Thursday, July 17, 2014

Jugga Juggi ! / ಜುಗ್ಗ ಜುಗ್ಗಿ !

 ಜುಗ್ಗ ಜುಗ್ಗಿ !


ಪಾಪು ಎರಡು ಕೈಗಳಲ್ಲೂ ಒಂದೊಂದು ಬಿಸ್ಕೆಟ್ಟು ಹಿಡಿದು ಕೊಂಡು ಚೀಪುತ್ತಿತ್ತು  . 
"ಪಾಪೂ ತಾತ್ನ್ಗೊಂದು ಬಿಸ್ಕೆಟ್  ಕೊಡೊ !" ಎನ್ನುತ್ತಾ ಕೈ ಚಾಚಿದರು ತಾತ . 
'ಊ ಹುಂ!'   ಎಂದು ತಲೆ ಅಲ್ಲಾಡಿಸಿ ನಕ್ಕಿತು ಪಾಪು . 
" ನನಗೇ ?" ಎಂದು ಕೈ ಚಾಚಿದ ಪುಟ್ಟಣ್ಣ . 
ಪಾಪು  ಬಿಸ್ಕೆಟ್ಟನ್ನು ತನ್ನ ಹಿಂದೆ ಬಚ್ಚಿಟ್ಟುಕೊಂಡಿತು  . 
" ಮುದ್ದು ಪಾಪು ನನ್ಗೆ ಕೊಟ್ಟೇ ಕೊಡತ್ತೆ ನೋಡು !" ಎಂದು ತಾನೂ ಕೈ ಚಾಚಿ "ನನ್ಗೆ  ?" ಎಂದಳು ಪುಟ್ಟಿ . 
ಪಾಪು ಬಿಸ್ಕೆಟ್ಟನ್ನು  ಬಿಗಿಯಾಗಿ  ಹಿಡಿದುಕೊಂಡು  ವೇಗವಾಗಿ ತೆವಳುತ್ತ ಹೋಗಿ ಅಜ್ಜಿಯ ಮಡಿಲಲ್ಲಿ ಬದ್ರವಾಗಿ ಕುಳಿತುಕೊಂಡಿತು .ಅಜ್ಜಿ ಕೇಳದೆಯೇ ಚೂರೇ  ಚೂರು    ಮುರಿದು ಅವಳ ಬಾಯಿಗೆ ಹಾಕಿತು . 
"ಆಹಹಃ ! ಎಷ್ಟ್ ದೊಡ್ಚೂರು ಕೊಟ್ಬಿಟ್ಟೆ ! ಜುಗ್ಗ ಕಣೋ ನೀನು !" ಎಂದರು ತಾತ ನಗುತ್ತ .
"ಪ್ರಪಂಚ್ದಲ್ಲಿರೋ ಎಲ್ಲ ಜುಗ್ಗರನ್ನೂ ನುಂಗಿ ನೀರು ಕುಡಿಯೋಂತ  ಜುಗ್ಗರ ಕಥೆಯೆಲ್ಲಾ ಕೇಳಿದ್ದೀವಿ  !  ಅಂತಾದ್ರಲ್ಲಿ ಪಾಪೂನ ಯಾರದ್ರೂ ಜುಗ್ಗ ಅನ್ತಾರೆಯೇ? ನನ್ಗೆ ಅದೆಷ್ಟ್ ಚೆನ್ನಾಗಿ ಬಿಸ್ಕೆಟ್ ತಿನ್ನಿಸ್ದ  ನೋಡಿ !" ಎಂದು ಪಾಪೂನ ಮುದ್ದಿಸುತ್ತ  ನುಡಿದಳು ಅಜ್ಜಿ .
"ಹೌದೌದು ! ಆ ಜುಗ್ಗೋತ್ತುಂಗನ ಹೆಂಡತಿಯೋ  ಅವನ್ಗಿಂತ  ಒಂದು ಪಟ್ಟು ಹೆಚ್ಚಾಗಿ ಜುಗ್ಗತನ ತೋರ್ತಿದ್ಳು ಅಲ್ವೇ ?" ಎಂದು ನೆನೆಪಿಸಿಕೊಂಡು ಮಾತನಾಡಿದರು ತಾತ.
"ಅಂದ್ರೆ ಅವ್ಳು ಜುಗ್ಗಿಯೇ ?" ಪುಟ್ಟಿ ಉತ್ಸಾಹದಿಂದ ಕೇಳಿದಳು .
"ಹೂಂ ! ಜುಗ್ಗನಿಗೆ ತಕ್ಕ ಜುಗ್ಗಿ !" ಎಂದರು ತಾತ.
"ಜುಗ್ಗ ಜುಗ್ಗಿ ! ಹೈಯ ! ತುಂಬಾ ಚೆನ್ನಾಗಿದೆ ಟೈಟಲ್ಲು . ಅವ್ರ ಕಥೆನೂ ನಿಮ್ ತಾತ ಹೇಳಿರ್ಬೇಕಲ್ಲಾ ? ಹೇಳಜ್ಜಿ  ಆ ಕಥೇನ !" ಎಂದು  ಕಾಡ ತೊಡಗಿದಳು ಪುಟ್ಟಿ .
"ಸರೀ ! ಸರೀ ! ಹೇಳ್ತಿನಿ ಕೇಳು !" ಎಂದು ಶುರು ಮಾಡಿದಳು ಅಜ್ಜಿ .


ಒಂದಾನೊಂದು ಕಾಲದಲ್ಲಿ ಒಬ್ಬ ಜುಗ್ಗನಿದ್ದನಂತೆ  . ದಿನವಿಡೀ ಇನ್ನೇನು ಜುಗ್ಗತನ ಮಾಡಬಹುದೆಂಬ ಚಿಂತೆಯಲ್ಲೇ ಕಳೆಯುತ್ತಿದ್ದನಂತೆ  .
 ಹತ್ತು ಪಟ್ಟು ಹಿಂದಕ್ಕೆ  ಪಡೆಯಬಹುದೆಂಬ ಭರವಸೆ   ಇಲ್ಲದೆ , ಅವನು ಯಾರೊಬ್ಬರಿಗೂ ಒಂದೇ ಒಂದು ಕಾಳನ್ನೂ ಕೂಡ ಕೊಡುತ್ತಿರಲಿಲ್ಲ  .
ಅವನಿಗಿಂತ ಭಾರೀ ಜುಗ್ಗತನ ತೋರುತ್ತಿದ್ದಳು ಅವನ ಹೆಂಡತಿ.
ಹಬ್ಬ ಹರಿದಿನಗಳನ್ನು  ಪಾಯಸ ಮಾಡಿ ಕೊಂಡಾಡುವುದು    ಸಾಮಾನ್ಯ ಜನರ ವಾಡಿಕೆ . ಜುಗ್ಗ ಜುಗ್ಗಿ ಕೂಡ ಹಬ್ಬ ಮಾಡಿ ಪಾಯಸ ಕುಡಿದರು , ಪಾಯಸ ಮಾಡದೆಯೇ ! ಇಷ್ಟೇ ಇಷ್ಟು ಧಾನ್ಯಗಳನ್ನೂ ಇಷ್ಟೇ ಇಷ್ಟು ಬೆಲ್ಲವನ್ನೂ ಬಟ್ಟೆಯಲ್ಲಿ ಮೂಟೆಯಾಗಿ ಕಟ್ಟಿ ನೀರಿನಲ್ಲಿ ಅದ್ದಿ , ಆ ನೀರನ್ನೇ ಪಾಯಸವೆಂದುಕೊಂಡು  ಕುಡಿಯುತ್ತಿದ್ದ ಜುಗ್ಗ  . ಅವನ ಹೆಂಡತಿಯೋ ಆ  ಮೂಟೆಯನ್ನು   ಬಟ್ಟಲ ನೀರಿನ ಮೇಲೆ ಎತ್ತಿ ಹಿಡಿದು, ಧಾನ್ಯ-ಬೆಲ್ಲದ ಮೂಟೆ ಪ್ರತಿಬಿಂಬಿಸಿದ ಬಟ್ಟಲ  ನೀರನ್ನು ಪಾಯಾವೆಂದು ಕುಡಿಯುತ್ತಿದ್ದಳು !
ಧಾನ್ಯವೂ ಬೆಲ್ಲವೂ ಕರ್ಚು ಮಾಡದೆಯೇ  ಪಾಯಸ ಕುಡಿದ ಖುಷಿ ಜುಗ್ಗ ಮತ್ತು ಜುಗ್ಗಿಗೆ  !


