ಜುಗ್ಗ ಜುಗ್ಗಿ !
ಪಾಪು ಎರಡು ಕೈಗಳಲ್ಲೂ ಒಂದೊಂದು ಬಿಸ್ಕೆಟ್ಟು ಹಿಡಿದು ಕೊಂಡು ಚೀಪುತ್ತಿತ್ತು .
"ಪಾಪೂ ತಾತ್ನ್ಗೊಂದು ಬಿಸ್ಕೆಟ್ ಕೊಡೊ !" ಎನ್ನುತ್ತಾ ಕೈ ಚಾಚಿದರು ತಾತ .
'ಊ ಹುಂ!' ಎಂದು ತಲೆ ಅಲ್ಲಾಡಿಸಿ ನಕ್ಕಿತು ಪಾಪು .
" ನನಗೇ ?" ಎಂದು ಕೈ ಚಾಚಿದ ಪುಟ್ಟಣ್ಣ .
ಪಾಪು ಬಿಸ್ಕೆಟ್ಟನ್ನು ತನ್ನ ಹಿಂದೆ ಬಚ್ಚಿಟ್ಟುಕೊಂಡಿತು .
" ಮುದ್ದು ಪಾಪು ನನ್ಗೆ ಕೊಟ್ಟೇ ಕೊಡತ್ತೆ ನೋಡು !" ಎಂದು ತಾನೂ ಕೈ ಚಾಚಿ "ನನ್ಗೆ ?" ಎಂದಳು ಪುಟ್ಟಿ .
ಪಾಪು ಬಿಸ್ಕೆಟ್ಟನ್ನು ಬಿಗಿಯಾಗಿ ಹಿಡಿದುಕೊಂಡು ವೇಗವಾಗಿ ತೆವಳುತ್ತ ಹೋಗಿ ಅಜ್ಜಿಯ ಮಡಿಲಲ್ಲಿ ಬದ್ರವಾಗಿ ಕುಳಿತುಕೊಂಡಿತು .ಅಜ್ಜಿ ಕೇಳದೆಯೇ ಚೂರೇ ಚೂರು ಮುರಿದು ಅವಳ ಬಾಯಿಗೆ ಹಾಕಿತು .
"ಆಹಹಃ ! ಎಷ್ಟ್ ದೊಡ್ಚೂರು ಕೊಟ್ಬಿಟ್ಟೆ ! ಜುಗ್ಗ ಕಣೋ ನೀನು !" ಎಂದರು ತಾತ ನಗುತ್ತ .
"ಪ್ರಪಂಚ್ದಲ್ಲಿರೋ ಎಲ್ಲ ಜುಗ್ಗರನ್ನೂ ನುಂಗಿ ನೀರು ಕುಡಿಯೋಂತ ಜುಗ್ಗರ ಕಥೆಯೆಲ್ಲಾ ಕೇಳಿದ್ದೀವಿ ! ಅಂತಾದ್ರಲ್ಲಿ ಪಾಪೂನ ಯಾರದ್ರೂ ಜುಗ್ಗ ಅನ್ತಾರೆಯೇ? ನನ್ಗೆ ಅದೆಷ್ಟ್ ಚೆನ್ನಾಗಿ ಬಿಸ್ಕೆಟ್ ತಿನ್ನಿಸ್ದ ನೋಡಿ !" ಎಂದು ಪಾಪೂನ ಮುದ್ದಿಸುತ್ತ ನುಡಿದಳು ಅಜ್ಜಿ .
"ಹೌದೌದು ! ಆ ಜುಗ್ಗೋತ್ತುಂಗನ ಹೆಂಡತಿಯೋ ಅವನ್ಗಿಂತ ಒಂದು ಪಟ್ಟು ಹೆಚ್ಚಾಗಿ ಜುಗ್ಗತನ ತೋರ್ತಿದ್ಳು ಅಲ್ವೇ ?" ಎಂದು ನೆನೆಪಿಸಿಕೊಂಡು ಮಾತನಾಡಿದರು ತಾತ.
