Friday, July 4, 2014

Kilaadi Huduga Hunasehuli / ಕಿಲಾಡಿ ಹುಡುಗ ಹುಣಸೇಹುಳಿ

ಕಿಲಾಡಿ ಹುಡುಗ ಹುಣಸೇಹುಳಿ
"ನಿಮ್ ಫುಟ್ ಬಾಲ್ ಪ್ರಾಕ್ಟಿಸ್ ಎಲ್ಲ  ಎಷ್ಟರಮಟ್ಟಿಗಿದೆ ಪುಟ್ಟಣ್ಣ  ?" 
ಅಭ್ಯಾಸ ಮುಗಿಸಿ ಆಗತಾನೆ ಮೈದಾನದಿಂದ ಹಿಂದಿರುಗಿದ್ದ   ಪುಟ್ಟಣ್ಣ  ಉಸ್ಸೆಂದು ತಾತನ ಬಳಿ ಕುಳಿತ . 
"ಸಕ್ಕತ್ತಾಗಿತ್ತು ತಾತ ! ಆದ್ರೆ ಪಾಪ, ಅಕ್ಕಿಮೂಟೆ ಮಾತ್ರ ಇನ್ನೂ ಸ್ವಲ್ಪ ವೇಗ್ವಾಗಿ  ಓಡಿದ್ರೆ ಚೆನ್ನಾಗಿರ್ತಿತ್ತು . "
"ಅಕ್ಕಿಮೂಟೆ ಅಂತೆಲ್ಲ ಹೆಸರಿಡ್ತಾರೆಯೇ  ?" ಎಂದಳು ಪುಟ್ಟಿ . 
"ಅವ್ನು  ದಪ್ಪಾಂತ ಎಲ್ರೂ ಹಾಗೆ ಕರೀತಾರೆ ! " 
"ಹುಣಸೇಹುಳಿ ಅಂತ್ಲೂ ಕೂಡ ಹೆಸರಿಡ್ತಾರೆ  ! ಬೇಕಾದ್ರೆ ನಿಮ್ಮಜ್ಜೀನ ಕೇಳು !" ಎಂದರು  ತಾತ . 
"ಹುಣಸೇಹುಳಿ ? ಅಂದ್ರೆ ಕಥೆ ! ಹೇ ! ಹೇಳಜ್ಜಿ !" ಪುಟ್ಟಿ ಪುಟ್ಟಣ್ಣ ಇಬ್ಬರೂ ಒಟ್ಟಿಗೆ ಕೂಗಿದರು .
"ಒಳ್ಳೆ ಕಲಹ ಮಾಡ್ತೀರಲ್ಲ ಮಾರಾಯ ನೀವು !" ಎಂದು ಹುಸಿ ಮುನಿಸಿನಿಂದ ತಾತನನ್ನು ರೇಗಿದಳು ಅಜ್ಜಿ . 
"ನಾಳೆ ಹೇಗೂ ಭಾನುವಾರ ! ಇವತು ಪಾಠ ಇಲ್ಲ ಏನಿಲ್ಲ .  ಕಥೆ ಹೇಳಜ್ಜಿ ."
"ಮೊದ್ಲು ಎಲ್ರೂ ಕೈಕಾಲ್ ತೊಳ್ಕೊಂಡು ತಿಂಡಿ ತಿನ್ನಿ . ಆಮೇಲೆ ಕಥೆ." ಬಿಸಿ ಬಿಸಿ ತಿಂಡಿ ತಟ್ಟೆಗೆ ಹಾಕುತ್ತ ಹೇಳಿದಳು  ಅಜ್ಜಿ . 
ತಿಂಡಿಯ ಜೊತೆಗೆ ಕಥೆಯೂ ಶುರುವಾಯಿತು . 


ಒಂದಾನೊಂದು ಕಾಲದಲ್ಲಿ ಬಲು ಚತುರನಾದ ಹುಡುಗನೊಬ್ಬನಿದ್ದನು . ಅವನು ಕಡು ಬಡವನಾಗಿಯೂ ಇದ್ದನು .
ಆತನ ಬಡ ತಾಯಿ ಹೊಟ್ಟೆ ಪಾಡಿಗಾಗಿ , ಕಾಡಿಗೆ ಹೋಗಿ ಕಟ್ಟಿಗೆ ಮತ್ತು ಹುಣಸೆ ಹಣ್ಣುಗಳನ್ನು ಸಂಗ್ರಹಿಸಿ ತಂದು , ಅವನ್ನು ಹಳ್ಳಿಯವರಿಗೆ ಮಾರುತ್ತಿದ್ದಳು .
ಹಳ್ಳಿಯ ಜನರೆಲ್ಲ ಹುಡುಗನನ್ನು 'ಹುಣಸೇಹುಳಿ , ಹುಣಸಸೇಹುಳಿ ' ಎಂದೇ ಕರೆಯುತ್ತಿದ್ದರು .


ಒಮ್ಮೆ ಹುಣಸೇಹುಳಿ  ಅವನ ತಾಯನ್ನು ಕುರಿತು ಹೇಳಿದ : "ಅಮ್ಮ ! ನಾನು ಸಾಕಷ್ಟು ದೊಡ್ಡವನಾಗಿದ್ದೇನೆ . ಹೊರ ಪ್ರಪಂಚವನ್ನ  ನೋಡಿಕೊಂಡು ಹಾಗೆಯೇ   ನನ್ನ ಅದೃಷ್ಟವನ್ನೂ  ರೂಪಿಸಿಕೊಂಡು ಬರಲು  ಬಯಸುತ್ತೇನೆ ."
"ಹೌದು ಮಗನೆ ! ನೀನು ಸಾಕಷ್ಟು ದೊಡ್ಡವನಾಗಿದ್ದೀಯ . ನೀನು  ಯಾವ ಕಸುಬನ್ನು ಮಾಡ ಬಲ್ಲೆ ? ನಿನ್ನನ್ನು ಶಾಲೆಗೆ ಕಳಿಸಲೂ ನನ್ನಿಂದ  ಸಾಧ್ಯವಾಗಲಿಲ್ಲವೇ !"
"ಶಂಕಿಸ  ಬೇಡ ಅಮ್ಮ . ನಾನು ಕ್ಷೇಮವಾಗಿಯೇ ಇರುತ್ತೇನೆ . ನನಗೆ ಎರಡೇ ಎರಡು ಕಾಸನ್ನು ಮಾತ್ರ  ಕೊಡು . ನಾನು ಹೊರಡುತ್ತೇನೆ ."
"ನನ್ನ ಬಳಿ ಕಾಸಿಲ್ಲ ಮಗು . ಮೌಲ್ಯವುಳ್ಳ ಇನ್ಯಾವ ವಸ್ತುವೂ ಕೂಡ ಇಲ್ಲ.ಇಗೋ ! ಈ ಚಟಾಕು ಮಾತ್ರ ಉಳಿದಿದೆ . " ಎನ್ನುತ್ತ ಚಟಾಕನ್ನು ತೋರಿಸಿದಳು .
"ಸರಿ ! ಆ ಚಟಾಕನ್ನೇ  ಕೊಡು . ಉಪಯೋಗಕ್ಕೆ ಬಂದೀತು ." ಎಂದ ಹುಣಸೇಹುಳಿ ಚಟಾಕನ್ನು ತನ್ನ ಒಂದು ಜೊತೆ ಉಡುಗೆಯ ಜೊತೆ ಸುರುಳಿ ಸುತ್ತಿಕೊಂಡು ಹೊರಟೇ ಬಿಟ್ಟನು .


