ಮಳಲೂರುಪಟ್ಟಣದ ಮಾವೀರ !
ಅಂದು ಶಿವರಾತ್ರಿಯ ಸಂಭ್ರಮ !
'' ಊವು ಪತ್ರೆ ಎಲ್ಲ ತ್ವಾಟದಿಂದ ತಂದಿವ್ನಿ ನೋಡತ್ಗೆ ! ''
ತಯಾರಿಸಿ ಗುಡ್ಡೆ ಹಾಕಿದ್ದ ಘಮಘಮಿಸುವ ತಂಬಿಟ್ಟಿನ ಉಂಡೆಗಳನ್ನು ಬಾಳೆಲೆ ಹರಡಿದ್ದ ದೊಡ್ಡ ದೊಡ್ಡ ಹರಿವಾಣಗಳಲ್ಲಿ ಜೋಡಿಸುತ್ತಿದ್ದ ಮಲ್ಲವ್ವ ತಲೆ ಎತ್ತಿ ನೋಡಿದಳು .
ಮಂಚಿಯಂಣ ತಂದಿಟ್ಟ ಬುಟ್ಟಿಯ ತುಂಬ ಮುಂಜಾನೆ ಮಂಜಿನಲ್ಲಿ ತೊಯ್ದಿದ್ದ ಜಪಾ ಕುಸುಮಗಳು, ಶಂಖ ಪುಷ್ಪಗಳು , ಗಣಗಲೆ , ಮಲ್ಲಿಗೆ , ಸೇವಂತಿಗೆ ಮತ್ತು ಅರೆ ಬಿರಿದ ತಾವರೆ ಹೂವುಗಳನ್ನು ಕಂಡು ಮಲ್ಲವ್ವನ ಮೊಗವೂ ಹೂವಿನಂತೆ ಅರಳಿತು .
ಪ್ರತ್ಯೇಕವಾದ ಒಂದು ಬುಟ್ಟಿಯಲ್ಲಿ ಮುಳ್ಳಿನ ಕಡ್ಡಿಗಳಿಂದ ಬಿಡಿಸಲಾಗಿದ್ದ ಮೂರು ದಳಗಳಿಂದ ಕೂಡಿದ ಬಿಲ್ವ ಪತ್ರೆಗಳು , ಉಮ್ಮತ್ತಿ ಮತ್ತು ತುಂಬೆ ಹೂವುಗಳು ! ಎಲ್ಲ ಆ ಶಿವನಿಗೆ ಪ್ರಿಯವಾದ ಪತ್ರ ಪುಷ್ಪಗಳು !
'' ಯಾಕೋ ಮಂಚಾ ? ಒತ್ತಾರೆ ಎದ್ದು ನೀನೇ ಊ ಕೊಯ್ಯಕ್ಕೆ ಓಗ್ಬೇಕಿತ್ತ ? ಆಳುಮಕ್ಳನ್ನ ಕಳಿಸಿದ್ರೆ ಅಯ್ತಿತ್ತು ! '' ವಾಂಛೆಯಿಂದ ನುಡಿದಳು ಮಲ್ಲವ್ವ .
ಮಲ್ಲವ್ವ ಮಂಚಿಯಂಣನನ್ನ ತನ್ನ ಮಗನಂತೆಯೇ ಪ್ರೀತಿಯಿಂದ ಸಾಕಿ ಸಲಹಿದ್ದಳು. ಅಮ್ಮನ ಮುಖವನ್ನು ಕಂಡಿರದ ಮಂಚನೂ ಸಹ ಪ್ರೀತಿಯ ಅತ್ತಿಗೆಯೊಂದಿಗೆ ಬಹಳ ಸಲುಗೆಯಿಂದಿರುತ್ತಿದ್ದನು.
'' ವತಾರೆಕೆ ಎದ್ದು , ಮಡಿ ಮಾಡ್ಕಂಡು ನೀನೇ ಯಾಕೆ ಉಂಡೆ ಕಟ್ಕಂಡ್ ಕುಂತೆ ? ಅಡುಗೆ ಹೆಂಗ್ಸಿಗೆ ಯೋಳ್ಬಾರ್ದಿತ್ತ ? '' ಎಂದು ನಗುತ್ತ ಅತ್ತಿಗೆಯ ಕಾಲೆಳೆದನು ಮಂಚಿಯಂಣ .
'' ನಮ್ ಕೈಯಾರೆ ಸಿವನ್ಗೆ ಪ್ರಸಾದ ಮಾಡೋದು ಪುಣ್ಯದ್ ಕೆಲ್ಸ ಕಣ್ ಮಗಾ ! ಪ್ರತಿ ವರ್ಸ ಸಿವರಾತ್ರಿ ಪೂಜೆಗೆ ಒಂದೊತ್ತು ನೈವೇದ್ಯ ತಯ್ಯಾರಿ ಮಾಡೋದು ನನ್ ಜವಾಬ್ದಾರಿ ಅಲ್ಲೇನೋ ? ''
'' ನಾನೇ ನನ್ ಕೈಯಾರೆ ಊವು ಪತ್ರೆ ಕಿತ್ಕಂಡ್ ಬಂದ್ದಿದ್ದೂ ಅದೇ ಪುಣ್ಯ ಕಟ್ಕಳಕ್ಕಾ ಮತ್ತೆ !"
'' ಮಾತಿನ ಮಲ್ಲ ಕಣ ನೀನು ! ಇರ್ಲಿ ! ಒಳ್ಳೆ ಕೆಲ್ಸ ಮಾಡಿದ್ದೀ ಬುಡು ! ಆದ್ರ ಮುಂಜಾನೆ ಎಡ್ಕೂಡ್ಲೇ ಕಸರತ್ ಬುಟ್ಟು ಊ ಕೀಳೋಕ್ಕೆ ನೀ ಓಗಿದ್ದು ನಿಮ್ಮಣ್ಣಗೆ ಏನಾರಾ ತಿಳಿದ್ರೆ , ನಿನಗಷ್ಟೆಯಲ್ಲ , ನನಗೂ ಪೂಜೆ ಆಗತೈತೆ ! '' ಎನ್ನುತ್ತ ಒಲೆಯಲ್ಲಿ ಕುದಿಯುತ್ತಿದ್ದ ಪಾಯಸವನ್ನು ಉದ್ದನೆಯ ಸೌಟಿನಿಂದ ತಿರುವಿದಳು ಮಲ್ಲವ್ವ .
ಮಂಚಿಯಂಣನಿಗೆ ಅತ್ತಿಗೆ ಎಂದರೆ ಎಷ್ಟು ಸಲುಗೆ ಇತ್ತೋ , ಅಣ್ಣ ಮಾಯಿತಂಮನೆಂದರೆ ಅಷ್ಟೇ ಭಯವಿತ್ತು ! ಮಾಯಿತಂಮ ರಾಜವಿಶ್ವಾಸವುಳ್ಳವ ! ನಾಡಪ್ರೇಮ ಉಳ್ಳವ ! ಶಿಸ್ತಿನ ಸಿಪಾಯಿಯಾಗಿರುವವ ! ಊರಲ್ಲಿಯ ಎಲ್ಲರೂ ಅವನ ಶಿಸ್ತಿಗೆ ತಲೆ ಬಾಗುವವರೇ ! ಪಟ್ಟಣದ ಗಉಡರು ಮಾಯಿದೇವರ ಮಗ ಮಾಯಿತಂಮನೆಂದರೆ ಊರವರಿಗೆಲ್ಲ ಅಚ್ಚುಮೆಚ್ಚು ! ಅವನ ಮೇಲೆ ಒಂದು ರೀತಿಯ ಪ್ರೀತಿ ! ಗೌರವ !
ಇಡೀ ದಕ್ಷಿಣ ಭಾರರತವನ್ನು ಮಾತ್ರವಲ್ಲದೆ ಸಾಗರದಾಚೆಯ ಸೀಮೆಗಳನ್ನು ಸಹ ಒಳಗೊಂಡಿದ್ದ ತಮ್ಮ ವಿಶಾಲವಾದ ರಾಜ್ಯವನ್ನು ದಕ್ಷತೆಯಿಂದ ಆಳುತ್ತಿದ್ದರು ವೀರಪ್ರತಾಪ ದೇವರಾಯ ಒಡೆಯರು . ಸಕಲ ಐಶ್ವರ್ಯಗಳಿಂದ ಮೆರೆಯುತ್ತಿದ್ದ ನಾಡನ್ನು ತಮ್ಮ ವಶಪಡಿಸಿಕೊಳ್ಳಲು ಆಗಿಂದಾಗ್ಯೆ ದಾಳಿ ಮಾಡುತ್ತಲೇ ಇದ್ದವು ವೈರಿ ಸೈನ್ಯಗಳು . ಅವರುಗಳನ್ನು ಸೋಲಿಸಿ ಮಣ್ಣು ಮುಕ್ಕಿಸಿ ಗಡಿಯಿಂದಾಚೆಗೆ ಅಟ್ಟುತ್ತಿದ್ದರು ಪರಾಕ್ರಮಶಾಲಿಯಾದ ದೇವರಾಯರು . ಪ್ರತಿ ಯುದ್ಧ ಮುಗಿದನಂತರವು ತಮ್ಮ ಸೈನ್ಯವನ್ನು ಮತ್ತಷ್ಟು ಬಲಗೊಳಿಸಲು ಹೊಸ ಸೈನಿಕರನ್ನು ತಮ್ಮ ದಂಡಿನಲ್ಲಿ ಭರ್ತಿಮಾಡಲು ಆದೇಶ ನೀಡುತ್ತಿದ್ದರು ದೊರೆಗಳು . ರಾಜಧಾನಿಯಿಂದ ಕರೆ ಬಂದ ಕೂಡಲೇ ನಾಡ ಗಉಡರೆಲ್ಲ ತಮ್ಮ ತಮ್ಮ ಪಟ್ಟಣಗಳಿಂದ ಆಳುಗಳನ್ನು ಕಳುಹಿಸಿಕೊಡುವುದು ವಾಡಿಕೆಯಾಗಿದ್ದಿತು .
