Saturday, January 1, 2022

ಗುಲಾಬಿ ನಗರದ ಗುಲಾಬಿ ತೋಟ !

ಗುಲಾಬಿ ನಗರದ ಗುಲಾಬಿ ತೋಟ  ! 

                                                      
ಮೊದಲನೇ ವಿಶ್ವ ಸಮರದ ಸಮಯದಲ್ಲಿ ನೀವೇನಾದರೂ ಇದ್ದಿದ್ದರೆ, ಬಾಂಬು ಮಳೆಯಿಂದ ನೀವು  ತಕ್ಷಣ ಕಾಪಾಡಿಕೊಳ್ಳ ಬಯಸಿರಬಹುದಾದ ವಸ್ತು ಯಾವುದಿದ್ದಿರಬಹುದು? ನಿಮ್ಮ ಮತ್ತು ನಿಮ್ಮ ಕುಟುಂಬದವರ ಪ್ರಾಣ?  ನಿಮ್ಮ ಸಾಕು ಪ್ರಾಣಿಗಳು ? ಒಡವೆ ವಸ್ತುಗಳು ? ಆದರೆ ನೋಡಿ ಯೂರೋಪಿನ ಜನರ ನೆನಪೇ ಬೇರೆಯಾಗಿದ್ದಿತ್ತು!

1915 ನೇ ಇಸವಿಯಲ್ಲಿ ರೋಸ್ ಸೊಸೈಟಿಯ ಅಧ್ಯಕ್ಷನಾಗಿದ್ದ ಜೆಸ್ಸಿ . ಎ . ಕ್ವಾರಿ /Jessy. A. Cuarry ಎಂಬಾತ ಪೋರ್ಟ್ಲ್ಯಾಂಡ್ ನಿವಾಸಿಗಳೊಡಗೂಡಿ ಒಂದು ಉದ್ಯಾನವನವನ್ನು ಏರ್ಪಡಿಸಿದ ! ಯೂರೋಪಿನ ಅನನ್ಯ ಜಾತಿಯ ಗುಲಾಬಿ ಕಸಿಗಳನ್ನು ಬಾಂಬು ಮಳೆಯಿಂದ ರಕ್ಷಿಸಲೆಂದೂ, ಗಿಡಗಳನ್ನು ಅಭಿವೃದ್ಧಿ ಮಾಡಲೆಂದೂ ಈ ತೋಟವನ್ನು ಏರ್ಪಡಿಸಿದ !  ಅನೇಕ ದೇಶಗಳ ಗುಲಾಬಿ ಪ್ರೇಮಿಗಳು ತಮ್ಮ ತಮ್ಮ ಅನುಪಮ ಗುಲಾಬಿ ಗಿಡಗಳು ಬಾಂಬಿನಿಂದ  ನಾಶಹೊಂದದಿರಲೆಂದೂ, ಅವುಗಳ ರಕ್ಷಣೆಗೆಂದೂ ಅವುಗಳನ್ನು ಈ ತೋಟಕ್ಕೆ ಕಳುಹಿಸಿಕೊಟ್ಟರು !

ಆರಿಗಾನಿನ ಪೋರ್ಟ್ಲ್ಯಾಂಡಿಗೆ  ಹೆಮ್ಮೆ ತರುವಂತಹ 'ದ ಇಂಟರ್ನ್ಯಾಷನಲ್ ರೋಸ್ ಟೆಸ್ಟ್ ಗಾರ್ಡನ್' / The International Rose Test Garden ಹುಟ್ಟಿದ ಕಥೆ ಇದು.  ಅಂದಿನಿಂದ ಈ ಸಂಸ್ಥೆ ಸಂಶೋದಿಸಲ್ಪಟ್ಟ ಅನೇಕ ಹೊಸ ಜಾತಿಯ ಗುಲಾಬಿ ಕಸಿಗಳನ್ನು ಉತ್ಪತ್ತಿ ಮಾಡುವ ಕ್ಷೇತ್ರವಾಗಿದೆ.

