ಸೂಜಿ ಸುಬ್ಬ ರಾಯನ ಕಥೆ
ನೆಂಟರು ಊಟ ಮಾಡಿ ಹೊರಟು ಹೋದರು .
" ಅಜ್ಜಿ ಕಥೆ !" ಎನ್ನುತ್ತ ಅಜ್ಜಿಯ ಬಳಿ ಓಡಿ ಬಂದಳು ಪುಟ್ಟಿ .
" ಇರು ಪುಟ್ಟಿ ! ಅಮ್ಮ ಪಾಪುನ ಮಲ್ಗ್ಸಕ್ಕೆ ಹೋದ್ಳು. ಪಾತ್ರೆ ಎಲ್ಲ ಹಾಗೇ ಬಿದ್ದಿದೆ . ಎಲ್ಲ ತೆಗ್ದಿಟ್ಟು ಬರ್ತೀನಿ ."
" ಆಮೇಲ್ ಮಾಡು ಅಜ್ಜಿ . ಮೊದ್ಲು ಕಥೆ !'' ಪುಟ್ಟಿ ಹಠದಿಂದ ಅಜ್ಜಿಯ ಸೆರಗನ್ನು ಗಟ್ಟಿಯಾಗಿ ಹಿಡಿದು ನಿಂತಳು.
" ಸರಿ ಸರಿ ! ನೀನು ಕಥೆ ಮುಂದ್ವರ್ಸು ! ನಾನು ಎಲ್ಲ ತೆಗ್ದಿಡ್ತೀನಿ ! ಪುಟ್ಟಣ್ಣ !ಬಾರೋ ! ನನ್ಗೆ ಸಹಾಯ ಮಾಡು ." ಎಂದು ನಗುತ್ತ ನುಡಿದರು ತಾತ.
" ನಾನೂ ಕಥೆ ಕೇಳ್ಬೇ ಕು ತಾತ !" ಎಂದ ಪುಟ್ಟಣ್ಣ .
" ನಾನೂ ಕೂಡ ಕೇಳ್ಬೇಕೋ ! ಅಜ್ಜಿ ಊಟದ್ ಮನೇಲಿ ಕೂತು ಓದ್ತಾಳೆ . ನಾವು ಕಥೆ ಕೇಳ್ತಾ ಕೇಳ್ತಾ ಕೆಲ್ಸ ಮಾಡೋಣ ."
ಅಜ್ಜಿ ನಗುತ್ತ ಪುಸ್ತಕ ಹಿಡಿದು ಕುಳಿತಳು . ಪುಟ್ಟಿ ಅವಳಿಗಂಟಿಕೊಂಡು ಕೂತಳು .
೧೬
ಒಣ ಸೋರೆ ಕಾಯನ್ನು ಕತ್ತರಿಸಿ ,
ಸೂಜಿ ಸುಬ್ಬ ರಾಯನನ್ನು ಒಳಗಿರಿಸಿ ,
ಅಜ್ಜಿಯು ಕಾಯನ್ನು ಮುಚ್ಚಿದಳು,
ಕಾಡು ಮಾರ್ಗದಲ್ಲಿ ಉರುಳಿಸಿದಳು !
೧೭
ಉರುಳುತ ಉರುಳುತ ಸೋರೆ ಕಾಯಿ,
ಪೋದೆಗಳ ಪಕ್ಕ ಬಂತು ಹುಷಾರಾಗಿ .
" ಯಾರದು ಪೋದೆಯೊಳು ಉರುಳುತ್ತಿರುವೆ ?"
ಜಿಗಿಯಿತು ಕರಡಿಯು ಪ್ರಶ್ನಿಸುತ್ತಲೇ !
" ನಾನೇ ನಾನೇ ! ಸೋರೆ ಸುಬ್ಬ ರಾಯನು!"
ಒಳಗಿನಿಂದ ಸೂಜಿ ಸುಬ್ಬ ಉತ್ತರವ ಕೊಟ್ಟನು !
" ಸೋರೆ ಸುಬ್ಬರಾಯರೇ ! ಸೋರೆ ಸುಬ್ಬರಾಯರೇ !
ಸೂಜಿ ಸುಬ್ಬ ರಾಯನ ಕಂಡೀರೇ ?"
ಉರುಳುತ ಉರುಳುತ ತಡ ಮಾಡದೇ ,
ಸೂಜಿ ಸುಬ್ಬ ರಾಯನೆಂದ " ಕಾಣಲಿಲ್ಲವೇ !"
" ಸೂಜಿ ಇಲ್ಲ , ಬೆಲ್ಲ ಇಲ್ಲ ಏನೂ ಇಲ್ಲಾ !"
ಕರಡಿಯು ಮಲಗಗಿತು ನಿರಾಶೆಯಿಂದ !
೧೮
ಉರುಳಿತು ಉರುಳಿತು ಸೋರೆ ಕಾಯಿ ,
ಬಂಡೆಗಳ ಮಧ್ಯದಲ್ಲಿ ಅವಸರವಾಗಿ !
" ಯಾರದು ಕಾಡಲಿ ಉರುಳುವುದು ?"
ಹಾರಿ ಬಂದ ನರಿಯು ವಿಚಾರಿಸಿತು !