ಒಮ್ಮೆ ಜುಗ್ಗ ಜಗಲಿಯ ಮೇಲೆ ಆಲಸ್ಯದಿಂದ ಕಣ್ಣು ಮುಚ್ಚಿ ಮಲಗಿಕೊಂಡಿದ್ದನು. ಏನೇನೋ ಶಬ್ದಗಳನ್ನು ಮಾಡುತ್ತಿದ್ದನು :
'ಹೈ ,ಹೈ , ತ್ಳುಕ್ ತ್ಳುಕ್ , ಡ್ರೀಯ ! '
"ಏನು ಮಾದಿತ್ತಿರುವೆ ?'' ಎಂದು ಆಶ್ಚರ್ಯದಿಂದ ಕೇಳಿದಳು ಜುಗ್ಗಿ .
" ನನ್ನ ಕಾಲ್ಪನಿಕ  ಆಕಳನ್ನು  ನಾನು ಬಜಾರಿಗೆ ಕರೆದೊಯ್ಯುತ್ತಿರುವೆ !ಆಹಾ ! ಎಷ್ಟು ಸೊಗಸಾದ ಆಕಳು ! ಪುಷ್ಟಿಯಾದ ದೇಹ ! ಮಿರಿ ಮಿರಿ ಹೊಳೆವ ಕಂದು  ಬಣ್ಣ! ದೊಡ್ಡ ಕಣ್ಣುಗಳು ! ಕಿವಿಗಳು !ಒಮ್ಮೆಗೆ ಹತ್ತು ಕೊಡ ಹಾಲನ್ನು ಕೊಡ ಬಲ್ಲಳು !ಹಾಲನ್ನು ಮಾರಿ ನಾನು ದೊಡ್ಡ ಶ್ರೀಮಂತನಾಗುವೆ !"
" ಒಹ್ ! ಎಂತಹ ಅದ್ಬುತವಾದ ಆಕಳು !" ಜುಗ್ಗಿ ತನ್ನ ಕಲ್ಪನೆಯನ್ನೂ  ಸೇರಿಸಿದಳು. " ಆಕಳನ್ನು ನನ್ನ ಸೋದರನ ಮನೆಗೆ ಮೇವಿಗೆ ಕರೆದೊಯ್ಯುವೆ. ಸಂಜೆ ಹಾಲನ್ನು  ಕರೆಯುವೆ ! ನಾಲ್ಕು ಕೊಡ ಕರೆದ ಹಾಲನ್ನು ನನ್ನ ಸೋದರನಿಗೆ ಕಳುಹಿಸುವೆ !"
" ನನ್ನ ಆಕಳಿನ ಹಾಲನ್ನು ನಿನ್ನ ಸೋದರನಿಗೆ ಕೊಡಲು ನಿನಗೆಷ್ಟು ಧೈರ್ಯ !'' ಎಂದು ಕೂಗಾಡಿ ಜುಗ್ಗಿಯನ್ನು ಬಡೆದನು ಜುಗ್ಗ.
ಜುಗ್ಗಿ ಗಟ್ಟಿಯಾಗಿ ಬೊಬ್ಬೆಯಿಟ್ಟ   ಕಾರಣ ನೆರೆಹೊರೆಯವರೆಲ್ಲ ಅಲ್ಲಿ ಕೂಡಿಬಿಟ್ಟರು.
" ಯಾಕಪ್ಪ ಅವಳನ್ನ ಹೊಡೆಯುತ್ತಿರುವೆ ?"ಎಂದು ಅವನನ್ನು ಪ್ರಶ್ನಿಸಿದರು .
" ನನ್ನ ಆಕಳಿನ ಹಾಲನ್ನು ತನ್ನ ಸೋದರನಿಗೆ ಬಿಟ್ಟೀ ಕಳಿಸೋದೆ ಮತ್ತೆ  ?"
" ಆದರೆ ನಿನ್ನ ಆಕಳನ್ನು ಮೇವಿಗೆ ಬಿಟ್ಟಿದ್ದು ನನ್ನ ಸೋದರನ ಮನೆಯಲ್ಲಿತಾನೇ!"ಜುಗ್ಗಿ ಕೂಗಿದಳು .
" ಅದ್ಸರಿ ! ನಿನ್ನ ಆಕಳೆಲ್ಲಿ  ಈಗ ?" ಎಂದು ಪ್ರಶ್ನಿಸಿದರು ಬಂದವರು .
" ನನ್ನ ಕಲ್ಪನೆಯಲ್ಲಿದೆ  !'' ಎಂದು ಜಂಬದಿಂದ ನುಡಿದ ಜುಗ್ಗ .
" ಸರಿ ಸರಿ ! ಕಲ್ಪನೆಯ ಹಾಲಿಗೂ ಕಲ್ಪನೆಯ ಹುಲ್ಲಿಗೂ ಲೆಕ್ಕ ಸರಿ ಹೋಯಿತು ! ಈಗ ಗಲಬೆ ಮಾಡದೆ ಸುಮ್ಮನಿರಿ !"ಎಂದು ಎಲ್ಲರೂ ಬೈದು ಹೋದರು .
ಜುಗ್ಗ ಮತ್ತು ಜುಗ್ಗಿ ಹಾಲೆಂದು ಭಾವಿಸಿ ತಂಬಿಗೆ ನೀರನ್ನು ಕುಡುದು ತೃಪ್ತಿಯಿಂದ ಮಲಗಿದರು!


