Monday, January 6, 2020

ಧೀರ ಕಿತ್ತಯನ ವೀರಗಾಥೆ ! Dheera Kittayana Veeragathe!

ಧೀರ ಕಿತ್ತಯನ ವೀರಗಾಥೆ !
ಬನ್ನಿರೈ ! ಎಲ್ಲರೂ ಒಂದಾಗಿ ಬನ್ನಿರೈ !
ವೀರಗಾಥೆಯೊಂದ ಪೇಳ್ವೆ ಕೇಳಿರೈ !
ಪೆರ್ಬ್ಬೊಳಲ ವೀರನ ಕಥೆಯ ಕೇಳಿರೈ !

                               


ಕನ್ನಡಾಂಬೆಯ ಮಡಿಲಿನಲ್ಲಿ,
ಗಂಗವಾಡಿ ಎಂಬ ನಾಡಿನಲ್ಲಿ ,
ಪೆರ್ಬ್ಬೊಳಲ ಸಿರಿ ಸೀಮೆಯಲ್ಲಿ ,
ಕೊಡನ್ದಲೆ ವಂಶದ ಕುಡಿಯೊಂದು
ಜನಿಸಿ ಬೆಳೆಯಿತು ಕಿತ್ತಯನೆಂದು !
ಆ ಕಿತ್ತಯನ ವೀರಗಾಥೆಯ ಕೇಳಿರೈ !

ಪೆರ್ಬ್ಬೊಳಲ ಕೋಟೆ ಮೈದಾನದಲ್ಲಿ,
ಪೆರ್ಗುಂದಿ ಕಿರುಗುಂದಿ ಉಸ್ತುವಾರಿಯಲ್ಲಿ,
ಕಾಳಗ ಪಳಗಿದ ವೀರರನು ಕಂಡನು !
ಬೆರಗಾದ ಕಿತ್ತಯ ಉದ್ವೇಗಗೊಂಡನು ,
ಸೈನಿಕ ಶಿಕ್ಷಣವ ಸ್ವತಃ ತೊಡಗಿಕೊಂಡನು !
ಚುರುಕು ಯುವಕನ ವೀರಗಾಥೆಯ ಕೇಳಿರೈ !

ಗಂಗರಾಜ ಶ್ರೀಪುರುಷನ ವಿಜಯೋತ್ಸವವು ,
ಅಚ್ಚಳಿಯದೆ ಮನದಲ್ಲಿ ಉಳಿದಿರಲು ,
' ನಾನು ನಾಡ ಸೇವೆಯ ಮಾಡುವೆನು  !
ದೊರೆಗಳ ಮೆಚ್ಚುಗೆಯ ಪಡೆಯುವೆನು !' - ಎಂದು
ಮನದಲಿ  ಮೂಡಿತು ಕನಸೊಂದು !
ಕನಸುಗಾರನ ವೀರಗಾಥೆಯ ಕೇಳಿರೈ !

ಕಿತ್ತಯ ತನ್ನ ತಂದೆಯ ಮುಂದಿಟ್ಟನು ,
ದಂಡಿಗೆ ಸೇರುವ  ಮನದಾಸೆಯನು !
ಅಪ್ಪ ಅವನ ಬೆನ್ನ ತಟ್ಟಿ  'ಸೈ' ಎಂದರು  ,
ಕನಸೆಲ್ಲ ನನಸಾಯಿತೆಂದುಕೊಂಡನು !
ಮೇವಿಗೆ ತುರುಗಳ ಕರೆದುಕೊಂಡೊಯ್ದನು.
ಜಾಣನವನ ವೀರಗಾಥೆಯ ಕೇಳಿರೈ !

ಕೆರೆಯ ದಂಡೆಯ ಮೇಲೆ ಗೆಳೆಯರು ಕೂಡಿದರು . 
ಕಿತ್ತಯ ತನ್ನ ಸುದ್ದಿಯ ವರದಿ ಮಾಡಿದನು ,
ಮನದಾಳದ ಮಾತನ್ನು ಹಂಚಿಕೊಂಡನು !  
ಗೆಳೆಯರೆಲ್ಲ ಕಜ್ಜಾಯವ ಕೈಗೆತ್ತಿಕೊಂಡರು ,
ಸಂಭ್ರಮದಿಂದ ಸಿಹಿಯ ಸವಿಯ ತೊಡಗಿದರು !
ಆಪ್ತ ಗೆಳೆಯನ ವೀರಗಾಥೆಯ ಕೇಳಿರೈ !

