ನೀರು! ಜೀವಿಗಳ ಅಮೃತ!
ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ.........
'ಏನಿದು? ಅಜ್ಜಿ ತಾತ ಹೇಳುವ ಮಂತ್ರಗಳಲ್ಲಿ ಕೇಳಿಬರುವ ಹೆಸರುಗಳಂತೆ ತೋರುತ್ತವಲ್ಲ?' ಎಂದು ಯೋಚಿಸುವಿರಾ ಮಕ್ಕಳೇ? ನೀವು ತುಂಬಾ ಜಾಣರು! ಸರಿಯಾಗಿಯೇ ಊಹಿಸಿದ್ದೀರಿ!
ಇವೆಲ್ಲ ನಮ್ಮ ಭಾರತ ಪುಣ್ಯ ಭೂಮಿಯಲ್ಲಿ ಹರಿಯುವ ಮಹಾ ನದಿಗಳ ನಾಮಾಂಕಿತಗಳೇ!
ಪ್ರಕೃತಿ ಒದಗಿಸಿಕೊಟ್ಟಿರುವ ಸಂಪನ್ಮೂಲಗಳಲ್ಲಿ ಒಂದಾದ ನೀರನ್ನು ಅತ್ಯಮೂಲ್ಯವಾದ ಸಂಪತ್ತು ಎನ್ನಬಹುದು. ನೀರು ನಮ್ಮೆಲ್ಲರ ಬದುಕಿಗೆ ಅತ್ಯವಶ್ಯಕವಾದ ಒಂದು ವಸ್ತು. ನೀರಿಲ್ಲದ ಬದುಕನ್ನು ಕಲ್ಪನೆ ಮಾಡುವುದಕ್ಕೂ ಆಗುವುದಿಲ್ಲ. ಪಕ್ಷಿ, ಪ್ರಾಣಿ, ಮರ, ಗಿಡಗಳೂ ಸಹ ನೀರಿಲ್ಲದೆ ಬದುಕಲಾರವು. ಈ ಭೂಮಿಯಲ್ಲಿಯ ಅಸಂಖ್ಯಾತ ಜೀವ ಜಂತುಗಳಿಗೆ ನೀರು ಜೀವ ಕೊಡುವ ಅಮೃತ. ನದಿಗಳು, ಬಾವಿಗಳು, ಕೆರೆಗಳು ಮತ್ತು ಕಟ್ಟೆಗಳು ತುಂಬಿತುಳುಕುತ್ತಿದ್ದರೆ ಮಾತ್ರ ಪ್ರಾಣಿ, ಪಕ್ಷಿ ಮತ್ತು ಮನುಷ್ಯರ ಬಾಳು ಹಸನಾಗಿರಲು ಸಾಧ್ಯ.
ಪ್ರಕೃತಿಯನ್ನೂ, ಅದು ಒದಗಿಸಿಕೊಟ್ಟಿರುವ ಸಂಪನ್ಮೂಲಗಳನ್ನೂ ದೈವವೆಂದೇ ಗೌರವಿಸಿ ಆರಾಧಿಸುವುದು ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಬಂದಿರುವ ಪದ್ಧತಿ. ದೇವರಿದ್ದ ಕಡೆ ಆರಾಧನೆ! ಆರಾಧಿಸುವ ಕಡೆ ಸ್ವಚ್ಛತೆ! ಸ್ವಚ್ಛತೆ ಇದ್ದರೆ ಆರೋಗ್ಯ! ನದಿಗಳನ್ನೂ ಜಲಮೂಲಗಳನ್ನೂ ಆರಾಧಿಸುವುದರ ಮೂಲಕ ನೀರನ್ನು ಕಣ್ಣಿನಂತೆ ಕಾಪಾಡುವುದು, ಸ್ವಚ್ಛವಾಗಿಡುವುದು ಮುಂತಾದ ಚಟುವಟಿಕೆಗಳು ತನ್ನಿಂದ ತಾನಾಗಿಯೇ ನಡೆದುಹೋಗುತ್ತವೆ.
ಗಂಗಾ ಆರತಿ
'ನೀರು ಚೆಲ್ಲಿ ಹಾಳುಮಾಡಿದರೆ ದರಿದ್ರ ಬರುತ್ತೆ! ಹಸಿರು ಮರ ಕಡಿದರೆ ಪಾಪ ಸುತ್ಕೊಳ್ಳತ್ತೆ! ಭೂಮಿದೇವಿ ಅದುರೋ ಹಾಗೆ ವರ್ತಿಸಿದರೆ ಭೂಕಂಪ ಬರತ್ತೆ!' ಚಿಕ್ಕಂದಿನಲ್ಲಿ ನನ್ನ ಅಜ್ಜಿ ಹೀಗೆಲ್ಲ ಹೇಳಿ ನನ್ನನ್ನು ಎಚ್ಚರಿಸುತ್ತಿದ್ದಳು. ಇವೆಲ್ಲ ಪರಿಸರ ಸಂರಕ್ಷಣೆಯ ಬಗ್ಗೆ ಅಜ್ಜಿ ನನಗೆ ಹೇಳಿಕೊಟ್ಟ ಮೊದಲನೇ ಪಾಠವೆಂಬುದು ಇಂದು ಅರ್ಥವಾಗುತ್ತಿದೆ.
ಅಖಂಡ ಕಾವೇರಿ |
ಮಳೆಯನ್ನುಂಟುಮಾಡಲು ಅವಶ್ಯಕವಾದ ಅಂಶಗಳಾದ ಕಾಡುಗಳ ಮತ್ತು ಬೆಟ್ಟ ಗುಡ್ಡಗಳ ವಿನಾಶದಿಂದ ಮಳೆಯ ಅಭಾವ ಉಂಟಾಗಿದೆ. ಜೀವನದಿಗಳಿಗೆ ನೀರುಣಿಸುವ ಮಳೆಯ ಕೊರತೆಯಿಂದ ಸ್ವಚ್ಛ ನೀರಿಗೆ ಬರ ಬಂದಿದೆ. ಒಂದಾನೊಂದು ಕಾಲದಲ್ಲಿ ಜಲರಾಶಿಯಿಂದ ತುಂಬಿ ಹರಿಯುತ್ತಿದ್ದ ನದಿಗಳು ಇಂದು ಒಣಗಿಹೋಗಿ ಮರಳು ನದಿಗಳಾಗಿಬಿಟ್ಟಿವೆ.
ಇಂದಿನ ಪರಿಸರ ಪ್ರಜ್ಞೆ ಇಲ್ಲದ ಪ್ರಗತಿಪರವಾದ ಯೋಜನೆಗಳಿಂದ ನಮ್ಮ ಸಂಪನ್ಮೂಲಗಳಿಗೆ ಅಪಾಯ ಉಂಟಾಗಿದೆ. ಅನೇಕ ಜೀವನದಿಗಳೆಲ್ಲ ಇಂದು ಜೀವ ಬತ್ತಿಹೋಗಿ ಕಸದ ಗುಂಡಿಗಳಾಗಿ, ಖಾರ್ಕಾನೆಗಳಿಂದ ಹೊರಹೊಮ್ಮುವ ಕೊಳಚೆ ನೀರು ಹರಿವ ಚರಂಡಿಗಳಾಗಿ, ಮರಳುಗಣಿಗಳಾಗಿ ಪರಿವರ್ತಿಸಿವೆ. ಉಳಿದಿರುವ ಅಲ್ಪ ಸ್ವಲ್ಪ ಜಲಮೂಲಗಳೂ ಕಲುಷಿತಗೊಂಡು ರೋಗ ರುಜಿನಗಳು ಹೆಚ್ಚಾಗಿವೆ.
ಮಕ್ಕಳೇ! ನೀವು ನಾಳೆಯ ಪ್ರಜೆಗಳು! ನಿಮ್ಮ ಭವಿಷ್ಯಕ್ಕಾಗಿ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕಾದದ್ದು ನಿಮ್ಮ ಹೊಣೆ. ಮುಖ್ಯವಾಗಿ ಅತ್ಯಮೂಲ್ಯವಾದ ಸಂಪನ್ಮೂಲವಾದ ನೀರನ್ನು ವ್ಯಯ ಮಾಡದಿರಿ. ಜಲಮೂಲಗಳನ್ನು ಶುಚಿಯಾಗಿಡಲು ಪ್ರಯತ್ನಿಸಿ. ಗಿಡ ಮರಗಳನ್ನು ಸಂರಕ್ಷಿಸಿ. ಬತ್ತಿಹೋದ ಬಾವಿಗಳನ್ನೂ ಕೆರೆಗಳನ್ನೂ ಪುನರುಜ್ಜೀವನಗೊಳಿಸಿ. ನಿಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ. ನಿಮ್ಮ ಹಿರಿಯರೊಂದಿಗೆ ಚರ್ಚಿಸಿ ಅವರನ್ನೂ ಈ ಮಹತ್ಕಾರ್ಯದಲ್ಲಿ ಬಾಗಿಯಾಗಲು ಒತ್ತಾಯಿಸಿ.
ಪ್ರಕೃತಿಯ ಕೊಡುಗೆಯಾದ ಸಂಪನ್ಮೂಲಗಳನ್ನು ಆರಾಧಿಸಿ. ಅವುಗಳನ್ನು ರಕ್ಷಿಸುವುದರ ಮೂಲಕ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.
No comments:
Post a Comment