ಪೋರ್ಟ್ಲ್ಯಾಂಡ್ ಗುಲಾಬಿ ತೋಟಗಳ ಇತಿಹಾಸ 1888 ಲ್ಲಿ ಪ್ರಾರಂಭ. ಹೆನ್ರಿ ಪಿಟ್ಟಾಕ್/ Henry Pittock ಎಂಬ ಪ್ರಖ್ಯಾತ ಪ್ರಕಾಶಕನ ಮಡದಿ ಜ್ಯಾರ್ಜಿಯಾನಾ ಬರ್ಟನ್ ಪಿಟ್ಟಾಕ್/ Georgiana Burton Pittock ಎಂಬಾಕೆ ತನ್ನ ಸ್ನೇಹಿತರಿಗಾಗಿ ತನ್ನ ತೋಟದಲ್ಲೇ  ತನ್ನಅಚ್ಚುಮೆಚ್ಚಿನ  ಗುಲಾಬಿಗಳ  ಪ್ರದರ್ಶನವನ್ನು ಏರ್ಪಡಿಸತೊಡಗಿದಳು. ಕ್ರಮೇಣ ಅವಳ ಸ್ನೇಹಿತರ ಗುಲಾಬಿಗಳೂ ಸಹ ಅವಳ ಪ್ರದರ್ಶನಗಳಲ್ಲಿ ಪಾಲ್ಗೊಳ್ಳತೊಡಗಿದವು . ಇದು ವಾರ್ಷಿಕ ಗುಲಾಬಿ ಉತ್ಸವವಾಗಿ ಪರಿವರ್ಥನೆ ಹೊಂದಿ 'ದ ಪೋರ್ಟ್ಲ್ಯಾಂಡ್ ರೋಸ್ ಸೊಸೈಟಿ' / The Portland Rose Society ಎಂಬ ಸಂಸ್ಥೆಯ ಸ್ಥಾಪನೆಗೆ ಕಾರಣವಾಯಿತು.

ಪೋರ್ಟ್ಲ್ಯಾಂಡನ್ನು ಗುಲಾಬಿಗಳ ಕ್ಷೇತ್ರ , ಗುಲಾಬಿಗಳ ಕಾಶಿ ಎಂದೇ ಕರೆಯಬಹುದು . ಮೇ ತಿಂಗಳ ಕೊನೆಯಲ್ಲಿ ಟ್ಯೂಲಿಪ್ ಹಬ್ಬ ಮುಗಿದ ಕೂಡಲೇ ಗುಲಾಬಿ ಹಬ್ಬಕ್ಕೆ ನಗರವೇ ಅಣಿಯಾಗುತ್ತದೆ. ಅಂತಹ ಒಂದು ಸುಸಂದರ್ಭದಲ್ಲಿ ನಮಗೆ  ಪೋರ್ಟ್ಲ್ಯಾಂಡ್ ಪ್ರವಾಸ ಮಾಡುವ ಸದವಕಾಶ  ದೊರಕಿತು. ಮೊಟ್ಟಮೊದಲಬಾರಿ ಪೋರ್ಟ್ಲ್ಯಾಂಡನ್ನು ಪ್ರವೇಶಿಸಿದ ನಮಗೆ ಆ ಊರು ಒಂದು ಮಾಯಾಪುರಿಯಂತೆ ಕಾಣುತ್ತದೆ.

                                                                                 

ಶುದ್ಧವಾದ ನೀಲಿ ಆಕಾಶದ ಹಿನ್ನೆಲೆಯಲ್ಲಿ ಹಿಮರಾಶಿಯನ್ನು ಹೊದ್ದುಕೊಂಡು ಸೆಟೆದು ನಿಂತ           ಜ್ವಾಲಾಮುಖಿ ಮೌಂಟ್ ಹೂಡ್. ಎಲ್ಲೆಲ್ಲೂ ಹಸಿರು ಕಂಬಳಿ ಹಾಸಿದಂತಹ ಹುಲ್ಲುಗಾವಲುಗಳು. ಎಳೆ ಬಿಸಿಲಿನಲ್ಲಿ ವಜ್ರಗಳಂತೆ ಹೊಳೆದ ಮಂಜಿನ ಹನಿ ಹೊತ್ತು ಕಂಗೊಳಿಸಿದ ಸಾವಿರಾರು ಗುಲಾಬಿಗಳು !  

