Friday, December 10, 2021

ಒಂದು ಊರು ಹುಟ್ಟಿದ ಕಥೆ ! / AND A TOWN WAS BORN …....

 ಒಂದು ಊರು ಹುಟ್ಟಿದ ಕಥೆ !

ಮಂಜು ಸುರಿವ ಮಾಗಿ ಚಳಿಯ ರಾತ್ರಿಯಲ್ಲಿ ಪೇರ್ ಎರುಮೂರ್ ಬೀದಿಯಲ್ಲಿ ಉಸಿರನ್ನು ಕೈಯಲ್ಲಿ ಹಿಡಿದುಕೊಂಡು  ಓಡುತ್ತಿದ್ದ ಬಾಲಕುಮಾರ ! ಚಳಿಯಿಂದ ಮೊದಲೇ ನಡುಗುತ್ತಿದ್ದ ಅವನ ಮೈ ಗುರುಗಳ ಪರಿಸ್ಥಿತಿಯನ್ನು ನೆನೆದು ಮತ್ತಷ್ಟು ನಡುಗ ತೊಡಗಿತು ! 

                                                                                  

ಗುರು ಮತ್ತು ಶಿಷ್ಯರು ಪೇರ್ ಏರುಮೂರಿಗೆ ಬಂದು ನೆಲೆಸಿ ಆಗಲೇ ತಿಂಗಳಗಳು ಕಳೆದುಹೋಗಿದ್ದವು  . ಊರವರಿಗೆ ಗುರುಗಳ ಮೃದು ಮಾತು ಮತ್ತು ಅವರ ಪ್ರವಚನಗಳು ಬಹಳ ಮೆಚ್ಚುಗೆಯಾಗಿದ್ದ ಕಾರಣ ಇನ್ನೂ ಸ್ವಲ್ಪ ದಿವಸಗಳು ಅವರು ತಮ್ಮೊಡನೆಯೇ ಇರಬೇಕೆಂಬ ಕೋರಿಕೆಯನ್ನು ಅವರ ಮುಂದಿಟ್ಟಿದ್ದರು . 

ಆದರೆ ಗುರುಗಳಿಗೆ ಒಂದೇ ಊರಲ್ಲಿ ಬಹಳ ಕಾಲ ತಂಗುವುದರಲ್ಲಿ ಒಪ್ಪಿಗೆ ಇರಲಿಲ್ಲ .' ಜನರ ಒಳಿತಿಗಾಗಿ ದೇವರ ಸೇವೆಯಲ್ಲಿ ನಿರತನಾಗಿರುವ  ವ್ಯಕ್ತಿ ಹರಿಯುವ ನದಿಯ ಹಾಗೆ ! ಒಂದೇ ಕಡೆ ನಿಲ್ಲದೆ ಈಶ ಸೇವೆ ಮತ್ತು ಜನ ಸೇವೆಯನ್ನು ಮಾಡುತ್ತಾ ಮುಂದೆ ಮುಂದೆ ಸಾಗುತ್ತಲೇ ಇರಬೇಕು !' ಎಂದಿದ್ದರು . 

" ಗುರುಗಳೇ ! ನಿಮ್ಮ ಕೆಮ್ಮು ವಾಸಿಯಾಗುವ ಸುಳಿವೇ ಇಲ್ಲ . ವೈದ್ಯರ ಬಳಿ ಹೋಗೋಣ ! ನಿಮ್ಮ ಆರೋಗ್ಯ ಸ್ವಲ್ಪ ಸುಧಾರಿಸಿದಮೇಲೆ ಹೊರಟರೆ ಆಗದೆ ? "  

ಅವರ ತೀರ್ಮಾನದ ಪ್ರಕಾರ ಪಯಣಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳ ತೊಡಗಿದ್ದರೂ ,  ಪ್ರಯಾಣವನ್ನು ಮುಂದೂಡಲು ಆದಷ್ಟು  ಪ್ರಯತ್ನಿಸಿದ್ದ ಬಾಲಕುಮಾರ . 

" ಕೆಮ್ಮು ನೆಗಡಿಗೆಲ್ಲ ಪಯಣ ನಿಲ್ಲಿಸುತ್ತಾರೆಯೇ ? ಎಲ್ಲ ಸರಿಹೋಗತ್ತೆ ಬಿಡು ! " ಎಂದು ಅಸಡ್ಡೆಯಿಂದ ನುಡಿದು ಧ್ಯಾನಕ್ಕೆ ಕುಳಿತುಬಿಟ್ಟಿದ್ದರು ಗುರುಗಳು . 

ಧ್ಯಾನಕ್ಕೆ  ಕುಳಿತುಬಿಟ್ಟರೆ ಒಂದು ಗಂಟೆ ಕಾಲವೋ ಇಲ್ಲ ಇನ್ನೂ ಹೆಚ್ಚು ಸಮಯವೋ ಅದರಲ್ಲೇ ಅವರು ಮಗ್ನರಾಗಿಬಿಡುವರು ಎಂಬುದನ್ನು ಅರಿತೇ ಇದ್ದ ಬಾಲಕುಮಾರ . ಅಂತಹ  ಸಮಯಗಳಲ್ಲಿ ಅವನು ಗುಡ್ಡದ ಬಳಿ ಹೋಗಿ ತನ್ನ ವ್ಯವಹಾರ  ಮುಗಿಸಿಕೊಂಡು, ಅವರು  ಕಣ್ತೆರೆಯುವ ಮುನ್ನ ಹಿಂದಿರುಗುತ್ತಿದ್ದ . ಗುರುಗಳ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದರೂ ಅವನು  ಅಂದೂ ಹಾಗೆಯೇ ಹೊರಟಿದ್ದ . 

                                                                                         

ಎಂದಿನಂತೆ ಅವನು ತನ್ನ ವ್ಯವಹಾರ ಮುಗಿಸಿಕೊಂಡು ಹಿಂದಿರುಗಿದಾಗ , ಗುರುಗಳು ಆಗಲೇ ಧ್ಯಾನವನ್ನು  ಮುಗಿಸಿದ್ದರು . 

ಸದಾ ಕರುಣೆ ತುಂಬಿರುವ ಗುರುಗಳ ಶಾಂತವಾದ ಕಣ್ಣುಗಳು ಅಂದೇಕೋ ಕೆಂಗಣ್ಣುಗಳಾಗಿದ್ದವು . ''ಬಾಲಕುಮಾರಾ .... " ಎಂದು ಗಟ್ಟಿಯಾಗಿ ಅವರು ಕೂಗುತ್ತಿದ್ದ ಹಾಗೆಯೇ ಸರಣಿ ಸರಣಿಯಾಗಿ ಹೊರ ಹೊಮ್ಮಿತು ಎಡಬಿಡದ ಕೆಮ್ಮು . 

" ಗುರಗಳೆ ! " ಎನ್ನುತ್ತಾ ಸುಧಾರಿಸಲಾರದೆ ತೂರಾಡಿದ ಗುರುಗಳನ್ನು ಹಿಡಿದು ಕೂರಿಸಿ ಎದೆ ನೀವಿ ಸಂತೈಸಲು ಯತ್ನಿಸಿದ ಬಾಲಕುಮಾರ .  ಗುರುಗಳ ದೇಹ ಕೆಂಡದಂತೆ  ಸುಡುತ್ತಿದ್ದದ್ದನ್ನು ಗಮನಿಸಿದಾಗ  ಅವನ ಎದೆ ಝಲ್ ಎಂದಿತು . ಅವನು  ಮಾಡಿದ ಶುಶ್ರೂಷೆಗಳೆಲ್ಲ ವಿಫಲವಾಗಿ, ಹೊತ್ತು ಸರಿದಂತೆ ಗುರುಗಳ ಪರಿಸ್ಥಿತಿ ಉಲ್ಬಣಗೊಂಡಿತ್ತು . 

 ಗುರುಗಳನ್ನು ಹೇಗಾದರೂ ಒಪ್ಪಿಸಿ ವೈದ್ಯರ ಬಳಿ ಮೊದಲೇ  ಕರೆದೊಯ್ದಿದ್ದರೆ ಪರಿಸ್ಥಿತಿ ಇಷ್ಟು ಬಿಗಡಾಯಿಸುತ್ತಿರಲಿಲ್ಲವೋ ಏನೋ ? ಅಯ್ಯೋ ! ತಾನು ತನ್ನ ಕರ್ತವ್ಯದಲ್ಲಿ ಎಡವಿದೆನೇ  ? 

ತನ್ನ ಊರು , ಹೆತ್ತವರು , ಒಡಹುಟ್ಟಿದವರು, ಗೆಳೆಯರು  ಎಲ್ಲರನ್ನೂ ಬಿಟ್ಟು  ಗುರುಗಳ ಸೇವೆಯಲ್ಲೇ ತನ್ನನ್ನು ತೊಡಗಿಕೊಂಡಿದ್ದ ಬಾಲಕುಮಾರ .   ಗುರುಗಳೊಂದಿಗೆ ಪಾದಯಾತ್ರೆ ಮಾಡುವಾಗ ಹೊಸ ಊರು , ಹೊಸ ಜನ , ಹೊಸ ಭಾಷೆ ಎಲ್ಲವನ್ನೂ ವಿಸ್ಮಯದಿಂದ ನೋಡುತ್ತಾ , ಆಲಿಸುತ್ತ  ಗುರುಗಳಿಗೆ ಸೇವೆ ಮಾಡಿಕೊಂಡು ಸಂತೋಷದಿಂದಲೇ  ಕಾಲ ಸಾಗಿಸುತ್ತಿದ್ದ  .  

ಆದರೆ ಇಂದು ಇದ್ದಕ್ಕಿದ್ದಂತೆ ಈ ಆಘಾತ ! 

ಆತಂಕದಿಂದ ಓಡುತ್ತಿದ್ದವನ ಮನಸ್ಸಿನ ಜೊತೆ  ಕಾಲುಗಳೂ  ಸೋತು ಹೋದಂತೆ ಅನ್ನಿಸಿತು . ಕಡೆಗೊಮ್ಮೆ ತಾನು ಹುಡುಕಿ ಬಂದ  ಮನೆಯನ್ನು ತಲುಪಿ ಬಾಗಿಲನ್ನು ಜೋರಾಗಿ ಬಡಿಯ ತೊಡಗಿದ ಬಾಲಕುಮಾರ.  

 ' ಗಾವುಂಡರೆ ! ಗಾವುಂಡರೆ ! ' 

ಮೈ ತುಂಬ ಹೊದ್ದು ಮಲಗಿದ್ದ ವಿಲ್ಲಗಾವುಂಡರಿಗೆ ಎಚ್ಚರವಾಗಿ ದಡಬಡಿಸಿ ಎದ್ದರು . 

" ಯಾರಪ್ಪೋ ಈ ಒತ್ನಾಗೇ ? " ಎನ್ನುತ್ತ ಬಾಗಿಲು ತೆರೆದರು . 

" ಗಾವುಂಡರೆ ! ಬೇಗ ಬನ್ನಿ ! ಗುರುಗಳ ಮೈ ಸರಿ ಇಲ್ಲ ! ಎಷ್ಟು ಕರೆದರೂ ಕಣ್ಣು ಬಿಡಲೊಲ್ಲರು ! ಉಸಿರಾಡೋದೇ ಕಷ್ಟವಾಗಿದೆ !  ನನಗೆ ತುಂಬಾ ಭಯವಾಗ್ತಿದೆ ! ಏನಾದರೂ ಮಾಡಿ ! " ಅಷ್ಟು ಹೊತ್ತು ಹಿಡಿದಿಟ್ಟಿದ್ದ ದುಃಖದ ಕಟ್ಟೆಯೊಡೆದು ಜೋರಾಗಿ ಅಳ ತೊಡಗಿದ ಬಾಲಕುಮಾರ . 

