Wednesday, May 28, 2014

Mruganayakana Kathe / ಮೃಗನಾಯಕನ ಕಥೆ - The Beast Story - 1

ಮೃಗನಾಯಕನ ಕಥೆ 
ಬೋನಿನಲ್ಲಿದ್ದ ಹುಲಿ ಜೋರಾಗಿ ಗರ್ಜಿಸಿತು. "ಅಬ್ಬಬ್ಬ ! ಹುಲಿ ಎಷ್ಟ್ ಜೋರಾಗಿ ಗರ್ಜಿಸ್ತಿದೆ! ಬೇಗ ಹೋಗ್ನೋಡೋಣ ಬಾ   ತಾತ !" ಪುಟ್ಟಣ್ಣ ತಾತನ ಕೈ ಹಿಡಿದೆಳೆದು ಅವಸರ ಪಡಿಸಿದ . 
"ಅಯ್ಯೋ ! ಬೇಡಪ್ಪ ! ನಾನ್ ಬರಲ್ಲ ! ನನ್ಗೆ  ಭಯ !" ಪುಟ್ಟಿ ಅಜ್ಜಿಯ ಕೈಯನ್ನು  ಬಿಗಿಯಾಗಿ   ಹಿಡಿದುಕೊಂಡು ನಿಂತಲ್ಲೇ ಗಟ್ಟಿಯಾಗಿ ನಿಂತಳು . 
"ನೀನ್ಯಾಕೇ  ಕಾಸ್ಬಂಗ್ಲಿಗೆ ಬಂದೆ?" ಪುಟ್ಟಣ್ಣ ರೇಗಿದ . 
"ಮೊದ್ಲೇ ಅವ್ಳು ಹೆದ್ರಿದ್ದಾಳೆ ! ಸುಮ್ನಿರೋ ಪುಟ್ಟಣ್ಣ ." ಎಂದ ತಾತ , " ಪುಟ್ಟಿ ! ನೀನೂ ಅಜ್ಜಿ ಸುತ್ತಿ ಬಳಸ್ಕೊಂಡು ಜಾರಾ ಬಂಡೆ ಕಡೆ ಬಂದ್ಬಿಡಿ . ನಾನೂ ಪುಟ್ಟಣ್ಣ ಹುಲಿ ನೋಡ್ಕೊಂಡು ಅಲ್ಲಿಗ್ ಬರ್ತಿವಿ ." ಇಬ್ಬರು ಮಕ್ಕಳಿಗೂ ಸಮಾಧಾನ ಹೇಳಿದರು . 
"ಅದೇಕೆ ? ನಾವೂ ಹುಲಿ ನೋಡಕ್ಕೆ ಬಂದೇ  ಬರ್ತಿವಿ ! ನಮ್ಗೇನು  ಧೈರ್ಯ  ಇಲ್ವೇನು ?" ಎಂದಳು ಅಜ್ಜಿ . 
"ಅಜ್ಜಿ ! ಬೇಡ ಅಜ್ಜಿ !" ಪುಟ್ಟಿ ಅಳುಮೋರೆ  ಹಾಕಿಕೊಂಡಳು . 
"ಹುಲಿಗೆಲ್ಲ ಹೆದರ್ತಾರೇನೆ ? ನಿನ್ನಂತೆ  ಇದ್ದ ಒಬ್ಬ ಪುಟ್ ಹುಡ್ಗಿ  ಹುಲಿಗಿಂತ ಕ್ರೂರ್ವಾದ  ಒಂದು ಮೃಗಾನ  ಹೇಗೆ ಎದುರಿಸಿದ್ಳು ಗೊತ್ತೇ ?" ಎಂದು ಪುಟ್ಟಿಯ ಕುತೂಹಲ ಕೆಣಕಿದಳು   ಅಜ್ಜಿ . 
"ಕಥೆನಾ ? ಹೇಳು ಅಜ್ಜಿ !" ಪುಟ್ಟಿಗೆ ಉತ್ಸಾಹ ಉಕ್ಕಿತು . ಚಿಕ್ಕಂದಿನಲ್ಲಿ  ತನ್ನ ತಾತ ತನಗೆ  ಹೇಳಿದ್ದ ಕಥೆಯನ್ನು ಶುರು ಮಾಡಿದಳು  ಅಜ್ಜಿ .  ಹುಲಿಯ ಗರ್ಜನೆಯನ್ನು  ಮರೆತು ಕಥೆಯಲ್ಲಿ ಮಗ್ನಳಾದಳು  ಪುಟ್ಟಿ. ಪುಟ್ಟಣ್ಣ ಮತ್ತು ತಾತ ಕೂಡ !

