Saturday, October 31, 2020

ನುಗ್ಗೆ ಮರದ ದೆವ್ವ ! / GHOST ON THE DRUMSTICK TREE !

ನುಗ್ಗೆ ಮರದ ದೆವ್ವ ! 

ಪ್ರತಿ ವರುಷ ಅಕ್ಟೋಬರ್ ತಿಂಗಳ ಕೊನೆಯ ದಿನದಂದು ಪಾಶ್ಚಾತ್ಯ ದೇಶಗಳಲ್ಲಿ ಹ್ಯಾಲೋವೀನ್ ಹಬ್ಬ ಆಚರಿಸುವುದು ಬಹಳ ಹಿಂದಿನಿಂದ ಬಂದಿರುವ ಪದ್ಧತಿ . ವಿವಿಧ ದೇಶಗಳ ವಿವಿಧ ಜನಾಂಗದವರಿಂದ  ಅವರವರ  ಕಲಾಚಾರಕ್ಕನುಗುಣವಾಗಿ ಆಚರಿಸಲ್ಪಟ್ಟರೂ ಹ್ಯಾಲೋವೀನ್ ಹಬ್ಬ ಎಲ್ಲೆಡೆಯೂ ದೆವ್ವಗಳು, ಅಸ್ಥಿಪಂಜರಗಳು , ಮಂತ್ರಗಾರ್ತಿ ಮುಂತಾದ ಭಯಾನಕ ಪಾತ್ರಗಳನ್ನೊಳಗೊಂಡ ಹಬ್ಬವೇ ಆಗಿದೆ . 

ಇಂದು ಹ್ಯಾಲೋವೀನ್ ಹಬ್ಬ ಪಾಶ್ಚಾತ್ಯ ದೇಶಗಳಿಗಷ್ಟೇ ಸೀಮಿತವಾಗಿರದೆ  ಪ್ರಪಂಚದಾದ್ಯಂತ  ಆಚರಿಸಲಾಗುತ್ತಿದೆ . ಎಳೆಯರ  ವೇಷ ಭೂಷ ಪಾರ್ಟಿಗಳಿಗಾಗಿ  ಭಯಾನಕ ಉಡುಪುಗಳು, ಮುಖವಾಡಗಳು ಮುಂತಾದ ಹ್ಯಾಲೋವೀನ್ ಪೋಷಾಕುಗಳು ಮತ್ತು  ಭಯ  ಹುಟ್ಟಿಸುವಂತ ಉಪಕರಣಗಳ ಮಾರಾಟ ಸಖತ್ತಾಗಿ ನಡೆಯುತ್ತಿದೆ !  ನಮ್ಮ ವಠಾರದ ಸಣ್ಣ ಮಕ್ಕಳೆಲ್ಲ ಕೂಡಿ ಭಯಾನಕ ದೆವ್ವಗಳಂತೆ ವೇಷ ಭೂಷ ಧರಿಸಿ , ಮನೆಮನೆಯ ಬಾಗಿಲು ಬಡಿದು ' ತಂತ್ರವೋ   ತಿಂಡಿಯೋ  ? ' ಎಂದು 'ಬೆದರಿಕೆ ' ಹಾಕುತ್ತಾರೆ !  ಅವರುಗಳಿಗೆ ಕೊಡಲೆಂದೇ ಹ್ಯಾಲೋವೀನ್ ಸಮಯ ಮಿಠಾಯಿಗಳನ್ನು ತರಿಸಿಟ್ಟು  ನಾನೂ ಸಹ ಹಲೋವೀನ್ ಆಚರಿಸುತ್ತೇನೆ !

