Saturday, April 6, 2019

ಕೊಡಿಗೆ / The Grant

 ಕೊಡಿಗೆ


ಸಕನಸಮುದ್ರದೊಳಗಣ ಊರಲ್ಲಿಯ ಸೋಮೇ ದೇವರ ಗುಡಿ ಚಿಕ್ಕದ್ದಾಗಿದ್ದರೂ ಚೊಕ್ಕದಾಗಿತ್ತು. ವಿರೂಪಾಕ್ಷ ದೇವಾಲಯದಲ್ಲಿದ್ದಂತಹ ಕೆತ್ತನೆಗಳೋ ವರ್ಣ ಚಿತ್ರಗಳೋ ಸುಂದರವಾದ ಶಿಲ್ಪಿ ವಿನ್ಯಾಸಗಳೋ ಎಲ್ಲೂ ಕಂಡುಬರಲಿಲ್ಲ. ಆದರೂ ಮಲ್ಲೆಮಾಲೆ, ಬೆಳ್ಳಿಯ ನಾಗಾಭರಣ, ಹತ್ತಿಯ ವಸ್ತ್ರ ಧರಿಸಿ ಗರ್ಭಗುಡಿಯಲ್ಲಿ ಆಸೀನನಾಗಿದ್ದ ಸರಳ ಸುಂದರವಾದ ಸೋಮೇ ದೇವನ ದಿವ್ಯ ವಿಗ್ರಹ ಕಣ್ಮನ ಸೆಳೆಯುವಂತಿತ್ತು.
ಒಬ್ಬಿಬ್ಬರ ಹೊರತಾಗಿ ಗುಡಿಯಲ್ಲಿ ಬೇರೆ ಜನರ ಸಂದಣಿಯೇ ಇಲ್ಲ. ಅರ್ಚಕರು ಸಂಧ್ಯಾ ಕಾಲದ ಪೂಜೆಯ ಪ್ರಯುಕ್ತ ಬಿಲ್ವಾರ್ಚನೆಯನ್ನು ಮಾಡುತ್ತಿರಲು, ಭಕ್ತಿಯಿಂದ ಕೈ ಮುಗಿದು ನೋಡುತ್ತ ನಿಂದ ಬಾಲೆಯ ಎಳೆ ಮನಸ್ಸು ಬೇಡಿಕೆಗಳಿಂದ ತುಂಬಿ ಹರಿಯುತ್ತಿತ್ತು.
' ದೇವರೇ! ಪದೇ ಪದೇ ಯುಧ್ಧಕ್ಕೆ ಹೊರಡದೆ, ಒಂದೇ ಬಾರಿಗೆ ಎಲ್ಲ ಯುಧ್ಧಗಳನ್ನೂ ಗೆದ್ದು ಅಪ್ಪಾಜಿಯವರು ವಿಜಯಶಾಲಿಯಾಗಿ ಹಿಂದಿರುಗಬೇಕು. ನಂತರ ಸದಾ ನಗುನಗುತ ಸುಖ ಶಾಂತಿಯಿಂದ ಶಾಶ್ವತವಾಗಿ ನಮ್ಮೊಂದಿಗಿರಬೇಕು. ಅಪ್ಪಾಜಿಯವರನ್ನು ಆಗಾಗ್ಯೆ ಬಹುಕಾಲ ಅಗಲಿರುವುದು ಸಾಧ್ಯವಾಗುತ್ತಿಲ್ಲ. ನಮ್ಮ ಊರ ವಿರೂಪಾಕ್ಷನಲ್ಲಿ ಅನುದಿನವೂ ಬೇಡುವುದನ್ನೇ ನಿನ್ನಲ್ಲೂ ಬೇಡುತ್ತೇನೆ. ಕರುಣಿಸು ಸೋಮೇ ದೇವಾ.'
ಅರ್ಚನೆ ಮುಗಿಯಿತು. ಹಣ್ಣುಗಳ ನೈವೇದ್ಯವಾಗಿ ಮಂಗಳಾರತಿಯೂ ಆಯಿತು.
ಮಂಗಳ ಆರತಿಯನ್ನು ಕಣ್ಣಿಗೆ ಒತ್ತಿಕೊಂಡ ಬಾಲೆಯ ಕೈಗೆ ವಿಬೂತಿಯನ್ನು ಕೊಟ್ಟು   "ಮಂಗಳವಾಗಲಿ!" ಎಂದು ಶುಭ ನುಡಿದರು ಅರ್ಚಕರು.
"ಅಯ್ಯ! ಸೋಮೇ ದೇವರಿಗೆ ಬರಿ ಹಣ್ಣಿನ ನೈವೇದ್ಯ ಸಾಕೆ? ನಾಳೆಯ ಪೂಜೆಯವರೆಗೆ ಅವರಿಗೆ ಹಸಿವಾಗದೇ ಇರುತ್ತದೆಯೇ?"
ಮುಗ್ದ ಬಾಲೆಯ ಮುಗ್ದ ಪ್ರಶ್ನೆ ಅರ್ಚಕರ ಮೊಗದಲ್ಲಿ ಕಿರುನಗೆಯನ್ನರಳಿಸಿತು.
"ನಮ್ಮ ಸೋಮೇ ದೇವ ಬಹಳ ಸೌಮ್ಯಮೂರ್ತಿಯಮ್ಮ! ಒಪ್ಪೊತ್ತು ಮಹಾ ನೈವೇದ್ಯ ! ಉಳಿದ ಸಮಯ ಹಣ್ಣು ಕಯಿಂದಲೇ ತೃಪ್ತನಾಗಿ ಅನುಗ್ರಹ ಮಾಡುತ್ತಾನೆ ! " ಎಂದು ನಗುತ್ತಲೇ ನುಡಿದರು ಅರ್ಚಕರು.
'ಇಷ್ಟು ಪುಟ್ಟ ಹುಡುಗಿ ! ಇವಳಿಗಿರುವ ಕಾಳಜಿ, ಭಕ್ತಿ ಈ ನಮ್ಮ ಹಳ್ಳಿಗರಿಗಿಲ್ಲವೇ !' ಎಂದುಕೊಂಡರು.
"ಸೋಮೇ ದೇವರ ಮೇಲೆ ನಿನಗೆ ಅದೆಷ್ಟು ಅಕ್ಕರೆಯಮ್ಮ ! ನಿನ್ನನ್ನ ಈ ಮೊದಲು ಈ ಊರಲ್ಲಿ ನಾನು ಕಂಡಿಲ್ಲವಲ್ಲ? ನೀನು ಯಾರಮ್ಮ?'' ಎಂದು ವಿಚಾರಿಸಿದರು.
"ಹವುದು ಅಯ್ಯ! ನಾನು ಈ ಊರಿಗೆ ಬಂದಿರುವುದು ಇದೇ ಮೊದಲ ಬಾರಿ !"
 ಬಾಲೆ  ಮಾತು ಮುಂದುವರಿಸುವ ಮುನ್ನ "ಹೊತ್ತು ಮೀರಿದೆ ! ನಾವಿನ್ನೂ ಹೊರಡೋಣವೇ?" ಎಂದು ಅವಸರಪಡಿಸಿದಳು ಜೊತೆಯಲ್ಲಿದ್ದ ಸಖಿ.
ಅದೇ ಸಮಯ ನಾಲ್ಕು ಅಶ್ವಾರೋಹಿಣಿಯರ ನಡುವೆ ಗಡಿಬಿಡಿಯಿಂದ ಸಾಗಿ ಬಂದು  ಗುಡಿಯ ಬಾಗಿಲಲ್ಲಿ ನಿಂತಿತು ಒಂದು ಪಲ್ಲಕಿ. ಮುಂದಿದ್ದ ಕುದುರೆಯಮೇಲಿಂದ ಜಿಗಿದು ಇಳಿದ ಅಶ್ವಾರೋಹಿಣಿ ವೇಗವಾಗಿ ಗುಡಿಯೊಳಗೆ ನುಗ್ಗಿದಳು.
"ರಾಜಕುಮಾರಿ ! ನಿಮ್ಮನ್ನ ಎಲ್ಲಕಡೆ ಹುಡುಕಿ, ಕೊನೆಗೆ ಇಲ್ಲಿಗೆ ಬಂದೆವು. ಬಹಳ ಹೊತ್ತಾಗಿಹೋಗಿದೆ ! ಮಹಾರಾಣಿಯವರು ಬಹಳ ಚಿಂತಾಕುಲರಾಗಿ ಪಲ್ಲಕಿಯನ್ನು ಕಳುಹಿಸಿಕೊಟ್ಟಿದ್ದಾರೆ. ಇನ್ನು ಹೊರಡೋಣವೇ ? " ವಿನಯದಿಂದ ನುಡಿದರೂ ಅವಳ ಮಾತು ಕಟ್ಟುನಿಟ್ಟಾಗಿಯೇ ಇದ್ದಿತು.
ಬೆರಗಿನಿಂದ ಬಾಯಿಬಿಟ್ಟು ನಿಂತ ಅರ್ಚಕರು "ಆ ! ರಾಜಕುಮಾರಿಯೇ ? ನಮ್ಮ ರಾಜಕುಮಾರಿ ವಿರೂಪಾಕ್ಷಿ ದೇವಿಯೇ ?" ಎಂದು ಚಡಪಡಿಸಿದರು.
"ಅಮ್ಮ ! ಒಂದು ನಿಮಿಷ ತಾಳು !" ಎನ್ನುತ್ತ ಗರ್ಭಗುಡಿಯಿಂದ ಸೋಮೇ  ದೇವರು ಮುಡಿದಿದ್ದ ಮಲ್ಲೆಮಾಲೆಯನ್ನು ತಂದು ರಾಜಕುಮಾರಿಯ ಕೈಗಿತ್ತರು. ಒಂದು ಪೊಟ್ನ ವಿಭೂತಿಯನ್ನು ಕೊಟ್ಟು, " ರಾಜಕುಮಾರಿ ! ಇದು ರಕ್ಷೆ! ಯಾವಾಗಲೂ ಮಹಾರಾಜರ ಬಳಿಯೇ ಇರಲಿ. ಯಾವ ಕಂಟಕವೂ ಅವರ ಬಳಿ ಸುಳಿಯದಿರಲಿ." ಎಂದು ಗದ್ಗದಿತವಾದ ದನಿಯಲ್ಲಿ ನುಡಿದರು.
ರಾಜಕುಮಾರಿಯನ್ನು ಕಾಣಲೆಂದು ಜನ ಕೂಡುವಮುನ್ನ, ಅವಳನ್ನು ಪಲ್ಲಕಿಯಲ್ಲಿ ಹತ್ತಿಸಿಕೊಂಡು ಹೊರಟುಬಿಟ್ಟಿತು ಅಶ್ವಾರೋಹಿಣಿಯರ ಸಣ್ಣ ಪಡೆ.

