Tuesday, May 22, 2018

ಮತ್ಸ್ಯಕುಮಾರಿಯ ಚಾತುರ್ಯ - Clever fish Matsyakumari

ಮತ್ಸ್ಯಕುಮಾರಿಯ ಚಾತುರ್ಯ


ಪವಿತ್ರವಾದ ತುಂಗಭದ್ರಾ ನದಿಯಲ್ಲಿ ವಾಸಿಸುತ್ತಿದ್ದ ದಪ್ಪ ದಪ್ಪ ಮೀನುಗಳೊಂದಿಗೆ ಮತ್ಸ್ಯಕುಮಾರಿ ಎಂಬ ಬಹು ಸುಂದರವಾದ ಒಂದು ಮೀನು ಇತ್ತು. ಬಂಗಾರದ ಮೈ ಬಣ್ಣ, ರತ್ನದಂತೆ ಹೊಳೆವ  ಕಣ್ಣುಗಳು, ಗುಲಾಬಿಯಂತಹ ತುಟಿಗಳು ಎಲ್ಲವೂ ಕೂಡಿ ಸೌಂದರ್ಯದೇವತೆಯಂತೆ ಕಂಡಿತು.
" ನಾನೇ ಈ ನದಿಯ ಸೌಂದರ್ಯ ರಾಣಿ! '' ಎನ್ನುತ್ತ ನೀರಿನಲ್ಲಿ ಕುಣಿದು ಕುಪ್ಪಳಿಸಿಸುತ್ತಿತ್ತು. ತನ್ನ ಸೌಂದರ್ಯವನ್ನು ಹೊರ ಪ್ರಪಂಚಕ್ಕೆ ತೋರಿಸಿಲು ಮತ್ಸ್ಯಕುಮಾರಿಗೆ ಬಹಳ ಇಷ್ಟ. ಹಾಗಾಗಿ ನೆಗೆದು ನೀರಿನ ಮೇಲೆ ಬಹಳ ದೂರದವರೆಗೂ ಹಾರಿ ಹೋಗಿ ಮತ್ತೆ ನದಿಯೊಳಕ್ಕೆ 'ಡುಬುಕ್' ಎಂದು ಜಿಗಿಯುತ್ತಿತ್ತು.
ನದಿಯಲ್ಲಿದ್ದ ಇತರ ಮೀನುಗಳಿಗೆ ಮತ್ಸ್ಯಕುಮಾರಿಯ ಈ ವರ್ತನೆ ಚಿಂತೆಯನ್ನು ಉಂಟುಮಾಡಿತು.
" ಮತ್ಸ್ಯಕುಮಾರಿ! ನೀನು ಬಹಳ ರೂಪಾವತಿಯೇ ಹೌದು. ಆದರೆ ಅದಕ್ಕಾಗಿ ಕುಣಿದು ಕುಪ್ಪಳಿಸಿ ಪ್ರಪಂಚಕ್ಕೆಲ್ಲ ತೋರಿಸಿಕೊಳ್ಳುವುದು ಸರಿಯಲ್ಲ. ಅದರಿಂದ ನಿನಗೆ ಅಪಾಯವಾಗಬಹುದು." ಎಂದು ಬುದ್ದಿವಾದ ಹೇಳಿದವು. ಆದರೆ ಮತ್ಸ್ಯಕುಮಾರಿ ಈ ಮಾತನ್ನೆಲ್ಲ ಲಕ್ಷಿಸಲೇ ಇಲ್ಲ. " ನನ್ನ ಸೌಂದರ್ಯ ಪ್ರದರ್ಶನ ನನ್ನ ಹಕ್ಕು! ನನ್ನ ಸಂತೋಷ ನನ್ನ ಹಾಕು!" ಎಂದು ವಾದ ಮಾಡಿತು.
ಒಮ್ಮೆ ನದಿಯ ದಡದಲ್ಲಿದ್ದ ಮರದಲ್ಲಿ ಕುಳಿತಿದ್ದ ವಿಚಿತ್ರ ಹಕ್ಕಿಯೊಂದು ಮತ್ಸ್ಯಕುಮಾರಿ ನೀರಿನ ಮೇಲೆ ಜಿಗಿದಾಡುತ್ತಿದ್ದದ್ದನ್ನು ಕಂಡಿತು. ' ಈ ಮೀನು ಸುಂದರವಾಗಿದೆ! ಪುಷ್ಟಿಯಾಗಿದೆ! ಸವಿಯಾಗಿಯೂ ಇರಬೇಕು! ' ಎಂದುಕೊಂಡಿತು.
