Friday, October 25, 2013

ಕಣ್ಣಾ ಮುಚ್ಚಾಲೆ





" ಅಬ್ಬ! ಎಷ್ಟೊಂದು ಗುಲಗಂಜಿ !"
ಅಜ್ಜಿ ಅಲಿಗುಳಿಮಣೆಯನ್ನು ತೆರೆದಿಟ್ಟು, ಪುಟ್ಟಿಯನ್ನು ಕಂಡು  ಆಶ್ಚರ್ಯದಿಂದ ಕಣ್ಣಗಲಿಸಿದಳು. ಗುಲಗಂಜಿ ತುಂಬಿದ್ದ ದೊಡ್ಡ ಗಾಜಿನ ಶೀಶೆಯನ್ನು ಹೊರಲಾರದೆ ಹೊತ್ತು ತಂದು ಅಜ್ಜಿಯ ಮುಂದೆ ಕುಳಿತಳು ಪುಟ್ಟಿ. 

" ಕಾಸ್ಬಂಗ್ಲಿಗೆ   ಹೋದಾಗ ನಾನೇ ಆರಿಸ್ಕೊಂಡು ಬಂದೆ ಅಜ್ಜಿ." ಪುಟ್ಟಿ ಹೆಮ್ಮೆಯಿಂದ ಹೇಳಿದಳು.
" ಓ ! ದೊಡ್ಡ ಜಾರುಗುಪ್ಪೆ ಪಕ್ಕದಲ್ಲಿದೇ ಅಲ್ವ ಮರ ? ನಾನೂ ನೋಡಿದ್ದೀನಿ. "
ಅಜ್ಜಿ ಗುಲಗಂಜಿಗಳನ್ನು ಗುಳಿಯಲ್ಲಿ ಎಣಿಸಿ ಹಾಕ ತೊಡಗಿದಳು. 

"ನೀನು  ಆ ಜಾರುಗುಪ್ಪೆ ಜಾರಿದ್ದೀಯ ಪುಟ್ಟಿ ?''

" ಅಯ್ಯೋ ! ನಂಗೆ ಭಯಾಪ್ಪಾ ! ಒಂದೇ ಒಂದ್ಸರಿ ಸರಸು ಅತ್ತೆ ಮಡಿಲಲ್ಲಿ ಕೂರಿಸ್ಕೊಂಡು  ಜಾರಿಸಿದ್ಲು." 
ಪುಟ್ಟಿಗೆ ಆ ನೆನಪೇ ಭಯ ಕೊಟ್ಟಿತು. ಕಾಸು ಬಂಗಲಿಯ ಆಫ್ರಿಕಾದ ಆನೆಗಿಂತ, ಜಿರಾಫೆಗಿಂತ ಎರಡರಷ್ಟು ಎತ್ತರವಿದ್ದ ಜಾರುಗುಪ್ಪೆಯ ಮೇಲೆ ಸರಸು ಅತ್ತೆಯೊಡನೆ ನಿಂತಾಗ, ಪಕ್ಕದ ಆವರಣದ ನೀರಾನೆ ತಳವಿಲ್ಲದ ಬಾವಿಯಂತೆ ಅಗಲವಾಗಿ ಬಾಯಿ ಬಿಟ್ಟು ಅವಳನ್ನು ಇನ್ನಷ್ಟು ಹೆದರಿಸಿತ್ತು.  ಪುಟ್ಟಿಯನ್ನು ಮಡಿಲಲ್ಲಿ ಬಲವಂತವಾಗಿ ಕೂರಿಸಿಕೊಂಡು ಸರಸು ಅತ್ತೆ 'ಜೋಯ್' ಎಂದು ಜಾರಿದಾಗ ಪುಟ್ಟಿ ಜೋರಾಗಿ ಕೂಗಿ  ಅಳ ತೊಡಗಿದ್ದ ಳು. 