                                                                                     

ದೆವ್ವಗಳ ಹಬ್ಬವನ್ನು ಒಂದು ಚೂರೂ ಭಯವಿಲ್ಲದೆ ಸಂಭ್ರಮಿಸುವ ಇಂದಿನ ಮಕ್ಕಳನ್ನು ಕಾಣುವಾಗ ಚಿಕ್ಕಂದಿನಲ್ಲಿ ನಾನು ಅದೆಷ್ಟು ಹೆದರು ಪುಕ್ಕಲಾಗಿದ್ದೆ ಎಂಬ ನೆನಪಾಗುತ್ತದೆ ! ಅಂದು  ಲಕ್ಷ್ಮಮ್ಮ ಹೇಳುತ್ತಿದ್ದ  ದೆವ್ವದ  ಕಥೆಗಳೆಲ್ಲ ಈಗ ನೆನಪಿಗೆ ಬರುತ್ತವೆ .  ಲಕ್ಷ್ಮಮ್ಮ ನಮ್ಮ  ದೂರದ ಸಂಭಂದಿಕರು . ಯಾರೂ ದಿಕ್ಕಿಲ್ಲದೆ ಹೋದ ಕಾರಣ ಅವರನ್ನು ನಮ್ಮ ತುಂಬು ಕುಟುಂಬದ  ಸದಸ್ಯರನ್ನಾಗಿ ಸೇರಿಸಿಕೊಂಡಿದ್ದರು ಹಿರಿಯರು . ಮೂರು ತಲೆಮಾರಿನವರು ಒಂದಾಗಿದ್ದ ಕೂಡು ಕುಟುಂಬ ನಮ್ಮದ್ದು.  ಲಕ್ಷ್ಮಮ್ಮ ಮನೆ ಕೆಲಸಗಳಲ್ಲೆಲ್ಲ ನೆರವಾಗಿದ್ದುದ್ದಲ್ಲದೆ , ಮನೆಯ ತುಂಬ ಇದ್ದ ಮಕ್ಕಳನ್ನು ಸುಧಾರಿಸಿ  ನೋಡಿಕೊಳ್ಳುತ್ತಿದ್ದರು . 

ಪ್ರತಿದಿನವೂ ಸಂಜೆ ನಮ್ಮನ್ನೆಲ್ಲ ಕೂರಿಸಿಕೊಂಡು ಪಂಚತಂತ್ರ ಕಥೆಗಳು , ರಾಮಾಯಣದ ಕಥೆಗಳು , ಕೀಲು  ಕುದುರೆಯ ಮೇಲೆ  ಹಾರಾಡಿದ  ರಾಜಕುಮಾರರ ಕಥೆಗಳು , ಬೇತಾಳದ ಕಥೆಗಳು  ಮತ್ತು ದೆವ್ವದ ಕಥೆಗಳು ಎಂದು ಅನೇಕ ಪ್ರಭೇದಗಳಿಂದ ಆಯ್ದ ಕಥೆಗಳನ್ನು ಅತಿ ಉತ್ಸಾಹದಿಂದ ಹೇಳುತ್ತಿದ್ದರು . ದೆವ್ವದ ಕಥೆ ಕೇಳಿದಂದು ಮಾತ್ರ ನಾವೆಲ್ಲಾ  ರಾತ್ರಿ  ಮಲಗುವಾಗಲೂ ದೀಪ ಆರಿಸಲು ಬಿಡುತ್ತಿರಲಿಲ್ಲ ! ನಾನಂತೂ ಬಾತ್ರೂಮಿಗೆ ಹೋಗಬೇಕೆಂದರೂ  ಅಮ್ಮನನ್ನು ಎಬ್ಬಿಸುತ್ತೆದ್ದೆ ! ನಮ್ಮ ಶಾಲೆಯ ಶೌಚಾಲಯದಲ್ಲಿ ದೆವ್ವ ಇದೆ ಎಂಬ ಗಾಳಿ ಸುದ್ಧಿ ಹರಡಿದಾಗಿನಿಂದ  ' ಬಾತ್ರೂಮ್ ಭೂತಗಳ ' ಬಗ್ಗೆ ನನಗೆ ವಿಪರೀತ  ಹೆದರಿಕೆ !  ಜೊತೆಗೆ ಲಕ್ಷ್ಮಮ್ಮನ  ದೆವ್ವದ ಕಥೆಗಳು  ನನ್ನ ಪುಟ್ಟ ಮನದಲ್ಲಿ ಮತ್ತಷ್ಟು  ಭಯವನ್ನೇರ್ಪಡಿಸಿತ್ತು !

