Showing posts with label Tatha Helida Tamashe Kathegalu ಕಾಯಿ ಕಡುಬಿನ ಕಥೆ 4. Show all posts
Showing posts with label Tatha Helida Tamashe Kathegalu ಕಾಯಿ ಕಡುಬಿನ ಕಥೆ 4. Show all posts

Sunday, May 18, 2014

Kaayi Kadubina Kathe / ಕಾಯಿ ಕಡುಬಿನ ಕಥೆ - The Dumpling Story

 ಕಾಯಿ ಕಡುಬಿನ ಕಥೆ - ಬಾಗ ೪

" ಅಮ್ಮನ್ಗೆ ಗೊತ್ತಾಗ್ದೆ ಇರತ್ಯೇ ? ಹೇಗೇ ಅಂತ್ಯಾ ? ಕೇಳಿಲ್ಲಿ !" ಎನ್ನುತ್ತ ಕಥೆ ಮುಂದುವರಿಸಿದಳು ಅಜ್ಜಿ . 
ಜಾಣಮರಿ ಮತ್ತೆ ಒಳಗೆ ಹೋಗಿ ಡಬ್ಬಿ ಮುಚ್ಚಳ ತೆರೆದಳು. ಗಲಿಬಿಲಿಗೊಂಡಿದ್ದ ಇಲಿ 'ಬದುಕಿದೆ !' ಎಂದುಕೊಂಡು ಛಂಗನೆ ಹೊರಕ್ಕೆ ನೆಗೆದು , ದಡ ದಡ ಓಡಿ  ಅಕ್ಕಿ ಪೀಪಾಯಿಯ ಕೆಳಗೆ ಅಂತರ್ಧ್ಯಾನವಾಯಿತು ! 
ಖಾಲಿ ಡಬ್ಬಿ ಕೈಯಲ್ಲಿ ಹಿಡಿದು ಚೀರುತ್ತ ಓಡಿ ಬಂದಳು  ಜಾಣಮರಿ !
"ಅಮ್ಮಾ ಅಮ್ಮ ! ಕಾಯ್ ಕಡುಬು ಓಡಿ ಹೋಗುವುದೇನು ?"
"ಓಡಿ ಹೋಗುವುದೇ ? ಇದೇನು ಹುಚ್ಚಾಟ ? ಸಿಹಿ ತಿಂಡಿ ಎಲ್ಲಾದರು ಓಡಿ ಹೋಗುತ್ತದೆಯೇ ? ಎಲ್ಲವನ್ನೂ ನೀನೆ ತಿಂದು ಕಥೆ ಹೇಳುತ್ತಿರುವೆಯೇನು ?"


ಅದೇ ಸಮಯ,  ತುಂಟಮರಿಯ ಲಂಗದಲ್ಲಿ ಅಂಟಿದ್ದ ಸಿಹಿ ಹೂರಣವನ್ನು ಸವಿಯಲು ಅವಳ  ಮೇಲೆ ಹತ್ತಿದ್ದ ಕೆಂಪಿರುವೆಗಳು ಅವಳ ಕೈಯನ್ನು ಕಚ್ಚಲು ,  ಕಿಟಾರನೆ ಕಿರುಚಿದಳು ತುಂಟಮರಿ. 
ಅವಳ ಕಡೆ ತಿರುಗಿ ನೋಡಿದ  ಅಮ್ಮ,  ತುಂಟಮರಿಯ ಲಂಗ ಒದರಿ ಇರುವೆಗಳನ್ನು ಕೆಳಕ್ಕೆ  ಕೊಡವಿ ಹಾಕಿದಳು . ತುಂಟಮರಿಯ ಲಂಗದ ಮೇಲೂ , ಕೆನ್ನೆಯ ಮೇಲೂ  , ತಲೆಗೂದಲಲ್ಲೂ ಅಂಟಿದ್ದ ಸಿಹಿ ಹೂರಣವನ್ನೂ ಕಂಡಳು . 
"ನೀನೇನಾ ಆ ತುಂಟ ಕಳ್ಳಿ !"ಎಂದು ಗದರಿಸುತ್ತ  ಎರಡು ಎಟನ್ನೂ ಹಾಕಿದಳು . 


