Showing posts with label Houdenu?. Show all posts
Showing posts with label Houdenu?. Show all posts

Monday, October 28, 2019

ಅದ್ದೂರಿ ಅಂಚೆ !

ಅದ್ದೂರಿ ಅಂಚೆ !
 ಅಂಚೆ ಮತ್ತು ತಂತಿ ಸೇವೆ   (Post and Telegraph Service) ಅಸ್ತಿತ್ವಕ್ಕೆ ಬರುವ ಮೊದಲು ಒಂದೆಡೆಯಿಂದ ಮತ್ತೊಂದೆಡೆಗೆ ಸಂದೇಶವಾಹಕರು ಸುದ್ದಿಯನ್ನು ಹೊತ್ತು ಹೋಗುತ್ತಿದ್ದರು.  ಅವರನ್ನು ಓಲೆಗಾರರು , ದೂತರು , ಹರಕಾರರು, ರನ್ನರ್ ಎಂದು ಕರೆಯುತ್ತಿದ್ದರು. ಇವರುಗಳು ಟಪ್ಪಾ ಓಟದ ( Relay race) ಮೂಲಕ ವೇಗವಾಗಿ ಸುದ್ದಿಯನ್ನು ತಲುಪಿಸಬಲ್ಲವರಾಗಿದ್ದರು .
  ಹಿಂದಿನ ಕಾಲದಲ್ಲಿ ಪಕ್ಷಿ ಪ್ರಾಣಿಗಳೂ ಸಹ ಸಂದೇಶವಾಹಕರಾಗಿದ್ದವು .
ಬ್ರಿಟಿಷರ ಆಳ್ವಿಕೆಯಲ್ಲಿದ್ದ ಆಸ್ಟ್ರೇಲಿಯಾದಲ್ಲಿ , ಆಫ್ಘಾನಿಸ್ತಾನದ ಒಂಟೆ ಸವಾರರ ನೆರವಿನಿಂದ  ಒಂಟೆ ಅಂಚೆ ಜಾರಿಯಲ್ಲಿತ್ತು .


                                                            
ಅಲಾಸ್ಕಾದಲ್ಲಿ ಇಂದಿಗೂ ಚಾಲನೆಯಲ್ಲಿರುವ ಡಾಗ್ಸ್ಲೆಡ್ ಮೇಲ್ ಎಂಬ ಅಂಚೆಗಾಗಿ ಶ್ವಾನಗಳನ್ನು ಪಳಗಿಸಲಾಗಿದೆ  . 


                                                           
ಉತ್ತರ ಅಮೇರಿಕಾದಲ್ಲಿ ಪೋನಿ ಎಕ್ಸ್ಪ್ರೆಸ್ ಅಂಚೆಗಾಗಿ ಕುದುರೆಗಳನ್ನು ತರಬೇತು ಮಾಡಿದ್ದರು. 

ಲೋಕದಾದ್ಯಂತ ಟಪ್ಪಾ ಕುದುರೆಗಳ ತಂಡಗಳು ಅಂಚೆ ಸೇವೆಗೆಂದೇ ತಯಾರಾಗಿದ್ದವು . 

                                                                     
ಹತ್ತೊಂಬತ್ತನೇ ಶತಮಾನದ ಕೊನೆಯವರೆಗೂ ಅಲಾಸ್ಕಾದಲ್ಲಿ ಹಿಮ ಸಾರಂಗಗಳನ್ನು / (ರೇನ್ಡೀರ್) ಅಂಚೆಗಾಗಿ ಉಪಯೋಗಿಸಲಾಯಿತು . 


                                                             
ಪರ್ಷಿಯಾ ದೇಶದಲ್ಲಿ ಪಾರಿವಾಳಗಳ  ಅಂಚೆ ರೂಡಿಯಲ್ಲಿತ್ತು  .


