Showing posts with label Puttiya Haadugalu. Show all posts
Showing posts with label Puttiya Haadugalu. Show all posts

Tuesday, February 18, 2014

ಮೊಗ್ಗಿನ ಜಡೆ ! /Moggina Jade

ಮೊಗ್ಗಿನ ಜಡೆ !

ಹೂವು ಹೂವು ಬಣ್ಣದ  ಹೂವು !
ಬುಟ್ಟಿಯ ತುಂಬ ಚೆಂದದ ಹೂವು !
ಚಮ ಚಮ ಅರಳಿದ ಸೇವಂತಿಗೆ ಹೂವು !
ಘಮ ಘಮ ಸೂಸುವ ಗುಂಡು ಮಲ್ಲಿಗೆ ಹೂವು !
ಕಿಡಿ ಕಿಡಿ ಕೆಂಡವೋ ಕೆಂಡಸಂಪಿಗೆ ಹೂವು !
ಗುಲ್ಕಂದಿನ ಸವಿ ಗುಲಾಬಿ ಹೂವು !
ರಂಗುರಂಗಿನ ಸ್ಪಟಿಕದ ಹೂವು!
ಶಂಕು  ಪುಷ್ಪವೀ  ನೀಲಿ ಹೂವು !
ಕಿತ್ತಳೆ ಬಣ್ಣದ ಕನಕಾಂಬರ ಹೂವು !
ನೇರಳೆ ವರ್ಣದ  ರುದ್ರಾಕ್ಷಿ ಹೂವು !
ಹೂವು ಹೂವು ಬಣ್ಣದ ಹೂವು !
ಬುಟ್ಟಿಯ ತುಂಬ ಚೆಂದದ ಹೂವು ! 

ಬುಟ್ಟಿಯ ತುಂಬ ತೋಟದಿಂದ ಕಿತ್ತು ತಂದಿದ್ದ  ಹೂವುಗಳನ್ನು ತನ್ನ ಮುಂದೆ ಗುಡ್ಡೆ ಹಾಕಿಕೊಂಡು  ಅಜ್ಜಿ ಆನಂದದಿಂದ ಹಾಡಿದಳು . 



" ಘಮ ಘಮ ಚಮ ಚಮ  ಹಾಡು ತುಂಬಾ ಚೆನ್ನಾಗಿದೆ ಅಜ್ಜಿ!" ಅಜ್ಜಿ ಕೆನ್ನೆಗೆ ಮುತ್ತಿಟ್ಟು ಪುಟ್ಟಿ  ಹೂವುಗಳನ್ನ ವಿಂಗಡಿಸಿ  ಬೇರೆ ಬೇರೆ ತಟ್ಟೆಗಳಲ್ಲಿಟ್ಟಳು.  
  
  "ಬಾಳೇ ತೊಗಟೆ ನಾರು ತರಕ್ಕೆ  ಎಷ್ಟ್ ಹೊತ್ತು ಮಾಡ್ತಿದ್ದಾಳೆ ಈ ರಾಣಿ! ಲೋ ! ಪುಟ್ಟಣ್ಣ ! ತೋಟದ ಕಡೆ ಹೋಗಿ ಅವಳನ್ನ ಬೇಗ ಬಾ ಅನ್ನು .'' 

ತನ್ನ ಪಾಡಿಗೆ ಎಲ್ಲಿಗೋ ಬರ್ರೆಂದು ಓಡುತ್ತಿದ್ದ ಪುಟ್ಟಣ್ಣ ಬ್ರೇಕ್ ಹಾಕಿದಂತೆ ನಿಂತ .
" ಯಾಕಜ್ಜಿ ನಾರು, ತೊಗಟೆ ?" ಎಂದು ಕುತೂಹಲದಿಂದ ವಿಚಾರಿಸಿದ . 

" ಪುಟ್ಟಿಗೆ ಇವತ್ತು ಮೊಗ್ಗಿನ್  ಜಡೆ ಹಾಕ್ತಿನೊ ಮರಿ!" ಎಂದಳು ಅಜ್ಜಿ . ಮಲ್ಲಿಗೆ ಮೊಗ್ಗುಗಳನ್ನು ಆರಿಸಿಡುತ್ತಿದ್ದ ಪುಟ್ಟಿ ಜಂಬದಿಂದ ಬೀಗಿದಳು .

" ಅಯ್ಯೋ ! ಈ  ಕೋಡ್ಬಳೆಗೆ   ಮೊಗ್ಗಿನ್  ಜಡೆಯೇ ?" ಪುಟ್ಟಿಯ ಎತ್ತಿ ಕಟ್ಟಿದ್ದ ಎರಡು ಪುಟ್ಟ ಜಡೆಗಳನ್ನು ಎಳೆದು ಕೀಟಲೆ ಮಾಡಿದ ಪುಟ್ಟಣ್ಣ .

" ನೋಡಜ್ಜಿ ಪುಟ್ಟಣ್ಣ ಜಡೆ ಎಳಿತಾನೆ ! ಸರಸು ಅತ್ತೆ ಕಾಲೇಜ್ಗೆ ಹೋಗೋವಾಗ ಹೀಗೇ ಕಟ್ಕೊಂಡ್ ಹೋಗ್ತಾಳೆ ಅಲ್ವೇ ಅಜ್ಜಿ?"

" ಅತ್ತೆ ಜಡೆ ಚಾವಟಿ ಇದ್ದಂತೆ ! ಆದ್ರೆ ಇದು ? ಕೋಡ್ಬಳೆ ! ಕೋಡ್ಬಳೆ ! ಬಿಸಿ ಬಿಸಿ  ಕೋಡ್ಬಳೆ !  " ಎಂದು ಮತ್ತೆ ರೇಗಿಸಿದ   ಪುಟ್ಟಣ್ಣ . 

"ನೋಡಜ್ಜಿ !" ಪುಟ್ಟಿ ಮುಖ ಊದಿಸಿಕೊಂಡು  ರಾಗವೆಳೆದಳು . 

" ಲೋ ! ಯಾಕೋ ಅವಳನ್ನ ರೇಗಿಸ್ತಿಯ ? ನೋಡ್ತಿರು ! ಈಗ  ಕೋಡ್ಬಳೆ ಹೇಗೆ  ಚಾವಟಿ  ಆಗತ್ತೇಂತ !"

ಅಷ್ಟೊತ್ತಿಗೆ ರಾಣಿ ಬಾಳೆ  ನಾರು ತೊಗಟೆ ತಂದಳು . ತೊಗಟೆ ಸೀಳಿಟ್ಟು  , ನಾರು ಬಿಡಿಸಿ ನೀರಿಗೆ ಅದ್ದಿ ಸೂಜಿ ಪೋಣಿಸಿದಳು ಅಜ್ಜಿ. 

ಕುಣಿಕುಣಿಯೋ ಕೃಷ್ಣ ಕುಣಿಕುಣಿಯೋ !
ಫಣಿ ಫಣದಲಿ ನೀ 
ಠಣ ಠಣ ಕುಣಿದಂತೆ 
ಕುಣಿ ಕುಣಿಯೋ ಕೃಷ್ಣ 
ಕುಣಿಕುಣಿಯೋ !

ಹಾಲಲ್ಲಿ ಕುಳಿತು ಸರಸು ಅತ್ತೆಗೆ ಮೇಷ್ಟ್ರು  ಕಲಿಸುತ್ತಿದ್ದ ಹಾಡನ್ನ ತಾನೂ ಗುನುಗುತ್ತ, ಪುಟ್ಟಿ ತೆಗೆದು ಕೊಟ್ಟ ಮೊಗ್ಗುಗಳನ್ನು ಸೀಳಿದ್ದ ಬಾಳೆ  ತೊಗಟೆಗೆ ಟಾಕು ಹಾಕ ತೊಡಗಿದಳು ಅಜ್ಜಿ . ಸಂಗೀತ  ಪಾಠ ಮುಗಿಸಿ  ಸರಸು ಅತ್ತೆ ಎದ್ದು ಬಂದಾಗ ಮೊಗ್ಗಿನ ಜಡೆ ತಯಾರಾಗಿತ್ತು . 

" ಅಯ್ಯೋ ಅಯ್ಯೋ ! ಎಷ್ಟ್ ಚೆನ್ನಾಗಿದೆ ಮೊಗ್ಗಿನ್  ಜಡೆ !"

" ಸರಸು ! ಕುಚ್ಚು ಚೌರಿ ಎಲ್ಲ ತರ್ತಿಯಾ ?  ಪುಟ್ಟಿಗೆ ಜಡೆ ಹಾಕೋಣ !" ಎಂದಳು ಅಜ್ಜಿ.

  ಬಾಚಣಿಗೆ , ಕುಚ್ಚು , ಚೌರಿ ಎಲ್ಲ ತಂದು ತಾನೂ ಅಲ್ಲೇ ಕೂತಳು  ಸರಸು ಅತ್ತೆ. 

ಅಜ್ಜಿ ಅತ್ತೆ ಇಬ್ಬರೂ  ಸೇರಿ ಪುಟ್ಟಿಗೆ ತಲೆ ಬಾಚಿ, ಚೌರಿ ಕುಚ್ಚು ಸೇರಿಸಿ  ಉದ್ದ ಜಡೆ ಹೆಣೆದರು.  ಮೊಗ್ಗು ಜಡೆಯನ್ನು ಜಡೆಗೆ ಜೋಡಿಸಿ ಕಟ್ಟಿದರು . 

" ಬರಿ ಜಡೆ ಸಾಲ್ದು ಪುಟ್ಟಿ ! ತಡಿ ! ಕಣ್ಣಿಗೆ ಕಾಡ್ಗೆ , ಹಣೆಗೆ ತಿಲಕ, ಕೈ ಬಳೆ , ಕಾಲ್ಗೆಜ್ಜೆ ಎಲ್ಲ ಹಾಕ್ಕೋಬೇಕು ! "ಎಂದ ಅತ್ತೆ ಪುಟ್ಟಿಗೆ  ಎಲ್ಲ ಅಲಂಕಾರ ಮಾಡಿದಳು .

