Saturday, October 31, 2020

ನುಗ್ಗೆ ಮರದ ದೆವ್ವ ! / GHOST ON THE DRUMSTICK TREE !

ನುಗ್ಗೆ ಮರದ ದೆವ್ವ ! 

ಪ್ರತಿ ವರುಷ ಅಕ್ಟೋಬರ್ ತಿಂಗಳ ಕೊನೆಯ ದಿನದಂದು ಪಾಶ್ಚಾತ್ಯ ದೇಶಗಳಲ್ಲಿ ಹ್ಯಾಲೋವೀನ್ ಹಬ್ಬ ಆಚರಿಸುವುದು ಬಹಳ ಹಿಂದಿನಿಂದ ಬಂದಿರುವ ಪದ್ಧತಿ . ವಿವಿಧ ದೇಶಗಳ ವಿವಿಧ ಜನಾಂಗದವರಿಂದ  ಅವರವರ  ಕಲಾಚಾರಕ್ಕನುಗುಣವಾಗಿ ಆಚರಿಸಲ್ಪಟ್ಟರೂ ಹ್ಯಾಲೋವೀನ್ ಹಬ್ಬ ಎಲ್ಲೆಡೆಯೂ ದೆವ್ವಗಳು, ಅಸ್ಥಿಪಂಜರಗಳು , ಮಂತ್ರಗಾರ್ತಿ ಮುಂತಾದ ಭಯಾನಕ ಪಾತ್ರಗಳನ್ನೊಳಗೊಂಡ ಹಬ್ಬವೇ ಆಗಿದೆ . 

ಇಂದು ಹ್ಯಾಲೋವೀನ್ ಹಬ್ಬ ಪಾಶ್ಚಾತ್ಯ ದೇಶಗಳಿಗಷ್ಟೇ ಸೀಮಿತವಾಗಿರದೆ  ಪ್ರಪಂಚದಾದ್ಯಂತ  ಆಚರಿಸಲಾಗುತ್ತಿದೆ . ಎಳೆಯರ  ವೇಷ ಭೂಷ ಪಾರ್ಟಿಗಳಿಗಾಗಿ  ಭಯಾನಕ ಉಡುಪುಗಳು, ಮುಖವಾಡಗಳು ಮುಂತಾದ ಹ್ಯಾಲೋವೀನ್ ಪೋಷಾಕುಗಳು ಮತ್ತು  ಭಯ  ಹುಟ್ಟಿಸುವಂತ ಉಪಕರಣಗಳ ಮಾರಾಟ ಸಖತ್ತಾಗಿ ನಡೆಯುತ್ತಿದೆ !  ನಮ್ಮ ವಠಾರದ ಸಣ್ಣ ಮಕ್ಕಳೆಲ್ಲ ಕೂಡಿ ಭಯಾನಕ ದೆವ್ವಗಳಂತೆ ವೇಷ ಭೂಷ ಧರಿಸಿ , ಮನೆಮನೆಯ ಬಾಗಿಲು ಬಡಿದು ' ತಂತ್ರವೋ   ತಿಂಡಿಯೋ  ? ' ಎಂದು 'ಬೆದರಿಕೆ ' ಹಾಕುತ್ತಾರೆ !  ಅವರುಗಳಿಗೆ ಕೊಡಲೆಂದೇ ಹ್ಯಾಲೋವೀನ್ ಸಮಯ ಮಿಠಾಯಿಗಳನ್ನು ತರಿಸಿಟ್ಟು  ನಾನೂ ಸಹ ಹಲೋವೀನ್ ಆಚರಿಸುತ್ತೇನೆ !

                                                                                     

ದೆವ್ವಗಳ ಹಬ್ಬವನ್ನು ಒಂದು ಚೂರೂ ಭಯವಿಲ್ಲದೆ ಸಂಭ್ರಮಿಸುವ ಇಂದಿನ ಮಕ್ಕಳನ್ನು ಕಾಣುವಾಗ ಚಿಕ್ಕಂದಿನಲ್ಲಿ ನಾನು ಅದೆಷ್ಟು ಹೆದರು ಪುಕ್ಕಲಾಗಿದ್ದೆ ಎಂಬ ನೆನಪಾಗುತ್ತದೆ ! ಅಂದು  ಲಕ್ಷ್ಮಮ್ಮ ಹೇಳುತ್ತಿದ್ದ  ದೆವ್ವದ  ಕಥೆಗಳೆಲ್ಲ ಈಗ ನೆನಪಿಗೆ ಬರುತ್ತವೆ .  ಲಕ್ಷ್ಮಮ್ಮ ನಮ್ಮ  ದೂರದ ಸಂಭಂದಿಕರು . ಯಾರೂ ದಿಕ್ಕಿಲ್ಲದೆ ಹೋದ ಕಾರಣ ಅವರನ್ನು ನಮ್ಮ ತುಂಬು ಕುಟುಂಬದ  ಸದಸ್ಯರನ್ನಾಗಿ ಸೇರಿಸಿಕೊಂಡಿದ್ದರು ಹಿರಿಯರು . ಮೂರು ತಲೆಮಾರಿನವರು ಒಂದಾಗಿದ್ದ ಕೂಡು ಕುಟುಂಬ ನಮ್ಮದ್ದು.  ಲಕ್ಷ್ಮಮ್ಮ ಮನೆ ಕೆಲಸಗಳಲ್ಲೆಲ್ಲ ನೆರವಾಗಿದ್ದುದ್ದಲ್ಲದೆ , ಮನೆಯ ತುಂಬ ಇದ್ದ ಮಕ್ಕಳನ್ನು ಸುಧಾರಿಸಿ  ನೋಡಿಕೊಳ್ಳುತ್ತಿದ್ದರು . 

ಪ್ರತಿದಿನವೂ ಸಂಜೆ ನಮ್ಮನ್ನೆಲ್ಲ ಕೂರಿಸಿಕೊಂಡು ಪಂಚತಂತ್ರ ಕಥೆಗಳು , ರಾಮಾಯಣದ ಕಥೆಗಳು , ಕೀಲು  ಕುದುರೆಯ ಮೇಲೆ  ಹಾರಾಡಿದ  ರಾಜಕುಮಾರರ ಕಥೆಗಳು , ಬೇತಾಳದ ಕಥೆಗಳು  ಮತ್ತು ದೆವ್ವದ ಕಥೆಗಳು ಎಂದು ಅನೇಕ ಪ್ರಭೇದಗಳಿಂದ ಆಯ್ದ ಕಥೆಗಳನ್ನು ಅತಿ ಉತ್ಸಾಹದಿಂದ ಹೇಳುತ್ತಿದ್ದರು . ದೆವ್ವದ ಕಥೆ ಕೇಳಿದಂದು ಮಾತ್ರ ನಾವೆಲ್ಲಾ  ರಾತ್ರಿ  ಮಲಗುವಾಗಲೂ ದೀಪ ಆರಿಸಲು ಬಿಡುತ್ತಿರಲಿಲ್ಲ ! ನಾನಂತೂ ಬಾತ್ರೂಮಿಗೆ ಹೋಗಬೇಕೆಂದರೂ  ಅಮ್ಮನನ್ನು ಎಬ್ಬಿಸುತ್ತೆದ್ದೆ ! ನಮ್ಮ ಶಾಲೆಯ ಶೌಚಾಲಯದಲ್ಲಿ ದೆವ್ವ ಇದೆ ಎಂಬ ಗಾಳಿ ಸುದ್ಧಿ ಹರಡಿದಾಗಿನಿಂದ  ' ಬಾತ್ರೂಮ್ ಭೂತಗಳ ' ಬಗ್ಗೆ ನನಗೆ ವಿಪರೀತ  ಹೆದರಿಕೆ !  ಜೊತೆಗೆ ಲಕ್ಷ್ಮಮ್ಮನ  ದೆವ್ವದ ಕಥೆಗಳು  ನನ್ನ ಪುಟ್ಟ ಮನದಲ್ಲಿ ಮತ್ತಷ್ಟು  ಭಯವನ್ನೇರ್ಪಡಿಸಿತ್ತು !

                                                                                     

ದೆವ್ವಗಳಿಗೆ ಕಾಲುಗಳೇ ಇರುವುದಿಲ್ಲವೆಂದು ಒಂದು ಕಥೆಯಲ್ಲಿ ಹೇಳಿದರೆ , ದೆವ್ವ ತನ್ನ ಕಾಲುಗಳನ್ನು ಒಲೆಯಲ್ಲಿ ಸೌದೆಯಂತೆ ಬಳಸಿ  ಅಡುಗೆ ಮಾಡಿತು ಎಂದು ಮತ್ತೊಂದು ಕಥೆ  ಹೇಳುತ್ತಿದ್ದರು ! ಗೆಜ್ಜೆಯ ಝಲ್ ಝಲ್ , ಮಲ್ಲಿಗೆಯ ಘಮ ಘಮ , ಬಿಳಿ ಹೊಗೆಯಂತಿದ್ದ ದೆವ್ವ , ಕಪ್ಪು ಆಕಾರ ಹೊಂದಿದ್ದ  ದೆವ್ವ , ಬಿಳಿ ಸೀರೆಯುಟ್ಟು ಉದ್ದನೆಯ ಕೂದಲನ್ನು ಕೆದರಿಕೊಂಡಿದ್ದ ಮೋಹಿನಿ ದೆವ್ವ , ಎಲ್ಲವೂ ಅವರ ಕಥೆಗಳಲ್ಲಿ ಮುಖ್ಯ ಪಾತ್ರ ವಹಿಸಿದವು ! 

''  ಇಲ್ಲಕಣವ್ವ !  ದೆವ್ವಗಳಿಗೆ ಕಾಲುಗಳು ಇರ್ತಾವಂತೆ   ! ಆದ್ರೆ ಅವುಗಳ ಪಾದಗಳು ಮಾತ್ರ ಹಿಂದಕ್ಕತ್ತ  ತಿರಿಗ್ಕೊಂಡಿರ್ತಾವಂತೆ  ! " ತೋಟ ಗುಡಿಸಿ , ಹಸುಗಳಿಗೆ ತಿಂಡಿ ಇಟ್ಟು ಬಂದು ಲಕ್ಷ್ಮಮ್ಮನ ಕಥೆಗಳನ್ನು ನಮ್ಮೊಂದಿಗೆ  ಕುಳಿತು ಬಾಯಿ ಬಿಟ್ಟುಕೊಂಡು  ಕೇಳುತ್ತಿದ್ದ ಬಸವ ತನ್ನ ದೆವ್ವದ ಜ್ಞಾನವನ್ನು ತೋರಿಸಿಕೊಳ್ಳುತ್ತಿದ್ದ  !

ಅಂದು  ಅಮಾವಾಸೆಯ ಮಧ್ಯ ರಾತ್ರಿ   ! ಇದ್ದಕ್ಕಿದ್ದ ಹಾಗೇ ಲಕ್ಷ್ಮಮ್ಮ ' ಅಯ್ಯೋ ! ಅಯ್ಯಯ್ಯೋ ! ' ಎಂದು ಬೊಬ್ಬೆಯಿಟ್ಟಿದ್ದು ಕೇಳಿ ಮಲಗಿದ್ದವರೆಲ್ಲ ಎದ್ದು ಅವರೆಡೆಗೆ ಧಾವಿಸಿದರು ! ಅಂದು  ಕೇಳಿದ್ದ ದೆವ್ವದ ಕಥೆಯಿಂದಲೋ , ನನಗಿಷ್ಟವಾದ ಮಸಾಲಾ ಬನ್ನನ್ನು ಹೆಚ್ಚಾಗಿ ತಿಂದಿದ್ದ ಕಾರಣವೋ ? ನಾನು ಬಹಳ ಹೊತ್ತು ನಿದ್ದೆ ಇಲ್ಲದೆ ಹೊರಳಾಡುತ್ತಿದ್ದೆ .  ಲಕ್ಷ್ಮಮ್ಮನ ಬೊಬ್ಬೆ ಕೇಳಿ ನಾನೂ ಮೆಲ್ಲನೆ ಎದ್ದು ಎಲ್ಲರ ಹಿಂದೆ  ನುಸುಳಿ ನಿಂತೆ .  