" ಅಳ್ಬೇಡ ಜಾಣಮರಿ'' ಎಂದು  ಸರಸು ಅತ್ತೆ ಸಂತೈಸಿದ್ದಳು. ಮರದಿಂದ ಚೆಲ್ಲಿದ್ದ ಗುಲಗಂಜಿಗಳನ್ನು  ತೋರಿಸಿದ್ದಳು.  ಪುಟ್ಟಿ ಕಣ್ಣೀರನ್ನು ಒರೆಸಿಕೊಳ್ಳದೆ  ಗುಲಗಂಜಿ ಆರಿಸಲು ಹೊರಟಿದ್ದಳು. 

"ಅಜ್ಜಿ ಪಾಪಣ್ಣ ಆ ಜಾರುಗುಪ್ಪೆ ಮೇಲೆ ತಲೆಕೆಳಗೆ ಮಲಗಿ ಜಾರ್ತಾನೆ !" 

"ಅವ್ನು ಶುದ್ಧ ಒರಟು.ಹೂಂ, ಈಗ ನಿನ್ನ ಆಟ ." 

 ಮನೆ ಹೊರಗೆ ಪುಟ್ಟಣ್ಣ ಸ್ನೇಹಿತರೊಡನೆ ಕೂಡಿ ಗಟ್ಟಿಯಾಗಿ ಕೂಗಿ ಆಡುತ್ತಿದ್ದ. 

" ಅಜ್ಜಿ ಆಟ ಸಾಕು. ನಾವೂ ತೋಟಕ್ ಹೋಗೋಣ ?" ಉತ್ಸಾಹದಿಂದ ಎದ್ದಳು ಪುಟ್ಟಿ. 

" ಸರಿ ನಡಿ." ಅಜ್ಜಿ ಅಲುಗುಳಿಮಣೆ ಮುಚ್ಚಿಟ್ಟಳು. 

ಪುಟ್ಟಣ್ಣ ಮತ್ತು ಅವನ ಸ್ನೇಹಿತರೆಲ್ಲ ಮರಕೋತಿ ಆಡುತ್ತಿದ್ದರು. 

''ಪುಟ್ಟಣ್ಣ! ಪಾಪ, ಪುಟ್ಟಿನೂ ಆಟಕ್ಸೇರ್ಸ್ಕೋಳೋ ." ಎಂದು ಕೂಗಿದಳು ಅಜ್ಜಿ . 

" ಟೈಮ್ಸ್ ! ಟೈಮ್ಸ್! " ಏದುಸಿರು ಬಿಟ್ಟು ಓಡಿಬಂದ ಪುಟ್ಟಣ್ಣ . ಪುಟ್ಟಿಯ ಅಣ್ಣ ಆದ್ದರಿಂದ ಎಲ್ಲರೂ ಅವನನ್ನು ಪುಟ್ಟಣ್ಣ ಎಂದೇ ಕರೆದರು. ಅದು ಅವನಿಗೆ ಇಷ್ಟವೂ ಆಗಿತ್ತು . ಆದರೆ ..... 

" ಅಜ್ಜಿ, ಫ್ರೆಂಡ್ಸ್ ಎದಿರ್ಗೆ ನನ್ನ ಪುಟ್ಟಣ್ಣ ಅಂತ ಕರೀ ಬೇಡ ." ಎಂದು ಸಿಡುಕಿದ . 

'' ಸರಿಯಪ್ಪ ಪಾಪಣ್ಣ ."

'' ಅಜ್ಜಿ ನನ್ನ ಹೆಸ್ರು ರಾಘವೇಂದ್ರ !"

" ತಪ್ಪಾಯಿತು  ಮಾರಾಯಾ ! ಈಗ ಪುಟ್ಟಿನ ಸೇರ್ಸ್ಕೊಳ್ತೀಯೋ ಇಲ್ವೋ ?" 

