Saturday, April 27, 2019

'ಮೀಸೆಯರ ಗಂಡ' / MASTER OF THE MUSTACHIOED

'ಮೀಸೆಯರ ಗಂಡ'



ದೂರದ ಪಯಣದಿಂದ ದಣಿದು ಮನೆಗೆ ಆವಾಗಷ್ಟೇ ಹಿಂದಿರುಗಿದ್ದನು ಹೊನ್ನಮಾರಯ ನಾಯಕ. ಕುದುರೆಯನ್ನು ಲಾಯದಲ್ಲಿ ಕಟ್ಟಿ ಅವನು ಹೊಸಿಲು ಮೆಟ್ಟಿದಾಗ ಅಮ್ಮನ ಧ್ವನಿ ಗಟ್ಟಿಯಾಗಿ ಕೇಳಿಸಿತು.
" ಊಟಕ್ಕೆ ಬರುವಿರೋ ? ಇಲ್ಲ ದರ್ಪಣಸುಂದರಿಯಂತೆ ಕಾಲ ಕಾಲಕ್ಕೂ ಹಾಗೇ ನಿಂತಿರುವಿರೋ ? "
" ಬಂದೆ ! ಬಂದೆ ! ತಾಳು! ಈ ಮೀಸೆ ಯಾಕೋ ಮೊಂಡಾಟ ಮಾಡುತ್ತಿದೆ  .. " ಅಪ್ಪಯ್ಯ ಒರಟು ಧ್ವನಿಯಲ್ಲಿ ಉತ್ತರಿಸಿದ್ದೂ ಕೇಳಿಸಿತು.


                                                                                   
 ದರ್ಪಣಸುಂದರಿ ಒಯ್ಯಾರ ಮತ್ತು ಸೌಂದರ್ಯದ ಪರಮಾವಧಿ ಎಂಬ ವಿಷಯ ಹೊನ್ನಮಾರಯನಿಗೆ ತಿಳಿದೇ ಇತ್ತು ! ಅಪ್ಪಯ್ಯನೋ ಒರಟುತನದ ಪರಮಾವಧಿ! ಇವರಿಬ್ಬರಿಗೂ ಎಲ್ಲಿಂದ ಎಲ್ಲಿಯ  ಹೋಲಿಕೆ ? ಯೋಚಿಸುತ್ತಲೇ ಒಳಗೆ ಬಂದ ಹೊನ್ನನಿಗೆ ಅಪ್ಪಯ್ಯ  ನಿಂತಿದ್ದ ಬಂಗಿ ಕಂಡು ನಗು ಉಕ್ಕಿ ಬಂದಿತು. ಒಂದು ಕೈಯಲ್ಲಿ ಕನ್ನಡಿ ಹಿಡಿದು ಮುಖ ನೋಡಿಕೊಳ್ಳುತ್ತ, ಮತ್ತೊಂದು ಕೈಯಿಂದ ಮೊದಲೇ ಚೂಪಾಗಿದ್ದ ತನ್ನ ಮೀಸೆಯನ್ನ ಇನ್ನಷ್ಟು ತಿರುವುತ್ತಿದ್ದ ಅಪ್ಪಯ್ಯ ದರ್ಪಣ ಸುಂದರನೇ ಹೌದಲ್ಲವೇ ?
ಅಪ್ಪಯ್ಯನ ಬೆನ್ನ ಹಿಂದೆ ನಿಂತು ನೋಡಿದಾಗ ತಿದ್ದಿ ತೀಡಿ ತಿರುವಿದ್ದ ಅವರ ಜೊಂಡು ಮೀಸೆಯ ಚೂಪಾದ ತುದಿಗಳು ಅವರ ಮುಖವನ್ನೂ ಮೀರಿಕೊಂಡು ಎರಡು ಕಡೆಯೂ ಇಣುಕಿ ನೋಡುತ್ತಿದ್ದವು. ಅದನ್ನು ಕಂಡು ಅವನಿಗೆ ಹೆಮ್ಮೆಯೋ ಹೆಮ್ಮೆ ! 'ಮೀಸೆಯರ ಗಂಡ' ಎಂಬ ಬಿರುದು ಅಪ್ಪಯ್ಯನಿಗಾಗಿಯೇ ಸೃಷ್ಟಿಸಲ್ಪಟ್ಟಿತೋ ಎನ್ನಿಸಿತು !

" ಯಾಕಮ್ಮ ಅಪ್ಪಯ್ಯನನ್ನು ಛೇಡಿಸುತ್ತಿರುವೆ ? " ನಗುತ್ತಲೇ ಅಮ್ಮನನ್ನು ಖಂಡಿಸಿದ ಹೊನ್ನ.
ದಿನ ನಿತ್ಯ ಒಂದು ಬಾರಿಯಾದರೂ ಅಪ್ಪಯ್ಯನ ಮೀಸೆ ಆರೈಕೆಯ ಬಗ್ಗೆ ರಗಳೆ ತೆಗೆಯದಿದ್ದರೆ ಅಮ್ಮನಿಗೆ  ತಿಂದ ಊಟ ಅರಗುವುದಿಲ್ಲ!
" ಬಂದೆಯಾ ? ಬಾರಪ್ಪ ! ಬಾ ! ಅಪ್ಪನಿಗೆ ವಕಾಲತ್ತು ವಹಿಸಲು ನೀನು ಬರಬೇಕಿತ್ತು ನೋಡು! ಅದೇನು ಮೀಸೆಯೋ ಏನೋ ? ಅದೇ ಒಂದು ಗೀಳಾಗಿಬಿಟ್ಟಿದೆ ಅವರಿಗೆ !" ಅಮ್ಮ ಬೇಸರಿಸಿಕೊಂಡಳು.
" ಅಮ್ಮ ! ಅಪ್ಪಯ್ಯನ  ಮೀಸೆಯ ಬಗ್ಗೆ ಹಾಗೆಲ್ಲ ಅನ್ನ ಬೇಡ ! ದಕ್ಷಿಣ ದೇಶದಲ್ಲೇ ಅತ್ಯಂತ ಬಲಿಷ್ಠ ಸಾಮ್ರಾಜ್ಯಾಧಿಪತಿಯಾದ ವೀರ ಬಲ್ಲಾಳರ ಆಸ್ಥಾನದಲ್ಲಿ 'ಮೀಸೆಯರ ಗಂಡ' ಬಿರುದನ್ನು ಅಪ್ಪಯ್ಯ ಪಡೆದಿರಿವುದು ಸಾಮಾನ್ಯವಾದ ವಿಷಯವೇನು ? ಅದರ ಮೌಲ್ಯ ತಿಳಿಯದೆ ಅಂತಹ ಮೀಸೆಯ ಆರೈಕೆಯನ್ನ ಗೀಳು ಅನ್ನಬಹುದೆ ನೀನು? " ನಾಟಕೀಯವಾಗಿ ನುಡಿದ ಹೊನ್ನ.
" ಅದರ ಮೌಲ್ಯ ತಿಳಿಯದೆಯೇ ನಾನು ವರ್ಷಾನುಗಟ್ಟಲೆ ಅದರ ಆರೈಕೆ ಮಾಡಿ ಬಂದಿರುವೆ ? ಮದುವೆಯಾಗಿ ನನ್ನನ್ನ ಮನೆತುಂಬಿಸಿಕೊಂಡಾಗ ನನ್ನ ಅತ್ತೆ - ಅದೇಕಣಪ್ಪಾ ನಿಮ್ಮಜ್ಜಿ - ನನಗೆ ಹೇಳಿದ ಮೊದಲ ಮಾತು ಏನು ಗೊತ್ತೇ ? ' ಲಕುಮಿ! ಇವತ್ತಿನಿಂದ ನನ್ನ ಮಗನ ಮೀಸೆಯನ್ನ ನಿನಗೆ ಒಪ್ಪಿಸಿದ್ದೀನಿ ! ಅದನ್ನ ಚೆನ್ನಾಗಿ ನೋಡಿಕೋ !' " ಅಮ್ಮ ಅಜ್ಜಿಯನ್ನು ಅನುಕರಿಸಿ ಆಡಿದ ಮಾತು ಕೇಳಿ ಕಿಸಕ್ಕನೆ ನಕ್ಕ ಹೊನ್ನ.
" ಇದು ತಮಾಷೆಯ ಮಾತಲ್ಲಪ್ಪ ! ಸತ್ಯ ಸಂಗತಿ ! ಅವತ್ತಿನಿಂದ ಅವರ ಮಾತನ್ನ ವೇದವಾಕ್ಯವಾಗಿ ತಿಳಿದು ನಿನ್ನ ಅಪ್ಪಯ್ಯನ ಮೀಸೆ ಆರೈಕೆಗೆ ಬೇಕಾದದ್ದನ್ನೆಲ್ಲ ಮಾಡಿಕೊಂಡು ಬಂದಿದ್ದೀನಿ. ಇನ್ನೂ ಹೇಳುವುದಾದರೆ  ನನ್ನ ಜೀವಮಾನದಲ್ಲಿ ನಿನ್ನ ಆರೈಕೆ ಮಾಡಿದ್ದಕ್ಕಿಂತ ನಿಮ್ಮಪ್ಪನ ಮೀಸೆ ಆರೈಕೆ ಮಾಡಿದ್ದೇ ಹೆಚ್ಚು!"

" ಸರಿ ಸರಿ ! ಮುಗೀತೋ ನಿನ್ನ ಮೀಸೆ ಪುರಾಣ ? " ಎನ್ನುತ್ತ ಕನ್ನಡಿಯನ್ನು ಬದಿಗಿಟ್ಟರು ಚಿಕ್ಕ ಬಯಿರೆಯ ನಾಯಕರು.
" ನನ್ನ ಮೀಸೆ ಪುರಾಣ ಅಲ್ಲರೀ ! ನಿಮ್ಮ ಮೀಸೆ ಪುರಾಣ ! " ಎಂದ ಅಮ್ಮ, ತಂದೆ ಮಗ ಇಬ್ಬರಿಗೂ ಊಟ ಬಡಿಸಲು ಅಣಿಯಾದಳು.
" ಅಮ್ಮ ! ದರ್ಪಣ ಸುಂದರಿ, ಶುಕಭಾಷಿಣಿ , ವೀರಾಯೋಚಿತೆ , ಕಪಿಕುಪಿತೆ ಎಂದು ಅನೇಕ ಶಿಲಾಬಾಲಿಕೆಯರ ಬಗ್ಗೆ ಯಾವಾಗಲೂ ಹೇಳುತ್ತಿರುತ್ತಿ! ನನಗೆ ಅಂತಹ ಸುಂದರವಾದ ಕೆತ್ತನೆಗಳನ್ನೆಲ್ಲ ನೋಡಬೇಕು ಅನ್ನಿಸುತ್ತದೆ ! " ಕೈಕಾಲು ತೊಳೆದುಕೊಂಡು ಬಂದ ಹೊನ್ನ ಆಸೆಯಿಂದ ನುಡಿದನು.