ದೊರೆಗಳಿಂದ ಕರೆ ಬಂದ ಕೂಡಲೇ ತಮ್ಮ ಪಟ್ಟಣದಿಂದ ಒಂದು ಸುಸಜ್ಜಿತವಾದ ಪಡೆಯನ್ನು ಕಳುಹಿಸಿಕೊಡಬೇಕೆಂಬುದು ಮಾಯಿತಂಮನ ಧ್ಯೇಯವಾಗಿತ್ತು . ಬಹುಪಾಲು ಕೃಷಿಕರಾಗಿದ್ದ ಮಳಲೂರು ಪಟ್ಟಣದ ಜನರಿಗೆ ಸಮರ ಕಲೆ ಮತ್ತು ಶಸ್ತ್ರ ವಿದ್ಯೆಯನ್ನು ನಿಯಮವಾಗಿ ಕಲಿಸಿ, ಅವರನ್ನು ಯುದ್ಧದಲ್ಲಿ ಬಾಗವಹಿಸಲು ಅರ್ಹರನ್ನಾಗಿ ಮಾಡಲು ಒಂದು ಯೋಜನೆಯನ್ನು ರೂಪಿಸಿದ್ದ ಮಾಯಿತಂಮ . ಮಗನ ಯೋಚನೆಯನ್ನು ಮೆಚ್ಚಿ ಅದನ್ನು ಕಾರ್ಯಗತಗೊಳಿಸಲು ತನ್ನ ಸಮ್ಮತಿಯನ್ನು ನೀಡಿದ್ದರು ಮಳಲೂರು ಪಟ್ಟಣದ ಗಉಡರಾದ ಅವನ ತಂದೆ ಮಾಯಿದೇವರು .
ಮಾಯಿತಂಮನ ಮಾತಿನಿಂದ ಸ್ಪೂರ್ತಿ ಪಡೆದ ಹರೆಯದ ಹುಡುಗರು , ಯುವಕರು ಮಾತ್ರವಲ್ಲದೆ ಇನ್ನೂ ದೇಹದಲ್ಲಿ ಶಕ್ತಿ ಇದ್ದ ಹಿರಿಯರು ಸಹ ತರಬೇತಿಗೆ ಹಾಜರಾಗುತ್ತಿದ್ದರು . ವಯೋ ಸಹಜವಾದ ಕಾರಣಗಳಿಂದ ನಿವೃತ್ತಿ ಹೊಂದಿದ್ದ ಮಾಜಿ ಸೈನಿಕರಾದ ಧೀರೇಶೈಯ ಮತ್ತು ಮಲ್ಲೇಶ ಮಳಲೂರು ಪಟ್ಟಣದ ನಿವಾಸಿಗಳಿಗೆ ತರಬೇತಿ ನೀಡಲು ಉತ್ಸಾಹದಿಂದ ಒಪ್ಪಿಕೊಂಡಿದ್ದರು . ಹಾಗಾಗಿ ಪಟ್ಟಣದ ಹೊರಗಿದ್ದ ಬಯಲು ತರಬೇತಿ ಕೇಂದ್ರವಾಗಿ ಪರಿವರ್ತಿಸಿತ್ತು .
'' ನಾನು ಯುದ್ದಗಿದ್ದಕೆಲ್ಲ ಓಗಕಿಲ್ಲಪ್ಪಾ ! ನಮ್ಮೂರಾಗೇ ಇದ್ದು ಗದ್ದೆ ತ್ವಾಟ ನೋಡ್ಕಳಕ್ಕೆ ವ್ಯಾಯಾಮ ಕಸರತ್ತು ಅದೆಲ್ಲ ಯಾಕೆ ಅಂತೀನಿ ? '' ಎಂದು ಅತ್ತಿಗೆಯಲ್ಲಿ ತನ್ನ ಮನಸಿನ ಮಾತನ್ನು ಹೇಳಿಕೊಳ್ಳುತ್ತಿದ್ದ ಮಂಚಿಯಂಣ . ದಿನವೊಂದು ನೆವ ಹೇಳಿ ತರಬೇತಿಗೆ ಹೋಗುವುದನ್ನು ತಪ್ಪಿಸಲು ಯತ್ನಿಸುತ್ತಿದ್ದ .
ಊರವರೆಲ್ಲ ತನ್ನ ಮಾತಿಗೆ ಬೆಲೆ ಕೊಟ್ಟು ತರಬೇತಿಗೆ ಬರುತ್ತಿದ್ದರೂ ತನ್ನ ತಮ್ಮ ಮಂಚಿಯಂಣ ಮಾತ್ರ ಇನ್ನೂ ಹುಡುಗಾಟದ ಹುಡುಗನಾಗಿರುವುದು ಮಾಯಿತಂಮನಿಗೆ ಅಸಮಾಧಾನವನ್ನ ಏರ್ಪಡಿಸಿತ್ತು . ಸಮಯ ಸಿಕ್ಕಿದಾಗಲೆಲ್ಲ ತಮ್ಮನನ್ನು ಖಂಡಿಸುತ್ತಿದ್ದನು . ಅವನ ಬೇಜವಾಬ್ದಾರಿಗೆ ಮಲ್ಲವ್ವ ಕೊಡುವ ಸಲುಗೆಯೇ ಕಾರಣ ಎಂದು ಮಡದಿಯನ್ನೂ ಗದರುತ್ತಿದ್ದನು .
'' ನಮ್ಮತ್ಗೆ ಕೈ ಪಾಯ್ಸ ಕುಡಿಯೋಕೆ ನೀನು ಅದೇಟ್ಟು ಪುಣ್ಯ ಮಾಡಿದ್ದೋ ಸಿವಪ್ಪಾ ! '' ಒಂದು ಸವುಟು ಪಾಯಸವನ್ನು ಮೂಗಿನ ಬಳಿ ಹಿಡಿದು ಅದರ ಘಮಲನ್ನು ಆಗ್ರಾಣಿಸಲು ಯತ್ನಿಸುತ್ತಿದ್ದ ಮಂಚಿಯಂಣ !
'' ಮಂಚಾ ! ಲೇ ಮಂಚಾ ! '' ಗಟ್ಟಿಯಾಗಿ ಕರೆಯುತ್ತ ಪ್ರತ್ಯಕ್ಷನಾದ ಅಣ್ಣನನ್ನು ಕಂಡು ಬೆಚ್ಚಿದ ಮಂಚಿಯಂಣ .
'' ಅಣ್ಣಯ್ಯ ! ಅದು .. ಇವತ್ತು ಪೂಜೆ ! ಅದಕ್ಕಾ ... '' ಅವನನ್ನರಿಯದೆಯೇ ಸೌಟು ಕೈಜಾರಿತು.
'' ಸಿವರಾತ್ರಿ ! ಇವತ್ಯಾಕೆ ತರಬೇತಿ ಅಂತ ? ವತಾರೆ ಎದ್ದು ಊವು ಪತ್ರ ಕುಯ್ಯಕ್ಕೆ ನಾನೇ ಅವನ್ಗೆ ಯೋಳಿದ್ದು ! '' ಮಲವ್ವ ವಕಾಲತಿಗೆ ಮುಂದಾದಳು .
'' ಅಬ್ಬಬ್ಬಾ ! ಅದೇನ್ ನಾಟ್ಕ ಆಡಕ್ಕತ್ತೀರಿ ಅತ್ಗೆ ಮೈದ್ನ ಸೇರ್ಕಂಡು ! ಸಿವರಾತ್ರಿಲಿ ಎಂತ ತರಬೇತಿ ! ಎಲ್ರೂ ಉಪಾಸ , ಪೂಜೆ , ಜಾಗರಣೆ ಮಾಡ್ಕಂಡಿರ್ತಾರೆ ಅನ್ನೋದು ನಂಗೂ ಗೊತ್ತಿಲ್ಲೇನು ? '' ಮಾಯಿತಂಮ ಗಡುಸಾಗಿ ನುಡಿದ .
'' ಅಪ್ಪಯ್ಯನ್ ಜೊತೆ ಪೂಜಾರಪ್ಪನೂ ಕಾದಾವ್ರೆ ! ನೆಲ್ಮಾಳಿಗೆಯಿಂದ ಪೆಟ್ಗೆ ತಗೀಬೇಕು ! ಒಂದ್ ಕೈ ಕೊಡು ನಡಿ ! '' ತಮ್ಮನನ್ನು ಕುರಿತು ನುಡಿದು ಅಡುಗೆಮನೆಯಿಂದ ಹೊರ ನಡೆದನು ಮಾಯಿತಂಮ .
'' ಪೆಟ್ಗೆನ ಗುಡೀಲೇ ಇರಿಸಿದ್ರೆ ಆಗ್ತಿತ್ತಪ್ಪ ! ಸಿವರಾತ್ರಿ ಬಂತಂದ್ರ ಇದೊಂದು ಕಸರತ್ತು ! '' ಗೊಣಗುತ್ತ ಅಣ್ಣನನ್ನು ಹಿಂಬಾಲಿಸಿದ ಮಂಚಿಯಂಣ .
'' ಏನೋ ಅದು ನಿನ್ ಗೊಣಗಾಟ ? " ನಡುಮನೆಯಲ್ಲಿ ಪೂಜಾರಪ್ಪನೊಂದಿಗೆ ನಿಂತಿದ್ದ ಅಪ್ಪಯ್ಯ ಗರ್ಜಿಸಿದರು .
ಮಂಚಿಯಂಣನ ಎದೆ ದಸಕ್ಕೆಂದಿತು ! ತಾನು ಗೊಣಗಾಡಿದ್ದನ್ನು ಅಪ್ಪಯ್ಯ ಕೇಳಿಸಿಕೊಂಡರೆ ? ನಿಂತಲ್ಲೇ ನುಲಿಯ ತೊಡಗಿದ ಮಂಚ.
'' ಏನಿಲ್ಲ ಅಪ್ಪಯ್ಯ ! ದೇವ್ರ ಪೆಟ್ಗೆ ಗುಡಿಯಾಗೆ ಯಾಕೆ ಇಡಬಾರ್ದು ಅಂತಾವ್ನೆ ಮಂಚ ! ಅದ್ರ ಇಸ್ಯಾ ಆಮ್ಯಾಕೆ ಯೋಳ್ತಿವ್ನಿ ಮೊದ್ಲು ಪೆಟ್ಗೆ ತಗ್ದು ಗುಡಿಗೆ ಸಾಗಿಸುವ ಬಾ ಅನ್ತಿದ್ದೆ ! '' ಏನೇ ಆದರೂ ತಮ್ಮನನ್ನು ಅಪ್ಪಯ್ಯನೆದುರು ಬಿಟ್ಟು ಕೊಡಲು ಮಾಯಿತಂಮನಿಗೆ ಮನಸ್ಸಿಲ್ಲ ! ಶಿಸ್ತಿನ ಅಣ್ಣನಾಗಿ ಹೊರಗೆ ತೋರಿಸಿಕೊಂಡರೂ ಒಳಗೊಳಗೇ ತಮ್ಮನಮೇಲೆ ಅವನಿಗೂ ಪ್ರೀತಿ ಇತ್ತಲ್ಲವೇ ?
'' ಸರಿ ! ಸರಿ ! ನಿಮ್ ಕತಿಯೆಲ್ಲ ಆಮ್ಯಾಕೆ ಇಟ್ಕಳ್ಳಿ ! ಮೊದ್ಲು ಪೆಟ್ಗೆ ತಗ್ದು ಜೋಪಾನಾಗಿ ಗುಡಿ ಮುಟ್ಟಿಸಿ ಬರ್ರಿ ! '' ಎಂದರು ಮಾಯಿದೇವರು .
