Wednesday, June 6, 2018

ಡೈನೋಸರ್ ಲೋಕದಲ್ಲಿ ಅದ್ದು ! - 3 / Addu in Dinosaur Land ! - 3

ಡೈನೋಸರ್ ಲೋಕದಲ್ಲಿ ಅದ್ದು ! 
ಅಧ್ಯಾಯ  3



ಹಚ್ಛೆಹಸಿರಾದ ಆ ಕಾಡಿನ ನಡುವೆ ಬಂದು ಇಳಿದರು ಅದ್ದು ಮತ್ತು ವೃದ್ಧಿ. ಬೆಳಗಿನಜಾವದಂತೆ ತೋರಿದ ನಸು ಬೆಳಕಿನಲ್ಲಿ  ಸುತ್ತ ಮುತ್ತ ನೋಡಿದ ಅದ್ದು ಬೆರಗಾದಳು.
ಎತ್ತೆತ್ತರವಾದ  ಪೈನ್ ಎಂಬ ದೇವದಾರು ಮರಗಳು, ಕೋನಿಫರ್ಸ್ ಎಂಬ ಶಂಕು ವೃಕ್ಷಗಳು, ಮತ್ತು ಪಾಮ್ ಎಂಬ ತಾಳೆ ಮರಗಳು! ಫರ್ನ್ ಎಂಬ ಜರೀ ಸಸ್ಯಗಳು, ಹಾರ್ಸ್ ಟೇಲ್ ಎಂಬ ಅಶ್ವಪುಚ್ಛ ಗಿಡಗಳು ಮತ್ತು ಇನ್ನೂ ಎಂತೆಂಥದ್ದೋ ಕುರುಚಲು ಗಿಡಗಳು!
" ಅಬ್ಬ! ಎಷ್ಟು ಎತ್ತರವಾದ ಮರಗಳು! ತಲೆ ಎತ್ತಿ ನೋಡಿದ್ರೆ ಕತ್ತು ನೋಯುತ್ತೆ! "
'' ಡೈನೋಸರ್ ದೇಶದಲ್ಲಿ ಡೈನೋಸರ್ಗಳಿಗೆ ತಕ್ಕಂತೆ ಎಲ್ಲವೂ ದೊಡ್ಡದ್ದೇ! " ಮಂತ್ರದ ಕೋಲನ್ನು ಬೆನ್ನಚೀಲದೊಳಗೆ ಸೇರಿಸುತ್ತ ನುಡಿದಳು ವೃದ್ಧಿ.
" ಡೈನೋಸರ್ ಸುಮಾರು ಎಷ್ಟು ದೊಡ್ಡದಿರಬಹುದು? "
" ಈ ಎತ್ತೆತ್ತರವಾದ ಮರಗಳ ಮೇಲಿನ ಎಲೆಗಳನ್ನು ನಿಂತಲ್ಲೇ ನಿಂತು ಮೇಯುವಷ್ಟು ಎತ್ತರ ! ಅಷ್ಟೇ ಭಾರಿ! "
" ಹಾ? " ಅದ್ದು ಆಶ್ಚರ್ಯದಿಂದ ಬಾಯಿ ಬಿಟ್ಟಳು.
ಕಾಲುಚೆಂಡಿನ ಗಾತ್ರದ ಯಾವುದೋ ಒಂದು ಹುಳು ಅವಳ ಮುಖದತ್ತ  ಸುಳಿದು  ಗುಯಿಗುಟ್ಟಿ  ಹಾರಿಹೊಯಿತು.
" ಅಯ್ಯೋ ! ಏನಿದು? " ಅದ್ದು ಗಾಬರಿಯಿಂದ ಮುಖದಮುಂದೆ ಕೈ ಬೀಸಿದಳು.
" ಯಾರಾದ್ರೂ ಜೀರುಂಡೆಗೆ ಹೆದರ್ತಾರೆಯೇ? " ಎನ್ನುತ್ತಾ ನಕ್ಕಳು ವೃದ್ಧಿ.
" ಅಬ್ಬಾ! ಇಷ್ಟು ದೊಡ್ಡ ಜೀರುಂಡೆ ನಾನು ನೋಡೇ ಇಲ್ಲ! "
