Thursday, September 26, 2013

ಆನೆ ಆನೆ ! ಬಿಳಿಗಿರಿ ಆನೆ !


ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರ ಮನ ಮೆಚ್ಚಿದ ಆನೆ ಬಿಳಿಗಿರಿ. ದಸರಾ ಮೆರವಣಿಗೆಯಲ್ಲಿ ಮಹಾರಾಜರ ಚಿನ್ನದ ಅಂಬಾರಿ ಹೊತ್ತು ಅನೇಕ ವರ್ಷಗಳು ಸೇವೆ ಸಲ್ಲಿಸಿದ್ದ ಹತ್ತಡಿ ಎತ್ತರದ ಸೌಮ್ಯ ಜೇವಿ. ಬಿಳಿಗಿರಿ ಆನೆ ಕರವಟ್ಟಿಯಿಂದ  ಕುಕ್ಕರಹಳ್ಳಿ ಕೆರೆಯನ್ನು ಕುರಿತು  
ಸ್ನಾನಕ್ಕೆ ಹೊರಟಾಗ  ನಮ್ಮ ಮನೆಯನ್ನು ಹಾದು ಹೋಗುತ್ತಿದ್ದ. ಬಿಳಿಗಿರಿಯ ಕೊರಳ ಗಂಟೆಯ 'ಟಿನ್ ಟಣಾರ್ ಟಿನ್ ' ಅವನ ಆಗಮನವನ್ನು ಮೊದಲೇ ಸೂಚಿಸಿಬಿಡುತ್ತಿತ್ತು. ಮಕ್ಕಳಾಗಿದ್ದ ನಾವು ಕೂಡಲೇ ಉಗ್ರಾಣಕ್ಕೆ ನುಗ್ಗಿ ಮೊರದಲ್ಲಿ ಅಕ್ಕಿ , ಬೆಲ್ಲ ಮತ್ತು ಒಂದು  ಕಾಯಿ ತುಂಬಿಕೊಂಡು ಕಾಯುತ್ತಿದ್ದೆವು . ಬಿಳಿಗಿರಿ ಮನೆಯನ್ನು ಸಮೀಪಿಸಿ ಗೇಟನ್ನು ತನ್ನ ಸೊಂಡಲಿನಿಂದ ತೆರೆದು ನಿಧಾನಕ್ಕೆ ಒಳಗೆ ಬರುತ್ತಿದ್ದ. ಮೊರದ ಅಕ್ಕಿಬೆಲ್ಲ ತರಲು ಪೈಪೋಟಿ ಮಾಡುತ್ತಿದ್ದ  ನಾವೆಲ್ಲಾ, ಎದುರಿಗೆ ಆ ಬೃಹದಾಕಾರವನ್ನು ಕಂಡು ಅಂಜಿಕೆಯಿಂದ ಹಿಂಜರಿಯುತ್ತಿದ್ದೆವು!


