Thursday, March 20, 2014

Sooji Subba Raayana Kathe

ಸೂಜಿ ಸುಬ್ಬ ರಾಯನ ಕಥೆ 

" ಅಜ್ಜಿ ! ಕಥೆ ಟೈಮ್ !" ಎಂದು ಜೋರಾಗಿ ಕೂಗುತ್ತ  ಪುಸ್ತಕ ಹಿಡಿದು ಕುಳಿತಳು ಪುಟ್ಟಿ . 

"ಬಂದೆ ! ಬಂದೆ ! " ಸೆರಗಲ್ಲಿ ಕೈ ಒರೆಸಿಕೊಳ್ಳುತ್ತಲೇ ಅಡುಗೆ ಮನೆಯಿಂದ ಹೊರ ಬಂದಳು ಅಜ್ಜಿ .

ಪುಟ್ಟಿಯ ಕೂಗು ಕೇಳಿ ತೋಟದಲ್ಲಿದ್ದ ತಾತ ಮತ್ತು ಪುಟ್ಟಣ್ಣ  ಹಜಾರಕ್ಕೆ ಬಂದರು . 

" ಎಲ್ ನಿಲ್ಲಿಸ್ದೇ ?" ಎಂದು ಪುಸ್ತಕದ ಹಾಳೆ ತಿರುವಿದಳು ಅಜ್ಜಿ . 

" ಮೊಸಳೆ ಅಣ್ಣನಿಂದ ತಪ್ಪಿಸ್ಕೊಂಡ ಸುಬ್ಬಣ್ಣ !" ಎಂದಳು ಪುಟ್ಟಿ . 

" ಸರಿ ಇವಾಗ ಯಾವ ಪ್ರಾಣಿಗೆ ಸಿಕ್ ಬೀಳ್ತಾನೆ ಸುಬ್ಬಣ್ಣ ?" ಎಂದು ಕುತೂಹಲದಿಂದ ಪ್ರಶ್ನಿಸಿ ಪುಸ್ತಕವನ್ನು ಇಣುಕಿ ನೋಡಿದ ಪುಟ್ಟಣ್ಣ . 

" ಸುಮ್ನೆ ಕೂತ್ಕೋ ಅಣ್ಣ . ಅಜ್ಜಿ ಹೇಳ್ಲಿ ." ಅಣ್ಣನನ್ನು ದೂರ ತಳ್ಳಿ ಅಜ್ಜಿಯ ಮಡಿಲಿಗೆ ಒರಗಿ ಕುಳಿತಳು ಪುಟ್ಟಿ . 


"ಸೂಜಿ ಸುಬ್ಬ ನಡೆದನು ಕಾಡಿನಲ್ಲಿ 
ಜಿಗಿಯುತ ನೆಗೆಯುತ ಉತ್ಸಾಹದಲ್ಲಿ !" ಎಂದು ಹಾಡಿದ ಪುಟ್ಟಣ್ಣ !

                                                ೧೦



ಪೊದೆಯಲಿ ಅಡಗಿದ್ದ ಗುಳ್ಳೆ ನರಿ 

ಅರಚಿತು  ಸುಬ್ಬ ರಾಯನ ಕಿವಿಗಳಲ್ಲಿ  !

"ಯಾರದು ಪೋದೆಯತ್ತ ಸುಳಿದಿರುವೆ ?

ಗಪಗಪ ನಿನ್ನನು ತಿಂದುಹಾಕುವೇ !"
                                            
                                                    ೧೧



ಅಂಜದ ಗಂಡು ನಮ್ಮ ಸುಬ್ಬಣ್ಣ ,

ನಗುತಲಿ ನೋಡಿದ ನರಿಯನ್ನ . 

" ಸೂಜಿ ಸುಬ್ಬ ರಾಯ ನಾನು ನರಿಯಣ್ಣಾ  !

   ಅಜ್ಜಿಯ ಔತಣಕ್ಕೆ ಹೋಗುತ್ತಿರುವೆ ನಾ . 

   ಗರಿಮುರಿ ತಿಂಡಿ ತಿಂದು ಕೊಬ್ಬಿ  ಬರುವೆ  !

   ಆ ವರೆಗೆ ನೀನು ಸೊಲ್ಪ ತಾಳಿಕೊಳ್ಳುವೆ   !

    ಈ 'ಸೂಜಿ' ಗಪ ಗಪ ನೀ ತಿಂದುಬಿಟ್ಟರೆ  ,

    ಗಂಟಲಿಗೆ ಚುಚ್ಚಿಕೊಂಡು  ಬಲು ತೊಂದರೆ !" 


    ಚಿಂತಿಸಿ  ನುಡಿಯಿತು  ನರಿಯಣ್ಣ 

  "ನನಗೂ ಸೊಲ್ಪ ತಿಂಡಿಯ ತಾರಣ್ಣಾ !"

   "ಕಂಡಿತ ತರುವೆ ನರಿಯಣ್ಣ !"

