Friday, May 11, 2018

ನೀಲಮಣಿಗಳ ಹುಡುಕಾಟದಲ್ಲಿ ! / In Search Of The Sapphires!

 ನೀಲಮಣಿಗಳ ಹುಡುಕಾಟದಲ್ಲಿ !
ಒಂದಾನೊಂದು ಕಾಲದಲ್ಲಿ ನೀಲಕೇಶಿ ಎಂಬ ಯುವಕನಿದ್ದ. ಅವನಿಗೆ ಬಂಧು ಬಳಗದವರಾರೂ ಇಲ್ಲ. ಆದ್ದರಿಂದ ಅವನು ದೂರ ದೂರ ದೇಶಗಳಿಗೆಲ್ಲ ಪ್ರಯಾಣ ಮಾಡುವುದರಲ್ಲೇ ತನ್ನ ಕಾಲವನ್ನು ಕಳೆಯುತ್ತಿದ್ದ. ಪ್ರಯಾಣ ಮಾಡುತ್ತಾ ಮಾಡುತ್ತಾ ಅನೇಕ ಊರುಗಳನ್ನೂ, ಆಯಾ ಊರ ಜನರನ್ನೂ ಅವರುಗಳ ಚಟುವಟಿಕೆಗಳನ್ನೂ ನೋಡಿ ಅವನು ಅಪಾರ ಜ್ಞಾನವನ್ನು ಗಳಿಸಿದ್ದ. ಅತಿ ಬುದ್ಧಿವಂತನಾಗಿಯೂ ಇದ್ದ.



ಒಮ್ಮೆ ಊರೂರು ತಿರುಗುತ್ತ  ಒಂದು ಹೊಸ ಪಟ್ಟಣವನ್ನು ತಲುಪಿದ. ಅದು ಬಹು ಸುಂದರವಾದ ಪಟ್ಟಣವಾಗಿತ್ತು. ಅಲ್ಲಿ  ಹುಡುಕಿದರೂ ಬಡತನವೇ ಕಾಣಿಸಲಿಲ್ಲ. ಪ್ರಜೆಗಳು ಯಾವ ಕೊರತೆಯೂ ಇಲ್ಲದೆ ಸಂತೋಷದಿಂದ ನಕ್ಕು ನಲಿಯುತ್ತಿದ್ದರು. ನೀಲಕೇಶಿ ಆ ಸಂಭ್ರಮಗಳನ್ನೆಲ್ಲ ನೋಡುತ್ತ ಊಟ ಮಾಡಲು ಒಂದು ಛತ್ರಕ್ಕೆ ಹೋದ. ಛತ್ರದ ಮೇಲ್ವಿಚಾರಕ ಅವನನ್ನು ಆದರದಿಂದ ಸ್ವಾಗತಿಸಿ ಒಳ್ಳೆ ಭೋಜನವನ್ನೂ ಕೊಡಿಸಿದ. ತೃಪ್ತಿಯಾಗಿ ಊಟಮಾಡಿದ ನೀಲಕೇಶಿ ಊಟಕ್ಕೆ ಎಷ್ಟು ಹಣ ಕೊಡಬೇಕೆಂದು ಕೇಳಿದ.
" ಇಲ್ಲಿ ನಾವು ಊಟಕ್ಕೆ ಹಣ ತೆಗೆದುಕೊಳ್ಳುವುದಿಲ್ಲ. ದೇವರ ದಯೆಯಿಂದ ನಮ್ಮ ಊರು ಯಾವ ಕೊರತೆಯೂ ಇಲ್ಲದೆ ಸಮೃದ್ಧಿಯಿಂದಿದೆ. ಆದ್ದರಿಂದ ಅತಿಥಿ ಸತ್ಕಾರವನ್ನು ನಾವು ಸಂತೋಷವಾಗಿ ಮಾಡುತ್ತೇವೆ. "
ಮೇಲ್ವಿಚಾರಕನ ಮಾತು ಕೇಳಿ ನೀಲಕೇಶಿಗೆ ಆಶ್ಚರ್ಯವಾಯಿತು.
