Wednesday, October 2, 2019

ಬುನಾದಿ


ದೂರದ ಕಿರು ಆರಣ್ಯದಿಂದ  ಊಳಿಡುತ್ತ ಬೀಸಿದ ಬಿರುಗಾಳಿ !
ಕಣ್ಣು ಕುಕ್ಕುವಂತೆ ಆಗಿಂದಾಗ್ಯೆ ಅಪ್ಪಳಿಸುತ್ತಿದ್ದ  ಮಿಂಚಿನ ಬಳ್ಳಿ  !
ಭೀಕರವಾಗಿ ಗುಡುಗುತ್ತ ಬಾಂಬ್ ಸ್ಪೋಟದಂತೆ ಎರಗಿದ  ಸಿಡಿಲು ! 
ಸಿಂಚನಾ ಬೆದರಿ ಬೆಚ್ಚಿ ಬಿದ್ದಳು ! ಕಿವಿಗಳನ್ನು ಎರಡೂ ಕೈಗಳಿಂದ ಭದ್ರವಾಗಿ ಮುಚ್ಚಿಕೊಂಡಳು .

' ಅಬ್ಬಬ್ಬ ! ಕಿವಿಪೊರೆ ಹರಿಯೋ ಹಾಗೆ ಎಂತಾ ಶಬ್ದ! '
ಕಿವಿಗಳನ್ನು ಮುಚ್ಚಿದ್ದ ಕೈಗಳನ್ನೂ ಮೆಲ್ಲನೆ ತೆಗೆದವಳು ' ಸಧ್ಯ ! ಕಿವಿ ಕೇಳಿಸ್ತಿದೆ ! ' ಎಂದು ತನಗೆ ತಾನೇ ಸಮಾಧಾನ ಹೇಳಿ ಕೊಂಡಳು.

ಅಷ್ಟರಲ್ಲೇ ಜೋರು ಮಳೆ ಶುರುವಾಯಿತು. ಅದಕ್ಕಾಗಿಯೇ ಕಾದಿದ್ದಂತೆ ಕರೆಂಟೂ ಹೋಯಿತು! ಹೊಸ ಕಟ್ಟಡವಾದ್ದರಿಂದ ಜನರೇಟರ್  ವ್ಯವಸ್ಥೆ ಇನ್ನೂ ಆಗಬೇಕಿತ್ತು.
' ಇನ್ನೂ ಕರಂಟ್  ಬರೋವರೆಗೆ ಓದೋ ಹಾಗಿಲ್ಲ ! ಟಿ ವಿ ನೋಡೋಹಾಗಿಲ್ಲ ! ಬ್ರೌಸ್ ಮಾಡೋಹಾಗಿಲ್ಲ ! '

ಸಿಂಚನಾ ಆರ್ಭಟದಿಂದ ಸುರಿಯುತ್ತಿದ್ದ ಮಳೆಯ ವಿವಿಧ ರಾಗತಾಳಗಳನ್ನು ಕೇಳುತ್ತ, ಆಗಿಂದಾಗ್ಯೆ ಗುರುಗುಟ್ಟಿದ ಗುಡುಗಿನ ಶಬ್ದದಿಂದ ಡವಗುಟ್ಟಿದ ಎದೆಯನ್ನು ನಿಭಾಯಿಸಲಾರದೆ ತನ್ನ ಹಾಸಿಗೆಯಮೇಲೆ ಒರಗಿ ಕುಳಿತಳು.
ಇದ್ದಕ್ಕಿದ್ದ ಹಾಗೆ ಬೀದಿ ನಾಯಿ ಒಂದು ಅಪಸ್ವರದಲ್ಲಿ ಊಳಿಟ್ಟಿತು.

 ' ಹಾಳು ನಾಯಿ ! ಹೀಗೇಕೆ ಊಳಿಡ್ತಿದೆ ? ' ಸಿಂಚನಾಳಿಗೆ ಸಂಕಟದಿಂದ ಹೊಟ್ಟೆ ತೊಳಸಿದ ಹಾಗಾಯಿತು. ಕತ್ತಲು!  ಮಳೆ ! ಸಾಲದ್ದಕ್ಕೆ ಈ  ನಾಯಿ ಬೇರೆ ಊಳಿಟ್ಟು ಅವಳ ಮನಸ್ಥಿತಿಯನ್ನು ಕುಂದಿಸಿತು.

ಅಳುವಿನ ಸ್ವರ ಮೆಲ್ಲ ಮೆಲ್ಲನೆ ಮೇಲಕ್ಕೇರುತ್ತಲೇ ಹೋಯಿತು ! ನಂತರ ನಿಂತಿತು !
ಸಿಂಚನಾಳ ಎದೆ ಝಲ್ ಎಂದಿತು .
' ಛೆ ! ಇದು ನಾಯಿಯ ಧ್ವನಿ ಇದ್ದಹಾಗಿಲ್ಲ ! ಮತ್ತೆ ಇಷ್ಟು ಗಟ್ಟಿಯಾಗಿ ಯಾರು ಅಳ್ತಿರೋದು? '
ಅವಳು ಅನುಮಾನಿಸುತ್ತಿದ್ದಹಾಗೆಯೇ ಮತ್ತೆ ಅಳುವಿನ ಶಬ್ದ ಇನ್ನಷ್ಟು ಗಟ್ಟಿಯಾಗಿ ಅಮನುಷ್ಯವಾಗಿ ಕೇಳಿಸ ತೊಡಗಿತು.