 

ಒಂದಾನೊಂದು ಕಾಲದಲ್ಲಿ ನಮ್ಮ ಹಳ್ಳಿಯ ಸಮೀಪ ಒಂದು ಕಾಡು ಇತ್ತಂತೆ  . ಆ ಕಾಡಲ್ಲಿ ಅನೇಕ ಪ್ರಾಣಿಗಳಿದ್ದವು. ಪ್ರಾಣಿಗಳಿಗೆ ಒಬ್ಬ ರಾಜನೂ ಇದ್ದ . ಆತ ಸಿಂಹವೋ  , ಹುಲಿಯೋ   , ಕರಡಿಯೋ ಆಗಿರಲಿಲ್ಲ  . ಜಿಂಕೆಯೋ , ಕಾಡು ಕೋಣನೋ , ತೋಳವೋ ಕೂಡ  ಆಗಿರಲಿಲ್ಲ . 
ಆತನೇ ಮೃಗ ! ಮೃಗನಾಯಕ !


ಮೃಗನಾಯಕ ತನ್ನ ಮೂರು ಮರಿಗಳೊಂದಿಗೆ  ದೊಡ್ಡದೊಂದು ಗವಿಯಲ್ಲಿ ವಾಸವಾಗಿದ್ದ . ಚಿಕ್ಕ ಮರಿಗಳು  ಚೂಟಿಯಾಗಿದ್ದವು . ಪ್ರೀತಿಯೋಗ್ಯವಾದ ಮುದ್ದುಮರಿಗಳಾಗಿದ್ದವು . ಆದರೆ ಮರಿಗಳು ಬೆಳೆದಂತೆ ಅವುಗಳ ತುಂಟತನವೂ ಬೆಳೆಯಿತು . ಅವನ್ನು ನಿಭಾಯಿಸುವುದು ಬಹಳ  ಕಷ್ಟವಾಯಿತು . ಸಾಮಾನು ಸರಂಜಾಮುಗಳನ್ನು ಒಡೆದು ಹಾಕಿದವು . ಗವಿಯನ್ನು ಅಸ್ಥವ್ಯಸ್ಥಗೊಳಿಸಿದವು    . 
ತಾಯಿ ಮೃಗ ಬಲಹೀನಳಾಗಿದ್ದಳು . ಯಾವ ಕೆಲಸವೂ ಮಾಡಲಾರದೆ , ಗವಿಯ ಒಂದು ಮೂಲೆಯಲ್ಲಿ ಸದಾ ಮಲಗಿಯೇ ಇದ್ದಳು . 
ಆದ್ದರಿಂದ ತುಂಟು ಮರಿಗಳನ್ನು ನೋಡಿಕೊಳ್ಳಲು ಒಬ್ಬ ದಾದಿಯನ್ನು ಕರೆತರಲು ನಿರ್ಧರಿಸಿದ ಮೃಗನಾಯಕ . 