 ರಸ್ತೆಗಳ ಎರಡು ಬದಿಯ ಇಳಿಜಾರುಗಳಲ್ಲಿ ಹಬ್ಬಿರುವ ಬಳ್ಳಿಗಳಲ್ಲಿ ನಳನಳಿಸುವ ಗುಲಾಬಿಗಳು !
 ಬೇಲಿಗಳಲ್ಲಿ ಎತೇಚ್ಛವಾಗಿ ಅರಳಿ ಚೆಲ್ಲಿರುವ  ಗುಲಾಬಿ ಗೊಂಚಲುಗಳು ! ಮುದ್ದಾದ ಪುಟ್ಟ ಮನೆ  ಗೇಟುಗಳ ಮುಂದಿದ್ದ ಕಮಾನುಗಳಲ್ಲಿ ತಲೆದೂಗಿ ನಗುವ ಸುಂದರ ಸುಕೋಮಲ ಹೂವುಗಳಿಂದ ಕೂಡಿದ ಗುಲಾಬಿ ಬಳ್ಳಿಗಳು !

ಟ್ರಾಫಿಕ್ ದ್ವೀಪಗಳಲ್ಲಿ , ರಾಜಕಾಲುವೆಗಳ ಅಂಚಿನಲ್ಲಿ  , ಸೇತುವೆಗಳ ಬದಿಯಲ್ಲಿ, ಎಲ್ಲೆಂದರಲ್ಲಿ ವಿವಿಧ ಗಾತ್ರಗಳಲ್ಲಿ , ವಿವಿಧ ಬಣ್ಣಗಳಲ್ಲಿ ಪುಷ್ಟಿಯಾಗಿ ಅರಳಿ ನಗೆ ಚೆಲ್ಲುವ ಸುಂದರ ಗುಲಾಬಿ ಹೂವುಗಳು !

ಈ ಋತುವಿನಲ್ಲಿ ಪೋರ್ಟ್ಲ್ಯಾಂಡ್ ನಗರವೇ ಒಂದು ಬೃಹದಾಕಾರದ  ಗುಲಾಬಿ ಗುಚ್ಛವಾಗಿ  ಪರಿವರ್ತಿಸಿಬಿಡುತ್ತದೆ ! ಫ್ರಾಂಕ್. ಇ. ಬೀಚ್/ Frank . E. Beach ಎಂಬ ಗುಲಾಬಿ ಪ್ರೇಮಿಯೋರ್ವ ಪೋರ್ಟ್ಲ್ಯಾನ್ಡ್ ನಗರಕ್ಕೆ  ' ದ ರೊಸ್  ಸಿಟಿ '/ The Rose City ಎಂದೇ ನಾಮಕರಣ ಮಾಡಿದನಂತೆ .

ವಾರದ ಅಂತ್ಯದಲ್ಲೊಂದು ದಿನ ವಾಷಿಂಗ್ಟನ್ ಪಾರ್ಕ್ / Washington Park ಎಂಬ ಗುಡ್ಡಗಾಡಿನ ಒಂದು  ಬೆಟ್ಟದ ತುತ್ತತುದಿಯಲ್ಲಿ ರೋಸ್ ಸಿಟಿಗೆ ಕಿರೀಟವಿಟ್ಟಂತೆ ನಳನಳಿಸುತ್ತಿದ್ದ 'ರೋಸ್ ಗಾರ್ಡನ್' ಕುರಿತು ಹೊರಟಿತು ನಮ್ಮ ಸವಾರಿ.