" ನಾನೇ ! ನಾನೇ !ಸೋರೆ ಸುಬ್ಬರಾಯನು !"
ಒಳಗಿನಿಂದ ಸೂಜಿ ಸುಬ್ಬ ಉತ್ತರವ ಕೊಟ್ಟನು .
ಸೂಜಿ ಸುಬ್ಬ ರಾಯನನ್ನು ಕಾಣದೆ,
ಕೇಳಿತು ನರಿಯು ಕೋಪ ತಾಳದೆ !
" ಸೋರೆ ಸುಬ್ಬ ರಾಯರೇ !ಸೋರೆಸುಬ್ಬ ರಾಯರೇ !
ಸೂಜಿ ಸುಬ್ಬ ರಾಯನ ಕಂಡೀರೇ ?"
ಉರುಳುತ ಉರುಳುತ ನಿಲ್ಲದೆ ,
ಸೂಜಿ ಸುಬ್ಬ ರಾಯನೆಂದ " ಕಾಣಲಿಲ್ಲವೇ !"
" ಸೂಜಿ ಇಲ್ಲ !ಸುಬ್ಬನಿಲ್ಲ ! ತಿಂಡಿಯೂ ಇಲ್ಲ !"
ನಿರಾಶೆಗೊಂಡು ಮಲಗಿತು ನರಿ ದುಃಕ್ಕದಿಂದ !
೧೯
ಉರುಳಿತು ಉರುಳಿತು ಸೋರೆ ಕಾಯಿ ,
ಹೊಳೆಯತ್ತ ಉರುಳಿ ಬಂತು ಎಚ್ಚರವಾಗಿ !
" ಯಾರದು ಹೊಳೆಯತ್ತ ಉರುಳುವುದು ?"
ಹೊರ ಬಂದ ಮೊಸಳೆಯು ವಿಚಾರಿಸಿತು !
" ನಾನೇ ! ನಾನೇ !ಸೋರೆ ಸುಬ್ಬರಾಯನು !"
ಒಳಗಿನಿಂದ ಸೂಜಿ ಸುಬ್ಬ ಉತ್ತರವ ಕೊಟ್ಟನು .
ಸೂಜಿ ಸುಬ್ಬ ರಾಯನನ್ನು ಕಾಣದೆ ,
ಕೇಳಿತು ಮೊಸಳೆಯು ಕೋಪ ತಾಳದೆ !
" ಸೋರೆ ಸುಬ್ಬ ರಾಯರೇ !ಸೋರೆಸುಬ್ಬ ರಾಯರೇ !
ಸೂಜಿ ಸುಬ್ಬ ರಾಯನ ಕಂಡೀರೇ ?"
ಉರುಳುತ ಉರುಳುತ ನಿಲ್ಲದೆ ,
ಸೂಜಿ ಸುಬ್ಬ ರಾಯನೆಂದ " ಕಾಣಲಿಲ್ಲವೇ !"
" ಸೂಜಿ ಇಲ್ಲ ! ಸುಬ್ಬನಿಲ್ಲ ! ಕಡುಬೂ ಇಲ್ಲ !"
ಮಲಗಿದ ಮೊಸಳೆಗೆ ನೆಮ್ಮದಿಯೂ ಇಲ್ಲ !
೨೦
ಉರುಳಿತು ಉರುಳಿತು ಸೋರೆ ಕಾಯಿ ,
ಮನೆಗೆ ಮತ್ತೆ ಮರಳೋ ಸಂಭ್ರಮದಲ್ಲಿ !
" ಯಾರದು ಕಾಡಲ್ಲಿ ಉರುಳುವುದು ?"
ಎರಗಿ ಬಂದ ಹುಲಿಯು ವಿಚಾರಿಸಿತು !
" ನಾನೇ ! ನಾನೇ !ಸೋರೆ ಸುಬ್ಬರಾಯನು !"
ಒಳಗಿನಿಂದ ಸೂಜಿ ಸುಬ್ಬ ಉತ್ತರವ ಕೊಟ್ಟನು .
ಸೂಜಿ ಸುಬ್ಬ ರಾಯನನ್ನು ಕಾಣದೆ ,
ಗರ್ಜಿಸಿತು ಹುಲಿ ರೋಷ ತಾಳದೆ !
" ಸೋರೆ ಸುಬ್ಬ ರಾಯರೇ !ಸೋರೆ ಸುಬ್ಬ ರಾಯರೇ !
ಸೂಜಿ ಸುಬ್ಬ ರಾಯನ ಕಂಡೀರೇ ?"
ಉರುಳುತ ಉರುಳುತ ನಿಲ್ಲದೆ ,
ಸೂಜಿ ಸುಬ್ಬ ರಾಯನೆಂದ " ಕಾಣಲಿಲ್ಲವೇ!"
" ಸೂಜಿ ಇಲ್ಲ ! ಸುಬ್ಬನಿಲ್ಲ ! ವಡೆಯೂ ಇಲ್ಲವೇ ?"
ಹುಲಿಯು ಜಜ್ಜಿ ಹಾಕಿತಲ್ಲ ಸೋರೆ ಕಾಯನ್ನೇ !
"ಅಯ್ಯೋ !" ಎಂದು ಕೂಗಿದಳು ಪುಟ್ಟಿ !