                                             ***************************

  ಮಂದವಾದ ಎಣ್ಣೆ ದೀಪದ ಬೆಳಕಿನಲ್ಲಿ  ಚಾಪೆಯಮೇಲೆ ಮಲಗಿದ್ದ ಆಜಾನುಬಾಹು ವ್ಯಕ್ತಿಯನ್ನು ಪರಿಶೀಲಿಸಿದ ವೈದ್ಯರು ತುರ್ತಿನ ಔಷದೋಪಚಾರ ಮಾಡಿ ಮುಗಿಸಿದಾಗ ಬೆಳಕು ಹರಿದಿತ್ತು. 

" ಗಾವುಂಡರೆ ! ಎಲ್ಲ ಔಷದೋಪಚಾರ ಮಾಡಿದ್ದೀನಿ ! ಮೊದಲು ಅವರನ್ನ ಈ ಶಿಬಿರದಿಂದ ಯಾವುದಾದರೂ ಮನೆಗೆ ವರ್ಗಾಯಿಸಿದರೆ ಒಳ್ಳೇದು . ಈ ಚಳಿ ವಾತಾವರಣ ರೋಗಿಗೆ ಒಳಿತಲ್ಲ . ಬೆಚ್ಚಗೆ ಹೊದ್ದಿಸಿ , ಬೆಚ್ಚಗಿನ ಕೋಣೆಯಲ್ಲಿ ಮಲಗಿಸಿ . ಎದೆಯಲ್ಲಿ ವಿಪರೀತ  ಖಫ ಕಟ್ಟಿ ಉಸಿರಾಟಕ್ಕೆ ತೊಂದರೆಯಾಗಿದೆ ! ಎದೆಗೂ ಬೆನ್ನಿಗೂ ಹಚ್ಚಿ ನೀವ ಬೇಕಾದ ತೈಲ , ನುಂಗಿಸಬೇಕಾದ ಗುಳಿಗೆಗಳು , ಕಷಾಯದ ಪುಡಿ ಎಲ್ಲವನ್ನೂ ಕೊಟ್ಟು ಹೋಗುವೆ . ನಾನು ಹೇಳುವ ಹಾಗೆ ತಪ್ಪದೆ ಎಲ್ಲ ಸರಿಯಾಗಿ ಉಪಯೋಗಿಸಬೇಕು . ಆಹಾರಕ್ಕೆ ಪುಷ್ಟಿಯಾದ ಬಿಸಿ ಗಂಜಿ , ಹಾಲು ಕೊಡಬೇಕು . ನೋಡ್ಕೊಳ್ಳಿ ! " 

ವೈದ್ಯರು ಕೊಟ್ಟ ಸಲಹೆಗಳನ್ನ ಕೇಳಿ ಬಾಲಕುಮಾರನಿಗೆ ಮಾತ್ರವಲ್ಲದೆ ಗಾವುಂಡರಿಗೂ ಆತಂಕವಾಯಿತು . 

" ಆಗಬೋದು ಸೋಮಿ ! ಪ್ರಾಣಕ್ಕೇನಾರ ಅಪಾಯ ? " ಅನುಮಾನದಿಂದ ಪ್ರಶ್ನಿಸಿದರು ಗಾವುಂಡರು . 

" ಛೆ ಛೆ ! ಅಂತದ್ದೇನೂ ಇಲ್ಲ ಗಾವುಂಡರೆ ! ಅಕ್ಕರೆಯಿಂದ ನೋಡಿಕೊಂಡರೆ ಬೇಗ ಚೇತರಿಸ್ಕೊತಾರೆ ! ಒಳ್ಳೆ ಧೃಡ ಕಾಯರಾಗಿದ್ದಾರೆ ! ಯಾವ ಊರೋರು ? " ಕುತೂಹಲದಿಂದ ವಿಚಾರಿಸಿದರು ವೈದ್ಯರು . 

" ಗುರುಗಳು ಯಾವ ಊರಲ್ಲೂ ನೆಲೆ ನಿಂತೋರಲ್ಲ !  ವೀರಬಲ್ಲಾಳ ದೇವ ನಾಡಿನ ದಕ್ಷಿಣ ಬಾಗವನ್ನೆಲ್ಲಾ ಸುತ್ತಾಡ್ಕಂಡು  ಇತ್ತೀಚ್ಗೆ ನಮ್ಮೂರಿಗೆ  ಬಂದಾವ್ರೆ ! "

" ಬಿಸಿಲು ಊರುಗಳಲ್ಲೇ ಸುತ್ತಾಡ್ಕೊಂಡಿದ್ದೋರು ! ನಮ್ಮ ಈ ಮಾಸಂದಿ ನಾಡಿನ ಚಳಿ ಹವಾಮಾನ ಅವರಿಗೆ ಒಗ್ಗಿಲ್ಲ ! ನಾನು ಹೇಳಿದ ಹಾಗೆ  ಬೆಚ್ಚಗೆ ಇಟ್ಕೊಳ್ಳಿ ! ನಾನು ಮತ್ತೆ ಬಂದು ಪರಿಶೀಲಿಸುವೆ  ! " 

" ಆಗ್ಲಿ ಸೋಮಿ !  ಅವ್ರಿಗೆ ಎಂಗಾರ ಬ್ಯಾಗ್ನೆ ವಾಸಿಯಾದ್ರೆ ಸಾಕು ! ರಾತ್ರೀಲಿ ಎಬ್ಸಿ ತೊಂದ್ರೆ ಕೊಟ್ಟೆ ! ಕ್ಷಮೆ ಇರ್ಲಿ ! " ಎನ್ನುತ್ತಾ ಕೈ ಮುಗಿದರು  ಗಾವುಂಡರು  . 

                                                            ************************

ಗುರುಗಳ ಆರೈಕೆಯಲ್ಲಿ ಮಗ್ನನಾಗಿದ್ದ ಬಾಲಕುಮಾರನಿಗೆ ದಿನಗಳು ಉರುಳಿದ್ದೇ ಗೊತ್ತಾಗಲಿಲ್ಲ . ಗಾವುಂಡರು ವೈದ್ಯರ ಸಲಹೆಯಂತೆ ಎಲ್ಲ ಅನುಕೂಲಗಳನ್ನೂ ಮಾಡಿ ಕೊಟ್ಟಿದ್ದರು .  ಊರೊಳಗಣ  ಬಲ್ಲಾಳ ಛತ್ರದ ಒಂದು ಕೋಣೆಯನ್ನು ಸ್ವಚ್ಛಗೊಳಿಸಿ , ಕೊಠಡಿಯ ಮಧ್ಯದಲ್ಲಿ ಒಂದು ಮಂಚವನ್ನೂ ತಂದು ಹಾಕಿಸಿದ್ದರು . ಹಾಸಲು ಒಂದು ಮೃದುವಾದ ಕೌದಿ, ಹೊದೆಯಲು ಬೆಚ್ಚಗಿನ ಕಂಬಳಿ ಎಲ್ಲವನ್ನೂ ಕೂಡಲೇ ತರಿಸಲಾಯಿತು .  ಮೂಲೆಯಲ್ಲಿದ್ದ  ಕೆಂಡದಿಂದ ಕೂಡಿದ ಇದ್ದಿಲೊಲೆ  ಸದಾ ಬಣಬಣ ಉರಿಯುತ್ತ  ಕೋಣೆಯನ್ನು ಬೆಚ್ಚಗೆ ಇಡುವುದರಲ್ಲಿ ಯಶಸ್ವಿಯಾಗಿತ್ತು  . 

"  ಗುರುಗಳ ಜೊತೆಯಾಗೇ ಇದ್ದು ಚೆಂದಾಗ್ ನೋಡ್ಕಳಪ್ಪ ! ಊಟದ್ ಚಿಂತಿ ಮಾಡ್ಬ್ಯಾಡ . ನಮ್ ಯಂಡ್ರಿಗೆ ಯೋಳಿ ಮೂರೊತ್ತೂ ಬಿಸಿ ಊಟ ಕಳಿಸ್ಕೊಡ್ತೀವ್ನಿ ! ಊಟ ತಂದ್ಕೊಟ್ಟು ನಿನ್ ಜೊತ್ಯಾಗೆ ಇರ್ತಾನೆ ನನ್ ಮಗ ! ನೀನು  ಭಯ ಬೀಳ್ಬ್ಯಾಡ ! " ಎಂದು ಬಾಲಕುಮಾರನ ಕುಂದಿದ ಹೃದಯದಲ್ಲಿ  ಧೈರ್ಯ ತುಂಬಿದ್ದರು ಗಾವುಂಡರು . 

ವೈದ್ಯರು ಪ್ರತಿ ನಿತ್ಯ ಬಂದು ಗುರುಗಳನ್ನು ಪರಿಶೀಲಿಸಿ ಹೋಗುತ್ತಿದ್ದರು . ಊರವರೆಲ್ಲ ಆಗಿಂದಾಗ್ಯೆ ಬಂದು ಗುರುಗಳ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡು ಹೋಗುತ್ತಿದ್ದರು .  ' ಏನು ಸಹಾಯ ಬೇಕಾದರೂ ಕೇಳು ಮಗ ! ನೀನೇನೂ ಹೆದರ್ಬೇಡಾ ! ನಾವೆಲ್ಲಾ ಇದ್ದೀವಿ ನಿನ್ ಜೊತೆ ! ' ಎಂದು ಬಾಲಕುಮಾರನಿಗೆ ಧೈರ್ಯ ಹೇಳುತ್ತಿದ್ದರು  . 

 ಪ್ರತಿ ದಿನವೂ ಗಾವುಂಡರ ಮಗ ಬಿಸಿ ಊಟವನ್ನು ತಂದು ಕೊಡುತ್ತಿದ್ದ . ಗಂಜಿ  ಮಾತ್ರ  ಸೇವಿಸುತ್ತಿದ್ದ ಗುರುಗಳು ಇತ್ತೀಚಿಗೆ ಸ್ವಲ್ಪ ಧೃಡ ಆಹಾರವನ್ನು ತಿಂದು ಅರಗಿಸಿಕೊಳ್ಳುವಷ್ಟು ಚೇತರಿಸಿಕೊಂಡಿದ್ದರು.   ದೈಹಿಕವಾಗಿ ಇನ್ನೂ ಬಲಹೀನರಾಗಿಯೇ ಇದ್ದರೂ ಆಗಲೇ ಮುಂದಿನ ಯಾತ್ರೆಯ ಬಗ್ಗೆ ಚಿಂತಿಸ ತೊಡಗಿದ್ದರು . ಪಯಣದ ಬಗ್ಗೆ ಇನ್ನು ಯಾವಾಗ ಬೇಕಾದರೂ ಅವರು ಪ್ರಸ್ತಾಪ ಮಾಡಬಹುದು ಅನ್ನಿಸಿತು ! ಈ ಯೋಚನೆ ಬಂದ ಕೂಡಲೇ ಬಾಲಕುಮಾರನ  ಮನಸ್ಸು ಹಪಹಪಿಸ ತೊಡಗಿತು . 

ಗುರುಗಳನ್ನೇ ಎವೆಯಿಕ್ಕದೆ ನೋಡುತ್ತಾ ಕುಳಿತಿದ್ದವನ  ಮನದಲ್ಲಿ ನೂರಾರು ಯೋಚನೆಗಳು ಸುಳಿದಾಡಿದವು . ಗುಡ್ಡದ ಬಳಿ ಕೂಡಲೇ ಧಾವಿಸಲು ಮನಸ್ಸು ಚಡಪಡಿಸಿತು .  

" ಬಾಲಕುಮಾರ ! ಅವ್ವ ಗುರುಗಳಿಗೆ ಇವತ್ತು ಬಿಸಿ ಬಿಸಿ ಅನ್ನ, ಬೇಳೆ ತೊವ್ವೆ ಮಾಡ್ಕೊಟ್ಟವ್ಳೆ ! ಆಕಳ ತುಪ್ಪಾನೂ ಐತೆ ! "

 ಊಟದ ಬುತ್ತಿ ಹಿಡಿದು ಬಂದ ವಿಲ್ಲಗಾವುಂಡರ ಮಗನ ಮಾತು ಬಾಲಕುಮಾರನನ್ನು ಎಚ್ಚರಿಸಿತು .  