ಕೂಡಲೇ  ಜೋರಾಗಿ ಒಮ್ಮೆ ಗರ್ಜಿಸಿದ, ಜಾಗಟೆಯನ್ನು ಬಾರಿಸಿದ ಮತ್ತು ಎಲ್ಲ ಕಾಡು ಪ್ರಾಣಿಗಳನ್ನೂ ಒಗ್ಗೂಡಿಸಿದ  . 
"ನನ್ನ ಮರಿಗಳನ್ನು ನೋಡಿಕೊಳ್ಳಲು  ಒಬ್ಬ ದಾದಿಯ ಅವಶ್ಯಕತೆ ಇದೆ . ಅವಳು ಅಡುಗೆಯನ್ನು ಮಾಡಬೇಕು , ಗವಿಯನ್ನು ಸ್ವಚ್ಛವಾಗಿಡ ಬೇಕು,  ಹೊಲಿಯ ಬೇಕು, ಹಾಡ ಬೇಕು. ಮರಿಗಳಿಗೆ ನೀರು ಹಾಕ ಬೇಕು, ಊಟ ತಿನ್ನಿಸ  ಬೇಕು . ಅವರಿಗೆ ಒಳ್ಳೆಯ ನಡೆವಳಿಕೆಯನ್ನು  ಕಲಿಸ ಬೇಕು, ತುಂಟತನ ಮಾಡದಂತೆ ನೋಡಿಕೊಳ್ಳ ಬೇಕು,  ಅವರೊಂದಿಗೆ ಆಡಲೂ   ಬೇಕು . 
ಈ ನೌಕರಿಗೆ ನಿಮ್ಮಲ್ಲಿ ಯಾರಾದರೂ   ಸಿದ್ಧವಾಗಿದ್ದೀರಾ ?" 
"ನಾನು ಅಡುಗೆ ಮಾಡ ಬಲ್ಲೆ . ಆದರೆ ಸ್ವಚ್ಛ ಮಾಡುವುದು ಕಷ್ಟ ." ಎಂದಿತು ಹುಲಿಯಮ್ಮ. 
"ನಾನು ಹೊಲಿಯ  ಬಲ್ಲೆ . ಆದರೆ ಹಾಡು ಹೇಳುವುದಕ್ಕೆ ಬರುವುದಿಲ್ಲ . " ಎಂದಿತು ಸಿಂಹದ ರಾಣಿ . 
"ನಾನು ಮರಿಗಳೊಡನೆ ಆಟವಾಡ  ಬಲ್ಲೆ . ಆದರೆ ಕಲಿಸುವುದು  ಗೊತ್ತಿಲ್ಲ ." ಎಂದಿತು ಮಂಗಮ್ಮ . 
"ನನ್ನ ಎಲ್ಲ ಕೋರಿಕೆಗಳನ್ನೂ ನೆರವೇರಿಸುವವರು  ಯಾರೂ ಇಲ್ಲವೇ?" ಎಂದು ಹಕ್ಕಿನಿಂದ ಅಬ್ಬರಿಸಿದ  ಮೃಗನಾಯಕ.  


"ಅಂತಹ ಹೆಣ್ಣು  ಒಬ್ಬಳು ಇರುವಳು ಎಜಮಾನರೆ  !" ಎಂದಿತು ಮರದ ಮೇಲೆ ಕುಳಿತಿದ್ದ ವಿವೇಕವುಳ್ಳ  ಮುದಿ  ಗೂಬೆ ಪಕ್ಷಿ . "ಮೂರು ಲೋಕಗಳಲ್ಲೂ ಕಾಣ ಸಿಗದ ಪ್ರತಿಭೆ  ಮತ್ತು ಸೌಂದರ್ಯವನ್ನು ಹೊಂದಿರುವ ಅಪರೂಪದ ಹುಡುಗಿಯವಳು  . ಅವಳು ಅಡುಗೆ ಮಾಡ ಬಲ್ಲವಳು , ಸ್ವಚ್ಛ ಮಾಡಲು  ಬಲ್ಲವಳು. ಹೋಲಿಗೆಯೇ ಹಾಡೇ ? ಎಲ್ಲವನ್ನೂ ಬಲ್ಲವಳು. ಕಲಿಸಲು ಬಲ್ಲವಳು ಮತ್ತು ಆಡಲೂ ಬಲ್ಲವಳು . ಮಾತ್ರವಲ್ಲದೆ ಪುಸ್ತಕ ಓದಲೂ ಬಲ್ಲವಳು ! ಪ್ರಪಂಚದಲ್ಲೆಲ್ಲಾ ಅತ್ಯುತ್ತಮ ಹುಡುಗಿ ಎಂಬ ಖ್ಯಾತಿ ಗಳಿಸಿರುವವಳು . ಅವಳೇ ನಿನಗೆ ತಕ್ಕ ಅತ್ಯುತ್ತಮ ದಾದಿ .  ಅಗೋ ! ಸಮೀಪದ ಹಳ್ಳಿಯಲ್ಲೇ ವಾಸವಾಗಿರುವಳು !"
"ಏನು ? ನರ  ಮನುಷ್ಯಳೆ ?" ಚಕಿತಗೊಂಡು   ಗರ್ಜಿಸಿದ ಮೃಗನಾಯಕ.  ಓರ್ವ ನರಳನ್ನು ಹೇಗೆ ದಾದಿಯಾಗಿ ಕರೆತರಲು  ಸಾಧ್ಯ ?" 
"ನೀನು ಅವಳನ್ನು ಮದುವೆಯಾದರೆ  ಕರೆತರ ಬಹುದಲ್ಲವೆ ?" ಎಂದು ಸೂಚನೆ ನೀಡಿತು ನರಿ . 
"ಅವಳ ತಾಯಿ ತಂದೆಯರು ಅವಳಿಗಾಗಿ  ಓರ್ವ  ಬುದ್ಧಿವಂತನಾದ, ಶಕ್ತಿಶಾಲಿಯಾದ , ಐಶ್ವರ್ಯವಂತನಾದ ವರನನ್ನು ಹುಡುಕುತ್ತಿರುವುದಾಗಿ ಸುದ್ದಿ ತಂದಿದ್ದ  ಕಾಗೆರಾಯ . ಅವಳಿಗೆ ನಿನಗಿಂತ  ಅರ್ಹನಾದ ವರ  ಇನ್ಯಾರು   ಸಿಕ್ಕುತ್ತಾರೆ ಮಾರಾಯ ?"
"ಬಲೆ !" ಉತ್ಸಾಹದಿಂದ ಚಪ್ಪಾಳೆ ತಟ್ಟಿತು ಜಿಂಕೆ . " ನಿನ್ನನ್ನು ನರನಂತೆ ಸಿಂಗರಿಸಿ ನಾವು ತಯಾರು ಮಾಡುವೆವು!"


