Wednesday, November 28, 2018

ಪಾದಗಳನ್ನೂ ರಕ್ಷಿಸಿದ ಸುಷೇಣನ! - King Sushena - The Protector Of Feet!

ಪಾದಗಳನ್ನೂ ರಕ್ಷಿಸಿದ ಸುಷೇಣನ!


ನೂರಾರು ವರುಷಗಳ ಹಿಂದೆ ಸುಷೇಣನೆಂಬ ರಾಜನಿದ್ದನು. ಅವನು ಅಮರಧ್ವಜವೆಂಬ ನಾಡಿನ ಅರಸನಾಗಿದ್ದನು. ರಾಜನಿಗೆ ತನ್ನ ಪ್ರಜೆಗಳ ಸುಖ ದುಃಖಗಳ ಬಗ್ಗೆ ಬಹಳ ಕಾಳಜಿ ಇತ್ತು. ಅವರುಗಳ ಸುಖ ಜೀವನಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ತನ್ನ ಮಂತ್ರಿ ಸುಮತಿಯ ಮೂಲಕ ಮಾಡಿಸಿಕೊಟ್ಟನು. ಸುಮತಿ ರಾಜನಿಗೆ ತಕ್ಕ ಮಂತ್ರಿಯಾಗಿದ್ದು ಪ್ರಜಾಹಿತ ಕಾಪಾಡಿಕೊಂಡು ಬಂದನು. 
ಒಮ್ಮೆ ರಾಜನು ತನ್ನ ಮಂತ್ರಿಯನ್ನು ಕುರಿತು '' ಮಂತ್ರಿಗಳೇ! ನಾಡಿನಲ್ಲಿ ಮಳೆ ಬೆಳೆ ಎಲ್ಲ ತೃಪ್ತಿಕರವಾಗಿರುವಂತೆ ಕಾಣುತ್ತದೆ. ಹಾಗಾಗಿ ಪ್ರಜೆಗಳೆಲ್ಲ ಸಂತೋಷದಿಂದಿದ್ದಾರೆ ತಾನೇ? " ಎಂದು ಪ್ರಶ್ನಿಸಿದನು.  
" ಹೌದು ಮಹಾಸ್ವಾಮಿ! ನಿಮ್ಮ ಆದೇಶದಂತೆಯೇ ಪ್ರಜೆಗಳಿಗೆಲ್ಲ ಬೇಕಾದ  ಸೌಲಭ್ಯಗಳನ್ನು ಒದಗಿಸಿ ಕೊಡಲಾಗುತ್ತಿದೆ! ಯಾವ ಕೊರತೆಯೂ ಇಲ್ಲ." ಎಂದು ವಿನಯದಿಂದ ಉತ್ತರಿಸಿದನು ಮಂತ್ರಿ. 
ಆದರೂ ಸುಷೇಣನಿಗೆ ತೃಪ್ತಿ ಇರಲಿಲ್ಲ.  ಪದೇ ಪದೇ ಇದೇ ಬಗೆಯ ಪ್ರಶ್ನೆಯನ್ನು ಕೇಳಿ ಮಂತ್ರಿಯನ್ನು ಕಾಡುತ್ತಿದ್ದನು. 
" ಮಹಾಪ್ರಭು! ನೀವೇಕೆ ಒಂದು ಬಾರಿ ನಗರ ಪ್ರದಕ್ಷಿಣೆ ಮಾಡಿ ಬರ ಬಾರದು? ಪ್ರಜೆಗಳನ್ನು ಸ್ವತಃ ವಿಚಾರಿಸಿಕೊಂಡು ಬರಬಾರದು? " ಎಂದು ತನ್ನ ಬೇಸರವನ್ನು ಮರೆಮಾಚಿಕೊಂಡು ಸಲಹೆ ನೀಡಿದನು ಸುಮತಿ. 
" ಛೆ ಛೆ! ಎಲ್ಲಾದರೂ ಉಂಟೆ? ನೇರವಾಗಿ ಕೇಳಿದರೆ ಸಂಕೋಚದಿಂದಲೋ ಭಯ ಭಕ್ತಿಯಿಂದಲೋ ಸತ್ಯದ ಸಂಗತಿಯನ್ನು ತಿಳಿಸದೇ ಹೋದಾರು! " ಎಂದು ಆ ಯೋಚನೆಯನ್ನು ಅಲ್ಲಗಳೆದನು ಸುಷೇಣ. 
" ಮಾರು ವೇಷದಲ್ಲಿ ಹೋದರೆ? " ಥಟ್ ಎಂದು ಕೇಳಿದನು ಸುಮತಿ ಎಂಬ ಮಂತ್ರಿ. 
ಸುಷೇಣನಿಗೆ ಮಂತ್ರಿಯ ಈ ಯೋಚನೆ ಬಹಳ ಮೆಚ್ಚುಗೆಯಾಯಿತು.  
ಮರು ದಿನವೇ ಮುಂಜಾವಿನಲ್ಲೆದ್ದು ರಾಜ ಮಂತ್ರಿ ಇಬ್ಬರೂ ಮಾರು ವೇಷ ಧರಿಸಿಕೊಂಡು ಅರಮನೆಯನ್ನು ಬಿಟ್ಟು ಹೊರಟರು. 