ಶಿಲಾರಸದಿಂದ ಕೂಡಿದ ಫಲವತ್ತಾದ ಮಣ್ಣು -
ಪುಷ್ಟಿಯಾಗಿ ಬೆಳೆದಿದ್ದ ಹಸಿರು ಗಿಡಬಳ್ಳಿಗಳು -
ಅಂಬರವನ್ನಪ್ಪಿ ನಿಂತ ಎತ್ತೆತ್ತರವಾದ ಹೆಮ್ಮರಗಳು-
ಎಳೆ ಬಿಸಿಲಿದ್ದರೂ ಚಿಲ್ಲೆಂದು ಸಿಂಪಡಿಸುತ್ತಿದ್ದ ಮಳೆ ಹನಿ -
ದಾರಿಯಲ್ಲಿ ಅಡ್ಡಬಂದ ಸಣ್ಣ ಪುಟ್ಟ ಝರಿಗಳು -
ಝರಿಯ ನೀರು ಸಂಗ್ರಹವಾಗಿದ್ದ ಸ್ಪಟಿಕದಂತಹ ಜಲಾಶಯಗಳು -
ಸಸ್ಯಸಮೃದ್ಧಿಗೆ ಇದಕ್ಕಿಂತ ಉತ್ತಮವಾದ ಪರಿಸರ ಬೇರೆಲ್ಲಿ ಸಿಗಬೇಕು ?

ತಿರುಗುಮುರುಗುಗಳಿಂದ ಕೂಡಿದ ಸುಂದರವಾದ ಕಾಡು ದಾರಿಯಲ್ಲಿ ಪಯಣಿಸಿ ಬೆಟ್ಟದ ತುದಿಯನ್ನು ತಲುಪುತ್ತೇವೆ . ಎತ್ತರವಾದ ಬೇಲಿಯಂತೆ ಬೆಳೆದಿದ್ದ ರೋಡೋಡೆಂಡ್ರಾನ್ ಪೊದೆಯ ಸಾಲಿನಾಚೆ ಮುಗಿಲು ಮುಟ್ಟುವ ಮರಗಳೆಡೆ ವಿಶಾಲವಾಗಿ  ಕಂಗೊಳಿಸುತ್ತಿದ್ದ  ಗುಲಾಬಿ ತೋಟದ  ವಿಸ್ತೀರ್ಣವನ್ನು  ಕಂಡು ದಿಗ್ಬ್ರಾಂತರಾಗಿ ನಿಲ್ಲುತ್ತೇವೆ  !

                                                                                 
ದೇವಲೋಕದ ನಂದನವನವೇ ನಮ್ಮ ಕಾಲಕೆಳಗೆ ಇಳಿದು ಬಂದಿತೋ ಎಂಬಂತೆ ಇಳಿಜಾರಿನ ಪ್ರದೇಶವೆಲ್ಲ ಬಣ್ಣ ಬಣ್ಣದ ಗುಲಾಬಿ ! ಗುಲಾಬಿ ! ಗುಲಾಬಿ ! ಗುಲಾಬಿಗಳ ಸುಗಂಧವನ್ನು ಹೊತ್ತು ಬಂದ ತಣ್ಣನೆಯ ಗಾಳಿ ಮುಖಕ್ಕೆ ರಾಚಿ  ನಮ್ಮನ್ನು ಗುಂಗಿನಿಂದ ಎಚ್ಚರಿಸುತ್ತದೆ  !

                                                                                                     

ವಿವಿಧ ಅಂತರಗಳಲ್ಲಿದ್ದ ಅಂತಸ್ತುಗಳಲ್ಲಿ ಅಚ್ಚುಕಟ್ಟಾಗಿ ಸಾಲು ಸಾಲಾಗಿ ನಿಂತಿದ್ದ  ಗುಲಾಬಿ ಗಿಡಗಳು. ಗಿಡಗಳ ಮೈತುಂಬ ಅರಳಿ ಹಾದಿಯಲ್ಲಿ ಎಸಳುಗಳನ್ನು ವರ್ಷಿಸುತ್ತಿದ್ದ ಪುಷ್ಪಗಳು.  