" ಏ , ಎಲ್ರೂ ಬನ್ರಪ್ಪ! ಪುಟ್ಟಿ ನಂಜೊತೆ ಆಡ್ತಾಳೆ ...! ಆದ್ರೆ ನೋ ಒರಟಾಟ ! " ಅಣ್ಣನಿಗೆ ಪುಟ್ಟಿ ಪಾಪು ಇಬ್ಬರಲ್ಲೂ ಬಹಳ ಪ್ರೀತಿ. ಒಮ್ಮೆ ಲಗೋರಿ ಆಡುತ್ತಿದ್ದಾಗ ಒಂದು ದಪ್ಪ ಕಲ್ಲು ಹಾರಿ ಪುಟ್ಟಿಯ ಬಾಯಿಗೆ ಅಪ್ಪಳಿಸಿತ್ತು . ಮುಸುಡಿ ಊದಿ ಪುಟ್ಟಿ ನೋವಲ್ಲಿ ನರಳಿ , ಮನೆಯಲ್ಲೆಲ್ಲ ಗಲಬೆಯಾಗಿತ್ತು . ಎರಡು ದಿನಗಳನಂತರ  ನೋವೇನೋ ಕಡಿಮೆಯಾಗಿತ್ತು . ಆದರೆ ಊತ ಕಡಿಮೆಯಾಗಲು ಒಂದು ವಾರವೇ ಆಯಿತು . ಸೂರ್ಯನನ್ನು ಹಿಡಿಯಲು ಹೋದ ಹನುಮಂತ ಕೆಳಕ್ಕೆ ಬಿದ್ದು ಮೂತಿ ಊದಿಸಿಕೊಂಡ ಕಥೆ ಹೇಳಿ " ಹನುಮಂತಿ!ಹನುಮಂತಿ!" ಎಂದು ಪುಟ್ಟಿಯನ್ನು ನಗಿಸಿದ್ದ ಪುಟ್ಟಣ್ಣ .


ಪುಟ್ಟಿಯನ್ನು ಆಟಕ್ಕೆ ಸೇರಿಸಿಕೊಂಡಾಗ ಕಣ್ಣಾಮುಚ್ಚಾಲೆ ಆಟವನ್ನೇ ಆಡುತ್ತಿದ್ದರು ಹುಡುಗರು. 

" ಎಲ್ರೂ ಬನ್ನಿ, 'ಅವಲಕ್ಕಿ ಪವಲಕ್ಕಿ' ಮಾಡಿ ಯಾರು ಹಿಡಿಬೇಕೋ ನೋಡೋಣ ." ಪುಟ್ಟಣ್ಣ ಎಲ್ಲರನ್ನೂ ವರ್ತುಲಾಕಾರದಲ್ಲಿ ನಿಲ್ಲಿಸಿದ .

ಪುಟ್ಟಿ ಶಾಲೆಯಲ್ಲಿ ಆಡುವಾಗ, ಮೂವರು ಮೂವರಾಗಿ  'ಅವ್ವ ಅಪ್ಪಚಿ' ಇಲ್ಲವೇ ' ಚಾಟ್ ಬೂಟ್ ತ್ರೀ ' ಮಾಡಿ 'ಔಟ್' ಆದವರನ್ನ ಆರಿಸುತ್ತಿದ್ದರು .

 ' ಅವಲಕ್ಕಿ' ಯಲ್ಲಿ  ಎಲ್ಲರನ್ನೂ ಒಟ್ಟಿಗೇ ನಿಲ್ಲಿಸಿ ಒಮ್ಮೆಯಲ್ಲೇ  ಸೋತವರನ್ನು ಆರಿಸಿಬಿಡಬಹುದು.ಪುಟ್ಟಿಗೆ ಇದೇ ಬಲು ಇಷ್ಟ . 