'' ಎಲ್ಲ ಉಸಾರಾಗಿ ಸಿವಪ್ಪನ್ಗೆ ಒಪ್ಸಿ ಸ್ವಾಮೀ ! ವರ್ಸವಿಡೀ ನಮ್ ಸಿವ ಬಿಕ್ಸಾಟಣ ಮೂರುತಿಯಾಗಿಯೇ ಅವ್ನೆ ! ಸಿವ್ರಾತ್ರಿಗೆ ಮಾತ್ರ ಅವ್ನು ಅಲಂಕಾರ ಮೂರುತಿ ! ಪಾಪ ದ್ಯಾವರಿಗೂ ಎಂತಾ ಪರಿಸ್ಥಿತಿ ಬಂತು ನೋಡಿ ಪೂಜಾರಪ್ಪ ! " ಎನ್ನುತ್ತಾ ನಿಟ್ಟುಸಿರೆಳೆದರು ಮಾಯಿದೇವರು .
'' ಗಉಡರೆ ! ಈ ಒಡವೆ , ವಸ್ತ್ರ ಎಲ್ಲ ನಮ್ಮ ಸಂತೋಷಕ್ಕೆ ನಾವು ಅವ್ನಿಗೆ ತೋಡಿಸೋದು ! ಇವೆಲಾ ಇದ್ರೂ ಇಲ್ದೆ ಹೋದ್ರೂ ಆ ಶಿವ ಸದಾನಂದ ಸ್ವರೂಪ ಅಲ್ವೇ ! '' ಎಂದು ನೊಂದಿದ್ದ ಗಉಡರಿಗೆ ಸಮಾಧಾನ ಹೇಳಿದರು ಪೂಜಾರಪ್ಪ .
ನೆಲಮಾಳಿಗೆಯಿಂದ ಹೊರ ತೆಗೆದ ಭಾರಿ ಮರದ ಪೆಟ್ಟಿಗೆಯನ್ನು ಗಾಡಿಯಲ್ಲಿ ಎತ್ತಿರಿಸಿದರು ಅಣ್ಣ ತಮ್ಮಂದಿರು . ಪೂಜಾರಪ್ಪನನ್ನೂ ಕೂರಿಸಿಕೊಂಡು ಮಲ್ಲಯ್ಯ ದೇವರ ಬನದಲ್ಲಿದ್ದ ಗುಡಿಯನ್ನು ಕುರಿತು ಗಾಡಿಯನ್ನು ಚಲಿಸಿದ ಮಾಯಿತಂಮ . ತನಗೂ ಮಂಚಿಯಂಣನಿಗೂ ನಡುವೆ ಭದ್ರವಾಗಿ ಇರಿಸಿದ್ದ ಮರದ ಪೆಟ್ಟಿಗೆಯಮೇಲೆ ಕೈಯಾಡಿಸಿ ದೀರ್ಘವಾಗೊಮ್ಮೆ ಉಸಿರೆಳೆದರು ಪೂಜಾರಪ್ಪ .
'' ಈ ಪೆಟ್ಗೆ ಗುಡಿಯಲ್ಲೇ ಇದ್ದಿದ್ರೆ ಆ ನಮ್ಮಪ್ಪಾ ಶಿವನಿಗೆ ನಿತ್ಯ ಅಲಂಕಾರ ಮಾಡಬೋದಿತ್ತು ! ಗಉಡರು ಹೇಳೋ ಹಾಗೆ ಶಿವರಾತ್ರಿಯಂದು ಮಾತ್ರ ಸಕಲಾಲಂಕಾರಭೂಷಿತನಾಗಿ ನಮಗೆ ದರುಶನ ಕೊಡುವಂತೆ ಆಗಿಹೋಯ್ತಲ್ಲಪ್ಪ ಇಂದಿನ ಅವನ ಪರಿಸ್ಥಿತಿ ! ''
'' ನಾನೂ ಅದೇ ಅಂದಿದ್ದು ! ಸಿವನ ಒಡವೆ ಸಿವನ್ ತಾವೇ ಇರ್ಲಿ, ಪ್ರತಿ ವರ್ಸಾ ಇಂಗೆ ಪೆಟ್ಗೆ ಒತ್ಕೊಂಡ್ ತಿರ್ಗೋ ಕಸರತ್ ಯಾಕೆ ಅಂತ ! ಅಪ್ಪಯ್ಯ ಅದೇನೋ 'ಪರಿಸ್ಥಿತಿ' ಅಂತಾವ್ರೆ ! ನೀವೂ ಅಂಗೇ ಅಂತೀರಿ ! ಅಂತದ್ದೇನಾಗೈತೆ ಪೂಜಾರಪ್ಪ ? '' ಮಂಚಿಯಂಣ ಕುತೂಹಲದಿಂದ ಪ್ರಶ್ನಿಸಿದ .
'' ಮಂಚಾ ! ಬಾಯಿ ಮುಚ್ಕಂಡ್ ಬರಕ್ಕಾಗಕಿಲ್ವ ನಿಂಗ ? ದೊಡ್ಡೋರ್ ಮಾತು ನಿಂಗ್ಯಾಕ ? " ಗಾಡಿ ಓಡಿಸುತ್ತಲೇ ಗದರಿದ ಮಾಯಿತಂಮ .
'' ಕೇಳಲಿ ಬಿಡು ಮಾಯಿತಂಮ ! ಅವನೂ ದೊಡ್ಡೋನಾಗ್ತಾ ಇದ್ದಾನಲ್ಲ ! '' ಎಂದ ಪೂಜಾರಪ್ಪ ಹಿಂದಿನ ಘಟನೆಯ ಬಗ್ಗೆ ಹೇಳ ತೊಡಗಿದರು .
'' ಮಂಚಾ ! ಶತಮಾನಗಳ ಹಿಂದೆ ಯಾರೋ ಮಹಾರಾಜರು ನಮ್ಮೂರಲ್ಲಿ ಶಿವನಿಗೆ ದೇವಾಲಯವನ್ನ ಕಟ್ಟಿಸಿದ್ರು . ಅಮೂಲ್ಯವಾದ ಆಭರಣಗಳು , ಪೂಜಾ ಪಾತ್ರೆಗಳು , ಮತ್ತಿತರ ಬೆಲೆಬಾಳೋ ವಸ್ತುಗಳನ್ನೆಲ್ಲ ಶಿವನಿಗೆ ಕಾಣಿಕೆಯಾಗಿ ಅರ್ಪಿಸಿದ್ರು . ಅವರ ನಂತರದ ರಾಜರು , ಅಧಿಕಾರಿಗಳು ಮತ್ತು ಸಾಮಾನ್ಯರೂ ಸಹ ಶಿವನಿಗೆ ಒಳ್ಳೊಳ್ಳೆ ಕಾಣಿಕೆಗಳನ್ನ ನೀಡಿದ್ರು . ಬೆಲೆಬಾಳೋ ಈ ಪುರಾತನವಾದ ವಸ್ತುಗಳೆಲ್ಲ ಗುಡಿಯಲ್ಲೇ ಭದ್ರವಾಗಿ ಇರ್ತಿದ್ವು !
ಕೆಲವು ವರ್ಷಗಳ ಕೆಳಗೆ ನಮ್ಮ ನೆರೆಯೂರಿನ ದೇವಾಲಯಕ್ಕೆ ಕನ್ನ ಹಾಕಿ ದೇವರ ಆಭರಣಗಳನ್ನೆಲ್ಲ ಕಳವು ಮಾಡಿದ್ರು ಕಳ್ಳರು . ಆ ಸುದ್ದಿ ಕೇಳಿದಾಗಿನಿಂದ ನಮ್ಮೂರ ಶಿವನ ಸ್ವತ್ತಿನ ಬಗ್ಗೆ ಎಲ್ರಿಗೂ ಆತಂಕ ಶುರುವಾಯಿತು .
ಶಿವನ ಸ್ವತ್ತನ್ನ ಭದ್ರಪಡಿಸಲು ಪಟ್ಟಣದ ಗಉಡರ ಕಲ್ಲು ಮನೆಗಿಂತ ಸುರಕ್ಷಿತವಾದ ಜಾಗ ಬೇರೆ ಇಲ್ಲ ಅಂತ ಊರವರೆಲ್ಲ ಕೂಡಿ ತೀರ್ಮಾನ ಮಾಡಿದ್ರು . ಹಾಗಾಗಿ ನಡುಮನೆಯಲ್ಲಿ ಒಂದು ನೆಲಮಾಳಿಗೆ ನಿರ್ಮಾಣ ಮಾಡಿಸಿದ್ರು ಗಉಡರು . ಆಭರಣಗಳ ಪೆಟ್ಟಿಗೆಯನ್ನ ಅದರಲ್ಲಿರಿಸಿ ಭದ್ರಪಡಿಸಿದ್ದೂ ಆಯಿತು . ಶಿವರಾತ್ರಿಗೆ ಮಾತ್ರ ಅವನ್ನ ಹೊರತೆಗೆದು ದೇವರಿಗೆ ತೊಡಿಸಿ , ಹಬ್ಬ ಮುಗಿದ ಕೂಡ್ಲೆ ನಿಮ್ಮ ಮನೆ ನೆಲಮಾಳಿಗೆಯಲ್ಲಿ ಮತ್ತೆ ಭದ್ರಪಡಿಸೋದು ವಾಡಿಕೆಯಾಯ್ತು .''
ಆಭರಣಗಳ ಪೆಟ್ಟಿಗೆಯ ವೃತ್ತಾನಂತವನ್ನು ಬಾಯಿ ಬಿಟ್ಟುಕೊಂಡು ಕೇಳಿಸಿಕೊಂಡ ಮಂಚಿಯಣ್ಣ .
'' ಅಲ್ಲ ! ದೇವರಾಯ ಮಹಾರಾಜರ ಆಡಳಿತದಲ್ಲಿ ನಮ್ಮ ನಾಡು ಸುಭಿಕ್ಷವಾಗಿದೆ ! ರಾಜಧಾನಿಯಲ್ಲಂತೂ ಮುತ್ತು ರತ್ನಗಳನ್ನ ಮಾರುಕಟ್ಟೆಗಳಲ್ಲಿ ಸುರಿದಿಟ್ಟು , ಸೇರಲ್ಲಿ ಅಳೆದು ವ್ಯಾಪಾರ ಮಾಡ್ತಾರಂತೆ ! ಹೀಗಿರಲು ಅದ್ಯಾಕೆ ಕಳ್ಳತನ ಮಾಡ್ತಾರೋ ಕಿಡಿಗೇಡಿಗಳು ? '' ಬೇಸರದಿಂದ ನುಡಿದರು ಪೂಜಾರಪ್ಪ .
