Friday, February 28, 2014

Sooji Subba Raayana Kathe.

                                ಸೂಜಿ ಸುಬ್ಬ ರಾಯನ  ಕಥೆ 

" ಅಜ್ಜಿ! ಅಜ್ಜಿ ! ಬತ್ತದ ರೂಮಲ್ಲಿ ಈ ಪುಸ್ತಕ ಸಿಕ್ತು ! " ಪುಟ್ಟಿ ಉತ್ಸಾಹದಿಂದ ಕೂಗುತ್ತ ಓಡಿ  ಬಂದಳು . 

" ಅಯ್ಯೋ ! ಅಲ್ಲೆಲ್ಲ ಬರಿ ಧೂಳು ! ನೀನ್ಯಾಕೆ ಅಲ್ಲಿಗ್ ಹೋಗಿದ್ದೆ   ?"

" ತಾತ ಅಲ್ಲಿ ಕ್ಲೀನ್ ಮಾಡಿಸ್ತಿದ್ರು ಅಜ್ಜಿ. ನಾನು ಅಟ್ಟ ಹತ್ತ್ತಿ ನಿನ್ ಹಳೇ ಟ್ರಂಕ್ನ ಕೆದಕ್ತಿದ್ದಾಗ  ಈ ಪುಸ್ತಕಾ ಸಿಕ್ತು ! ತಗೊಂಡ್ಬಂದೆ ! ಎಷ್ಟ್ ಚೆನ್ನಾಗಿದೆ ನೋಡಜ್ಜಿ ಕಥೆ ಪುಸ್ತಕ !" ಪುಟ್ಟಿ ಆ ಹಳೇ ಪುಸ್ತಕದ  ಹಾಳೆಗಳನ್ನು ತಿರುವಿ ಹಾಕುತ್ತ ಹೇಳಿದಳು . 

" ಆ  ಪುಸ್ತ್ಕ  ಬರೆದು ಚಿತ್ರಗಳ್ನೂ ಬಿಡ್ಸಿ ಬೈಂಡ್ ಮಾಡಿದ್ದು ಯಾರು ಅಂದ್ಕೊಂಡೆ ? ಎಲ್ಲ ನಿಮ್ಮಜ್ಜಿನೇ !" ಎನ್ನುತ್ತಾ ಪ್ರತ್ಯಕ್ಷರಾದರು ತಾತ . 

" ಹೌದಾ ಅಜ್ಜಿ?" ಪುಟ್ಟಿ  ಆಶ್ಚರ್ಯದಿಂದ   ಕೇಳಿದಳು . 

" ಹೌದು ಪುಟ್ಟಿ.  ನಾನು ಚಿಕ್ಕವಳಿದ್ದಾಗ  ನನ್  ಮೆಡ್ರಾಸ್ ತಾತ ತುಂಬಾ  ಕಥೆಗಳ್ನ  ಹೇಳ್ತಿದ್ರು. 'ಊಸಿ ಪುಳ್ಳೆ ನಾಚಿಯಾರ್'- ಅಂದ್ರೆ 'ಸೂಜಿ ಸುಬ್ಬ ರಾಯ' ಅನ್ನೋ   ಕಥೆ ನನ್ಗೆ ತುಂಬಾ ಇಷ್ಟ ಆಗಿತ್ತು . ನಿಮ್ಮಪ್ಪ ಚಿಕ್ಕಪ್ಪ ಸರಸು ಎಲ್ರೂ ಮಕ್ಳಾಗಿದ್ದಾಗ ಅವ್ರಿಗೆಲ್ಲ  ಈ ಕಥೆ ಹೇಳಿ, ಪುಸ್ತ್ಕಾನೂ ತಯಾರ್  ಮಾಡ್ಕೊಟ್ಟಿದ್ದೇ  ."

" ನನ್ಗೂ ಈ ಕಥೆ ಓದಿ ಹೇಳಜ್ಜಿ !" ಪುಟ್ಟಿ ಬಹಳ ಆಸಕ್ತಳಾಗಿ ಅಜ್ಜಿಯ ಬಳಿ ಕುಳಿತಳು. 

