" ಅಬ್ಬ! ಎಷ್ಟೊಂದು ಗುಲಗಂಜಿ !"
ಅಜ್ಜಿ ಅಲಿಗುಳಿಮಣೆಯನ್ನು ತೆರೆದಿಟ್ಟು, ಪುಟ್ಟಿಯನ್ನು ಕಂಡು ಆಶ್ಚರ್ಯದಿಂದ ಕಣ್ಣಗಲಿಸಿದಳು. ಗುಲಗಂಜಿ ತುಂಬಿದ್ದ ದೊಡ್ಡ ಗಾಜಿನ ಶೀಶೆಯನ್ನು ಹೊರಲಾರದೆ ಹೊತ್ತು ತಂದು ಅಜ್ಜಿಯ ಮುಂದೆ ಕುಳಿತಳು ಪುಟ್ಟಿ.
" ಕಾಸ್ಬಂಗ್ಲಿಗೆ ಹೋದಾಗ ನಾನೇ ಆರಿಸ್ಕೊಂಡು ಬಂದೆ ಅಜ್ಜಿ." ಪುಟ್ಟಿ ಹೆಮ್ಮೆಯಿಂದ ಹೇಳಿದಳು.
" ಓ ! ದೊಡ್ಡ ಜಾರುಗುಪ್ಪೆ ಪಕ್ಕದಲ್ಲಿದೇ ಅಲ್ವ ಮರ ? ನಾನೂ ನೋಡಿದ್ದೀನಿ. "
ಅಜ್ಜಿ ಗುಲಗಂಜಿಗಳನ್ನು ಗುಳಿಯಲ್ಲಿ ಎಣಿಸಿ ಹಾಕ ತೊಡಗಿದಳು.
"ನೀನು ಆ ಜಾರುಗುಪ್ಪೆ ಜಾರಿದ್ದೀಯ ಪುಟ್ಟಿ ?''
" ಅಯ್ಯೋ ! ನಂಗೆ ಭಯಾಪ್ಪಾ ! ಒಂದೇ ಒಂದ್ಸರಿ ಸರಸು ಅತ್ತೆ ಮಡಿಲಲ್ಲಿ ಕೂರಿಸ್ಕೊಂಡು ಜಾರಿಸಿದ್ಲು."
ಪುಟ್ಟಿಗೆ
ಆ ನೆನಪೇ ಭಯ ಕೊಟ್ಟಿತು. ಕಾಸು ಬಂಗಲಿಯ ಆಫ್ರಿಕಾದ ಆನೆಗಿಂತ, ಜಿರಾಫೆಗಿಂತ ಎರಡರಷ್ಟು
ಎತ್ತರವಿದ್ದ ಜಾರುಗುಪ್ಪೆಯ ಮೇಲೆ ಸರಸು ಅತ್ತೆಯೊಡನೆ ನಿಂತಾಗ, ಪಕ್ಕದ ಆವರಣದ ನೀರಾನೆ
ತಳವಿಲ್ಲದ ಬಾವಿಯಂತೆ ಅಗಲವಾಗಿ ಬಾಯಿ ಬಿಟ್ಟು ಅವಳನ್ನು ಇನ್ನಷ್ಟು ಹೆದರಿಸಿತ್ತು. ಪುಟ್ಟಿಯನ್ನು ಮಡಿಲಲ್ಲಿ ಬಲವಂತವಾಗಿ ಕೂರಿಸಿಕೊಂಡು ಸರಸು ಅತ್ತೆ 'ಜೋಯ್' ಎಂದು ಜಾರಿದಾಗ ಪುಟ್ಟಿ ಜೋರಾಗಿ ಕೂಗಿ ಅಳ ತೊಡಗಿದ್ದ ಳು.
" ಅಳ್ಬೇಡ ಜಾಣಮರಿ'' ಎಂದು ಸರಸು ಅತ್ತೆ ಸಂತೈಸಿದ್ದಳು. ಮರದಿಂದ ಚೆಲ್ಲಿದ್ದ ಗುಲಗಂಜಿಗಳನ್ನು ತೋರಿಸಿದ್ದಳು. ಪುಟ್ಟಿ ಕಣ್ಣೀರನ್ನು ಒರೆಸಿಕೊಳ್ಳದೆ ಗುಲಗಂಜಿ ಆರಿಸಲು ಹೊರಟಿದ್ದಳು.
"ಅಜ್ಜಿ ಪಾಪಣ್ಣ ಆ ಜಾರುಗುಪ್ಪೆ ಮೇಲೆ ತಲೆಕೆಳಗೆ ಮಲಗಿ ಜಾರ್ತಾನೆ !"
"ಅವ್ನು ಶುದ್ಧ ಒರಟು.ಹೂಂ, ಈಗ ನಿನ್ನ ಆಟ ."
ಮನೆ ಹೊರಗೆ ಪುಟ್ಟಣ್ಣ ಸ್ನೇಹಿತರೊಡನೆ ಕೂಡಿ ಗಟ್ಟಿಯಾಗಿ ಕೂಗಿ ಆಡುತ್ತಿದ್ದ.