" ಹಾಗೇನು? ಇಷ್ಟು ಶ್ರೀಮಂತಿಗೆ ಈ ಊರಿಗೆ ಹೇಗೆ ಬಂದಿತು? "  ಎಂದು ಕುತೂಹಲದಿಂದ  ವಿಚಾರಿಸಿದ ನೀಲಕೇಶಿ.



" ನಮ್ಮ ಭೂಮಿ ಫಲವತ್ತಾಗಿದೆ. ವನ ಸಂಪತ್ತಿಗೂ  ಜಲ ಸಂಪತ್ತಿಗೂ ಯಾವ ಕೊರತೆಯೂ  ಇಲ್ಲ. ಇದರಿಂದ ಮಳೆ ಬೆಳೆಗಳೂ ಸಮೃದ್ಧಿಯಾಗಿವೆ. ನಮ್ಮ ಅರಸರು ರಾಜ್ಯವನ್ನು   ನಿರ್ವಹಿಸುವುದರಲ್ಲಿ ಪ್ರವೀಣರು. ಯುಧ್ಧ, ಕ್ಷಾಮ, ರೋಗ ಇವೆಲ್ಲ ನಮ್ಮ ಊರವರಿಗೆ ಏನೆಂದೇ ತಿಳಿಯದು." ಎಂದು ವಿವರವಾಗಿ ತಿಳಿಸಿದ ಛತ್ರದ ಮೇಲ್ವಿಚಾರಕ.
" ಓಹೋಹೊ! ಹಾಗಾದರೆ ಈ ಊರು ದೇವಲೋಕಕ್ಕೆ ಸಮ ಅನ್ನಿ! ಅದು ಸರಿ! ಈ ಊರ ಹೆಸರೇನು? "
" ಮಂಕೂರು! " ಥಟ್ಟನೆ ಬಂದ ಉತ್ತರವನ್ನು ಕೇಳಿ ನೀಲಕೇಶಿಗೆ ಆಶ್ಚರ್ಯವಾಯಿತು. 
" ಏನು? ಇಂದ್ರಲೋಕದಂತಿರುವ ಈ ಊರಿಗೆ ಇದೆಂತಹ ವಿಚಿತ್ರ ಹೆಸರು? "
" ಹೌದುಪ್ಪ ಮಹರಾಯ! ಒಂದು ಕಾಲದಲ್ಲಿ ನಮ್ಮೂರಿಗೆ ಪ್ರಕಾಶಪಟ್ಟಣವೆಂದೇ ಹೆಸರಾಗಿತ್ತು.. "
" ಮತ್ತೆ ಇವಾಗ ಏಕೆ ಈ ಹೆಸರು? "
" ಕಾರಣವಿದೆ! ಹೇಳುವೆ ಕೇಳು! " ಎನ್ನುತ್ತ ಸಾವಕಾಶವಾಗಿ ಹೇಳ ತೊಡಗಿದ ಮೇಲ್ವಿಚಾರಕ.
" ನಮ್ಮ ಅರಸರಿಗೆ ತಕ್ಕ ಬಲು ಬುದ್ಧಿವಂತರಾಗಿದ್ದ ಮಂತ್ರಿಗಳು ಇದ್ದರು. ಮೊದಲೇ ದಕ್ಷತೆಯಿಂದ ಆಳುತ್ತಿದ್ದ ಅರಸರಿಗೆ ಉತ್ತಮ ಸಲಹೆಗಳನ್ನು ನೀಡುತ್ತಿದ್ದರು.  ನಮ್ಮ ಊರನ್ನು ಪ್ರಗತಿಯ ದಾರಿಯಲ್ಲಿ ಕರೆದೊಯ್ಯುಲು ಅರಸರೊಂದಿಗೆ ಎಲ್ಲ ರೀತಿಯಲ್ಲೂ ಸಹಕರಿಸುತ್ತಿದ್ದರು. ನಮ್ಮ ಊರ ಉನ್ನತಿಗೆ ಅವರ ಕಠಿಣ ದುಡಿಮೆ ಕಾರಣವಾಗಿತ್ತು. ಅಂತಹ ಮಂತ್ರಿಗಳು ಕೆಲವು ತಿಂಗಳುಗಳ ಹಿಂದೆ ಸ್ವರ್ಗಸ್ಥರಾದರು. ಅರಸರು ಕಾಲಿಯಾಗಿದ್ದ ಮಂತ್ರಿ ಪದವಿಗಾಗಿ ಅನೇಕ ಮಂದಿ ಜನರನ್ನು ಪರೀಕ್ಷಿಸಿದರು. ನಮ್ಮ ಊರಲ್ಲಿ ಅಸಾಧ್ಯ ದೇಹಬಲ ಹೊಂದಿರವ ಜನರಿದ್ದರೂ, ಮಂತ್ರಿ  ಪದವಿಗೆ ತಕ್ಕ ಬುದ್ಧಿವಂತರ್ಯಾರೂ ಈ ವರೆಗೆ ಸಿಕ್ಕಿಲ್ಲ. ಇದರಿಂದ ಬೇಸರಗೊಂಡ ಅರಸರು, " ಬುದ್ಧಿ ಇಲ್ಲದ ಮಂಕುಗಳೇ ನೆರೆದಿರುವ ಈ ಊರಿಗೆ 'ಮಂಕೂರು' ಎಂಬ ಹೆಸರೇ ಸೂಕ್ತ! " ಎಂದು ಈ ಹೊಸ ಹೆಸರನ್ನೇ ಪ್ರಕಟಿಸಿಯೂ ಬಿಟ್ಟರು!"
" ಅಂತೂ ಧೀಮಂತನಾದ ಒಬ್ಬ ಮಂತ್ರಿ ಸಿಕ್ಕಿಬಿಟ್ಟರೆ 'ಮಂಕೂರು' ಮತ್ತೆ 'ಪ್ರಕಾಶಪಟ್ಟಣ'ವಾಗಿಬಿಡುತ್ತದೆ  ಅಲ್ಲವೇ? " ಕಥೆಯನ್ನು ಕೇಳಿದ ನೀಲಕೇಶಿ ಪ್ರಶ್ನಿಸಿದ.
" ಹೌದಪ್ಪಾ! ಬುದ್ಧಿವಂತನಾದ ಓರ್ವನನ್ನು ಪತ್ತೆ ಹಚ್ಚುವುದಕ್ಕಾಗಿ ಅರಸರು ದಿನವೊಂದು ಸವಾಲನ್ನು ಜನರ ಮುಂದಿಡುತ್ತಾನೇ ಇದ್ದಾರೆ. ಯಾರಾದರೂ ಒಂದು ಸವಾಲನ್ನಾದರೂ ಗೆದ್ದು ಮಂತ್ರಿಗಳಾಗಿಬಿಟ್ಟರೆ  ನಮ್ಮ ಊರಗೆ 'ಪ್ರಕಾಶಪಟ್ಟಣ' ಎಂಬ ಹೆಸರು ದಕ್ಕುತ್ತದೆ. "
ನೀಲಕೇಶಿ ಛತ್ರದ ಮೇಲ್ವಿಚಾರಕರಿಂದ ಬೀಳ್ಗೊಂಡು ಊರನ್ನು ನೋಡಲು ಹೊರಟ. ಸುಂದರವಾದ ಊರನ್ನು ಸುತ್ತಾಡಿಕೊಂಡು ಅರಮನೆಯ ಬಾಗಿಲಿಗೆ ಬಂದ. ಸಿಪಾಯಿಗಳು ಆತನನ್ನು ತಡೆದು ನಿಲ್ಲಿಸಿದರು.
" ನೀವು ಅರಸರ ಸವಾಲನ್ನು ಎದುರಿಸಬೇಕಾಗಿ  ಬಂದಿರುವಿರೇ? "
" ಹೌದು! ಹೌದು! " ಥಟ್ಟನೆ ಉತ್ತರಿಸಿದ ನೀಲಕೇಶಿ.