 " ಮಲ್ಲಪ್ಪಾ ! ಬಂದೆಯಾ ? ಗುರುಗಳು ಮತ್ತೆ ನಿದ್ರೆಗೆ ಜಾರಿದ್ದಾರೆ ! ಔಷದಿಯ ಪ್ರಭಾವವೊ ಏನೋ  !ನನಗೆ ಸ್ವಲ್ಪ ತುರ್ತಿನ ಕೆಲಸವಿದೆ ! ನಾನು ಹಿಂದಿರುಗೋ  ವರೆಗೆ ಸ್ವಲ್ಪ ಇಲ್ಲೇ ಕೂತಿರ್ತೀಯ  ? " ಬಾಲಕುಮಾರ ಮೆಲುದನಿಯಲ್ಲಿ ಬೇಡಿಕೊಂಡ . 

'' ಅದಕ್ಕೇನಂತೆ ಮಗ ! ನಾನು ಇಲ್ಲೇ ಕುಂತಿರ್ತೀನೀ ! ಆದ್ರೆ ನೀನು ಉಂಡು ಓಗೂ ! ನಿನ್ಗೆ ಮುದ್ದೆ , ಖಾರವಾದ  ಸೊಪ್ಪಿನ್ ಸಾರು ಕಳಿಸವ್ಳೆ ಅವ್ವ   ! "  ಸ್ನೇಹದಿಂದ ನುಡಿದ ಮಲ್ಲಪ್ಪ . 

 ಆ ಊರಿನ ಜನ ಮತ್ತು ಗಾವುಂಡರ ಮನೆಯವರು ತೋರಿದ ಪ್ರೀತ್ಯಾದರ ಬಾಲಕುಮಾರನ ಮನವನ್ನು ಮುಟ್ಟಿತು . ಗಾವುಂಡರ ಮನೆ ಊಟ ತನ್ನ ಅಮ್ಮನ ಕೈ ಊಟದ ರುಚಿಯನ್ನು ಜ್ಞಾಪಿಸುವಂತಿತ್ತು.  ಇಂತಹ ಬಿಸಿ ಊಟ ಮಾಡಿ  ಯುಗಗಳೇ ಕಳೆದು ಹೋದಂತೆ  ಅನ್ನಿಸಿತು . ಆದರೆ ಈಗವನು ಊಟವನ್ನು ಸವಿಯುವ ಮನಸ್ಥಿತಿಯಲ್ಲಿರಲಿಲ್ಲ . 

" ಇಲ್ಲ ಮಲ್ಲಪ್ಪಾ ! ಬೇಗ ಹಿಂದಿರುಗುವೆ  ! ಬಂದು ಗುರುಗಳಿಗೆ ಅನ್ನ ತಿನ್ನಿಸಿ ನಂತರ ನಾನು ಊಟ ಮಾಡುವೆ ! " ಎನ್ನುತ್ತಾ ಬಿರಬಿರನೆ ಹೊರಟೇಬಿಟ್ಟ ಬಾಲಕುಮಾರ . 

ಮಲ್ಲಪ್ಪನಿಗೆ ಬಾಲಕುಮಾರನ ಸ್ನೇಹ ಬಹಳ ಮೆಚ್ಚುಗೆಯಾಗಿತ್ತು . ಗುರುಗಳೊಂದಿಗೆ  ಪಾದಯಾತ್ರೆ ಮಾಡಿದಾಗ ತಾನು ಕಂಡ ಊರುಗಳ ಬಗ್ಗೆ ಆತ ವಿವರಿಸುವುದನ್ನು ಕೇಳುವುದರಲ್ಲಿ ಮಲ್ಲಪ್ಪನಿಗೆ  ಬಹಳ ಆಸಕ್ತಿ . 

                                                                                     

ವೀರ ಬಲ್ಲಾಳ ಮಹಾರಾಜರ ಬಗ್ಗೆ ಅವನು ವರ್ಣಿಸ ತೊಡಗಿದರೆ ಮಲ್ಲಪ್ಪ ಬಿಟ್ಟ ಬಾಯನ್ನು ಮುಚ್ಚುತ್ತಲೇ ಇರಲಿಲ್ಲ . 

ಆನೆಯನ್ನು ಕೊಲ್ಲಬಲ್ಲ ಅವರ ಶಕ್ತಿಯ ಬಗ್ಗೆ -

 ಧೃಢಕಾಯರಾಗಿದ್ದ ಅವರ ಮೈಕಟ್ಟಿನ ಬಗ್ಗೆ -

 ತಿರುವಿ ತಿರುವಿ ಚೂಪಾಗಿದ್ದ ಅವರ ಹುರಿ ಮೀಸೆಯ ಬಗ್ಗೆ -

 ಶತ್ರು ಭಯಂಕರರಾದ ಅವರ ಭುಜಬಲ ಪರಾಕ್ರಮದ ಬಗ್ಗೆ -

ಅವರ ಧರ್ಮಶ್ರದ್ಧೆ ಮತ್ತು ದೈವ ಭಕ್ತಿಯ ಬಗ್ಗೆ -

ಅಖಂಡ ಹೊಯ್ಸಳ ಸಾಮ್ರಾಜ್ಯವನ್ನು ಏಕೀಕರಿಸಬೇಕೆಂಬ ಅವರ ಮನಸ್ಸಿನ ತುಡಿತದ ಬಗ್ಗೆ -

 ಅನೇಕ ಪ್ರಜಾಹಿತ ಯೋಜನೆಗಳನ್ನು ಕೈಗೊಂಡು ಪ್ರಜಾರಂಜಕರೆನ್ನಿಸಿಕೊಂಡಿರುವುದರ ಬಗ್ಗೆ  -

ಬಾಲಕುಮಾರ ವಿವರಿಸುತ್ತಿದ್ದರೆ ತಾನು ಕಣ್ಣಾರೆ ಕಂಡಿರದ ವೀರಬಲ್ಲಾಳ ಮಹಾಜರ ಬಗ್ಗೆ ಮಲ್ಲಪ್ಪನ ಮನದಲ್ಲಿ ಅಪಾರ ಭಕ್ತಿ ಮೂಡಿದ್ದು ಸುಳ್ಳಲ್ಲ . 

 ಗುರುಗಳು ಮಲಗಿದ್ದಲ್ಲೇ ಮಿಸುಕಾಡುವುದು ಕಂಡು ಅವರ ಬಳಿ ಎದ್ದು ಹೋಗಿ  , '' ಗುರುಗಳೇ ! ಎದ್ರಾ?" ಎಂದು ವಿನಯದಿಂದ ವಿಚಾರಿಸಿದ ಮಲ್ಲಪ್ಪ . 

'' ಬಾಲಕುಮಾರಾ ... '' ಎಚ್ಚರವಾಗುತ್ತಲೇ ಗುರುಗಳ ಕಣ್ಣುಗಳು ಶಿಷ್ಯನಿಗಾಗಿ ತಡಕಾಡಿದವು .  

" ಗುರುಗಳೇ ! ಆತ ಎಂತದ್ದೋ ತುರ್ತು ಕೆಲ್ಸಕ್ಕೆ ಓಗವ್ನೆ ! ಇನ್ನೇನು ಬಂದಾನು ! ನಿಮಗೆ ನಾನೇ ಊಟ  ಬಡಿಸ್ತೀವ್ನಿ !" ಗುರುಗಳು  ಎದ್ದು ಕುಳಿತುಕೊಳ್ಳಲು ಸಹಾಯ ಮಾಡುತ್ತಲೇ ನುಡಿದನು ಮಲ್ಲಪ್ಪ . 

" ಈಗ ಬೇಡ ಮಗು ! " ಎಂದ ಗುರುಗಳ ಹಣೆಯಮೇಲೆ ಚಿಂತೆಯ ರೇಖೆ ಮೂಡಿತು .   

ಊರು ಹೊಸತು ! ಜನ ಹೊಸಬರು ! ಇಲ್ಲಿ ಇವನಿಗೆಂತಾ ತುರ್ತಿನ ಕೆಲಸವಿರಬಹುದು ? ಗುರುಗಳಿಗೆ ಆಶ್ಚರ್ಯದ ಜೊತೆಗೆ  ಆತಂಕವೂ  ಉಂಟಾಯಿತು . ಸ್ವಲ್ಪ ದಿನಗಳಿಂದಲೇ ಬಾಲಕುಮಾರನ ನಡವಳಿಕೆಗಳನ್ನು ಅವರು ಗಮನಿಸುತ್ತ  ಬಂದಿದ್ದರು  . ಒಳ್ಳೆಯ ಹುಡುಗ ! ಮಾಡಬಾರದವರ ಸಹವಾಸ ಮಾಡಿ ಮಾಡಬಾರದ ಕೆಲಸಕ್ಕೇನಾದರೂ ಕೈ ಹಾಕಿರುವನೇ  ? ಪ್ರತಿ ಬಾರಿಯೂ ತನ್ನ ಕಣ್ತಪ್ಪಿಸಿ ಅವನು ಹೋಗುವುದಾದರೂ ಎಲ್ಲಿಗೆ ? ಅವನ ಬಗ್ಗೆಯ ಚಿಂತೆ ಅವರನ್ನು ಎಂದಿನಿಂದಲೋ  ಕಾಡ ತೊಡಗಿತ್ತು .  

ಅಂದೊಂದು ದಿನ  ಆತ ಹೊರಗೆ ಹೋಗಿ ಬಂದೊಡನೆ ಅವನನ್ನು ತರಾಟೆಗೆ  ತೆಗೆದುಕೊಳ್ಳಲೆಂದು  'ಬಾಲಕುಮಾರಾ ' ಎಂದು ಗಟ್ಟಿಯಾಗಿ ಚೀರಿದ್ದರು ! ಆಗಲೇ ಅಲ್ಲವೇ ಸರಣಿ ಕೆಮ್ಮು ಶುರುವಾಗಿ ಅವರು  ಜ್ಞಾನ ತಪ್ಪಿ ಬಿದ್ದದ್ದು ? 

ತನ್ನ ಅನಾರೋಗ್ಯದ ಸಮಯದಲ್ಲಿ  ಆತ ತನ್ನನ್ನು  ಅದೆಷ್ಟು ಕಾಳಜಿಯಿಂದ ನೋಡಿಕೊಂಡಿದ್ದ ! ಎವೆಯಿಕ್ಕದೆ ಹಗಲಿರುಳೆನ್ನದೆ ಸೇವೆ ಮಾಡಿದ್ದ ! ಅಂತಹವನು ತಪ್ಪು ತಂಟೆಗೆ ಹೋಗುವನೇ ?

 '' ಚಿನ್ನದಂತಾ ಪೋರ ಸೋಮಿ ಬಾಲಕುಮಾರ ! ಈ ಚಿಕ್ಕ ವಯ್ಸ್ನಾಗೆ  ಅದೆಂತಾ ಕರ್ತವ್ಯ ನಿಷ್ಠೆ ! ತಾಳ್ಮೆ! ಗುರು ಭಕುತಿ ! " ಗಾವುಂಡರು ಪದೇ ಪದೇ ಬಾಲಕುಮಾರನ ಬಗ್ಗೆ ಪ್ರಶಂಸೆಯ ಮಾತುಗಳನ್ನೇ ಆಡುತ್ತಿರುತ್ತಾರೆ . 

ಅಷ್ಟು ಒಳ್ಳೆಯ ಹುಡುಗ ತನಗೆ ತಿಳಿಯದಂತೆ ಗುಟ್ಟಾಗಿ ನಡೆಸುತ್ತಿರುವ ವ್ಯವಹಾರವಾದರೂ ಏನು ? ಇಂದು ಹೇಗೂ ಅವನನ್ನು ವಿಚಾರಿಸಲೇಬೇಕು ಎನ್ನಿಸಿತು . ಆದರೆ ಅವನ ಹಸುಳೆ ಮುಖವನ್ನು ಕಂಡುಬಿಟ್ಟರೆ ಅವನನ್ನು ವಿಚಾರಣೆ ಮಾಡಲು ಅವರಿಗೆ ಮನಸ್ಸೇ ಬರುವುದಿಲ್ಲವಲ್ಲ  !

