Saturday, October 19, 2013

ಊಟ ! ಆಟ ! ಪಾಠ !


ಸಾರಿಸಿ ಗುಡಿಸಿ,
ರಂಗೋಲಿ ಹಾಕಿ,
ಬಾಳೆಲೆ ಹಾಕಿ,
ಪಾಯಸ ಹಾಕಿ,
ಅನ್ನ ಹಾಕಿ,
ಬೇಳೆ ಹಾಕಿ,
ತುಪ್ಪ ಹಾಕಿ,
ಕಲಸಿ ಕಲಸಿ,
ಕಾಗಕ್ಕಂಗೊಂದು   ತುತ್ತು,
ಗುಬ್ಬಕ್ಕಂಗೊಂದು  ತುತ್ತು,
ನಾಯಿಮರಿಗೊಂದು ತುತ್ತು ಹಾಕಿ... 

ಅಜ್ಜಿ ಪಾಪುವಿನ ಕೈ ಹಿಡಿದು 'ಅನ್ನ ಹಾಕಿ' ಆಟ ಆಡಿಸುತ್ತಿದ್ದಳು. 


"ಅಜ್ಜಿ ಅಜ್ಜಿ ! ನಮ್ಮ ಕಾವೇರಿಗೊಂದು  ತುತ್ತು ?" ಪುಟ್ಟಿ ಅಜ್ಜಿಯನ್ನು ತಡೆದು ಮನೆ ಹಸು 
ಕಾವೇರಿಗೊಂದು ತುತ್ತು ಎಂದು ಕೇಳಿದಳು . 

" ಸರಿ, ಕಾವೇರಿಗೊಂದು ತುತ್ತು ಹಾಕಿ .." ಎಂದು ಹಸುವನ್ನು ಸೇರಿಸಿಕೊಂಡಳು ಅಜ್ಜಿ. 

" ನಮ್ಮ ಪಾಪಯ್ಯನ ಜಟಕಾ ಕುದುರೆಗೆ ?"

" ಸರಿ, ಕುದುರೆಗೊಂದು ತುತ್ತು ಹಾಕಿ... "

" ಇರು ಅಜ್ಜಿ! ನಮ್ಮ ದಸರಾ ಆನೆಗೆ ?"

" ಆನೆ ಆದ್ಮೇಲೆ ಆಟ ಮುಂದುವರ್ಸ್ಬೇಕು ಪುಟ್ಟಿ. ಪಾಪು ನೋಡು, ಕೊನೆ ಸಾಲಿಗಾಗಿ  ಎಷ್ಟು ಉತ್ಸಾಹವಾಗಿ  ಕಾಯ್ತಿದೆ ?"



ಪಾಪು ತನ್ನ ಪುಟ್ಟ ಕೈಯನ್ನು ಬಿಗಿಯಾಗಿ  ಮೈಗಂಟಿಸಿಕೊಂಡು ಕುಳಿತಿತ್ತು. ಪುಟ್ಟಿಗೆ ಪಾಪು ನಗುವುದನ್ನು ಕಾಣಲು ಬಲು ಇಷ್ಟ . 

" ಸರಿ ಅಜ್ಜಿ, ಮುಂದೆ ಹೇಳು .. "

ಅಜ್ಜಿ ಆಟ ಮುಂದುವರಿಸಿದಳು . 

"ಎಲ್ಲಾ ಪ್ರಾಣಿ ಪಕ್ಷಿಗಳಿಗೂ  ಒಂದೊಂದು ತುತ್ತು ಆಯಿತಾ ? ಈಗ ..... 

ಪುಟ್ಟಿಗೊಂದು ತುತ್ತು, 
ಪಾಪುಗೊಂದು ತುತ್ತು,
ನನಗೊಂದು ತುತ್ತು ಹಾಕಿ 
ಅಡುಗೋಲಜ್ಜಿ ಕತೆ ಕೇಳಕ್ಕೆ 
ಹೊರಟಳಂತೆ ಹೊರಟಳಂತೆ 
ಹೊರಟಳಂತೆ ....... ..... ... 

ಬಿಗಿದುಕೊಂಡಿದ್ದ ಪಾಪುವಿನ ಕೈಯನ್ನು ಎಳೆದು ಹಿಡಿದು, ತನ್ನ ಎರಡು ಬೆರಳುಗಳನ್ನು ಅದರ ಕೈಯುದ್ದಕ್ಕೂ ನಡೆಸಿಕೊಂಡು ಹೋದಳು ಅಜ್ಜಿ. 

ಪುಟ್ಟಿಗೂ ಪಾಪುವಿನಷ್ಟೇ ಸಂಬ್ರಮ ! ನಗು ಸಿಡಿಸಲು ಕಾಯುತ್ತಿದ್ದಳು. 

" ..... ಹಳ್ಳಕ್ ಬಿದ್ಕೊಂಡ್ಲಂತೆ !" ಅಜ್ಜಿ ಪಾಪುವಿನ ಕಂಕುಳಲ್ಲಿ ಕಚಗುಳಿ ಇಟ್ಟಾಗ ಪಾಪು ಕೇಕೆ ಹಾಕಿ ನಕ್ಕಿತು. ಪುಟ್ಟಿ ನಕ್ಕು ಕುಣಿದು ಕುಪ್ಪಳಿಸಿದಳು . 



" ಅಜ್ಜಿ ಊಟಕ್ಕೆ ರಂಗೋಲಿ ಹಾಕಿ ಏಕೆ ಎಲೆ ಹಾಕ್ಬೇಕು ?"

" ಪುಟ್ಟಿ, ಅತಿಥಿಗಳು ದೇವ್ರಿಗೆ  ಸಮಾನ. ರಂಗೋಲಿ ಹಾಕಿ ಎಲೆ ಹಾಕಿ ಔತಣ ಮಾಡ್ಸೋದು   ಮುಖ್ಯ ಅತಿಥಿಗಳಿಗೆ ನಾವು ತೋರೋ ಗೌರವ."

" ಚಿಕ್ಕಪ್ಪನ ಮದುವೇಲಿ  ನನಗೂ ಕೂಡ ರಂಗೋಲಿ ಹಾಕಿ ಎಲೆ ಹಾಕಿದ್ರಲ್ಲ 
 ಅಜ್ಜಿ! ಹಾಗಾದ್ರೆ ನಾನೂ ಮುಖ್ಯ  ಅತಿಥಿಯೇ  ?"

" ಹೂಂ ಮತ್ತೆ!"

ಪಾಪು ಏನೇನೋ ಶಬ್ದ ಮಾಡಿ ಮತ್ತೆ ಆಟಕ್ಕೆ ಎಳೆಯಿತು.

" ಅಜ್ಜಿ ,  ಪಾಪುಗೆ ನಾನೊಂದು ಊಟದ ಹಾಡು ಹೇಳ್ತಿನಿ. ಶಿಶು ವಿಹಾರದಲ್ಲಿ ಹೇಳ್ಕೊಟ್ರು  . ನೀನೂ ಕೇಳು ..."

ಪುಟ್ಟಿ ಗಂಟಲು ಸರಿ ಮಾಡಿಕೊಂಡು  ಹಾಡ ತೊಡಗಿದಳು. 

ಒಂದು ಎರಡು 
ಬಾಳೆಲೆ ಹರಡು !
ಮೂರು ನಾಲ್ಕು 
ಅನ್ನಾ ಹಾಕು !
ಐದು ಆರು 
ಬೇಳೇ ಸಾರು!
ಏಳು ಎಂಟು 
ಪಲ್ಯಕ್ಕೆ ದಂಟು !
ಒಂಬತ್ತು ಹತ್ತು 
ಎಲೆ ಮುದಿರೆತ್ತು !
ಒಂದರಿಂದ ಹತ್ತು ಹೀಗಿತ್ತು 
ಊಟದ ಆಟವು  ಮುಗಿದಿತ್ತು !



" ಬೇಷ್ ಪುಟ್ಟಿ ಬೇಷ್ !" ಅಜ್ಜಿ ಚಪ್ಪಾಳೆ ತಟ್ಟಿದಳು . 

" ಅಮ್ಮ, ಈ ಹಾಡನ್ನ ಕಲಿತ್ಮೇಲೆ ಪುಟ್ಟಿ ಅಂಕಿಗಳನ್ನ ಮಾತ್ರ ಅಲ್ಲ, ಹಠ ಮಾಡ್ದೆ  ದಂಟು ತಿನ್ನೋದೂ ಕಲ್ತಿದ್ದಾಳೆ  ." ಎಂದಳು ಅಮ್ಮ. 

" ಓ  ಬಲೆ ಬಲೆ ! ಪುಟ್ಟಿ ! ದಂಟು, ಸೊಪ್ಪು ಎಲ್ಲ ಆರೋಗ್ಯಕ್ಕೆ ಎಷ್ಟು ಒಳ್ಳೇದು ಗೊತ್ತೇ ? ಅದ್ಸರಿ, ಊಟ ಆದ್ಮೇಲೆ ಎಲೆ ಮುದಿರೆತ್ತೋದೂ ಉಂಟೇ?"

" ಅಯ್ಯೋ ಅಜ್ಜಿ ! ನಾನು ಊಟ ಮಾಡೋದು ತಟ್ಟೇಲಿ , ಗೊತ್ತಿಲ್ವೆ ? ಆದ್ರೆ, ನಾನು ತಟ್ಟೆ  ಎತ್ತಿ ತೊಳೆಯೋ ತೊಟ್ಟಿಗೆ ಹಾಕ್ತೀನಪ್ಪ ."

" ಅಯ್ಯೋ ನನ್ ಜಾಣ ಮರಿಯೇ !" 

ಅಜ್ಜಿ ಪುಟ್ಟಿಯ ಮುಖ ನೀವಾಳಿಸಿದಳು. 

ಪುಟ್ಟಿಯ ಮುಖ ಗುಲಾಬಿಯಂತೆ ಅರಳಿತು. 

No comments:

Post a Comment