 ವೇಗವಾಗಿ ಸಾಗುತ್ತಿದ್ದ ಪಲ್ಲಕಿಯ ಪರದೆಯನ್ನು ಪಕ್ಕಕ್ಕೆ ಸರಿಸಿ ಹೊರಗೆ ಕಣ್ಣು ಹಾಯಿಸಿದಳು ವಿರೂಪಾಕ್ಷಿ.
ಅಸ್ತಮನದ ಸಮಯ. ಇಡೀ ಆಕಾಶದಲ್ಲೆಲ್ಲ ವಿವಿಧ ಬಣ್ಣಗಳನ್ನು ಚೆಲ್ಲಿ ವಸಂತೋತ್ಸವ ಆಚರಿಸುತ್ತಿದ್ದ ಸೂರ್ಯದೇವ.
 ಕ್ಷಣಕ್ಕೊಂದು ವಿನ್ಯಾಸ ರಚಿಸಿ ಆಕಾಶದಲ್ಲಿ ತೇಲಿ ಹೋದ ಹಕ್ಕಿಗಳ ಸಾಲು -
 ಸಣ್ಣ ಪುಟ್ಟ ಕೊಳಗಳಲ್ಲಿ ಮುದುಡ ತೊಡಗಿದ್ದ ನೈದಿಲೆ ಹೂವುಗಳು -
ಕೆರೆಯ ನೀರಿನಲ್ಲಿ ಆಟವಾಡಿ ಬಂದು ಮೈಮನ ತಣಿಸಿದ ತಂಗಾಳಿ -
ಸುತ್ತ ಮುತ್ತಣ ಪ್ರದೇಶಗಳಲ್ಲಿ ಹಸಿರು ಹಾಸಿದ್ದ ಹೊಲ ಗದ್ದೆಗಳು -
ಪರಿಮಳ ಸೂಸುವ ಮಲ್ಲಿಗೆ ಶ್ಯಾವಂತಿಗೆಯ ಹೂದೋಟಗಳು -
ಹಾದು ಹೋಗುತ್ತಿದ್ದ ಪಲ್ಲಕಿಯನ್ನು ಮಿಣಿ ಮಿಣಿ ನೋಡುತ್ತ ಮರಗಳ ರೆಂಬೆಗಳಲ್ಲಿ ಉಯ್ಯಾಲೆಯಾಡಿದ ಮರ್ಕಟಗಳು -
"ನೋಡು ಕಾಂತಿ ಇವುಗಳ  ಚೇಷ್ಟೆಯನ್ನ! ಎಷ್ಟು ತಮಾಷೆಯಾಗಿದೆ !" ಎಂದ ವಿರೂಪಾಕ್ಷಿ ಕಿಲಕಿಲ ನಕ್ಕಳು.
"ಹೌದು ರಾಜಕುಮಾರಿ !"
 ಸಖಿಯ ಸಪ್ಪೆಯಾದ ಉತ್ತರದಿಂದ ಬೇಸರಗೊಂಡಳು ವಿರೂಪಾಕ್ಷಿ.
ಎಂತಹ ಮನೋಲ್ಲಾಸಕರ  ದೃಶ್ಯಗಳು ! ಈಗ ಅಪ್ಪಾಜಿ ಜೊತೆಯಲ್ಲಿದ್ದಿದ್ದರೆ ಎಷ್ಟು ಹಾಸ್ಯ ಚುಟುಕಗಳನ್ನು ಹೇಳುತ್ತಿದ್ದರು ! ಈ ಶಿವನಸಮುದ್ರದ ಸೀಮೆಯ ಚೆಲುವಿನ ಬಗ್ಗೆ ಕವಿತೆಯನ್ನೇ ರಚಿಸುತ್ತಿದ್ದರು ! ಇಲ್ಲವೇ ಇಂತಹ ಸುಂದರ ದೃಶ್ಯಗಳನ್ನು ಕಂಡಾಕ್ಷಣ ಪಲ್ಲಕಿಯಿಂದಿಳಿದು ಕುಂಚ ಹಿಡಿದು ಅವನ್ನು ಚಿತ್ರಗಳಾಗಿ ಬಣ್ಣಿಸುತ್ತಿದ್ದರು !
ಪ್ರಕೃತಿ ಸೌಂದರ್ಯವನ್ನು ಆರಾಧಿಸುವ ಕಲೆಯನ್ನು ವಿರೂಪಾಕ್ಷಿಗೆ ಚಿಕ್ಕಂದಿನಿದ್ದಲೇ ಬೋಧಿಸಿದ್ದರು ಅಪ್ಪಾಜಿ. ಎಷ್ಟೋ ಬಾರಿ ಕತ್ತಲ ತೆರೆ ಸರಿಯದ ಮುಂಜಾನೆ ಹೊತ್ತಿನಲ್ಲಿ ಅವಳೊಂದಿಗೆ ಮಾತಂಗ ಬೆಟ್ಟದ ಶಿಖರ ಹತ್ತಿ ಅದ್ಭುತವಾದ ಸೂರ್ಯೋದಯವನ್ನು ಅವಳಿಗೆ ತೋರಿಸಿದ್ದರು.
ಹೊಂಬಣ್ಣದ ಬೆಂಕಿ ಚೆಂಡಿನಂತೆ ಕ್ಷಿತಿಜವನ್ನು ಸೀಳಿಕೊಂಡು ಮೇಲೇರುತ್ತಿದ್ದ ಸೂರ್ಯ- ಹೊಂಗಿರಣಗಳಲ್ಲಿ ತೊಯ್ದು ಚಿನ್ನದ ಮುಲಾಮು ಲೇಪಿಸಿಕೊಂಡಂತೆ ಬೆಟ್ಟದ ಬುಡದಲ್ಲಿ ರಾರಾಜಿಸಿದ  ವಿಜಯನಗರದ ರಾಜಧಾನಿ ವಿರೂಪಾಕ್ಷಪುರ -
ಗದ್ದೆ ತೋಟಗಳ ಹಸಿರು ಹರಹಿನ ಮಧ್ಯೆ ಜರತಾರಿ ಅಂಚು ಕಟ್ಟಿದಂತೆ ಹರಿದ ತುಂಗಭದ್ರೆ -
ಉಷತ್ಕಾಲದ ಸುಂದರ ದೃಶ್ಯಗಳು ಅವಳ ಮೊಗದಲ್ಲಿ ಮೂಡಿಸಿದ ಬೆರಗಿನ ಭಾವವನ್ನು ಕಂಡು ಅಪ್ಪಾಜಿಯವರಿಗೆ ಉಂಟಾದ ಹೇಳಲಾರದಷ್ಟು ಆನಂದ -
ಅಪ್ಪಾಜಿಯವರೊಂದಿಗೆ ಇರುವುದೇ ಒಂದು ಸಂತಸದ ಅನುಭವ. ವಿಜಯ ಯಾತ್ರೆಯನ್ನು ಮುಗಿಸಿಕೊಂಡು ರಾಜಧಾನಿಗೆ ಹಿಂದಿರುಗಿದ ಅಪ್ಪಾಜಿ , ತನ್ನ ಮನಸ್ಸಿನ ಹಂಬಲವನ್ನು ಅರಿತುಕೊಂಡವರಂತೆ ಸ್ವತಃ ಈ ಪ್ರವಾಸಕ್ಕೆ ಏರ್ಪಾಡುಗಳನ್ನು ಮಾಡಿದರು. ಯಾವ ತೊಂದರೆಯೂ ಇಲ್ಲದೆ ಯಾರ ಕಾಟವೂ ಇಲ್ಲದೆ ತನ್ನ ಕುಟುಂಬದವರೊಂದಿಗೆ ಹಾಯಾಗಿ ಸ್ವಲ್ಪ ಕಾಲ ಕಳೆಯಲು ನಿರ್ಧರಿಸಿದರು. ಆ ಸಂತೋಷಕರವಾದ ಪ್ರವಾಸಕ್ಕೆ ಅವರು ಆರಿಸಿಕೊಂಡ ತಾಣ ಅಪಾರ ಜಲ ಸಂಪತ್ತನ್ನು ಹೊಂದಿದ್ದ ಈ ಸುಂದರವಾದ ಶಿವನಸಮುದ್ರಸೀಮೆಯನ್ನ. ಆ ಸೀಮೆಯ ಒಂದು ಉಪವನದಲ್ಲಿ ಸೌಕರ್ಯವಾದ ಗುಡಾರಗಳನ್ನು ನಿರ್ಮಿಸಲು ಆಜ್ಞಾಪಿಸಲಾಯಿತು. ರಾಣೀವಾಸಕ್ಕೆ ಸೇರಿದಂತಹ ಪರಿಚಾರಿಕೆಯರು, ಸೇವಕಿಯರು, ದಾದಿಗಳು, ಸಖಿಯರು, ತಾಂಬೂಲ ಕಟ್ಟುವ ಕನ್ಯೆಯರು, ನರ್ತಕಿಯರು, ಗಾಯಕಿಯರು ಮುಂತಾದ ಒಂದು ಹೆಂಗೆಳೆಯರ ದಂಡನ್ನೇ ಸಕಲ ಸಾಮಗ್ರಿಗಳೊಂದಿಗೆ ಸ್ಥಳಕ್ಕೆ  ವರ್ಗಾಯಿಸಲಾಯಿತು.
ರಾಜಕುಮಾರನಾದ ಮಲ್ಲಿಕಾರ್ಜುನ ತನ್ನ ಗರಡಿ ಮನೆಯನ್ನೂ ಅಸ್ತ್ರಶಸ್ತ್ರ ಅಭ್ಯಾಸವನ್ನೂ ಬಿಟ್ಟಿರಲಾರದೆ ರಾಜಧಾನಿಯಲ್ಲೇ ತಂಗಲು ನಿರ್ಧರಿಸಿದನು.
ಆದ್ದರಿಂದ ಅಮ್ಮನನ್ನೂ ತನ್ನನ್ನೂ ಮಾತ್ರ ಕರೆದುಕೊಂಡು ಅಶ್ವಾರೋಹಿಣಿಯರ ಪಡೆಯೊಂದಿಗೆ ಪಯಣಿಸಿ ಬಂದು ರಾಜಗುಡಾರದಲ್ಲಿ ಠಿಕಾಣೆ ಹೂಡಿದರು ಅಪ್ಪಾಜಿಯವರು.
ಬಂದ ಒಂದೆರಡು ದಿನಗಳಲ್ಲೇ ಎಲಹಂಕ ನಾಡಿನ ಪ್ರಾಧಾನಿ ಮಂಗಪ್ಪ ಡಣ್ಣಾಯಕರೂ ಇನ್ನಿತರ  ಅಧಿಕಾರಿಗಳೂ ಸ್ಥಳಕ್ಕೇ ಆಗಮಿಸಿದರು. ಅಪ್ಪಾಜಿಯವರಿಗೆ  ಅವರೊಂದಿಗೆ ಹೋಗಿ ಮಂತ್ರಾಲೋಚನೆ ನಡೆಸಬೇಕಾದ ನಿರ್ಬಂಧವೇರ್ಪಟ್ಟಿತು.
'ಛೆ ! ಪ್ರವಾಸಕ್ಕೆ ಬಂದಕಡೆಯೂ ರಾಜ ಕಾರ್ಯವೇ ? ! ಇರಲಿ ! ಅವರು ಹಿಂದಿರುಗಲಿ ! ಇವತ್ತೆಲ್ಲಾ  ಅವರೊಂದಿಗೆ ಮಾತನಾಡುವುದೇ ಇಲ್ಲ !' ನಿರಾಶೆಯಿಂದ ಕರುಬಿದಳು ವಿರೂಪಾಕ್ಷಿ.
 ಗುಡಾರದಲ್ಲಿ ಕುಳಿತಿರುವುದು ಅವಳಿಗೆ ಬಹಳ ಬೇಸರವನ್ನುಂಟುಮಾಡಿತು. ಹಾಡು, ನೃತ್ಯ , ಆಟ, ಸಿಂಗಾರ ಮುಂತಾದ ಯಾವ ಮನರಂಜನೆಯೂ ಅವಳಿಗೆ ಬೇಡವಾಯಿತು. ಬೇಸರ ಕಳೆಯಲು ಗುಡಾರವನ್ನು ಬಿಟ್ಟು ದೂರದಲ್ಲಿ ಕಂಡ ಚಿಕ್ಕ ಊರನ್ನು ಕುರಿತು ಕಾಲ್ನಡಿಗೆಯಲ್ಲೇ ಹೊರಟುಬಿಟ್ಟಳು.
"ಬೇಡ ಮಗಳೇ ! ಇದು ನಮಗೆ ಪರಿಚಯವಿಲ್ಲದ ಬಹಳ ಸಣ್ಣ ಊರು. ನಮ್ಮ ಊರ ವಿರೂಪಾಕ್ಷ ದೇವಾಲಯದಂತಹ ಭವ್ಯ ಗುಡಿಗಳಾಗಲಿ, ಗುಲಾಬಿ ಹೂವುಗಳಿಂದ ಹಿಡಿದು ಮುತ್ತು, ರತ್ನ, ವಜ್ರ, ವೈಡೂರ್ಯಗಳವರೆಗೆ  ಮಾರಾಟವಾಗುವಂತಹ ಬಜಾರುಗಳಾಗಲಿ ಇಲ್ಲಿ ಇರಲು ಸಾಧ್ಯವಿಲ್ಲ. ಇನ್ನೇನು, ಅಪ್ಪಾಜಿಯವರು ಬಂದುಬಿಡಲಿ. ನೀನು  ಅವರೊಂದಿಗೆ ಸುತ್ತಾಡಲು ಹೋದರೆ ನನಗೆ ಯಾವ ಅಭ್ಯಂತರವೂ ಇಲ್ಲ. ಒಬ್ಬಳೇ ಹೋಗೋದು ಮಾತ್ರ ಬೇಡ."
ಅಮ್ಮನ ಮಾತನ್ನು ಲಕ್ಷಿಸದೆ, ಅವಳು ಜೊತೆಯಲ್ಲಿ ಕಳುಹಿಸಲಿದ್ದ ಯೋಧರನ್ನೂ ಬೇಡವೆಂದು ಅಲ್ಲಗಳೆದು, ಕಾಂತಿಯನ್ನು ಮಾತ್ರ ಜೊತೆಗೆ ಕರೆದುಕೊಂಡು ಗುಡಾರವನ್ನು ಬಿಟ್ಟು  ಬಿರಬಿರನೆ ಹೊರಟಿದ್ದಳು  ವಿರೂಪಾಕ್ಷಿ.
ಹಾಗೆ ಹೊರಟಿದ್ದರಿಂದಲೇತಾನೆ ಸೋಮೇ ದೇವರನ್ನು ಕಾಣುವ ಅವಕಾಶ ಸಿಕ್ಕಿತು! ಈ ಸುಂದರವಾದ ಸೀಮೆಯ ಚೆಲುವನ್ನು ಕಣ್ತುಂಬ ಕಾಣುವಂತಾಯಿತು !