" ದ್ವಾರಸಮುದ್ರ - ನಮ್ಮ ರಾಜಧಾನಿ - ಅದೆಷ್ಟು ಸುಂದರವಾದ ಐಶ್ವರ್ಯವಂತ ಪಟ್ಟಣ ! ಅಂತಹ ಊರನ್ನ ಲೂಟಿ ಮಾಡಿ ಐಶ್ವರ್ಯವನ್ನೆಲ್ಲ ದೋಚಿಕೊಂಡದ್ದಲ್ಲದೇ  ಊರನ್ನೇ ನುಚ್ಚು ನೂರು ಮಾಡಿ ಹೋದ ಆ ಸುಲ್ತಾನನ ಸೇನಾಪತಿ ಮಲ್ಲಿಕ್ ಕಾಫುರ್ ! ಸಧ್ಯ ! ವೇಲಾಪುರಿಯು ಆತನ ವಕ್ರ ದೃಷ್ಟಿಗೆ ಸಂಪೂರ್ಣ ಬಲಿಯಾಗಲಿಲ್ಲ ! ಅದೇ ನಮ್ಮ ಪುಣ್ಯ ! ಹೋಗೋಣ ! ಎಂದಾದರೊಮ್ಮೆ ನಮ್ಮ ಊರಿಗೆ ಹೋಗೋಣ ! ಹೊಯ್ಸಳೇಶ್ವರನ ಗುಡಿಗೆ ಹೋಗೋಣ ! ಹಾಗೆಯೇ ನಮ್ಮ ಹಿಂದಿನ ರಾಜಧಾನಿ ವೇಲಾಪುರಿಯಲ್ಲಿರೋ ಚೆನ್ನಕೇಶವನ ಗುಡಿಯನ್ನೂ ಅಲ್ಲಿಯ ಶಿಲಾಬಾಲಿಕೆಯರನ್ನೂ ಕಂಡು ಬರೋಣ ! "  ಊಟ ಬಡಿಸುತ್ತಲೇ ನುಡಿದಳು  ಅಮ್ಮ.
" ದ್ವಾರಸಮುದ್ರವನ್ನು ಪುನರ್ನಿರ್ಮಾಣ ಮಾಡುವ ಯೋಚನೆ ಮಹಾರಾಜರಿಗೆ ಇದೆ. ಅಂತಹ ಕಾಲ ಬಂದರೆ ನಾವೆಲ್ಲಾ ನಮ್ಮ ಹಳೇ ಬೀಡಿಗೇ ಮರಳಿ ಹೋಗಬಹುದು. ಆದರೆ ಆ ಕಾಲ ಬರುವುದು ಯಾವಾಗ ಅನ್ನೋದು ಮಾತ್ರ ನಿಶ್ಚಯವಿಲ್ಲ ! ಅತ್ತ ದಿಲ್ಲಿ ಸುಲ್ತಾನ ! ಇತ್ತ ಮದುರೈ  ಸುಲ್ತಾನ ! ಇವರುಗಳ ನಡುವೆ ನಾಡಿನ ದಕ್ಷಿಣ ಬಾಗವನ್ನು ಅಖಂಡವಾಗಿ ಆವರಿಸಿಕೊಂಡಿರುವ, ಮಹಾರಾಜರು ಏಕೀಕರಿಸಿರುವ ಹೊಯ್ಸಳ  ಸಾಮ್ರಾಜ್ಯ ! ದಿಲ್ಲಿ ಸುಲ್ತಾನನ ಚಲನೆವಲನೆಗಳ ಮೇಲೆ ಕಣ್ಣಿಡಲು ಈ ಉಣ್ಣಾಮಲೆ ಪಟ್ಟಣ ತಕ್ಕ ವೀಕ್ಷಣಾಸ್ಥಳವಾಗಿದೆ ! ರಾಜ್ಯದ ರಕ್ಷಣೆಗಾಗಿ ಮಹಾರಾಜರು ಈ ಹೊಸ ರಾಜಧಾನಿಯಲ್ಲಿ ಕೇಂದ್ರೀಕರಿಸಿರುವುದು ಅಗತ್ಯ ! ಹಾಗಾಗಿ ಮಹಾ ಪಸಾಯಿತನಾದ ನಾನೂ ಇಲ್ಲೇ   ನೆಲಸಬೇಕಾದದ್ದು ಅನಿವಾರ್ಯವಾಯಿತು ! ಏನು ಮಾಡುವುದು ? " ಗಂಭೀರವಾಗಿ ನುಡಿದು ನಿಟ್ಟುಸಿರೆಳೆದರು ಅಪ್ಪಯ್ಯ.

 " ಅಪ್ಪಯ್ಯ ! ಮಾತು ಎಲ್ಲಿಂದೆಲ್ಲಿಗೋ ಹೋಯಿತು ! ಸಮಯ ಕೂಡಿಬಂದಾಗ ನಮ್ಮೂರಿಗೆ ಹೋದರಾಯಿತು! ಅದೆಲ್ಲ ಹಾಗಿರಲಿ ! ನಾನು ಊರಿಗೆ ಹೋಗಿ ಬಂದ ವಿಷಯದ ಬಗ್ಗೆ ನೀನು ಕೇಳಲೇ ಇಲ್ಲವಲ್ಲ ? " ಉತ್ಸಾಹದಿಂದ ವಿವರಿಸಲು ಹೊರಟ ಹೊನ್ನ.
" ನಿನ್ನ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಮಗನೆ ! ನೀನು ಹೇಳಬೇಕಾದದ್ದೆಲ್ಲವನ್ನೂ ನಾಳೆ ಮಹಾರಾಜರ ಮುಂದೆ ನೀನೇ ಹೇಳುವೆಯಂತೆ ! "   ಎಂದು ಮುಸಿನಕ್ಕರು ಅಪ್ಪಯ್ಯ.
" ನಾನೇ ? ಮಹಾರಾಜರ ಮುಂದೆಯೇ  ? ನಾಳೆಯೇ ? " ಬೆರಗಿನಿಂದ ಉಸಿರು ಕಟ್ಟಿದಂತಾಯಿತು ಹೊನ್ನನಿಗೆ.
" ಹೂಂ ಮತ್ತೆ ! ಮರಿ ಮೀಸೆ ಮೊಳೆತಾಗಿದೆ ! ಅರಮನೆಯಲ್ಲಿ ಉದ್ಯೋಗ ಮಾಡುವ ಯೋಚನೆ ಇದೆಯೋ ಇಲ್ಲವೋ ? "
ಹೊನ್ನನ ಮನಸ್ಸಲ್ಲಿ ಉತ್ಸಾಹ, ಕಾತರ, ಕುತೂಹಲ ಎಲ್ಲ ಒಟ್ಟಿಗೆ ಉದ್ಭವಿಸಿದವು.




" ನೋಡು ! ಪಯಣ ಮಾಡಿ ಬಂದಿದ್ದರಿಂದ ಮೀಸೆ ಎಲ್ಲ ಕೆದರಿ ಹೋಗಿದೆ !  ಅಮ್ಮನಿಗೆ ಹೇಳು!
ನಾಳೆ ಜೇನು ಮೇಣ ಕರಗಿಸಿ ಕೊಡುತ್ತಾಳೆ ! ಮೀಸೆಗೆ ಪೂಸಿ ಅಚ್ಚುಕಟ್ಟಾಗಿ ತಿದ್ದಿಕೊಂಡು ಹೊರಡಕ್ಕೆ ತಯಾರಾಗು ! ಎಲ್ಲಿಗೆ ಹೋದರೂ ಏನು ಮಾಡಿದರೂ ನಿನ್ನ ಮೀಸೆಯ ಮೇಲೆ ಸದಾ ಒಂದು ಕಣ್ಣು - ಅಲ್ಲ - ಕೈ ಇದ್ದೇ ಇರಬೇಕು ! ತಿಳಿಯಿತೇ ? " ಎಂದು ನುಡಿದು ಕೈ ತೊಳೆಯಲು ಎದ್ದರು ಅಪ್ಪಯ್ಯ .
ಅಮ್ಮ ಮತ್ತು ಹೊನ್ನ ಒಬ್ಬರ ಮುಖ ಒಬ್ಬರು ನೋಡಿಕೊಂಡು ಕಿರುನಗೆಯನ್ನು ಬೀರಿಕೊಂಡರು.


 ಉದ್ಯೋಗದ ಸಲುವಾಗಿ ಮಹಾರಾಜರನ್ನು ಭೇಟಿಯಾಗಲು ಹೊರಟಿರುವುದರಿಂದ ಮೊದಲು ಗುಡಿಗೆ  ಹೋಗಿ ಈಶ್ವರನನ್ನು ದರುಶನ ಮಾಡಿಕೊಂಡು ಹೋಗುವಂತೆ ಹೇಳಿದ್ದಳು ಅಮ್ಮ.
ಆದ್ದರಿಂದ ಅರುಣಾಚಲೇಶ್ವರನನ್ನು ದರುಶನ ಮಾಡಲು ತಂದೆ ಮಗ ಇಬ್ಬರೂ ತೆರಳಿದರು. ಶಿವ ಭಕ್ತರಾದ ವೀರ ಬಲ್ಲಾಳ ಮಹಾರಾಜರು ನಿರ್ಮಾಣ ಮಾಡಿದ್ದ ಗೋಪುರವನ್ನು ಕಂಡಾಗ ಚಿಕ್ಕ ಬಯಿರೆಯ ನಾಯಕರಿಗೆ ಮೈ ನವಿರೇಳಿತು ! ಊರವರೆಲ್ಲ 'ವೀರ ವೈಭೋಗ ವಲ್ಲಾಳ ಮಹಾರಾಜಾ ಗೋಪುರಮ್ ' ಎಂದೇ ಹೆಸರಿಸಿದ್ದ ಆ ಭವ್ಯವಾದ ಗೋಪುರದ್ವಾರದ ಮೂಲಕ ಗುಡಿಯನ್ನು ಪ್ರವೇಶಿಸಿದಾಗ ಅವರ ಮನಸ್ಸಲ್ಲಿ ಉಕ್ಕಿದ  ಭಯಭಕ್ತಿ ದೇವರನ್ನು ಕುರಿತೋ ಇಲ್ಲ ಮಹಾರಾಜರನ್ನು ಕುರಿತೋ ಎಂಬುದು ಗೊಂದಲವಾಗಿಯೇ ಇದ್ದಿತು !
'' ನಮ್ಮೂರ ಹೊಯ್ಸಳೇಶ್ವರ ದೇವಾಲಯವೂ ಹೀಗೆಯೇ  ಇರುತ್ತದೆಯೇ ಅಪ್ಪಯ್ಯ ? " ಆ ಭವ್ಯವಾದ ಗೋಪುರವನ್ನು ತಲೆ ಎತ್ತಿ ನೋಡುತ್ತ ಕುತೂಹಲದಿಂದ ಪ್ರಶ್ನಿಸಿದನು ಹೊನ್ನ.
" ಅದು ಬೇರೆಯೇ ಶೈಲಿ, ಇದು ಬೇರೆ ಶೈಲಿ ! ಆದರೆ ಭಕ್ತರಿಗೆ ಎಲ್ಲ ದೇವರೂ ಒಂದೇ ! ಒಂದು ವಿಷಯ ಮಾತ್ರ ಬಹಳ ವಿಸ್ಮಯಕಾರಿಯಾಗಿದೆ ನೋಡು ! " ಎಂದ ಅಪ್ಪಯ್ಯ ಹೊನ್ನನ ಕುತೂಹಲವನ್ನು  ಕೆಣಕುವಂತೆ ಅಲ್ಲಿಗೇ ಮಾತು ನಿಲ್ಲಿಸಿದರು.
" ಅದೇನು ವಿಷಯ ಹೇಳು ಅಪ್ಪಯ್ಯ ! "
" ಆ ರಾಜಧಾನಿಗೂ ಇಂದಿನ ಈ ರಾಜಧಾನಿಗೂ ನಡುವೆ ಇರುವ ಸಾಮ್ಯಗಳು ಬೆರಗುಗೊಳಿಸುತ್ತವೆ ! " ಎಂದರು ಅಪ್ಪಯ್ಯ.
'ಏನು ಸಾಮ್ಯಗಳು ? ' ಎಂಬಂತೆ ಹುಬ್ಬೇರಿಸಿದ ಹೊನ್ನ.
" ಅಂದಿನ ರಾಜಧಾನಿ ದ್ವಾರಸಮುದ್ರ , ಇಂದಿನ ರಾಜಧಾನಿ  'ಅರುಣ ಸಮುದ್ರ' ! ಉಣ್ಣಾಮಲೆ ಪಟ್ಟಣಕ್ಕೆ ಇದೂ ಒಂದು ಹೆಸರಾಗಿದೆ. ಅಲ್ಲಿ ಹೊಯ್ಸಳೇಶ್ವರ ! ಇಲ್ಲಿ ಅರುಣಾಚಲೇಶ್ವರ ! ಪಶ್ಚಿಮ ಘಟ್ಟದ ಬೆಣ್ಣೆಗುಡ್ಡದ ತಪ್ಪಲಲ್ಲಿ ದ್ವಾರಸಮುದ್ರ ಇದ್ದರೆ , ಪೂರ್ವ ಘಟ್ಟದ ಅರುಣಗಿರಿಯ ತಪ್ಪಲಲ್ಲಿ ಅರುಣ ಸಮುದ್ರ ! "
" ಓಹ್ ! ಈ ಪಟ್ಟಣವನ್ನು ರಾಜಧಾನಿಯಾಗಿ ಮಾಡಿಕೊಳ್ಳಲು ಮಹಾರಾಜರಿಗೆ ಈ ವಿಷಯವೂ  ಒಂದು ಬಲವಾದ ಕಾರಣವಾಗಿತ್ತೋ ಏನೋ ! " ಎಂದ ಹೊನ್ನ.
'' ಇರಬಹುದು ! ಅನುವಂಶಿಕವಾಗಿ ಎಷ್ಟೋ ಕಾಲದಿಂದ ಅಲ್ಲೇ ಬದುಕಿ ಬಾಳಿ ಆಳಿದ ರಾಜವಂಶದ ಕುಡಿ ವೀರ ಬಲ್ಲಾಳರು. ಮಹಾರಾಜರಿಗೆ ಹುಟ್ಟೂರಿನ  ಮೇಲೆ  ಭಾವನಾತ್ಮಕವಾದ ನಂಟು ಇರುವುದು ಸಹಜವೇ ಅಲ್ಲವೇ ! "