"ಜರತಾರಿ ಲಂಗಾನೂ ಹಾಕು ." ಎಂದಳು ಅಜ್ಜಿ. 

ಅಲಂಕಾರ ಮುಗಿಯಿತು . 

" ಎಷ್ಟ್ ಚೆನ್ನಾಗ್ ಕಾಣ್ತಿದ್ದೀಯ ಪುಟ್ಟಿ !" ಎನ್ನುತ್ತಾ  ಅಜ್ಜಿ ಪುಟ್ಟಿಯ ಮುಖ ನೀವಾಳಿಸಿ ದೃಷ್ಟಿ ಕಳೆದಳು .  

ಪುಟ್ಟಿಗೆ ನಾಚಿಕೆ !  ಎದೆ ತುಂಬಿದ ಸಂತೋಷ !

" ವಾರೆ ವಾ ! ಕೋಡ್ಬಳೆ ಚಾವಟಿ ಆಗೇ ಬಿಟ್ಟಿದೆ ! ಎಂತಾ ಮ್ಯಾಜಿಕ್ಕು !" ಎಂದ ಪುಟ್ಟಣ್ಣ . 

ತಾತ, ಅಪ್ಪ, ಅಮ್ಮ ಎಲ್ಲರೂ ಅಲಂಕಾರವಲ್ಲಿಯಾಗಿದ್ದ ಪುಟ್ಟಿಯನ್ನು  ಕೊಂಡಾಡಿದ್ದೂ ಕೊಂಡಾಡಿದ್ದೆ ! 

ಸರಸು ಅತ್ತೆ ಗುಡು ಗುಡು ಓಡಿ ಹೋಗಿ ತನ್ನ  ಅಗ್ಫಾ  ಪೆಟ್ಟಿ ಕ್ಯಾಮರಾ ತಂದು ಬಗೆ ಬಗೆ ಬಂಗಿಗಳಲ್ಲಿ  ಪುಟ್ಟಿಯನ್ನು ನಿಲ್ಲಿಸಿ ಫೋಟೋ ತೆಗೆದಳು . 



" ಪುಟ್ಟಿ ! ತುಂಬಾ ಚೆನ್ನಾಗ್ ಕಾಣ್ತೀ ಮರಿ !   ರಾಧೆ ಹಾಗೆ !  'ಕೃಷ್ಣಾ ನೀ ಬೇಗನೆ ಬಾರೋ' ಹೇಳ್ತೀನಿ . ಒಂದ್ ಡ್ಯಾನ್ಸ್ ಮಾಡು ನೋಡೋಣ !" ಎಂದಳು ಅಜ್ಜಿ .

" ಹೋಗಜ್ಜಿ !  ಆ ಹಾಡು ಬೇಡ ! ಘಮ ಘಮ ಆಯ್ತು ! ಅತ್ತೆ ಠಣ ಠಣ ಹೇಳಿದ್ಳು ! ನಾನು ಝಣಾ  ಝಣಾ  ಝಣಾ  ಹೇಳ್ತಿನಿ . "

ಝಣಾ ಝಣಾ  ಝಣಾ ,
 ಜೇಬು  ತುಂಬ ಹಣ !
ಮೇಲಕ್ಕೆತ್ತಿ  ಬಿಡಲು ಸದ್ದು 
ಟಣ್  ಟಣಾ ಟಣಾ !

 ನದಿಯಲ್ಲೊಂದು ಬಕ ,
 ಮುದುರಿಕೊಂಡು ಮುಖ,
ಕಾಲನ್ನೆತ್ತಿ  ಕುಣಿಯುತ್ತಿತ್ತು 
ತೈ ತಕಾ ತಕಾ !

ಸುತ್ತ ಹಸಿರು  ವನ,
ನಡುವೆ  ಮೇವ ದನ , 
ಕೊಳಲನೂದಿ ಗೊಲ್ಲನೊಬ್ಬ 
ತಾನ ನಾನ ನಾ !

ಪುಟ್ಟಿ ಅಭಿನಯದೊಡನೆ ಹಾಡಿ ಮುಗಿಸಿದಳು .  ಎಲ್ಲರೂ ಸಂತೋಷದಿಂದ ಚಪ್ಪಾಳೆ ತಟ್ಟಿದರು .

 ಅಂಬೆಗಾಲಿಟ್ಟು ಪುಟ್ಟಿಯ ಬಳಿ ಸರ ಸರ ಬಂದ ಪಾಪು , ಅವಳ ಲಂಗ ಹಿಡಿದುಕೊಂಡು ಎದ್ದು ನಿಂತು ತಾನೂ ತೈ ತಕ ಕುಣಿಯಿತು . ಪುಟ್ಟಿಯ ಮುಖದ ತುಂಬ ಸಂತೋಷದ ಹೂವು ಅರಳಿತು ! 

Sunday, February 9, 2014

ಕರಡಿ ಬೆಟ್ಟಕ್ಕೆ ಹೋಯಿತು

ಶಿಬಿರಾಗ್ನಿ ಕಾರ್ಯಕ್ರಮದಲ್ಲಿ ಪುಟ್ಟಿ !

 ಪುಟ್ಟಣ್ಣ ಒಬ್ಬ ಬಾಯ್ ಸ್ಕೌಟ್ .  ಶಾಲೆಯಲ್ಲಿ ನಡೆಯಲಿದ್ದ ಶಿಬಿರಾಗ್ನಿ ಕಾರ್ಯಕ್ರಮದಲ್ಲಿ ಬಾಗವಹಿಸಲು  ಮಧ್ಯಾಹ್ನವೇ ಆತ  ಗಡಿಬಿಡಿಯಿಂದ  ಹೊರಟು ಹೋಗಿದ್ದ. ಮನೆಯವರಿಗೆಲ್ಲ  ಆಹ್ವಾನವಿತ್ತು.  ಅಪ್ಪ ಬರುವುದನ್ನೇ ಕಾದಿದ್ದು , ಪಾಪುವನ್ನು ಅಜ್ಜಿಗೆ ಒಪ್ಪಿಸಿ, ಅಮ್ಮ ಪುಟ್ಟಿ ಇಬ್ಬರೂ ಅವರೊಡನೆ ಹೊರಟು ಶಾಲೆ ತಲುಪಿದಾಗ ನಕಲೀ  ಯುದ್ಧ ಮುಗಿದಿತ್ತು. ಸ್ಕೌಟ್ಗಳೆಲ್ಲ ಸೇರಿ ಡೇರೆಗಳನ್ನು ನಿರ್ಮಿಸಿ, ನಕಲೀ ಪೆಟ್ಟು ತಿಂದವರನ್ನ  ತಾವೇ ರಚಿಸಿದ ಕೈ ಮಂಚದಲ್ಲಿ ಒಯ್ದು ,  ಪ್ರಥಮ ಚಿಕಿತ್ಸೆ ನೀಡಿ ನಕಲೀ ಘಾಯಗಳಿಗೆ ತಾವು ಅಭ್ಯಾಸ ಮಾಡಿದ್ದ ಬ್ಯಾಂಡೇಜ್ ಪಟ್ಟಿಗಳನ್ನೂ ಕಟ್ಟುತ್ತಿದ್ದರು.  

 


" ಸ್ಕೌಟ್ಸ್ ಇದೆಲ್ಲ ಯಾಕಪ್ಪ ಮಾಡ್ತಾರೆ ?" ಕುತೂಹಲದಿಂದ ಕೇಳಿದಳು ಪುಟ್ಟಿ .
ಮೈದಾನದ ಸುತ್ತಲೂ ಹಾಕಿದ್ದ ಕುರ್ಚಿಗಳಲ್ಲಿ ಪ್ರೇಕ್ಷಕರಾಗಿ ಎಲ್ಲ ಹುಡುಗರ ತಂದೆ ತಾಯಂದಿರೂ ಸೋದರ ಸೊದರಿಯರೂ, ಇನ್ನಿತರರೂ    ಕುಳಿತಿದ್ದರು. ತಾವೂ ಒಂದು ಕಡೆ ಕುಳಿತುಕೊಂಡು ಪುಟ್ಟಿಗೆ ಸ್ಕೌಟಿಂಗ್ ಬಗ್ಗೆ ವಿವರಿಸಿದರು ಅಪ್ಪ. 

"ಇಂತಾ  ತರಬೇತಿಗಳಿಂದ  ಯುವಕರು  ಅಪಘಾತಗಳಾಗೋ   ಸಮಯಗ್ಳಲ್ಲಿ ಕಷ್ಟಕ್ಕೆ ಸಿಕ್ಕಿದವರ್ಗೆ  ಉಪ್ಕಾರ ಮಾಡ್ಬೋದು . ಜನರ ಸೇವೆ ಮಾಡ್ಬೋದು .  "

" ಅದಕ್ಕೇ  ಬೇರೆ ಬೇರೆ ಜನ ಇದ್ದಾರಲ್ಲ  ..ಪುಟ್ಟಣ್ಣ ಯಾಕೆ ಅದೆಲ್ಲ ಮಾಡ್ಬೇಕು ?"