                                                                          
೧೯೩೭ ಲ್ಲಿ ಕೂಚ್ ಬಿಹಾರ್ ಮಹಾರಾಜರು ತನ್ನ ಪ್ರತಿಷ್ಠೆಗೆ ತಕ್ಕಂತ  ಒಂದು ಅದ್ದೂರಿಯ ಅಂಚೆಯ ಮೂಲಕ ಬರೋಡಾ ಮಹಾರಾಜರಿಗೆ ಒಂದು ಪತ್ರವನ್ನು ಕಳುಹಿಸಿದರು .

                                                                   

ಆ ಅದ್ಧೂರಿಯ ಸಂದೇಶವಾಹಕನ ಹೆಸರು ಜೆಯ್ ಸಿಂಗ್ !  ಕಲ್ಕತ್ತೆಯಿಂದ ಮುಂಬಯ್ ವರೆಗೂ ಹಡಗಿನಲ್ಲಿ ಪಯಣಿಸಿದ ಪೋಸ್ಟ್ ಮ್ಯಾನ್ ಜೆಯ್ ಸಿಂಗ್ !




ಅಲ್ಲಿಂದ ತನ್ನ ಗಜ ಗಂಭೀರ ನಡಿಗೆಯಲ್ಲಿ ಬರೋಡ ತಲುಪಿ ಮಹಾರಾಜರಿಗೆ ಪತ್ರ ತಲುಪಿಸಿದ !  



ಈ ಅದ್ಧೂರಿಯ ಆನೆ ಅಂಚೆ ( ಹಾತಿ ಡಾಕ್ )ಕೂಚ್ ಬಿಹಾರ್ ನಿಂದ ಬರೋಡಾ ತಲುಪಲು ತೆಗೆದುಕೊಂಡ ಅವಕಾಶ ಎಷ್ಟು ಎಂಬುದು ಮಾತ್ರ ಮರ್ಮವಾಗಿಯೇ ಉಳಿದಿದೆ !

Tuesday, April 17, 2018

ಗುಡುಗು ಹಕ್ಕಿಯ ಗುಡುಗು ಮೊಟ್ಟೆ! - Thunderbird and Thundereggs!

ಗುಡುಗು ಹಕ್ಕಿಯ ಗುಡುಗು ಮೊಟ್ಟೆ!



Friday, March 23, 2018

ನೀರು : ಜೀವಿಗಳ ಅಮೃತ! - Water : the elixir of life.