"ಅಂದ್ರೆ ಅವ್ಳು ಜುಗ್ಗಿಯೇ ?" ಪುಟ್ಟಿ ಉತ್ಸಾಹದಿಂದ ಕೇಳಿದಳು .
"ಹೂಂ ! ಜುಗ್ಗನಿಗೆ ತಕ್ಕ ಜುಗ್ಗಿ !" ಎಂದರು ತಾತ.
"ಜುಗ್ಗ ಜುಗ್ಗಿ ! ಹೈಯ ! ತುಂಬಾ ಚೆನ್ನಾಗಿದೆ ಟೈಟಲ್ಲು . ಅವ್ರ ಕಥೆನೂ ನಿಮ್ ತಾತ ಹೇಳಿರ್ಬೇಕಲ್ಲಾ ? ಹೇಳಜ್ಜಿ ಆ ಕಥೇನ !" ಎಂದು ಕಾಡ ತೊಡಗಿದಳು ಪುಟ್ಟಿ .
"ಸರೀ ! ಸರೀ ! ಹೇಳ್ತಿನಿ ಕೇಳು !" ಎಂದು ಶುರು ಮಾಡಿದಳು ಅಜ್ಜಿ .
ಒಂದಾನೊಂದು ಕಾಲದಲ್ಲಿ ಒಬ್ಬ ಜುಗ್ಗನಿದ್ದನಂತೆ . ದಿನವಿಡೀ ಇನ್ನೇನು ಜುಗ್ಗತನ ಮಾಡಬಹುದೆಂಬ ಚಿಂತೆಯಲ್ಲೇ ಕಳೆಯುತ್ತಿದ್ದನಂತೆ .
ಹತ್ತು ಪಟ್ಟು ಹಿಂದಕ್ಕೆ ಪಡೆಯಬಹುದೆಂಬ ಭರವಸೆ ಇಲ್ಲದೆ , ಅವನು ಯಾರೊಬ್ಬರಿಗೂ ಒಂದೇ ಒಂದು ಕಾಳನ್ನೂ ಕೂಡ ಕೊಡುತ್ತಿರಲಿಲ್ಲ .
ಅವನಿಗಿಂತ ಭಾರೀ ಜುಗ್ಗತನ ತೋರುತ್ತಿದ್ದಳು ಅವನ ಹೆಂಡತಿ.
ಹಬ್ಬ ಹರಿದಿನಗಳನ್ನು ಪಾಯಸ ಮಾಡಿ ಕೊಂಡಾಡುವುದು ಸಾಮಾನ್ಯ ಜನರ ವಾಡಿಕೆ . ಜುಗ್ಗ ಜುಗ್ಗಿ ಕೂಡ ಹಬ್ಬ ಮಾಡಿ ಪಾಯಸ ಕುಡಿದರು , ಪಾಯಸ ಮಾಡದೆಯೇ ! ಇಷ್ಟೇ ಇಷ್ಟು ಧಾನ್ಯಗಳನ್ನೂ ಇಷ್ಟೇ ಇಷ್ಟು ಬೆಲ್ಲವನ್ನೂ ಬಟ್ಟೆಯಲ್ಲಿ ಮೂಟೆಯಾಗಿ ಕಟ್ಟಿ ನೀರಿನಲ್ಲಿ ಅದ್ದಿ , ಆ ನೀರನ್ನೇ ಪಾಯಸವೆಂದುಕೊಂಡು ಕುಡಿಯುತ್ತಿದ್ದ ಜುಗ್ಗ . ಅವನ ಹೆಂಡತಿಯೋ ಆ ಮೂಟೆಯನ್ನು ಬಟ್ಟಲ ನೀರಿನ ಮೇಲೆ ಎತ್ತಿ ಹಿಡಿದು, ಧಾನ್ಯ-ಬೆಲ್ಲದ ಮೂಟೆ ಪ್ರತಿಬಿಂಬಿಸಿದ ಬಟ್ಟಲ ನೀರನ್ನು ಪಾಯಾವೆಂದು ಕುಡಿಯುತ್ತಿದ್ದಳು !