'' ದುರಾಸೆ ಪೂಜಾರಪ್ಪ ! ಬರಿ ದುರಾಸೆ ! ಯುದ್ಧ ಸಾ ಒಂದ್ ಕಾರ್ಣ ! ಸೋತು ಚದುರಿದ ಸೈನಿಕ್ರಲ್ಲಿ ಕೆಲವ್ರು ಸೈನ್ಯ ಬುಟ್ಟು ತಂತಮ್ಮ ಕಸುಬಿಗೆ ಮರಳಿ ಒಂಟೋಗ್ತಾರಂತೆ ! ಇನ್ನು ಕೆಲವ್ರು ಕೂಲಿ ಪಡೆಗಳ್ಗೆ ಸೇರ್ಕಂತಾರಂತೆ ! ಉಳಿದೋರು ದುರಾಸೆಯಿಂದ ಕಳ್ತನ ಸುರು ಮಾಡ್ಕಂಡವ್ರನ್ತೆ ! '' ಎಂದು ತಾನು ಕೇಳ್ಪಟ್ಟ ವಿಷಯವನ್ನು ವಿವರಿಸಿದ ಮಾಯಿತಂಮ .
'' ಅಂತೂ ಶಿವನ ಸ್ವತ್ತು ಕಾಯೋದು ಈಗ ನಿಮ್ಮ ಮನೆತನದ ಜವಾಬ್ದಾರಿಯಾಗಿದೆ ! ಮಂಚಾ ! ನೀನಿನ್ನೂ ಎಳೆ ಕೂಸಲ್ಲ ! ನಿನ್ನ ಅಪ್ಪಯ್ಯನಂತೆ , ನಿನ್ನ ಅಣ್ಣನಂತೆ ಮುಂದೆ ನೀನೂ ಸಹ ಆ ಜವಾಬ್ದಾರಿ ವಹಿಸ್ಕೊಬೇಕಪ್ಪಾ ! '' ಎನ್ನುತ್ತಾ ಮಂಚಿಯಂಣನ ಬೆನ್ನು ತಟ್ಟಿದರು ಪೂಜಾರಪ್ಪ .
'' ಅಪ್ಪಯ್ಯ ಅಣ್ಣಯ್ಯ ಇಬ್ರೂ ಅವ್ರೆ ! ನಂಗ್ಯಾಕ ಅದ್ರ ಉಸಾಬ್ರಿ ಬುಡಿ ಪೂಜಾರಪ್ಪ ! ''
ಬುದ್ದಿಗೇನೂ ಕಮ್ಮಿ ಇಲ್ಲ ! ಆದರೆ ಹುಡುಗುತನ ಇನ್ನೂ ಹೋಗಿಲ್ಲ ! 'ಸೋಮಾರಿ ನನ್ ಮಗ ! ' ಎಂದುಕೊಂಡು ತಲೆದೂಗಿ ಕಿರುನಗೆ ಬೀರಿದ ಗಾಡಿಯೋಡಿಸುತ್ತಿದ್ದ ಮಾಯಿತಂಮ!
ಮನದಲ್ಲೇ ' ಯಲಾ ಇವನಾ ! ' ಎಂದುಕೊಂಡುರು ಪೂಜಾರಪ್ಪ .
-----------------------------------------------------------------------------------------------------------------------------
ಗರ್ಭಗುಡಿಯ ಬಾಗಿಲಿನ ಚೌಕಟ್ಟಿನಲ್ಲಿ ಸಾಲಾಗಿ ಮಿನುಗುತ್ತಿದ್ದ ಎಣ್ಣೆ ದೀಪಗಳ ಬೆಳಕಿನಲ್ಲಿ ಬೃಹದಾಕಾರವಾದ ಲಿಂಗ ಸ್ವರೂಪನಾಗಿ ತೇಜೋಮಯವಾಗಿ ಕಂಗೊಳಿಸುತ್ತಿದ್ದ ಮಳಲೂರು ಪಟ್ಟಣದ ಶಿವ . ತೊಡಿಸಿದ್ದ ಬಂಗಾರದ ಮುಖ ಕವಚದಲ್ಲಿದ್ದ ಎರಡು ಕಣ್ಣುಗಳು ಭಕ್ತರನ್ನು ಕುರಿತು ಕರುಣೆ ಸೂಸುವಂತಿದ್ದವು . ಹಣೆಯಮೇಲೆ ವಿಭೂತಿಯಂತೆ ವಜ್ರಗಳಿಂದಾದ ಮೂರು ಗೆರೆಗಳು . ಮಧ್ಯದಲ್ಲಿ ಶಿವನ ಮೂರನೆಯ ಕಣ್ಣಿನಂತೆ ಹೊಳೆದ ಹೆಬ್ಬೆಟ್ಟಿನ ಗಾತ್ರದ ಮಾಣಿಕ್ಯದ ಹರಳು . ಮುಖ ಕವಚದ ಎರಡು ಕಿವಿಗಳಲ್ಲೂ ರತ್ನ ಖಚಿತವಾದ ಕರ್ಣ ಕುಂಡಲಗಳು . ಜಟೆಯಲ್ಲಿ ರತ್ನಾಭರಣಗಳನ್ನು ಧರಿಸಿದ್ದ ಚಿನ್ನದ ಗಂಗೆ ಮತ್ತು ಬೆಳ್ಳಿಯಿಂದಾದ ಪಂಚಮಿ ಚಂದ್ರನ ಬಿಂಬ . ತಲೆಯಮೇಲೆ ಕೊಡೆ ಹಿಡಿದ ಬಂಗಾರದ ಏಳು ತಲೆ ನಾಗ . ನಾಗಾಭರಣ , ಚಿನ್ನದಲ್ಲಿ ಕಟ್ಟಿಸಿದ್ದ ರುದ್ರಾಕ್ಷಿ ಮಾಲೆ , ನವರತ್ನ ಹಾರ , ಚಿನ್ನದ ಬಿಲ್ಪತ್ರೆ ಹಾರ ಮತ್ತು ಇನ್ನೂ ಅನೇಕ ಅಮೂಲ್ಯವಾದ ಮಣಿಮಯ ಹಾರಗಳನ್ನು ಕೊರಳಲ್ಲಿ ಧರಿಸಿ ಜರಿಯಂಚಿನ ಪಂಚೆ ಉಟ್ಟು ಸರ್ವಾಲಂಕಾರ ಸುಂದರನಾಗಿ ತನ್ನ ಭಕ್ತಾದಿಗಳಿಗೆ ದಿವ್ಯ ದರುಶನವನ್ನು ನೀಡುತ್ತಿದ್ದ ಶಿವ !
ಅಭಿಷೇಕ , ಅರ್ಚನೆ , ನೈವೇದ್ಯಗಳನ್ನು ಮಾಡಿ ಮುಗಿಸಿ ಬಿಲ್ವ ಪತ್ರೆ ಮತ್ತು ತಾಜಾ ಹೂವುಗಳ ಅಲಂಕಾರದಲ್ಲಿ ರಾರಾಜಿಸುತ್ತಿದ್ದ ಮಹಾದೇವನಿಗೆ ಮಂಗಳಾರತಿಯನ್ನು ಬೆಳಗಿದರು ಪೂಜಾರಪ್ಪ . ಕೂಡಿದ್ದ ಭಕ್ತಾದಿಗಳಿಗೆಲ್ಲ ತೀರ್ಥ ಮತ್ತು ಪ್ರಸಾದ ವಿನಿಮಯವಾಯಿತು .
ಎರಡು ಯಾಮ ಪೂಜೆಗಳೂ ಸಾಂಗವಾಗಿ ನಡೆದು ಮುಗಿದಿದ್ದವು . ಇನ್ನೂ ಎರಡು ಯಾಮ ಪೂಜೆಗಳು ನಡೆಯಲಿದ್ದವು . ಇಡೀ ರಾತ್ರಿ ಪೂಜೆಗಳನ್ನು ನೋಡುತ್ತಾ ಜಾಗರಣೆ ಮಾಡಲು ಕೆಲವರು ಉಳಿದುಕೊಂಡಿದ್ದರು . ಅರ್ಧ ರಾತ್ರಿಯಾಗಿದ್ದರಿಂದ ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಬಂದಿದ್ದವರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು . ಮಲ್ಲವ್ವ ಮತ್ತು ಮಾಯಿದೇವರು ಸಹ ಮನೆಗೆ ಹೊರಟು ನಿಂತರು.
ನಾಲಕ್ಕು ಯಾಮ ಪೂಜೆಗಳನ್ನು ನೋಡುತ್ತಾ ಜಾಗರಣೆ ಮಾಡಲು ತೀರ್ಮಾನಿಸಿದ್ದ ಮಾಯಿತಂಮ . ಅಣ್ಣಯ್ಯನ ಜೊತೆ ತಾನೂ ಜಾಗರಣೆ ಮಾಡವುದಾಗಿ ಹಠ ಮಾಡಿ ದೇವಾಲಯದಲ್ಲೇ ಉಳಿದುಕೊಂಡಿದ್ದ ತುಂಟ ಪೋರ ಮಂಚಿಯಂಣ . ಮಂಗಳಾರತಿಯ ಸಮಯದಲ್ಲಿ ಗಂಟೆ ಹೊಡೆಯುವುದು , ಶಂಖ ನಾದವನ್ನು ಮೊಳಗುವುದು ಮತ್ತು ನಗಾರಿ ಬಾರಿಸುವುದು ಮಂಚಿಯಂಣ ಉತ್ಸಾಹದಿಂದ ಮಾಡುತ್ತಿದ್ದ ಕೆಲಸಗಳು . ಅಷ್ಟೇ ಅಲ್ಲದೆ ಪೂಜೆಗಳ ನಂತರ ದೊರಕಲಿರುವ ಪ್ರಸಾದಗಳಿಗಾಗಿಯೂ ನಾಲಿಗೆ ಚಪ್ಪರಿಸಿಕೊಂಡು ಕಾಯುತ್ತಿದ್ದ ಅವನು .
ಮೂರನೆಯ ಯಾಮ ಪೂಜೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು ಪೂಜಾರಪ್ಪ . ಅವರು ಜಪಿಸುತ್ತಿದ್ದ ಮಂತ್ರಗಳ ಏಕವಾದ ಸ್ವರ ಬಿಟ್ಟು ಬೇರೆ ಶಬ್ದವಿಲ್ಲ . ದೇವರಬನದಲ್ಲಿ ಸುಯ್ ಸುಯ್ ಎಂದು ಬೀಸುತ್ತಿದ್ದ ತಂಗಾಳಿ . ಅರ್ಧ ರಾತ್ರಿಯ ಚುಮು ಚುಮು ಚಳಿ . ಇಂತಹ ಪ್ರಶಾಂತವಾದ ವಾತಾವರಣದಲ್ಲಿ ಮಾಯಿತಂಮನ ಮನದಲ್ಲಿ ಮಾತ್ರ ಅದೇಕೋ ಅರಿಯದ ತಳಮಳ ! ಚಡಪಡಿಕೆ !