" ಅವಲಕ್ಕಿ ಪವಲಕ್ಕಿ 
ಕಾಂಚನ ಮಿಣಿ ಮಿಣಿ 
ಡಾಮ್ ಡೂಮ್ 
ಡಸ್ ಪುಸ್ 
ಕುಯಿಮ್ ಕುಟಾರ್ !"

ಒಬ್ಬೊಬ್ಬರನ್ನೇ ಬೆರಳು ಮಾಡಿ ತೋರುತ್ತ ಬಂದು ,' ಕುಟಾರ್ ' ಎಂದಾಗ ಪುಟ್ಟಣ್ಣನ ಬೆರಳು ಪುಟ್ಟಿಯ ಕಡೆ ತೋರುತ್ತಿತ್ತು . 
ಪುಟ್ಟಿಗೆ ಬಹಳ ಖುಷಿ . 


" ಅಜ್ಜಿ , ಪುಟ್ಟಿ ಕಣ್ ಬದ್ರವಾಗ್ ಮುಚ್ಚು. ಅಂಡ ಆಡ್ಬಾರ್ದು.. " ಎಂದು ಎಚ್ಚರಿಸಿದ ಪುಟ್ಟಣ್ಣ .  

ಅಜ್ಜಿ ಕಣ್ಣು ಮುಚ್ಚಿದಾಗ ಪುಟ್ಟಿ 'ಒಂದು ಎರಡು ' ಎಣಿಸಲು ಹೊರಟಳು . 

" ಒಂದು ಎರಡೆಲ್ಲ ಬೇಡ . ನಾನ್ ಒಂದ್ ಹಾಡ್ ಹೇಳ್ತೀನಿ, ಎಲ್ಲ ಬಚ್ಚಿಟ್ ಕೊಳ್ಳಿ ." ಎಂದಳು ಅಜ್ಜಿ . 

" ಕಣ್ಣಾ ಮುಚ್ಚಿ ,
ಕಾಡೇ ಗೂಡೇ ?
ಉದ್ದಿನ್ ಮೂಟೇ 
ಉರುಳೇ ಹೋಯಿತು !
ನಮ್ಮಯ ಹಕ್ಕಿ,
ನಿಮ್ಮಯ ಹಕ್ಕಿ,
ಎಲ್ಲಾರು ಬಚ್ಚಿಟ್ ಕೊಳ್ಳಿ !
ನಮ್ ಹಕ್ಕಿ ಬಿಟ್ಟೇ ಬಿಟ್ಟೆ !"


ಅಜ್ಜಿ ಹಾಡು ಮುಗಿಸಿ ಪುಟ್ಟಿಯ ಕಣ್ಣು ಬಿಟ್ಟಾಗ  ಹುಡುಗರೆಲ್ಲ ಅಗಿಕೊಂಡಿದ್ದರು . ಪುಟ್ಟಿ ಎಚ್ಚರಿಕೆಯಿಂದ ಹುಡುಕುತ್ತ , ಲಿಂಗದ ಹೂಮರದ ಹಿಂದೆ ಅಡಗಿದ್ದ ಶಾಮುವನ್ನು ನೋಡಿ 'ಔಟ್ ಔಟ್ " ಎನ್ನುತ್ತಾ ದಡಬಡ ಓಡಿದಳು . ಅವನಿಗೆ ಮೊದಲಾಗಿ ಓಡಿ ಹೋಗಿ  " ಸಾಕ್ಷಿ ...." ಎನ್ನುತ್ತಾ ಅಜ್ಜಿಯನ್ನು ಮುಟ್ಟಿದಾಗ ಅವಳ ಮೊಗದಲ್ಲಿ ಅದೆಷ್ಟು ಗೆಲುವು!

Saturday, October 19, 2013

ಊಟ ! ಆಟ ! ಪಾಠ !