ಧಾನ್ಯವೂ ಬೆಲ್ಲವೂ ಕರ್ಚು ಮಾಡದೆಯೇ ಪಾಯಸ ಕುಡಿದ ಖುಷಿ ಜುಗ್ಗ ಮತ್ತು ಜುಗ್ಗಿಗೆ !
ಒಮ್ಮೆ ಜುಗ್ಗ ಜಗಲಿಯ ಮೇಲೆ ಆಲಸ್ಯದಿಂದ ಕಣ್ಣು ಮುಚ್ಚಿ ಮಲಗಿಕೊಂಡಿದ್ದನು. ಏನೇನೋ ಶಬ್ದಗಳನ್ನು ಮಾಡುತ್ತಿದ್ದನು :
'ಹೈ ,ಹೈ , ತ್ಳುಕ್ ತ್ಳುಕ್ , ಡ್ರೀಯ ! '
"ಏನು ಮಾದಿತ್ತಿರುವೆ ?'' ಎಂದು ಆಶ್ಚರ್ಯದಿಂದ ಕೇಳಿದಳು ಜುಗ್ಗಿ .
" ನನ್ನ ಕಾಲ್ಪನಿಕ ಆಕಳನ್ನು ನಾನು ಬಜಾರಿಗೆ ಕರೆದೊಯ್ಯುತ್ತಿರುವೆ !ಆಹಾ ! ಎಷ್ಟು ಸೊಗಸಾದ ಆಕಳು ! ಪುಷ್ಟಿಯಾದ ದೇಹ ! ಮಿರಿ ಮಿರಿ ಹೊಳೆವ ಕಂದು ಬಣ್ಣ! ದೊಡ್ಡ ಕಣ್ಣುಗಳು ! ಕಿವಿಗಳು !ಒಮ್ಮೆಗೆ ಹತ್ತು ಕೊಡ ಹಾಲನ್ನು ಕೊಡ ಬಲ್ಲಳು !ಹಾಲನ್ನು ಮಾರಿ ನಾನು ದೊಡ್ಡ ಶ್ರೀಮಂತನಾಗುವೆ !"
" ಒಹ್ ! ಎಂತಹ ಅದ್ಬುತವಾದ ಆಕಳು !" ಜುಗ್ಗಿ ತನ್ನ ಕಲ್ಪನೆಯನ್ನೂ ಸೇರಿಸಿದಳು. " ಆಕಳನ್ನು ನನ್ನ ಸೋದರನ ಮನೆಗೆ ಮೇವಿಗೆ ಕರೆದೊಯ್ಯುವೆ. ಸಂಜೆ ಹಾಲನ್ನು ಕರೆಯುವೆ ! ನಾಲ್ಕು ಕೊಡ ಕರೆದ ಹಾಲನ್ನು ನನ್ನ ಸೋದರನಿಗೆ ಕಳುಹಿಸುವೆ !"
" ನನ್ನ ಆಕಳಿನ ಹಾಲನ್ನು ನಿನ್ನ ಸೋದರನಿಗೆ ಕೊಡಲು ನಿನಗೆಷ್ಟು ಧೈರ್ಯ !'' ಎಂದು ಕೂಗಾಡಿ ಜುಗ್ಗಿಯನ್ನು ಬಡೆದನು ಜುಗ್ಗ.
ಜುಗ್ಗಿ ಗಟ್ಟಿಯಾಗಿ ಬೊಬ್ಬೆಯಿಟ್ಟ ಕಾರಣ ನೆರೆಹೊರೆಯವರೆಲ್ಲ ಅಲ್ಲಿ ಕೂಡಿಬಿಟ್ಟರು.
" ಯಾಕಪ್ಪ ಅವಳನ್ನ ಹೊಡೆಯುತ್ತಿರುವೆ ?"ಎಂದು ಅವನನ್ನು ಪ್ರಶ್ನಿಸಿದರು .
" ನನ್ನ ಆಕಳಿನ ಹಾಲನ್ನು ತನ್ನ ಸೋದರನಿಗೆ ಬಿಟ್ಟೀ ಕಳಿಸೋದೆ ಮತ್ತೆ ?"
" ಆದರೆ ನಿನ್ನ ಆಕಳನ್ನು ಮೇವಿಗೆ ಬಿಟ್ಟಿದ್ದು ನನ್ನ ಸೋದರನ ಮನೆಯಲ್ಲಿತಾನೇ!"ಜುಗ್ಗಿ ಕೂಗಿದಳು .
" ಅದ್ಸರಿ ! ನಿನ್ನ ಆಕಳೆಲ್ಲಿ ಈಗ ?" ಎಂದು ಪ್ರಶ್ನಿಸಿದರು ಬಂದವರು .
" ನನ್ನ ಕಲ್ಪನೆಯಲ್ಲಿದೆ !'' ಎಂದು ಜಂಬದಿಂದ ನುಡಿದ ಜುಗ್ಗ .
" ಸರಿ ಸರಿ ! ಕಲ್ಪನೆಯ ಹಾಲಿಗೂ ಕಲ್ಪನೆಯ ಹುಲ್ಲಿಗೂ ಲೆಕ್ಕ ಸರಿ ಹೋಯಿತು ! ಈಗ ಗಲಬೆ ಮಾಡದೆ ಸುಮ್ಮನಿರಿ !"ಎಂದು ಎಲ್ಲರೂ ಬೈದು ಹೋದರು .
ಜುಗ್ಗ ಮತ್ತು ಜುಗ್ಗಿ ಹಾಲೆಂದು ಭಾವಿಸಿ ತಂಬಿಗೆ ನೀರನ್ನು ಕುಡುದು ತೃಪ್ತಿಯಿಂದ ಮಲಗಿದರು!
ಜುಗ್ಗ ಪಕ್ಕದ ಊರಲ್ಲಿದ್ದ ತನ್ನ ನೆಂಟರ ಮನೆಗೆ ಆಗಾಗ ಹೋಗಿ ಊಟ ಮಾಡಿ ಬರುವುದು ವಾಡಿಕೆ . ಮನೆಯ ಯಜಮಾನ ಬಹಳ ಒಳ್ಳೆಯ ಸ್ವಭಾವದವ. ಜುಗ್ಗನಿಗೆ ಊಟ ಹಾಕುವುದಲ್ಲದೆ ಕೈ ತುಂಬಾ ಹಣ್ಣು ಹಂಪಲು ಕೊಟ್ಟು ಕಳುಹಿಸುತ್ತಿದ್ದ .
ಒಮ್ಮೆ ಜುಗ್ಗ ಅವರ ಮನೆಗೆ ತೆರಳಿದ್ದಾಗ , ಅಂಗಳದಲ್ಲಿದ್ದ ತುಳಸಿ ಕಟ್ಟೆಯ ಸುತ್ತ ಹರಡಲ್ಪಟ್ಟಿದ್ದ ಹೊಸ ಬೇಳೆಕಾಳುಗಳನ್ನು ಕಂಡನು . ಅವನ ಬಾಯಲ್ಲಿ ನೀರೂರಿತು ! ' ಆಹಾ ! ಇದರಿಂದ ರುಚಿ ರುಚಿಯಾದ ವಡೆ ತಯಾರಿಸಬಹುದಲ್ಲ !" ಎಂದುಕೊಂಡನು .
ಬೇಳೆಕಾಳನ್ನು ಕೇಳಿ ಪಡೆಯಲು ಅಡ್ಡ ಬಂದಿತು ಅವನ ಒಣ ಜಂಬ ! ಕರೀದಿ ಮಾಡಲು ಅಡ್ಡಿಯಾಯಿತು ಅವನ ಜುಗ್ಗತನ !
ಆದ್ದರಿಂದ ಅವನು ಒಂದು ತಂತ್ರವನ್ನು ಹೂಡಿದನು .
ಹೊರಡುವ ಮುನ್ನ ಗಾಡಿಯ ಚಕ್ರದ ಕೀಲನ್ನು ತನ್ನ ಒಡಲಿಗೆ ಲೇಪನ ಮಾಡಿಕೊಂಡು ಅಂಗಳವನ್ನು ಕುರಿತು ನಡೆದನು .
" ಅಯ್ಯೋ !ಇಂದು ದ್ವಾದಶಿಯಲ್ಲವೇ ? ನನಗೆ ಪ್ರತಿ ದ್ವಾದಶಿಯಂದೂ ಉರುಳು ಸೇವೆ ಮಾಡುವ ಪದ್ಧತಿ !" ಎಂದು ಪ್ರಕಟಣೆ ಮಾಡಿ , ದಡೀರೆಂದು ಕೆಳಗೆ ಬಿದ್ದು ತುಳಸೀ ಕಟ್ಟೆಯ ಸುತ್ತ 'ಗೋವಿಂದ ಗೋವಿಂದ ' ಎಂದು ಜಪಿಸುತ್ತ ಉರುಳ ತೊಡಗಿದನು. ಮನೆ ಯಜಮಾನ ಮತ್ತು ಅವನ ಪತ್ನಿ ವಿಸ್ಮಯದಿಂದ ನೋಡಿ ಭಕ್ತಿಯಿಂದ ಕೆನ್ನೆಗೆ 'ರಪ ರಪ' ಬಡಿದುಕೊಂಡರು .
ಜುಗ್ಗ ಉರುಳಿದಂತೆ ಹರಡಿದ್ದ ಬೇಳೆ ಕಾಳುಗಳು ಯಥೇಷ್ಟವಾಗಿ ಅವನ ಮೈಗಂಟಿಕೊಂಡಿತು . ನಂತರ ಅವಸವಸರವಾಗಿ ದುಪ್ಪಟ್ಟಿ ಹೊದ್ದುಕೊಂಡು ಬಿರಬಿರನೆ ಮನೆಗೆ ಹಿಂದಿರುಗಿದನು .
ಮನೆಯಲ್ಲಿ ಜುಗ್ಗನ ದುಪ್ಪಟ್ಟಿಯಿಂದ ಉದುರಿದ ಬೇಳೆಕಾಳುಗಳನ್ನು ಕಂಡ ಜುಗ್ಗಿಗೆ ಆನಂದವೋ ಆನಂದ !
" ನನ್ನ ಬುದ್ಧಿವಂತಿಗೆಗೆ ಏನಂತೀ ? ಬೇಳೆಕಾಳುಗಳನ್ನ ತೊಳೆದು, ನೆನೆಸಿ ರುಬ್ಬು ಹೋಗು . ರುಚಿಯಾದ ವಡೆಗಳನ್ನ ತಯಾರಿಸಿ ಸವಿಯೋಣ .
ಜುಗ್ಗಿ ಬೇಳೆಯನ್ನು ರುಬ್ಬಿ ಆರು ವಡೆಗಳನ್ನು ತಯಾರಿಸಿದಳು .
" ನಾನು ಹೋಗಿ ಕೀಲು ಅಂಟಿದ ಮೈ ತೊಳೆದುಕೊಂಡು ಬರುವೆ . ನಂತರ ನೀನು ಮೂರು ನಾನು ಮೂರು ವಡೆಗಳನ್ನ ತಿನ್ನೋಣ ." ಎಂದು ನುಡಿದು ಬಾವಿಯತ್ತ ನಡೆದ ಜುಗ್ಗ .
ಜುಗ್ಗಿಗೆ ವಡೆ ತಿನ್ನಬೇಕೆಂಬ ತಡೆಯಲಾರದ ಆಸೆ! ತನ್ನ ಪಾಲಿನ ಮೂರು ವಡೆಗಳನ್ನು ಒಂದೇ ಏಟಿಗೆ ಗಪಗಪನೆ ಮುಕ್ಕಿಬಿಟ್ಟಳು ! ನಂತರ ಆತುರಾತುರವಾಗಿ ಇನ್ನೆರಡು ವಡೆಗಳನ್ನೂ ಕಬಳಿಸಿದಳು . ಸ್ನಾನ ಮುಗಿಸಿ ಬಂದ ಜುಗ್ಗ ಉಳಿದಿದ್ದ ಒಂದೇ ಒಂದು ವಡೆಯನ್ನು ಕಂಡು ಬಲು ಕೋಪಗೊಂಡನು .
" ಅದು ಹೇಗೆ ಒಂದೇ ಏಟಿಗೆ ಐದು ವಡೆಗಳನ್ನ ತಿಂದು ಹಾಕಿದೆ ?" ಎಂದು ಹಾರಾಡಿದನು .
" ಇಗೋ ! ಹೀಗೇ !" ಎನ್ನುತ್ತಾ ಉಳಿದಿದ್ದ ಕೊನೆಯ ವಡೆಯನ್ನು ಬಾಯಿಗೆ ತುರುಕಿಕೊಂಡು ಮೆಲ್ಲುತ್ತಲೇ ನುಡಿದಳು ಜುಗ್ಗಿ !
ಜುಗ್ಗ ಪಾಪ , ತನ್ನ ಬರಿದಾದ ಬಾಯನ್ನೇ ಮೆಲ್ಲುತ್ತ ಅವಳನ್ನೇ ನೋಡುತ ನಿಂದನು!
ಒಮ್ಮೆ ಜುಗ್ಗನ ಸಂಬಂಧಿಕನೊಬ್ಬ ಮನೆಗೆ ಬಂದು , ತಾನು ಕ್ಷೇತ್ರಾಟನ ಹೊರಟಿರುವುದಾಗಿಯೂ ಒಂದೇ ಒಂದು ದಿವಸ ಅವರ ಮನೆಯಲ್ಲಿ ವಿಶ್ರಾಂತಿ ಪಡೆದು, ನಂತರ ಹೊರಟು ಹೋಗುವೆನೆಂದು ಕೇಳಿಕೊಂಡನು . ಜುಗ್ಗನಿಗೆ ಅತಿಥಿ ಸತ್ಕಾರ ಮಾಡುವ ಮನಸ್ಸಿರಲಿಲ್ಲ .
ಅತಿಥಿ ಕೈ ಕಾಲು ತೊಳೆಯಲೆಂದು ಬಾವಿ ಕಟ್ಟೆಯ ಕಡೆ ನಡೆದೊಡನೆ , ಜುಗ್ಗ ಜುಗ್ಗಿ ಇಬ್ಬರೂ ಒಂದು ನಾಟಕವನ್ನಾಡಿ ಆತನನ್ನು ಮನೆಯಿಂದ ಹೊರಗಟ್ಟಲು ಒಂದು ಉಪಾಯವನ್ನ ಮಾಡಿದರು .
ಅದರ ಪ್ರಕಾರ ಜುಗ್ಗ ಜುಗ್ಗಿಯನ್ನು ಜೋರಾಗಿ ಬಡಿಯುವಂತೆ ನಟಿಸ ಬೇಕು ! ಜುಗ್ಗಿ ಗಟ್ಟಿಯಾಗಿ ಕೂಗಿ ಅಳ ಬೇಕು !
ಅತಿಥಿ ಚೆನ್ನಾಗಿ ಸ್ನಾನ ಮಾಡಿ ಶುಭ್ರವಾಗಿ ಒಳಗೆ ಬಂದದ್ದೆ ತಡ ! ಜುಗ್ಗ ಜುಗ್ಗಿಯರ ನಾಟಕ ಶುರುವಾಯಿತು !
ಜುಗ್ಗ ಬಲವಾಗಿ ಹೊಡೆಯುವ ನಾಟಕ ಶುರು ಮಾಡಲು ಜುಗ್ಗಿ ನೋವಿನಿಂದ ಗೊಳೋ ಎಂದು ಅಳುವ ನಾಟಕ ಮಾಡಿದಳು.
ಇದನ್ನು ಕಂಡ ಅತಿಥಿ ಹೆದರಿ ಕೂಡಲೇ ಕಣ್ಮರೆಯಾದನು .
ಊಟದ ವೇಳೆ ಜುಗ್ಗ ಜುಗ್ಗಿ ಇಬ್ಬರೂ ನಗುನಗುತ್ತ ಒಬ್ಬರನ್ನೊಬ್ಬರು ಅಭಿನಂದಿಸುತ್ತ ಊಟಕ್ಕೆ ತೊಡಗಿದರು .
" ನೋಡು ! ನಾನು ಅದೆಷ್ಟು ಚಾತುರ್ಯದಿಂದ ಹೊಡೆದೆ ನಿನಗೆ ನೋವಾಗದಂತೆ !" ಎಂದು ಕೊಚ್ಚಿಕೊಂಡ ಜುಗ್ಗ .
" ನಾನು ಅದೆಷ್ಟು ಅದ್ಭುತವಾಗಿ ರೋದಿಸಿದೆ ನೋಡು , ಎಡೆಬಿಡದಂತೆ !" ಎನ್ನುತ್ತ ಕಿಸಿಕಿಸಿ ನಕ್ಕಳು ಜುಗ್ಗಿ .
"ನಾನು ಅದೆಷ್ಟು ಜಾಣತನದಿಂದ ಬಚ್ಚಿಟ್ಟುಕೊಂಡಿದ್ದೆ ನೋಡಿ ಹೊರಟು ಹೋಗದಂತೆ !" ಎನ್ನುತ್ತ ಅಟ್ಟದಿಂದ ಜಿಗಿದ ಮೊಂಡನಾದ ಅತಿಥಿ !
ಜುಗ್ಗ ಜುಗ್ಗಿಯರ ಮಾತನ್ನು ಕದ್ದು ಕೇಳಿಸಿಕೊಂಡಿದ್ದ ಅತಿಥಿ, ಅವರುಗಳ ಹೊಲಸು ತಂತ್ರವನ್ನು ಮಟ್ಟ ಹಾಕುವುದಕ್ಕಾಗಿ ಅಲ್ಲೇ ಉಳಿದುಕೊಂಡಿದ್ದ !
ಜುಗ್ಗ ಮತ್ತು ಜುಗ್ಗಿಗೆ ಇನ್ನೇನೂ ಮಾತನಾಡಲು ಆಗಲಿಲ್ಲ ! ತಮ್ಮ ಊಟವನ್ನು ಅತಿಥಿಯೊಂದಿಗೆ ಹಂಚಿಕೊಳ್ಳದೆ ಬೇರೆ ವಿಧಿಯೇ ಇರಲಿಲ್ಲ !" ಹೈಯೋ ! ಹೈಯೋ ! ಒಳ್ಳೆ ಜುಗ್ಗ ! ಒಳ್ಳೆ ಜುಗ್ಗಿ! ಒಳ್ಳೆ ಅತಿಥಿ !" ಎಂದು ಹೊಟ್ಟೆ ಹಿಡಿದುಕೊಂಡು ನಕ್ಕರು ಪುಟ್ಟಿ ಮತ್ತು ಪುಟ್ಟಣ್ಣ . ಪಾಪು ತನಗೂ ಏನೋ ಅರ್ಥವಾದಂತೆ ಕಿಲ ಕಿಲ ನಕ್ಕಿತು .