Sunday, December 22, 2013

ಕ್ರಿಸ್ಮಸ್ ಹಬ್ಬದ ಶುಭಾಶಯಗಳು.





  



ಕ್ರಿಸ್ಮಸ್ ಹಬ್ಬದ ಶುಭಾಶಯಗಳು.  





  ಚಳಿ ಚಳಿ ರಾತ್ರಿಯಲ್ಲಿ ಕಾರ್ಗತ್ತಲಲ್ಲಿ 
  ಜನಿಸಿತು ಶಿಶು ಒಂದು ಬೆಟ್ಲೆಹೇಮ್ ನಗರಿಯಲಿ.  

ಈ  ಶುಭ ಸಂದೇಶವ ಹೊತ್ತ  ದೇವದೂತರು 
 ಹಾಡಿ  ಸಾರಿದರು ವಿಶ್ವದ ಮೂಲೆಮೂಲೆಗು. 
  
ಆನಂದ ಕಂದನ ಕಂಡ ಗೊಲ್ಲರು  
ಸುರಿಸಿ ನಿಂತರು  ಆನಂದ ಬಾಷ್ಪವ.   

ಮೂಡಲ ಮಹಾರಾಜರು ಶಿಶುವ ವಂದಿಸಿ  ,  
ಸಮರ್ಪಿಸಿಕೊಂಡರು ಬಂಗಾರದುಡುಗೊರೆಯ .  
  
ವಿಶ್ವ ಶಾಂತಿಯ ಬಯಸಿ ಎಲ್ಲರೂ  
ಪ್ರಾರ್ತಿಸುವ ಬನ್ನಿರೀ  ಆ ದಿವ್ಯ ಮೂರ್ತಿಯ. 




ರೂಪಾಳ ಮನೆಯಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ.  ಏಸುವಿನ ಜನನದ ಬಗ್ಗೆ ವಿಜಯ್ ಮತ್ತು ಕ್ಳಾರಿ ಹಾಡಿದ ಹಾಡಿಗೆ ಪುಟ್ಟಿ ಆನಂದಿಂದ ತಲೆ ತೂಗುತ್ತಿದ್ದಳು. 

" ಪುಟ್ಟಿ ತಗೋ ಕೇಕ್ ತಿನ್ನು." ಎನ್ನುತ್ತ ರೂಪಾ  ತಿಂಡಿ ತಟ್ಟೆಯನ್ನು ತಂದು ಕೊಟ್ಟಳು. ತಟ್ಟೆಯಲ್ಲಿ ಕೇಕ್ ಮಾತ್ರವಲ್ಲದೆ ಇನ್ನೂ ಅನೇಕ ಬಕ್ಷ್ಯಗಳಿದ್ದವು. ಒಂದೊಂದೇ ಸವಿಯುತ್ತ ಪುಟ್ಟಿ ರೂಪಾಳ ಮನೆಯ ಕ್ರಿಸ್ಮಸ್ ಅಲಂಕಾರಗಳನ್ನು ಬೆರಗಿನಿಂದ ನೋಡಿದಳು. 

ಸಾಲು ದೀಪಗಳ ಅಲಂಕಾರ ತೋರಣಗಳು. 
ಸುವಾಸನೆ ಸೂಸಿದ  ಮೋಂಬತ್ತಿಗಳು. 



ಮಿರಿಮಿರಿ ಹೊಳೆದ ಕ್ರಿಸ್ಮಸ್ ಮರ. 



ಏಸುವಿನ ಜನನದ ದೃಶ್ಯವನ್ನ ಚಿತ್ರಿಸುತ್ತಿದ್ದ  ಬೊಂಬೆಗಳು. 
ಒಣ ಹುಲ್ಲಿನ ಹಾಸಿನ ಮೇಲೆ ಬುಟ್ಟಿಯಲ್ಲಿ ಮಲಗಿದ್ದ ಕ್ರಿಸ್ಮಸ್ ಪಾಪಾ . 


" ಪುಟ್ಟಿ! ನೀನು ತುಂಬಾ ಚೆನ್ನಾಗ್ ಹಾಡ್ತಿಯಂತೆ ! ಒಂದು ಒಳ್ಳೆ ಹಾಡು ಹೇಳು ನಮ್ಮ ಕ್ರಿಸ್ಮಸ್ ಪಾಪಾಗೆ !" ಎಂದಳು ರೂಪಾಳ ತಾಯಿ.  

ಪುಟ್ಟಿ ಮಿಕ ಮಿಕ ಕಣ್ಣು ಬಿಟ್ಟಳು. 

" ನಂಗೆ ಕ್ರಿಸ್ಮಸ್ ಪಾಪಾ ಹಾಡು ಗೊತ್ತಿಲ್ಲ. ಆದ್ರೆ ಕ್ರಿಸ್ಮಸ್ ತಾತಾ  ಹಾಡು ಹೇಳಲೇ ?" ಪುಟ್ಟಿ ಸಂಕೋಚದಿಂದ ಕೇಳಿದಳು . 

" ಓ ಹೇಳು !" 

ಪುಟ್ಟಿ ತಿಂಡಿ ತಟ್ಟೆ ಕೆಳಗಿಟ್ಟಳು . 

" ರೂಪಾ  , ನೀನೂ ನಂಜೊತೆ ಹಾಡ್ತೀಯಾ ?"

" ಯಾವ ಹಾಡು ಪುಟ್ಟಿ ?" 

ಪುಟ್ಟಿ ರೂಪಾಳ ಕಿವಿಯ ಬಳಿ ಬಾಗಿ ಪಿಸುಗುಟ್ಟಿದಳು.  

ಹಿಮ ರಾಶಿಯ ಜಾರುತ್ತ, ಕಾಡು ಬಯಲನು ಹಾಯುತ್ತ,
ಹರುಷವ ಹರಡುತ್ತಾ, ಸಂತೋಷವ ತುಂಬುತ್ತಾ,
ಜಿಂಗಲ್ ಬೆಲ್  ಜಿಂಗಲ್ ಬೆಲ್  ಗಂಟೆಯ ಬಾರಿಸುತ,
ಜಾರುಬಂಡಿಯನ್ನೇರಿ ಬಂದ ಕ್ರಿಸ್ಮಸ್ ತಾತಾ  ! ಹೇಯ್  !
ಜಿಂಗಲ್ ಬೆಲ್ ಜಿಂಗಲ್ ಬೆಲ್ ಗಂಟೆಯ ಬಾರಿಸುತ !
ಒಂಟಿ ಕುದುರೆ ಬಂಡಿಯನ್ನೇರಿ  ಬಂದ ಕ್ರಿಸ್ಮಸ್ ತಾತಾ !
ಹೇಯ್ ! ಜಿಂಗಲ್ ಬೆಲ್ ಜಿಂಗಲ್ ಬೆಲ್ ಗಂಟೆಯ ಬಾರಿಸಿತ !

ಪುಟ್ಟಿ ರೂಪಾ  ಇಬ್ಬರೂ ಹಾಡಿದಾಗ  ಕೂಡಿದ್ದ ಸ್ನೇಹಿತರೆಲ್ಲ ಚಪ್ಪಾಳೆ ತಟ್ಟುತ್ತ ತಾವೂ ಅವರೊಡನೆ ಸೇರಿ ಹಾಡಿ ಕುಣಿದರು. 

" ತುಂಬಾ ಚೆನ್ನಾಗ್ ಹೇಳ್ದೆ ಪುಟ್ಟಿ . ನೋಡು, ಕ್ರಿಸ್ಮಸ್ ತಾತಾ  ಕ್ರಿಸ್ಮಸ್ ಮರದ ಕೆಳಗೆ ನಿನ್ನ ಹೆಸರಿಗೆ  ಒಂದ್ ಗಿಫ್ಟ್ ಇಟ್ಟಿದ್ದಾನೆ !" ಎನ್ನುತ್ತಾ ಪುಟ್ಟಿ ಕೈಗೆ ಒಂದು ಪೊಟ್ಟಣವನ್ನು ಕೊಟ್ಟರು ರೂಪಾಳ ತಂದೆ. 



ಪುಟ್ಟಿ ಜರತಾರಿಯಲ್ಲಿ ಸುತ್ತಿದ್ದ ಆ ಪೊಟ್ಟಣವನ್ನು ಬಹಳ ಸಂತೋಷದಿಂದ ಎದೆಗವಚಿಕೊಂಡಳು. 

No comments:

Post a Comment