" ಯಾಕಮ್ಮ ಕೂಗಾಡ್ತಿದ್ದೀರೀ  ಈ ಹೊತ್ತಲ್ಲಿ ! "  ಅಪ್ಪ ಸ್ವಲ್ಪ ಗಡುಸಾಗಿಯೇ ವಿಚಾರಿಸಿದರು.   

" ಅಲ್ನೋಡಿ ಅಣ್ಣ ! ಅಲ್ಲಿ .... ಅಲ್ಲಿ.... ! ದೆವ್ವ ! ದೆವ್ವ !" ಎಂದು  ತೊದಲಿದರು ಲಕ್ಷ್ಮಮ್ಮ . 

 ಎಲ್ಲರ ಜೊತೆ ನಾನೂ ಬೆದರಿ ನಡುಗುತ್ತ ಬಾಗಿಲ ಹಿಂದೆ ನಿಂತು ಇಣುಕಿದೆ    !

ಲಕ್ಷ್ಮಮ್ಮ ಬೆರಳು ಮಾಡಿ ತೋರಿಸಿದ ತೋಟದ ಮೂಲೆಯಲ್ಲಿ ಒಂದು ಬಿಳಿಯ ಆಕಾರ ಎರಡು ಕೈಗಳನ್ನೂ ಬೀಸಿ ಬೀಸಿ ಕರೆಯುತ್ತಿದ್ದದ್ದು ಕಾಣಿಸಿದಾಗ ನನ್ನ ಹೃದಯ ಬಾಯಿಗೆ ಬಂದಂತಾಯಿತು . ಕಿರುಚಿಕೊಳ್ಳಬೇಕೆನ್ನಿಸಿದರೂ ಗಂಟಲಿಂದ ದನಿಯೇ ಹೊರಡಲಿಲ್ಲ ! 

'' ನೋಡಿ  ! ಕಾಲುಗಳಿಲ್ಲ ! ರುಂಡವಿಲ್ಲ ! ನೆಲದ ಮೇಲೆ ನಿಂತಿಲ್ಲ ! ಗಾಳೀಲಿ ಕೈ ಬೀಸಿ ಕರೀತಿದೆ ! ಅಯ್ಯೋ ! ಅಯ್ಯೋ ಗ್ರಹಚಾರವೇ ! " ಎಂದು ಪ್ರಲಾಪಿಸಿದರು ಲಕ್ಷ್ಮಮ್ಮ . 

 ಅಪ್ಪ  ಕೂಡಲೇ ಒಳಗೆ ಹೋಗಿ ತನ್ನ ಶಕ್ತಿಯುತವಾದ ಟಾರ್ಚನ್ನು ತಂದು  ಮೆಟ್ಟಲಿಳಿದು ಪೋರ್ಟಿಕೋದಲ್ಲಿ ನಿಂತರು. 

                                         

ಬಿಳಿಯ ಆಕಾರ ಇನ್ನೂ ಅಲ್ಲೇ ಕೈ ಬೀಸಿ ಕರೆಯುತ್ತಿತ್ತು !

" ಅಯ್ಯೋ ! ಹತ್ರ ಹೋಗ್ಬೇಡಿ ಅಣ್ಣ  ! " 

 ಅಪ್ಪ ಲಕ್ಷ್ಮಮ್ಮನ  ಕೂಗನ್ನು ಲಕ್ಷಿಸದೆ ಮುನ್ನಡೆದು  ಬಿಳಿಯ ಆಕಾರದ ಮೇಲೆ ಬೆಳಕನ್ನು  ಬೀರಿದರು  !

 ಸ್ವಚ್ಛವಾಗಿ ಒಗೆಯಲ್ಪಟ್ಟ ಬಸವನ ಬಿಳಿ ಷರಟು ನುಗ್ಗೆ ಮರದ  ರೆಂಬೆಯಲ್ಲಿ ಹೊಯ್ದಾಡುತ್ತಿತ್ತು ! 

" ಲಕ್ಷ್ಮಮ್ಮ !  ಸಾಕುಮಾಡಿ ನಿಮ್ಮ ದೆವ್ವದ ಕಥೆಗಳನ್ನ !  ನೀವೂ ಹೆದರಿ ಉಳಿದವರನ್ನೂ ಹೆದರಿಸಬೇಡಿ! ಸಧ್ಯ ಮಕ್ಕಳೆಲ್ಲ ಎಚ್ಚರವಾಗ್ಲಿಲ್ಲ ! ಎಲ್ರೂ  ಮಲಗಿ ಹೋಗಿ ! " ಎಂದು ಗದರಿದರು ಅಪ್ಪ . ನಾನು ಅಪ್ಪನ ಕಣ್ಣಿಗೆ ಬೀಳದೆ ಓಡಿ  ಹೋಗಿ ಮಲಗಿಬಿಟ್ಟೆ ! ಲಕ್ಷ್ಮಮ್ಮ ನಮಗೆ ದೆವ್ವದ ಕಥೆಗಳನ್ನು ಹೇಳುವುದು ಅಪ್ಪನಿಗೆ ಸುತರಾಂ ಇಷ್ಟವಿರಲಿಲ್ಲ . ಅಂದೇ ಮನೆಯಲ್ಲಿ ದೆವ್ವದ ಕಥೆಗಳಿಗೆ 144 ಹಾಕಲಾಯಿತು !

ಮರು ದಿನ ಲಕ್ಷ್ಮಮ್ಮ ಬಸವನ ಜೊತೆ ಗುಸು ಗುಸು ಮಾತನಾಡುತ್ತಿದ್ದದ್ದು  ಆಕಸ್ಮಿಕವಾಗಿ ನನ್ನ ಕಿವಿಗೆ  ಬಿದ್ದಿತು  . 

" ಅಯ್ಯೋ ಪೆದ್ದಪ್ಪಾ  ! ಅದ್ಯಾಕೋ ನಿನ್ ಬಟ್ಟೇನ ನುಗ್ಗೆ ಮರಕ್ಕೆ  ತಗಲು ಹಾಕಿದ್ದೆ ? ನುಗ್ಗೆ ಮರದಲ್ಲಿ ಬೆಳ್ಳಗೆ ಕಂಡಿದ್ದಕ್ಕೆ ನಾನು ದೆವ್ವ ಅನ್ಕೊಂಡಿದ್ದು ! "

                                                 

" ಅಂಗಾರ ನುಗ್ಗೆ  ಮರ್ದಾಗೆ  ದೆವ್ವ ಇರ್ತಾವಾ  ? " ಕಣ್ಣುಗಳನ್ನು ದೊಡ್ಡದು ಮಾಡಿಕೊಂಡು ಕೇಳಿದ ಬಸವ . 

" ಹೂಂ ಕಣೋ ! ನುಗ್ಗೆ ಮರದಲ್ಲಿ ಮಾತ್ರವಲ್ಲ ! ದೆವ್ವಗಳಿಗೆ ಹುಣಸೆ ಮರ, ಬೇವಿನ ಮರ ಕೂಡ ಬಾಳ ಇಷ್ಟ ! "

" ಹಾಗಂತ ದೆವ್ವಗಳು ಬಂದು ಹೇಳಿದ್ವೆ ಲಕ್ಷ್ಮಮ್ಮ ? "

ಇದ್ದಕ್ಕಿದ್ದಂತೆ ನಾನು ಎದುರಿಗೆ  ಹೋಗಿ ನಿಂತು ಪ್ರಶ್ನಿಸಿದಾಗ ಲಕ್ಷ್ಮಮ್ಮ ಪೆಚ್ಚಾದರು . 

" ಶ್ !  ದೆವ್ವದ ಬಗ್ಗೆ ಮಾತೆತ್ತಿದ್ರೆ ನಿಮ್ಮಪ್ಪ ಬೈತಾರೆ ಸುಮ್ನಿರು ! " ಎಂದು ನನ್ನ ಬಾಯಿ ಮುಚ್ಚಿಸಿದ್ದರು ಲಕ್ಷ್ಮಮ್ಮ ! 

ಅಂದಿನಿಂದ ದೆವ್ವ ಭೂತ ಎಂದರೆ ನನಗೆ ಬಸವನ ಬಿಳಿಯ ಷರಟು ನೆನಪಿಗೆ ಬರುತ್ತದೆ ! ಜೊತೆಗೆ ನಗುವೂ ಕೂಡ ಬರುತ್ತದೆ !

--------------------------------- -------------------------------------

GHOST ON THE DRUMSTICK TREE !

Celebrating Halloween  at the end of October every year is a longstanding tradition  in Western countries . It is the time when ghosts , ghouls , skeletons, vampires , witches and other fearsome characters can be seen all over ! Children  dressed  up in such scary costumes knock on doors shouting " Trick or Treat !"  and are always given sweets at every place . This celebration has now spread to our country too. 

                                      

I participate in this strange , ghostly fun , by storing enough candies to distribute to the little monsters who turn up at my door ! And I think about my own childhood when I was  terrified of Ghosts …..and about the Ghost Stories told by Lakshamma .

 Lakshmamma  , a far relative , lived with us as part of the huge joint family spanning three generations . She helped in household chores and , in the evenings , entertained the children with wonderful stories of all sorts :  Panchatantra stories , mythological tales , folklore and Ghost Stories . She was a great storyteller , narrating everything most dramatically.

                                       
Her Ghosts were spectacular  characters . There were those without heads and those  without legs . A few  had fangs and others had claws. They could be all white or all black . Some  wore tinkling  anklets , some  smelt like jasmines . They  could all  fly , glide or hover ; smash , shred or  spit fire.

A great assortment of terrors she could spin !

 On some evenings , Basava, who looked after our garden and the cows , would pause while passing by our story session and add his own details .  "Don’t you know , Lakkamma !" he would remark with a wise look , " ghosts do have legs , but their feet are turned backwards !"

 On the days we heard Ghost Tales , we would all get scared and refuse to switch off the light at bedtime . I would toss and turn in fright and wake up Mother, if I had to go to the bathroom ! To add to my terror , there were always rumors at school that there was a Ghost in the School Bathroom .

Once , on a new moon night , when the whole family  had gone to bed, there was a sudden shriek and loud wailing . Lakshmamma was screaming in terror, waking up all the elders .

" What is it Lakshmamma ! Why are you screaming ? " Father was very annoyed as he went out to check on her . I crept behind the door , shivering, but curious .

 Lakshmamma was standing in the verandah and pointing at a tree , babbling and stammering . " A  ghost ! A ghost ! "

" Ghost ? What nonsense ! Where ? "

" Look , Anna ! In that tree ! It has no head , no hands , no legs ……but  calling  me with its arms  ….'come ….come ' ….Anna ! Anna ! Don’t go near it ! "  

Yes, I could see it too ! A pale white shadowy form  was swaying and flapping on the branch of the tree ! I froze in terror , my scream getting caught in my throat .

Father had by now got his  big flashlight  and was in  the portico . In the powerful beam of the flashlight , all of us could see the Ghost clearly !