ಅಕ್ಕಿ  ಬೆಲ್ಲ ತಿಂದ ಬಿಳಿಗಿರಿ ಕಾಯನ್ನು ಬಾಯಿಗೆ  ಹಾಕಿ ಲಟಪಟ ಜಗಿದಾಗ ನಮಗೆಲ್ಲ ಇನ್ನೂ  ಬೆದರಿಕೆಯಾಗುತ್ತಿತ್ತು. ತಿಂದು ಮುಗಿಸಿ ಮನೆಯ ಮುಂದಿನ ಕಾರಂಜಿಯಲ್ಲಿ ನೀರು ಕುಡಿದು ನಿಧಾಕ್ಕೆ ಹೊರಟು ಹೋಗುತಿದ್ದ ನಮ್ಮ ಬಿಳಿಗಿರಿ. ನಾವೆಲ್ಲ ಅವನನ್ನು ಗೇಟಿನ ವರೆಗೆ ಹಿಂಬಾಲಿಸಿದಾಗ ನಮ್ಮ ಬ್ರೌನಿ ಕೂಡ ಓಡಿ ಬಂದು ಬಿಳಿಗಿರಿ ನಡೆದ ಮಣ್ಣಲ್ಲಿ ಹೋರಳಾಡುತಿದ್ದ . ಗೋ ಧೂಳಿಯಂತೆಯೇ ಆನೆ ತುಳಿದ ಮಣ್ಣು ಕೂಡ ವೈದ್ಯಕೀಯ ಗುಣ ಹೊಂದಿರುವುದಾಗಿ ನಾವು ಕೇಳಿದ್ದೇವೆ. ಬ್ರೌನಿಗೂ ಅ ವಿಷಯ ತಿಳಿದಿತ್ತೋ ಏನೋ !
ಅಮ್ಮ ಪಾಪುವನ್ನು ತೊಡೆಯ ಮೇಲೆ ಕೂರಿಸಿಕೊಂಡು, ಒಂದು ಕೈಯನ್ನು ಅದರ ಕಂಕುಳಿಗೆ ಕೊಟ್ಟು ಜೋಪಾನವಾಗಿ ಹಿಡಿದುಕೊಂಡು  ಮತ್ತೊಂದು ಕೈಯನ್ನು  ಪಾಪುವಿನ ಬೆನ್ನಮೇಲಿಟ್ಟು ಮೃದುವಾಗಿ ನೂಕಿ ಹಿಂದೂ ಮುಂದೂ ತೂಗುತ್ತ ರಾಗವಾಗಿ ಹೇಳುತಿದ್ದ ಸಾಲುಗಳಿವು :

ಆನೆ ಆನೆ !
ಅಂಬಾರಿ ಆನೆ!
ಬಿಳಿಗಿರಿ  ಆನೆ !

ಹಾಡನ್ನು ಕೇಳುತ್ತ ಹುರುಪೇರಿದ ಪಾಪು ತಾನಾಗಿಯೇ ಕಾಲುಗಳನ್ನೂರಿ ಎದೆದ್ದು ತೂಗಿದಾಗ ಅದರ ಮೊಗದಲ್ಲಿ ಅದೆಷ್ಟು ಖುಷಿ !

 ಯಾವುದೇ ಆನೆಯ ಹಾಡು ಕೇಳಿದರೂ ನಮಗೆ  ನಮ್ಮ ಚಿಕ್ಕಂದಿನ ಗೆಳೆಯ ಬಿಳಿಗಿರಿಯ ನೆನಪೇ ಉಕ್ಕುತ್ತದೆ. ಹಾಗಾಗಿ 'ಆನೆ ಬಂತೊಂದಾನೆ '
ಪದ್ಯದಲ್ಲೂ ನಮ್ಮ ಬಿಳಿಗಿರಿಯೇ ಸೇರಿಕೊಂಡುಬಿಟ್ಟ ! ಅಪ್ಪನನ್ನು ಆನೆ ಮಾಡಿ ಪಾಪುವನ್ನು ಬೆನ್ನ  ಮೇಲೆ ಕೂರಿಸಿ ಅಮ್ಮ ಹೀಗೇ ಹಾಡಿ ಅಡಿಸುತ್ತಿದ್ದಳು !

ಆನೆ ಬಂತೊಂದಾನೆ !
ಯಾವೂರಾನೆ ?
ಮೈಸೂರ ಆನೆ !
ಇಲ್ಲಿಗ್ಯಾಕೆ ಬಂತು ?
ಹಾದಿ ತಪ್ಪಿ ಬಂತು!
ಬೀದಿ ತಪ್ಪಿ  ಬಂತು !
ಹಾದಿಗೊಂದು ದುಡ್ಡು !
ಬೀದಿಗೊಂದು ದುಡ್ಡು !
ಆ ದುಡ್ಡು ಕೊಟ್ಟು 
ಸೇರು ಕೊಬ್ರಿ ಕೊಂಡು ,
ಲಟ ಪಟ ಮುರಿದು ,
ಎಲ್ಲಾರ್ ಕೈಯ್ಯ ಬಿಟ್ಟು 
ಪಾಪು ಕೈಲಿ ಕೊಡ್ತು !
ಬಿಳಿಗಿರಿ ಮುದ್ದು !



No comments:

Post a Comment