ಕಿಲಾಡಿ ಹುಡುಗ ಹುಣಸೇಹುಳಿ
"ನಿಮ್ ಫುಟ್ ಬಾಲ್ ಪ್ರಾಕ್ಟಿಸ್ ಎಲ್ಲ ಎಷ್ಟರಮಟ್ಟಿಗಿದೆ ಪುಟ್ಟಣ್ಣ ?"
ಅಭ್ಯಾಸ ಮುಗಿಸಿ ಆಗತಾನೆ ಮೈದಾನದಿಂದ ಹಿಂದಿರುಗಿದ್ದ ಪುಟ್ಟಣ್ಣ ಉಸ್ಸೆಂದು ತಾತನ ಬಳಿ ಕುಳಿತ .
"ಸಕ್ಕತ್ತಾಗಿತ್ತು ತಾತ ! ಆದ್ರೆ ಪಾಪ, ಅಕ್ಕಿಮೂಟೆ ಮಾತ್ರ ಇನ್ನೂ ಸ್ವಲ್ಪ ವೇಗ್ವಾಗಿ ಓಡಿದ್ರೆ ಚೆನ್ನಾಗಿರ್ತಿತ್ತು . "
"ಅಕ್ಕಿಮೂಟೆ ಅಂತೆಲ್ಲ ಹೆಸರಿಡ್ತಾರೆಯೇ ?" ಎಂದಳು ಪುಟ್ಟಿ .
"ಅವ್ನು ದಪ್ಪಾಂತ ಎಲ್ರೂ ಹಾಗೆ ಕರೀತಾರೆ ! "
"ಹುಣಸೇಹುಳಿ ಅಂತ್ಲೂ ಕೂಡ ಹೆಸರಿಡ್ತಾರೆ ! ಬೇಕಾದ್ರೆ ನಿಮ್ಮಜ್ಜೀನ ಕೇಳು !" ಎಂದರು ತಾತ .
"ಹುಣಸೇಹುಳಿ ? ಅಂದ್ರೆ ಕಥೆ ! ಹೇ ! ಹೇಳಜ್ಜಿ !" ಪುಟ್ಟಿ ಪುಟ್ಟಣ್ಣ ಇಬ್ಬರೂ ಒಟ್ಟಿಗೆ ಕೂಗಿದರು .
"ಒಳ್ಳೆ ಕಲಹ ಮಾಡ್ತೀರಲ್ಲ ಮಾರಾಯ ನೀವು !" ಎಂದು ಹುಸಿ ಮುನಿಸಿನಿಂದ ತಾತನನ್ನು ರೇಗಿದಳು ಅಜ್ಜಿ .
"ನಾಳೆ ಹೇಗೂ ಭಾನುವಾರ ! ಇವತು ಪಾಠ ಇಲ್ಲ ಏನಿಲ್ಲ . ಕಥೆ ಹೇಳಜ್ಜಿ ."
"ಮೊದ್ಲು ಎಲ್ರೂ ಕೈಕಾಲ್ ತೊಳ್ಕೊಂಡು ತಿಂಡಿ ತಿನ್ನಿ . ಆಮೇಲೆ ಕಥೆ." ಬಿಸಿ ಬಿಸಿ ತಿಂಡಿ ತಟ್ಟೆಗೆ ಹಾಕುತ್ತ ಹೇಳಿದಳು ಅಜ್ಜಿ .
ತಿಂಡಿಯ ಜೊತೆಗೆ ಕಥೆಯೂ ಶುರುವಾಯಿತು .
ಒಂದಾನೊಂದು ಕಾಲದಲ್ಲಿ ಬಲು ಚತುರನಾದ ಹುಡುಗನೊಬ್ಬನಿದ್ದನು . ಅವನು ಕಡು ಬಡವನಾಗಿಯೂ ಇದ್ದನು .
ಆತನ ಬಡ ತಾಯಿ ಹೊಟ್ಟೆ ಪಾಡಿಗಾಗಿ , ಕಾಡಿಗೆ ಹೋಗಿ ಕಟ್ಟಿಗೆ ಮತ್ತು ಹುಣಸೆ ಹಣ್ಣುಗಳನ್ನು ಸಂಗ್ರಹಿಸಿ ತಂದು , ಅವನ್ನು ಹಳ್ಳಿಯವರಿಗೆ ಮಾರುತ್ತಿದ್ದಳು .