ದೇವರ ಸನ್ನಿಧಿ ತಲುಪಿದಾಗ ಇಬ್ಬರೂ ಮೌನವಾಗಿ ದರುಶನವನ್ನು ಮಾಡಿಕೊಂಡರು. ಅರುಣಾಚಲೇಶ್ವರನ ದಿವ್ಯ ಸ್ವರೂಪ ಕಂಡು ಪರವಶರಾದರು. ಪ್ರಾರ್ಥನೆಯನ್ನು ಸಲ್ಲಿಸಿ ಹೊರಟರು.
" ಓ ! 'ಮೀಸೆಯರಗಂಡ'  ಚಿಕ್ಕ ಬಯಿರೆಯ ನಾಯಕರು ! ದೇವರ ದರುಶನವಾಯಿತೇ ? ಎಲ್ಲ ಕ್ಷೇಮವೇ ? ನಿಮ್ಮ ಮಗನೇ ? ಉಷತ್ಕಾಲದ ಪೂಜೆಗೇ ಬಂದಿರಲ್ಲ ? ಏನು ವಿಶೇಷ ? "
 ಗುಡಿಯಲ್ಲಿ ಎದುರಾದ ಮಂದಿಯೆಲ್ಲ  ಬಗೆ ಬಗೆಯಾಗಿ ಪ್ರಶ್ನಿಸಿ ವಿಚಾರಿಸಿ ಹೋದರು.
' ಮೀಸೆಯರಗಂಡ  ' ಎಂದು  ಅವರುಗಳು ಸಂಬೋಧಿಸಿದಾಗಲೆಲ್ಲ ಅಪ್ಪಯ್ಯನ ಎದೆಯುಬ್ಬಿತು. ಅವರ ಕೈ  ಅನೈಚ್ಛಿಕವಾಗಿ ಮೀಸೆಯನ್ನು ತಿರುವಿತು ! ಅರುಣಾಚಲೇಶ್ವರನ ದರುಶನ ಮಾಡಿಕೊಂಡಾಗಲೂ ಅಪ್ಪಯ್ಯನ ಒಂದು ಕೈ ಮೀಸೆಯಮೇಲೆ ಇದ್ದಿತೋ ಎಂಬ ಸಂಶಯ ಈಗ ಹೊನ್ನನ ತಲೆಯನ್ನು ಕೊರೆಯಿತು.
' ಛೆ ! ಅಮ್ಮ ಹೇಳಿದಹಾಗೆ ಅಪ್ಪಯ್ಯನಿಗೆ ಇದು ಒಂದು ಗೀಳಾಗಿಹೋಗಿದೆ.  ಈ ಗೀಳು ಹೇಗಾದರೂ ಬಿಡಿಸಬೇಕು ! ' ಮನದಲ್ಲೇ ನಿರ್ಧರಿಸಿಕೊಂಡ ಹೊನ್ನ.


ತಂದೆ ಮಗ ಇಬ್ಬರೂ ಅರಮನೆಯನ್ನು ಕುರಿತು ತಮ್ಮ ಕುದುರೆಗಳನ್ನು ಚಲಿಸುತ್ತಿದ್ದರು. ಮೀಸೆಯ ಬಗ್ಗೆ ಅಪ್ಪಯ್ಯನ ಜೊತೆ ಮಾತನಾಡಲು ಇದೇ ಸದವಕಾಶ ಎಂದುಕೊಂಡ ಹೊನ್ನ ಅಳುಕುತ್ತಲೇ  ''ಅಪ್ಪಯ್ಯ !'' ಎಂದನು.
" ಏನೋ ಹೊನ್ನ ? ಮಹಾರಾಜರನ್ನು ಭೇಟಿಯಾಗಲು ಭಯವಾಗುತ್ತಿದೆಯೇ ? ಅವರು ಎಷ್ಟೇ ಪರಾಕ್ರಮಶಾಲಿ ಇರಬಹುದು ! ಆದರೂ ಸರಳ ಸ್ವಭಾವದವರು ! ದಯಾವಂತರು ! ಪ್ರಾಮಾಣಿಕರು ! ಪ್ರಜೆಗಳ ಮತ್ತು ಕಲಾಚಾರದ ಹಿತರಕ್ಷಕರು ! ನನ್ನೊಂದಿಗೆ ಆಡುವಂತೆಯೇ ನೀನು ಅವರೊಂದಿಗೆ ಧೈರ್ಯವಾಗಿ ಮಾತನಾಡಬಹುದು ! " ಹೊನ್ನನನ್ನು ತನ್ನ ಮಾತಿನಿಂದ ಉತ್ಸಾಹಪಡಿಸಿದರು ಚಿಕ್ಕ ಬಯಿರೆಯ ನಾಯಕರು.
ತಲೆದೂಗಿ ಕೇಳಿಸಿಕೊಂಡ ಹೊನ್ನ ಮತ್ತೆ ' ಅಪ್ಪಯ್ಯ ! ' ಎಂದು ಪ್ರಾರಂಭಿಸಿದನು.
" ಹೇಳು ಹೊನ್ನ ! ಇನ್ನೇನು ಚಿಂತೆ ನಿನಗೆ ? ''
" ಏನಿಲ್ಲ ! ಮೀಸೆಯ ಮೇಲಿನ ನಿನ್ನ ಅಕ್ಕರೆ....! ಅದು ಸ್ವಲ್ಪ ಅತಿಯಾಯಿತೋ ಅನ್ನಿಸುತ್ತದೆ .... " ಅಳುಕುತ್ತ ಅಂಜುತ್ತ ಹೇಗೋ ಮಾತನ್ನು ತೆಗೆದುಬಿಟ್ಟ ಹೊನ್ನ .
ಚಿಕ್ಕ ಬಯಿರೆಯ ನಾಯಕರು ಗಂಭೀರವಾಗಿಬಿಟ್ಟರು. ಸ್ವಲ್ಪ ಹೊತ್ತು ಮೌನ ಸಾಧಿಸಿದರು.
'' ಹೊನ್ನ ! ನಿನ್ನ ಹಾಗೆಯೇ ನಾನೂ ಒಮ್ಮೆ ಮಹಾರಾಜರನ್ನು ಭೇಟಿಯಾಗಲೆಂದು ನನ್ನ ಅಪ್ಪನೊಂದಿಗೆ ಹೋಗಿದ್ದೆ  .... '' ಹಳೆಯ ನೆನಪುಗಳು ಮರುಕಳಿಸಿದಂತೆ  ಅವರ ನೋಟ ಬಹಳ ದೂರದಲ್ಲಿ ನೆಟ್ಟು ನಿಂತಿತು.


 ಹದಿನೈದರ ಹರೆಯದ ಹುಡುಗ ಚಿಕ್ಕ ಬಯಿರ ಚೂಟಿಯಾದ ಹುಡುಗ. ಮುಂಜಾವಿನಲ್ಲೆದ್ದು ಓದು ಬರಹ ಮುಗಿಸಿ, ಹಸು ಕರುಗಳ ಆರೈಕೆ ಮಾಡುವುದು, ಮನೆತನಕ್ಕೆ ಸ್ವಂತವಾದ  ಗದ್ದೆ ತೋಟಗಳ ಮೇಲ್ವಿಚಾರ ಮಾಡುವುದು,  ಅವಕ್ಕೆ ಸಂಭಂದಪಟ್ಟ  ಲೆಕ್ಕಾಚಾರಗಳನ್ನು ಅಚ್ಚುಕಟ್ಟಾಗಿ  ದಾಖಲೆ ಮಾಡುವುದು, ಮುಂತಾದ ಅನೇಕ ಕೆಲಸ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದನು. ತನ್ನ ಓರಗೆಯ ಗೆಳೆಯರೊಂದಿಗೆ ಗರಡಿಮನೆಗೆ ಹೋಗಿ ಮಲ್ಲಕಂಬ ಹತ್ತಿ ಕಸರತ್ತು ಮಾಡುವುದು, ಕಬಡಿ ಆಟವಾಡುವುದು, ಕೆರೆಯಲ್ಲಿ ಈಜಾಡುವುದು ಎಂದು ಉಲ್ಲಾಸದಿಂದ ಕಾಲ ಕಳೆಯುತ್ತಿದ್ದನು ಚಿಕ್ಕ ಬಯಿರೆಯ ನಾಯಕ !  ಈ ಉಲ್ಲಾಸ, ಸಂತೋಷವೆಲ್ಲ ಮಹಾರಾಜರನ್ನು ಕಂಡು ಬರುವವರೆಗೆ ಮಾತ್ರ ಉಳಿದಿತ್ತು !