ನೀರು! ಜೀವಿಗಳ ಅಮೃತ!
 ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ.........  
'ಏನಿದು? ಅಜ್ಜಿ ತಾತ ಹೇಳುವ ಮಂತ್ರಗಳಲ್ಲಿ ಕೇಳಿಬರುವ ಹೆಸರುಗಳಂತೆ ತೋರುತ್ತವಲ್ಲ?' ಎಂದು ಯೋಚಿಸುವಿರಾ ಮಕ್ಕಳೇ? ನೀವು ತುಂಬಾ ಜಾಣರು! ಸರಿಯಾಗಿಯೇ ಊಹಿಸಿದ್ದೀರಿ!
ಇವೆಲ್ಲ ನಮ್ಮ ಭಾರತ ಪುಣ್ಯ ಭೂಮಿಯಲ್ಲಿ ಹರಿಯುವ ಮಹಾ ನದಿಗಳ ನಾಮಾಂಕಿತಗಳೇ!
ಪ್ರಕೃತಿ ಒದಗಿಸಿಕೊಟ್ಟಿರುವ ಸಂಪನ್ಮೂಲಗಳಲ್ಲಿ ಒಂದಾದ ನೀರನ್ನು ಅತ್ಯಮೂಲ್ಯವಾದ ಸಂಪತ್ತು ಎನ್ನಬಹುದು. ನೀರು ನಮ್ಮೆಲ್ಲರ ಬದುಕಿಗೆ ಅತ್ಯವಶ್ಯಕವಾದ ಒಂದು ವಸ್ತು. ನೀರಿಲ್ಲದ ಬದುಕನ್ನು ಕಲ್ಪನೆ ಮಾಡುವುದಕ್ಕೂ ಆಗುವುದಿಲ್ಲ. ಪಕ್ಷಿ, ಪ್ರಾಣಿ, ಮರ, ಗಿಡಗಳೂ ಸಹ ನೀರಿಲ್ಲದೆ ಬದುಕಲಾರವು. ಈ ಭೂಮಿಯಲ್ಲಿಯ  ಅಸಂಖ್ಯಾತ ಜೀವ ಜಂತುಗಳಿಗೆ ನೀರು ಜೀವ ಕೊಡುವ ಅಮೃತ. ನದಿಗಳು, ಬಾವಿಗಳು, ಕೆರೆಗಳು ಮತ್ತು ಕಟ್ಟೆಗಳು ತುಂಬಿತುಳುಕುತ್ತಿದ್ದರೆ  ಮಾತ್ರ ಪ್ರಾಣಿ, ಪಕ್ಷಿ ಮತ್ತು ಮನುಷ್ಯರ ಬಾಳು  ಹಸನಾಗಿರಲು ಸಾಧ್ಯ.
ಪ್ರಕೃತಿಯನ್ನೂ, ಅದು ಒದಗಿಸಿಕೊಟ್ಟಿರುವ ಸಂಪನ್ಮೂಲಗಳನ್ನೂ ದೈವವೆಂದೇ  ಗೌರವಿಸಿ ಆರಾಧಿಸುವುದು ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಬಂದಿರುವ ಪದ್ಧತಿ. ದೇವರಿದ್ದ ಕಡೆ ಆರಾಧನೆ! ಆರಾಧಿಸುವ ಕಡೆ ಸ್ವಚ್ಛತೆ! ಸ್ವಚ್ಛತೆ ಇದ್ದರೆ ಆರೋಗ್ಯ! ನದಿಗಳನ್ನೂ ಜಲಮೂಲಗಳನ್ನೂ ಆರಾಧಿಸುವುದರ ಮೂಲಕ ನೀರನ್ನು ಕಣ್ಣಿನಂತೆ ಕಾಪಾಡುವುದು, ಸ್ವಚ್ಛವಾಗಿಡುವುದು ಮುಂತಾದ ಚಟುವಟಿಕೆಗಳು ತನ್ನಿಂದ ತಾನಾಗಿಯೇ ನಡೆದುಹೋಗುತ್ತವೆ. 

ಗಂಗಾ ಆರತಿ
'ನೀರು ಚೆಲ್ಲಿ ಹಾಳುಮಾಡಿದರೆ ದರಿದ್ರ ಬರುತ್ತೆ! ಹಸಿರು ಮರ ಕಡಿದರೆ ಪಾಪ ಸುತ್ಕೊಳ್ಳತ್ತೆ!     ಭೂಮಿದೇವಿ ಅದುರೋ ಹಾಗೆ ವರ್ತಿಸಿದರೆ ಭೂಕಂಪ ಬರತ್ತೆ!'  ಚಿಕ್ಕಂದಿನಲ್ಲಿ ನನ್ನ ಅಜ್ಜಿ       ಹೀಗೆಲ್ಲ ಹೇಳಿ ನನ್ನನ್ನು ಎಚ್ಚರಿಸುತ್ತಿದ್ದಳು. ಇವೆಲ್ಲ ಪರಿಸರ ಸಂರಕ್ಷಣೆಯ ಬಗ್ಗೆ ಅಜ್ಜಿ ನನಗೆ 
  ಹೇಳಿಕೊಟ್ಟ ಮೊದಲನೇ ಪಾಠವೆಂಬುದು ಇಂದು ಅರ್ಥವಾಗುತ್ತಿದೆ. 