" ಅದೇ ಹೇಳಿದ್ನಲ್ಲ! ಡೈನೋಸರ್ ದೇಶದಲ್ಲಿ ಎಲ್ಲವೂ ಡೈನೋಸರ್ ಅಷ್ಟೇ ಭಾರಿ!"
 ಅದ್ದುವಿಗೆ ಡೈನೋಸರ್ ನೋಡುವ ಆಸೆ. ಆದರೆ ಈಗ  ಸ್ವಲ್ಪ ಭಯವೂ ಆಯಿತು.
" ನಡಿ  ಅದ್ದು! ಎಲ್ಲಾದ್ರೂ ಡೈನೋಸರ್ ಕಾಣ್ಸತ್ತಾ ನೋಡೋಣ! "
ಇಬ್ಬರೂ ಕುರುಚಲು ಗಿಡಗಳನ್ನೂ ಎತ್ತರವಾಗಿ ಬೆಳೆದಿದ್ದ ಹುಲ್ಲು ರಾಶಿಯನ್ನೂ ಸರಿಸಿ ಮೆಲ್ಲನೆ ನಡೆದರು.  ದೂರಲ್ಲಿ ಒಂದು ಕೆರೆ ಕಾಣಿಸಿತು. ದಂಡೆಯಮೇಲೆ ಪ್ರಾಣಿಗಳು ಓಡಾಡುತ್ತಿದ್ದದ್ದು ಕಂಡಿತು.
 " ಕಾಂಗರೂ ! " ಅದ್ದು ಉತ್ಸಾಹದಿಂದ ಉಸುರಿದಳು. 
" ಅವು ಕಾಂಗರೂ ಅಲ್ಲ ಅದ್ದು! ಡೈನೋಸರ್ಗಳು! " ಎಂದಳು ವೃದ್ಧಿ.
" ಹೌದಾ? ನೀನು ಹೇಳಿದಷ್ಟು ದೊಡ್ಡದಾಗಿಲ್ಲವಲ್ಲ? "
"ಹತ್ತಿರ ಹೋಗಿ ಸರಿಯಾಗಿ ನೋಡು! ಅವು ಇನ್ನೂ ಸಣ್ಣ ಮರಿಗಳು! ಬ್ರಾಂಟೋಸೋರಸ್   ಮರಿಗಳು! "
ಅದ್ದು ವಿವಿಧ ವಸ್ತುಗಳಿದ್ದ ತನ್ನ ಬ್ಯಾಗಿನಿಂದ ದುರ್ಬಿಯನ್ನು ತೆಗೆದು  ಅದರಲ್ಲಿ ಕಣ್ಣಿಟ್ಟು ನೋಡಿದಳು.
ಉದ್ದವಾದ ತೆಳು ಕುತ್ತಿಗೆ !
ತುದಿಯಲ್ಲಿ ಸಣ್ಣದಾದ ತಲೆ !
ಭಾರಿಯಾದ ಒಡಲು !
ಉದ್ದವಾದ ಬಾಲ !
"ಹೌದು ವೃದ್ಧಿ! ಹೌದು! ಅವು ಡೈನೋಸರ್ ಮರಿಗಳೇ!" ಅದ್ದುವಿಗೆ ರೋಮಾಂಚನವಾಯಿತು.
" ಇನ್ನೂ ಸ್ವಲ್ಪ ಸರಿಯಾಗಿ ನೋಡು ! ಕೆರೆಯಂಚಲ್ಲಿ ! ಕೆಸರಲ್ಲಿ! "
 ವೃದ್ಧಿಗೆ ದುರ್ಬಿಯ ಸಹಾಯವೇ ಬೇಕಾಗಿಲ್ಲ! 
 ಅದ್ದು ದುರ್ಬಿಯನ್ನು ಸರಿಯಾಗಿ ಹೊಂದಿಸಿಕೊಂಡು ನೋಡಿದಳು.
"ಓ! ಚೆನ್ನಾಗಿ ಕಾಣ್ಸತ್ತೆ ವೃದ್ಧಿ! ಕೆಸರಲ್ಲಿ ಕೂತಿದೆ ಒಂದು ! ಕುತ್ತಿಗೆ ಮತ್ತು ತಲೆಯನ್ನ ಮಾತ್ರ ಹೊರಗೆ ಹಾಕಿದೆ ! ಪಾಚಿಯನ್ನ ತಿನ್ನುತ್ತಾ ಇದೆ!"
" ಅದು ಮರಿಗಳ ತಾಯಿ! "