'ಮಗಳು ಇನ್ನೂ ಗುಡಾರ ಸೇರಿಲ್ಲವಲ್ಲ' ಎಂಬ ಆತಂಕದೊಂದಿಗೆ ಒಳಗೇ ಕುಳಿತು ಚಡಪಡಿಸುತ್ತಿದ್ದ ಮಹಾರಾಣಿ ಪೊನ್ನಲಾದೇವಿ ಪಲ್ಲಕಿಯನ್ನು ಕಂಡೊಡನೆ ಹೊರಗೆ ಓಡಿಬಂದಳು. ಮಗಳನ್ನು ತಬ್ಬಿಕೊಂಡು ಒಳಗೆ ಕರೆದೊಯ್ದಳು.
"ಹೊಸ ಊರು ! ಕತ್ತಲು ಬೇರೆ ಆಗುತ್ತ ಬಂತು ! ಎಲ್ಲಿ ತಿರುಗಾಡಕ್ಕೆ ಹೋದೆ ? ನಿನಗೆ ಭಯ ಭೀತಿ ಏನೂ ಇಲ್ಲವೇ ?" ಅಮ್ಮನಿಗೆ ಒಂದು ಕಡೆ ನೆಮ್ಮದಿ ! ಒಂದು ಕಡೆ ಕೋಪ !
"ಭಯವೇ ? ಶ್ರೀಮನ್ ಮಹಾರಾಜಾದಿರಾಜ ಪರಮೇಶ್ವರ ಶ್ರೀ ಅಭಿನವ ದೇವರಾಯ !
 ಬಾರಿಬಾರಿಗೂ ಬಹಮನಿಯರನ್ನು ಮಣ್ಣು ಮುಕ್ಕಿಸಿದ ಶ್ರೀ ಪ್ರತಾಪದೇವರಾಯ !
 ಗಜಪತಿರಾಜ್ಯದವನ್ನು ಗಜ ಪಡೆಯೊಂದಿಗೆ ನಿರ್ನಾಮ ಮಾಡಿದ ಗಜಬೇಟೆಗಾರ !
 ಮಹೋನ್ನತವಾದ ವಿಜಯನಗರ ಸಾಮ್ರಾಜ್ಯಾಧಿಪತಿಯಾದ ಇಮ್ಮಡಿ ದೇವರಾಯ ! ಅಂತಹ ಪರಾಕ್ರಮಶಾಲಿಯಾದ ಮಹರಾಯರ ಮಗಳಾದ ನನಗೆ ಭಯವೇ ?"
ವೀರಾವೇಶಗೊಂಡವಳಂತೆ ಮೊಳಗಿದ ವಿರೂಪಾಕ್ಷಿ ತನ್ನ ಒಡ್ಯಾಣದಲ್ಲಿ ಸಿಕ್ಕಿಸಿದ್ದ ಸಣ್ಣ ಬಾಕುವನ್ನು ಹೊರತೆಗೆದಳು.
"ಬಲೇ! ಭೇಷ್ ! ತಂದೆಗೆ ತಕ್ಕ ಮಗಳೆಂದರೆ ಹೀಗೆ ಇರಬೇಕು !"
ಕರತಾಡನ ಮಾಡಿ ಒಳಗೆ ಪ್ರವೇಶಿಸಿದರು ಇಮ್ಮಡಿ ದೇವರಾಯರು.
ತಂದೆಯನ್ನು ಕಂಡೊಡನೆ ವಿರೂಪಾಕ್ಷಿಯ ಮನದಲ್ಲಿ ಹರ್ಷ ಉಕ್ಕಿತು.  ಅವರೊಡನೆ ಮಾತನಾಡುವುದಿಲ್ಲವೆಂಬ ನಿರ್ಧಾರವೆಲ್ಲ ಪುಡಿ ಪುಡಿಯಾಯಿತು.
''ಅಪ್ಪಾಜಿ !" ಎಂದು ಕೂಗುತ್ತ ಓಡಿ ಹೋಗಿ ಅವರ ಸೊಂಟ ಬಳಸಿ ಹಿಡಿದುಕೊಂಡಳು.
"ನನ್ನ ಮುದ್ದು ಮಗಳಿಗೆ ಇವತ್ತು ಏನಾದರೊಂದು ಉಡುಗೊರೆ ಕೊಡಬೇಕಲ್ಲ ..." ಬಾಗಿ ಮುದ್ದು ಮಗಳ ಹಣೆಗೊಂದು ಮುತ್ತನ್ನಿಟ್ಟು ನುಡಿದರು ಮಹಾರಾಜರು.
"ಇವಳಿಗೆಂತಹ ಉಡುಗೊರೆ ? ಭಯವಿಲ್ಲದೆ ಬೀದಿ ತಿರುಗಿಕೊಂಡು ಬಂದಿರುವಳು !" ಅಮ್ಮ ಹುಸಿಗೋಪ ತೋರಿದಳು.
"ತಾನು ವಿಜಯನಗರದ ವೀರಪುತ್ರಿ ಎಂಬುದನ್ನು ಸಾಬೀತು ಮಾಡಿರುವಳಲ್ಲ ! ಅದಕ್ಕೆ ಕೊಡಬೇಡವೇ ಒಂದು ವಿಶಿಷ್ಟ ಉಡುಗೊರೆಯನ್ನ?"
"ಅಪ್ಪಾಜಿ ! ನನಗೆ ಬೇಕಾದ ಉಡುಗೊರೆಯನ್ನ ಬೇಕಾದಾಗ ಕೇಳಿ ಪಡೆದುಕೊಳ್ಳುವೆ ! ಈಗ ಸಧ್ಯಕ್ಕೆ ನೀವು ಮತ್ತೆ ಎಲ್ಲಿಗೂ ಹೋಗದೆ ನಮ್ಮ ಜೊತೆಯಲ್ಲಿದ್ದರೆ ಸಾಕು !" ಗಡುಸಾಗಿ ನುಡಿದಳು ವಿರೂಪಾಕ್ಷಿ.
"ಅಪ್ಪಣೆ ಪುಟ್ಟ ರಾಣಿ !" ಎಂದು ಅಟ್ಟಹಾಸದಿಂದ ನಕ್ಕರು ಇಮ್ಮಡಿ ದೇವರಾಯರು.
ಮಾತು ಕೊಟ್ಟಂತೆ ಸದಾ ಕಾಲವೂ ಕುಟುಂಬದೊಂದಿಗಿದ್ದು ಉಲ್ಲಾಸದಿಂದ ಕಾಲ ಕಳೆದರು ಮಹಾರಾಜರು. ವಿರೂಪಾಕ್ಷಿಯೊಂದಿಗೆ ಚದುರಂಗವಾಡಿದರು. ಅವಳಿಗೆ ಕತ್ತಿವರಸೆ ಕಲಿಸಿದರು. ತನ್ನ ಮುಂದೆ ಕೂರಿಸಿಕೊಂಡು ಕುದುರೆ ಸವಾರಿ ಮಾಡಿಸಿದರು. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತ ಗುಡ್ಡ ಬೆಟ್ಟಗಳ ಕಡೆ ಅವಳೊಂದಿಗೆ ಚಾರಣ ಮಾಡಿ ಬಂದರು. 

