ಸೂಜಿ ಸುಬ್ಬ ರಾಯನ ಕಥೆ
" ಅಜ್ಜಿ! ಅಜ್ಜಿ ! ಬತ್ತದ ರೂಮಲ್ಲಿ ಈ ಪುಸ್ತಕ ಸಿಕ್ತು ! " ಪುಟ್ಟಿ ಉತ್ಸಾಹದಿಂದ ಕೂಗುತ್ತ ಓಡಿ ಬಂದಳು .
" ಅಯ್ಯೋ ! ಅಲ್ಲೆಲ್ಲ ಬರಿ ಧೂಳು ! ನೀನ್ಯಾಕೆ ಅಲ್ಲಿಗ್ ಹೋಗಿದ್ದೆ ?"
" ತಾತ ಅಲ್ಲಿ ಕ್ಲೀನ್ ಮಾಡಿಸ್ತಿದ್ರು ಅಜ್ಜಿ. ನಾನು ಅಟ್ಟ ಹತ್ತ್ತಿ ನಿನ್ ಹಳೇ ಟ್ರಂಕ್ನ ಕೆದಕ್ತಿದ್ದಾಗ ಈ ಪುಸ್ತಕಾ ಸಿಕ್ತು ! ತಗೊಂಡ್ಬಂದೆ ! ಎಷ್ಟ್ ಚೆನ್ನಾಗಿದೆ ನೋಡಜ್ಜಿ ಕಥೆ ಪುಸ್ತಕ !" ಪುಟ್ಟಿ ಆ ಹಳೇ ಪುಸ್ತಕದ ಹಾಳೆಗಳನ್ನು ತಿರುವಿ ಹಾಕುತ್ತ ಹೇಳಿದಳು .
" ಆ ಪುಸ್ತ್ಕ ಬರೆದು ಚಿತ್ರಗಳ್ನೂ ಬಿಡ್ಸಿ ಬೈಂಡ್ ಮಾಡಿದ್ದು ಯಾರು ಅಂದ್ಕೊಂಡೆ ? ಎಲ್ಲ ನಿಮ್ಮಜ್ಜಿನೇ !" ಎನ್ನುತ್ತಾ ಪ್ರತ್ಯಕ್ಷರಾದರು ತಾತ .
" ಹೌದಾ ಅಜ್ಜಿ?" ಪುಟ್ಟಿ ಆಶ್ಚರ್ಯದಿಂದ ಕೇಳಿದಳು .
" ಹೌದು ಪುಟ್ಟಿ. ನಾನು ಚಿಕ್ಕವಳಿದ್ದಾಗ ನನ್ ಮೆಡ್ರಾಸ್ ತಾತ ತುಂಬಾ ಕಥೆಗಳ್ನ ಹೇಳ್ತಿದ್ರು. 'ಊಸಿ ಪುಳ್ಳೆ ನಾಚಿಯಾರ್'- ಅಂದ್ರೆ 'ಸೂಜಿ ಸುಬ್ಬ ರಾಯ' ಅನ್ನೋ ಕಥೆ ನನ್ಗೆ ತುಂಬಾ ಇಷ್ಟ ಆಗಿತ್ತು . ನಿಮ್ಮಪ್ಪ ಚಿಕ್ಕಪ್ಪ ಸರಸು ಎಲ್ರೂ ಮಕ್ಳಾಗಿದ್ದಾಗ ಅವ್ರಿಗೆಲ್ಲ ಈ ಕಥೆ ಹೇಳಿ, ಪುಸ್ತ್ಕಾನೂ ತಯಾರ್ ಮಾಡ್ಕೊಟ್ಟಿದ್ದೇ ."
" ನನ್ಗೂ ಈ ಕಥೆ ಓದಿ ಹೇಳಜ್ಜಿ !" ಪುಟ್ಟಿ ಬಹಳ ಆಸಕ್ತಳಾಗಿ ಅಜ್ಜಿಯ ಬಳಿ ಕುಳಿತಳು.