                                         
With no head, no legs , short arms , the white shirt of Basava , washed clean that evening  , was drying in the gentle breeze !

" You must stop spinning Ghost stories , Lakshmamma ! " scolded Father ,  "You will not only end up crazy yourself, but will make the children idiots too . Go back to sleep now , and let me not hear the word 'Ghost'  again ! "

The next morning , I chanced to hear Lakshmamma scolding Basava in the backyard .

" You idiot ! Why did you hang your shirt on the drumstick tree of all places?  Don’t  you know it is the favourite haunt of Ghosts ? I really mistook your stupid shirt to be a Ghost ! "

                                         
"What are you saying , Lakkamma ?.... Ghosts live only  in Tamarind trees !" 

" Tamarind and Neem and Drumstick , they like all three ! "

" Did the Ghosts themselves   tell you that , Lakshmamma ? " I popped in front of her , unable to check myself .

" Shhh ! No ghost talk !" She silenced me, " Your Father will not like it ."

That was the last time she ever uttered the word 'Ghost' !

The evening Story sessions became more cheerful and I started sleeping  better,  without night-lamps !

Even now , whenever there is talk of ghosts , I  remember Basava’s  white shirt swaying in the drumstick tree on a pitch dark night !

And I smile .

-----------------------------------------------------------------------------

Saturday, October 3, 2020

ಪೆರ್ಬೊಳಲ್ ದುಗ್ಗಲಮ್ಮ !

ಪೆರ್ಬೊಳಲ್   ದುಗ್ಗಲಮ್ಮ !
( ಹಿಂದಿನ ಗಾಥೆ )

ತಕತಕಿಟ ತಕತಕಿಟ ತಕತಕಿಟ ದೋಮ್ ದೋಮ್ ।
 ತಕ್ ತಕಿಟ ತಕ್ ತಕಿಟ ತಕ್ ತಕಿಟ ದೋಮ್ ದೋಮ್ ।।
ತಕದಿನ ತಕದಿನ ತಕದಿನ ತಕದಿನ ತದ್ದಿಕ್ಕಿಡಕಿಡಕಿಡ ದೋಮ್ । 
ತದ್ದಿಕ್ಕಿಡಕಿಡಕಿಡ ದೋಮ್ । ತದ್ದಿಕ್ಕಿಡಕಿಡಕಿಡ ದೋಮ್ ।। 

                                                                               

ತಮಟೆ ವಾದ್ಯದ ತೀವ್ರ ಬಡಿತದಲ್ಲಿ ಕೆರೆಯ ದಂಡೆಯೇ ಅದುರುತ್ತಿತ್ತು  ! ಮೂವರು ಹುಡುಗರು ಆವೇಶಗೊಂಡಂತೆ  ತಮಟೆಗಳನ್ನು  ನುಡಿಸುತ್ತಿರಲು  ಉಳಿದ ಹುಡುಗರೆಲ್ಲ ಉತ್ಸಾಹದಿಂದ ಗತ್ತಿಗೆ ತಕ್ಕಂತೆ ಕುಣಿಯುತ್ತ ಪಲ್ಟಿಗಳನ್ನು ಹೊಡೆದರು ! ಕೆಲವರು ಅಂತರಲಾಗ ಹಾಕಿದರೇ  ಇನ್ನೂ ಕೆಲವರು ಚಕ್ರಲಾಗ ಹೊಡೆಯುತ್ತಿದ್ದರು !   
 ಸಕಾಲಕ್ಕೆ ಮಳೆಯಾಗಿ ತುಂಬಿ ತುಳುಕುತ್ತಿದ್ದ ಅಗಾದವಾದ  ಪೆರ್ಬೊಳಲ್ ಕೆರೆಯ  ಹೆಬ್ಬಲೆಗಳು ಸಹ ಸಂತೋಷಗೊಂಡು ತಾಳಕ್ಕೆ ಸರಿಯಾಗಿ ಎದ್ದೆದ್ದು ಕುಣಿದು ಕುಪ್ಪಳಿಸುತ್ತಿದ್ದಂತೆ ಕಂಡಿತು . 
ಮಧ್ಯಾಹ್ನದಿಂದ ನಡೆಯುತ್ತಿದ್ದ ಅಭ್ಯಾಸ ಈಗ ಹೊಸ ವೇಗವನ್ನು ಹಿಡಿದಿತ್ತು . ವಾದ್ಯದ ಬಡಿತ ತೀವ್ರಗೊಂಡಂತೆ ಹುಡುಗರ ಕುಣಿತವೂ ತೀವ್ರಗೊಂಡಿತ್ತು . ಬೆವರಿನ ಕಾಲುವೆ ಹರಿಯುತ್ತಿದ್ದದ್ದನ್ನೂ ಲೆಕ್ಕಿಸದೆ ಹೆಜ್ಜೆಗಾರಿಕೆಯಲ್ಲಿ ನುರಿತ ಆ ಹುಡುಗರು ಕುಣಿತದಲ್ಲಿ  ತನ್ಮಯರಾಗಿದ್ದರು !

                                                                                                            
'' ಲೇ ಕಪಿ ಸೈನ್ಯದ ಕೋತಿಗಳಾ  ! ಸಾಕು ಮಂಗನಾಟ ! ಇನ್ನೂ ಮಾಡಬೇಕಾದ ತೈಯಾರಿ  ಮಸ್ತಾಗದೆ  ! ಸುಮ್ಕೆ ಕುಣೀತಿದ್ರೆ ಆಯ್ತದಾ ? " 
" ಸುಂಸುಮ್ಕೆ ಯಾರು ಕುಣೀತಾರೆ ತಾತಪ್ಪೋವ್  ! ನಾಳೆ ಮೆರವಣಿಗೆಯಾಗೆ  ಕುಣೀಬ್ಯಾಡವೇನೂ ? ಅದಕ್ಕ ಅಭ್ಯಾಸ ಮಾಡ್ಕಂಡಿದ್ದೀವಿ ! "  ಸದಾ ತಮ್ಮನ್ನು ಗೋಳು ಹುಯ್ದು ಕೊಳ್ಳೋ  ತಾತಪ್ಪನಿಗೆ ಕಟುವಾಗಿ ಪ್ರತ್ಯುತ್ತರವನ್ನು ಕೊಟ್ಟು ಕುಣಿತ ಮುಂದುವರಿಸಿದನು  ಸಿದ್ಧು . 
ಹೌದು ! ನಾಳೆಯ ಉತ್ಸವಕ್ಕೆ ಮಾಡಬೇಕಾದ ಏರ್ಪಾಟುಗಳು ಬೇಕಾದಹಾಗೆ ಇದ್ದವು ! ಗ್ರಾಮದ  ಬೀದಿಗಳನ್ನೆಲ್ಲ ಸ್ವಚ್ಛಗೊಳಿಸ ಬೇಕು ! ಬೀದಿಗಳ ಎರಡು ಬದಿಗಳಲ್ಲೂ ಕಂಬಗಳನ್ನು ನೆಡಬೇಕು ! ನೆಟ್ಟ ಕಂಬಗಳಿಗೆ ಮಾವು ಬೇವುಗಳ ತಳಿರು ತೋರಣಗಳನ್ನು ಕಟ್ಟಬೇಕು ! ಮುಖ್ಯವಾಗಿ ಕೆರೆಯ ದಂಡೆಯಲ್ಲಿ ಕಲ್ಲನ್ನು ನಿಲ್ಲಿಸಲು ನಿರ್ಣಯಿಸಿದ್ದ ಸ್ಥಳದಲ್ಲಿ  ನೆಲ ಸಮ ಮಾಡಿ  ಗುಂಡಿ ತೆಗೆಯುವ ಕೆಲಸದಲ್ಲಿ ಕೈ ಜೋಡಿಸಬೇಕು ! 
ದುರ್ಗಿ ಕಲ್ಲಿನ ಮೇಲೆ  ವೆಂಕನಿಗೆ  ಅದೇನೋ ಒಂದು ಸೆಳೆತ ! ಅವಳಿಗೆ  ಸಂಬಂಧಿಸಿದ ಎಲ್ಲ ಕೆಲಸಗಳಲ್ಲೂ ತನ್ನದ್ದೂ ಒಂದು ಕೈ  ಇರಲೇಬೇಕೆಂಬ ಹಂಬಲ !  ಅಪ್ಪಯ್ಯ ಕೆತ್ತುತ್ತಿದ್ದ ಅಮ್ಮನವರ ಶಿಲೆಯನ್ನು ಎಲ್ಲರೂ ದುರ್ಗಿಕಲ್ಲು ಎಂದೇ ಕರೆಯುತ್ತಿದ್ದರು . ಆದರೆ  ಅವನ ಪಾಲಿಗೆ ಮಾತ್ರ ಅವಳು ಅಮ್ಮ ! ದುಗ್ಗಲಮ್ಮಾ !
ತಕ್ಕ ಕಲ್ಲು ಆಯ್ದು ತಂದು, ಪೂಜೆ ಮಾಡಿ , ಅದರ ಮೇಲೆ ಅಪ್ಪಯ್ಯ ದುರ್ಗಿಯ ಚಿತ್ರವನ್ನು ಬಿಡಿಸಿದಾಗಿನಿಂದ ಅನುದಿನವೂ ಅವಳ ಬೆಳವಣಿಗೆಯನ್ನು ಕಾಣುವುದರಲ್ಲಿ ಅವನಿಗೆ ಎಲ್ಲಿಲ್ಲದ   ಹುರುಪು   ! ಅಪ್ಪಯ್ಯನ ಒಂದೊಂದು ಉಳಿ ಏಟಿಗೂ ಕಲ್ಲಿನಿಂದ ಹೊರಹೊಮ್ಮುತ್ತಿದ್ದ ಅವಳ ಸುಂದರ ರೂಪವನ್ನು ನೋಡಲು ನೂರು ಕಣ್ಣುಗಳು ಸಾಲದು!  ನಾಳೆ ಪ್ರತಿಷ್ಠಾಪನೆ ! ಅಪ್ಪಯ್ಯ ಇನ್ನೇನು ದುಗ್ಗಮ್ಮನ 'ಕಣ್ ತೆರೆಸಿ' ತನ್ನ ಕೆಲಸ ಪೂರ್ಣಗೊಳಿಸುತ್ತಾರೆ   ! ಬೇಗ ಕೆಲಸ ಮುಗಿಸಿ ಮನೆಗೆ ಓಡಿ  ಹೋಗಿ ದುಗ್ಗಲಮ್ಮ ಕಣ್ತೆರೆವುದನ್ನು ಕಾಣಬೇಕು ! 
" ಸಿದ್ಧು ! ತಾತಪ್ಪ ಏಳೋದು ಸರಿಯೇ ! ನಡೀರಿ ಎಲ್ಲ ! ಮೊದ್ಲು ಎಲೆಗೊಂಚಲುಗಳ ಮುರಿದು ತರೋಣ ! ಆಮೇಕೇ ಬಿದಿರು ಕಂಬಗಳನ್ನ ನೆಟ್ಟು ತೋರಣಗಳನ್ನು ಕಟ್ಟುವ  ! " ಕುಣಿತ ನಿಲ್ಲಿಸಿ ನುಡಿದ  ವೆಂಕ.  ಅಭ್ಯಾಸ ನಿಲ್ಲಿಸಿದ ಗ್ರಾಮದ ಯುವಕರು ಬೆವರನ್ನು ಬಳಿದು ಹಾಕಿ, ಕೆರೆಯ ತಣ್ಣನೆಯ ನೀರನ್ನು ಒಬ್ಬರಮೇಲೊಬ್ಬರು ಎರಚಿಕೊಂಡು ಆಟವಾಡುತ್ತ  ಮುಖ ತೊಳೆರು . ಅಬ್ಬಾ ! ಹೀಗೆ ತುಂಬಿದ ಕೆರೆಯ ನೀರಲ್ಲಿ ತೊಳಲಾಡಿ ಎಷ್ಟು ಕಾಲವಾಯಿತೋ  ! 
" ನಡೀರೋ  ಎಲ್ಲ ! ಬೇಗ ಹೋಗುವಾ ! "  ತ್ವರಿತಪಡಿಸಿದ  ವೆಂಕನ ಹಿಂದೆ ಎಲ್ಲ ಹುಡುಗರೂ
 ಹೊರಟರು . 
'' ದೊಡ್ಡೋರ ಮಾತಿಗೆ ಅದೇಂಗೆ ಮರ್ವಾದಿ ಕೊಡ್ಬೇಕು ಅನ್ನೋದ್ನ ವೆಂಕನಿಂದ ಕಲೀರೋ  ಕಪಿಗಳಾ  ! '' ಎನ್ನುತ್ತ ತಾತಪ್ಪ ಬಿರಬಿರನೆ ಹೊರಟುಹೋದರು . 

