Tuesday, February 6, 2018

ವಪ್ಪಟ್ಟೂ ದ್ವೀಪದಲ್ಲಿ ಕುಂಬಳಕಾಯಿ ಹಬ್ಬ - Pumpkin Festival at Wappattoo Island

ವಪ್ಪಟ್ಟೂ ದ್ವೀಪದಲ್ಲಿ ಕುಂಬಳಕಾಯಿ ಹಬ್ಬ 
ಕಾರ್ಮೋಡ ಕವಿದಿದ್ದ ಕತ್ತಲಾದ ವಾತಾವರಣ -
ಹಸಿರು ವೃಕ್ಷಗಳು ದಟ್ಟೈಸಿದ್ದ  ಕಾಡು ಪ್ರದೇಶ -
ದಾರಿ ಕಾಣದಷ್ಟು ಚಟ ಪಟ ಬೀಳುತ್ತಿದ್ದ ಮಳೆ ಹನಿಗಳು -
ಹೆಡ್ ಲೈಟಿನಲ್ಲಿ ಕಂಡೂ ಕಾಣದಂತೆ ಗೋಚರವಾದ ಕಡಿದಾದ ಹೇರ ಪಿನ್ ತಿರುವುಗಳು - 
ಪೋರ್ಟ್ಲ್ಯಾನ್ಡ್ ವೆಸ್ಟ್ ಹಿಲ್ಸ್ (Portland West Hills) ಎಂಬ ಪರ್ವತ ಶ್ರೇಣಿಯಿಂದ ಕೆಳಗಿಳಿಯುವುದೇ ಒಂದು ಸಾಹಸದ  ಕಾರ್ಯ! ಪರ್ವತದ ಬುಡದಲ್ಲಿಯ  ಹೆದ್ದಾರಿಯ ಜೊತೆ ಜೊತೆಯಾಗಿ  ಹರಿದು ಬರುತ್ತದೆ  ಮಲ್ಟ್ನೋಮ   ಚ್ಯಾನಲ್ (Multnomah Channel) ಎಂಬ ನಾಲೆ. ಕೆಲವೇ ನಿಮಿಷಗಳಲ್ಲಿ ಸಾವಿ ಐಲಂಡ್ ಸೇತುವೆಯನ್ನು (Sauvie Island Bridge) ಹಾದು ನಾವು ತಲಪುವುದು ಪ್ರಾಚೀನದಲ್ಲಿ ವಪ್ಪಟ್ಟೂ ಐಲ್ಯಾಂಡ್ ಎನ್ನಿಸಿಕೊಂಡಿದ್ದ ಇಂದಿನ  ಸಾವಿ ಐಲಂಡನ್ನ!
ದಿಗಂತದ ವರೆಗೆ  ಹರಡಿಕೊಂಡಿರುವ ಅಖಂಡವಾದ ಹಚ್ಛೆ ಹಸಿರಾದ  ಪ್ರದೇಶ ನಮಗೆ ಸುಸ್ವಾಗತ ನೀಡುತ್ತದೆ! ವಲಸೆ ಹೋಗುವ ಪಕ್ಷಿ ಪ್ರಾಣಿಗಳಿಗೆ ತಾತ್ಕಾಲಿಕ ತಂಗುದಾಣವಾಗಿರುವ ಸಂರಕ್ಷಿಸಲ್ಪಟ್ಟ ಈ ಆರ್ದ್ರ  ಭೂಮಿ ಅನೇಕ ಸಸ್ಯಾಗಾರಗಳಿಗೆ  ನೆಲೆಬೀಡಾಗಿದೆ. ಸ್ಟ್ರಾ ಬೆರಿ, ರಾಸ್ಪ್ ಬೆರಿ, ಬ್ಲೂ ಬೆರಿ, ಬ್ಲ್ಯಾಕ್ ಬೆರಿ, ಪೀಚ್, ಪೇರ್  ಮುಂತಾದ ಅನೇಕ ಹಣ್ಣುಗಳನ್ನೂ ಜೋಳ ಮತ್ತು ಇತರ ತರಕಾರಿಗಳನ್ನೂ ಉತ್ಪನ್ನ ಮಾಡುವ ಫಲವತ್ತಾದ ಮಣ್ಣನ್ನು ಹೊಂದಿದೆ ಸಾವಿ ಐಲಂಡ್. ಈ ದ್ವೀಪವು  ಪೋರ್ಟ್ಲ್ಯಾನ್ಡ್ನ ವಾಯವ್ಯಕ್ಕೆ ಹತ್ತು ಮೈಲಿ ದೂರದಲ್ಲಿ ಕೊಲಂಬಿಯ ನದಿ ಮತ್ತು  ವಿಲ್ಲಾಮೆಟ್ ನದಿಗಳು ಸಂಗಮವಾಗುವ ಪ್ರದೇಶದಲ್ಲಿದೆ.
ಸೆಪ್ಟಮ್ಬರ್ - ಅಕ್ಟೋಬರ್ ತಿಂಗಳು ಎಂದರೆ  ಪೋರ್ಟ್ಲ್ಯಾನ್ಡ್ ವಾಸಿಗಳಿಗೆ ಎಲ್ಲಿಲ್ಲದ  ಸಂಭ್ರಮ! ಏಕೆಂದರೆ ಅದು ಕುಂಬಳಕಾಯಿಯ ಸುಗ್ಗಿ ಕಾಲ! ಸುತ್ತಮುತ್ತಲಿನ ಕುಂಬಳಕಾಯಿ ತೋಟಗಳು  ಕುಂಬಳಕಾಯಿ ಉತ್ಸವಕ್ಕೆ ಸಡಗರದಿಂದ ಅಣಿಯಾಗುವ ಕಾಲ. ವಪ್ಪಟ್ಟೂ  ದ್ವೀಪದಲ್ಲಿಯ 'ಬೆಲ್ಲಾ ಆರ್ಗಾನಿಕ್ಸ್' ಏರ್ಪಡಿಸಿದ್ದ ಕುಂಬಳಕಾಯಿ ಹಬ್ಬಕ್ಕೆ  ಪರಿವಾರ ಸಮೇತರಾಗಿ ನಾವು ಹಾಜರಾದಾಗ ಆವರೆಗೂ ಕಾರ್ಮುಗಿಲಲ್ಲಿ ಬಚ್ಚಿಟ್ಟುಕೊಂಡಿದ್ದ ಸೂರ್ಯ ಕಣ್ಣು ಕುಕ್ಕುವಂತಹ  ಬೆಳಕನ್ನು ಚೆಲ್ಲುತ್ತ  ಹೊರಗೆ ಇಣುಕಿದ! ಒಂದು ಕ್ಷಣ ಮಳೆಯಾದರೆ ಮರು ಕ್ಷಣವೇ ಎಲ್ಲಿಂದಲೋ ತೂರಿ ಬಂದು  ಜಾಜ್ವಲ್ಯವಾದ ಪ್ರಕಾಶವನ್ನು ಬೀರುವ ಪೋರ್ಟ್ಲ್ಯಾನ್ಡ್  ಸೂರ್ಯನ  ಕಣ್ಣಾಮುಚ್ಚಿ  ಆಟಕ್ಕೆ ನಾವು ಈಗಾಗಲೇ ಹೊಂದಿಕೊಂಡಿದ್ದೆವು!  ಬಿಸಿಲಾದರೇನು? ಮಳೆಯಾದರೇನು? ವಾರದ ಅಂತ್ಯದಲ್ಲಿ  ಆಚರಿಸಲ್ಪಡುವ ಎಲ್ಲ ಹಬ್ಬಗಳಿಗೂ ನಗರಪುರವಾಸಿಗಳು ಮಕ್ಕಳು ಮರಿಗಳೊಂದಿಗೆ ಹಾಜರಾಗುತ್ತಾರೆ!