ಹಳ್ಳಿಯ ಜನರೆಲ್ಲ ಹುಡುಗನನ್ನು 'ಹುಣಸೇಹುಳಿ , ಹುಣಸಸೇಹುಳಿ ' ಎಂದೇ ಕರೆಯುತ್ತಿದ್ದರು .
ಒಮ್ಮೆ ಹುಣಸೇಹುಳಿ ಅವನ ತಾಯನ್ನು ಕುರಿತು ಹೇಳಿದ : "ಅಮ್ಮ ! ನಾನು ಸಾಕಷ್ಟು ದೊಡ್ಡವನಾಗಿದ್ದೇನೆ . ಹೊರ ಪ್ರಪಂಚವನ್ನ ನೋಡಿಕೊಂಡು ಹಾಗೆಯೇ ನನ್ನ ಅದೃಷ್ಟವನ್ನೂ ರೂಪಿಸಿಕೊಂಡು ಬರಲು ಬಯಸುತ್ತೇನೆ ."
"ಹೌದು ಮಗನೆ ! ನೀನು ಸಾಕಷ್ಟು ದೊಡ್ಡವನಾಗಿದ್ದೀಯ . ನೀನು ಯಾವ ಕಸುಬನ್ನು ಮಾಡ ಬಲ್ಲೆ ? ನಿನ್ನನ್ನು ಶಾಲೆಗೆ ಕಳಿಸಲೂ ನನ್ನಿಂದ ಸಾಧ್ಯವಾಗಲಿಲ್ಲವೇ !"
"ಶಂಕಿಸ ಬೇಡ ಅಮ್ಮ . ನಾನು ಕ್ಷೇಮವಾಗಿಯೇ ಇರುತ್ತೇನೆ . ನನಗೆ ಎರಡೇ ಎರಡು ಕಾಸನ್ನು ಮಾತ್ರ ಕೊಡು . ನಾನು ಹೊರಡುತ್ತೇನೆ ."
"ನನ್ನ ಬಳಿ ಕಾಸಿಲ್ಲ ಮಗು . ಮೌಲ್ಯವುಳ್ಳ ಇನ್ಯಾವ ವಸ್ತುವೂ ಕೂಡ ಇಲ್ಲ.ಇಗೋ ! ಈ ಚಟಾಕು ಮಾತ್ರ ಉಳಿದಿದೆ . " ಎನ್ನುತ್ತ ಚಟಾಕನ್ನು ತೋರಿಸಿದಳು .
"ಸರಿ ! ಆ ಚಟಾಕನ್ನೇ ಕೊಡು . ಉಪಯೋಗಕ್ಕೆ ಬಂದೀತು ." ಎಂದ ಹುಣಸೇಹುಳಿ ಚಟಾಕನ್ನು ತನ್ನ ಒಂದು ಜೊತೆ ಉಡುಗೆಯ ಜೊತೆ ಸುರುಳಿ ಸುತ್ತಿಕೊಂಡು ಹೊರಟೇ ಬಿಟ್ಟನು .
ಹುಣಸೇಹುಳಿ ಸಮೀಪದ ಊರನ್ನು ಕುರಿತು ನಡೆದುಕೊಂಡು ಹೋಗಿ , ಊರ ಎಲ್ಲೆಯಲ್ಲಿ ನಡೆಯಿತ್ತಿದ್ದ ಸಂತೆಯನ್ನು ಸೇರಿದನು . ಅನೇಕ ವ್ಯಾಪಾರಿಗಳು ತಮ್ಮ ತಮ್ಮ ಅಂಗಡಿಗಳನ್ನು ಹರಡಿದ್ದರು. ಸುತ್ತಮುತ್ತಲಿನ ಊರ ಜನರೆಲ್ಲ ತಮಗೆ ಬೇಕಾದ ಪದಾರ್ಥಗಳನ್ನು ಕೊಂಡುಕೊಳ್ಳಲು ಗಿಜಿ ಗಿಜಿ ಕೂಡಿದ್ದರು .