 ಆನೆಯನ್ನು ಕೊಲ್ಲ ಬಲ್ಲ ಮೈಕಟ್ಟನ್ನು ಹೊಂದಿದ್ದು, ಹುರಿ ಮೀಸೆ ತಿರುಗಿಸುತ್ತ ವೀರ ಭೈರವನಂತೆ ಧೃಡಗಾತ್ರವಾಗಿ ಕುಳಿತಿದ್ದ ವೀರ ಬಲ್ಲಾಳ ಮಹಾರಾಜರನ್ನು ಕಂಡಾಗ ಚಿಕ್ಕ ಬಯಿರೆಯ ನಾಯಕನ ಓಡಲು ಕೇಶಾದಿ ಪಾದ ಕಂಪಿಸತೊಡಗಿತು.
" ನನ್ನ ಮಗ ಚಿಕ್ಕ ಬಯಿರೆಯ ನಾಯಕ ! ಮಹಾರಾಜರು ಅಪ್ಪಣೆ ಮಾಡಿದರೆ ಅರಮನೆಯಲ್ಲಿ ಉದ್ಯೋಗ ಮಾಡಲು ತಯಾರಾಗಿರುವನು ! "
ಅಪ್ಪ ಹೀಗೆ ಅವನನ್ನು ಪರಿಚಯಿಸಿದಾಗ ಮಹಾರಾಜರನ್ನು ವಂದಿಸುವುದನ್ನೂ ಮರೆತು ತೆರೆದ ಬಾಯನ್ನು ಮುಚ್ಚದೆ ನಿಂತುಬಿಟ್ಟಿದ್ದನು ಚಿಕ್ಕ. ಅಪ್ಪ ಆತನ ತೋಳು ತಿವಿದು ಎಚ್ಚರಿಸಿದನಂತರವೇ ಕಳವಳದಿಂದ ಮಹಾರಾಜರನ್ನು ನಮಸ್ಕರಿಸಿದನು.
" ಇನ್ನೂ ಮೀಸೆ ಚಿಗುರಿಲ್ಲ ! ಆಗಲೇ ಉದ್ಯೋಗದ ಚಿಂತೆಯೇ ? " ಎಂದು ಅಟ್ಟಹಾಸದಿಂದ ನಕ್ಕರು  ಮಹಾರಾಜರು.

ಅಂದು ಸಂಜೆ -
" ಮಹಾರಾಜರು ಚಿಕ್ಕನಿಗೆ ಉದ್ಯೋಗವನ್ನ ದಯಪಾಲಿಸಿದ್ದಾರೆ. ಸಂತೋಷದಿಂದಿರುವುದು ಬಿಟ್ಟು ಇವನೇಕೆ ಸಪ್ಪೆ ಮುಖ ಹೊತ್ತು ಮಲಗಿರುವನು ? " ಆಶ್ಚರ್ಯದಿಂದ  ಪ್ರಶ್ನಿಸಿದರು ಅಪ್ಪ.
" ಮಹಾರಾಜರು ಇವನಿಗೆ ಇನ್ನೂ ಮೀಸೆ ಚಿಗುರಿಲ್ಲವಲ್ಲ ಅಂದರಂತೆ ! ಅದಕ್ಕೇ ಇವನಿಗೆ ತುಂಬ ದುಃಖ್ಖವಾಗಿಬಿಟ್ಟಿದೆ.  " ಎನ್ನುತ್ತ ತನ್ನ ತೊಡೆಯ ಮೇಲಿದ್ದ ಚಿಕ್ಕನ ತಲೆ ನೇವರಿಸಿದಳು ಅಮ್ಮ.
" ಇದಕ್ಕೆಲ್ಲ ಬೇಸರವೇ ? ಅವರು ತಮಾಷೆಗೆ ಹೇಳಿದ ಮಾತು ! ಉದ್ಯೋಗವಂತೂ ಸಿಕ್ಕಿತಲ್ಲವೇ? ಅಮ್ಮನ ಮಡಿಲಲ್ಲಿ ಮಲಗಿರೋದು ಬಿಟ್ಟು ಎದ್ದು ಕೆಲಸ ನೋಡು ಹೋಗು ! "


                                                                                  
'ಅಪ್ಪನಿಗೆ ನನ್ನ ನೋವು ಅರ್ಥವಾಗುವುದಿಲ್ಲ. ಕುಡಿ ಮೀಸೆ, ಚಿಗುರು ಮೀಸೆ , ಕಿರು ಮೀಸೆ , ಜಿರಳೆ ಮೀಸೆ ಎಂದು ನನ್ನ ಗೆಳೆಯರ ಮೊಗಗಳಲ್ಲೆಲ್ಲ ಯಾವುದೊ ಒಂದು ರೀತಿಯ ಮೀಸೆ ಇರುವುದು ಇದೀಗ ಗಮನಕ್ಕೆ ಬರುತ್ತಿದೆ. ನನಗೆ ಮೀಸೆ ಇಲ್ಲವೆಂಬುದು ಇಲ್ಲಿಯತನಕ ಯಾಕೆ ಅರಿವಾಗಲೇ ಇಲ್ಲ? '

" ಒಳ್ಳೆ ಪೌಷ್ಟಿಕ ಆಹಾರ ಕೊಡು ನಿನ್ನ ಮಗನಿಗೆ. ಬೇಡ ಬೇಡವೆಂದರೂ ಮೀಸೆ ಬೆಳೆಯುವ ವಂಶ ನಮ್ಮದ್ದು. ಅದು ಹೇಗೆ  ಬರೋದಿಲ್ಲವೆಂದು  ನೋಡೋಣ  ! " ಎಂದು ಅಬ್ಬರಿಸಿದರು ಅಪ್ಪ.

 ಪ್ರತಿದಿನ ಕಡೆದ ಬೆಣ್ಣೆಯಲ್ಲಿ ಒಂದು ಉಂಡೆಯನ್ನು ಅಪ್ಪನ ಮೀಸೆಯ ಮಾಲೀಷಿಗಾಗಿ ತೆಗೆದಿಡುತ್ತಿದ್ದ ಅಮ್ಮ , ಮರುದಿನದಿಂದ ಚಿಕ್ಕನ ಸೇವನೆಗಾಗಿ  ಮತ್ತೊಂದು ದೊಡ್ಡ ಉಂಡೆಯನ್ನು ತೆಗೆದಿಟ್ಟಳು.  ಜೊತೆಗೆ ಅವನಿಗಾಗಿ ತರಕಾರಿ ಮತ್ತು ಮೊಟ್ಟೆ ಸೇರಿಸಿದ ವಿಶಿಷ್ಟವಾದ  ಆಹಾರವನ್ನೂ ತಯಾರಿಸಿ ಕೊಡತೊಡಗಿದಳು.
ದಿನ ರಾತ್ರಿ ಮಲಗುವ ಮುನ್ನ ಒಂದು ಚಿಕ್ಕ ಉಂಡೆ ಬೆಣ್ಣೆಯನ್ನು ಅವನ ಕೈಗಿಟ್ಟು " ಇಡೀ ಮುಖಕಕ್ಕೆ ಲೇಪಿಸಿಕೋ ! ಮೀಸೆ ಯಾಕೆ ಗಡ್ಡವೂ ಬೆಳೆಯುತ್ತದೆ ನೋಡುತ್ತಿರು ! " ಎಂದಿದ್ದಳು.

ಮುಂಜಾನೆ ಹಾಸಿಗೆಯಿಂದ ಏಳುತ್ತಲೇ  ಮೀಸೆ ಮೊಳೆತಿರುವುದೇ ಎಂದು ಮೀಸೆ ಪ್ರದೇಶದಲ್ಲಿ ಕೈಯಾಡಿಸಿ ನೋಡಿಕೊಳ್ಳುವುದು ಚಿಕ್ಕನಿಗೆ ವಾಡಿಕೆಯಾಯಿತು. ಬೆಣ್ಣೆಯ ಸೇವನೆಯಿಂದಲೂ ಲೇಪನದಿಂದಲೂ ಅವನ ತ್ವಚೆ ಮೃದುವಾಗಿ ಕಾಂತಿಯಿಂದ ಹೊಳೆಯುತ್ತಿತ್ತು. ವಿಶೇಷವಾದ ಆಹಾರದಿಂದ ಮೈತುಂಬಿಕೊಂಡು ಮೈಕಟ್ಟು ದಷ್ಟುಪುಷ್ಟಾಗ ತೊಡಗಿತು. ಆದರೆ ಮೀಸೆಯ ಸುಳಿವು ಮಾತ್ರ ಇಲ್ಲವೇ ಇಲ್ಲ !

ತನ್ನ ಸಮಸ್ಯೆಯನ್ನು ಗೆಳೆಯರೊಂದಿಗೆ ಹಂಚಿಕೊಳ್ಳಲು ನಾಚಿಕೊಂಡ ಚಿಕ್ಕನಿಗೆ  ಅವರುಗಳಿಂದ ಮೀಸೆ ಬೆಳೆಸುವ ರಹಸ್ಯವನ್ನು ಕೇಳಿ ಅರಿತುಕೊಳ್ಳವುದು ಸಾಧ್ಯವಾಗಲಿಲ್ಲ.
ಆದರೆ ಅಮ್ಮ ಹಾಗೆ ಸುಮ್ಮನೆ ಇರಲಿಲ್ಲ. ಸಮಯ ಸಿಕ್ಕಾಗಲೆಲ್ಲ ಅವರಿವರನ್ನು ಕೇಳಿ ಏನಾದರೊಂದು ಮದ್ದನ್ನು ಮಾಡಿಕೊಡುತ್ತಿದ್ದಳು.  ಎಲ್ಲವೂ ವಿಫಲ !

ಒಮ್ಮೆ ಚಿಕ್ಕ ಗೆಳೆಯರೊಂದಿಗೆ ಆಡಿ ಹಿಂದಿರುಗಿದಾಗ ಇಡೀ ಮನೆಯನ್ನು ಯಾವುದೋ  ತಿಂಡಿಯ ಘಮ ಆವರಿಸಿತ್ತು.
" ಅಮ್ಮ ! ಇಂದು ಏನಾದರೂ ವಿಶೇಷ ತಿಂಡಿ ಮಾಡಿರುವಿಯೇನು ? " ಎನ್ನುತ್ತ ಅಡುಗೆ ಮನೆ ಪ್ರವೇಶಿಸಿದ ಚಿಕ್ಕ.
" ಇಲ್ಲ ಕಣೋ ಚಿಕ್ಕ ! ನಮ್ಮ ಕಾತ್ಯಾಯನಿ ಎರಡು ತಿಂಗಳು ಊರಲ್ಲೇ ಇರಲಿಲ್ಲ ನೋಡು. ಇವತ್ತು ಗುಡಿಯಲ್ಲಿ ಸಿಕ್ಕಿದಳು. ಇಲಿ ಬಾಲದಂತಿದ್ದ ಅವಳ ತಲೆಗೂದಲು ಅದೆಷ್ಟು ಸೊಂಪಾಗಿ ಬೆಳೆದಿದೆ ಗೊತ್ತೇ ? ಏನಮ್ಮ ಅದರ ಗುಟ್ಟು ಅಂತ ಕೇಳಿದೆ. ತಾನು ಉಪಯೋಗಿಸುವ ತೈಲದ ಬಗ್ಗೆ ಹೇಳಿದಳು. ಅದನ್ನೇ ನಾನು ಈವಾಗ ಕಾಯಿಸಿದೆ. " ಎನ್ನುತ್ತ ಕಾದು  ಕಂದು ಬಣ್ಣಕ್ಕೆ ತಿರುಗಿದ್ದ ತೈಲವನ್ನು ಸೋಸಿದಳು ಅಮ್ಮ.