ಕಾರ್ಮುಗಿಲ ಕಿರೀಟ ಧರಿಸಿದ್ದ ಪರ್ವತಶ್ರೇಣಿಗಳ ಹಿನ್ನೆಲೆಯಲ್ಲಿ ಹಚ್ಛೆ ಹಸಿರಾದ ಹುಲ್ಲು ಹಾಸಿನ ಮೇಲೆ ಚಿನ್ನದ ಚೆಂಡುಗಳಂತೆ ಉರುಳಿಕೊಂಡಿರುವ  ಕುಂಬಳಕಾಯಿಗಳು -


ಪಂಪ್ಕಿನ್ ಪ್ಯಾಚ್ ಎಂಬ ಕುಂಬಳ ಬಳ್ಳಿಗಳ ತೋಟದಿಂದ ನಾವೇ ಸ್ವತಃ ನಮಗೆ ಬೇಕಾದ ಕಾಯಿಗಳನ್ನು ಆರಿಸಿ ತೆಗೆದುಕೊಳ್ಳುಬಹುದಾದ  ಸೌಲಭ್ಯ -


ತೋಟದ ವರೆಗೆ ನಮ್ಮನ್ನು ಒಯ್ಯಲು ಹುಲ್ಲು ಮೆದೆ  ಹಾಸಿದ  ಟ್ರೈಲರೊಂದಿಗೆ ತಯಾರಾಗಿರುವ ಟ್ರ್ಯಾಕ್ಟರ್ -


 

ಉತ್ಸವಕ್ಕಾಗಿ ಸಜ್ಜುಗೊಳಿಸಲ್ಪಟ್ಟಿದ್ದ  ಮಾರುಕಟ್ಟೆಯಲ್ಲಿ ವಿವಿಧ ಗಾತ್ರಗಳಲ್ಲಿ, ವಿವಿಧ ಆಕಾರಗಳಲ್ಲಿ, ಕಣ್ಣುಗಳನ್ನು ಕೋರೈಸುವಂತಹ  ವಿವಿಧ ಬಣ್ಣಗಳಿಂದ ಕೂಡಿದ  ಕುಂಬಳಕಾಯಿಗಳ  ರಾಶಿ - 


ವಿಶೇಷವಾದ ಹ್ಯಾಲೋವೀನ್  ಅಲಂಕಾರದಲ್ಲಿ ಕಂಗೊಳಿಸುವ  ಮಾರ್ಕೆಟ್ ಚೌಕ -


ಬಗೆ ಬಗೆಯ ಪಾನೀಯಗಳು, ಆಹಾರಗಳು ಮತ್ತು ತಿಂಡಿಗಳನ್ನು ಬಿಸಿ ಬಿಸಿಯಾಗಿ ಸರಬರಾಜು ಮಾಡುವ ಫುಡ್ ಪೆವಿಲಿಯನ್ಗಳು -


ಮಕ್ಕಳಿಗಾಗಿ ಹಸುವಿನಾಕಾರದ ಬೋಗಿಗಳೊಂದಿಗೆ ಪುಟಾಣಿ ಎಕ್ಸ್ಪ್ರೆಸ್ -


ಶುಭ್ರವಾದ ಪುಟ್ಟ ಮೃಗಾಲಯದಲ್ಲಿ ಮಕ್ಕಳಿಗಾಗಿ, ಅವರುಗಳು  ಮುದ್ದಿಸಿ, ತಿನ್ನಿಸಿ ಆಡಿಸಲೆಂದು  ಬೇಲಿಯೊಳಗೆ ಕೂಡಿಡಲ್ಪಟ್ಟಿದ್ದ ಕರುಗಳು, ಕುರಿಮರಿಗಳು ಮತ್ತು ಮರಿಹಂದಿಗಳು -
ಮಕ್ಕಳಿಗೆಂದೇ ಏರ್ಪಡಿಸಲಾಗಿದ್ದ  ಬೊಂಬೆ  ಬಾತುಗಳ ಈಜುವ ಸ್ಪರ್ಧೆ (ರಬ್ಬರ್ ಡಕ್ ರೇಸ್)- 
ಅದಲ್ಲದೆ ಮಕ್ಕಳಿಗೆ ಬಹು ಪ್ರಿಯವಾದ ಫೇಸ್ ಪೇಂಟಿಂಗ್ ಮತ್ತು ಪಾಪ್ ಕಾರ್ನ್ ಸ್ಟಾಲ್ಗಳು -
'ಕಾರ್ನ್ ಮೇಜ್' (corn maze) ಎಂಬ ಸಾಹಸದಾಟ ಮಕ್ಕಳನ್ನಲ್ಲದೆ ಹಿರಿಯರನ್ನೂ ಆಕರ್ಷಿಸುತ್ತದೆ. 


