Wednesday, June 1, 2022

ಜಕ್ಕೂರ ಅಲ್ಲಾಳನಾಥ / ALLALANATHA OF JAKKUR

 ಜಕ್ಕೂರ ಅಲ್ಲಾಳನಾಥ 

'' ನಚ್ಚು ! ಲೋ ನಚ್ಚೂ ! ತಡಿಯೊ ...  "

ಸ್ನೇಹಿತರು ಕರೆಯುತ್ತಿದ್ದದ್ದನ್ನೂ ಲಕ್ಷಿಸದೆ  ಜಕ್ಕೂರ ಕೆರೆಯ ದಂಡೆಯ ಮೇಲೆ ವೇಗವಾಗಿ ಓಡುತ್ತಿದ್ದ ನಚ್ಚು ಎಂಬ ನರಸಿಂಹ . 

'' ನಿಲ್ಲೋ ! ಯಾಕೋ  ಇಷ್ಟು ಅವಸರ ? " 

                                                                                                                

ಹುಡುಗರೆಲ್ಲ ಚಾಂಪತ್ತೈಪಳ್ಳಿಯ ಅಗ್ರಹಾರದಲ್ಲಿದ್ದ ಪಾಠಶಾಲೆಯ ವಿದ್ಯಾರ್ಥಿಗಳು .  ಪ್ರತಿ ದಿನ ಪಾಠ ಮುಗಿದಕೂಡಲೇ ಕೆರೆಯ ದಂಡೆಯಮೇಲೆ ನಡೆದುಕೊಂಡು ಹೋಗಿ ಅಲ್ಲಾಳನಾಥದೇವರ ಗುಡಿ ತಲುಪುತ್ತಿದ್ದರು . ಸಾಯಂಕಾಲದ ಪೂಜೆ ಮುಗಿಸಿ ಗೋಪಾಲ ಭಟ್ಟರು ನೀಡುತ್ತಿದ್ದ ಘಮಘಮಿಸುವ ಸಕ್ಕರೆ ಪೊಂಗಲ್ ಪ್ರಸಾದವನ್ನು ಸವಿದು , ಗುಡಿಯ ಎದುರಿಗಿದ್ದ ಬಯಲಿನಲ್ಲಿ ಆಟವಾಡಿ , ಕತ್ತಲಾವರಿಸುವ ಮುನ್ನ ಮನೆಗೆ ಹಿಂದಿರುಗುವುದು ಆ ಹುಡುಗರ ವಾಡಿಕೆಯಾಗಿತ್ತು . ಆದರೆ ಈ ನಚ್ಚುವಿಗೆ ಇಂದೇನಾಗಿದೆ ? ಹೀಗೆ ದೌಡಾಯಿಸುತ್ತಿರುವನಲ್ಲ !

'' ನಚ್ಚು ನಿಲ್ಲೋ ! ಗುಡಿಗೆ ನೀನು ಬರಲ್ವೇನೋ   ? " 

" ನೀವೆಲ್ಲ ಹೋಗಿ ! ನಾನು ಸೀದಾ ಮನೆಗೆ ಹೋಗ್ತೀನಿ  ! ಇವತ್ತು ನನ್ನ ತಾತ ಬರೋದಿದ್ರು   ! "

ತುಂಬಿ ತುಳುಕುತ್ತಿದ್ದ ವಿಶಾಲವಾದ ಕೆರೆಯ ದಂಡೆಯ ಮೇಲೆ ತನ್ನನ್ನು ಹಿಂಬಾಲಿಸುತ್ತಿದ್ದ ಸ್ನೇಹಿತರನ್ನು ಹಿಂದಿರುಗಿಯೂ  ನೋಡದೆ , ಗಟ್ಟಿಯಾಗಿ ಕೂಗಿ ಉತ್ತರಿಸುತ್ತಾ ಇನ್ನಷ್ಟು ವೇಗವಾಗಿ ಮನೆಯನ್ನು ಕುರಿತು ದಾಪುಗಾಲು ಹಾಕಿದ ನಚ್ಚು . 

 ಐದು ತಲೆಮಾರಿನ ಹಿಂದೆಯೇ ರಾಚುರಿನಿಂದ ಜಕ್ಕೂರಿಗೆ ವಲಸೆ ಬಂದಿದ್ದ ಕುಟುಂಬ ಅವರದ್ದು.  ಹೊಲ ಗದ್ದೆಗಳನ್ನು ನೋಡಿಕೊಂಡು , ವ್ಯಾಪಾರ ವ್ಯವಹಾರಗಳಲ್ಲೂ ತನ್ನನ್ನು ತೊಡಗಸಿಕೊಂಡು ತನ್ನ ಕುಟುಂಬದೊಂದಿಗೆ ಜಕ್ಕೂರಿನಲ್ಲೇ ನೆಲೆಸಿದ್ದರು ನಚ್ಚುವಿನ ತಂದೆ . ಮಹಾಮಂಡಲೇಶ್ವರರಾದ ವಿಠಲೇಶ್ವರದೇವ ಮಹಾ ಅರಸುಗಳ ಕಾರ್ಯಕರ್ತರಾಗಿದ್ದ ಅವನ ತಾತ ನರಸಿಂಹಯಗಳವರು ಕಾರ್ಯ ನಿಮಿತ್ತ  ಅರಸುಗಳ ಸಂಗಡವೇ  ಉಳಿದುಕೊಂಡಿದ್ದರು . ಸಮಯ ಸಿಕ್ಕಾಗ ಜಕ್ಕೂರಿಗೆ ಬಂದು , ತನ್ನ ಕುಟುಂಬದೊಂದಿಗೆ ಒಂದೆರಡು ದಿನಗಳು ಇದ್ದು ಹೋಗುವುದು ಅವರ ವಾಡಿಕೆಯಾಗಿತ್ತು  . 

ನಚ್ಚುವಿಗೆ ತಾತನಲ್ಲಿ ಬಹು ಪ್ರೀತಿ . ಅವರು ಬಂದಾಗಲೆಲ್ಲ ಅವರನ್ನು ಬಿಟ್ಟಗಲದೇ , ಸದಾ ಅವರ ಜೊತೆಯಲ್ಲಿಯೇ ಕಾಲ ಕಳೆಯುತ್ತಿದ್ದ . ರಾಜಕಾರ್ಯವಾಗಿ ತಾನು ಹೋಗಿ ಬಂದ  ಊರುಗಳ ಬಗ್ಗೆ , ನಾಡಿನಲ್ಲಿ  ಆಗಿಂದಾಗ್ಯೆ ನಡೆಯುತ್ತಿದ್ದ ಯುದ್ಧಗಳ ಬಗ್ಗೆ , ನಾಡಿನ ಇತಿಹಾಸದ ಬಗ್ಗೆ , ರಾಜಮಹಾರಾಜರು ಕಟ್ಟಿಸಿದ್ದ  ಗುಡಿಗೋಪುರಗಳ ಬಗ್ಗೆ  ಕಥೆ ಕಥೆಯಾಗಿ ಹೇಳುತ್ತಿದ್ದರು ತಾತ . ತಾತ ಬರುವ ಸಮಯಗಳಲ್ಲಿ ಅವನಿಗೆ ಪಾಠಶಾಲೆಗೆ ಹೋಗುವುದಕ್ಕೂ ಸಹ ಇಷ್ಟವಾಗುವುದಿಲ್ಲ . ಆದರೆ ಏನೇ ಆದರೂ ಶಾಲೆಗೆ ಹೋಗುವುದನ್ನು ತಪ್ಪಿಸ ಬಾರದು ಎಂದು ಅಮ್ಮ ಕಟ್ಟಪ್ಪಣೆ ಮಾಡಿದ್ದಳು . 