ಅವಸರಪಡಬಾರದು ! ಅವನ ಮನಸು ನೋಯದಂತೆ ಈ ವಿಷಯವನ್ನು ನಾಜೂಕಾಗಿ ನವಿರಾಗಿ  ನಿಭಾಯಿಸಬೇಕು ಎಂದುಕೊಳ್ಳುತ್ತ  ನಿಟ್ಟುಸಿರೆಳೆದರು ಗುರುಗಳು .  

                                            ************************************

'' ಗುರುಗಳು ಆರಾಮವೇ ? " ಉತ್ಸಾಹದಿಂದ ಒಳಬಂದರು ವಿಲ್ಲಗಾವುಂಡರು . 

'' ಬನ್ನಿ ಗಾವುಂಡರೆ ! ನಿಮ್ಮ ದಯೆಯಿಂದ  ಚೆನ್ನಾಗಿ ಚೇತರಿಸಿಕೊಂಡಿರುವೆ ! '' ಎನ್ನುತ್ತಾ ಕಿರುನಗೆ ಬೀರಿದರು ಗುರುಗಳು . 

" ಅಯ್ಯೋ ! ಅಂಗನ್ಬೇಡಿ ಸೋಮಿ ! ನಿಮ್ ಸೇವೆ ಮಾಡೋದು ನಮ್  ಪುಣ್ಯ ಅಲ್ವರಾ ? ಅದ್ಸರಿ! ಊಟ ಆಯ್ತ್ರಾ ? "

" ನಿಮ್ಮ ಮನೆಯ ಆಕಳಿನ ಹಾಲು ಇನ್ನೂ ಅರಗದೆ ಹೊಟ್ಟೆಯಲ್ಲೇ ಕುಳಿತಿದೆ ! ಅಲ್ಲದೆ ಬಾಲಕುಮಾರನೂ ಬಂದುಬಿಟ್ಟರೆ ಒಟ್ಟಿಗೆ ಊಟ ಮಾಡುವ ಎಂದು ಕಾದಿರುವೆ  ! '' ಎನ್ನುತ  ಕಿರುನಗೆ ಬೀರಿದರು ಗುರುಗಳು . 

'' ಅಂಗಾ !  ಕಾಯ್ಕನ್ಡ್  ಕುಂತಿರ್ದೆ ನೀವು  ವೇಳೆಗೆ ಉಂಡು ಮಲಗಿದ್ರೆ ಅಲ್ವೇ ನಿಮ್ ಅರೋಗ್ಯ ಸುಧಾರಿಸೋದು ? "

" ಎಲ್ಲಿಗೆ ಹೋದನೋ ಏನೋ ? ಅವನೂ ಬರಲಿ ! " 

'' ಪಾಪ ! ಚಿಕ್ ಉಡ್ಗ ! ಅಂಗೇ ಅಡ್ದಾಡ್ಕಂಡ್ ಬರ್ಲಿ ಬುಡಿ ! ನಿಮ್ ಆರೋಗ್ಯದ್  ಬಗ್ಗೆ ಬಾಳಾ  ತಲೆ ಕೆಡಿಸ್ಕಂಡವ್ನೆ ! ಪಾಪ ! "                                                                                  

ಎದುರಲ್ಲೇ ಕುಳಿತು ತನ್ನ ಪ್ರವಚನಗಳನ್ನು ಅಕ್ಕರೆಯಿಂದ ಆಲಿಸುತ್ತಿದ್ದ  ಹುಡುಗ , ತಾನು ಉಣ್ಣಾಮಲೆ ಪಟ್ಟಣವನ್ನು ಬಿಟ್ಟು ಹೊರಟಾಗ ಜೊತೆಯಲ್ಲೇ ಅಂಟಿಕೊಂಡು ಬಂದಿದ್ದ  . ಬೇಡ ಬೇಡವೆಂದರೂ ಪಾದ ಯಾತ್ರೆಯಲ್ಲಿ ತನಗೆ ಜೊತೆಯಾಗಿದ್ದು ತನ್ನ ಸೇವೆಯಲ್ಲೂ ತೊಡಗಿಕೊಂಡ  . ತಾನು ಇದ್ದಲ್ಲಿ ಇದ್ದುಕೊಂಡು ತಾನು ತಿಂದದ್ದನ್ನೇ ತಿಂದುಕೊಂಡು ಈ ಚಿಕ್ಕ ವಯಸ್ಸಿನಲ್ಲೇ ಸನ್ಯಾಸಿಯಂತೆ ವೈರಾಗ್ಯದಿಂದ  ಬದುಕುವುದನ್ನು ಕಲಿತಿದ್ದ . ತನ್ನನ್ನು ಅದೆಷ್ಟು  ಹಚ್ಚಿಕೊಂಡಿದ್ದ ! ಅಂತಹವನು  ತಪ್ಪು ದಾರಿ ಹಿಡಿಯುವುದು ಸಾಧ್ಯವೇ ?

ಒಂದೇ ಊರಲ್ಲಿ ನೆಲಸದೆ ತಿರುಗಾಡುತ್ತಿದ್ದವರೆಗೂ ಎಲ್ಲ ಸರಿಯಾಗಿಯೇ ನಡೆಯುತ್ತಿತ್ತು ಅನ್ನಿಸುತ್ತದೆ . ಈ ಊರಲ್ಲಿ ಹೆಚ್ಚು ದಿನಗಳು  ನೆಲಸಿದ್ದು ಅವನ ಹೊಸ ಚಟುವಟಿಕೆಗೆ ಆಸ್ಪದ ನೀಡಿತೋ ?  ತನ್ನ ಅನಾರೋಗ್ಯದಿಂದಾಗಿ ಬಹಳ ಕಾಲ ಇಲ್ಲೇ ನೆಲಸಬೇಕಾಯಿತು ! ಮೊದಲು ಇಲ್ಲಿಂದ ಹೊರಡ ಬೇಕು ! ಬಾಲಕುಮಾರ ತಪ್ಪು ದಾರಿಯಲ್ಲಿ ಬಹಳ ದೂರ ಸಾಗುವ ಮುನ್ನ ಈ ಊರು ಬಿಟ್ಟು ಹೊರಟುಬಿಡುವುದೇ ಉಚಿತ ! 

" ಸೋಮಿ !  ಯೋಚ್ನೆ ಮಾಡ್ಬ್ಯಾಡಿ ! ನೀವು ಬಿಸಿಯಾಗಿ ಉಂಡು ಆರಾಮಾಗಿರಿ ! ಅವ ಬರೋವಾಗ ಬಾರ್ಲಿ ಬುಡಿ ! " ಮತ್ತೆ ಉಪಚರಿಸಿದರು ಗಾವುಂಡರು. 

" ಗಾವುಂಡರೆ ! ನಾನು ಈಗ ಎಷ್ಟೋ ಚೇತರಿಸಿಕೊಂಡಿರುವೆ ! ನಿಮ್ಮ ಆದರದ ಆತಿಥ್ಯಕ್ಕೆ ನಾನು ಚಿರ ಋಣಿ ! ಇನ್ನೂ ನಿಮಗೂ ಊರಿನವರಿಗೂ ಹೊರೆಯಾಗಿರಲು ನನ್ನ ಮನಸ್ಸು ಒಪ್ಪುತ್ತಿಲ್ಲ ! ಕೂಡಲೇ ನನ್ನ ಪಯಣ ಮುಂದುವರಿಸಲು  ಉದ್ದೇಶಿಸಿರುವೆ . " ಎಂದು ಮೆಲ್ಲನೆ ನುಡಿದರು ಗುರುಗಳು . 

" ಇದೇನ್ ಸೋಮಿ ಇಂಗಂದ್ಬುಟ್ರಿ  ? ಊರೋರೆಲ್ಲ ಸೇರಿ ನಮ್ ಊರಿಗೆ ಹೊಂದ್ಕೊಂಡಿದ್ದ ಕಾಡು ಕಡಿದು, ನೆಲ ಸಮ ಮಾಡಿ ಒಂದು ಕೆರೆ ತೋಡವ್ರೆ ! ಒಂದು ಗ್ರಾಮಾನೂ ಕಟ್ಟವ್ರೆ ! ಬರೋ  ದಶಮಿ ತಿಥಿಲಿ ಅದರ ಉದ್ಘಾಟನೆ ಮಾಡೋವಾಂತ ಮಾತಾಡ್ಕಂಡವ್ರೆ ! ಪೂಜ್ಯ ಗುರುಗಳ ಕೈನಾಗೇ  ಆ ಶುಭ ಕಾರ್ಯ ಆಗ್ಬೇಕು  ಅಂತಲೂ ನಿರ್ಧರಿಸವ್ರೆ ! ನೀವು ಕಣ್ಣು ಬುಡೋದನ್ನೇ ಕಾಯ್ತಿದ್ವಿ ! ಎಲ್ರೂ ಒಟ್ಗೆ ಬಂದು ಸಂಪ್ರದಾಯದಂತೆ ಅಣ್ಣು ವೀಳ್ಯ ಕೊಟ್ಟು ಕರೀಬೇಕು ಅಂದ್ಕೊಂಡಿದ್ವಿ ! ಅಷ್ಟ್ರಲ್ಲಿ ನೀವು ಇಂಗೆ ಥಟ್ ಅಂತ ಒಂಟ್ಬುಡ್ತೀನಿ ಅಂದ್ರೆ ಎಂಗೆ ಯೋಳಿ ! " ಉದ್ವೆಕಗೊಂಡ  ಗಾವುಂಡರು ಒಂದೇ ಸಮ  ಬಡಬಡಿಸಿದರು . 

 ಗುರುಗಳಿಗೆ ಆಶ್ಚರ್ಯವಾಯಿತು ! ತಾನು ಅರೋಗ್ಯ ಕೆಟ್ಟು ಮಲಗಿದ್ದ ಅಲ್ಪಾವಧಿಯಲ್ಲಿ ಕೆರೆಯಿಂದ ಕೂಡಿದ ಒಂದು  ಊರನ್ನೇ ನಿರ್ಮಿಸಿಬಿಟ್ಟರೆ ? ಎಂತಹ  ಪರಿಶ್ರಮಿಗಳು ಈ ಊರವರು? ಉದ್ಘಾಟನೆಗಾಗಿ ತಾನು ಕಣ್ಣು ಬಿಡುವುದನ್ನೇ ಕಾಯುತ್ತಿರುವ ಈ ಮುಗ್ದ ಜನರ ಪ್ರೀತಿಗೆ ಏನನ್ನುವುದು ? ಇವರುಗಳು  ಪ್ರೀತ್ಯಾದರದಿಂದ ಮುಂದಿಡುವ ಬೇಡಿಕೆಯನ್ನು ನಿರಾಕರಿಸುವುದಾದರೂ ಹೇಗೆ ? ಗುರುಗಳಿಗೆ ಧರ್ಮಸಂಕಟದಲ್ಲಿ ಸಿಲಿಕಿಕೊಂಡಂತೆ ಅನ್ನಿಸಿತು .  ಊರು ಬಿಡಬೇಕೆಂದುಕೊಂಡಾಗಲೆಲ್ಲ ಈ ಊರು ತನನ್ನು ಹಿಡಿದಿಟ್ಟುಕೊಳ್ಳುತ್ತದಲ್ಲ ! ಇದೆಂತಹ ಋಣಾನುಬಂಧವೋ ?