ಸಿಂಚನಾಳ ಮೈ ಕಂಪಿಸತೊಡಗಿತು !
" ಇನ್ನು ಆರೇ ತಿಂಗಳಲ್ಲಿ ನಾನು ಮೇಜರ್ ಆಗ್ತೀನಿ ! ಒಬ್ಳೆ ಇರಕ್ಕೆ ನನಗೆಂತ ಭಯ ? ನೀವಿಬ್ರೂ ವರಿ ಇಲ್ದೆ ಹೋಗಿಬನ್ನಿ ! "
ಅಪ್ಪ ಅಮ್ಮ ಇಬ್ಬರೂ ಕೆಲಸದ ಸಲುವಾಗಿ ಬೇರೆ ಬೇರೆ ಊರುಗಳಿಗೆ ಒಟ್ಟಿಗೆ ಹೊರಡಬೇಕಾದ ಪರಿಸ್ಥಿತಿ ಬಂದಾಗ ಅವಳು ಧೈರ್ಯದಿಂದ ನುಡಿದಿದ್ದಳು.

ಏಕವಾಗಿ ಕೇಳಿಬಂದ ಅಮಾನುಷ್ಯವಾದ ಅಳುವಿನ ಧ್ವನಿಯಿಂದ ಆ ಧೈರ್ಯವೆಲ್ಲ  ಎಲ್ಲೋ ಹೋಗಿ ಅಡಗಿಕೊಂಡಿತು .  ನಡುಗಿದ ಒಡಲನ್ನು ಸ್ಥಿಮಿತಕ್ಕೆ ತರಲಾರದೆ ಒದ್ದಾಡಿದಳು ಸಿಂಚನಾ .

" ಯಾರಣ್ಣಾ ಅಲ್ಲಿ ? ಯಾಕೆ ಅಳ್ತಿದ್ದೀ ? " ಯಾರೋ ಅಕ್ಕರೆಯಿಂದ ವಿಚಾರಿಸುತ್ತಿದ್ದದ್ದು ಕೇಳಿಸಿತು. 'ಇದು ಖಂಡಿತ ಮನುಷ್ಯನ ಧ್ವನಿಯೇ !'




 ಸಿಂಚನಾ ತನ್ನ ಹಾಸಿಗೆಯಿಂದ ಎದ್ದು  ಕಿಟಕಿಯ ಪರದೆ  ಸರಿಸಿ ಹೊರಕ್ಕೆ ಕಣ್ಣಾಡಿಸಿದಳು.  . ಅವಳು ನಿಂತಿದ್ದ ನಾಲಕ್ಕನೆಯ  ಅಂತಸ್ತಿನಿಂದ ನೋಟ ಬೀರಿದಾಗ ಕಟ್ಟಡದ ಕಾಂಪೌಂಡ್ ಹೊರಗೆ ಇದ್ದ ಅಂಗಡಿ ಬೀದಿ ಕತ್ತಲನ್ನು ಹೊದ್ದುಕೊಂಡು ಬಿಕೋ ಎನ್ನುತ್ತಿತ್ತು .   ಜೋರು ಮಳೆ ನಿಂತು ಈಗ ತುಂತುರು ಹನಿ ಬೀಳ ತೊಡಗಿತು .

ರಸ್ತೆಯ ಬದಿಯಲ್ಲಿದ್ದ ಬೇವಿನಮರದಡಿಯಲ್ಲಿ ಎಂದಿನಂತೆ ಶ್ಯಾಮಣ್ಣನ ಖಾಲಿಯಾದ ಊಟದ ಗಾಡಿ ನಿಂತಿತ್ತು. ಅದರ ಸಮೀಪ ನಿಂತಿದ್ದ ವ್ಯಕ್ತಿ , ಬಾಗಿ ನೋಡುತ್ತಅದೇ ಪ್ರಶ್ನೆಯನ್ನು ಮತ್ತೇ ಕೇಳಿದನು .

ಸಿಂಚನಾ ಕಣ್ಣು ಕಿರಿದು ಮಾಡಿಕೊಂಡು ತೀಕ್ಷ್ಣವಾದ ನೋಟ ಬೀರಿದಳು .
ಶ್ಯಾಮಣ್ಣನ ಗಾಡಿಯ ಕೆಳಗೆ ಮುದುಡಿ ಕುಳಿತಿದ್ದ ಒಂದು ಕಪ್ಪು ಆಕಾರ ತೆವಳುತ್ತ ಹೊರಬಂದಿತು . ಅಳುತ್ತಲೇ ಎದ್ದು ನಿಂತಿತು.

