ಮೈಕೈಯನ್ನ  ಗಟ್ಟಿ ಮುಟ್ಟಾಗಿ ಇಟ್ಕೊಳ್ಳೋದು , ಬುದ್ಧಿಯನ್ನ  ಚುರುಕಗಿ  ಇಟ್ಕೊಳ್ಳೋದು , ಎಂತಾ ಪರಿಸ್ಥಿತಿಯಲ್ಲೂ   ಸ್ವಾಧೀನರಾಗಿರೋದು, ಒಳ್ಳೆ ನಡತೆಗಳನ್ನ ಕಲ್ಯೋದು, ಪರಿಸರವನ್ನ ಶುದ್ಧವಾಗಿಟ್ಕೋಳೋದು ಎಲ್ಲವನ್ನೂ ಸ್ಕೌಟ್ಗಳು ಕಲೀತಾರೆ. "

" ಅಪ್ಪ, ಅಪ್ಪ ..... " ಪುಟ್ಟಿಯ ಪ್ರಶ್ನೆಗಳಿಗೆ ಅಂತ್ಯವೇ  ಇರಲಿಲ್ಲ !  

" ಪುಟ್ಟಿ ! ಸುಮ್ನೆ ಕೂತ್ಕೊಂಡ್ ನೋಡು. ಶಿಬಿರಾಗ್ನಿ ಹಚ್ಚಿದ್ದಾರೆ  ನೋಡು . " ಅಮ್ಮ ಖಂಡನೆ ಮಾಡಿ ಪುಟ್ಟಿಯನ್ನು ಪಕ್ಕದಲ್ಲಿ  ಕೂರಿಸಿಕೊಂಡಳು  .

 ಸ್ಕೌಟ್ಗಳೆಲ್ಲ ಅಗ್ನಿ ಜ್ವಾಲೆಯ ಸುತ್ತ ವೃತ್ತಾಕಾರವಾಗಿ ಕುಳಿತರು. ಸ್ಕೌಟ್ ಹಾಡುಗಳನ್ನು ಹಾಡಲು ಶುರು ಮಾಡಿದರು . 


ಕುಂ ಬಯ್ ಯಾ  ಓ  ಒಡೆಯಾ ಕುಂ ಬಯ್ ಯಾ 
ಕುಂ ಬಯ್ ಯಾ  ಓ  ಒಡೆಯಾ  ಕುಂ  ಬಯ್  ಯಾ 
ಕುಂ ಬಾಯ್ ಯಾ ಓ ಒಡೆಯ ಕುಂ ಬಯ್ ಯಾ 
ಓ ಒಡೆಯ ಕುಂ ಬಯ್  ಯಾ . 

ಯಾರೋ ನಗುತಿಹರು ಕುಂ ಬಯ್ ಯಾ 
ಯಾರೋ ನಗುತಿಹರು ಕುಂ ಬಯ್ ಯಾ 
ಯಾರೋ ನಗುತಿಹರು ಕುಂ ಬಯ್ ಯಾ 
ಓ ಒಡೆಯಾ  ಕುಂ ಬಾಯ್  ಯಾ . 

ಯಾರೋ ಅಳುತಿಹರು ಕುಂ ಬಯ್ ಯಾ 
ಯಾರೋ ಅಳುತಿಹರು  ಕುಂ  ಬಯ್ ಯಾ 
ಯಾರೋ ಅಳುತಿಹರು ಕುಂ  ಬಯ್ ಯಾ
ಓ ಒಡೆಯಾ ಕುಂ ಬಯ್ ಯಾ. 

ಯಾರೋ ಪ್ರಾರ್ಥಿಸುವರು ಕುಂ ಬಯ್ ಯಾ 
ಯಾರೋ ಪ್ರಾರ್ಥಿಸುವರು ಕುಂ ಬಯ್ ಯಾ 
ಯಾರೋ ಪ್ರಾರ್ಥಿಸುವರು ಕುಂ ಬಯ್ ಯಾ 
ಓ ಒಡೆಯಾ ಕುಂ ಬಯ್ ಯಾ . 

ಯಾರೋ ಹಾಡುತಿಹರು ಕುಂ ಬಯ್ ಯಾ 
ಯಾರೋ ಹಾಡುತಿಹರು ಕುಂ ಬಯ್ ಯಾ 
ಯಾರೋ ಹಾಡುತಿಹರು ಕುಂ ಬಯ್ ಯಾ 
ಓ ಒಡೆಯಾ ಕುಂ ಬಯ್ ಯಾ . 