ಹುಣ್ಣಿಮೆಯಂದು ತಾನು ಹೆಣ್ಣು ಕೇಳಲು ಬರುವುದಾಗಿ ಒಂದು ಪತ್ರವನ್ನು ಬರೆದು , ಪಾರಿವಾಳದ ಅಂಚೆಯ ಮೂಲಕ ಹುಡುಗಿಯ ತಾಯಿ ತಂದೆಯರಿಗೆ ಕಳುಹಿಸಿಕೊಟ್ಟ ಮೃಗನಾಯಕ . 
ಅಂತೆಯೇ ಆ ಶುಭದಿನದಂದು ನವಿಲುಗಳು ಚಾಮರ ಬೀಸುತ್ತಿರಲು , ಕೋತಿಗಳು ಉತ್ಸಾಹದಿಂದ ತಾಳ ಮೇಳಗಳನ್ನು  ಬಾರಿಸುತ್ತಿರಲು , ಆನೆಯ ಮೇಲೆ ಸವಾರನಾಗಿ ಬಹಳ  ಅದ್ದೂರಯಿಂದ  ಹಳ್ಳಿಯನ್ನು ಪ್ರವೇಶಿಸಿದ  ಮೃಗನಾಯಕ.  
ಹುಡುಗಿಯ ತಾಯಿ ತಂದೆಯರು ಬೆರಗಾದರು . ತಮ್ಮ ಮನೆಗೆ ಒಬ್ಬ ಮಹಾರಾಜ ಆಗಮಿಸಿರುವನಲ್ಲ !
ಅವರುಗಳು ಆತನನ್ನು ಆದರದಿಂದ ಸ್ವಾಗತಿಸಿ , ಅತ್ಯುತ್ತಮ ಹಾಸಿನಮೇಲೆ ಕುಳ್ಳರಿಸಿ ಪಾನಕ ನೀಡಿ ಉಪಚರಿಸಿದರು. 


"ನಾನು ನಿಮ್ಮ ಮಗಳನ್ನು ಮದುವೆಯಾಗಲು ಅಪೇಕ್ಷಿಸುತ್ತೇನೆ . ನನ್ನ ರಾಜ್ಯ ಬಹಳ  ವಿಶಾಲವಾದದ್ದು  . ನನ್ನ ಅರಮನೆ ಬಹಳ ದೊಡ್ಡದು . ಹೇರಳವಾದ ನೌಕರರಿಂದಲೂ  ಕ್ಷೀಣವಾಗದಷ್ಟು  ಆಹಾರದಿಂದಲೂ ತುಂಬಿರುವುದು  . ನಿಮ್ಮ ಮಗಳು ನಿಶ್ಚಿಂತೆಯಿಂದ ಇರಬಹುದು . ಇಗೋ ! ಇವೆಲ್ಲ ನಿಮಗಾಗಿ ನಾನು ತಂದಿರುವ  ಉಡುಗೊರೆ .." ಎಂದು ನಯವಾಗಿ ನುಡಿದ  ಮೃಗನಾಯಕ .
ಹಣ್ಣುಗಳು , ಧಾನ್ಯಗಳು , ಗಂಧದ ದಿಮ್ಮಿಗಳು , ಮೂಟೆಯ  ತುಂಬ ನವರತ್ನಗಳು , ಎಲ್ಲವನ್ನೂ ಉಡುಗೊರೆಯಾಗಿ ಕೊಟ್ಟ ಮೃಗನಾಯಕ .
ತಾಯಿ ತಂದೆಯರಿಗೆ  ಪುಳಕವೇರ್ಪಟ್ಟಿತು .  ಆದರೆ ಮಗಳೋ ಪಿಸುಗುಟ್ಟಿದಳು : 
" ಉಡುಗೊರೆಗಳಿಗೇನೂ ಕಡಿಮೆ ಇಲ್ಲ . ಆದರೆ ಈ  ರಾಜ ಏಕೋ ವಿನೋದವಾಗಿ ಕಾಣಿಸುತ್ತಾನಲ್ಲ !ಕಪ್ಪು ಮೂಗು ! ಪ್ರಾಣಿಗಳ ಪಂಜಿನಂತೆ ಕೈಗಳು !"
" ಉಶ್ ! ಸುಮ್ಮನಿರೇ ಮಗಳೇ ! ಎಂತ ವಿನೋದವ ಕಂಡೆ ? ಮನುಷ್ಯರು ವಿಭಿನ್ನರಾಗಿರುತ್ತಾರೆ  !"
" ಸರಿ!ಸರಿ !"ಎಂದಳು ಮಗಳು . 
ಅಂದು ಸಂಜೆಯೇ ಮದುವೆಯ ಸಂಭ್ರಮ ! ಓರ್ವ ಮಹಾರಾಜ ತಮ್ಮ ಅಳಿಯನಾದನಲ್ಲಾ   ಎಂದು ಇಡೀ ಹಳ್ಳಿಯೇ ಹಿಗ್ಗಿತು . 
ಮದುವೆಯ ನಂತರ ಮಡದಿಯೊಡನೆ ಹೊರಟು ನಿಂತ ಮೃಗನಾಯಕ . 
" ನನ್ನ ರಾಜ್ಯ ಬಹಳ ದೂರ . ತಲುಪುವುದಕ್ಕೆ ಹೆಚ್ಚು ಸಮಯವಾಗುವುದು . ನೀನು ಸಹನೆಯಿಂದಿರ ಬೇಕು. " ಎಂದು ಎಚ್ಚರಿಸಿದ . 
"ಒಳ್ಳೆಯ ಮಡದಿಯಾಗಿ ನಮ್ರತೆಯಿಂದಿರು ಮಗಳೇ ." ಎಂದು ಮಗಳನ್ನು ಬೀಳ್ಕೊಟ್ಟರು ಹೆತ್ತವರು . 


ಮೃಗನಾಯಕ ಮತ್ತು ಹುಡುಗಿ ಆನೆ ಸವಾರಿಯಲ್ಲಿ ಹೊರಟರು . 
ಆನೆ ನಡೆಯಿತು ನಡೆಯಿತು ನಡೆಯುತ್ತಲೇ ಇತ್ತು . 
ಎರಡು ತಾಸುಗಳನಂತರ ಹುಡುಗಿಗೆ ಆಯಾಸವಾಯಿತು . "ಇನ್ನು ಎಷ್ಟು ದೂರ?" ಎಂದು ಕೇಳಿದಳು . 
''ಸುಮ್ಮನೆ ಬರುವೆಯೋ ? ಸ್ವರೂಪವ  ತೋರಲೋ ?'' ಎಂದು ಕೋಪದಿಂದ ಉರಿದುಬಿದ್ದ ಮೃಗನಾಯಕ . 
ಹುಡುಗಿ ಮೌನವಾದಳು . 
ಮತ್ತೊಂದು ತಾಸು ಕಳೆಯಿತು . ಸೂರ್ಯಾಸ್ತವೂ ಆಯಿತು . ಹುಡುಗಿಗೆ ಬೇಸರವಾಯಿತು . ಹಸಿವೂ ಉಂಟಾಯಿತು . 
"ಇನ್ನೆಷ್ಟು ದೂರ ?" ಎಂದು ಕೇಳಿದಳು  . 
"ಸುಮ್ಮನೆ ಬರುವೆಯೋ ಸ್ವರೂಪವ  ತೋರಲೋ ?" ಎಂದು ಕೋಪಗೊಂಡು ಸಿಡುಕಿದ ಮೃಗನಾಯಕ . 
 ಕಡೆಗೊಮ್ಮೆ ಅವರುಗಳು ಕಾಡನ್ನು ಪ್ರವೇಶಿಸಿದರು . ಬಹಳ ಕತ್ತಲಾಗಿತ್ತು. ಭಯವೇರ್ಪಟ್ಟಿತು . ಹುಡುಗಿಗೆ ಇನ್ನೂ ಸಹಿಸುವುದು ಅಸಾಧ್ಯವಾಯಿತು . 
ಬೆಟ್ಟ ಗುಡ್ಡಗಳನ್ನು  ಹತ್ತಿ ಇಳಿದು , ಹೊಳೆಗಳನ್ನು ದಾಟಿ   , ಪೊದೆಗಳಲ್ಲಿ ತೂರಿ ಸಾಗುತ್ತಲೇ  ಇದ್ದರು . 
" ಇನ್ನೂ ಎಷ್ಟು ದೂರ?" ಹುಡುಗಿ ಗೊಣಗಿದಳು . 
"ಸುಮ್ಮನೆ ಬರುವೆಯೋ ಸ್ವರೂಪವ  ತೋರಲೋ ?" ಎಥಾಪ್ರಕಾರ ರೇಗಿದ ಮೃಗನಾಯಕ . 
ಹುಡುಗಿ ತಾಳ್ಮೆಯಿಂದ ಮತ್ತೆ ಮೌನವಾದಳು . 


ಕಡೆಗೂ ಮುಂಜಾವಿನ ವೇಳೆಗೆ  ಗವಿಯನ್ನು ತಲುಪಿದರು . ಆನೆಯೂ ಬೀಳ್ಗೊಂಡಿತು  . 
" ಒಳಗೆ ನಡಿ . ಇದೇ ನನ್ನ ಮನೆ . " ಎಂದ ಮೃಗನಾಯಕ . 
ಹುಡುಗಿ ಚಕಿತ ಗೊಂಡಳು . " ನೀನೆಂತಹ ಮಹಾರಾಜ ! ಈ ಹೊಲಸು ಗವಿಯೊಳಗೆ ನಾನು ಕಾಲಿಡಲಾರೆ !"
ಕೋಪಗೊಂಡ ಮೃಗನಾಯಕ ಥಟ್ಟನೆ ಎಗರಿಬಿದ್ದ . " ಸುಮ್ಮನೆ ಬರುವೆಯೋ ? ಸ್ವರೂಪವ  ತೋರಲೋ?"
ಹುಡುಗಿಯೂ ಕೋಪದಿಂದ ರೇಗಿದಳು . " ತೋರು ಸ್ವರೂಪವ !"
ಮೃಗನಾಯಕ ತನ್ನ ಮಾರುವೇಷವನ್ನು ಕಳಚಿ ಹಾಕಿದ . ಅವನು  ಮನುಷ್ಯನೇ ಅಲ್ಲ , ಮೃಗ,  ಎಂಬುದನ್ನು  ಕಂಡುಕೊಂಡ  ಹುಡುಗಿ ಗರ ಬಡಿದವಳಂತೆ ಆದಳು. "ನಾವು  ಮೋಸ ಹೋದೆವು ! "ಎಂದು ಕೂಗಿಕೊಂಡಳು . 
"ಸಾಕು !"  ಎಂದು ಗುಡುಗಿದ ಮೃಗನಾಯಕ .  "ನಮಗಾಗಿ ಕೆಲಸ ಮಾಡಲೆಂದೇ  ನಿನ್ನನ್ನು ಕರೆತಂದಿರುವೆ . ಸದ್ದು   ಮಾಡಿದರೆ ನಿನ್ನನ್ನು ನುಂಗಿ ಹಾಕುವೆ ! ಜೋಕೆ ! ಈಗ ಹೊರಡು ! ಮನೆಯನ್ನು ಸ್ವಚ್ಛ ಮಾಡು, ಅಡುಗೆ ಮಾಡು .  ಹೊಲಿದು ಮುಗಿಸಿ ನನ್ನ ಮರಿಗಳಿಗೆ ಲಾಲಿ  ಹಾಡು  !"

No comments:

Post a Comment