" ಸರಿ! ದರ್ಬಾರು ಶುರುವಾಗಲು ಇನ್ನೂ ಕೆಲವು ನಿಮಿಷಗಳೇ ಇವೆ! ಬೇಗ ಹೋಗಿ! ''
ಸಿಪಾಯಿಗಳ ಅನುಮತಿಯೊಂದಿಗೆ ಒಳಗೆ ನಡೆದ ನೀಲಕೇಶಿ ದಿಗ್ಬ್ರಾಂತನಾದ. ಸಾಲು ಸಾಲಾಗಿ ದರ್ಬಾರು ಮಂಟಪಕವನ್ನು ಕುರಿತು ನಡೆಯಿತ್ತಿದ್ದ ವ್ಯಕ್ತಿಗಳೆಲ್ಲ ಸದೃಢವಾಗಿ ಬಲಶಾಲಿಗಳಾಗಿದ್ದರು. ಅವರ ಹಿಂದೆಯೇ ತಾನೂ ನಡೆಯತೊಡಗಿದ ನೀಲಕೇಶಿ.
ದರ್ಬಾರು ಮಂಟಪದಲ್ಲಿ ಸಿಂಹಾಸನದಲ್ಲಿ ಕುಳಿತಿದ್ದ ಅರಸರ ಮುಖದಲ್ಲಿ ಕಿರುನಗೆಯರಳಿತು.
" ಪ್ರೀತಿಯ ಪ್ರಜೆಗಳೇ! ನನ್ನ ಸವಾಲಿಗೆ ಉತ್ತರವನ್ನು ಕಂಡುಹಿಡಿಯುವ ಅಪೇಕ್ಷೆಯಿಂದ ನೀವೆಲ್ಲರೂ ಇಲ್ಲಿ ಕೂಡಿರುವಿರಿ! ಬಹಳ ಸಂತೋಷ! ಈ ವರೆಗೆ ನಾನು ಎಸೆದ ಯಾವ ಸವಾಲಿಗೂ ಯಾರೂ ಉತ್ತರವನ್ನು ಕಂಡುಹಿಡಿದಿಲ್ಲ. ಬಲ ಪರೀಕ್ಷೆಯಲ್ಲಿ ಯಾವಾಗಲೂ ಎಲ್ಲರೂ ಗೆಲ್ಲುತ್ತಿರುವುದು ಹೆಮ್ಮೆಯ ವಿಷಯ. ಆದ್ದರಿಂದ ಬಲ ಪರೀಕ್ಷೆಯನ್ನು ಇಂದು ರದ್ದುಗೊಳಿಸಲಾಗಿದೆ. ಇನ್ನು ಮುಂದೆ ನಿಮ್ಮ ಬುದ್ಧಿಚಾತುರ್ಯವನ್ನು  ಪರೀಕ್ಷಿಸುವಂತಹ ಸವಾಲುಗಳನ್ನು ಮಾತ್ರ ನಿಮ್ಮ ಮುಂದೆ ಇಡಲಾಗುವುದು.
ಇವತ್ತಿನ ಸವಾಲು ಇದೇ! ಗಮನವಾಗಿ ಕೇಳಿಸಿಕೊಳ್ಳಿ!
ಕಣ್ಣಾರ ಕಾಣಬಲ್ಲ,
ಕೈಗೆ ಸಿಗಲಾರದ,
ಅತಿ ಪ್ರಕಾಶವಾದ,
ಅತ್ಯಂತ ಪ್ರಿಯವಾದ ,
ಎರಡು ನೀಲ ಮಣಿಗಳು!
ನಮ್ಮೂರಲ್ಲೇ ಇರುವ ಆ ನೀಲಮಣಿಗಳನ್ನು ಪತ್ತೆ ಹಚ್ಚಬೇಕು! " 
ಅರಸರು ಮಾತು ಮುಗಿಸಿದ ಮೇಲೆ ಕೂಡಿದ್ದವರೆಲ್ಲ ಬೇಗನೆ ಹೊರಟು ಕಾರ್ಯನಿರತರಾದರು. ಭೂಮಿಯ ಕೆಳಗೆ ವಜ್ರಗಳು ಸಿಗುವಂತೆ ನೀಲಮಣಿಗಳೂ ಸಿಗಬಹುದು ಎಂದುಕೊಂಡರು ಕೆಲವರು. ಹಾರೆ ಪಿಕಾಸಿ ಹಿಡಿದು ಬಯಲುಗಳಲ್ಲಿ ತೋಡ ತೊಡಗಿದರು. ಇನ್ನೂ ಕೆಲವರು ಮುತ್ತು ಹವಳದಂತೆ ನೀಲಮಣಿಗಳು ಸಮುದ್ರದಲ್ಲಿ ಸಿಗಬಹುದು ಎಂದುಕೊಂಡು ಸಮುದ್ರದಲ್ಲಿ ಮುಳುಗಿ ಹುಡುಕ ತೊಡಗಿದರು. ಹೀಗೆ ಮನಸ್ಸಿಗೆ ಬಂದಂತೆ ಎಲ್ಲ ಕಡೆಗಳಲ್ಲೂ ನೀಲಮಣಿಗಳಿಗಾಗಿ ತಡಕಾಡ ತೊಡಗಿದರು. 
