'
ಹೂಂ !ಹೂಂ ' ಎಂದು ಹೂಂಕರಿಸುತ್ತ ಅವಲಕ್ಕಿ ಕುಟ್ಟುತ್ತಿದ್ದರು ಗೌರಮ್ಮ . ಒನಕೆಯ
'ಧಕ್ ಧಕ್' ಶಬ್ದಕ್ಕೆ ಅವರ ಬಳೆಗಳು 'ಘಲ್ ಘಲ್' ಎಂದು ತಾಳ ಹಾಕಿದವು .
"ಗೌರಮ್ಮ ! ನಾನೂ ಕುಟ್ತೀನಿ !" ಎನ್ನುತ್ತ ಪುಟ್ಟಿ ಒನಕೆ ಹಿಡಿದಳು .
" ಬೇಡ ಪುಟ್ಟಮ್ಮ !ತುಂಬಾ ಭಾರ ! ನಿನ್ ಕೈಯಲ್ಲಾಗಲ್ಲ !" ಎಂದರು ಗೌರಮ್ಮ .
ಪುಟ್ಟಿ ಉಸಿರು ಕಟ್ಟಿ 'ದಂ' ಹಿಡಿದು ಪ್ರಯತ್ನಿಸಿದರೂ ಒರಳಿನ ಗುಳಿಯಲ್ಲಿದ್ದ ಒನಕೆ ಎಳ್ಳಷ್ಟೂ ಕದಲಲಿಲ್ಲ .
"
ಪುಟ್ಟಿ! ಗೌರಮ್ಮನ್ಯಾಕೆ ಗೊಳ್ ಹುಯಿಕೊತ್ತಿದ್ದೀಯ ? ಬಾ ಈಕಡೆ . " ಬಟ್ಟೆಯಲ್ಲಿ
ಸುತ್ತಿಕೊಂಡು ಬಂದ ಬ್ರೌನಿಯನ್ನು ಕೆಳಗಿಳಿಸಿ, ಪುಟ್ಟಿಯನ್ನು ಗದರಿದಳು ಸರಸು ಅತ್ತೆ
.
" ಪುಟ್ಟಮ್ಮ ಅವಲಕ್ಕಿ ಕುಟ್ಬೇಕಂತೆ ನೋಡಮ್ಮ !" ಎಂದರು ಗೌರಮ್ಮ.
" ಅಯ್ಯಯ್ಯಪ್ಪ ! ಆಗಲ್ಲಪ್ಪ! ಅದಕ್ಕೆ ಮತ್ತೆ 'ಹೂಂ ಹೂಂ' ಅಂತ ಕುಟ್ತೀರಾ ?" ಎಂದ ಪುಟ್ಟಿ, ಒನಕೆ ಬಿಟ್ಟು ಅತ್ತೆಯ ಬಳಿ ಓಡಿ ಬಂದಳು.
" ಹೇ ! ಬ್ರೌನಿ !ನೀರ್ಹಾಕೊಂಡ್ಯ ?"ಬ್ರೌನಿ ಮೈ ಒದರಿದಾಗ ಪುಟ್ಟಿಯ ಮೇಲೆ ನೀರ ಹನಿಗಳು ಹಾರಿದವು .
'' ಶೀ ಶೀ ಶೀ !" ಎಂದು ಪುಟ್ಟಿ ನಕ್ಕಳು.
ಸರಸು ಅತ್ತೆ ಬ್ರೌನಿಯನ್ನು ಬಟ್ಟೆಯಿಂದ ಚೆನ್ನಾಗಿ ಒರೆಸಿದಳು. ಬ್ರಷ್ ಮಾಡಿದಳು . ಪೌಡರ್ ಮೆತ್ತಿದಳು .
" ಅತ್ತೆ ! ಅಮ್ಮ ಪಾಪುಗೆ ಮಾಡೋ ಹಾಗೇ ನೀನೂ ಬ್ರೌನಿಗೆ ಮಾಡ್ತಿಯಲ್ಲ! "
" ಹೂಂ ಪುಟ್ಟಿ ! ಪಾಪು ಹಾಗೆ ಇದೂ ಮರಿ ಅಲ್ವೇ ? "ಎನ್ನುತ್ತಾ ಅದರ ಹಣೆಯಲ್ಲಿ ಸಾದಿನ ನಾಮ ಹಚ್ಚಿದಳು ಅತ್ತೆ .
"
ಅತ್ತೆ ! ನಾನು ಸ್ಕೂಲಿಂದ ಬರೋವಾಗ ಬ್ಯಾಗ್ ತುಂಬಾ ಪಾದ್ರಿ ಹೂ ಆರಿಸ್ಕೊಂಡ್
ಬಂದಿದ್ದೀನಿ . ಅದನ್ನ ಕಟ್ಟಿ ಬ್ರೌನಿಗೆ ಹಾಕೋಣ. ಚೆನ್ನಾಗ್ ಕಾಣ್ಸತ್ತೆ !" ಕಿಲ ಕಿಲ
ನಕ್ಕಳು ಪುಟ್ಟಿ .
" ಸ್ಕೂಲಿಂದ ಬರೋವಾಗ ರಸ್ತೇಲ್ ಹೋಗೋ ಬೆಕ್ಕಿನ್ಮರಿ ಹಿಡಿಯಕ್ಹೋಗಿದ್ಯಾ ?"
"
ರಾಣಿ ಹೇಳಿದ್ಲಾ ? ಚಾಡಿ ಕೋಳಿ ! ಚಪ್ರದ್ ಕೋಳಿ ! " ಎಂದು ಗೊಣಗಿದಳು ಪುಟ್ಟಿ.
''ನಾನು ಪಾಸಾ ಫೈಲಾ ನೋಡಕ್ಕೆ ಮರದಿಂದ ಉದುರೋ ಪಾದ್ರಿ ಹೂ ಕ್ಯಾಚ್ ಮಾಡ್ತಿದ್ದೆ .ಮರದ್
ಕೆಳಗೆ ಬೆಕ್ಕಿನ್ಮರಿ ಇತ್ತು. ಹತ್ರ ಹೋದಾಗ ಓಡ್ಬಿಡ್ತು . "
" ಪ್ರಾಣಿಗ್ಳಿಂದ ನಮಗೆ ಖಾಯಿಲೆ ಬರತ್ತೆ ಪುಟ್ಟಿ . ಅವನ್ನ ಮುಟ್ಟಬಾರದು."
" ಮತ್ತೆ ಬ್ರೌನಿ ?" ಪುಟ್ಟಿ ಆಶ್ಚರ್ಯದಿಂದ ಕೇಳಿದಳು .
"
ಬ್ರೌನಿ ಹೇಮಾ ಮನೆ ನಾಯಿ ಮರಿ . ಅದಕ್ಕೂ ಅದರ ತಾಯಿಗೂ ಪಶುವೈದ್ಯಶಾಲೆ ಡಾಕ್ಟರು
ಚುಚ್ಚು ಮದ್ದು ಹಾಕಿದ್ದಾರೆ. ಅದಕ್ಕೆ ರೋಗ ಬರಲ್ಲ. ಅದ್ರಿಂದ ನಮ್ಗೂ ರೋಗ ಅಂಟಲ್ಲ ."
" ಅಯ್ಯೋ ! ನಾಯಿನ ದೂರ ಕರೀರಮ್ಮ ! ಒರಳು ನೆಕ್ಬಿಟ್ಟೀತು !"
ಗೌರಮ್ಮನ ಕೂಗು ಕೇಳಿ ಸರಸು ಅತ್ತೆ ಥಾಟ್ ಅಂತ ಹೋಗಿ ಬ್ರೌನಿಯನ್ನು ಎತ್ತಿಕೊಂಡಳು.
"ಡೊಂಕು ಬಾಲದ ನಾಯಕರೆ !
ನೀವೇನೇನೂಟ ಮಾಡುವಿರಿ?
ಒನಕೆ ಕುಟ್ಟುವ ಮನೆಗೆ ಹೋಗಿ
ಇಣುಕಿ ಇಣುಕಿ ನೋಡುವಿರಿ?"
ಅತ್ತೆ ಹಾಡುತ್ತ ಬ್ರೌನಿಯನ್ನು ಮುದ್ದಿಸಿದಳು .
" ನಾಯಿ ಮರಿ! ನಾಯಿ ಮರಿ ತಿಂಡಿ ಬೇಕೇ ?" ಹಾಡುತ್ತ ಒಳಗಿಂದ ಬಿಸ್ಕೊತ್ತು ತಂದು ತಿನ್ನಿಸಿದಳು .
" ತಿಂಡಿ ಬೇಕು !ತೀರ್ತ ಬೇಕು !ಎಲ್ಲ ಬೇಕು !" ಪುಟ್ಟಿ ಕೀರಲು ದನಿಯಲ್ಲಿ ನಾಯಿ ಮರಿಯಾಗಿ ಉತ್ತರಿಸಿದಳು .
" ನಾಯಿ ಮರಿ !ನಾಯಿ ಮರಿ! ತಿಂಡಿ ನಿನಗೆ ಏಕೆ ಬೇಕು ?" ಅತ್ತೆ ಕೇಳಿದಳು .
" ತಿಂದು ಗಟ್ಟಿಯಾಗಿ ಮನೆಯ ಕಾಯ ಬೇಕು!" ಪುಟ್ಟಿ ಎದೆಯುಬ್ಬಿಸಿ ಜಂಬದಿಂದ ಹಾಡಿದಳು.
"ನಾಯಿ ಮರಿ!ನಾಯಿ ಮರಿ! ಕಳ್ಳ ಬಂದರೇನು ಮಾಡುವೆ?" ಅತ್ತೆ ಹೆದರಿದಂತೆ ನಟನೆ ಮಾಡಿದಳು .
" ಲೊಳ್!ಲೊಳ್! ಬೌ !ಬೌ ! ಎಂದು ಕೂಗಿಯಾಡುವೆ !" ಪುಟ್ಟಿ ತನ್ನ ಕೈಯನ್ನು ಬಾಲದಂತೆ ಆಡಿಸಿ ಕುಣಿದಾಡಿದಳು.
ಬ್ರೌನಿ ಪುಟ್ಟಿಯ ಕುಣಿತ ಕಂಡು ತಾನೂ 'ಲೊಳ್ ಲೊಳ್' ಎಂದಿತು.ಪುಟ್ಟಿ 'ಬೌ ಬೌ' ಎಂದಳು ! ಬ್ರೌನಿ ಅತ್ತೆಯ ಕೈಲಿದ್ದ ಬಟ್ಟೆ ಕಚ್ಚಿ ಎಳೆದಾಡಿತು !
ಅತ್ತೆ ಕಿಲ ಕಿಲ ನಕ್ಕಳು .
ಇವರುಗಳ ರಂಪಾಟ ನೋಡಿ ಗೌರಮ್ಮ ಕಿಸಿ ಕಿಸಿ ನಕ್ಕರು.
No comments:
Post a Comment