ಜೋಳದ ಗದ್ದೆಗಳಲ್ಲಿ ಏರ್ಪಡಿಸಲಾಗಿದ್ದ ಚಕ್ರ ವ್ಯೂಹದೊಳಗೆ  ಹೊಕ್ಕು ನಿರ್ದಿಷ್ಟ ಕಾಲದೊಳಗೆ ಹೊರ ಬರ ಬೇಕಾದಂತಹ ಆಟ ಇದು. 'ಹಾಂಟೆಡ್ ಕಾರ್ನ್ ಮೇಜ್' (haunted corn maze) ಎಂಬ ರೋಮಾಂಚಕಾರೀ ಚಕ್ರವ್ಯೂಹ ಹೃದಯ ಗಟ್ಟಿ ಇದ್ದವರಿಗೆ ಮಾತ್ರ! ಹ್ಯಾಲೋವೀನ್ ಪ್ರಯುಕ್ತ ಈ ವ್ಯೂಹದೊಳಗೆ ಭಯಾನಕ  ಭೂತಗಳು ಅನಿರೀಕ್ಷಿತವಾಗಿ ನಮ್ಮ ಮುಂದೆ ಪ್ರತ್ಯಕ್ಷವಾಗಿ ದಿಗಿಲುಗೊಳಿಸುತ್ತವೆ!
ಗಲ್ಲಾದಲ್ಲಿ  ಕುಂಬಳಕಾಯಿಗಳಿಗೆ ಬೆಲೆ ನಿರ್ಣಯಿಸುವ ರೀತಿ  ವಿಚಿತ್ರವೆನಿಸುತ್ತದೆ.  


ಪ್ರತ್ಯೇಕವಾದ ಟೇಬಲ್ (pricing table) ಮೇಲೆ ಒಂದೊಂದು ಕಾಯನ್ನೂ ಕೂರಿಸಿ, ಅದರ ಸುತ್ತಳತೆಗೆ ತಕ್ಕಂತೆ ಬೆಲೆ ನಿರ್ಣಯಿಸಲ್ಪಡುತ್ತದೆ!
ಕುಂಬಳಕಾಯಿ ಕಾಲದಲ್ಲಿ ಸೂಪರ್ ಮಾರ್ಕೆಟ್ಗಳಲ್ಲಿ  ಮಾರಾಟವಾಗುವ ಎಲ್ಲ ತಿಂಡಿ
ತಿನಿಸುಗಳಲ್ಲೂ  ಕುಂಬಳಕಾಯಿಯೇ ಪ್ರಧಾನ ಪದಾರ್ಥವಾಗಿದೆ. ಪಂಪ್ಕಿನ್ ಬ್ರೆಡ್, ಪಂಪ್ಕಿನ್ ಕೇಕ್, ಪಂಪ್ಕಿನ್ ಕುಕ್ಕಿ, ಪಂಪ್ಕಿನ್ ಪೈ, ಪಂಪ್ಕಿನ್ ಸೂಪ್ ಇನ್ನೂ ಎಷ್ಟೋ ಪದಾರ್ಥಗಳು! ಸ್ಟಾರ್ ಬಕ್ಸ್ ಕಾಫಿ ಶಾಪಲ್ಲಿ ಪಂಪ್ಕಿನ್ ಲಾಟ್ಟೆ  ಎಂಬ ಪೇಯ ಸಹ ದೊರಕುತ್ತದೆ ಎಂದರೆ ಕುಂಬಳಕಾಯಿಯ ವಿಶಾಲವಾದ  ವ್ಯಾಪಕವನ್ನು ಏನೆಂದು ಹೇಳುವುದು? ಇಷ್ಟೆಲ್ಲಾ ದೊರಕಿದರೂ ಕುಂಬಳಕಾಯಿ ಹಬ್ಬಕ್ಕೆ ಆಗಮಿಸಿದವರೆಲ್ಲಾ  ಕೈಬಂಡಿಯ ತುಂಬ ಕುಂಬಳಕಾಯಿಗಳನ್ನು ಕೊಂಡುಕೊಂಡೇ ಹೋಗುತ್ತಾರೆ! ಕೊಂಡೊಯ್ದ ಕುಂಬಳಕಾಯಿಗಳನ್ನು ಸುಂದರವಾಗಿ ಕೆತ್ತಿ ಹ್ಯಾಲೋವೀನ್ ಸಮಯ ಅವುಗಳಲ್ಲಿ ದೀಪಗಳನ್ನು ಹಚ್ಚಿಟ್ಟು, ಆ ಜಾಕ್ ಆ ಲ್ಯಾಂಟರ್ನ್ ಗಳನ್ನು  ಮನೆಯ ಮುಂದೆ ಅಲಂಕಾರವಾಗಿ ಇಡುತ್ತಾರೆ! 
ಸುಂದರವಾದ ವಪ್ಪಟ್ಟೂ ದ್ವೀಪದಲ್ಲಿ ನಾವು  ಕಂಡ ಕುಂಬಳಕಾಯಿ ಹಬ್ಬ ನಿಜಕ್ಕೂ ಬಹಳ ಮೋಜಿನ ಹಬ್ಬವೇ ಆಗಿತ್ತು!

No comments:

Post a Comment