ತಾತ ಅಂದು ಬರಲಿದ್ದ ವಿಷಯ ತಿಳಿದಿದ್ದ ನಚ್ಚು ಮನಸ್ಸಿಲ್ಲದ ಮನಸ್ಸಿನೊಂದಿಗೇ  ಪಾಠಶಾಲೆಗೆ ಹೋಗಿದ್ದನು . ಪಾಠ ಮುಗಿದ ಮೇಲೆ ಒಂದು ಕ್ಷಣವೂ ವ್ಯರ್ಥ ಮಾಡದೆ  ತಾತನನ್ನು ಕಾಣುವ ತವಕದಿಂದ ಮನೆಯನ್ನು ಕುರಿತು ಓಡುತ್ತಿದ್ದನು ನಚ್ಚು . ದೂರದಲ್ಲಿ ಕಂಡ ಅಲ್ಲಾಳನಾಥ ದೇವರ ಗುಡಿಗೆ  ಕೈ ಮುಗಿದು , ಕೆನ್ನೆಗಳಲ್ಲಿ ರಪ ರಪ ಬಡಿದುಕೊಂಡು ವೇಗ ವೇಗವಾಗಿ ಹೆಜ್ಜೆ ಹಾಕಿದನು ನಚ್ಚು .  

------------------------------------------------------------------------------------------------------------------------

'' ತಾ.....ತಾ! " ಎಂದು ಕುಣಿಯುತ್ತ ಓಡಿ ಬಂದ ನಚ್ಚುವನ್ನು ಬರಸೆಳೆದು ಅಪ್ಪಿಕೊಂಡರು ನರಸಿಂಹಯಗಳು . 

'' ಪುಟ್ಟಾ ! ಶಾಲೆ ಮುಗೀತೇನೋ  ? " 

                                                                                                    

" ಹೂಂ ತಾತ ! ಇವತ್ತು ಶಾಲೆಗೆ  ಹೋಗಕ್ಕೆ ನನಗೆ ಇಷ್ಟವೇ ಇಲ್ಲ ! ಮನೇಲೇ ನಿನಗಾಗಿ ಕಾಯಬೇಕು ಅಂದ್ಕೊಂಡಿದ್ದೆ  ! ಆದ್ರೆ ಅಮ್ಮ ಬಿಟ್ಟಾಳೇ ? '' 

'' ಏನೇ ಆದ್ರೂ ಶಾಲೆಗೆ ಹೋಗೋದನ್ನ ಮಾತ್ರ ತಪ್ಪಿಸ್ಬಾರ್ದು  ಪುಟ್ಟ . ನೀನು ದೊಡ್ಡವನಾಗಿ ದೊಡ್ಡ ಹುದ್ದೆಗೆ ಸೇರಬೇಕು ! ಕೈ ತುಂಬಾ ಸಂಪಾದನೆ ಮಾಡ್ಬೇಕು ! ದೊಡ್ಡ ಮನುಷ್ಯ ಅನ್ನಿಸ್ಕೊ ಬೇಕು  ! ಇದೆಲ್ಲ ವಿದ್ಯಾಭ್ಯಾಸ ಮಾಡಿದ್ರೆ ಮಾತ್ರ ಸಾಧ್ಯ ಅಲ್ವೇ ? '' ಎಂದು ನಯವಾಗಿ ನುಡಿದರು ತಾತ . 

'' ನಿನ್ನ ಹಾಗೆ ನಾನೂ ಮಹಾಮಂಡಲೇಶ್ವರ ಅರಸುಗಳಿಗೆ ಕಾರ್ಯಕರ್ತನಾಗ ಬೇಕು ! ಅಲ್ವೇ ತಾತ ? " 

" ನಚ್ಚು ! ಕಾರ್ಯಕರ್ತನೇ  ಯಾಕೆ  ? ನೀನು ಇನ್ನೂ ಶ್ರೇಷ್ಠವಾದ  ಒಂದು ಹುದ್ದೆಗೆ ಯಾಕೆ ತಯಾರಾಗಬಾರದು ? "  ನಗುತ್ತ ಪ್ರಶ್ನಿಸಿದರು ತಾತ !

'' ಹಾ ! ಅದಕ್ಕಿಂತ ಶ್ರೇಷ್ಠ ಹುದ್ದೆಯೇ ? ಅದು ಸಾಧ್ಯವೇ ತಾತ ? " ನಚ್ಚು ಆಶ್ಚರ್ಯದಿಂದ ಬಾಯಿ ಬಿಟ್ಟನು  . 

" ಹೂಂ ! ಯಾಕೆ ಸಾಧ್ಯವಿಲ್ಲ ? ನಾನು ಹಿರಿಯ ಮಹಾಮಂಡಲೇಶ್ವರರ ಕಾರ್ಯಕರ್ತನ ಹುದ್ದೆಗೆ  ಆಯ್ಕೆ ಆದಾಗ ವಿಠಲೇಶ್ವರ  ನಿನ್ನಂತೆಯೇ ಸಣ್ಣ ಹುಡುಗನಾಗಿದ್ದ . ಆಟದ ಜೊತೆ ಪಾಠಗಳಲ್ಲೂ ಅವನಿಗೆ  ತುಂಬಾ ಆಸಕ್ತಿ . ಒಂದು ದಿನವೂ ಪಾಠ ಓದುವುದನ್ನು ತಪ್ಪಿಸಿದವನಲ್ಲ . ಅಷ್ಟೇ ಅಲ್ದೆ ಕುದುರೆ ಸವಾರಿ , ಕತ್ತಿ ವರಸೆ ಮುಂತಾದ ಯುದ್ಧ ಕಲೆಗಳನ್ನೂ ಕಲಿತು ಪರಿಣಿತನಾದ . ಬೆಳೆದು ಬಲಿಷ್ಠನಾಗಿ ಗಡಿ ಪ್ರದೇಶಗಳಲ್ಲಿ ಆಗಿಂದಾಗ್ಯೆ  ಹುಟ್ಕೊಳ್ತಿದ್ದ ಸಣ್ಣ ಪುಟ್ಟ ಕಲಹಗಳನ್ನ  ಶಮನಗೊಳಿಸ್ತಿದ್ದ . ಅವನ ತಂದೆಯವರ ದೇಹ ಸ್ವಾಸ್ಥ್ಯ ಕುಂದ ತೊಡಗಿದಾಗ , ಆತ  ಮಹಾಮಂಡಲೇ ಶ್ವರನಾಗಿ ನೇಮಕವಾದ ! ಈಗ ನೋಡು ! ನನ್ನ ಶಿಷ್ಯನಿಗೇ ನಾನು ಕಾರ್ಯಕರ್ತನಾಗಿರುವೆ! ''