" ಗಾವುಂಡರೆ ! ನೀವು ಮತ್ತು ನಿಮ್ಮ ಈ ಊರಿನ ಜನ ನಿಮ್ಮ ಪ್ರೀತಿಯಲ್ಲಿ ನನ್ನನ್ನು ಕಟ್ಟಿ ಹಾಕಿರುವಿರಿ ! ಆಗಲಿ ! ಎಲ್ಲ ದೈವೇಚ್ಛೆ ! ಉದ್ಘಾಟನೆಯ ನಂತರವೇ ನಾನು ಹೋರಡುವೆ ! ಸರಿಯೇ  ? " ಎಂದು ಸಮಾಧಾನವಾಗಿ ನುಡಿದು ಕಿರುನಗೆ ಬೀರಿದರು  ಗುರುಗಳು . 

                                    *********************************

ತಮ್ಮ ದುಡಿಮೆಯಿಂದ ನಿರ್ಮಾಣವಾಗಿದ್ದ ಹೊಸ ಗ್ರಾಮದ ಉದ್ಘಾಟನಾ ಸಮಾರಂಭಕ್ಕೆ ಪೇರ್ ಎರುಮೂರ್ ನಿವಾಸಿಗಳೆಲ್ಲ ಸಂತಸದಿಂದ ಬಂದು ಕೂಡಿದ್ದರು .                 

ವಿಶಾಲವಾಗಿ ಹರಡಿಕೊಂಡಿದ್ದ ಕೆರೆ ! ಪೂರ್ವ ಬಾಗದಲ್ಲಿ ನಾಲ್ಕು ಕಾಲಿನ ಕಲ್ಲಿನ ಮಂಟಪದಂತೆ ಕಂಗೊಳಿಸಿದ  ತೂಬು ! ತೂಬಿನ ಉತ್ತರಂಗದಲ್ಲಿ  ಮುಂಜಾವಿನ ಬೆಳಕಲ್ಲಿ ಸುಂದರವಾಗಿ ರಾರಾಜಿಸುತ್ತಿದ್ದ  ಗಜಲಕ್ಷ್ಮಿಯ  ಕೆತ್ತನೆ !  ಕೆರೆಯ ತಳದಲ್ಲಿದ್ದ ಮೂರ್ನಾಲಕ್ಕು ಚಿಲುಮೆಗಳಿಂದ ಉಕ್ಕುತ್ತಿದ್ದ ಸ್ಪಟಿಕದಂತಹ  ನೀರು ! 

 ಮುಂದಿನ ವರ್ಷಋತುವಿನಲ್ಲಿ ಮಳೆಯಾದಾಗ ಕೆರೆ  ಮಹಾಸಮುದ್ರದಂತೆ ತುಂಬಿ ತುಳುಕುವ ಸಾಧ್ಯತೆಗಳೆಲ್ಲ ಕಂಡುಬಂದವು ! ಕೆರೆಯಲ್ಲಿ ವೃದ್ಧಿಯಾಗಲಿರುವ ಸಮೃದ್ಧಿಯಾದ ಜಲ ಜಂತುಗಳು , ವಲಸೆ ಬರಲಿರುವ  ಹಕ್ಕಿಗಳ ಸಮೂಹ , ಕೆರೆಯ ನೀರುಂಡು ಹೊಲ ಗದ್ದೆಗಳಲ್ಲಿ ನಳನಳಿಸಲಿರುವ  ಪಯಿರುಪಚ್ಛೆ ... 

ಮುಂಬರುವ  ದಿನಗಳಲ್ಲಿ ತಾವು ಕಾಣಲಿರುವ ಹೊಸ ಗ್ರಾಮದ ಸೌಂದರ್ಯವನ್ನು ಕಲ್ಪನೆಯಲ್ಲಿ ಕಂಡು ಆನಂದಿಸುತ್ತಿದ್ದರು ಪೇರ್ ಎರುಮೂರ್ ನಿವಾಸಿಗಳು !

ಗ್ರಾಮದ  ಬೀದಿಗಳ ಎರಡು ಬದಿಯಲ್ಲೂ ಸಾಲಾಗಿ ನಿರ್ಮಾಣವಾಗಿದ್ದ ಚಿಕ್ಕ ಚೊಕ್ಕ ಹೊಸ ಮನೆಗಳ ಮುಂದೆ  ಸುಂದರವಾದ ರಂಗೋಲಿಗಳ ವಿನ್ಯಾಸ ! ಎಲ್ಲೆಲ್ಲೂ ಅಲಂಕರಿಸಲ್ಪಟ್ಟ ಕಂಬಗಳಿಂದ ತೂಗುತ್ತಿದ್ದ ಹೂವು ಮತ್ತು ತಳಿರು ತೋರಣಗಳು .  ಹೊಸ ಬಟ್ಟೆಯುಟ್ಟು ಸಂಭ್ರಮದಿಂದ ಗಿಜಿಗುಡುತ್ತಿದ್ದ ಜನ ಸಂದಣಿ !

ವಲ್ಲಪ್ಪ ದಂಡನಾಯಕರು , ಮಹಾಪ್ರಸಾಹಿತ್ತ ನಿನ್ಡ್ರಾನ್ , ಮಾಸಂದಿನಾಡಿನ ಪಶ್ಚಿಮ ಬಾಗದ ಅಧೀಕ್ಷಕ ಸೆಮ್ಬಿ ದೇವರ್ , ವಿಲ್ಲಗಾವುಂಡರ್ , ಮತ್ತು ನಾಡಿನ ನಿವಾಸಿಗಳು ಕೂಡಿರಲು ಕೆರೆ ಪೂಜೆಯನ್ನು ಭಕ್ತಿಶ್ರದ್ಧೆಯಿಂದ ನೆರವೇರಿಸಿದರು ಗುರುಗಳು .  

 ' ಗುರುಗಳಿಗೆ ಜಯವಾಗಲಿ ! ವೀರಬಲ್ಲಾಳ ಮಹಾರಾಜರಿಗೆ ಜಯವಾಗಲಿ ! ವಲ್ಲಪ್ಪ ದಂಡನಾಯಕರಿಗೆ ಜಯವಾಗಲಿ ! '   ಜನರು ಮಾಡಿದ  ಜಯ ಘೋಷ ಮುಗಿಲು ಮುಟ್ಟಿತು. 

ಮಹಾಪ್ರಸಾಹಿತ್ತ ನಿನ್ಡ್ರಾನ್ ಊರ ಜನರನ್ನು ಕುರಿತು ಮಾತನ್ನು ಪ್ರಾರಂಭಿಸಲು ಎಲ್ಲರೂ ಜಯ ಘೋಷವನ್ನು ನಿಲ್ಲಿಸಿ ಅಕ್ಕರೆಯಿಂದ ಆಲಿಸತೊಡಗಿದರು . 

"  ಹೊಸ ಗ್ರಾಮ ಮತ್ತು ಕೆರೆಯ ನಿರ್ಮಾಣದಲ್ಲಿ ಪಾಲ್ಗೊಂಡ ಪೇರ್ ಎರುಮೂರ್ ನಿವಾಸಿಗಳೆ ! ನಮ್ಮ ಪೇರ್ ಎರುಮೂರನ್ನು ಹೊಂದಿಕೊಂಡಂತೆ ಮತ್ತೊಂದು ಹೊಸ ಗ್ರಾಮವನ್ನು ನಿರ್ಮಾಣ ಮಾಡಬೇಕಾದ ಅವಶ್ಯಕತೆ ಏನಿತ್ತು ಎಂದು ನಿಮಗೆಲ್ಲ ಗೊಂದಲವಾಗಿರಬೇಕು !  ಆದರೂ ಯಾವ ಪ್ರಶ್ನೆಯನ್ನೂ ಕೇಳದೆ ನಿರ್ಮಾಣ ಕಾರ್ಯದಲ್ಲಿ ಹೆಗಲು ಕೊಟ್ಟು ಸಹಕರಿಸಿರುವಿರಿ . ನಿಮ್ಮ  ಕರ್ತವ್ಯ  ನಿಷ್ಠೆ ಮೆಚ್ಚತಕ್ಕದ್ದು ! ಈಗ ಸೆಮ್ಬಿ ದೇವರ್ ಅವರು  ನಿಮಗೆಲ್ಲ ಒಂದು ಕುತೂಹಲಕಾರಿ  ವಿಷಯವನ್ನು ಹೇಳಲಿದ್ದಾರೆ ! "ಎಂದು ಸೆಮ್ಬಿ ದೇವರ್ ಅವರನ್ನು ಆಹ್ವಾನಿಸಿದ ಮಹಾಪ್ರಸಾಹಿತ್ತ ನಿನ್ಡ್ರಾನ್ . 

ಈಗ ಸೆಮ್ಬಿ ದೇವರ್ ತನ್ನ ಭಾಷಣವನ್ನು ಪ್ರಾರಂಭಿಸಿದರು . 

" ನಮ್ಮ ವೀರಬಲ್ಲಾಳ ಮಹಾರಾಜರ ಪರವಾಗಿ ನಾಡಿನ ಸುರಕ್ಷತೆಗಾಗಿ ಅನೇಕ ಯುದ್ಧಗಳಲ್ಲಿ ಪಾಲ್ಗೊಂಡು ಶೌರ್ಯದಿಂದ ಹೋರಾಡಿ ಗೆದ್ದು ಬಂದವರು  ಮಹಾದಂಡನಾಯಕರಾದ ವಾಚ್ಚಿದೇವರ್ ಅವರು . ಅವರ ಪರಿಶ್ರಮದಿಂದಲೇ  ನಮ್ಮ ಹೊಯ್ಸಳ ನಾಡು ವಿಜಯಲಕ್ಷ್ಮಿಯ ನಿರಂತರ  ಬೀಡಾಗಿದೆ ಎಂದರೆ ಅತ್ಯುಕ್ತಿ ಅಲ್ಲ ! ಮಹಾರಾಜರ ಗೌರವಕ್ಕೆ ಪಾತ್ರರಾಗಿರುವ  ಮಹಾದಂಡನಾಯಕರಿಗೆ ಪ್ರಜೆಗಳಾದ ನಾವು ಕೃತಜ್ಞತಾಪೂರ್ವಕ ಕಾಣಿಕೆಯೊಂದನ್ನು ಸಲ್ಲಿಸಬೇಕಾದದ್ದು ನಮ್ಮ ಹೆಮ್ಮೆಯ ಕರ್ತವ್ಯ. ಹಾಗಾಗಿ ಅವರಿಗೆ ಕೊಡಿಗೆಯಾಗಿ ನೀಡುವ ಉದ್ದೇಶದಿಂದಲೇ ಈ ಹೊಸ ಊರು ಮತ್ತು ಕೆರೆಯ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಯಿತು . ಮಹಾದಂಡನಾಯಕರಾದ ವಾಚ್ಚಿ ದೇವರ್ ಅವರಿಗೆ ಈ ನಮ್ಮ ಪ್ರೀತಿಯ ಕಾಣಿಕೆಯನ್ನು ನಮ್ಮ ಪರವಾಗಿ ವಲ್ಲಪ್ಪ ದಂಡನಾಯಕರು ಇದೀಗ ಸಲ್ಲಿಸಲಿದ್ದಾರೆ  ! "  

' ಉಗ್ರ ಪ್ರತಾಪಿ ವಾಚ್ಚಿ ದೇವರ್ ಅವರು ! ಹೊಯ್ಸಳ ನಾಡಿನ ಹೆಬ್ಬುಲಿ ಎನ್ನಿಸಿಕೊಂಡ ಮಾವೀರರು !ಪ್ರಜೆಗಳ ಗೌರವಕ್ಕೆ ಪಾತ್ರರಾದ ಮಹಾದಂಡನಾಯಕರು ! ಇಲ್ಲಿಗೆ ಬಂದಿರುವರೇ ? ಎಲ್ಲಿ ? ಎಲ್ಲಿ ? ' ಹೊಯ್ಸಳ  ನಾಡಿನ ಪ್ರಖ್ಯಾತ ಮಹಾದಂಡನಾಯಕರಾದ  ವಾಚ್ಚಿದೇವರ್ ಅವರ ಪರಾಕ್ರಮಗಳ ಬಗ್ಗೆ ಕೇಳಿದ್ದರೂ  ಅವರನ್ನು ಎಂದೂ ಪ್ರತ್ಯಕ್ಷವಾಗಿ ಕಂಡಿರದ ಜನ ಕುತೂಹಲದಿಂದ ಎಲ್ಲೆಡೆ ಕಣ್ಣು ಹಾಯಿಸಿ ಅವರನ್ನು ಹುಡುಕುತ್ತ ಉದ್ಗರಿಸ ತೊಡಗಿದರು . 