                                                                                    
ಹೂವುಗಳ ಅಂದ ಚಂದವನ್ನು ಸಮೀಪದಿಂದ ಕಾಣಲು ನಮ್ಮನ್ನು ಕರೆದೊಯ್ಯಲು ಕಾದಿದ್ದ ಮೆಟ್ಟಲುಗಳು ಮತ್ತು ಕಾಲುದಾರಿಗಳು. ಒಂದು ಅಂತಸ್ತಿನಿಂದ ಮತ್ತೊಂದ್ಕಕೆ ಇಳಿಯುವಾಗ  ತುಂತುರು ಮಳೆ ಹನಿಗಳನ್ನು ಪನ್ನೀರಿನಂತೆ ನಮ್ಮ ತಲೆಗಳ ಮೇಲೆ  ಸಿಂಪಡಿಸಿದ ಗುಲಾಬಿ ಬಳ್ಳಿಗಳ ಬಿಸಿಲು ಚಪ್ಪರಗಳು.  ಡಷ್ಟುಪುಷ್ಟಾದ ದಪ್ಪ ಹೂವುಗಳಿಂದ ಕೂಡಿದ ಎತ್ತರವಾದ  ಗುಲಾಬಿ ಮರಗಳು ! ಹೌದು! ಬೆರಗುಗೊಳಿಸುವಂತಹ ಗುಲಾಬಿ ಮರಗಳು !

                                                                                

ಒಂದು ಸುತ್ತು ದಳ ಹೂವಿನಿಂದ ಹಿಡಿದು ಅನೇಕ ಸುತ್ತು ದಳಗಳನ್ನೊಳಗೊಂಡ  ಗುಲಾಬಿ ಚೆಂಡುಗಳು! ಬಟನ್ ಗಾತ್ರದ ಹೂವುಗಳ ಜೊತೆ ಜೊತೆಯಲ್ಲೇ  ನಮ್ಮ ಬೊಗಸೆಯಲ್ಲಿ ನಿಲುಕದಷ್ಟು ದೊಡ್ಡದಾಗಿ ಅರಳಿದ್ದ ದುಂಡನೆಯ ಹೂವುಗಳು .

                                                                                 


                                                                                 
ಬಣ್ಣಗಳ ವೈವಿದ್ಯತೆಯನ್ನಂತೂ ಹೇಳಲಸಾಧ್ಯ . ಅಚ್ಚ ಬಿಳಿಪು, ದಂತದ ಬಣ್ಣ, ತಿಳಿಗೆಂಪು, ಘಾಡ ಕೆಂಪು, ಹಳದಿ, ಕಿತ್ತಳೆ ಬಣ್ಣ, ನೇರಳೆ ಮತ್ತು ನೀಲಿ ಬಣ್ಣಗಳಲ್ಲೂ ಗುಲಾಬಿಗಳು. 


                                                                                  
ದ್ವಿವರ್ಣ ಹೂವುಗಳು ಮತ್ತು ಚುಕ್ಕಿಗಳಿಂದ ಕೂಡಿದ ಹೂವುಗಳನ್ನು ಕಂಡಾಗ ಇವೆಲ್ಲ ಗುಲಾಬಿ ಹೂವುಗಳೋ ಅಲ್ಲವೋ ಎಂಬ ಭ್ರಮೆ ಉಂಟಾಗುತ್ತದೆ. ವಿವಿಧ ಬಣ್ಣಗಳಲ್ಲಿ , ವಿವಿಧ ಆಕಾರಗಳಲ್ಲಿ, ವಿವಿಧ ಗಾತ್ರಗಳಲ್ಲಿ ಅತಿ ಸುಂದರವಾದ ಗುಲಾಬಿ ಹೂವುಗಳು ಇನ್ನೆಲ್ಲೂ ಕಾಣಸಿಗುವುದಿಲ್ಲ.

 ಪ್ರತಿ ವರ್ಷ ಜರುಗುವ ಗುಲಾಬಿ ಹಬ್ಬಕ್ಕೆ ಆಗಮಿಸುವ ತಜ್ಞರಿಂದ ಪರಿಗಣಿಸಲ್ಪಟ್ಟು ಚಿನ್ನದ ಪದಕ ಗಳಿಸಿದ ಗುಲಾಬಿಗಳಿಗೆಂದೇ ಏರ್ಪಡಿಸಲಾಗಿದ್ದ ವಿಭಾಗ ಗೋಲ್ಡ್ ಮೆಡಲ್ ಗಾರ್ಡನ್/ Gold Medal Garden .