ಅಂದು ಸಮೀಪದಲ್ಲಿದ್ದ ಕೆರೆಯ ತೀರದಲ್ಲಿ ವನಭೋಜನ. ನೃತ್ಯ, ಗಾಯನ, ಹೂಚೆಂಡಿನ ಆಟ , ಕೋಲಾಟ, ಗಿರಿಗಿಟ್ಲೆ ಆಟ ಎಲ್ಲ ಮುಗಿದು ಸಖತ್ತಾದ ಭೋಜನವೂ ಆಯಿತು. ಆಟಪಾಟಗಳಿಂದಲೂ ಬಿಸಿಲಿನಿಂದಲೂ ದಣಿದಿದ್ದ ರಾಣಿ ಪೊನ್ನಲಾದೇವಿ ಗುಡಾರಕ್ಕೆ ಹಿಂದಿರುಗಲು ಸಿದ್ಧವಾದಳು.
"ನೀನು ಪರಿವಾರದೊಂದಿಗೆ ಹೊರಡು ದೇವಿ. ಈ ಸುಂದರ ಪರಿಸರ ನನ್ನ ಕಲ್ಪನೆಯನ್ನು ಕೆರಳಿಸಿದೆ. ಏಕಾಂತವಾಗಿ ಸ್ವಲ್ಪ ಹೊತ್ತು ಇಲ್ಲೇ ಕುಳಿತು ನನ್ನ 'ಸೊಬಗಿನ ಸೋನೆ' ಕೃತಿಯನ್ನು ಪೂರೈಸಿ ಬರುತ್ತೇನೆ. ರಾಜಧಾನಿಗೆ ಹಿಂದಿರುಗಿಬಿಟ್ಟರೆ ಇದಕ್ಕೆಲ್ಲ ಸಮಯ ಸಿಕ್ಕುವುದಿಲ್ಲ." ಎಂದರು ಮಹಾರಾಜರು.
"ನಾನೂ ಇಲ್ಲೇ ಇರುತ್ತೇನೆ ಅಪ್ಪಾಜಿ !" ಆವರಿಸಿದ್ದ ದಟ್ಟ ಮರಗಳನ್ನು ಪ್ರತಿಬಿಂಬಿಸುತ್ತಿದ್ದ   ಸ್ಪಟಿಕದಂತಹ  ನೀರಿದ್ದ ಕೆರೆಯನ್ನು ಬಿಟ್ಟು ಹೋಗಲು ವಿರೂಪಾಕ್ಷಿಗೆ ಮನಸ್ಸೇ ಇಲ್ಲ.
"ಅಪ್ಪಾಜಿ ಕೃತಿ ರಚನೆ ಮಾಡುತ್ತಿರುತ್ತಾರೆ. ಇಲ್ಲಿದ್ದು ನೀನು ಏನು ಮಾಡುವೆ ?"  ಪೊನ್ನಲಾದೇವಿ ಮಗಳನ್ನು ಜೊತೆಯಲ್ಲೇ  ಕರೆದೊಯ್ಯಲು ಪ್ರಯತ್ನಿಸಿದಳು.
"ಇರಲಿ ಬಿಡು. ನಾನು ಕೃತಿ ರಚಿಸಿದರೆ ಅವಳು ಚಿತ್ರ ರಚಿಸುತ್ತಾಳೆ. ಅಲ್ಲವೇ ನನ್ನ ವೀರಪುತ್ರಿ ?" ಮಹಾರಾಜರು ಮುದ್ದು ಮಗಳಿಗಾಗಿ ಶಿಪಾರಸ್ಸು ಮಾಡಿದರು.
ವಿರೂಪಾಕ್ಷಿ ಉತ್ಸಾಹದಿಂದ ತಲೆದೂಗಿದಳು.
 ಅಮ್ಮ ಪರಿವಾರದೊಂದಿಗೆ ಹೊರಟು ಹೋಗಿದ್ದಳು. ತಂದೆಯೂ ಮಗಳೂ ಏಕಾಂತದಲ್ಲಿ ಕುಳಿತು ತಮ್ಮ ತಮ್ಮ ಸೃಷ್ಟಿಗಳಲ್ಲಿ ನಿಮಗ್ನರಾಗಿದ್ದರು. 
ಬಹಳ ಹೊತ್ತಿನ ನಂತರ ವಿರೂಪಾಕ್ಷಿ ಚಿತ್ರವನ್ನು ಮುಗಿಸಿ ಅಪ್ಪಾಜಿಯವರಿಗೆ ತೋರಿಸಲೆಂದು ಅವರು ಕುಳಿತಿದ್ದ ಕಲ್ಲು ಮಂಟಪದ ಕಡೆ ತಲೆ ಎತ್ತಿ ನೋಡಿದಾಗ -




ಮುಖವಾಡ ಧರಿಸಿದ್ದ ಒಬ್ಬ ಆಗಂತುಕ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಅಪ್ಪಾಜಿಯವರ ಹಿಂದೆ ನಿಂತಿರುವುದನ್ನು ಕಂಡಳು. ಒಮ್ಮೆಗೇ ಅವಳ ನಾಲಿಗೆ ಒಣಗಿತು. ಎತ್ತಿ ಹಿಡಿದಿದ್ದ ಅವನ ಕೈಯಲ್ಲಿ ಮಿರಿ ಮಿರಿ  ಹೊಳೆಯಿತು ಒಂದು ಚೂರಿ !
"ಅಪ್ಪಾ.... ಜೀ ...!"
ವಿರೂಪಾಕ್ಷಿಯ ಚೀತ್ಕಾರದಿಂದ ಆ ಪ್ರಾಂತ್ಯವೇ ಅದುರಿತು.