" ನಾನೂ ಈ ಕಥೆ ಕೇಳಿ ಬಾಳ ದಿವ್ಸ ಆಯ್ತು . " ಎನ್ನುತ್ತಾ ತಾತ ಕೂಡ ಅಲ್ಲೇ ಕುಳಿತರು . 

ಅಜ್ಜಿ ಕಥೆ ಓದಲು ಪ್ರಾರಂಭ ಮಾಡಿದಳು . 


                                                     


 ಹಿಂದಿನ ಕಾಲದ ಮಾತಣ್ಣಾ 
 ಸಣಕಲ ಹುಡುಗನ  ಕಥೆಯಣ್ಣ !
 ಸಣಕಲ ಕಡ್ಡಿ ಸುಬ್ಬಣ್ಣಾ ,  
 ಸಕಲರಿಗೂ ಆವ ಮುದ್ದಣ್ಣಾ !
 ಸೂಜಿ ಗಾತ್ರದ ಒಡಲಣ್ಣಾ  
 ಅವನೇ ಸೂಜಿ ಸುಬ್ಬ ರಾಯನಣ್ಣ !



                                                     


  ಹಾಡಲು   ಕುಣಿಯಲು ಆಡಲು ಇಷ್ಟ ,
  ಸೂಜಿಗೆ ಸುಮ್ಮನೆ  ಕೂರಲು  ಕಷ್ಟ !
  ತುಂಟ  ಸುಬ್ಬ ರಾಯನು  ಮಾತಿನ ಮಲ್ಲ,
  ಅಂಜಿಕೆ  ಹೆದರಿಕೆ ಎಳ್ಳಷ್ಟೂ  ಇಲ್ಲ  !
   
                                                   
   

 ಕಾಡಾಚೆಯಲ್ಲೊಂದು ಹಳ್ಳಿ ,
 ಅಜ್ಜಿಯ ವಾಸವು  ಅದರಲ್ಲಿ  !
 ಅಜ್ಜಿಯ  ಪ್ರೀತಿಯ ನೆನಪಿನಲ್ಲಿ, 
 ಸೂಜಿ ಸುಬ್ಬ ಹೊರಟನು  ಮುಂಜಾವಿನಲಿ!

                                                   
 

  ಜಿಗಿಯುತ  ನೆಗೆಯುತ   ಉತ್ಸಾಹದಲ್ಲಿ ,
   ಸೂಜಿ ಸುಬ್ಬ ನಡೆದನು  ಕಾಡಿನಲ್ಲಿ !
  ಥಟ್ಟನೆ ಎರಗಿದ ಹುಲಿಯೊಂದು , 
  ಗರ್ಜಿಸಿ ಕೇಳಿತು ಸಂದೇಹಗೊಂಡು  !
  "ಯಾರದು ಕಾಡಲ್ಲಿ ನಡೆದಿರುವೇ   ?
   ನಾ ನಿನ್ನ ಕೂಡಲೇ  ನುಂಗಿಬಿಡುವೆ  !''

" ಗರ್ರ್ !"

" ಅಯ್ಯೋ! "  ಕಥೆಯಲ್ಲಿ ತಲ್ಲೀನಳಾಗಿದ್ದ ಪುಟ್ಟಿ, ಹಿಂದಿನಿಂದ ಕೇಳಿಸಿದ ಗರ್ಜನೆಯಿಂದ  ಬೆಚ್ಚಿ  ಕಿಟಾರನೆ ಕಿರುಚಿದಳು.  

" ಪುಟ್ಟಣ್ಣ ! ಹಾಗೆಲ್ಲಾ ಹೆದರಿಸ್ಬಾರ್ದು ಕಣೋ ಮಗೂನ ! " ಎನ್ನುತ್ತ  ಪುಟ್ಟಣ್ಣನ ಕಿವಿ ಹಿಂಡಿದರು ತಾತ.  ಸದ್ದಿಲ್ಲದೇ ಪುಟ್ಟಿಯ ಹಿಂದೆ ಕಥೆ ಕೇಳುತ್ತ ಕುಳಿತಿದ್ದು, ಪುಟ್ಟಿಯನ್ನು ಬೆದರಿಸಿದ್ದ ಆವ.  