ನೀಲಕೇಶಿ ಛತ್ರಕ್ಕೆ ಹೊರಟ. ಊಟ ಮಾಡಿ ಮಲಗಿಕೊಂಡ. ನಿದ್ರೆ ಬರಲಿಲ್ಲ. ನೀಲ ಮಣಿಗಳ ಬಗ್ಗೆಯೇ ಯೋಚಿಸುತ್ತಿದ್ದ. 
ಮರು ದಿನ ಅವನು ಸುತ್ತಾಡಲು ಹೊರಟಾಗ  ಬೀದಿಯಲ್ಲಿ ಜನರ ಜಾತ್ರೆಯೇ ಸೇರಿತ್ತು. ಓಲಗ, ಕೋಲಾಟ, ಡೊಳ್ಳು ಕುಣಿತ ಮುಂತಾದ ಬಗೆ ಬಗೆಯ ಆಟಗಳೊಂದಿಗೆ ಯಾವುದೋ ಒಂದು ಮೆರವಣಿಗೆ ಸಾಗುತ್ತಿತ್ತು. 
" ಇಂದು ಏನು ವಿಶೇಷ?"
" ನೀವು ಊರಿಗೆ ಹೊಸಬರೇ ? ಅದಕ್ಕೆ ಮತ್ತೆ ಹೀಗೆ ಕೇಳುತ್ತಿರುವಿರಿ. ಇಂದು ಶುಕ್ರವಾರವಲ್ಲವೇ? ರಾಜಕುಮಾರಿ ನೀಲಾಂಜನಾ ದೇವಿ ಕೋಟೆ ದೇವಸ್ಥಾನಕ್ಕೆ ಹೋಗುತ್ತಿರುವರು. ದೇವರ ದರ್ಶನವಾದಮೇಲೆ ಅವರು ನಮ್ಮನ್ನೆಲ್ಲ ವಿಚಾರಿಸಿಕೊಳ್ಳುವರು. ನಮ್ಮ ಕುಂದು ಕೊರತೆಗಳನ್ನು ಕೇಳಿ ಪರಿಹಾರವನ್ನೂ ಹೇಳುವರು. ಅವರ ದರ್ಶನಕ್ಕಾಗಿಯೇ ನಾವೆಲ್ಲಾ ಕಾಯುತ್ತಿದ್ದೀವಿ! ಈ ಸಂಭ್ರಮವೆಲ್ಲ ಅವರಿಗಾಗಿಯೇ ! ಆಗೋ ಬಂದೇಬಿಟ್ಟರು ನಮ್ಮ ರಾಜಕುಮಾರಿ!" ವಿವರ ಹೇಳಿದವ ಸಮೀಪಿಸುತ್ತಿದ್ದ ಪಲ್ಲಕಿಯನ್ನು ಕುರಿತು ಧಾವಿಸಿದ. 
ನೀಲಕೇಶಿ ಆ ಮೆರವಣಿಗೆಯೊಂದಿಗೆ ತಾನೂ ದೇವಸ್ಥಾನಕ್ಕೆ ಹೋದ. ದೇವರ ಪೂಜೆ ಮುಗಿಸಿದ ರಾಜಕುಮಾರಿ ಪ್ರಜೆಗಳೊಂದಿಗೆ ಕಲೆತು ಬೆರೆತು ಸಂತೋಷದಿಂದ ಮಾತನಾಡಿಸಿದಳು. ಕೆಲವರಿಗೆ ಸಾಂತ್ವನವನ್ನೂ ಕೆಲವರಿಗೆ ಸಲಹೆಗಳನ್ನೂ ಕೆಲವರಿಗೆ ಪ್ರೋತ್ಸಾಹವನ್ನೂ ನೀಡಿದಳು. 