" ಇದೆಂತ ಹಾಡು ಅಪ್ಪಾ ?" ಪುಟ್ಟಿ ಆಶ್ಚರ್ಯದಿಂದ ಕೇಳಿದಳು.
"ಹಿಂದಿನ್  ಕಾಲ್ದಿಂದ ಈ ಹಾಡನ್ನ ಸ್ಕೌಟ್ಗಳು  ಶಿಬಿರಾಗ್ನಿ ಸುತ್ತ  ಕೂತು ಹಾಡ್ತಾ ಬಂದಿದ್ದಾರೆ . ಸ್ಕೌಟ್ಗಳು ಇಷ್ಟೆಲ್ಲಾ ಕಷ್ಟ ಪಟ್ಟು ವ್ಯಾಯಾಮಗಳ್ನೆಲ್ಲಾ ಮುಗ್ಸಿದ್ದಾರೆ ಅಲ್ವೇ?ಈಗ ಆರಾಮ್ವಾಗಿ  ಕೂತು ಮನೋರನ್ಜ್ನೆಗಾಗಿ  ಸಂತೋಷವಾಗಿ ಹಾಡ್ತಿದ್ದಾರೆ . ಹೀಗೆ ಗುಂಪಾಗಿ ಕೂತು ಹಾಡೋದ್ರಿಂದ ಸ್ಕೌಟ್ಗಳ ಸ್ನೇಹ, ಸೋದರತ್ವ ಇನ್ನಷ್ಟು ಘಾಡವಾಗತ್ತೆ . ಚಳಿಯೂ ದೂರ್ವಾಗತ್ತೆ . "

ಕತ್ತಲಾಗುತ್ತಾ  ಬಂತು . ಶಿಬಿರಾಗ್ನಿಯ ಜ್ವಾಲೆಯನ್ನ  ಕೆದಕಿ ತಣ ತಣ ಉರಿಸುತ್ತ ಹುಡುಗರು ಮತ್ತೊಂದು ಹಾಡು ತೆಗೆದರು . 

zoolu zamba ಲೂಲೂ ಲೂಲು ಮಾಚಿಕ 
ಲೂಲು ಮಾಚಿಕ , ಲೂಲು ಮಾಚಿಕ 
ಕೀಕಿ ಆಶುಕಾರಿ ಉಶ್ ಆಫ್ರಿಕ 
ಕೀಕಿ ಆಶುಕಾರಿ ಉಶ್ ಆಫ್ರಿಕ . 


ಒಂದು ಗುಂಪು ಈ ಹಾಡನ್ನು ಹಾಡಲು  ಇನ್ನೊಂದು ಗುಂಪು zoom  , zoom  , zoom  ಎಂದು ಲಯಬದ್ಧವಾಗಿ ಹಿನ್ನೆಲೆಯಲ್ಲಿ zoom ಗುಟ್ಟುತ್ತಿತ್ತು . ಆ ವರೆಗೂ ತಾನು ಕೇಳೇ  ಇಲ್ಲದ ಈ ಹಾಡುಗಳನ್ನು ಕೇಳಿ ಪುಟ್ಟಿಗೆ  ಬಹಳ ಖುಷಿಯಾಯಿತು .  ಉತ್ಸಾಹ ಎಲ್ಲೆ  ಮೀರಿ ತಾನೂ ಚಪ್ಪಾಳೆ ತಟ್ಟಿ  zoom  zoom  ಎನ್ನುತ್ತ ಕುರ್ಚಿಯಿಂದ ಎದ್ದು ನಿಂತಳು ಪುಟ್ಟಿ . 

ನಂತರ, ವಿಶ್ವ ಸ್ಕೌಟ್ ಸಂಸ್ಥಾಪಕ ಬೇಡನ್ ಪೋವೆಲ್ ಅವರು ಸ್ವತಃ ರಚಿಸಿದ್ದ ಹುರಿದುಂಬಿಸುವಂತಹ ಸ್ತುತಿ ಗೀತೆಯನ್ನ ಹಾಡ ತೊಡಗಿದರು ಸ್ಕೌಟ್ ಹುಡುಗರು . 

ಗಿಂಗ್ ಗ್ಯಾಂಗ್ ಗೂಲಿ ಗೂಲಿ ಗೂಲಿ ಗೂಲಿ ವಾಚ,  
ಗಿಂಗ್ ಗ್ಯಾಂಗ್ ಗೂ , ಗಿಂಗ್ ಗ್ಯಾಂಗ್ ಗೂ .
ಗಿಂಗ್ ಗ್ಯಾಂಗ್ ಗೂಲಿ ಗೂಲಿ ಗೂಲಿ ಗೂಲಿ ವಾಚ, 
ಗಿಂಗ್ ಗ್ಯಾಂಗ್ ಗೂ , ಗಿಂಗ್ ಗ್ಯಾಂಗ್ ಗೂ . 
ಹೈಲ, ಓ ಹೈಲ ಶೈಲಾ , ಹೈಲ ಶೈಲಾ, ಶೈಲಾ ಓಹ್  ಹೊ ,
ಹೈಲ, ಓ  ಹೈಲ ಶೈಲಾ, ಹೈಲ ಶೈಲಾ , ಶೈಲಾ ಓಹ್ 
ಶಾಲಿ ವಾಲೀ, ಶಾಲಿ ವಾಲಿ , ಶಾಲಿ ವಾಲಿ , ಶಾಲಿ ವಾಲಿ ,
ಊಂಫಾ  , ಊಂಫಾ, ಊಂಫಾ , ಊಂಫಾ . 