 ಷೇಕ್ಸ್ಪಿಯರನ  ಕೃತಿಗಳಲ್ಲಿಯ ಪಾತ್ರಗಳ ಹೆಸರುಗಳನ್ನು ಹೊತ್ತ ಗುಲಾಬಿಗಿಡಗಳು ಇರುವ ವಿಭಾಗವನ್ನು  ಷೇಕ್ಸ್ಪಿಯರ್ ಗಾರ್ಡನ್ / Shakespeare Garden ಎಂದೇ ಕರೆಯಲಾಗಿದೆ . ಕವಿಯ ರೇಖಾ  ಚಿತ್ರವನ್ನು ಹೊತ್ತ ಒಂದು ಫಲಕದ ಮೇಲೆ ' ಅಫ್ ಆಲ್ ಫ್ಲವರ್ಸ್ ಮಿ ತಿಂಕ್ಸ್ ಅ ರೋಸ್ ಇಸ್ ಬೆಸ್ಟ್'  / OF ALL FLOWERS METHINKS A ROSE IS BEST ಎಂಬ ಅವನ ಹೇಳಿಕೆ ಕೆತ್ತಲ್ಪಟ್ಟಿದೆ.

                                                                                                                  

ಸದ್ಭಾವನೆಯ ಪ್ರಚಾರಕರಾದ ನಗರದ ರಾಯಭಾರಿಗಳನ್ನು 'ರೋಸೇರಿಯನ್ಸ್' / Rosarians ಎಂದು ಕರೆಯುತ್ತಾರೆ.  ಪೌರಧರ್ಮ ಸಂಸ್ಥೆಗೆ ನೇಮಿಸಲ್ಪಡುವ ಸಂದರ್ಭದಲ್ಲಿ ರೋಸ್ ಗಾರ್ಡನಿಗೆ ಆಹ್ವಾನಿಸಲ್ಪಡುವ  ಪ್ರತಿಯೋರ್ವ ರೋಸೇರಿಯನ್ನೂ ತನಗೆ ಮೆಚ್ಚುಗೆಯಾದ  ಒಂದು ಗುಲಾಬಿ ಗಿಡವನ್ನು ನೆಟ್ಟು ಅದಕ್ಕೆ ತನ್ನ ಹೆಸರನ್ನೂ ನೀಡುತ್ತಾನೆ . ರಾಯಲ್ ರೋಸೇರಿಯನ್ ಗಾರ್ಡನ್ / Royal Rosarian Garden ಲ್ಲಿ  ಬಣ್ಣಮಯವಾದ ರೋಸೇರಿಯನ್ ಗುಲಾಬಿಗಳು  ಕಣ್ಮನ ಸೆಳೆಯುತ್ತವೆ.

 ಪ್ರತಿವರ್ಷ ನಡೆಯುವ ಗುಲಾಬಿ ಹಬ್ಬದಲ್ಲಿ / Rose Festival  ಪೋರ್ಟ್ಲ್ಯಾಂಡಿನ ಅತ್ಯುತ್ತಮ ವಿದ್ಯಾರ್ಥಿನಿಯನ್ನು ಆಯ್ಕೆ ಮಾಡಿ , ಅವಳಿಗೆ ಕಿರೀಟವನ್ನು ಮುಡಿಸಿ   'ರೋಸ್ ಕ್ವೀನ್' ಪಟ್ಟ ಕಟ್ಟಲಾಗುತ್ತದೆ. ಸಿಪಾಯಿಗಳಹಾಗೆ ಎತ್ತರವಾಗಿ ನಿಂತಿರುವ ಹೆಮ್ಮರಗಳ ಸಾಲುಗಳ ನಡುವೆ ರೋಸ್ ಕ್ವೀನ್ಗಳನ್ನು ಗೌರವಿಸುವುದರ ಸಲುವಾಗಿ ನಿರ್ಮಿಸಲಾಗಿರುವ ಕಾಲುದಾರಿಯೇ 'ಕ್ವೀನ್ಸ್ ವಾಕ್'/Queen's Walk .  ಇಲ್ಲಿ 'ರೋಸ್ ಕ್ವೀನ್' ಪಟ್ಟ ಗಳಿಸಿದ ವಿದ್ಯಾರ್ಥಿನಿಯರ ಹಸ್ತಾಕ್ಷರ  ಹೊತ್ತ ಕಂಚಿನ ಪಲಕಗಳು ಸ್ಥಾಪಿಸಲಾಗಿದೆ  . 