" ಹಂಗೆ ಆಗ ಬೇಕು ! ಹಲ್ಲು ಮುರಿ ಬೇಕು !ನಾ ನಗ  ಬೇಕು !"
ಪುಟ್ಟಣ್ಣ ಹಾಡುತ್ತ ಕುಣಿಯುತ್ತ ಬಂದ . 
" ನೀನ್ಯಾವಾಗ್ಲೋ ಬಂದೆ ? ಸೈಕಲ್ ಪಂಪ್ ಮಾಡ್ತಿದ್ದೆ !"
" ನಾನೆಲ್ಲೇ ಇರ್ಲಿ !  ಕಿವಿ ಮಾತ್ರ ನಿನ್ ಕಥೆಲೇ ಅಜ್ಜಿ !" ಎಂದ ಪುಟ್ಟಣ್ಣ . 
" ಸುಳ್ಳು ! ಸುಳ್ಳು ! ಕಾಯ್ ಕಡುಬಿನ ವಾಸ್ನೆ  ಹಿಡ್ಕೊಂಡ್ ಬಂದಿದ್ದಾನೆ ಅಜ್ಜಿ !" ಎಂದಳು ಪುಟ್ಟಿ . 
ಅಜ್ಜಿ ನಗುತ್ತ ಹಬೆಯಿಂದ ಆಗತಾನೆ ತೆಗೆದ ಕಾಯಿ ಕಡುಬುಗಳನ್ನು ತಟ್ಟೆಗೆ ಹಾಕಿ ಮಕ್ಕಳಿಬ್ಬರ ಮುಂದಿಟ್ಟಳು . 
" ಹೀಗೆ ಅವ್ರಮ್ಮಾನೂ ಕೊಟ್ಟಿದ್ರೆ ತುಂಟಮರಿ ಏಕೆ ಕದ್ದು ತಿನ್ತಿದ್ಳು ?" ಎನ್ನುತ್ತಾ ಸಿಹಿ ಕಡುಬನ್ನು ಸವಿಯ ತೊಡಗಿದಳು ಪುಟ್ಟಿ . 
" ಆಮೇಲೇನಾಯ್ತು ಅಜ್ಜಿ?"
" ಆಗೋದೇನು ? ಅಷ್ಟೇ ಕಥೆ ! "ಎಂದು ಕಥೆ ಮುಗಿಸಿದಳು ಅಜ್ಜಿ . 

ಗುಣವತಿಯಾದ ತಾಯಿಗಾಗಲಿ, ಜಾಣಮರಿಗಾಗಲಿ, ತುಂಟಮರಿಗಾಗಲಿ, ಉಳಿದಿದ್ದ ಒಂದೇ ಒಂದು ಕಡುಬು ಅದು ಹೇಗೆ ಕಣ್ಣು, ಕಿವಿ, ಮೂಗು, ಕಾಲು, ಬಾಲ ಬೆಳೆಸಿಕೊಂಡಿತು ಎಂಬ ವಿಷಯ ಅರ್ಥವಾಗಲೇ ಇಲ್ಲ . ಅದು  ಏಕೆ ಓಡಿ ಹೋಯಿತು ಎಂದೂ ಅರಿವಾಗಲಿಲ್ಲ. ನಿಮಗೆ ?


" ತಿನ್ದ್ಮೇಲೆ ಡಬ್ಬಿ ಸರಿಯಾಗಿ ಮುಚ್ಚಿಡಿ ಮಕ್ಕಳಾ  ! ನಮ್ ಕಡುಬುಗಳೂ ಎಲ್ಲಾದ್ರೂ ಓಡಿ  ಹೋದಾವು !" ಎಂದಳು ಅಜ್ಜಿ.