ಸಾರಿಸಿ ಗುಡಿಸಿ,
ರಂಗೋಲಿ ಹಾಕಿ,
ಬಾಳೆಲೆ ಹಾಕಿ,
ಪಾಯಸ ಹಾಕಿ,
ಅನ್ನ ಹಾಕಿ,
ಬೇಳೆ ಹಾಕಿ,
ತುಪ್ಪ ಹಾಕಿ,
ಕಲಸಿ ಕಲಸಿ,
ಕಾಗಕ್ಕಂಗೊಂದು   ತುತ್ತು,
ಗುಬ್ಬಕ್ಕಂಗೊಂದು  ತುತ್ತು,
ನಾಯಿಮರಿಗೊಂದು ತುತ್ತು ಹಾಕಿ... 

ಅಜ್ಜಿ ಪಾಪುವಿನ ಕೈ ಹಿಡಿದು 'ಅನ್ನ ಹಾಕಿ' ಆಟ ಆಡಿಸುತ್ತಿದ್ದಳು. 


"ಅಜ್ಜಿ ಅಜ್ಜಿ ! ನಮ್ಮ ಕಾವೇರಿಗೊಂದು  ತುತ್ತು ?" ಪುಟ್ಟಿ ಅಜ್ಜಿಯನ್ನು ತಡೆದು ಮನೆ ಹಸು 
ಕಾವೇರಿಗೊಂದು ತುತ್ತು ಎಂದು ಕೇಳಿದಳು . 

" ಸರಿ, ಕಾವೇರಿಗೊಂದು ತುತ್ತು ಹಾಕಿ .." ಎಂದು ಹಸುವನ್ನು ಸೇರಿಸಿಕೊಂಡಳು ಅಜ್ಜಿ. 

" ನಮ್ಮ ಪಾಪಯ್ಯನ ಜಟಕಾ ಕುದುರೆಗೆ ?"

" ಸರಿ, ಕುದುರೆಗೊಂದು ತುತ್ತು ಹಾಕಿ... "

" ಇರು ಅಜ್ಜಿ! ನಮ್ಮ ದಸರಾ ಆನೆಗೆ ?"

" ಆನೆ ಆದ್ಮೇಲೆ ಆಟ ಮುಂದುವರ್ಸ್ಬೇಕು ಪುಟ್ಟಿ. ಪಾಪು ನೋಡು, ಕೊನೆ ಸಾಲಿಗಾಗಿ  ಎಷ್ಟು ಉತ್ಸಾಹವಾಗಿ  ಕಾಯ್ತಿದೆ ?"



ಪಾಪು ತನ್ನ ಪುಟ್ಟ ಕೈಯನ್ನು ಬಿಗಿಯಾಗಿ  ಮೈಗಂಟಿಸಿಕೊಂಡು ಕುಳಿತಿತ್ತು. ಪುಟ್ಟಿಗೆ ಪಾಪು ನಗುವುದನ್ನು ಕಾಣಲು ಬಲು ಇಷ್ಟ . 

" ಸರಿ ಅಜ್ಜಿ, ಮುಂದೆ ಹೇಳು .. "

ಅಜ್ಜಿ ಆಟ ಮುಂದುವರಿಸಿದಳು . 

"ಎಲ್ಲಾ ಪ್ರಾಣಿ ಪಕ್ಷಿಗಳಿಗೂ  ಒಂದೊಂದು ತುತ್ತು ಆಯಿತಾ ? ಈಗ ..... 

ಪುಟ್ಟಿಗೊಂದು ತುತ್ತು, 
ಪಾಪುಗೊಂದು ತುತ್ತು,
ನನಗೊಂದು ತುತ್ತು ಹಾಕಿ 
ಅಡುಗೋಲಜ್ಜಿ ಕತೆ ಕೇಳಕ್ಕೆ 
ಹೊರಟಳಂತೆ ಹೊರಟಳಂತೆ 
ಹೊರಟಳಂತೆ ....... ..... ... 

