Sunday, September 27, 2015

ಎಲೆಲೇ ಕಪ್ಪು ಹಂಸವೇ !

ಎಲೆಲೇ  ಕಪ್ಪು ಹಂಸವೇ !




ಎಂದಿನಂತೆ ಸಿಡ್ನಿ ನಗರದ  ಉಪವನದಲ್ಲಿ ವಿಹಾರ ಮಾಡುತ್ತ, ವಿಶಾಲವಾದ  ಸರೋವರವನ್ನು ತಲುಪಿದೆವು. ನೀರ ಹಕ್ಕಿಗಳ ಆ ಶರಣಾಲಯದಲ್ಲಿ ನೆರೆದಿದ್ದ ವಿವಿಧ ಹಕ್ಕಿಗಳನ್ನು ವೀಕ್ಷಿಸುತ್ತ ನಿಂತಾಗ, ಸರೋವರದ ದೂರದ ತುದಿಯಿಂದ  ಎರಡು ಕಪ್ಪು ಬೊಟ್ಟುಗಳು   ನಿಧಾನವಾಗಿ ಈಸಿ ಬರುತ್ತಿರುವುದು ಕಂಡಿತು. ಆ ಚುಕ್ಕಿಗಳು ಬರು  ಬರುತ್ತಾ ದೊಡ್ಡದಾಗುತ್ತಲೇ ಹೋಗಿ, ಕಡೆಗೊಮ್ಮೆ ಸನಿಹಕ್ಕೆ ಬಂದವು.  
"ಬ್ಲ್ಯಾಕ್ ಸ್ವಾನ್ ! ಕಪ್ಪು ಹಂಸ!" ಎಂದು ನಾನು ಉದ್ಗರಿಸಿಯೇಬಿಟ್ಟೆ!


ಬ್ಯಾಲರೀನ ಸುಂದರಿಯ ಕಪ್ಪು ಮಖಮಲ್ಲಿನ ಫ್ರಾಕಿನಂತೆ ಮಿರಿ ಮಿರಿ ಹೊಳೆವ ಕಪ್ಪು ಗರಿಗಳು - 
 ಹೆಡೆ ಎತ್ತಿದ ಹಾವಿನಂತೆ  ಆಕಾರದ ಉದ್ದ ಕೊರಳು - 
ಲಿಪ್  ಸ್ಟಿಕ್ ಹಚ್ಚಿದಂತಹ  ಕೆಂಪು ಚುಂಚು -
ಅದರ ಮೇಲೆ ಅಡ್ಡವಾಗಿ ಒಂದು ಬಿಳಿಯ ಗೆರೆ-
ಕಪ್ಪು ಚುಕ್ಕಿಯಿಟ್ಟ  ಗುಲಗಂಜಿಯಂತಹ ಮಣಿ ಕಣ್ಣುಗಳು - 
ಬಿಂಕ ಬಿನ್ನಾಣಗಳನ್ನು ತೋರುತ್ತ ಅವು ನಮ್ಮನ್ನು ಹಾದು  ಹೋದಾಗ, ನಮ್ಮ ಮನಸ್ಸೂ  ಅವುಗಳ ಹಿಂದೆ ಹಿಂದೆಯೇ!
ನಿರ್ದಿಷ್ಟ ಜಾಗಗಳಲ್ಲಿ ವಾಸಿಸದೆ, ಮಳೆಗಾಲದಲ್ಲಿ ಮತ್ತು ಬರಗಾಲದಲ್ಲಿ ತಮಗೆ  ಅನುಕೂಲವಾದ ಸ್ಥಳಗಳಿಗೆ ವಲಸೆ ಹೋಗುವ ಕಪ್ಪು ಹಂಸ ಪಕ್ಷಿಗಳು  ಅಲೆಮಾರಿ ಹಕ್ಕಿಗಳು.  ಆಸ್ಟ್ರೇಲಿಯ ದೇಶದ ಸ್ಥಳೀಯ ಹಕ್ಕಿಯಾದ ಕಪ್ಪು ಹಂಸ ಆಸ್ಟ್ರೇಲಿಯದ ನೈಋತ್ಯ ಮತ್ತು ಪೂರ್ವ ದಿಕ್ಕಿನ ಕರಾವಳಿಗಳಲ್ಲಿ ಮತ್ತು ಒದ್ದೆ ನೆಲಗಳಲ್ಲಿ ಬಹಳವಾಗಿ ಕಾಣಿಸಿಕೊಳ್ಳುತ್ತವೆ.
 ಕಪ್ಪು ಹಂಸ, ಆಸ್ಟ್ರೇಲಿಯ ಖಂಡದ ಮೂರರಲ್ಲಿ ಒಂದು ಬಾಗವಿರುವ  ಪಶ್ಚಿಮ ಆಸ್ಟ್ರೇಲಿಯದ 'ಸ್ಟೇಟ್  ಬರ್ಡ್' ಆಗಿದೆ. ರಾಜ್ಯದ ದ್ವಜವನ್ನು ಅಲಂಕರಿಸುವ  ಲಾಂಚನವಾಗಿ  ಕಪ್ಪು ಹಂಸ   ವಿಶಿಷ್ಟ ಸ್ಥಾನ ಪಡೆದಿದೆ.  
 ಕಡಲ ಹಿನ್ನೀರಿನ ಸರೋವರಗಳು, ಕೆಸರು ತುಂಬಿದ ನೀರನೆಲೆಗಳು, ಮತ್ತು ತಾಜಾ ನೀರಿನ ಸರೋವರಗಳೂ ಇವುಗಳ  ವಾಸಸ್ಥಾನ. ಚಳಿಗಾಲದಲ್ಲಿ ಇವು ಗೂಡು ಕಟ್ಟಿ, ಮೊಟ್ಟೆಯಿಟ್ಟು ಮರಿ ಮಾಡುತ್ತವೆ.