ಹುಣಸೇಹುಳಿ ಸಮೀಪದ ಊರನ್ನು ಕುರಿತು ನಡೆದುಕೊಂಡು  ಹೋಗಿ  , ಊರ ಎಲ್ಲೆಯಲ್ಲಿ ನಡೆಯಿತ್ತಿದ್ದ ಸಂತೆಯನ್ನು  ಸೇರಿದನು . ಅನೇಕ ವ್ಯಾಪಾರಿಗಳು ತಮ್ಮ ತಮ್ಮ  ಅಂಗಡಿಗಳನ್ನು ಹರಡಿದ್ದರು. ಸುತ್ತಮುತ್ತಲಿನ ಊರ ಜನರೆಲ್ಲ ತಮಗೆ ಬೇಕಾದ ಪದಾರ್ಥಗಳನ್ನು ಕೊಂಡುಕೊಳ್ಳಲು ಗಿಜಿ ಗಿಜಿ ಕೂಡಿದ್ದರು  .
ತಾಳೆ ಮರದ ತಟ್ಟಿಯ ನೆರಳಿನಲ್ಲಿ  ಮಜ್ಜಿಗೆ ಮಾರುತ್ತಿದ್ದ ಒಬ್ಬಳು ಮುದುಕಿಯನ್ನು  ಕಂಡನು ಹುಣಸೇಹುಳಿ . ಬಾಯಾರಿಕೆಯಿಂದ ಬಳಲಿದ್ದವ ಅವಳ ಬಳಿ ಹೋಗಿ  ಬೇಡಿದನು. "ಆದರಣೀಯ ಅಜ್ಜಿಯೇ , ನನಗೊಂದು ಕುಡಿಕೆ ಮಜ್ಜಿಗೆ ಕೊಡುವೆಯಾ? ತುಂಬಾ ಬಾಯಾರಿಕೆಯಾಗಿದೆ , ಆದರೆ ನನ್ನ ಬಳಿ ಕಾಸಿಲ್ಲ."
ಮುದುಕಿ ಅವನನ್ನೊಮ್ಮೆ ಮೇಲಿಂದ ಕೆಳಗೆ ದಿಟ್ಟಿಸಿ ನೋಡಿದಳು . ನಂತರ ಹೇಳಿದಳು " ಸರಿ ! ಇಲ್ಲೇ ಕಾದಿರು . ಒಳಗೆ ಮಡಿಕೆಯಲ್ಲಿ ತಣ್ಣಗಿರುವ ಹೊಸ ಮಜ್ಜಿಗೆಯನ್ನು  ತಂದು ಕೊಡುವೆ . "


ಒಳಗೆ ಹೋದ ಮುದುಕಿ ಒಂದು ಸೌಟು ಹುಳಿ  ಮೊಸರನ್ನು ಒಂದು ಕುಡಿಕೆಗೆ ಹಾಕಿದಳು . ಕೊಳಕು ಪಾತ್ರೆಯಲ್ಲಿದ್ದ  ನೀರನ್ನು ಧಾರಾಳವಾಗಿ ಅದರಲ್ಲಿ ಮಿಶ್ರ ಮಾಡಿ ಕುಡಿಕೆಯನ್ನು ತುಂಬಿಸಿದಳು . ಜಿಪುಣಿಯಾದ ಮುದುಕಿಕೆ ತನ್ನ ಶ್ರೇಷ್ಠವಾದ  ಮಜ್ಜಿಗೆಯನ್ನು ಬಿಟ್ಟಿ ಕೊಡಲು ಇಷ್ಟವಿರಲಿಲ್ಲ .
ಇದನ್ನೆಲ್ಲಾ ತಟ್ಟಿಯ ಕಿಂಡಿಯ ಮೂಲಕ ನೋಡುತ್ತಿದ್ದನಾದರೂ ಹುಣಸೇಹುಳಿ ಏನೂ ಮಾತನಾಡಲಿಲ್ಲ  .
ಮುದುಕಿ ಮಜ್ಜಿಗೆಯ ಕುಡಿಕೆಯನ್ನು ತಂದು ಕೊಟ್ಟಾಗ " ಧನ್ಯವಾದಗಳು ಅಜ್ಜಿ . ಒಳ್ಳೆಯ ಮನಸ್ಸು ನಿನ್ನದು ."ಎಂದನು ! ನಂತರ ತನ್ನ ಮೂಟೆ ಬಿಚ್ಚಿ ಚಟಾಕನ್ನು ಹೊರ ತೆಗೆದು ಅದನ್ನು ತನ್ನ ಕಿವಿಯಲ್ಲಿಟ್ಟುಕೊಂಡನು .
" ಅದೇನು ಮಾಡುತ್ತಿರುವೆ ?" ಎಂದು ಆಶ್ಚರ್ಯದಿಂದ ಪ್ರಶ್ನಿಸಿದಳು ಮುದುಕಿ .
" ಶ್!!! " ಮುದುಕಿಯನ್ನು ಸುಮ್ಮನಿರಲು ಹೇಳಿ  ಚಟಾಕನ್ನು ಕುರಿತು  ಮಾತನಾಡಿದನು . " ಛೆ ಛೆ ! ನೀನು ತಪ್ಪು ತಿಳಿದಿರುವೆ."
ನಂತರ ಚಟಾಕನ್ನು ಬದಿಗಿಟ್ಟು ಆನಂದದಿಂದ ಬರಿ ನೀರಾಗಿದ್ದ  ಹುಳಿ ಮಜ್ಜಿಗೆಯನ್ನು ಸವಿದನು .
ಕೋಪಗೊಂಡವನಂತೆ ಮುಖ ಸಿಂಡರಿಸಿಕೊಂಡು ಚಟಾಕನ್ನು ಎತ್ತಿ  ಕುಲುಕಿದನು .  "ಸುಳ್ಳು ಹೇಳುತ್ತಿರುವೆಯಾ ? ಇದು ಅಮೃತದಂತಿದೆ  !" ಎಂದನು .


