ಮುಷ್ಕರ
ಘಾಡ ನಿದ್ರೆಯಲ್ಲಿದ್ದ ಸಾತ್ವಿಕ್ ಇದ್ದಕ್ಕಿದ್ದಂತೆ ಯಾರೋ ಗುಸು ಗುಸು ಮಾತನಾಡುವ ಶಬ್ದ ಕೇಳಿ ಎಚ್ಚರಗೊಂಡನು. ಹೊಟ್ಟೆಯಲ್ಲಿ ಹಸಿವು ಚುರುಗುಟ್ಟಿತು. ಎಲ್ಲೆಲ್ಲೂ ಕತ್ತಲು ಆವರಿಸಿತ್ತು. ಮತ್ತೆ ಅದೇನೋ ಶಬ್ದವಾದಂತೆ ಅನ್ನಿಸಿತು! ಸಾತ್ವಿಕ್ ಸದ್ದಿಲ್ಲದೆ ಎದ್ದು ಶಬ್ದ ಬಂದ ದಿಕ್ಕನ್ನು ಕುರಿತು ಮೆಲ್ಲನೆ ನಡೆದನು. ಅಡುಗೆ ಮನೆಯ ಬಾಗಿಲ ಬಳಿ ಬಂದು ನಿಂತನು! ಗುಸು ಗುಸು ಸದ್ದು ಈವಾಗ ಸ್ಪಷ್ಟವಾಗಿಯೇ ಕೇಳಿಸಿತು!
"ಇನ್ನು ಮುಂದೆ ನಾನು ಈ ಮನೆಯಲ್ಲಿ ಇರಲಾರೆ! ನಾನು ಹೊರಟು ಹೋಗ್ತೀನಿ !"
ಅರೆ! ಇದು ಯಾರ ದ್ವನಿ? ವಿಚಿತ್ರವಾಗಿದೆಯಲ್ಲಾ? ಸಾತ್ವಿಕ್ ಮೆಲ್ಲನೆ ಬಾಗಿಲು ಸರಿಸಿ ಒಳಗೆ ಇಣುಕಿದ. ಅಕ್ಕಿ ಇದ್ದ ಪ್ಲಾಸ್ಟಿಕ್ ಮೂಟೆಯಿಂದ ಬರುತ್ತಿತ್ತು ಆ ವಿಚಿತ್ರ ದನಿ!
"ಅಕ್ಕಿ ಅಣ್ಣ! ನಿನಗೇನಾಗಿದೆ? ಅದ್ಯಾಕೆ ಇಷ್ಟು ಕೋಪ? "
ಹಾ! ಈಗ ಸಕ್ಕರೆ ಡಬ್ಬಿ ಮಾತನಾಡುತ್ತಿದೆಯಲ್ಲಾ!
"ಅದೇ ಮತ್ತೆ! ಸ್ವಚ್ಚವಾದ ಅಡುಗೆಮನೆ! ಸ್ವಚ್ಚವಾದ ಡಬ್ಬಿಯಲ್ಲಿ ನಾವು! ಅದೂ ಅಲ್ದೆ ಅಪ್ಪ ಅಮ್ಮ ಎಷ್ಟು ಒಳ್ಳೆಯವರು! ಸುಖವಾಗಿರೋದು ಬಿಟ್ಟು .."
ಬೇಳೆಯ ಮಾತು ಕೇಳಿ ಅಕ್ಕಿಗೆ ರೋಷ ಉಕ್ಕಿತು.
"ಅವರೇನೋ ಒಳ್ಳೆಯವರೇ! ಆದ್ರೆ ಆ ಹುಡುಗ ಸಾತ್ವಿಕ್! ನಮಗೆ ಹೇಗೆಲ್ಲ ಅವಮಾನ ಮಾಡ್ತಾನೆ! ನನ್ನ ಆತ್ಮಗೌರವಕ್ಕೆ ಅದೆಷ್ಟು ಧಕ್ಕೆಯುಂಟಾಗಿದೆ ಗೊತ್ತೆ? ಇಲ್ಲೇ ಇದ್ದು ಪ್ರತಿನಿತ್ಯ ನಾವೇಕೆ ಅವಮಾನ ಪಡಬೇಕು ಹೇಳು!" ಎಂದು ಕರುಬಿತು ಅಕ್ಕಿ.