" ಪ್ರಜೆಗಳಲ್ಲಿ ಪ್ರೀತಿ ವಾತ್ಸಲ್ಯ! ಕಷ್ಟಗಳಿಗೆ ಒಂದೇ ಕ್ಷಣದಲ್ಲಿ ಯೋಚಿಸಿ ಪರಿಹಾರ ನೀಡಬಲ್ಲ ಬುದ್ಧಿವಂತಿಗೆ! ನಮ್ಮ ಅರಸರಿಗೆ ನಮ್ಮ ರಾಜಕುಮಾರಿಗಿಂತ ಬೇರೆ ಮಂತ್ರಿಗಳು ಬೇಕೇ? "
ರಾಜಕುಮಾರಿ ಅರಮನೆಗೆ ಹೊರಟು ಹೋದ ಮೇಲೆ ಎಲ್ಲೆಲ್ಲೂಇಂತಹ ಮಾತುಗಳೇ ಕೇಳಿಬಂದವು. 
ಮನಸ್ಸಲ್ಲೇ 'ನಿಜ!' ಎಂದುಕೊಂಡ ನೀಲಕೇಶಿ. 
ಅರಸ ಕೊಟ್ಟಿದ್ದ ಅವಕಾಶ ಮುಗಿಯಿತು. ಸಂಜೆ ದರ್ಬಾರು ಮಂಟಪದಲ್ಲಿ ಜನರು ನೆರೆದಿದ್ದರು. ನೀಲಕೇಶಿ ಸಹ ಉತ್ತರವೇನಿರಬಹುದು ಎಂದು ಅರಿಯಲು ತವಕಿಸುತ್ತ ನಿಂತಿದ್ದನು. 
ಅರಸರು ಬಂದು ಸಿಂಹಾಸನದಲ್ಲಿ ಕುಳಿತುಕೊಂಡರು. 
" ಪ್ರೀತಿಯ ಪ್ರಜೆಗಳೇ! ಎಷ್ಟೊಂದು ಮಂದಿ ಉತ್ತರ ಹುಡುಕಿ ತಂದಿರುವಿರಿ? "
" ಮಹಾಪ್ರಭು! ಇಗೋ ನೋಡಿ ನೀಲಮಣಿಗಳು! ಪ್ರಕಾಶವಾದ ನೀಲಮಣಿಗಳು! ಬೆಟ್ಟದ ಬುಡದಲ್ಲಿ  ಅಗೆದು ತಂದ ನಮ್ಮೂರ ನೀಲಮಣಿಗಳು! "
ಬಲಿಷ್ಠ ಯುವಕ ತನ್ನ ಕೈಯಲ್ಲಿದ್ದ ಮೊಟ್ಟೆ ಗಾತ್ರದ ನೀಲಮಣಿಗಳನ್ನು ಪ್ರದರ್ಶಿಸಿದ. 
" ಭಲೇ! ನಿನ್ನ ಯತ್ನಕ್ಕೆ ಅಭಿನಂದನೆಗಳು! ಆದರೆ ನಾನು ಕೇಳಿದ್ದು ಕೈಗೆ  ಸಿಗಲಾರದ ಮಣಿಗಳನ್ನ ಅಲ್ಲವೇ?" ಎನ್ನುತ್ತ ನಕ್ಕರು ಅರಸರು. 
" ಮಹಾಸ್ವಾಮಿ! ಕೈಗೆ ಸಿಗಲಾರದ ಹೊಳೆಯುವ ಮಣಿಗಳು! ನೀಲಿ ಆಕಾಶದಲ್ಲಿರುವ ಚಂದ್ರ ಸೂರ್ಯರು! " ಎಂದು ತನ್ನ ಉತ್ತರ ನೀಡಿದ ಓರ್ವ ಚತುರ. 
" ನಾನು ಕೇಳಿದ್ದು ನೀಲಿ ಆಕಾಶದ ಮಣಿಗಳನ್ನಲ್ಲ ಸ್ವಾಮೀ. ನೀಲಿ ಮಣಿಗಳನ್ನ! ನನ್ನ ಸವಾಲನ್ನು ಯಾರೂ ಗಮನದಿಂದ ಕೇಳಿಲ್ಲ ಅನ್ನಿಸುತ್ತಿದೆ!" 