" ಯಾರಣ್ಣಾ ನೀನು ? ಮಳೆಯಲ್ಲಿ ಕೂತು ಯಾಕೆ ಅಳ್ತಿದ್ದೀಯ  ? "
" ಇನ್ನೇನು ಮಾಡಲಣ್ಣ ? ನನ್ನ ಶೌರ್ಯವನ್ನ ಮೆಚ್ಚಿ ನನ್ನ ಹಳ್ಳಿ ಜನರೆಲ್ಲಾ ನನ್ನನ್ನ ಅದೆಷ್ಟು ಹೊಗಳ್ತಿದ್ರು ! ಕೈ ಮುಗೀತಿದ್ರು ! ಪೂಜಿಸ್ತಿದ್ರು ! ಆದರೆ ಈಗ ನನ್ನ ಪರಿಸ್ಥಿತಿ ನೋಡಣ್ಣ .... "

 ಆ ನೆರಳಿನಾಕಾರಗಳು ಉಟ್ಟಿದ್ದ ಕಚ್ಛೆ ಪಂಚೆ, ತಲೆಯಮೇಲೆ ಎತ್ತಿ ಕಟ್ಟಿದ್ದ ತುರುಬು ಇವುಗಳ ರೂಪರೇಖೆಗಳು ಆ ಕತ್ತಲಲ್ಲೂ ಎದ್ದು ಕಂಡವು.
ಸಿಂಚನಾ ಆಶ್ಚರ್ಯದಿಂದ ನೋಡುತ್ತಾ ನಿಂತಳು.


' ಯಾರಿವರು ? ಅರಣ್ಯ ನಿವಾಸಿಗಳೇ ? '
" ನೀನು ಮಾವೀರನೇ ಸರಿ ! ಆದ್ರೆ ವೀರರು ಅಳ್ತಾರೆಯೇ ? "
" ಇನ್ನೇನ್ ಮಾಡ್ಲಣ್ಣ? ಉಸಿರುಕಟ್ಟೋ ಇಕ್ಕಟ್ಟಲ್ಲಿ ಸಿಕ್ಕೊಂಡು , ದಿನಾಲು ಎಂಜಲು ನೀರಿನಲ್ಲಿ ಅಭಿಷೇಕ ಮಾಡಿಸ್ಕೊಂಡು ...! ಅಳದೆ ಏನ್ಮಾಡಲಣ್ಣ ? "

" ಹುಮ್ !"  ಧೀರ್ಘವಾಗಿ ಒಮ್ಮೆ ಉಸಿರೆಳೆದ ಪ್ರಶ್ನಿಸಿದವ . ನಂತರ ತನ್ನ ಬಗ್ಗೆ ಹೇಳತೊಡಗಿದ . 
" ನಾನು  ಎರೆಯಂಗ . ಅದು ನಾಗತ್ತರ  ಕನ್ನೆಲ್ಲಿಯನ್ನ ವೈಭವದಿಂದ ಆಳ್ತಿದ್ದ ಕಾಲ ! ಪದೇ ಪದೇ ನಡೀತಿದ್ದ ಧಾಳಿಗಳ ಸಲುವಾಗಿ ಗ್ರಾಮಗಳಲ್ಲಿ ಸದಾ ವೀರರ ಆಯ್ಕೆ ನಡೀತಾನೇ ಇತ್ತು. ಒಮ್ಮೆ  ನಮ್ಮ ಎರೆಯಮ್ಮ ಗಾವುಂಡರು ವೀರರ ಆಯ್ಕೆಗಾಗಿ ಗ್ರಾಮದ ಬಲಿಷ್ಠರನ್ನೆಲ್ಲ ಕರೆಯಿಸಿ ಒಂದು ಸಭೆಯನ್ನ  ಕೂಡಿಸಿದರು.  ನಾನು ಎದ್ದು ನಿಂತು ದಂಡಿಗೆ ಸೇರಲು ಒಪ್ಪಿ ವೀಳ್ಯವನ್ನೆತ್ತಿದೆ .  ನಂತರ ನಡೆದ ಒಂದು ಪ್ರಚಂಡ ಯುದ್ಧದಲ್ಲೂ  ಬಾಗವಹಿಸಿದೆ ! ನನ್ನ ಪರಾಕ್ರಮವನ್ನ ಹಳ್ಳಿ ಹಳ್ಳಿಯೇ ಕೊಂಡಾಡಿತ್ತು ..! ನೋಡು ನಾನು ಎತ್ತಿದ ಆ ವೀಳ್ಯ ಇರಿಸಿದ  ಚೀಲ ಇನ್ನೂ ನನ್ನಲ್ಲೇ ಇದೆ . .. ! " 
 ಆ ವ್ಯಕ್ತಿ ಚೀಲವನ್ನು ಎತ್ತಿ ಹಿಡಿದು ತೋರಿಸಿದ್ದನ್ನು ಸಿಂಚನಾ  ನೋಡಿದಳು .