                                                                                     

ದೆವ್ವಗಳಿಗೆ ಕಾಲುಗಳೇ ಇರುವುದಿಲ್ಲವೆಂದು ಒಂದು ಕಥೆಯಲ್ಲಿ ಹೇಳಿದರೆ , ದೆವ್ವ ತನ್ನ ಕಾಲುಗಳನ್ನು ಒಲೆಯಲ್ಲಿ ಸೌದೆಯಂತೆ ಬಳಸಿ  ಅಡುಗೆ ಮಾಡಿತು ಎಂದು ಮತ್ತೊಂದು ಕಥೆ  ಹೇಳುತ್ತಿದ್ದರು ! ಗೆಜ್ಜೆಯ ಝಲ್ ಝಲ್ , ಮಲ್ಲಿಗೆಯ ಘಮ ಘಮ , ಬಿಳಿ ಹೊಗೆಯಂತಿದ್ದ ದೆವ್ವ , ಕಪ್ಪು ಆಕಾರ ಹೊಂದಿದ್ದ  ದೆವ್ವ , ಬಿಳಿ ಸೀರೆಯುಟ್ಟು ಉದ್ದನೆಯ ಕೂದಲನ್ನು ಕೆದರಿಕೊಂಡಿದ್ದ ಮೋಹಿನಿ ದೆವ್ವ , ಎಲ್ಲವೂ ಅವರ ಕಥೆಗಳಲ್ಲಿ ಮುಖ್ಯ ಪಾತ್ರ ವಹಿಸಿದವು ! 

''  ಇಲ್ಲಕಣವ್ವ !  ದೆವ್ವಗಳಿಗೆ ಕಾಲುಗಳು ಇರ್ತಾವಂತೆ   ! ಆದ್ರೆ ಅವುಗಳ ಪಾದಗಳು ಮಾತ್ರ ಹಿಂದಕ್ಕತ್ತ  ತಿರಿಗ್ಕೊಂಡಿರ್ತಾವಂತೆ  ! " ತೋಟ ಗುಡಿಸಿ , ಹಸುಗಳಿಗೆ ತಿಂಡಿ ಇಟ್ಟು ಬಂದು ಲಕ್ಷ್ಮಮ್ಮನ ಕಥೆಗಳನ್ನು ನಮ್ಮೊಂದಿಗೆ  ಕುಳಿತು ಬಾಯಿ ಬಿಟ್ಟುಕೊಂಡು  ಕೇಳುತ್ತಿದ್ದ ಬಸವ ತನ್ನ ದೆವ್ವದ ಜ್ಞಾನವನ್ನು ತೋರಿಸಿಕೊಳ್ಳುತ್ತಿದ್ದ  !

ಅಂದು  ಅಮಾವಾಸೆಯ ಮಧ್ಯ ರಾತ್ರಿ   ! ಇದ್ದಕ್ಕಿದ್ದ ಹಾಗೇ ಲಕ್ಷ್ಮಮ್ಮ ' ಅಯ್ಯೋ ! ಅಯ್ಯಯ್ಯೋ ! ' ಎಂದು ಬೊಬ್ಬೆಯಿಟ್ಟಿದ್ದು ಕೇಳಿ ಮಲಗಿದ್ದವರೆಲ್ಲ ಎದ್ದು ಅವರೆಡೆಗೆ ಧಾವಿಸಿದರು ! ಅಂದು  ಕೇಳಿದ್ದ ದೆವ್ವದ ಕಥೆಯಿಂದಲೋ , ನನಗಿಷ್ಟವಾದ ಮಸಾಲಾ ಬನ್ನನ್ನು ಹೆಚ್ಚಾಗಿ ತಿಂದಿದ್ದ ಕಾರಣವೋ ? ನಾನು ಬಹಳ ಹೊತ್ತು ನಿದ್ದೆ ಇಲ್ಲದೆ ಹೊರಳಾಡುತ್ತಿದ್ದೆ .  ಲಕ್ಷ್ಮಮ್ಮನ ಬೊಬ್ಬೆ ಕೇಳಿ ನಾನೂ ಮೆಲ್ಲನೆ ಎದ್ದು ಎಲ್ಲರ ಹಿಂದೆ  ನುಸುಳಿ ನಿಂತೆ .  

" ಯಾಕಮ್ಮ ಕೂಗಾಡ್ತಿದ್ದೀರೀ  ಈ ಹೊತ್ತಲ್ಲಿ ! "  ಅಪ್ಪ ಸ್ವಲ್ಪ ಗಡುಸಾಗಿಯೇ ವಿಚಾರಿಸಿದರು.   

" ಅಲ್ನೋಡಿ ಅಣ್ಣ ! ಅಲ್ಲಿ .... ಅಲ್ಲಿ.... ! ದೆವ್ವ ! ದೆವ್ವ !" ಎಂದು  ತೊದಲಿದರು ಲಕ್ಷ್ಮಮ್ಮ . 

 ಎಲ್ಲರ ಜೊತೆ ನಾನೂ ಬೆದರಿ ನಡುಗುತ್ತ ಬಾಗಿಲ ಹಿಂದೆ ನಿಂತು ಇಣುಕಿದೆ    !

ಲಕ್ಷ್ಮಮ್ಮ ಬೆರಳು ಮಾಡಿ ತೋರಿಸಿದ ತೋಟದ ಮೂಲೆಯಲ್ಲಿ ಒಂದು ಬಿಳಿಯ ಆಕಾರ ಎರಡು ಕೈಗಳನ್ನೂ ಬೀಸಿ ಬೀಸಿ ಕರೆಯುತ್ತಿದ್ದದ್ದು ಕಾಣಿಸಿದಾಗ ನನ್ನ ಹೃದಯ ಬಾಯಿಗೆ ಬಂದಂತಾಯಿತು . ಕಿರುಚಿಕೊಳ್ಳಬೇಕೆನ್ನಿಸಿದರೂ ಗಂಟಲಿಂದ ದನಿಯೇ ಹೊರಡಲಿಲ್ಲ ! 

'' ನೋಡಿ  ! ಕಾಲುಗಳಿಲ್ಲ ! ರುಂಡವಿಲ್ಲ ! ನೆಲದ ಮೇಲೆ ನಿಂತಿಲ್ಲ ! ಗಾಳೀಲಿ ಕೈ ಬೀಸಿ ಕರೀತಿದೆ ! ಅಯ್ಯೋ ! ಅಯ್ಯೋ ಗ್ರಹಚಾರವೇ ! " ಎಂದು ಪ್ರಲಾಪಿಸಿದರು ಲಕ್ಷ್ಮಮ್ಮ . 

 ಅಪ್ಪ  ಕೂಡಲೇ ಒಳಗೆ ಹೋಗಿ ತನ್ನ ಶಕ್ತಿಯುತವಾದ ಟಾರ್ಚನ್ನು ತಂದು  ಮೆಟ್ಟಲಿಳಿದು ಪೋರ್ಟಿಕೋದಲ್ಲಿ ನಿಂತರು. 

                                         

ಬಿಳಿಯ ಆಕಾರ ಇನ್ನೂ ಅಲ್ಲೇ ಕೈ ಬೀಸಿ ಕರೆಯುತ್ತಿತ್ತು !

" ಅಯ್ಯೋ ! ಹತ್ರ ಹೋಗ್ಬೇಡಿ ಅಣ್ಣ  ! " 

 ಅಪ್ಪ ಲಕ್ಷ್ಮಮ್ಮನ  ಕೂಗನ್ನು ಲಕ್ಷಿಸದೆ ಮುನ್ನಡೆದು  ಬಿಳಿಯ ಆಕಾರದ ಮೇಲೆ ಬೆಳಕನ್ನು  ಬೀರಿದರು  !

 ಸ್ವಚ್ಛವಾಗಿ ಒಗೆಯಲ್ಪಟ್ಟ ಬಸವನ ಬಿಳಿ ಷರಟು ನುಗ್ಗೆ ಮರದ  ರೆಂಬೆಯಲ್ಲಿ ಹೊಯ್ದಾಡುತ್ತಿತ್ತು ! 

