Monday, November 25, 2013

ಬೆಳದಿಂಗಳ ಊಟ

ಬೆಳದಿಂಗಳ ಊಟ

                                                                                 

ತೋಟದಲ್ಲಿದ್ದ ಮರಳ ಗುಡ್ಡೆಯ ಮೇಲೆ ಕುಳಿತು ಕಪ್ಪೆಗೂಡು ಕಟ್ಟುತ್ತಿದ್ದಳು ಪುಟ್ಟಿ . 

" ಪುಟ್ಟೀ ! ಊಟ ಮಾಡು ಬಾ!" ಅಮ್ಮ ಕರೆದಳು.


 ಮರಳ ರಾಶಿಯಿಂದ ಆಯಿದು ತೆಗೆದ  ಕಪ್ಪೆಚಿಪ್ಪುಗಳನ್ನು  ಗೂಡಿನೊಳಗೆ  ರಾಜಾ  ರಾಣಿಯರಾಗಿ ಕೂರಿಸಿದಳು ಪುಟ್ಟಿ.   ನಂತರ  'ಕುದುರೆ',  ' ಆನೆ' ಗಳಿಗಾಗಿ ಮರಳಲ್ಲಿ ಜಾಲಾಡುತ್ತ," ಬೇಡ ಅಮ್ಮ. ನನ್ಗೆ  ಹಸಿವಿಲ್ಲ."ಎಂದಳು. 

" ತಗೋ ಆನೆ !"  ದೊಡ್ಡ ಹರಳುಗಲ್ಲುಗಳನ್ನು ಹುಡುಕಿ ತೆಗೆದು ಪುಟ್ಟಿಯ ಕೈಗೆ ಕೊಟ್ಟಳು ಸರಸು ಅತ್ತೆ .

ಪುಟ್ಟಿ ಖುಷಿಯಿಂದ ಕಲ್ಲುಗಳನ್ನು ಕಪ್ಪೆಗೂಡಿನ ಬಾಗಿಲ ಎರಡು ಬದಿಯಲ್ಲೂ ನಿಲ್ಲಿಸಿದಳು .

"ಯಾಕ್  ಹಸಿವಿಲ್ಲ ? ಶಾಂತು ಮನೇಲಿ ಏನಾದ್ರೂ ತಿಂದ್ಯಾ ?'' ವಿಚಾರಿಸಿದಳು ಅಮ್ಮ.

" ಬೋಂಡ ಚಟ್ನಿ ತಿಂದೆ !"ಪುಟ್ಟಿ  ಅಮ್ಮನಿಗೆ ಉತ್ತರ ಕೊಡುತ್ತ, ಬಣ್ಣಬಣ್ಣದ ಕ್ರೋಟನ್ ಗಿಡದ ಎಲೆಗಳನ್ನು ಕಿತ್ತು ತಂದಳು.  ಗೂಡಿನ  ಸುತ್ತ ಕಟ್ಟಿದ್ದ ಮರಳ ಗೋಡೆಯ ಮೇಲೆ  ನೆಟ್ಟು " ಬಾವುಟ !" ಎಂದು ಚಪ್ಪಾಳೆ ತಟ್ಟಿದಳು.  
  
" ನಿಂಗೆ ಚಟ್ನಿ ಇಷ್ಟ ಇಲ್ವಲ್ಲ !" ಎಂದು ಹುಬ್ಬೇರಿಸಿದಳು ಅತ್ತೆ . 

" ಅವ್ರ ಮನೇಲಿ ಚೆನ್ನಾಗಿತ್ತು !"ನಾಲಿಗೆ ಚಪ್ಪರಿಸಿದಳು ಪುಟ್ಟಿ . 

 "ಎಷ್ಟು ಬೋಂಡ ತಿಂದೆ ?" ಅಲ್ಲೇ ಕುಳಿತಿದ್ದ ಅಜ್ಜಿ ಕೇಳಿದಳು . 

" ಮೂರು !"

" ಅದಕ್ಕೆ ಮತ್ತೆ ಹಸಿವಿಲ್ಲ. ಬೋಂಡ ಕರಗೊಕ್ಕಾದ್ರೂ ಇಷ್ಟ್ ಸಾರನ್ನ ತಿನ್ಬಾರ್ದೆ?" ಅಮ್ಮ ಗೊಣಗಿದಳು.

" ತಿಂತಾಳೆ ತಡಿ !" ಎನ್ನುತ್ತ ಮರಳ ರಾಶಿಯ ಮೇಲಿಂದ ಎದ್ದು ಮನೆಯೊಳಕ್ಕೆ ನಡೆದಳು ಅಜ್ಜಿ . 

" ಉಂಡಾಡಿ ಗುಂಡಮ್ಮ , ಮೂರು ಬೋಂಡ  ತಿಂದ್ಳಮ್ಮಾ !" ಗೋಡೆಗೆ ಬಾಲ್  ಎಸೆದು ಕ್ಯಾಚ್ ಮಾಡುತ್ತಿದ್ದ ಪುಟ್ಟಣ್ಣ ಪುಟ್ಟಿಯನ್ನು  ರೇಗಿಸಿದ. 

" ನೋಡತ್ತೆ ಪುಟ್ಟಣ್ಣನ್ನಾ  !" ರಾಗವೆಳೆದಳು  ಪುಟ್ಟಿ. 

" ಯಾಕೋ ಪುಟ್ಟಣ್ಣ ಅವಳ್ನ ಚುಡಾಯಿಸ್ತೀಯ ?" ಎಂದಳು ಅತ್ತೆ. 

" ನಾನು ಶಾಂತು ಮನೆಯಿಂದ ಬರೋವಾಗ ಇಷ್ಟೊಂದು ಬಾಗೇ ಕಾಯಿ  ಆರಿಸ್ಕೊಂಡ್  ಬಂದಿದ್ದೀನಿ. ನಿಂಗೆ  ಕೊಡಲ್ಲ ಹೋಗು!" ಪೊಟ್ಟಿ ಕರುಬಿದಳು . 

" ಸಾರಿ ಪುಟ್ಟಿ! ಪ್ಲೀಸ್ ಪ್ಲೀಸ್ ! ಕೊಟ್ಬಿಡೆ ! ನಾಳೆ ರಾಮೂ ಬರ್ತಾನೆ.  ಕಾರ್ಕ್ ಬಾಲ್ ಮಾಡ್ಬೇಕು. ಪ್ಲೀಸ್ ಕೊಡೆ." ಪುಸಲಾಯಿಸಿದ ಪುಟ್ಟಣ್ಣ . 