"ಅವಮಾನವೇ? ಯಾವಾಗಾಯಿತು? ಹೇಗಾಯಿತು?" ಬೇಳೆ ಆಶ್ಚರ್ಯದಿಂದ ಕೇಳಿತು.
"ನೀನೊಬ್ಬ ದಡ್ಡ! ನನ್ನನ್ನೂ ನಿನ್ನನ್ನೂ ಸೇರಿಸಿ ಅದೆಷ್ಟು ಚೆನ್ನಾಗಿ ಅಡುಗೆ ಮಾಡ್ತಾಳೆ ಅಮ್ಮ! ಬಾರಿ ಬಾರಿಗೂ ಸಾತ್ವಿಕ್ ನಮ್ಮನ್ನು ಡಸ್ಟ್ ಬಿನ್ನಿಗೆ ಹಾಕಿ ಆಡಕ್ಕೆ ಓಡಿ ಹೋಗ್ತಾನೆ! ನಿನ್ನೆ ರಾತ್ರಿ ಕೂಡ ಊಟದ ತಟ್ಟೆ ತಳ್ಳಿ, ಮುಖ ತಿರಿಗಿಸಿಕೊಂಡು ಮಲಗಿದ! ಅದು ನಮ್ಮನ್ನ ಅಲಕ್ಷ್ಯ ಮಾಡಿದ ಹಾಗಲ್ವಾ?" ಜ್ಞಾಪಿಸಿತು ಅಕ್ಕಿ.
" ಓ! ಹೌದೌದು! ಅಮ್ಮ ಪ್ರೀತಿಯಿಂದ ತಿನ್ನಿಸಕ್ಕೆ ಹೋದಾಗ ತಟ್ಟೆಯನ್ನ ತಳ್ಳಿದ್ದ! ಕೆಳಗೆಲ್ಲ ಅನ್ನ ಚೆಲ್ಲಿ ... " ಬೇಳೆಗೆ ನೆನಪಾಯಿತು.
ಅದೇ ಸಮಯ ರೆಫ್ರಿಜಿರೇಟರ್ ಬಾಗಿಲು ದಡ ದಡ ಅದುರಿತು. ಒಳಗಿನಿಂದ ಯಾರೋ ಬಲವಾಗಿ ಬಾಗಿಲನ್ನು ತಟ್ಟಿ ತೆರೆಯಲು ಯತ್ನಿಸಿದರು. ಸಮೀಪದ ಕಪಾಟಿನಿಂದ ಎಗರಿ ಬಂದ ಸಕ್ಕರೆ ಡಬ್ಬಿ ಬಾಗಿಲನ್ನು ತೆರೆಯಿತು.
"ಒಳಗಿಂದ ಎಲ್ಲ ಕೇಳಿಸಿಕೊಂಡೆ! ಅಕ್ಕಿ ಅಣ್ಣ ಹೇಳಿದ್ದೆಲ್ಲ ಸತ್ಯವಾದ ಮಾತು. ನೆನ್ನೆ ಅಮ್ಮ ನನ್ನನ್ನ ಹದವಾಗಿ ಕಾಯಿಸಿ ಸಕ್ಕರೆ ಸೇರಿಸಿ ಲೋಟಕ್ಕೆ ಹಾಕಿಟ್ಟು ಸಾತ್ವಿಕನನ್ನು ಕರೆದಳು. ಸುಮಾರು ಹೊತ್ತಿನ ಮೇಲೆ ಬಂದು, ಸೊಳ್ಳೆ ಬಿದ್ದಿದೆ ಅಂತ ನನ್ನನ್ನ ಸಿಂಕಲ್ಲಿ ಚೆಲ್ಲಿದ ಆ ಸಾತ್ವಿಕ್. ನನಗೆ ಎಷ್ಟು ಬೇಸರವಾಯಿತು ಗೊತ್ತೇ?" ಫ್ರಿಡ್ಜಿನಿಂದ ಹೊರ ಬಂದ ಹಾಲಿನ ಪ್ಯಾಕೆಟ್ ಕಣ್ಣೀರಿಕ್ಕಿತು.
ಫ್ರಿಡ್ಜ್ ನ ತೆರೆದ ಬಾಗಿಲಿನಿಂದ ಕ್ಯಾರಟ್, ಬೀನ್ಸ್, ಟೊಮೇಟೊ, ಸೌತೆಕಾಯಿ ಮೊದಲಾಗಿ ಎಲ್ಲ ತರಕಾರಿಗಳೂ ಹಣ್ಣುಗಳೂ ಹೊರಕ್ಕೆ ಜಿಗಿದವು.
"ಹೌದು! ನಮ್ಮನ್ನ ಕಂಡರೂ ಆ ಹುಡುಗ ಮುಖ ಸಿಂಡರಿಸಿಕೊಂಡು ದೂರ ತಳ್ತಾನೆ!" ಎಂದು ಒಕ್ಕೊರಲಿನಲ್ಲಿ ಕೂಗಿದವು.
"ಅಮ್ಮ ಹೇಳೋ ಹಾಗೆ, ಈ ಪ್ರಪಂಚದಲ್ಲಿ ನಮಗಾಗಿ ಹಂಬಲಿಸೊ ಜನ ಎಷ್ಟು ಮಂದಿ ಇದ್ದಾರೆ! ಅವರನ್ನೆಲ್ಲ ಬಿಟ್ಟು ಇಲ್ಲಿ ಕೂತು ನಾವು ಅವಮಾನ ಪಡ್ತಿದ್ದೀವಿ!" ಗಂಭೀರ ದನಿಯಲ್ಲಿ ನುಡಿಯಿತು ಗೋದಿ ಹಿಟ್ಟು.
"ನಾನೂ ಸಹ ಮೂರು ದಿವಸಗಳಿಂದ ಈ ಬಾಕ್ಸಲ್ಲೇ ಕೂತಿದ್ದೀನಿ. ಪ್ರತಿ ದಿನ ಸಾತ್ವಿಕನ ಟೀ ಬಾಕ್ಸಲ್ಲಿರಬೇಕಾದವನು ನಾನು. ಆದರೆ ನನ್ನ ಕಡೆ ಆತ ಕಣ್ಣೆತ್ತಿಯೂ ನೋಡೋದಿಲ್ಲ. ಇವತ್ತೋ ನಾಳೆಯೋ, ಜಾಮ್ ಹಚ್ಚಿಕೋ ಬೇಕಾದ ಮೈಯಲ್ಲಿ ಬೂಷಲು ಹಿಡಿದು ಕಸದ ಬುಟ್ಟಿಯ ಪಾಲಾಗ್ತಿನಿ! ಎಂತಹ ಯೂಸ್ಲೆಸ್ ಜೀವನ ನನ್ನದು! ಎಲ್ಲ ನನ್ನ ಹಣೆ ಬರಹ!" ಗೊಳೋ ಎಂದು ರೋಧಿಸಿತು ಬ್ರೆಡ್.
"ಮುಠ್ಠಾಳನ ಹಾಗೆ ಅಳಬೇಡ! ನಾವೆಲ್ಲಾ ಒಗ್ಗಟ್ಟಾಗಿದ್ದು ಆ ತಲೆಹರಟೆ ಹುಡುಗನ ಸೊಕ್ಕು ಮುರೀಬೇಕು! ಅಮ್ಮ ಅವನಿಗೆ ಹೇಳೋ ಹಾಗೆ ಸ್ವಲ್ಪ ದಿವಸ ಹಸಿದ್ಕೊಂಡು ಇದ್ರೇನೇ ಅವನಿಗೆ ನಮ್ಮ ಮಹಿಮೆ ಅರ್ಥವಾಗೋದು!'' ಖಾರವಾಗಿ ಸಿಡಿಯಿತು ಒಣ ಮೆಣಸು.
"ಒಣ ಮೆಣಸು ಹೇಳೋದೆ ಸರಿ! ಒಗ್ಗಟ್ಟಿನಿಂದ ಇರೋಣ! ಒಟ್ಟಿಗೆ ಹೊರಡೋಣ!" ಒಗ್ಗರಣೆ ಡಬ್ಬಿಯ ಮಸಾಲೆಗಳೆಲ್ಲ ಎಗರಾಡಿದವು.
"ಈ ಮಾನವರ ಆರೋಗ್ಯಕ್ಕಾಗಿ ನಾವು ನಮ್ಮ ಇಡೀ ಜನ್ಮವನ್ನ ಮೀಸಲಾಗಿಡ್ತೀವಿ! ಬದಲಿಗೆ ನಾವು ನ್ಯಾಯವಾಗಿ ಕೇಳೋದು ಏನು? ಒಂದಿಷ್ಟು ಗೌರವ! ಅಷ್ಟೇ ಅಲ್ವೇ? ನಮಗೆ ನ್ಯಾಯ ಸಿಕ್ಕದ ಕಡೆ ನಾವಿರೋದು ಸರಿ ಇಲ್ಲ! ಹೊರಡಿ ಎಲ್ಲ!" ಅಲ್ಲಿಯವರೆಗೆ ಮೌನವಾಗಿದ್ದ ಹುಣಸೆಹಣ್ಣು ಆಜ್ಞಾಪಿಸಿತು.
"ಬೇಕೇ ಬೇಕು!" ಕೋಪದಿಂದ ಕೂಗಿತು ಅಕ್ಕಿ.
"ನ್ಯಾಯ ಬೇಕು!" ಇತರ ದಿನಸಿಗಳು ಘೋಷಿಸಿದವು.
"ಏನೇ ಬರಲಿ!" ಒಣ ಮೆಣಸು ಕಿರಿಚುತ್ತ ಎಗರಿತು.
"ಒಗ್ಗಟ್ಟಿರಲಿ!" ದಿನಸಿಗಳ ಘೋಷಣೆ ಸಾತ್ವಿಕನ ಕಿವಿಗಳನ್ನು ತೂತು ಮಾಡಿತು.
"ದಿನಸಿಗಳು.... "
"ಜಿಂದಾಬಾದ್!"
"ತರಕಾರಿ ಹಣ್ಣುಗಳು...."
"ಜಿಂದಾಬಾದ್!"
"ತರಕಾರಿ ಹಣ್ಣುಗಳು...."
"ಜಿಂದಾಬಾದ್!"
"ಹಾಲು ಮೊಸರು .... "
"ಜಿಂದಾಬಾದ್!"
ಘೋಷಿಸುತ್ತಲೇ ಅಕ್ಕಿ ಮೂಟೆ ತೆರೆದಿದ್ದ ಕಿಟಕಿಯ ಮೂಲಕ ಹೊರಕ್ಕೆ ಹಾರಿತು.
ದಿನಸಿಗಳ ಡಬ್ಬಿಗಳೂ ತರಕಾರಿ ಹಣ್ಣುಗಳೂ ಆಕ್ರೋಶದಿಂದ ಅಕ್ಕಿಯನ್ನು ಹಿಂಬಾಲಿಸಿದವು!
ನೋಡುತ್ತಿದ್ದ ಸಾತ್ವಿಕನಿಗೆ ಎದೆ ಜಲ್ಲೆಂದಿತು. ತಡೆಯಲಾರದ ಹಸಿವು ಹೊಟ್ಟೆಯನ್ನು ಕಿವಿಚಿತು. 'ಅಯ್ಯೋ! ಹಸಿವು ತಡೆಯಕ್ಕೆ ಆಗ್ತಿಲ್ಲ! ಇವೆಲ್ಲ ಹೀಗೆ ಹೊರಟು ಹೋದ್ರೆ ತಿನ್ನಕ್ಕೆ ಏನು ಮಾಡೋದು?'
"ಅಯ್ಯೋ! ತಡೆಯಿರಿ ಪ್ಲೀಸ್! ಪ್ಲೀಸ್ ನಿಲ್ಲಿ! ನನಗೆ ತುಂಬ ಹಸಿವಾಗ್ತಿದೆ! ಪ್ಲೀಸ್ ಹೋಗ್ಬೇಡಿ!"
ಸಾತ್ವಿಕ್ ಎಷ್ಟು ಬೇಡಿಕೊಂಡರೂ ಲಕ್ಷಿಸದೆ ದಿನಸಿಗಳೆಲ್ಲ ಒಂದರ ಹಿಂದೆ ಒಂದು ಕಿಟಕಿಯಿಂದ ಹಾರಿ ಮಾಯವಾದವು.
"ಅಮ್ಮ! ಹಸಿವು! ನನಗೆ ತುಂಬಾ ಹಸಿವು!" ಎಂದು ಜೋರಾಗಿ ಅಳ ತೊಡಗಿದ ಸಾತ್ವಿಕ್.
"ಸಾತ್ವಿಕ್! ಏನಾಯಿತು? ಯಾಕೆ ಅಳ್ತಿದ್ದೀಯ? ಕಣ್ಣು ಬಿಟ್ಟು ನೋಡೋ!"
ಅಮ್ಮ ಅವನ ಭುಜಗಳನ್ನು ಹಿಡಿದು ಕುಲುಕಿದಾಗ ಸಾತ್ವಿಕ್ ಧುತ್ ಎಂದು ಎಚ್ಛೆತ್ತು ಕುಳಿತನು.
'ಹಾಗಾದ್ರೆ ನಾನು ಕಂಡಿದ್ದೆಲ್ಲ ಕನಸಾ?'
ಹಾಸಿಗೆಯಿಂದ ಜಿಗಿದು ಅಡುಗೆ ಮನೆಯ ಕಡೆ ಗುಡು ಗುಡು ಓಡಿದನು. ಕಪಾಟಿನ ಸಮೀಪ ಆನಿಸಿಟ್ಟಿದ್ದ ಅಕ್ಕಿ ಮೂಟೆ ಅಲ್ಲೇ ಕುಳಿತಿತ್ತು! ಫ್ರಿಡ್ಜ್ ಬಾಗಿಲನ್ನು ಒರಟಾಗಿ ತೆರೆದು ನೋಡಿದನು.
ಸಧ್ಯ ಹಾಲು ಹಣ್ಣು ತರಕಾರಿ ಜಾಮ್ ಎಲ್ಲ ಹಾಗೆಯೇ ಇದೆ! ಡಬ್ಬಿಯಲ್ಲಿ ಬ್ರೆಡ್ ಸಹ ಇದ್ದ ಹಾಗೇ ಇದೆ!
"ಏನೋ ಹುಡುಕ್ತಿದ್ದೀಯ ?" ವಿಚಾರಿಸಿಕೊಂಡು ಹಿಂದೆಯೇ ಬಂದಳು ಅಮ್ಮ.
"ಎಲ್ಲ ಪ್ರಾವಿಶನ್ ಇದ್ಯಾ ಅಂತ ನೋಡ್ದೆ!" ಎಂದ ಸಾತ್ವಿಕನನ್ನು ಆಶ್ಚರ್ಯದಿಂದ ನೋಡಿದಳು ಅಮ್ಮ.
"ಇಲ್ದೆ ಎಲ್ಲಿಗ್ ಹೋಗತ್ತೆ? "
ಸಾತ್ವಿಕ್ ಮಿಕ ಮಿಕ ಕಣ್ಣು ಬಿಟ್ಟನು.
"ನಿದ್ದೆಯಲ್ಲಿ ಹಸಿವು ಹಸಿವು ಅಂತ ಅಳ್ತಿದ್ದೆ! ನಿನ್ನೆ ಊಟ ಮಾಡ್ದೆ ಮಲಕ್ಕೊಂಡೆ ನೋಡು! ಹೋಗಿ ಬೇಗ ಬ್ರಷ್ ಮಾಡ್ಕೊಂಡು ಬಾ! ಇಡ್ಲಿ ವಡೆ ಸಾಂಬಾರ್ ಮಾಡಿದ್ದೀನಿ! ಬಿಸಿ ಬಿಸಿಯಾಗಿ ತಿನ್ನು!" ನಗುತ್ತ ಹೇಳಿದಳು ಅಮ್ಮ.
"ಅಮ್ಮ ಹಣ್ಣು?"
"ಅದನ್ನೂ ಕಟ್ ಮಾಡಿ ಇಡ್ತೀನಿ! ಬೇಗ ಮುಖ ತೊಳಕೊಂಡು ಬಾ!"
"ಹಾಗೇ ಜಾಮ್ ಹಚ್ಚಿದ ಬ್ರೆಡ್, ಲೋಟದ ತುಂಬ ಸಕ್ಕರೆ ಹಾಕಿದ ಹಾಲು ಎಲ್ಲ ಬೇಕಮ್ಮಾ!" ಎಂದು ಪಟ್ಟಿ ಹಾಕಿ ಬಾತ್ ರೂಮಿನ ಕಡೆ ಓಡಿದ ಸಾತ್ವಿಕನನ್ನು ಕಂಡು "ಎಲ್ಲಾ ಬಕಾಸುರಾ!" ಎಂದು ನಕ್ಕಳು ಅಮ್ಮ.