" ನಿನ್ನ ತಲೆಗೂದಲು ಸೊಂಪಾಗಿಯೇ ಇದೆ ! ನಿನಗೆ ಯಾಕಮ್ಮಾ ಈ ತೈಲ ? '' ತೈಲವನ್ನು ಬಾಗಿ ಮೂಸಿ ನೋಡುತ್ತ ಕೇಳಿದ ಚಿಕ್ಕ.
" ಅಯ್ಯೋ ಇದು ನನಗಲ್ಲ ಮರಿ ! ನಿನಗೆ ! ದಿನ ನಿತ್ಯ ಸಂಜೆ ಹೊತ್ತಲ್ಲೇ  ಮುಖಕ್ಕೆ ಹಚ್ಚಿಕೋ ! ಹೆಚ್ಚಾಗಿ ತೊಯಿದಷ್ಟು  ಶೀಘ್ರದಲ್ಲಿಯೇ  ಫಲಿತಾಂಶ ! ಬೆಳಿಗ್ಗೆದ್ದು ತಣ್ಣೇರಿನಲ್ಲಿ ಮುಖ ತೊಳೆ! ಎರಡೇ ವಾರಗಳಲ್ಲಿ ನೋಡು ಪವಾಡವನ್ನ ! " ಎಂದು ಸವಾಲು ಒಡ್ಡುವ ದನಿಯಲ್ಲಿ ನುಡಿದಳು ಅಮ್ಮ.
" ಏನೇನು ಹಾಕಿ ಕಾಯಿಸಿರುವೆ ? ತಿಂಡಿಯ ವಾಸನೆ ಬರುತ್ತಿದೆ ! " ಚಿಕ್ಕ ಮೊರೆ ಸೊಟ್ಟ ಮಾಡಿಕೊಂಡ.
" ಎಲ್ಲ ನಮ್ಮ ಮೆನೆಯಲ್ಲಿರುವ ಸಾಮಗ್ರಿಗಳೇ ! ನೆಲ್ಲಿಕಾಯಿ, ಇಷ್ಟು ಮೆಂತ್ಯ , ಕರಿಬೇವು , ಈರುಳ್ಳಿ ..." 
" ಅಯ್ಯೋ ಅಮ್ಮ ! ಈರುಳ್ಳಿಯೇ ? ಈರುಳ್ಳಿ ವಾಸನೆಯೊಂದಿಗೆ ಹೋಗಿ ನಾನು ಗೆಳೆಯರೊಂದಿಗೆ ಹೇಗೆ ಆಡುವುದು ? " ಗಾಬರಿಯಿಂದ ಹಿಂಜರಿದ ಚಿಕ್ಕ.
" ನಿನಗೆ ಶೀಘ್ರದಲ್ಲೇ ಮೀಸೆ ಬರಬೇಕೋ ಬೇಡವೋ ? "
ಚಿಕ್ಕ ಅಮ್ಮನ ಮಾತಿಗೆ ಮಣಿದನು.

 " ಏನೋ ಚಿಕ್ಕ ! ನೀನು ಮಾತ್ರ ಈರುಳ್ಳಿ ಬಜ್ಜಿ ತಿಂದು ಬಂದೆಯಾ ? "
"  ದಿನ ನಿತ್ಯ ನಿಮ್ಮ ಮನೆಯಲ್ಲಿ ಈರುಳ್ಳಿ ಬಜ್ಜಿಯೇನೋ ? "
ಬಗೆಬಗೆಯಾಗಿ ಪ್ರಶ್ನಿಸಿ ಗೆಳೆಯರೆಲ್ಲ ಅವನನ್ನು ಪೀಡಿಸ ತೊಡಗಿದರು.
ಅವನು  ಬರುವುದನ್ನು ಕಂಡ ಕೂಡಲೇ " ಈರುಳ್ಳಿ ಬಜ್ಜಿ ಬಂತು ಕಂಡ್ರೋ ! " ಎಂದು ಚುಡಾಯಿಸ ತೊಡಗಿದರು.
ಚಿಕ್ಕ ತನ್ನ ಈರುಳ್ಳಿ ವಾಸನೆಯ ಗುಟ್ಟನ್ನು ಮಾತ್ರ ಯಾರಿಗೂ ಬಿಟ್ಟುಕೊಡಲೇ  ಇಲ್ಲ ! ಗೆಳೆಯರ  ಕಾಟ ತಡೆಯಲಾರದೆ ಅಮ್ಮನ ಕೈಯಲ್ಲಿ ಆಗಿಂದಾಗ್ಯೆ ಈರುಳ್ಳಿ ಬಜ್ಜಿ ಮಾಡಿಸಿ ಅವರಿಗೆ ಹಂಚ ತೊಡಗಿದ.

ಒಂದು ಮುಂಜಾವಿನಲ್ಲಿ ಎಂದಿನಂತೆ ಮೀಸೆ ಪ್ರದೇಶದಲ್ಲಿ ಕೈಯಾಡಿಸಿದ ಚಿಕ್ಕ ಆಶ್ಚರ್ಯಚಕಿತನಾದನು. ಇದೇನು ಮೃದುವಾದ ಮೀಸೆ ಪ್ರದೇಶದಲ್ಲಿ ತರಿ ತರಿಯಾಗಿ ಏನೋ ಕೈಗೆ ಸಿಕ್ಕುತ್ತಿದೆ ! ಚಿಕ್ಕ ಚಕ್ಕೆಂದು ಎದ್ದು ಓಡಿಹೋಗಿ ಕನ್ನಡಿಯನ್ನು ಕೈಗೆತ್ತಿಕೊಂಡನು. ಡವಗುಟ್ಟುವ ಹೃದಯದೊಂದಿಗೆ ಅದರಲ್ಲಿ ತನ್ನ ಮುಖ ನೋಡೊಕೊಂಡಾಗ ಅವನು ಕಂಡದ್ದು ? ಸಣ್ಣ ಸಣ್ಣ ಮೀಸೆ ಚಿಗುರುಗಳು ! ಚಿಕ್ಕನಿಗೆ  ವಿವರಿಸಲಾರದ ಸಂತೋಷ ! ಅಮ್ಮ ಹೇಳಿದ ಪವಾಡ ನಡೆದೇ ಬಿಟ್ಟಿದೆಯೇ ?
ಅಮ್ಮ ಅಂದು ಪಾಯಸದ ಅಡುಗೆ ಮಾಡಿ ಬಡಿಸಿದಳು !

ಆ ವರೆಗೆ ಆಟ  ತೋರಿಸುತ್ತಿದ್ದ ಮೀಸೆ  ಚಿಕ್ಕನ ಮೊಗದ ತುಂಬ ಸೊಂಪಾಗಿ ಬೆಳೆಯ ತೊಡಗಿತು. ಅಮ್ಮ ಮಾಡಿದ ಎಲ್ಲ ಪೋಷಣೆಯೂ ಒಮ್ಮೆಗೆ ಸಫಲಗೊಂಡಂತೆ ಅನುದಿನವೂ ಬೆಳೆದು ಬೆಳೆದು ಚಿಕ್ಕನ ಮೊಗದ ತುಂಬ ಮೀಸೆಯೇ ಆವರಿಸಿತು.  ಊಟ ಮಾಡುವಾಗ ಬಾಯಿಗೆ ಸಿಕ್ಕಿಕೊಂಡಿತು. ಸುಮ್ಮಸುಮ್ಮನೆಯೂ ಬಾಯೊಳಗೆ ತೂರಿತು. ಆದರೂ ಚಿಕ್ಕ ಎಲ್ಲವನ್ನೂ ಸಂತೋಷದಿಂದ ನಿಭಾಯಿಸಿದನು.

" ಚಿಕ್ಕ ! ಮೀಸೆಯನ್ನ ಹೀಗೆ ಜೊಂಡು ಜೊಂಡಾಗಿ ಬೆಳೆಯಲು ಬಿಡಬಾರದು.  ಕತ್ತರಿಸಿ ಅಚ್ಚುಕಟ್ಟಾಗಿ ತಿದ್ದಿಕೋ ಹೋಗು ! " ಅಪ್ಪ ಗಡುಸಾಗಿ ಅಪ್ಪಣೆ ಮಾಡಿದರು.
ಕಷ್ಟಪಟ್ಟು ತಪಸ್ಸು ಮಾಡಿ ಪಡೆದಿರುವ ತನ್ನ ಮೀಸೆಯ ಮೇಲೆ ಯಾರು ಕೈ ಇಡುವುದನ್ನೂ ಅವನು ಅನುಮತಿಸಲಾರ ! ತನ್ನ ಪೊಕ್ಕಿಷವಾದ ಮೀಸೆಯ ಒಂದು ಕೂದಲನ್ನೂ ಸಹ ಕಳೆದುಕೊಳ್ಳಲಾರ !ಕತ್ತರಿಸುವ ಮಾತು ಬಂದಾಗಲೆಲ್ಲ ಚಿಕ್ಕ ಕುಣಿದು ಕುಪ್ಪಳಿಸಿ ಪ್ರತಿಭಟಿಸಿದನು !
ಕೊನೆಗೆ ಅಮ್ಮ ಅವರಿವರ ಬಳಿ ವಿಚಾರಿಸಿ ಜೇನು ಮೇಣ ಕರಗಿಸಿ ಕೊಟ್ಟಳು.
" ಇದನ್ನ ಪೂಸಿ ಮೀಸೆಯನ್ನ ಓರಣವಾಗಿ ತಿರುಗಿಸಿ ಚೊಕ್ಕಟವಾಗಿ ಇಟ್ಟುಕೋ. "

ಚಿಕ್ಕ ಬಯಿರೆಯ ನಾಯಕರ ಮೀಸೆಯ  ಕಥೆಯನ್ನು ಕೇಳಿ ಹೊನ್ನನ ಮನಸ್ಸು ಕರಗಿತು. ಮೀಸೆಗಾಗಿ ಅಪ್ಪಯ್ಯ ಎಷ್ಟೆಲ್ಲಾ ಕಷ್ಟಗಳನ್ನೂ ಅವಮಾನಗಳನ್ನೂ ಸಹಿಸಬೇಕಾಯಿತು !
" ಅಪ್ಪಯ್ಯ !  ಮೀಸೆಗಾಗಿ ಇಷ್ಟೆಲ್ಲಾ ಪರಿಶ್ರಮಪಡಬೇಕೆಂದು ನನಗೆ ತಿಳಿದೇ ಇರಲಿಲ್ಲ !" ಎಂದು ಕಳಕಳಿಯಿಂದ ನುಡಿದನು ಹೊನ್ನ.
" ಹೊನ್ನ ! ಯಾವ ವಸ್ತುವನ್ನೂ ಅದು ಸುಲಭವಾಗಿ ಸಿಕ್ಕಿತೆಂಬ ಕಾರಣ ಹಗುರವಾಗಿ ಕಾಣ ಬಾರದು ! ಅಲಕ್ಷ್ಯ ಮಾಡಬಾರದು ! " ಅಪ್ಪಯ್ಯ ಗಂಭೀರವಾಗಿ ನುಡಿದಾಗ ಅರಮನೆ ತಲುಪಿದ್ದರು.

' ಅಪ್ಪಯ್ಯನಿಗೆ ಮೀಸೆ ಚಿಗುರಿಲ್ಲವೆಂದು ಅಟ್ಟಹಾಸದಿಂದ ನಕ್ಕ ಮಹಾರಾಜರು, ಇಂದು  ತನ್ನ ಮೀಸೆ ನೋಡಿದರೆ ಏನನ್ನಬಹುದು ? ಪಾಪ ! ವಯಸ್ಸಾದ ಕಾರಣ ದುರ್ಬಲಗೊಂಡಿರಬಹುದು ! ಅವರು ಹೋಗಿ ಏನಂದಾರು ? ' ನಾನಾ ವಿಧವಾಗಿ ಚಿಂತಿಸುತ್ತ ಅಪ್ಪಯ್ಯನನ್ನು ಹಿಂಬಾಲಿಸಿ ಮಹಾರಾಜರು ಆಸೀನರಾಗಿದ್ದ ಮಂಟಪವನ್ನು ಕುರಿತು ಹೆಜ್ಜೆಹಾಕಿದನು ಹೊನ್ನಮಾರಯ ನಾಯಕ.