ವೃದ್ಧಿ  ಹೇಳುತ್ತಿದ್ದಹಾಗೆಯೇ ಕೆಸರಿನಿಂದ ಎದ್ದು ನಿಂತಿತು ತಾಯಿ ಬ್ರಾಂಟೋಸೋರಸ್ ! ದಡವನ್ನು ಹತ್ತಿ ನಿಂತು ಕುತ್ತಿಗೆ ಎತ್ತಿ ನೋಡಿತು. ಅಬ್ಬಬ್ಬಾ! ಎಷ್ಟು ಎತ್ತರ! ಎಂತಹ ಬೃಹತ್ ಆಕಾರ ! ಅದು ಬಾಲವನ್ನು ಎಳೆದುಕೊಂಡು ಮುಂದೆ ಹೆಜ್ಜೆಯಿಟ್ಟಾಗ ಅದರ ದಪ್ಪ ಕಾಲುಗಳು ಗುಡುಗಿನಂತೆ ಸಪ್ಪಳಮಾಡಿದವು. ಅದ್ದುವಿನ ಎದೆ ಡವ ಡವ ಹೊಡೆದುಕೊಂಡಿತು. ಬ್ರಾಂಟೋ ಸೈನಿಕನಂತೆ ಹೆಜ್ಜೆ ಹಾಕುತ್ತ ಎತ್ತರವಾದ ಮರಗಳ ನಡುವೆ ಕಣ್ಮರೆಯಾಯಿತು.
" ಅದ್ದು! ಬೇಗ ನಡಿ ! ಮರಿಗಳನ್ನ ಹತ್ರದಿಂದ ನೋಡೋಣ!"
 ತಲೆದೂಗಿದ ಅದ್ದು ವೃದ್ಧಿಯ ಜೊತೆ ಬೇಗಬೇಗನೆ ಮುನ್ನಡೆದಳು. ಎತ್ತರವಾಗಿ ಬೆಳೆದಿದ್ದ ಹುಲ್ಲುಗಳನ್ನು ಒಂದು ಹಿಡಿ ಕಿತ್ತಳು ವೃದ್ಧಿ.  ಡೈನೋಸರ್ ಮರಿಗಳನ್ನು ಕುರಿತು ಅದನ್ನು ಬೀಸಿ ತೋರಿಸಿದಳು.
ಮರಿಗಳು 'ಮಿಣಿ ಮಿಣಿ' ನೋಡಿದವು. ಭಯದಿಂದ ಹಿಂಜರಿದವು.
'' ಹೆದರ ಬೇಡಿ! ಬನ್ನಿ ಮರಿಗಳೇ ! " ವೃದ್ಧಿ ಮುದ್ದಾದ ದನಿಯಲ್ಲಿ ಕರೆದಳು.
ಅಳುಕುತ್ತಲೇ ಮುಂದೆ ಬಂದ ಒಂದು ಮರಿ ವೃದ್ಧಿಯ ಕೈಯಿಂದ ಹುಲ್ಲನ್ನು ಕಸಿದುಕೊಂಡಿತು. 
" ಜಾಣ ಮರಿ ! ನೀವೂ ಬನ್ನಿ! " ವೃದ್ಧಿ ಪ್ರೋತ್ಸಾಹಿಸಿದಳು. 
 ಈಗ  ಇನ್ನೆರಡು ಮರಿಗಳೂ ಹತ್ತಿರ ಬರಲು ಧೈರ್ಯ ಮಾಡಿದವು.
" ಅದ್ದು! ನೀನೂ ತಿನ್ನಿಸು ಬಾ!" ಎಂದಳು ವೃದ್ಧಿ .
ವೃದ್ಧಿಯ ಹಿಂದೆಯೇ ನಿಂತಿದ್ದ ಅದ್ದು ಮೆಲ್ಲನೆ ಹೊರಬಂದು ಹಿಡಿ ಹುಲ್ಲನ್ನು ಕಿತ್ತು  ನೀಡಿದಳು.
