Tuesday, December 29, 2020

ಕಾಮೆಯ ದಂಡನಾಯಕ / KAMEYA DANDANAYAKA

 ಕಾಮೆಯ ದಂಡನಾಯಕ 

ಕಾಮೆಯ ಮುತವರ್ಜಿ ವಹಿಸಿ ಪತ್ರಗಳನ್ನು ಪರಿಶೀಲಿಸುತ್ತಿದ್ದನು . ಯಾವ ಕೆಲಸವನ್ನೂ ಹೃತ್ಪೂರ್ವಕವಾಗಿ ಏಕಾಗ್ರತೆಯಿಂದ ಮಾಡಬೇಕೆಂದು ಚಿಕ್ಕಂದಿನಲ್ಲೇ ಅಪ್ಪಯ್ಯ ಅವನಿಗೆ ಕಲಿಸಿದ್ದರು . ಹಾಗಾಗಿ ಹೊರಗಿನಿಂದ ಸಣ್ಣದಾಗಿ ಕೇಳಿಬಂದ ವಿವಾದದೆಡೆ ಗಮನವನ್ನು ಹರಿಯಬಿಡದೆ ಕಾರ್ಯಮಗ್ನನಾಗಿದ್ದ ಕಾಮೆಯ . ಆದರದಿಂದ ಕೆಲವು ಸಲಹೆಗಳನ್ನು ನೀಡುತ್ತ ನಿಂತಿದ್ದರು ಹಿರಿಯ ಕಾರ್ಯದರ್ಶಿಗಳಾದ ಅಪ್ಪಣ್ಣನವರು . 

                                    
ಕಾಮೆಯನಿಗೆ ಇವೆಲ್ಲವೂ ನೂತನ ಅನುಭವಗಳಾಗಿದ್ದವು . ಚಿಕ್ಕಂದಿನಿಂದ 'ಪುಟ್ಟ ಪುಟ್ಟ' ಎನ್ನುತ್ತ ತನ್ನನ್ನು ಎತ್ತಿ ಆಡಿಸಿದ್ದ ಅಪ್ಪಯ್ಯನ ಸಹಪಾಠಿಗಳೆಲ್ಲ  ಇಂದು ತನ್ನನ್ನು 'ನೀವು ತಾವು' ಎಂದು ಮಾತನಾಡಿಸುವ ಪರಿ ಅವನಿಗೆ ಮುಜುಗುರವೇರ್ಪಡಿಸಿತ್ತು . 

" ನಾನು ಎಂದೆಂದೂ ನಿಮ್ಮ ಪ್ರೀತಿಯ ಪುಟ್ಟನೇ ಅಲ್ಲವೇ ? ಇವಾಗ ಹೀಗೇಕೆ ? " ಎಂದು ತನ್ನ ಆಕ್ಷೇಪಣೆಯನ್ನು ವ್ಯಕ್ತಪಡಿಸಿದಾಗ , " ಇದು ನಾವು ನಿಮ್ಮ ಹುದ್ದೆಗೆ ತೋರುವ ಗೌರವ ! ಕಾಮೆಯ ದಂಡನಾಯಕರಿಗೆ ಸಲ್ಲಿಸುವ ಮರ್ಯಾದೆ ! " ಎಂದು ಅಧಿಕಾರಿಗಳೆಲ್ಲ ಅವನ ಬಾಯಿ ಮುಚ್ಚಿಸಿದ್ದರು !  

ವೀರಬಲ್ಲಾಳ ಮಹಾರಾಜರ ಪರವಾಗಿ ಎಲಹಕ್ಕ ನಾಡನ್ನು ಆಳುತ್ತಿದ್ದ ಮಹಾಪ್ರಧಾನ ಪೊನ್ನಣ್ಣ ದಂಡನಾಯಕರು ತನ್ನ ಮಗ ಕಾಮೆಯನಿಗೆ  ಸೈನಿಕ ತರಬೇತಿಯೊಂದಿಗೆ  ಆಡಳಿತದ ಎಲ್ಲ  ಕ್ಷೇತ್ರಗಳಲ್ಲಿಯೂ  ಶಿಕ್ಷಣ ನೀಡಿದ್ದರು . ಕಾಮೆಯ ತನ್ನ ಪರಿಶ್ರಮದಿಂದಲೂ ದುಡಿಮೆಯಿಂದಲೂ  ಈ ಎಳೆ ವಯಸ್ಸಿನಲ್ಲೇ ದಂಡನಾಯಕ ಪಟ್ಟವನ್ನು ಗಿಟ್ಟಿಸಿಕೊಂಡಿದ್ದನು.   ಮೊದಲ ಬಾರಿಗೆ ಅವನ ಸಾಮರ್ಥ್ಯಕ್ಕೆ ಸವಾಲು ಒಡ್ಡುವಂತೆ ಎಲಹಕ್ಕ ನಾಡಿನ ಆಡಳಿತದ ಜವಾಬ್ದಾರಿಯನ್ನು ಒಂಟಿಯಾಗಿ  ಹೊರ ಬೇಕಾದ ಪರಿಸ್ಥಿತಿ ಒದಗಿಬಂದಿತ್ತು . ಅಪ್ಪಯ್ಯ ಸುದ್ಧಿಯನ್ನು ತಿಳಿಸಿದಾಗ ಅವನು ತಬ್ಬಿಬ್ಬಾಗಿದ್ದನು . 

" ಕಾಮೆಯ ! ದಿಲ್ಲಿ ಸುಲ್ತಾನನ ದಂಡನಾಯಕ ಮಲಿಕ್ ಕಾಫುರ್ ದಕ್ಷಿಣ ರಾಜ್ಯಗಳಮೇಲೆ ದಂಡೆತ್ತಿ ಬರುವ ಸಿದ್ಧತೆಯಲ್ಲಿರುವುದಾಗಿ  ನಮ್ಮ ಬೇಹುಗಾರರು ಸುದ್ಧಿ ತಂದಿರುವರು . ರಾಜ್ಯವನ್ನು ಏಕೀಕರಣಗೊಳಿಸುವುದರ ಸಲುವಾಗಿ  ನಮ್ಮ ಮಹಾರಾಜರು ರಾಜಧಾನಿ ಬಿಟ್ಟು ಬಹಳ ದೂರದ ಪಯಣವನ್ನು ಕೈಗೊಂಡಿರುವರು .  ಈ ಕೂಡಲೇ ಅವರನ್ನು ಕಂಡು ವಿಷಯ ತಿಳಿಸಬೇಕಾಗಿದೆ . "
" ಅಪ್ಪಯ್ಯಾ  ! " 
"  ಗಾಬರಿ ಬೇಡ ! ನಾನು ಅಷ್ಟು ದೂರ ಪಯಣ ಮಾಡಿ ದೊರೆಗಳನ್ನು ಕಂಡು ಹಿಂದಿರುಗಲು ವಾರಗಳೇ ಆಗಬಹುದು . ಆ ವರೆಗೆ ನೀನು ಎಚ್ಚರಿಕೆಯಿಂದ ಎಲಹಕ್ಕ ನಾಡಿನ ನಿರ್ವಾಹವನ್ನೆಲ್ಲ ದಕ್ಷತೆಯಿಂದ ನಡೆಸಿಕೊಂಡು ಹೋಗಬೇಕು . ನಮ್ಮ ಸೈನ್ಯ ಸದಾ ಸಿದ್ಧವಾಗಿರಲಿ . ವಿಷಯ ಗುಪ್ತವಾಗಿರಲಿ ! ಜನಮನಗಳಲ್ಲಿ ಆತಂಕ ಹುಟ್ಟಿಸುವುದು ಬೇಡ . ನನ್ನ ಕಾರ್ಯದರ್ಶಿ ಅಪ್ಪಣ್ಣನವರು ನಿನಗೆ ನೆರವಾಗಿರುತ್ತಾರೆ! " 
ಕಾಮೆಯನ ಎಳೆ ತೋಳುಗಳಮೇಲೆ ಒಂದು ದೊಡ್ಡ ಹೊರೆಯನ್ನು ಹೊರಿಸಿ ಹೊರಟೇಬಿಟ್ಟಿದ್ದರು ಪೊನ್ನಣ್ಣ ದಂಡನಾಯಕರು. 

ಚುರುಕು ಬುದ್ಧಿಯ ಸಣ್ಣ ಹುಡುಗ ಕಾಮೆಯ ರಾಜ್ಯಕಾರ್ಯದಲ್ಲಿ ನಿರತನಾಗಿರಲು ,  ಆವರೆಗೆ ಗುಸು ಗುಸು ಕೇಳಿಸುತ್ತಿದ್ದ ವಿವಾದ ತೀವ್ರಗೊಂಡು ಅವನ ಗಮನ ಸೆಳೆಯಿತು .    
" ಅಯ್ಯೋ ! ಅದೆಲ್ಲ ಆಗಕ್ಕಿಲ್ಲ ! ಓಗವ್ವ ! " ಎನ್ನುತ್ತಿದ್ದ ಸೇವಕ ಬೊಮ್ಮಯ್ಯ . 
" ಇಲ್ಲ ! ನಾನು ಒಗಾಕಿಲ್ಲ ! ಕರೀ ಮಾರಾಜ್ರನ್ನ  ... "  ಎಂದಿತು ಕೀರಲು ದನಿ .  
ವಿವರ ಅರಿತು ಬಂದ ಅಪ್ಪಣ್ಣನವರು , " ಅದೇನಿಲ್ಲ ಡಣ್ಣಾಯಕರೇ ! ಮೂರು ಮೊಳ ಎತ್ತರವಿಲ್ಲ ! ಒಂದು ಸಣ್ಣ ಹುಡುಗಿ ! ಮಹಾರಾಜರನ್ನು ಕಾಣಬೇಕಂತೆ ! ಅಷ್ಟು ಹೊತ್ತಿನಿಂದ ಬೊಮ್ಮಯ್ಯನನ್ನು ಸತಾಯಿಸುತ್ತಿದೆ ! " ಎಂದರು  . 

 ಅವರು ಹೇಳಿದ ರೀತಿಗೆ  ನಗುತ್ತ ತಾನೂ ಹೊರನಡೆದ ಕಾಮೆಯ . ಅಪ್ಪಣ್ಣನವರು  ಹೇಳಿದಂತೆ ಮೂರು ಮೊಳ ಎತ್ತರವಿದ್ದ ಸಣ್ಣ ಹುಡುಗಿಯೊಬ್ಬಳು ಹೊರಗೆ ನಿಂತಿದ್ದಳು  . ದುಂಡು ಮೊಗದಲ್ಲಿ ಬಟ್ಟಲು ಕಣ್ಣುಗಳು ಕಿಡಿ ಕಾರುತ್ತಿದ್ದವು . ಮಾಸಿದ್ದ  ಹಳೆಯ ಲಂಗ ಅಂಗಿ . ಕಂಕುಳಲ್ಲಿ ಕೂರಿಸಿಕೊಂಡಿದ್ದ ಮಗು ಬಲಹೀನವಾಗಿ ಕಂಡಿತು . ತಾಳಲಾರದ ಹಸಿವಿನಂದ ಬಳಲಿದ್ದು ತನ್ನ ಹೆಬ್ಬೆಟ್ಟನ್ನೇ  ನುಂಗಿಹಾಕುವಷ್ಟು  ಬಲವಾಗಿ ' ಚಪ್ ಚಪ್ ' ಎಂದು ಚೀಪುತ್ತಿತ್ತು . ಅವರ ಪರಿಸ್ಥಿತಿ ಕಾಮೆಯನ ಮನ ಕಲಕಿತು . 