ತರಬೇತಿ ಶಿಬಿರದಲ್ಲಿ ಮಾಜಿ ಸೈನಿಕರಾದ ಧೀರೇಶೈಯ ಹೇಳಿದ್ದ ವಿಚಾರ ನೆನಪಿಗೆ ಬಂದಿತು . ಆಪತ್ತುಗಳನ್ನು ಮುಂಚಿತವಾಗಿಯೇ ಅರಿತುಕೊಳ್ಳುವಂತಹ ಸೂಕ್ಷ್ಮ ಬುದ್ಧಿಯನ್ನು ಪ್ರಕೃತಿಯು ಎಲ್ಲ ಜೀವರಾಶಿಗಳಿಗೂ ಒಂದೇ ತೆರನಾಗಿ ನೀಡಿದೆಯಂತೆ . ಅವಶ್ಯಕವಾದ ಚಟುವಟಿಕೆಗಳೊಂದಿಗೆ ಅನೇಕ ಅನಾವಶ್ಯಕ ಚಟುವಟಿಕೆಗಳಲ್ಲಿಯೂ ಮಾನವ ತನ್ನನ್ನು ತೊಡಗಿಸಿಕೊಂಡಿರುವ ಕಾರಣ ಅವನ ಒಳ ಅರಿವಿನ ಶಕ್ತಿ ಕುಂಠಿತಗೊಂಡಿದೆಯಂತೆ . ತಕ್ಕ ಅಭ್ಯಾಸಗಳಿಂದ ಬುದ್ಧಿ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳಬಹುದೆಂದೂ , ಓರ್ವ ಸೈನಿಕನಿಗೆ ಒಳ ಅರಿವು ಶಕ್ತಿಯುತವಾಗಿರಬೇಕಾದದ್ದು ಎಷ್ಟು ಮುಖ್ಯವೆಂಬುದನ್ನೂ ವಿವರಿಸಿದ್ದರು . ತರಬೇತಿ ಶಿಬಿರದಲ್ಲಿ ಬಾಗವಹಿಸಿದವರಿಗೆ ಅದಕ್ಕಾಗಿ ಕೆಲವು ವ್ಯಾಯಾಮಗಳನ್ನೂ ಕಲಿಸಿದ್ದರು ಧೀರೇಶೈಯ .
ಅಂದಿನಿಂದಲೇ ತನ್ನ ಬುದ್ಧಿ ಸೂಕ್ಷ್ಮತೆಯನ್ನು ವೃದ್ಧಿಸಬಲ್ಲ ವ್ಯಾಯಾಮಗಳನ್ನು ಶ್ರದ್ದೆಯಿಂದ ಮಾಡ ತೊಡಗಿದ್ದನು ಮಾಯಿತಂಮ . ಈ ಮನಸಿನ ತಳಮಳ ಮತ್ತು ಚಡಪಡಿಕೆ ಶೀಘ್ರದಲ್ಲೇ ಸಂಭವಿಸಲಿರುವ ಆಪತ್ತನ್ನು ಸೂಚಿಸುತ್ತಿವೆ ಎಂಬುದು ಅವನಿಗೆ ಅರಿವಾಯಿತು . ಕೂಡಲೇ ಸೊಂಟ ಪಟ್ಟಿಯಲ್ಲಿ ಖಡ್ಗಕ್ಕಾಗಿ ತಡಕಾಡಿತು ಅವನ ಬಲಿಷ್ಟ ಕೈ . ಅಯ್ಯೋ ! ಜಾಗರಣೆ ಮಾಡುವಾಗ ಆಯುಧಗಳೇಕೆ ಎಂದುಕೊಂಡು ಅದನ್ನು ಮನೆಯಲ್ಲೇ ಬಿಟ್ಟು ಬಂದನಲ್ಲ ! ಯೋಚಿಸಲು ಸಮಯವಿಲ್ಲದೆ ತಕ್ಷಣ ಒಂದು ತೀರ್ಮಾನಕ್ಕೆ ಬಂದನು ಮಾಯಿತಂಮ .
ಸದ್ದಿಲ್ಲದೇ ಮಾಯಿತಂಮ ದೇವಾಲಯದಿಂದ ಹೊರಕ್ಕೆ ನಡೆದನು . ದೇವರಬನದಲ್ಲಿಯ ಹೆಮ್ಮರಗಳಲ್ಲಿ ಅಡಗಿದ್ದ ಪಕ್ಷಿ ಸಂಕುಲ ಇದ್ದಕ್ಕಿದ್ದಂತೆಯೇ ಕಲರವ ಮಾಡುತ್ತ ಆಕಾಶಕ್ಕೆ ಹಾರಿದ್ದನ್ನು ಗಮನಿಸಿದನು . ಕ್ಷೀಣವಾಗಿ ಕೇಳಿಸುತ್ತಿದ್ದ ಕುದುರೆಗಳ ಗೊರಸಿನ ಶಬ್ದವನ್ನು ಗ್ರಹಿಸಿಕೊಂಡವು ಅವನ ಸೂಕ್ಷ್ಮವಾದ ಕಿವಿಗಳು ! ಬರುತ್ತಿರುವುದು ಯಾತ್ರಿಕರಿರಬಹುದೇ ಎಂಬ ಒಂದು ಅನುಮಾನ ಮನದಲ್ಲಿ ಇಣುಕಿತು .
ದೂರದ ಪಯಣ ಕೈಗೊಂಡ ಯಾತ್ರಿಕರು ದೇವಾಲಯದ ಹೊರಾಂಗಣದಲ್ಲಿದ್ದ ಮಂಟಪದಲ್ಲಿ ತಂಗಿ, ಬಾವಿಯಿಂದ ನೀರು ಸೇದಿ ಅಲ್ಲೇ ಏನಾದರೂ ಬೇಯಿಸಿಕೊಂಡು ತಿಂದು , ವಿಶ್ರಾಂತಿ ಪಡೆದು , ನಂತರ ತಾವು ಕಟ್ಟಿಕೊಂಡು ಬಂದ ಗಾಡಿಗಳಲ್ಲಿ ಪಯಣ ಮುಂದುವರಿಸುತ್ತಿದ್ದರು . ಆದರೆ ಯಾತ್ರಿಕರು ಈ ಅರ್ಧ ರಾತ್ರಿಯಲ್ಲಿ ಕುದುರೆಯೇರಿ ಬರುವುದುಂಟೇ ? ಬಹುಶಃ ಇವರು ಕಳ್ಳರೇ ಇರಬಹುದೇ ? ಮಾಯಿತಂಮನ ಮನದಲ್ಲಿ ಏನೇನೋ ಯೋಚನೆಗಳು !
ಪೂಜೆ ಯಾವಾಗ ಮುಗಿಯುವುದೋ ? ಪಂಚಾಮೃತ ಪ್ರಸಾದ ಯಾವಾಗ ದೊರಕುವುದೋ ಎಂಬ ಯೋಚನೆಯಲ್ಲಿದ್ದ ಮಂಚಿಯಂಣ . ಪ್ರಸಾದವಿದ್ದ ಹರಿವಾಣದಮೇಲೊಮ್ಮೆ , ಗರ್ಭಗುಡಿಯಲ್ಲಿದ್ದ ಶಿವನ ಕಡೆಯೊಮ್ಮೆ , ಪೂಜೆಯಲ್ಲೇ ತಲ್ಲೀನರಾಗಿದ್ದ ಜನರ ಮೇಲೊಮ್ಮೆ ದೃಷ್ಟಿ ಹರಿಸುತ್ತ ಕುಳಿತಿದ್ದವನು ಮಾಯಿತಂಮನನ್ನು ಕಾಣದೆ ಚಕಿತಗೊಂಡನು . ಜಾಗರಣಗೆ ಕೂರದೆ ಅಣ್ಣಯ್ಯ ಎಲ್ಲಿಗೆ ಹೋದನು ಎಂಬ ಗೊಂದಲಕ್ಕೊಳಗಾಗಿ ಎಲ್ಲಕಡೆ ಕಣ್ಣು ಹೊರಳಿಸಿ ನೋಡಿದನು . ದೇವಾಲಯದ ಹೊರಾಂಗಣದಲ್ಲಿ ನಿಂತಿದ್ದ ಮಾಯಿತಂಮನನ್ನು ಕಂಡು ' ಅಣ್ಣಯ್ಯ ! ' ಎನ್ನುತ್ತಾ ತಾನೂ ಹೊರಗೆ ಹೆಜ್ಜೆಯಿಟ್ಟನು .
'' ಬರಬ್ಯಾಡ ! ಒಳಕ್ಕೆ ನಡಿ ! ಬಾಗಿಲಿಕ್ಕಿ ಸುಮ್ಕೆ ಕೂರು ! '' ಎಂದು ಅಬ್ಬರಿಸಿದ ಮಾಯಿತಂಮ , ದೇವಾಲಯದ ಪ್ರಾಕಾರದಲ್ಲಿ ತೂಗುತ್ತಿದ್ದ ಪುರಾತನವಾದ ಕಂಚಿನ ಗಂಟೆಯನ್ನು ಸರಪಳಿಯ ಸಮೇತ ಕಿತ್ತು , ಸರಪಳಿಯ ತುದಿಯನ್ನು ಭದ್ರವಾಗಿ ಕೈಯಲ್ಲಿ ಹಿಡಿದುಕೊಂಡನು .
ಈ ಗದ್ದಲಕ್ಕೆ ಪೂಜಾರಪ್ಪ ಹೇಳುತ್ತಿದ್ದ ಮಂತ್ರದ ಶಬ್ದ ಥಟ್ಟನೆ ನಿಂತಿತು . ಪೂಜೆ ನೋಡುತ್ತಿದ್ದವರೆಲ್ಲ ಏನೋ ಎಂತೋ ಎಂದು ಗಾಬರಿಯಿಂದ ಎದ್ದು ನಿಂತರು .
'' ಪೂಜಾರಪ್ಪ ! ಏನೇ ಆಗ್ಲಿ ! ಪೂಜೆ ನಿಲ್ಲಿಸ್ಬ್ಯಾಡಿ ! ಭಯ ಬ್ಯಾಡ ! ಎಲ್ರೂ ಬಾಗಿಲಿಕ್ಕೊಂಡು ಒಳಕ್ಕೇ ಇರಿ ! '' ಮಾಯಿತಂಮ ನುಡಿಯುತ್ತಿದ್ದ ಹಾಗೆಯೇ ಕುದುರೆಗಳ ಗೊರಸಿನ ಶಬ್ದ ಎಲ್ಲರಿಗೂ ಕೇಳಿಸುವಷ್ಟು ಹತ್ತಿರವಾಗುತ್ತಿತ್ತು .
