Sunday, April 20, 2014

Kaayi Kadubina Kathe/ಕಾಯಿ ಕಡುಬಿನ ಕಥೆ - The Dumpling Story

ಕಾಯಿ ಕಡುಬಿನ ಕಥೆ - ಬಾಗ ೧

ಕಾಯಿ ಹೂರಣದ ಘಮ ಘಮ ಇಡೀ ಮನೆಯನ್ನೇ ಆವರಿಸಿತ್ತು. ಸುಕ್ಕು ಮಾಡಿಕೊಂಡ ಮೂಗಿನಿಂದ  ಆ ಸ್ವಾಧವನ್ನು  ಹೀರುತ್ತ ಅಡುಗೆ ಮನೆಯ ಕಡೆ ಓಡಿದಳು ಪುಟ್ಟಿ .  

" ಅಜ್ಜಿ !  ಏನ್ ಮಾಡ್ತಿದ್ದೀಯ ? ಘಮ ಘಮಾಂತ ಸೀ ತಿಂಡಿ ವಾಸ್ನೆ ಬರ್ತಿದೆ !" 

" ಬಂದ್ಬಿಟ್ಯಾ  ವಾಸ್ನೆ ಹಿಡ್ಕೊಂಡು ?! ಕಾಯಿ   ಕಡುಬು ಮಾಡ್ತಿದ್ದೀನಿ ಪುಟ್ಟಿ ! ನಿನ್ಗೆ  ತುಂಬಾ ಇಷ್ಟ ಅಲ್ವ ?" ಅಜ್ಜಿ  ಕಾಯಿ ಹೂರಣವನ್ನು ಪುಟ್ಟ ಕಣಕದ ಬಟ್ಟಲಿಗೆ  ತುಂಬಿ, ಬಟ್ಟಲಿನ ತುದಿಗಳನ್ನ ಎಳೆದು ಸೇರಿಸಿ  ಮುಚ್ಚಿದಳು . 

"ಹಾ ! ಸಿಹಿ ಸಿಹಿ ಕಾಯಿ ಕಡುಬು ! ನಾನೂ ಮಾಡ್ತಿನಜ್ಜಿ !" ಪುಟ್ಟಿ ಉತ್ಸಾಹದಿಂದ ಅಜ್ಜಿಯ ಜೊತೆ ಕುಳಿತು ತಾನೂ ಕಡುಬು ಮಾಡಲು ಮುಂದಾದಳು . 

ಪುಟ್ಟಿ ಹೂರಣವನ್ನ ಕಣಕದ ಬಟ್ಟಲಿಗೆ ತುಂಬಿ ಕಡುಬು ಮಾಡಿ ಅಜ್ಜಿಗೆ ತೋರಿಸಿ  " ಅಜ್ಜಿ ! ನನ್ ಕಡುಬು ರೆಡಿ !" ಎಂದಳು . 

"ಇದು ಉಂಡೆ ಆಯ್ತಲ್ಲಾ ! ಹೂರಣ ಒಳಗೆ ಸೇರ್ಸಿ, ಕಣಕದ ಬಟ್ಟಲ ತುದಿಗ್ಳನ್ನ  ಒಟ್ಟಿಗೆ ಸೇರ್ಸಿ ಜಿಗುಟಿ  ಒಂದು ಮೂಗು ಇಟ್ರೆ , ಆವಾಗ ಅದು ಕಡುಬು !" 

"ಕಡುಬಿಗೇಕೆ ಮೂಗು ಇರ್ಬೇಕು ಅಜ್ಜಿ ?" ಸ್ವಾರಸ್ಯದಿಂದ ಕಣಕದ ತುದಿಗಳನ್ನ ಒಟ್ಟಿಗೆ  ಸೇರಿಸಿ ಜಿಗುಟಿ ತನ್ನ ಕಡುಬಿಗೆ  ಮೂಗನ್ನು ರಚಿಸುತ್ತ ಪ್ರಶ್ನಿಸಿದಳು   ಪುಟ್ಟಿ .

"ಅದೇಕೋ, ಅದೇನ್ ಕಥೆಯೋ ನಾ ಕಾಣೆ ! ಆದ್ರೆ ನಿನ್ ಹಾಗೆ ಒಬ್ಬ ಪುಟ್ ಹುಡುಗಿ 'ಕಡುಬಿಗೆ ಮೂಗು ಉಂಟೇ' ಅಂತ ಅವಳ ಅಮ್ಮನ್ನ ಕೇಳಿದ್ಳಂತೆ ! ಆ ಕಥೆ ಮಾತ್ರ   ನನಗ್ಗೊತ್ತು  !"