" ಇದ್ದಾರೆ ಪುಟ್ಟಿ . ಆದ್ರೂ  ಪ್ರತ್ಯೊಬ್ಬ ಹುಡುಗನೂ ಕೂಡ ತನ್ನಿಂದಾದ ಸೇವೆಯನ್ನ ಮಾಡ್ಬೇಕು ಅನ್ನೋದೇ ಸ್ಕೌಟ್ಗಳ ಉದ್ದೇಶ. ಸ್ಕೌಟ್ಗಳು ಹೊರಾಂಗಣದಲ್ಲಿ ಜೇವಿಸೋದನ್ನ ಕಲೀತಾರೆ.  ಕಷ್ಟಗಳನ್ನ ಎದಿರ್ಸೋದನ್ನ ಕಲೀತಾರೆ.  ಸೊದರತ್ವದಿಂದ  ಇರೋದು , ಹಿತವಾಗ್ಮಾತಾಡೋದು , ಪರೋಪಕಾರ ಮಾಡೋದು , ಸ್ವಚ್ಛವಾಗಿರೋದು, ಶಿಸ್ತಿನಿಂದ ಇರೋದು, ಮೈಕೈಯನ್ನ  ಗಟ್ಟಿ ಮುಟ್ಟಾಗಿ ಇಟ್ಕೊಳ್ಳೋದು , ಬುದ್ಧಿಯನ್ನ  ಚುರುಕಗಿ  ಇಟ್ಕೊಳ್ಳೋದು , ಎಂತಾ ಪರಿಸ್ಥಿತಿಯಲ್ಲೂ   ಸ್ವಾಧೀನರಾಗಿರೋದು, ಒಳ್ಳೆ ನಡತೆಗಳನ್ನ ಕಲ್ಯೋದು, ಪರಿಸರವನ್ನ ಶುದ್ಧವಾಗಿಟ್ಕೋಳೋದು ಎಲ್ಲವನ್ನೂ ಸ್ಕೌಟ್ಗಳು ಕಲೀತಾರೆ. "

" ಅಪ್ಪ, ಅಪ್ಪ ..... " ಪುಟ್ಟಿಯ ಪ್ರಶ್ನೆಗಳಿಗೆ ಅಂತ್ಯವೇ  ಇರಲಿಲ್ಲ !  

" ಪುಟ್ಟಿ ! ಸುಮ್ನೆ ಕೂತ್ಕೊಂಡ್ ನೋಡು. ಶಿಬಿರಾಗ್ನಿ ಹಚ್ಚಿದ್ದಾರೆ  ನೋಡು . " ಅಮ್ಮ ಖಂಡನೆ ಮಾಡಿ ಪುಟ್ಟಿಯನ್ನು ಪಕ್ಕದಲ್ಲಿ  ಕೂರಿಸಿಕೊಂಡಳು  .

 ಸ್ಕೌಟ್ಗಳೆಲ್ಲ ಅಗ್ನಿ ಜ್ವಾಲೆಯ ಸುತ್ತ ವೃತ್ತಾಕಾರವಾಗಿ ಕುಳಿತರು. ಸ್ಕೌಟ್ ಹಾಡುಗಳನ್ನು ಹಾಡಲು ಶುರು ಮಾಡಿದರು . 


ಕುಂ ಬಯ್ ಯಾ  ಓ  ಒಡೆಯಾ ಕುಂ ಬಯ್ ಯಾ 
ಕುಂ ಬಯ್ ಯಾ  ಓ  ಒಡೆಯಾ  ಕುಂ  ಬಯ್  ಯಾ 
ಕುಂ ಬಾಯ್ ಯಾ ಓ ಒಡೆಯ ಕುಂ ಬಯ್ ಯಾ 
ಓ ಒಡೆಯ ಕುಂ ಬಯ್  ಯಾ . 

ಯಾರೋ ನಗುತಿಹರು ಕುಂ ಬಯ್ ಯಾ 
ಯಾರೋ ನಗುತಿಹರು ಕುಂ ಬಯ್ ಯಾ 
ಯಾರೋ ನಗುತಿಹರು ಕುಂ ಬಯ್ ಯಾ 
ಓ ಒಡೆಯಾ  ಕುಂ ಬಾಯ್  ಯಾ . 

ಯಾರೋ ಅಳುತಿಹರು ಕುಂ ಬಯ್ ಯಾ 
ಯಾರೋ ಅಳುತಿಹರು  ಕುಂ  ಬಯ್ ಯಾ 
ಯಾರೋ ಅಳುತಿಹರು ಕುಂ  ಬಯ್ ಯಾ
ಓ ಒಡೆಯಾ ಕುಂ ಬಯ್ ಯಾ. 

ಯಾರೋ ಪ್ರಾರ್ಥಿಸುವರು ಕುಂ ಬಯ್ ಯಾ 
ಯಾರೋ ಪ್ರಾರ್ಥಿಸುವರು ಕುಂ ಬಯ್ ಯಾ 
ಯಾರೋ ಪ್ರಾರ್ಥಿಸುವರು ಕುಂ ಬಯ್ ಯಾ 
ಓ ಒಡೆಯಾ ಕುಂ ಬಯ್ ಯಾ . 

ಯಾರೋ ಹಾಡುತಿಹರು ಕುಂ ಬಯ್ ಯಾ 
ಯಾರೋ ಹಾಡುತಿಹರು ಕುಂ ಬಯ್ ಯಾ 
ಯಾರೋ ಹಾಡುತಿಹರು ಕುಂ ಬಯ್ ಯಾ 
ಓ ಒಡೆಯಾ ಕುಂ ಬಯ್ ಯಾ . 

" ಇದೆಂತ ಹಾಡು ಅಪ್ಪಾ ?" ಪುಟ್ಟಿ ಆಶ್ಚರ್ಯದಿಂದ ಕೇಳಿದಳು.
"ಹಿಂದಿನ್  ಕಾಲ್ದಿಂದ ಈ ಹಾಡನ್ನ ಸ್ಕೌಟ್ಗಳು  ಶಿಬಿರಾಗ್ನಿ ಸುತ್ತ  ಕೂತು ಹಾಡ್ತಾ ಬಂದಿದ್ದಾರೆ . ಸ್ಕೌಟ್ಗಳು ಇಷ್ಟೆಲ್ಲಾ ಕಷ್ಟ ಪಟ್ಟು ವ್ಯಾಯಾಮಗಳ್ನೆಲ್ಲಾ ಮುಗ್ಸಿದ್ದಾರೆ ಅಲ್ವೇ?ಈಗ ಆರಾಮ್ವಾಗಿ  ಕೂತು ಮನೋರನ್ಜ್ನೆಗಾಗಿ  ಸಂತೋಷವಾಗಿ ಹಾಡ್ತಿದ್ದಾರೆ . ಹೀಗೆ ಗುಂಪಾಗಿ ಕೂತು ಹಾಡೋದ್ರಿಂದ ಸ್ಕೌಟ್ಗಳ ಸ್ನೇಹ, ಸೋದರತ್ವ ಇನ್ನಷ್ಟು ಘಾಡವಾಗತ್ತೆ . ಚಳಿಯೂ ದೂರ್ವಾಗತ್ತೆ . "

ಕತ್ತಲಾಗುತ್ತಾ  ಬಂತು . ಶಿಬಿರಾಗ್ನಿಯ ಜ್ವಾಲೆಯನ್ನ  ಕೆದಕಿ ತಣ ತಣ ಉರಿಸುತ್ತ ಹುಡುಗರು ಮತ್ತೊಂದು ಹಾಡು ತೆಗೆದರು . 

zoolu zamba ಲೂಲೂ ಲೂಲು ಮಾಚಿಕ 
ಲೂಲು ಮಾಚಿಕ , ಲೂಲು ಮಾಚಿಕ 
ಕೀಕಿ ಆಶುಕಾರಿ ಉಶ್ ಆಫ್ರಿಕ 
ಕೀಕಿ ಆಶುಕಾರಿ ಉಶ್ ಆಫ್ರಿಕ . 


ಒಂದು ಗುಂಪು ಈ ಹಾಡನ್ನು ಹಾಡಲು  ಇನ್ನೊಂದು ಗುಂಪು zoom  , zoom  , zoom  ಎಂದು ಲಯಬದ್ಧವಾಗಿ ಹಿನ್ನೆಲೆಯಲ್ಲಿ zoom ಗುಟ್ಟುತ್ತಿತ್ತು . ಆ ವರೆಗೂ ತಾನು ಕೇಳೇ  ಇಲ್ಲದ ಈ ಹಾಡುಗಳನ್ನು ಕೇಳಿ ಪುಟ್ಟಿಗೆ  ಬಹಳ ಖುಷಿಯಾಯಿತು .  ಉತ್ಸಾಹ ಎಲ್ಲೆ  ಮೀರಿ ತಾನೂ ಚಪ್ಪಾಳೆ ತಟ್ಟಿ  zoom  zoom  ಎನ್ನುತ್ತ ಕುರ್ಚಿಯಿಂದ ಎದ್ದು ನಿಂತಳು ಪುಟ್ಟಿ . 

ನಂತರ, ವಿಶ್ವ ಸ್ಕೌಟ್ ಸಂಸ್ಥಾಪಕ ಬೇಡನ್ ಪೋವೆಲ್ ಅವರು ಸ್ವತಃ ರಚಿಸಿದ್ದ ಹುರಿದುಂಬಿಸುವಂತಹ ಸ್ತುತಿ ಗೀತೆಯನ್ನ ಹಾಡ ತೊಡಗಿದರು ಸ್ಕೌಟ್ ಹುಡುಗರು . 

ಗಿಂಗ್ ಗ್ಯಾಂಗ್ ಗೂಲಿ ಗೂಲಿ ಗೂಲಿ ಗೂಲಿ ವಾಚ,  
ಗಿಂಗ್ ಗ್ಯಾಂಗ್ ಗೂ , ಗಿಂಗ್ ಗ್ಯಾಂಗ್ ಗೂ .
ಗಿಂಗ್ ಗ್ಯಾಂಗ್ ಗೂಲಿ ಗೂಲಿ ಗೂಲಿ ಗೂಲಿ ವಾಚ, 
ಗಿಂಗ್ ಗ್ಯಾಂಗ್ ಗೂ , ಗಿಂಗ್ ಗ್ಯಾಂಗ್ ಗೂ . 
ಹೈಲ, ಓ ಹೈಲ ಶೈಲಾ , ಹೈಲ ಶೈಲಾ, ಶೈಲಾ ಓಹ್  ಹೊ ,
ಹೈಲ, ಓ  ಹೈಲ ಶೈಲಾ, ಹೈಲ ಶೈಲಾ , ಶೈಲಾ ಓಹ್ 
ಶಾಲಿ ವಾಲೀ, ಶಾಲಿ ವಾಲಿ , ಶಾಲಿ ವಾಲಿ , ಶಾಲಿ ವಾಲಿ ,
ಊಂಫಾ  , ಊಂಫಾ, ಊಂಫಾ , ಊಂಫಾ . 