" ಅಜ್ಜಿ ಆಟ ಸಾಕು. ನಾವೂ ತೋಟಕ್ ಹೋಗೋಣ ?" ಉತ್ಸಾಹದಿಂದ ಎದ್ದಳು ಪುಟ್ಟಿ.
" ಸರಿ ನಡಿ." ಅಜ್ಜಿ ಅಲುಗುಳಿಮಣೆ ಮುಚ್ಚಿಟ್ಟಳು.
ಪುಟ್ಟಣ್ಣ ಮತ್ತು ಅವನ ಸ್ನೇಹಿತರೆಲ್ಲ ಮರಕೋತಿ ಆಡುತ್ತಿದ್ದರು.
''ಪುಟ್ಟಣ್ಣ! ಪಾಪ, ಪುಟ್ಟಿನೂ ಆಟಕ್ಸೇರ್ಸ್ಕೋಳೋ ." ಎಂದು ಕೂಗಿದಳು ಅಜ್ಜಿ .
" ಟೈಮ್ಸ್ ! ಟೈಮ್ಸ್! " ಏದುಸಿರು ಬಿಟ್ಟು ಓಡಿಬಂದ ಪುಟ್ಟಣ್ಣ . ಪುಟ್ಟಿಯ ಅಣ್ಣ ಆದ್ದರಿಂದ ಎಲ್ಲರೂ ಅವನನ್ನು ಪುಟ್ಟಣ್ಣ ಎಂದೇ ಕರೆದರು. ಅದು ಅವನಿಗೆ ಇಷ್ಟವೂ ಆಗಿತ್ತು . ಆದರೆ .....
" ಅಜ್ಜಿ, ಫ್ರೆಂಡ್ಸ್ ಎದಿರ್ಗೆ ನನ್ನ ಪುಟ್ಟಣ್ಣ ಅಂತ ಕರೀ ಬೇಡ ." ಎಂದು ಸಿಡುಕಿದ .
'' ಸರಿಯಪ್ಪ ಪಾಪಣ್ಣ ."
'' ಅಜ್ಜಿ ನನ್ನ ಹೆಸ್ರು ರಾಘವೇಂದ್ರ !"
" ತಪ್ಪಾಯಿತು ಮಾರಾಯಾ ! ಈಗ ಪುಟ್ಟಿನ ಸೇರ್ಸ್ಕೊಳ್ತೀಯೋ ಇಲ್ವೋ ?"
" ಏ , ಎಲ್ರೂ ಬನ್ರಪ್ಪ! ಪುಟ್ಟಿ ನಂಜೊತೆ ಆಡ್ತಾಳೆ ...! ಆದ್ರೆ ನೋ ಒರಟಾಟ ! " ಅಣ್ಣನಿಗೆ
ಪುಟ್ಟಿ ಪಾಪು ಇಬ್ಬರಲ್ಲೂ ಬಹಳ ಪ್ರೀತಿ. ಒಮ್ಮೆ ಲಗೋರಿ ಆಡುತ್ತಿದ್ದಾಗ ಒಂದು ದಪ್ಪ
ಕಲ್ಲು ಹಾರಿ ಪುಟ್ಟಿಯ ಬಾಯಿಗೆ ಅಪ್ಪಳಿಸಿತ್ತು . ಮುಸುಡಿ ಊದಿ ಪುಟ್ಟಿ ನೋವಲ್ಲಿ ನರಳಿ ,
ಮನೆಯಲ್ಲೆಲ್ಲ ಗಲಬೆಯಾಗಿತ್ತು . ಎರಡು ದಿನಗಳನಂತರ ನೋವೇನೋ ಕಡಿಮೆಯಾಗಿತ್ತು . ಆದರೆ
ಊತ ಕಡಿಮೆಯಾಗಲು ಒಂದು ವಾರವೇ ಆಯಿತು . ಸೂರ್ಯನನ್ನು ಹಿಡಿಯಲು ಹೋದ ಹನುಮಂತ ಕೆಳಕ್ಕೆ
ಬಿದ್ದು ಮೂತಿ ಊದಿಸಿಕೊಂಡ ಕಥೆ ಹೇಳಿ " ಹನುಮಂತಿ!ಹನುಮಂತಿ!" ಎಂದು ಪುಟ್ಟಿಯನ್ನು ನಗಿಸಿದ್ದ ಪುಟ್ಟಣ್ಣ .
ಪುಟ್ಟಿಯನ್ನು ಆಟಕ್ಕೆ ಸೇರಿಸಿಕೊಂಡಾಗ ಕಣ್ಣಾಮುಚ್ಚಾಲೆ ಆಟವನ್ನೇ ಆಡುತ್ತಿದ್ದರು ಹುಡುಗರು.