ಅದ್ದುವಿನಷ್ಟೇ ಎತ್ತರವಿದ್ದವು ಮರಿಗಳು. ಅವುಗಳ ಕುತ್ತಿಗೆಗಳು ಮಾತ್ರ ಅದ್ದುವಿಗಿಂತ  ಎರಡು ಪಟ್ಟು ಹೆಚ್ಚು ಉದ್ದವಿದ್ದವು. ಅದ್ದು ನೀಡಿದ ಹುಲ್ಲನ್ನು ಕುತ್ತಿಗೆ ಚಾಚಿ ಪಕ್ಕನೆ ಕಿತ್ತುಕೊಂಡು ತಿಂದವು. ಸಂತೋಷದಿಂದ 'ಕುಯ್ಯುಮ್ ಕುಯ್ಯುಮ್' ಎಂದವು. ಅದ್ದು ಧೈರ್ಯ ಮಾಡಿ ಒಂದು ಮರಿಯ ಕೊರಳನ್ನು ತನ್ನ ಬೆರಳುಗಳಿಂದ ಮೆಲ್ಲನೆ ಸವರಿದಳು. ಮರಿಗೆ ಖುಷಿಯಾಯಿತು. ಇನ್ನೂ ಹತ್ತಿರ ಬಂದು ನಿಂತು ತಲೆಯನ್ನು ಮೇಲಕ್ಕೆತ್ತಿ ತೋರಿಸಿತು. ಅದ್ದು ಅದರ ಕೊರಳು  ಕೆರೆದು ಇನ್ನಷ್ಟು ಖುಷಿಪಡಿಸಿದಳು.
ಇನ್ನೆರಡು ಬ್ರಾಂಟೋ ಮರಿಗಳೂ ಉತ್ಸಾಹದಿಂದ ಹತ್ತಿರ ಬಂದು ತಮ್ಮ ಕೊರಳುಗಳನ್ನು ಚಾಚಿದವು. ಅದ್ದುವಿನ  ಜೊತೆ ವೃದ್ಧಿಯೂ ಸಹ ಅವುಗಳಿನ್ನು ಸವರಿ ಮುದ್ದಿಸಿದಳು.
" ಮುದ್ದು ಮಾಡಿದ್ರೆ ಎಷ್ಟು ಚೆನ್ನಾಗಿ ತೋರಿಸ್ಕೊಳತ್ವೆ ನೋಡು! ಅವಕ್ಕೆ ಕಚಗುಳಿಯಿಟ್ರೆ  ಮೈ ಝುಮ್ಮನ್ನಲ್ವೇ? " ಅದ್ದು ಉತ್ಸಾಹದಿಂದ ಮರಿಯ ಕುತ್ತಿಗೆ ಕೆರೆಯುತ್ತಲೇ ಕೇಳಿದಳು.
" ಅದರ ಚರ್ಮ ಎಷ್ಟು ದಪ್ಪ ನೋಡು! ಅದಕ್ಕೆ ಪಕ್ಷಿಯ ನವಿರಾದ ಗರಿಯಿಂದ ಸವರಿದ ಹಾಗೆ ಅನ್ನಿಸ್ತಿದೆಯೋ ಏನೋ!"
ಅದ್ದು ಮತ್ತು ವೃದ್ಧಿ ಬ್ರಾಂಟೋ ಮರಿಗಳೊಂದಿಗೆ ಆಟವಾಡುತ್ತಲೇ ಸಮಯ ಕಳೆದರು.
ಇದ್ದಕ್ಕಿದ್ದಂತೆ ಭೂಮಿ ಕಂಪಿಸಿತು! ಕೆರೆಯಲ್ಲಿದ್ದ ನೀರು ಹೊರಚಿಮ್ಮಿತು! ಭಯಾನಕ ಪ್ರಾಣಿಯೊಂದು  ಗಟ್ಟಿಯಾಗಿ ಫೀಳಿಟ್ಟ ಹಾಗೆ  ಕೇಳಿಸಿತು!
'ಕುಯ್ಯುಮ್ ಕುಯ್ಯುಮ್ಮ್' ಎಂದು ಭಯದಿಂದ ಕುಯ್ಗುಡುತ್ತ ಬ್ರಾಂಟೋ ಮರಿಗಳು ಚಡಪಡಿಸಿದವು. ಅದ್ದು ಮತ್ತು ವೃದ್ಧಿ ಚಕಿತರಾಗಿ ನಿಂತು ನೋಡುತ್ತಿರಲು -
ಬಾಯಿ ತೆರೆದು ತನ್ನ ಚೂಪಾದ ಹಲ್ಲುಗಳ ಸಾಲನ್ನು ತೋರುತ್ತ, ಭೂಮಿ ಅದುರುವಂತೆ ಅವರುಗಳನ್ನು ಕುರಿತು  ಓಡಿಬರುತ್ತಿತ್ತು  ಟಿ ರೆಕ್ಸ್ !