" ಲಕ್ಷ್ಮಮ್ಮ !  ಸಾಕುಮಾಡಿ ನಿಮ್ಮ ದೆವ್ವದ ಕಥೆಗಳನ್ನ !  ನೀವೂ ಹೆದರಿ ಉಳಿದವರನ್ನೂ ಹೆದರಿಸಬೇಡಿ! ಸಧ್ಯ ಮಕ್ಕಳೆಲ್ಲ ಎಚ್ಚರವಾಗ್ಲಿಲ್ಲ ! ಎಲ್ರೂ  ಮಲಗಿ ಹೋಗಿ ! " ಎಂದು ಗದರಿದರು ಅಪ್ಪ . ನಾನು ಅಪ್ಪನ ಕಣ್ಣಿಗೆ ಬೀಳದೆ ಓಡಿ  ಹೋಗಿ ಮಲಗಿಬಿಟ್ಟೆ ! ಲಕ್ಷ್ಮಮ್ಮ ನಮಗೆ ದೆವ್ವದ ಕಥೆಗಳನ್ನು ಹೇಳುವುದು ಅಪ್ಪನಿಗೆ ಸುತರಾಂ ಇಷ್ಟವಿರಲಿಲ್ಲ . ಅಂದೇ ಮನೆಯಲ್ಲಿ ದೆವ್ವದ ಕಥೆಗಳಿಗೆ 144 ಹಾಕಲಾಯಿತು !

ಮರು ದಿನ ಲಕ್ಷ್ಮಮ್ಮ ಬಸವನ ಜೊತೆ ಗುಸು ಗುಸು ಮಾತನಾಡುತ್ತಿದ್ದದ್ದು  ಆಕಸ್ಮಿಕವಾಗಿ ನನ್ನ ಕಿವಿಗೆ  ಬಿದ್ದಿತು  . 

" ಅಯ್ಯೋ ಪೆದ್ದಪ್ಪಾ  ! ಅದ್ಯಾಕೋ ನಿನ್ ಬಟ್ಟೇನ ನುಗ್ಗೆ ಮರಕ್ಕೆ  ತಗಲು ಹಾಕಿದ್ದೆ ? ನುಗ್ಗೆ ಮರದಲ್ಲಿ ಬೆಳ್ಳಗೆ ಕಂಡಿದ್ದಕ್ಕೆ ನಾನು ದೆವ್ವ ಅನ್ಕೊಂಡಿದ್ದು ! "

                                                 

" ಅಂಗಾರ ನುಗ್ಗೆ  ಮರ್ದಾಗೆ  ದೆವ್ವ ಇರ್ತಾವಾ  ? " ಕಣ್ಣುಗಳನ್ನು ದೊಡ್ಡದು ಮಾಡಿಕೊಂಡು ಕೇಳಿದ ಬಸವ . 

" ಹೂಂ ಕಣೋ ! ನುಗ್ಗೆ ಮರದಲ್ಲಿ ಮಾತ್ರವಲ್ಲ ! ದೆವ್ವಗಳಿಗೆ ಹುಣಸೆ ಮರ, ಬೇವಿನ ಮರ ಕೂಡ ಬಾಳ ಇಷ್ಟ ! "

" ಹಾಗಂತ ದೆವ್ವಗಳು ಬಂದು ಹೇಳಿದ್ವೆ ಲಕ್ಷ್ಮಮ್ಮ ? "

ಇದ್ದಕ್ಕಿದ್ದಂತೆ ನಾನು ಎದುರಿಗೆ  ಹೋಗಿ ನಿಂತು ಪ್ರಶ್ನಿಸಿದಾಗ ಲಕ್ಷ್ಮಮ್ಮ ಪೆಚ್ಚಾದರು . 

" ಶ್ !  ದೆವ್ವದ ಬಗ್ಗೆ ಮಾತೆತ್ತಿದ್ರೆ ನಿಮ್ಮಪ್ಪ ಬೈತಾರೆ ಸುಮ್ನಿರು ! " ಎಂದು ನನ್ನ ಬಾಯಿ ಮುಚ್ಚಿಸಿದ್ದರು ಲಕ್ಷ್ಮಮ್ಮ ! 

ಅಂದಿನಿಂದ ದೆವ್ವ ಭೂತ ಎಂದರೆ ನನಗೆ ಬಸವನ ಬಿಳಿಯ ಷರಟು ನೆನಪಿಗೆ ಬರುತ್ತದೆ ! ಜೊತೆಗೆ ನಗುವೂ ಕೂಡ ಬರುತ್ತದೆ !

--------------------------------- -------------------------------------

GHOST ON THE DRUMSTICK TREE !

Celebrating Halloween  at the end of October every year is a longstanding tradition  in Western countries . It is the time when ghosts , ghouls , skeletons, vampires , witches and other fearsome characters can be seen all over ! Children  dressed  up in such scary costumes knock on doors shouting " Trick or Treat !"  and are always given sweets at every place . This celebration has now spread to our country too. 

                                      

I participate in this strange , ghostly fun , by storing enough candies to distribute to the little monsters who turn up at my door ! And I think about my own childhood when I was  terrified of Ghosts …..and about the Ghost Stories told by Lakshamma .

 Lakshmamma  , a far relative , lived with us as part of the huge joint family spanning three generations . She helped in household chores and , in the evenings , entertained the children with wonderful stories of all sorts :  Panchatantra stories , mythological tales , folklore and Ghost Stories . She was a great storyteller , narrating everything most dramatically.

                                       
Her Ghosts were spectacular  characters . There were those without heads and those  without legs . A few  had fangs and others had claws. They could be all white or all black . Some  wore tinkling  anklets , some  smelt like jasmines . They  could all  fly , glide or hover ; smash , shred or  spit fire.

A great assortment of terrors she could spin !

 On some evenings , Basava, who looked after our garden and the cows , would pause while passing by our story session and add his own details .  "Don’t you know , Lakkamma !" he would remark with a wise look , " ghosts do have legs , but their feet are turned backwards !"

 On the days we heard Ghost Tales , we would all get scared and refuse to switch off the light at bedtime . I would toss and turn in fright and wake up Mother, if I had to go to the bathroom ! To add to my terror , there were always rumors at school that there was a Ghost in the School Bathroom .

Once , on a new moon night , when the whole family  had gone to bed, there was a sudden shriek and loud wailing . Lakshmamma was screaming in terror, waking up all the elders .

" What is it Lakshmamma ! Why are you screaming ? " Father was very annoyed as he went out to check on her . I crept behind the door , shivering, but curious .

 Lakshmamma was standing in the verandah and pointing at a tree , babbling and stammering . " A  ghost ! A ghost ! "

" Ghost ? What nonsense ! Where ? "

" Look , Anna ! In that tree ! It has no head , no hands , no legs ……but  calling  me with its arms  ….'come ….come ' ….Anna ! Anna ! Don’t go near it ! "  

Yes, I could see it too ! A pale white shadowy form  was swaying and flapping on the branch of the tree ! I froze in terror , my scream getting caught in my throat .

Father had by now got his  big flashlight  and was in  the portico . In the powerful beam of the flashlight , all of us could see the Ghost clearly !

                                         
With no head, no legs , short arms , the white shirt of Basava , washed clean that evening  , was drying in the gentle breeze !

" You must stop spinning Ghost stories , Lakshmamma ! " scolded Father ,  "You will not only end up crazy yourself, but will make the children idiots too . Go back to sleep now , and let me not hear the word 'Ghost'  again ! "

The next morning , I chanced to hear Lakshmamma scolding Basava in the backyard .

" You idiot ! Why did you hang your shirt on the drumstick tree of all places?  Don’t  you know it is the favourite haunt of Ghosts ? I really mistook your stupid shirt to be a Ghost ! "

                                         
"What are you saying , Lakkamma ?.... Ghosts live only  in Tamarind trees !" 

" Tamarind and Neem and Drumstick , they like all three ! "

" Did the Ghosts themselves   tell you that , Lakshmamma ? " I popped in front of her , unable to check myself .

" Shhh ! No ghost talk !" She silenced me, " Your Father will not like it ."

That was the last time she ever uttered the word 'Ghost' !

The evening Story sessions became more cheerful and I started sleeping  better,  without night-lamps !

Even now , whenever there is talk of ghosts , I  remember Basava’s  white shirt swaying in the drumstick tree on a pitch dark night !

And I smile .

-----------------------------------------------------------------------------

No comments:

Post a Comment