'ನೀರಿನ ಮೇಲೆ ಸದಾ ನೆಗೆದಾಡುತ್ತಿದೆ! ಸುಲಭವಾಗಿ ಸಿಕ್ಕಿಯೂ ಬೀಳುತ್ತದೆ! ಮೊದಲು ಅದರೊಂದಿಗೆ ಸ್ನೇಹ ಬೆಳೆಸಬೇಕು!' ಹೀಗೆ ಯೋಚಿಸಿದ ಹಕ್ಕಿ ತಕ್ಕ ಒಂದು ಸಂದರ್ಭದಲ್ಲಿ ಮತ್ಸ್ಯಕುಮಾರಿಯೊಂದಿಗೆ ಮಾತನ್ನು ತೆಗೆಯಿತು. 
" ಓ ಸುಂದರಿ! ನಿನ್ನ ಉತ್ಸಾಹ ನೋಡಿ ನನಗೆ ಬಲು ಖುಷಿಯಾಯಿತು! ನಿನ್ನ ಹೆಸರೇನು? " ಎಂದು ಪ್ರಶ್ನಿಸಿತು ಹಕ್ಕಿ.
" ಹಾಗೋ? ಬಹಳ ಧನ್ಯವಾದಗಳು! ನನ್ನ ಹೆಸರು ಮತ್ಸ್ಯಕುಮಾರಿ! ನೀನು ಯಾರು? ನಿನ್ನ ಹೆಸರೇನು?" ಎಂದು ಮರು ಪ್ರಶ್ನೆ ಹಾಕಿತು ಮತ್ಸ್ಯಕುಮಾರಿ.
 " ನನ್ನ ಹೆಸರು ಪಕ್ಷಿರಾಜ! ನಾನು ದೇಶವಿದೇಶಗಳನ್ನೆಲ್ಲ ಸುತ್ತಾಡಿಕೊಂಡು ಇಲ್ಲಿಗೆ ಬಂದೆ. ಆದರೆ ಎಲ್ಲೂ ನಿನ್ನಂಥ ಸುಂದರಿಯನ್ನು ನಾನು ಕಂಡಿಲ್ಲ!" ಎಂದು ಪೂಸಿ ಮಾಡಿತು ಹಕ್ಕಿ.
ಪ್ರತಿದಿನ ಹೀಗೇ ಮಾತುಕಥೆ ನಡೆಸುತ್ತ ಪಕ್ಷಿರಾಜ ಮತ್ಸ್ಯಕುಮಾರಿಯೊಂದಿಗೆ ಸ್ನೇಹ ಬೆಳೆಸಿತು.
ಇತರ ಮೀನುಗಳಿಗೆಲ್ಲ ಮತ್ಸ್ಯಕುಮಾರಿಯ ಬಗ್ಗೆ ಚಿಂತೆ ಕಾಡತೊಡಗಿತು.
" ಮತ್ಸ್ಯಕುಮಾರಿ! ಪಕ್ಷಿಗಳು ಎಂದಿಗೂ ಮೀನುಗಳ ವೈರಿಗಳು. ಈ ಸ್ನೇಹ ಬೇಡ!" ಎಂದು ಎಚ್ಚರಿಸಿದವು.
" ಸುಮ್ಮನೆ ಯಾಕೆ ಹೆದರುವಿರೀ? ಪಕ್ಷಿರಾಜ ಜಗವನ್ನೆಲ್ಲ ಸುತ್ತಾಡಿಕೊಂಡು ಬಂದಿದೆ. ವಿದೇಶಗಳ ಬಗೆ ಸ್ವಾರಸ್ಯಕರವಾದ  ಕಥೆಗಳನ್ನು ಹೇಳುತ್ತದೆ! ಕೇಳುವುದಕ್ಕೆ ಬಲು ಖುಷಿಯಾಗಿದೆ! " ಎಂದು ಮತ್ಸ್ಯಕುಮಾರಿ ತನ್ನ ಬಂಧು ಬಳಗದ ಮೀನುಗಳನ್ನು ಸಮಾಧಾನ ಮಾಡಿತು.