ತಾಳೆ ಮರದ ತಟ್ಟಿಯ ನೆರಳಿನಲ್ಲಿ ಮಜ್ಜಿಗೆ ಮಾರುತ್ತಿದ್ದ ಒಬ್ಬಳು ಮುದುಕಿಯನ್ನು ಕಂಡನು ಹುಣಸೇಹುಳಿ . ಬಾಯಾರಿಕೆಯಿಂದ ಬಳಲಿದ್ದವ ಅವಳ ಬಳಿ ಹೋಗಿ ಬೇಡಿದನು. "ಆದರಣೀಯ ಅಜ್ಜಿಯೇ , ನನಗೊಂದು ಕುಡಿಕೆ ಮಜ್ಜಿಗೆ ಕೊಡುವೆಯಾ? ತುಂಬಾ ಬಾಯಾರಿಕೆಯಾಗಿದೆ , ಆದರೆ ನನ್ನ ಬಳಿ ಕಾಸಿಲ್ಲ."
ಮುದುಕಿ ಅವನನ್ನೊಮ್ಮೆ ಮೇಲಿಂದ ಕೆಳಗೆ ದಿಟ್ಟಿಸಿ ನೋಡಿದಳು . ನಂತರ ಹೇಳಿದಳು " ಸರಿ ! ಇಲ್ಲೇ ಕಾದಿರು . ಒಳಗೆ ಮಡಿಕೆಯಲ್ಲಿ ತಣ್ಣಗಿರುವ ಹೊಸ ಮಜ್ಜಿಗೆಯನ್ನು ತಂದು ಕೊಡುವೆ . "
ಒಳಗೆ ಹೋದ ಮುದುಕಿ ಒಂದು ಸೌಟು ಹುಳಿ ಮೊಸರನ್ನು ಒಂದು ಕುಡಿಕೆಗೆ ಹಾಕಿದಳು . ಕೊಳಕು ಪಾತ್ರೆಯಲ್ಲಿದ್ದ ನೀರನ್ನು ಧಾರಾಳವಾಗಿ ಅದರಲ್ಲಿ ಮಿಶ್ರ ಮಾಡಿ ಕುಡಿಕೆಯನ್ನು ತುಂಬಿಸಿದಳು . ಜಿಪುಣಿಯಾದ ಮುದುಕಿಕೆ ತನ್ನ ಶ್ರೇಷ್ಠವಾದ ಮಜ್ಜಿಗೆಯನ್ನು ಬಿಟ್ಟಿ ಕೊಡಲು ಇಷ್ಟವಿರಲಿಲ್ಲ .
ಇದನ್ನೆಲ್ಲಾ ತಟ್ಟಿಯ ಕಿಂಡಿಯ ಮೂಲಕ ನೋಡುತ್ತಿದ್ದನಾದರೂ ಹುಣಸೇಹುಳಿ ಏನೂ ಮಾತನಾಡಲಿಲ್ಲ .
ಮುದುಕಿ ಮಜ್ಜಿಗೆಯ ಕುಡಿಕೆಯನ್ನು ತಂದು ಕೊಟ್ಟಾಗ " ಧನ್ಯವಾದಗಳು ಅಜ್ಜಿ . ಒಳ್ಳೆಯ ಮನಸ್ಸು ನಿನ್ನದು ."ಎಂದನು ! ನಂತರ ತನ್ನ ಮೂಟೆ ಬಿಚ್ಚಿ ಚಟಾಕನ್ನು ಹೊರ ತೆಗೆದು ಅದನ್ನು ತನ್ನ ಕಿವಿಯಲ್ಲಿಟ್ಟುಕೊಂಡನು .
" ಅದೇನು ಮಾಡುತ್ತಿರುವೆ ?" ಎಂದು ಆಶ್ಚರ್ಯದಿಂದ ಪ್ರಶ್ನಿಸಿದಳು ಮುದುಕಿ .
" ಶ್!!! " ಮುದುಕಿಯನ್ನು ಸುಮ್ಮನಿರಲು ಹೇಳಿ ಚಟಾಕನ್ನು ಕುರಿತು ಮಾತನಾಡಿದನು . " ಛೆ ಛೆ ! ನೀನು ತಪ್ಪು ತಿಳಿದಿರುವೆ."