ಎಲ್ಲ ಕೆಲಸಗಳನ್ನೂ ಮುಗಿಸಿ ಮನೆ ಸೇರಿದಾಗ ಅವ್ವ ಒನಕೆ ಹಿಡಿದು ತಂಬಿಟ್ಟಿಗೆ ಅಕ್ಕಿ ಕುಟ್ಟುತ್ತಿದ್ದಳು . ನಾಳೆಯ ಉತ್ಸವಕ್ಕಾಗಿ ನೆರೆಯೂರಿನಿಂದ  ಆಗಮಿಸಿದ್ದ ಚಿಕ್ಕಮ್ಮ ಒರಳು ಕಲ್ಲಿನಿಂದ  ಹೊರಚಿಮ್ಮಿದ  ಅಕ್ಕಿಯನ್ನು ಮತ್ತೆ ಗುಳಿಗೆ ತಳ್ಳುತ್ತ ಕುಳಿತಿದ್ದಳು . 

                                                                               

" ಅವ್ವ ! ದುಗ್ಗಲಮ್ಮ ಕಣ್ತೆರೆದಳೆ  ? " ಬಿರುಗಾಳಿಯಂತೆ ಒಳಗೆ ನುಗ್ಗಿ ಕುತೂಹಲದಿಂದ ಪ್ರಶ್ನಿಸಿದ ವೆಂಕ .  
ಶಿಲ್ಪ ಶಾಸ್ತ್ರದಲ್ಲಿ ಹೇಳಿರುವಂತೆ ಇಡೀ ವಿಗ್ರಹವನ್ನ ಕೆತ್ತಿ  ಮುಗಿಸಿದ ನಂತರ ಒಂದು ಶುಭ ವೇಳೆಯಲ್ಲಿ  ದುರ್ಗಿಯ ಕಣ್ಣುಗಳನ್ನು 'ತೆರೆಯ' ಬೇಕು ಎಂದಿದ್ದರು ಅಪ್ಪಯ್ಯ . ಇಂದು ಸಂಜೆ ಆ ಶುಭ ವೇಳೆ ಇದ್ದ ಕಾರಣ , ದುರ್ಗಿಯ ಶಿಲ್ಪ ಮತ್ತು ಲಿಪಿಯ ಕೆತ್ತನೆ ಮುಗಿದಿದ್ದರೂ 'ಕಣ್ಣು ತೆರೆಸುವ' ಕೆಲಸವನ್ನು ಇಂದಿನ ವರೆಗೆ ಮುಂದೂಡಿದ್ದರು . 
" ನಿನಗಾಗಿಯೇ ಕಾದಾವ್ರೆ  ಅಪ್ಪಯ್ಯ ! ನೋಡೋಗು ! " ಎಂದು ಕಿರುನಗೆ ಬೀರಿದಳು  ಅವ್ವ . 
" ಅಕ್ಕ ! ನಮ್ಮ  ವೆಂಕನಿಗೆ  ದೇವ್ರು  , ಪೂಜೆ ಅಂದ್ಬುಟ್ರೆ ಅದೆಂತ ಹುಮ್ಮಸ್ಸು ? ಚಿಕ್ಕಂದಿನ ಚಾಳಿ   ಇನ್ನೂ ಬುಟ್ಟಿಲ್ವೇ  ಅವ  ? " ಎಂದು ಪ್ರಶ್ನಿಸಿದಳು ಚಿಕ್ಕಮ್ಮ . 
" ಚೆನ್ನಾದ ಚಾಳಿ ! ಇದ್ದರೇನಂತೆ ? ಇರ್ಲಿ ಬುಡು ! " ಎಂದು ನಕ್ಕಳು ಅವ್ವ . 

ಮಾನ್ಯಪುರದ ಮಣ್ಣೆ ಅಮ್ಮನ ರಥೋತ್ಸವ ಆ ಬಾರಿ ಬಹು ವಿಜೃಂಭಣೆಯಿಂದ ನಡೆಯಲಿತ್ತು!  ವಿಜಯ ಯಾತ್ರೆ ಮುಗಿಸಿ ಹಿಂದಿರುಗಿದ್ದ ಮಹಾರಾಜರೇ ಸ್ವತಃ ಅಮ್ಮನವರ ರಥವನ್ನು ಎಳೆಯಲಿದ್ದರು ! ಕೇಳಬೇಕೆ ಜನರ ಉತ್ಸಾಹಕ್ಕೆ ? ಪೆರ್ಬೊಳಲ್ ನಾಡಿನ ಮೂವತ್ತು ಊರುಗಳಿಂದಲೂ ಮಾನ್ಯಪುರಕ್ಕೆ ಆಗಮಿಸಿದ ಪ್ರಜೆಗಳು ಆ ವಿಶೇಷ ದೃಶ್ಯ ನೋಡಲು ಮುಗಿಬಿದ್ದರು ! 
 ಆ ಸಮಯದಲ್ಲಿ  ಕೈಕೂಸಾಗಿದ್ದ ವೆಂಕನನ್ನೂ ಎತ್ತಿಕೊಡು ಅವನ ಇಡೀ ಕುಟುಂಬ ಜಾತ್ರೆಗೆ ತೆರಳಿತ್ತು .  ಅಮ್ಮನ ಕಂಕುಳಲ್ಲಿ ಕುಳಿತು ಜಾತ್ರೆಯ  ಕಾರ್ಯಕ್ರಮಗಳನ್ನು ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದ್ದ ಪುಟ್ಟ ವೆಂಕ . 

                                                                                              

ಜಾತ್ರೆಯಿಂದ  ಹಿಂದಿರುಗಿದಮೇಲೂ ವೆಂಕನಿಗೆ ಅದೇ ನೆನಪು . ಜಾತ್ರೆಯಲ್ಲಿ ಆಟಿಕೆಗಳ ಅಂಗಡಿಯಿಂದ ಅಪ್ಪಯ್ಯ ಅವನಿಗೆ ಅನೇಕ ಆಟಿಕೆಗಳನ್ನು ಕೊಡಿಸಿದ್ದರು  . ಅವುಗಳಲ್ಲಿ ಅವನಿಗೆ ಒಂದು ಮರದ ಚಕ್ಕಡಿಯೇ ಬಹಳ ಪ್ರಿಯವಾದ ಆಟಿಕೆಯಾಗಿತ್ತು! ಅವನಿಗಿಷ್ಟವಾದ  ಅಮ್ಮನವರ ಪುಟ್ಟ ಮಣ್ಣು ವಿಗ್ರಹವನ್ನು ಅದರಲ್ಲಿರಿಸಿ , ಬೇಲಿಯಿಂದ ಕಿತ್ತು ತಂದ ಹೂವುಗಳಿಂದ ಪೂಜೆ ಮಾಡುವುದು ಅವನ ಮೆಚ್ಚಿನ ಆಟವಾಗಿದ್ದಿತು!  ಒಮ್ಮೊಮ್ಮೆ  ಚಕ್ಕಡಿಗೆ ದಾರವನ್ನು ಕಟ್ಟಿ  ಮನೆಯಲ್ಲೆಲ್ಲ ಎಳೆದುಕೊಂಡು ಓಡಾಡಿ 'ರಥೋತ್ಸವ'ವನ್ನೂ  ಮಾಡುತ್ತಿದ್ದ  !
  ವೆಂಕ ಬೆಳೆಬೆಳೆಯುತ್ತ ಅವನಿಗೆ ಪೂಜಾ ಕಾರ್ಯಗಳಲ್ಲಿದ್ದ ಆಸಕ್ತಿಯೂ  ಬೆಳೆಯಿತು . ಗೆಳೆಯರೊಂದಿಗೆ ಒಂದು ಯುವ ಸೈನ್ಯವನ್ನೂ ಕಟ್ಟಿಕೊಂಡಿದ್ದ . ಗ್ರಾಮದಲ್ಲಿ ಜಾತ್ರೆ ಇರಲಿ, ಉತ್ಸವ ಇರಲಿ, ಇಲ್ಲ ಇನ್ನೂ ಏನೇ ಸಂಭ್ರಮ ಇರಲಿ ವೆಂಕ ತನ್ನ ಸೈನ್ಯದೊಂದಿಗೆ ಎಲ್ಲ ಕೆಲಸ ಕಾರ್ಯಗಳಿಗೂ ನೆರವಾಗುತ್ತಿದ್ದ . 