ಬಿಗಿದುಕೊಂಡಿದ್ದ ಪಾಪುವಿನ ಕೈಯನ್ನು ಎಳೆದು ಹಿಡಿದು, ತನ್ನ ಎರಡು ಬೆರಳುಗಳನ್ನು ಅದರ ಕೈಯುದ್ದಕ್ಕೂ ನಡೆಸಿಕೊಂಡು ಹೋದಳು ಅಜ್ಜಿ. 

ಪುಟ್ಟಿಗೂ ಪಾಪುವಿನಷ್ಟೇ ಸಂಬ್ರಮ ! ನಗು ಸಿಡಿಸಲು ಕಾಯುತ್ತಿದ್ದಳು. 

" ..... ಹಳ್ಳಕ್ ಬಿದ್ಕೊಂಡ್ಲಂತೆ !" ಅಜ್ಜಿ ಪಾಪುವಿನ ಕಂಕುಳಲ್ಲಿ ಕಚಗುಳಿ ಇಟ್ಟಾಗ ಪಾಪು ಕೇಕೆ ಹಾಕಿ ನಕ್ಕಿತು. ಪುಟ್ಟಿ ನಕ್ಕು ಕುಣಿದು ಕುಪ್ಪಳಿಸಿದಳು . 



" ಅಜ್ಜಿ ಊಟಕ್ಕೆ ರಂಗೋಲಿ ಹಾಕಿ ಏಕೆ ಎಲೆ ಹಾಕ್ಬೇಕು ?"

" ಪುಟ್ಟಿ, ಅತಿಥಿಗಳು ದೇವ್ರಿಗೆ  ಸಮಾನ. ರಂಗೋಲಿ ಹಾಕಿ ಎಲೆ ಹಾಕಿ ಔತಣ ಮಾಡ್ಸೋದು   ಮುಖ್ಯ ಅತಿಥಿಗಳಿಗೆ ನಾವು ತೋರೋ ಗೌರವ."

" ಚಿಕ್ಕಪ್ಪನ ಮದುವೇಲಿ  ನನಗೂ ಕೂಡ ರಂಗೋಲಿ ಹಾಕಿ ಎಲೆ ಹಾಕಿದ್ರಲ್ಲ 
 ಅಜ್ಜಿ! ಹಾಗಾದ್ರೆ ನಾನೂ ಮುಖ್ಯ  ಅತಿಥಿಯೇ  ?"

" ಹೂಂ ಮತ್ತೆ!"

ಪಾಪು ಏನೇನೋ ಶಬ್ದ ಮಾಡಿ ಮತ್ತೆ ಆಟಕ್ಕೆ ಎಳೆಯಿತು.

" ಅಜ್ಜಿ ,  ಪಾಪುಗೆ ನಾನೊಂದು ಊಟದ ಹಾಡು ಹೇಳ್ತಿನಿ. ಶಿಶು ವಿಹಾರದಲ್ಲಿ ಹೇಳ್ಕೊಟ್ರು  . ನೀನೂ ಕೇಳು ..."

ಪುಟ್ಟಿ ಗಂಟಲು ಸರಿ ಮಾಡಿಕೊಂಡು  ಹಾಡ ತೊಡಗಿದಳು. 

ಒಂದು ಎರಡು 
ಬಾಳೆಲೆ ಹರಡು !
ಮೂರು ನಾಲ್ಕು 
ಅನ್ನಾ ಹಾಕು !
ಐದು ಆರು 
ಬೇಳೇ ಸಾರು!
ಏಳು ಎಂಟು 
ಪಲ್ಯಕ್ಕೆ ದಂಟು !
ಒಂಬತ್ತು ಹತ್ತು 
ಎಲೆ ಮುದಿರೆತ್ತು !
ಒಂದರಿಂದ ಹತ್ತು ಹೀಗಿತ್ತು 
ಊಟದ ಆಟವು  ಮುಗಿದಿತ್ತು !