' ಅರಸನಂತೆ ! ದಂಡಂತೆ ! ಇವರೇನಾದ್ರೂ ಐತಿಹಾಸಿಕ ನಾಟಕದಲ್ಲಿ ಪಾರ್ಟ್ ಮಾಡೋ ನಟರೇ ? ಈಗ ಮಹಾನಗರಕ್ಕೆ ಸೇರ್ಕೊಂಡಿದ್ರೂ ,ಮೊದ್ಲು  ಹಳ್ಳಿಯಾಗಿದ್ದ ಈ ವಠಾರದಲ್ಲಿ ಇನ್ನೂ ಹಳ್ಳಿ ನಾಟಕ ಕಂಪೆನಿಗಳು ಇವೆಯೋ ಏನೋ ? '
ಸಿಂಚನಾಳಿಗೆ ಭಯ ನೀಗಿ ಮನಸ್ಸಲ್ಲಿ ಕುತೂಹಲ  ಹುಟ್ಟಿತು !

" ಆಮೇಲೇನಾಯಿತಣ್ಣಾ ? '' ಅಳು ನಿಲ್ಲಿಸಿದ್ದ ವ್ಯಕ್ತಿ ಪ್ರಶ್ನಿಸಿದನು .
" ಕೇಳ್ಬೇಡ ನನ್ನಅವಸ್ಥೆ ! ನನ್ನ ಪಾಡಿಗೆ ಕೆರೆಯ ದಂಡೆಯಲ್ಲಿ ಮರಗಳ ನೆರಳಲ್ಲಿ ಆರಾಮವಾಗಿದ್ದೆ. ಆದ್ರೆ ಈಗ ? ಎತ್ತೆತ್ತರವಾದ ಎರಡು ಕಟ್ಟಡಗಳ ಮಧ್ಯೆ ಇರೋ ಸಂದಿಯಲ್ಲಿ ಚರಂಡಿ ನೀರಿನ ಬುಗ್ಗೆಯ ಎದುರು , ಕಸದ ಪರಿಷೆ ಮಾಡಿಸ್ಕೊಂಡು ... " ದುಃಖಭರಿತ  ಧ್ವನಿಯಲ್ಲಿ ತನ್ನ ಅಳಲನ್ನು ತೋಡಿಕೊಂಡ ಎರೆಯಂಗ ಎಂಬಾತ .
" ಛೆ ! ನಮ್ಮನ್ನ ಎಂತಾ ಪರಿಸ್ಥಿತಿಗೆ ತಂದಿಟ್ರಪ್ಪ ಈ ನಗರವಾಸಿಗಳು ! "  ಎನ್ನುತ್ತಾ ಅಂಗಲಾಚಿದನು ಅಳುವನ್ನು ನಿಲ್ಲಿಸಿದ್ದ ವ್ಯಕ್ತಿ

'' ಓ ! ತಡೀರಣ್ಣಾ ! ನಾನೂ ಬಂದೆ ... ! "
 ಆ ವ್ಯಕ್ತಿಗಳ ಸಂಭಾಷಣೆಯಲ್ಲಿ ತಲ್ಲೀನಳಾಗಿದ್ದ ಸಿಂಚನಾ ಮೂರನೆಯ ವ್ಯಕ್ತಿ ಓರ್ವ ಬಂದು ಸೇರಿಕೊಂಡದ್ದನ್ನು ಕಂಡು ಆಶ್ಚರ್ಯಗೊಂಡಳು .
' ಅರೆ ! ಇವಿನ್ಯಾರು ? ಯಾವಾಗ ಬಂದ ? '

ಸಿಂಚನಾ ಯೋಚಿಸುತ್ತಿರಲು ನೆರಳಿನಾಟ ಮುಂದುವರೆಯಿತು !

" ಓ ! ಬೇಡರ ರಾಜನಲ್ವೇ ನೀನು? " ಎರೆಯಂಗ ಹೊಸಬನನ್ನು ಸ್ವಾಗತಿಸಿದ .
" ಹೌದ್ರಪ್ಪ ! ಈ ಮಾರಾಯನ ಗೋಳಾಟ ಕೇಳಿ ನನ್ನ ಗೋಳನ್ನೂ ಏಳುವ ಅಂತ ಬಂದೆ ! "



" ನಿನಗೆಂತಾ ಕಷ್ಟವಪ್ಪಾ ? "
" ಯಾಕೆ ಕೇಳ್ತೀರಿ ಅಯ್ಯ ? ಸಾರಂಗರಾಮ ಪಟ್ಟಣ ಅಂತ ಕೇಳಿದ್ದೀರಾ ? ಸಾರಂಗಪಟ್ಟಣ , ಸಾರಮು ಅಂತಲೂ ಕರೀತಾರೆ ! ಆ ಪಟ್ಟಣದ ಸುತ್ತಮುತ್ತ ಅರಣ್ಯ ! ಅದರಲ್ಲಿ ಬೇಕಾದಾಂಗೆ ಕಡವೆಗಳ ಇಂಡು ಓಡಾಡ್ಕಂಡಿದ್ವು ! ನಮ್ಮ ಬೇಡರ ಪಡೆಗೆ ಊಟಕ್ಕೆ ಉಡಕ್ಕೆ ಯಾವ ಕೊರತೆಯೂ ಇರ್ಲಿಲ್ಲ ... "
" ಸಾರಂಗಗಳು ನಲಿವ ಹಚ್ಛೆಹಸಿರಾದ ಕಾಡು ಬಲು ಸುಂದರವಾಗಿದ್ದಿರ್ಬೇಕು ಅಲ್ವೇ ? "
" ಹುಂಕಣಪ್ಪಾ ! ಎಲ್ಲಾ ಚೆಂದಾಗೇ ಇತ್ತು .  ಆದ್ರೆ ಯಾಕೋ ಏನೋ ? ಒಮ್ಮೆ ವಾರಗಟ್ಲೆ  ಯಾರಿಗೂ ಬೇಟೆ ಸಿಕ್ಲಿಲ್ಲ ! ಎಷ್ಟು ದಿನಾಂತ ಕಂದಮೂಲ ಉಂಡ್ಕಂಡಿರೋದು ? ಸರಿ ಅಂತ  ನಾನೇ ಬೇಟೆಗೆ ಒಂಟೆ ! "