ತಲೆಯ ತುಂಬ ಬೆಳ್ಳಿ ಕೂದಲು ಪ್ರಭಾವಳಿಯಂತೆ ಹೊಳೆಯುತ್ತಿರಲು, ಬೆಳ್ಳಿ ಎಳೆಗಳಿಂದ ಕೂಡಿದ್ದ ಬಾಗದ ಹುರಿ ಮೀಸೆಯನ್ನು ತಿರುಗಿಸುತ್ತ, ಶೌರ್ಯದ ಕಲೆಗಳನ್ನು ಹೊತ್ತ ಮೈಯನ್ನು ಮುಚ್ಚಿದ್ದ ಅಂಗವಸ್ತ್ರವನ್ನು ಸೆಕೆಯ ಕಾರಣ ಬದಿಗೆ ತೆಗೆದಿಟ್ಟು  ಸಿಂಹಾಸನದಲ್ಲಿ ಸೆಟೆದು ಕುಳಿತಿದ್ದರು ವೀರ ಬಲ್ಲಾಳ ಮಹಾರಾಜರು.
 ಈ ಇಳಿ ವಯಸ್ಸಲ್ಲೂ ಆನೆಯನ್ನು ಕೊಲ್ಲಬಲ್ಲ ಮೈಕಟ್ಟನ್ನು ಹೊಂದಿದ್ದ ವೃದ್ಧ ಸಿಂಹದಂತಹ    ಮಹಾರಾಜರನ್ನು ಕಂಡಾಗ ಹೊನ್ನಮಾರಯ ನಾಯಕ ತಬ್ಬಿಬ್ಬಾದನು.

" ಇವನು ನನ್ನ ಮಗ ಹೊನ್ನಮಾರಯ ನಾಯಕ. ಮಹಾರಾಜರು ಮಾಡಲಿರುವ  ದಾನವನ್ನು ಪಡೆಯುವವರ ಅರ್ಹತೆಯ ಬಗ್ಗೆ ವಿಚಾರ ಮಾಡಿ ಪರಿಗಣಿಸಿ ಬರಲೆಂದು ಈತನನ್ನು ಕಳುಹಿಸಿದ್ದೆ.  ರಾಜಕಾರ್ಯಕ್ಕೆ ಇದೂ ಒಂದು ತರಬೇತಿಯಾಗಿರಲಿ ಎಂದು . ... " ವಿನಯದಿಂದ ನುಡಿದರು ಆಪ್ಪಯ್ಯ.

ಮಹಾರಾಜರು ಹೊನ್ನಮಾರಯನನ್ನು ದಿಟ್ಟಿಸಿ ನೋಡಿದರು.
" ಹೂಂ ! ಹೊನ್ನಮಾರಯ ನಾಯಕ ! ವಿಚಾರಿಸಿಕೊಂಡು ಬಂದ್ದದ್ದನ್ನು ಹೇಳೋಣವಾಗಲಿ!" ವೃದ್ಧ ಸಿಂಹ ಗರ್ಜಿಸಿತು !
ಭಯದಿಂದ ತೊದಲುತ್ತ ತಡವರಿಸುತ್ತ ತಾನು ಕಂಡು ಬಂದದ್ದನ್ನು ವಿವರಿಸ ತೊಡಗಿದ ಹೊನ್ನ.
" ಮಹಾ ಸಾವಂತಾಧಿಪತಿ ಪೆಮ್ಮ ದೇವರಸರ ಮಗ ಅಲ್ಲಯ.  ತಂದೆಯವರ ಉದ್ಯೋಗದ ಹಂಗಿಲ್ಲದೆ ತಾನಾಗೆಯೇ ಸಾಧಿಸಬೇಕೆಂಬ ಸಂಕಲ್ಪ ಹೊತ್ತಿರುವನು. ಗ್ರಾಮದಲ್ಲಿ ಶಿಥಿಲವಾಗಿರುವ ಒಂದು ಸಣ್ಣ ಶಿವನ ಗುಡಿಯ ಸಮೀಪ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮಾಡಿಸುತ್ತಿರುವನು. ಮನೆಯಿಂದ ತನ್ನ ಕೈಯಾರೆ ತಯಾರಿಸಿದ ಅಂಬಲಿಯನ್ನು ಮಕ್ಕಳಿಗೆ ಕೊಡುತ್ತಿರುವನು. ಅಕ್ಕ ಪಕ್ಕದ ಗ್ರಾಮಗಳಿಂದಲೂ ಕೆಲವು ಮಕ್ಕಳು ಅಂಬಲಿಗಾಗಿಯೂ ಓದು ಬರಹ  ಕಲಿಯಲೆಂದೂ ಬರುತ್ತಿರುವರು. ಇದನ್ನೆಲ್ಲಾ ನಾನು ಕಣ್ಣಾರೆ ಕಂಡೂ ಅಕ್ಕಪಕ್ಕದಲ್ಲಿ ವಿಚಾರಿಸಿಯೂ ಅರಿತು ಬಂದೆ ಮಹಾಸ್ವಾಮಿ ! "

#" ಭೇಷ್ ! ಚಿಕ್ಕ ಬಯಿರೆಯ ನಾಯಕರೇ ! ಶಿಥಿಲವಾಗಿರುವ ಗುಡಿಯ ಜೀರ್ಣೋದ್ದಾರಣವಾಗಲಿ. ದೇವರ ಪೂಜೆಗೆ ಮತ್ತು ನೈವೇದ್ಯಕ್ಕೆ ಬೇಕಾದ ಅನುಕೂಲಗಳಾಗಲಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗುಡಿಯ ಆವರಣದಲ್ಲಿ ಒಂದು ಕಟ್ಟಡವನ್ನು ಕಟ್ಟಿಸಲಾಗಲಿ. ದೇವರ ಪ್ರಸಾದವನ್ನು ಅಲ್ಲಯ ಕೊಡುವ ಅಂಬಲಿಯೊಂದಿಗೆ ಮಕ್ಕಳಿಗೆ ಬಡಿಸಲಾಗಲಿ. ಈ ಎಲ್ಲ ಕೆಲಸಗಳನ್ನೂ ನಿಭಾಯಿಸಲು ಅಲ್ಲಯನಿಗೆ ಸೋಮಿದೇವನಹಳ್ಳಿ, ಕಲಿತಮ್ಮನಹಳ್ಳಿ, ಪೆಟೆದ್ರಿ, ಮಾವಿನಕೆರೆ ಮತ್ತು ಹುರವಮರ್ದಿಯಕೆರೆ ಹಳ್ಳಿಗಳನ್ನು ಮಾನ್ಯವಾಗಿ ನೀಡಲಾಗಲಿ! " ಅಪ್ಪಣೆಗಳನ್ನು ಮಾಡಿ ಮುಂದಿನ ಅಭ್ಯರ್ಥಿಯ ಬಗ್ಗೆ ಕೇಳಲು ಸಿದ್ಧವಾದರು ಮಹಾರಾಜರು.

ಹೊನ್ನಮಾರಯ ನಾಯಕ ಈಗ ಸ್ವಲ್ಪ ಧೈರ್ಯ ತಂದುಕೊಂಡಿದ್ದ.
" ನಾಡ ಸೇನಬೋವ ಅಲ್ಲಾಳ ವಯಸ್ಸಲ್ಲಿ ನನ್ನ ಓರಿಗೆಯವನೇ ಇರಬಹುದು. ಹಿಂದಿನ ಸೇನಬೋವರಾಗಿದ್ದ ಅವನ ತಂದೆಗೆ  ಬಹಳ ಕಾಯಿಲೆಯಾಗಿ ಹಾಸಿಗೆ ಹಿಡಿದಿರುವರು. ಅಲ್ಲಾಳನಿಗೆ   ಆರು ಜನ ಒಡಹುಟ್ಟಿದವರು. ಎಲ್ಲರೂ ಅವನಿಗಿಂತ ಕಿರಿಯರು. ಅವನ ತಾಯಿ ಮತ್ತು ಬೇರೆ ದಿಕ್ಕಿಲ್ಲದ ಓರ್ವ ಸೋದರತ್ತೆ ಎಲ್ಲರಿಗೂ ಅವನೇ ಆಶ್ರಯ. ಇರುವ ಒಂದು  ಚಿಕ್ಕ ತೋಟದಲ್ಲಿ ದುಡಿದು ಅದರಲ್ಲಿ ಸಿಕ್ಕುವ ವರಮಾನದಲ್ಲಿ ಎಲ್ಲರನ್ನೂ ಸಾಕಬೇಕು. ತಂದೆಯವರಿಗೆ ಔಷದೋಪಚಾರವಾಗಬೇಕು. ಇಷ್ಟೆಲ್ಲಾ ಮಾಡಿಕೊಂಡು ಗ್ರಾಮದ ಲೆಕ್ಕಪತ್ರಗಳನ್ನೂ ಶ್ರದ್ಧೆಯಿಂದ ನೋಡಿಕೊಳ್ಳುತ್ತಿರುವನು."

*" ಭಲೇ ! 'ಮನುಮಹಾಸಾವಂತಾಧಿಪತಿ 'ಮೀಸೆಯರ ಗಂಡ' ಚಿಕ್ಕಬಯಿರೆಯ ನಾಯಕರ ಮಗ ಹೊನ್ನಮಾರಯ ನಾಯಕನು ನಾಡ ಸೇನಬೋವ ಅಲ್ಲಾಳನಿಗೆ ಈ ನಾಡ ಒಳಗಣ ಜಕ್ಕೂರ ಒಳಗಿನ ಚತುಸ್ ಸೀಮೆ ಎಂದುಳ್ಳದನು  ಸರ್ವಮಾನ್ಯ ಕೊಡಿಗೆಯಾಗಿ ಚಂದ್ರಸೂರ್ಯರ್ ಉಳ್ಳಂಬರ ಸಲ್ಲುವಂತಾಗಿ ಶಿಲಾ ಶಾಸನವ ಮಾಡಿ ಕೊಟ್ಟರು' ಎಂದು ಶಾಸನದಲ್ಲಿ  ಕೆತ್ತಿಸಲಾಗಲಿ."



ವೀರ ಬಲ್ಲಾಳ  ಮಹಾರಾಜಾರು ಬೆಳ್ಳಿ ಹುರಿ ಮೀಸೆಯನ್ನು ತಿರಿಗಿಸುತ್ತ ಹೀಗೆ ನುಡಿದಾಗ ಹೊನ್ನಮಾರಯ ನಾಯಕ ಮಾತ್ರವಲ್ಲ, ಚಿಕ್ಕ ಬಯಿರೆಯ ನಾಯಕರೂ ಚಕಿತರಾದರು.
" ಮಗನಿಗೆ ಪದವಿ ದೊರಕಿದಮೇಲೆ ತಂದೆಗೂ ಪದೋನ್ನತಿ ದೊರಕಲೇ ಬೇಕಲ್ಲವೇ ? "
 ಮಾತನಾಡಲು ಬಾಯಿ ಬಾರದೆ ತಂದೆ ಮಗ ಇಬ್ಬರೂ ವಿನಯಪೂರ್ವಕವಾದ ವಂದನೆಗಳನ್ನು ಸೂಚಿಸುವಂತೆ ಮಹಾರಾಜರಿಗೆ ಕೈ ಮುಗಿದು ನಿಂದರು.