" ಬೇಷ್ ಪುಟ್ಟಿ ಬೇಷ್ !" ಅಜ್ಜಿ ಚಪ್ಪಾಳೆ ತಟ್ಟಿದಳು . 

" ಅಮ್ಮ, ಈ ಹಾಡನ್ನ ಕಲಿತ್ಮೇಲೆ ಪುಟ್ಟಿ ಅಂಕಿಗಳನ್ನ ಮಾತ್ರ ಅಲ್ಲ, ಹಠ ಮಾಡ್ದೆ  ದಂಟು ತಿನ್ನೋದೂ ಕಲ್ತಿದ್ದಾಳೆ  ." ಎಂದಳು ಅಮ್ಮ. 

" ಓ  ಬಲೆ ಬಲೆ ! ಪುಟ್ಟಿ ! ದಂಟು, ಸೊಪ್ಪು ಎಲ್ಲ ಆರೋಗ್ಯಕ್ಕೆ ಎಷ್ಟು ಒಳ್ಳೇದು ಗೊತ್ತೇ ? ಅದ್ಸರಿ, ಊಟ ಆದ್ಮೇಲೆ ಎಲೆ ಮುದಿರೆತ್ತೋದೂ ಉಂಟೇ?"

" ಅಯ್ಯೋ ಅಜ್ಜಿ ! ನಾನು ಊಟ ಮಾಡೋದು ತಟ್ಟೇಲಿ , ಗೊತ್ತಿಲ್ವೆ ? ಆದ್ರೆ, ನಾನು ತಟ್ಟೆ  ಎತ್ತಿ ತೊಳೆಯೋ ತೊಟ್ಟಿಗೆ ಹಾಕ್ತೀನಪ್ಪ ."

" ಅಯ್ಯೋ ನನ್ ಜಾಣ ಮರಿಯೇ !" 

ಅಜ್ಜಿ ಪುಟ್ಟಿಯ ಮುಖ ನೀವಾಳಿಸಿದಳು. 

ಪುಟ್ಟಿಯ ಮುಖ ಗುಲಾಬಿಯಂತೆ ಅರಳಿತು. 

Friday, October 11, 2013

ಕಾಸು! ಕಾಸು! ಕಾಸು!


ಕಾಲಾಡು ಕಪ್ಪೆ ಕಾಲಾಡು !
ನೀರಿಗೆ ಬಿಡ್ತಿನಿ ಜಾಲಾಡು !


ಈ ಸಾಲುಗಳನ್ನು ಕೇಳಿದ್ದೇ ತಡ ! ಅಮ್ಮನ ತೊಡೆಯ ಮೇಲೆ ಕಾಲುಗಳನ್ನು ಇಳಿಬಿಟ್ಟು ಕುಳಿತ ಪಾಪು , ತನ್ನ ಪುಟ್ಟ ಕಾಲುಗಳನ್ನು ರಪರಪ ಆಡಿಸಿ ಗಾಳಿಯಲ್ಲಿ ಜಾಲಾಡ ತೊಡಗಿತು ! ಪುಟ್ಟ ಕಾಲುಗಳ ಸ್ನಾಯುಗಳಿಗೆ ಈ ಆಟವೇ ವ್ಯಾಯಾಮವಾಗಿ ಪಾಪುವಿನ ಕಾಲುಗಳಿಗೆ  ಬಲ ತುಂಬುತ್ತಿತ್ತು.


ಪಾಪುವಿನ ಕೈ ಮತ್ತು ಬೆರಳುಗಳ ಕೌಶಲ್ಯದ ಅಬಿವೃದ್ಧಿಗೆ ನೆರವಾಗುವಂತಹ ಹಾಡೊಂದು ನೆನಪಿಗೆ ಬರುತ್ತದೆ. ಒಂದೊಂದೇ ಬೆರಳನ್ನು ಅಂಗೈಯಲ್ಲಿ ತಟ್ಟುತ್ತ ಕಾಸೆಣಿಸುವ ಈ ಹಾಡನ್ನು ಹೇಳಿ  ನಂಜಮ್ಮನವರು ಪಾಪುವನ್ನು ಆಡಿಸುತ್ತಿದ್ದರು. 