" ಏನೋ ಅಕ್ಕ ! ದುಗ್ಗಲಮ್ಮ ದುಗ್ಗಲಮ್ಮ ಅಂತ ಅತಿಯಾಗಿ ಹಚ್ಕಂಡಾವ್ನೆ ನಮ್  ವೆಂಕ ! ಅಮ್ಮನ್ನ ನೋಡ್ಕತ್ತೀನಿ ಅಂತ ದೊಡ್ಡ ಅಪಘಾತಕ್ಕೆ ಸಿಕ್ಕೊಂಡಿದ್ನಂತೆ ? " ಚಿಕ್ಕಮ್ಮ ಆತಂಕದಿಂದ ಪ್ರಶ್ನಿಸಿದಳು . 
ಅವ್ವನಿಗೆ ಆ ಘಟನೆಯನ್ನು ಈಗ ನೆನಪಿಸಿಕೊಂಡರೂ ಮೈಯೆಲ್ಲಾ ಕಂಪಿಸುತ್ತದೆ .  ಅಂದು ಗಾವುಂಡರಿಂದ  ಸಂದೇಶ ಹೊತ್ತು ಬಂದಿದ್ದ ತಾತಪ್ಪ , ಸೀದ ದುರ್ಗಿ ಕಲ್ಲು ತಯಾರಾಗುತ್ತಿದ್ದ ಕೊಟ್ಟಿಗೆಯನ್ನು ಕುರಿತು ನಡೆದಿದ್ದರು  . 
" ಮಾರಾಯ ! ಕಲ್ಲಲ್ಲಿ ಕೆತ್ತ ಬೇಕಾದ ಬರಹವನ್ನ ಈ ತಾಳೆ ಗರೀಲಿ ಬರ್ಕಂಡ್ ತಂದೀವ್ನಿ ! ಗಾವುಂಡರು ಲಿಪಿಯನ್ನ ಚಾಚೂ ತಪ್ದಂಗೆ ಕೆತ್ಬೇಕು ಅಂದಾವ್ರೆ ! " ಎನ್ನುತ್ತ ತನನ್ನು  ಸ್ವಾಗತಿಸಲು ಕೊಟ್ಟಿಗೆಯಿಂದ   ಹೊರಬಂದ ಅಪ್ಪಯ್ಯನ ಕೈಗೆ ತಾಳೇಗರಿಯನ್ನು ಕೊಟ್ಟರು  ತಾತಪ್ಪ . 
" ಏನ್ ಯೋಚ್ನೆ ಬೇಡ ತಾತಪ್ಪ ! ದುರ್ಗಿ ಎಲ್ಲ ನೋಡ್ಕತ್ತಾಳೆ ! ಅವಳ ದಯೆಯಿಂದ ಎಲ್ಲ ಚಂದವಾಗಿ ನಡೀತೈತೆ ! " ಎಂದು ಧೈರ್ಯ ನುಡಿದರು ಅಪ್ಪಯ್ಯ . 
" ಅಯ್ಯೋ ! ಲೇ ವೆಂಕಾ ! " 
  ಇದ್ದಕ್ಕಿದ್ದಂತೆ ತಾತಪ್ಪ ಗಟ್ಟಿಯಾಗಿ ಚೀರಿದ್ದೂ ಕೊಟ್ಟಿಗೆಯ ಗೋಡೆ ಕುಸಿದು ಭಾರಿ ಶಬ್ದದೊಂದಿಗೆ ಸೂರು ಸರಿದಿದ್ದೂ ಒಮ್ಮೆಗೇ  ನಡೆದುಹೋಯಿತು  !
'' ವೆಂಕ ! ವೆಂಕ !" ಎಂದು ಉದ್ಗರಿಸುತ್ತ ಅಪ್ಪಯ್ಯ ಮತ್ತು ತಾತಪ್ಪ ಇಬ್ಬರೂ ಸೇರಿ ಬಿದ್ದಿದ್ದ ಮುರುಕಲುಗುಪ್ಪೆಯನ್ನು ಬದಿಗೆ ತಳ್ಳಿದರು . 
ಅಷ್ಟು ಹೊತ್ತಿಗೆ ಶಬ್ದ ಕೇಳಿ ಓಡಿಬಂದಿದ್ದ ಅವ್ವ ಬಾಯಿ ಬಡಿದುಕೊಂಡು ' ವೆಂಕಾ ! ವೆಂಕಾ !" ಎಂದು ರೋಧಿಸ ತೊಡಗಿದಳು . 
 ವೆಂಕ ಕಾಣಿಸಿಕೊಂಡಾಗ  ಅವನಿದ್ದ ಪರಿಸ್ಥಿತಿಯನ್ನು ಕಂಡು ಮೂವರೂ ದಿಗ್ಬ್ರಾಂತರಾದರು . 
ದುಗ್ಗಲಮ್ಮನಿಗೆ ಯಾವ ಹಾನಿಯೂ ಸಂಭವಿಸದಂತೆ  ಅವಶೇಷಗಳಿಗೆ  ತನ್ನ ಬೆನ್ನನ್ನು ಒಡ್ಡಿ ದುರ್ಗಿಕಲ್ಲನ್ನು ಮರೆಮಾಚುವಂತೆ ಅವಳನ್ನು ತಬ್ಬಿ ಕುಳಿತಿದ್ದ ವೆಂಕ !
ಅಪ್ಪಯ್ಯ ಅವನನ್ನು ಎತ್ತಿಕೊಂಡು ಹೊರಗೆ ತಂದರು . ಅಮ್ಮ ಅವನ ಮುಖಕ್ಕೆ ನೀರು ಚಿಮುಕಿಸಿದಳು . ಮಡಿಲಲ್ಲಿ ಮಲಗಿಸಿಕೊಂಡು ನೀರು ಕುಡಿಸಿದಳು . 
''  ದುಗ್ಗಲಮ್ಮ ! ದುಗ್ಗಲಮ್ಮ .... "
" ಅವ್ಳು ಚಂದಾಗೇ  ಆವ್ಳೆ ಮಗ ! ನಿನಗೇನೂ ಆಗಿಲ್ಲತಾನೇ !" ಅವ್ವ ಅವನ ತಲೆ ನೇವರಿಸಿ  ಮುದ್ದಿಸಿದಳು  . 
" ಅವ್ಳಿಗೇನಾರ ಆಗಿದ್ರ  ಬ್ಯಾರೆ ಕಲ್ಲು ತಂದು ಕೆತ್ಬೋದಿತ್ತು ! ನಿನಗೇನಾರ ಆಗಿದ್ರ ..... " ಅಪ್ಪಯ್ಯನ ಕಣ್ಣುಗಳಲ್ಲಿ ನೀರು ಜಿನುಗಿತು . 
" ಅಪ್ಪಯ್ಯ ! ನಾವು ದುಗ್ಗಲಮ್ಮನ್ನ ನೋಡ್ಕಂಡ್ರೆ ನಮ್ಮನ್ನ ಅವ್ಳು ನೋಡ್ಕತ್ತಾಳೆ ಅಂತ ನೀನೆ ಯೋಳಿದ್ದೇ ಅಲ್ವೇ ? ಅದಕ್ಕೆ ಅವಳನ್ನ ನಾನು ಯಾವಾಗ್ಲೂ ನೋಡ್ಕತ್ತೀನಿ ! ಅವಳೂ ನನ್ನ  ನೋಡ್ಕತ್ತಾಳೆ !  " ಎಂದ  ವೆಂಕ . 
ನಿಜಕ್ಕೂ ದುಗ್ಗಲಮ್ಮನ ದಯೆಯೇ ಇರಬೇಕು ! ವೆಂಕ ಆ ಅಪಘಾತದಿಂದ ಸಣ್ಣ ಗಾಯಗಳೊಂದಿಗೆ  ತಪ್ಪಿಸಿಕೊಂಡಿದ್ದ !
" ನೋಡ್ಕಳಪ್ಪಾ ನನ್ನಪ್ಪಾ ! ಚೆನ್ನಾಗ್ ನೋಡ್ಕೊ  ! ನಿನ್ ದುಗ್ಗಲಮ್ಮನ್ನ  ನೋಡ್ಕಂಡು ನೂರು ವರ್ಷ ಚೆನ್ನಾಗಿರು ! " ಭಾವುಕರಾಗಿ ಹರಸಿದ್ದರು ತಾತಪ್ಪ . 
" ನೂರು ವರ್ಷ ಅಷ್ಟೆಯಾಕೆ ತಾತಪ್ಪೋವ್ !  ನನ್ನ ದುಗ್ಗಲಮ್ಮನ್ನ ಸಾವಿರ ವರ್ಷ ಆದ್ರೂ  ನಾನು ನೋಡ್ಕಂಡೇ  ನೋಡ್ಕತ್ತೀನಿ ! " 
ಆ ಸ್ಥಿತಿಯಲ್ಲೂ  ಉತ್ಸಾಹದಿಂದ ವೆಂಕ ನುಡಿದದ್ದು ಕೇಳಿ ಅಂದು ಎಲ್ಲರೂ ಹಗುರವಾದ ಮನಸ್ಸಿನೊಂದಿಗೆ ನಕ್ಕಿದ್ದರು !

  ಹಳೆಯ ನೆನಪುಗಳಿಂದ ಹೊರಬಂದ ಅವ್ವ  '' ಎಲ್ಲ ಒಳಿತೇ ಆಯ್ತಲ್ಲ ಬಿಡು ! ಇನ್ನೇನು ದುರ್ಗಿ ಕಣ್ಣು ತೆರೀತಾಳೆ ! ನಡಿ ಆರತಿಗೆ ಅಣಿ ಮಾಡುವ ! " ಎನ್ನುತ್ತಾ ಚಿಕ್ಕಮ್ಮನನ್ನು ಎಬ್ಬಿಸಿದಳು .  

" ಅಪ್ಪಯ್ಯ ! ಅಮ್ಮ ಕಣ್ತೆರೆದಳೆ ? " ಏದುಸಿರು ಬಿಡುತ್ತ ಓಡಿಬಂದ ವೆಂಕ . 
 " ಬಾರಾ ವೆಂಕಾ ! ನೀನಿಲ್ಲದೇ ಅಮ್ಮ ಕಣ್ಣು ತೆರೆದಾಳೇನೋ  ? " ಚಿಕ್ಕಪ್ಪನೊಂದಿಗೆ ಮಾತನಾಡುತ್ತಲೇ  ಸಿದ್ಧವಾಗಿದ್ದ ದುರ್ಗಿ ಕಲ್ಲನ್ನು ಸ್ವಚ್ಛ ಮಾಡುತ್ತಿದ್ದ ಅಪ್ಪಯ್ಯ ಕಿರುನಗೆ ಬೀರಿದರು .  
 ದುಗ್ಗಲಮ್ಮನ ಮೊದಲ ದೃಷ್ಟಿ ತನ್ನಮೇಲೇ ಬೀಳಬೇಕೆಂಬ ರಹಸ್ಯವಾದ ಮನದದಾಸೆ ಹೊತ್ತು  ಕಾತರದಿಂದ ಓಡಿಬಂದಿದ್ದ ವೆಂಕ  ನೆಮ್ಮದಿಯ ಉಸಿರೆಳೆದ . ಅವನ ಹಿಂದೆ ಹಿಂದೆಯೇ ಅವನ ಗೆಳೆಯರೂ ಬಂದು ಕೂಡಿದರು .  ತಾತಪ್ಪ ಮೊದಲೇ ಹಾಜರಾಗಿದ್ದರು . 

 ಅಪ್ಪಯ್ಯ ಕೈ ಮುಗಿದು, ಒಂದು ನಿಮಿಷ ಕಣ್ಮುಚ್ಚಿ  ಧ್ಯಾನಿಸಿದರು . ನಂತರ  ಸಣ್ಣದಾದ ಉಳಿ ಹಿಡಿದು ಅತಿ  ಜಾಗರೂಕತೆ ವಹಿಸಿ  ನವುರಾಗಿ ಕೆತ್ತ ತೊಡಗಿದರು . ನೋಡ ನೋಡುತ್ತಿದ್ದ ಹಾಗೆಯೇ ದುರ್ಗಿಯ ಎರಡು  ಕಣ್ಣುಗಳೂ ಒಂದೊಂದಾಗಿ  ಅರಳ ತೊಡಗಿದವು . 

ಮಹಿಷನ  ತಲೆಯಮೇಲೆ ವೈಯಾರವಾಗಿ ನಿಂದ ದುರ್ಗಿ ತಲೆಯಮೇಲೆ ಕಿರೀಟಮಕುಟವನ್ನು ಧರಿಸಿದ್ದಳು . ಸಕಲ ಆಭರಣಗಳನ್ನೂ ತೊಟ್ಟು ಸರ್ವಾಲಂಕಾರ ಭೂಷಿತೆಯಾಗಿದ್ದಳು . ಚತುರ್ಭುಜಗಳನ್ನು ಹೊಂದಿದ್ದವಳ ಬಲಗೈ ಧಾನ್ಯ ಪಾತ್ರೆಯನ್ನು ಹಿಡಿದಿತ್ತು.  ಮತ್ತೊಂದು ಬಲಗೈ ಖಡ್ಗ ಪಿಡಿದಿತ್ತು . ಎಡಗೈಗಳಲ್ಲಿ ಒಂದರಲ್ಲಿ ತ್ರಿಶೂಲ , ಮತ್ತೊಂದರಲ್ಲಿ ಶಂಖ . ಇಗೋ ಅವಳು ಕಣ್ಣುಗಳನ್ನು  ತೆರೆದು ವೆಂಕನ ಮೇಲೆ ತನ್ನ ಕರುಣೆ ಸೂಸುವ ದೃಷ್ಟಿಯನ್ನು   ಹರಿಸುತ್ತಿರುವಳು !