ನಂತರ ಚಟಾಕನ್ನು ಬದಿಗಿಟ್ಟು ಆನಂದದಿಂದ ಬರಿ ನೀರಾಗಿದ್ದ ಹುಳಿ ಮಜ್ಜಿಗೆಯನ್ನು ಸವಿದನು .
ಕೋಪಗೊಂಡವನಂತೆ ಮುಖ ಸಿಂಡರಿಸಿಕೊಂಡು ಚಟಾಕನ್ನು ಎತ್ತಿ ಕುಲುಕಿದನು . "ಸುಳ್ಳು ಹೇಳುತ್ತಿರುವೆಯಾ ? ಇದು ಅಮೃತದಂತಿದೆ !" ಎಂದನು .
ಮುದುಕಿಗೆ ಬಹಳ ಕುತೂಹಲವುಂಟಾಯಿತು. " ಇದೇನು? ಚಟಾಕಿನೊಂದಿಗೆ ಮಾತನಾಡುತ್ತಿರುವೆ?" ಎಂದಳು. ''ಇದು ಸಾಮಾನ್ಯವಾದ ಚಟಾಕಲ್ಲ ಅಜ್ಜಿ ! ಇದೊಂದು ಸತ್ಯ ಸೂಚಿ! ನನ್ನ ಮಂತ್ರವಾದಿಮಾವ ಇದನ್ನು ನನಗೆ ಕೊಟ್ಟನು . ಇದು ಎಲ್ಲವನ್ನೂ ನೋಡ ಬಲ್ಲದ್ದು. ಸತ್ಯವನ್ನೇ ನುಡಿಯ ಬಲ್ಲದ್ದು. ಆದರೆ ಏಕೋ ಏನೋ ನೆನ್ನೆಯಿಂದ ಹೊಲಸು ಹೊಲಸಾಗಿ ಮಾತನಾಡುತ್ತಿದೆ. "
" ಸತ್ಯ ಸೂಚಿಯೇ? ಇದೆಂತ ಮಾಯ!ಅದ್ಸರಿ! ಈಗ ಅದು ಏನು ಹೇಳಿತು ? 'ಸುಳ್ಳು ಹೇಳಿದೇ' ಎಂದು ಅದನ್ನ ಏಕೆ ಬೈಯುತ್ತಿರುವೆ?"
" ಅದಕ್ಕೆ ವಯಸ್ಸಾಗಿ ಅರಳು ಮರಳಾಗಿ ಬಿಟ್ಟಿದೆ ಅನ್ನಿಸುತ್ತದೆ . ಅದಕ್ಕೆ, ಏನೋ ಅರ್ಥವಿಲ್ಲದ ಮಾತನ್ನಾಡುತ್ತಿದೆ . ಇದೀಗ ನೀನು ಕೊಟ್ಟ ಅಮೃತದಂತ ಮಜ್ಜಿಗೆಯನ್ನು ನಾನು ಕುಡಿಯುತ್ತಿದ್ದರೆ , ಅದರಲ್ಲಿ ಹಳೆಯ ಹೊಲಸು ಮೊಸರು ಮತ್ತು ಕೊಳಕು ನೀರು ಇರುವುದಾಗಿ ಹೇಳುತ್ತಿದೆ ! ನಿನ್ನನ್ನು ಜಿಪುಣಿ ಎನ್ನುತ್ತಿದೆ . ನಿನ್ನ ಬಗ್ಗೆ ಹೀಗೆ ಹೇಳಲು ಅದಕ್ಕೆ ಎಷ್ಟು ಧೈರ್ಯ !"
ಮುದುಕಿ ಅವಾಕ್ಕಾದಳು. ಚಟಾಕು ಈ ಹುಡುಗನಿಗೆ ನಿಜವನ್ನೇ ನುಡಿದಿದೆ ! 'ಅದೀಗ ನನ್ನದ್ದಾಗಲೇ ಬೇಕು !' ಎಂದುಕೊಂಡಳು ಮುದುಕಿ .
" ಮಗು , ನಿನಗೆ ಚಟಾಕಿನ ಮೇಲೆ ಭಾರಿ ಕೊಪವಿರುವ ಹಾಗಿದೆ . ಅದನ್ನು ನನಗೆ ಕೊಟ್ಟುಬಿಡುವೆಯಾ ?"