                                   

 " ಬೊಮ್ಮಯ್ಯ ! ಮೊದಲು ಇವರಿಗೆ ಊಟ ತಂದು ಕೊಡು . " ಎಂದು ಸೇವಕನಿಗೆ ಆದೇಶ ನೀಡಿದ ಕಾಮೆಯ .  
" ಎಂತದೂ  ಬ್ಯಾಡ  ! ನಾನು  ಮಾರಾಜ್ರನ್ನ  ಕಾಣ್ಬೇಕು ಅಷ್ಟೇ  ! " ಹಣೆಯಮೇಲೆ  ಬೀಳುತ್ತಿದ್ದ ಎಣ್ಣೆ ಕಾಣದ ಒರಟು ಮುಂಗುರುಳನ್ನು ಸರಿಸಿಕೊಳ್ಳುತ್ತ ಕೋಪದಿಂದ ನುಡಿದಳು ಹುಡುಗಿ .  
ಚೋಟುದ್ದ ಹುಡುಗಿಗೆ  ಬರುವ ಮಾರುದ್ದ ಕೋಪ ನೋಡು ಎಂದುಕೊಂಡ ಕಾಮೆಯ . 

ಏನೂ ಬೇಡವೆಂದ ಹುಡುಗಿ  ಬೊಮ್ಮಯ್ಯ ತಂದಿಟ್ಟ ಸಣ್ಣ ಕುಡಿಕೆಯ ಹಾಲನ್ನು ಮಗುವಿಗೆ ಕುಡಿಸಿದಳು . ಎಲೆಯಲ್ಲಿದ್ದ ಅನ್ನವನ್ನು ಉಂಡೆ ಮಾಡಿ 'ಗಪ ಗಪ' ನುಂಗಿದಳು . ನೀರು ಕುಡಿದ ನಂತರ ಹೊಟ್ಟೆಯ ಜೊತೆ ಮನಸ್ಸೂ ಶಾಂತವಾದಂತಿತ್ತು  . 

" ಈವಾಗ ಹೇಳು ! ನೀನು ಯಾರು ? ಯಾವೂರು ? "
" ನಾನು ಚಿಕ್ಕಿ ! ಕಡತನಮಲೆ  ನಮ್ಮೂರು .... "
" ಓ ! ಅಷ್ಟು ದೂರದಿಂದ ಬಂದೆಯಾ ? ಯಾರ ಜೊತೆ ಬಂದೆ ? " ಆಶ್ಚರ್ಯದಿಂದ ಪ್ರಶ್ನಿಸಿದ ಕಾಮೆಯ. 
" ಒಬ್ಳೆ  ಬಂದೆ ! ನಡ್ಕಂಡು ! " ಅಲಕ್ಷ್ಯವಾಗಿ ಉತ್ತರಿಸಿದಳು . 
" ಯಾಕೆ ? ನಿಮ್ಮೂರಲ್ಲಿ ಗಾಡಿ ಇಲ್ಲವೇ  ? " 
" ಹೂಮ್ ! ಗಾಡೀಲಿ ಬಂದ್ರೆ ಅದಕ್ಕೂ ಸುಂಕ ಕಟ್ಬ್ಯಾಡ್ವೇ   ! " ಮತ್ತೆ ಕೆಂಡದಂತ ಕೋಪ ಅವಳ ಮೂಗಿನ ಮೇಲೆ ಬಂದು ಕುಳಿತಿತು . 

