Saturday, June 14, 2014

Bidaa Monda Kodaa Bhanda / ಬಿಡಾ ಮೊಂಡ ಕೊಡಾ ಭಂಡ




ಬಿಡಾ ಮೊಂಡ ಕೊಡಾ ಭಂಡನ ಕಥೆ !

" ಬರಿ ಚಿತ್ರಗಳನ್ನ ಮಾತ್ರ ನೋಡ್ಕೊಡ್ತೀನಿ . ಕೊಡು ಅಣ್ಣ !"ಎಂದು ಕೇಳಿದಳು ಪುಟ್ಟಿ . 

" ತಡಿ , ಬೆತಾಳದ್ ಕಥೆ ಮಾತ್ರ ಓದ್ಕೊಡ್ತೀನಿ ." ಎಂದು ಹೊಸ 'ಚಂದಮಾಮ' ಪುಸ್ತಕವನ್ನ ಪುಟ್ಟಿಯ ಕೈಯಿಂದ ಕಿತ್ತು ಕೊಳ್ಳಲು ಯತ್ನಿಸಿದ  ಪುಟ್ಟಣ್ಣ ."

"ಈಗ್ಲೆ  ನೋಡ್ ಕೊಟ್ಟೆ ಇರು . " ಎಂದು ಪುಸ್ತಕವನ್ನ ಗಟ್ಟಿಯಾಗಿ ಹಿಡಿದುಕೊಂಡಳು ಪುಟ್ಟಿ . 

"ನಾನೂ ಕೂಡ್ಲೇ ಕೊಟ್ಬಿಡ್ತಿನಿ, ಕೊಡು  ." ಎನ್ನುತ್ತ ಪುಸ್ತಕವನ್ನು ತನ್ನ ಕಡೆ ಸೆಳೆದುಕೊಂಡ ಪುಟ್ಟಣ್ಣ .  

" ಕೊಡು  !" 

" ಬಿಡು  !"

ತರಕಾರಿ  ಕೊಂಡುಕೊಂಡು ಆಗತಾನೆ ಗೇಟನ್ನು ತೆರೆದುಕೊಂಡು ಒಳಗೆ ಬರುತ್ತಿದ್ದ ಅಜ್ಜಿಗೆ ಪುಟ್ಟಿ ಪುಟ್ಟಣ್ಣ ಕಾದಾಡುತ್ತಿದ್ದದ್ದು  ಕೇಳಿಸಿತು .

" ಏನ್ರಪ್ಪಾ ಇದು ? ನಿಮ್ ಜಗ್ಳ ಗೇಟ್ ವರ್ಗೆ ಕೇಳಿಸ್ತಿದೆ ! ಒಳ್ಳೆ ಬಿಡಾ ಮೊಂಡ  ಕೊಡಾ ಭಂಡನ  ಹಾಗೆ  ಆಡ್ತಿದ್ದೀರಿ  . " ಎನ್ನುತ್ತಾ ತರಕಾರಿ ತುಂಬಿದ ಬ್ಯಾಗ್ ಮೂಲೆಗಿಟ್ಟು   ಬಂದ  ಅಜ್ಜಿ ಆಕ್ಷೇಪಿಸಿದಳು . 

"ಹಾಯ್ ! ಅದ್ಯಾರಜ್ಜಿ ಬಿಡಾ ಮೊಂಡ  ಕೊಡಾ ಭಂಡ  ? " 'ಚಂದಮಾಮ' ವನ್ನು ಮರೆತು ಪ್ರಶ್ನಿಸಿದ ಪುಟ್ಟಣ್ಣ . 

" 'ಬಿಡಾ, ಬಿಡಾ'  ಅಂತ ತಡೆದ್ರೂ  ತನ್ನ ಕೆಲ್ಸಾನ  ಬಿಡ್ದೇ ಸಾಧ್ಸೋ  ಮೊಂಡ   " ಬಿಡಾ ಮೊಂಡ   ".  ''ಕೊಡಾ ಅಪ್ಪಾ, ಕೊಡಾ ಅಯ್ಯ " ಅಂತ  ಕಾಡಿ ಬೇಡಿದ್ರೂ ಯಾರ್ಗೂ ಮೂರು ಕಾಸು ಕೊಟ್ಟು ಸಹಾಯ ಮಾಡದ  ಭಂಡ  "ಕೊಡಾ ಭಂಡ  ". ತಾನು ಓದುತ್ತಿದ್ದ ದಿನ ಪತ್ರಿಕೆಯನ್ನು ಮುಚ್ಚಿಟ್ಟು ವಿವರ ನೀಡಿದರು ತಾತ . 

"ಅಜ್ಜಿ ! ಆ ಕಥೆ ಹೇಳಜ್ಜಿ ! " ಕೈಯಿಂದ 'ಚಂದಮಾಮ' ಜಾರಿ ಬೀಳುತ್ತಿದ್ದದ್ದನ್ನು ಗಮನಿಸದೆ ಅಜ್ಜಿಯನ್ನು ಬೇಡಿಕೊಂಡಳು ಪುಟ್ಟಿ  .  

ಒಂದು ಲೋಟ ನೀರನ್ನು  'ಗಟಗಟ' ಕುಡಿದು , ಹಜಾರದ ಕಂಬಕ್ಕೆ ಒರಗಿ ಕುಳಿತಳು ಅಜ್ಜಿ . ಮಕ್ಕಳಿಬ್ಬರೂ ಹೊಸ ಕಥೆಯ ನಿರೀಕ್ಷೆಯಲ್ಲಿ ಅವಳ  ಎದುರಲ್ಲಿ ಕುಳಿತರು . ಆಗತಾನೆ ಕಾಲೇಜಿನಿಂದ ಹಿಂದಿರುಗಿದ್ದ ಸರಸು ಅತ್ತೆ ತಿಂಡಿ ತಟ್ಟೆ ಹಿಡಿದು ಬಂದು ತಾನು ಅಲ್ಲೇ ಕುಳಿತಳು . 

ಶುರುವಾಯಿತು ಬಿಡಾ ಮೊಂಡ ಕೊಡಾ ಭಂಡನ ಕಥೆ .  


ಬಿಡಾ ಮೊಂಡ ಬಲು ದುಡಿಮೆಗಾರ . ಹಾಗಾಗಿ  ಆಗಿಂದಾಗ್ಯೆ ಹಣ ಸಾಲ ಮಾಡುವುದು ಅವನಿಗೆ ಅನಿವಾರ್ಯವಾಗಿದ್ದಿತು . ಕೊಡಾ ಭಂಡ ಹಳ್ಳಿಯ ಸಾಹುಕಾರ. ಹಾಗಾಗಿ ಹಣ ಸಹಾಯ ಬಯಸಿದವರೆಲ್ಲಾ ಅವನ ಬಳಿ   ಕೈ ಚಾಚಲೇ ಬೇಕಾಗಿರುತ್ತುತ್ತು . 

ಒಮ್ಮೆ ಬಿಡಾ ಮೊಂಡನಿಗೆ ಬೀಜಗಳನ್ನು ಕರೀದಿ ಮಾಡ  ಬೇಕಾಗಿತ್ತು  . ಅದಕ್ಕಾಗಿ  ಕೊಡಾ ಭಂಡನ ಬಳಿ  ಹೋಗಿ  ಸಾಲ ಕೇಳಿದನು . 

"ಸರಿ ! ನಿನಗೆ ಹಣ ಕೊಡುವೆನು . ಆದರೆ ಬಡ್ಡಿಯಾಗಿ ನಿನ್ನ ಬೆಳೆಯಲ್ಲಿ ಅರ್ಧಬಾಗವನ್ನು ನನಗೆ ಸಲ್ಲಿಸಬೇಕು ."

"ಇದು ಬಹಳ ದುಬಾರಿಯಾಯಿತು ."

" ಇಲ್ಲ , ಎಲ್ಲ  ಸರಿಯಾಗಿಯೇ  ಇದೆ   . ಹಣ ನನ್ನದ್ದಾದ್ದರಿಂದ ನನಗೆ ಸಲ್ಲ ಬೇಕಾದ ಭಾಗವನ್ನು ನಾನೇ ಆಯ್ಕೆ ಮಾಡಿಕೊಳ್ಳುವ ಹಕ್ಕು ನನಗಿದೆ . ಭೂಮಿಯ ಮೇಲ್ಬಾಗದಲ್ಲಿ ಬೆಳೆಯುವುದೆಲ್ಲ ನನಗೆ ಸೇರಿದ್ದು . ಕೆಳಗೆ ಬೆಳೆಯುವುದೆಲ್ಲ ನಿನ್ನದ್ದಾಗಲಿ. "ಬಿಡಾ ಮೊಂಡನಿಗೆ ಹಣವನ್ನು ಕೊಟ್ಟು ಧೃಡವಾಗಿ ನುಡಿದನು. 

 ದುಷ್ಟ ನಗೆ ಬೀರಿ ' ಹ ಹ ಹ ! ತರಕಾರಿ ಹಣ್ಣುಗಳು  ಭೂಮಿಯ ಮೇಲೆ ಬೆಳೆಯುತ್ತವೆ  . ಅವೆಲ್ಲ ನನಗೆ ಸೇರುತ್ತವೆ . ಕೇವಲ ಉಪಯೋಗವಿಲ್ಲದ ಬೇರುಗಳು  ಭೂಮಿಯ  ಕೆಳಗೆ  ಬೆಳೆಯುತ್ತವೆ . ಅವೆಲ್ಲ ಅವನಿಗೆ ಸೇರಲಿ . " ಎಂದುಕೊಂಡನು   


ಇದು ಅನ್ಯಾಯವೆನಿಸಿದರೂ ಬಿಡಾ ಮೊಂಡ ಹಣವನ್ನು ತೆಗೆದುಕೊಂಡನು . ತೋಟದುಪಕರಣಗಳನ್ನು ಕೊಂಡುಕೊಂಡು ತೋಟದಲ್ಲಿ ಚೆನ್ನಾಗಿ ದುಡಿದನು . ಕ್ರಮೇಣ ಕೊಯ್ಲನ್ನು ಮುಗಿಸಿದನು  . ನಂತರ ಕೊಡಾ ಭಂಡನ ಬಳಿ  ಹೋದನು . 

" ನೀನು ಹೇಳಿದಂತೆಯೇ ಭೂಮಿಯ ಕೆಳಗಿದ್ದ  ಬೆಳೆಯನ್ನು ನಾನು ತೆಗೆದುಕೊಂಡೆ. ಈಗ ನೀನು ಹೋಗಿ ಭೂಮಿಯ ಮೇಲೆ ಬೆಳೆದವನ್ನ ಸಂಗ್ರಹಿಸಿಕೋ ." ಎಂದನು . 

ಕೊಡಾ ಭಂಡ  ದುರಾಶೆಯಿಂದ ಬುಟ್ಟಿ  ಹಿಡಿದು ತೋಟಕ್ಕೆ ಓಡಿದನು . ಬಿಡಾ ಮೊಂಡ ಭೂಮಿಯ ಕೆಳಗಿದ್ದ ಶೇಂಗಾ ಬೆಳೆಯನ್ನು ಆಗಲೇ ಕೊಯ್ಲು  ಮಾಡಿದ್ದನು ಕಂಡನು . ಒಣಗಿದ್ದ ಎಲೆಗಳೂ ಕಡ್ಡಿಗಳೂ ಮಾತ್ರ ತನಗಾಗಿ ಉಳಿದಿರುವುದನ್ನು ಕಂಡನು . 

ಅವನೇನನ್ನುತಾನೆ ಹೇಳ ಬಲ್ಲ  ? ನಾಚಿಕೆಯಿಂದ ನಾಲಿಗೆ ಕಚ್ಚಿಕೊಂಡು ಮನೆಗೆ ಮರಳಿದನು .  


ಮುಂದಿನ ಋತು ಪ್ರಾರಂಭವಾಯಿತು . ಮುಂದಿನ ಬೆಳೆಗಾಗಿ  ಬಿಡಾ ಮೊಂಡ ಮತ್ತೆ ಸಾಲ ತೆಗೆದುಕೊಳ್ಳಲು ಕೊಡಾ ಭಂಡನ ಬಳಿ ಹೋದನು . ಕೊಡಾ ಭಂಡ ಈ ಬಾರಿ ಬಹಳ ಎಚ್ಚರಿಕೆಯಿಂದಿದ್ದನು . ಹಣಕೊಡಲು ಒಪ್ಪಿದನು . ಬೆಳೆಯಲ್ಲಿ ಅರ್ಧ ಪಾಲನ್ನು ಬಡ್ಡಿಯಾಗಿ ಕೊಡ ಬೇಕೆಂದು ಹಠದಿಂದ ನುಡಿದನು .   "ಜ್ಞಾಪಕವಿರಲಿ ! ಭೂಮಿಯ ಕೆಳಗೆ ಬೆಳೆಯುವುದೆಲ್ಲ ನನ್ನದಾಗ ಬೇಕು . ಮೇಲೆ ಬೆಳೆಯ ತಕ್ಕದ್ದೆಲ್ಲ ನಿನ್ನದಾಗಲಿ . "

ಬಿಡಾ ಮೊಂಡ ಎಂದಿನಂತೆ ಚೆನ್ನಾಗಿ ದುಡಿದನು . ಕ್ರಮೇಣ ಒಳ್ಳೆ ಫಸಲನ್ನು  ತೆಗೆದನು . ನಂತರ ಕೊಡಾ ಭಂಡನ ಬಳಿ ಹೋಗಿ " ಭೂಮಿಯ ಮೇಲೆ ಬೆಳೆದವನ್ನ ನಾನು ತೆಗೆದುಕೊಂಡೆ . ನಿನ್ನ ಮಾತಿನಂತೆ ಕೆಳಗೆ ಬೆಳೆದವನ್ನ ನಿನಗಾಗಿ ಬಿಟ್ಟಿರುವೆ . " ಎಂದನು . 

ಕೊಡಾ ಭಂಡ ಕಡ್ಲೆಕಾಯಿಯ ನಿರೀಕ್ಷೆಯಲ್ಲಿ ದೊಡ್ಡ ಚೀಲವನ್ನು ಹಿಡಿದು ಓಡಿದನು . ಆದರೆ ಬಿಡಾ ಮೊಂಡನೋ ಹೆಸರು ಕಾಳನ್ನು ಪಯಿರು ಮಾಡಿ , ಎಲ್ಲವನ್ನೂ ತಾನು ತೆಗೆದುಕೊಂಡು , ಕೊಡಾ ಭಂಡನಿಗಾಗಿ ಬರಿ ಬೇರುಗಳನ್ನು ಬಿಟ್ಟಿದ್ದನು . ಕೊಡಾ ಭಂಡ ಏನನ್ನುತಾನೇ ಹೇಳ ಬಲ್ಲ ? ನಾಲಿಗೆ ಕಚ್ಚಿ ಕೊಂಡು ನಾಚಿಕೆಯಿಂದ ಮನೆಗೆ ಮರಳಿದನು . 


ಮತ್ತೆ ಋತುಮಾನ ಬದಲಾಯಿತು . ಎಂದಿನಂತೆ ಬಿಡಾ ಮೊಂಡ ಸಾಲಕ್ಕಾಗಿ ಕೊಡಾ ಭಂಡನ ಬಳಿ ತೆರಳಿದನು . ಕೊಡಾ ಭಂಡ ಮತ್ತಷ್ಟು ಎಚ್ಚರ ವಹಿಸಿದ . 

" ನೀನು ಯಾವ ಬೆಳೆ ಬೆಳೆಯಲು ನಿರ್ಧರಿಸಿರುವೆ ಎಂಬುದನ್ನು ಮೊದಲು ಹೇಳು. " 

" ನಾನು ಏನನ್ನೂ ಬೆಳೆಯುತ್ತಿಲ್ಲ . ಒಂದು ಆಕಳನ್ನು ಕೊಂಡುಕೋಳ್ಳಲಿದ್ದೇನೆ ."

" ಹೇ ಹೇ ." ಮನದಲ್ಲಿ ದುರಾಲೋಚನೆ ಮಾಡುತ್ತಾ ಮುಸಿ ನಕ್ಕನು ಕೊಡಾ ಭಂಡ . 

" ಸರಿ ! ಆಕಳನ್ನು ಕೊಂಡುಕೊಳ್ಳಲು ನಾನು ಸಾಲ ಕೊಡುವೆ . ನೀನು ಅದನ್ನು ಮೇಯಿಸಿ ಚೆನ್ನಾಗಿ ಆರೈಕೆ ಮಾಡು  . ಆದರೆ ಅದರ ಅರ್ಧ ಬಾಗ ಬಡ್ಡಿಯಾಗಿ  ನನಗೆ ಸೇರಬೇಕು . ಹಣ ನನ್ನದ್ದಾದ್ದರಿಂದ ಆಕಳ ಹಿಂಬಾಗವನ್ನು ನನ್ನದೆಂದು ಆಯ್ಕೆ ಮಾಡಿದ್ದೇನೆ ." . 

ಹಾಗಾಗಿ ಕೊಡಾ ಭಂಡ ಹಣ ಕೊಡಲು, ಬಿಡಾ ಮೊಂಡ ಒಂದು ಶ್ರೇಷ್ಠವಾದ ಆಕಳನ್ನು ಕೊಂಡುಕೊಂಡನು . ಅದನ್ನು ಉತ್ತಮ ರೀತಿಯಲ್ಲಿ ಸಾಕಿ ಸಲಹಿದನು. ಅದು ದಷ್ಟು ಪುಷ್ಟಾಗುವವರೆಗೆ ಕಾಡಲ್ಲಿ ಮೇವಿಗೆ ಕರೆದೊಯ್ದುನು . ನಂತರ ಹಾಲಿನ ವ್ಯಾಪಾರ ಪ್ರಾರಂಭಿಸಲು ನಿರ್ಧರಿಸಿದನು . ಇದನ್ನರಿತ ಕೊಡಾ ಭಂಡ, ಆಕಳ ಹಿಂಬಾಗ ತನಗೆ ಸೇರಿದ ಕಾರಣ, ಹಾಲು  ಕರೆಯುವ ಹಕ್ಕು ತನ್ನದ್ದು ಎಂದು ವಾದ ಮಾಡಿದನು . 


ಬಿಡಾ ಮೊಂಡ ಮೌನವಾಗಿ ಕೊಡಾ ಭಂಡನಿಗೆ  ಹಾಲು ಕರೆಯವ ಅಧಿಕಾರವನ್ನು ಬಿಟ್ಟು ಕೊಟ್ಟನು . ಕೊಡಾ ಭಂಡ ಹಾಲು ಕರೆಯಲು ಕುಳಿತಾಕ್ಷಣ , ಬೀಡಾ ಮೊಂಡ ಆಕಳಿನ ಕುತ್ತಿಗೆಯನ್ನು ತಟ್ಟಿದನು . 

 " ಲೇ ! ಆಕಳನ್ನ ಪೀಡಿಸ ಬೇಡವೋ  !" ಕೊಡಾ ಭಂಡ ಕೋಪದಿಂದ ಚೀರಿದನು  .
  
" ನಿನ್ನ ಅರ್ಧ ಬಾಗದಲ್ಲಿ ನಿನ್ನ ಕಾರ್ಯ ಮುಂದುವರಿಸು . ನನ್ನ ಅರ್ಧ ಬಾಗದಲ್ಲಿ  ನಾನು ಏನಾದರೂ ಮಾಡಿಕೊಳ್ಳುವೆ ." ಎನ್ನುತ್ತ ಆಕಳ ಕಿವಿಯನ್ನು  ಹಿಂಡಿದ  ಬಿಡಾ ಮೊಂಡ . 

ಕೋಪಗೊಂಡ ಆಕಳು , ಕೊಡಾ ಭಂಡನನ್ನೂ ಅವನ ಹಾಲಿನ ಕೊಡವನ್ನೂ ತನ್ನ ಹಿಂದಿನ ಕಾಲುಗಳಿಂದ ಒದ್ದು ಉರುಳಿಸಿ , ಅತಿ ವೇಗದಿಂದ ಕಾಡೊಳಕ್ಕೆ ಓಡಿ ಕಣ್ಮರೆಯಾಯಿತು. 

" ನಿನ್ನ ಅರ್ಧ ಬಾಗ ಆಕಳು ನನ್ನ ಅರ್ಧ ಬಾಗದ ಜೊತೆ  ಓಡಿ ಹೋಯಿತಲ್ಲ  . ನನಗೆ ನಷ್ಟವಾಗಿ ಹೋಯಿತಲ್ಲ  . ನನಗೆ ಸೇರಬೇಕಾದ ಅರ್ಧ ಹಣವನ್ನು ಈಗಲೇ ಕೊಡು . ಇಲ್ಲವೇ ಮಹಾರಾಜರ ಬಳಿ ದೂರು ಕೊಡುವೆ . " ಎಂದು ಕೂಗಾಡಿದನು ಬಿಡಾ ಮೊಂಡ . 

ಕೊಡಾ ಭಂಡ ಏನನ್ನುತಾನೇ  ಮಾಡಿಯಾನು ? ನಾಚಿ ನಾಲಿಗೆ ಕಚ್ಚಿಕೊಂಡು ಅರ್ಧ ಆಕಳಿನ ಬೆಲೆಯನ್ನು ಮೌನವಾಗಿ ತೆತ್ತನು !


ಕಾಲ ಬದಲಾಯಿತು . ಮತ್ತೆ ಸಾಲಕ್ಕಾಗಿ ಬಿಡಾ ಮೊಂಡ ಕೊಡಾ ಭಂಡನ ಬಳಿ ಮರಳಿದನು . " ಈ ಬಾರಿ ಯಾವ ಪ್ರಾಣಿಯನ್ನು ಕರೀದಿ ಮಾಡಲಿರುವೆ  ? " ಎಚ್ಚರಿಕೆಯಿಂದ ಪ್ರಶ್ನಿಸಿದನು ಕೊಡಾ ಭಂಡ . 
" ಪ್ರಾಣಿ ಕರೀದಿಸುವ ಯೋಚನೆ ಇಲ್ಲ . ಒಂದು ದೊಡ್ಡ ಮಾವಿನ ಮರವಿರೋ  ಒಂದು ಪುಟ್ಟ ಜಮೀನು ಉಂಟು  . ಅದನ್ನು ಕೊಂಡುಕೊಂಡು , ಅಲ್ಲಿ ನನಗಾಗಿ  ಒಂದು ಗುಡಿಸಲನ್ನು ಹಾಕಿಕೊಳ್ಳಲಿರುವೆ ." 

" ಸರಿ  . ಹಣ ಕೊಡುತ್ತೇನೆ . ಆದರೆ ಮರದ ಮೇಲ್ಬಾಗವನ್ನು ಬಡ್ಡಿಯಾಗಿ  ತೆಗೆದುಕೊಳ್ಳುವೆ . ಆರು ತಿಂಗಳುಗಳು ಕಳೆಯುವ ಮೊದಲು  ಸಾಲ ತೀರಿಸದೆ ಹೋದಲ್ಲಿ ನಿನ್ನ ಗುಡಿಸಲು ಜಮೀನು ಎಲ್ಲವೂ ನನ್ನದಾಗುತ್ತವೆ . "

' ಹೇ ಹೇ ಹೇ !' ಕುಹಕ ನಗೆ ಬೀರಿದ ಕೊಡಾ ಭಂಡ . ಹಣ್ಣನ್ನು ಮಾರಿ ಹಣ ಗಳಿಸುವ ಎಂದುಕೊಂಡಿರುವನೇನು  ? ಈಗ ಮರದ ಮೇಲ್ಬಾಗವನ್ನು ಈತ ಮುಟ್ಟುವ ಹಾಗಿಲ್ಲ . ಆದ್ದರಿಂದ ಸಾಲವನ್ನು ಹಿಂದಿರುಗಿಸಲೂ ಆಗುವುದಿಲ್ಲ . ಹಾಗಾಗಿ ಅವನ ಜಮೀನು ಗುಡಿಸಲು ಮರ  ಎಲ್ಲವೂ  ನನ್ನದಾಗುತ್ತವೆ . 


ಬಿಡಾ ಮೊಂಡ ಜಮೀನನ್ನು ಕೊಂಡುಕೊಂಡ . ಗುಡಿಸಲನ್ನು ಹಾಕಿಕೊಂಡ . ಮರವನ್ನೂ ಅಕ್ಕರೆಯಿಂದ ಪೋಷಿಸಿದ . 

ಸಕಾಲದಲ್ಲಿ ಮರವು  ರಸಭರಿತ ಹಣ್ಣುಗಳನ್ನು ಕೊಡತೊಡಗಿತು . ಇದನ್ನರಿತ ಕೊಡಾ ಭಂಡ ಗೋಣಿ ಚೀಲದೊಂದಿಗೆ ಧಾವಿಸಿ ಬಂದನು . ಹಣ್ಣು ಕುಯ್ಯಲು ಮರವನ್ನು ಹತ್ತಲೆತ್ನಿಸಿದನು . ಆದರೆ ಬಿಡಾ ಮೊಂಡ ಅವನನ್ನು ತಡೆದನು . 

" ಮರದ ಮೇಲ್ಬಾಗ ಮಾತ್ರ ನಿನ್ನದು . ಕೆಳಗಿನ ಬಾಗದಲ್ಲಿ ನೀನು ನಿನ್ನ ಕೈಯ್ಯನ್ನೋ ಕಾಲನ್ನೊ ಇಡುವಂತಿಲ್ಲ . ಅದು ನನಗೆ ಸೇರಿದ ಬಾಗ . "

 ಕೊಡಾ ಭಂಡ ಒಂದು ಏಣಿಯನ್ನು ತಂದು ಮರಕ್ಕೆ  ಆನಿಸಿಟ್ಟು , ಅದನ್ನು ಹತ್ತಿ ಹಣ್ಣು ಕುಯ್ಯಲು ಹೊರಟನು . ಅವನು ಸರ ಸರನೆ ಹಣ್ಣು ಕುಯ್ಯುತ್ತಿರಲು , ಬಿಡಾ ಮೊಂಡ ಕೊಡಲಿ ತಂದು  ಮರದ ಬುಡವನ್ನು  ಕೊಚ್ಚಲು ಪ್ರಾರಂಭಿಸಿದನು . 

" ಲೇ ! ಮರವನ್ನು  ಕೊಚ್ಚ ಬಾರದು  ?" ಎಂದು ಕೂಗಿದ ಕೊಡಾ ಭಂಡ . 

" ಏಕೆ ಬಾರದು ? ನಾನು ನನ್ನ ಪಾಲಿನ ಬಾಗವನ್ನೇ  ಕೊಚ್ಚುತ್ತಿರುವೆ . ಮರದ ವ್ಯಾಪಾರಿ ಈ ಮರದ ದಿಮ್ಮಿಗೆ ಒಳ್ಳೆಯ ಬೆಲೆ ಕೊಡುವುದಾಗಿ ಹೇಳಿರುವನು ." 

ಕೊಡಾ ಭಂಡ ಇಳಿಯುವ ಮುನ್ನ ಮರ ಧಡಿಲ್ ಎಂದು ನೆಲಕ್ಕೆ ಅಪ್ಪಳಿಸಿತು. ಹಣ್ಣುಗಳನ್ನು ಜಜ್ಜಿಕೊಂಡು ಅವುಗಳ ಮೇಲೆ ಬಿದ್ದ ಕೊಡಾ ಭಂಡ  . 


ಅವನು ಏನನ್ನುತಾನೆ ಮಾಡಿಯಾನು ? ನಾಚಿ ನಾಲಿಗೆ ಕಚ್ಚಿಕೊಂಡು ಮನೆ ಸೇರಿದನು . 


ಮತ್ತೆ ಸಾಲಕ್ಕಾಗಿ ಬರಲಿರುವ ಬಿಡಾ ಮೊಂಡನನ್ನು ಹೇಗಾದರೂ ತನ್ನ ಬಲೆಯಲ್ಲಿ  ಸಿಕ್ಕಿಸಲೇ ಬೇಕೆಂದು   ಮತ್ತೊಂದು ಸಂಚನ್ನು ಹೂಡಲು ಕಾಯುತ್ತಿದ್ದ ಕೊಡಾ ಭಂಡ . 

ಆದರೆ ಬಿಡಾ ಮೊಂಡ ಮರವನ್ನು ಮಾರಿ ಹೆಚ್ಚು ಹಣವನ್ನು ಗಳಿಸಿದ್ದ ಕಾರಣ ಆತ ಸಾಲಕ್ಕಾಗಿ ಎಂದೆಂದಿಗೂ ಕೊಡಾ ಭಂಡನ ಬಳಿ ಹೋಗಲೇ ಇಲ್ಲ .  

"ಒಳ್ಳೇ ಕಥೆ !" ಎನ್ನುತ್ತಾ ಎದ್ದು ಓಡಿದರು ಮಕ್ಕಳು . 

No comments:

Post a Comment