 

 ತಲೆ ಎತ್ತಿ ನಿಂತರೆ ಸುಮಾರು ನಾಲ್ಕು ನಾಲ್ಕೂವರೆ ಅಡಿಗಳಷ್ಟು ಎತ್ತರವಿರುವ ಈ ಹಕ್ಕಿಯ ತೂಕ ಸುಮಾರು ಮೂರರಿಂದ ಒಂಬತ್ತು ಕೆಜಿಯಷ್ಟು ಇರುತ್ತದೆ. ಬಿಚ್ಚಿದ ರೆಕ್ಕೆಗಳ ಎರಡು ತುದಿಗಳ ನಡುವಿನ ಅಂತರ ಐದರಿಂದ ಆರು ಅಡಿಗಳವರೆಗೂ  ಇರುತ್ತದೆ! ಈ ಬೃಹದಾಕಾರದ ಹಕ್ಕಿ ಸಸ್ಯಾಹಾರಿ ಅಂದರೆ ಆಶ್ಚರ್ಯವಲ್ಲವೇ? ನೀರಿನಲ್ಲಿರುವ ಪಾಚಿ ಮತ್ತು ಜಲಕಳೆಗಳೇ ಇವುಗಳ ಆಹರ. ಗದ್ದೆಗಳಲ್ಲಿ ಹುಲ್ಲು ಮತ್ತು ಕಳೆಗಳನ್ನೂ  ಮೇಯುವುದುಂಟು. 