ಅಂದು  ಪಕ್ಷಿರಾಜ ಹೇಗಾದರೂ ಮಾಡಿ ಮತ್ಸ್ಯಕುಮಾರಿಯನ್ನು ಹಿಡಿದು ನುಂಗಿಬಿಡಬೇಕು ಎಂದು ನಿರ್ಧರಿಸಿತು.
" ಮತ್ಸ್ಯಕುಮಾರಿ! ದಿನಾಲು ವಿದೇಶೀ ಕಥೆಗಳನ್ನೆಲ್ಲ ಕೇಳಿಸಿಕೊಳ್ಳುತ್ತೀಯ. ನಿನಗೆ ವಿದೇಶಕ್ಕೆ ಹೋಗಲು ಇಷ್ಟವಿಲ್ಲವೇ? " ಎಂದು ಕೇಳಿತು ಪಕ್ಷಿರಾಜ.
" ಒಹೋ! ನನಗೂ ಇಷ್ಟವೇ! ಆದರೆ ಈ ನಮ್ಮ ತುಂಗಭದ್ರೆ ನದಿಯ ಹಾಗೆ ಅಲ್ಲಿ ನದಿಗಳಿರುತ್ತವೆಯೇ?"  ಎಂದು ಸಂಶಯದಿಂದ ಕೇಳಿತು ಮತ್ಸ್ಯಕುಮಾರಿ.
" ಓ! ಬೇಕಾದಷ್ಟು ಇವೆ! ಪ್ರಪಂಚದಲ್ಲೆಲ್ಲ ಅತ್ಯಂತ ಹೆಚ್ಚು ಜಲರಾಶಿಯಿಂದ ಕೂಡಿರುವ ಅತಿ ದೊಡ್ಡದಾದ ನದಿಯೊಂದು ಇದೆ. "
" ಆಹಾ! ಅಂತಹ ನದಿ ಎಲ್ಲಿದೆ ಪಕ್ಷಿರಾಜ?" ಎಂದು ಕುತೂಹಲದಿಂದ ಕೇಳಿತು ಮತ್ಸ್ಯಕುಮಾರಿ.
" ಕಡಲ ಸೀಮೆಗಳನ್ನು ದಾಟಿಕೊಂಡು ಹೋದರೆ, ದಕ್ಷಿಣ ಅಮೇರಿಕಾ ಎಂಬ ದೇಶ ಸಿಕ್ಕುತ್ತದೆ!  ಅಮೆಜಾನ್ ಎಂಬ  ಅದ್ಭುತವಾದ  ಅಖಂಡವಾದ ನದಿ ಆ ದೇಶದಲ್ಲಿದೆ! ನೀನು ಸರಿಯೆಂದರೆ ನಿನ್ನನ್ನು ನಾನು ಅಲ್ಲಿಗೆ ಕರೆದುಕೊಂಡು ಹೋಗುವೆ! " ಎಂದಿತು ಪಕ್ಷಿರಾಜ.
" ಹೇಗೆ ಕರೆದುಕೊಂಡು ಹೋಗುವೆ? " ಎಂದಿದು ಮತ್ಸ್ಯಕುಮಾರಿ.
" ಅದೇನು ಮಹಾ ಕಷ್ಟ? ನಿನ್ನನ್ನು ನನ್ನ ಈ ದೊಡ್ಡ ಕೊಕ್ಕಿನಿಂದ ಹಿಡಿದು ಎತ್ತಿಕೊಂಡು ಹಾರಿ ಹೋಗುವೆ! " ಮೀನು ತನ್ನ ಬಲೆಗೆ ಬಿತ್ತೆಂಬ ಸಂತೋಷವನ್ನು ಮರೆಮಾಚಿಕೊಂಡು ಹೀಗೆಂದಿತು ಪಕ್ಷಿರಾಜ.
" ಸರಿ ಹಾಗಾದರೆ! ನಾನು ಎಂದಿನಂತೆ ನೀರಿನ ಮೇಲೆ ಹಾರುತ್ತೇನೆ. ಆ ಸಮಯ ನನ್ನನ್ನು ಎತ್ತಿ ಹಿಡಿದುಕೊ!" ಎಂದಿತು ಮತ್ಸ್ಯಕುಮಾರಿ.