ಊಟ ಕೊಟ್ಟಿದ್ದಾಯಿತು . ಒಳ್ಳೆಯ ಮಾತಿನಲ್ಲಿ ಈ ಹುಡುಗಿಯನ್ನು ಕಳುಹಿಸುವುದು ಬಿಟ್ಟು ಈ ಸಣ್ಣ  ಹುಡುಗಿಯ ಜೊತೆ ವ್ಯವಹಾರವೇಕೆ ಎಂದುಕೊಂಡರು ಅಪ್ಪಣ್ಣನವರು . ಆದರೆ ಕಾಮೆಯನಿಗೆ  ಈ  ಹುಡುಗಿಯಲ್ಲಿ ಏನೋ ಒಂದು ವಿಶೇಷತೆ ಕಂಡುಬಂದಿತ್ತು  . 
" ಸರಕಾರಕ್ಕೆ ಸುಂಕ ಕಟ್ಟಬೇಕಾದದ್ದು ಪ್ರಜೆಗಳ ಕರ್ತವ್ಯವಲ್ಲವೇ ? ಇಷ್ಟಕ್ಕೂ ನಿಮ್ಮ ಹಿತಕ್ಕಾಗಿಯೇ ಅಲ್ಲವೇ ಸುಂಕ ವಸೂಲಿ ಮಾಡುವುದು ? " ಎಂದು ತಾಳ್ಮೆಯಿಂದ ಪ್ರಶ್ನಿಸಿದ . 
" ಉಳ ಬಿದ್ದು ಗದ್ದೆ ತ್ವಾಟ ಎಲ್ಲ ಹಾಳಾಗವೆ ! ತಿನ್ನಕ್ಕೆ ಅನ್ನ ಇಲ್ಲ ! ನೂಲಕ್ಕೆ ಹತ್ತಿ ಇಲ್ಲ!  ನಮ್ಮೋರೆಲ್ಲ ಬೇಸಾಯ ಮಾಡೋರು, ತಲೆ ಚಚ್ಕಂಡ್ ಕುಂತವ್ರೆ !  ಸುಂಕ ಕಟ್ಟೋದಾದ್ರು ಎಂಗೆ  ?  ಬಂದು ಬಂದು ಪೀಡಿಸ್ತಾವ್ರೆ ಅಧಿಕಾರಿಗ್ಳು  ! " ಏದುಸಿರು ಬಿಡುತ್ತ  ಎತ್ತಿದ ದನಿಯಲ್ಲಿ ನುಡಿದಳು ಚಿಕ್ಕಿ . 
" ಇದನ್ನೆಲ್ಲ ಕೇಳೋದಕ್ಕೆ ನಿಮ್ಮೂರ ಹಿರಿಯೋರಿಲ್ಲವೇ ? " ಕಾಮೆಯನ ಪ್ರಶ್ನೆಯಲ್ಲಿ  ಆಶ್ಚರ್ಯ ಮಾತ್ರವಲ್ಲದೆ ಕುತೂಹಲವೂ ಇತ್ತು .  
"  ಗಾವುಂಡರು ಕಲ್ಲು ಗಣಪನಂಗೆ ಕುಂತವ್ರೆ  . ಎಲ್ರೂ ಒಂದ್ಸಾರಿ ಮಾರಾಜ್ರನ್ನ ಕಂಡ್ಬನ್ನಿ ಅಂತಾವ್ರೆ  .   ಉಳ ಬಿದ್ದ ಗದ್ದೆ ಚೊಕ್ಕಟ ಮಾಡ್ಬೇಕು ! ಮತ್ತೆ ಬಿತ್ನೆ ಮಾಡ್ಬೇಕು ! ಎಲ್ರೂ ಹೆಣಗಾಡ್ತಾವ್ರೆ ! ಮಾರಾಜ್ರನ್ನ ಕಾಣಕ್ಕೆ ದಿನಗಟ್ಟಲೆ ಇಲ್ಲಿ ಕೂರಕ್ಕಾಯಿತದೆಯೇ ? ನಮ್ಮಪ್ಪ ಗದ್ದೆ ಕೆಲ್ಸಕ್ಕೆ ಒಂಟ  ! ಅಮ್ಮ ಉಸಾರಿಲ್ದೆ ಮುದುಡ್ಕಂಡು ಮಲಗಾವ್ಳೆ ! ಅದಕ್ಕೇ ಮಾರಾಜ್ರನ್ನ ಕಂಡು ನಮ್ ಪಾಡು ಏಳುವಾಂತ ನಾನು ಪಾಪು ಒಂಟು ಬಂದಿದ್ದು  ! ಕರೀರಿ ಮಾರಾಜ್ರನ್ನ ! " 
ಆಕ್ರೋಶದಿಂದ ಚೀರಿದ ಚಿಕ್ಕಿಯ ಮೊರೆ ಕೇಳಿ ದಿಗ್ಬ್ರಾಂತನಾದನು ಕಾಮೆಯ .  

" ಮಹಾರಾಜರು ಇಲ್ಲಿಲ್ಲ ಹೋಗಮ್ಮ ! ಇದು ಮಹಾಪ್ರಧಾನಿಗಳವರ ಮನೆ ! " ಎನ್ನುತ್ತ ಅವಳನ್ನು ಅಟ್ಟಲು ಪ್ರಯತ್ನಿಸಿದ ಬೊಮ್ಮಯ್ಯ . 
" ಅಂಗಾರ ಅವ್ರನ್ನೇ ಕರೀರಿ ! ನ್ಯಾಯ ಕೇಳ್ದೆ ನಾನು ಓಗ್ಲಾರೆ ! "  ಸರಿಯುತ್ತಿದ್ದ ಮಗುವನ್ನು ಮತ್ತೆ ಕಂಕುಳಿಗೇರಿಸಿಕೊಂಡು ಹಠಮಾರಿಯಾಗಿ ನಿಂದಳು  ಚಿಕ್ಕಿ . 

" ನನಗೆ ಹೇಳಿದ್ದಾಯಿತೋ  ಇಲ್ಲವೋ ? ಚಿಂತೆ ಬಿಡು ! ನಾಳೆ ನಾನೇ ನಿಮ್ಮ ಊರಿಗೆ ಭೇಟಿ ನೀಡಿ ಎಲ್ಲರ ಕಷ್ಟ ನಷ್ಟ ಕೇಳಿಸಿಕೊಳ್ಳುತ್ತೇನೆ ! ಪರಿಹಾರಕ್ಕೂ ಯೋಚನೆ ಮಾಡುತ್ತೇನೆ ! " ಕನಿಕರದಿಂದ ನುಡಿದ ಕಾಮೆಯ . 
" ನೀನಾ ? " ಚಿಕ್ಕಿ ತಾತ್ಸಾರದಿಂದ ಅವನನ್ನೊಮ್ಮೆ ದಿಟ್ಟಿಸಿ ನೋಡಿದಳು ,  " ಸಣ್ಣುಡ್ಗ ನೀನು!  ನಿನ್ನಿಂದೇನ್  ಆಗತೈತೆ ! ಪ್ರಧಾನಿಗಳನ್ನ ಕರಿ .. " ಎಂದಳು . 
" ಲೇ ಹುಡುಗಿ ! ನಾಲಿಗೆ ಹಿಡಿದು ಮಾತನಾಡು ! ಇವರನ್ನ ಯಾರು ಅಂದುಕೊಂಡೆ ? ಇವರೇ ನಮ್ಮ  ಕಿರಿಯ ದಂಡನಾಯಕರು !  ಕಾಮೆಯ ದಂಡನಾಯಕರು ! "  ಎಂದು ಗುಡುಗಿದರು ಅಪ್ಪಣ್ಣನವರು  . 
" ಹಾ ?! "
 ಬೆಚ್ಚಿಬಿದ್ದ ಚಿಕ್ಕಿಯ ಬಾಯಿಂದ ಬೇರೆ  ಮಾತೇ  ಹೊರಡದಾಯಿತು . 
" ಈಗ  ನೀನು ಹೊರಡು ! ವಿಚಾರಣೆಗಾಗಿ ನಾಳೆ ನಿಮ್ಮ ಗ್ರಾಮಕ್ಕೆ ಬರುತ್ತೇನೆ  ! ಬೊಮ್ಮಯ್ಯ ! ಚಿಕ್ಕಿಯನ್ನೂ ಕೂಸನ್ನೂ ಗಾಡಿಯಲ್ಲಿ ಕರೆದೊಯ್ದು ಜೋಪಾನವಾಗಿ ಮನೆ  ತಲುಪಿಸುವ ವ್ಯವಸ್ಥೆ ಮಾಡು ! " ಎಂದು ಅಪ್ಪಣೆ ಮಾಡಿದ ಕಾಮೆಯ  .  
"  ಹೆದರ ಬೇಡ ! ಇದಕ್ಕೆ ಸುಂಕ ಕಟ್ಟ ಬೇಕಾದ ಅಗತ್ಯವಿಲ್ಲ  ! "   ಗಾಡಿ ಹತ್ತಲು ಹಿಂಜರಿದ ಚಿಕ್ಕಿಗೆ   ಆಶ್ವಾಸನೆ ನೀಡಿದ ಕಾಮೆಯ .   