ನೀರವತೆಯ ಮಧುರವಾದ ರಾಗವನು ,
ಭೇದಿಸಿತು ಗಟ್ಟಿಯಾದ ಗದ್ದಲವೊಂದು !
ಬೆದರಿ ಓಡಿ ಬಂದ ತುರುಗಳ ಕಂಡು,
ಚಕಿತಗೊಂಡು ನಿಂತರು ಗೆಳೆಯರೆಲ್ಲರು  !
ಮರವನೇರಿ ತೀವ್ರ ದೃಷ್ಟಿ ಬೀರಿದನು - ಕಿತ್ತಯ
ನುಸುಳಿಬಂದ ವೈರಿಗಳ ಕಂಡನು !
ಸಾಹಸಗಾರನ ವೀರಗಾಥೆಯ ಕೇಳಿರೈ !

' ಧಾಳಿ ಮಾಡಿದೆ ರಟ್ಟವಾಡಿ ಸೈನ್ಯವು !
 ಎಚ್ಚರಮಾಡಿ ಈಗಲೆ ಪೋಗಿ ಊರವರನ್ನು !'
 ಅಪ್ಪಣೆ ಕೇಳಿ ಆಘಾತಗೊಂಡ ಗೆಳೆಯರನ್ನು , 
 ತ್ವರಿತವಾಗಿ ಊರನು ಕುರಿತು  ಓಡಿಸಿದನು  ! 
 ಬಿಲ್ಲುಬಾಣ ಕುಡುಗೋಲು ಕೈಗೆತ್ತಿಕೊಂಡನು  !
ಎದೆಗಾರನ ವೀರಗಾಥೆಯ ಕೇಳಿರೈ !

ಬಾಣದ ಮಳೆಗೆ ಸಿಲುಕಿ ರಟ್ಟವಾಡಿ ವೀರರು, 
ಗೊಂದಲಗೊಂಡು ತಬ್ಬಿಬ್ಬಾಗಿ ಚದುರಿದರು  !
'ಹೊಯ್' ಎಂದು ಕಿತ್ತಯ  ಮೇಲೆರಗಲು, 
ಶುರುವಾಯಿತು ಭೀಕರ ಕಾಳಗವೊಂದು !
ಕಿತ್ತಯ ಸೆಣಸಿದನು  ವೀರಾವೇಶಗೊಂಡು !
ಧೀರ ಕಿತ್ತಯನ ವೀರಗಾಥೆಯ ಕೇಳಿರೈ ! 

ರಾವುತರ ನಾಯಕನು ಮುನ್ನುಗ್ಗಿ ಬಂದನು  , 
ಕಿತ್ತಯನ ಸಾಹಸ ಕಂಡು ಬೆರಗುಗೊಂಡನು  !
ಕಿತ್ತಯನ ಬಾಣ ನಾಟಿ ಕುದುರೆ ಉರುಳಿತು ,
ರಾವುತನ ಖಡ್ಗ ಕಿತ್ತಯನ ಮೇಲೆರಗಿತು !
ವೈರಿಯಮೇಲೆ ಕುಡುಗೋಲ ಬೀಸಿದನು ,
ಮಣ್ಣಿಗೆ ಸರಿದ ಕಿತ್ತಯ ಅಮರನಾದನು !

ಗಂಗವಾಡಿ ಸೈನ್ಯ ಬಂತು ಭೋರ್ಗರೆದು ,
ರಟ್ಟವಾಡಿ ಸೈನ್ಯ ಸೋತು ಹಿಮ್ಮೆಟ್ಟಿತು !
ಕಿತ್ತಯನ ಸಾಹಸವ ಮೆಚ್ಚಿ ಗಂಗದೊರೆಯು,  
ವೀರಗಲ್ಲ ಸ್ಥಾಪಿಸಲು ಆದೇಶ ನೀಡಿದನು ! 
ಕಿತ್ತಯನು ಕಂಡ ಕನಸು ನನಸಾಯಿತು !  
ಅಮರನಾದ ಕಿತ್ತಯನ ವೀರಗಾಥೆಯ ಕೇಳಿರೈ !


                                     

ಧೀರ ಕಿತ್ತಯನ ವೀರಗಾಥೆ ಕೇಳಿರೈ ! 
ಪೆರ್ಬ್ಬೊಳಲ ಕಿತ್ತಯನ ಸಾಹಸವ ಕೊಂಡಾಡಿರೈ !
ನಮ್ಮೂರ ಕಿತ್ತಯನ ಸಾಹಸವ ಕೊಂಡಾಡಿರೈ !
ಕೊಂಡಾಡಿರೈ ! ಕೊಂಡಾಡಿರೈ ! ಕೊಂಡಾಡಿರೈ !


-------------------------------------------------------------------------------------------------------