ಅರಸರು ನಕ್ಕಾಗ ಕೂಡಿದ್ದ ಪ್ರಜೆಗಳೆಲ್ಲ ನಕ್ಕರು. ಅರಸರಪಕ್ಕದಲ್ಲಿ ಆಸೀನಳಾಗಿದ್ದ ರಾಜಕುಮಾರಿಯೂ ನಕ್ಕಳು. 
" ಸರಿ! ನಾಳೆ ಮತ್ತೊಂದು ಸವಾಲಿನೊಂದಿಗೆ ದರ್ಬಾರಿಗೆ ಬರುತ್ತೇನೆ! ತಯಾರಾಗಿರಿ!" ಬೇಸರದಿಂದ ನುಡಿದು ಎದ್ದೇಳಲು ಹೊರಟರು ಅರಸರು. ರಾಜಕುಮಾರಿಯೂ ಎದ್ದಳು. 
ನೀಲಕೇಶಿ ರಾಜಕುಮಾರಿಯತ್ತ ಒಮ್ಮೆ ನೋಡಿದ. ತಲೆಯಲ್ಲಿ ಮಿಂಚಿನಂತೆ ಏನೋ ಹೊಳೆಯಿತು. 
" ಮಹಾಪ್ರಭು! ಉತ್ತರ ಹೇಳಲು ನನಗೊಂದು ಅವಕಾಶ ಕೊಡಿ ಮಹಾಪ್ರಭು! " ಉತ್ಸಾಹದಿಂದ ಕೂಗಿಯೇಬಿಟ್ಟ ನೀಲಕೇಶಿ. 
ಏಳಲು ಹೋದ ಅರಸರು ಮತ್ತೆ ಕುಳಿತರು. 
" ಮಹಾರಾಜ!
ಕಣ್ಣಾರ ಕಾಣಬಲ್ಲದ್ದು!
ಕೈಗೆ ಸಿಗಲಾರದ್ದು!
ಅತಿ ಪ್ರಕಾಶವಾದದ್ದು!
ಆ ಎರಡು ನೀಲ ಮಣಿಗಳು, ತಮಗೆ ಅತ್ಯಂತ ಪ್ರಿಯವಾದ ರಾಜಕುಮಾರಿಯವರ ಎರಡು ಕಣ್ಣುಗಳು! "
ನೀಲಕೇಶಿ ಹೇಳಿ ಮುಗಿಸಿದ. ಇಡೀ ದರ್ಬಾರು ಮಂಟಪದಲ್ಲಿ  ನಿಶ್ಯಬ್ದ ಮನೆಮಾಡಿತು.
ಕೂಡಿದ್ದವರ ಮನಗಳಲ್ಲಿ ತಳಮಳ. ರಾಜಕುಮಾರಿಯ ಬಗ್ಗೆ ಮಾತನಾಡಲು ದುಡುಕಿದ ಇವನ ಗತಿ ಏನಾಗುವುದೋ?