"ನನಗಿರುವುದು ಇದೊಂದೇ ಆಸ್ತಿ . ಆದರೆ ಇದನ್ನು ಸಂತೋಷದಿಂದ ನಿನಗೆ ಕೊಡುವೆ . ಪ್ರತಿಯಾಗಿ ನನಗೇನು ಕೊಡುವೆ ?''
ಮುದುಕಿ ತನ್ನ ಸೊಂಟದಲ್ಲಿ ಸಿಕ್ಕಿಸಿದ್ದ ಕಾಸಿನ ಚೀಲ ತೆಗೆದಳು .
" ಇಂದಿನ ನನ್ನ ಸಂತೆಯ ಸಂಪಾದನೆ ಎಲ್ಲ ಇದರಲ್ಲಿದೆ. ಇದನ್ನು ತೆಗೆದುಕೊ . ಸತ್ಯ ಸೂಚಿಯನ್ನು ನನಗೆ ಕೊಡು . "
ಹುಣಸೇಹುಳಿ ಕಾಸಿನ ಚೀಲವನ್ನು ತೆಗೆದುಕೊಂಡು ಚಟಾಕನ್ನು ಮುದುಕಿಗೆ ಕೊಟ್ಟನು . ನಂತರ ತನ್ನ ಬಟ್ಟೆ ಮೂಟೆಯನ್ನು ತೆಗೆದುಕೊಂಡು ಹೊರಟು ಹೋದನು .
ನಂತರ ಮುದುಕಿ ಚಟಾಕನ್ನು ಒಳಗೆ ತೆಗೆದು ಕೊಂಡು ಹೋಗಿ ಅದರೊಳಗೆ ಪಿಸುಗುಟ್ಟಿದಳು .
" ಸತ್ಯ ಸೂಚಿಯೆ , ಬೇಗನೆ ಹೇಳು ! ಪಕ್ಕದ ಅಂಗಡಿಯವನ ಬಳಿ ಎಷ್ಟು ಹಣವಿದೆ? ಅದನ್ನು ಅವನು ಎಲ್ಲಿ ಇಟ್ಟಿರುವನು ?" ಪಕ್ಕದ ಅಂಗಡಿಯ ಉಪ್ಪಿನ ವ್ಯಾಪಾರಿಯ ಸಂಪಾದನೆಯನ್ನೆಲ್ಲ ದೋಚಿಕೊಳ್ಳುವ ದುರಾಸೆ ಮುದುಕಿಗೆ !
ಚಟಾಕು ಮೌನವಾಗಿತ್ತು .
ಮುದುಕಿ ಅದನ್ನು ಕಾಡಿದಳು, ಬೇಡಿದಳು , ಕುಲುಕಿದಳು. ಕಿವಿಯ ಸಮೀಪವಿಟ್ಟುಕೊಂಡು ಗಮನದಿಂದ ಆಲಿಸಿದಳು . ಆದರೂ ಸದ್ದೇ ಇಲ್ಲ !
" ಅಯ್ಯೋ ಮೋಸ ಹೋದೆ !ಇದು ಸತ್ಯ ಸೂಚಿಯೂ ಅಲ್ಲ ಏನಿಲ್ಲ , ಬರಿ ಚಟಾಕು!" ಎಂದು ಎದೆಬಡಿದು ಕೊಂಡು ಅರಚಾಡಿದಳು . ಅವಳ ದುರಾಸೆಗೆ ತಕ್ಕ ಶಾಸ್ತಿಯಾಯಿತು !
ಹುಣಸೇಹುಳಿ ಊರೊಳಗೆ ಹೋಗಿ ಎರಡು ಕಾಸು ಕೊಟ್ಟು ಹೊಟ್ಟೆ ತುಂಬ ಉಂಡನು . ನಂತರ ಅರಳಿ ಕಟ್ಟೆಯ ಮೇಲೆ ವಿಶ್ರಮಿಸುತ್ತಿದ್ದನು . ಬಡಕಲಾದ ಒಂದು ಒಣಕಲು ಮೇಕೆಯನ್ನು ಎಳೆದುಕೊಂಡು ಸಂತೆಯಿಂದ ಹಿಂದಿರುಗುತ್ತಿದ್ದ ಓರ್ವ ವ್ಯಕ್ತಿಯನ್ನು ಕಂಡನು .