 ಕಗ್ಗತ್ತಲಲ್ಲಿ ನೆರಳಿನಾಕಾರಗಳು ಆಡಿದ ಮಾತು ಸಿಂಚನಾಳಿಗೆ ಸ್ಪಷ್ಟವಾಗಿಯೇ ಕೇಳಿಸಿತು.
' ಇವರುಗಳು ಗಟ್ಟಿಯಾಗಿ ಮಾತಾಡೋದು ಕೇಳಿದ್ರೆ ಖಂಡಿತ ಹಳ್ಳಿ ನಾಟಕದ ರಿಹರ್ಸಲ್ ಮಾಡ್ತಿದ್ದಾರೆ ಅನ್ಸತ್ತೆ ! ಕಾಸ್ಟ್ಯೂಮ್ ಸಹಿತ ಪ್ರಾಕ್ಟೀಸ್ ಮಾಡ್ತಿದ್ದಾರೆ !ಮಳೇಲಿ ರಿಹರ್ಸಲ್  ಮಾಡ್ತಿರೋದು ನೋಡಿದ್ರೆ  ಇವತ್ತು ರಾತ್ರಿಯೇ ನಾಟಕ ನಡೆಯೋದಿದೆಯೋ ಏನೋ ? !'

" ಬಿಲ್ಲು ಬಾಣ ಇಡ್ಕಂಡು ನಾನು ಕಾಡಿಗೆ ನುಗ್ಗಿ ಸುಮಾರು ದೂರ ನಡ್ಕಂಡೋದೇ ! ದೂರದ ಪೊದರು ಅಲುಗಾಡಿ ಅಲ್ಲಿ ಒಂದು ಜಿಂಕೆ ಇರೋದನ್ನ ತೋರಿಸ್ಕೊಡ್ತು .  ಬಾಣ ಬಿಡೋ ಸಮಯಕ್ಕೆ ಸರಿಯಾಗಿ  ಒಂದು ಭಾರೀ ಕಡವೆ ಎದುರಾಯ್ತು ! ಕವಲೊಡೆದ ದೊಡ್ಡ ಕೊಂಬುಗಳನ್ನ  ಬಾಗಿಸ್ಕಂಡು ನನ್ನ ಮೇಲೆರಗಿತು ! ಮುಂಗಾಲುಗಳನ್ನ ಎತ್ತಿ ನನ್ನ ಎದೆಗೆ ರಭಸದಿಂದ ಗುದ್ದಿ ನನ್ನ ಕೆಳಕ್ಕೆ ತಳ್ಳಿತು . ಸುಮಾರು ಸಮಯ ಗುದ್ದಾಟವಾದಮೇಲೆ , ನಾನು ಎಂಗೋ ಎದ್ದು ಬಾಣವನ್ನ ಎಳೆದು ಬಿಟ್ಟೆ ! ಒಳ್ಳೆ ಬೇಟೆ ! ನನ್ನ ಪಡೆಗೆ ಭರ್ಜರೀ ಊಟ ಅಂದ್ಕೊಂಡೆ ! ಆದ್ರೆ ನೋಡ್ರಪ್ಪಾ ! ಆ ಜಿಂಕೆ  ಬೀಳೋ ಒತ್ಗೆ ನನ್ನನ್ನ  ತಿವಿದು  ಕರುಳನ್ನೇ ಕಿತ್ತಾಕಿತು  ! "
" ಅಯ್ಯೋ ! "

ಬೇಡರರಾಜನ ವರ್ಣನೆ ಸಿಂಚನಾಳಿಗೆ ಜಿಗುಪ್ಸೆಯನ್ನುಂಟುಮಾಡಿತು.

" ನನ್ನ ಧೀರ ಅಂತ ಎಲ್ರೂ ಮೆಚ್ಚಿದ್ರು ! ಪೂಜೆ ಮಾಡಿದ್ರು ! ಆದ್ರೆ ಈಗ ...? "
" ಈಗೇನಾಯಿತು ? ಹೇಳು ರಾಜನೇ ? " ಮೊದಲು ಅಳುತ್ತಿದ್ದ ವ್ಯಕ್ತಿ ಪ್ರಶ್ನಿಸಿದ.
" ಕಾಡು , ಕಡವೆಗಳು  ಎಲ್ಲ ಮಾಯವಾದ್ವು  ! ಎಲ್ಲೆಲ್ಲೂ ಬರಿ ಜನವೋ ಜನ ! ನಾನು ಮಾತ್ರ  ಯಾವುದೋ ಕಲ್ಯಾಣ ಮಂಟಪದ ಪಾಳು ಗೋಡೆಯ ಬಳಿ ಅನಾಥನಾಗಿ ಬಿದ್ಕಂಡಿದ್ದೀನಿ  . ಜನ ಒಗ್ತಾ ಬತ್ತಾ ಇದ್ರೂ ನನ್ನನ್ನ ಕಣ್ಣೆತ್ತಿಯೂ ನೋಡೋರಿಲ್ಲ ... " ಗದ್ಗದಿತವಾದ ದನಿಯಲ್ಲಿ ಹೇಳಿ ಮುಗಿಸಿದ ಬೇಡರರಾಜ.