  ಜುಗ್ಗ ಪಕ್ಕದ ಊರಲ್ಲಿದ್ದ ತನ್ನ ನೆಂಟರ  ಮನೆಗೆ ಆಗಾಗ ಹೋಗಿ ಊಟ ಮಾಡಿ ಬರುವುದು ವಾಡಿಕೆ . ಮನೆಯ ಯಜಮಾನ  ಬಹಳ ಒಳ್ಳೆಯ ಸ್ವಭಾವದವ. ಜುಗ್ಗನಿಗೆ ಊಟ ಹಾಕುವುದಲ್ಲದೆ ಕೈ ತುಂಬಾ ಹಣ್ಣು ಹಂಪಲು  ಕೊಟ್ಟು ಕಳುಹಿಸುತ್ತಿದ್ದ .
ಒಮ್ಮೆ ಜುಗ್ಗ ಅವರ ಮನೆಗೆ ತೆರಳಿದ್ದಾಗ , ಅಂಗಳದಲ್ಲಿದ್ದ  ತುಳಸಿ ಕಟ್ಟೆಯ  ಸುತ್ತ ಹರಡಲ್ಪಟ್ಟಿದ್ದ  ಹೊಸ ಬೇಳೆಕಾಳುಗಳನ್ನು  ಕಂಡನು . ಅವನ ಬಾಯಲ್ಲಿ ನೀರೂರಿತು ! ' ಆಹಾ ! ಇದರಿಂದ ರುಚಿ ರುಚಿಯಾದ  ವಡೆ ತಯಾರಿಸಬಹುದಲ್ಲ !" ಎಂದುಕೊಂಡನು .
ಬೇಳೆಕಾಳನ್ನು ಕೇಳಿ ಪಡೆಯಲು ಅಡ್ಡ ಬಂದಿತು  ಅವನ ಒಣ ಜಂಬ !  ಕರೀದಿ ಮಾಡಲು ಅಡ್ಡಿಯಾಯಿತು  ಅವನ ಜುಗ್ಗತನ !
ಆದ್ದರಿಂದ ಅವನು ಒಂದು ತಂತ್ರವನ್ನು ಹೂಡಿದನು .
ಹೊರಡುವ ಮುನ್ನ ಗಾಡಿಯ ಚಕ್ರದ ಕೀಲನ್ನು ತನ್ನ ಒಡಲಿಗೆ ಲೇಪನ ಮಾಡಿಕೊಂಡು ಅಂಗಳವನ್ನು ಕುರಿತು ನಡೆದನು .
"  ಅಯ್ಯೋ !ಇಂದು ದ್ವಾದಶಿಯಲ್ಲವೇ ? ನನಗೆ  ಪ್ರತಿ ದ್ವಾದಶಿಯಂದೂ ಉರುಳು ಸೇವೆ ಮಾಡುವ ಪದ್ಧತಿ !" ಎಂದು ಪ್ರಕಟಣೆ ಮಾಡಿ , ದಡೀರೆಂದು ಕೆಳಗೆ ಬಿದ್ದು ತುಳಸೀ ಕಟ್ಟೆಯ ಸುತ್ತ 'ಗೋವಿಂದ ಗೋವಿಂದ ' ಎಂದು ಜಪಿಸುತ್ತ  ಉರುಳ ತೊಡಗಿದನು. ಮನೆ  ಯಜಮಾನ ಮತ್ತು  ಅವನ  ಪತ್ನಿ ವಿಸ್ಮಯದಿಂದ ನೋಡಿ ಭಕ್ತಿಯಿಂದ ಕೆನ್ನೆಗೆ 'ರಪ ರಪ' ಬಡಿದುಕೊಂಡರು . 
ಜುಗ್ಗ  ಉರುಳಿದಂತೆ ಹರಡಿದ್ದ ಬೇಳೆ ಕಾಳುಗಳು  ಯಥೇಷ್ಟವಾಗಿ ಅವನ ಮೈಗಂಟಿಕೊಂಡಿತು  . ನಂತರ ಅವಸವಸರವಾಗಿ ದುಪ್ಪಟ್ಟಿ ಹೊದ್ದುಕೊಂಡು ಬಿರಬಿರನೆ ಮನೆಗೆ ಹಿಂದಿರುಗಿದನು .
ಮನೆಯಲ್ಲಿ ಜುಗ್ಗನ ದುಪ್ಪಟ್ಟಿಯಿಂದ ಉದುರಿದ ಬೇಳೆಕಾಳುಗಳನ್ನು ಕಂಡ ಜುಗ್ಗಿಗೆ ಆನಂದವೋ ಆನಂದ !

 

" ನನ್ನ ಬುದ್ಧಿವಂತಿಗೆಗೆ ಏನಂತೀ ? ಬೇಳೆಕಾಳುಗಳನ್ನ  ತೊಳೆದು, ನೆನೆಸಿ ರುಬ್ಬು ಹೋಗು . ರುಚಿಯಾದ ವಡೆಗಳನ್ನ ತಯಾರಿಸಿ ಸವಿಯೋಣ .
ಜುಗ್ಗಿ ಬೇಳೆಯನ್ನು ರುಬ್ಬಿ ಆರು ವಡೆಗಳನ್ನು ತಯಾರಿಸಿದಳು .
" ನಾನು ಹೋಗಿ ಕೀಲು ಅಂಟಿದ ಮೈ  ತೊಳೆದುಕೊಂಡು ಬರುವೆ . ನಂತರ ನೀನು ಮೂರು ನಾನು ಮೂರು ವಡೆಗಳನ್ನ ತಿನ್ನೋಣ ." ಎಂದು ನುಡಿದು ಬಾವಿಯತ್ತ ನಡೆದ ಜುಗ್ಗ  .
ಜುಗ್ಗಿಗೆ ವಡೆ ತಿನ್ನಬೇಕೆಂಬ ತಡೆಯಲಾರದ ಆಸೆ! ತನ್ನ ಪಾಲಿನ ಮೂರು ವಡೆಗಳನ್ನು ಒಂದೇ ಏಟಿಗೆ ಗಪಗಪನೆ ಮುಕ್ಕಿಬಿಟ್ಟಳು ! ನಂತರ  ಆತುರಾತುರವಾಗಿ ಇನ್ನೆರಡು ವಡೆಗಳನ್ನೂ ಕಬಳಿಸಿದಳು . ಸ್ನಾನ ಮುಗಿಸಿ ಬಂದ  ಜುಗ್ಗ  ಉಳಿದಿದ್ದ ಒಂದೇ ಒಂದು ವಡೆಯನ್ನು ಕಂಡು ಬಲು ಕೋಪಗೊಂಡನು .
" ಅದು ಹೇಗೆ ಒಂದೇ ಏಟಿಗೆ ಐದು ವಡೆಗಳನ್ನ ತಿಂದು ಹಾಕಿದೆ ?" ಎಂದು ಹಾರಾಡಿದನು .
" ಇಗೋ ! ಹೀಗೇ !" ಎನ್ನುತ್ತಾ ಉಳಿದಿದ್ದ ಕೊನೆಯ ವಡೆಯನ್ನು ಬಾಯಿಗೆ ತುರುಕಿಕೊಂಡು ಮೆಲ್ಲುತ್ತಲೇ ನುಡಿದಳು ಜುಗ್ಗಿ !
ಜುಗ್ಗ ಪಾಪ , ತನ್ನ ಬರಿದಾದ ಬಾಯನ್ನೇ ಮೆಲ್ಲುತ್ತ ಅವಳನ್ನೇ ನೋಡುತ ನಿಂದನು!