ವಿಜಯನಗರದ ರಾಜಧಾನಿಯಾದ ವಿರೂಪಾಕ್ಷಪುರ ಅಲ್ಲೋಲಕಲ್ಲೋಲವಾಗಿತ್ತು.
 ಮಹಾರಾಜರನ್ನು ಕೊಲ್ಲುವ  ಪ್ರಯತ್ನ ನಡೆದಿದೆ ಎಂದರೆ ಅದು ಸಾಮಾನ್ಯ ವಿಷಯವೇನು ?
ಪ್ರಜೆಗಳ ಹಿತರಕ್ಷಕರೂ ಪರಮದಯಾಳುವೂ ಆದ ಮಹಾರಾಜರನ್ನು ಕೊಲ್ಲಲು ಯಾರು, ಏಕೆ ಪ್ರಯತ್ನ ಮಾಡಿದರು? ಈ ದುರ್ಘಟನೆ ಹೇಗೆ ಸಂಭವಿಸಿತು ? ಪ್ರಜೆಗಳು ತಮ್ಮ ತಮ್ಮ ಊಹಾಪೋಹಗಳನ್ನು ಹಂಚಿಕೊಂಡು ಚರ್ಚಿಸುತ್ತಿದ್ದರು.
ರಾಜಕುಮಾರ ಮಲ್ಲಿಕಾರ್ಜುನನ ತಲೆಯನ್ನೂ ಅಂತದ್ದೇ ಪ್ರಶ್ನೆಗಳು ಕೊರೆಯುತ್ತಿದ್ದವು.
"ಅಣ್ಣ ! ನಾನು ಚಿತ್ರವನ್ನು ತೋರಿಸಲೆಂದು ಅಪ್ಪಾಜಿಯವರ ಕಡೆ ತಿರುಗಿದೆ. ಮುಖವಾಡ ಧರಿಸಿದ್ದ ಆ ಕಟುಕನನ್ನು ಕಂಡು ಚೀರಿದೆ. ನಾನು ಚೀರಿದ್ದು, ಆತನ ಚೂರಿ ಅಪ್ಪಾಜಿಯವರ ಮೇಲೆ ಎರಗಿದ್ದು , ಥಟ್ಟನೇ ಅಪ್ಪಾಜಿ ತಿರುಗಿ ಅವನನ್ನು ತಡೆದು ತನ್ನ ಬಲಿಷ್ಠ ಕೈಗಳಿಂದ ಅವನನ್ನ ಬಂಧಿಸಿದ್ದು ಎಲ್ಲವೂ ಏಕ ಕಾಲದಲ್ಲಿ ನಡೆದುಹೋದವು. "
ನಡೆದುಹೋದ ಘಟನೆಯನ್ನು ವಿವರಿಸುತ್ತಿದ್ದಹಾಗೆಯೇ ವಿರೂಪಾಕ್ಷಿಯ ಓಡಲು ಕಂಪಿಸತೊಡಗಿತು.
"ಛೆ ! ಬಂಧಿಸಿದ ಅಪ್ಪಾಜಿ ಅವನನ್ನು ಅಲ್ಲೇ ಸಿಗಿದು ಹಾಕ ಬೇಕಿತ್ತು ! ಒಂದು ಸೊಳ್ಳೆ ಕಚ್ಚಿದರೂ ಅದನ್ನ ರಪ್ಪೆಂದು ಹೊಡೆಯುವುದಿಲ್ಲವೇ ? ನಾನೇದಾರು ಅಲ್ಲಿಇದ್ದಿದ್ದರೆ...  "  ಅಸಹನೆಯಿಂದ ಹಲ್ಲು ಮಸೆದನು  ಮಲ್ಲಿಕಾರ್ಜುನ.
"ನನಗೂ ಹಾಗೆಯೇ ಅನ್ನಿಸಿತು. ಆದರೆ ಸುಧಾರಿಸಿಕೊಂಡನಂತರ ಅಪ್ಪಾಜಿಯವರು ಹೇಳಿದ ಮಾತನ್ನು ಕೇಳಿದಮೇಲೆ ವಿಷಯ ಹೊಳೆಯಿತು. ಅಪ್ಪಾಜಿಯವರನ್ನು ಮುಟ್ಟುವ ಧೈರ್ಯವನ್ನು ಅವನಿಗೆ ಯಾರು ಕೊಟ್ಟರು ? ಅವರನ್ನು  ಕೊಲ್ಲುವ ಫಿತೂರಿ ನಡೆಸಿದವರು ಬೇರೆ ಯಾರೋ ಇರಬೇಕು ! ಅವನು ಕೂಲಿ ಪಡೆಯಾಳು ಮಾತ್ರ. ಫಿತೂರಿ  ಮಾಡಿದ್ದು ವೈರಿಗಳೇ ಇಲ್ಲ ಅರಮನೆಯಲ್ಲೇ ಇರುವ ತಮ್ಮವರೇ ಎಂಬುದನ್ನ ವಿಚಾರಿಸಬೇಕೆಂಬುದು ಅಪ್ಪಾಜಿಯವರ ನಿರ್ಧಾರ. ಎಲಹಂಕ ನಾಡಿನ ಡಣ್ಣಾಯಕರ ಬಳಿ ಅವನನ್ನು ಒಪ್ಪಿಸಿ ಬಂಧನದಲ್ಲಿಟ್ಟು ವಿಚಾರಣೆ ನಡೆಸುವಂತೆ ಅಪ್ಪಾಜಿಯವರು ಆಜ್ಞಾಪಿಸಿರುವರು."
"ಅದೂ ಸರಿಯೇ ! ನನಗೆ ಯಾವಾಗಲೂ ಸ್ವಲ್ಪ ಆತುರ ! ಇವತ್ತಿನಿಂದ ಎಚ್ಚರದಿಂದಿದ್ದು ಅರಮನೆಯಲ್ಲಿರೋ ಎಲ್ಲರ ಮೇಲೂ ಒಂದು ಕಣ್ಣು ಇಟ್ಟಿರುತ್ತೇನೆ ." ಎಂದನು ಮಲ್ಲಿಕಾರ್ಜುನ.
"ಅಪ್ಪಾಜಿ ಆತನನ್ನು ತಡೆಯಲುಹೋಗಿ ತಿರುಗಿದ ಕಾರಣ ಚೂರಿ ಅವರ ಎದೆಯ ಸಮೀಪ  ನಾಟಿತು. ಡಣ್ಣಾಯಕರು ಕೂಡಲೇ ವೈದ್ಯರನ್ನು ಕರೆಯಿಸಿ ಆರೈಕೆ ಮಾಡಿಸಿದರು. ನಮ್ಮ ಪರಿವಾರವನ್ನ ಸುರಕ್ಷಿತವಾಗಿ ರಾಜಧಾನಿ ಮುಟ್ಟಿಸಲು ಅವರೂ ಸಹ ತನ್ನ ಆಳುಗಳೊಂದಿಗೆ ಜೊತೆಯಾಗಿ ಬಂದಿರುವರು."
"ಸಧ್ಯ! ಬರಿ ಸಣ್ಣ ಗಾಯದೊಂದಿಗೆ ಆಪತ್ತಿನಿಂದ ಪಾರಾದರಲ್ಲ." ಎಂದು ನಿಟ್ಟುಸಿರೆಳೆದ ರಾಜಕುಮಾರ.
"ಹವುದು ಅಣ್ಣ ! ಸೋಮೇ ದೇವರೇ ಅಪ್ಪಾಜಿಯವರನ್ನು ರಕ್ಷಿಸಿದ ದೇವರು !" ವಿರೂಪಾಕ್ಷಿ ಮಾನಸಿಕವಾಗಿ ಸೋಮೇ ದೇವರಿಗೆ ಕೈ ಮುಗಿದಳು.

