ಕಾಯಿ ಕಡುಬಿನ ಕಥೆ - ಬಾಗ ೪
" ಅಮ್ಮನ್ಗೆ ಗೊತ್ತಾಗ್ದೆ ಇರತ್ಯೇ ? ಹೇಗೇ ಅಂತ್ಯಾ ? ಕೇಳಿಲ್ಲಿ !" ಎನ್ನುತ್ತ ಕಥೆ ಮುಂದುವರಿಸಿದಳು ಅಜ್ಜಿ .
ಜಾಣಮರಿ ಮತ್ತೆ ಒಳಗೆ ಹೋಗಿ ಡಬ್ಬಿ ಮುಚ್ಚಳ ತೆರೆದಳು. ಗಲಿಬಿಲಿಗೊಂಡಿದ್ದ ಇಲಿ 'ಬದುಕಿದೆ !' ಎಂದುಕೊಂಡು ಛಂಗನೆ ಹೊರಕ್ಕೆ ನೆಗೆದು , ದಡ ದಡ ಓಡಿ ಅಕ್ಕಿ ಪೀಪಾಯಿಯ ಕೆಳಗೆ ಅಂತರ್ಧ್ಯಾನವಾಯಿತು !
ಖಾಲಿ ಡಬ್ಬಿ ಕೈಯಲ್ಲಿ ಹಿಡಿದು ಚೀರುತ್ತ ಓಡಿ ಬಂದಳು ಜಾಣಮರಿ !
"ಅಮ್ಮಾ ಅಮ್ಮ ! ಕಾಯ್ ಕಡುಬು ಓಡಿ ಹೋಗುವುದೇನು ?"
"ಓಡಿ ಹೋಗುವುದೇ ? ಇದೇನು ಹುಚ್ಚಾಟ ? ಸಿಹಿ ತಿಂಡಿ ಎಲ್ಲಾದರು ಓಡಿ ಹೋಗುತ್ತದೆಯೇ ? ಎಲ್ಲವನ್ನೂ ನೀನೆ ತಿಂದು ಕಥೆ ಹೇಳುತ್ತಿರುವೆಯೇನು ?"
ಅದೇ ಸಮಯ, ತುಂಟಮರಿಯ ಲಂಗದಲ್ಲಿ ಅಂಟಿದ್ದ ಸಿಹಿ ಹೂರಣವನ್ನು ಸವಿಯಲು ಅವಳ ಮೇಲೆ ಹತ್ತಿದ್ದ ಕೆಂಪಿರುವೆಗಳು ಅವಳ ಕೈಯನ್ನು ಕಚ್ಚಲು , ಕಿಟಾರನೆ ಕಿರುಚಿದಳು ತುಂಟಮರಿ.
ಅವಳ ಕಡೆ ತಿರುಗಿ ನೋಡಿದ ಅಮ್ಮ, ತುಂಟಮರಿಯ ಲಂಗ ಒದರಿ ಇರುವೆಗಳನ್ನು ಕೆಳಕ್ಕೆ ಕೊಡವಿ ಹಾಕಿದಳು . ತುಂಟಮರಿಯ ಲಂಗದ ಮೇಲೂ , ಕೆನ್ನೆಯ ಮೇಲೂ , ತಲೆಗೂದಲಲ್ಲೂ ಅಂಟಿದ್ದ ಸಿಹಿ ಹೂರಣವನ್ನೂ ಕಂಡಳು .
"ನೀನೇನಾ ಆ ತುಂಟ ಕಳ್ಳಿ !"ಎಂದು ಗದರಿಸುತ್ತ ಎರಡು ಎಟನ್ನೂ ಹಾಕಿದಳು .
" ಹಂಗೆ ಆಗ ಬೇಕು ! ಹಲ್ಲು ಮುರಿ ಬೇಕು !ನಾ ನಗ ಬೇಕು !"
ಪುಟ್ಟಣ್ಣ ಹಾಡುತ್ತ ಕುಣಿಯುತ್ತ ಬಂದ .
" ನೀನ್ಯಾವಾಗ್ಲೋ ಬಂದೆ ? ಸೈಕಲ್ ಪಂಪ್ ಮಾಡ್ತಿದ್ದೆ !"
" ನಾನೆಲ್ಲೇ ಇರ್ಲಿ ! ಕಿವಿ ಮಾತ್ರ ನಿನ್ ಕಥೆಲೇ ಅಜ್ಜಿ !" ಎಂದ ಪುಟ್ಟಣ್ಣ .
" ಸುಳ್ಳು ! ಸುಳ್ಳು ! ಕಾಯ್ ಕಡುಬಿನ ವಾಸ್ನೆ ಹಿಡ್ಕೊಂಡ್ ಬಂದಿದ್ದಾನೆ ಅಜ್ಜಿ !" ಎಂದಳು ಪುಟ್ಟಿ .
ಅಜ್ಜಿ ನಗುತ್ತ ಹಬೆಯಿಂದ ಆಗತಾನೆ ತೆಗೆದ ಕಾಯಿ ಕಡುಬುಗಳನ್ನು ತಟ್ಟೆಗೆ ಹಾಕಿ ಮಕ್ಕಳಿಬ್ಬರ ಮುಂದಿಟ್ಟಳು .
" ಹೀಗೆ ಅವ್ರಮ್ಮಾನೂ ಕೊಟ್ಟಿದ್ರೆ ತುಂಟಮರಿ ಏಕೆ ಕದ್ದು ತಿನ್ತಿದ್ಳು ?" ಎನ್ನುತ್ತಾ ಸಿಹಿ ಕಡುಬನ್ನು ಸವಿಯ ತೊಡಗಿದಳು ಪುಟ್ಟಿ .
" ಆಮೇಲೇನಾಯ್ತು ಅಜ್ಜಿ?"
" ಆಗೋದೇನು ? ಅಷ್ಟೇ ಕಥೆ ! "ಎಂದು ಕಥೆ ಮುಗಿಸಿದಳು ಅಜ್ಜಿ .
ಗುಣವತಿಯಾದ ತಾಯಿಗಾಗಲಿ, ಜಾಣಮರಿಗಾಗಲಿ, ತುಂಟಮರಿಗಾಗಲಿ, ಉಳಿದಿದ್ದ ಒಂದೇ ಒಂದು ಕಡುಬು ಅದು ಹೇಗೆ ಕಣ್ಣು, ಕಿವಿ, ಮೂಗು, ಕಾಲು, ಬಾಲ ಬೆಳೆಸಿಕೊಂಡಿತು ಎಂಬ ವಿಷಯ ಅರ್ಥವಾಗಲೇ ಇಲ್ಲ . ಅದು ಏಕೆ ಓಡಿ ಹೋಯಿತು ಎಂದೂ ಅರಿವಾಗಲಿಲ್ಲ. ನಿಮಗೆ ?
" ತಿನ್ದ್ಮೇಲೆ ಡಬ್ಬಿ ಸರಿಯಾಗಿ ಮುಚ್ಚಿಡಿ ಮಕ್ಕಳಾ ! ನಮ್ ಕಡುಬುಗಳೂ ಎಲ್ಲಾದ್ರೂ ಓಡಿ ಹೋದಾವು !" ಎಂದಳು ಅಜ್ಜಿ.
No comments:
Post a Comment