 ಮುದುಕಿಗೆ ಬಹಳ ಕುತೂಹಲವುಂಟಾಯಿತು. " ಇದೇನು? ಚಟಾಕಿನೊಂದಿಗೆ  ಮಾತನಾಡುತ್ತಿರುವೆ?" ಎಂದಳು. ''ಇದು ಸಾಮಾನ್ಯವಾದ ಚಟಾಕಲ್ಲ ಅಜ್ಜಿ ! ಇದೊಂದು ಸತ್ಯ ಸೂಚಿ! ನನ್ನ ಮಂತ್ರವಾದಿಮಾವ ಇದನ್ನು ನನಗೆ ಕೊಟ್ಟನು . ಇದು  ಎಲ್ಲವನ್ನೂ ನೋಡ ಬಲ್ಲದ್ದು. ಸತ್ಯವನ್ನೇ ನುಡಿಯ ಬಲ್ಲದ್ದು. ಆದರೆ  ಏಕೋ ಏನೋ ನೆನ್ನೆಯಿಂದ ಹೊಲಸು ಹೊಲಸಾಗಿ ಮಾತನಾಡುತ್ತಿದೆ. "
" ಸತ್ಯ ಸೂಚಿಯೇ? ಇದೆಂತ ಮಾಯ!ಅದ್ಸರಿ! ಈಗ ಅದು ಏನು ಹೇಳಿತು ? 'ಸುಳ್ಳು ಹೇಳಿದೇ' ಎಂದು ಅದನ್ನ ಏಕೆ ಬೈಯುತ್ತಿರುವೆ?"

" ಅದಕ್ಕೆ ವಯಸ್ಸಾಗಿ  ಅರಳು ಮರಳಾಗಿ ಬಿಟ್ಟಿದೆ ಅನ್ನಿಸುತ್ತದೆ . ಅದಕ್ಕೆ, ಏನೋ ಅರ್ಥವಿಲ್ಲದ ಮಾತನ್ನಾಡುತ್ತಿದೆ  . ಇದೀಗ ನೀನು ಕೊಟ್ಟ ಅಮೃತದಂತ ಮಜ್ಜಿಗೆಯನ್ನು ನಾನು  ಕುಡಿಯುತ್ತಿದ್ದರೆ , ಅದರಲ್ಲಿ ಹಳೆಯ ಹೊಲಸು ಮೊಸರು ಮತ್ತು  ಕೊಳಕು ನೀರು  ಇರುವುದಾಗಿ  ಹೇಳುತ್ತಿದೆ ! ನಿನ್ನನ್ನು ಜಿಪುಣಿ ಎನ್ನುತ್ತಿದೆ . ನಿನ್ನ ಬಗ್ಗೆ ಹೀಗೆ ಹೇಳಲು ಅದಕ್ಕೆ ಎಷ್ಟು ಧೈರ್ಯ !"
ಮುದುಕಿ ಅವಾಕ್ಕಾದಳು. ಚಟಾಕು ಈ ಹುಡುಗನಿಗೆ ನಿಜವನ್ನೇ ನುಡಿದಿದೆ !  'ಅದೀಗ ನನ್ನದ್ದಾಗಲೇ ಬೇಕು !' ಎಂದುಕೊಂಡಳು ಮುದುಕಿ .
" ಮಗು , ನಿನಗೆ ಚಟಾಕಿನ ಮೇಲೆ ಭಾರಿ ಕೊಪವಿರುವ ಹಾಗಿದೆ  . ಅದನ್ನು ನನಗೆ ಕೊಟ್ಟುಬಿಡುವೆಯಾ ?"


"ನನಗಿರುವುದು ಇದೊಂದೇ ಆಸ್ತಿ . ಆದರೆ ಇದನ್ನು  ಸಂತೋಷದಿಂದ ನಿನಗೆ ಕೊಡುವೆ . ಪ್ರತಿಯಾಗಿ ನನಗೇನು ಕೊಡುವೆ ?''
ಮುದುಕಿ ತನ್ನ ಸೊಂಟದಲ್ಲಿ ಸಿಕ್ಕಿಸಿದ್ದ ಕಾಸಿನ ಚೀಲ ತೆಗೆದಳು .
" ಇಂದಿನ ನನ್ನ ಸಂತೆಯ ಸಂಪಾದನೆ ಎಲ್ಲ ಇದರಲ್ಲಿದೆ.  ಇದನ್ನು ತೆಗೆದುಕೊ . ಸತ್ಯ ಸೂಚಿಯನ್ನು ನನಗೆ ಕೊಡು . "
ಹುಣಸೇಹುಳಿ  ಕಾಸಿನ ಚೀಲವನ್ನು ತೆಗೆದುಕೊಂಡು ಚಟಾಕನ್ನು ಮುದುಕಿಗೆ ಕೊಟ್ಟನು .  ನಂತರ ತನ್ನ ಬಟ್ಟೆ ಮೂಟೆಯನ್ನು ತೆಗೆದುಕೊಂಡು ಹೊರಟು ಹೋದನು .
ನಂತರ ಮುದುಕಿ ಚಟಾಕನ್ನು ಒಳಗೆ ತೆಗೆದು ಕೊಂಡು  ಹೋಗಿ ಅದರೊಳಗೆ ಪಿಸುಗುಟ್ಟಿದಳು .
" ಸತ್ಯ ಸೂಚಿಯೆ , ಬೇಗನೆ ಹೇಳು ! ಪಕ್ಕದ ಅಂಗಡಿಯವನ ಬಳಿ ಎಷ್ಟು ಹಣವಿದೆ? ಅದನ್ನು ಅವನು ಎಲ್ಲಿ ಇಟ್ಟಿರುವನು  ?" ಪಕ್ಕದ ಅಂಗಡಿಯ ಉಪ್ಪಿನ ವ್ಯಾಪಾರಿಯ ಸಂಪಾದನೆಯನ್ನೆಲ್ಲ ದೋಚಿಕೊಳ್ಳುವ ದುರಾಸೆ ಮುದುಕಿಗೆ !
ಚಟಾಕು ಮೌನವಾಗಿತ್ತು .
ಮುದುಕಿ ಅದನ್ನು  ಕಾಡಿದಳು, ಬೇಡಿದಳು , ಕುಲುಕಿದಳು. ಕಿವಿಯ ಸಮೀಪವಿಟ್ಟುಕೊಂಡು  ಗಮನದಿಂದ ಆಲಿಸಿದಳು  . ಆದರೂ ಸದ್ದೇ ಇಲ್ಲ !
" ಅಯ್ಯೋ ಮೋಸ ಹೋದೆ !ಇದು ಸತ್ಯ ಸೂಚಿಯೂ  ಅಲ್ಲ ಏನಿಲ್ಲ , ಬರಿ ಚಟಾಕು!" ಎಂದು ಎದೆಬಡಿದು ಕೊಂಡು  ಅರಚಾಡಿದಳು . ಅವಳ ದುರಾಸೆಗೆ ತಕ್ಕ ಶಾಸ್ತಿಯಾಯಿತು !