                                                                                      

 '' ಶಾಂತಿ ! ಶಾಂತಿ ! " ಎಂನ್ನುತ್ತ ಸೆಮ್ಬಿ ದೇವರ್ ಮಾತು ಮುಂದುವರಿಸಿದರು .  

" ಪ್ರತಾಪ ಚಕ್ರವರ್ತಿ ವೀರಬಲ್ಲಾಳ ಮಹಾರಾಜರು ಮತ್ತು ವಲ್ಲಪ್ಪ ದಂಡನಾಯಕರಿಗೆ ಒಳಿತಾಗಲೆಂದು ಮಹಾಪ್ರಸಾಹಿತ ನಿನ್ಡ್ರಾನ್ , ಮಾಸಂದಿನಾಡಿನ ಪಶ್ಚಿಮ ಬಾಗದ ಅಧೀಕ್ಷಕ ಸೆಮ್ಬಿ ದೇವರ್ ಎಂಬ ನಾನು , ವಿಲ್ಲಗಾವುಂಡರ್ , ಮತ್ತು ನಾಡಿನ ನಿವಾಸಿಗಳೂ ಕೂಡಿ , ಪೇರ್ ಎರುಮೂರಿಗೆ ಹೊಂದಿಗೊಂಡಿದ್ದ  ಕಾಡನ್ನು ಕಡಿದು ಭೂಮಿಯನ್ನು ಸಮತಟ್ಟು ಮಾಡಿ ಗ್ರಾಮ ಮತ್ತು ಕೆರೆಯೊಂದನ್ನು ನಿರ್ಮಿಸಿ , ಗ್ರಾಮಕ್ಕೆ 'ವಾಚ್ಚಿದೇವರ್ ಪುರಮ್  ' ಎಂದು ಹೆಸರಿಟ್ಟು , ಅದಕ್ಕೆ ಹೊಂದಿಕೊಂಡ ಹೊಲಗದ್ದೆಗಳನ್ನು ವಾಚ್ಚಿದೇವರ್ ಅವರಿಗೆ ಕೊಡಿಗೆಯಾಗಿ ನೀಡುವುದಾಗಿ ನಿಶ್ಚಯಿಸಿದ್ದೇವೆ ! " ಎಂದ ಸೆಮ್ಬಿ ದೇವರ್ ಒಂದು ಓಲೆಯನ್ನು ವಲ್ಲಪ್ಪ ದಂಡನಾಯಕರ ಕೈಗಿಟ್ಟರು .   

 "ರಾಜ ಕಾರ್ಯಗಳಿಂದ ನಿವೃತ್ತಿ ಹೊಂದಿ ,ಈಶ ಸೇವೆಯಲ್ಲಿ  ಗಮನ ಹೊರಳಿಸಿ ದೇಶವಿಡೀ ಪಾದ ಯಾತ್ರೆ ಮಾಡುತ್ತ, ತಮ್ಮ ಹಿತವಚನಗಳಿಂದಲೂ ಪ್ರೀತಿಯಿಂದಲೂ ನಿಮ್ಮೆಲ್ಲರ ಮನ ಒಲಿಸಿಕೊಂಡಿರುವ ಗುರುಗಳು - ವಾಚ್ಚಿದೇವರ್ ಅವರು  !  ಈ ನಮ್ಮ ಗುರುವರ್ಯರಿಗೆ ನಮ್ಮ ಪ್ರೀತಿಯ  ಕಾಣಿಕೆಯನ್ನು ನಿಮ್ಮೆಲ್ಲರ ಪರವಾಗಿ ಇದೀಗ ಸಮರ್ಪಿಸುತ್ತಿದ್ದೇನೆ  ! " ಎನ್ನುತ್ತ ವಲ್ಲಪ್ಪ ದಂಡನಾಯಕರು  ಕೊಡಿಗೆಯ ದಾಖಲೆ ಪತ್ರವನ್ನು ವಿನಮ್ರಪೂರ್ವಕವಾಗಿ   ಗುರುಗಳ ಪಾದಕ್ಕೆ ಸಮರ್ಪಿಸಿ  ತಲೆ ಬಾಗಿ ವಂದಿಸಿದರು .  

                                                                                      
ಚಕಿತಗೊಂಡಿದ್ದ ಜನರೆಲ್ಲಾ ಒಮ್ಮೆಗೆ ಸಂತೋಷದಿಂದ ಜಯ ಘೋಷ ಮಾಡ ತೊಡಗಿದರು .               

'' ಮಹಾದಂಡನಾಯಕ ವಾಚ್ಚಿದೇವರ್ ಅವರಿಗೆ ಜಯವಾಗಲಿ ! ಪೂಜ್ಯ ಗುರುಗಳಿಗೆ ಜಯವಾಗಲಿ ! " ವೀರಬಲ್ಲಾಳ ಮಹಾರಾಜರಿಗೆ ಜಯವಾಗಲಿ ! ವಲ್ಲಪ್ಪ ದಂಡನಾಯಕರಿಗೆ ಜಯವಾಗಲಿ ! '  ಊರವರ ಉತ್ಸಾಹದ  ಜಯ ಘೋಷ ಎಂಟು ದಿಕ್ಕುಗಳಲ್ಲೂ ಪ್ರತಿಧ್ವನಿಸಿತು ! 

'  ಇದೇನು ನಡೆಯುತ್ತಿದೆ ಇಲ್ಲಿ? ' ನಡೆಯುತ್ತಿರುವ ಘಟನೆಗಳಿಂದ ತಬ್ಬಿಬ್ಬಾಗಿದ್ದ ಗುರುಗಳು ಮಾತನಾಡಲಾರದೆ ಮೌನದಿಂದಲೇ  ಎಲ್ಲರನ್ನೂ ಕುರಿತು ಕೈಮುಗಿದು ನಿಂತರು . ದಾಖಲೆ ಪತ್ರದ  ಮೇಲೆ  ಮನುಷ್ಯ ಶರೀರದಿಂದ ಕೂಡಿದ ಗಂಡಭೇರುಂಡನ ರಾಜಮುದ್ರೆ  ! ವೈರಿಗಳನ್ನು  ನಡುಗಿಸಬಲ್ಲ ಗಂಡಭೇರುಂಡ ಬಿರುದಾಂಕಿತ ಹೊಯ್ಸಳರ ರಾಜಮುದ್ರೆ ! ಗುರುಗಳ  ಮನಸ್ಸು ಮೃದುವಾಗಿ , ಕಂಗಳು ತುಂಬಿ ಬಂದವು . ಕ್ಷಣಗಳಲ್ಲಿ ತನ್ನನ್ನು ಸಾವರಿಸಿಕೊಂಡರು. 

'' ನನ್ನ ಪ್ರೀತಿಯ ಮಹಾಜನಗಳೇ ! ಬಹಳ ಕಾಲದಿಂದ ನಾನು ನಾಡ ಸೇವೆಯಲ್ಲೇ ಮಗ್ನನಾಗಿಬಿಟ್ಟಿದ್ದೆ ! ಎಷ್ಟೋ ಯುದ್ಧಗಳನ್ನು ಕಂಡವನು ನಾನು ! ಆದರೆ ಇತ್ತೀಚಿಗೆ ಯಾಕೋ  ಈಶ ಸೇವೆಯಲ್ಲೇ ನನ್ನ ಉಳಿದ ಕಾಲವನ್ನು ಕಳೆದುಬಿಡಬೇಕೆನ್ನಿಸ ತೊಡಗಿತು ! ಎಲ್ಲವನ್ನೂ ಎಲ್ಲರನ್ನೂ ತೊರೆದು ಪಾದ ಯಾತ್ರೆಯಾಗಿ ಹೊರಟೆ ! ಆದರೆ ಪೇರ್ ಎರುಮೂರ್ ನಿವಾಸಿಗಳಾದ ನೀವೆಲ್ಲರೂ ಸೇರಿ ನಿಮ್ಮ ಪ್ರೀತ್ಯಾದರದಲ್ಲಿ  ನನ್ನನ್ನು ಮತ್ತೆ ಬಂಧಿಸಿಬಿಟ್ಟಿರಿ ! ಇಂದು ನಾನು ಹೊಯ್ಸಳ ನಾಡಿನ ಓರ್ವ ಸಾಮಾನ್ಯ ಪ್ರಜೆ ! ಹಾಗಾಗಿ ಬೇರುಂಡನ ಮುದ್ರೆಯೊತ್ತಿರುವ ಈ ಒಲೆಯಲ್ಲಿ ಕಂಡುಬರುವ  ಕಟ್ಟಳೆಯನ್ನು  ಒಪ್ಪಿಕೊಳ್ಳಲೇ ಬೇಕಾದ ಪರಿಸ್ಥಿತಿಯಲ್ಲಿರುವೆ ! ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ ! ಈಶ್ವರನ ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲಿರಲಿ ! " 

 ಹೊಯ್ಸಳ ನಾಡಿನ  ಮಹಾದಂಡನಾಯಕರಾಗಿದ್ದು ಇಂದು ಪೂಜ್ಯ ಗುರುಗಳಾಗಿರುವ  ವಾಚ್ಚಿ ದೇವರ್ ಅವರ ಆಶೀರ್ವಾದಕ್ಕಾಗಿ  ಊರ ಜನರೆಲ್ಲಾ ಒಮ್ಮೆಗೇ  ಒಬ್ಬರಮೇಲೊಬ್ಬರು ಬಿದ್ದು ಎದ್ದು ಅವರಿಗೆ ನಮಸ್ಕರಿಸಲು ಮುಂದಾದರು  . 

 ವಿಲ್ಲಗಾವುಂಡರ ಏರ್ಪಾಟಿನಲ್ಲಿ  ಅನ್ನದಾನ ಕೈಂಕರ್ಯವು ಸಂಭ್ರಮದಿಂದ ಜರುಗುತ್ತಿತ್ತು .  ಮಲ್ಲಪ್ಪ ಮತ್ತು ಬಾಲಕುಮಾರ ಇನ್ನೂ ಕೆಲವು ಹುಡುಗರೊಡಗೂಡಿ ಲವಲವಿಕೆಯಿಂದ ದೊನ್ನೆಗಳನ್ನು ತುಂಬಿ ತುಂಬಿ ವಿನಿಯೋಗ ಮಾಡುವುದರಲ್ಲಿ ನಿರತರಾಗಿದ್ದರು . 

                             ******************************************

'' ಗುರುಗಳೇ ! ನಿಗದಿಪಡಿಸಿರುವ ಸ್ಥಳದಲ್ಲಿ ( ಮಡಪ್ಪುರಂ ) ಮಠದ ನಿರ್ಮಾಣವಾಗುವವರೆಗೆ ತಾವು ಈಗಿರುವ  ಛತ್ರದಲ್ಲೇ ಉಳಿದುಕೊಳ್ಳಬಹುದು ! ಮಠದ ನಿರ್ಮಾಣ ಕಾರ್ಯಗಳೂ ಶೀಘ್ರದಲ್ಲೇ ತೊಡಗಲಿದೆ . " ಎಂದು ವಿನಯದಿಂದ ನುಡಿದರು ವಲ್ಲಪ್ಪ ದಂಡನಾಯಕರು . 