ಒಂದು ತಂಡ  ಹಾಡನ್ನು ಹೇಳುತ್ತಿರಲು ಮತ್ತೊಂದು ತಂಡ  'ಊಂಫಾ ಊಂಫಾ ಊಂಫ' ಎಂದು ಉತ್ತೇಜಿತಗೊಳಿಸುವಂತೆ ರಾಗವಾಗಿ ಉಚ್ಚರಿಸುತ್ತಿತ್ತು. ಪುಟ್ಟಿ ಮಾತ್ರವಲ್ಲದೇ  ವೀಕ್ಷಕರಾಗಿದ್ದ ಅನೇಕ ಮಕ್ಕಳು ತಾವೂ 'ಊಂಫಾ, ಊಂಫಾ, ಊಂಫಾ !' ಎನ್ನುತ್ತಿದ್ದವು.   

ಕೊನೆಯದಾಗಿ - 

ಕರಡಿ ಬೆಟ್ಟಕ್ಕೆ ಹೋಯಿತು ಕರಡಿ ಬೆಟ್ಟಕ್ಕೆ ಹೋಯಿತು 
ಕರಡಿ ಬೆಟ್ಟಕ್ಕೆ ಹೋಯಿತು ನೋಟ ನೋಡಲು . 

ನೋಡಿತೇನದು ? ಅದು ನೋಡಿತೇನದು ?
ಬೆಟ್ಟದ ಇನ್ನೊಂದು ಬಾಗ, ಬೆಟ್ಟದ ಇನ್ನೊಂದು ಬಾಗ 
ಬೆಟ್ಟದ ಇನ್ನೊಂದು ಬಾಗ ಕರಡಿ ನೋಡಿತು . 

ಮರವನೇರಿತು , ಕರಡಿ ಮರವನೇರಿತು 
ಕಿತ್ತು ತಂದಿತು , ಹಲಸು ಕಿತ್ತು ತಂದಿತು.  
ಜೇನು ಬೆರೆಸಿ ಮರಿಗೆ ಕೊಟ್ಟು - 
 ತಾನೂ  ತಿಂದು ತೇಗಿತು .  

ಕರಡಿ ಬೆಟ್ಟಕ್ಕೆ ಹೋಯಿತು ಕರಡಿ ಬೆಟ್ಟಕ್ಕೆ ಹೋಯಿತು 
ಕರಡಿ ಬೆಟ್ಟಕ್ಕೆ ಹೋಯಿತು ನೋಟ ನೋಡಲು. 


ಸ್ಕೌಟ್ ಹುಡುಗರೆಲ್ಲ ಚಪ್ಪಾಳೆ ತಟ್ಟುತ್ತ ಶಿಬಿರಾಗ್ನಿಯನ್ನು ಸುತ್ತಿ ಸುತ್ತಿ ಓಡುತ್ತಾ ಹಾಡಿದರು. ಪುಟ್ಟಿ ಕುಣಿದು ಕುಣಿದು ತಾನೂ ಅವರ ಜೊತೆ ಕರಡಿ ಬೆಟ್ಟಕ್ಕೆ ಹೋಯಿತು ಹಾಡನ್ನು ಜೋರಾಗಿ ಹಾಡಿದಳು . 

 ಕಾರ್ಯಕ್ರಮ ಮುಗಿದಾಗ ಪುಟ್ಟಿ , " ಅಪ್ಪ ನಾನೂ ಸಕೌಟ್ಗೆ ಸೇರ್ಕೋತೀನಿ ." ಎಂದು ಉತ್ಸಾಹದಿಂದ ಕುಣಿದಳು. 

" ಹೂಂ . ನೀನು ಬುಲ್ ಬುಲ್ಸ್ಗೆ ಸೇರ್ಬೊದು . ಆಮೇಲೆ ಗರ್ಲ್ ಗೈಡ್ ಆಗ್ಬೋದು.  " ನಗುತ್ತ ಹೇಳಿದರು  ಅಪ್ಪ. 


Sunday, December 22, 2013

ಕ್ರಿಸ್ಮಸ್ ಹಬ್ಬದ ಶುಭಾಶಯಗಳು.





  



ಕ್ರಿಸ್ಮಸ್ ಹಬ್ಬದ ಶುಭಾಶಯಗಳು.  





  ಚಳಿ ಚಳಿ ರಾತ್ರಿಯಲ್ಲಿ ಕಾರ್ಗತ್ತಲಲ್ಲಿ 
  ಜನಿಸಿತು ಶಿಶು ಒಂದು ಬೆಟ್ಲೆಹೇಮ್ ನಗರಿಯಲಿ.  

ಈ  ಶುಭ ಸಂದೇಶವ ಹೊತ್ತ  ದೇವದೂತರು 
 ಹಾಡಿ  ಸಾರಿದರು ವಿಶ್ವದ ಮೂಲೆಮೂಲೆಗು. 
  
ಆನಂದ ಕಂದನ ಕಂಡ ಗೊಲ್ಲರು  
ಸುರಿಸಿ ನಿಂತರು  ಆನಂದ ಬಾಷ್ಪವ.   

ಮೂಡಲ ಮಹಾರಾಜರು ಶಿಶುವ ವಂದಿಸಿ  ,  
ಸಮರ್ಪಿಸಿಕೊಂಡರು ಬಂಗಾರದುಡುಗೊರೆಯ .  
  
ವಿಶ್ವ ಶಾಂತಿಯ ಬಯಸಿ ಎಲ್ಲರೂ  
ಪ್ರಾರ್ತಿಸುವ ಬನ್ನಿರೀ  ಆ ದಿವ್ಯ ಮೂರ್ತಿಯ. 




ರೂಪಾಳ ಮನೆಯಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ.  ಏಸುವಿನ ಜನನದ ಬಗ್ಗೆ ವಿಜಯ್ ಮತ್ತು ಕ್ಳಾರಿ ಹಾಡಿದ ಹಾಡಿಗೆ ಪುಟ್ಟಿ ಆನಂದಿಂದ ತಲೆ ತೂಗುತ್ತಿದ್ದಳು. 

" ಪುಟ್ಟಿ ತಗೋ ಕೇಕ್ ತಿನ್ನು." ಎನ್ನುತ್ತ ರೂಪಾ  ತಿಂಡಿ ತಟ್ಟೆಯನ್ನು ತಂದು ಕೊಟ್ಟಳು. ತಟ್ಟೆಯಲ್ಲಿ ಕೇಕ್ ಮಾತ್ರವಲ್ಲದೆ ಇನ್ನೂ ಅನೇಕ ಬಕ್ಷ್ಯಗಳಿದ್ದವು. ಒಂದೊಂದೇ ಸವಿಯುತ್ತ ಪುಟ್ಟಿ ರೂಪಾಳ ಮನೆಯ ಕ್ರಿಸ್ಮಸ್ ಅಲಂಕಾರಗಳನ್ನು ಬೆರಗಿನಿಂದ ನೋಡಿದಳು. 

ಸಾಲು ದೀಪಗಳ ಅಲಂಕಾರ ತೋರಣಗಳು. 
ಸುವಾಸನೆ ಸೂಸಿದ  ಮೋಂಬತ್ತಿಗಳು. 



ಮಿರಿಮಿರಿ ಹೊಳೆದ ಕ್ರಿಸ್ಮಸ್ ಮರ. 



ಏಸುವಿನ ಜನನದ ದೃಶ್ಯವನ್ನ ಚಿತ್ರಿಸುತ್ತಿದ್ದ  ಬೊಂಬೆಗಳು. 
ಒಣ ಹುಲ್ಲಿನ ಹಾಸಿನ ಮೇಲೆ ಬುಟ್ಟಿಯಲ್ಲಿ ಮಲಗಿದ್ದ ಕ್ರಿಸ್ಮಸ್ ಪಾಪಾ . 


" ಪುಟ್ಟಿ! ನೀನು ತುಂಬಾ ಚೆನ್ನಾಗ್ ಹಾಡ್ತಿಯಂತೆ ! ಒಂದು ಒಳ್ಳೆ ಹಾಡು ಹೇಳು ನಮ್ಮ ಕ್ರಿಸ್ಮಸ್ ಪಾಪಾಗೆ !" ಎಂದಳು ರೂಪಾಳ ತಾಯಿ.  

ಪುಟ್ಟಿ ಮಿಕ ಮಿಕ ಕಣ್ಣು ಬಿಟ್ಟಳು. 

" ನಂಗೆ ಕ್ರಿಸ್ಮಸ್ ಪಾಪಾ ಹಾಡು ಗೊತ್ತಿಲ್ಲ. ಆದ್ರೆ ಕ್ರಿಸ್ಮಸ್ ತಾತಾ  ಹಾಡು ಹೇಳಲೇ ?" ಪುಟ್ಟಿ ಸಂಕೋಚದಿಂದ ಕೇಳಿದಳು . 

" ಓ ಹೇಳು !" 

ಪುಟ್ಟಿ ತಿಂಡಿ ತಟ್ಟೆ ಕೆಳಗಿಟ್ಟಳು . 

" ರೂಪಾ  , ನೀನೂ ನಂಜೊತೆ ಹಾಡ್ತೀಯಾ ?"

" ಯಾವ ಹಾಡು ಪುಟ್ಟಿ ?" 

ಪುಟ್ಟಿ ರೂಪಾಳ ಕಿವಿಯ ಬಳಿ ಬಾಗಿ ಪಿಸುಗುಟ್ಟಿದಳು.  