     ಎನ್ನುತ ಓಡಿದ ಸುಬ್ಬಣ್ಣ !


                                                    ೧೨



ಬೆಟ್ಟದಿಂದ ಜಾರಿ ಬಂದ  ಕರಡಿಯೊಂದು, 

ಗುರುಗುಟ್ಟಿತು ಸುಬ್ಬ ರಾಯನ ಕಂಡು . 

"ಯಾರದು ಬೆಟ್ಟದತ್ತ   ಸುಳಿದಿರುವೆ  ?

ನಾನೀಗ ನಿನ್ನನು ಮುಕ್ಕಿ ಬಿಡುವೆ !"


                                           ೧೩ 



ಹೆದರದ ಸೂಜಿ ಸುಬ್ಬ ರಾಯನು  

ಹುಸಿನಕ್ಕು  ಉತ್ತರವ  ನೀಡಿದನು. 

" ಕರಡಿಯಣ್ಣ ಕರಡಿಯಣ್ಣ ತಾಳಣ್ಣಾ ,

   ನನ್ನನ್ನೀಗ ನೀನು ಮುಕ್ಕ ಬೇಡಣ್ಣ . 

  ಬೇಳೆ ದೋಸೆ ಬೆಣ್ಣೆ ಬೆಲ್ಲ ಕಾಯ್ದಿಟ್ಟಿರುವಳು . 

  ಕಡಲೆ ಉಂಡೆ ಸಹ ಅಜ್ಜಿ  ಮಾಡಿರುವಳು  . 

  ತಿಂದು ದಪ್ಪವಾಗಿ ನಾನು ಮರಳಿ ಬರುವೆ ,

   ನೀನು ನನ್ನ ದಾರಿಯ ಕಾಯುತ್ತಿದ್ದರೆ !

    ಈ ಸೂಜಿ ನೀನೀಗ ಮುಕ್ಕಿದರೆ ,

    ಗಂಟಲಿಗೆ ಚುಚ್ಚಿಕೊಂಡು ಬಲು ತೊಂದರೆ !"


"  ಬಚಾವಾದೆ ನೀನು ಜೇನು  ತಂದು  ಕೊಟ್ಟರೆ !"

  ಎಂದು ಕರಡಿ ಜೊಲ್ಲು ಸುರಿಸಿ ಮಾಡಿತು ಕಟ್ಟಳೆ.  

" ಜೆನ ಜೊತೆ ತುಪ್ಪ ಕೂಡ ತಂದು ಕೊಡುವೆ  !

   ಈಗ ನಾನು ಬೇಗ ಬೇಗನೆ  ಹೋಗಿ ಬರುವೆ !"


                                                   ೧೪


ಭದ್ರವಾಗಿ ಅಜ್ಜಿ ಮನೆ ಸೇರಿಕೊಂಡ 

 ಸೂಜಿಯ ಕಂಡು ಅಜ್ಜಿಗೆ ಆನಂದ !

ಪ್ರೀತಿಯಿಂದ ತಿಂಡಿ ತಟ್ಟೆ ನೀಡಿದಳು,

ಗರಿ ಮುರಿ ಸಿಹಿ ತಿನಿಸು  ತಿನ್ನಿಸಿದಳು !

ಹೊಟ್ಟೆ ಒಡೆವಷ್ಟು ತಿಂದ ಸೂಜಿ ಸುಬ್ಬ, 

ತಿಂದು ತಿಂದು ತೇಗಿ ನಿಂತ ಸುಬ್ಬ ರಾಯ !


                                                  ೧೫



ಸಂಜೆ ಮನೆಗೆ ಮರಳೋ ವೇಳೆ ಹತ್ತಿರವಾಯಿತು .  

ಪ್ರಾಣಿಗಳ ಚಿಂತೆ ಸೂಜಿಯನ್ನು  ಕಾಡ ತೊಡಗಿತು ! 

" ಚಿಂತೆ ಬೇಡ ! " ಎಂದ ಅಜ್ಜಿಗೆ ಯೋಚನೆ ಹೊಳೆಯಿತು !

" ನನ್ನ ಸೋರೇ  ಗಿಡವು ನಿನ್ನ ಪಾರು ಮಾಡುವುದು   !"


" ಹೇಗೆ ? ಹೇಗೆ ? ಸೋರೆ ಗಿಡ ಹೇಗೆ ಸೂಜಿನ ಪಾರು ಮಾಡತ್ತೆ ?" ಪುಟ್ಟಿಗೆ ಕುತೂಹಲ. 

" ನಾಳೆ ಓದೋಣ ಪುಟ್ಟಿ ! ಔತಣಕ್ಕೆ ನೆಂಟರು ಬಾರೋ ಹೊತ್ತಾಯ್ತು ." ಎನ್ನುತ್ತಾ ಎದ್ದಳು ಅಜ್ಜಿ . 

No comments:

Post a Comment