" ದುಗ್ಗಲಮ್ಮನಿಗೆ  ಜೆಯವಾಗಲಿ ! " ತನ್ನನ್ನರಿಯದೆ ಗಟ್ಟಿಯಾಗಿ ಉದ್ಗರಿಸಿದ  ವೆಂಕ.  
" ದುರ್ಗಲಕ್ಷ್ಮಿಗೆ ಜೆಯವಾಗಲಿ !"
" ಭಂಡಾರ ರಕ್ಷಕಿಗೆ ನಮೋ ನಮೋ ! "
" ಧನ ಧಾನ್ಯ ಸಂಪತ್ಕಾರಿಣಿಗೆ ನಮೋ ನಮೋ ! "
ತಾತಪ್ಪ ಆವೇಶಗೊಂಡು ಘೋಷಿಸಿದಾಗ ಉಳಿದವರೆಲ್ಲ ಜಯಕಾರ ಹಾಕಿದರು.   
ವೆಂಕನ ಅಭಿಮಾನ ದೇವಿಗೆ ಅಪ್ಪಯ್ಯ ಅವನ ಕೈಯಿಂದಲೇ  ಕಾಯಿ ಒಡೆಸಿದರು . 
ಅಮ್ಮ ದುರ್ಗಿ ಕಲ್ಲಿಗೆ ಕಡಲೆ ಪುರಿ, ಹಣ್ಣು ಬೆಲ್ಲ ಸಮರ್ಪಿಸಿ ಮಂಗಳ ಆರತಿ ಮಾಡಿದಳು .  
ಪೆರ್ಬೊಳಲ್  ದುಗ್ಗಲಮ್ಮ ಮರುದಿನದ ಉತ್ಸವಕ್ಕೆ ತಯಾರಾಗಿಬಿಟ್ಟಳು ! 

ಬೆಳಕು ಹರಿಯುವ ವೇಳೆಗೆ ಗ್ರಾಮದ ಎಲ್ಲ ಮನೆಗಳ ಮುಂದೆಯೂ ವಿವಿಧ ವಿನ್ಯಾಸಗಳಲ್ಲಿ ರಂಗು ರಂಗಿನ  ರಂಗೋಲಿಗಳು ಕಂಗೊಳಿಸ ತೊಡಗಿದ್ದವು  . ಊರ ಜನರೆಲ್ಲಾ ಆಗಲೇ ಮಿಂದು  ಹೊಸ ಬಟ್ಟೆ ಧರಿಸಿ ದುರ್ಗಿ ಕಲ್ಲಿನ ಮೆರವಣಿಗೆಗೆ ಸಿದ್ಧರಾಗಿದ್ದರು . ವೆಂಕ ತರಾತುರಿಯಿಂದ  ಮೆನೆಯ ಮುಂದೆ ಇರಿಸಿದ್ದ ಪಲ್ಲಕಿಯನ್ನು ಅಲಂಕರಿಸುವುದರಲ್ಲಿ ನಿರತನಾಗಿದ್ದನು . ಸ್ವಲ್ಪ ಹೊತ್ತಿನಲ್ಲೇ  ಹೂವುಗಳಿಂದಲೂ ಹೊಳಪು ಬಟ್ಟೆಗಳಿಂದಲೂ ಅಲಂಕರಿಸಲ್ಪಟ್ಟ ಪಲ್ಲಕಿಯಲ್ಲಿ ದುಗ್ಗಲಮ್ಮನನ್ನು ಹೊತ್ತು ತಂದು ಕೂರಿಸಿದರು ವೆಂಕ ಮತ್ತು ಅವನ ಗೆಳೆಯರು .   ಸೂರ್ಯೋದಯಕ್ಕೆ ಸರಿಯಾಗಿ ಮಂಗಳ ವಾದ್ಯ ಮೊಳಗಲು  ಜೈಜೈಕಾರದೊಂದಿಗೆ ಪೆರ್ಬೊಳಲ್ ಕೆರೆಯನ್ನು ಕುರಿತು ಹೊರಟೇ  ಬಿಟ್ಟಳು ದುರ್ಗಿ !

 ಅಲಂಕರಿಸಲ್ಪಟ ಕಲಶಗಳು , ತಂಬಿಟ್ಟು , ಬೆಳಕುಗಳು ,  ಮೊಳಕೆಕಾಳುಗಳು , ಅರಿಶಿನದ ಗೊನೆಗಳು , ಅಡಿಕೆಮರದ ಹೂಗೊಂಚಲುಗಳು , ಹೊಂಬಣ್ಣದ ಧಾನ್ಯ ತೆನೆಗಳು ಮುಂತಾದ ಪೂಜಾ ಸಾಮಗ್ರಿಗಳನ್ನುಬುಟ್ಟಿಗಳಲ್ಲಿರಿಸಿ , ತಲೆಯಮೇಲೆ  ಹೊತ್ತು ಪಲ್ಲಕಿಯ ಹಿಂದೂ ಮುಂದೂ ಸಾಗುತ್ತಿದ್ದರು ಬಣ್ಣ ಬಣ್ಣ ಸೀರೆಗಳನ್ನುಟ್ಟ  ಗ್ರಾಮದ ಹೆಂಗೆಳೆಯರು.   ತನಗರಿವಿಲ್ಲದೆಯೇ ವಾದ್ಯದ ತಾಳಕ್ಕೆ ಸರಿಯಾಗಿ ಹೆಜ್ಜೆಹಾಕುತ್ತ  ದುರ್ಗಲಕ್ಷ್ಮಿಗೆ ಅಲಂಕಾರದ ಕೊಡೆಯನ್ನು ಹಿಡಿದು ಪಲ್ಲಕಿಯ ಹಿಂದೆ ನಡೆಯುತ್ತಿದ್ದರು  ಎಲ್ಲರಿಗಿಂದ ಎತ್ತರವಾಗಿದ್ದ ತಾತಪ್ಪ!    ವೆಂಕ ತನ್ನ ಸಹಪಾಠಿಗಳೊಂದಿಗೆ ಪಲ್ಲಕಿಯ ಮುಂದೆ ಉತ್ಸಾಹದಿಂದ ತಮಟೆ ತಾಳಕ್ಕೆ ಕುಣಿಯುತ್ತ ಮುಂದೆ ಮುಂದೆ ಸಾಗಿದ . 

 ಪೆರ್ಬೊಳಲ್ ನಾಡಿಗೆ ಸೇರಿದ ಮೂವತ್ತು ಊರುಗಳ ನೀರಿನ ಅವಶ್ಯಕತೆಯನ್ನು ಪೂರೈಸುತ್ತಿದ್ದ ಬೃಹದ್ ಕೆರೆ ಪೆರ್ಬೊಳಲ್  ಕೆರೆ .  ಹಾಗಾಗಿ ಕೆರೆಯಮೇಲೆ ದುರ್ಗಿಕಲ್ಲು ನಿಲ್ಲಿಸುವ ವೈಭವವನ್ನು ಕಾಣಲು  ಕೆರೆಯ ಸುತ್ತಮುತ್ತಲಿದ್ದ ಗ್ರಾಮಗಳಿಂದೆಲ್ಲ ಜನರು ಬಂದು ಕೆರೆಯ ದಂಡೆಯಲ್ಲಿ ಕೂಡಿದ್ದರು . ಹೆಂಗಸರೆಲ್ಲ ಕೆರೆಯ ದಂಡೆಯಲ್ಲೇ ಸಾಲಾಗಿ ಒಲೆ ಉರಿಸಿ ದುರ್ಗಿಗೆ ಸಮರ್ಪಿಸಲೆಂದು ದೊಡ್ಡ ದೊಡ್ಡ ಮಡಕೆಗಳಲ್ಲಿ ಹೊಸ ಅಕ್ಕಿ ಬೆಲ್ಲ ಸೇರಿಸಿ ಉಗ್ಗಿ ಬೇಯಿಸುತ್ತಿದ್ದರು . 

ಮಂತ್ರ ಘೋಷ ಮತ್ತು ವಾದ್ಯಘೋಷ ಮೊಳಗುತ್ತಿರಲು ಕೂಡಿದ್ದ ಜನರೆಲ್ಲಾ 'ಅಮ್ಮಾ ಕಾಪಾಡು  ತಾಯೆ' ಎಂದು  ಉದ್ಗರಿಸಿ ಹೂಮಳೆ ಗರೆಯುತ್ತಿರಲು ಪೆರ್ಬೊಳಲ್ ದುರ್ಗಿಕಲ್ಲನ್ನು ಕುಳ್ಳರಿಸುವ  ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು . 
ದೇವಿಗೆ ಪೂಜೆ ಮತ್ತು  ಮಂಗಳಾರತಿಯಾದಮೇಲೆ  ಗ್ರಾಮದ ಗಾವುಂಡರು ಜನರನ್ನು ಕುರಿತು ಭಾಷಣವನ್ನು ಪ್ರಾರಂಭಿಸಿದರು  . 