" ನಾವೆಲ್ಲಾ ಬೆಳದಿಂಗಳೂಟ ಮಾಡ್ತಿದ್ದೀವಿ ! ಯಾರ್ಯಾರಿಗೆಲ್ಲ ಕೈ ತುತ್ತು ಬೇಕೋ, ಕೈ ತೊಳ್ಕೊಂಡ್ ಬನ್ನಿ !" ಅಜ್ಜಿ ಸೌಟಿನಿಂದ ಕಲಸಿದನ್ನದ ಗಂಗಾಳವನ್ನು  ತಟ್ಟಿ ಡಂಗೂರ ಸಾರುತ್ತಾ ಮನೆಯಿಂದ ಹೊರ ಬಂದು ಮರಳ ಮೇಲೆ ಕುಳಿತಳು  . 


" ನಂಗೆ !ನಂಗೆ ಕೈ ತುತ್ತು ! " ಮಕ್ಕಳ ಜೊತೆ ಸರಸು  ಅತ್ತೆ ಕೂಡ ತೋಟದ ನಲ್ಲಿಯಲ್ಲಿ ಕೈ ತೊಳೆಯಲು ಓಡಿದಳು.

" ನಂಗೆ ತುತ್ತು ಇಲ್ವೇ ?" ಎನ್ನುತ್ತಾ ತಾತ ವರಾಂಡದಿಂದ ಬೆತ್ತದ ಕುರ್ಚಿ ತಂದು ಮರಳ ರಾಶಿಯ ಪಕ್ಕ ಹಾಕಿಕೊಂಡು ಕುಳಿತರು.

ಅದೇ  ಸಮಯಕ್ಕೆ ತೋಟಕ್ಕೆ ಅಂಚು ಕಟ್ಟಿದ್ದ ತೆಂಗಿನ ಸಾಲುಗಳ ಮೇಲೇರಿ ಬಂದೇಬಿಟ್ಟ  ಹುಣ್ಣಿಮೆಯ ಚಂದ್ರಮ .

" ಅಗೋ ಅಗೋ ! ಚಂದ ಮಾಮ ! ಒಳಗೆ ಮೊಲದ ಮರಿ !  
ಮೊಲದ ಮರಿ ಮೊಲದ ಮರಿ ಆಡ  ಬಾರೆ !
ಚಿಪಿಕಿ ಚಿಪಿಕಿ ಚಿಪಿಕಿ ಚಿಪಿಕಿ ನೆಗೆದು ಬಾರೆ !
ಗಿಡ್ಡ ಬಾಲ ದೊಡ್ಡ ಕಿವಿ ನಿನಗೆ ಚೆನ್ನ !
ಗಟ್ಟಿ ಹಾಲ ಬಿಳಿಯ ನೊರೆ ನಿನ್ನ ಬಣ್ಣ ! " ಎಂನ್ನುತ್ತ  ಪುಟ್ಟಿ ಕುಣಿದಾಡಿದಳು . 

" ಮೊಲದ ಮರಿ  ಹೇಗೆ ಚಂದಮಾಮನಲ್ಲಿ  ಸೇರ್ಕೊಳ್ತು  ಗೊತ್ತೇ ?" ತಾತ ಕೇಳಿದರು. 

" ಹೇಳು ತಾತ. ಆ ಕತೆ ಹೇಳು ತಾತ!" ಎನ್ನುತ್ತ  ಅಜ್ಜಿ ಕೊಟ್ಟ ತುತ್ತಿಗೆ ಕೈ ಒಡ್ಡಿದರು ಮಕ್ಕಳು .

                                                                                 


" ಒಂದಾನೊಂದು ಕಾಲ್ದಲ್ಲಿ  ಒಂದು ದಟ್ಟ ಕಾಡಲ್ಲಿ ಒಂದು ಮೊಲ ಇತ್ತು. ಒಂದು ಕೋತಿ,ಒಂದು ನರಿ ಮತ್ತು ಒಂದು ನೀರ್ನಾಯಿ  ಮೊಲಕ್ಕೆ ಫ್ರೆಂಡ್ಸ್  ಆಗಿದ್ವು . ಸತ್ಯ, ಧರ್ಮ, ಪ್ರೇಮ , ಅಹಿಂಸೆ ಮುಂತಾದ ಸದ್ಗುಣಗಳನ್ನ ಪಾಲಿಸ್ತ ನಾಲ್ಕು  ಪ್ರಾಣಿಗಳೂ ಹಾಯಾಗಿದ್ವು . ಒಂದು ಹುಣ್ಣಿಮೆಯ ದಿನ ಉಪವಾಸ ಮಾಡಿ , ಯಾರಿಗಾದ್ರೂ  ತಮ್ಮ ಊಟದ ಒಂದ್ ಬಾಗಾನ ಬಿಕ್ಷೆ ಕೊಟ್ಟು ನಂತರ ತಾವು ತಿನ್ಬೇಕಂತ  ತೀರ್ಮಾನಿಸಿದ್ವೂ .
ಸಂಜೆ ವೇಳೆಗೆ ಹಸಿವ್ನಿಂದ  ದಣಿದು ಬಂದ ಒಬ್ಬ ಬಿಕ್ಷುಕ. ಕೋತಿ ಮರ ಹತ್ತಿ ಮಾವಿನ ಹಣ್ಣು ಕಿತ್ಕೊಡ್ತು . ನೀರ್ನಾಯಿ  ನದಿಯಿಂದ  ಮೀನು ಹಿಡ್ಕೊಂಬಂದ್ ಕೊಡ್ತು. ನರಿ ಕಾಡಂಚಿನ ಗುಡಿಸ್ಲಿಗೆ  ನುಗ್ಗಿ, ಅಲ್ಲಿದ್ದ  ಮೊಸರಿನ ಕುಡಿಕೆ ತಂದ್ಕೊಡ್ತು.  ಮೊಲ  ಯೋಚಿಸ್ತು. ತಾನು ತಿನ್ನೋದು ಹುಲ್ಲು. ಬಿಕ್ಷುಕ ಹೇಗೆ ಹುಲ್ಲು ತಿನ್ನ ಬಲ್ಲ ? ಫ್ರೆಂಡ್ಸ್ನ ಕರೆದು ಕಡ್ಡಿ ಕಸ ಗುಡ್ಡೆ ಮಾಡಿ ಬೆಂಕಿ ಮಾಡಕ್ಕೆ ಹೇಳ್ತು ಮೊಲ. "ಪೂಜ್ಯರೇ! ನೀವು ತುಂಬಾ ಹಸಿದಿದ್ದೀರಿ. ನಿಮಗೆ ಕೊಡೋನ್ತಾ  ಊಟ ಯಾವ್ದೂ ನನ್ನ ಬಳಿ  ಇಲ್ಲ. ಈಗ ನಾನು ಈ ಬೆಂಕಿಗೆ ಹಾರ್ತೀನಿ. ಬೆಂದ ಮೇಲೆ ನೀವು ನನ್ನ ಮಾಂಸ ತಿನ್ನಿ . " ಅಂತ ಹೇಳಿ ಚಂಗಂತ ಬೆಂಕಿಗೆ ಹಾರ್ಬಿಡ್ತು ಮೊಲ .... "

" ಅಯ್ಯೋ !" ಗಾಬರಿಯಾಗಿ ಚೀರಿದಳು ಪುಟ್ಟಿ .

" ಮಕ್ಕಳಿಗೆ ಇಂತಾ ಕತೆ ಹೇಳ್ತಾರೆಯೇ ? ಛೆ ! " ಎಂದು ರೇಗಿದಳು ಅಜ್ಜಿ .

"  ಬುದ್ಧ ಜಾತಕ ಕಥೆ ಹೀಗಿದೆ. ಆಮೆಲೆ...  "

" ಹೋಗು ತಾತ! ನಂಗೆ ಅಳು ಬರತ್ತೆ. ಬೇರೆ ಕಥೆ ಹೇಳು ." ಎಂದಳು ಪುಟ್ಟಿ.

"ಈ ಕಥೆ ಪೂರ್ತಿ ಕೇಳು ಮೊದ್ಲು ! ಬೆಂಕಿ ಮೊಲಾನ ಸುಡ್ಲೆ  ಇಲ್ಲ ಗೊತ್ತಾ? ಬದಲಾಗಿ ಮೊಲಕ್ಕೆ ಅದು  ತಂಪಾಗಿತ್ತು !"

 ಪುಟ್ಟಿಯ ಕಣ್ಣುಗಳು ಕುತೂಹಲದಿಂದ  ದೊಡ್ದದಾದವು .

"ಬಿಕ್ಷುಕನ   ವೇಷದಲ್ಲಿ  ಬಂದದ್ದು  ಯಾರಂದ್ ಕೊಂಡೆ ? ಸಾಕ್ಷಾತ್ ಶಕ ದೇವರು ! ಅವರು ನಡೆಸ್ದ ಸತ್ವ ಪರೀಕ್ಷೇಲಿ ಮೊಲ ಗೆಲ್ತು. ಮೊಲದ ತ್ಯಾಗ ಮತ್ತು ದಾನ  ಗುಣಗಳನ್ನ  ಮೆಚ್ಚಿದ್ರು    ಶಕದೇವರು . ಪ್ರಪಂಚಕ್ಕೆಲ್ಲ ಅದನ್ನು ಸಾರೋ ಹಾಗೆ   ಹುಣ್ಣಿಮೆ ಚಂದ್ರನಲ್ಲಿ  ಮೊಲದ ಬಿಂಬವನ್ನ ಅಚ್ಚಿಳಿಸಿದರು . ಆ ಮೊಲವೇ  ನಂತರ ಗೌತಮ ಬುದ್ಧನಾಗಿ ಮತ್ತೆ ಹುಟ್ತಂತೆ  . "

ಅಮ್ಮ ಪಾಪುವಿಗೆ ಕುಲಾವಿ ಹಾಕಿ, ಮೈತುಂಬ  ಶಾಲು ಹೊದ್ದಿಸಿ  ಹೊರಗೆ ಎತ್ತಿಕೊಂಡು ಬಂದಳು. ಪಾಪು ಎಲ್ಲರನ್ನು ನೋಡಿ ಕೇಕೆ ಹಾಕಿತು.

" ಪಾಪು ! ನಿನ್ಗೂ  ಕೈ ತುತ್ತು ಬೇಕಾ ಕಂದಾ ?" ಎಂದು ಮುದ್ದಿಸಿದಳು ಅಜ್ಜಿ .

ಚಂದಕ್ಕಿ ಮಾಮಾ ಚಕ್ಕುಲಿ ಮಾಮಾ !
ಮುತ್ತಿನ ಕುಡಿಕೆ ಕೊಡು ಮಾಮಾ !
ಕಿತ್ತಳೆ ಕೊಡುವೆ ಬಾ ಕೆಳಗೆ ,
ಮುತ್ತನು ಕೊಡುವೆ ಬಾ ಬಳಿಗೆ !
ಪುಟ್ಟಿ ಪಾಪು ಆಡಲು ಬರುವರು,
ಪುಟ್ಟಣ್ಣ ಇರುವನು  ನಿಂಜೊತೆಗೆ !
ಚಂದಕ್ಕಿ ಮಾಮಾ ಚಕ್ಕುಲಿ ಮಾಮಾ !

ಪಾಪುವಿಗೆ ಚಂದಮಾಮನನ್ನು ತೋರಿಸಿ ಅಜ್ಜಿ ಹಾಡಿದಳು.  ಪಾಪು ಇನ್ನಷ್ಟು ನಕ್ಕಿತು.

ಕೈ ತುತ್ತು ತಿಂದು ಆಯಾಸದಿಂದ ಅತ್ತೆಯ ತೊಡೆಯ ಮೇಲೆ ಮಲಗಿಬಿಟ್ಟಳು ಪುಟ್ಟಿ .
ಪುಟ್ಟಿ ಪಾಪುವಿನಂತೆ ಇದ್ದಾಗ ತಾನು ಅವಳಿಗಾಗಿ ಹೇಳುತ್ತಿದ್ದ ಹಾಡನ್ನು ಮೆಲು ದನಿಯಲ್ಲಿ ಹಾಡತೊಡಗಿದಳು ಅತ್ತೆ .ಪುಟ್ಟಿ ಮೆಲ್ಲ ಮೆಲ್ಲನೆ ಕನಸಿನ ಲೋಕಕ್ಕೆ ಜಾರಿದಳು . ಚಂದ ಮಾಮ ತೋರಿದ  ತಾರೆಗಳ ತೋಟದಲ್ಲಿ  ಆಡ ತೊಡಗಿದಳು  !




ಮುಂಬರುವ ಕಾಲದಲ್ಲಿ ಚಂದದ ಚಂದ್ರಮನಲ್ಲಿ ಕಾಲಿಡಲು ನೀಲ್  ಆರ್ಮ್ಸ್ಟ್ರಾಂಗ್ ಎಂಬ ಒಬ್ಬ ಆಕಾಶಗಾಮಿ ತಯಾರಾಗುತ್ತಿದ್ದ.  ಚಂದ್ರನ ರಹಸ್ಯಗಳನ್ನೆಲ್ಲ ಬಯಲು  ಮಾಡಲಿದ್ದ . ಆದರೂ ಚಂದ ಮಾಮನ ಚೆಲುವಿಗೆ ಮನ ಸೋತ ಕವಿಗಳು ಹೊಸ ಹೊಸ ಹಾಡುಗಳನ್ನು 
ಹಾಡುತ್ತಲೇ ಇರುವರು! ಪುಟಾಣಿಗಳು ಚಂದಮಾಮನ  ಕಥೆಗಳನ್ನು   ಕೇಳುತ್ತ, ಚಂದಕ್ಕಿ ಮಾಮನ  ಹಾಡುಗಳನ್ನ ಹಾಡುತ್ತ ಬೆಳದಿಂಗಳೂಟ ಮಾಡುತ್ತಲೇ ಇರುವರು! 

Wednesday, November 13, 2013

ಮಕ್ಕಳ ದಿನ

ಮಕ್ಕಳ ದಿನ 

ಗಿರಿಗಿರಿ ಗಿರಿಗಿರಿ ಗಿರಿಗಿಟ್ಲೆ !
ತಿರುಗಿ ತಿರುಗಿ ಗಿರಿಗಿಟ್ಲೆ !
ತಿರುಗುತ ಅರಳಿತು ತಾವರೆ!

ಗಿರಿಗಿರಿ ಗಿರಿಗಿರಿ ಗಿರಿಗಿಟ್ಲೆ !
ಸುತ್ತಿ ಸುತ್ತಿ ಗಿರಿಗಿಟ್ಲೆ!
ಸುತ್ತುತ ಮುದುಡಿತು ತಾವರೆ!

ಗಿರಿಗಿರಿ ಗಿರಿಗಿರಿ  ಗಿರಿಗಿಟ್ಲೆ !
ತಿರುಗುತ ಸುತ್ತುತ ಗಿರಿಗಿಟ್ಲೆ!
ಮತ್ತೆ ಅರಳಿತು ತಾವರೆ!

" ಸಾಕು ಶಾಂತು ! ಸಾಕು!" ಶಾಂತು ಜೊತೆ ಗಿರಿಗಿಟ್ಲೆ ಆಡಿದ ಪುಟ್ಟಿಗೆ ಆಕಾಶ ಭೂಮಿ ಎಲ್ಲ ಗಿರ ಗಿರ ತಿರುಗುತ್ತಿದ್ದಂತೆ ಅನ್ನಿಸಿತು.

"ಗಿರಿಗಿಟ್ಲೆ ಮಜವಾಗಿದೆ ! ನಿನ್ ಲಂಗ ಎಷ್ಟು ಉಬ್ತು ಗೊತ್ತಾ?" ಎಂದಳು ಪುಟ್ಟಿಯ ಬೆಸ್ಟ್ ಫ್ರೆಂಡ್ ಶಾಂತು.  

" ನಿನ್ ಲಂಗ ಕೂಡ! ಸರಿ. ಇನ್ನೊಂದ್ಸಲ ಆಡೋಣ?" ಎಂದಳು ಪುಟ್ಟಿ.  

ಅಷ್ಟರಲ್ಲಿ -

" ಎಲ್ಲ ಪ್ರೇಯರ್ ಹಾಲ್ಗೆ ನಡೀರಿ ! " ಎಂದು ಕೂಗಿದರು ವತ್ಸಲಾ ಮಿಸ್. ಶಾಲೆಯ ಮೈದಾನದಲ್ಲಿ ಆಡುತ್ತಿದ್ದ ಮಕ್ಕಳೆಲ್ಲ ಒಳಕ್ಕೆ ಓಡಿದರು.  ಪುಟ್ಟಿ ಶಾಂತು ಕೂಡ ಒಳಕ್ಕೆ ನಡೆದರು . 



'' ಮಕ್ಕಳೇ ! ಎಲ್ಲ ಶಬ್ದ ಮಾಡ್ದೆ ಕೂತ್ಕೋಳಿ. ಇವತ್ತು ನಮ್ಮ ಭಾರತದ ಪ್ರಧಾನ ಮಂತ್ರಿಗಳಾಗಿರುವ  ನೆಹರು ಮಾಮ ಅವರ ಹುಟ್ಟು ಹಬ್ಬ. ಮಕ್ಕಳಲ್ಲಿ ಅವರಿಗೆ ಬಹಳ ಪ್ರೀತಿ. ಎಲ್ಲ ಮಕ್ಕಳೂ ಚೆನ್ನಾಗಿ ಓದ್ಬೇಕು , ದೊಡ್ಡವರಾಗಿ ಸಾದ್ನೆಗಳ್ನ ಮಾಡ್ಬೇಕು ಅನ್ನೋದು ಅವರ ಆಸೆ. ನೀವೆಲ್ಲಾ ಚೆನ್ನಾಗ್ ಓದ್ತೀರಾ? " ಕೇಳಿದರು ವೇದಿಕೆಯ ಮೇಲಿದ್ದ ಪ್ರಮೀಳಾ ಮೇಡಂ . 

" ಓ ! ಓದ್ತೀವಿ." ಒಂದೇ ದನಿಯಲ್ಲಿ ಕೂಗಿದರು ಮಕ್ಕಳು. 
''ಸಾದ್ನೆ ಮಾಡ್ತೀರಾ ?"

" ಹೂಮ್ ! ಮಾಡ್ತೀವಿ!"

"ಇವತ್ತು  ನಮ್ಮ ಶಾಲೇಲಿ   ಮಕ್ಕಳ ದಿನದ ಹಬ್ಬ ಮಾಡ್ತಿದ್ದೀವಿ. ಈಗ ನಿಮಗಾಗಿ ನಿಮ್ಮ ಟೀಚರ್ಗಳೆಲ್ಲ ಒಂದು ಮನೋರಂಜನೆ   ಕಾರ್ಯಕ್ರಮ ನಡೆಸ್ಕೊಡ್ತಾರೆ. ಅದಾದ ಮೇಲೆ ವರಾಂಡದಲ್ಲಿ ಪೆಪ್ಪರ್ಮಿಂಟು  ಹಂಚ್ತಾರೆ. ಜೊತೆಗೆ ನೆಹರು ಮಾಮನಿಗೆ ಇಷ್ಟವಾದ  ಗುಲಾಬಿ ಹೂವಿನ ಬಾಡ್ಜ್ ಕೂಡ ಕೊಡ್ತಾರೆ. ಈಗ  ಕಾರ್ಯಕ್ರಮ. " ಮಾತು ಮುಗಿಸಿದರು ಪ್ರಮೀಳಾ ಮೇಡಂ. 

"ಅಲ್ನೋಡು ಜಾನಾಬಾಯ್ ಮಿಸ್ !"ಕೂಗಿಕೊಂಡಳು ಪುಟ್ಟಿ. 

" ಅಯ್ಯೋ ! ಕಸ್ತೂರಿ ಮಿಸ್ ನೋಡು !" ಎಂದಳು ಶಾಂತು. 

" ಅಲ್ನೋಡು ! ರೀಟಾ ಮಿಸ್ ಇದ್ದಾರೆ!" 

" ಪ್ರಭಾ ಟೀಚರ್ !  ಗೌರಿ ಮಿಸ್ !" ಆಶ್ಚರ್ಯದಿಂದ ಎಲ್ಲ ಮಕ್ಕಳೂ ಕೂಗಿದರು. 

ಕಚ್ಚೆ ಪಂಚೆಯುಟ್ಟು ಕಪ್ಪು  ಮೀಸೆ ಬಳಿದು ಪೇಟ ಕಟ್ಟಿಕೊಂಡ ಟೀಚರ್ಗಳು ವೇದಿಕೆಯ ಒಂದು ಕಡೆ ನಿಂತರು ! 

" ಅಯ್ಯೋ! ಅಲ್ನೋಡು, ಪದ್ಮಾ  ಮಿಸ್, ಸರಳ ಮಿಸ್, ಜಯಾ  ಟೀಚರ್ ! "

" ಮಿಸ್ ಸಂತೋಷ್, ಶ್ಯಾಮಲಾ ಟೀಚರ್ ಕೂಡ ಇದ್ದಾರೆ !"

ಕಚ್ಚೆ ಸೀರೆಯುಟ್ಟು , ತಲೆಯಲ್ಲಿ ತುರುಬು ಹಾಕಿ, ಕೈ ತುಂಬಾ ಗಾಜಿನ ಬಳೆ ತೊಟ್ಟು ಬಂದ ಟೀಚರ್ಗಳು ಮತ್ತೊಂದು ಕಡೆ !  

ಮೈಕ್ ಗರ್ ಗರ್ ಎಂದಿತು. ಗೆಜ್ಜೆ ಝಲ್ ಝಲ್ ಎಂದಿತು. ಮಕ್ಕಳ ಗಿಜಿ ಗಿಜಿ ನಿಂತಿತು . 

''ಚೆಲುವೈಯ ಚೆಲುವೋ ತಾನಿತಂದನ್ನಾ ಚಿನ್ಮಾಯಾ  ರೂಪೇ ಕೋಲಣ್ಣ ಕೋಲೆ!
ಕೋಲಣ್ಣ ಕೋಲೇ ತಾನಿತಂದನ್ನಾ ಚಿನ್ಮಾಯಾ  ರೂಪೇ ಕೋಲಣ್ಣ ಕೋಲೇ !''

ಟೀಚರ್ಗಳೆಲ್ಲ ಬಣ್ಣದ ಕೋಲು ತಟ್ಟಿ ಹಾಡಿಗೆ ತಕ್ಕಂತೆ ಕುಣಿಯುತ್ತ  ಕೊಲಾಟವಾಡಿದರು. ಮಕ್ಕಳು  ಉತ್ಸಾಹದಿಂದ ಕುಣಿದಾಡಿದರು.

"ಶಾಂತು ! ನಾವೂ  ಕೋಲಾಟ ಆಡೋಣ ?"ಎಂದಳು ಪುಟ್ಟಿ. 

" ಕೋಲುಗಳು ಬೇಕಲ್ಲ !" ಎಂದಳು ಶಾಂತು. 

" ನಮ್ಮನೇಲಿದೆ !" ಎಂದಳು ಪುಟ್ಟಿ.  

ಕಾರ್ಯಕ್ರಮ ಮುಗಿದಮೇಲೆ ಮಕ್ಕಳೆಲ್ಲ ವಟ ವಟ ಮಾತಾಡುತ್ತ ಚಲ್ಲಾ ಪಿಲ್ಲಿ ಓಡಿದರು. ಗೋಪಿ ಸಾರ್ ಎಲ್ಲರಿಗೂ ಕಿತ್ತಳೆ ಮತ್ತು ನಿಂಬೆ  ಪೆಪ್ಪರ್ಮಿಂಟುಗಳನ್ನು  ಹಂಚಿದರು. ಗೀತಾ ಮೇಡಂ ಗುಲಾಬಿ ಹೂ ಬಾಡ್ಜ್ ಗಳನ್ನು ಒಬ್ಬೊಬ್ಬರ ಅಂಗಿಗೂ ಪಿನ್ ಮಾಡಿದರು. 

" ಮಿಸ್ !ಮಿಸ್ ! ನಮ್ ಜೊತೆ ಆಟ ಆಡಿ, ಬನ್ನಿ ಮಿಸ್ !" ವೇಷ ಕಳಚಿ ಬಂದ ಜಾನಾಬಾಯ್ ಮಿಸ್ ಕೈ ಹಿಡಿದೆಳೆದಳು ಪುಟ್ಟಿ . 

 " ಬನ್ನಿ ಮಿಸ್ !ಬನ್ನಿ ಮಿಸ್!" ಎಲ್ಲ ಮಕ್ಕಳೂ ಪೀಡಿಸಿದರು . 

" ಸರಿ ಸರಿ ! ಬಂದೆ ! ಇವತ್ತು ಹೊಸ  ಆಟ ಆಡೋಣ ?" ಎಂದರು ಜಾನಾಬಾಯ್ ಮಿಸ್.  

" ಏನ್ ಆಟ ಮಿಸ್ ?"

" ಮೊದ್ಲು ಎಲ್ರೂ ಕೈ ಹಿಡ್ಕೊಂಡು ರೌಂಡ್ ಆಗಿ ನಿಲ್ಲಿ. "

" ರಿಂಗ ರಿಂಗ ರೋಸಸ್ ಆಟಾನಾ ?" ಕೂಗಾಡಿದರು ಮಕ್ಕಳು. 

"ಇಲ್ಲಪ್ಪ! ಬೇರೆ ಹಾಡು! ನಮ್ಮೂರಲ್ಲಿ ಎಲ್ರೂ ಹೇಳ್ಕೊಂಡು ಆಡೋದು!" ಜಾನಾಬಾಯ್ ಮಿಸ್ ಎಲ್ಲರನ್ನೂ ವೃತ್ತಾಕಾರವಾಗಿ  ನಿಲ್ಲಿಸಿ ಪುಟ್ಟಿ ರೂಪಾರ ನಡುವೆ ತಾನೂ ನಿಂತರು. 

ರತ್ತೋ ರತ್ತೋ ರಾಯನ ಮಗಳೇ 
ಬಿತ್ತೋ ಬಿತ್ತೋ ಬೀಮನ ಮಗಳೇ 
ಹದಿನಾರಂಬೆ ಕಾಯಲಾರೆ 
ಬೈಟ್ ಕುಪ್ಪಿ  ಬಾಳೆ ಕಂಬ 
ಕುಕ್ಕರ್ ಬಸವಿ ಕೂರ್ ಬಸವಿ !

ಮಕ್ಕಳನ್ನು ಸುತ್ತಿ ಸುತ್ತಿ ಬರುವಂತೆ ಹೇಳಿ , ಜಾನಬಾಯ್ ಮಿಸ್ ಹಾಡಿದರು . ಎರಡು ರೌಂಡ್ ಆಡಿದ ಮೇಲೆ ಎಲ್ಲರೂ ತಾವಾಗಿಯೇ   '' ರತ್ತೋ ರತ್ತೋ ''ಎಂದು ಹಾಡಿದರು .  ಕೈ ಹಿಡಿದು ವೇಗವಾಗಿ ಸುತ್ತಿದರು. ''ಕುಕ್ಕರ್ ಬಸವಿ ಕೂರ್ ಬಸವಿ '' ಎನ್ನುತ್ತ  'ದೊಪ್ ' ಎಂದು ಕೆಳಗೆ  ಕೂತು ಜೋರಾಗಿ ನಕ್ಕರು. 

ಬೆಲ್ ಆದ ಮೇಲೆ ಪುಟ್ಟಿ ರಾಣಿಯ ಜೊತೆ ಮನೆಗೆ ಹೊರಟಳು . 

"ರಾಣಿ , ಮನೇಗ್ ಹೋದ್ಕೂಡ್ಲೇ ಕೋಲಾಟದ ಕೋಲು ಹುಡುಕ್ಕೊಡ್ತೀಯ ?"

" ಹೂಂ ! ಮತ್ತೆ ಬೇಗ ನಡೀಬೇಕು  ."ಎಂದಳು ರಾಣಿ . 



  ಕಿತ್ತಳೆ ತೊಳೆಯಂತೆ ಇದ್ದ  ಪೆಪ್ಪರ್ಮಿಂಟುಗಳನ್ನು ಚೀಪುತ್ತ ''ರತ್ತೋ ರತ್ತೋ ರಾಯನ ಮಗಳೇ '' ಎಂದು ಉತ್ಸಾಹದಿಂದ ಗುನುಗುತ್ತ ರಾಣಿಯ ಕೈ ಹಿಡಿದು ಮನೆಗೆ ನಡೆದಳು ಪುಟ್ಟಿ !
  

Friday, November 8, 2013

ನಾಯಿ ಮರಿ ! ನಾಯಿ ಮರಿ !


 ' ಹೂಂ !ಹೂಂ ' ಎಂದು ಹೂಂಕರಿಸುತ್ತ ಅವಲಕ್ಕಿ  ಕುಟ್ಟುತ್ತಿದ್ದರು ಗೌರಮ್ಮ . ಒನಕೆಯ  'ಧಕ್ ಧಕ್' ಶಬ್ದಕ್ಕೆ ಅವರ  ಬಳೆಗಳು  'ಘಲ್ ಘಲ್' ಎಂದು ತಾಳ ಹಾಕಿದವು . 



"ಗೌರಮ್ಮ ! ನಾನೂ ಕುಟ್ತೀನಿ !" ಎನ್ನುತ್ತ  ಪುಟ್ಟಿ ಒನಕೆ ಹಿಡಿದಳು .

" ಬೇಡ ಪುಟ್ಟಮ್ಮ !ತುಂಬಾ ಭಾರ ! ನಿನ್ ಕೈಯಲ್ಲಾಗಲ್ಲ !" ಎಂದರು ಗೌರಮ್ಮ .  

ಪುಟ್ಟಿ ಉಸಿರು ಕಟ್ಟಿ 'ದಂ' ಹಿಡಿದು ಪ್ರಯತ್ನಿಸಿದರೂ  ಒರಳಿನ ಗುಳಿಯಲ್ಲಿದ್ದ ಒನಕೆ ಎಳ್ಳಷ್ಟೂ ಕದಲಲಿಲ್ಲ . 

" ಪುಟ್ಟಿ! ಗೌರಮ್ಮನ್ಯಾಕೆ   ಗೊಳ್ ಹುಯಿಕೊತ್ತಿದ್ದೀಯ ? ಬಾ ಈಕಡೆ . " ಬಟ್ಟೆಯಲ್ಲಿ  ಸುತ್ತಿಕೊಂಡು ಬಂದ ಬ್ರೌನಿಯನ್ನು ಕೆಳಗಿಳಿಸಿ, ಪುಟ್ಟಿಯನ್ನು  ಗದರಿದಳು  ಸರಸು ಅತ್ತೆ .

" ಪುಟ್ಟಮ್ಮ ಅವಲಕ್ಕಿ ಕುಟ್ಬೇಕಂತೆ ನೋಡಮ್ಮ !" ಎಂದರು ಗೌರಮ್ಮ. 

" ಅಯ್ಯಯ್ಯಪ್ಪ ! ಆಗಲ್ಲಪ್ಪ! ಅದಕ್ಕೆ ಮತ್ತೆ 'ಹೂಂ ಹೂಂ' ಅಂತ ಕುಟ್ತೀರಾ ?" ಎಂದ ಪುಟ್ಟಿ, ಒನಕೆ ಬಿಟ್ಟು ಅತ್ತೆಯ ಬಳಿ ಓಡಿ ಬಂದಳು. 



" ಹೇ ! ಬ್ರೌನಿ !ನೀರ್ಹಾಕೊಂಡ್ಯ ?"ಬ್ರೌನಿ ಮೈ ಒದರಿದಾಗ ಪುಟ್ಟಿಯ ಮೇಲೆ ನೀರ ಹನಿಗಳು ಹಾರಿದವು . 

'' ಶೀ ಶೀ ಶೀ !" ಎಂದು ಪುಟ್ಟಿ ನಕ್ಕಳು. 

ಸರಸು ಅತ್ತೆ ಬ್ರೌನಿಯನ್ನು ಬಟ್ಟೆಯಿಂದ ಚೆನ್ನಾಗಿ ಒರೆಸಿದಳು. ಬ್ರಷ್ ಮಾಡಿದಳು . ಪೌಡರ್ ಮೆತ್ತಿದಳು . 

" ಅತ್ತೆ ! ಅಮ್ಮ ಪಾಪುಗೆ ಮಾಡೋ ಹಾಗೇ ನೀನೂ ಬ್ರೌನಿಗೆ ಮಾಡ್ತಿಯಲ್ಲ! "

" ಹೂಂ ಪುಟ್ಟಿ ! ಪಾಪು ಹಾಗೆ ಇದೂ ಮರಿ ಅಲ್ವೇ ? "ಎನ್ನುತ್ತಾ  ಅದರ ಹಣೆಯಲ್ಲಿ ಸಾದಿನ ನಾಮ ಹಚ್ಚಿದಳು ಅತ್ತೆ . 

" ಅತ್ತೆ ! ನಾನು ಸ್ಕೂಲಿಂದ ಬರೋವಾಗ ಬ್ಯಾಗ್ ತುಂಬಾ ಪಾದ್ರಿ ಹೂ ಆರಿಸ್ಕೊಂಡ್ ಬಂದಿದ್ದೀನಿ . ಅದನ್ನ ಕಟ್ಟಿ ಬ್ರೌನಿಗೆ ಹಾಕೋಣ. ಚೆನ್ನಾಗ್ ಕಾಣ್ಸತ್ತೆ !" ಕಿಲ ಕಿಲ ನಕ್ಕಳು ಪುಟ್ಟಿ . 

"  ಸ್ಕೂಲಿಂದ ಬರೋವಾಗ ರಸ್ತೇಲ್  ಹೋಗೋ ಬೆಕ್ಕಿನ್ಮರಿ ಹಿಡಿಯಕ್ಹೋಗಿದ್ಯಾ ?"

" ರಾಣಿ ಹೇಳಿದ್ಲಾ ? ಚಾಡಿ ಕೋಳಿ ! ಚಪ್ರದ್ ಕೋಳಿ ! " ಎಂದು ಗೊಣಗಿದಳು ಪುಟ್ಟಿ. ''ನಾನು  ಪಾಸಾ ಫೈಲಾ ನೋಡಕ್ಕೆ ಮರದಿಂದ ಉದುರೋ ಪಾದ್ರಿ ಹೂ ಕ್ಯಾಚ್ ಮಾಡ್ತಿದ್ದೆ .ಮರದ್ ಕೆಳಗೆ ಬೆಕ್ಕಿನ್ಮರಿ ಇತ್ತು. ಹತ್ರ ಹೋದಾಗ ಓಡ್ಬಿಡ್ತು . "

" ಪ್ರಾಣಿಗ್ಳಿಂದ ನಮಗೆ ಖಾಯಿಲೆ ಬರತ್ತೆ ಪುಟ್ಟಿ . ಅವನ್ನ ಮುಟ್ಟಬಾರದು." 

" ಮತ್ತೆ ಬ್ರೌನಿ ?" ಪುಟ್ಟಿ ಆಶ್ಚರ್ಯದಿಂದ ಕೇಳಿದಳು . 

" ಬ್ರೌನಿ ಹೇಮಾ ಮನೆ ನಾಯಿ ಮರಿ . ಅದಕ್ಕೂ ಅದರ ತಾಯಿಗೂ ಪಶುವೈದ್ಯಶಾಲೆ ಡಾಕ್ಟರು ಚುಚ್ಚು ಮದ್ದು ಹಾಕಿದ್ದಾರೆ. ಅದಕ್ಕೆ  ರೋಗ ಬರಲ್ಲ. ಅದ್ರಿಂದ ನಮ್ಗೂ ರೋಗ ಅಂಟಲ್ಲ ." 

" ಅಯ್ಯೋ ! ನಾಯಿನ ದೂರ ಕರೀರಮ್ಮ ! ಒರಳು ನೆಕ್ಬಿಟ್ಟೀತು !"
ಗೌರಮ್ಮನ ಕೂಗು ಕೇಳಿ ಸರಸು ಅತ್ತೆ ಥಾಟ್ ಅಂತ ಹೋಗಿ ಬ್ರೌನಿಯನ್ನು ಎತ್ತಿಕೊಂಡಳು. 

"ಡೊಂಕು ಬಾಲದ ನಾಯಕರೆ !
ನೀವೇನೇನೂಟ ಮಾಡುವಿರಿ?
ಒನಕೆ ಕುಟ್ಟುವ ಮನೆಗೆ ಹೋಗಿ 
ಇಣುಕಿ ಇಣುಕಿ ನೋಡುವಿರಿ?"



ಅತ್ತೆ ಹಾಡುತ್ತ ಬ್ರೌನಿಯನ್ನು ಮುದ್ದಿಸಿದಳು . 

 " ನಾಯಿ ಮರಿ! ನಾಯಿ ಮರಿ ತಿಂಡಿ ಬೇಕೇ ?" ಹಾಡುತ್ತ ಒಳಗಿಂದ ಬಿಸ್ಕೊತ್ತು ತಂದು ತಿನ್ನಿಸಿದಳು .
" ತಿಂಡಿ ಬೇಕು !ತೀರ್ತ ಬೇಕು !ಎಲ್ಲ ಬೇಕು !" ಪುಟ್ಟಿ ಕೀರಲು ದನಿಯಲ್ಲಿ ನಾಯಿ ಮರಿಯಾಗಿ ಉತ್ತರಿಸಿದಳು . 
" ನಾಯಿ ಮರಿ !ನಾಯಿ ಮರಿ! ತಿಂಡಿ ನಿನಗೆ ಏಕೆ ಬೇಕು ?" ಅತ್ತೆ ಕೇಳಿದಳು . 
" ತಿಂದು ಗಟ್ಟಿಯಾಗಿ ಮನೆಯ ಕಾಯ ಬೇಕು!" ಪುಟ್ಟಿ ಎದೆಯುಬ್ಬಿಸಿ ಜಂಬದಿಂದ ಹಾಡಿದಳು. 
"ನಾಯಿ ಮರಿ!ನಾಯಿ ಮರಿ! ಕಳ್ಳ ಬಂದರೇನು ಮಾಡುವೆ?" ಅತ್ತೆ ಹೆದರಿದಂತೆ ನಟನೆ ಮಾಡಿದಳು . 
" ಲೊಳ್!ಲೊಳ್! ಬೌ !ಬೌ ! ಎಂದು ಕೂಗಿಯಾಡುವೆ !" ಪುಟ್ಟಿ ತನ್ನ ಕೈಯನ್ನು ಬಾಲದಂತೆ ಆಡಿಸಿ ಕುಣಿದಾಡಿದಳು. 

ಬ್ರೌನಿ ಪುಟ್ಟಿಯ ಕುಣಿತ ಕಂಡು ತಾನೂ 'ಲೊಳ್ ಲೊಳ್' ಎಂದಿತು.ಪುಟ್ಟಿ 'ಬೌ ಬೌ' ಎಂದಳು ! ಬ್ರೌನಿ  ಅತ್ತೆಯ ಕೈಲಿದ್ದ ಬಟ್ಟೆ ಕಚ್ಚಿ ಎಳೆದಾಡಿತು !



ಅತ್ತೆ ಕಿಲ ಕಿಲ ನಕ್ಕಳು . 

ಇವರುಗಳ ರಂಪಾಟ ನೋಡಿ ಗೌರಮ್ಮ ಕಿಸಿ ಕಿಸಿ ನಕ್ಕರು. 


Friday, November 1, 2013

ದೀಪಾವಳಿ ಹಬ್ಬದ ಶುಭಾಶಯಗಳು.


ಬಾಳೆಲೆ ಮುಚ್ಚಿದ್ದ ಒಬ್ಬಟ್ಟುಗಳು !
ಡಬ್ಬಿಯಲ್ಲಿ ಗರಿ ಗರಿ ನಿಪ್ಪಟ್ಟು!
ಮೈಸೂರುಪಾಕು ಬಿಲ್ಲೆಗಳು !
ಎಣ್ಣೆಯಲ್ಲಿ ಬೇಯುತ್ತಿದ್ದ ಕಜ್ಜಾಯ !



ಪುಟ್ಟಿಗೆ ಬಾಯಲ್ಲಿ ನೀರೂರಿತು.  
"ಪುಟ್ಟಿ, ನಿನಗ್ಯಾವ ತಿಂಡಿ ಇಷ್ಟ?" ಮಣೆಯಲ್ಲಿ ಕುಳಿತು ಕಜ್ಜಾಯಗಳನ್ನು ಕರಿಯುತ್ತಿದ್ದ ಅಜ್ಜಿ ಕೇಳಿದಳು. 
" ನನಗಾ? ಎಲ್ಲ ತಿಂಡಿನೂ ಇಷ್ಟ. ಕಜ್ಜಾಯ ಮಾತ್ರ ತುಂಬಾ ತುಂಬಾ ಇಷ್ಟ!" 
ಅಜ್ಜಿ ಪುಟ್ಟಿಯ ಕೈಗೆ ಒಂದು ಕಜ್ಜಾಯವನ್ನು ಕೊಟ್ಟಳು. ನಂತರ ಮೆಲ್ಲನೆ ಹಾಡ ತೊಡಗಿದಳು . 

ಒಬ್ಬಟ್ಟು, ನಿಪ್ಪಟ್ಟು, ಮೈಸೂರುಪಾಕು, 
ರಸಮಯ ಕಜ್ಜಾಯ ಬೇಕೇ ಬೇಕು !
ಪುಟ್ಟಿಗೆ ಎಲ್ಲಾ ಬೇಕೇ ಬೇಕು!

ಜರತಾರಿ ಲಂಗವ ಉಡಲೇ ಬೇಕು ,
ಮಲ್ಲಿಗೆ ದಂಡೆಯ ಮುಡಿಯಲೇ ಬೇಕು !
ಪುಟ್ಟಿಗೆ ಎಲ್ಲಾ ಬೇಕೇ ಬೇಕು !

ಫಟ ಫಟ ಧಡ ಧಡ ಆನೆ ಪಟಾಕಿ,
ಸಿಡಿ ಸಿಡಿ ಸಿಡಿವ ಕೇಪು ತುಪಾಕಿ,
ಪುಟ್ಟಿಗೆ ಇವೆಲ್ಲ ಬೇಡವೇ ಬೇಡ !

ಬೆಳಕಿನ ಸಾಲು ಬೆಳಗಲೆ ಬೇಕು,
ಸುರುಸುರುಬತ್ತಿಯ ಹಚ್ಚಲೇ ಬೇಕು! 
ಪುಟ್ಟಿಯು  ನಕ್ಕು ನಲಿಯಲೇ ಬೇಕು !



" ದೀಪಾವಳಿ ಹಾಡು ಜೋರಾಗಿದೆ ಅಜ್ಜಿ!" ಸಂತೋಷದಿಂದ ಜೋರಾಗಿ ಚಪ್ಪಾಳೆ ತಟ್ಟಿದ ಪುಟ್ಟಿ  ಅಜ್ಜಿಯ ಕೊರಳಿಗೆ ಜೋತು ಬಿದ್ದಳು. 

" ಲೇ ಲೇ ! ಬಿಸಿ ಎಣ್ಣೆ ಕಣೆ ! ದೂರ ಹೋಗು !" ಅಜ್ಜಿ ಎಚ್ಚರಿಸಿ ಮುದ್ದು ಪುಟ್ಟಿಗೆ ಮತ್ತೊಂದು ಕಜ್ಜಾಯ ಕೊಟ್ಟಳು. 
ಪುಟ್ಟಿ ಕಜ್ಜಾಯ ಹಿಡಿದು ಕುಣಿಯುತ್ತ ಚಿಟ್ಟೆಯಂತೆ ಹಾರಿ ಹೋದಳು .