" ಆಹಾ  ! ಕಥೆ ! ಕಡುಬಿನ ಕಥೆ ! ಇದೂ ನಿಮ್ ತಾತ ಹೇಳಿದ್ ಕಥೆಯೇ ಅಜ್ಜಿ ? " ಬಲು  ಖುಷಿಯಿಂದ ಕೇಳಿದಳು ಪುಟ್ಟಿ . 

"ಹುಮ್ ! ನನ್ ಮೆಡ್ರಾಸ್ ತಾತ ಹೇಳಿದ್ ಕಥೆ !"
  
" ಹೇಳಜ್ಜಿ ! ಈಗಲೇ ಹೇಳು  !" ಒತ್ತಾಯ ಮಾಡಿದಳು ಪುಟ್ಟಿ . 

ಅಜ್ಜಿ  ಮಾಡಿದ ಕಡುಬುಗಳನ್ನು ಹಬೆಯಲ್ಲಿಟ್ಟು ಬಂದು ಪುಟ್ಟಿಯ ಸಮೀಪ ಕುಳಿತಳು .   

"ಕಾಯಿ ಕಡುಬಿನ ಕಥೆ ! ಹೇಳುವೆ ! ಕೇಳು !"ಕಥೆ ಪ್ರಾರಂಭವಾಯಿತು . 


   ಒಂದಾನೊಂದು ಕಾಲದಲ್ಲಿ  ಗುಣವತಿಯಾದ ಒಬ್ಬ ತಾಯಿ  ಇದ್ದಳಂತೆ. 


ಅವಳಿಗೆ ಜಾಣಮರಿಯಾದ ಒಬ್ಬ ಮಗಳು  ಮತ್ತು 


ತುಂಟಮರಿಯಾದ ಮತ್ತೊಬ್ಬ ಮಗಳೂ  ಇದ್ದರಂತೆ . 


ಒಂದಾನೊಂದು ದಿವಸ ರುಚಿ ರುಚಿಯಾದ ಹತ್ತು ಕಾಯಿ ಕಡುಬುಗಳನ್ನು ಮಾಡಿ ಡಬ್ಬಿಗೆ ಹಾಕಿಟ್ಟಳು  ಅಮ್ಮ . 

'ಹುಡುಗಿಯರೇ ! ನಾನು ಹಣ್ಣು ತರಲು ಅಂಗಡಿಗೆ ಹೋಗುತ್ತಿರುವೆ  . ರಾತ್ರಿಯ ಪೂಜೆಗಾಗಿ ಕಾಯಿ ಕಡುಬು ಮಾಡಿಟ್ಟಿರುವೆ  . ನಾನು ಬರುವುದರಲ್ಲಿ ಅದನ್ನ ತಿಂದೀರಾ ! ಹುಷಾರ್  !' ಎಂದು ಎಚ್ಚರಿಸಿ ಹೊರಟು  ಹೋದಳು  . 

ಬಲವಾಗಿ ತಲೆದೂಗಿ ಆಟವಾಡಲು  ಹೊರಟರು ಹುಡುಗಿಯರು . 


ಮಧ್ಯಾಹ್ನದ ಉರಿ ಬಿಸಿಲಿನ ಬೇಗೆಯನ್ನ   ಸಹಿಸಲಾರದ ತುಂಟಮರಿ,  ಮಡಿಕೆಯಲ್ಲಿದ್ದ  ತಣ್ಣನೆಯ ನೀರನ್ನು  ಕುಡಿಯಲೆಂದು ಅಡುಗೆ ಮನೆಯನ್ನು  ಹೊಕ್ಕಳು. ಅಡುಗೆ ಮನೆಯಲ್ಲಿದ್ದ ಸಿಹಿ ತಿಂಡಿಯ ಘಮ ಘಮ ಅವಳ ಬಾಯಲ್ಲಿ ನೀರೂರಿಸಿತು !


"ಆಮೇಲೆ ಏನಾಯ್ತು ಗೊತ್ತೇ ?" ಎಂದಳು ಅಜ್ಜಿ .