ಹುಣಸೇಹುಳಿ ಊರೊಳಗೆ ಹೋಗಿ  ಎರಡು ಕಾಸು ಕೊಟ್ಟು   ಹೊಟ್ಟೆ ತುಂಬ ಉಂಡನು . ನಂತರ ಅರಳಿ ಕಟ್ಟೆಯ ಮೇಲೆ ವಿಶ್ರಮಿಸುತ್ತಿದ್ದನು . ಬಡಕಲಾದ ಒಂದು ಒಣಕಲು ಮೇಕೆಯನ್ನು ಎಳೆದುಕೊಂಡು ಸಂತೆಯಿಂದ ಹಿಂದಿರುಗುತ್ತಿದ್ದ ಓರ್ವ ವ್ಯಕ್ತಿಯನ್ನು ಕಂಡನು .
" ಇದೇನಣ್ಣಾ ! ಸಂತೆಯಿಂದ ಇದನ್ನೇ ಕೊಂಡುಕೊಂಡೆಯಾ ?''ಎಂದು ಪ್ರಶ್ನಿಸಿದ ಹುಣಸೇಹುಳಿ .
" ಛೆ ಛೆ ! ಹಾಗೇನಿಲ್ಲ  ! ನಾನು ಹತ್ತು ಮೇಕೆಗಳನ್ನು ಸಂತೆಯಲ್ಲಿ ಮಾರಲು ಕೊಂಡೊಯ್ದಿದ್ದೆ . ಒಂಬತ್ತು ಮೇಕೆಗಳನ್ನ ಒಳ್ಳೆ ಬೆಲೆಗೆ ಮಾರಿದೆ . ಇದನ್ನು ಮಾತ್ರ ಕೊಳ್ಳುವವರಿಲ್ಲ ."
" ನಾನು ಇದನ್ನು ಕೊಂಡುಕೊಳ್ಳುತ್ತೇನೆ . ಇಗೋ ತೆಗೆದುಕೋ ಹತ್ತು ಕಾಸುಗಳನ್ನ." ಎಂದ ಹುಣಸೇಹುಳಿ .
" ಈ ನಾಲಾಯಕ್ ಮೇಕೆಗಾಗಿ ಏಕೆ  ನಿನ್ನ ಕಾಸು ಹಾಳು  ಮಾಡಿಕೊಳ್ಳುವೆ  ?"
" ಅದರ ಮುಖ ನನಗೆ ತುಂಬಾ ಮೆಚ್ಚುಗೆಯಾಯಿತು . ಅದಕ್ಕೇ ."
ಹುಡುಗ ಎಲ್ಲೋ ಸ್ವಲ್ಪ ಹುಚ್ಚನಿರ ಬೇಕು ಎಂದುಕೊಂಡರೂ , ಸಂತೋಷದಿಂದ ತನ್ನ ಮೇಕೆಯನ್ನು ಅವನಿಗೆ ಮಾರಿ ಹೋದ ಆ ವ್ಯಕ್ತಿ .
ಹುಣಸೇಹುಳಿ ಹೆಮ್ಮೆಯಿಂದ ಮೇಕೆಯನ್ನು ಕರೆದುಕೊಂಡು ಅಲ್ಲಿಂದ ಹೊರಟನು .