ಪ್ರತಿ ವರ್ಷ ಗುಲಾಬಿ ಹಬ್ಬದ ಅಂಗವಾಗಿ ಆಚರಿಸಲಾಗುವ ರೋಸ್ ಫೆಸ್ಟಿವಲ್ ಪೆರೇಡಲ್ಲಿ ಬ್ಯಾಂಡ್ ವಾದ್ಯ , ಕುದುರೆ ಸವಾರರ ತಂಡ , ಜಾನಪದ ನೃತ್ಯ , ಮುಂತಾದ ಪ್ರದರ್ಶನಗಳೊಂದಿಗೆ ಗುಲಾಬಿ ಹೂಗಳಿಂದ ಅಲಂಕರಿಸಲ್ಪಟ್ಟ ವಿವಿಧ ರಥಗಳ ಮೆರವಣಿಗೆಯನ್ನು ಕಾಣುವುದೇ ಪೋರ್ಟ್ಲ್ಯಾಂಡ್ ನಿವಾಸಿಗಳಿಗೆ ಒಂದು ವಿಶೇಷ  ಸಂಭ್ರಮ . 

                                                                                                      

ಪೋರ್ಟ್ಲ್ಯಾಂಡಿಗೆ 'ದ ರೋಸ್ ಸಿಟಿ ' ಎಂದು ನಾಮಕರಣ ಮಾಡಿದ ಫ್ರ್ಯಾಂಕ್ . ಇ  . ಬೀಚ್ / Frank. E. Beach ಅವರ ನೆನಪಿಗಾಗಿ ನಿರ್ಮಿಸಲ್ಪಟ್ಟಿರುವ ಸುಂದರ ಕಾರಂಜಿ ಹಕ್ಕಿಗಳ ಚಿಲಿಪಿಲಿಯೊಂದಿಗೆ ತನ್ನ ಗುಳುಗುಳು ಶಬ್ದವನ್ನೂ ಸೇರಿಸಿ ಒಂದು ಹೊಸತಾದ ನಿಸರ್ಗ ರಾಗವನ್ನು ಹಾಡುತಲಿದೆ .

                                                                                                       

ತೋಟದ ತುಂಬ ಓಡಾಡಿ ಮನತುಂಬ, ಕಣ್ತುಂಬ , ಉಸಿರುತುಂಬ ಗುಲಾಬಿಯ ಸೊಬಗನ್ನೂ ಸುಗಂಧವನ್ನೂ ಹೀರಿಕೊಂಡು ನಾವು ಮತ್ತೆ ಗುಲಾಬಿ ತೋಟದ ಶಿಖರವನ್ನೇರಿ  ಹಿಂದಿರುಗಿ ನೋಡುತ್ತೇವೆ.

ತಲೆಬಾಗಿ ಹೂವಿನ ಸುಗಂಧವನ್ನು ಆಸ್ವಾದಿಸುತ್ತಿರುವ  ಮನುಷ್ಯ ದುಂಬಿಗಳನ್ನು ಕಂಡು ನಮ್ಮ ಮೊಗಗಳಲ್ಲಿ ಮುಗುಳುನಗೆಯರಳುತ್ತದೆ  ! ನಾವೂ ಕೂಡ ಇಷ್ಟು ಹೊತ್ತಿನವರೆಗೂ ಗುಲಾಬಿಯ ಮತ್ತೇರಿ ಇಂತದ್ದೇ ಒಂದು ಗೀಳು ಬೇನೆಗೆ ಒಳಗಾಗಿರಲಿಲ್ಲವೇನು  ?

 __________________________________________________________________________________                                                    

No comments:

Post a Comment