'' ಪಾಠಶಾಲೆಗೆ ಹೋದ್ರೆ ಮಹಾಮಂಡಲೇಶ್ವರರಂತೆಯೇ  ದೊಡ್ಡ ಮನುಷ್ಯನಾಗಬಹುದೇ ತಾತ ? "  

" ಹೌದು ನಚ್ಚು ! ಮನಸ್ಸಿದ್ದರೆ ಮಾರ್ಗ ! ಅದಕ್ಕೆ ಮತ್ತೆ ಚೆನ್ನಾಗಿ ಓದು ಅನ್ನೋದು ಅದ್ರಲ್ಲೂ ಇಂತಾ  ಪುರಾತನವಾದ ಪಾಠಶಾಲೆಯಲ್ಲಿ ಕಲಿಯಕ್ಕೆ ಪುಣ್ಯ ಮಾಡಿರ್ಬೇಕು ನೀನು ! '' ಎಂದು ಮೊಮ್ಮಗನ ತಲೆ ನೇವರಿಸಿ ನುಡಿದರು ತಾತ . 

'' ನಮ್ಮ ಪಾಠಶಾಲೆ ತುಂಬಾ ಹಳೆಯದೇ ತಾತ ? " ಕುತೂಹಲದಿಂದ ಪ್ರಶ್ನಿಸಿದ ನಚ್ಚು . 

" ಹೌದು ನಚ್ಚು ! ಸುಮಾರು ಇನ್ನೂರು ವರ್ಷಗಳ ಹಿಂದೆ ಅರುಳಾಳ ಪೆರುಮಾಳ್ ಕಣ್ಣಪ್ಪನ್ ಎಂಬ ಮಹಾನುಭಾವ , ಶ್ರಾದ್ಧದ ಸಮಯದಲ್ಲಿ ಚಂಪಾತ್ತೈ ಪಳ್ಳಿಯಲ್ಲಿಯ ತನ್ನ ಜಮೀನನ್ನ ಕೆರೆ , ಕೊಂಪೆ , ಮರಗಳು , ಬಾವಿಗಳು , ಗದ್ದೆ , ಬಯಲು ಸಮೇತ ಹನ್ನೊಂದು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟನಂತೆ !  ಅಂತಾ ಪುರಾತನವಾದ ಅಗ್ರಹಾರದಲ್ಲಿಯ ಪಾಠಶಾಲೆಯಲ್ಲೇ ನೀನು ಕಲೀತಿರೋದು . '' 

'' ಓ ! ಹಾಗಂದ್ರೆ ನಾನು ಹೋಗ್ತಿರೋದು ಒಂದು ಐತಿಹಾಸಿಕ ಪಾಠಶಾಲೆಗೆ  ! " ಉತ್ಸಾಹದಿಂದ ನುಡಿದ  ನಚ್ಚುವಿನ  ಬಳಿ ಮತ್ತೊಂದು ಪ್ರಶ್ನೆ ತಯಾರಾಗಿತ್ತು ! 

" ಶ್ರಾದ್ಧ  ಅಂದ್ರೆ ಏನು ತಾತ ? " 

'' ನಮ್ಮ ಪೂರ್ವಜರಿಗೆ ಕೃತಜ್ಞತೆ ಸಲ್ಲಿಸಲು ಭಕ್ತಿ ಶ್ರದ್ಧೆಯಿಂದ ನಾವು ದಾನ ಧರ್ಮಗಳನ್ನು ಮಾಡಿ ನಡೆಸೋ  ಒಂದು ಕಾರ್ಯಕ್ಕೆ ಶ್ರಾದ್ಧ ಅಂತಾರೆ ! '' ಸಹನೆಯಿಂದ ಉತ್ತರಿಸಿದರು ತಾತ . 

ಅಮ್ಮ ತಂದಿಟ್ಟ ಹಾಲು ಕುಡಿದು ತಾತನಿಗೆ ಆತು ಕುಳಿತ ನಚ್ಚು ನೂರಾರು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದ. 

'' ತಾತ ! ನೀನು ಇಲ್ಲೇ ನಮ್ಮೊಂದಿಗೆ  ಯಾಕೆ ಇರಬಾರದು ? ಯಾಕೆ ಎರಡೇ ಎರಡು ದಿವಸಗಳು ಮಾತ್ರ ಇಲ್ಲಿರುವೆ ? ಅರಸುಗಳೊಂದಿಗೆ ಎಲ್ಲಿಗೆ ಪ್ರಯಾಣ ಹೊರಟಿರುವೆ  ? " 

ಮೊಮ್ಮಗನ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತಿದ್ದರೂ ನರಸಿಂಹಯಗಳ ಮನಸ್ಸನ್ನು ನಾನಾವಿಧ ಚಿಂತೆಗಳು ಕಾಡುತ್ತಿದ್ದವು . 

ಬೇಹುಗಾರರು ತಂದಿದ್ದ ಸುದ್ದಿ ಆಘಾತಕಾರಿಯಾಗಿದ್ದಿತು . ಬಹಮನಿ ಸುಲ್ತಾನರು ಐವರೂ ಸೇರಿ ಒಟ್ಟೊಟ್ಟಿಗೆ  ನಮ್ಮ ಈ ನಾಡಿನ ಮೇಲೆ  ಧಾಳಿ ಎತ್ತಿ ಬರಲು  ನಿರ್ಧರಿಸಿರುವರಂತೆ  . ಈ ವಿಷಯವನ್ನು  ಕುರಿತು  ಮಂತ್ರಾಲೋಚನೆ ನಡೆಸುವುದರ ಸಲುವಾಗಿಯೇ  ನಾಡಿನ ಎಲ್ಲ ಮಹಾಮಂಡಲೇಶ್ವರರನ್ನೂ ರಾಜಧಾನಿಗೆ ಆಹ್ವಾನಿಸಿದ್ದರು ರಾಯರು ! 

ಸದಾಶಿವರಾಯರ ಪರವಾಗಿ ನಾಡನ್ನು ಆಳುತ್ತಿದ್ದ ರಾಮರಾಯರು ಅಸಹಾಯ ಶೂರರು ಎಂಬುದರಲ್ಲಿ ಎರಡು ಮಾತಿಲ್ಲ . ಈ ವರೆಗೂ ಉಪಾಯದಿಂದ ಬಹಮನಿಯರನ್ನು  ನಿಭಾಯಿಸುತ್ತಿದ್ದವರು , ಐವರು ಸುಲ್ತಾನರೂ ಒಟ್ಟಿಗೆ ಸೇರಿ ಧಾಳಿ ಮಾಡಲಿರುವ ವಿಷಯ ಕೇಳಿ ಕೆಂಡಾಮಂಡಲವಾಗಿರುವರು . ಹಠಾತ್ತನೆ ತಾವಾಗಿಯೇ ಅವರುಗಳ ಮೇಲೆರಗಿ ಅವರುಗಳ ಸೊಕ್ಕು ಮುರಿಯುವ ತೀರ್ಮಾನ ಮಾಡಿರುವರು  . ಅತಿಯಾದ ಆತ್ಮವಿಶ್ವಾಸದಿಂದ ಈ ಇಳಿ  ವಯಸ್ಸಿನಲ್ಲಿ ಇಂತಾ ಅಪಾಯಕಾರಿ ಕಾರ್ಯಕ್ಕೆ ಕೈ ಹಾಕುವುದು ಸರಿಯೇ ?  