ಶ್ರೀಮಂತರು ವಾಸವಾಗಿದ್ದ   ಪೇಟೆಯನ್ನು ತಲುಪಿದ ಹುಣಸೇಹುಳಿ ಮೇಕೆಯನ್ನು ಒಂದು ಕಡೆ  ಕೂರಿಸಿದನು  . ತಂಗಾಳಿಯನ್ನು ಅನುಭವಿಸುತ್ತ ಅಡ್ಡಾಡುತ್ತಿದ್ದರು ಜನರು .
ಹುಣಸೇಹುಳಿ ಮಲಗಿದ್ದ  ಮೇಕೆಯ ಹಿಂಬಾಗದಲ್ಲಿ ಮೂರು ಕಾಸುಗಳನ್ನು ಮೆಲ್ಲನೆ ಇರಿಸಿದನು  . ನಂತರ ಮೇಕೆಯನ್ನು ಕುರಿತು ಗಟ್ಟಿಯಾಗಿ ಕೋಪದಿಂದ ಕೂಗಾಡಿ , ಅದನ್ನು ಕಡ್ಡಿಯಿಂದ ಹೊಡೆಯುವವನಂತೆ  ನಟಿಸಿದನು .
ಜನರೆಲ್ಲಾ  ಗಾಬರಿಗೊಂಡು ಏನೋ ಎಂತೋ ಎಂದು ಸುತ್ತಲೂ ಕೂಡಿದರು .   ಶ್ರೀಮಂತನಾದ ಬಟ್ಟೆ ವ್ಯಾಪಾರಿ ಓರ್ವ , " ಏ ದುಷ್ಟ ! ಏನೋ ನಿನ್ನ ಸಮಸ್ಯೆ ?ಯಾಕೋ ಆ ಪಾಪದ ಮೇಕೆಯನ್ನು ಹೊಡೆಯುತ್ತಿರುವೆ ?" ಎಂದು ಹುಣಸೇಹುಳಿಯ ಕೈಯಿಂದ ಕಡ್ಡಿಯನ್ನು ಕಸಿದುಕೊಂಡು  ಗದರಿಸಿದನು .
" ಈ ಮೊಂಡು ಮೇಕೆಯೇ ನನ್ನ ಸಮಸ್ಯೆ !" ಎಂದು ಕೋಪದಿಂದ ಕೂಗಿದ ಹುಣಸೇಹುಳಿ . " ಈ ಧಾನ್ಯಗಳನ್ನ ತಿನ್ನದೇ ಹಠ ಮಾಡುತ್ತಿದೆ ." ಎನ್ನುತ್ತ ತನ್ನ ಕಯ್ಯಲ್ಲಿದ್ದ ಸಣ್ಣ ಕಪ್ಪು ಬಣ್ಣದ  ಧಾನ್ಯಗಳನ್ನು ತೋರಿಸಿದನು .
" ಥೂ ! ಕೊಳೆತು ಹೋದ ಹಾಗಿದೆ ! ಪಾಪ !ಅದನ್ನು ಹೇಗೆ ತಿನ್ನುತ್ತದೆ ಈ ಮೇಕೆ? ಹುಚ್ಚು ಹುಡುಗ !"
" ನನ್ನ ಬಳಿ ಇರುವುದು ಇಷ್ಟೇ . ನನ್ನ ಕಾಸೆಲ್ಲ  ಕಳವಾಗಿದೆ . ಇದಕ್ಕೆ ಬೇಕಾದ ರುಚಿ ರುಚಿಯಾದ ಪದಾರ್ಥಗಳನ್ನು ಕೊಡಿಸಲು  ನನ್ನಿಂದ ಸಾಧ್ಯವಿಲ್ಲ .  ನೋಡಿ ಸರಿಯಾಗಿ ತಿನ್ನದೇ ಎಷ್ಟು ಸಣಕಲಾಗಿ ಹೋಗಿದೆ . ಇದೇ  ಕಾರಣದಿಂದ ಕಾಸು ಹಾಕುವುದನ್ನೂ ನಿಲ್ಲಿಸಿಬಿಟ್ಟಿದೆ .''
" ಏನು ? ಕಾಸು ಹಾಕುತ್ತದೆಯೇ ?" ಎನ್ನುತ್ತಾ ಎಲ್ಲರೂ ಆಶ್ಚರ್ಯದಿಂದ ಮೇಕೆಯನ್ನು ದಿಟ್ಟಿಸಿ  ನೋಡಿದರು . ಮೇಕೆಯ ಹಿಂಬಾಗದಲ್ಲಿ ಮೂರು  ಕಾಸುಗಳು ಬಿದ್ದಿರುವುದನ್ನೂ ಕಂಡರು . " ಹಾ ! ನೋಡಿ ! ನೋಡಿ !ಬೆಳ್ಳಿ ಕಾಸುಗಳು !"
ಹುಣಸೇಹುಳಿ ಮೇಕೆಯ ಬಾಲವನ್ನೆತ್ತಿ ಹಿಡಿದು  ಮತ್ತೊಂದು ಕಾಸನ್ನು ತೆಗೆದು ತೋರಿಸಿದನು  . " ಹಮ್ !   ಬರಿ ನಾಲ್ಕು ಕಾಸುಗಳು ! ಅದೂ ಬರಿ ಬೆಳ್ಳಿ ಕಾಸುಗಳು ! " ಎಂದು ದುಃಖದಿಂದ  ನುಡಿದನು . " ಹಣ್ಣು ಹಂಪಲು, ಜೇನು , ಮೊಸರು, ಬಾದಾಮಿ   ಮುಂತಾದ ಪೌಷ್ಟಿಕ ಆಹಾರಗಳನ್ನ  ಸೇವಿಸುತ್ತಿದ್ದಾಗ ಚಿನ್ನದ ನಾಣ್ಯಗಳನ್ನೇ  ಹಾಕುತ್ತಿತ್ತು. ಬೆಳಿಗ್ಗೆ ಹತ್ತು , ಸಂಜೆ ಹತ್ತು ಚಿನ್ನದ ನಾಣ್ಯಗಳು !"


ಬಟ್ಟೆ ವ್ಯಾಪಾರಿಯ ಕಣ್ಣುಗಳು ಆಸೆಯಿಂದ ಅರಳಿದವು. ದಿನಕ್ಕೆ ಇಪ್ಪತ್ತು ಚಿನ್ನದ ನಾಣ್ಯಗಳು! 'ಈ ಮೇಕೆ ನನ್ನದಾಗಲೇ ಬೇಕು !'
ನಂತರ ಹುಣಸೇಹುಳಿಯನ್ನು ಕುರಿತು ಹೀಗೆಂದನು : "ನೀನೋ ಬಡ ಹುಡುಗ . ಮೇಕೆಗೆ ಒಳ್ಳೆಯ ಆಹಾರ ಕೊಡಿಸಲು ನಿನ್ನಿಂದ ಸಾಧ್ಯವಾಗುತ್ತಿಲ್ಲ . ಪಾಪ! ಅದನ್ನು ನೋಡಿದರೆ  ನನಗೆ ಅಯ್ಯೋ ಅನ್ನಿಸುತ್ತದೆ . ನಾನು ಅದಕ್ಕೆ ಪೌಷ್ಟಿಕ ಆಹಾರವನ್ನು ಕೊಟ್ಟು ಚೆನ್ನಾಗಿ ನೋಡಿಕೊಳ್ಳ ಬಲ್ಲೆ . ಅದನ್ನು ನನಗೆ ಕೊಟ್ಟುಬಿಡು ."
" ಆಯಿತು . ಇದನ್ನು ಸಾಕಲು ನನ್ನಿಂದಲೂ  ಆಗುತ್ತಿಲ್ಲ . ಆದರೆ ಇದಕ್ಕೆ ಬದಲಾಗಿ ನನಗೆ ೫೦೦ ಫಣವನ್ನು ನೀವು  ಕೊಡ ಬೇಕು . "
ವ್ಯಾಪಾರಿಯು ಸಂತೋಷದಿಂದ ಒಪ್ಪಿಕೊಂಡು, ಹುಣಸೇಹುಳಿ  ಕೇಳಿದಷ್ಟು ಹಣವನ್ನು ಕೊಟ್ಟನು.  ಹೇಗೂ ಮೇಕೆ ಚಿನ್ನದ ನಾಣ್ಯಗಳನ್ನು ಹಾಕಲು ಪ್ರಾರಂಭಿಸಿದರೆ ಒಂದೇ ತಿಂಗಳಲ್ಲಿ ತಾನು    ಕೋಟೀಶ್ವರ !
ಹುಣಸೇಹುಳಿ  ಮೇಕೆಯನ್ನು ತಬ್ಬಿಕೊಂಡು ವಿದಾಯ ಹೇಳಿದನು .
ಹಣವನ್ನೂ ತನ್ನ ಮೂಟೆಯನ್ನೂ ತೆಗೆದುಕೊಂಡು ಬೆಟ್ಟವನ್ನು ಕುರಿತು ಹೋಗುತ್ತಿದ್ದ ಎತ್ತಿನ ಗಾಡಿ ಹಿಡಿದು ಊರನ್ನು ಬಿಟ್ಟು ಹೊರಟನು .
ಲೋಭಿಯಾದ  ವ್ಯಾಪಾರಿ ಮೇಕೆಯನ್ನು ತನ್ನ ಮನೆಗೆ ಒಯ್ದು ರೇಷ್ಮೆಯ ಹಾಸಿನಲ್ಲಿ ಮಲಗಿಸಿದನು . ಹಾಲು, ಜೇನು , ಬೆಣ್ಣೆ , ಬಾದಾಮಿ ಮತ್ತು ವಿಶಿಷ್ಟವಾದ ಹಣ್ಣುಗಳನ್ನು ತಿನ್ನಿಸಿದನು .
ಮೇಕೆ ಚೆನ್ನಾಗಿ ತಿಂದು ತೇಗಿ ಮಲಗಿತು . ಮುಂಜಾವಿನಲ್ಲೆದ್ದ ವ್ಯಾಪಾರಿ ಕುತೂಹಲದಿಂದ ಮೇಕೆಯ ಹಾಸನ್ನೆಲ್ಲ  ಹುಡುಕಾಡಿದನು  . ನಾಣ್ಯವೂ ಇಲ್ಲ ಚಿನ್ನವೂ ಇಲ್ಲ ! ಹಾಸಿಗೆಯೆಲ್ಲ ಬರಿ ಮೇಕೆಯ ಹಿಕ್ಕೆ !ಮೇಕೆಯೂ ಓಡಿ ಹೋಗಿತ್ತು !


ಹುಣಸೇಹುಳಿ   ಪಯಣ ಮಾಡುತ್ತಿದ್ದ ಎತ್ತಿನ ಗಾಡಿ ಬೆಟ್ಟವನ್ನು ಹಾದು ಹಚ್ಚೆ ಹಸಿರಾದ ಕಾಡು ದಾರಿ ಹಿಡಿದಿತ್ತು .   ಎಲ್ಲೆಲ್ಲೂ ಜಿಂಕೆಗಳು , ಗಿಳಿಗಳು ಮತ್ತು ಕರಿ ಮುಖದ ಕೋತಿಗಳು !
ಹುಣಸೇಹುಳಿ ಒಂದು ಗಿಳಿಯನ್ನು ಹಿಡಿದು , ಗಾಡಿ ಸಾಗುತ್ತಿದ್ದ ಹಾಗೆ ಅದಕ್ಕೆ ಮಾತನಾಡಲು ಕಲಿಸಿದನು . " ಸಂದೇಹವೇನು " ಎಂಬ ಪದವನ್ನು ಅದಕ್ಕೆ ಚೆನ್ನಾಗಿ ಬಾಯಿ ಪಾಠ ಮಾಡಿಸಿದನು .
 ಬೆಟ್ಟದಾಚೆ ಇದ್ದ ರಾಜ್ಯವನ್ನು ತಲುಪುವ ಹೊತ್ತಿಗೆ ಗಿಳಿಗೆ ಆ ಪದ ಮಾತ್ರ ಬಲು ಚೆನ್ನಾಗಿ ಪಾಠವಾಗಿತ್ತು .
ಹುಣಸೇಹುಳಿ ಅಂಗಡಿ ಬೀದಿಯಲ್ಲಿ ನಿಂತು ತನ್ನ ಗಿಳಿಯನ್ನು ಹೆಮ್ಮೆಯಿಂದ ಪ್ರದರ್ಶಿಸಿದ . " ಮಾತಾಡುವ ಗಿಳಿ ! ಮಾಯಾಪುರಿಯ  ಕಾಡಿನಿಂದ ಬಂದ ಮಾತಾಡುವ ಗಿಳಿ ! ಈ  ಸರಿಸಾಟಿ ಇಲ್ಲದ ಗಿಳಿಯನ್ನ ಯಾರು ಕೊಂಡುಕೊಳ್ಳುವಿರಿ  ?"
ಬೆರಗಾದ ಜನರು ಅವನ ಸುತ್ತ ಗುಂಪುಗಟ್ಟಿ ನಿಂತರು .
" ಇದು ನಿಜವಾಗಿಯೂ ಮಾತನಾಡ ಬಲ್ಲದೆ ?" ಎಂದು ಜನ ಪ್ರಶ್ನಿಸಿದರು .
" ನನ್ನನ್ನೇಕೆ ಕೇಳುವಿರಿ ? ಬೇಕಿದ್ದರೆ ಗಿಳಿಯನ್ನೇ ಕೇಳಿ !"ಎಂದ ಹುಣಸೇಹುಳಿ .
ಗಿಳಿಯ ಕಡೆ ತಿರುಗಿದ ಜನ "ಏ  ಗಿಳಿಯೇ ! ನೀನು ನಿಜಕ್ಕೂ ಮಾತನಾಡ ಬಲ್ಲೆಯಾ ?"ಎಂದು ಕೇಳಿದರು  . 
" ಸಂಶಯವೇಕೆ ?" ಎಂದಿತು ಗಿಳಿ .
ಎಲ್ಲರೂ ಬೆಕ್ಕಸಬೆರಗಾದರು! ನಿಜಕ್ಕೂ ಇದು ಮಾತನಾಡ ಬಲ್ಲ ಮಾಯಾಪುರಿಯ ಮಂತ್ರದ ಗಿಳಿಯೇ ಹೌದು !
"ಇದಕ್ಕೆ ಎಷ್ಟು ಬೆಲೆಯನ್ನು ನೀನು ನಿರೀಕ್ಷಿಸುವೆ ?"
" ಮೂರು ಸಾವಿರ ಫಣ !"
"ಇದು ದುಬಾರಿಯಾಯಿತು ! ಅಷ್ಟು ನಗದು ಕೊಡಲು ಯಾರಿಂದಲೂ ಸಾಧ್ಯವಿಲ್ಲ. ಇದನ್ನು ಕೊಳ್ಳುವ ಶಕ್ತಿ ನಮ್ಮ ಸಾಹುಕಾರರಿಗೆ ಮಾತ್ರ ಉಂಟು !"


ಕೂಡಲೇ ಮಾತನಾಡುವ ಗಿಳಿಯ ಸುದ್ದಿ, ರಾಜ್ಯದ ಅತಿ ಶ್ರೀಮಂತನಾದ  ಸಾಹುಕಾರನ ಕಿವಿ ಮುಟ್ಟಿತು . ಕುತೂಹಲದಿಂದ ಗಿಳಿ ಮಾರುವವನಿಗೆ ಕರೆಕಳಿಸಿದನು .
ಹುಣಸೇಹುಳಿ ಗಿಳಿಯೊಂದಿಗೆ ಸಾಹುಕಾರನ  ಅರಮನೆಗೆ ತೆರಳಿದನು .
ಸಾಹುಕಾರನ ಮಡದಿ ಗಿಳಿಗೆ ಹಣ್ಣನ್ನು ತಿನ್ನಿಸಿದಳು . " ಮುದ್ದಿನ  ಗಿಳಿಯೇ ! ನೀನು ನಿಜಕ್ಕೂ ಮಾತನಾಡುವೆಯಾ ?" ಎಂದು ಕೇಳಿದಳು .
" ಸಂಶಯವೇನು ?" ಎಂದಿತು ಗಿಳಿ .
ಸಾಹುಕಾರನಿಗೂ ಆತನ ಮಡದಿಗೂ ಮೈ ಪುಳಕವೇರ್ಪಟ್ಟಿತು.
" ಈ  ಅರಮನೆಯಲ್ಲಿ ನಮ್ಮ ಜೊತೆಯಲ್ಲಿ ವಾಸ ಮಾಡಲು  ಇಷ್ಟವೇ ?" ಎಂದು ಕಾತರದಿಂದ ಪ್ರಶ್ನಿಸಿದಳು ಸಾಹುಕಾರನ ಮಡದಿ .
"ಸಂಶಯವೇನು?" ಎಂದಿತು ಗಿಳಿ.  ಗಿಳಿಯನ್ನು ತನಗಾಗಿ ಕೊಂಡುಕೊಳ್ಳುವಂತೆ ಸಾಹುಕಾರನನ್ನು ಕೇಳಿಕೊಂಡಳು ಆತನ ಮಡದಿ .
" ಇದು ಅದ್ಭುತವಾದ ಗಿಳಿಯೇ ಹೌದು . ಆದರೆ ಇದಕ್ಕೆ ಮೂರು ಸಾವಿರ ಫಣ ಬೆಲೆ   ಬಹಳ ಹೆಚ್ಚಲ್ಲವೇ ?"  ಎಂದ  ಸಾಹುಕಾರ .
" ಬೆಲೆಗೆ ತಕ್ಕ ಗಿಳಿಯೇ ಇದು . " ಎಂದ  ಅವನ ಮಡದಿ , " ಇದು ನನ್ನ ಮುದ್ದಿನ ಗಿಳಿಯಾದರೆ ಮಹಾರಾಣಿಯೂ  ಕೂಡ ನನ್ನ ಕಂಡು  ಅಸೂಯೆಗೊಳ್ಳುತ್ತಾಳೆ . ಇದನ್ನು ನನಗೆ ಕೊಡಿಸಲೇ ಬೇಕು !" ಎಂದು ಹಠ ಮಾಡಿದಳು . 
ಸಾಹುಕಾರ ಹಣವನ್ನು ತೆತ್ತು ಗಿಳಿಯನ್ನು ಕೊಂಡುಕೊಂಡನು .
ಸಾಹುಕಾರನ ಮಡದಿಗೆ ತನ್ನ ಮುದ್ದಿನ ಗಿಳಿಯನ್ನು  ಕಂಡು ಬಹಳ ಆನಂದ ಉಂಟಾಯಿತು . ಅದಕ್ಕಾಗಿ ಬಂಗಾರದ ಪಂಜರವನ್ನೂ ಬಾದಾಮಿ ಬೀಜಗಳನ್ನೂ ಕೂಡ ತರಿಸಿದಳು .


" ಮುದ್ದು ಗಿಳಿಯೇ ! ನಿನ್ನ ಹೊಸ ಮನೆ ನಿನಗೆ  ಮೆಚ್ಚುಗೆಯಾಯಿತೆ  ?"
" ಸಂಶಯವೇನು ?"
" ಹಾಗಾದರೆ ನನಗಾಗಿ ಒಂದು ಹಾಡನ್ನು ಹೇಳು . "
" ಸಂಶಯವೇನು ?"
 ಕೋಪಗೊಂಡ ಸಾಹುಕಾರನ ಮಡದಿ, ಗಿಳಿಯು ತುಂಟಾಟ ಮಾಡುವುದಾಗಿ  ಆತನಲ್ಲಿ   ಪುಕಾರು ಮಾಡಿದಳು .
ಸಾಹುಕಾರನಿಗೆ ಎಲ್ಲ ಅರ್ಥವಾಯಿತು . ತಾನು ಮೋಸ ಹೋದದ್ದೂ ತಿಳಿಯಿತು .
ಹುಣಸೇಹುಳಿಯನ್ನು ಬಡಿದು ಹಾಕಲು ತನ್ನ ಆಳುಗಳನ್ನು ಕಳುಹಿಸಿದನು . ಆದರೆ ಹುಣಸೇಹುಳಿ ಎಲ್ಲೂ  ಕಾಣಿಸಿಕೊಳ್ಳಲೇ  ಇಲ್ಲ !


ಅಂದ ಚಂದವಾದ ಒಂದು ಕುದುರೆ ಗಾಡಿಯನ್ನು ಕೊಂಡುಕೊಂಡು ಮತ್ತೊಂದು ಪಟ್ಟಣಕ್ಕೆ ಹೊರಟೇ ಹೋಗಿದ್ದ ಹುಣಸೇಹುಳಿ . ಅಲ್ಲಿ ಒಬ್ಬ ಸುಂದರವಾದ ಹುಡುಗಿಯನ್ನು ಕಂಡು ಮನಸೋತನು . 
ಅವಳು ವಾಸವಾಗಿದ್ದ ಬೀದಿಯನ್ನು ಪತ್ತೆ ಮಾಡಿ, ಇಡೀ ದಿನ ಆಕಡೆಯಿಂದ ಈಕಡೆ, ಈಕಡೆಯಿಂದ  ಆ ಕಡೆ ಗಾಡಿಯನ್ನು ಹೊಡೆಯುತ್ತಿದ್ದನು . ಅಂತಹ ಚಂದದ  ಗಾಡಿಯನ್ನು ಹುಡುಗಿ ಎಂದೂ ಕಂಡಿರಲಿಲ್ಲ . ಅವಳಿಗೆ ಅದರಲ್ಲಿ ಸವಾರಿ ಮಾಡುವ ಆಸೆ ಮೂಡಿತು  . 
ಆದರೆ ಅವಳ ಸಿಡುಕು ಮೋರೆ ಮಲ ತಾಯಿ " ಇಲ್ಲೇ ಏಕೆ ಅಡ್ಡಾಡುತ್ತಿರುವೆ ? ಹೊರಟು ಹೋಗು ಇಲ್ಲಿಂದ !" ಎಂದು ಹುಣಸೇಹುಳಿಯನ್ನು ಗದರಿಸಿದಳು . 
"ನಾನ ಮಹಾರಾಜರ ಬಂಡಿಯ ಸಾರಥಿ. ಮನೋರಂಜನೆಗಾಗಿ ಯುವಜನರಿಗೆ   ಪುಕ್ಕಟೆ ಸವಾರಿ ಕೊಡುತ್ತೇನೆ . ನಿನ್ನ  ಹುಡುಗಿಯನ್ನು ಸವಾರಿ ಮಾಡಲು ಕಳುಹಿಸು  . " ಎಂದನು ಹುಣಸೇಹುಳಿ . 
" ಸರಿ. ಒಂದು ಚಿಕ್ಕ ಸವಾರಿ ಸಾಕು . ಅವಳಿಗೆ ಮನೆಯಲ್ಲಿ  ಬಹಳ ಕೆಲಸವಿದೆ . ಅದ್ಸರಿ, ನಿನ್ನ ಹೆಸರೇನು ?"
" ಅಳಿಯಂದಿರು !" ಎಂದನು ಹುಣಸೇಹುಳಿ . 
ಸುಂದರವಾದ ಹುಡುಗಿ ಗಾಡಿ ಹತ್ತಲು ಹೊರಟೇಬಿಟ್ಟಿತು ಸವಾರಿ . ಒಮ್ಮೆ ಬೀದಿಯಲ್ಲೇ ಸುತ್ತಾಡಿದ ಗಾಡಿ ಮತ್ತೊಂದು ದೊಡ್ಡ ಸುತ್ತು ಹೊಡೆಯಿತು . ನಂತರ ಊರನ್ನು ಬಿಟ್ಟು ....  ಇನ್ನೂ ದೂರ ದೂರ ಸಾಗಿ....... ಹಿಂದಿರುಗದೆ ಹಾಗೇ  ಕಣ್ಮರೆಯಾಯಿತು ! 
ಹುಡುಗಿಯ ಅಪಹರಣವಾಯಿತು ಎಂದು ಕೂಗಾಡಿದಳು ಮಲತಾಯಿ . 
ಊರವರೆಲ್ಲ ಅವಳನ್ನು ಸಂತೈಸಿ ಯಾರು ಅಪಹರಿಸಿಕೊಂಡು ಹೋದರು ಎಂದು ಪ್ರಶ್ನಿಸಿದರು . 
" ಅಳಿಯಂದಿರು ! ಅಳಿಯಂದಿರು ! ಹಿಡಿಯಿರಿ ಹಿಡಿಯಿರಿ!"
" ಹುಚ್ಚು ಹೆಂಗಸೇ ! ಅಳಿಯಂದಿರ ಜೊತೆ ತಾನೇ ಹೋದಳು ನಿನ್ನ ಮಗಳು ? ಅದು ಸರಿಯೇ ಅಲ್ಲವೇ ? ಅಪಹರಣವೆಂದು ಏಕೆ  ಹೇಳುವೆ ? ನಿನಗೆಲ್ಲೋ ಬ್ರಾಂತು !"
ಆ ಹೆಂಗಸು ತೆಲೆಯಮೇಲೆ ಕೈ ಹೊತ್ತು ಮಿಕ ಮಿಕ ಕಣ್ಣು ಬಿಡುತ್ತ  ಕುಳಿತುಬಿಟ್ಟಳು !


ಹುಣಸೇಹುಳಿ ಗಾಡಿಯನ್ನು ತನ್ನ ಪುಟ್ಟ ಹಳ್ಳಿಗೆ ಓಡಿಸಿಕೊಂಡು ಹೋದನು . ಅವನ ತಾಯಿಗೆ ಆತನನ್ನು ನೋಡಿ ಬಹಳ ಸಂತೋಷವಾಯಿತು . ಅವನ ಸಂಪಾದನೆ ಜೊತೆಯಲ್ಲಿ ಕರೆತಂದಿದ್ದ ಹುಡುಗಿ ಎಲ್ಲ ಕಂಡು ಅವಳಿಗೆ  ಮಹದಾನಂದ. 
ಇಡೀ ಹಳ್ಳಿಯ ಜನರಿಗೆ  ಔತಣದ ವ್ಯವಸ್ಥೆ ಮಾಡಿದಳು  . 
ಹುಣಸೇಹುಳಿ ಸುಂದರವಾದ ಹುಡುಗಿಯನ್ನು ಮದುವೆಯಾದನು . ಎಂದೆಂದಿಗೂ ಎಲ್ಲರೂ ಸುಖ ಸಂತೋಷದಿಂದಿದ್ದರು . 

" ಹುಣಸೇಹುಳಿ ಎಷ್ಟ್ ಕಿಲಾಡಿ ನೋಡಿದ್ರಾ  ? " ಎಂದರು ತಾತ. 
" ಕಿಲಾಡಿ ಇಲ್ಲ ತಾತ ! ಕೇಡಿ  ನಂಬರ್ ಒನ್ !  ಹಿಡ್ದು ಜೆಯ್ಲ್ಗೆ ಹಾಕ್ತಾರಷ್ಟೇ !" ಎಂದು ಎದ್ದು ಓಡಿ ಹೋದ ಪುಟ್ಟಣ್ಣ . 
" ಈಗಿನ್ ಕಾಲದ್ ಮಕ್ಳು ಬಲು ಜಾಣ್ರು !" ಅಜ್ಜಿ ತಲೆ ತೂಗಿ  ನಕ್ಕಳು . 

No comments:

Post a Comment