" ಎಲ್ರೂ ಬನ್ನಿ, 'ಅವಲಕ್ಕಿ ಪವಲಕ್ಕಿ' ಮಾಡಿ ಯಾರು ಹಿಡಿಬೇಕೋ ನೋಡೋಣ ." ಪುಟ್ಟಣ್ಣ ಎಲ್ಲರನ್ನೂ ವರ್ತುಲಾಕಾರದಲ್ಲಿ ನಿಲ್ಲಿಸಿದ .
ಪುಟ್ಟಿ ಶಾಲೆಯಲ್ಲಿ ಆಡುವಾಗ, ಮೂವರು ಮೂವರಾಗಿ 'ಅವ್ವ ಅಪ್ಪಚಿ' ಇಲ್ಲವೇ ' ಚಾಟ್ ಬೂಟ್ ತ್ರೀ ' ಮಾಡಿ 'ಔಟ್' ಆದವರನ್ನ ಆರಿಸುತ್ತಿದ್ದರು .
' ಅವಲಕ್ಕಿ' ಯಲ್ಲಿ ಎಲ್ಲರನ್ನೂ ಒಟ್ಟಿಗೇ ನಿಲ್ಲಿಸಿ ಒಮ್ಮೆಯಲ್ಲೇ ಸೋತವರನ್ನು ಆರಿಸಿಬಿಡಬಹುದು.ಪುಟ್ಟಿಗೆ ಇದೇ ಬಲು ಇಷ್ಟ .
" ಅವಲಕ್ಕಿ ಪವಲಕ್ಕಿ
ಕಾಂಚನ ಮಿಣಿ ಮಿಣಿ
ಡಾಮ್ ಡೂಮ್
ಡಸ್ ಪುಸ್
ಕುಯಿಮ್ ಕುಟಾರ್ !"
ಒಬ್ಬೊಬ್ಬರನ್ನೇ ಬೆರಳು ಮಾಡಿ ತೋರುತ್ತ ಬಂದು ,' ಕುಟಾರ್ ' ಎಂದಾಗ ಪುಟ್ಟಣ್ಣನ ಬೆರಳು ಪುಟ್ಟಿಯ ಕಡೆ ತೋರುತ್ತಿತ್ತು .
ಪುಟ್ಟಿಗೆ ಬಹಳ ಖುಷಿ .
" ಅಜ್ಜಿ , ಪುಟ್ಟಿ ಕಣ್ ಬದ್ರವಾಗ್ ಮುಚ್ಚು. ಅಂಡ ಆಡ್ಬಾರ್ದು.. " ಎಂದು ಎಚ್ಚರಿಸಿದ ಪುಟ್ಟಣ್ಣ .
ಅಜ್ಜಿ ಕಣ್ಣು ಮುಚ್ಚಿದಾಗ ಪುಟ್ಟಿ 'ಒಂದು ಎರಡು ' ಎಣಿಸಲು ಹೊರಟಳು .
" ಒಂದು ಎರಡೆಲ್ಲ ಬೇಡ . ನಾನ್ ಒಂದ್ ಹಾಡ್ ಹೇಳ್ತೀನಿ, ಎಲ್ಲ ಬಚ್ಚಿಟ್ ಕೊಳ್ಳಿ ." ಎಂದಳು ಅಜ್ಜಿ .
" ಕಣ್ಣಾ ಮುಚ್ಚಿ ,
ಕಾಡೇ ಗೂಡೇ ?
ಉದ್ದಿನ್ ಮೂಟೇ
ಉರುಳೇ ಹೋಯಿತು !
ನಮ್ಮಯ ಹಕ್ಕಿ,
ನಿಮ್ಮಯ ಹಕ್ಕಿ,
ಎಲ್ಲಾರು ಬಚ್ಚಿಟ್ ಕೊಳ್ಳಿ !
ನಮ್ ಹಕ್ಕಿ ಬಿಟ್ಟೇ ಬಿಟ್ಟೆ !"
ಅಜ್ಜಿ ಹಾಡು ಮುಗಿಸಿ ಪುಟ್ಟಿಯ ಕಣ್ಣು ಬಿಟ್ಟಾಗ ಹುಡುಗರೆಲ್ಲ ಅಡಗಿಕೊಂಡಿದ್ದರು
. ಪುಟ್ಟಿ ಎಚ್ಚರಿಕೆಯಿಂದ ಹುಡುಕುತ್ತ , ಲಿಂಗದ ಹೂಮರದ ಹಿಂದೆ ಅಡಗಿದ್ದ ಶಾಮುವನ್ನು
ನೋಡಿ 'ಔಟ್ ಔಟ್ " ಎನ್ನುತ್ತಾ ದಡಬಡ ಓಡಿದಳು . ಅವನಿಗೆ ಮೊದಲಾಗಿ ಓಡಿ ಹೋಗಿ " ಸಾಕ್ಷಿ ...." ಎನ್ನುತ್ತಾ ಅಜ್ಜಿಯನ್ನು ಮುಟ್ಟಿದಾಗ ಅವಳ ಮೊಗದಲ್ಲಿ ಅದೆಷ್ಟು ಗೆಲುವು!
No comments:
Post a Comment