                                    
ಮಾತು ಕೊಟ್ಟಂತೆಯೇ ಮರುದಿನ ಮುಂಜಾವಿನಲ್ಲಿ ಅಪ್ಪಣ್ಣನವರೊಂದಿಗೆ ಹೊರಟ ಕಾಮೆಯ ದಂಡನಾಯಕ ದೇವರಗುಡಿಯನ್ನು ತಲುಪಿದನು. ಮೂಲ ದೇವರಿಗೆ ಪೂಜೆ ಸಲ್ಲಿಸಿದನಂತರ  ತನ್ನ ಇಷ್ಟ ದೇವರಾದ ಕಂಬದ ಆಂಜನೇಯನನ್ನು ದರ್ಶನ ಮಾಡಿಕೊಂಡನು . 
'' ಅಪ್ಪ ಆಂಜನೇಯ ! ದಂಡನಾಯಕನಾಗಿ ನಾನು ಮೊದಲ ಬಾರಿಗೆ ಜನತಾ ದರ್ಶನಕ್ಕೆ ಹೊರಟಿರುವೆ . ಅವರುಗಳ ಸಮಸ್ಯೆಗಳನ್ನು ಪರಿಹರಿಸಲು ಬುದ್ಧಿಯನ್ನೂ ಶಕ್ತಿಯನ್ನೂ ನನಗೆ ದಯಪಾಲಿಸು ." ಎಂದು ಬೇಡಿಕೊಂಡನು . ನಂತರ  ಕಡತನಮಲೆ ಕುರಿತು ಹೊರಟಿತು ಅವರ ಸವಾರಿ . 

ಹಾದಿಯಲ್ಲಿ  ಅವರುಗಳನ್ನು ಎದುರುಗೊಂಡ ದೃಶ್ಯಗಳು ಎದೆಗುಂದಿಸುವಂತಿದ್ದವು.   ಮಿಡತೆಗಳ ಹಾವಳಿಗೊಳಗಾಗಿ ಪೈರುಪಚ್ಚೆಯೆಲ್ಲ  ಸರ್ವನಾಶವಾಗಿದ್ದವು . ರೋಗ ಪೀಡಿತ ತೆಂಗಿನತೋಪುಗಳಲ್ಲಿ  ಒಣಗಿ ಕಂದು ಬಣ್ಣಕ್ಕೆ ತಿರುಗಿದ್ದ ತೆಂಗಿನ ಗರಿಗಳು ನೆಲ ಕಚ್ಚಿದ್ದವು . ರೈತರು ನಾಶವಾಗಿದ್ದ  ಪೈರುಗಳನ್ನು ಕಿತ್ತೊಗೆದು ಸುಟ್ಟು ಹಾಕುತ್ತಿದ್ದರು .  
  
ಗ್ರಾಮಕ್ಕೆ ಆಗಮಿಸಿದ ಕುದುರೆ ಸವಾರರನ್ನು ಕಂಡ ವ್ಯಕ್ತಿ  '' ಮತ್ತೆ ಬಂದ್ರಪ್ಪೋ ಸುಂಕಾಧಿಕಾರಿಗ್ಳು ! "  ಎಂದು ಕೂಗಿಕೊಂಡ . ಕ್ಷಣದಲ್ಲಿ ಗ್ರಾಮದ ಜನರೆಲ್ಲ ಅವರಿಬ್ಬರನ್ನೂ ಸುತ್ತುವರೆದು  ಗಲಭೆಗೆ  ತೊಡಗಿದರು. ಗದ್ದಲ ಕೇಳಿ ಮನೆಯಿಂದ ಓಡಿ  ಬಂದ ಗಾವುಂಡರು ಕಿರಿಯ ದಂಡನಾಯಕರನ್ನು ಕಂಡು ಚಕಿತಗೊಂಡರು . 
" ಶಾಂತಿ ! ಶಾಂತಿ ! " ಎಂದು ಗಟ್ಟಿಯಾಗಿ ಕೂಗಿದರು . 
" ಕಾಮೆಯ ಡಣ್ಣಾಯಕರು  ನಿಮ್ಮ ಕಷ್ಟ  ಪರಿಹರಿಸಲು ಬಂದಿರುವರು ! ನಿಧಾನವಾಗಿ ನಿಮ್ಮ ಸಮಸ್ಯೆಗಳನ್ನ ತಿಳಿಸಿ ! ''  ಅಪ್ಪಣ್ಣನವರು ಹೀಗೆಂದಾಗ ಎಲ್ಲರೂ ಗುಸು ಗುಸು ಮಾತನಾಡಿಕೊಂಡರು . ನಂತರ  ರೈತನೊಬ್ಬ ಎದ್ದು ನಿಂತು  ತಮ್ಮ ಅಳಲನ್ನೆಲ್ಲ ತೋಡಿಕೊಂಡನು .  
 