" ನಿಮ್ಮ ಕಥೆ ನನ್ನ ಕಥೆ ಎಲ್ಲರ ಕಥೆಯೂ ಒಂದೇ !" .
ಸಿಂಚನಾ  ಹೊಸ ಧ್ವನಿಯನ್ನು ಕೇಳಿ ಬೆಚ್ಚಿ ತನ್ನ ಕೊರಳನ್ನು ಉದ್ದ ಮಾಡಿ ನೋಡಿದಳು .
' ಯಾವ ಮಾಯದಲ್ಲಿ ಈ ಹೊಸ ವ್ಯಕ್ತಿ ಇಲ್ಲಿ ಪ್ರತ್ಯಕ್ಷನಾದ ? ನಾನು ಗಮನಿಸ್ಲೇ ಇಲ್ವಲ್ಲಾ ? '

" ಯಾರು ಸ್ವಾಮಿ ನೀವು ? ಅಯ್ಯೋ ! ನಿಮಗೇನಾಗಿದೆ ಸ್ವಾಮಿ ? " ಎಂದು ಗಾಬರಿಗೊಂಡು ಪ್ರಶ್ನಿಸಿದ ಅಳುತ್ತಿದ್ದ ವ್ಯಕ್ತಿ .

ಸಿಂಚನಾ ಹೊಸ ವ್ಯಕ್ತಿಯನ್ನೇ ದಿಟ್ಟಿಸಿ ನೋಡಿದಳು.

" ನಾನು ಬಹಳ  ಪುರಾತನ ಕಾಲದವನು . ಗಂಗದೊರೆ ಶ್ರೀಪುರುಷನ ಕಾಲದವನು . ಪಾಂಡ್ಯರೂ, ಪಲ್ಲವರೂ, ರಾಷ್ಟ್ರಕೂಟರೂ ಪದೇ ಪದೇ ನಮ್ಮ ಗಂಗವಾಡಿಯ ಮೇಲೆ ದಂಡೆತ್ತಿ ಬರುತ್ತಿದ್ದ ಕಾಲ ಅದು . ಆ ಸಮಯ ನಡೆದ  ಒಂದು ಪ್ರಚಂಡ ಯುದ್ಧದಲ್ಲಿ ನಾನೂ ಬಾಗಿಯಾಗಿದ್ದೆ . ಅಶ್ವಗಳ ಪಡೆ ರಭಸದಿಂದ  ಮುನ್ನುಗ್ಗಿ ಬರುತ್ತಿತ್ತು . ಕುದುರೆಗಳ ತುಳಿತಕ್ಕೆ ನಮ್ಮ ಕಡೆಯ ಅನೇಕ ವೀರರು ಬಲಿಯಾದರು. ನನ್ನ ಕೋಪ ಆವೇಶಕ್ಕೆ ತಿರುಗಿತು . ಬಲಗೈಯಲ್ಲಿ ಖಡ್ಗ ಎಡಗೈಯಲ್ಲಿ ಬಿಲ್ಲು ಹಿಡಿದು  ಆಕ್ರೋಶದಿಂದ ಸೆಣಸಿ , ಬಾಣಗಳ ಮಳೆಗರೆದೆ .  ಕಡೆಗೂ ವೈರಿಗಳು ಹಿಮ್ಮೆಟ್ಟಿ ಓಡಿಹೋದರು . ಊರವರೆಲ್ಲ ನನ್ನನ್ನು ಕೊಂಡಾಡಿದರು. ಪೂಜಿಸಿದರು. ಬಹಳ ಕಾಲ ನಾನು ಆ ವೈಭವಗಳಿಂದ ಮೆರೆಯುತ್ತ ನಿಂತಿದ್ದೆ .  ನಂತರ ಎಲ್ಲ ಕತ್ತಲಾಗಿಹೋದಂತೆ ಕಂಡಿತು .  "

" ಯಾಕೆ ಏನಾಯಿತು ?" ಎರೆಯಂಗ ಕುತೂಹಲ ವ್ಯಕ್ತಪಡಿಸಿದ .
" ಬಹಳ ಕಾಲದ ನಂತರ ಬೆಳಕು ಕಾಣಿಸಿತು ! ಅಷ್ಟು ಕಾಲವೂ ನಾನು ಮಣ್ಣಲ್ಲಿ ಹೂತುಹೋಗಿದ್ದದ್ದು ಆವಾಗ ಅರಿವಾಯಿತು ! "
" ಅಯ್ಯೋ ಶಿವನೇ ! " ಎಂದ ಅಳುಬುರುಕ  .
" ಮಣ್ಣಿನಿಂದ ಹೊರಬಂದ ನಂತರ ಒಂದು ಗುಡಿಯ ಗೋಡೆಗೆ ಒರಗಿ ನಿಂದೆ !! "

ಸಿಂಚನಾಳಿಗೆ ಈ ಕಥೆಯ ತಲೆ ಬುಡ ಅರ್ಥವಾಗಲಿಲ್ಲ ! ಅವರುಗಳ ಮಾತೆಲ್ಲ ಗೊಂದಲವಾಗಿಯೇ ಇತ್ತು !