                                                                                                                        ಆಮೇಲೆ ... 
-----------------------------------------------------------------------------------------------------


ADDU IN DINOSAUR LAND!
Chapter 3


Addu and Vriddhi landed in a great green jungle. The light of early morning made everything look dazzling.
Addu was wonderstruck by what she saw.
The woods were thick with huge trees like Pines, conifers and palms.  Giant ferns and Horsetail bushes covered the land.
“ Oh my god! Such  huge trees and plants! ”
“ In the land  of giant Dinos, the vegetation has to be gigantic too, to be useful to them! ” remarked Vriddhi.
“ How  tall  are the Dinosaurs? ”
“ Tall enough to graze these tree tops! ”
 
Something as big as a football flew close to Addu’s face and she screeched. “ whats that!!!! ”
“ Just a beetle! ….dint I tell you , in Dinoland, everything is gigantic! ”
Though eager to see the Dinosaurs, Addu felt a little scared now.
Both of them walked through the thick tall grasses, carefully parting the vines and bushes.
At a clearing, they could see a lake at a distance.  On the bank of the lake were some strange animals.
“ Kangaroos!? ” clapped Addu happily.
“ No. They are Dinos.”
“What?! but you just told me Dions are giants! These are not even big looking. ”
“ Take a closer look Addu.  
Addu pulled out a Binocular from her backpack and peered into it.
Long thin necks !
Small faces at the end ! 
Bulky bodies ! 
Thick long tails !
“ Oh yes! you are right! These are indeed Dinosaurs! Babies! ”
Addu was so excited.
“ Now look in the muddy end of the lake ”.
Addu swung her binoculars to that direction. “ I can see! I can see! I can see a long neck with a small head  coming out of the mud.  Its eating the moss and the algae.”
“That’s the mother of the babies there….Look ! she is coming out !”
Pulling itself out of the muddy water, out stepped the mother Brontosaurus! Goodness gracious! What a tall creature and how bulky!
As she came out and started walking, her steps thundered and shook the land. Addu’s heart beat wildly within her chest.
The Mother Bronto marched slowly into the thick woods and disappeared.
“ Come on , Addu! Lets have a closer look at the babies!  
Vriddhi pulled her hand and both walked quickly towards the bank where the babies were.
As they went near, Vriddhi plucked a handful of grass and waved it in the direction of the babies.
The little creatures looked at them with beady eyes and pulled back in fear.
“ Don’t be scared! Come on! Come get this….” Cooed Vriddhi soothingly.
One of the babies stepped up slowly and snatched a bit of grass from her hand. Then, another came forward.
“ Come on! Good Dino!  She encouraged them. Now they were bold and all came closer.
“Come Addu, you feed them too!”
Eagerly, Addu pulled up a clump of grass and offered it to the little ones.
The babies were now very friendly. They came closer, making squealing noises. They were just as tall as Addu , but with necks twice her height.
Addu put out her hand and tickled one in the neck. The baby was delighted and came closer for more tickling. Soon, all three were around the girls, enjoying their  petting and cooing.
“ They are enjoying tickles!”
“ They have very thick skin. Perhaps it doesn’t tickle them! ”
As they were enjoying playing with the babies, there was a sudden deep rumbling sound and the ground  shook. The water in the lake edges splashed. The terrifying  roar of some  wild beast echoed through the forest.
The babies squealed in fright and ran helter skelter.
Addu and Vriddhi stood rooted to the ground, unable to move, staring in the direction the sound came from.
Leaping towards them, with a wide open mouth showing terrifying rows  of sharp teeth was a  snarling T.Rex !

                                                                To be continued............                                                         

No comments:

Post a Comment