ದಾರಿಯುದ್ದಕ್ಕೂ ಗದ್ದೆಗಳೂ ಹೂದೋಟಗಳೂ ಹಣ್ಣಿನ ತೋಪುಗಳೂ ಜಾನುವಾರುಗಳೂ ಸಮೃದ್ಧಿಯ ಸಂಕೇತವಾಗಿ ಪುಷ್ಟಿಯಿಂದ ಕಂಗೊಳಿಸಿದವು. 

" ಅಯ್ಯಾ! ಈ ರಾಜ್ಯದಲ್ಲಿ ರೈತರೆಲ್ಲ ಸಂತೋಷದಿಂದ ಇರುವಿರೆ? "  ದಾರಿಯಲ್ಲಿ ಸಿಕ್ಕ ರೈತನನ್ನು ವಿಚಾರಿಸಿದ ಸುಮತಿ. 
" ಆಹಾ! ನಮ್ಮ ದೊರೆಗಳ ದಯೆಯಿಂದ ತುಂಬಾ ಸಂತೋಷದಿಂದ ಇದ್ದೀವಿ! "
" ದೊರೆಗಳಿಂದಲೇ? ಅವರು ಏನು ಮಾಡಿದರು?" ಎಂದು ಪ್ರಶ್ನಿಸಿದ ಮಂತ್ರಿಯನ್ನು ಸ್ವಲ್ಪ ಕೋಪದಿಂದ ತಿವಿದನು ಹಿಂದೆ ನಿಂತಿದ್ದ ಸುಷೇಣ. 
" ಅಕ್ಕಪಕ್ಕದ ರಾಜ್ಯಗಳಲ್ಲಿ ತೆರಿಗೆ ಎಂಬ ಹೆಸರಿನಲ್ಲಿ ರೈತರ ವರಮಾನವನ್ನೆಲ್ಲ ಸುಲಿಗೆ ಮಾಡುತ್ತಾರೆ ಅಯ್ಯ. ಆದರೆ ನಮ್ಮ ದೊರೆಗಳು ನಮ್ಮ ಕಷ್ಟ ನಷ್ಟ ತಿಳಿದುಕೊಂಡು ಅನ್ಯಾಯ ತೆರಿಗೆ ಹಾಕದೆ ನಮ್ಮನ್ನ ಆದರದಿಂದ ನೋಡಿಕೊಳ್ಳುತ್ತಾರೆ! ಉತ್ತಮ ನೀರಾವರಿ ವ್ಯವಸ್ಥೆಯನ್ನೂ ಮಾಡಿದ್ದಾರೆ. "
" ಹೌದೋ? " ಎಂದ ಸುಷೇಣ ಸಂತೋಷದಿಂದ ಹಿಗ್ಗುತ್ತ ಮುನ್ನಡೆದನು. 

ಅಲ್ಲಿಂದ ಮುಂದಕ್ಕೆ ನಡೆದು ದನಗಳು ಮೇಯುತ್ತಿದ್ದ ಹುಲ್ಲುಗಾವಲ ಬಳಿ ಬಂದರು ರಾಜ ಮತ್ತು ಮಂತ್ರಿ.
 " ಓ ಗೋಪಾಲರೇ! ಏನು ಅಷ್ಟು ಖುಷಿಯೋ? ಕೊಳಲೂದುತ್ತ ಕುಳಿತುಬಿಟ್ಟಿರಿ? ಬೇರೆ ಕೆಲಸ ಕಾರ್ಯವಿಲ್ಲವೇ? " ಎಂದು ಮರದ ಕೆಳಗೆ ಕುಳಿತಿದ್ದ ಗೊಲ್ಲನನ್ನು ಪ್ರಶ್ನಿಸಿದನು ಸುಮತಿ. 
 " ಖುಷಿಯೇ ಮತ್ತೆ! ನಮ್ಮ ದೊರೆಗಳು ಒಳ್ಳೆ ಜಾತಿಯ ಹಸುಗಳನ್ನು ಕೊಂಡುಕೊಳ್ಳಲೆಂದೂ  ಅವುಗಳ ಆರೈಕೆಗೆಂದೂ ನಮಗೆ ಮಾನ್ಯ ಕೊಡುತ್ತಾರೆ. ನಮ್ಮ ದನಗಳಿಗೆ ಹುಲ್ಲುಗಾವಲುಗಳಲ್ಲಿ ಒಳ್ಳೆ ಮೇವು ಸಿಕ್ಕಿ ಪುಷ್ಟಿಯಾಗಿವೆ. ಅಕ್ಕ ಪಕ್ಕದ ಊರಿಗೆಲ್ಲ ಸರಬರಾಜು ಆಗುವಷ್ಟು ಸಮೃದ್ಧಿಯಾಗಿ ಹಾಲು ಕೊಡುತ್ತವೆ. ಇನ್ನೇನು ಬೇಕು ಹೇಳಿ! " ಕೊಳಲೂದುವುದನ್ನು ನಿಲ್ಲಿಸಿ ಹೀಗೆ ನುಡಿದನು ಆ ಗೊಲ್ಲ.  
ರಾಜ ಮತ್ತು ಮಂತ್ರಿ ಇಬ್ಬರೂ ಪರಸ್ಪರ ತೃಪ್ತಿಯ ನಗೆ ಬೀರಿಕೊಂಡು ಅಂಗಡಿ ಬೀದಿಯನ್ನು ಕುರಿತು ಮುನ್ನಡೆದರು. 

" ಬನ್ನಿ ಎಜಮಾನರೆ ಬನ್ನಿ! ಊರಿಗೆ ಹೊಸಬರಂತೆ ಕಾಣುತ್ತೀರಿ! ನಿಮಗೆ ಏನು ಬೇಕು ಹೇಳಿ. ಸೂಜಿಯಿಂದ ಹಿಡಿದು ಆನೆಮರಿಯವರೆಗೆ ಏನು ಬೇಕಾದರೂ ನಮ್ಮಲ್ಲಿ ದೊರೆಯುತ್ತದೆ! "  ರಾಜ ಮಂತ್ರಿ ಇಬ್ಬರನ್ನೂ ತನ್ನ ಅಂಗಡಿಗೆ ಆಹ್ವಾನಿಸಿದನು ಒಬ್ಬ ವ್ಯಾಪಾರಿ.
" ಓ ಅಷ್ಟೆಲ್ಲ ಸಿಗುತ್ತದೆಯೇ ನಿಮ್ಮ ಅಂಗಡಿಯಲ್ಲಿ? " ಎಂದು ಆಶ್ಚರ್ಯಗೊಂಡವನಂತೆ ಪ್ರಶಿನಿಸಿದ ಸುಮತಿ. 
" ಹೌದು ಮಾರಾಯರೇ! ನಮ್ಮ ರಾಜ್ಯವನ್ನ ಏನೆಂದುಕೊಂಡಿರಿ? ದೇಶ ವಿದೇಶಗಳಿಂದೆಲ್ಲ ವ್ಯಾಪಾರಕ್ಕಾಗಿ ಎಂತೆಂತಹ ಸಾಮಾನುಗಳು ಬರುತ್ತವೆ! ನಮ್ಮ ದೊರೆಗಳದ್ದು ವಿಶಾಲ ಹೃದಯ! ಸುಂಕ ಗಿಂಕ  ಏನೂ ಇಲ್ಲ! ನಿರ್ಬಂಧಗಳಿಲ್ಲದ ವ್ಯಾಪಾರ! ಏನು ಬೇಕು  ಕೇಳಿ! ಇಲ್ಲ ಅನ್ನೋ ಶಬ್ದವೇ ಇಲ್ಲಿಲ್ಲ! " ಎಂದು ಹಿಗ್ಗಿನಿಂದ ಉತ್ತರಿಸಿದನು ವ್ಯಾಪಾರಿ. 

ಸುಷೇಣ ಮತ್ತು ಸುಮತಿ ವ್ಯಾಪಾರಿಯಿಂದ ಬಿಡಿಸಿಕೊಂಡು ನಗರದೊಳಕ್ಕೆ ಪ್ರವೇಶಿಸಿದರು. ಮಕ್ಕಳು  ಸಂತೋಷದಿಂದ ಪಾಠ ಶಾಲೆಗೇ ಹೋಗುತ್ತಿದ್ದುದ್ದನ್ನು ಕಂಡರು. ರೋಗ ರುಜಿನವಿಲ್ಲದ  ಕಾರಣ ಔಷದ ಶಾಲೆ ಬರಿದಾಗಿಯೇ ಇತ್ತು. ಜನರೆಲ್ಲಾ ತಮ್ಮ ತಮ್ಮ ಕೆಲಸಗಳನ್ನು ನೋಡಿಕೊಂಡು ಸಂತೋಷ ಸಂಭ್ರಮದಿಂದ ಓಡಾಡುತ್ತಿದ್ದರು. 
ಯಾತ್ರಿಕರ ತಂಗುದಾಣದಲ್ಲಿ ದೊರಕಿದ ಶುದ್ಧವಾದ ಪೌಷ್ಟಿಕ ಆಹಾರವನ್ನು ಉಂಡು ಸುಷೇಣ ಮತ್ತು ಸುಮತಿ ಅಲ್ಲೇ ಸ್ವಲ್ಪ ಹೊತ್ತು ಆರಾಮವಾಗಿ ಮಲಗಿದರು.  






" ತೃಪ್ತಿ ಆಯಿತೇ ಮಹಾರಾಜ? " ಎಂದು ಪಿಸುಗುಟ್ಟಿದ ಮಂತ್ರಿಯನ್ನು ತೆಪ್ಪಗಿರುವಂತೆ ಸನ್ನೆ ಮಾಡಿ ನೆಮ್ಮದಿಯಿಂದ ಮಲಗಿದ ಸುಷೇಣ. ಬಿಸಿಲು ತಗ್ಗಿದ ಮೇಲೆ ಇಬ್ಬರೂ ಮತ್ತೆ ಹೊರಟರು. 

ಒಂದು ಚೌಕದಲ್ಲಿದ್ದ ಕಲ್ಲು ಮಂಟಪದಲ್ಲಿ ಸಂಗೀತ ಕಚೇರಿ ನಡೆಯುತ್ತಿತ್ತು. ಇನ್ನು ಮುಂದೆ ಇದ್ದ ಮತ್ತೊಂದು ಚೌಕದ ಮಂಟಪದಲ್ಲಿ ನಾಟ್ಯ ಪ್ರದರ್ಶನ ನಡೆಯುತ್ತಿದ್ದು ಜನರ ಮನಗಳನ್ನೆಲ್ಲ ರಂಜಿಸುತ್ತಿತ್ತು.
   
ಸಂಜೆಯ ವೇಳೆಗೆ ರಾಜ ಮಂತ್ರಿ ಇಬ್ಬರೂ ಪ್ರಜೆಗಳ ಸುಖವಾದ ಜೀವನದ ಬಗ್ಗೆ ಮಾತನಾಡುತ್ತ ಅರಮನೆಯನ್ನು ಕುರಿತು ನಡೆಯತೊಡಗಿದರು. ಇದ್ದಕ್ಕಿದ್ದ ಹಾಗೆಯೇ ಸುಮತಿ ಹಿಂದೆ ಬಿದ್ದದ್ದನ್ನು ಗಮನಿಸಿದ ಸುಷೇಣ ಹಿಂದಿರುಗಿ ನೋಡಿದನು. 
" ಏನಾಯಿತು ಮಂತ್ರಿಗಳೇ? "
" ಛೆ! ಯಾವ 'ನಾಯಿ' ಮಾಡಿದ ಕೆಲಸವೋ! ಹೇಸಿಗೆಯನ್ನ ತುಳಿದುಬಿಟ್ಟೆ ಮಹಾರಾಜ! "  ಜಿಗುಪ್ಸೆಯಿಂದ ನುಡಿದನು ಸುಮತಿ. 
" ಹಹಹ! ನೀವು ಗಮನವಾಗಿರದೆ ನನ್ನ ಪ್ರೀತಿಯ ಪ್ರಜೆಗಳನ್ನು ಏಕೆ 'ನಾಯಿ' ಅನ್ನುವಿರಿ ಮಂತ್ರಿಗಳೇ? ಒಂದು ಕೆಲಸ ಮಾಡಿ! ಸೊಂಟದಲ್ಲಿ ಸಿಕ್ಕಿಸಿರುವ ಖಡ್ಗ ತೆಗೆದು ಹೇಸಿಗೆ ತುಳಿದ ಪಾದವನ್ನು ಕತ್ತರಿಸಿ ಹಾಕಿ! " ಉಲ್ಲಾಸದಿಂದ ನುಡಿದು 'ಗಡ  ಗಡ'  ನಗುತ್ತ ಅರಮನೆ ಸೇರಿದ ಸುಷೇಣ. 

ಮರು ದಿನ ರಾಜ ಮತ್ತು ಮಂತ್ರಿ ಇಬ್ಬರೂ ಒಟ್ಟಿಗೆ ಕುಳಿತು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸುತ್ತಿದ್ದರು. 
" ಮಂತ್ರಿಗಳೇ! ನಿನ್ನೆ ನಗರ ಪ್ರದಕ್ಷಿಣೆಗೆ ಹೋಗಿ ನನ್ನ ಕಾಲುಗಳೆರಡೂ ಹುಣ್ಣಾಗಿ ಹೋದವು. ಕಲ್ಲು ಮುಳ್ಳು ಚುಚ್ಚಿ ಪಾದಗಳಿಗೆ ಹೇಗೆ ಗಾಯ ಆಗಿವೆ ನೋಡಿ! " ಎನ್ನುತ್ತ ತನ್ನ ಹುಣ್ಣಾಗಿದ್ದ ಪಾದಗಳನ್ನು ಸುಮತಿಗೆ ತೋರಿಸಿದನು ಸುಷೇಣ. 
" ಅಯ್ಯೋ ! ಔಷದಿ ಏನಾದರೂ ಲೇಪಿಸಿಕೊಂಡಿರೇ ದೊರೆಗಳೇ? " ಎಂದು ಅನುಕಂಪದೊಂದಿಗೆ ವಿಚಾರಿಸಿದನು ಸುಮತಿ. 
 " ಅದೆಲ್ಲ ಆಯಿತು! ಈಗ ನನ್ನ ಯೋಚನೆ ಎಲ್ಲ ನನ್ನ ಪ್ರಜೆಗಳ ಬಗ್ಗೆಯೇ! ಪಾಪ! ಜೀವಮಾನವೆಲ್ಲ ಒರಟಾದ ಈ ಭೂಪ್ರದೇಶದಲ್ಲಿ ಓಡಾಡಿ ಅವರುಗಳ ಕಾಲುಗಳು ಇದೇ ರೀತಿ ಹುಣ್ಣಾಗಿರುವುದಿಲ್ಲವೇ? " ರಾಜನ ಮಾತಿನಲ್ಲಿ ಕನಿಕರ ತುಂಬಿ ತುಳುಕುತ್ತಿತ್ತು. 
" ಕಠಿಣವಾದ ಕೆಲಸಗಳನ್ನು ಮಾಡಿ ಅವರುಗಳ ದೇಹವೆಲ್ಲ ಗಟ್ಟಿಮುಟ್ಟಾಗಿರುತ್ತವೆ ದೊರೆಗಳೇ! ಇದನ್ನೆಲ್ಲಾ ಅವರು ಲೆಕ್ಕಿಸುವುದೇ ಇಲ್ಲ! " ಯಥಾರ್ಥವಾಗಿ ನುಡಿದನು ಸುಮತಿ. 
" ಏನೇ ಹೇಳಿ ಮಂತ್ರಿಗಳೇ! ನನ್ನ ಪ್ರಜೆಗಳಿಗೆ ಅದೆಷ್ಟು ಸ್ವಾಮಿ ನಿಷ್ಠೆ! ನನ್ನಲ್ಲಿ ಅದೆಷ್ಟು ಅಭಿಮಾನ! ಅಂತಹ  ಪ್ರೀತಿಯ ಪ್ರಜೆಗಳ ಕಷ್ಟಕ್ಕೆ ಒಂದು ಪರಿಹಾರ ಹುಡುಕದೆ ಹೋದರೆ ನನಗೆ ನೆಮ್ಮದಿ ಇರುವುದಿಲ್ಲ! " ರಾಜನ ಕಣ್ಣುಗಳಿಂದ ಗಳಗಳನೆ  ನೀರಿಳಿಯಿತು. 
" ಅದೇನೋ ಸರಿ ದೊರೆಗಳೇ! " ಸುಮತಿ ವಿಧಿಯಿಲ್ಲದೇ ರಾಜನ ಮಾತನ್ನು ಒಪ್ಪಿಕೊಂಡು ತಲೆದೂಗಿದನು. 
" ನಮ್ಮ ರಾಜ್ಯದ ಭೂಪ್ರದೇಶಕ್ಕೆಲ್ಲಾ ಚರ್ಮ ಹಾಸಿಬಿಟ್ಟರೆ ಹೇಗೆ? "
" ಏನು? ಏನಂದಿರಿ ಮಹಾಸ್ವಾಮಿ? " ಸುಮತಿ ಚಕಿತನಾಗಿ ಕಣ್ಣು ಕಣ್ಣು ಬಿಟ್ಟನು.  


" ಹೇಳಿದೆನಲ್ಲ! ರಾಜ್ಯದ ಭೂಪ್ರದೇಶಕ್ಕೆಲ್ಲಾ ಚರ್ಮ ಹಾಸ ಬೇಕು! ಕೂಡಲೇ ಏರ್ಪಾಟುಗಳನ್ನು ಮಾಡಿ!" 

 ಇದೆಷ್ಟು ವಿಶಾಲವಾದ ರಾಜ್ಯ! ಭೂಪ್ರದೇಶಕ್ಕೆಲ್ಲಾ ಚರ್ಮ ಹಾಸುವುದೆಂದರೆ ಅರಮನೆಯ ಬಂಡಾರವೆಲ್ಲ ಕಾಲಿ ಮಾಡಿದರೂ ಸಾಕಾಗುವುದಿಲ್ಲವಲ್ಲ! ಅದೂ ಅಲ್ಲದೆ ಅಷ್ಟೊಂದು ಚರ್ಮ ಸಂಪಾದಿಸುವುದಾದರೂ ಹೇಗೆ? ದಯಾಳು ಆದರೂ ರಾಜನು ತಿಕ್ಕಲ! ಮುಠಾಳನೂ   ಹವುದು! ಆತ  ಹಿಡಿದಿದ್ದೇ  ಹಠ! ಏನು ಮಾಡುವುದು?

" ಸರಿ ದೊರೆಗಳೇ! ನಿಮ್ಮ ಉದಾರ ಗುಣ ಯಾರಿಗುಂಟು? ನಾಳೆಯ ಹೊತ್ತಿಗೆ ಒಂದು ಯೋಜನೆಯನ್ನ ಹಾಕಿಕೊಂಡು ಬರುತ್ತೇನೆ! " ಎಂದ ಸುಮತಿ ಚಿಂತಿಸುತ್ತ ಅಲ್ಲಿಂದ ಹೊರಟನು. 

ಮರು ದಿನ - 
" ದೊರೆಗಳೇ! ಈತ ನಿಮ್ಮ ಸಮಸ್ಯೆಗೆ ಪರಿಹಾರ ಕಾಣಿಸುತ್ತಾನೆ! " ಎನ್ನುತ್ತ ತಾನು ಕರೆತಂದಿದ್ದ ವ್ಯಕ್ತಿಯನ್ನು ಸುಷೇಣನಿಗೆ ಪರಿಚಯ ಮಾಡಿಸಿದನು ಸುಮತಿ. 
ಆ ವ್ಯಕ್ತಿಯು ತಾನು ತಂದಿದ್ದ ಸಾಮಗ್ರಿಗಳನ್ನೆಲ್ಲ ತನ್ನ ಚೀಲದಿಂದ ಹೊರತೆಗೆದನು. 



" ದೊರೆಗಳೇ! ನಿಮ್ಮ ಪಾದಗಳನ್ನುಒಂದೊಂದಾಗಿ ಈ ತುಂಡು ಚರ್ಮಗಳ ಮೇಲಿರಿಸಿ! " ವಿನಯದಿಂದ ನುಡಿದ ವ್ಯಕ್ತಿ ಸುಷೇಣನ ಎರಡು ಪಾದಗಳ ಎದುರಲ್ಲೂ ಒಂದೊಂದು ತುಂಡು ಚರ್ಮವನ್ನು ಕತ್ತರಿಸಿ ಇಟ್ಟನು. 
ಸುಷೇಣ ಆಶ್ಚರ್ಯದಿಂದ ಹೊಸ ವ್ಯಕ್ತಿ ಹೇಳಿದ ಹಾಗೆಯೇ ಮಾಡಿದ. ಆ ವ್ಯಕ್ತಿ ರಾಜನ ಒಂದೊಂದು ಪಾದವನ್ನೂ ತುಂಡು  ಚರ್ಮದಲ್ಲಿ ಸುತ್ತಿ ದಾರದಿಂದ ಬಿಗಿಯಾಗಿ ಕಟ್ಟಿದನು. 
" ದೊರೆಗಳೇ! ಈಗ ನಡೆದು ನೋಡಿ! " 
ಸುಷೇಣ ತನ್ನ ಆಸನದಿಂದೆದ್ದು ಮುಂದೂ ಹಿಂದೂ ನಡೆದನು. ಅವನ ಕಣ್ಣುಗಳು ಆಶ್ಚರ್ಯದಿಂದ ಅರಳಿದವು. 
" ಆಹಾ! ಇವು ಎಷ್ಟು ಮೃದುವಾಗಿವೆ ! ಪಾದಗಳಿಗೆ ತುಂಬ ಹಿತವಾಗಿವೆ! " 

" ನಮ್ಮ ಪ್ರಜೆಗಳಿಗೂ ಇಂತದ್ದೇ ಪಾದರಕ್ಷೆಗಳನ್ನು ಮಾಡಿಸಿದರೆ ಹೇಗೆ? " ಎಂದನು ಸುಮತಿ. 
" ಖಂಡಿತ ಮಾಡಿಸೋಣ! ಮಾಡಿಸಲೇ ಬೇಕು! ಈತನಿಗೆ ಬಜಾರಿನಲ್ಲಿ ಒಂದು ಗುಡಾರವನ್ನು ಹಾಕಿಸಿ ಕೊಡಿ. ಪ್ರಜೆಗಳೆಲ್ಲ ಈತನಿಂದ ತಮ್ಮ ಪಾದಗಳಿಗೆ  ಕಾಪನ್ನು ಕಟ್ಟಿಸಿಕೊಳ್ಳಬೇಕು ಎಂದು ಈಗಲೇ ಡಂಗೂರ ಸಾರಿಸಿಬಿಡಿ! ಪ್ರಜೆಗಳ ಪಾದಗಳನ್ನೂ ರಕ್ಷಿಸಿದ ಸುಷೇಣನೆಂದು ಲೋಕವೆಲ್ಲ ಕೊಂಡಾಡುವಂತಾಗಲಿ! " 

" ಹೌದು!  ಹೇಸಿಗೆ ತುಳಿದವರ ಕಾಲುಗಳನ್ನೂ ಇನ್ನು ಮುಂದೆ ಕತ್ತರಿಸಿ ಹಾಕ ಬೇಕಿಲ್ಲ! " ನಿಧಾನವಾಗಿ ನುಡಿದ ಸುಮತಿ. 
" ಅಯ್ಯೋ! ನನ್ನ ತಮಾಷೆಯ ಮಾತು ನಿಮ್ಮನ್ನು ನೋಯಿಸಿತೆ ಮಂತ್ರಿಗಳೇ? ಆದರೆ ನೀವು ಹೇಳುವುದೂ ಸರಿ. ಪಾದರಕ್ಷೆಗಳಿಂದ ಆ ಉಪಯೋಗವೂ ಆದೀತು! ಅಲ್ಲವೇ? " ಎಂದು ಗಹಗಹಿಸಿ ನಕ್ಕ ಪ್ರಜಾರಂಜಕನಾದ ಸುಷೇಣ!


ಕಾಲಕ್ರಮದಲ್ಲಿ ತುಂಡು ಚರ್ಮಗಳನ್ನು ದಾರದಿಂದ ಕಟ್ಟಿಕೊಳ್ಳುವಂತಹ ಪಾದರಕ್ಷೆಗಳೆಲ್ಲ
ಮರೆಯಾಗಿ, ಸುಷೇಣನ ರಾಜ್ಯದಲ್ಲಿ  ತೊಡಲು ಸಿದ್ಧವಾದ ನವನವೀನ ಪಾದರಕ್ಷೆಗಳು ತಯಾರಾಗತೊಡಗಿದವು!
-----------------------------------------------------------------------------------------------------------------------------------------------------------------------------------------------
KING SUSHENA - THE PROTECTOR OF FEET!

Thousands of years ago there lived a king named Sushena. He ruled over the small kingdom of Amaradwaja.

The good king was always concerned about the well being of his subjects , doing everything he could to keep them happy and contented . 

His Minister Sumati was also a good man and saw to it that the kingdom was always prosperous .

One day , The King called Sumati and asked him what he always  asked  : 
“ O Minister ! Is all well in our land ? Is there  enough rain for the crops and food for all ? Are our people happy ? “ 

Sumati bowed and replied as he always did “ Yes, My Lord ! Everything is fine . Upon your order , I have made all arrangements to give them  everything they want. All is well. All are happy. Long live our King ." 

But on that day , the king was thoughtful and not fully satisfied with the answer . He kept questioning the Minister if this , that and everything was fine and if people were really happy . 

Sumati rolled his eyes. Sushena was a good king. Also, a foolish king. And a bore! 
But he just bowed and said " My Lord , why don't you go on a city tour 
and ask the people themselves if they are happy! " 

" O ! No, no! That will not help. Out of their love and respect for me, my people will not tell me the truth, but just say they are happy, to please me. "

" Then go in disguise, so that they will not recognize  you! "

The king beamed. He loved this idea! 