ಹಾಲಿಗೊಂದು ಕಾಸು!
ಮೊಸರಿಗೊಂದು ಕಾಸು!
ಬೆಣ್ಣೆಗೊಂದು ಕಾಸು!
ತುಪ್ಪಕ್ಕೊಂದು ಕಾಸು!

ಅಪ್ಪ ಕೊಟ್ಟ ಕಾಸು ಅಂಗಡಿಗೆ ಹೋಯ್ತು!
ಅಮ್ಮ ಕೊಟ್ಟ ಕಾಸು ಆಟಕ್ಕೆ ಹೋಯ್ತು!
ತಾತ ಕೊಟ್ಟ ಕಾಸು ತೂತಾಗಿ ಹೋಯ್ತು!
ಮಾಮ ಕೊಟ್ಟ ಕಾಸು ಮಾಯವಾಗಿ ಹೋಯ್ತು!
ಕಾಸು ಕಾಸು ಕಾಸು!


ತಾತ ಕೊಟ್ಟ ಕಾಸು ಅದ್ಯಾಕೆ ತೂತಾಯಿತೋ ಏನೋ ! ಆದರೆ ಬ್ರಿಟಿಷರು ಭಾರತವನ್ನು ಆಳುತ್ತಿದ್ದಾಗ ತೂತಿನ ಕಾಸು ಚಲಾವಣೆಯಲ್ಲಿತ್ತು. ಆರನೆಯ ಜಾರ್ಜ್ ದೊರೆಯ ಆಡಳಿತದಲ್ಲಿ , ಪ್ರಿಟೋರಿಯಾ , ಕೋಲ್ಕತ್ತಾ ಮತ್ತು ಮುಂಬೈನಲ್ಲಿಯ ಟಂಕ ಶಾಲೆಗಳಲ್ಲಿ ಈ ತಾಮ್ರದ ನಾಣ್ಯಗಳು ತಯಾರಾಗುತ್ತಿದ್ದವು. ಈ ತೂತಿನ ಕಾಸಿನ ಮೌಲ್ಯ ಮೂರು ಕಾಸು ಅಂದರೆ ಕಾಲಾಣೆ  ಆಗಿತ್ತು. ಕೆಲಸಕ್ಕೆ ಬಾರದ ಮೈಗಳ್ಳರನ್ನ 'ಮೂರು ಕಾಸಿಗೂ ಪ್ರಯೋಜನವಿಲ್ಲ' ಎಂದು ಹಳಿಯುವುದನ್ನು ಕೇಳಿದ್ದೇವೆ. ಅಂದರೆ ಮೂರು ಕಾಸಿಗೂ ಒಂದು ಪ್ರಯೋಜನವಿದ್ದಿರ ಬೇಕಲ್ಲವೇ ? ಕುತೂಹಲ ತಡೆಯಲಾರದೆ,  ಆ ಕಾಲದಲ್ಲಿ ಮೂರು ಕಾಸಿಗೆ ಏನು ಸಿಗುತ್ತಿತ್ತು ಎಂದು ತಾತನನ್ನು ವಿಚಾರಿಸಿದಾಗ, ತಾನು ಶಾಲೆಯಿಂದ ಮನೆಗೆ ಮರಳುವಾಗ ಮೂರು ಕಾಸು ಕೊಟ್ಟು ಕಡಲೆಕಾಯಿ ಇಲ್ಲವೇ ನಿಂಬೆ ಹುಳಿ ಪೆಪ್ಪೆರ್ಮಿಂಟು ಕೊಳ್ಳುತ್ತಿದ್ದ ಕತೆಯನ್ನು ತೆಗೆದರು ತಾತ