'' ಅಯ್ಯಯೋ ! ಕಳ್ಳರೇ ? " ಎಲ್ಲರೂ ಮಾಡುವುದರಿಯದೆ ಬೆದರಿ ನಿಂತರು .
ಮಾಯಿತಂಮನ ಸಹಪಾಠಿಗಳು ಕೆಲವರು ದೇವಾಲಯದ ಹೊರಾಂಗಣಕ್ಕೆ ಧಾವಿಸಿದರು . ಉಳಿದವರು ಬಾಗಿಲನ್ನು ಮುಚ್ಚಿ ಭದ್ರಪಡಿಸಿ ಶಿವನನ್ನು ನೆನೆಯುತ್ತ ಜೀವ ಕೈಯಲ್ಲಿ ಹಿಡಿದು ಕುಳಿತರು . ' ಶಿವಪ್ಪಾ ! ನೀನೆ ಗತಿ ! ' ಎಂದುಕೊಂಡು ದಡಬಡಿಸುತ್ತ ಪೂಜೆಯನ್ನು ಮುಂದುವರಿಸಿದರು ಪೂಜಾರಪ್ಪ .
ಮಂಚಿಯಂಣ ದೇವಾಲಯದ ಜಾಲಂಧ್ರದ ಮೂಲಕ ಭಯದಿಂದ ಹೊರಗೆ ನೋಡುತ್ತ ನಿಂತನು . ಅವನು ನೋಡನೋಡುತ್ತಿದ್ದ ಹಾಗೆಯೇ ವಿಚಿತ್ರ ಧ್ವನಿ ಹೊರಡಿಸುತ್ತ ದೇವಾಲಯವನ್ನು ಸುತ್ತುವರೆದರು ಅಶ್ವಾರೋಹಿಗಳಾಗಿದ್ದ ಕಳ್ಳರು .
ಓರ್ವ ಧಾಂಡಿಗ ಕುದುರೆಯಿಂದ ಜಿಗಿದು ದೇವಾಲಯದ ಬಾಗಿಲನ್ನು ಕುರಿತು ಹೆಜ್ಜೆಯಿಡುತ್ತಿದ್ದದ್ದು ಪಂಜಿನ ಬೆಳಕಿನಲ್ಲಿ ಮಂದವಾಗಿ ಕಾಣಿಸಿತು . ಕಣ್ಣು ಮಿಟುಕಿಸುವ ಸಮಯದಲ್ಲಿ ಇದ್ದಕ್ಕಿದ್ದಂತೆ ತಲೆಯಮೇಲೆ ಸಿಡಿಲೆರಗಿದಂತೆ ಬಲವಾಗಿ ಬಿದ್ದ ಏಟಿನಿಂದ ಅವನು ತತ್ತರಿಸಿ ತೂರಾಡುವುದೂ ಕಾಣಿಸಿತು .
'' ಯಾವನ್ಲೇ ಅವ್ನು ? ಹಿಡೀರೋ ಅವ್ನ ! '' ಎಂದು ಚೀರಿ ಕುಸಿದನು ಪೆಟ್ಟು ದಿಂದವ .
ಮಾಯಿತಂಮ ಬಿಗಿಯಾಗಿ ಹಿಡಿದಿದ್ದ ಗಂಟೆಯ ಸರಪಳಿಯನ್ನು ಬೀಸುತ್ತ ತನ್ನನ್ನು ಹಿಡಿಯಲು ಬಂದ ಇತರರನ್ನು ಜಾಡಿಸಿ ಜಾಡಿಸಿ ಹೊಡೆದನು . ಪುರಾತನವಾದ ಘನವಾದ ಕಂಚಿನ ಗಂಟೆಯ ಏಟು ತಾಳಲಾರದೆ ಕಳ್ಳರು ಎಲ್ಲಕಡೆ ಚದುರಿದರು . ಅದೇ ಸಮಯ ಯಾತ್ರಿಕರ ಮಂಟಪದಲ್ಲಿ ದೊರಕಿದ ಕಟ್ಟಿಗೆಗಳನ್ನು ಬಳಸಿ ಎದುರಿಸಿದ ಕಳ್ಳರನ್ನು ಎದ್ವಾ ತದ್ವಾ ಬಡಿಯುವುದಕ್ಕೆ ಮುಂದಾದರು ಮಾಯಿತಂಮನ ಜೊತೆಗೂಡಿದ ಯುವಕರು .
ಏಟು ತಿಂದು ಕೆಳಕ್ಕುರುಳಿದ ಓರ್ವನ ಖಡ್ಗಗವನ್ನು ಕಸಿದುಕೊಂಡ ಮಾಯಿತಂಮ , ಒಂದು ಕೈಯಿಂದ ಗಂಟೆಯ ಸರಪಳಿಯನ್ನು ತಿರುಗಿಸುತ್ತಾ ಮತ್ತೊಂದು ಕೈಯಿಂದ ಖಡ್ಗವನ್ನು ಝಳಪಿಸುತ್ತಾ ತಿರುತಿರುಗಿ ಕಳ್ಳರನ್ನು ಚಚ್ಚ ತೊಡಗಿದನು. ರುದ್ರಾವತಾರ ತಾಳಿದ್ದ ಅಣ್ಣಯ್ಯನನ್ನು ಎವೆಯಿಕ್ಕದೆ ನೋಡುತ್ತಾ ನಿಂದ ಮಂಚಿಯಂಣ . ಅಣ್ಣಯ್ಯ ಕೊಡುತ್ತಿದ್ದ ಏಟಿಗೆ ಮರದಿಂದ ಕಾಯಿ ಉದುರುವ ಹಾಗೆ ಉದುರಿ ಬೀಳುತ್ತಿದ್ದ ಕಳ್ಳರನ್ನು ಕಂಡು , ಖುಷಿಯಿಂದ ಸೀಟಿ ಹೊಡೆಯುವ ತನ್ನ ಆಸೆಯನ್ನು ಕಷ್ಟಪಟ್ಟು ನಿಯಂತ್ರಿಸಿಕೊಂಡನು ಹುಡುಗ !
ಎದ್ದೆನೋ ಬಿದ್ದೆನೋ ಎಂದು ಓಡಿ ಹೋದರು ಗಾಯಗೊಂಡ ಕಳ್ಳರು ಕೆಲವರು . ಉಳಿದವರನ್ನು ಬಾವಿಯ ಬಳಿ ಇದ್ದ ರಾಟೆ ಹಗ್ಗದಿಂದ ಬಂಧಿಸಿ ಮೂಲೆಯಲ್ಲಿ ಉರುಳಿಸಿದ್ದರು . ಮಾಯಿತಂಮನ ನಾಯಕತ್ವದಲ್ಲಿ ಮೂರ್ನಾಲಕ್ಕು ಕುದುರೆಗಳನ್ನು ವಶಪಡಿಸಿಕೊಂಡಿದ್ದರು ಮಳಲೂರುಪಟ್ಟಣದ ಯುವಕರು .
ಗಾಯಗಳನ್ನು ತೊಳೆದುಕೊಂಡು ಮಾಯಿತಂಮ ತನ್ನ ಸಹಪಾಠಿಗಳೊಂದಿಗೆ ಗುಡಿಯೊಳಕ್ಕೆ ಹೊಕ್ಕಾಗ ನಾಲಕ್ಕನೆ ಯಾಮ ಪೂಜೆ ಸಹ ಮುಗಿಯುವ ಹಂತ ತಲುಪಿತ್ತು . ಯಾವ ಗಲಭೆಗೂ ಗಮನ ಕೊಡದೆ ಏಕಾಗ್ರ ಚಿತ್ತದಿಂದ ಪೂಜೆಯನ್ನು ಮುಗಿಸಿದ ಪೂಜಾರಪ್ಪ , ಕಂಬಕ್ಕೊರಗಿ ಸೊರಗಿ ಕುಳಿತಿದ್ದ ಮಾಯಿತಂಮನ ಹಣೆಗೆ ಭಸ್ಮ ಪ್ರಸಾದವನ್ನು ಹಚ್ಚಿದರು .
'' ಕಪಾಡ್ದೆ ನನ್ನಪ್ಪ ! ಕಾಪಾಡ್ದೆ ! '' ಎಲ್ಲರೂ ಮಾಯಿತಂಮನನ್ನು ಕೊಂಡಾಡಿದರು .
'' ಅಣ್ಣಯ್ಯ ! '' ಎನ್ನುತ್ತಾ ಓಡೋಡಿ ಬಂದು ತನ್ನನ್ನು ಅಪ್ಪಿಕೊಂಡ ಮಂಚಿಯಂಣನನ್ನು ಯಾತನೆಯಿಂದ ಮೆಲ್ಲನೆ ದೂರ ಸರಿಸಿದ ಮಾಯಿತಂಮ . ಅವನ ಹೊಟ್ಟೆಯಲ್ಲಿ ಬಾಕುವಿನಿಂದ ಇರಿದ ಆಳವಾದ ಗಾಯವನ್ನು ಕಂಡು ಗಾಬರಿಯಿಂದ ''ಅಣ್ಣಯ್ಯ '' ಎಂದು ಚೀರಿದ ಮಂಚಿಯಂಣ .
-----------------------------------------------------------------------------------------------------------------------------
'' ಏನೇನೋ ಆಗಿ ಹೋಯ್ತು ಮಾಯಿದೇವರೆ ! ದೇವರ ಆಭರಣಗಳ ಪೆಟ್ಗೆ ನನ್ನಲ್ಲೇ ಉಳ್ಕೊಂಡಿತ್ತು . ತಿಂಗಳೇ ಕಳೆದು ಹೋಯಿತು . ನೀವು ಸ್ವಲ್ಪ ಸುಧಾರಿಕೊಳ್ಳಲಿ ಅಂತ ಕಾಯ್ತಿದ್ದೆ . ಇವತ್ತು ಮತ್ತೆ ಅದನ್ನ ನಿಮ್ಮ ಕೈಗೆ ಒಪ್ಪಿಸಿದ್ರೆ ಮಾತ್ರ ನನಗೆ ಸಮಾಧಾನ ... '' ಮಾಯಿದೇವ ಗಉಡರ ಮುಂದೆ ಆಭರಣಗಳ ಪೆಟ್ಟಿಗೆ ಇರಿಸಿ ಮೆಲ್ಲನೆ ನುಡಿದರು ಪೂಜಾರಪ್ಪ .
'' ಮಾಯಿ ... ನನ್ ಮಾಯಿತಂಮ........ '' ಗಂಟಲು ಬಿಗಿದುಕೊಂಡು ಬರಲು , ಕಣ್ಣೀರಿಡುತ್ತ ಮಂಚದಿಂದ ಎದ್ದು ಕುಳಿತರು ಪಟ್ಟಣದ ಗಉಡರು .