ಇಮ್ಮಡಿ ದೇವರಾಯರು ಮೃದು ಆಸನದಲ್ಲಿ ಒರಗಿ ಕುಳಿತಿರಲು ಸಮೀಪದಲ್ಲೇ ಮಹಾರಾಣಿ ಪೊನ್ನಲಾದೇವಿ ಚಿಂತಾಕ್ರಾಂತಳಾಗಿ ಕುಳಿತಿದ್ದಳು. ಎದುರಲ್ಲಿ ಎಲಹಂಕ ನಾಡಿನ ಪ್ರಧಾನಿ ಮಂಗಪ್ಪ ಡಣ್ಣಾಯಕರು ಮತ್ತು ಮಹಾ ಮಂತ್ರಿಗಳಾದ ಲಕ್ಕಣ್ಣ ದಂಡೇಶರು ಆಸೀನರಾಗಿದ್ದರು. ಮಹಾರಾಜರ ಜನ್ಮ ಕುಂಡಲಿಯನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದ ಆಸ್ಥಾನ ಜ್ಯೋತಿಷ್ಯರ ಮೊಗವನ್ನೇ ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರು.
"ಏನೆಂದು ಹೇಳಲಿ ಸ್ವಾಮೀ ? ಮಹಾರಾಜರ ಜನ್ಮ ಕುಂಡಲಿಯನ್ನು ಎಷ್ಟು ಬಾರಿ ನೋಡಿದರೂ ಮನಸ್ಸು ತುಂಬಿ ಬರುತ್ತದೆ. ಅಷ್ಟು  ಉನ್ನತವಾದ ಜಾತಕವಿದು. ಮಹೋನ್ನತವಾದ ವ್ಯಕ್ತಿತ್ವ, ಕಾರ್ಯ ನಿರ್ವಹಣೆಯಲ್ಲಿ ದಕ್ಷತೆ ಮತ್ತು ಮಹತ್ತರವಾದ ಸಾಧನೆ ಇವೆಲ್ಲ ಈ ಜಾತಕದ ವಿಶೇಷಗಳು !"
"ಸ್ವಾಮಿ ! ಇದೆಲ್ಲ ಎಲ್ಲರಿಗೂ ತಿಳಿದ ಸಂಗತಿಯೇ ಅಲ್ಲವೇ ? ನಮ್ಮ ವಿಶಾಲವಾದ  ರಾಜ್ಯವನ್ನು ಮಹಾರಾಜರು ವಿಸ್ತರಿಸುತ್ತಲೇ ಇರುವರು.  ನೌಕಾಪಡೆಯನ್ನು ಕಟ್ಟಿ ಕಡಲಾಚೆಯ  ಸೀಮೆಗಳನ್ನು ಗೆದ್ದುಬಂದಿರುವರು. ಮಹಾರಾಜರಿಗೆ ಆ ದೇಶದವರು ಕಪ್ಪಕಾಣಿಕೆಗಳನ್ನು ತಪ್ಪದೇ  ಸಲ್ಲಿಸುತ್ತಿರುವರು. ಇವೆಲ್ಲ ಲೋಕ ಪ್ರಖ್ಯಾತ ಸಂಗತಿಗಳು !  ಹಾಗಿರಲ  ಮಹಾರಾಜರ  ಪ್ರಭಾವದ ಬಗ್ಗೆ ಕುಂಡಲಿ ನೋಡಿಯೇ ತಿಳಿದುಕೊಳ್ಳಬೇಕೇನು ?" ಎಂದರು ಎಲಹಂಕನಾಡಿನ ಡಣ್ಣಾಯಕರು.
ತಿರುವುತ್ತಿದ್ದ ಮೀಸೆಯಕೆಳಗೆ ಮಿಂಚಿದ ಕಿರುನಗೆಯೊಂದಿಗೆ ತನಗೆ ಸಂಭಂದವೇ ಇಲ್ಲದ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವವರಂತೆ ಮೌನವಾಗಿ ಕುಳಿತಿದ್ದರು ಮಹಾರಾಜರಾದ ಇಮ್ಮಡಿ ದೇವರಾಯರು.
ಅಪ್ಪಾಜಿಯವರ ಪ್ರತಾಪದ ಬಗ್ಗೆ ಕೇಳಿ ವಿರೂಪಾಕ್ಷಿ ಮತ್ತು ಮಲ್ಲಿಕಾರ್ಜುನ ಹೆಮ್ಮೆಯಿಂದ ಒಬ್ಬರ ಮುಖ ಒಬ್ಬರು ನೋಡಿಕೊಂಡರು.  
"ಮಹಾರಾಜರು ಒಂದು ದೊಡ್ಡ ಅಪಾಯದಿಂದ ಪಾರಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಏಕೆ ಹೀಗಾಯಿತು ? ಅದಕ್ಕೆ ಪರಿಹಾರವೇನಾದರೂ ಇದೆಯೇ ? ಅದನ್ನು ನೋಡಿ ಹೇಳಿ !" ಎಂದು ಸ್ವಲ್ಪ ಅಸಹನೆಯಿಂದ ಕೇಳಿದರು ಮಂತ್ರಿಗಳು. 
"ಅದನ್ನೇ ಹೇಳಲು ಬಂದೆ ಸ್ವಾಮೀ ! ನೋಡಿ ಪ್ರಜ್ವಲವಾದ ಸೂರ್ಯದೇವನನ್ನೂ ಒಮ್ಮೊಮ್ಮೆ ಕಾರ್ಮೋಡ ಮುಚ್ಚುತ್ತದೆ. ಈ ವಿಪತ್ತು ನಡೆದದ್ದೂ ಹಾಗೆಯೇ. ಬರಲಿರುವ ಸೂರ್ಯ ಗ್ರಹಣ ಅವರ ಜನ್ಮ ಕುಂಡಲಿಯ ಪ್ರಕಾರ ಅಷ್ಟು ಅನುಕೂಲವಾಗಿಲ್ಲ ... " 


"ಅಯ್ಯೋ ! ಆ ದೋಷಕ್ಕೆ ಪರಿಹಾರವಿಲ್ಲವೇ? " ಪೊನ್ನಲಾದೇವಿ ಭಯದಿಂದ ಚಡಪಡಿಸಿದಳು. 
"ಭಯ ಬೇಡಿ ಮಹಾರಾಣಿಯವರೇ ! ಗ್ರಹಣ ಕಾಲದಲ್ಲಿ ಮಾಡುವ ಪೂಜೆ ಪುನಸ್ಕಾರಗಳಿಂದಲೂ ದಾನ ಧರ್ಮಗಳಿಂದಲೂ  ಈ  ದೋಷವನ್ನು  ಪರಿಹರಿಸಬಹುದು !"
"ವಿರೂಪಾಕ್ಷನಿಗೆ ತುಲಾಭಾರ ಸೇವೆಯನ್ನು ಸಲ್ಲಿಸುವುದಾಗಿ ಆಗಲೇ ಹರಕೆ ಮಾಡಿಕೊಂಡೆ . ಆದಷ್ಟು ಬೇಗ ಅದನ್ನು ನೆರವೇರಿಸಬೇಕು. ಇನ್ನೂ ನೀವು ಸೂಚಿಸುವ ಎಲ್ಲ ಪರಿಹಾರಗಳನ್ನೂ ಮಾಡೋಣ..  " ಜ್ಯೋತಿಷ್ಯರು ಮುಗಿಸುವುದರಲ್ಲಿ ಮಹಾರಾಣಿ ಪೊನ್ನಲಾದೇವಿ ತನ್ನ ಹರಕೆಯ ಬಗ್ಗೆ ಪ್ರಸ್ತಾಪಿಸಿದಳು. 
"ಮಹಾರಾಣಿ ! ರಾಜನಾದವನಿಗೆ ಇಂತಹ ಆಪತ್ತುಗಳನ್ನು ಎದುರಿಸುವುದು ಸಹಜ ಮತ್ತು ಅನಿವಾರ್ಯ !  ಮಹಾರಾಣಿಯಾಗಿ ಇದಕ್ಕೆಲ್ಲ ಹೆದರುವುದುಂಟೆ ?" ಮೊದಲ ಬಾರಿಗೆ ಮಾತನಾಡಿದರು ಮಹಾರಾಜರು. 
"ನನ್ನದ್ದೂ ಒಂದು ಹರಕೆ ಇದೆ ! ನಡೆಸಿಕೊಡುವಿರಾ ಅಪ್ಪಾಜಿ ?" ವಿರೂಪಾಕ್ಷಿ ಓಡೋಡುತ ಬಂದು ಮಹಾರಾಜರ ಕೈ ಹಿಡಿದುಕೊಂಡಳು. 
"ಓ ನನ್ನ ವೀರಪುತ್ರಿ ! ಮೊದಲೇ ನಿನಗೊಂದು ಉಡುಗೊರೆ ಕೊಡಬೇಕಿತ್ತು, ಅಲ್ಲವೇ ? ನಿನಗೇನು ಬೇಕು ? ಕೇಳು ಮಗಳೇ !'' ವಾತ್ಸಲ್ಯದಿಂದ ನುಡಿದರು ಮಹಾರಾಜರು. 
"ಅಪ್ಪಾಜಿ ! ನಿಮ್ಮನ್ನು ರಕ್ಷಿಸಿದ ಸೋಮೇ ದೇವರಿಗೆ ಇಲ್ಲಿ ವಿರೂಪಾಕ್ಷನಿಗೆ ನಡೆಯುವಂತೆಯೇ ಪೂಜೆ ನಡೆಯಬೇಕು. ಜಾಜಿ, ಚಂಪಕ, ಅಶೋಕ, ಪುನ್ನಾಗ ಪುಷಗಳಿಂದ ಮಾಲೆ ಕಟ್ಟಿ ಮುಡಿಸ ಬೇಕು. ಜರತಾರಿ ವಸ್ತ್ರ ಉಡಿಸಬೇಕು. ಮೂರು ಹೊತ್ತೂ ಭಕ್ಷ್ಯಭೋಜ್ಯಗಳು ಮತ್ತು ಹಣ್ಣುಕಾಯೊಂದಿಗೆ  ಮಹಾ ನೈವೇದ್ಯವಾಗಬೇಕು."
ಕ್ಷಣಮಾತ್ರ ಆಶ್ಚರ್ಯದಿಂದ ತನ್ನ ಮುದ್ದು ಮಗಳನ್ನು ನೋಡಿದರು ಇಮ್ಮಡಿ ದೇವರಾಯರು. ಅವಳ ಕಣ್ಣುಗಳಲ್ಲಿ ತುಂಬಿದ್ದ ಕಾತರ ಅವರ ಮನಸ್ಸನ್ನು ಮುಟ್ಟಿತು. 
"ಅಪ್ಪಣೆ ನನ್ನ ವೀರಪುತ್ರಿ !" ಮಹಾರಾಜರ ಧ್ವನಿ ಗದ್ಗದಿತವಾಯಿತು.
"ಮಂಗಪ್ಪ ಡಣ್ಣಾಯಕರೇ ! ಇಂದು ರಾಜಕುಮಾರಿ ವಿರೂಪಾಕ್ಷಿ ದೇವಿಯವರ ಕಟ್ಟಳೆಯಂತೆ ಸೋಮೇ ದೇವರ ಅಂಗ ರಂಗ ಭೋಗಕ್ಕೆ ವಿರೂಪಾಕ್ಷಪುರ ಗ್ರಾಮವನ್ನೂ ದೇವಸಮುದ್ರದ ಹಿರಿಯಕೆರೆಯ ಕೆಳಗಣ ಬೀಜವರಿ ಗದ್ದೆಯನ್ನೂ  ಶ್ರೀ ಪರಮೇಶ್ವರ ಪ್ರೀತಿಗಾಗಿ ಧಾರೆಯನ್ನೆರೆದು ಕೊಡುವುದಾಗಿ ಪ್ರಕಟಿಸಿಬಿಡಿ.... " ಎಂದು ಅಪ್ಪಣೆ ಮಾಡಿದರು. 
"ಅಪ್ಪಾಜಿ ! ಇದು ನಿಮಗಾಗಿ ವಿರೂಪಾಕ್ಷಿ ಮಾಡಿಕೊಂಡ ಹರಕೆ. ವಿರೂಪಾಕ್ಷಪುರವನ್ನ ನಿಮ್ಮ ಹೆಸರಿನಲ್ಲೇ ದೇವರಾಯನಪುರವೆಂದು ಮಾಡಿ ಸೋಮೇ ದೇವರಿಗೆ ಕೊಟ್ಟರೆ ಮತ್ತಷ್ಟು ಸ್ರೇಷ್ಟ ಅಲ್ಲವೇ ? " ಉತ್ಸಾಹದಿಂದ ಸಲಹೆ ನೀಡಿದನು ರಾಜಕುಮಾರ ಮಲ್ಲಿಕಾರ್ಜುನ.
"ಬರಿ ದೇವರಾಯನಪುರ ಅಲ್ಲ ಅಣ್ಣ ! ಅಪ್ಪಾಜಿಯವರು ಪದೇ ಪದೇ  ವಿಜಯ ಗಳಿಸುವುದರಿಂದ ವಿರೂಪಾಕ್ಷಪುರ ಗ್ರಾಮವನ್ನ ವಿಜಯದೇವರಾಯನಪುರ ಎಂದು ಮಾಡುವುದು ಇನ್ನೂ ಸೂಕ್ತ ಅಲ್ಲವೇ !" ಇಮ್ಮಡಿ ಉತ್ಸಾಹದಿಂದ ನುಡಿದಳು ವಿರೂಪಾಕ್ಷಿ.
ಇಮ್ಮಡಿದೇವರಾಯರು ಮಕ್ಕಳ ಸಲಹೆಯನ್ನು ಒಪ್ಪಿಕೊಂಡವರಂತೆ ಹೆಮ್ಮೆಯಿಂದ ಇಬ್ಬರನ್ನೂ ತನ್ನ ಎರಡೂ ಬಾಹುಗಳಲ್ಲಿ ಬಳಸಿಕೊಂಡರು. 
"ಇದು ಒಳ್ಳೆ ಯೋಚನೆ ! ರಾಜಕುಮಾರಿ ಹೇಳಿದಂತೆ ಆ ಕೊಡಿಗೆಯನ್ನ ಸೂರೋಪರಾಗ ಪುಣ್ಯಕಾಲದಲ್ಲಿ  ಸೋಮೇ ದೇವರಿಗೆ ಧಾರೆಯೆರೆದಲ್ಲಿ ಮಹಾರಾಜರಿಗೆ  ಆಯುರಾರೋಗ್ಯ ಐಶ್ವರ್ಯ  ವೃದ್ಧಿಯಾಗುವುದು ಖಚಿತ !" ಎಂದು  ಶುಭ ನುಡಿದರು ಆಸ್ಥಾನ ಜ್ಯೋತಿಷ್ಯರು. 