ಅಖಂಡ ಕಾವೇರಿ 

ಮಳೆಯನ್ನುಂಟುಮಾಡಲು ಅವಶ್ಯಕವಾದ ಅಂಶಗಳಾದ ಕಾಡುಗಳ ಮತ್ತು ಬೆಟ್ಟ ಗುಡ್ಡಗಳ ವಿನಾಶದಿಂದ ಮಳೆಯ ಅಭಾವ ಉಂಟಾಗಿದೆ. ಜೀವನದಿಗಳಿಗೆ ನೀರುಣಿಸುವ ಮಳೆಯ ಕೊರತೆಯಿಂದ  ಸ್ವಚ್ಛ ನೀರಿಗೆ ಬರ ಬಂದಿದೆ. ಒಂದಾನೊಂದು ಕಾಲದಲ್ಲಿ ಜಲರಾಶಿಯಿಂದ ತುಂಬಿ ಹರಿಯುತ್ತಿದ್ದ ನದಿಗಳು ಇಂದು ಒಣಗಿಹೋಗಿ ಮರಳು ನದಿಗಳಾಗಿಬಿಟ್ಟಿವೆ. 

ಇಂದಿನ ಪರಿಸರ ಪ್ರಜ್ಞೆ ಇಲ್ಲದ ಪ್ರಗತಿಪರವಾದ ಯೋಜನೆಗಳಿಂದ ನಮ್ಮ ಸಂಪನ್ಮೂಲಗಳಿಗೆ ಅಪಾಯ ಉಂಟಾಗಿದೆ. ಅನೇಕ ಜೀವನದಿಗಳೆಲ್ಲ ಇಂದು ಜೀವ ಬತ್ತಿಹೋಗಿ ಕಸದ ಗುಂಡಿಗಳಾಗಿ, ಖಾರ್ಕಾನೆಗಳಿಂದ ಹೊರಹೊಮ್ಮುವ ಕೊಳಚೆ ನೀರು ಹರಿವ ಚರಂಡಿಗಳಾಗಿ, ಮರಳುಗಣಿಗಳಾಗಿ ಪರಿವರ್ತಿಸಿವೆ. ಉಳಿದಿರುವ ಅಲ್ಪ ಸ್ವಲ್ಪ ಜಲಮೂಲಗಳೂ ಕಲುಷಿತಗೊಂಡು ರೋಗ ರುಜಿನಗಳು ಹೆಚ್ಚಾಗಿವೆ. 
ಮಕ್ಕಳೇ! ನೀವು ನಾಳೆಯ ಪ್ರಜೆಗಳು! ನಿಮ್ಮ ಭವಿಷ್ಯಕ್ಕಾಗಿ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕಾದದ್ದು ನಿಮ್ಮ ಹೊಣೆ. ಮುಖ್ಯವಾಗಿ ಅತ್ಯಮೂಲ್ಯವಾದ ಸಂಪನ್ಮೂಲವಾದ  ನೀರನ್ನು ವ್ಯಯ ಮಾಡದಿರಿ. ಜಲಮೂಲಗಳನ್ನು ಶುಚಿಯಾಗಿಡಲು ಪ್ರಯತ್ನಿಸಿ. ಗಿಡ ಮರಗಳನ್ನು ಸಂರಕ್ಷಿಸಿ. ಬತ್ತಿಹೋದ ಬಾವಿಗಳನ್ನೂ ಕೆರೆಗಳನ್ನೂ ಪುನರುಜ್ಜೀವನಗೊಳಿಸಿ. ನಿಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ. ನಿಮ್ಮ ಹಿರಿಯರೊಂದಿಗೆ ಚರ್ಚಿಸಿ ಅವರನ್ನೂ ಈ ಮಹತ್ಕಾರ್ಯದಲ್ಲಿ ಬಾಗಿಯಾಗಲು ಒತ್ತಾಯಿಸಿ. 
ಪ್ರಕೃತಿಯ ಕೊಡುಗೆಯಾದ ಸಂಪನ್ಮೂಲಗಳನ್ನು ಆರಾಧಿಸಿ. ಅವುಗಳನ್ನು ರಕ್ಷಿಸುವುದರ ಮೂಲಕ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.