                                                                                
'' ಮಹಾಜನಗಳೇ ! ಇವತ್ತಿನ ದಿನ ನಮಗೆಲ್ಲ ಶುಭದಿನ ! ಕೆರೆ ತುಂಬಿ ತುಳುಕ್ತಯ್ತೆ ! ಬೆಳೆ ಸಮೃದ್ಧಿಯಾಗಿ ಆಗೈತೆ ! ನಮ್ಮ ಪೆರ್ಬೊಳಲ್ ಕೆರೆಯನ್ನ ಕಾಯಕ್ಕೆ ನಮ್ಮಮ್ಮ ದುರ್ಗಿ ಬಂದೇಬಿಟ್ಟವಳೇ ! ಇನ್ಮುಂದೆ ನಮ್ ನಾಡಲ್ಲಿ ಕ್ಷಾಮ ಅನ್ನೋ ಮಾತೇ ಇರ್ಲಾರ್ದು ! ಎರಡು ವರ್ಶಗಳಿಂದ ಮಳೆ ಇಲ್ದೆ ಕೆರೆಯಾಗೆ ನೀರಿಲ್ಲದಾಗಿ ಬೆಳೆಗಳು ಒಣಗಹತ್ತಿದ್ದವು  . ಈ ಸಲವೂ ಅಂಗೇನಾರ ಆಗಿದ್ರ ಬಂಡಾರದ ಧಾನ್ಯಗಳೆಲ್ಲ ಕಾಲಿಯಾಗಿ ನಮಗೆಲ್ಲ ಒಟ್ಟೆಗೆ ಇಟ್ಟಿಲ್ಲದ ಸ್ಥಿತಿ ಬರ್ತಿತ್ತೋ ಏನೋ ? ಅಂತಾ ಸಮಯದಾಗೆ ಗ್ರಾಮದ ಹಿರಿಯೋರೆಲ್ಲ ಕೂಡಿ ಒಂದು ನಿರ್ಧಾರಕ್ಕೆ ಬಂದ್ವು . ಕೆರೆ ಕಟ್ಟೆ ತೂಬುಗಳ ಮ್ಯಾಗೆ ದುರ್ಗಮ್ಮನ್ನ  ಕುಳ್ರಿಸೋದು ನಮ್ಮ ಗಂಗವಾಡಿ ರಾಜ್ಯದಾಗೆ ಹಿಂದಿನಿಂದಲೂ ಬಂದಿರೋ ಪದ್ಧತಿ . ನಮ್ಮೂರಲ್ಲೂ ದೇವಿ ಸ್ಥಾಪನೆ ಮಾಡಿದ್ರೆ   ನೀರು ಬೆಳೆ ಯಾವುದಕ್ಕೂ ಅಭಾವ ಬರೋದಿಲ್ಲ ಅನ್ನಿಸ್ತು  ! ಅಮ್ಮನಿಗೆ ಹರಸ್ಕೊಂಡ ಮ್ಯಾಕೆ ಸಕಾಲಕ್ಕೆ ಮಳೆ ಬಂತು ! ಕೆರೆ ತುಂಬಿತು ! ಒಳ್ಳೆ ಬೆಳೆಯಾಯ್ತು ! ಹರಸ್ಕೊಂಡಂಗೆ ಉಳುಮೆ ಮಾಡೋ ಜನ , ಗದ್ದೆ ಕಾಯೋ ಜನ ,  ಗ್ರಾಮದ ಇನ್ನೂ ಅನೇಕ ಜನರು ಸೇರಿ ಇವತ್ತು ದುರ್ಗಿಕಲ್ಲಿನ ಸ್ಥಾಪನೆ ಮಾಡಿ ಹರಕೆ ನೆರವೇರಿಸಿದ್ದೂ ಆಯ್ತು  .  ಇನ್ಮುಂದೆ ನಮ್ಮನ್ನೆಲ್ಲ ಈ ಕೆರೆಯಮ್ಮನೇ ಕಾಪಾಡ್ತಾಳೆ .  ಅವಳ ಆರಾಧನೆ ಮಾಡ್ತಾ ಅವಳನ್ನ ಜೋಪಾನವಾಗಿ ನೋಡ್ಕಂಡ್ರೆ  ನಮ್ಮ ಮ್ಯಾಲೆ ಅವಳ ದಯೆ ಎಂದಿಗೂ  ಇರತೈತೆ ! ದುರ್ಗಿ ಕಲ್ಲನ್ನು  ನಾಶ ಮಾಡ್ದೋರಿಗೆ ಪಾಪ ಸುತ್ಕೊಳೋದು ದಿಟ ! ದುರ್ಗಿ ಕಲ್ಲಿನ ಮ್ಯಾಗೆ ಅದನ್ನೇ ಬರೆದಿರೋದು!  ಪೆರ್ಬೊಳಲ್ ದುರ್ಗಿಕಲ್ಲು ನಮ್ಗೆಲ್ಲಾ ಒಳ್ಳೇದೇ ಮಾಡ್ಲಿ ! " 
ಭಾಷಣವನ್ನು ಗಮನವಾಗಿ ಕೇಳಿಸಿಕೊಳ್ಳುತ್ತಿದ್ದ  ವೆಂಕ, ಸಮಾರಂಭವೆಲ್ಲ ಮುಗಿದು ಜನರ ಸಂದಣಿ ಕಡಿಮೆಯಾದಮೇಲೂ ತನ್ನ ದುಗ್ಗಲಮ್ಮನನ್ನೇ ನೋಡುತ್ತಾ ಬಹಳ ಹೊತ್ತಿನವರೆಗೆ ಅಲ್ಲೇ ನಿಂತ . 
'ಸಾವಿರ ವರ್ಷಗಳಾದ್ರೂ ನಿನ್ನ ನಾನು ನೋಡ್ಕಂಡೇ ನೋಡ್ಕತ್ತೀನಿ ದುಗ್ಗಲಮ್ಮಾ ! '

****************************************************************************

  ಇಂದಿನ ಕಥೆ :

ತರುಣ್ ಮತ್ತು ರಶ್ಮಿ ಬೆಂಗಳೂರಿನಲ್ಲಿ ನೆಲೆಸಿ  ಇನ್ನೂ ಎರಡು ವರ್ಷಗಳೇ ಆಗಿದ್ದವು . ಕಲ್ಕತ್ತಾ ಮತ್ತು ಮುಂಬೈನಿಂದ ಕೆಲಸದ ನಿಮಿತ್ತ ಆಗಮಿಸಿದ್ದ ಅವರಿಗೆ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಹೊರತಾಗಿ ಬೆಂಗಳೂರಿನ ಸಂಪೂರ್ಣವಾದ ಪ್ರಕೃತಿ ಸೌಂದರ್ಯವನ್ನು ಕಂಡು ಆನಂದಿಸಲು ಸಮಯ ದೊರೆತಿರಲಿಲ್ಲ . 
ಮಾನ್ಯತಾ ಟೆಕ್ ಪಾರ್ಕಿನಲ್ಲಿ ಕೆಲಸ ಮಾಡುತ್ತಿದ್ದರೂ ಸಮೀಪದಲ್ಲೇ ಇದ್ದ ಹೆಬ್ಬಾಳ್  ಕೆರೆಯತ್ತ ಅವರ ಗಮನ ಹರಿದಿರಲಿಲ್ಲ  . 
 ಸಹಪಾಠಿ ಅರ್ಜುನ್ ಒಂದು ವಾರದ ಅಂತ್ಯದಲ್ಲಿ ಪಕ್ಷಿ ವೀಕ್ಷಣೆಗಾಗಿ ಹೆಬ್ಬಾಳ್ ಕೆರೆಗೆ ಹೋಗುತ್ತಿರುವ  ವಿಷಯವನ್ನು ಪ್ರಸ್ತಾಪಿಸಿದಾಗ ಇಬ್ಬರೂ ಅವನೊಂದಿಗೆ ಖುಷಿಯಿಂದ  ಹೊರಟು ನಿಂತರು . 
 ನಗರಾಭಿವೃದ್ಧಿ ಎಂಬ ಬಕಾಸುರನಿಗೆ ತುತ್ತಾಗಿ ಕೈಬಿಟ್ಟು ಹೊಗಲಿದ್ದ ಕೆರೆ !ಇಂದು ಪುನರುಜ್ಜೀವನಗೊಳಿಸಲ್ಪಟ್ಟು ನಾಗರಿಕರನ್ನೂ ಪಕ್ಷಿ ಸಂಕುಲಗಳನ್ನೂ ತನ್ನ ಸುಂದರ ಪರಿಸರದೆಡೆಗೆ  ಕೈಬೀಸಿ ಕರೆಯುತ್ತಿರುವುದನ್ನು ವಿಸ್ಮಯದಿಂದ ನೋಡಿದಳು ರಶ್ಮಿ . 
" ತುಂಬಿದ ಕೆರೆ  ! ಅಬ್ಬಾ ! ಎಷ್ಟು ಸುಂದರವಾಗಿದೆ ! ಇದು ನಾಶವಾಗಲಿತ್ತೆ ? " ಎಂದು ನಂಬಲಾರದೆ ಆ ಜಲರಾಶಿಯನ್ನು ವೀಕ್ಷಿಸಿದಳು  ರಶ್ಮಿ . 
" ಹೂಮ್ ! ಸಚ್ ಆ ಷೇಮ್ ! ಒಂದು ಐತಿಹಾಸಿಕವಾದ ಹೆರಿಟೇಜ್ ಲೇಕನ್ನ ಕಳೆದುಕೊಳ್ಳೋದ್ರಲ್ಲಿದ್ವಿ  ! "
" ಹೆರಿಟೇಜ್ ಲೇಕ್ ! ಅಂದ್ರೆ ಇದಕ್ಕೆ ಸುಮಾರು ಎಷ್ಟು ವರ್ಷಗಳಿರಬಹುದು ? " ಎಂದು ಆಕಸ್ಮಿಕವಾಗಿ ಪ್ರಶ್ನಿಸಿದ ತರುಣ್ . 
 ಇದರ ನಿರ್ಮಾಣವಾಗಿ ಒಂದು ಸಾವಿರ ವರ್ಷಗಳಿಗೂ ಹೆಚ್ಚಾಗಿದೆ  ಅಂದ್ರೆ ನಂಬುತ್ತೀರಾ ? " 
" ವಾಟ್ ? ತಮಾಷೆ ಮಾಡ್ತಿದ್ದೀಯಾ ಅರ್ಜುನ್ ?"
" ನೋ ಕಿಡ್ಡಿಂಗ್ ! ನೀವು ಕೆರೆಯನ್ನೂ ಪಕ್ಷಿಗಳನ್ನೂ ಕ್ಲಿಕ್ಕಿಸಿದಮೇಲೆ ಹೇಳಿ ! ಸಾವಿರಾರು ವರ್ಷಗಳಿಂದ ಜೀವಂತವಾಗಿರೋ ಈ  ಕೆರೆಗೆ ಸಾಕ್ಷಿಯಾಗಿ ನಿಂತಿರೋ  ಓರ್ವ ಲೇಡಿಯನ್ನು ನಿಮಗೆ ಪರಿಚಯ ಮಾಡಿಸ್ತೀನಿ ! " ಎಂದು ಮರ್ಮ ನಗೆ ಬೀರಿದ ಅರ್ಜುನ್ . 
" ವಾಟ್ ? ಯಾರಪ್ಪಾ ಅದು ? " ಒಗಟಾಗಿ ಮಾತನಾಡಿದ ಅರ್ಜುನನ್ನು ಕುತೂಹಲದಿಂದ ಪ್ರಶ್ನಿಸಿದಳು ರಶ್ಮಿ . 

                                                                        