ಹಿಮ ರಾಶಿಯ ಜಾರುತ್ತ, ಕಾಡು ಬಯಲನು ಹಾಯುತ್ತ,
ಹರುಷವ ಹರಡುತ್ತಾ, ಸಂತೋಷವ ತುಂಬುತ್ತಾ,
ಜಿಂಗಲ್ ಬೆಲ್  ಜಿಂಗಲ್ ಬೆಲ್  ಗಂಟೆಯ ಬಾರಿಸುತ,
ಜಾರುಬಂಡಿಯನ್ನೇರಿ ಬಂದ ಕ್ರಿಸ್ಮಸ್ ತಾತಾ  ! ಹೇಯ್  !
ಜಿಂಗಲ್ ಬೆಲ್ ಜಿಂಗಲ್ ಬೆಲ್ ಗಂಟೆಯ ಬಾರಿಸುತ !
ಒಂಟಿ ಕುದುರೆ ಬಂಡಿಯನ್ನೇರಿ  ಬಂದ ಕ್ರಿಸ್ಮಸ್ ತಾತಾ !
ಹೇಯ್ ! ಜಿಂಗಲ್ ಬೆಲ್ ಜಿಂಗಲ್ ಬೆಲ್ ಗಂಟೆಯ ಬಾರಿಸಿತ !

ಪುಟ್ಟಿ ರೂಪಾ  ಇಬ್ಬರೂ ಹಾಡಿದಾಗ  ಕೂಡಿದ್ದ ಸ್ನೇಹಿತರೆಲ್ಲ ಚಪ್ಪಾಳೆ ತಟ್ಟುತ್ತ ತಾವೂ ಅವರೊಡನೆ ಸೇರಿ ಹಾಡಿ ಕುಣಿದರು. 

" ತುಂಬಾ ಚೆನ್ನಾಗ್ ಹೇಳ್ದೆ ಪುಟ್ಟಿ . ನೋಡು, ಕ್ರಿಸ್ಮಸ್ ತಾತಾ  ಕ್ರಿಸ್ಮಸ್ ಮರದ ಕೆಳಗೆ ನಿನ್ನ ಹೆಸರಿಗೆ  ಒಂದ್ ಗಿಫ್ಟ್ ಇಟ್ಟಿದ್ದಾನೆ !" ಎನ್ನುತ್ತಾ ಪುಟ್ಟಿ ಕೈಗೆ ಒಂದು ಪೊಟ್ಟಣವನ್ನು ಕೊಟ್ಟರು ರೂಪಾಳ ತಂದೆ. 



ಪುಟ್ಟಿ ಜರತಾರಿಯಲ್ಲಿ ಸುತ್ತಿದ್ದ ಆ ಪೊಟ್ಟಣವನ್ನು ಬಹಳ ಸಂತೋಷದಿಂದ ಎದೆಗವಚಿಕೊಂಡಳು. 

Sunday, December 1, 2013

ಪಿಂಕಿ - ಪುಟ್ಟಿ ಜುಗಲ್ಬಂಧಿ !

ಪಿಂಕಿ - ಪುಟ್ಟಿ ಜುಗಲ್ಬಂಧಿ !
"ಆ ಮರದಲ್ಲಿ ಗೂಬೆ ಪಕ್ಷಿ ಕೂತು ಕೊಂಡಿದೇ,
ಅತ್ತಲಾಗಿಯೂ ಇತ್ತಲಾಗಿಯೂ,
ಆ ಮರದಲ್ಲಿ ಗೂಬೆಗಳು ಕೂತುಕೊಂಡಿವೆ!
ನೀರಿನಲ್ಲಿ ಮೀನುಗಳು ಈಜುತಲಿವೆ,
 ಅತ್ತಲಾಗಿಯೂ ಇತ್ತಲಾಗಿಯೂ,
ನೀರಿನಲ್ಲಿ ಮೀನುಗಳು ಈಜುತಲಿವೆ!
ಸಾಗರದಲ್ಲಿ ದೋಣಿಗಳು ತೆಲುತಲಿವೆ, 
 ಅತ್ತ ಲಾಗಿಯೂ , ಇತ್ತಲಾಗಿಯೂ,
ಸಾಗರದಲ್ಲಿ ದೋಣಿಗಳು ತೆಲುತಲಿವೆ!
ಆಗಸದಲ್ಲಿ ತಾರೆಗಳು ಮಿನುಗುತಲಿವೆ,
 ಅತ್ತಲಾಗಿಯೂ ಇತ್ತಲಾಗಿಯೂ
ಆಗಸದಲ್ಲಿ ತಾರೆಗಳು ಮಿನುಗುತಲಿವೆ!
ಬೆಟ್ಟದಾಚೆ ಮಾಯಾಲೋಕ ಹೊಳೆಯುತಲಿದೆ,
ಅತ್ತಲಾಗಿಯೂ ಇತ್ತಾಲಾಗಿಯೂ,
ಬೆಟ್ಟದಾಚೆ ಮಾಯಾಲೋಕವು ಹೊಳೆಯುತಲಿದೆ! "

                                                                  

ಪಕ್ಷಿಗಳು ಹಾರಿದಂತೆ, ಮೀನು ಈಜಿದಂತೆ , ದೋಣಿ 

ತೇಲಿದಂತೆ , ತಾರೆಗಳು 

ಮಿನುಗಿದಂತೆ ಕಣ್ಣಗಲಿಸಿ, ತಲೆದೂಗಿ, ಕೈಗಳನ್ನೂ ಆಡಿಸಿ 

ಅಭಿನಯ  ಮಾಡುತ್ತಲೇ ಹಾಡಿದಳು ಪುಟ್ಟಿ . 

ಬೆಂಗಳೂರ್ ಕಾನ್ವೆಂಟಿನಲ್ಲಿ  ತಾನು ಕಲಿತಿದ್ದ Hot Cross Buns , 

London bridge , Old King Cole ಮುಂತಾದ ಆಂಗ್ಲ ಗೀತೆಗಳನ್ನು 

ಈಗಾಗಲೇ ಹಾಡಿ ತೋರಿಸಿದ್ದಳು ವೆಂಕಿ ಮಾಮನ 

ಮಗಳು ಪಿಂಕಿ.  

ಪುಟ್ಟಿಯ ಹಾಡು ಕೇಳಿ  ಪಿಂಕಿ ಮಾತ್ರವಲ್ಲದೇ, ವೆಂಕಿ ಮಾಮ , 

ಸುಜಾ ಆಂಟಿ, ಮತ್ತು ಪಿಂಕಿ ,

ಪಮ್ಮಿ ಅಕ್ಕ ಕೂಡ  ಸಂತೋಷದಿಂದ ಉದ್ಗರಿಸಿದರು  . 

"  Oranges and lemons ಗೊತ್ತಾ? ಹಾಡ್ತೀನಿ ಕೇಳು . ಪಮ್ಮಿ, 

ನೀನೂ ಬಾ " 

ಅಕ್ಕಳನ್ನು ಕರೆದಳು  ಪಿಂಕಿ. 


" ನಾನು ಪಾಪು ಜೊತೆ ಆಡ್ತೀನಿ . ನೀನೇ ಹಾಡು . " ಪಮ್ಮಿ 

ಸರಸು ಅತ್ತೆ ಮಡಿಲಲ್ಲಿದ್ದ ಪಾಪುವಿಗೆ ಆಟ ತೋರಿಸುತ್ತ 

ಹಜಾರದ ಮೆಟ್ಟಲ ಮೇಲೆ ಕುಳಿತುಬಿಟ್ಟಳು   . 

Oranges and lemons,
Sold for a penny !
And the school girls are also many!
The grass is green and the rose is red,
Remember me when I am dead, dead, dead, dead ! 

ಪಿಂಕಿ ಜೊತೆ ತಾನೂ ಸೇರಿಕೊಂಡು ಹಾಡಿದಳು  ಪುಟ್ಟಿ . 

" ನಿನ್ಗೂ ಈ ಹಾಡು ಬರತ್ಯೇ ?" ಪಿಂಕಿಗೆ ಆಶ್ಚರ್ಯ . 

" ಇದೇ ಹಾಡನ್ನ ಕನ್ನಡದಲ್ಲೂ ಹೇಳ್ಕೊಟ್ಟಿದ್ದಾರೆ ನಮ್

 ಮಿಸ್ ." 

ಎಂದು ಕೊಚ್ಚಿಕೊಂಡಳು ಪುಟ್ಟಿ . 

" ಹಾಗೇನು ? ಹೇಳು ಮತ್ತೆ ಕೇಳೋಣ ." ಎಂದರು 

ಕುರ್ಚಿಯಲ್ಲಿ ಕುಳಿತಿದ್ದ ವೆಂಕಿ ಮಾಮ . 

" ಆ ಕಾಲದಲ್ಲಿ  ಆಂಗ್ಲ ಸಾಕ್ಷರತೆ ಕೊಡೊ  ಸ್ಕೂಲ್ ಗಳನ್ನ 

ಅಂಗ್ಲ ದೇಶದ ಪಾದ್ರಿಯರೇ ಹೆಚ್ಚಾಗಿ ನಿರ್ವಹಿಸ್ತಿದ್ರು. 

ಪಾಠದೊಂದಿಗೆ, ಆಂಗ್ಲರ ಅನೇಕ ಕ್ರೀಡೆ 

ಮತ್ತು ಮನರಂಜನೆಯ ಆಟಗಳನ್ನ  ನಮ್ಮ ದೇಶದ 

ಮಕ್ಳಿಗೆ ಪರಿಚಯಿಸಿ ಕೊಟ್ರು  . Nursery Rhymes ಗಳನ್ನೂ 

ಮಕ್ಳಿಗೆ ಕಲಿಸಿದ್ರು . 

ಕ್ರಮೇಣ  Nursery Rhymes ಗಳನ್ನ ನಮ್ಮ ದೇಶದ ಭಾಷೆಗಳಿಗೆ 

ಅನುವಾದ ಮಾಡಿ ಅವನ್ನೂ ಸ್ಕೂಲ್ ಗಳಲ್ಲಿ ಹೇಳಿ ಕೊಟ್ರು." 