" ಇದೇನಣ್ಣಾ ! ಸಂತೆಯಿಂದ ಇದನ್ನೇ ಕೊಂಡುಕೊಂಡೆಯಾ ?''ಎಂದು ಪ್ರಶ್ನಿಸಿದ ಹುಣಸೇಹುಳಿ .
" ಛೆ ಛೆ ! ಹಾಗೇನಿಲ್ಲ ! ನಾನು ಹತ್ತು ಮೇಕೆಗಳನ್ನು ಸಂತೆಯಲ್ಲಿ ಮಾರಲು ಕೊಂಡೊಯ್ದಿದ್ದೆ . ಒಂಬತ್ತು ಮೇಕೆಗಳನ್ನ ಒಳ್ಳೆ ಬೆಲೆಗೆ ಮಾರಿದೆ . ಇದನ್ನು ಮಾತ್ರ ಕೊಳ್ಳುವವರಿಲ್ಲ ."
" ನಾನು ಇದನ್ನು ಕೊಂಡುಕೊಳ್ಳುತ್ತೇನೆ . ಇಗೋ ತೆಗೆದುಕೋ ಹತ್ತು ಕಾಸುಗಳನ್ನ." ಎಂದ ಹುಣಸೇಹುಳಿ .
" ಈ ನಾಲಾಯಕ್ ಮೇಕೆಗಾಗಿ ಏಕೆ ನಿನ್ನ ಕಾಸು ಹಾಳು ಮಾಡಿಕೊಳ್ಳುವೆ ?"
" ಅದರ ಮುಖ ನನಗೆ ತುಂಬಾ ಮೆಚ್ಚುಗೆಯಾಯಿತು . ಅದಕ್ಕೇ ."
ಹುಡುಗ ಎಲ್ಲೋ ಸ್ವಲ್ಪ ಹುಚ್ಚನಿರ ಬೇಕು ಎಂದುಕೊಂಡರೂ , ಸಂತೋಷದಿಂದ ತನ್ನ ಮೇಕೆಯನ್ನು ಅವನಿಗೆ ಮಾರಿ ಹೋದ ಆ ವ್ಯಕ್ತಿ .
ಹುಣಸೇಹುಳಿ ಹೆಮ್ಮೆಯಿಂದ ಮೇಕೆಯನ್ನು ಕರೆದುಕೊಂಡು ಅಲ್ಲಿಂದ ಹೊರಟನು .
ಶ್ರೀಮಂತರು ವಾಸವಾಗಿದ್ದ ಪೇಟೆಯನ್ನು ತಲುಪಿದ ಹುಣಸೇಹುಳಿ ಮೇಕೆಯನ್ನು ಒಂದು ಕಡೆ ಕೂರಿಸಿದನು . ತಂಗಾಳಿಯನ್ನು ಅನುಭವಿಸುತ್ತ ಅಡ್ಡಾಡುತ್ತಿದ್ದರು ಜನರು .
ಹುಣಸೇಹುಳಿ ಮಲಗಿದ್ದ ಮೇಕೆಯ ಹಿಂಬಾಗದಲ್ಲಿ ಮೂರು ಕಾಸುಗಳನ್ನು ಮೆಲ್ಲನೆ ಇರಿಸಿದನು . ನಂತರ ಮೇಕೆಯನ್ನು ಕುರಿತು ಗಟ್ಟಿಯಾಗಿ ಕೋಪದಿಂದ ಕೂಗಾಡಿ , ಅದನ್ನು ಕಡ್ಡಿಯಿಂದ ಹೊಡೆಯುವವನಂತೆ ನಟಿಸಿದನು .
ಜನರೆಲ್ಲಾ ಗಾಬರಿಗೊಂಡು ಏನೋ ಎಂತೋ ಎಂದು ಸುತ್ತಲೂ ಕೂಡಿದರು . ಶ್ರೀಮಂತನಾದ ಬಟ್ಟೆ ವ್ಯಾಪಾರಿ ಓರ್ವ , " ಏ ದುಷ್ಟ ! ಏನೋ ನಿನ್ನ ಸಮಸ್ಯೆ ?ಯಾಕೋ ಆ ಪಾಪದ ಮೇಕೆಯನ್ನು ಹೊಡೆಯುತ್ತಿರುವೆ ?" ಎಂದು ಹುಣಸೇಹುಳಿಯ ಕೈಯಿಂದ ಕಡ್ಡಿಯನ್ನು ಕಸಿದುಕೊಂಡು ಗದರಿಸಿದನು .