" ಅಯ್ಯೋ ! ಸುಮ್ನಿರೋ  ಅಣ್ಣಾ ! ಆಮೇಲೇನಾಯ್ತು ಅಜ್ಜಿ? ಸೂಜಿ  ಸುಬ್ಬ  ಎನ್ ಮಾಡ್ದಾ ?" ಪುಟ್ಟಿ ಅಜ್ಜಿಯ ಮಡಿಲಲ್ಲಿ ಮೊಳಕೈಗಳನ್ನು  ಊರಿಕೊಂಡು  ಕಾತರದಿಂದ ಕೇಳಿದಳು . 

" ಸೂಜಿ ಸುಬ್ಬ  ನಿನ್ಹಾಗೆ ಹೆದರ್ಪುಕ್ಳು ಅಂದ್ಕೊಂಡ್ಯಾ ?"  ಎಂದು ಕೆಣಕಲು ಎತ್ನಿಸಿದ  ಪುಟ್ಟಣ್ಣ .  ಅವನನ್ನು  ಲೆಕ್ಕಿಸದೆ  ಅಜ್ಜಿಯನ್ನು ಕುರಿತು "ಮ್ , ಆಮೇಲ?" ಎಂದಳು ಪುಟ್ಟಿ . 

                                                   ೫

   ಹೆದರದೆ ಬೆದರದೆ ಉತ್ತರಿಸಿದ
   ಕಿರುನಗೆ ಬೀರಿದ  ಸೂಜಿ ಸುಬ್ಬ ! 
   "ಹುಲಿಯಣ್ಣ ಕೇಳಣ್ಣ, 
   ಸೂಜಿ ಸುಬ್ಬ ರಾಯ ನಾನಣ್ಣ . 
   ಸವಿಯಲು ತವಕಿಸಿ ಹೊರಟಿಹೆ  ನಾ  ,
   ಅಜ್ಜಿಯ ಕೈ  ಸವಿಯೂಟವನ್ನ! 
   ಕೇಸರಿ ಬಾತು  ಪೊಂಗಲ್ ವಡೆ 
   ತಿಂದು ಕೊಬ್ಬಿ ನಾ ಹಿಂದಿರುಗುವೆ ! 
   ಈ  'ಸೂಜಿ' ನೀನೀಗ  ನುಂಗಿದರೆ, 
   ಗಂಟಲಿಗೆ ಚುಚ್ಚಿಕೊಂಡು ಬಲು ತೊಂದರೆ!" 

" ಸಾಕು ಪುಟ್ಟಿ . ಹೋಮ್ ವರ್ಕ್ ಮಾಡಿ ಊಟ ಮಾಡು . " ಅಮ್ಮ ಕರೆದಳು .  

" ಇರಮ್ಮಾ ! ಅಜ್ಜಿ ! ಇನೊಂದೇ ಒಂದು ಪೇಜ್ ಓದೋಣ ... " 

" ಸಾಕು ಪುಟ್ಟಿ . ತಾತನ್ಗೆ ಪಲ್ಹಾರ ಕೊಡ್ಬೇಕು . ನಾಳೆ ಓದೋಣ. ಈಗ 
ಸಸೇಷ !" ಎನ್ನುತ್ತಾ ಎದ್ದಳು ಅಜ್ಜಿ . 

ಪುಟ್ಟಿ ಮನಸ್ಸಿಲ್ಲದೆ ಎದ್ದಳು . 

ಅಂದು ರಾತ್ರಿ ಸೂಜಿ ಸುಬ್ಬ ರಾಯನ ಕಥೆ ಪುಸ್ತಕವನ್ನು ದಿಂಬಿನ ಕೆಳಗಿಟ್ಟು ಮಲಗಿದಳು  ಪುಟ್ಟಿ. ಸೂಜಿ ಸುಬ್ಬ ರಾಯನ ಕಥೆ ಬಣ್ಣದ  ಸಿನೆಮಾ ಹಾಗೆ ಕನಸಲ್ಲಿ ಚಲಿಸ ತೊಡಗಿತು !   


No comments:

Post a Comment