ಒಮ್ಮೆ ಜುಗ್ಗನ ಸಂಬಂಧಿಕನೊಬ್ಬ ಮನೆಗೆ ಬಂದು , ತಾನು ಕ್ಷೇತ್ರಾಟನ  ಹೊರಟಿರುವುದಾಗಿಯೂ ಒಂದೇ ಒಂದು ದಿವಸ  ಅವರ ಮನೆಯಲ್ಲಿ ವಿಶ್ರಾಂತಿ ಪಡೆದು, ನಂತರ  ಹೊರಟು ಹೋಗುವೆನೆಂದು   ಕೇಳಿಕೊಂಡನು . ಜುಗ್ಗನಿಗೆ ಅತಿಥಿ ಸತ್ಕಾರ ಮಾಡುವ ಮನಸ್ಸಿರಲಿಲ್ಲ . 
ಅತಿಥಿ  ಕೈ ಕಾಲು ತೊಳೆಯಲೆಂದು  ಬಾವಿ ಕಟ್ಟೆಯ  ಕಡೆ ನಡೆದೊಡನೆ , ಜುಗ್ಗ ಜುಗ್ಗಿ ಇಬ್ಬರೂ ಒಂದು ನಾಟಕವನ್ನಾಡಿ ಆತನನ್ನು ಮನೆಯಿಂದ  ಹೊರಗಟ್ಟಲು ಒಂದು  ಉಪಾಯವನ್ನ ಮಾಡಿದರು . 
ಅದರ ಪ್ರಕಾರ ಜುಗ್ಗ ಜುಗ್ಗಿಯನ್ನು ಜೋರಾಗಿ ಬಡಿಯುವಂತೆ ನಟಿಸ ಬೇಕು ! ಜುಗ್ಗಿ ಗಟ್ಟಿಯಾಗಿ ಕೂಗಿ ಅಳ ಬೇಕು ! 
ಅತಿಥಿ ಚೆನ್ನಾಗಿ ಸ್ನಾನ ಮಾಡಿ ಶುಭ್ರವಾಗಿ  ಒಳಗೆ ಬಂದದ್ದೆ ತಡ ! ಜುಗ್ಗ ಜುಗ್ಗಿಯರ ನಾಟಕ ಶುರುವಾಯಿತು !
ಜುಗ್ಗ ಬಲವಾಗಿ ಹೊಡೆಯುವ ನಾಟಕ ಶುರು ಮಾಡಲು ಜುಗ್ಗಿ ನೋವಿನಿಂದ ಗೊಳೋ ಎಂದು  ಅಳುವ ನಾಟಕ ಮಾಡಿದಳು.  
ಇದನ್ನು ಕಂಡ ಅತಿಥಿ  ಹೆದರಿ ಕೂಡಲೇ ಕಣ್ಮರೆಯಾದನು . 
ಊಟದ ವೇಳೆ ಜುಗ್ಗ ಜುಗ್ಗಿ ಇಬ್ಬರೂ ನಗುನಗುತ್ತ ಒಬ್ಬರನ್ನೊಬ್ಬರು ಅಭಿನಂದಿಸುತ್ತ ಊಟಕ್ಕೆ ತೊಡಗಿದರು . 
"  ನೋಡು !  ನಾನು ಅದೆಷ್ಟು ಚಾತುರ್ಯದಿಂದ ಹೊಡೆದೆ ನಿನಗೆ ನೋವಾಗದಂತೆ  !" ಎಂದು ಕೊಚ್ಚಿಕೊಂಡ ಜುಗ್ಗ . 
" ನಾನು ಅದೆಷ್ಟು ಅದ್ಭುತವಾಗಿ ರೋದಿಸಿದೆ ನೋಡು , ಎಡೆಬಿಡದಂತೆ  !" ಎನ್ನುತ್ತ ಕಿಸಿಕಿಸಿ ನಕ್ಕಳು  ಜುಗ್ಗಿ . 
"ನಾನು ಅದೆಷ್ಟು ಜಾಣತನದಿಂದ  ಬಚ್ಚಿಟ್ಟುಕೊಂಡಿದ್ದೆ ನೋಡಿ ಹೊರಟು ಹೋಗದಂತೆ  !" ಎನ್ನುತ್ತ ಅಟ್ಟದಿಂದ ಜಿಗಿದ  ಮೊಂಡನಾದ  ಅತಿಥಿ !
ಜುಗ್ಗ ಜುಗ್ಗಿಯರ ಮಾತನ್ನು ಕದ್ದು  ಕೇಳಿಸಿಕೊಂಡಿದ್ದ  ಅತಿಥಿ, ಅವರುಗಳ ಹೊಲಸು ತಂತ್ರವನ್ನು ಮಟ್ಟ ಹಾಕುವುದಕ್ಕಾಗಿ  ಅಲ್ಲೇ ಉಳಿದುಕೊಂಡಿದ್ದ ! 
ಜುಗ್ಗ ಮತ್ತು ಜುಗ್ಗಿಗೆ ಇನ್ನೇನೂ ಮಾತನಾಡಲು ಆಗಲಿಲ್ಲ ! ತಮ್ಮ ಊಟವನ್ನು ಅತಿಥಿಯೊಂದಿಗೆ ಹಂಚಿಕೊಳ್ಳದೆ ಬೇರೆ ವಿಧಿಯೇ  ಇರಲಿಲ್ಲ !

" ಹೈಯೋ ! ಹೈಯೋ ! ಒಳ್ಳೆ ಜುಗ್ಗ ! ಒಳ್ಳೆ ಜುಗ್ಗಿ! ಒಳ್ಳೆ ಅತಿಥಿ !" ಎಂದು ಹೊಟ್ಟೆ ಹಿಡಿದುಕೊಂಡು ನಕ್ಕರು ಪುಟ್ಟಿ ಮತ್ತು ಪುಟ್ಟಣ್ಣ . ಪಾಪು ತನಗೂ ಏನೋ  ಅರ್ಥವಾದಂತೆ ಕಿಲ ಕಿಲ ನಕ್ಕಿತು . 