ಮಾರ್ಚ್ ತಿಂಗಳಲ್ಲಿ ಸಿಡ್ನಿ ತಲುಪಿ, ತಪ್ಪದೇ ಅನುದಿನವೂ ಪಾರ್ಕಿನಲ್ಲಿ ವಿಹಾರ ಮಾಡುವುದನ್ನು ರೂಡಿಸಿಕೊಂಡಿದ್ದ ನಮಗೆ, ಒಂದೇ ವಾರದಲ್ಲಿ ಜೋಡಿ ಕಪ್ಪು ಹಂಸಗಳನ್ನು ಕಾಣುವ ಅದೃಷ್ಟ ದೊರಕಿತು.ಚಳಿಗಾಲ ಪ್ರಾರಂಭವಾಗುತ್ತಿದ್ದ ಹಾಗೆಯೇ, ಕಪ್ಪು ಹಂಸಗಳ ಸಂಕ್ಯೆ  ಕೂಡಿಕೊಂಡೇ ಹೋಗಿ, ಸರೋವರವೇ ಕಪ್ಪು ಹಂಸಗಳ ಬಡಾವಣೆಯಾಗಿ ಹೋಗಿತ್ತು. ನಮ್ಮ ಕಣ್ಣುಗಳಿಗಂತೂ ಹಬ್ಬವೇ ಹಬ್ಬ! 





ಅಕ್ಟೋಬರ್ ತಿಂಗಳ ಕೊನೆಯಲ್ಲಿ ನಾವು ಹಿಂದಿರುಗುವ ಸಮಯ, ಕಪ್ಪು  ಹಂಸಗಳೂ ವಿದಾಯ ಹೇಳಿ ತಮ್ಮ ಬಿಡಾರ ಖಾಲಿ ಮಾಡ ತೊಡಗಿದವು. ನಾವು ಹೊರಡಲಿದ್ದ ಹಿಂದಿನ ದಿನ ನೀರ ಹಕ್ಕಿಗಳ ಶರಣಾಲಯಕ್ಕೆ ತೆರಳಿ, ಕೊನೆಯದಾಗಿ ಉಳಿದಿದ್ದ ಒಂದು ಕಪ್ಪು ಹಂಸ ಜೋಡಿಗೆ ವಿದಾಯ ಹೇಳಿದಾಗ ಮನಸ್ಸು ಕಸಿವಿಸಿಗೊಂಡಿತು.ಇನ್ನು ಈ ಸುಂದರವಾದ ಕಪ್ಪು ಹಂಸಗಳನ್ನು ಮತ್ತೆ ಕಾಣುವುದೆಂದೋ? ಹಾತೊರೆದ ಮನದಲ್ಲಿ ಹೊಮ್ಮಿದ ಸಾಲುಗಳು ಇವು-

ಎಲೆಲೇ ಕಪ್ಪು ಹಂಸವೇ !
ಲೋಹದ ಹಕ್ಕಿಯ ಬೆನ್ನೇರಿ ಲೋಕವೆಲ್ಲ ತಿರುಗಿದರೂ 
ಎಲ್ಲೆಲ್ಲಿಯೂ ಕಾಣಸಿಗದ   ಕಪ್ಪು ಹಂಸವೇ !
ಆಸ್ಟ್ರೇಲಿಯ ಖಂಡವನ್ನು ನೈಸರ್ಗಿಕ ಮನೆಯಾಗಿ 
ಆಯ್ದುಕೊಂಡ ಮರ್ಮವೇನೋ ಹೇಳೆ ಸುಂದರಿಯೇ !
ಮನದಾಳದ ಸೆರೆಯಲ್ಲಿ ಮನವೊಲಿಸಿ ಕುಳಿತುಬಿಟ್ಟೆ !
ಮನಸೆಳೆವ  ಮೋಹಕ ಕಪ್ಪು ಹಂಸವೇ !
ಮತ್ತೆ ಮತ್ತೆ ತಲೆಯೆತ್ತಿ ಮನಸನೇಕೆ ಕಾಡುತಿಹೆ 
ಮುದ್ದಿನ ಹಂಸವೇ !ಎಲೆಲೇ  ಕಪ್ಪು ಹಂಸವೇ!
   
ಛಾಯಾಗ್ರಹಣ :ಎಸ್. ಆರ್. ರಾಮಚಂದ್ರನ್