 ಎಂದು ಬಾಷಣವೇ ಬಿಗಿದುಬಿಟ್ಟರು ತಾತ . 

" ಕರೆಕ್ಟ್ ! ನಮ್ಮ ಸ್ಟೆಲ್ಲಾ ಮಿಸ್ ಕೂಡ ಹಾಗೇ ! ಕನ್ನಡದಲ್ಲೂ 

ನಮ್ಗೆ ಹಾಡಕ್ಕೆ ಕಲ್ಸಿದ್ದಾರೆ. ನಾವೆಲ್ಲಾ  ಸ್ಕೂಲಲ್ಲಿ  

'ಕಿತ್ತಳೆ  ಹಣ್ಣು' ಹಾಡ್ಕೊಂಡೆ ಆಟ ಆಡ್ತೀವಿ . ಪಮ್ಮಿ! ನೀನೂ 

ಬಾ ಆಡೋಣ . " ಎಂದು ಮತ್ತೆ ತನ್ನ ಅಕ್ಕಳನ್ನು ಕರೆದಳು  ಪಿಂಕಿ.  



" ಹೋಗೆ ಪಿಂಕಿ ! ಮೂರೇ ಜನ ಹೇಗೆ ಆಡೋದು ?" ಎಂದಳು 

ಪಮ್ಮಿ . 

" ನಾನೂ ಬರ್ತೀನಿ ಬಾ ! ಪುಟ್ಟಣ್ಣ ನೀನೂ ಬಾ !" ಎನ್ನುತ್ತಾ 

ಅಮ್ಮನ ಕೈಗೆ ಪಾಪುವನ್ನು ಕೊಟ್ಟಳು ಸರಸು ಅತ್ತೆ . 

ಇಬ್ಬರೂ   ತಮ್ಮ 

ಕೈಗಳನ್ನು  ಗೋಪುರದಂತೆ ಜೋಡಿಸಿಕೊಂಡು 

ಎದುರುಬದುರಾಗಿ ನಿಂತರು. ಉಳಿದವರು ಆ 

ಗೋಪುರದೊಳಗೆ ತೂರಿ 

ಹೊರಬರಲು ಸಿದ್ದರಾದರು. 

"ಕಿತ್ತಲೆ ಹಣ್ಣು ! ಕಾಸಿಗೆ ಒಂದು ,
ಶಾಲೆಯ ಮಕ್ಕಳು ಬಹಾಳ ಹೆಚ್ಚು !
ಹುಲ್ಲೂ ಹಸಿರು, ಗುಲಾಬಿ ಕೆಂಪು ,
ನಾ ಸತ್ತಾಗ ನೆನಪ್ಪು ಮಾಡಿ, ಡುಂ ಡುಂ ಡುಂ ಡುಂ ಡುಂ ! " 

ಎಲ್ಲರೂ ಒಟ್ಟಿಗೆ ಹಾಡುತ್ತ  ಕೈ ಗೋಪುರದೊಳಗೆ ಸಾಲಾಗಿ ನುಗ್ಗಿ ನುಗ್ಗಿ 

ಹೊರಬಂದರು . ಹಾಡು ಮುಗಿಯುತ್ತಿದ್ದ ಹಾಗೆ 'ಡುಂ ಡುಂ ಡುಂ ' ಎನ್ನುತ್ತಾ , 

ಆ ಸಮಯಕ್ಕೆ ಸರಿಯಾಗಿ ಗೋಪುರದೊಳಗೆ ನುಗ್ಗಿದ ಪಿಂಕಿ 'ಪಕ್' ಕನೆ ಸೆರೆ 
ಹಿಡಿಯಲ್ಪಟ್ಟಳು . 

ಅದೇ ಸಮಯ ತೋಟದಲ್ಲಿ ಹಾದು  ಹೋದ ಪಕ್ಕದ ಮನೆ 

ಬೆಕ್ಕಿನ ಕಡೆ ಪುಟ್ಟಿಯ ಗಮನ ತಿರುಗಿತು.  ಹುರುಪಿನಿಂದ ಜೋರಾಗಿ ಹಾಡತೊಡಗಿದಳು . 

Pussy cat pussy cat where had you been?
I had been to London to look at the queen!
Pussy cat pussy cat what did you there?
I frightened the little mouse under the chair!

ಪಿಂಕಿಗೂ ಖುಷಿಯಾಯಿತು . ಅವಳೂ ತಾನು ಕಲಿತಿದ್ದ ಬೆಕ್ಕಿನ ಹಾಡನ್ನು 

ಹಾಡಿದಳು. 

ಬೆಕ್ಕೇ ಬೆಕ್ಕೇ ! ಮುದ್ದಿನ ಸೊಕ್ಕೆ ! ಎಲ್ಲಿಗೆ ಹೋಗಿದ್ದೇ ?
ಕರೆದರೂ ಇಲ್ಲ ! ಹಾಲು ಬೆಲ್ಲ ಕಾಯಿಸಿ ಇಟ್ಟಿದ್ದೆ  !
ಕೇಳೋ ಕಳ್ಳ !ಮುದ್ದಿನ ಮಲ್ಲ ! ಮೈಸೂರು ಅರಮನೆಗೆ !
ರಾಜನ ಸಂಗಡ ರಾಣಿಯು ಇದ್ದಳು ಅಂತಃಪುರದೊಳಗೆ !
ಬೆಕ್ಕೇ ಬೆಕ್ಕೇ!ಬೇಗನೆ ಹೇಳೇ !ಏನದು ಆನಂದ?
ರಾಣಿಯ ಮಂಚದ ಕೆಳಗೆ ಕಂಡೆನು ಚಿಲಿಪಿಲಿ ಇಲಿಯೊಂದಾ !


" ತುಂಬಾ ಚೆನ್ನಾಗಿದೆ ಪಿಂಕಿ. ಈಗ ನಾವಿಬ್ರೂ ಒಟ್ಟಿಗೆ ಹಾಡೋಣಾ ? ನೀನು 


ಬೇಕೇ ಬೆಕ್ಕೇ ಹಾಡು. ನಾನು ಪುಸ್ಸಿ ಕ್ಯಾಟ್ ಹಾಡ್ತೀನಿ ." ಪುಟ್ಟಿ ಉತ್ಸಾಹದಿಂದ 

ಕುಣಿದಳು . 



" ಬೆಕ್ಕೇ ಬೆಕ್ಕೇ ತುಂಬಾ ದೊಡ್ಡ ಹಾಡು . ಒಟ್ಗೇ ಹಾಡಿದ್ರೆ  ಸರಿ 


ಹೋಗಲ್ಲ." ಎಂದಳು ಪಿಂಕಿ . 

" ಬೆಕ್ಕಿನಿಂದ ಎರಡು ಸಾಲುಗಳು ತೆಗೆದ್ಹಾಕಿದ್ರೆ ಆಯಿತು." ಎಂದಳು ಪಮ್ಮಿ . 

" ನಾನು ಅದನ್ನ ಹಾಡ್ತೀನಿ ." ಪುಟ್ಟಿ ಉತ್ಸಾಹದಿಂದ ಮುಂದೆ ಬಂದಳು. 



" ಸರಿ. ನಾನು ಪುಸ್ಸಿ ಕ್ಯಾಟ್  ಹೇಳ್ತೀನಿ !" ಎಂದು ಒಪ್ಪಿಕೊಂಡಳು ಪಿಂಕಿ . 


ಶುರುವಾಯಿತು ಪಿಂಕಿ - ಪುಟ್ಟಿಯರ ಜುಗಲ್ಬಂಧಿ !

ಪಿಂಕಿ -                                                                                                              ಪುಟ್ಟಿ -
Pussy cat pussy cat where had you been?                  ಬೆಕ್ಕೇ ! ಮುದ್ದಿನ ಸೊಕ್ಕೆ ! ಎಲ್ಲಿಗೆ ಹೋಗಿದ್ದೇ? 

I had been to London to look at the queen!               ಕೇಳೋ ಕಳ್ಳ!ಮುದ್ದಿನ ಮಲ್ಲ!ಮೈಸೂರ ಅರಮನೆಗೆ. 
                                                                                                                   
Pussy cat pussy cat what did you there?                     ಬೆಕ್ಕೇ ಬೆಕ್ಕೇ!ಬೇಗನೆ ಹೇಳೇ !ಏನದು    ಆನಂದ?
                                                                                                                                  

I frightened the little mouse under the chair!           ರಾಣಿಯ ಮಂಚದ ಕೆಳಗೆ ಕಂಡೆನು            ಚಿಲಿಪಿಲಿ ಇಲಿಯೊಂದ!                                                                                                                                                                                                                       
ಪಿಂಕಿ ಪುಟ್ಟಿ ಮುಗಿಸಿದಾಗ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು . 


                                                                                  


 ಅಜ್ಜಿ ಮತ್ತು ಪಾಪು ಕೂಡ ಆನಂದದಿಂದ ನಕ್ಕರು!

ಮಕ್ಕಳಿದ್ದ ಮನೆ ಎಂದಮೇಲೆ  ಆನಂದಕ್ಕೆ ಕೇಳಬೇಕೆ ?


Monday, November 25, 2013

ಬೆಳದಿಂಗಳ ಊಟ

ಬೆಳದಿಂಗಳ ಊಟ

                                                                                 

ತೋಟದಲ್ಲಿದ್ದ ಮರಳ ಗುಡ್ಡೆಯ ಮೇಲೆ ಕುಳಿತು ಕಪ್ಪೆಗೂಡು ಕಟ್ಟುತ್ತಿದ್ದಳು ಪುಟ್ಟಿ . 

" ಪುಟ್ಟೀ ! ಊಟ ಮಾಡು ಬಾ!" ಅಮ್ಮ ಕರೆದಳು.


 ಮರಳ ರಾಶಿಯಿಂದ ಆಯಿದು ತೆಗೆದ  ಕಪ್ಪೆಚಿಪ್ಪುಗಳನ್ನು  ಗೂಡಿನೊಳಗೆ  ರಾಜಾ  ರಾಣಿಯರಾಗಿ ಕೂರಿಸಿದಳು ಪುಟ್ಟಿ.   ನಂತರ  'ಕುದುರೆ',  ' ಆನೆ' ಗಳಿಗಾಗಿ ಮರಳಲ್ಲಿ ಜಾಲಾಡುತ್ತ," ಬೇಡ ಅಮ್ಮ. ನನ್ಗೆ  ಹಸಿವಿಲ್ಲ."ಎಂದಳು. 

" ತಗೋ ಆನೆ !"  ದೊಡ್ಡ ಹರಳುಗಲ್ಲುಗಳನ್ನು ಹುಡುಕಿ ತೆಗೆದು ಪುಟ್ಟಿಯ ಕೈಗೆ ಕೊಟ್ಟಳು ಸರಸು ಅತ್ತೆ .

ಪುಟ್ಟಿ ಖುಷಿಯಿಂದ ಕಲ್ಲುಗಳನ್ನು ಕಪ್ಪೆಗೂಡಿನ ಬಾಗಿಲ ಎರಡು ಬದಿಯಲ್ಲೂ ನಿಲ್ಲಿಸಿದಳು .

"ಯಾಕ್  ಹಸಿವಿಲ್ಲ ? ಶಾಂತು ಮನೇಲಿ ಏನಾದ್ರೂ ತಿಂದ್ಯಾ ?'' ವಿಚಾರಿಸಿದಳು ಅಮ್ಮ.

" ಬೋಂಡ ಚಟ್ನಿ ತಿಂದೆ !"ಪುಟ್ಟಿ  ಅಮ್ಮನಿಗೆ ಉತ್ತರ ಕೊಡುತ್ತ, ಬಣ್ಣಬಣ್ಣದ ಕ್ರೋಟನ್ ಗಿಡದ ಎಲೆಗಳನ್ನು ಕಿತ್ತು ತಂದಳು.  ಗೂಡಿನ  ಸುತ್ತ ಕಟ್ಟಿದ್ದ ಮರಳ ಗೋಡೆಯ ಮೇಲೆ  ನೆಟ್ಟು " ಬಾವುಟ !" ಎಂದು ಚಪ್ಪಾಳೆ ತಟ್ಟಿದಳು.  
  
" ನಿಂಗೆ ಚಟ್ನಿ ಇಷ್ಟ ಇಲ್ವಲ್ಲ !" ಎಂದು ಹುಬ್ಬೇರಿಸಿದಳು ಅತ್ತೆ . 

" ಅವ್ರ ಮನೇಲಿ ಚೆನ್ನಾಗಿತ್ತು !"ನಾಲಿಗೆ ಚಪ್ಪರಿಸಿದಳು ಪುಟ್ಟಿ . 

 "ಎಷ್ಟು ಬೋಂಡ ತಿಂದೆ ?" ಅಲ್ಲೇ ಕುಳಿತಿದ್ದ ಅಜ್ಜಿ ಕೇಳಿದಳು . 

" ಮೂರು !"

" ಅದಕ್ಕೆ ಮತ್ತೆ ಹಸಿವಿಲ್ಲ. ಬೋಂಡ ಕರಗೊಕ್ಕಾದ್ರೂ ಇಷ್ಟ್ ಸಾರನ್ನ ತಿನ್ಬಾರ್ದೆ?" ಅಮ್ಮ ಗೊಣಗಿದಳು.

" ತಿಂತಾಳೆ ತಡಿ !" ಎನ್ನುತ್ತ ಮರಳ ರಾಶಿಯ ಮೇಲಿಂದ ಎದ್ದು ಮನೆಯೊಳಕ್ಕೆ ನಡೆದಳು ಅಜ್ಜಿ . 

" ಉಂಡಾಡಿ ಗುಂಡಮ್ಮ , ಮೂರು ಬೋಂಡ  ತಿಂದ್ಳಮ್ಮಾ !" ಗೋಡೆಗೆ ಬಾಲ್  ಎಸೆದು ಕ್ಯಾಚ್ ಮಾಡುತ್ತಿದ್ದ ಪುಟ್ಟಣ್ಣ ಪುಟ್ಟಿಯನ್ನು  ರೇಗಿಸಿದ. 

" ನೋಡತ್ತೆ ಪುಟ್ಟಣ್ಣನ್ನಾ  !" ರಾಗವೆಳೆದಳು  ಪುಟ್ಟಿ. 

" ಯಾಕೋ ಪುಟ್ಟಣ್ಣ ಅವಳ್ನ ಚುಡಾಯಿಸ್ತೀಯ ?" ಎಂದಳು ಅತ್ತೆ. 

" ನಾನು ಶಾಂತು ಮನೆಯಿಂದ ಬರೋವಾಗ ಇಷ್ಟೊಂದು ಬಾಗೇ ಕಾಯಿ  ಆರಿಸ್ಕೊಂಡ್  ಬಂದಿದ್ದೀನಿ. ನಿಂಗೆ  ಕೊಡಲ್ಲ ಹೋಗು!" ಪೊಟ್ಟಿ ಕರುಬಿದಳು . 

" ಸಾರಿ ಪುಟ್ಟಿ! ಪ್ಲೀಸ್ ಪ್ಲೀಸ್ ! ಕೊಟ್ಬಿಡೆ ! ನಾಳೆ ರಾಮೂ ಬರ್ತಾನೆ.  ಕಾರ್ಕ್ ಬಾಲ್ ಮಾಡ್ಬೇಕು. ಪ್ಲೀಸ್ ಕೊಡೆ." ಪುಸಲಾಯಿಸಿದ ಪುಟ್ಟಣ್ಣ . 

" ನಾವೆಲ್ಲಾ ಬೆಳದಿಂಗಳೂಟ ಮಾಡ್ತಿದ್ದೀವಿ ! ಯಾರ್ಯಾರಿಗೆಲ್ಲ ಕೈ ತುತ್ತು ಬೇಕೋ, ಕೈ ತೊಳ್ಕೊಂಡ್ ಬನ್ನಿ !" ಅಜ್ಜಿ ಸೌಟಿನಿಂದ ಕಲಸಿದನ್ನದ ಗಂಗಾಳವನ್ನು  ತಟ್ಟಿ ಡಂಗೂರ ಸಾರುತ್ತಾ ಮನೆಯಿಂದ ಹೊರ ಬಂದು ಮರಳ ಮೇಲೆ ಕುಳಿತಳು  . 


" ನಂಗೆ !ನಂಗೆ ಕೈ ತುತ್ತು ! " ಮಕ್ಕಳ ಜೊತೆ ಸರಸು  ಅತ್ತೆ ಕೂಡ ತೋಟದ ನಲ್ಲಿಯಲ್ಲಿ ಕೈ ತೊಳೆಯಲು ಓಡಿದಳು.

" ನಂಗೆ ತುತ್ತು ಇಲ್ವೇ ?" ಎನ್ನುತ್ತಾ ತಾತ ವರಾಂಡದಿಂದ ಬೆತ್ತದ ಕುರ್ಚಿ ತಂದು ಮರಳ ರಾಶಿಯ ಪಕ್ಕ ಹಾಕಿಕೊಂಡು ಕುಳಿತರು.

ಅದೇ  ಸಮಯಕ್ಕೆ ತೋಟಕ್ಕೆ ಅಂಚು ಕಟ್ಟಿದ್ದ ತೆಂಗಿನ ಸಾಲುಗಳ ಮೇಲೇರಿ ಬಂದೇಬಿಟ್ಟ  ಹುಣ್ಣಿಮೆಯ ಚಂದ್ರಮ .

" ಅಗೋ ಅಗೋ ! ಚಂದ ಮಾಮ ! ಒಳಗೆ ಮೊಲದ ಮರಿ !  
ಮೊಲದ ಮರಿ ಮೊಲದ ಮರಿ ಆಡ  ಬಾರೆ !
ಚಿಪಿಕಿ ಚಿಪಿಕಿ ಚಿಪಿಕಿ ಚಿಪಿಕಿ ನೆಗೆದು ಬಾರೆ !
ಗಿಡ್ಡ ಬಾಲ ದೊಡ್ಡ ಕಿವಿ ನಿನಗೆ ಚೆನ್ನ !
ಗಟ್ಟಿ ಹಾಲ ಬಿಳಿಯ ನೊರೆ ನಿನ್ನ ಬಣ್ಣ ! " ಎಂನ್ನುತ್ತ  ಪುಟ್ಟಿ ಕುಣಿದಾಡಿದಳು . 

" ಮೊಲದ ಮರಿ  ಹೇಗೆ ಚಂದಮಾಮನಲ್ಲಿ  ಸೇರ್ಕೊಳ್ತು  ಗೊತ್ತೇ ?" ತಾತ ಕೇಳಿದರು. 

" ಹೇಳು ತಾತ. ಆ ಕತೆ ಹೇಳು ತಾತ!" ಎನ್ನುತ್ತ  ಅಜ್ಜಿ ಕೊಟ್ಟ ತುತ್ತಿಗೆ ಕೈ ಒಡ್ಡಿದರು ಮಕ್ಕಳು .

                                                                                 


" ಒಂದಾನೊಂದು ಕಾಲ್ದಲ್ಲಿ  ಒಂದು ದಟ್ಟ ಕಾಡಲ್ಲಿ ಒಂದು ಮೊಲ ಇತ್ತು. ಒಂದು ಕೋತಿ,ಒಂದು ನರಿ ಮತ್ತು ಒಂದು ನೀರ್ನಾಯಿ  ಮೊಲಕ್ಕೆ ಫ್ರೆಂಡ್ಸ್  ಆಗಿದ್ವು . ಸತ್ಯ, ಧರ್ಮ, ಪ್ರೇಮ , ಅಹಿಂಸೆ ಮುಂತಾದ ಸದ್ಗುಣಗಳನ್ನ ಪಾಲಿಸ್ತ ನಾಲ್ಕು  ಪ್ರಾಣಿಗಳೂ ಹಾಯಾಗಿದ್ವು . ಒಂದು ಹುಣ್ಣಿಮೆಯ ದಿನ ಉಪವಾಸ ಮಾಡಿ , ಯಾರಿಗಾದ್ರೂ  ತಮ್ಮ ಊಟದ ಒಂದ್ ಬಾಗಾನ ಬಿಕ್ಷೆ ಕೊಟ್ಟು ನಂತರ ತಾವು ತಿನ್ಬೇಕಂತ  ತೀರ್ಮಾನಿಸಿದ್ವೂ .
ಸಂಜೆ ವೇಳೆಗೆ ಹಸಿವ್ನಿಂದ  ದಣಿದು ಬಂದ ಒಬ್ಬ ಬಿಕ್ಷುಕ. ಕೋತಿ ಮರ ಹತ್ತಿ ಮಾವಿನ ಹಣ್ಣು ಕಿತ್ಕೊಡ್ತು . ನೀರ್ನಾಯಿ  ನದಿಯಿಂದ  ಮೀನು ಹಿಡ್ಕೊಂಬಂದ್ ಕೊಡ್ತು. ನರಿ ಕಾಡಂಚಿನ ಗುಡಿಸ್ಲಿಗೆ  ನುಗ್ಗಿ, ಅಲ್ಲಿದ್ದ  ಮೊಸರಿನ ಕುಡಿಕೆ ತಂದ್ಕೊಡ್ತು.  ಮೊಲ  ಯೋಚಿಸ್ತು. ತಾನು ತಿನ್ನೋದು ಹುಲ್ಲು. ಬಿಕ್ಷುಕ ಹೇಗೆ ಹುಲ್ಲು ತಿನ್ನ ಬಲ್ಲ ? ಫ್ರೆಂಡ್ಸ್ನ ಕರೆದು ಕಡ್ಡಿ ಕಸ ಗುಡ್ಡೆ ಮಾಡಿ ಬೆಂಕಿ ಮಾಡಕ್ಕೆ ಹೇಳ್ತು ಮೊಲ. "ಪೂಜ್ಯರೇ! ನೀವು ತುಂಬಾ ಹಸಿದಿದ್ದೀರಿ. ನಿಮಗೆ ಕೊಡೋನ್ತಾ  ಊಟ ಯಾವ್ದೂ ನನ್ನ ಬಳಿ  ಇಲ್ಲ. ಈಗ ನಾನು ಈ ಬೆಂಕಿಗೆ ಹಾರ್ತೀನಿ. ಬೆಂದ ಮೇಲೆ ನೀವು ನನ್ನ ಮಾಂಸ ತಿನ್ನಿ . " ಅಂತ ಹೇಳಿ ಚಂಗಂತ ಬೆಂಕಿಗೆ ಹಾರ್ಬಿಡ್ತು ಮೊಲ .... "

" ಅಯ್ಯೋ !" ಗಾಬರಿಯಾಗಿ ಚೀರಿದಳು ಪುಟ್ಟಿ .

" ಮಕ್ಕಳಿಗೆ ಇಂತಾ ಕತೆ ಹೇಳ್ತಾರೆಯೇ ? ಛೆ ! " ಎಂದು ರೇಗಿದಳು ಅಜ್ಜಿ .

"  ಬುದ್ಧ ಜಾತಕ ಕಥೆ ಹೀಗಿದೆ. ಆಮೆಲೆ...  "

" ಹೋಗು ತಾತ! ನಂಗೆ ಅಳು ಬರತ್ತೆ. ಬೇರೆ ಕಥೆ ಹೇಳು ." ಎಂದಳು ಪುಟ್ಟಿ.

"ಈ ಕಥೆ ಪೂರ್ತಿ ಕೇಳು ಮೊದ್ಲು ! ಬೆಂಕಿ ಮೊಲಾನ ಸುಡ್ಲೆ  ಇಲ್ಲ ಗೊತ್ತಾ? ಬದಲಾಗಿ ಮೊಲಕ್ಕೆ ಅದು  ತಂಪಾಗಿತ್ತು !"

 ಪುಟ್ಟಿಯ ಕಣ್ಣುಗಳು ಕುತೂಹಲದಿಂದ  ದೊಡ್ದದಾದವು .

"ಬಿಕ್ಷುಕನ   ವೇಷದಲ್ಲಿ  ಬಂದದ್ದು  ಯಾರಂದ್ ಕೊಂಡೆ ? ಸಾಕ್ಷಾತ್ ಶಕ ದೇವರು ! ಅವರು ನಡೆಸ್ದ ಸತ್ವ ಪರೀಕ್ಷೇಲಿ ಮೊಲ ಗೆಲ್ತು. ಮೊಲದ ತ್ಯಾಗ ಮತ್ತು ದಾನ  ಗುಣಗಳನ್ನ  ಮೆಚ್ಚಿದ್ರು    ಶಕದೇವರು . ಪ್ರಪಂಚಕ್ಕೆಲ್ಲ ಅದನ್ನು ಸಾರೋ ಹಾಗೆ   ಹುಣ್ಣಿಮೆ ಚಂದ್ರನಲ್ಲಿ  ಮೊಲದ ಬಿಂಬವನ್ನ ಅಚ್ಚಿಳಿಸಿದರು . ಆ ಮೊಲವೇ  ನಂತರ ಗೌತಮ ಬುದ್ಧನಾಗಿ ಮತ್ತೆ ಹುಟ್ತಂತೆ  . "

ಅಮ್ಮ ಪಾಪುವಿಗೆ ಕುಲಾವಿ ಹಾಕಿ, ಮೈತುಂಬ  ಶಾಲು ಹೊದ್ದಿಸಿ  ಹೊರಗೆ ಎತ್ತಿಕೊಂಡು ಬಂದಳು. ಪಾಪು ಎಲ್ಲರನ್ನು ನೋಡಿ ಕೇಕೆ ಹಾಕಿತು.

" ಪಾಪು ! ನಿನ್ಗೂ  ಕೈ ತುತ್ತು ಬೇಕಾ ಕಂದಾ ?" ಎಂದು ಮುದ್ದಿಸಿದಳು ಅಜ್ಜಿ .

ಚಂದಕ್ಕಿ ಮಾಮಾ ಚಕ್ಕುಲಿ ಮಾಮಾ !
ಮುತ್ತಿನ ಕುಡಿಕೆ ಕೊಡು ಮಾಮಾ !
ಕಿತ್ತಳೆ ಕೊಡುವೆ ಬಾ ಕೆಳಗೆ ,
ಮುತ್ತನು ಕೊಡುವೆ ಬಾ ಬಳಿಗೆ !
ಪುಟ್ಟಿ ಪಾಪು ಆಡಲು ಬರುವರು,
ಪುಟ್ಟಣ್ಣ ಇರುವನು  ನಿಂಜೊತೆಗೆ !
ಚಂದಕ್ಕಿ ಮಾಮಾ ಚಕ್ಕುಲಿ ಮಾಮಾ !

ಪಾಪುವಿಗೆ ಚಂದಮಾಮನನ್ನು ತೋರಿಸಿ ಅಜ್ಜಿ ಹಾಡಿದಳು.  ಪಾಪು ಇನ್ನಷ್ಟು ನಕ್ಕಿತು.

ಕೈ ತುತ್ತು ತಿಂದು ಆಯಾಸದಿಂದ ಅತ್ತೆಯ ತೊಡೆಯ ಮೇಲೆ ಮಲಗಿಬಿಟ್ಟಳು ಪುಟ್ಟಿ .
ಪುಟ್ಟಿ ಪಾಪುವಿನಂತೆ ಇದ್ದಾಗ ತಾನು ಅವಳಿಗಾಗಿ ಹೇಳುತ್ತಿದ್ದ ಹಾಡನ್ನು ಮೆಲು ದನಿಯಲ್ಲಿ ಹಾಡತೊಡಗಿದಳು ಅತ್ತೆ .ಪುಟ್ಟಿ ಮೆಲ್ಲ ಮೆಲ್ಲನೆ ಕನಸಿನ ಲೋಕಕ್ಕೆ ಜಾರಿದಳು . ಚಂದ ಮಾಮ ತೋರಿದ  ತಾರೆಗಳ ತೋಟದಲ್ಲಿ  ಆಡ ತೊಡಗಿದಳು  !




ಮುಂಬರುವ ಕಾಲದಲ್ಲಿ ಚಂದದ ಚಂದ್ರಮನಲ್ಲಿ ಕಾಲಿಡಲು ನೀಲ್  ಆರ್ಮ್ಸ್ಟ್ರಾಂಗ್ ಎಂಬ ಒಬ್ಬ ಆಕಾಶಗಾಮಿ ತಯಾರಾಗುತ್ತಿದ್ದ.  ಚಂದ್ರನ ರಹಸ್ಯಗಳನ್ನೆಲ್ಲ ಬಯಲು  ಮಾಡಲಿದ್ದ . ಆದರೂ ಚಂದ ಮಾಮನ ಚೆಲುವಿಗೆ ಮನ ಸೋತ ಕವಿಗಳು ಹೊಸ ಹೊಸ ಹಾಡುಗಳನ್ನು 
ಹಾಡುತ್ತಲೇ ಇರುವರು! ಪುಟಾಣಿಗಳು ಚಂದಮಾಮನ  ಕಥೆಗಳನ್ನು   ಕೇಳುತ್ತ, ಚಂದಕ್ಕಿ ಮಾಮನ  ಹಾಡುಗಳನ್ನ ಹಾಡುತ್ತ ಬೆಳದಿಂಗಳೂಟ ಮಾಡುತ್ತಲೇ ಇರುವರು!