" ಈ ಮೊಂಡು ಮೇಕೆಯೇ ನನ್ನ ಸಮಸ್ಯೆ !" ಎಂದು ಕೋಪದಿಂದ ಕೂಗಿದ ಹುಣಸೇಹುಳಿ . " ಈ ಧಾನ್ಯಗಳನ್ನ ತಿನ್ನದೇ ಹಠ ಮಾಡುತ್ತಿದೆ ." ಎನ್ನುತ್ತ ತನ್ನ ಕಯ್ಯಲ್ಲಿದ್ದ ಸಣ್ಣ ಕಪ್ಪು ಬಣ್ಣದ ಧಾನ್ಯಗಳನ್ನು ತೋರಿಸಿದನು .
" ಥೂ ! ಕೊಳೆತು ಹೋದ ಹಾಗಿದೆ ! ಪಾಪ !ಅದನ್ನು ಹೇಗೆ ತಿನ್ನುತ್ತದೆ ಈ ಮೇಕೆ? ಹುಚ್ಚು ಹುಡುಗ !"
" ನನ್ನ ಬಳಿ ಇರುವುದು ಇಷ್ಟೇ . ನನ್ನ ಕಾಸೆಲ್ಲ ಕಳವಾಗಿದೆ . ಇದಕ್ಕೆ ಬೇಕಾದ ರುಚಿ ರುಚಿಯಾದ ಪದಾರ್ಥಗಳನ್ನು ಕೊಡಿಸಲು ನನ್ನಿಂದ ಸಾಧ್ಯವಿಲ್ಲ . ನೋಡಿ ಸರಿಯಾಗಿ ತಿನ್ನದೇ ಎಷ್ಟು ಸಣಕಲಾಗಿ ಹೋಗಿದೆ . ಇದೇ ಕಾರಣದಿಂದ ಕಾಸು ಹಾಕುವುದನ್ನೂ ನಿಲ್ಲಿಸಿಬಿಟ್ಟಿದೆ .''
" ಏನು ? ಕಾಸು ಹಾಕುತ್ತದೆಯೇ ?" ಎನ್ನುತ್ತಾ ಎಲ್ಲರೂ ಆಶ್ಚರ್ಯದಿಂದ ಮೇಕೆಯನ್ನು ದಿಟ್ಟಿಸಿ ನೋಡಿದರು . ಮೇಕೆಯ ಹಿಂಬಾಗದಲ್ಲಿ ಮೂರು ಕಾಸುಗಳು ಬಿದ್ದಿರುವುದನ್ನೂ ಕಂಡರು . " ಹಾ ! ನೋಡಿ ! ನೋಡಿ !ಬೆಳ್ಳಿ ಕಾಸುಗಳು !"
ಹುಣಸೇಹುಳಿ ಮೇಕೆಯ ಬಾಲವನ್ನೆತ್ತಿ ಹಿಡಿದು ಮತ್ತೊಂದು ಕಾಸನ್ನು ತೆಗೆದು ತೋರಿಸಿದನು . " ಹಮ್ ! ಬರಿ ನಾಲ್ಕು ಕಾಸುಗಳು ! ಅದೂ ಬರಿ ಬೆಳ್ಳಿ ಕಾಸುಗಳು ! " ಎಂದು ದುಃಖದಿಂದ ನುಡಿದನು . " ಹಣ್ಣು ಹಂಪಲು, ಜೇನು , ಮೊಸರು, ಬಾದಾಮಿ ಮುಂತಾದ ಪೌಷ್ಟಿಕ ಆಹಾರಗಳನ್ನ ಸೇವಿಸುತ್ತಿದ್ದಾಗ ಚಿನ್ನದ ನಾಣ್ಯಗಳನ್ನೇ ಹಾಕುತ್ತಿತ್ತು. ಬೆಳಿಗ್ಗೆ ಹತ್ತು , ಸಂಜೆ ಹತ್ತು ಚಿನ್ನದ ನಾಣ್ಯಗಳು !"