" ನನ್ನ ಪಾಡಿಗೆ ನಾನು ಪಾದಯಾತ್ರೆ ಮಾಡಿಕೊಂಡು ಊರೂರು ತಿರುಗುತ್ತಿದ್ದೆ . ಆದರೆ ನನ್ನನ್ನು ಹೀಗೆ ಒಂದೇ ಕಡೆ ಕಟ್ಟಿಹಾಕ ಬೇಕಾದ ಅವಶ್ಯಕತೆ ಏನಿತ್ತು ವಲ್ಲಪ್ಪ ದಂಡನಾಯಕರೇ ? " ಗುರುಗಳ ಮಾತಿನಲ್ಲಿ ಸ್ವಲ್ಪ ಅಸಮಾಧಾನ ಇಣುಕಿದಂತಿತ್ತು . 

ವಲ್ಲಪ್ಪ ದಂಡನಾಯಕರು ಕೆಲವು ಕ್ಷಣಗಳು ಮೌನ  ತಾಳಿದರು . ನಂತರ ಮಾತನಾದ ತೊಡಗಿದರು . 

" ವಾಚ್ಚಿ ದೇವರ್ ಅವರು ಮಹಾರಾಜರಿಗೆ  ಅದೆಷ್ಟು ಆಪ್ತರಾಗಿದ್ದರು ! ಅವರ ಅಗಲುವಿಕೆ ಮಹಾರಾಜರಿಗೆ ತುಂಬಾ ದುಃಖವನ್ನು ಉಂಟುಮಾಡಿತು . ಆದರೂ ತಮಗಾಗಿ ತಮ್ಮ ನಾಡಿಗಾಗಿ ಅನೇಕ ಕಾಲ ಶ್ರದ್ದೆಯಿಂದ ದುಡಿದಿದ್ದ ಪ್ರೀತಿಯ ಮಿತ್ರರು ನಿವೃತ್ತಿಯನ್ನು ಬಯಸಿದಾಗ ಅದನ್ನು ದಯಪಾಲಿಸಲೇಬೇಕಾಯಿತ್ತು .  ಮಹಾರಾಜರು ಮನಸ್ಸಿಲ್ಲದ ಮನಸ್ಸಿನೊಂದಿಗೆ ಅವರನ್ನು  ಬೀಳ್ಗೊಟ್ಟರು.  ಜೊತೆಗೆ  ಅವರು ಕಳಿಸಲಿದ್ದ ಸೇವಕರು ಮತ್ತು ನಗದು ನಾಣ್ಯಗಳನ್ನೂ ನಿರಾಕರಿಸಿ ಅವರು  ಹೊರಟೇಬಿಟ್ಟರು  . ಆದ್ದರಿಂದ ಒಂಟಿಯಾಗಿ  ಹೊರಟುನಿಂತ ತನ್ನ ಆಪ್ತ ಸ್ನೇಹಿತರ  ಯೋಗಕ್ಷೇಮಗಳ ಬಗ್ಗೆ  ಆಗಿಂದಾಗ್ಯೆ  ತಿಳಿದುಕೊಳ್ಳಲು  ಒಂದು ಏರ್ಪಾಟನ್ನು ಮಾಡಿದರು ಮಹಾರಾಜರು . " 

ಗುರುಗಳಾಗಿದ್ದ ವಾಚ್ಚಿದೇವರ್ ಮೌನದಿಂದಲೇ ಕೇಳಿಸಿಕೊಂಡರು . 

"ಪೇರ್ ಎರುಮೂರಿನಲ್ಲಿ ಒಮ್ಮೆ ನೀವು  ಜ್ಞಾನ ತಪ್ಪಿ ಬಿದ್ದದ್ದು , ಮತ್ತು ಎದೆಯಲ್ಲಿ  ಕಟ್ಟಿದ್ದ ಖಫದಿಂದ  ವಾರಗಟ್ಟಲೆ ಅಸ್ವಸ್ಥವಾಗಿದ್ದದ್ದು  ಎಲ್ಲವನ್ನೂ ಅರಿತುಕೊಂಡ  ಮಹಾರಾಜರಿಗೆ ತುಂಬಾ ಆತಂಕವಾಯಿತು . ನಿಮ್ಮ ಅಲೆದಾಟವನ್ನು  ಹೇಗಾದರೂ ತಪ್ಪಿಸಬೇಕೆಂಬ ಹಂಬಲ ! ಮಹಾರಾಜರ  ಮನದಿಂಗಿತವನ್ನು ಅರಿತ ಸೆಮ್ಬಿ ದೇವರ್ ಮತ್ತು  ವಿಲ್ಲಗಾವುಂಡರ್ ಇಬ್ಬರೂ   ಈ ಹೊಸ ಊರ ನಿರ್ಮಾಣ ಕಾರ್ಯವನ್ನು ತಾವಾಗಿಯೇ  ಕೈಗೆತ್ತಿಕೊಂಡರು . " 

ಮಹಾರಾಜರಿಗೆ ತನ್ನ ಬಗ್ಗೆ ಇದ್ದ  ಪ್ರೀತಿ ಮತ್ತು ಕಾಳಜಿಯನ್ನು ನೆನೆದು ಗುರುಗಳ ಕಣ್ಣುಗಳು ತುಂಬಿ ಬಂದವು . ತಾನು ಇದೀಗ ಓರ್ವ ಸಾಮಾನ್ಯ  ಪ್ರಜೆ ! ತನಗೆ ಯಾವ ಬಂದೋಬಸ್ತು ಬೇಡವೆಂದಿದ್ದರೂ ತಾನು ಇಂದಿಗೂ ಮಹಾರಾಜರ  ಕಣ್ಗಾವಲಲ್ಲೇ  ಇರುವುದು ಅರಿವಾಯಿತು . 

'' ಅಂತೂ ನನ್ನನ್ನೇ ಏಮಾರಿಸಿ ನನ್ನ ಬೆನ್ನ ಹಿಂದೆ ಬೇಹುಗಾರರು ಬಿದ್ದಿರುವುದು ಅರಿವಾಯಿತು  ! ಆದರೆ ಶಿಬಿರದೊಳಗೆ ನಾನು ಕೆಮ್ಮಿದ್ದನ್ನೂ ಸಹ ಸೂಕ್ಷ್ಮವಾಗಿ ಗಮನಿಸಿ ವರದಿ ಮಾಡಿದ ಆ ಚತುರ ಬೇಹುಗಾರ  ಯಾರು ದಂಡನಾಯಕರೇ ? " ಕುತೂಹಲದಿಂದ ಪ್ರಶ್ನಿಸಿದರು ಗುರುಗಳು .  

ವಲ್ಲಪ್ಪ ದಂಡನಾಯಕರ ಮೊಗದಲ್ಲಿ ತುಂಟನಗೆ ಅರಳಿತು . 

'' ಬೇಹುಗಾರ ಬಲು ಚತುರನೇ  !ಊರಾಚೆಯ ಗುಡ್ಡದ ಬಳಿಯ ಹೆದ್ದಾರಿಯಲ್ಲಿ  ಗಾಡಿಗಳಲ್ಲಿ ಸಾಗುವ  ವ್ಯಾಪಾರಿಗಳ ಮೂಲಕ ಆಗಿಂದಾಗ್ಯೆ  ಸಂದೇಶಗಳನ್ನು ಕಳಿಸುತ್ತಿದ್ದ . ಆ ಓಲೆಗಳನ್ನು ನನ್ನ ಅಂಚೆ ಸವಾರರು  ಮಹಾರಾಜರಿಗೆ ತಲುಪಿಸುತ್ತಿದ್ದರು ! "

" ಯಾರು ? ಯಾರವನು ? " ಗುರುಗಳಿಗೆ ಅನುಮಾನ ! ಕುತೂಹಲ ! 

" ತಾವು ಸೇವಕರನ್ನು ನಿರಾಕರಿಸಿ ಹೊರಟಿರಿ ! ಆದ್ದರಿಂದ ಮಹಾರಾಜರೇ ಓರ್ವ ಸೇವಕನನ್ನು ನಿಮ್ಮ ಶಿಷ್ಯನಾಗಿರುವಂತೆ  ನೇಮಿಸಿದರು ! ಅವನ ಕೈಯ್ಯಲ್ಲೇ ಬೇಹುಗಾರಿಕೆಯನ್ನೂ ಮಾಡಿಸಿದರು !" 

" ಅಂದರೆ ? " 

" ಹೌದು ! ಅಲ್ಲಿ ನೋಡಿ ! ಉತ್ಸಾಹದಿಂದ ಅನ್ನದಾನ ಚಪ್ಪರದಲ್ಲಿ ಲವಲವಿಕೆಯಿಂದ ಓಡಾಡುತ್ತಿದ್ದಾನಲ್ಲ ... "

' ಹಾ ! ಬಾಲಕುಮಾರ ! ನನ್ನ ಶಿಷ್ಯ ಬಾಲಕುಮಾರ ! ಈ ಸಣ್ಣ ವಿಷಯವನ್ನು ನಾನು ಊಹಿಸದೇ ಹೋದೆನಲ್ಲ ! ವಿಲ್ಲಗಾವುಂಡರು ಹೇಳಿದಂತೆ ಆತ ಚಿನ್ನದಂತಾ ಪೋರ ! ಅವನ ಬಗ್ಗೆ  ನಾನು ತಪ್ಪು ತಿಳಿದೆನಲ್ಲ !  '  ಗುರುಗಳು ಮನದಲ್ಲಿ ಪಶ್ಚಾತಾಪ ಉಕ್ಕಿತು . ಕರುಣೆ ತುಂಬಿದ ಕಣ್ಣುಗಳು ತುಂಬಿ ಬಂದವು ! ಆವರೆಗೂ ತಲ್ಲಣಗೊಂಡಿದ್ದ ಮನಸ್ಸು ಒಮ್ಮೆಗೆ ಶಾಂತ ಸರೋವರವಾಯಿತು !

'' ಗುರುಗಳೇ ! ಗುಳಿಗೆ ನುಂಗುವ ಹೊತ್ತಾಗಿದೆ ! " ಎನ್ನುತ್ತಾ ತನ್ನ ಬಳಿ ಓಡಿಬಂದ ಬಾಲಕುಮಾರನ ತಲೆಯನ್ನು ಪ್ರೀತಿಯಿಂದ ನೇವರಿಸಿದ ಗುರುಗಳ  ಮೊಗ ಹರುಷದಿಂದ ಅರಳಿತು !

                  ***********************************************

ಕ್ರಮೇಣ ಮಹಾಪ್ರಸಾಹಿತ್ತ ನಿನ್ಡ್ರಾನ್ ಮತ್ತು ನಾಡ ಕರಣಿಕ ಪೆರಿಯಪಿಳ್ಳೈ  ಅವರುಗಳ ಹಸ್ತಾಕ್ಷರಗಳೊಂದಿಗೆ ಕಲ್ಲಿನಲ್ಲಿ ಕೆತ್ತಿಸಿದ ಶಾಸನವನ್ನು ಕೆರೆಯ ದಂಡೆಯಲ್ಲಿ ಸ್ಥಾಪಿಸಲಾಯಿತು . 

***********************************************************************************

ಆಧಾರ - ವಿಭೂತಿಪುರ ಶಿಲಾ ಶಾಸನ (EC -9 Bn 133).

ಮನುಷ್ಯ ಶರೀರದ ಗಂಡಬೇರುಂಡ - ವೀರ ಬಲ್ಲಾಳ ಮಹಾರಾಜರ ಕಾಲದ ಅನೇಕ ಶಿಲಾ  ಶಾಸನಗಳಲ್ಲಿ ಕಂಡು ಬರುವ ಕೆತ್ತನೆ / ರಾಜಲಾಂಛನ. 

******************************************************************************

AND A TOWN WAS BORN …....


Balakumara’s heart was pounding wildly as he ran through the streets of Per-Erumur . He was shivering, not merely from the biting cold air of the foggy night, but from fright and terrifying anxiety caused by the sudden downturn in his Master’s health.

                                                                                   
It had been a few months since he, with his Master, a Holy Teacher, had arrived in Per Erumur in the course of their travels. And the Guru was already talking about moving again! This travel plan had greatly disappointed the people of Per Erumur .