ಅಂದು ದೇವಾಲಯದಿಂದ ಎದ್ವಾ ತದ್ವಾ ಕೇಳಿಬಂದ ಗಂಟಾ ನಾದದಿಂದ ಚಕಿತರಾದ ಮಳಲೂರುಪಟ್ಟಣದ ನಿವಾಸಿಗಳು ಏನೋ ಅನಾಹುತ ಸಂಭವಿಸಿರಬೇಕು ಎಂದು ಊಹಿಸಿ ದೇವಾಲಯದತ್ತ ಓಡಿದ್ದರು . ಅಷ್ಟು ಹೊತ್ತಿಗಾಗಲೇ ಕಳ್ಳರೊಂದಿಗಿನ ಕಾಳಗ ಮುಕ್ತಾಯಗೊಂಡಿತ್ತು . ಸಿಕ್ಕಿ ಬಿದ್ದಿದ್ದ ಕಳ್ಳರನ್ನು ಮತ್ತು ಕುದುರೆಗಳನ್ನು ಆರಕ್ಷಕರ ಬಳಿ ಒಪ್ಪಿಸಿದರು. ಗಾಯಗೊಂಡಿದ್ದ ಯುವಕರಿಗೆ ತುರ್ತಾಗಿ ಪ್ರಥಮ ಚಿಕಿತ್ಸೆ ನೀಡ ತೊಡಗಿದರು ಗ್ರಾಮದ ವೈದ್ಯರು .
ಗಾಯ ಆಳವಾಗಿದ್ದು ಜ್ವರವೂ ಸೇರಿಕೊಂಡ ಕಾರಣ ಮಾಯಿತಂಮನ ಪರಿಸ್ಥಿತಿ ಗಂಭೀರವಾಯಿತು . ವೈದ್ಯೋಪಚಾರ , ಊರವರ ಪ್ರಾರ್ಥನೆ ಯಾವುದೂ ಸಫಲವಾಗದೆ , ಮರು ದಿನವೇ ಶಿವನ ಪಾದ ಸೇರಿದ ಮಳಲೂರುಪಟ್ಟಣದ ಮಾವೀರ ಮಾಯಿತಂಮ . ವೀರನ ಮಡದಿ ಮಲ್ಲವ್ವ ಸಹಗಮನ ಮಾಡಿಕೊಂಡು ಸತಿಯಾದಳು .
ಅಣ್ಣಯ್ಯ ಮತ್ತು ಅತ್ತಿಗೆಯನ್ನು ಒಮ್ಮೆಗೆ ಕಳೆದುಕೊಂಡು ಮಂಕು ಬಡಿದವನಂತೆ ಮೂಲೆಯಲ್ಲಿ ಅಡಗಿ ಕುಳಿತುಬಿಟ್ಟಿದ್ದ ಮಂಚಿಯಂಣ . ಮಾಯಿದೇವ ಗಉಡರು ಕೊರಗಿ ಕೊರಗಿ ಹಾಸಿಗೆ ಹಿಡಿದಿದ್ದರು. ಅವರಿಬ್ಬರ ದುಃಖ ನೋಡಿ ಪೂಜಾರಪ್ಪನಿಗೆ ಬಹಳವೇ ಸಂಕಟವಾಯಿತು .
'' ಮಾಯಿತಂಮ ಎಲ್ಲಿಗೂ ಹೋಗಿಲ್ಲ ! ಇಲ್ಲೇ , ನಮ್ಮೆಲ್ರ ಮನಗಳಲ್ಲೂ ಇದ್ದಾನೆ ! ಒಂದ್ ಮಾತು ಹೇಳ್ತಿನಿ ಕೇಳಿ ಗಉಡರೆ ! ಏನಾದರೂ ಒಂದನ್ನು ಮಾಡಿದವ ಸತ್ತರೂ ಬದುಕಿರುವನಂತೆ ! ಏನೂ ಮಾಡ್ದೆ ಇರುವವನು ಬದುಕಿದ್ರೂ ಸತ್ತವನಂತೆ ! ನಮ್ ಮಾಯಿತಂಮ ದೇವರ ಸ್ವತ್ತು ರಕ್ಷಿಸಿ ಸಾಧನೆ ಮಾಡಿದ ! ಅದಕ್ಕಾಗಿ ತನ್ನ ಪ್ರಾಣವನ್ನೇ ಕೊಟ್ಟ ! ಸೂರ್ಯ ಚಂದ್ರರಿರೋ ವರೆಗೂ ಅವನ ಹೆಸರು ಶಾಶ್ವತವಾಗಿರುತ್ತದೆ ! ಅಂತಾ ಚಿನ್ನದಂತಾ ಮಗನ ತಂದೆಯಾಗಿ ನೀವು ಹೀಗೆ ದುಃಖಿಸ ಬರದು ! ಎಂದಿನಂತೆ ನಮ್ಮ ಪಟ್ಟಣದ ಗಉಡರಾಗಿ ನಿಮ್ಮ ಕರ್ತವ್ಯಗಳನ್ನ ನಿಭಾಯಿಸ್ಬೇಕು ! ''
'' ಹುಲಿಯಂತ ಮಗ ! ನನ್ ಬಲಗೈ ಇದ್ದಂಗಿದ್ದ ! ಈಗ ಒಂಟಿಯಾಗಿ ಇದನ್ನೆಲ್ಲಾ ಎಂಗ್ ನಿಭಾಯ್ಸೋದು ಪೂಜಾರಪ್ಪ ? ''
'' ಅಪ್ಪಯ್ಯ ! ನಿಮ್ಮೊಂದ್ಗೆ ನಾನ್ ಇವ್ನಿ ಅಪ್ಪಯ್ಯಾ ! ''
ಮೂಲೆಯಿಂದ ಎದ್ದು ಬಂದು ಅಪ್ಪಯ್ಯನನ್ನು ಬಿಗಿದಪ್ಪಿ ಆವೇಶದಿಂದ ನುಡಿದ ಮಂಚಿಯಂಣ ! ಆಶ್ಚರ್ಯದಿಂದ ಅವನನ್ನೇ ಎವೆಯಿಕ್ಕದೆ ನೋಡಿದರು ಪೂಜಾರಪ್ಪ !
ಹೇಳಿದ ಹಾಗೆಯೇ ಆವೇಶದಿಂದ ಕಾರ್ಯಗತನಾದ ಮಂಚಿಯಂಣ . ಅಣ್ಣಯ್ಯ ಮತ್ತು ಅತ್ತಿಗೆಗಾಗಿ ಒಂದು ವೀರಗಲ್ಲು ಮತ್ತು ಸತಿಗಲ್ಲನ್ನು ಕೆತ್ತಿಸಿ ಗೌರವದಿಂದ ಸ್ಥಾಪನೆ ಮಾಡಿದ . ಅಣ್ಣಯ್ಯನ ಎಲ್ಲ ಕೆಲಸ ಕಾರುಬಾರುಗಳನ್ನೂ ನಡೆಸಿಕೊಂಡು ಹೋಗುವುದನ್ನು ಕಲಿತ . ತರಬೇತಿ ಕೇಂದ್ರವನ್ನು ಮುಂದುವರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಲ್ಲದೆ ತಾನೂ ಸಹ ತರಬೇತಿ ಪಡೆಯಲು ಮುಂದಾದ .
ಮಂಚಿಯಂಣ ಕೆತ್ತಿಸಿ ಸ್ಥಾಪಿಸಿದ ವೀರಗಲ್ಲು ಮತ್ತು ಸತಿಗಲ್ಲು ಇಂದಿಗೂ ಮಳಲೂರುಪಟ್ಟಣದಲ್ಲಿ ಮಾಯಿತಂಮನ ವೀರ ಗಾಥೆಯನ್ನು ಹೇಳುತ್ತಿರುವುದನ್ನು ಕಾಣಬಹುದು .
-----------------------------------------------------------------------------------------------------------------------------
ಆಧಾರ - ಮಳೂರುಪಟ್ಟಣದ ಸಾ . ಶ . 1432 ರ ಮಾಯಿತಂಮನ ವೀರಗಲ್ಲು ಶಾಸನ .
ಮಾಹಿತಿ ಮತ್ತು 3 ಡಿ ಡಿಜಿಟಲ್ ಚಿತ್ರ ಕೃಪೆ - ದ ಮಿಥಿಕ್ ಸೊಸೈಟಿ / The Mythic Society
https://www.facebook.com/photo?fbid=497508009091245&set=pcb.497514802423899
----------------------------------------------------------------------------------------------------------------------------
THE HERO OF MALALOORUPATTANA !
Shivaratri celebrations had begun !
"Attige ! Look ! I have collected all the flowers and leaves needed ! Here , check ! "
Mallavva who was busy arranging the fragrant 'Thambittu' on large trays , looked up .
Japakusuma , Shankapushpa , Ganigale , Mallige Sevanthi , Thaavare ! The sight of dew drenched flowers in the basket proffered by Manchianna made her face blossom like a flower too . He had also brought a smaller basket with the flowers specially favoured by Shiva – Datura and Thumbe flowers - and lots of fresh green Bilwa leaves.
" Oh, Mancha ! Why did you get up so early , had a cold bath and go to collect flowers before even the sun is out fully ! You could have told one of the farm lads to do it!'' Remarked Mallavva affectionately. She cared for her husband’s little brother as she would for her very own child.
Mancha too adored his Sister-in-law as the Mother he had never known since birth . "Well, Attige ! Why are you wearing yourself out cooking so much Thambittu , Payasam and Rice ? You could have asked the cook to prepare them!"
"Cooking offerings for Shiva with my own hands for Shivaratri Puja is a kind of prayer . There is more merit in it. "
" Isn't it the same for flower collection too !?"
"You have learnt to argue well, you little imp ! ….if your brother comes to know you missed the morning exercise to run after flowers, you have had it ….and me too . He is convinced I have spoilt you rotten !"
As much as he was playful and at ease with Mallavva , Mancha was scared and wary of his brother Mayithamma.
Mayithamma , a born Patriot fiercely loyal to the Crown , was a disciplined soldier . The whole town had great regard for him and it was not only because he was the son of the region’s Chieftain , the much respected Gavuda Mayideva .
Mayithamma took many initiatives for the welfare of the townsfolk . More importantly, he came up with the idea of mobilising , training and sending batches of capable young men to join the army of the Emperor Veera Pratapa Devaraya , who ruled over a vast , prosperous country.
The Emperor was in constant need of expanding his army to ward off belligerent neighbours and invaders who were always looking for a chance to plunder their country . For their country was so wealthy and progressive , that reportedly, gems and pearls were sold like peanuts by vendors on the street ! Unsurprisingly , it was the eternal target of envious , less endowed neighbours.
When the Emperor needed soldiers , Chieftains of all his regions vied with each other to send their best men to the army.
With Chief Mayideva’s express permission, his son Mayithamma had created a Military Academy in their town for training both young men and able bodied older men , so that when the Emperor’s call came , Malalooru could send the first and best battalion of Soldiers to defend the country.