ಒಂದು ತಂಡ  ಹಾಡನ್ನು ಹೇಳುತ್ತಿರಲು ಮತ್ತೊಂದು ತಂಡ  'ಊಂಫಾ ಊಂಫಾ ಊಂಫ' ಎಂದು ಉತ್ತೇಜಿತಗೊಳಿಸುವಂತೆ ರಾಗವಾಗಿ ಉಚ್ಚರಿಸುತ್ತಿತ್ತು. ಪುಟ್ಟಿ ಮಾತ್ರವಲ್ಲದೇ  ವೀಕ್ಷಕರಾಗಿದ್ದ ಅನೇಕ ಮಕ್ಕಳು ತಾವೂ 'ಊಂಫಾ, ಊಂಫಾ, ಊಂಫಾ !' ಎನ್ನುತ್ತಿದ್ದವು.   

ಕೊನೆಯದಾಗಿ - 

ಕರಡಿ ಬೆಟ್ಟಕ್ಕೆ ಹೋಯಿತು ಕರಡಿ ಬೆಟ್ಟಕ್ಕೆ ಹೋಯಿತು 
ಕರಡಿ ಬೆಟ್ಟಕ್ಕೆ ಹೋಯಿತು ನೋಟ ನೋಡಲು . 

ನೋಡಿತೇನದು ? ಅದು ನೋಡಿತೇನದು ?
ಬೆಟ್ಟದ ಇನ್ನೊಂದು ಬಾಗ, ಬೆಟ್ಟದ ಇನ್ನೊಂದು ಬಾಗ 
ಬೆಟ್ಟದ ಇನ್ನೊಂದು ಬಾಗ ಕರಡಿ ನೋಡಿತು . 

ಮರವನೇರಿತು , ಕರಡಿ ಮರವನೇರಿತು 
ಕಿತ್ತು ತಂದಿತು , ಹಲಸು ಕಿತ್ತು ತಂದಿತು.  
ಜೇನು ಬೆರೆಸಿ ಮರಿಗೆ ಕೊಟ್ಟು - 
 ತಾನೂ  ತಿಂದು ತೇಗಿತು .  

ಕರಡಿ ಬೆಟ್ಟಕ್ಕೆ ಹೋಯಿತು ಕರಡಿ ಬೆಟ್ಟಕ್ಕೆ ಹೋಯಿತು 
ಕರಡಿ ಬೆಟ್ಟಕ್ಕೆ ಹೋಯಿತು ನೋಟ ನೋಡಲು. 


ಸ್ಕೌಟ್ ಹುಡುಗರೆಲ್ಲ ಚಪ್ಪಾಳೆ ತಟ್ಟುತ್ತ ಶಿಬಿರಾಗ್ನಿಯನ್ನು ಸುತ್ತಿ ಸುತ್ತಿ ಓಡುತ್ತಾ ಹಾಡಿದರು. ಪುಟ್ಟಿ ಕುಣಿದು ಕುಣಿದು ತಾನೂ ಅವರ ಜೊತೆ ಕರಡಿ ಬೆಟ್ಟಕ್ಕೆ ಹೋಯಿತು ಹಾಡನ್ನು ಜೋರಾಗಿ ಹಾಡಿದಳು . 

 ಕಾರ್ಯಕ್ರಮ ಮುಗಿದಾಗ ಪುಟ್ಟಿ , " ಅಪ್ಪ ನಾನೂ ಸಕೌಟ್ಗೆ ಸೇರ್ಕೋತೀನಿ ." ಎಂದು ಉತ್ಸಾಹದಿಂದ ಕುಣಿದಳು. 

" ಹೂಂ . ನೀನು ಬುಲ್ ಬುಲ್ಸ್ಗೆ ಸೇರ್ಬೊದು . ಆಮೇಲೆ ಗರ್ಲ್ ಗೈಡ್ ಆಗ್ಬೋದು.  " ನಗುತ್ತ ಹೇಳಿದರು  ಅಪ್ಪ.