"ಗುಡಿಯ ಗೋಡೆಗೆ ಕಾವಿ ಸುಣ್ಣ ಬಳೆಯುವಾಗ ನನ್ನ ಮೇಲೆಯೂ ಬಳೆದರು . ನಾನು ಸಹಿಸಿಕೊಂಡು ಮೌನವಾಗಿಯೇ ನಿಂದೆ ! ಒಮ್ಮೆ ಒಂದು ದೊಡ್ಡ ಅನಾಹುತ ಸಂಭವಿಸಿತು ! ಒಣಗಿದ ಕಸ ಕಡ್ಡಿಗಳ ಗುಡ್ಡೆಗೆ ಯಾರೋ ಕಿಚ್ಚಿಟ್ಟರು. ಆ  ಶಾಖ ತಡೆಯಲಾರದೆ ಸೊಂಟದಿಂದ ಹಿಡಿದು ನನ್ನ ಇಡೀ ಕೆಳಬಾಗ ಛಿದ್ರ ಛಿದ್ರವಾಗಿ ಸಿಡಿದು ಬಿದ್ದಿತು  ! "
ಸಿಂಚನಾಳಿಗೆ ಹೊಟ್ಟೆ ತೊಳಸಿದಂತಾಯಿತು .

" ಅಯ್ಯೋ ! ನಿಮ್ಮಂತ ವೀರನಿಗೆ ಇಂತಾ ಗತಿ ಬರಬಾರದಿತ್ತು ! ನಿಮ್ಮ ಪರಿಸ್ಥಿತಿ  ನೋಡಿ ಬಹಳ ವ್ಯಸನವಾಗಿದೆ . " ಖಿನ್ನನಾಗಿ ನುಡಿದ ಎರೆಯಂಗ .
'' ಸೋಮಿಯವರೇ ! ನಿಮ್ಮನ್ನ ಸೋಮಿಯೋರೆ ಅಂತ ಕರೀಬೋದೇ ? ಈಗ ನೀವು ಎಲ್ಲಿದ್ದೀರಿ  ? " ಆದರದಿಂದ ಪ್ರಶ್ನಿಸಿದ ಬೇಡರರಾಜ .
" ಯಾರೋ  ಪುಣ್ಯಾತ್ಮರು ನನ್ನನ್ನು ಹೊತ್ತುಕೊಂಡು  ಹೋಗಿ ಒಂದು ಕಟ್ಟಡದಲ್ಲಿ ಕೂರಿಸಿರುವರು . ಬಂದು ಹೋಗುವ ಜನರು  'ಮಾರೆಯ, ಮಾರೆಯ ' ಎಂದು ನನ್ನನ್ನು ಹೆಸರು  ಹಿಡಿದು ಕರೆಯುತ್ತಾರೆ .  ಆದರೆ ನನ್ನ ಕಥೆ ಯಾರಿಗೂ ತಿಳಿಯದು . ಒಂದು ಕಾಲದಲ್ಲಿ ನಮ್ಮ ಗ್ರಾಮದವರಿಗೆ ನಾನು ನಾಯಕನಾಗಿದ್ದೆ ! ಈಗಲೋ ಸೊಂಟ ಮುರಿದುಕೊಂಡು ಕೈಯಲ್ಲಾಗದೆ ಕುಳಿತಿರುವೆನು . "

ಇದ್ದಕ್ಕಿದ್ದ ಹಾಗೆಯೇ ಜೋರಾದ ಆಹಾಕಾರ ಕೇಳಿಸಿತು . ಸಿಂಚನಾ ನೋಡನೋಡುತ್ತಿದ್ದ ಹಾಗೆಯೇ ಆಕಾಶದಲ್ಲಿ ಒಂದು ಕಪ್ಪು ಆಕಾರ ತೇಲಿ ಬರುವುದು ಕಂಡಿತು .



' ಎಷ್ಟು ದೊಡ್ಡ ಬಾವಲಿ ಹಕ್ಕಿ !? '
 ಬಾವಲಿಯಂತೆ  ಕಂಡ ಆಕಾರ ಹತ್ತಿರ ಹತ್ತಿರ ತೇಲುತ್ತ ಬಂದು ರೆಕ್ಕೆಗಳನ್ನು ಮುದುಡಿಕೊಂಡು ಸರ್ರೆಂದು  ನೆಲಮುಟ್ಟಿ ಸೆಟೆದು ನಿಂತಿತು !