" ಭಲೇ! ಭೇಷ್! ಸರಿಯಾದ ಉತ್ತರವನ್ನೇ ಕೊಟ್ಟಿರುವೆ ಆಗಂತುಕನೇ! ನಿನ್ನ ಸೂಕ್ಷ್ಮವಾದ ವೀಕ್ಷಣೆಗೆ ನನ್ನ ಅಭಿನಂದನೆಗಳು! ನನ್ನ ಪ್ರಜೆಗಳನ್ನು ಏನನ್ನಲಿ? ಪ್ರತಿ ಶುಕ್ರವಾರವೂ ನೀವೆಲ್ಲ   ರಾಜಕುಮಾರಿಯನ್ನು ನೋಡುತ್ತಲೇ ಇರುವಿರೀ.  ಅವರ ಹೆಸರಿನಲ್ಲೇ ಉತ್ತರ ಇದ್ದರೂ ಅದು ನಿಮಗೆ ಹೊಳೆಯಲಿಲ್ಲ.  ನನ್ನ ಸವಾಲನ್ನು  ಅರ್ಥಮಾಡಿಕೊಳ್ಳುವ ಬುದ್ಧಿ ನಿಮಗಿಲ್ಲ! ಅತ್ಯಂತ ಸುಭಿಕ್ಷದಿಂದಲೂ ಕೇಡು ಆಗಬಹುದು ಎಂದು ಇಂದು ನನಗೆ ಅರ್ಥವಾಯಿತು. ಯಾವ ಕಷ್ಟವನ್ನೂ ಅನುಭವಿಸದೇ, ಯಾವುದಕ್ಕಾಗಿಯೂ ಪರಿಶ್ರಮಪಡದೆ ಬಾಳುತ್ತಿರುವುದರಿಂದ ನಿಮ್ಮ ಅರಿವೂ ಕೂಡ ಕೆಲಸಮಾಡದೆ ಮಂಕುಬಡಿದುಹೋಗಿದೆ! ನಿಮ್ಮ ಭುದ್ದಿಯ ವಿಕಾಸಕ್ಕಾಗಿಯೇ ರಾಜಕುಮಾರಿಯ ಸಲಹೆಯಂತೆ ನಾನು ಪದೇ ಪದೇ ನಿಮಗೆ ಸವಾಲು ಒಡ್ಡಲು ಶುರುಮಾಡಿದೆ! ನನ್ನ ಸವಾಲನ್ನು ಅರ್ಥಮಾಡಿಕೊಂಡು ತನ್ನ ಚುರುಕು ಭುದ್ಧಿಯಿಂದಲೂ ಸೂಕ್ಷ್ಮ ವೀಕ್ಷಣೆಯಿಂದಲೂ ಸರಿಯಾದ ಉತ್ತರವನ್ನಿತ್ತ ಈ ಯುವಕನ ಸಹಾಯದಿಂದ ನಿಮ್ಮೆಲ್ಲರ ಬುದ್ಧಿ ವಿಕಾಸವಾಗಬೇಕು!"
ಉದ್ದವಾದ ಭಾಷಣವನ್ನು ಮಾಡಿದ ಅರಸರು " ಯುವಕನೇ ! ನಿನ್ನ ಹೆಸರೇನು ?" ಎಂದರು.
ನೀಲಕೇಶಿ ವಿನಯದಿಂದ ತನ್ನ ಪರಿಚಯ ಮಾಡಿಕೊಂಡ.
" ಇಂದು ನಮ್ಮ ಊರಿಗೆ ಅದೃಷ್ಟ ಖುಲಾಯಿಸಿತು. 'ಮಂಕೂರು' ಎಂಬ ಹೆಸರನ್ನು ರದ್ದು ಪಡಿಸುತ್ತೇನೆ. ಪುನಃ  ನಮ್ಮ ಊರನ್ನು 'ಪ್ರಕಾಶಪಟ್ಟಣ' ವೆಂದೇ ಪ್ರಕಟಪಡಿಸುತ್ತೇನೆ. ಪ್ರಕಾಶಪಟ್ಟಣಕ್ಕೆ ನೀಲಕೇಶಿಯೇ  ಮಹಾಮಂತ್ರಿಗಳಾಗಿರುತ್ತಾರೆ !"



ಅರಸರು ಮಾತು ಮುಗಿಸಿದಾಗ ಪ್ರಜೆಗಳು ಮಾಡಿದ ಜಯಘೋಷ  ಆಕಾಶವನ್ನೇ ಮುಟ್ಟಿತು.
ನೀಲಕೇಶಿ ವಿನಯದಿಂದ ತಲೆ ಬಾಗಿ ಪದವಿ ಸ್ವೀಕರಿಸಿದ. ಬಹಳ ಕಾಲದವರೆಗೆ  ಪ್ರಕಾಶಪಟ್ಟಣಕ್ಕೆ ಮಂತ್ರಿಯಾಗಿದ್ದು ಸಂತೋಷದಿಂದ ಸೇವೆ ಸಲ್ಲಿಸಿದ. ಬಲಶಾಲಿಗಳಾಗಿದ್ದ ಪ್ರಜೆಗಳನ್ನು ಬುದ್ಧಿಶಾಲಿಗಳನ್ನಾಗಿಯೂ ಪರಿವರ್ತಿಸಿದ. 

-----------------------------------------------------------------------------------------------------------------

No comments:

Post a Comment