Monday, March 26, 2018

ಸಿ. ಐ. ಡಿ. ರಂಗಿ! - C.I.D. Rangi

ಸಿ. ಐ. ಡಿ. ರಂಗಿ!
ಅದ್ವಿಕಾಳಿಗೆ ಖುಷಿಯೋ ಖುಷಿ! ಮಾಯಾ ಅವಳ ಮನೆಗೆ ಸ್ಲೀಪ್ ಓವರ್ಗೆ ಬಂದಿದ್ದಳು!
ತಟ್ಟೆಯ  ತುಂಬ ಗೋಬಿ ಮಂಚೂರಿಯನ್ ತಂದಿಟ್ಟ ಅಮ್ಮ, "ಮಾಯಾ! ಇವತ್ತು ತಿಂಡಿಗೆ ಅದ್ವಿಕಾಳ ಫೇವರಿಟ್ ಗೋಬಿ ಮಂಚೂರಿಯನ್! ನಿನಗೂ ಇಷ್ಟಾತಾನೆ?"ಎಂದು ಕೇಳಿದಳು. 
"ಥ್ಯಾಂಕ್ಸ್ ಆಂಟಿ! ನನ್ಗೂ ಬಹಳ ಇಷ್ಟ!" ಎಂದಳು ಮಾಯಾ. ಕಿರುನಗೆ ಬೀರಿ ಒಳಕ್ಕೆ ನಡೆದಳು ಅಮ್ಮ. 
ಇಬ್ಬರು ಸ್ನೇಹಿತಿಯರೂ ತಿನ್ನತೊಡಗಿದಾಗ ಪಂಜರದಲ್ಲಿದ್ದ ಗಿಳಿ 'ಕೀ ಕೀ' ಎಂದಿತು.


''ಒಹೋ! ನಿನಗೂ ಮಂಚೂರಿ ಬೇಕಾ?" ಎನ್ನುತ್ತಾ ಅದ್ವಿಕಾ ತಟ್ಟೆಯಿಂದ ಒಂದು ಚೂರನ್ನು ತೆಗೆದು ಅದರ ಮೂತಿಗೆ ಹಿಡಿದಳು. ಗಿಳಿ ಅದನ್ನು ತನ್ನ ಬಾಗಿದ ಕೆಂಪು ಕೊಕ್ಕಿನಿಂದ ತೆಗೆದುಕೊಂಡು, ಒಂದು ಕಾಲಿನಿಂದ ಹಿಡಿದುಕೊಂಡು ಕುಕ್ಕಿ  ಕುಕ್ಕಿ ಸವಿಯ  ತೊಡಗಿತು.
''ಹೇಯ್! ನಿನ್ನ ಗಿಳಿ ನಿಜವಾಗ್ಲೂ ಮಂಚೂರಿ ತಿನ್ನತ್ತಲ್ಲೇ?" ಮಾಯಾಳಿಗೆ ಆಶ್ಚರ್ಯ.
"ನಾನು ಏನು ತಿಂದರೂ ಅದಕ್ಕೂ  ಒಂದು  ಷೇರ್ ಕೊಟ್ಟೇ ಕೊಡ್ಬೇಕು. ಇಲ್ದಿದ್ರೆ ಕಿರುಚಿ ರಂಪ ಮಾಡ್ಬಿಡತ್ತೆ!" ಎಂದು ನಕ್ಕಳು ಅದ್ವಿಕಾ.
ಗಿಳಿ ಮಂಚೂರಿ ತಿಂದು ಮುಗಿಸಿ ಮತ್ತೇ 'ಕೀ ಕೀ' ಎಂದಿತು.
ಪಕ್ಷಿ ಪ್ರಾಣಿಗಳ ಬಗ್ಗೆ ಅದ್ವಿಕಾಳಿಗೆ ಅತ್ಯಂತ ಸಹಾನುಬೂತಿ. ಅವುಗಳ ಸ್ವಾತಂತ್ರ್ಯದ ವಿಷಯವಾಗಿ ಅವಳು ಬರೆದ ಎಸ್ಸೇ ಸ್ಕೂಲಲ್ಲಿ ಅದೆಷ್ಟು ಪ್ರಶಂಸೆ  ಗಳಿಸಿತ್ತು! ಅದಕ್ಕೆ ಚಿನ್ನದ ಸ್ಟಾರ್ ಅಂಟಿಸಿ  ನೋಟಿಸ್ ಬೋರ್ಡಿಗೂ ಹಾಕಿದ್ದರು  ಮಂಜು ಮ್ಯಾಡಮ್.  ಅಂತಹವಳ ಮನೆಯಲ್ಲಿ  'ಪಂಜರದ ಗಿಳಿಯೇ?' ಎಂದು ಆಶ್ಚರ್ಯಗೊಂಡಳು ಮಾಯಾ!
"ಆದ್ವಿ! ತಪ್ಪು ತಿಳ್ಕೋಬೇಡ! ನಿಮ್ಮ ಮನೇಲಿ  ಪಂಜರದಲ್ಲಿ ಗಿಳಿಯನ್ನ ಇಟ್ಟಿರೋದನ್ನ ನನ್ನಿಂದ ನಂಬಕ್ಕೇ ಆಗ್ತಿಲ್ಲ!"
"ಅದರ ಬಲ ಬಾಗದ ಪುಕ್ಕ ಮುರಿದು ಹೋಗಿದೆ ಮಾಯಾ! ಅದಕ್ಕೆ  ಹಾರಕ್ಕೆ ಆಗಲ್ಲ! ಹೊರಕ್ಕೆ ಬಿಟ್ರೆ ಬೆಕ್ಕು ಇಲ್ಲವೇ ಗಿಡುಗನಿಗೆ ಬಲಿಯಾಗ  ಬೇಕಾಗತ್ತೆ. ಅದರ ರಕ್ಷಣೆಗಾಗಿಯೇ  ಪಂಜರದಲ್ಲಿ ಇಟ್ಟಿದ್ದೀವಿ." ಅದ್ವಿಕಾ ವ್ಯಸನದಿಂದ ನುಡಿದಳು.
"ಅಯ್ಯೋ! ಅದರ  ಪುಕ್ಕ ಹೇಗೆ ಮುರೀತು?"
"ಒಂದು ದಿನ ನಾನು ತೋಟದಲ್ಲಿ ಉಯ್ಯಾಲೆ ಆಡ್ತಿದ್ದೆ. ಇದು ಎಲ್ಲಿಂದ ಬಂತೋ ಏನೋ? ಪಾಪ ಹಾರಲಾರದೆ ಅಲ್ಲಿ ಕೂತು, ಇಲ್ಲಿ ಕೂತು ಕೊನೆಗೆ ನೆಲದ ಮೇಲೆ 'ದಬಕ್' ಅಂತ ಬಿತ್ತು. ನಾನು ಓಡಿ ಹೋಗಿ ನೋಡ್ದಾಗ  ಅದಕ್ಕೆ ಘಾಯವಾಗಿದ್ದು ತಿಳೀತು. ಅಪ್ಪ ಡಾಕ್ಟರನ್ನ ಕರೆಸಿ ಚಿಕಿತ್ಸೆ ಕೊಡಿಸಿದ್ರು. ಮಾಂಜಾ ಹಚ್ಚಿದ ಗಾಳಿಪಠದ ದಾರದಲ್ಲಿ ಸಿಕ್ಕಿಕೊಂಡು ಹೀಗಾಗಿದೆ  ಅಂದ್ರು ಡಾಕ್ಟರ್."
"ಅಯ್ಯೋ ಪಾಪ! ಆದ್ರೆ ಗಾಜಿನ ಪುಡಿ ಹಚ್ಚಿದ ಮಾಂಜಾ ದಾರಕ್ಕೆ ತಡೆಯಾಜ್ಞೆ  ಹಾಕಿದ್ದಾರಲ್ಲಾ!?"
"ರೂಲ್ಸ್ ಪ್ರಕಾರ ಎಲ್ರೂ ನಡ್ಕೊಳ್ಳೋದಿಲ್ವಲ್ಲ!" ಬೇಸರದಿಂದ ನುಡಿದಳು ಅದ್ವಿಕಾ.
ಅದ್ವಿಕಾಳ ಮನೆಯ ತೋಟ ಬಹಳ ದೊಡ್ಡದಾಗಿತ್ತು. ಸಣ್ಣ ಪುಟ್ಟ ಪಕ್ಷಿಗಳೂ ಬಣ್ಣದ ಚಿಟ್ಟೆಗಳೂ ಹಾರಾಡುತ್ತಿದ್ದವು.  ಹೂಗಿಡಗಳಿಂದ  ಕೂಡಿದ ಆ ತೋಟದಲ್ಲಿ ಮಾತು ಕಥೆಯಾಡುತ್ತ ಇಬ್ಬರೂ ನಡೆದಾಡಿದರು.
ತೋಟದ ಮೂಲೆಯಲ್ಲಿ ಮರದ ಚೌಕಟ್ಟುಗಳನ್ನೂ ಜಾಲರಿಗಳನ್ನೂ ಹರಡಿಕೊಂಡು ಕೆಲಸ ಮಾಡುತ್ತಿದ್ದ ಕಾರ್ಪೆನ್ಟರ್ ಶಿವಾ. ಜೊತೆಗೆ ಒಬ್ಬ ಹುಡುಗ ಸಹಾಯ ಮಾಡುತ್ತಿದ್ದ.
"ಏವಿಯರಿ ಯಾವಾಗ ರೆಡಿಯಾಗತ್ತೆ ಶಿವ?'' ಎಂದು ಕಾರ್ಪೆನ್ಟರನ್ನು
ವಿಚಾರಿಸಿದಳು ಅದ್ವಿಕಾ.

" ಆಯಿತು ಪುಟ್ ಮ್ಯಾಡಮ್! ಇವತ್ತು ಜಾಲರಿಗೆ  ಫ್ರೇಮ್ ಫಿಕ್ಸ್ ಮಾಡಿಬಿಟ್ರೆ ಆಯಿತು. ನಾಳೆ ಎಲ್ಲ ಜೋಡಿಸ್ಬಿಡ್ತೀನಿ. ಆಮೇಲೆ ಪೇಯಿಂಟ್ ಮಾಡಿಬಿಟ್ರೆ ನಿಮ್ಮ ಗಿಳಿಗೆ ಮನೆ ರೆಡಿ." ಸುತ್ತಿಗೆಯಿಂದ ಮೊಳೆಯನ್ನು ಜಜ್ಜುತ್ತಲೇ ನಗುನಗುತ್ತ ಉತ್ತರಿಸಿದ  ಶಿವಾ.
"ಮಾಯಾ! ಕೆಲವು ಗಿಡಗಳನ್ನೂ ಆ ಸಿಂಗಪೂರ್ ಚೆರ್ರಿ ಮರವನ್ನೂ ಒಳಗೊಂಡಂತೆ ಒಂದು ದೊಡ್ಡ ಏವಿಯರಿಯನ್ನ ತಯಾರು ಮಾಡ್ತಿದ್ದಾನೆ ಶಿವಾ. ರೆಡಿಯಾದ ಕೂಡ್ಲೇ ಗಿಳಿಯನ್ನ ಇಲ್ಲಿಗೆ ಟ್ರಾನ್ಸ್ಫರ್ ಮಾಡ್ತಾರೆ ಅಪ್ಪ.  ಪುಟ್ಟ ತೋಟದಿಂದ ಕೂಡಿದ ಈ ಕಾಪಲ್ಲಿ ಯಾವ ಭಯವೂ ಇಲ್ದೆ ಗಿಳಿ ಸ್ವತಂತ್ರವಾಗಿ ಸೇಫಾಗಿರಬೋದು." ಎಂದಳು  ಅದ್ವಿಕಾ. 
ಗೇಟ್ ಬಳಿ ಮೋಟಾರ್ ಬೈಕ್ ಶಬ್ದ ಕೇಳಿಸಿತು.
"ಓ! ಇನ್ಸ್ಪೆಕ್ಟರ್ ಬಂದ್ರು! ಕಳ್ಳ ಸಿಕ್ಕಿದ ಅನ್ಸತ್ತೆ!" ಎಂದ ಅದ್ವಿಕಾ ಮಾಯಾಳನ್ನು  ಎಳೆದುಕೊಂಡು ಸರ ಸರ ಮನೆಯತ್ತ ನಡೆಯತೊಡಗಿದಳು.
"ಕಳ್ಳ? ಯಾವ ಕಳ್ಳ?" ಅದ್ವಿಕಾಳನ್ನು ಹಿಂಬಾಲಿಸುತ್ತ ಆಶ್ಚರ್ಯದಿಂದ ಪ್ರಶ್ನಿಸಿದಳು ಮಾಯಾ.
"ಅಯ್ಯೋ! ಹೇಳಕ್ಕೇ ಮರೆತೆ  ನೋಡು! ಮೊನ್ನೆ ರಾತ್ರಿ ನಮ್ಮನೆಗೆ ಕಳ್ಳ ಬಂದಿದ್ದ!"
" ಹಾ?"
''ಹೌದು ಮಾಯಾ! ರಾತ್ರಿ ಎರಡು ಗಂಟೆಯೋ ಮೂರು ಗಂಟೆಯೋ ಆಗಿತ್ತಂತೆ!  ಇದ್ದಕ್ಕಿದ್ದ ಹಾಗೆ ಗಿಳಿ ಕರ್ಕಶವಾಗಿ ಅರಚಿತಂತೆ. ವಾಚ್ ಮ್ಯಾನ್ ರಜದಲ್ಲಿದ್ದ. ಕರೆಂಟ್ ಬೇರೆ ಇಲ್ಲ!ಅಮ್ಮನಿಗೆ ಮೊದಲು  ಎಚ್ಚರವಾಗಿದೆ. ಅವಳು ಹೆದರಿ  ಅಪ್ಪನನ್ನು ಎಚ್ಚರಿಸಿದಳಂತೆ. ಅಪ್ಪಾ  ಟಾರ್ಚ್ ಹೊತ್ತಿಸಿ  ಬಾಗಿಲು ತೆರೆದು ಇಡೀ ತೋಟದಲ್ಲಿ ಕಣ್ಣಾಡಿಸಿದರಂತೆ. ಅಷ್ಟರಲ್ಲಿ ಯಾರೋ ಕಾಂಪೌಂಡ್ ಗೋಡೆ ಹಾರಿ ಓಡಿ  ಹೋದಂತೆ ಇತ್ತಂತೆ! ಕತ್ತಲಲ್ಲಿ ಏನು  ಮಾಡಕ್ಕೂ ತೋಚದೆ ಅಪ್ಪಾ ಬಾಗಿಲು ಭದ್ರಪಡಿಸಿ ಮಲಗಿದರಂತೆ. ಇದೆಲ್ಲ ನನಗೆ ಗೊತ್ತೇ ಆಗ್ಲಿಲ್ಲ! ಚೆನ್ನಾಗಿ ಗೊರಕೆ ಹೊಡೀತಿದ್ದೆ! ಬೆಳಿಗ್ಗೆದ್ದು ತಲಾಶೆ ಮಾಡಿದಾಗ ಕಾಂಪೌಂಡ್ ಮೂಲೆಯಲ್ಲಿದ್ದ ಶ್ರೀಗಂಧದ ಮರವನ್ನ ಯಾರೋ ಅರ್ಧಂಬರ್ಧ ಕಡಿದು ಹಾಕಿದ್ದದ್ದು ಕಂಡುಬಂತು. ಗಿಳಿ ಕೂಗಿ ಗಲಾಟೆ ಮಾಡಿದ ಕಾರಣ ಕಳ್ಳ ಮುಂದುವರೀದೆ ಎಲ್ಲವನ್ನೂ ಹಾಗೇ ಬಿಟ್ಟು ಓಡಿಹೋಗಿದ್ದ!"
ಅದ್ವಿಕಾ ಸ್ವಾರಸ್ಯಕರವಾಗಿ ಹೇಳಿದ ವಿಷಯ ಕೇಳಿ ಮಾಯಾಳಿಗೆ ಮೈ ಝಂ ಎಂದಿತು.
ಹಜಾರದಲ್ಲಿ ಇನ್ಸ್ಪೆಕ್ಟರ್ ಅಪ್ಪನ ಜೊತೆ ಮಾತನಾಡುತ್ತಿದ್ದರು.
"ವಾಸು ಅವರೇ! ಎಲ್ಲ ಕೋನದಿಂದಲೂ ಪರಿಶೀಲನೆ ಮಾಡಿಯಾಗಿದೆ. ಕಡೆಯದಾಗಿ  ಒಂದೇ ಒಂದು ಬಾರಿ ನಿಮ್ಮ ಮನೆಯಲ್ಲಿ ಕೆಲಸ ಮಾಡೋರನ್ನೆಲ್ಲ ಮತ್ತೊಮ್ಮೆ ವಿಚಾರಿಸಿಬಿಟ್ರೆ  ಒಂದು ನಿರ್ಧಾರ ತಗೋಬೋದು." ಎಂದರು  ಇನ್ಸ್ಪೆಕ್ಟರ್.
"ಎಲ್ಲರೂ ನಂಬಿಕಸ್ತರೇ! ಆದರೆ ನನಗೇನೂ ಆಕ್ಷೇಪಣೆ ಇಲ್ಲ ಸಾರ್. ನಿಮ್ ಡ್ಯೂಟಿ ನೀವು ಮಾಡಿ." ಎಂದರು ಅಪ್ಪ. 
ಅದ್ವಿಕಾ ಮತ್ತು ಮಾಯಾ ಪೋರ್ಟಿಕೋ  ಕಂಬದ ಮರೆಯಲ್ಲಿ ನಿಂತು ಕುತೂಹಲದಿಂದ ವಿಚಾರಣೆಯನ್ನು ಗಮನಿಸ ತೊಡಗಿದರು.
ತೋಟ ಮಾಡುತ್ತಿದ್ದ ಮಾಲಿ, ಡ್ರೈವರ್ ಮತ್ತು  ವಾಚ್ ಮ್ಯಾನ್ ಎಲ್ಲರನ್ನೂ ವಿಚಾರಿಸಿ ಕಡೆಗೆ ಕಾರ್ಪೆನ್ಟರ್ ಶಿವಾನನ್ನ ಕರೆಸಿದರು ಇನ್ಸ್ಪೆಕ್ಟರ್.
"ಶಿವಾ! ಎಷ್ಟು ದಿವಸಗಳಿಂದ ಇಲ್ಲಿ ಮರಗೆಲಸ ನಡೀತಿದೆ?"
"ಹೋದ್ವಾರ ಬಂದು ಅಳತೆ ತಗೊಂಡು ಹೋದೆ ಸಾರ್. ಸಾಮಾನು ತಂದು ಎರಡು ದಿವಸಗಳಿಂದ  ಕೆಲಸ ಮಾಡ್ತಿದ್ದೀನಿ ಸಾರ್. ಬಿಲ್ಲು ಬೇಕಾದ್ರೂ ತೋರಿಸ್ತೀನಿ ಸಾರ್! ಏ ನಂದು! ಸಾಮಾನು ತಂದ ಬಿಲ್ಲು ಅಲ್ಲೇ ನನ್ನ ಚೀಲದಲ್ಲಿದೆ! ತಗೊಂಡು ಬಾರೋ." ನಡುಗುತ್ತ ಉತ್ತರಿಸಿದ ಶಿವಾ. ನಂದು ಬಿಲ್ಲುಗಳನ್ನು ತಂದು ಕೊಟ್ಟ.
"ನೋಡಿ ಸಾರ್! ಬಿಲ್ಲು!" ಅವರುಗಳ ಮಾತು ಕೇಳಿಸಲಾರದಷ್ಟು ಜೋರಾಗಿ ಕರ್ಕಶ ದನಿಯಲ್ಲಿ  ಕೂಗಾಡಿತು ಪಂಜರದಲ್ಲಿದ್ದ ಗಿಳಿ.
"ಅದ್ವಿಕಾ! ಇದು ಮಾತಾಡಕ್ಕೆ ಬಿಡ್ತಿಲ್ಲ ನೋಡು! ಒಳಗೆ ಕರಕೊಂಡು  ಹೋಗು." ಎಂದರು ಅಪ್ಪ.
ಕಂಬದ ಮರೆಯಿಂದ ಹೊರಬಂದ ಅದ್ವಿಕಾ "ಶ್! ಯಾಕೆ ಕೂಗ್ತಿಯ? ಹಸಿವಾ?" ಎನ್ನುತ್ತಾ ಪಂಜರವನ್ನು ತೆಗೆಯಲು ಹೊರಟಳು.
"ಅದು ಇಲ್ಲೇ ಇರ್ಲಿ ಬಿಡು ಮಗು! ಏನೂ ತೊಂದ್ರೆ ಇಲ್ಲ!" ಎಂದ  ಇನ್ಸ್ಪೆಕ್ಟರ್, ಬಿಲ್ಲುಗಳನ್ನು  ಕಸಿದುಕೊಂಡು ಅದರ ಮೇಲೆ ಕಣ್ಣಾಡಿಸ ತೊಡಗಿದರು. ಗಿಳಿ ಒಡಕಲು ಪುಕ್ಕ ಬಡಿದುಕೊಂಡು ಕರ್ಕಶವಾಗಿ ಅರಚುತ್ತಲೇ ಇತ್ತು.
"ಶಿವಾ, ನಿನ್ನ ಚೀಲವನ್ನ ನೋಡಬೇಕು! ಏ ಹುಡುಗ! ಚೀಲ ತಗೊಂಡು ಬಾ ಹೋಗು!" ಇನ್ಸ್ಪೆಕ್ಟರ್ ಆಜ್ಞಾಪಿಸಿದರು. ಹುಡುಗ ಮತ್ತೆ ಓಡಿದ.
"ಅಯ್ಯೋ ಸಾರ್! ನಾನು ಏನೂ ತಪ್ಪು ಮಾಡಿಲ್ಲ ಸಾರ್! ಈ ಮನೆ ಕಟ್ಟಿಸಿದಾಗಿನಿಂದ ನಾನು ಇವರಿಗೆ ಕೆಲಸ ಮಾಡ್ತಿದ್ದೀನಿ ಸಾರ್." ನಡುಗುತ್ತ ಗೋಗರೆದ ಶಿವಾ.
ಅದ್ವಿಕಾ ಗಿಳಿಯನ್ನು ಕುರಿತು ಮೃದು ಮಾತನಾಡಲು, ಅದು ಸ್ವಲ್ಪ ಸಮಾಧಾನಗೊಂಡಂತೆ ತೋರಿತು. ಶಿವಾನ ಪರಿಸ್ಥಿತಿ ಕಂಡು ಅವಳಿಗೆ ವ್ಯಸನವಾಯಿತು. ಪಾಪ ಶಿವಾ! ತುಂಬಾ ಒಳ್ಳೆಯವನು. ತಾನು ಚಿಕ್ಕವಳಿದ್ದಾಗ ತನಗಾಗಿ ಮರದಿಂದಾದ ಒಂದು ಹಸಿರು ಬಣ್ಣದ ಜಾರು ಬಂಡೆಯನ್ನು ಮಾಡಿಕೊಟ್ಟಿದ್ದನು! ಮಾವಿನಮರದ ರೆಂಬೆಯಲ್ಲಿ ಉಯ್ಯಾಲೆಯನ್ನು ಸಹ ಕಟ್ಟಿ ಕೊಟ್ಟಿರುವನು. 'ಪುಟ್ ಮ್ಯಾಡಮ್' ಎಂದು ತನ್ನನ್ನು ಪ್ರೀತಿಯಿಂದ ಕರೆದನು. ಆತನನ್ನು ಏಕೆ ಇನ್ಸ್ಪೆಕ್ಟರ್ ಇಷ್ಟು ಗೋಳು ಹೊಯ್ದುಕೊಳ್ಳುತ್ತಿರುವರು!
"ಶಿವಾ  ತುಂಬಾ ನಿಯತ್ತಿನ ಮನುಷ್ಯ ಸಾರ್! ಸುಮಾರು ವರ್ಷಗಳಿಂದ ನನಗೆ ಪರಿಚಯ!ಪಾಪ ಅವನ ಮೇಲೆ ನನಗೆ ಯಾವ ಸಂಶಯವೂ ಇಲ್ಲ!" ಅಪ್ಪ ಶಿವಾನ ಪರವಾಗಿ ಮಾತನಾಡಿದರು.
ಗಿಳಿ ಮತ್ತೇ ಕೀರಲು ದನಿಯಲ್ಲಿ ಕಿರುಚ ತೊಡಗಿತು. ರೆಕ್ಕೆ ಬಡ ಬಡ ಬಡಿದುಕೊಂಡಿತು. ಪಂಜರದೊಳಗೇ ಚಡಪಡಿಸಿತು. 
"ಛೆ! ಇದರದ್ಯಾಕೊ ಅತಿಯಾಯಿತು! ಆದ್ವಿ! ಅಮ್ಮನನ್ನು ಕರಿ! ಮೊದಲು ಒಳಗೆ ತಗೊಂಡು ಹೋಗಲಿ! ತಿನ್ನಕ್ಕೆ ಕೊಡಬೇಕೋ ಏನೋ! ಕಳ್ಳ ಬಂದ  ರಾತ್ರಿ ಹೀಗೇ  ಕೂಗಿತ್ತು! ಆಮೇಲೆ ಎರಡು ದಿವಸಗಳಿಂದ ಇದರ ಅರಚಾಟ ಸಹಿಸಕ್ಕೇ  ಆಗ್ತಿಲ್ಲ!" ಅಪ್ಪ ಸಿಡಿಮಿಡಿಗೊಂಡರು.
"ಅದರ ಕೆಲಸ ಅದು ಅಚ್ಚುಕಟ್ಟಾಗಿ ಮಾಡಿ ಮುಗಿಸಿದೆ  ವಾಸು ಅವರೇ! ನಿಮಗೆ ಅರ್ಥವಾಗಿಲ್ಲ ಅಷ್ಟೇ! ಪಾಪ! ಅದನ್ನ  ಬಯ್ಯಬೇಡಿ!" ಎಂದರು ಇನ್ಸ್ಪೆಕ್ಟರ್.
"ಅದೇನ್ ಮಾಡ್ತು ಸಾರ್?" ಅಪ್ಪ ಆಶ್ಚರ್ಯದಿಂದ ಪ್ರಶ್ನಿಸಿದರು.
ಮರ್ಮವಾದ ನಗೆ ಬೀರುತ್ತ ಎದ್ದರು  ಇನ್ಸ್ಪೆಕ್ಟರ್. ಶಿವಾನ ಚೀಲವನ್ನು ತೆಗೆದುಕೊಂಡು ಬಂದು ನಿಂತಿದ್ದ  ಹುಡುಗನನ್ನು ಕುರಿತು  ಮುನ್ನಡೆದರು. ಅವರು ಕೊಟ್ಟ ಒಂದು ಏಟಿಗೆ ಬೆದರಿ ಕುಸಿದ ಹುಡುಗ ತನ್ನ ತಪ್ಪೊಪ್ಪಿಕೊಂಡ. ಏವಿಯರಿಗೆ ಅಳತೆ ತೆಗೆಯುವುದಕ್ಕೆ ಶಿವಾನೊಂದಿಗೆ ಬಂದಿದ್ದವ, ಅಲ್ಲೇ ಬೆಳೆದಿದ್ದ ಶ್ರೀಗಂಧದ ಮರವನ್ನು ನೋಡಿದ್ದನಂತೆ. ಅದನ್ನು ಕಡಿದು ಸಾಗಿಸುವುದಕ್ಕೆ ತೀರ್ಮಾನ ಮಾಡಿದನಂತೆ. ರಾತ್ರಿ ಆತ ಮಾಡಿದ ಪ್ರಯತ್ನ ಗಿಳಿಯ ಅರಚಾಟದಿಂದ ಸಫಲವಾಗಲಿಲ್ಲ.
"ಗಿಳಿ ಕಳ್ಳನನ್ನು ಗುರುತಿಸಿದೆ. ಆತನನ್ನು  ಎದುರಲ್ಲಿ ಕಂಡಾಗ ಅರಚಿ ಎಚ್ಚರಿಸಿತು. ಅವನು ದೂರ ಸರಿದಾಗ ಸಮಾಧಾನದಿಂದಿತ್ತು. ಅದರ ವರ್ತನೆಯನ್ನ ಗಮನಿಸಿದಾಗ ನನಗೆ ಈ ಹುಡುಗನ ಮೇಲೆ ಅನುಮಾನ ಬಂತು.  ಅದನ್ನು ಖಚಿತ ಪಡಿಸಿಕೊಳ್ಳಲೆಂದೇ ಅವನನ್ನು ಚೀಲ ತರುವ ನೆಪದಲ್ಲಿ ಮತ್ತೇ ದೂರ ಕಳಿಸಿ ಪರೀಕ್ಷಿಸಿದೆ. ಆವನು ಹೋದಮೇಲೆ  ಸುಮ್ಮನಿದ್ದ ಗಿಳಿ, ಅವನನ್ನು ಮತ್ತೆ ಕಂಡಾಗ ಅರಚ ತೊಡಗಿತು. ನನ್ನ ಅನುಮಾನ ಪರಿಹರಿಸಿತು."
"ಅಯ್ಯೋ ಪಾಪಿ! ಹೊಟ್ಟೆಗಿಲ್ಲಾಂತ ಅಂಗಲಾಚಿದ. ಪಾಪ ಅನ್ನಿಸ್ತು! ಹೋದ ವಾರತಾನೆ  ನನ್ನ  ಜೊತೆ ಕೆಲಸಕ್ಕೆ ಇಟ್ಕೊಂಡೇ! ಇದಕ್ಕೇನಾ?"  ಶಿವಾ ಕೋಪದಿಂದ ಹುಡುಗನನ್ನು ದುರುಗುಟ್ಟಿಕೊಂಡು ನೋಡಿದ.
"ಹೊಸಬರನ್ನ ಕೆಲಸಕ್ಕೆ ಸೇರಿಸಿಕೊಳ್ಳೋವಾಗ ಎಚ್ಚರಿಕೆಯಿಂದ ಇರಬೇಕು ಶಿವಾ! ತೋಟಗಳಿಗೆ  ನುಗ್ಗಿ ಶ್ರೀಗಂಧದ ಮರ ಕಳ್ಳತನ ಮಾಡೋ ಒಂದು ಗುಂಪು ಊರೆಲ್ಲ ತಿರುಗಾಡ್ತಾ ಇದೆ! ಇವನನ್ನ ವಿಚಾರಿಸಿ್ದರೆ  ಇಡೀ ಗುಂಪು ಸಿಕ್ಕಿ ಬೀಳಬೋದು! ವಾಸು ಅವರೇ! ಇದಕ್ಕಾಗಿ ನಾನು ನಿಮ್ಮ ಗಿಣಿಗೆ ಥ್ಯಾಂಕ್ಸ್ ಹೇಳಬೇಕು!" ಎಂದರು ಇನ್ಸ್ಪೆಕ್ಟರ್. 
ಅದ್ವಿಕಾ ಮತ್ತು ಮಾಯಾ ಬೆರಗಿನಿಂದ ಬಾಯಿಬಿಟ್ಟುಕೊಂಡು ಇನ್ಸ್ಪೆಕ್ಟರ್ ಅವರ ಮಾತುಗಳನ್ನು ಕೇಳುತ್ತ ನಿಂತರು. ಗಿಳಿಯ ಸಾಮರ್ಥ್ಯವನ್ನು  ಅಪ್ಪಾ, ಅಮ್ಮ ಮತ್ತು ಶಿವಾ ಎಲ್ಲರೂ ಹೊಗಳಿದರು. 
ಇನ್ಸ್ಪೆಕ್ಟರ್ ನಂದುವನ್ನು ಕರಕೊಂಡು ಸ್ಟೇಷನಿಗೆ ಹೋಗುವವರೆಗೆ ಗಿಳಿ ಕಿರುಚಾಡುತ್ತಲೇ ಇತ್ತು.
"ಆಯಿತು! ಕಳ್ಳ ಹೊರಟು ಹೋದ! ರಿಲಾಕ್ಸ್!" ಅದ್ವಿಕಾ ಗಿಳಿಯನ್ನು ಪ್ರೀತಿಯಿಂದ ಮುದ್ದಿಸಿದಳು.
"ನಿನ್ನ ಗಿಳಿರಂಗ ಬಹಳ ಚತುರ ಅದ್ವಿಕಾ!" ಮೆಚ್ಚುಗೆಯಿಂದ ನುಡಿದಳು ಮಾಯಾ. 
"ರಂಗ ಅಲ್ಲ ಮಾಯಾ! ರಂಗಿ ಅನ್ನು!" ಎನ್ನುತ್ತ ಹಣ್ಣಿನ ಚೂರನ್ನು ಗಿಳಿಗೆ ತಿನ್ನಿಸಿದಳು ಅದ್ವಿಕಾ.
"ಹೌದಾ? ನಿನಗೆ  ಹೇಗೆ ಗೊತ್ತು?" ಆಶ್ಚರ್ಯದಿಂದ ಹುಬ್ಬೇರಿಸಿದಳು ಮಾಯಾ.
"ರಂಗ ಆಗಿದ್ದಿದ್ದರೆ ಕುತ್ತಿಗೆಯ ಸುತ್ತ ಒಂದು ಕಪ್ಪು  ಬಣ್ಣದ ಪಟ್ಟಿ ಇರುತ್ತಿತ್ತು. ಇದಕ್ಕೆ ಆ ಕಪ್ಪು ರಿಂಗ್ ಇಲ್ಲ. ಅದಕ್ಕೆ ಇದನ್ನ ರಂಗಿ ಅಂದೆ!" ಅದ್ವಿಕಾ ವಿವರಿಸಿ ಹೇಳಿದಳು.
"ಹಾಗಾ? ನೀನು ಹೇಳಿದ ಮೇಲೆ ಸರಿ!"ಎಂದು ಒಪ್ಪಿಕೊಂಡಳು ಮಾಯಾ. 
"ಸಿ. ಐ. ಡಿ. ರಂಗಿಗೆ ಜೇ!" ಎಂದು ಅದ್ವಿಕಾ ಮಾಯಾ ಇಬ್ಬರೂ ಒಕ್ಕೊರಳಿನಲ್ಲಿ ಘೋಷಿಸಿದರು. 
ಅಪ್ಪಾ ಮತ್ತು ಒಳಗಿನಿಂದ ಬಂದ  ಅಮ್ಮ ಸಹ ನಗುತ್ತ 'ಜೇ' ಎಂದರು.
-----------------------------------------------------------------------------------------------------------------------

No comments:

Post a Comment