" ಹೊನ್ನಮಾರಯ ನಾಯಕ ! ಜಂಬದಿಂದ ಮೀಸೆಯನ್ನು ಬಿಟ್ಟಿದ್ದರೆ ಮಾತ್ರ ಸಾಲದು ! 'ಮೀಸೆಯರ ಗಂಡ' ಎನ್ನಿಸಿಕೊಳ್ಳಬೇಕಾದರೆ ನಿನ್ನ ತಂದೆಯಂತೆ ನೀನೂ ರಾಜ್ಯ ನಿಷ್ಠೆಯಿಂದ ದುಡಿಯಬೇಕು ! ಏನು ನಾವು ಹೇಳುವುದು ಅರಿವಾಯಿತೇ ? " ವೃದ್ಧ ಸಿಂಹ ಹೊನ್ನನನ್ನು ಕುರಿತು ಹೀಗೆ ನುಡಿದು ಅಟ್ಟಹಾಸದಿಂದ ನಕ್ಕಾಗ ಹೊನ್ನ ಅವಾಕ್ಕಾದನು ! ಮೀಸೆ ಬಿಟ್ಟರೆ ಒಂದು ಠೀಕೆ ! ಮೀಸೆ ಬಿಡದಿದ್ದರೆ ಒಂದು ಠೀಕೆ !
ಮಹಾರಾಜರ ಮನರಂಜಕವಾದ ಹಾಸ್ಯ ಪ್ರಜ್ಞೆ ಹೊನ್ನನ ತುಟಿಯಲ್ಲಿ ಕಿರುನಗೆ ತಂದಿತು.
'ಮೀಸೆಯರ ಗಂಡ ' ಎನ್ನಿಸಿಕೊಳ್ಳಲು ಎಲ್ಲ ವಿಧದಲ್ಲೂ ಅರ್ಹರಾದ ಮಹಾನ್ ವ್ಯಕ್ತಿ ಈ ನಮ್ಮ ವೀರ ವೈಭೋಗ ಬಲ್ಲಾಳ ಮಹಾರಾಜರೇ ಅಲ್ಲವೇ ? '

--------------------------------------------------------------------------------------------------
ಇದು #ಗಾಣಿಗರಹಳ್ಳಿ ಶಾಸನ ಮತ್ತು *ಜಕ್ಕೂರ ಶಾಸನಗಳ ಆಧಾರದ ಮೇಲೆ ರಚಿಸಲ್ಪಟ್ಟ ಕಾಲ್ಪನಿಕ ಕಥೆ . 
 ಕಥೆಯಲ್ಲಿ ಕಾಣುವ ಕೆಲವು ಪದಗಳ ಅರ್ಥಗಳು -
ದ್ವಾರಸಮುದ್ರ - ಇಂದಿನ ಹಳೇಬೀಡು 
ವೇಲಾಪುರಿ   -      ಇಂದಿನ   ಬೇಲೂರು 
ಉಣ್ಣಾಮಲೆ ಪಟ್ಟಣ - ಇಂದಿನ ತಿರುವಣ್ಣಾಮಲೈ 
ಮಹಾ ಪಸಾಯಿತ -  ಅರಮನೆಯ ವ್ಯವಸ್ಥೆಗಳು, ರಾಜತಾಂತ್ರಿಕ ಮರ್ಯಾದೆ , ಕೊಡಿಗೆಗಳು  ಮುಂತಾದ ಕಾರ್ಯಗಳನ್ನು ಮೇಲ್ವಿಚಾರಣೆ
 ಮಾಡುವ ಅಧಿಕಾರಿ .
ಸೇನಬೋವ - ಗ್ರಾಮಗಳ ಲೆಕ್ಕಪತ್ರಗಳನ್ನು ನೋಡಿಕೊಳ್ಳುವವನು 
ಮಹಾಸಾಮಂತಾಧಿಪತಿ  -  ಸಾಮಂತರಿಗೆ ಅಧಿಪತಿಯಾಗಿದ್ದು ಆಧಿಪತ್ಯದ ಬಾಕಿಗಳನ್ನು ವಸೂಲಿ ಮಾಡಲು ಮಹಾರಾಜರಿಂದ ನೇಮಿಸಲ್ಪಟ್ಟ ಅಧಿಕಾರಿ  

----------------------------------------------------------------------------------------------



  MASTER OF THE MUSTACHIOED



Honnamaraya Nayaka had just returned home from a far off place and was tying up his horse in the stable when he heard Mother’s voice :
“ Are you coming to eat or are you going to stand before the mirror forever , preening like Darpanasundari ? 
“ Coming ! Coming !” Came Father’s reply , “wait a while , this mustache  is not behaving today , I have to groom it a bit more. ”
  

Honna smiled. ‘The Darpanasundari sculpture is said to be an epitome of  stylish beauty , poise and elegance. Whereas Father is the epitome of ruggedness and a brash personality. It is peculiar that Mother compares the two …..’

But when he entered the house and  caught sight of Father , he couldn’t suppress a giggle.

With a mirror held in one hand , Father was combing and moulding his luxuriant mustache into a perfect shape , turning his face this way and that for better viewing . The two ends of his glistening  mustache  were twisted and sharpened into what looked like daggers that projected well beyond his cheeks.

Honna was filled with pride ! The title “ MASTER OF THE MUSTACHIOED” , which had been bestowed on Father by the Royal Court was fully justified, in fact it seemed specially created for him !
Honna went into the kitchen saying :
“ Avva ,  why do you rag Appayya everyday about his mustache! ……it is his Pride and has Status Symbol.  

“ Oh , you are back home too !   Mother placed a banana leaf for him   “Sit down and have your meal .  Your Father does  not need an advocate !......but I tell you , son, that mustache  has become such an obsession for him. ” she sighed.

“ Don’t talk lowly of it , Avva ! It is no joke to have earned the title,  MASTER OF THE MUSTACHIOED , such an honour from the Royal Court of  Veera Ballala , the most powerful Emperor of the Southern Land ! You don’t  know its value !”

“ Ah son ! Don’t I know its Value when I have worked overtime all my life for its  proper upkeep ?! …….Do you know what is the first thing  your Grandmother , my dear Mother-in-law , told me when they brought me to this home as a bride ? ‘Lakumi ! I entrust my son’s  Mustache to your care.  From this day onwards it is your foremost duty to nourish and look after it with utmost care and diligence!  That’s what she said !” 

Honna burst out laughing.
 “ Don’t laugh ! I am not joking ! All these years , I have been toiling tirelessly to keep your father’s mustache in good condition. In fact , I have given it more care than I have given you, my child!”
Father came and sat down for the meal ,  saying “ Enough of your mustache mythology  !”
“ Not MY mustache  mythology  , YOUR mustache mythology, our Darpanasundara !” Retorted Mother , serving them the food .

“ Avva , you always talk of Darpanasundaris , Shukabhashinis , Veerayochites, Kapikupites…which you have told me are beautiful sculptures you can never forget. The more I hear of them, the more I wish to see those wonders.”

“ Wonders  indeed !  how  can I ever forget our Dwarasamudra - such a beautiful and prosperous capital  it was….all plundered , destroyed and laid waste by that Chieftain of the Sultan ….Malik Kafur ….” She sighed deeply “ Thankfully , to our punya , Velapuri  escaped such destruction…….we will visit there someday , we will visit Hoysaleshwara temple and the Chennakesava temple  in our old capital Velapuri and see all those wonderful Stone Maidens (Shilabalike) ……someday, when your Father’s job makes it possible  !”

“ Our good king has plans to rebuild Dwarasamudra ,” said Father “when that happens , we can move to our old native land ……but who can say when that will be ! It is a difficult job, keeping the vast Southern Land unified as Hoysala Samrajya.  There  is constant threat from The Delhi Sultans from one side and The Madurai Sultans from the other  ……the King has to be here in this Unnamalai Patnam because it offers a strategic position to keep an eye on the Delhi menace. As his MahaPasayitha I have to be stationed here only, what to do !  
“ Please don’t regret   said his wife , kindly “ When the time is good , we can certainly take a holiday to visit …….Ok , forget that! Our Honna has just  returned from his trip..tell us, Son, how did it go ?  
“ It must have gone well, I have no doubt !   Said Father, “ He can give his full report to the King at Court tomorrow.   
“ What !   jumped up Honna , totally astonished “ Me ! Report to The King himself ? ! …..I thought you sent me to get some experience ! I am to come to The Court?? !!!  



 “ What's the wonder !   said Father gruffly , “You already have a young mustache adorning your face , you are no longer a child , have you no ambition to serve in Court ?” He got up to fetch his betel nut box ,“Go and rest well Son and do me proud in Court tomorrow …..and I see you have neglected your little mustache  during you trip, it is looking untidy  …… your mother will  warm up some beewax for you , apply it and groom it well. Whatever you do , wherever you are , you should always keep an eye -and a hand- on the well being of your mustache , you hear me ?  
Mother and Son looked at each other and smiled.

Since it was the first time Honna was visiting the Court , Father took him to the temple first to get blessings , before going to the palace.

At the Arunachaleshwara temple, the sight of the Gopura (tower of the grand portal) constructed by King Veera Ballala, an ardent devotee of Shiva , filled Chikka Bayireya Nayaka with awe and pride. As they passed under the tower , which was famed as “Veera Vaibhoga Vallala Maharaja Gopuram”, the devotion that filled his heart was as much for his  King as for the God in the shrine.

Honna too was equally in awe.  “ Is the Gopura of the temple in our native place  similar to this, Appayya ?   he asked.
“ That is a grand temple too , but of a totally  different style. Whatever the style of building , all shrines are built with the same devotion ……..but one thing I find very interesting.There are so many similarities between that old capital and this present capital.  
“ Like what, Appayya  ?”
“ The old Capital was Dwarasamudra. This is ArunaSamudra which is another name for this  Unnamalai Pattana. 
The God there was named Hoysaleshwara,  here Arunachaleshwara.  Dwarasamudra is beside Bennegudda of Western Ghats. ArunaSamudra is beside Arunagiri of Eastern Ghats! 
“ Could this be a reason for the king to choose this as his new Capital ? ”
“ That’s just my guess , Son. He is the son of a long lived dynasty that was residing in that place. He must surely have a fondness for the Native land and so could have chosen a place that reminds him of that home. 

While returning from the shrine after a good darshan , they came across many acquaintances  who greeted them. Almost everyone called Father by his honorific title Meeseyara Ganda  (MASTER OF THE MUSTACHIOED) and uttered a word or two of admiration for his magnificent mustache. It filled his chest  with great pride and his  fingers automatically raised up to twirl his glory while  his eyes shone with immense happiness.

Honna , though equally proud of his Father’s mark of distinction, was also a little bit uncomfortable with his father’s preening and gloating. He even wondered if  Father was only thinking about  his mustache even when watching the puja inside the shrine !

‘Che ! Its indeed an obsession with him, as Avva says. Must do something to cure him of it. he told himself.

As they rode side by side towards the Palace , Honna called in a hesitant voice : “ Appayya ….can I say something ?”
“ Whats it Honna ? Are you nervous about meeting the King ? Fear not , my lad. He may be the mightiest monarch , but is a really good and simple person. Be at ease !
“ No Appayya …..that's not it …..its something else that bothers me ……your  obsession with your mustache…….Don't you feel it is going beyond limit ? 
His Father’s face darkened and his pleasant mood vanished.
He rode in silence for a while.

Then, with a little sigh, he said softly , “ Honna , just as you are riding with me to meet the King , I once rode with my father to the Royal Court to meet this very king  ………”

He  started telling his son the story of his life , dug up from the deep well of old memories ……..