The next day , Sushena and Sumati set out to tour the kingdom, dressed as visitors. 
They walked by lush fields of bountiful crop , gardens full of fruit and flowers. The people and animals they saw looked healthy and happy . 
The king stopped a farmer and asked , " Dear man, tell me , are farmers in this kingdom doing well? "
" Oh yes, we are! " said the farmer, " because of the  kindness of our king , we don't suffer taxes like farmers in other kingdoms . And he has provided good irrigation. We earn very well. Long live our King! " 

The king beamed and moved on. They came upon some shepherds playing flute under a tree and enjoying, as their fat cattle  grazed nearby. 

" Dear man, you seem very happy! " remarked the king to one of them.
" We are always happy, stranger! " replied the shepherd. " Our good  king has given us enough to buy and rear the finest cattle that give lot of milk. We even sell our milk products to other kingdoms for good profit!  Long live our King! "

The king beamed and moved on. They came to the busy Bazaar which was overflowing with goods of all sorts. 
"Come! Come, Visitors! " the traders called out. 
"See our wares. From a needle to an elephant calf, we have whatever you can ask for! " 
" What a rich bazaar you have! " said the King.
" Its the best in the world! Thanks to our dear  King who, out of kindness, never levies octroi or import duty on any goods. We get goods from all over the world and make great profit. Long live our King! "

The king beamed at his Minister and they  both landed up at the Traveler’s Lodge at noon. They were served a tasty  and healthy  meal and given clean, soft beds to rest upon. 

" My Lord! " said Sumati , " Now are you satisfied that all is fine and all  people are really happy in our kingdom? " 
" Yes, I am! “ said the overjoyed king, " How my people love me! " 

After resting, when the sun started going down, the king and the minister started walking back to the palace. On the way, they were happy to see the townspeople enjoying dance and music performances in the Temple yard.


Suddenly, Sumati uttered a little cry and started hopping on one foot towards a patch of grass.
" Whats wrong, Minister? " demanded the king.
Sumati’s face  was contorted in disgust. " Some 'dog' has pooped on the road and I stepped on it! Chee chee chee! " 
" Hahahaha! " laughed the king merrily " you were looking at the dance and not watching your step. Why blame the  poor 'dog' ! I’ll tell you what, take out your sword and cut off that soiled foot, you will be fine, hahahahaha! "

Sumati rolled his eyes and kept quiet .

The next day , when he went to the Royal Court, he found the king in great distress. Sushena was holding up his feet, that were covered with cuts and sores.  
" O Minister! " he cried, " look what your idea ended in! Walking on all that gravel and sand has blistered my soles! " 
" O My Lord! That looks bad, I will ask  the Royal Medicine Man at get ointments at once." 
" All that is done .....I am only distressed thinking of my poor subjects who have to walk on that same ground every single day! How much they will suffer! " 


The kind king  broke into tears and then thundered : " O Minister! This is my order! Cover all the ground of our entire kingdom with soft leather so that no one’s sole will be hurt ever again! "
" What !!!!!!" Shrieked Sumati.  
" You heard me Minister! Do it at once! I have to help my people who love me so much! " 
Sumati rolled his eyes. The kind king was not only foolish, but also adamant. 
The Minister went to his office and sat with his hand on his head. Even if the kingdom’s treasury was emptied out, the entire land cannot be covered in leather. And where was he to find so much  soft leather? 

The next day, Sumati arrived in the Royal Court with a man carrying a bag of tools. 
" My Lord! I have brought someone who has a solution for your problem."


The man sat by the King’s feet and opened his bag. He took out two squares of soft leather and wrapped the king’s feet in them. Then he secured the pieces with strings. 
" Now try walking in them, My Lord! "

The king got up from his throne and stepped on his feet, one by one. Then he walked around more  briskly. And he beamed in joy.
" This is wonderful! It is so soft! I can hardly feel the ground! O! Minister! " 
" Yes, My Lord? " 
" Set up a tent for this man at city center immediately and send the drum beaters to announce that all subjects of this kingdom should come and get their feet wrapped by this wonderful  man. "
" Yes, My Lord. " 
" From now on, no one will walk barefoot or get blistered soles. Let every foot in my land be Protected! Let my fame spread far and wide as King Sushena, The Protector of Feet! " 
" Long live our King! " hailed Sumati.
The kind beamed merrily at him " ..... and henceforth, if anyone steps on dog poop, no need to cut the foot off, hahahahaha! "



In time, the leather bits that were merely wrapped around feet and bound by string, came to be cut and stitched in various designs to make Slippers and Shoes. 
--------------------------------------------------------------------------------------------------------------------------