Mayithamma had inducted two retired army Generals , Dheereshayya and Mallesa , with long distinguished careers behind them , to train his men. The wasteland by the hillock just outside the town was converted into Training Grounds.
When Mallavva brought up the subject of missing training that day , Mancha shrugged with disinterest . " I want to have nothing to do with wars and battlefields ." Indeed , he was quite clever in cooking up excuses to miss training sessions frequently.
"Tell that to Annayya !" she laughed , adding a generous quantity of cardamom to the bubbling payasam .
Not that the elder brother needed to be told . Though Mayithamma was fond of his brother, the young boy’s total lack of enthusiasm for any form of physical exercises and complete disinterest in affairs of the country’s defense bothered him very much indeed . Too bad that his own brother would not make use of his Academy ! Will he amount to much in life ? But he is still a boy, perhaps he will have some maturity in time .
Just as Mancha was moving closer to the cauldron on the stove to savour the heavenly aroma , they heard Mayithamma’s loud call : " Mancha ! Hey you, Mancha ! Where are you ! "
" Here , Annayya ….I was just preparing …...to come for morning exercise...."
Before he could finish, Mallavva sprang to his defense , " He was coming over, but I asked him...to get flowers …."
Mayithamma glared at them and barked " What are you two idiots babbling about ? Who is exercising on Shivaratri day !....Mancha , go get the rope, we have to get The Box out. The Priest is here for God’s Ornaments....Move, Boy ! Don’t stand and gape , I will go and open the vault …..."
Mancha went to get the ropes, mumbling '' Senseless drama every year ! Why cant God’s Ornaments be kept in the Temple itself !? '' His words, though, were overheard by his father , Chief Mayideva, who was just then going in with the Priest .
'' Youngman ! It may not seem senseless to you when thieves break into our temple , just as they did a few years ago in the bigger town here . Who guards our Shiva in that dark , lonely Sacred Grove ? ''
True. Malalooru Pattana’s Shivalaya was built by some ancient king who had endowed it handsomely with gold and silver ornaments and lamps . Down the years , other kings and wealthy merchants too had added their own donations of precious and valuable things to the Temple. The fact that the temple was situated within a thick Sacred Grove and not within town had not seemed an issue to the townsfolk till a daring temple burglary in the next town sent everyone into a tizzy.
The Town Council decided it best to move the precious things from the temple to a safer place, within town , for storage . And what place could have been safer than the Gauda’s stone manor !
A vault was dug into the floor of the store room by the kitchen and all the valuables , locked in a treasure chest, were kept in the vault which was securely covered with a stone slab. Only once a year, on Shivaratri day, the jewels and other things were taken out for the important puja and right after that, returned to the vault. '' It is my sacred duty to keep the box safe . Not just mine , but it shall be the duty of my sons too. '' finished Chief Mayideva , tugging Mancha’s ear for emphasis.
The Priest gave a short laugh . '' Heard that , Boy ? Better learn to be a good soldier like your brother .''
'' Why should I ! '' Countered Mancha, nonchalantly, '' Father and Brother are enough to take care of all that ! I don’t like all that fighting business.....''
By now , they were at the Store Room where Mayithamma had already removed the stone slab and let himself into the vault.
Both brothers hauled the large Box out and loaded it into a covered cart. The Priest and The Chieftain got into the cart too. While Mayithamma and Mancha mounted a horse and followed the cart.
'' Annayya , when our country is thriving with abundance , and people enjoying all welfare under Devaraya Maharaja’s administration, why would anyone want to steal things ? '' wondered Mancha, as they trotted behind the cart, towards the Sacred Forest.
'' Greed, dear brother, greed !'' sighed Mayithamma . '' And War too creates problems. Soldiers of a defeated army do not all return to agriculture or other professions. Some become mercenaries in the pay of any army . A few choose to become highway robbers for easy money .''
At the Temple , people had already gathered in droves carrying all kinds of offerings.
'' Our Shiva stands like a Bhikashatana for the whole year. On this one day , we will see him adorned in full finery like the Emperor of Emperors ! '' they chattered in anticipation.
The Priest went about the preparations with a smile : ' all this finery is only for our satisfaction !' went his stream of thoughts . ' Whether we offer a Bilwa or a mound of diamonds , its all the same for Shiva !'
Soon it was time for the four part rituals to start. The Sanctum was a vision to behold ! In the light of oil lamps, the Gold Mask placed over the enormous Shivalingam , shone like the Sun. Three horizonal lines made of inlaid diamonds sparkled above the benevolent eyes. A large , blazing red ruby marked the Third Eye on the forehead. On the head was a gem studded diadem with a golden Ganga on one side and a Silver Crescent moon on the other. The brocaded silk garment was covered over by layers of necklaces studded with gems and pearls while a large garland of Gold Bilwa Leaves bordered everything .
Two of the four puja sessions went off in grand style and , as night had progressed, most townsfolk , who had come with children or elders, left . Mallavva too left with Mayideva. But Mancha adamantly stayed back , wishing to do jagarane like big brother.
The few who had stayed back to keep the whole night vigil were now sitting in meditation. It became much quieter , with only the sound of the Priest’s soft chanting punctuating the swish of breeze from the Forest.
In this peaceful atmosphere , Mayithamma felt strangely restless. He could not meditate. There was a vague feeling of impending danger that made him tense.
At the Training Academy, Trainer Dheereshayya had often instructed would-be soldiers to cultivate their sixth sense and to trust intuitions. All living creatures have an inborn ability to sense approaching unpleasantness or danger , he said. But , because of the hundreds of things in life that claim our attention everyday, our minds get dispersed and more subtle senses get drowned. We fail to recognise them and be fully alert and mindful all the time, because we do not fully develop that sense. Dheereshayya taught the students various exercises by which to sharpen these senses and using the faculties fully all the time.
Mayithamma had been practicing these exercises diligently and could feel his mind functioning better than before. Now, in the quiet of that night, he could distinctly feel that something untoward was going to happen soon.
He slipped out of the temple very quietly and walked towards the dark trees. He did not have to go far. The sound of hooves clip-clopping towards the temple was clearly heard through the heavy mist laden air.
It could not be pilgrims , his mind told him . For, pilgrims would carry torches and chant or sing along the way when moving in dark. It had to be Highway Robbers !
Meanwhile, Mancha , having failed to keep his mind in meditation mode, took to watching the people to see if they were meditating or dozing . Every now and then, his eyes wandered longingly towards the Payasam container. He checked , at what stage the Priest’s rituals were in , he admired the decorated icon , and he suddenly realised that his brother was not inside the temple hall !
Looking towards the door , he saw his shadowy figure standing near the porch , legs planted apart , left arm bent and hand clenched into a tight fist , back taut and ready to spring. His right hand clutched the metal chain , at the end of which was the bronze bell which had been hanging in the porch. '' Annayya ! '' Called out Mancha in alarm .
'' Don't ! '' Growled Mayithamma in a menacingly low angry voice. '' Don’t come out ! Shut the door and stay in ! ''
Disturbed by this exchange, the Priest paused his Puja and people got up hurriedly , crying in panic '' What ? What's happening ? ''
'' Priest Sir ! Continue ! don’t stop the Puja, whatever happens, don’t panic ! ''
A few of Mayithamma’s colleagues sprang to action, pushed the people in and locked the door and , picking up what they could, lined up with Mayithamma.
Caught inside , Mancha peered through the stone jaali window in terror.
By now the horsemen had come into view and were circling the temple. Mayithamma and his friends stood still.
One rider got down and stepped towards the porch , his weapon drawn - but suddenly slumped back with a scream.
Mancha saw his brother standing tall , swinging the bell by the chain , over the fallen man . Flashing the sword snatched from the fallen thug with one hand and wielding the heavy bell with the other , Mayithamma whirled like a man possessed smashing who ever dared to close in on him , while his colleagues attacked the gang ferociously.
After a short but terrible scuffle, all the robbers were subdued . At the same time, the priest finished the last session , made the final Arati and threw open the door .
People in the town were startled to hear the sudden commotion , screams and irregular clanging of the bell from the Sacred Grove . They quickly understood things were not right and rushed to the temple and were shocked on hearing about the incident .
Wounded people were helped into carts and the thugs, bound in ropes , were hauled off to the dungeons by Town Guards .
Mancha rushed out to hug his heroic brother , ''Annayyaaaaa ! ''
Mayithamma tried to smile , but winced as he pushed him away. A blood soaked dagger was sticking out from his side. Mancha froze in fright .
" Like a bad dream , terrible things befell our peaceful town …time has not healed us ." Sighed the priest, without looking at Chief Mayideva’s haggard face . '' But how long can I continue keeping The Box with me , fearing every moment ! The Gauda must make arrangement to take it back to your vault …..''
The old man gave him a vacant look and croaked “ My son ….my Mayi ….”
The Priest patted him arm kindly , '' Sir , What happened should not have happened , but it was Shiva’s will to call Mayi to Himself …... your son is now our Town’s Guardian Spirit . ''
It looked like nothing he said registered with the old Chief.
'' Sir '' , He began again , '' Let me remind you of a wise , old counsel . Those who have done good, achieved something, have no death . Those who have done nothing worthwhile are as good as dead though living on . Mayitamma is 'Amara' ! His name will live long till the Sun and Moon shine . You are our Gauda. Our Father Figure . You should be strong and continue to lead us . ''
Finally , the old man blinked and sighed . '' He was like my right arm . I am handicapped now . ''
'' You have Me, Appaiya ! ''
Mancha’s strong young voice, piping up so suddenly, startled him and the Gauda stared at him as though seeing him for the first time. The person he saw was not the carefree, irresponsible , undisciplined little boy he had known.
Mancha was as good as his word . His brother’s slow death, three days after being stabbed by the robber, had been a cruel blow, but he resolved to put it behind him. He made himself swallow the shock of seeing his beloved sister-in-law entering the pyre of her husband in Sahagamana.
He willed himself to believe that they were not dead and gone , but had merely turned into his Guiding Angels. Henceforth , it would be the mission of his life to make himself worthy of their blessings.
Mancha commissioned and installed a Veeragallu ( Herostone) for his brother and a Okkai Masti Kallu ( Sati Stone) for his sister in Law in their town. He took on all his brother’s projects with enthusiasm , particularly the running of the Martial Arts Academy . And he himself did not shirk from attending lessons there regularly.
The Hero stone installed by Manchiyanna still stands in Malaloorupattana singing the praise of heroic Mayithamma .
-------- ------------------------------------------------------------------------------------------------
This is a story based on the Shivaratri Inscription of Malurupattana
Information and 3 D Digital Picture in link below , Courtesy - The Mythic Society
https://www.facebook.com/photo?fbid=497508009091245&set=pcb.497514802423899
---------------------------------------------------------------------------------------------------------