ಅನಂತರ - 
ದೇವರಾಯ ಮಹಾರಾಯರ ಸಮುಖದ ನಿರೂಪದಿಂದ ಸಕನಸಮುದ್ರದ ಒಳಗಣ ಊರ ಮುಂದಣ ಶ್ರೀಮನ್ ಮಹಾಪ್ರಧಾನಿ ಮಂಗಪ್ಪ ಡಣ್ಣಾಯಕರ ಪುತ್ರರಾದ  ಪ್ರತಾಪ ರಾಯರು ಸೂರೋಪ ಪುಣ್ಯ ಕಾಲದಲಿ ಮಹಾರಾಜರು ಸೋಮೇ ದೇವರಿಗೆ ಧಾರೆ ಎರೆದು ಕೊಟ್ಟ ಕೊಡಿಗೆಯ ಬಗ್ಗೆಗಿನ ಧರ್ಮ ಶಾಸನವನ್ನು ಪ್ರಕಟಿಸಿ, ನಂತರ  ಕಲ್ಲಿನಲ್ಲಿಯೂ  ಕೆತ್ತಿಸಿ ಸ್ಥಾಪಿಸಿದರು.    
--------------------------------------------------------------------------------------------------------------------

ಕೊಡಿಗೇಹಳ್ಳಿ ಶಿಲಾಶಾಸನವನ್ನೂ ಇಮ್ಮಡಿ ದೇವರಾಯರ ಇತಿಹಾಸವನ್ನೂ ಆಧಾರಿಸಿ ರಚಿಸಲ್ಪಟ್ಟ ಕಾಲ್ಪನಿಕ ಕಥೆ 'ಕೊಡಿಗೆ'. ರಾಜಕುಮಾರಿ ವಿರೂಪಾಕ್ಷಿಯ ಪಾತ್ರ ಅಪ್ಪಟ ಕಲ್ಪನೆ.   
ಕೊಡಿಗೇಹಳ್ಳಿ ಶಾಸನದ ಬಗ್ಗೆ ಕೆಳಕಂಡ ಕೊಂಡಿಯಲ್ಲಿ ಓದಬಹುದು. 
  https://timesofindia.indiatimes.com/city/bengaluru/decoding-bengalurus-stone-inscriptions-to-give-citizens-a-peek-into-history-culture/articleshow/61656091.cms


---------------------------------------------------------------------------------------------------------------

The Grant



The Somey Deva temple in Sakanasamudra was small and compact.  It had none  of the beautifully sculpted pillars, painted walls or awesome pagodas seen in Virupaksha Temple.  But the  simple icon of Somey Deva, draped in a humble cotton cloth, adorned with a silver Naga ornament and a string of white jasmines looked very attractive.
There were hardly two or three people visiting the temple. As the priest performed the evening puja with  bilva leaves, the little girl standing in front of the sanctum, with joined palms, was praying earnestly with all her heart  :
‘ Dear God, I am asking you what I always ask Lord Virupaksha of our own city. That my father should finish with all his war business in one go and never again  leave home to fight battles. And that he should  stay with us in peace and happiness forever. He is going away to battles so frequently that it has become unbearable to us ...please God Somey Deva, grant me my wish !  
The puja ended with the priest offering a banana to the God as Naivedya. He then showed the mangalarathi saying  :
“ May god bless you , Child. ”
“ Ayya , Said the little girl in a sad voice, “ Only a banana naivedya to the Lord ? Is that enough till the morning puja  ? Will He not get hungry? ”
The innocence of the girl touched the Priest’s heart and he smiled kindly : “ Our Somey Deva is very simple and does not demand  much. He is happy with whatever we offer.”
The girl continued to feel sorry that the Lord dint even have a nice flower garland or good vastra.
‘ If only our towns folk  feel a fraction of the love  and concern  this child feels for our Lord ! Alas !  thought the priest wistfully, then asked the girl :
“ Are you new in town, Child ? I have not seen you here before ? 
“ Yes Sir, this is the first time I am coming here .....”
Before she could finish, an older girl, who had accompanied her, got impatient and said “ Lets go, it is  quite late ! 
By then, four horsewomen, with a palanquin, had arrived at the temple and were calling out : “ Princess ! So here you are ! We have been searching for you all over ! .....Come, its late and the Queen is worried .
“ What ! Princess ?  The priest was aghast, “ Is this our Princess Virupakshi ? .....wait ! Just a moment please ....”
He ran in and brought the jasmine strand  that was on Somey Deva  along with a small packet of sacred ash.
“ Take this, Princess. This is Rakshe ( protective talisman). Keep it  under the King’s pillow, no harm will come to him ever.”
The horsewomen put the Princess and her companion in the palanquin  and off went the little group, fast as the wind.

Though they were speeding, Princess Virupakshi observed  the scenes passing by, enjoying the bounties of Nature : the green fields, the sky splashed with vivid colours of  Sunset, pretty lilies dotting the clear ponds, fields carpeted with chrysanthemums, birds flying home in lovely formations and monkeys swinging from branches of the trees lining the path, like acrobats !
“ Oh look, Kanthi !” Laughed the little princess, clapping her hands in joy, “ Look at the antics of those cute monkeys ! 
“ Yes, Princess.” Said the companion, without any enthusiasm.
Virupakshi was disappointed that her joy was not shared.  If only Appaji were here now ! He would have composed a funny song about the monkeys right away and how we would have laughed ! The beauty of this Sivanasamudra would have even inspired him to paint pictures ...’

It was her Appaji who had taught her to appreciate the beauties of Nature and to learn about  Natural phenomena. There were times when he had awakened her before dawn and taken her to a summit in Matanga Hill to show her the brilliant red Sun rising like a huge fire ball from the horizon, shooting beams of golden light into the limitless sky above Virupakshapura, the capital of Vijayanagara. And they would admire how Tungabhadra ran like a silver ribbon across the green velvet carpet of fertile fields and orchards, all spread out there, at the foot of the hill where they stood .....
There was nothing Virupakshi loved better than to enjoy Nature with Appaji. Seeing the wide eyed wonder and joy in his little daughter’s face  gave  Appaji his greatest happiness.
But his duties as a King often took him away on long  campaigns and he regretted not being able to spend much time with the family.  