Friday, July 4, 2014

Kilaadi Huduga Hunasehuli / ಕಿಲಾಡಿ ಹುಡುಗ ಹುಣಸೇಹುಳಿ

ಕಿಲಾಡಿ ಹುಡುಗ ಹುಣಸೇಹುಳಿ
"ನಿಮ್ ಫುಟ್ ಬಾಲ್ ಪ್ರಾಕ್ಟಿಸ್ ಎಲ್ಲ  ಎಷ್ಟರಮಟ್ಟಿಗಿದೆ ಪುಟ್ಟಣ್ಣ  ?" 
ಅಭ್ಯಾಸ ಮುಗಿಸಿ ಆಗತಾನೆ ಮೈದಾನದಿಂದ ಹಿಂದಿರುಗಿದ್ದ   ಪುಟ್ಟಣ್ಣ  ಉಸ್ಸೆಂದು ತಾತನ ಬಳಿ ಕುಳಿತ . 
"ಸಕ್ಕತ್ತಾಗಿತ್ತು ತಾತ ! ಆದ್ರೆ ಪಾಪ, ಅಕ್ಕಿಮೂಟೆ ಮಾತ್ರ ಇನ್ನೂ ಸ್ವಲ್ಪ ವೇಗ್ವಾಗಿ  ಓಡಿದ್ರೆ ಚೆನ್ನಾಗಿರ್ತಿತ್ತು . "
"ಅಕ್ಕಿಮೂಟೆ ಅಂತೆಲ್ಲ ಹೆಸರಿಡ್ತಾರೆಯೇ  ?" ಎಂದಳು ಪುಟ್ಟಿ . 
"ಅವ್ನು  ದಪ್ಪಾಂತ ಎಲ್ರೂ ಹಾಗೆ ಕರೀತಾರೆ ! " 
"ಹುಣಸೇಹುಳಿ ಅಂತ್ಲೂ ಕೂಡ ಹೆಸರಿಡ್ತಾರೆ  ! ಬೇಕಾದ್ರೆ ನಿಮ್ಮಜ್ಜೀನ ಕೇಳು !" ಎಂದರು  ತಾತ . 
"ಹುಣಸೇಹುಳಿ ? ಅಂದ್ರೆ ಕಥೆ ! ಹೇ ! ಹೇಳಜ್ಜಿ !" ಪುಟ್ಟಿ ಪುಟ್ಟಣ್ಣ ಇಬ್ಬರೂ ಒಟ್ಟಿಗೆ ಕೂಗಿದರು .
"ಒಳ್ಳೆ ಕಲಹ ಮಾಡ್ತೀರಲ್ಲ ಮಾರಾಯ ನೀವು !" ಎಂದು ಹುಸಿ ಮುನಿಸಿನಿಂದ ತಾತನನ್ನು ರೇಗಿದಳು ಅಜ್ಜಿ . 
"ನಾಳೆ ಹೇಗೂ ಭಾನುವಾರ ! ಇವತು ಪಾಠ ಇಲ್ಲ ಏನಿಲ್ಲ .  ಕಥೆ ಹೇಳಜ್ಜಿ ."
"ಮೊದ್ಲು ಎಲ್ರೂ ಕೈಕಾಲ್ ತೊಳ್ಕೊಂಡು ತಿಂಡಿ ತಿನ್ನಿ . ಆಮೇಲೆ ಕಥೆ." ಬಿಸಿ ಬಿಸಿ ತಿಂಡಿ ತಟ್ಟೆಗೆ ಹಾಕುತ್ತ ಹೇಳಿದಳು  ಅಜ್ಜಿ . 
ತಿಂಡಿಯ ಜೊತೆಗೆ ಕಥೆಯೂ ಶುರುವಾಯಿತು . 


ಒಂದಾನೊಂದು ಕಾಲದಲ್ಲಿ ಬಲು ಚತುರನಾದ ಹುಡುಗನೊಬ್ಬನಿದ್ದನು . ಅವನು ಕಡು ಬಡವನಾಗಿಯೂ ಇದ್ದನು .
ಆತನ ಬಡ ತಾಯಿ ಹೊಟ್ಟೆ ಪಾಡಿಗಾಗಿ , ಕಾಡಿಗೆ ಹೋಗಿ ಕಟ್ಟಿಗೆ ಮತ್ತು ಹುಣಸೆ ಹಣ್ಣುಗಳನ್ನು ಸಂಗ್ರಹಿಸಿ ತಂದು , ಅವನ್ನು ಹಳ್ಳಿಯವರಿಗೆ ಮಾರುತ್ತಿದ್ದಳು .
ಹಳ್ಳಿಯ ಜನರೆಲ್ಲ ಹುಡುಗನನ್ನು 'ಹುಣಸೇಹುಳಿ , ಹುಣಸಸೇಹುಳಿ ' ಎಂದೇ ಕರೆಯುತ್ತಿದ್ದರು .


ಒಮ್ಮೆ ಹುಣಸೇಹುಳಿ  ಅವನ ತಾಯನ್ನು ಕುರಿತು ಹೇಳಿದ : "ಅಮ್ಮ ! ನಾನು ಸಾಕಷ್ಟು ದೊಡ್ಡವನಾಗಿದ್ದೇನೆ . ಹೊರ ಪ್ರಪಂಚವನ್ನ  ನೋಡಿಕೊಂಡು ಹಾಗೆಯೇ   ನನ್ನ ಅದೃಷ್ಟವನ್ನೂ  ರೂಪಿಸಿಕೊಂಡು ಬರಲು  ಬಯಸುತ್ತೇನೆ ."
"ಹೌದು ಮಗನೆ ! ನೀನು ಸಾಕಷ್ಟು ದೊಡ್ಡವನಾಗಿದ್ದೀಯ . ನೀನು  ಯಾವ ಕಸುಬನ್ನು ಮಾಡ ಬಲ್ಲೆ ? ನಿನ್ನನ್ನು ಶಾಲೆಗೆ ಕಳಿಸಲೂ ನನ್ನಿಂದ  ಸಾಧ್ಯವಾಗಲಿಲ್ಲವೇ !"
"ಶಂಕಿಸ  ಬೇಡ ಅಮ್ಮ . ನಾನು ಕ್ಷೇಮವಾಗಿಯೇ ಇರುತ್ತೇನೆ . ನನಗೆ ಎರಡೇ ಎರಡು ಕಾಸನ್ನು ಮಾತ್ರ  ಕೊಡು . ನಾನು ಹೊರಡುತ್ತೇನೆ ."
"ನನ್ನ ಬಳಿ ಕಾಸಿಲ್ಲ ಮಗು . ಮೌಲ್ಯವುಳ್ಳ ಇನ್ಯಾವ ವಸ್ತುವೂ ಕೂಡ ಇಲ್ಲ.ಇಗೋ ! ಈ ಚಟಾಕು ಮಾತ್ರ ಉಳಿದಿದೆ . " ಎನ್ನುತ್ತ ಚಟಾಕನ್ನು ತೋರಿಸಿದಳು .
"ಸರಿ ! ಆ ಚಟಾಕನ್ನೇ  ಕೊಡು . ಉಪಯೋಗಕ್ಕೆ ಬಂದೀತು ." ಎಂದ ಹುಣಸೇಹುಳಿ ಚಟಾಕನ್ನು ತನ್ನ ಒಂದು ಜೊತೆ ಉಡುಗೆಯ ಜೊತೆ ಸುರುಳಿ ಸುತ್ತಿಕೊಂಡು ಹೊರಟೇ ಬಿಟ್ಟನು .