Chikka Bayira , who had just turned 15, had a busy life. He woke early , read and wrote lessons , took the cattle out to graze, supervised work on the family’s fields , documented the accounts and transactions related to their farm, went to the Akhada with his friends to do physical training like mallakhamba and weightlifting, played kabaddi and swam for pastime ... he spent his time happily.
But his merriment all went up in smoke the very first time he faced The King.

There sat  the imperious  King Veera Ballala ,  in his high throne, a well built , heroic, strongman  who could easily fight off an elephant with bare hands , twirling his majestic mustache with his bejewelled fingers , looking every inch like a victorious Bhairava!

 Awestruck  Chikka Bayira’s throat went dry and all he could do was stare at the amused king when his father introduced him:

“ May it please my Lord , I humbly present to you my son Chikka Bayireya Nayaka , who is now ready to serve at the noble  feet  your lordship. I beg Highness  to order a fit appointment for him in the court so he can prove himself to be a faithful servant of My Lord.”

Having recited this, his father bowed to the throne deep and low while Chikka Bayira stood rooted , open mouthed. Only when his father nudged him hard on his side did he shuffle and fall  in full prostration.

The king laughed and remarked : “ Hmm ! For service at my court ! And not a shadow of a mustache  to be seen on the smooth young face yet ! 

The words stung Chikka to the core. Even the good news that the King agreed to employ him  brought no cheer.

“ Whats wrong with him !  wondered his Mother that evening, “What a wonderful fortune it is to get employed in Court ! Yet this boy sits sulking ! 
“ Our little prince got offended because the king  said there is no sign of mustache on his face !....” said the exasperated father, “what a silly boy ! 
“ Oh dear ! Is that all ! Laughed Mother , patting his back “he must have only said that in jest. Why get so upset about a small remark ?”

‘These people  will never understand my pain !’ Thought  Chikka  sadly.


                                                                                   

Indeed , how will they know what agony of disappointment and self pity he went through every time a friend  flaunted a few thin strands of hair sprouting on his upper lip !  ……one by one all his friends had started obtaining that prized mark of promotion from Childhood. Shadowy lines , tiny stubbles , picture- perfect mustaches, even uneven wild growth - they all had something or the other to feel proud about, to groom , to keep bragging about …….
While Chikka’s upper lip remained smooth as a baby’s. Every morning when he woke up,  he would frantically run his fingers under his nose to see if even a slightest new growth could be felt! Nothing !

And now to have his shortcoming pointed out in Court by the King! He cringed and cried within.
His parents tried to cheer him up in various ways.
 “ My boy , our Clan is famed for mustaches. Even if you cry that you don’t want one , your face will be drowned in rakshasa- hair before you are 16 ! Said Father.
“Look my dear, 15 years is not old age ! You still have plenty of time to grow a mustache !  said Mother.
“ Eat plenty of nutritious food  and pots of milk for 45 days ! Why just mustache ! you will be having a  beard and jata too , like a rishi, by the end of it !  Advised Father. 

Mother put that advice to real action too. She cooked greens and pulses and vegetables and eggs specially for him. She made rich beverages  with milk,  nuts and millets. She gave him a ball of freshly churned butter to rub into his face every evening.
All this care made him a muscular,  athletic young man ….but his face remained smooth.

With great hesitation he would ask his friends what they did to hasten hair growth. They blinked. They had done nothing , Nature had just bestowed that gift on them !
‘How cruel and partial Nature is!  sulked Chikka and Mother felt very sad for him. Not for long.

One day , Mother returned from the bazar , in high spirits , and set about cooking something in a large pot.
By the time  Chikka returned home from his games , the whole house was smelling of something delicious.
“ What are you cooking , Mother ! Is it any Feast day ?”
“ No feast !  she distilled a dark brown  coloured oil into a container. “ just  Magical Oil ! 



“ What !? 
“ ... you know that Kathyayini who had gone on pilgrimage for two three months ? I met her today in the Bazar. Before she left she had hair enough only to make  a mouse tail of a plait. And now , you should see her ! Such a glorious cascade of thick , black hair, upto her thighs ,  that she is flaunting in a huge stylish hairdo  around her head ! Simply unbelievable ! 
“ Really ?”
“ So I got the recipe of the hair oil that had helped her and here it is, all ready for use ! 
“ But Mother, you already have nice long hair , why do you need this magic oil ? 
“ Silly boy ! Not for me. Its for you !”
“ Waaa ! I don’t want long hair like Kathyayini !”
“ Sillier boy ! You want hair ….not on your head , but under your nose , don’t you ! ”
“ Mother , my dearest ! He flung his arms about her.
What magical ingredients does it have that it smells like a tasty snack ? 
“Just ordinary stuff we have in the kitchen. Two seers of this oil, one seer of that  oil, this much  Nellikayi , that much menthya , so much  Karibevu , chopped onions …..”
“ Onions !” He gave a startled cry, “ No wonder it smells like a snack ! But how can I rub onion flavoured oil on my face and go out, Avva !
Mother put her hands on her hips and glared at him : “You want a mustache growing soon or not ! ”
That ended the matter.

The Magic Oil routine was initiated by Mother  on an auspicious day at an auspicious time. The whole house smelt of fried onions, but the whole family hoped for the best.

Chikka applied the oil faithfully every day, massaged it well  and let it soak in.
Just as he had feared , the constant smell of onions around him, drew comments from all his friends.
“ What Bayira ! You  have started eating onions everyday ? 
“ Onion Bajji everyday is going to make you a Bonda soon ! 
“ Stingy Bayira ! Eating Onion Bajjis everyday but not sharing one with us ! 
Within a week , they had given him a nick name too : “ Here comes Sriman Onion Bajji !” They would chorus as soon as he joined them.
Whatever the ragging he faced, Chikka never let out a word about his experiment with the Magic Oil.

He put up with everything , not losing faith in the oil. Just to keep his friends from pestering him too much , Mother made some onion snacks now and then and distributed to the boys.

All this secrecy and  trouble paid off when one fine morning  Chikka felt something under his nose ! He ran excitedly to fetch the mirror and peered into it.
 In the golden morning sunlight , under his nose shone a line of just germinating hair !

“ Mother !!! Father !!! Look !!!” He jumped and danced with unbounded joy ! The Miracle had happened !
His parents came running. They turned his face this way and that to get a good view. They hugged him , blessed him and exorcised the Evil Eye. They lit a lamp and cooked payasa  to thank the gods and grandfathers for the boon.

After that, there was no looking back . The mustache grew in leaps and bounds,  like a jungle after a flood.
 It grew to the left , it grew to the right and all over the middle too. It got wavy, it got bushy and it got tangled too.

Chikka tended to it as lovingly as he tended the  new born calves. He washed and wiped and oiled and combed it.
When it became so luxuriant that it started getting into his mouth when he ate, Father told him to get a barber to trim it.
“ No !  Screamed Chikka in horror. He wasn’t going to let any one put a finger on his precious mustache.
“ Alright then, keep it braided !” Scoffed Father.

Mother went around town, talking to people ,  looking for some clue to bringing  a wild mustache under control. And she found out about beewax. Melted bee wax tamed the wild growth and Chikka could fashion the waxed hair into long sword like accessories pointing to  his  jaws or train the edges upwards like the horns of a mighty buffalo !

His styles became the talk of the town ; the magnificent mustache earned him name and  fame.

The story of his father’s precious mustache touched Honna’s heart. Poor Father had to face so much mental agony and pains to earn his mustache !
“ Appayya ! I never knew getting a mustache could be such a struggle !  he said kindly.
“ Honna ! Never under estimate value of the  the gifts you receive , even if they are obtained with no trouble at all. Value everything!  said the father gravely.

Soon they arrived at the Court.
Honna was going to meet the same king who had made fun of Father for not having a mustache !
He must be weak and old now !  Wonder what he would say to me! 

The king on the throne looked anything but weak and frail. Though his hair was turning gray , his body was still erect and fit as a wrestler’s. It seemed like he could  still grapple with a wild elephant easily. The Lion had aged , but was still a Lion.

“ Greetings , My Lord ! This is my son Honna Maraya Nayaka. I had sent him on a tour to assess the circumstances of the people to whom your Highness wishes to make grants. I felt it could give him some experience on situations in the kingdom, which will help him if he gets into Court Service.”

“ Let us hear what the young man has to say ! ordered the King.

Honna was nervous as he bowed and presented his report.
“ Allayya , son of the Maha Samanthadhipati  Pemma Devarasa, intent  upon achieving good for his people without taking advantage of his Father’s status , has been giving education to children near the old ruined Shivalaya. He not only teaches them, he also feeds them Ambali  made by himself at his home. Some children from neighbouring villages too attend his classes for knowledge as well as for the food he gives. He is truly  a noble  soul ,  I have seen his selfless service with my own eyes and also heard of it  from people around .

*“ Well done ! ….Hear,  O Chikka Bayire Nayaka ! Let that ruined Shivalaya be renovated and arrangements made for worship and offerings. Let a building be raised near the temple to function as a school for the children. Along with the Ambali given by Allayya , let the food offering made to God be also served to the Students. And to pay for all these , may Allayya be granted the villages of Somidevanahalli, KalthammanaHalli, Petedri , Mavinakere and Huravmardiyakere. 

Having issued this order, the King looked at Honna for the next report.

Feeling a bit more confident now , Honna presented his next note.
“ The Accountant Allala seems to be around my age . The previous Accountant , his father has fallen very ill and is  bed ridden. Allala has six younger siblings, a mother and an aunt to look after in addition to giving his father the medical help he needs. Allala is managing all this with great difficulty on the small income he gets from  a little piece of land he owns and tills. In spite of all this, he has been doing diligent work as the Accountant, keeping accounts of the district in perfect order. 

#“ Very well ! .... Listen O Manu Maha Savanthadhipati Meeseyara Ganda Chikka Bayireya Nayaka’s son Honnamaraya Nayaka ! Grant unto the Senabova Allala the place named Chatusseeme that lies within Jakkur province belonging to this region, as a Tax Free gift to last till the Sun and the Moon shine in the sky and have it writ in stone to last forever. 


When the king uttered this order to Honna, and mentioned Chikka Bayira Nayaka as Maha Savanthadhipati , both were astounded and rendered speechless.
The king gave a hearty laugh and explained : “ When the Son is inducted into Service , isn’t it fair that  the Father be promoted to the next level !
Honna and his father, folded their palms and bowed to the King in gratitude. Veera Ballala twirled his greying mustache and nodded acceptance.

The King then addressed Honna , newly appointed to Court duty :
“ O Honnamaraya Nayaka ! Just sporting a nice, huge mustache is of no use ! You have to earn the title ( Meeseyara Ganda) Master of The Mustachioed ! And that is possible only if you serve the kingdom with diligence and honesty like your father. Is that clear?

“ Yes My Lord ! I will, your Majesty ! replied Honna , wondering about the irony in the King’s sense of humour.  ‘Ragged Father for not having a mustache , ragging me for having one !  But the best candidate who deserves  to be awarded the Meeseyara Ganda title would be our wonderful King , Veera Ballala Maharaja himself! 
---------------------------------------------------------------
This fictional story  is based on the inscriptions of *Ganigarahalli and #Jakkur.
Equivalents of certain Names mentioned in the story.
MahaPasayitha - Officer overseeing arrangements in Palace, Court Protocol and Presentation of Gifts
Maha Savanthadhipati - Chief of Chieftains
Senabova - Village Accountant
Dwarasamudra - Halebidu
Velapuri - Belur
Unnamale Pattana - Thiruvannamalai 

-------------------------------------------------------------------------------------------------------

2 comments: