ಬೆಳದಿಂಗಳ ಊಟ
" ಪುಟ್ಟೀ ! ಊಟ ಮಾಡು ಬಾ!" ಅಮ್ಮ ಕರೆದಳು.
" ತಗೋ ಆನೆ !" ದೊಡ್ಡ ಹರಳುಗಲ್ಲುಗಳನ್ನು ಹುಡುಕಿ ತೆಗೆದು ಪುಟ್ಟಿಯ ಕೈಗೆ ಕೊಟ್ಟಳು ಸರಸು ಅತ್ತೆ .
ಪುಟ್ಟಿ ಖುಷಿಯಿಂದ ಕಲ್ಲುಗಳನ್ನು ಕಪ್ಪೆಗೂಡಿನ ಬಾಗಿಲ ಎರಡು ಬದಿಯಲ್ಲೂ ನಿಲ್ಲಿಸಿದಳು .
"ಯಾಕ್ ಹಸಿವಿಲ್ಲ ? ಶಾಂತು ಮನೇಲಿ ಏನಾದ್ರೂ ತಿಂದ್ಯಾ ?'' ವಿಚಾರಿಸಿದಳು ಅಮ್ಮ.
" ಬೋಂಡ ಚಟ್ನಿ ತಿಂದೆ !"ಪುಟ್ಟಿ ಅಮ್ಮನಿಗೆ ಉತ್ತರ ಕೊಡುತ್ತ, ಬಣ್ಣಬಣ್ಣದ ಕ್ರೋಟನ್ ಗಿಡದ ಎಲೆಗಳನ್ನು ಕಿತ್ತು ತಂದಳು. ಗೂಡಿನ ಸುತ್ತ ಕಟ್ಟಿದ್ದ ಮರಳ ಗೋಡೆಯ ಮೇಲೆ ನೆಟ್ಟು " ಬಾವುಟ !" ಎಂದು ಚಪ್ಪಾಳೆ ತಟ್ಟಿದಳು.
" ನಿಂಗೆ ಚಟ್ನಿ ಇಷ್ಟ ಇಲ್ವಲ್ಲ !" ಎಂದು ಹುಬ್ಬೇರಿಸಿದಳು ಅತ್ತೆ .
" ಅವ್ರ ಮನೇಲಿ ಚೆನ್ನಾಗಿತ್ತು !"ನಾಲಿಗೆ ಚಪ್ಪರಿಸಿದಳು ಪುಟ್ಟಿ .
"ಎಷ್ಟು ಬೋಂಡ ತಿಂದೆ ?" ಅಲ್ಲೇ ಕುಳಿತಿದ್ದ ಅಜ್ಜಿ ಕೇಳಿದಳು .
" ಮೂರು !"
" ಅದಕ್ಕೆ ಮತ್ತೆ ಹಸಿವಿಲ್ಲ. ಬೋಂಡ ಕರಗೊಕ್ಕಾದ್ರೂ ಇಷ್ಟ್ ಸಾರನ್ನ ತಿನ್ಬಾರ್ದೆ?" ಅಮ್ಮ ಗೊಣಗಿದಳು.
" ತಿಂತಾಳೆ ತಡಿ !" ಎನ್ನುತ್ತ ಮರಳ ರಾಶಿಯ ಮೇಲಿಂದ ಎದ್ದು ಮನೆಯೊಳಕ್ಕೆ ನಡೆದಳು ಅಜ್ಜಿ .
" ಉಂಡಾಡಿ ಗುಂಡಮ್ಮ , ಮೂರು ಬೋಂಡ ತಿಂದ್ಳಮ್ಮಾ !" ಗೋಡೆಗೆ ಬಾಲ್ ಎಸೆದು ಕ್ಯಾಚ್ ಮಾಡುತ್ತಿದ್ದ ಪುಟ್ಟಣ್ಣ ಪುಟ್ಟಿಯನ್ನು ರೇಗಿಸಿದ.
" ನೋಡತ್ತೆ ಪುಟ್ಟಣ್ಣನ್ನಾ !" ರಾಗವೆಳೆದಳು ಪುಟ್ಟಿ.
" ಯಾಕೋ ಪುಟ್ಟಣ್ಣ ಅವಳ್ನ ಚುಡಾಯಿಸ್ತೀಯ ?" ಎಂದಳು ಅತ್ತೆ.
" ಯಾಕೋ ಪುಟ್ಟಣ್ಣ ಅವಳ್ನ ಚುಡಾಯಿಸ್ತೀಯ ?" ಎಂದಳು ಅತ್ತೆ.
" ನಾನು ಶಾಂತು ಮನೆಯಿಂದ ಬರೋವಾಗ ಇಷ್ಟೊಂದು ಬಾಗೇ ಕಾಯಿ ಆರಿಸ್ಕೊಂಡ್ ಬಂದಿದ್ದೀನಿ. ನಿಂಗೆ ಕೊಡಲ್ಲ ಹೋಗು!" ಪೊಟ್ಟಿ ಕರುಬಿದಳು .
" ಸಾರಿ ಪುಟ್ಟಿ! ಪ್ಲೀಸ್ ಪ್ಲೀಸ್ ! ಕೊಟ್ಬಿಡೆ ! ನಾಳೆ ರಾಮೂ ಬರ್ತಾನೆ. ಕಾರ್ಕ್ ಬಾಲ್ ಮಾಡ್ಬೇಕು. ಪ್ಲೀಸ್ ಕೊಡೆ." ಪುಸಲಾಯಿಸಿದ ಪುಟ್ಟಣ್ಣ .
" ನಾವೆಲ್ಲಾ ಬೆಳದಿಂಗಳೂಟ ಮಾಡ್ತಿದ್ದೀವಿ ! ಯಾರ್ಯಾರಿಗೆಲ್ಲ ಕೈ ತುತ್ತು ಬೇಕೋ, ಕೈ ತೊಳ್ಕೊಂಡ್ ಬನ್ನಿ !" ಅಜ್ಜಿ ಸೌಟಿನಿಂದ ಕಲಸಿದನ್ನದ ಗಂಗಾಳವನ್ನು ತಟ್ಟಿ ಡಂಗೂರ ಸಾರುತ್ತಾ ಮನೆಯಿಂದ ಹೊರ ಬಂದು ಮರಳ ಮೇಲೆ ಕುಳಿತಳು .
" ನಂಗೆ ತುತ್ತು ಇಲ್ವೇ ?" ಎನ್ನುತ್ತಾ ತಾತ ವರಾಂಡದಿಂದ ಬೆತ್ತದ ಕುರ್ಚಿ ತಂದು ಮರಳ ರಾಶಿಯ ಪಕ್ಕ ಹಾಕಿಕೊಂಡು ಕುಳಿತರು.
ಅದೇ ಸಮಯಕ್ಕೆ ತೋಟಕ್ಕೆ ಅಂಚು ಕಟ್ಟಿದ್ದ ತೆಂಗಿನ ಸಾಲುಗಳ ಮೇಲೇರಿ ಬಂದೇಬಿಟ್ಟ ಹುಣ್ಣಿಮೆಯ ಚಂದ್ರಮ .
" ಅಗೋ ಅಗೋ ! ಚಂದ ಮಾಮ ! ಒಳಗೆ ಮೊಲದ ಮರಿ !
ಮೊಲದ ಮರಿ ಮೊಲದ ಮರಿ ಆಡ ಬಾರೆ !
ಚಿಪಿಕಿ ಚಿಪಿಕಿ ಚಿಪಿಕಿ ಚಿಪಿಕಿ ನೆಗೆದು ಬಾರೆ !
ಗಿಡ್ಡ ಬಾಲ ದೊಡ್ಡ ಕಿವಿ ನಿನಗೆ ಚೆನ್ನ !
ಗಟ್ಟಿ ಹಾಲ ಬಿಳಿಯ ನೊರೆ ನಿನ್ನ ಬಣ್ಣ ! " ಎಂನ್ನುತ್ತ ಪುಟ್ಟಿ ಕುಣಿದಾಡಿದಳು .
" ಮೊಲದ ಮರಿ ಹೇಗೆ ಚಂದಮಾಮನಲ್ಲಿ ಸೇರ್ಕೊಳ್ತು ಗೊತ್ತೇ ?" ತಾತ ಕೇಳಿದರು.
" ಒಂದಾನೊಂದು ಕಾಲ್ದಲ್ಲಿ ಒಂದು ದಟ್ಟ ಕಾಡಲ್ಲಿ ಒಂದು ಮೊಲ ಇತ್ತು. ಒಂದು ಕೋತಿ,ಒಂದು ನರಿ ಮತ್ತು ಒಂದು ನೀರ್ನಾಯಿ ಮೊಲಕ್ಕೆ ಫ್ರೆಂಡ್ಸ್ ಆಗಿದ್ವು . ಸತ್ಯ, ಧರ್ಮ, ಪ್ರೇಮ , ಅಹಿಂಸೆ ಮುಂತಾದ ಸದ್ಗುಣಗಳನ್ನ ಪಾಲಿಸ್ತ ನಾಲ್ಕು ಪ್ರಾಣಿಗಳೂ ಹಾಯಾಗಿದ್ವು . ಒಂದು ಹುಣ್ಣಿಮೆಯ ದಿನ ಉಪವಾಸ ಮಾಡಿ , ಯಾರಿಗಾದ್ರೂ ತಮ್ಮ ಊಟದ ಒಂದ್ ಬಾಗಾನ ಬಿಕ್ಷೆ ಕೊಟ್ಟು ನಂತರ ತಾವು ತಿನ್ಬೇಕಂತ ತೀರ್ಮಾನಿಸಿದ್ವೂ .
ಸಂಜೆ ವೇಳೆಗೆ ಹಸಿವ್ನಿಂದ ದಣಿದು ಬಂದ ಒಬ್ಬ ಬಿಕ್ಷುಕ. ಕೋತಿ ಮರ ಹತ್ತಿ ಮಾವಿನ ಹಣ್ಣು ಕಿತ್ಕೊಡ್ತು . ನೀರ್ನಾಯಿ ನದಿಯಿಂದ ಮೀನು ಹಿಡ್ಕೊಂಬಂದ್ ಕೊಡ್ತು. ನರಿ ಕಾಡಂಚಿನ ಗುಡಿಸ್ಲಿಗೆ ನುಗ್ಗಿ, ಅಲ್ಲಿದ್ದ ಮೊಸರಿನ ಕುಡಿಕೆ ತಂದ್ಕೊಡ್ತು. ಮೊಲ ಯೋಚಿಸ್ತು. ತಾನು ತಿನ್ನೋದು ಹುಲ್ಲು. ಬಿಕ್ಷುಕ ಹೇಗೆ ಹುಲ್ಲು ತಿನ್ನ ಬಲ್ಲ ? ಫ್ರೆಂಡ್ಸ್ನ ಕರೆದು ಕಡ್ಡಿ ಕಸ ಗುಡ್ಡೆ ಮಾಡಿ ಬೆಂಕಿ ಮಾಡಕ್ಕೆ ಹೇಳ್ತು ಮೊಲ. "ಪೂಜ್ಯರೇ! ನೀವು ತುಂಬಾ ಹಸಿದಿದ್ದೀರಿ. ನಿಮಗೆ ಕೊಡೋನ್ತಾ ಊಟ ಯಾವ್ದೂ ನನ್ನ ಬಳಿ ಇಲ್ಲ. ಈಗ ನಾನು ಈ ಬೆಂಕಿಗೆ ಹಾರ್ತೀನಿ. ಬೆಂದ ಮೇಲೆ ನೀವು ನನ್ನ ಮಾಂಸ ತಿನ್ನಿ . " ಅಂತ ಹೇಳಿ ಚಂಗಂತ ಬೆಂಕಿಗೆ ಹಾರ್ಬಿಡ್ತು ಮೊಲ .... "
" ಅಯ್ಯೋ !" ಗಾಬರಿಯಾಗಿ ಚೀರಿದಳು ಪುಟ್ಟಿ .
" ಮಕ್ಕಳಿಗೆ ಇಂತಾ ಕತೆ ಹೇಳ್ತಾರೆಯೇ ? ಛೆ ! " ಎಂದು ರೇಗಿದಳು ಅಜ್ಜಿ .
" ಬುದ್ಧ ಜಾತಕ ಕಥೆ ಹೀಗಿದೆ. ಆಮೆಲೆ... "
" ಹೋಗು ತಾತ! ನಂಗೆ ಅಳು ಬರತ್ತೆ. ಬೇರೆ ಕಥೆ ಹೇಳು ." ಎಂದಳು ಪುಟ್ಟಿ.
"ಈ ಕಥೆ ಪೂರ್ತಿ ಕೇಳು ಮೊದ್ಲು ! ಬೆಂಕಿ ಮೊಲಾನ ಸುಡ್ಲೆ ಇಲ್ಲ ಗೊತ್ತಾ? ಬದಲಾಗಿ ಮೊಲಕ್ಕೆ ಅದು ತಂಪಾಗಿತ್ತು !"
ಪುಟ್ಟಿಯ ಕಣ್ಣುಗಳು ಕುತೂಹಲದಿಂದ ದೊಡ್ದದಾದವು .
"ಬಿಕ್ಷುಕನ ವೇಷದಲ್ಲಿ ಬಂದದ್ದು ಯಾರಂದ್ ಕೊಂಡೆ ? ಸಾಕ್ಷಾತ್ ಶಕ ದೇವರು ! ಅವರು ನಡೆಸ್ದ ಸತ್ವ ಪರೀಕ್ಷೇಲಿ ಮೊಲ ಗೆಲ್ತು. ಮೊಲದ ತ್ಯಾಗ ಮತ್ತು ದಾನ ಗುಣಗಳನ್ನ ಮೆಚ್ಚಿದ್ರು ಶಕದೇವರು . ಪ್ರಪಂಚಕ್ಕೆಲ್ಲ ಅದನ್ನು ಸಾರೋ ಹಾಗೆ ಹುಣ್ಣಿಮೆ ಚಂದ್ರನಲ್ಲಿ ಮೊಲದ ಬಿಂಬವನ್ನ ಅಚ್ಚಿಳಿಸಿದರು . ಆ ಮೊಲವೇ ನಂತರ ಗೌತಮ ಬುದ್ಧನಾಗಿ ಮತ್ತೆ ಹುಟ್ತಂತೆ . "
ಅಮ್ಮ ಪಾಪುವಿಗೆ ಕುಲಾವಿ ಹಾಕಿ, ಮೈತುಂಬ ಶಾಲು ಹೊದ್ದಿಸಿ ಹೊರಗೆ ಎತ್ತಿಕೊಂಡು ಬಂದಳು. ಪಾಪು ಎಲ್ಲರನ್ನು ನೋಡಿ ಕೇಕೆ ಹಾಕಿತು.
" ಪಾಪು ! ನಿನ್ಗೂ ಕೈ ತುತ್ತು ಬೇಕಾ ಕಂದಾ ?" ಎಂದು ಮುದ್ದಿಸಿದಳು ಅಜ್ಜಿ .
ಚಂದಕ್ಕಿ ಮಾಮಾ ಚಕ್ಕುಲಿ ಮಾಮಾ !
ಮುತ್ತಿನ ಕುಡಿಕೆ ಕೊಡು ಮಾಮಾ !
ಕಿತ್ತಳೆ ಕೊಡುವೆ ಬಾ ಕೆಳಗೆ ,
ಮುತ್ತನು ಕೊಡುವೆ ಬಾ ಬಳಿಗೆ !
ಪುಟ್ಟಿ ಪಾಪು ಆಡಲು ಬರುವರು,
ಪುಟ್ಟಣ್ಣ ಇರುವನು ನಿಂಜೊತೆಗೆ !
ಚಂದಕ್ಕಿ ಮಾಮಾ ಚಕ್ಕುಲಿ ಮಾಮಾ !
ಪಾಪುವಿಗೆ ಚಂದಮಾಮನನ್ನು ತೋರಿಸಿ ಅಜ್ಜಿ ಹಾಡಿದಳು. ಪಾಪು ಇನ್ನಷ್ಟು ನಕ್ಕಿತು.
ಕೈ ತುತ್ತು ತಿಂದು ಆಯಾಸದಿಂದ ಅತ್ತೆಯ ತೊಡೆಯ ಮೇಲೆ ಮಲಗಿಬಿಟ್ಟಳು ಪುಟ್ಟಿ .
ಪುಟ್ಟಿ ಪಾಪುವಿನಂತೆ ಇದ್ದಾಗ ತಾನು ಅವಳಿಗಾಗಿ ಹೇಳುತ್ತಿದ್ದ ಹಾಡನ್ನು ಮೆಲು ದನಿಯಲ್ಲಿ ಹಾಡತೊಡಗಿದಳು ಅತ್ತೆ .ಪುಟ್ಟಿ ಮೆಲ್ಲ ಮೆಲ್ಲನೆ ಕನಸಿನ ಲೋಕಕ್ಕೆ ಜಾರಿದಳು . ಚಂದ ಮಾಮ ತೋರಿದ ತಾರೆಗಳ ತೋಟದಲ್ಲಿ ಆಡ ತೊಡಗಿದಳು !
ಮುಂಬರುವ ಕಾಲದಲ್ಲಿ ಚಂದದ ಚಂದ್ರಮನಲ್ಲಿ ಕಾಲಿಡಲು ನೀಲ್ ಆರ್ಮ್ಸ್ಟ್ರಾಂಗ್ ಎಂಬ ಒಬ್ಬ ಆಕಾಶಗಾಮಿ ತಯಾರಾಗುತ್ತಿದ್ದ. ಚಂದ್ರನ ರಹಸ್ಯಗಳನ್ನೆಲ್ಲ ಬಯಲು ಮಾಡಲಿದ್ದ . ಆದರೂ ಚಂದ ಮಾಮನ ಚೆಲುವಿಗೆ ಮನ ಸೋತ ಕವಿಗಳು ಹೊಸ ಹೊಸ ಹಾಡುಗಳನ್ನು
ಹಾಡುತ್ತಲೇ ಇರುವರು! ಪುಟಾಣಿಗಳು ಚಂದಮಾಮನ ಕಥೆಗಳನ್ನು ಕೇಳುತ್ತ, ಚಂದಕ್ಕಿ ಮಾಮನ ಹಾಡುಗಳನ್ನ ಹಾಡುತ್ತ ಬೆಳದಿಂಗಳೂಟ ಮಾಡುತ್ತಲೇ ಇರುವರು!
No comments:
Post a Comment