ಹುಣಸೇಹುಳಿ ಸಮೀಪದ ಊರನ್ನು ಕುರಿತು ನಡೆದುಕೊಂಡು  ಹೋಗಿ  , ಊರ ಎಲ್ಲೆಯಲ್ಲಿ ನಡೆಯಿತ್ತಿದ್ದ ಸಂತೆಯನ್ನು  ಸೇರಿದನು . ಅನೇಕ ವ್ಯಾಪಾರಿಗಳು ತಮ್ಮ ತಮ್ಮ  ಅಂಗಡಿಗಳನ್ನು ಹರಡಿದ್ದರು. ಸುತ್ತಮುತ್ತಲಿನ ಊರ ಜನರೆಲ್ಲ ತಮಗೆ ಬೇಕಾದ ಪದಾರ್ಥಗಳನ್ನು ಕೊಂಡುಕೊಳ್ಳಲು ಗಿಜಿ ಗಿಜಿ ಕೂಡಿದ್ದರು  .
ತಾಳೆ ಮರದ ತಟ್ಟಿಯ ನೆರಳಿನಲ್ಲಿ  ಮಜ್ಜಿಗೆ ಮಾರುತ್ತಿದ್ದ ಒಬ್ಬಳು ಮುದುಕಿಯನ್ನು  ಕಂಡನು ಹುಣಸೇಹುಳಿ . ಬಾಯಾರಿಕೆಯಿಂದ ಬಳಲಿದ್ದವ ಅವಳ ಬಳಿ ಹೋಗಿ  ಬೇಡಿದನು. "ಆದರಣೀಯ ಅಜ್ಜಿಯೇ , ನನಗೊಂದು ಕುಡಿಕೆ ಮಜ್ಜಿಗೆ ಕೊಡುವೆಯಾ? ತುಂಬಾ ಬಾಯಾರಿಕೆಯಾಗಿದೆ , ಆದರೆ ನನ್ನ ಬಳಿ ಕಾಸಿಲ್ಲ."
ಮುದುಕಿ ಅವನನ್ನೊಮ್ಮೆ ಮೇಲಿಂದ ಕೆಳಗೆ ದಿಟ್ಟಿಸಿ ನೋಡಿದಳು . ನಂತರ ಹೇಳಿದಳು " ಸರಿ ! ಇಲ್ಲೇ ಕಾದಿರು . ಒಳಗೆ ಮಡಿಕೆಯಲ್ಲಿ ತಣ್ಣಗಿರುವ ಹೊಸ ಮಜ್ಜಿಗೆಯನ್ನು  ತಂದು ಕೊಡುವೆ . "


ಒಳಗೆ ಹೋದ ಮುದುಕಿ ಒಂದು ಸೌಟು ಹುಳಿ  ಮೊಸರನ್ನು ಒಂದು ಕುಡಿಕೆಗೆ ಹಾಕಿದಳು . ಕೊಳಕು ಪಾತ್ರೆಯಲ್ಲಿದ್ದ  ನೀರನ್ನು ಧಾರಾಳವಾಗಿ ಅದರಲ್ಲಿ ಮಿಶ್ರ ಮಾಡಿ ಕುಡಿಕೆಯನ್ನು ತುಂಬಿಸಿದಳು . ಜಿಪುಣಿಯಾದ ಮುದುಕಿಕೆ ತನ್ನ ಶ್ರೇಷ್ಠವಾದ  ಮಜ್ಜಿಗೆಯನ್ನು ಬಿಟ್ಟಿ ಕೊಡಲು ಇಷ್ಟವಿರಲಿಲ್ಲ .
ಇದನ್ನೆಲ್ಲಾ ತಟ್ಟಿಯ ಕಿಂಡಿಯ ಮೂಲಕ ನೋಡುತ್ತಿದ್ದನಾದರೂ ಹುಣಸೇಹುಳಿ ಏನೂ ಮಾತನಾಡಲಿಲ್ಲ  .
ಮುದುಕಿ ಮಜ್ಜಿಗೆಯ ಕುಡಿಕೆಯನ್ನು ತಂದು ಕೊಟ್ಟಾಗ " ಧನ್ಯವಾದಗಳು ಅಜ್ಜಿ . ಒಳ್ಳೆಯ ಮನಸ್ಸು ನಿನ್ನದು ."ಎಂದನು ! ನಂತರ ತನ್ನ ಮೂಟೆ ಬಿಚ್ಚಿ ಚಟಾಕನ್ನು ಹೊರ ತೆಗೆದು ಅದನ್ನು ತನ್ನ ಕಿವಿಯಲ್ಲಿಟ್ಟುಕೊಂಡನು .
" ಅದೇನು ಮಾಡುತ್ತಿರುವೆ ?" ಎಂದು ಆಶ್ಚರ್ಯದಿಂದ ಪ್ರಶ್ನಿಸಿದಳು ಮುದುಕಿ .
" ಶ್!!! " ಮುದುಕಿಯನ್ನು ಸುಮ್ಮನಿರಲು ಹೇಳಿ  ಚಟಾಕನ್ನು ಕುರಿತು  ಮಾತನಾಡಿದನು . " ಛೆ ಛೆ ! ನೀನು ತಪ್ಪು ತಿಳಿದಿರುವೆ."
ನಂತರ ಚಟಾಕನ್ನು ಬದಿಗಿಟ್ಟು ಆನಂದದಿಂದ ಬರಿ ನೀರಾಗಿದ್ದ  ಹುಳಿ ಮಜ್ಜಿಗೆಯನ್ನು ಸವಿದನು .
ಕೋಪಗೊಂಡವನಂತೆ ಮುಖ ಸಿಂಡರಿಸಿಕೊಂಡು ಚಟಾಕನ್ನು ಎತ್ತಿ  ಕುಲುಕಿದನು .  "ಸುಳ್ಳು ಹೇಳುತ್ತಿರುವೆಯಾ ? ಇದು ಅಮೃತದಂತಿದೆ  !" ಎಂದನು .


 ಮುದುಕಿಗೆ ಬಹಳ ಕುತೂಹಲವುಂಟಾಯಿತು. " ಇದೇನು? ಚಟಾಕಿನೊಂದಿಗೆ  ಮಾತನಾಡುತ್ತಿರುವೆ?" ಎಂದಳು. ''ಇದು ಸಾಮಾನ್ಯವಾದ ಚಟಾಕಲ್ಲ ಅಜ್ಜಿ ! ಇದೊಂದು ಸತ್ಯ ಸೂಚಿ! ನನ್ನ ಮಂತ್ರವಾದಿಮಾವ ಇದನ್ನು ನನಗೆ ಕೊಟ್ಟನು . ಇದು  ಎಲ್ಲವನ್ನೂ ನೋಡ ಬಲ್ಲದ್ದು. ಸತ್ಯವನ್ನೇ ನುಡಿಯ ಬಲ್ಲದ್ದು. ಆದರೆ  ಏಕೋ ಏನೋ ನೆನ್ನೆಯಿಂದ ಹೊಲಸು ಹೊಲಸಾಗಿ ಮಾತನಾಡುತ್ತಿದೆ. "
" ಸತ್ಯ ಸೂಚಿಯೇ? ಇದೆಂತ ಮಾಯ!ಅದ್ಸರಿ! ಈಗ ಅದು ಏನು ಹೇಳಿತು ? 'ಸುಳ್ಳು ಹೇಳಿದೇ' ಎಂದು ಅದನ್ನ ಏಕೆ ಬೈಯುತ್ತಿರುವೆ?"

" ಅದಕ್ಕೆ ವಯಸ್ಸಾಗಿ  ಅರಳು ಮರಳಾಗಿ ಬಿಟ್ಟಿದೆ ಅನ್ನಿಸುತ್ತದೆ . ಅದಕ್ಕೆ, ಏನೋ ಅರ್ಥವಿಲ್ಲದ ಮಾತನ್ನಾಡುತ್ತಿದೆ  . ಇದೀಗ ನೀನು ಕೊಟ್ಟ ಅಮೃತದಂತ ಮಜ್ಜಿಗೆಯನ್ನು ನಾನು  ಕುಡಿಯುತ್ತಿದ್ದರೆ , ಅದರಲ್ಲಿ ಹಳೆಯ ಹೊಲಸು ಮೊಸರು ಮತ್ತು  ಕೊಳಕು ನೀರು  ಇರುವುದಾಗಿ  ಹೇಳುತ್ತಿದೆ ! ನಿನ್ನನ್ನು ಜಿಪುಣಿ ಎನ್ನುತ್ತಿದೆ . ನಿನ್ನ ಬಗ್ಗೆ ಹೀಗೆ ಹೇಳಲು ಅದಕ್ಕೆ ಎಷ್ಟು ಧೈರ್ಯ !"
ಮುದುಕಿ ಅವಾಕ್ಕಾದಳು. ಚಟಾಕು ಈ ಹುಡುಗನಿಗೆ ನಿಜವನ್ನೇ ನುಡಿದಿದೆ !  'ಅದೀಗ ನನ್ನದ್ದಾಗಲೇ ಬೇಕು !' ಎಂದುಕೊಂಡಳು ಮುದುಕಿ .
" ಮಗು , ನಿನಗೆ ಚಟಾಕಿನ ಮೇಲೆ ಭಾರಿ ಕೊಪವಿರುವ ಹಾಗಿದೆ  . ಅದನ್ನು ನನಗೆ ಕೊಟ್ಟುಬಿಡುವೆಯಾ ?"


"ನನಗಿರುವುದು ಇದೊಂದೇ ಆಸ್ತಿ . ಆದರೆ ಇದನ್ನು  ಸಂತೋಷದಿಂದ ನಿನಗೆ ಕೊಡುವೆ . ಪ್ರತಿಯಾಗಿ ನನಗೇನು ಕೊಡುವೆ ?''
ಮುದುಕಿ ತನ್ನ ಸೊಂಟದಲ್ಲಿ ಸಿಕ್ಕಿಸಿದ್ದ ಕಾಸಿನ ಚೀಲ ತೆಗೆದಳು .
" ಇಂದಿನ ನನ್ನ ಸಂತೆಯ ಸಂಪಾದನೆ ಎಲ್ಲ ಇದರಲ್ಲಿದೆ.  ಇದನ್ನು ತೆಗೆದುಕೊ . ಸತ್ಯ ಸೂಚಿಯನ್ನು ನನಗೆ ಕೊಡು . "
ಹುಣಸೇಹುಳಿ  ಕಾಸಿನ ಚೀಲವನ್ನು ತೆಗೆದುಕೊಂಡು ಚಟಾಕನ್ನು ಮುದುಕಿಗೆ ಕೊಟ್ಟನು .  ನಂತರ ತನ್ನ ಬಟ್ಟೆ ಮೂಟೆಯನ್ನು ತೆಗೆದುಕೊಂಡು ಹೊರಟು ಹೋದನು .
ನಂತರ ಮುದುಕಿ ಚಟಾಕನ್ನು ಒಳಗೆ ತೆಗೆದು ಕೊಂಡು  ಹೋಗಿ ಅದರೊಳಗೆ ಪಿಸುಗುಟ್ಟಿದಳು .
" ಸತ್ಯ ಸೂಚಿಯೆ , ಬೇಗನೆ ಹೇಳು ! ಪಕ್ಕದ ಅಂಗಡಿಯವನ ಬಳಿ ಎಷ್ಟು ಹಣವಿದೆ? ಅದನ್ನು ಅವನು ಎಲ್ಲಿ ಇಟ್ಟಿರುವನು  ?" ಪಕ್ಕದ ಅಂಗಡಿಯ ಉಪ್ಪಿನ ವ್ಯಾಪಾರಿಯ ಸಂಪಾದನೆಯನ್ನೆಲ್ಲ ದೋಚಿಕೊಳ್ಳುವ ದುರಾಸೆ ಮುದುಕಿಗೆ !
ಚಟಾಕು ಮೌನವಾಗಿತ್ತು .
ಮುದುಕಿ ಅದನ್ನು  ಕಾಡಿದಳು, ಬೇಡಿದಳು , ಕುಲುಕಿದಳು. ಕಿವಿಯ ಸಮೀಪವಿಟ್ಟುಕೊಂಡು  ಗಮನದಿಂದ ಆಲಿಸಿದಳು  . ಆದರೂ ಸದ್ದೇ ಇಲ್ಲ !
" ಅಯ್ಯೋ ಮೋಸ ಹೋದೆ !ಇದು ಸತ್ಯ ಸೂಚಿಯೂ  ಅಲ್ಲ ಏನಿಲ್ಲ , ಬರಿ ಚಟಾಕು!" ಎಂದು ಎದೆಬಡಿದು ಕೊಂಡು  ಅರಚಾಡಿದಳು . ಅವಳ ದುರಾಸೆಗೆ ತಕ್ಕ ಶಾಸ್ತಿಯಾಯಿತು !


ಹುಣಸೇಹುಳಿ ಊರೊಳಗೆ ಹೋಗಿ  ಎರಡು ಕಾಸು ಕೊಟ್ಟು   ಹೊಟ್ಟೆ ತುಂಬ ಉಂಡನು . ನಂತರ ಅರಳಿ ಕಟ್ಟೆಯ ಮೇಲೆ ವಿಶ್ರಮಿಸುತ್ತಿದ್ದನು . ಬಡಕಲಾದ ಒಂದು ಒಣಕಲು ಮೇಕೆಯನ್ನು ಎಳೆದುಕೊಂಡು ಸಂತೆಯಿಂದ ಹಿಂದಿರುಗುತ್ತಿದ್ದ ಓರ್ವ ವ್ಯಕ್ತಿಯನ್ನು ಕಂಡನು .
" ಇದೇನಣ್ಣಾ ! ಸಂತೆಯಿಂದ ಇದನ್ನೇ ಕೊಂಡುಕೊಂಡೆಯಾ ?''ಎಂದು ಪ್ರಶ್ನಿಸಿದ ಹುಣಸೇಹುಳಿ .
" ಛೆ ಛೆ ! ಹಾಗೇನಿಲ್ಲ  ! ನಾನು ಹತ್ತು ಮೇಕೆಗಳನ್ನು ಸಂತೆಯಲ್ಲಿ ಮಾರಲು ಕೊಂಡೊಯ್ದಿದ್ದೆ . ಒಂಬತ್ತು ಮೇಕೆಗಳನ್ನ ಒಳ್ಳೆ ಬೆಲೆಗೆ ಮಾರಿದೆ . ಇದನ್ನು ಮಾತ್ರ ಕೊಳ್ಳುವವರಿಲ್ಲ ."
" ನಾನು ಇದನ್ನು ಕೊಂಡುಕೊಳ್ಳುತ್ತೇನೆ . ಇಗೋ ತೆಗೆದುಕೋ ಹತ್ತು ಕಾಸುಗಳನ್ನ." ಎಂದ ಹುಣಸೇಹುಳಿ .
" ಈ ನಾಲಾಯಕ್ ಮೇಕೆಗಾಗಿ ಏಕೆ  ನಿನ್ನ ಕಾಸು ಹಾಳು  ಮಾಡಿಕೊಳ್ಳುವೆ  ?"
" ಅದರ ಮುಖ ನನಗೆ ತುಂಬಾ ಮೆಚ್ಚುಗೆಯಾಯಿತು . ಅದಕ್ಕೇ ."
ಹುಡುಗ ಎಲ್ಲೋ ಸ್ವಲ್ಪ ಹುಚ್ಚನಿರ ಬೇಕು ಎಂದುಕೊಂಡರೂ , ಸಂತೋಷದಿಂದ ತನ್ನ ಮೇಕೆಯನ್ನು ಅವನಿಗೆ ಮಾರಿ ಹೋದ ಆ ವ್ಯಕ್ತಿ .
ಹುಣಸೇಹುಳಿ ಹೆಮ್ಮೆಯಿಂದ ಮೇಕೆಯನ್ನು ಕರೆದುಕೊಂಡು ಅಲ್ಲಿಂದ ಹೊರಟನು .