" ನಾನು ಸಿದ್ಧವಾಗಿದ್ದೇನೆ!" ಉತ್ಸಾಹದಿಂದ ಹೇಳಿತು ಪಕ್ಷಿರಾಜ.
ಮತ್ಸ್ಯಕುಮಾರಿ ಅತ್ತ ಇತ್ತ ಒಮ್ಮೆ ನೋಡಿತು. ನೀರಲ್ಲಿ ಮುಳುಗಿದ್ದ ಮೊಸಳೆಯೊಂದು ತನ್ನ ತಲೆಯನ್ನು ಮಾತ್ರ ಒಂದು ಬಂಡೆಯಮೇಲಿಟ್ಟು ಬಾಯನ್ನು ಅಗಲವಾಗಿ ತೆರೆದುಕೊಂಡು ಮಲಗಿತ್ತು. ಮತ್ಸ್ಯಕುಮಾರಿ ಛಂಗೆಂದು ನೀರಿನ ಮೇಲೆ ಜಿಗಿಯಿತು. ತೆರೆದಿದ್ದ ಮೊಸಳೆಯ ಬಾಯಿಯ ಮೂಲಕ ಈ ಬದಿಯಿಂದ ಆ ಬದಿಗೆ ಹಾರಿತು. ಪಕ್ಷಿರಾಜ ಮೀನನ್ನು ತಿನ್ನುವ ಆತುರ ತಡೆಯಲಾರದೆ ತರಾತುರಿಯಿಂದ ಮತ್ಸ್ಯಕುಮಾರಿಯನ್ನು ಹಿಂಬಾಲಿಸಿತು.
 ಮತ್ಸ್ಯಕುಮಾರಿ ಮಾಡಿದ ಗದ್ದಲದಿಂದ ಆಗತಾನೆ ಕಣ್ಣು ಬಿಡುತ್ತಿದ್ದ ಮೊಸಳೆ, ತನ್ನ ಬಾಯ ಮೂಲಕ  ತೂರಲೆತ್ನಿಸಿದ ಪಕ್ಷಿರಾಜನನ್ನು ಗಬಕ್ ಎಂದು ಹಿಡಿದುಕೊಂಡಿತು.
" ಮೋಸಗಾರ ಪಕ್ಷಿರಾಜನೇ! ನಿನ್ನ ಮೋಸಕ್ಕೆ ಸರಿಯಾದ ಶಾಸ್ತಿಯಾಯಿತು! ನೀರಿಲ್ಲದೆ ನಾನು ಬದುಕಲಾರೆ ಎಂಬುದು ನಿನಗೂ ಗೊತ್ತು! ಹಾಗಿರಲು ನಿನ್ನ ಕೊಕ್ಕಿನಲ್ಲಿ ನನ್ನನ್ನು ಎತ್ತಿ ಹಿಡಿದುಕೊಂಡು ಹಾರಿಹೋಗುವೆ ಎಂದೆಯಲ್ಲ! ಆವಾಗಲೇ ನಿನ್ನ ಮೋಸ ಬಯಲಾಯಿತು. ಆದ್ದರಿಂದಲೇ ಮೊಸಳೆ ಬಾಯಿಯ ಮೂಲಕ ತೂರಿದೆ. ನಿನ್ನ ಮೋಸವನ್ನು ನನ್ನ ಬುದ್ಧಿಯಿಂದ  ಗೆದ್ದೇ!" ಎಂದಿತು ಮತ್ಸ್ಯಕುಮಾರಿ.
ಮತ್ಸ್ಯಕುಮಾರಿಯ ಬಗ್ಗೆ ಕಾಳಜಿ ವಹಿಸಿದ್ದ ಇತರ ಮೀನುಗಳೆಲ್ಲ ಈಗ ಮತ್ಸ್ಯಕುಮಾರಿಯ ಚಾತುರ್ಯವನ್ನು  ವಿಜೃಂಭಣೆಯಿಂದ ಕೊಂಡಾಡಿದವು!
-----------------------------------------------------------------------------------------------------

No comments:

Post a Comment