" ಅವಳ ಹೆಸರು ದುರ್ಗಿ ! " ಮುಗುಳುನಗೆ ಬೀರಿ ನುಡಿದ ಅರ್ಜುನ್ . 
ಸ್ವಲ್ಪ ಹೊತ್ತಿನಲ್ಲೇ ಭೂಪಸಂದ್ರದ ದುರ್ಗಿಕಲ್ಲಿನ ಪುಟ್ಟ ಗುಡಿಗೆ ಗೆಳೆಯರನ್ನು ಕರೆದೊಯ್ದ  ಅರ್ಜುನ್ . 
" ಓ ! ಮಾ ದುರ್ಗಾ ! " ಎಂದು  ಕಣ್ಣರಳಿಸಿದ  ತರುಣ್ . 
" ವೆರಿ ಬ್ಯೂಟಿಫುಲ್ ! ತುಂಬಾನೇ ಪುರಾತನವಾದ ಶಿಲೆ ಇದ್ದ ಹಾಗಿದೆ  ! " ಎಂದಳು ರಶ್ಮಿ . 
" ಹೌದು ! ಸಾವಿರದ ಮುನ್ನೂರು ವರ್ಷಗಳ ಹಿಂದೆ  ಆಡಳಿತ ಮಾಡ್ತಿದ್ದ ಗಂಗರ ಕಾಲದದಿಂದ ಈ   ಕೆರೆಯನ್ನ ಕಾಯ್ತಿರೋ ಅಮ್ಮಾ ಇವ್ಳು  ! " ಎಂದನು ಅರ್ಜುನ್ . 
" ಹುಚ್ಚಾಪಟ್ಟೆ ಬೆಳೀತಿರೋ ಮೆಟ್ರೋ ಸಿಟಿಯಲ್ಲಿ ಇನ್ನೂ ಬದುಕಿದ್ದಾಳಲ್ಲ ದುರ್ಗಾಮಾ ! ಇನ್ಕ್ರೆಡಿಬಲ್ ! " ಎಂದ ತರುಣ್ . 
" ನೂರಾರು ವರ್ಷಗಳಿಂದ ಯಾರಕಣ್ಣಿಗೂ ಕಾಣದಂತೆ ಮಣ್ಣಲ್ಲಿ ಅರ್ಧಂಬರ್ಧ ಹೂತುಹೋಗಿದ್ದಳು . ಹೆಬ್ಬಾಳ್ ಕೆರೆಯ ಸಮೀಪ ಔಟರ್ ರಿಂಗ್ ರೋಡ್ ಕೆಲಸವಾಗುತ್ತಿದ್ದಾಗ,  ಒಂದು ಕಂದಕದಲ್ಲಿ ಬಿದ್ದಿದ್ದ ಅವಳನ್ನು ಕಂಡ  ಓರ್ವ ಯುವಕ ಅವಳನ್ನು ತಂದು ಈ ಗುಡಿಯಲ್ಲಿ ಸ್ಥಾಪಿಸಿದ ! " ದುರ್ಗಿ ಕಲ್ಲಿನ ಬಗ್ಗೆ ಅರ್ಜುನ್ ವಿವರಿಸಿದಾಗ  ತರುಣ್ ಮತ್ತು ರಶ್ಮಿ ಬಹಳ ಆಶ್ಚರ್ಯಗೊಂಡರು . 
" ಇಂತ ಪ್ರಾಮಾಣಿಕತೆಯುಳ್ಳ ಯುವಕರು ಇರುವುದರಿಂದಲೇ ನಮ್ಮ ಪರಂಪರೆ , ಇತಿಹಾಸ ಎಲ್ಲವೂ ಇನ್ನೂ ಬದುಕುಳಿದಿವೆ ! " ಎಂದು ಮೆಚ್ಚಿಕೊಂಡ ತರುಣ್ . 
" ಅದ್ಸರಿ ! ಯಾರು ಆ ರೆಸ್ಪಾನ್ಸಿಬಲ್ ಗೈ ? ಅವನ ಹೆಸರೇನು ? " ಉತ್ಸಾಹದಿಂದ ಕೇಳಿದಳು ರಶ್ಮಿ. 
" ಸ್ಥಳೀಯ ಹುಡುಗನೇ !  ವೆಂಕಟೇಶ್ ಅಂತ !" ಎಂದ ಅರ್ಜುನ್ . 
"ಎಲ್ರೂ ಅವನನ್ನ ವೆಂಕ ಅಂತಲೂ ಕರೀತಾರೆ !"

-------------------------------------------------------------------------------------------------------------
ರೆಫರೆನ್ಸ್ :

--------------------------------------------------------------------------------------------------------------- -

PERBOLAL DUGGALAMMA 

THEN :

                                                                                 

“ Taka-takita Taka-takita Taka-takita dhom-dhom !

Takk-takita takk-takita takk-takita dhom -dhom !”

 The  frenzied beats of the  Tamate drums reverberated all over the banks of the Lake . Three boys were pounding away on the drums while the other boys danced wildly keeping with the rhythm . The ripples and wavelets in brimming Perbolal Tank seemed to keep them company .

Though fully soaked in sweat , the boys, who had been practicing  the beats and the dance moves  since the noon , did not stop .

                                                                                  

“Hey you chimps ! Enough of your monkeying !” Shouted the Oldman , “ There is much work to be done for tomorrow, just jumping around will do no  good !”

“ Who is jumping around , Grandpa !” Shouted back Siddu, in irritation. “ We have  to dance our best tomorrow and need the practice .”

The Oldman was forever scolding the boys , it was his nature and the boys never heeded him .

But it was true that much work had to be  done for the grand event scheduled for the next day. The streets of the village had to be cleaned and decorated with green leaves and flowers . And the place chosen for The Stone  needed to be levelled and a pit dug for erecting it .

Everything had to be perfect for Durgi ! 

Venka had a strong and special attachment for ‘The Durgi Stone’ – that was  the name  the townsfolk had given to the slab Venka’s father was sculpting . But to Venka , the sculpture was always Amma – Duggalamma .

Ever since Father had selected the stone slab , offered it prayer and started drawing the outlines of the goddess on it, Venka had been fascinated and keenly watched , day after day , as the image emerged gradually  , chisel-cut by chisel-cut , from the bare  stone .

The work was almost done ; only the eyes remained to be etched . ‘Opening The Eyes’ was a special ritual in traditional art  and that signaled the completion of the work .

‘It is to be done today’ remembered Venka and he stopped dancing . He wanted to hurry home as he did not want to miss that special moment .

“ Siddu , what Grandpa says is true . There’s a lot of work to be done …..come , friends , we have practiced enough , lets get to the other work ….”

The boys packed their drums and they all washed up in the cool, refreshing water of the Lake , splashing each other playfully . How long it had been since the Lake was so full !

As they all trooped behind Venka , who was hurrying homewards , the Oldman remarked  : “ Learn from Venka  how to obey elders , all you little monkeys….”

When Venka reached home , he found Mother pounding rice for the Thambittu to  be prepared the next day . His Aunt , who had arrived from the next village for the event , was helping her .

                                                                                                

“ Mother , has Duggalamma opened her eyes yet ?  Venka asked anxiously .

“ How will she , in your absence ! “ laughed Mother , “Father is waiting for you, go on ! 

As Venka hurried out, his Aunt remarked : “ Akka , the  fascination for gods and rituals that Venka had when he was a baby  does not seem to have lessened even now!”

Mother smiled and nodded .

   
                                                                                        
  

Ever since they had taken Venka , a toddler then , to the Manne Amma Ratha Festival in Manyapura , the child had been smitten . Perched on his mother's hip he had stared in wide eyed wonder at the merry making crowds , the pageants and the colourful rituals in which the King himself had participated . The little boy had been so impressed that after returning home , he started playing ' Ratha Festival ' with his toy cart !

This interest did not dim as he grew up . He participated enthusiastically  in any festival or fair in their  village , taking it upon himself to organize various things ,  with a group of his friends .

“ Quite a strange interest our Venka has !” Said Mother , “ So long as it is not harming anyone , let it be …..”

“ But , Akka, I heard he got into a mishap because of his extreme fixation  with Durgi?  

Mother sighed . True , there had been that rather scary mishap not very long ago .

That day, he  had accompanied Grandpa, who had brought  the text for the inscription from the Gavunda ( headman),   to the workshop where the Durgi Stone was taking shape . Venka’s father came out to greet him .

The Oldman had just handed the palmleaf text to the sculptor , when there was a loud crashing noise and a part of the thatched roof fell , with a pole that was holding it up.

“ O ! Venka ! Venka ! screamed the Oldman .

Venka’s  father dashed in and both men pulled apart the thatch and poles . Under the heap , they found Venka lying over the half sculpted stone , covering it  protectively .

“ Ayyo ! Venka , my child !  Mother had cried , carrying him out and splashing  water on his face . “Why din't you run out , you silly boy !”

Venka sat up slowly and drank some water . “ Duggalama ?  he mumbled . Fortunately , he was not hurt very badly.  

“ She is fine ….but you could have broken your back ! 

“Mother , I had to save Duggalamma , what if that pole had  damaged her ?”

“ Son, if the stone is damaged , we can get another one and carve again ”  exclaimed Father , his eyes welling up, “If anything serious had happened to you …….”

“ Nothing will happen to me , Father ! If I protect my Duggalamma, She will protect me!”

The Oldman patted his head “ May you live a hundred years my boy , protecting your Duggalamma ! 

“ Why only hundred years, Grandpa ! Even in a thousand years , I will protect Her! ” Laughed  Venka .

Mother shuddered as she remembered that accident . “Anyway , everything turned out well……and tomorrow The Durgi Stone will be consecrated and she will protect our Lake and our Village …..”

Venka entered his father’s workshop, panting . “ Father ! Have the Eyes been opened ? 

“ How could I do it ,” smiled Father “ without you by my side ! I know you want her first glance to  fall on you ! 

“ Alright , here I am ! 

Father selected the finest chisel and sat down to meditate briefly . By now , Mother, Aunt , Uncle and Venka’s friends had assembled at the shed .

After a small prayer, the sculptor started etching the eyes carefully ….soon , both eyes of Durgi took  shape and the face seemed to come alive . How lovely  she was !

She stood upon the head of Mahisha , wearing a crown and ornaments all over . In her four arms she held a bowl of grains, a sword , a trident and a conch . She looked powerful and also benevolent .

“ Hail, Duggalamma !” Venka’s voice rang out and the others joined him .

“ Hail , bestower of prosperity and abundance ! 

Father handed a coconut to Venka and he broke it at the feet  of his beloved Duggalamma . The ladies did the Arati .

Durgi was now ready to take her place as The Protector of The Lake .

The next day , the whole village was up early . Everyone had decorated their doorways . Garlands and festoons fluttered along the streets . Numerous Pots, set up along the bank of the Lake ,  were bubbling away with rice , lentil and jaggery wafting the aroma of delicious Uggi . 

There was music in the air and much dancing as The Durgi Stone was brought in a decorated palanquin to the Lakeside . There, with all due honours , it was installed and worshipped by all.

                                                                              
After the ceremony , the Gavunda ( headman) addressed the gathering :

“ Let us hope, from this day , with Durgi’s blessings, we will never again face famine or draught . For two years, rains had failed us and the lake dried up .  Had it failed this year too , our treasury would have got depleted . But our Elders advised us to install  Durgi on the bank of the lake , following our Gangavadi Tradition . Our prayers have been answered and we received plentiful rains this year . Our Lake is full . And now that Durgi has taken her place , we shall have no more hardships . It is our duty to  honour her always . Those causing  harm to Durgi Stone will incur Sin. That is what is written on the stone to remind everyone and the generations to come.”

After feasting on the various offerings made to Durgi , the crowd started melting away . But Venka stood there for a long time , looking adoringly at his Duggalamma .

“ I will honour and take care of you , Amma . Forever .”

 

******************************************************************

NOW

Rashmi and Tarun , who work in Manyata Tech Park , had moved into Bengaluru almost two years ago  , but had never had a chance to explore the Natural bounties of the City , other than Cubbon Park and Lalbagh .

So it was with great enthusiasm that they agreed to join their colleague  Arjun in one of his weekend  birding trips,  to Hebbal Lake .

They were very impressed by the huge body of water . They had heard that the Lake, which had been  doomed to extinction due to rampant urbanization, had been saved and  revived .

“ It would have been such a shame had this Heritage Lake been destroyed .”

“ How old is this lake ? Was it made by the British ? ” Enquired Tarun .

“It is a little more than one thousand years old .

“ No kidding ! A millenium ? 

“ Absolutely no kidding ! If you are done with clicking pictures , I will take you to a Lady who has been a witness to the life and times of this Lake .

A short while later , the  three were at a  small shrine in Boopasandra .

“ There she is ! Durga ! From Western Ganga times ! 

“ Beautiful ! And so small ! It’s a wonder such  an  ancient icon has survived for  such a long time in a wildly proliferating concrete jungle like this ! “

“ Well , she has had her bad time too . For centuries , she lay discarded, half buried , uncared for and forgotten . When work was going on for the Outer Ring Road near Hebbal ,  a local youth discovered the Stone lying in a pit . He rescued it and shifted it to this temple . 

“ Wow ! That’s noble of him ! There are a few good men after all !  remarked Tarun.

Rashmi nodded :

“Yeah, at least some people care for heritage ……what's his name ? “

“ His name is Venkatesh ” Said Arjun , “ Some  call him Venka .”

 -------------------------------------------------------------------------------------- -----------

Reference :

 https://www.facebook.com/groups/inscriptionstones/permalink/2061803480727543/

---------------------------------------------------- -------------- -----------------------------------------------