ಶ್ರೀಮಂತರು ವಾಸವಾಗಿದ್ದ   ಪೇಟೆಯನ್ನು ತಲುಪಿದ ಹುಣಸೇಹುಳಿ ಮೇಕೆಯನ್ನು ಒಂದು ಕಡೆ  ಕೂರಿಸಿದನು  . ತಂಗಾಳಿಯನ್ನು ಅನುಭವಿಸುತ್ತ ಅಡ್ಡಾಡುತ್ತಿದ್ದರು ಜನರು .
ಹುಣಸೇಹುಳಿ ಮಲಗಿದ್ದ  ಮೇಕೆಯ ಹಿಂಬಾಗದಲ್ಲಿ ಮೂರು ಕಾಸುಗಳನ್ನು ಮೆಲ್ಲನೆ ಇರಿಸಿದನು  . ನಂತರ ಮೇಕೆಯನ್ನು ಕುರಿತು ಗಟ್ಟಿಯಾಗಿ ಕೋಪದಿಂದ ಕೂಗಾಡಿ , ಅದನ್ನು ಕಡ್ಡಿಯಿಂದ ಹೊಡೆಯುವವನಂತೆ  ನಟಿಸಿದನು .
ಜನರೆಲ್ಲಾ  ಗಾಬರಿಗೊಂಡು ಏನೋ ಎಂತೋ ಎಂದು ಸುತ್ತಲೂ ಕೂಡಿದರು .   ಶ್ರೀಮಂತನಾದ ಬಟ್ಟೆ ವ್ಯಾಪಾರಿ ಓರ್ವ , " ಏ ದುಷ್ಟ ! ಏನೋ ನಿನ್ನ ಸಮಸ್ಯೆ ?ಯಾಕೋ ಆ ಪಾಪದ ಮೇಕೆಯನ್ನು ಹೊಡೆಯುತ್ತಿರುವೆ ?" ಎಂದು ಹುಣಸೇಹುಳಿಯ ಕೈಯಿಂದ ಕಡ್ಡಿಯನ್ನು ಕಸಿದುಕೊಂಡು  ಗದರಿಸಿದನು .
" ಈ ಮೊಂಡು ಮೇಕೆಯೇ ನನ್ನ ಸಮಸ್ಯೆ !" ಎಂದು ಕೋಪದಿಂದ ಕೂಗಿದ ಹುಣಸೇಹುಳಿ . " ಈ ಧಾನ್ಯಗಳನ್ನ ತಿನ್ನದೇ ಹಠ ಮಾಡುತ್ತಿದೆ ." ಎನ್ನುತ್ತ ತನ್ನ ಕಯ್ಯಲ್ಲಿದ್ದ ಸಣ್ಣ ಕಪ್ಪು ಬಣ್ಣದ  ಧಾನ್ಯಗಳನ್ನು ತೋರಿಸಿದನು .
" ಥೂ ! ಕೊಳೆತು ಹೋದ ಹಾಗಿದೆ ! ಪಾಪ !ಅದನ್ನು ಹೇಗೆ ತಿನ್ನುತ್ತದೆ ಈ ಮೇಕೆ? ಹುಚ್ಚು ಹುಡುಗ !"
" ನನ್ನ ಬಳಿ ಇರುವುದು ಇಷ್ಟೇ . ನನ್ನ ಕಾಸೆಲ್ಲ  ಕಳವಾಗಿದೆ . ಇದಕ್ಕೆ ಬೇಕಾದ ರುಚಿ ರುಚಿಯಾದ ಪದಾರ್ಥಗಳನ್ನು ಕೊಡಿಸಲು  ನನ್ನಿಂದ ಸಾಧ್ಯವಿಲ್ಲ .  ನೋಡಿ ಸರಿಯಾಗಿ ತಿನ್ನದೇ ಎಷ್ಟು ಸಣಕಲಾಗಿ ಹೋಗಿದೆ . ಇದೇ  ಕಾರಣದಿಂದ ಕಾಸು ಹಾಕುವುದನ್ನೂ ನಿಲ್ಲಿಸಿಬಿಟ್ಟಿದೆ .''
" ಏನು ? ಕಾಸು ಹಾಕುತ್ತದೆಯೇ ?" ಎನ್ನುತ್ತಾ ಎಲ್ಲರೂ ಆಶ್ಚರ್ಯದಿಂದ ಮೇಕೆಯನ್ನು ದಿಟ್ಟಿಸಿ  ನೋಡಿದರು . ಮೇಕೆಯ ಹಿಂಬಾಗದಲ್ಲಿ ಮೂರು  ಕಾಸುಗಳು ಬಿದ್ದಿರುವುದನ್ನೂ ಕಂಡರು . " ಹಾ ! ನೋಡಿ ! ನೋಡಿ !ಬೆಳ್ಳಿ ಕಾಸುಗಳು !"
ಹುಣಸೇಹುಳಿ ಮೇಕೆಯ ಬಾಲವನ್ನೆತ್ತಿ ಹಿಡಿದು  ಮತ್ತೊಂದು ಕಾಸನ್ನು ತೆಗೆದು ತೋರಿಸಿದನು  . " ಹಮ್ !   ಬರಿ ನಾಲ್ಕು ಕಾಸುಗಳು ! ಅದೂ ಬರಿ ಬೆಳ್ಳಿ ಕಾಸುಗಳು ! " ಎಂದು ದುಃಖದಿಂದ  ನುಡಿದನು . " ಹಣ್ಣು ಹಂಪಲು, ಜೇನು , ಮೊಸರು, ಬಾದಾಮಿ   ಮುಂತಾದ ಪೌಷ್ಟಿಕ ಆಹಾರಗಳನ್ನ  ಸೇವಿಸುತ್ತಿದ್ದಾಗ ಚಿನ್ನದ ನಾಣ್ಯಗಳನ್ನೇ  ಹಾಕುತ್ತಿತ್ತು. ಬೆಳಿಗ್ಗೆ ಹತ್ತು , ಸಂಜೆ ಹತ್ತು ಚಿನ್ನದ ನಾಣ್ಯಗಳು !"