ವಿಠಲೇಶ್ವರ ದೇವ ಮಹಾ ಅರಸುಗಳು ನಾಡಿನ ಹಿತಚಿಂತಕರು . ರಾಜತಂತ್ರದಲ್ಲಿ  ಗಟ್ಟಿಗರು  . ನಾಡಿನ ಒಳಿತಿಗಾಗಿ ಯುದ್ಧದ ಯೋಚನೆಯನ್ನು ಕೈ ಬಿಡಬೇಕೆಂದೂ ,  ರಕ್ತಪಾತವಿಲ್ಲದ ಶಾಂತಿಯುತವಾದ ಒಂದು ಸಂಧಾನವನ್ನು ಬಹಮನಿಯರೊಂದಿಗೆ ಮಾಡಿಕೊಳ್ಳಬೇಕೆಂದೂ ರಾಮರಾಯರಲ್ಲಿ ವಿನಂತಿಸಿಕೊಳ್ಳಲು ತೀರ್ಮಾನಿಸಿರುವರು . ಹೇಗಾದರೂ ಮಾಡಿ ಈ ಯುದ್ಧವೆಂಬ ಅವಘಡವನ್ನು ತಪ್ಪಿಸಲು ರಾಮರಾಯರನ್ನು ಪ್ರೇರೇಪಿಸಬೇಕೆಂಬ ಸದುದ್ದೇಶದಿಂದಲೇ ಮಂತ್ರಾಲೋಚನೆ ಕೂಟಕ್ಕೆ  ಅವರು ಹೊರಡಲು ಸಿದ್ಧವಾಗುತ್ತಿರುವರು  .  ಅವರ ಕಾರ್ಯಕರ್ತರಾಗಿ ತಾನೂ ಸಹ ಅವರ ಜೊತೆಗೆ  ಹೋಗಲೇಬೇಕಿತ್ತು . 

                                                                                                  

' ಹಂಪೆಯ ವಿಠಲಾ ಕಾಪಾಡಪ್ಪಾ ! ಬಾರಿ ಬಾರಿಗೂ ನಿನ್ನನ್ನು ಬೇಡುವುದು ಬಿಟ್ಟರೆ ನನಗೆ ಬೇರೆ ದಾರಿ ಕಾಣುತ್ತಿಲ್ಲಪ್ಪ ! ನಾನು ಎತ್ತಿ ಆಡಿಸಿದ , ನನ್ನಲ್ಲಿ ಲೆಕ್ಕ ಪತ್ರ ವ್ಯವಹಾರಗಳನ್ನು ಕಲಿತುಕೊಂಡ  ಹುಡುಗ ವಿಠಲೇಶ್ವರದೇವ ! ಇಂದು ಆತ ಮಹಾಮಂಡಲೇಶ್ವರನಾಗಿರಬಹುದು ! ಆದರೂ ಆತ ಇಂದಿಗೂ  ತನ್ನ ಪ್ರೀತಿಯ ಪೋರ ವಿಠಲನೇ ಹೌವುದು  ! ದೇವರೇ ! ಮಹಾಮಂಡಲೇಶ್ವರ ಶ್ರೀ ವಿಠಲೇಶ್ವರದೇವ ಮಹಾ ಅರಸುಗಳಿಗೆ ಕಾರ್ಯ ಸಿದ್ಧಿಯಾಗಲಿ ! ಎಂದೆಂದೂ ನಿನ್ನ ಅನುಗ್ರಹ ಅವರಮೇಲಿರಲಿ ! '

 ಹಂಪೆಯ ವಿಠಲನನ್ನು ಮನಸಾರೆ ಪ್ರಾರ್ಥಿಸಿಕೊಂಡರು ನರಸಿಂಹಯಗಳು .ಈ ಬಾರಿ ರಾಜಧಾನಿಗೆ ಹೋದಾಗ ಈ ವರೆಗೂ ತೀರಿಸದೆ ಬಿಟ್ಟಿರುವ ಅಷ್ಟೂ ಹರಕೆಗಳನ್ನೂ ಒಮ್ಮೆಗೆ ತೀರಿಸಿಬಿಡಬೇಕು ಎಂದು ಮನದಲ್ಲಿ ನಿರ್ಧರಿಸಿಕೊಂಡರು . 

'' ತಾತ ! ತಾತ ! " ನಚ್ಚು ಅವರ ಕೈಯನ್ನು ಹಿಡಿದೆಳೆದು ಮತ್ತೆ ಮತ್ತೆ ಕೂಗಿದಾಗಲೇ ನರಸಿಂಹಯಗಳಿಗೆ ಎಚ್ಚರವಾಯಿತು . 

'' ನಚ್ಚು ! ತಾತ ಪ್ರಯಾಣ ಮಾಡಿ ಸುಸ್ತಾಗಿದ್ದಾರೆ ! ಸುಮ್ನೆ ತೊಂದ್ರೆ ಮಾಡ್ಬೇಡ ! " ಅಮ್ಮ ಗದರಿದಳು 

'' ಛೆ ! ಛೆ ! ನನಗೆಂತಾ ತೊಂದ್ರೆ ? ನಚ್ಚು ! ನನ್ನ ಯೋಚ್ನೆ ಎಲ್ಲೋ ಇತ್ತು ! ಏನಂದೆ ? ಮತ್ತೊಮ್ಮೆ ಹೇಳು ಪುಟ್ಟ ! " ವಾತ್ಸಲ್ಯದೊಂದಿಗೆ ನಚ್ಚುವನ್ನು ತನ್ನ ಬಳಿ ಎಳೆದುಕೊಂಡರು ನರಸಿಂಹಯಗಳು . 

" ತಾತ ! ಗುಡಿಗೆ ಹೋಗಿ ಬರೋಣವೇ ? ಮಂಗಳಾರತಿ ಆದ ಮೇಲೆ ಗೋಪಾಲ ಭಟ್ಟರು ಸಕ್ಕರೆ ಪೊಂಗಲ್ ಕೊಡ್ತಾರೆ ! ತಗೊಂಡು ಬರೋಣ . '' ಎಂದು ಆಸೆಯಿಂದ ನುಡಿದನು  ನಚ್ಚು . 

 '' ನಡಿ ಪುಟ್ಟ !  ಹೋಗಿ ಬರೋಣ !'' ಎನ್ನುತ್ತಾ ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡು  ಎದ್ದು ನಿಂತರು ನರಸಿಂಹಯಗಳು . 

------------------------------------------------------------------------------------------------------

ನಿರ್ಮಲ ಆಕಾಶದ ನೀಲಿಯನ್ನು ಪ್ರತಿಫಲಿಸುತ್ತಿದ್ದ ಜಕ್ಕೂರ ಕೆರೆಯ ನೀರನ್ನು ಸವರಿ ಬಂದ ಹಿತವಾದ  ತಂಗಾಳಿಯನ್ನು ಅನುಭವಿಸುತ್ತ  ತಾತ ಮತ್ತು ನಚ್ಚು ಗುಡಿ ತಲುಪಿದಾಗ ನಚ್ಚುವಿನ ಸ್ನೇಹಿತರೆಲ್ಲ ಪ್ರಸಾದ ಸ್ವೀಕರಿಸಿ ಹೊರಟು ಹೋಗಿದ್ದರು . 

ಹಂಪೆಯಲ್ಲಿದ್ದಂತಹ ಕುಸುರಿ ಕೆಲಸಗಳೋ ಶಿಲ್ಪಿ ವಿನ್ಯಾಸಗಳೋ ಇಲ್ಲದಿದ್ದರೂ , ಸರಳ  ಸುಂದರವಾದ ಅಲ್ಲಾಳನಾಥ ದೇವರ ಗುಡಿ ಆಗಷ್ಟೇ ಹಚ್ಚಲಾಗಿದ್ದ ಎಣ್ಣೆ ದೀಪಗಳ ಜ್ಯೋತಿಯಲ್ಲಿ ಮುದ್ದಾಗಿ ಕಾಣುತ್ತಿತ್ತು.  ಗರುಡಗಂಬದಲ್ಲಿ  ಕೆತ್ತಲಾಗಿದ್ದ ಹನುಮನ ಉಬ್ಬು ಶಿಲ್ಪವನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಂಡ ನಚ್ಚು ಎಂದಿನಂತೆ ತಾತನನ್ನು ಕುರಿತು ಪ್ರಶ್ನೆಯ ಬಾಣವನ್ನು ಪ್ರಯೋಗಿಸಿದ . 

" ತಾತ ! ಹನುಮನ ಕಂಬದಲ್ಲಿ ಅದೇನೋ  ಬರೆದಿದೆಯಲ್ಲ ! ಅದೇನು ಓದಿ ಹೇಳು ತಾತ ! " 

" ಸುಮಾರು ನೂರು ವರುಷಗಳ ಹಿಂದೆ ಇಮ್ಮಡಿ ದೇವರಾಯರು ಸಕನಸಮುದ್ರದ ಸೋಮೇ  ದೇವರ ಗುಡಿಗೆ ವಿರೂಪಾಕ್ಷಪುರ ಅನ್ನೋ ಗ್ರಾಮವನ್ನ ಸೂರೋಪ ಪುಣ್ಯಕಾಲದಲ್ಲಿ ದಾನವಾಗಿ ಕೊಟ್ಟ ವಿಷಯ ನಿನಗೆ ಮೊದಲೇ ಹೇಳಿದ್ದೆ ! ''

'' ಹೌದು ತಾತ ! ಆದ್ರೆ ಅವರು ಕೆತ್ತಿಸಿದ ಶಾಸನವನ್ನ ನೋಡೋದಕ್ಕೆ  ನೀನು ನನ್ನನ್ನ ಇನ್ನೂ ಕರ್ಕೊಂಡು ಹೋಗಿಲ್ಲ ! " ಮುಖ ಊದಿಸಿಕೊಂಡು ಹೇಳಿದ ನಚ್ಚು . 

 '' ಒಮ್ಮೆ ಹೋಗೋಣ ! ಇವಾಗ ಈ ಕಥೆ ಕೇಳು ! ಅದಾದ ಮರು ವರುಷ ಸಕನಸಮುದ್ರದ ಅಧಿಕಾರಿಯೋರ್ವರು ಈ ನಮ್ಮ ಜಕ್ಕೂರ ಅಲ್ಲಾಳನಾಥ ದೇವರ ಗುಡಿಯ ಪುನರುದ್ಧಾರಣ ಮಾಡಿಸಿದರಂತೆ  ! ಗರುಡಗಂಬದಲ್ಲಿ ಈ ಗುಡಿಯ  ಪುನರುದ್ಧಾರಣದ ಬಗ್ಗೆಗಿನ  ಮಾಹಿತಿಯನ್ನ   ಕೆತ್ತಿಸಿದ್ದಾರೆ ! '' ಎಂದರು ತಾತ . 

'' ಈ ವಿಷಯಗಳನ್ನೆಲ್ಲಾ ಯಾಕೆ ಕೆತ್ತಿಸಿ ಇಡ್ತಾರೆ ತಾತ ?  " ನಚ್ಚು  ಕಣ್ಣರಳಿಸಿ ಕೇಳಿದ . 

" ನಿನ್ನಂತಾ ಹುಡುಗರ 'ಪ್ರಶ್ನೆಗಳ ಮೂಟೆ'ಗೆ ನನ್ನಂತಾ ತಾತರು ಆಧಾರಗಳೊಂದಿಗೆ ಉತ್ತರಿಸ್ಬೇಕಲ್ಲಾ ! ಅದಕ್ಕೆ ! " ಎಂದು ನಕ್ಕರು ನರಸಿಂಹಯಗಳು . 

" ತಾತ ಮೊಮ್ಮೊಗ ಇಬ್ರೂ ಇತಿಹಾಸದ ಚರ್ಚೆಗೆ ತೊಡಗಿಬಿಟ್ಟಹಾಗಿದೆ ? " ನಗುತ್ತ ಇಬ್ಬರನ್ನೂ ಸ್ವಾಗತಿಸಿದರು ಗೋಪಾಲ ಭಟ್ಟರು . 

" ಹೌದು ಭಟ್ಟರೇ ! ನಚ್ಚುಗೆ ಇತಿಹಾಸ , ಪುರಾಣ ಎಲ್ಲದ್ರಲ್ಲೂ ಬಲು ಆಸಕ್ತಿ ! ನನ್ನನ್ನ ಕಂಡ್ಬಿಟ್ರೆ ಪ್ರಶ್ನೆಗಳ ಶರಮಾಲೆಯನ್ನೇ ಪ್ರಯೋಗಿಸಕ್ಕೆ ಶುರು ಮಾಡ್ತಾನೆ ! '' ಎಂದು ಹೆಮ್ಮೆಯಿಂದ ನುಡಿದರು   ನರಸಿಂಹಯಗಳು . 

''  ಇರಲಿ ! ಇರಲಿ ! ನಿಮ್ಮಂತಾ ಹಿರಿಯರರಿಂದಲ್ದೆ ಮತ್ಯಾರಿಂದ ನಮ್ಮೂರ ಇತಿಹಾಸವನ್ನ ಕಲೀಬೇಕು  ಮಕ್ಳು ? " ಎಂದು ನಗುತ್ತ ಮಂಗಳಾರತಿ ಸಿದ್ಧಪಡಿಸಿಕೊಳ್ಳಲು ಒಳಗೆ ನಡೆದರು ಭಟ್ಟರು . 

ಗೋಪಾಲ ಭಟ್ಟರು ಕಂಚಿನ ಕಂಠದಲ್ಲಿ ಮಂತ್ರ ಹೇಳುತ್ತಾ ಅಲ್ಲಾಳನಾಥನಿಗೆ ದೀಪಾರಾಧನೆ ಮಾಡ ತೊಡಗಿದರು . ಕಿರೀಟ , ಕರ್ಣಕುಂಡಲ , ತೋಳಬಂಧಿ ಕಂಕಣ , ಅಂಗುಲಿಕಗಳು, ಕಂಠೀಹಾರ , ಯಜ್ನೋಪವೀತ , ಕಟಿ  ಬಂಧ  , ಮುಂತಾದ ಆಭರಣಗಳನ್ನು ಧರಿಸಿ ಸುಂದರ ಮೂರುತಿಯಾಗಿ ನಿಂತಿದ್ದ ಅಲ್ಲಾಳನಾಥನ ದರುಶನದಿಂದ ನರಸಿಂಹಯಗಳ ಮನಸ್ಸು ಹಗುರವಾಯಿತು. ನಗು ಮೊಗದೊಂದಿಗೆ 'ನಾನಿರಲು ಭಯವೇಕೆ' ಎಂಬಂತೆ ಬಲಗೈಯಿಂದ  ಅಭಯ ನೀಡುತ್ತಿದ್ದ ಅಲ್ಲಾಳನಾಥನನ್ನು ಕಂಡು ಭಾವಪರವಶರಾದರು ನರಸಿಂಹಯಗಳು .  

                                                                                                      

ಗೋಪಾಲ ಭಟ್ಟರು ನೀಡಿದ ಸಕ್ಕರೆ ಪೊಂಗಲ್ ಪ್ರಸಾದವನ್ನು ಸವಿಯುತ್ತ ತಾತ ಮತ್ತು ಮೊಮ್ಮಗ ಗುಡಿಯ ಹೊರಾಂಗಣದಲ್ಲಿ ಕುಳಿತರು . ಯಥಾಪ್ರಕಾರ ನಚ್ಚುವಿನೊಂದಿಗೆ ಮಾತನಾಡುತ್ತಿದ್ದರೂ ನರಸಿಂಹಯಗಳ ಮನಸ್ಸು ತಳಮಳಿಸುತ್ತಲೇ ಇತ್ತು . ಈ ಬಾರಿ ರಾಜಧಾನಿಗೆ ತೆರಳುವಾಗ ಹೇಗಾದರೂ ಸಮಯ ಸಾಧಿಸಿ ವಿಠಲನ ಗುಡಿಗೆ ಹೋಗಿ  ಹರಕೆಗಳನ್ನು ನೆರವೇರಿಸಲೇಬೇಕು ! ಅಲ್ಲಿಯವರೆಗೆ  ಈ ತಳಮಳ ಇದ್ದೇ ಇರುತ್ತದೆ ಎಂದುಕೊಂಡರು . 

'' ತಾತ ! ಇವತ್ತು ಪಾಠಶಾಲೇಲಿ ಏನು ಪಾಠ ಅಂತ ನೀನು ಕೇಳಲೇ ಇಲ್ವಲ್ಲ ... " ಹುಸಿ ಮುನಿಸಿನಿಂದ  ತಾತನನ್ನು ನೋಡಿದ ನಚ್ಚು . 

'' ಹುಂ ! ಹೇಳು ನಚ್ಚು ! ಇಂದೇನು ಪಾಠ ಹೇಳಿಕೊಟ್ರು ಗುರುಗಳು ? " 

" ಇವತ್ತು ಗುರುಗಳು ಪ್ರಹ್ಲಾದ ಚರಿತ್ರೆ ಹೇಳಿದ್ರು .  ನರಸಿಂಹಾವತಾರದ ಬಗ್ಗೆ ಅವರು ವಿವರಿಸ್ದಾಗ  ಮೈಯೆಲ್ಲಾ ಝಂ ಅಂತು ತಾತ ! '' ಉತ್ಸಾಹದಿಂದ ಹೇಳ ತೊಡಗಿದ ನಚ್ಚು . 

'' ನಾನು ಎಂದಾದ್ರೂ ಒಮ್ಮೆ ತಾತನ ಜೊತೆ ರಾಜಧಾನಿಗೆ ಹೋಗಿ , ಅಲ್ಲಿಯ ಬೃಹದಾಕಾರದ  ನರಸಿಂಹ ಮೂರ್ತಿಯನ್ನ  ನೋಡ್ಕೊಂಡು ಬರ್ತೀನಿ ಅಂದೇ ... ''

'' ಹಮ್ ! ಹೋಗೋಣ ನಚ್ಚು ! ಒಮ್ಮೆ ಹೋಗೋಣ ! " ಎಂದು ಉತ್ಸಾಹ ತೋರಲು ಯತ್ನಿಸಿದರು  ನರಸಿಂಹಯಗಳು . 

ಸಕ್ಕರೆ ಪೊಂಗಲ್ ಸವಿಯುತ್ತಿದ್ದ ನಚ್ಚು 'ಬೇಡ' ಎನ್ನುವಂತೆ ತಲೆದೂಗಿದ .

'' ಯಾಕೋ  ? '' ಆಶ್ಚರ್ಯದಿಂದ ಹುಬ್ಬೇರಿಸಿದರು ನರಸಿಂಹಯಗಳು .  

" ಗುರುಗಳು ಹೇಳಿದ್ರು ! ನರಸಿಂಹನನ್ನ ನೋಡಕ್ಕೆ ಬೇರೆಲ್ಲೂ ಹೋಗಬೇಡವಂತೆ ! ಇಲ್ಲೇ ನಮ್ಮ ಅಲ್ಲಾಳನಾಥನಲ್ಲೇ ಅವನನ್ನ ಕಾಣಬೋದಂತೆ ! " 

" ಹಾ ? ಏನಂದೆ ? "

" ಹೌದು ತಾತ ! ಕಲ್ಲಲ್ಲೂ ಕಂಬದಲ್ಲೂ ಎಲ್ಲೆಲ್ಲೂ ಇರ ಬಲ್ಲ ನರಸಿಂಹ ಇಲ್ಲಿ ನಮ್ಮ ಅಲ್ಲಾಳನಾಥನಲ್ಲೂ ಇದ್ದಾನಂತೆ   ! ಅವನು ಮಾತ್ರವಲ್ಲ ! ತಿರುವೆಂಗಳನಾಥ , ಬೇಟೇರಾಯ , ತಿರುಮಲೆ ದೇವರು ಎಲ್ರೂ ಇಲ್ಲೇ , ನಮ್ಮ ಅಲ್ಲಾಳನಾಥನಲ್ಲೇ ಇದ್ದಾರಂತೆ .... ! ಹೌದೇ ತಾತ ? ''

ಮುಗ್ದ ಬಾಲಕನ ಮಾತು ಕೇಳಿ ನರಸಿಂಹಯಗಳ ಒಡಲಲ್ಲಿ ಮಿಂಚು ಸಂಚರಿಸಿದಂತೆ ಭಾಸವಾಯಿತು !ಎಷ್ಟು ಗಹನವಾದ ವಿಷಯವನ್ನು ಎಷ್ಟು ಸರಳವಾಗಿ ಹೇಳುತ್ತಿದೆ ಈ ಮಗು ?  ಈ ನಾಡಿನ ಮಹಾಮಂಡಲೇಶ್ವರರ ಕಾರ್ಯಕರ್ತರು ಮಹಾ ಚತುರರು ಎನ್ನಿಸಿಕೊಂಡವನು ತಾನು ! ಆದರೂ ಈ ಸೂಕ್ಷ್ಮವಾದ  ವಿಷಯ ಈವರೆಗೂ  ತನಗೇಕೆ  ಮನದಟ್ಟಾಗಿಲ್ಲ ?  

ಹೌದು ! ವಿಠಲನನ್ನು ಕಾಣಲು ತಾನು ಹಂಪೆಗೆ ಹೋಗಬೇಕಿಲ್ಲ ! ತಿರುವೆಂಗಳನಾಥ , ಬೇಟೇರಾಯ , ತಿರುಮಲೆ ದೇವರು , ಲಕ್ಷ್ಮಿ ನರಸಿಂಹರಂತೆ ನನ್ನ ವಿಠಲ ಸಹ ಇಲ್ಲಿಯ ಅಲ್ಲಾಳನಾಥನಲ್ಲೇ ಲೀನವಾಗಿರುವನು !

ಹನಿಗೂಡಿದ ಕಣ್ಣುಗಳೊಂದಿಗೆ ನಚ್ಚುವನ್ನು ಬಾಚಿ ತಬ್ಬಿಕೊಂಡರು ನರಸಿಂಹಯಗಳು . ನಂತರ ಮತ್ತೆ ಗುಡಿ ಪ್ರವೇಶಿಸಿ ಕಣ್ತುಂಬ ಅಲ್ಲಾಳನಾಥನನ್ನು ದರುಶನ ಮಾಡಿಕೊಂಡರು . ಅವನ ನಗು ಮೊಗದಲ್ಲಿ ವಿಠಲನ ತೇಜಸ್ಸನ್ನು ಕಂಡು ಅವರ ಮೈ ಝಂ ಎಂದಿತು . 

ಕ್ರಮೇಣ ರಾಚುರ ನರಸಿಂಹಯಗಳು ವಿಠಲೇಶ್ವರದೇವ  ಮಹಾ ಅರಸುಗಳಿಗೆ ಪುಣ್ಯವಾಗಬೇಕೆಂದು ಎಲಕ ನಾಡ ಸಿವನಸಮುದ್ರದ ಸೀಮೆವೊಳಗಣ ಅಲ್ಲಾಳಸಂದ್ರ  ಗ್ರಾಮವನ್ನು ಜಕ್ಕೂರ ಅಲ್ಲಾಳನಾಥ ದೇವರ ಅಮೃತಪಡಿ ನೈವೇದ್ಯಕ್ಕೆ  ದಾನವಾಗಿ ಸಮರ್ಪಿಸಿದರು . 

----------------------------------------------------------------------------------------------------------------------------

ಆಧಾರ - ಬೆಂಗಳೂರು ಇತಿಹಾಸ ವೈಭವ , ಎರಡನೇ ಸಂಚಿಕೆಯಿಂದ ಆಯ್ದ ಮೂರು ಶಾಸನಗಳು : 

  1. ಅರುಳಾಳ ಪೆರುಮಾಳ್ ಕಣ್ಣಪನು ಹಾಕಿಸಿದ ಶ್ರಾದ್ಧದ ಶಾಸನ (1350)

 2. ಜಕ್ಕೂರ ಅಲ್ಲಾಳನಾಥ ದೇವರ ಕಂಬ ಶಾಸನ ( 1432 )

 3 .  ರಾಚುರ ನರಸಪಯರ ದಾನ ಶಾಸನ ( 1544 ) 

ಮತ್ತು 

4.  ಕೊಡಿಗೆ ಹಳ್ಳಿಯ ಶಾಸನ  ( 1431 )

-----------------------------------------------------------------------------------------------------

ALLALANATHA OF JAKKUR


“ Nacchu ! Nacchu ! “


“ Hey Nacchu ! Stop ! Why are you running away ? “


“ Are'nt you coming to the temple ? “


Without heeding the calls of his classmates, Narasimha , ran in the opposite direction at top speed, leaving them perplexed .


                                                                                                      

It was the daily routine of these young students to head to Allalanatha temple as soon as lessons were done at their Patashala . The temple , situated beyond the lovely tank , amidst shady trees and flowering bushes , was the boys’ favourite haunt . They could enjoy the pleasant evening , playing and chatting around the temple . And then, after the priest Gopala Bhattaru had finished the evening worship rituals, they would savour the delicious Sakkre Pongal , fragrant with ghee, given as prasada. Only after this would the children go home, reaching before sunset .


But on this day, Nacchu seemed eager to dash home as soon as their teacher ended the day’s lessons .

“ What’s the big hurry , Nacchu ! “


“ My Thatha would have arrived ! I can't wait to see him ! ” Shouted Nacchu , over his shoulder , joining his hands in a quick gesture of worship in the general direction of the temple , as he raced homewards.


Nacchu’s family had migrated from Rachur and settled in Jakkur , almost five generations ago . Nacchu’s father had built up a good base here , prospering in agriculture and trade . But Nacchu’s grandfather , Narasimhaya , who served as an Administrator / Executive to Mahamandaleshwara Vittaleshwaradeva Maha Arasu , a Governing Chieftain , lived in the regional headquarters as demanded by his job. He visited Jakkur whenever he could , but his visits were always brief , for a day or two only .


Nacchu loved his grandfather very much and was always eager to spend as much time as possible with him . Why ! When he heard Thatha was due to visit, he even refused to go to school that day . Only Mother’s stern insistence made him attend class, very reluctantly .

Now that school time was over, he had no intention of wasting another minute more on anything else , even their daily routine .


---------------------------------------------------------------------------------------------------------------------------


“Thaaa…Thaaaa “ Nacchu streaked in like a lightning and hugged his old grandfather , who was relaxing in the courtyard .


“ Nacchhooo , my dearest boy ! “ exclaimed the Grandfather , hugging him back with great affection. “ So , how is my little hero doing in school ? ……your Mother tells me you tried to skip school today , naughty boy ! “ he laughed .


                                                                                                  

“ Thatha , you never stay long enough with us and I never get enough time to hear stories from you ! “ pouted Nacchu.


How he loved listening to Thatha’s accounts of the places he visited, people he met, events at The Court , the little skirmishes that erupted frequently at borderlands, the monuments built by Kings and Chieftains ……


Thatha tousled his hair fondly . “ But you must not, for any reason , miss School . Especially when the school you are attending is such an illustrious instituition “


“ Please impress that on his brain ! “ Said Mother , as she brought hot milk for him to drink .


“ He knows what a great school he is in , don't you , my child ? “


“ Yes Thatha . Our Teacher says it is 200 years old. “


“ True . About 200 years ago, a nobleman named Arulala Kannappan , during a Shraddha ceremony, had donated his lands, tank, trees, fields and wells to 11 Brahmanas of Champatthaipalli, creating an Agrahara. The school was started by those learned people then . “


“ What is Shraddha , Thatha ? “


“It is a ritualistic way of showing gratitude to dead ancestors by making donations in their name.”


“ How do you know all these old, old stories , Thatha ? “


“ People who give grants often get the information engraved in stone and put up in public places so that everyone gets to know ! “


“……..and tell  little boys like you who ask endless questions ! “ Added Mother , “ stop pestering Thatha now , let him rest a bit . “


“ No , he is not bothering me ! “ smiled Thatha , “ You must study well and learn skills , Nacchu . Only then will you become a great man ! “


“ An administrator like you ! “


“ Why just an administrator ! If you have the will, you can become anything you want ! Do you know , this Vittaleshwaradeva Maha Arasu was also a little boy like you when I started as his Father’s administrator . He was a very bright boy , eager to learn everything and work hard to gain all skills . I used to teach him too and it was a pleasure to have such a diligent student. Now , after his Father, he has become the Mahamandaleshwara , my Master ! Makes me so proud of him ! “


“ And that's why you are always running around with that Arasu ! '' quarreled Nacchu , “ why don't you stay with us here always? “


The Grandfather wished he could too. But immediately the weighty problems that had set him on this journey clouded his mind , distracting him .


The Spies had brought some bad news . Apparently, the five Bahamani Sultans were conspiring to make a joint assault on this land . It was to discuss the gravity of this situation that The Raya had summoned all the Mahamandaleshwaras of his kingdom for an emergency meeting .


There could be no doubt that Rama Raya , ruling on behalf of Sadashiva Raya , was a brave and capable man . He had been fending off individual assaults till now quite successfully. But now , five of these powers were planning to join hands against him ! To counter this threat , he had reportedly made a decision to spring a surprise attack on them before they did , to frustrate their plans and subdue them ! And he intended to force this idea on his Governors in the upcoming meeting . Though his self confidence and ability could not be doubted, it seemed a bit risky at this point , for a person as old as he was .


Mahamandaleshwara Vittaleshwaradeva was a confident and able Chief, but he also cared deeply for the welfare of people and certainly did not approve of reckless adventures . He would rather look for peaceful , diplomatic solutions to avoid unnecessary bloodshed . He would certainly voice his thoughts and , as his Administrator, it was Narasimhaya’s brief to argue the case in Rama Raya’s Court .


                                                                                                    

‘O , Lord Vitthala of Hampi ! Let sense prevail . I have been praying for your grace and making vows frequently for preventing bloodshed and ruin. On my next visit there, I shall certainly fulfil all my vows . Please keep my Master, Vittaleshwaradeva , the child I have cared for , out of harm and disgrace . ‘


“ Thatha ….Thatha ….where is your mind lost ? “


He suddenly realised that his grandson was shaking him and pulling his hand .


“ What ….what were you saying , dear child ? “


“ I said , let's go to the temple . My friends will be there too …. “


“ Yes ! Of course , we will go to the temple ! It's been long since I had Bhattaru’s Sakkre Pongal ! ”


--------------------------------------------------------------------------------------------------------------------------------


The Sun had not yet set and the birds were just returning to their roost. Grandfather and Grandson walked , hand in hand , by the crystal clear water of the tank , enjoying the cool breeze .

Nacchu’s classmates had already left by the time they reached . But the priest was still around .


Though not as grand and decorative as the magnificent temples of Hampi , the modest temple of Allalanatha was pretty and peaceful. They stopped by the stone pillar at the entrance and bowed to the Hanuman image carved on it .


Thatha ran his hand over the letters carved on the pillar and asked Nacchu “ Can you read this ? ”


“ I know the letters Thatha , but this is difficult to read …..What does it say ? “


“ About a 100 years ago , a chieftain of Sakanasamudra got this Allalanatha temple of Jakkur renovated it seems . That's the information etched here .“


Nacchu scratched his head . ‘ Sakanasamudra ! The name sounds familiar . Thatha, you have told me something about it earlier too ? ! “


“ Good memory ! Yes indeed , I have told you , during my last visit , about Immadi Devaraya granting the village of Virupakshapura to the God SomeyDeva of Sakanasamudra ! “


“ Welcome , Sir ! “ Said Gopala Bhattaru , coming out of the temple , “ so good to see elders like you sharing historical information about our culture and heritage with young ones .”


“ And even better , that young ones like my dear Nacchu , showing interest in such information ! ”


“ True ! ….do come in, I will do the mangalarati . “


                                                                                                    

As the priest waved the camphor light in front of the presiding icon, the beautiful form of Allalanatha, resplendent in bejewelled crown ( Kireeta ), ear ornaments ( Karna Kundala ), necklaces ( Kantee Haara ) , waist band ( Kati Bandha ) armbands ( Tola Bandhi ), wrist band ( Kankana ), finger rings (Angulika ) and anklets ( Kaal Kadaga ) seemed to come alive .


The peaceful face and upturned palm re-assured : “ Never Fear ".


“ What lesson did you have in school today ? “ Asked Thatha , as both of them sat on a platform under a tree just outside the temple , enjoying the sakkre pongal prasada.


“ We learnt Prahlada Charitre . ….our teacher described Narasimha , just the way you told me about the huge Narasimha statue in Hampi . “


“ I will take you to see it someday ……” said Thatha , even as his mind flew to the Vitthala of Hampi and the long list of unfulfilled vows ……’When would I get to go to Hampi ?’ ,he wondered .


“ You know what our Teacher said ? He said , why go anywhere in search of Narasimha ? He is right here , in Allalanatha , it seems ! “


“ What ! “


“ Yes , Thatha ! “ said the boy , earnestly , “ In the Purana, Narasimha is said to be anywhere - in stone , in pillar . So he is here in our Allalanatha too ! Not only that , Tiruvengalanatha, Beteraya , Tirumale Devaru , whatever the names , are all present in our Allalanatha , he said ! “


The aged man sat dumbfounded , looking at the child in wonder . He felt like some heavy baggage was lifted from his aching back . In spite of the descending darkness, he felt enveloped in Light .


“ My Vitthala too is here …in Allalanatha ….”  He said softly .Then he hugged his grandson and prostrated before the temple.


In due time, Rachura Narasimhaya granted the village of Allalasandra , situated in Sivanasamudra-seeme of Yelahaka Nad , to pay for the food offerings to Allalanatha Devaru of Jakkur , for the Merit of Vittaleshwara Deva Maha Arasu .


----------------------------------------------------------------------------------------------------------------------


Based on three inscriptions selected from Bengaluru Itihasa Vaibhava , Vol : 2


1. Arulala Kannappan's Shraddha Dana Shasana ( 1350 )

2. Jakkuru Allalanatha Garudagamba Shasana ( 1432 )


3. Rachura Narasimhayagalu 's Dana Shasana ( 1544 )


AND


4. Kodige Halli Shasana ( 1431 )

---------------------------------------------- ---------------------------------------------------------------------------