They were so impressed by the Guru’s learned discourses and his soft spoken, kind nature that they wanted him to settle down in that town itself.

But the Guru kept telling them that his way of devotion to God was to keep moving, spreading his messages and doing good to as many people as possible.

Balakumara, his dear disciple who always accepted whatever he said, was a bit hesitant in this matter of getting ready to leave. He had noticed that the Guru had developed cold and cough and it was draining his energy. Wouldn’t it better to postpone the travel idea for a few days more?

“Cough and cold are nothing to be scared of, boy! You just see to the packing and get read. We will leave in a day or two.” With that , the Guru had closed his eyes and sat for meditation.
Balakumara knew the meditation would last at least for an hour. ‘By which time, I will finish my work by the hillock and return soon.’ he told himself and left silently.

                                                                                  

He did return soon, but was surprised to see that the Guru had finished meditation sooner and was           waiting for him! Balakumara was alarmed to see the usually calm and serene face of his Guru glowing red with anger !                                                                                                                                          

As soon as he entered, the Guru shouted in rage: “Balakumara! Wher…..” But, before he could speak , a terrible fit of coughing shook his body and he fell down in a faint.

“Guru! Guru!  The terrified lad cried as he helped him up, massaged his chest, gave him water and lay him down. ‘I should have taken him to the medicine man earlier! I slipped in my duty as a good disciple!  he lamented.

Now he was running through the cold, foggy dusk looking for help .He reached the house of the headman and banged on the door urgently:

“ Gavunda ! Gavunda ! Please come quickly! he screamed.

The startled Gavunda (Headman) came out , fully wrapped in a blanket stuttering “ Who? What? ”
“Please do something! My Guru is in danger! Cried Balakumara.

*******************************************************************************


It was almost dawn, by the time the Vaidya (Medicine Man) got up from beside the mat on which the Guru lay. He had spent the entire night giving emergency treatment and The Teacher was now asleep.
“ O Vaidya, I hope there’s no danger to life! ” mumbled the Gavunda anxiously.

Not at all !"Smiled the Vaidya “Look at him! He must have been a strong man always …….it's just a very severe cold in the chest. It must be the bad weather. And this tent is not the best place to live now. ” He turned to Balakumara and asked “Where are you two from, my lad? 

“We don't have any permanent home, Sir. We have been traveling through the southern regions of Veera Ballala Raja’s country before coming here.”

“O , I see! You are used to warm air only. This bitter cold season of Masandi Nadu did not agree with the poor man …... Gavunda , move him to a proper room and keep him warm, give him hot food …. have kept all the oils, powders and pastes with instructions for how and when to administer them. Take good care of your Teacher, boy! He will be well. 

****************************************************************************

 Balakumara lost count of the days as he immersed himself in nursing the Guru with utmost care.
Gavunda had provided a good room and wrm bedding for them in Ballala Chattra (Travelers Inn) . The room was  warmed by a charcoal burner, day and night. He had also arranged to cook special food for the patient and square meals for the boy in his own kitchen.

Gavunda’s son, Mallappa, brought the food on time every day, a job he did willingly because he had grown fond of chatting with Balakumara.

Mallappa loved listening to Balakumara’s travel tales. And his stories about King Veera Ballala , making him seem like an Epic Hero!

                                                                                       

Balakumara told him about the King’s valour -

 His great physical strength -

 His fabulous moustache -

 His ability to strike terror in enemy hearts -

 His goal of uniting all scattered regions into a Sovereign Hoysala Nation -

 His numerous people-friendly policies …….

These inspiring stories never failed to impress Mallappa , even after so many days of discussing them.

The Guru’s health had improved, but he was still not fit enough to travel by foot.
When Mallappa came with the food basket that day, the Guru was still napping. Balakumara felt it was a good opportunity to make a quick dash to the hillock.

“Mallappa, can you please sit with Guru for a while? I have to go out for half an hour. I will return soon.”

“ Sure ! No problem……you need a break too, boy ! Grinned Mallappa.

***************************


“Salutations Guru! ” Said Mallappa cheerfully as soon as the Teacher stirred awake . “Look what Avva sent you today! Hot Rice ganji with pepper and fresh ghee! 

He helped the Guru sit up and opened the basket.

“Balakumara ….? 

“The boy went on a little outing, Guru. He will be back soon……I can feed you! ”

“ I am not hungry yet, son…. later.”

The Guru became thoughtful. He had been noticing a change in Balakumara ever since they arrived in this town. There was no doubt at all that he was a good lad, devoted, hardworking, earnest and honest. He had willingly abandoned his parent, siblings and friends in his native Unnamalepattana to follow him as a disciple. He never once complained about the hardships of their nomadic life. His life was around his chosen Guru.

                                                                                        

Yet, since sometime, he was slipping out on his own, now and then. What work could he have in this unknown town where he had no friends or relatives? Had he got into bad company and learnt some evil habits? Is he secretly doing something unworthy of a life dedicated to God? 

Yet, he never neglected his duties to the Guru and nursed him diligenty .
The Teacher was intrigued. On that one occasion when I lost my temper and was about to question him, the coughing fit felled me ….I should talk to him soon and stop him from going down the wrong path ….’

Just then, with a great bustle and loud greeting, the Gavunda came in .


“How is my Guru today? ……why have you not fed him yet, Malla? 


“He wants to wait for Balakumara, Father.”


“Let him come anytime. You should eat food fresh and hot and recover good health soon, Guru …..for our sake! 

“ Gavunda , you and the dear people of the town are showing me so much love that I already feel healthy and fit enough to start my padayatra (Walking tour)”

“Making travel plans again! O Guru, we keep praying for your kindness and making our town your permanent home; you are not blessing us with that boon! 

“You are all putting me in a delicate position by insisting so much. I don't want to be ungrateful, but a settled life is not my goal at all. 

“I will give you one reason to at least stay a little longer …..” declared Gavunda “Our people have cleared the nearby forest, dug a huge tank and built a settlement by it. We all want you to inaugurate the new settlement with your blessed hand …..work is almost done; we are only waiting for you to get fit. Please don't mention travel plans now! 

The Guru, overwhelmed by the Gavunda’s plea, sighed deeply “God’s Will!”
He wondered about the simple people’s love for him and their achievement of building a new settlement within a short time.

But why did they need a new settlement?

*****************************************************************************


The whole town had turned up for the inauguration of the new tank. The mood was festive and merry. There were toranas , rangoli and other decorations at every street. People were dressed in their best.

What a huge tank it was! With three or four fresh water springs feeding it crystal clear water. On the eastern side of the tank was the stone sluice, looking like an ornamental pavilion with the lovely image of Gajalakshmi carved upon it.

The seasonal rains would later swell the tank to seem like an ocean! And then there would be expanses of green crops irrigated by it, abundant fish, migratory birds and bountiful trees and plants! The new tank promised prosperity and beauty !

                                                                                              

At the appointed time, The Guru performed the inaugural puja for the Tank in presence of Vallappa Dandanayaka , Mahaprasahitha Nindran , Sembi Devar, the Governor of Western Masandinadu and Villagavundar .

“Victory to The Guru! Hail King Veeraballala ! Long live Vallappa Dandanayaka ! The cheering from the crowds reached the sky.

Mahaprasahitha Nindran thanked the people for working selflessly towards creating the Tank and the new settlement.

After which, Sembi Devar made a little speech recalling the great service rendered to King Veeraballala by his chieftain, the valorous Dandanayaka Vacchidevar . This chieftain had won many wars for the king, annexing large territories for his country and all people held him in high honour .

                                                                                         
“It is for showing our gratitude to this noble chieftain that we decided to make a gift of land to him and you have all co-operated in building a beautiful new settlement for him.”

He took out a palm leaf and read out the contents of the grant deed:

“For the Merit of Chakravarthi Veera Ballala Maharaja and Vallappa Dandanayaka , it has been decided that I, Sembi Devar the Governor of West Masandinadu , Villa Gavundar and all the people of the land, together having cleared the forest adjoining Per Erumur and creating a village and tank, naming the village Vacchidevapuram , we are making a grant of it along with fields and lands around it to Vacchidevar .”

The Grant Deed had the Hoysala Royal Emblem of the majestic Gandaberunda bird with human body.

“Vallappa Dandanayaka will now hand over our Gift to Vacchidevar , with blessings of God . 

There was high excitement in the crowds: “Has Vacchidevar come here? Where? Where? 
Of course, they had all heard of the great hero, Vacchidevar . He was a legend! But none there had seen him in flesh.

“After a long career of winning wars and wealth for the country, Vacchidevar heeded an inner call to follow the path of spirituality and started traveling all over, spreading the Faith. His kindness and wisdom bring solace to all people, wherever he goes. It is our good fortune that he is with us here now. I humbly offer our collective gift to you, O Guru! Bless and protect us.” Placing the palm leaf gift deed at the feet of the Guru, Vallappa Dandanayaka bowed in deep reverence.

                                                                                          
The stunned crowds took only a second to overcome disbelief. Then they began cheering loudly and fell over each other trying to seek Guru Vacchidevar’s blessings.

The Guru could utter no words. His eyes welled up. He had given up all glory, power and pelf, preferring the nomadic life of a wandering Teacher for the rest of his life, not wanting to be held down by any attachments. But the people of Per Erumur had bound him up with their love, from which he could not extricate himself.

However much he desired to cut free and remain a wandering Teacher, he could not refuse the gift as it was given under the Emblem and Seal of the King and he was still a loyal subject of the crown.

********************************************************************************

“Do not be disappointed that your travel plans are cancelled , dear Guru .” Said Vallappa Dandanayaka , later. The officials were all sitting in a warm room with the Guru, as the public carried on their merry making outside.

The Dandanayaka could see that though the Guru had accepted the grant, he still had a bit of regret .
“Our king held Vacchidevar in such a high regard and affection that he was quite taken aback by your sudden decision to quit everything and become an ascetic. He let you leave only very reluctantly, respecting your personal choice. But he was always concerned about your wellbeing and frequently enquired about your whereabouts, your daily needs and health because you had even refused to accept the attendants and money, he wanted you to have in your wandering life. 

The Guru remembered, with gratitude and affection, his past career and the concern of the good king.

“Even though you wanted nothing, you were always in our King’s mind.” continued the Dandanayaka, “He had made arrangements to get all news updates about you regularly. He knew where you were, at all times, and how you were faring. He was very concerned when he heard about your recent illness here and wanted to do something to make life easier for you as you age. It was his idea to make this grant, so that you will build your hermitage here and continue your spiritual services without wearing yourself out on padayatras . His idea was eagerly accepted by Sembi Devar and Villa gavundar too.

The Guru shrugged and smiled in amusement: “So you have all been conspiring and spying on me! And I suspected nothing and saw no spy! 

“Of course! You wouldn’t suspect your dear, devoted desciple ! 

“Balakumara !!!! 

There was a ripple of laughter all around.

“He is a gem of a lad.” Said the Gavunda, “He agreed instantly to become your desciple and look after your well-being with utmost care. He gave his reports about you to the Royal Court’s couriers whom he met periodically by the hillock at the edge of town. 

The Guru was astonished by this revelation. And he also deeply regretted suspecting Balakumara of falling into bad ways! The boy was a real gem and he had judged him wrong!

He looked through the open door at the large courtyard where Balakumara and Mallappa were busy serving tasty treats in leaf cups to all the people celebrating the auspicious event of The Grant. His heart was filled with love and affection.

“Time for your medicine, my Guru! ’ Balakumara breezed in with the medicine pouch and could not understand why The Guru was putting his hand in his head and blessing him so heartily quite suddenly!

*********************************************************************************

In due course, the text of The Grant was engraved upon a slab of stone, with the signatures of Mahaprasahitha Nindran and the karanika Periyapillai . The inscription was erected at a prominant place by the tank, to last till the Sun and Moon shine in the sky.

***********************************************************************************


Fiction based on the Vibhutipura Inscription (EC -9 Bn 133).

******************************************************************************

No comments:

Post a Comment