ಅವರೆಲ್ಲ ಬೇಸಾಯ ಮಾಡಿ ಬದುಕುವ ಜನ . ಪ್ರತಿ ವರುಷವೂ ಸಮಯಕ್ಕೆ ಸರಿಯಾಗಿ ಕಂದಾಯ ಕಟ್ಟುವುದು ವಾಡಿಕೆ . ಈ ವರುಷ  ಮಿಡತೆಗಳ ಧಾಳಿಯಿಂದ ಅವರುಗಳ ದುಡಿಮೆಯೆಲ್ಲ  ವ್ಯರ್ಥವಾಯಿತು . ಬೆಳೆಗಳೆಲ್ಲ ನಾಶ ಹೊಂದಿರುವ ವೇಳೆಯಲ್ಲಿ  , ಸುಂಕಾಧಿಕಾರಿಗಳ ಕಾಟ . ಸುಂಕ ಕಟ್ಟದಿದ್ದಲ್ಲಿ ಮಹಾರಾಜರ ಅಪ್ಪಣೆಯ ಮೇರೆಗೆ ಶಿಕ್ಷೆಗೊಳಗಾಗಬೇಕಾಗುತ್ತದೆ ಎಂದು ಗದರಿಸಿ ಸುಲಿಗೆ ಮಾಡಹತ್ತಿದ್ದರು . ಅದಕ್ಕೆ ಹೆದರಿ ತಮ್ಮ ಹಸು , ಎಮ್ಮೆ , ದನ , ಗಾಡಿ ಎಂದು ಇದ್ದಬದ್ದದ್ದನ್ನೆಲ್ಲ ಮಾರಿ ಸುಂಕ ಕಟ್ಟಿದ್ದರು . ಈ ಮಾರಾಟಕ್ಕಾಗಿಯೂ ಸುಂಕ ವಸೂಲಾಗಿತ್ತು . ಎರಡು ದಿನದ ಕೂಳಿಗೂ ಕಾಸು ಉಳಿದಿರಲಿಲ್ಲ . 
" ಒಟ್ಟೆಗಿಲ್ಲ ಬಟ್ಟೆಗಿಲ್ಲ ! ಆದಾಯವಿಲ್ದೆ ಅದೆಂಗೆ ಸುಂಕ ಕಟ್ಟೋದು ಡಣ್ಣಾಯಕರೇ  ? "  
ಕಾಮೆಯನ  ಹೃದಯ ವಿದ್ರಾವಕವಾಯಿತು . ಗಾವುಂಡರು ಅಪರಾಧಿಯಂತೆ ತಲೆ ತಗ್ಗಿಸಿದ್ದರು .

                                    
" ಮಹಾಜನಗಳೇ ! ಮಹಾರಾಜರು ದಯಾವಂತರು . ತನ್ನ ಪ್ರೀತಿಯ ಪ್ರಜೆಗಳಿಗೆ ತೊಂದರೆಯಾಗುವಂತಹ ಯಾವ ಕಾರ್ಯವನ್ನೂ ಅವರು ಸಹಿಸುವುದಿಲ್ಲ . ಸುಂಕ ಕಟ್ಟಲಾರದೆ ತಮ್ಮ ಊರನ್ನೇ ಬಿಟ್ಟು ಹೊರಟಿದ್ದ ನೇಕಾರರ ಸುಂಕವನ್ನು ಬಿಟ್ಟುಕೊಟ್ಟು  ಅದೇ ಊರಿನಲ್ಲಿ ಅವರುಗಳು  ನೆಲೆಸಿರುವಂತೆ  ಪ್ರೋತ್ಸಾಹ ನೀಡಿದ  ಕರುಣಾಮಯಿ ನಮ್ಮ ದೊರೆಗಳು . 
ಅಂತಹ ಮಹಾರಾಜರ ಹೆಸರಿಗೆ ಕಳಂಕ ಉಂಟುಮಾಡುವಂತಹ  ದುಷ್ಟ ಅಧಿಕಾರಿಗಳ ವರ್ತನೆ ಖಂಡನೀಯ .  ಅವರನ್ನು  ನಂತರ ವಿಚಾರಿಸಿಕೊಳ್ಳುತ್ತೇನೆ . 
ಇದೀಗ ನಿಮ್ಮ ಸಮಸ್ಯೆಯ ಪರಿಹಾರಕ್ಕಾಗಿ ನಾನೊಂದು ನಿರ್ಧಾರಕ್ಕೆ ಬಂದಿರುವೆನು  ... "

 ಕುತೂಹಲದಿಂದ ಕಾದು ನಿಂದ ಗ್ರಾಮವಾಸಿಗಳನ್ನು ಕುರಿತು ತನ್ನ ನಿರ್ಧಾರವನ್ನು ವ್ಯಕ್ತಪಡಿಸಿದನು ಕಾಮೆಯ . 
" ಮಹಾ ಪ್ರತಾಪಚಕ್ರವರ್ತಿಗಳಾದ ಮೂರನೆಯ ವೀರಬಲ್ಲಾಳ ಮಹಾರಾಜರ  ಆಧಿಪತ್ಯದಲ್ಲಿ , ಎಲಹಕ್ಕ ನಾಡನ್ನು ಆಳುತ್ತಿರುವ ಅವರ ಮಹಾಪ್ರಧಾನಿಗಳಾದ ಪೊನ್ನಣ್ಣ ದಂಡನಾಯಕರ ಮಗ , ಕಾಮೆಯ ದಂಡನಾಯನಾದ ನಾನು ನಿಮ್ಮೆಲ್ಲರ  ಯೋಗ ಕ್ಷೇಮಕ್ಕಾಗಿ ಕಡತನಮಲೆ ಗ್ರಾಮವನ್ನು ಆಧಾಯಗಳೊಂದಿಗೆ ಕಡತನಮಲೆವಾಸಿಗಳಾದ ನಿಮಗೆ ಧಾನವಾಗಿ ನೀಡುತ್ತಿದ್ದೇನೆ . "

                                    
'' ವೀರಬಲ್ಲಾಳ ಚಕ್ರವರ್ತಿಗಳಿಗೆ ಜಯವಾಗಲಿ  ! ''    
" ಕಾಮೆಯ ದಂಡನಾಯಕರಿಗೆ ಜಯವಾಗಲಿ  ! " 
 ಗ್ರಾಮದ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು . ಬಲವಾದ  ಘೋಷದೆಡೆ ಪರಿಚಿತವಾದ ಕೀರಲು ದನಿಯನ್ನು ಗುರ್ತಿಸಿದ ಕಾಮೆಯನ ಮೊಗದಲ್ಲಿ ಕಿರುನಗೆಯರಳಿತು .  

ಮರು ದಿನ ಕಂಬದ ಆಂಜನೇಯನಿಗೆ ಪೂಜೆ ಸಲ್ಲಿಸಿದ ನಂತರವೂ ಕಾಮೆಯನ ಮನಸ್ಸನ್ನು ಒಂದು ವಿಧವಾದ ಚಿಂತೆ  ಕಾಡುತ್ತಿತ್ತು   . 
'' ಅಪ್ಪಣ್ಣನವರೇ !  ನಾನು ಮಾಡಿದ ನಿರ್ಧಾರ ಸರಿಯೇ  ? " ತಾಳಲಾರದೆ  ಅಪ್ಪಣ್ಣನವರನ್ನು  ಪ್ರಶ್ನಿಸಿದನು .  
" ಪ್ರಜಾಹಿತಕ್ಕಾಗಿ  ಮಾನವೀಯತೆ ಮತ್ತು ಸಹಾನುಭೂತಿಯಿಂದ  ತೆಗೆದುಕೊಳ್ಳುವ ಯಾವ ನಿರ್ಧಾರವೂ  ತಪ್ಪಾಗಲಾರದು ಕಾಮೆಯ ದಂಡನಾಯಕರೇ ! " 
 ಅಪ್ಪಣ್ಣನವರ ಉತ್ತರ ಭರವಸೆಯನ್ನು ನೀಡಿತು . 
" ಆದರೆ ಒಂದು ವಿಷಯ ! ಗುಡಿಯ ಪರಾಮರಿಕೆ  ಗ್ರಾಮದ ಸುಂಕ ಹಣದಿಂದಲೇ ನಡೆಯುತ್ತಿತ್ತು ! ಈಗ  ಬೇರೆಯೇ ವ್ಯವಸ್ಥೆ ಮಾಡಬೇಕಿದೆ  ! "  
" ಜನ ಸೇವೆಯೇ ಜನಾರ್ಧನ ಸೇವೆಯಲ್ಲವೇ ಅಪ್ಪಣ್ಣನವರೇ ? ಇರಲಿ ! ಗುಡಿಯ ಖರ್ಚುಗಳನ್ನು ನನ್ನ ಸ್ವಂತ ಧನದಿಂದ ನಿಭಾಯಿಸಿಸೋಣವಂತೆ ! " ಎಂದು  ನಿರಾಳವಾಗಿ ನುಡಿದನು  ಕಾಮೆಯ . 
ಅಪ್ಪಣ್ಣನವರ ಮನದಲ್ಲಿ  'ಪುಟ್ಟ'ನ ಬಗ್ಗೆ ಈಮೊದಲೇ ಇದ್ದ  ಪ್ರೀತಿಯೊಂದಿಗೆ ಹೊಸತಾದ ಗೌರವವೂ ಮನೆಮಾಡಿಕೊಂಡಿತು . 
-------------------------------------------------------------------------------------------------------------------

ಆಧಾರ : 
1310 C.E. ಗೆ ಸೇರಿದ ಹೊಯ್ಸಳ ವೀರಬಲ್ಲಾಳರ ಕಾಲದ ಕಡತನಮಲೆ ಗ್ರಾಮದ ದಾನ ಶಾಸನ .

https://www.facebook.com/groups/inscriptionstones/permalink/2745834685657749/

------------------------------------------------------ -----------------------------------------------------------------

KAMEYA DANDANAYAKA

Kameya , fully concentrating on reading the letters and documents , did not pay attention to the noise of some loud arguments going on out side. Appanna , a senior official in his father’s office , was helping him with the work . 

                                  

Kameya found Appanna’s respectful behaviour very embarrassing , as the elderly man had carried him on his shoulders and played with him when he was a little boy. But Appanna maintained that the position Kameya now occupied, as Dandanayaka, deserved all due respect.

Mahapradana Ponnanna , the Chieftain who was governing the province of Yelahakka Nadu on behalf of Maharaja Veera Ballala, had trained his son Kameya in both martial arts and civil Administration . And now , the young man had attained the position of a Dandanayaka, serving alongside his Father . But this was the first time he had to occupy the office all by himself .

He had been a bit taken aback when his Father had brought him the news.

“ Kameya, our spies have reported that the Chieftain of the Delhi Sultanate , Malik Kafur, is preparing to invade South . Our King is presently traveling in a far off kingdom . He has to be alerted about this new danger .” Father had told him, “It may take me weeks to go there and return . Till then, you have to take care of Yelahakka Nadu…. . Keep this matter a secret , do not create panic among the people, but just see that our forces are ready . While I am gone , Appanna will help you in office matters .”

Kameya, now in full charge of the administration, was immersed in office work when the angry voices from outside rose higher , disturbing his concentration.

A Guard was shouting angrily “ Leave , you pest ! Don’t keep troubling me !”

“ I will not !” Screeched the thin voice of a girl defiantly ,” I have come to see the King and will not leave till I see him .”

Appanna , who had gone out to see what the problem was, returned , smiling . “ Some little girl, not three-spans high , is creating a nuisance , demanding to see the King !”.

“ Must be a stubborn child !  said Kameya, “ She has been arguing for quite a while now, ….let me see what she wants…”

                                   

He went out and was surprised to see a thin little girl , with a baby on her hip, confronting the Guard . Though her clothes were faded and and her hair unkempt, her huge black eyes flashed in fury . The baby, which was scrawny and dirty , was sucking away on his thumb hungrily .

Kameya called for a Servant to bring some food for both of them .

But the girl threw a tantrum . “ I don’t want any food . I want to see the King !”

“ Sure, sure !” Comforted Kameya kindly “But first , give the baby this milk and you eat some rice.”

The little girl calmed down a little and did as she was told.

“Now tell me, who are you , why have you come to see the King ?”

“I am Chikki . I am from Kadatanamale .”

“ Oh ! That’s far from here , with whom did you come and by cart or caravan ?”

“Cart ? Had I come by cart , they would have taxed the cart too …..I came alone , walking !” Said the girl bitterly .

Her talk seemed to touch Kameya in an odd way . Though Appanna advised him to send away the girl, he persisted in questioning her .

Soon he gathered that in her village , that year, there had been very poor harvest due to invasion of locusts. They had not got enough grains nor enough cotton for weaving .

“ But even when there is so much hardship, the Tax collectors have been coming regularly and troubling our people to pay taxes .” fumed the girl .

Kameya tried to reason it out with her “ Unless people pay taxes, how can the King provide the services for the people ?”

“ When we don’t have enough to eat , from where can we bring grains to pay your tax collectors ? Why can't they wait till we get better harvest ?”

“But why have you come to talk about this ? Are there no elders or a Headman in your village ?”

“The Headman is just advising people to go and petition the King , but is himself sitting like a stone idol . My father and other people are busy trying to save as many crops as possible before the Tax collectors come again and take away everything. My mother is ill . Since no one was moving, I decided to come, with my brother here ….. take me to the King .”

“ The King is not in town. But you may go home now . I will take care of everything .”

“ You ? You are only a lad !  What can you do ? ”

“ Mind your tongue, Girl !  Scolded Appanna, “ You are talking to the Dandanayaka!”

“ What ! …oh…” The girl was taken aback .

Kameya ordered a Guard to take the girl and baby , in a cart, back to their village and reach them home safely .

Chikki hesitated to climb into the cart .

“ Go on , do not be scared !” smiled Kameya , “ You don’t have to pay Tax to use this cart !”

………….

Kameya Dandanayaka kept his promise to the girl . As he had told her that he would look into the matter , he decided to personally visit Kadatanamale to see what the situation was .

                                       

Early next morning , he set out with Appanna , halting first at the local temple for a prayer . He then headed towards his personal deity , the Anjaneya on the Pillar .

“ O Anjaneya , I have set out on my first independent move to meet the people as a Dandanayaka . Give me the strength and wisdom to understand and find solutions for the problems of my people .”

…………..

All along the road to Kadatanamale , the scenes that met his eye were pitiable and heartbreaking . Fields destroyed by locusts . Groves of withering coconut trees . Diseased crops being burnt down by farmers .

As they neared the village , a man who noticed them, shouted :

“ They have come again to suck our blood ! The cursed Tax Collectors !”

Within minutes there was a roaring mob of enraged villagers , charging towards them , shouting, wailing and cursing .

Appanna boomed authoritatively “ Silence ! … The Dandanayaka has come to listen to your problems and help you…..keep calm and speak up , one by one .”

Soon they all settled down under a tree and the villagers started narrating their woes . It became apparent to Kameya that what Chikki had told him was true . In spite of knowing that locusts had destroyed crops , the local tax collectors had been threatening the people that unless they paid the usual taxes, they would be thrown into dungeons by The King .

When questioned about this, the Headman ( Gavunda) hung his head guiltily .

                                   

Kameya turned towards the villagers . “ My dear people, our King is not a tyrant  who would torture you for Taxes . In his name , other unscrupulous officers have been harassing you . But I will put an end to this ! ”

Kameya turned to Appanna and in a low voice , told him of his decision. “ Appanna , is this decision of mine right ?”

“ A kind and humane deed done for universal good can never be wrong, my boy.” Said Appanna , patting his back “Your thought is noble . Go ahead !”

Kameya stood up and addressed the gathering “ I , Kameya Dandanayaka , son of Ponnanna Dandanayaka who is governing Yelahakka Nadu for Mahapratapa Chakravarthi Veera Ballala the Third , do hereby grant to you, the people of Kadathanamale , this Village of Kadatanamale along with its revenues , for your use and peaceful enjoyment.”

The crowd cheered : “ Victory to Raja Veera Ballala”

“ Long live Kameya Dandanayaka ! ”

                                   

Amidst the loud cheering that reached the skies , the jubilant voice of Chikki was not lost .

………..

On their way back, Appanna congratulated the young Dandanayaka on his first success as an administrator .

“But ,” he added, “ the taxes from that village were being used for the maintenance of the local temple . We now have to find other means to pay for it .”

“Appanna, Service to the people is same as Worship to God ….. Don’t worry about that temple . I will provide for it from my own private funds .”

Appanna smiled proudly at Kameya, remembering the little boy he had once carried on his shoulders and played with . 

--------------------------------------------------------------------------------------------------------------

Based on a Village Grant Inscription dated 1310 C.E. found at Kambada Anjeyana Temple, Rajanakunte.

https://www.facebook.com/groups/inscriptionstones/permalink/2745834685657749/

-----------------------------------------------------------------------------------------------------------------------

No comments:

Post a Comment