" ನಾನೂ ಈ ಕಥೆ ಕೇಳಿ ಬಾಳ ದಿವ್ಸ ಆಯ್ತು . " ಎನ್ನುತ್ತಾ ತಾತ ಕೂಡ ಅಲ್ಲೇ ಕುಳಿತರು .
ಅಜ್ಜಿ ಕಥೆ ಓದಲು ಪ್ರಾರಂಭ ಮಾಡಿದಳು .
೧
ಹಿಂದಿನ ಕಾಲದ ಮಾತಣ್ಣಾ
ಸಣಕಲ ಹುಡುಗನ ಕಥೆಯಣ್ಣ !
ಸಣಕಲ ಕಡ್ಡಿ ಸುಬ್ಬಣ್ಣಾ ,
ಸಕಲರಿಗೂ ಆವ ಮುದ್ದಣ್ಣಾ !
ಸೂಜಿ ಗಾತ್ರದ ಒಡಲಣ್ಣಾ
ಅವನೇ ಸೂಜಿ ಸುಬ್ಬ ರಾಯನಣ್ಣ !
೨
ಹಾಡಲು ಕುಣಿಯಲು ಆಡಲು ಇಷ್ಟ ,
ಸೂಜಿಗೆ ಸುಮ್ಮನೆ ಕೂರಲು ಕಷ್ಟ !
ತುಂಟ ಸುಬ್ಬ ರಾಯನು ಮಾತಿನ ಮಲ್ಲ,
ಅಂಜಿಕೆ ಹೆದರಿಕೆ ಎಳ್ಳಷ್ಟೂ ಇಲ್ಲ !
೩
ಕಾಡಾಚೆಯಲ್ಲೊಂದು ಹಳ್ಳಿ ,
ಅಜ್ಜಿಯ ವಾಸವು ಅದರಲ್ಲಿ !
ಅಜ್ಜಿಯ ಪ್ರೀತಿಯ ನೆನಪಿನಲ್ಲಿ,
ಸೂಜಿ ಸುಬ್ಬ ಹೊರಟನು ಮುಂಜಾವಿನಲಿ!
೪
ಜಿಗಿಯುತ ನೆಗೆಯುತ ಉತ್ಸಾಹದಲ್ಲಿ ,
ಸೂಜಿ ಸುಬ್ಬ ನಡೆದನು ಕಾಡಿನಲ್ಲಿ !
ಥಟ್ಟನೆ ಎರಗಿದ ಹುಲಿಯೊಂದು ,
ಗರ್ಜಿಸಿ ಕೇಳಿತು ಸಂದೇಹಗೊಂಡು !
"ಯಾರದು ಕಾಡಲ್ಲಿ ನಡೆದಿರುವೇ ?
ನಾ ನಿನ್ನ ಕೂಡಲೇ ನುಂಗಿಬಿಡುವೆ !''
" ಗರ್ರ್ !"
" ಅಯ್ಯೋ! " ಕಥೆಯಲ್ಲಿ ತಲ್ಲೀನಳಾಗಿದ್ದ ಪುಟ್ಟಿ, ಹಿಂದಿನಿಂದ ಕೇಳಿಸಿದ ಗರ್ಜನೆಯಿಂದ ಬೆಚ್ಚಿ ಕಿಟಾರನೆ ಕಿರುಚಿದಳು.
" ಪುಟ್ಟಣ್ಣ ! ಹಾಗೆಲ್ಲಾ ಹೆದರಿಸ್ಬಾರ್ದು ಕಣೋ ಮಗೂನ ! " ಎನ್ನುತ್ತ ಪುಟ್ಟಣ್ಣನ ಕಿವಿ ಹಿಂಡಿದರು ತಾತ. ಸದ್ದಿಲ್ಲದೇ ಪುಟ್ಟಿಯ ಹಿಂದೆ ಕಥೆ ಕೇಳುತ್ತ ಕುಳಿತಿದ್ದು, ಪುಟ್ಟಿಯನ್ನು ಬೆದರಿಸಿದ್ದ ಆವ.
" ಅಯ್ಯೋ ! ಸುಮ್ನಿರೋ ಅಣ್ಣಾ ! ಆಮೇಲೇನಾಯ್ತು ಅಜ್ಜಿ? ಸೂಜಿ ಸುಬ್ಬ ಎನ್ ಮಾಡ್ದಾ ?" ಪುಟ್ಟಿ ಅಜ್ಜಿಯ ಮಡಿಲಲ್ಲಿ ಮೊಳಕೈಗಳನ್ನು ಊರಿಕೊಂಡು ಕಾತರದಿಂದ ಕೇಳಿದಳು .
" ಸೂಜಿ ಸುಬ್ಬ ನಿನ್ಹಾಗೆ ಹೆದರ್ಪುಕ್ಳು ಅಂದ್ಕೊಂಡ್ಯಾ ?" ಎಂದು ಕೆಣಕಲು ಎತ್ನಿಸಿದ ಪುಟ್ಟಣ್ಣ . ಅವನನ್ನು ಲೆಕ್ಕಿಸದೆ ಅಜ್ಜಿಯನ್ನು ಕುರಿತು "ಮ್ , ಆಮೇಲ?" ಎಂದಳು ಪುಟ್ಟಿ .
೫
ಹೆದರದೆ ಬೆದರದೆ ಉತ್ತರಿಸಿದ
ಕಿರುನಗೆ ಬೀರಿದ ಸೂಜಿ ಸುಬ್ಬ !
"ಹುಲಿಯಣ್ಣ ಕೇಳಣ್ಣ,
ಸೂಜಿ ಸುಬ್ಬ ರಾಯ ನಾನಣ್ಣ .
ಸವಿಯಲು ತವಕಿಸಿ ಹೊರಟಿಹೆ ನಾ ,
ಅಜ್ಜಿಯ ಕೈ ಸವಿಯೂಟವನ್ನ!
ಕೇಸರಿ ಬಾತು ಪೊಂಗಲ್ ವಡೆ
ತಿಂದು ಕೊಬ್ಬಿ ನಾ ಹಿಂದಿರುಗುವೆ !
ಈ 'ಸೂಜಿ' ನೀನೀಗ ನುಂಗಿದರೆ,
ಗಂಟಲಿಗೆ ಚುಚ್ಚಿಕೊಂಡು ಬಲು ತೊಂದರೆ!"
" ಸಾಕು ಪುಟ್ಟಿ . ಹೋಮ್ ವರ್ಕ್ ಮಾಡಿ ಊಟ ಮಾಡು . " ಅಮ್ಮ ಕರೆದಳು .
" ಇರಮ್ಮಾ ! ಅಜ್ಜಿ ! ಇನೊಂದೇ ಒಂದು ಪೇಜ್ ಓದೋಣ ... "
" ಸಾಕು ಪುಟ್ಟಿ . ತಾತನ್ಗೆ ಪಲ್ಹಾರ ಕೊಡ್ಬೇಕು . ನಾಳೆ ಓದೋಣ. ಈಗ
ಸಸೇಷ !" ಎನ್ನುತ್ತಾ ಎದ್ದಳು ಅಜ್ಜಿ .
ಪುಟ್ಟಿ ಮನಸ್ಸಿಲ್ಲದೆ ಎದ್ದಳು .
ಅಂದು ರಾತ್ರಿ ಸೂಜಿ ಸುಬ್ಬ ರಾಯನ ಕಥೆ ಪುಸ್ತಕವನ್ನು ದಿಂಬಿನ ಕೆಳಗಿಟ್ಟು ಮಲಗಿದಳು ಪುಟ್ಟಿ. ಸೂಜಿ ಸುಬ್ಬ ರಾಯನ ಕಥೆ ಬಣ್ಣದ ಸಿನೆಮಾ ಹಾಗೆ ಕನಸಲ್ಲಿ ಚಲಿಸ ತೊಡಗಿತು !