It had been entirely his idea to take a complete holiday with the family, devoting all his time to them. He had chosen this Sivanasamudra region  for holiday, as this place had huge water bodies and woodlands.
Royal tents with all amenities were put up at the chosen place. Queen Ponnala Devi’s  entire staff of maids, cooks, servitors, entertainers, security guards etc were moved to the holiday resort.
Prince Mallikarjuna, having taken up training in the Garadi-mane, preferred to stay back in the Capital as The King, The Queen and The Princess moved to their holiday home.
Virupakshi was very excited about the holiday and made a hundred plans of what to play with Appaji , what to explore with Appaji , what to paint with Appaji, what to read with Appaji .....
However, just two days after arriving  at the resort , all her big plans crashed.
Mangappa Dannayaka, the Chieftain of Yelahanka Naadu and a few of his minsters arrived in great haste, requesting a conference with the King on an  urgent matter. The king had to go with them.
Virupakshi was almost in tears with disappointment : “ Che ! Office work even on vacation ! .....I am not going to speak to him when he returns !   She vowed in childish rage.   I will do my own sightseeing ! ” 
Pouting and sulking, she left the Royal tent and started walking towards the little village  she could see at a distance.
“ Don't be foolish, Daughter ! ”  Said her mother, “ Where are you going ? This is an  unfamiliar place, you should not wander without Appaji’s knowledge ! I am sure there is nothing of interest here in this small town, no great markets, parklands or entertainment halls as in our City.”
But Virupakshi was adament “ I am going ! ”  she declared, with finality.
Unable to stop her, Queen Ponnala Devi arranged for four  Lady Guards on horses and her personal assistant Kanthi to go with her. But Virupakshi agreed to take only Kanthi with her and off she went towards the village.
And she felt happy she had taken that outing. What a beautiful countryside it was ! And she had discovered that beautiful old temple of Lord Somey Deva ......



Queen Ponnala Devi, who was getting very worried that her daughter had not returned soon, heard the horse riders nearing the tent and hurried out. She was much relieved to see the Princess in the palanquin but at once started scolding her :
“ Look how late it is ! Light has started fading ...and this is some unfamiliar place ...where have you been wandering ? Have you no fear at all ? ”  
“ Fear ? What is Fear ? What have I to Fear ? I , the daughter of Maharajadiraja Parameshwara Sri Abhinava Devaraya, the vanquisher of the Bahamanis, slayer of the Gajapathis and their Elephant troops, Monarch of the Maginificent Vijayanagara, I know no Fear ! ”  
Her spirited little speech was greeted by a hearty applause  and in walked King Devaraya  himself cheering his darling daughter :
“ Bravo, my Princess  ! A worthy daughter to a Fearless King ! ”  
“ Appajeeee ! ”   As soon as she saw her father, Virupakshi forgot all about her vow of not talking to him ! She ran to him joyfully and threw her arms around him.
“ I have to give a good gift to my darling Princess now to make up  for my going away on business.” he said, kissing her head.
“ No gifts for her ! ”   remarked the Queen  angrily , “ she has been irresponsible, roaming around in unfamiliar places. ”  
The King merely smiled saying ,  She has proved herself to be a heroic daughter of our heroic dynasty ! ......now tell me dear, what gift do you  want ? ”
“ I will ask you for a gift when I want one   Said Virupakshi,   For now if you promise to spend the holiday with us without running away again, I will be happy !   
“ I promise, my little Empress  !   
And just as he had promised, King Immadi Devaraya devoted all his time to the family.
He played Chess with Virupakshi. He taught her sword fighting techniques. He took her on long rides with him on his horse. He took her to hill tops to view far vistas. He told her stories from puranas.
This was exactly the kind of holiday Virupakshi had wanted !

It was a pleasant day to have a picnic on the banks of the lake and they were all having a good time. There was entertainment  by musicians, dancers and acrobats. And a wonderful lunch was served to all.
After lunch, Queen Ponnala Devi desired to return to the Royal tent for a siesta.
“ You may go back, O Queen, please dismiss all these people too. I wish to stay back here for some  more time, this being such a pleasant day. I feel refreshed and inspired by the environment here. I want to finish writing my work “ Sobagina Sone , as I will never find time for it once we return to The Capital.   
“ I shall stay back here with you , Appaji.    Said Virupakshi, reluctant to leave the lovely, crystal like lake in which reflections of the flowering trees were seen so clearly.
“ Father wants to write , what are you going to do , just sitting here? Come with me.    Said the Queen.
“ Let her stay back, if she wants to.    Said the doting Father. “She can draw  pictures, while I write .....What do you say, my Princess?   
“ Good idea, Appaji ! I shall draw pictures of what I see here.   
The Queen was gone, along with all the staff, leaving the King and the Princess to indulge in their pastimes.
A long time later , having completed a picture, Virupakshi straightened  up and turned to show her  creation to her Father ......And she froze in terror !


Just behind the king was a mysterious masked figure, with a raised hand. In it glinted a mean looking short sword  !
“ Appa-jeeeee !    screamed the horrified girl, her shriek shattering the peace of the lakeside.

The entire Capital City was agog with the news of the attempt to murder their beloved king. Who would want to do such a heinous thing ? Could their  compassionate  king ever have enemies within the kingdom ? It was unthinkable !
Mallikarjuna, the Prince, was given a first hand report by his still gasping and shivering Sister :
“ Anna, it was horrible, I cant believe it even now ....Everything happened in a single instant. I just turned to show him my picture, at the same moment that masked  man, that  rogue ! , he brought down his knife on Appaji ....and Appaji,  in a flash, fought him off and pinned him to the ground .....I cannot believe it ! ...Why should anyone want to kill our dear Appaji ! .....”
“ Che ! Instead of catching and throwing that criminal in dungeon, Appaji could have finished him off with his bare hands !    fumed the Prince.
“ That is what I too thought and told Appaji on the way back. But he told me, that the man had to be questioned about who sent him. We have to find out who the real enemy is.”
“ True. He could not have acted on his own. Who has the courage to lift a finger on our mighty father ! This is definitely a deeper plot ......from now onwards, I will keep an eye on everyone around us.”
“ Though the rogue failed in his plan, unfortunately, his sword injured Appaji on the side of  the chest .....The Dannayaka brought a Vaidya immediately and attended to the wound and also sent his men to take us back home safely .......I am convinced that  it is Lord Somey Deva who saved Appaji.   
She closed her eyes and thought of Somey Deva in gratitude.

There was a grave silence in the room  where King Immadi Devaraya was resting. The distressed Queen Ponnala Devi, the Yelahanka Chieftain Mangappa Dannayaka and Prime Minister Lakkanna Dandesa  were all  watching the Royal Astrologer  anxiously.
The Astrologer, who  was studying the King’s horoscope,   kept doing some calculations, mumbling and counting on his fingers.
Finally he declared : “ What can I say ? This is an excellent horoscope. It shows a peerless personality. Awesome ability to achieve impossible goals. Has the very best qualities as a human ...Thousands and Lakhs of people will bow down to him ....”
The Prince and The Princess were proud to hear about their Father’s greatness, while the King  himself sat unconcerned ,  as though they were talking of someone else. But a small smile played under his big mustache.
“ Everyone knows that !  snapped Dannayaka, “ tell us if there’s any evil-eye , any curse or any bad planetary movement seen in the horoscope. Why did this mishap happen ?    
“ I was getting there, Sir,  said the Astrologer “ See, even the incomparable brightness of the  Sun is sometimes masked by an  Eclipse, This mishap is similar ......I regret to tell you that the Solar Eclipse due to occur soon , does not look very beneficial to our King’ s horoscope.    


“ God help us !     cried the Queen.
“ But there should be a prayaschitta, a way to ward off ill effect ? ” Said Lakkanna.
“ Do not fear ! There are ways to cancel the bad effect. By doing some pujas and making  offerings  and charities during the  time of the Eclipse, our King can be perfectly safe.    
“ Do tell us what is to be done.” Said the Queen , “ I have already made a vow to organise a Thulabhara in Virupaksha temple.    
“ I have made a Vow too !    Announced Princess Virupakshi , “Appaji , you have to treat this as  the Gift you promised me and get it fulfilled.    
“ Yes of course, my dear !     said the  King, “ What do you wish for ? ”
“ Appaji , It was Lord Somey Deva who saved  you from greater harm. I wish that He gets the same kind of puja, respect, pomp and pageantry that Virupaksha gets. He must have a grander abode, rich vastras, colourful flower garlands and a variety of offerings. I have vowed to make all this available to him  in gratitude for saving you.    
The king was astonished that  she wanted no gift  for herself and felt immense empathy for her vow.
“ It shall be done !    Declared the King , “ The Astrologer’s advice is to give a grant, a charity  and this shall be my Daana. .....O Mangappa Dannayaka, make a note. Virupakshapura Village and the fertile agricultural lands by the Older Banks of Devasamudra are to be granted for the daily upkeep and adoration of Lord Somey Deva, for eternity. Have this grant ( kodige) proclaimed all over.   
Prince Mallikarjuna, intervened with a suggestion : “ Appaji , this is a vow Virupakshi made in gratitude to Somey Deva for saving your life. Wouldn’t it be apt if Virupakshapura is renamed and granted as Devarayanapura, after your name ?    
“ Or better, as Vijayadevarayanapura !    added the Princess “ to commemorate Appaji’s innumerable Victories !    
“ Very good !     Declared the Astrologer. “ May it be so and the grant be given at the auspicious time so that our King will enjoy long life, good health, great wealth, peace and prosperity.”


Presently, King Devaraya Maharaya’s Grant ( Kodige) of the village and lands within Sakanasamudra region, to Lord Somey Deva , at the auspicious time, was broadcast all over the kingdom and the record was inscribed  in stone to last for ever.
-----------------------------------------------------------------------------------------------------------------
This is a work of Fiction , inspired by the Kodigehalli Inscription Stone and historical descriptions of King Devaraya.
Princess Virupakshi is a totally imaginary character.
https://timesofindia.indiatimes.com/city/bengaluru/decoding-bengalurus-stone-inscriptions-to-give-citizens-a-peek-into-history-culture/articleshow/61656091.cms

3 comments: