Tuesday, February 18, 2014

ಮೊಗ್ಗಿನ ಜಡೆ ! /Moggina Jade

ಮೊಗ್ಗಿನ ಜಡೆ !

ಹೂವು ಹೂವು ಬಣ್ಣದ  ಹೂವು !
ಬುಟ್ಟಿಯ ತುಂಬ ಚೆಂದದ ಹೂವು !
ಚಮ ಚಮ ಅರಳಿದ ಸೇವಂತಿಗೆ ಹೂವು !
ಘಮ ಘಮ ಸೂಸುವ ಗುಂಡು ಮಲ್ಲಿಗೆ ಹೂವು !
ಕಿಡಿ ಕಿಡಿ ಕೆಂಡವೋ ಕೆಂಡಸಂಪಿಗೆ ಹೂವು !
ಗುಲ್ಕಂದಿನ ಸವಿ ಗುಲಾಬಿ ಹೂವು !
ರಂಗುರಂಗಿನ ಸ್ಪಟಿಕದ ಹೂವು!
ಶಂಕು  ಪುಷ್ಪವೀ  ನೀಲಿ ಹೂವು !
ಕಿತ್ತಳೆ ಬಣ್ಣದ ಕನಕಾಂಬರ ಹೂವು !
ನೇರಳೆ ವರ್ಣದ  ರುದ್ರಾಕ್ಷಿ ಹೂವು !
ಹೂವು ಹೂವು ಬಣ್ಣದ ಹೂವು !
ಬುಟ್ಟಿಯ ತುಂಬ ಚೆಂದದ ಹೂವು ! 

ಬುಟ್ಟಿಯ ತುಂಬ ತೋಟದಿಂದ ಕಿತ್ತು ತಂದಿದ್ದ  ಹೂವುಗಳನ್ನು ತನ್ನ ಮುಂದೆ ಗುಡ್ಡೆ ಹಾಕಿಕೊಂಡು  ಅಜ್ಜಿ ಆನಂದದಿಂದ ಹಾಡಿದಳು . 



" ಘಮ ಘಮ ಚಮ ಚಮ  ಹಾಡು ತುಂಬಾ ಚೆನ್ನಾಗಿದೆ ಅಜ್ಜಿ!" ಅಜ್ಜಿ ಕೆನ್ನೆಗೆ ಮುತ್ತಿಟ್ಟು ಪುಟ್ಟಿ  ಹೂವುಗಳನ್ನ ವಿಂಗಡಿಸಿ  ಬೇರೆ ಬೇರೆ ತಟ್ಟೆಗಳಲ್ಲಿಟ್ಟಳು.  
  
  "ಬಾಳೇ ತೊಗಟೆ ನಾರು ತರಕ್ಕೆ  ಎಷ್ಟ್ ಹೊತ್ತು ಮಾಡ್ತಿದ್ದಾಳೆ ಈ ರಾಣಿ! ಲೋ ! ಪುಟ್ಟಣ್ಣ ! ತೋಟದ ಕಡೆ ಹೋಗಿ ಅವಳನ್ನ ಬೇಗ ಬಾ ಅನ್ನು .'' 

ತನ್ನ ಪಾಡಿಗೆ ಎಲ್ಲಿಗೋ ಬರ್ರೆಂದು ಓಡುತ್ತಿದ್ದ ಪುಟ್ಟಣ್ಣ ಬ್ರೇಕ್ ಹಾಕಿದಂತೆ ನಿಂತ .
" ಯಾಕಜ್ಜಿ ನಾರು, ತೊಗಟೆ ?" ಎಂದು ಕುತೂಹಲದಿಂದ ವಿಚಾರಿಸಿದ . 

" ಪುಟ್ಟಿಗೆ ಇವತ್ತು ಮೊಗ್ಗಿನ್  ಜಡೆ ಹಾಕ್ತಿನೊ ಮರಿ!" ಎಂದಳು ಅಜ್ಜಿ . ಮಲ್ಲಿಗೆ ಮೊಗ್ಗುಗಳನ್ನು ಆರಿಸಿಡುತ್ತಿದ್ದ ಪುಟ್ಟಿ ಜಂಬದಿಂದ ಬೀಗಿದಳು .

" ಅಯ್ಯೋ ! ಈ  ಕೋಡ್ಬಳೆಗೆ   ಮೊಗ್ಗಿನ್  ಜಡೆಯೇ ?" ಪುಟ್ಟಿಯ ಎತ್ತಿ ಕಟ್ಟಿದ್ದ ಎರಡು ಪುಟ್ಟ ಜಡೆಗಳನ್ನು ಎಳೆದು ಕೀಟಲೆ ಮಾಡಿದ ಪುಟ್ಟಣ್ಣ .

" ನೋಡಜ್ಜಿ ಪುಟ್ಟಣ್ಣ ಜಡೆ ಎಳಿತಾನೆ ! ಸರಸು ಅತ್ತೆ ಕಾಲೇಜ್ಗೆ ಹೋಗೋವಾಗ ಹೀಗೇ ಕಟ್ಕೊಂಡ್ ಹೋಗ್ತಾಳೆ ಅಲ್ವೇ ಅಜ್ಜಿ?"

" ಅತ್ತೆ ಜಡೆ ಚಾವಟಿ ಇದ್ದಂತೆ ! ಆದ್ರೆ ಇದು ? ಕೋಡ್ಬಳೆ ! ಕೋಡ್ಬಳೆ ! ಬಿಸಿ ಬಿಸಿ  ಕೋಡ್ಬಳೆ !  " ಎಂದು ಮತ್ತೆ ರೇಗಿಸಿದ   ಪುಟ್ಟಣ್ಣ . 

"ನೋಡಜ್ಜಿ !" ಪುಟ್ಟಿ ಮುಖ ಊದಿಸಿಕೊಂಡು  ರಾಗವೆಳೆದಳು . 

" ಲೋ ! ಯಾಕೋ ಅವಳನ್ನ ರೇಗಿಸ್ತಿಯ ? ನೋಡ್ತಿರು ! ಈಗ  ಕೋಡ್ಬಳೆ ಹೇಗೆ  ಚಾವಟಿ  ಆಗತ್ತೇಂತ !"

ಅಷ್ಟೊತ್ತಿಗೆ ರಾಣಿ ಬಾಳೆ  ನಾರು ತೊಗಟೆ ತಂದಳು . ತೊಗಟೆ ಸೀಳಿಟ್ಟು  , ನಾರು ಬಿಡಿಸಿ ನೀರಿಗೆ ಅದ್ದಿ ಸೂಜಿ ಪೋಣಿಸಿದಳು ಅಜ್ಜಿ. 

ಕುಣಿಕುಣಿಯೋ ಕೃಷ್ಣ ಕುಣಿಕುಣಿಯೋ !
ಫಣಿ ಫಣದಲಿ ನೀ 
ಠಣ ಠಣ ಕುಣಿದಂತೆ 
ಕುಣಿ ಕುಣಿಯೋ ಕೃಷ್ಣ 
ಕುಣಿಕುಣಿಯೋ !

ಹಾಲಲ್ಲಿ ಕುಳಿತು ಸರಸು ಅತ್ತೆಗೆ ಮೇಷ್ಟ್ರು  ಕಲಿಸುತ್ತಿದ್ದ ಹಾಡನ್ನ ತಾನೂ ಗುನುಗುತ್ತ, ಪುಟ್ಟಿ ತೆಗೆದು ಕೊಟ್ಟ ಮೊಗ್ಗುಗಳನ್ನು ಸೀಳಿದ್ದ ಬಾಳೆ  ತೊಗಟೆಗೆ ಟಾಕು ಹಾಕ ತೊಡಗಿದಳು ಅಜ್ಜಿ . ಸಂಗೀತ  ಪಾಠ ಮುಗಿಸಿ  ಸರಸು ಅತ್ತೆ ಎದ್ದು ಬಂದಾಗ ಮೊಗ್ಗಿನ ಜಡೆ ತಯಾರಾಗಿತ್ತು . 

" ಅಯ್ಯೋ ಅಯ್ಯೋ ! ಎಷ್ಟ್ ಚೆನ್ನಾಗಿದೆ ಮೊಗ್ಗಿನ್  ಜಡೆ !"

" ಸರಸು ! ಕುಚ್ಚು ಚೌರಿ ಎಲ್ಲ ತರ್ತಿಯಾ ?  ಪುಟ್ಟಿಗೆ ಜಡೆ ಹಾಕೋಣ !" ಎಂದಳು ಅಜ್ಜಿ.

  ಬಾಚಣಿಗೆ , ಕುಚ್ಚು , ಚೌರಿ ಎಲ್ಲ ತಂದು ತಾನೂ ಅಲ್ಲೇ ಕೂತಳು  ಸರಸು ಅತ್ತೆ. 

ಅಜ್ಜಿ ಅತ್ತೆ ಇಬ್ಬರೂ  ಸೇರಿ ಪುಟ್ಟಿಗೆ ತಲೆ ಬಾಚಿ, ಚೌರಿ ಕುಚ್ಚು ಸೇರಿಸಿ  ಉದ್ದ ಜಡೆ ಹೆಣೆದರು.  ಮೊಗ್ಗು ಜಡೆಯನ್ನು ಜಡೆಗೆ ಜೋಡಿಸಿ ಕಟ್ಟಿದರು . 

" ಬರಿ ಜಡೆ ಸಾಲ್ದು ಪುಟ್ಟಿ ! ತಡಿ ! ಕಣ್ಣಿಗೆ ಕಾಡ್ಗೆ , ಹಣೆಗೆ ತಿಲಕ, ಕೈ ಬಳೆ , ಕಾಲ್ಗೆಜ್ಜೆ ಎಲ್ಲ ಹಾಕ್ಕೋಬೇಕು ! "ಎಂದ ಅತ್ತೆ ಪುಟ್ಟಿಗೆ  ಎಲ್ಲ ಅಲಂಕಾರ ಮಾಡಿದಳು .

"ಜರತಾರಿ ಲಂಗಾನೂ ಹಾಕು ." ಎಂದಳು ಅಜ್ಜಿ. 

ಅಲಂಕಾರ ಮುಗಿಯಿತು . 

" ಎಷ್ಟ್ ಚೆನ್ನಾಗ್ ಕಾಣ್ತಿದ್ದೀಯ ಪುಟ್ಟಿ !" ಎನ್ನುತ್ತಾ  ಅಜ್ಜಿ ಪುಟ್ಟಿಯ ಮುಖ ನೀವಾಳಿಸಿ ದೃಷ್ಟಿ ಕಳೆದಳು .  

ಪುಟ್ಟಿಗೆ ನಾಚಿಕೆ !  ಎದೆ ತುಂಬಿದ ಸಂತೋಷ !

" ವಾರೆ ವಾ ! ಕೋಡ್ಬಳೆ ಚಾವಟಿ ಆಗೇ ಬಿಟ್ಟಿದೆ ! ಎಂತಾ ಮ್ಯಾಜಿಕ್ಕು !" ಎಂದ ಪುಟ್ಟಣ್ಣ . 

ತಾತ, ಅಪ್ಪ, ಅಮ್ಮ ಎಲ್ಲರೂ ಅಲಂಕಾರವಲ್ಲಿಯಾಗಿದ್ದ ಪುಟ್ಟಿಯನ್ನು  ಕೊಂಡಾಡಿದ್ದೂ ಕೊಂಡಾಡಿದ್ದೆ ! 

ಸರಸು ಅತ್ತೆ ಗುಡು ಗುಡು ಓಡಿ ಹೋಗಿ ತನ್ನ  ಅಗ್ಫಾ  ಪೆಟ್ಟಿ ಕ್ಯಾಮರಾ ತಂದು ಬಗೆ ಬಗೆ ಬಂಗಿಗಳಲ್ಲಿ  ಪುಟ್ಟಿಯನ್ನು ನಿಲ್ಲಿಸಿ ಫೋಟೋ ತೆಗೆದಳು . 



" ಪುಟ್ಟಿ ! ತುಂಬಾ ಚೆನ್ನಾಗ್ ಕಾಣ್ತೀ ಮರಿ !   ರಾಧೆ ಹಾಗೆ !  'ಕೃಷ್ಣಾ ನೀ ಬೇಗನೆ ಬಾರೋ' ಹೇಳ್ತೀನಿ . ಒಂದ್ ಡ್ಯಾನ್ಸ್ ಮಾಡು ನೋಡೋಣ !" ಎಂದಳು ಅಜ್ಜಿ .

" ಹೋಗಜ್ಜಿ !  ಆ ಹಾಡು ಬೇಡ ! ಘಮ ಘಮ ಆಯ್ತು ! ಅತ್ತೆ ಠಣ ಠಣ ಹೇಳಿದ್ಳು ! ನಾನು ಝಣಾ  ಝಣಾ  ಝಣಾ  ಹೇಳ್ತಿನಿ . "

ಝಣಾ ಝಣಾ  ಝಣಾ ,
 ಜೇಬು  ತುಂಬ ಹಣ !
ಮೇಲಕ್ಕೆತ್ತಿ  ಬಿಡಲು ಸದ್ದು 
ಟಣ್  ಟಣಾ ಟಣಾ !

 ನದಿಯಲ್ಲೊಂದು ಬಕ ,
 ಮುದುರಿಕೊಂಡು ಮುಖ,
ಕಾಲನ್ನೆತ್ತಿ  ಕುಣಿಯುತ್ತಿತ್ತು 
ತೈ ತಕಾ ತಕಾ !

ಸುತ್ತ ಹಸಿರು  ವನ,
ನಡುವೆ  ಮೇವ ದನ , 
ಕೊಳಲನೂದಿ ಗೊಲ್ಲನೊಬ್ಬ 
ತಾನ ನಾನ ನಾ !

ಪುಟ್ಟಿ ಅಭಿನಯದೊಡನೆ ಹಾಡಿ ಮುಗಿಸಿದಳು .  ಎಲ್ಲರೂ ಸಂತೋಷದಿಂದ ಚಪ್ಪಾಳೆ ತಟ್ಟಿದರು .

 ಅಂಬೆಗಾಲಿಟ್ಟು ಪುಟ್ಟಿಯ ಬಳಿ ಸರ ಸರ ಬಂದ ಪಾಪು , ಅವಳ ಲಂಗ ಹಿಡಿದುಕೊಂಡು ಎದ್ದು ನಿಂತು ತಾನೂ ತೈ ತಕ ಕುಣಿಯಿತು . ಪುಟ್ಟಿಯ ಮುಖದ ತುಂಬ ಸಂತೋಷದ ಹೂವು ಅರಳಿತು ! 

No comments:

Post a Comment