' ಆ ! ಮತ್ತೋರ್ವ ನಟ !  ಸೂಪರ್ ಮ್ಯಾನ್ ಹಾಗೆ ಹೇಗೆ ಹಾರಿ ಬಂದ ?  ಒಂದುವೇಳೆ ಇವ್ರೆಲ್ಲ ಮಾಯಾವಿಗಳೇ ಆಗಿದ್ರೆ ? '
ಸಿಂಚನಾ ಆಶ್ಚರ್ಯದಿಂದಲೂ ಭಯದಿಂದಲೂ ತಬ್ಬಿಬ್ಬಾದಳು .

ಉಳಿದವರು ಮಾತೆತ್ತುವ ಮುನ್ನ 'ಬಾವಲಿ' ವ್ಯಕ್ತಿಯೇ ಮಾತನ್ನು ಆರಂಭಿಸಿದನು .
'' ನನ್ನ ಗ್ರಾಮದವ್ರಿಗೆಲ್ಲಾ ನಾನೇ ವೀರ ! ಯಾಕೆ ಅಂತೀರಾ ? ಒಮ್ಮೆ ಕೆಲವು ದರೋಡೆಕೋರರು ನಮ್ಮ ಗ್ರಾಮಕ್ಕೆ ನುಗ್ಗಿ ನಮ್ಮ  ತುರುಗಳನ್ನ ಅಪಹರಿಸಕ್ಕೆ ಪ್ರಯತ್ನಪಟ್ರು . ಬಲಗೈಯಲ್ಲಿ ಖಡ್ಗ ಹಿಡಿದು , ಎಡಗೈಯಿಂದ ನಡುವಿನಲ್ಲಿದ್ದ ಬಿಚ್ಚುಗತ್ತಿಯನ್ನ ಹೊರಸೆಳೆದು ನಾನು ಧಾವಿಸಿದೆ . ಬೆನ್ನಟ್ಟಿ ಹೋಗಿ ಆ ಪುಂಡರನ್ನ ಚೆಂಡಾಡಿದೆ .  ನಮ್ಮ ತುರುಗಳನ್ನ ಮರಳಿ ಪಡೆದೆ . ಸೆಣಸಾಟದಲ್ಲಿ ನನೂ  ಬಲವಾದ ಪೆಟ್ಟು ತಿಂದೆ .... "
" ಆಮೇಲೆ ? "
" ಆಮೇಲೇನು ? ಊರವರೆಲ್ಲ ನನ್ನನ್ನ ಕೊಂಡಾಡಿದ್ರು  !  ಬಹಳ ಕಾಲದವರೆಗೂ ಪೂಜೆ ಮಾಡಿದ್ರು ! ನನ್ನ ಗ್ರಾಮ ಮೆಲ್ಲಮೆಲ್ಲನೆ ಮಹಾನಗರವಾಗಿ ಪರಿವರ್ತನೆಯಾಗೋದನ್ನ ನೋಡ್ತಾ ಆಲದ ಮರದ ಕೆಳಗೆ ನಿಂತೇ ಇದ್ದೆ .  ಒಮ್ಮೆ ಓರ್ವ ನಗರವಾಸಿಯ ಬೇಜವಾಬ್ದಾರಿಯಿಂದ  ಒಂದು ಅಪಘಾತಕ್ಕೊಳಗಾದೆ . ಆಗ  ನನ್ನ ರುಂಡ ಎಗರಿ ಹೋಯ್ತು ! ಅವತ್ನಿಂದ  ಹುಡುಕ್ತಾನೇ ಇದ್ದೀನಿ ! ಇಂದಿನವರೆಗೂ ನನ್ನ ತಲೆ ನನಗೆ ಸಿಕ್ಕೇ ಇಲ್ಲ ! "

' ರುಂಡವಿಲ್ಲ ! ಆದ್ರೆ ಮಾತಾಡ್ತಾನೆ ! ' ಸಿಂಚನಾಳ ಬುದ್ಧಿ ಸ್ಥಗಿತಗೊಂಡಿತು . 

" ನಮ್ಮ ಇಂದಿನ ಗತಿಗೆ ಕಾರಣ ನಗರವಾಸಿಗಳು ! ಅವರುಗಳ ನಿರ್ಲಕ್ಷ್ಯ ! ಏನ್ಮಾಡೋದಣ್ಣ ? '' ಇಷ್ಟು ಹೊತ್ತು ಅಳುವುದನ್ನು ನಿಲ್ಲಿಸಿದ್ದ ವ್ಯಕ್ತಿ ಮತ್ತೇ ಗಟ್ಟಿಯಾಗಿ ಅಳತೊಡಗಿದ .
" ನಿಲ್ಲಿಸಣ್ಣ ! ಅಳೋದ್ರಿಂದ  ಏನೂ ಪ್ರಯೋಜನವಿಲ್ಲ ! " ಎಂದು ಗರ್ಜಿಸಿದ 'ಬಾವಲಿ' ವ್ಯಕ್ತಿ.
" ನಮ್ಮ ತ್ಯಾಗದ ಬುನಾದಿಯ ಮೇಲೇ ಈ ಮಹಾನಗರ ನಿರ್ಮಾಣವಾಗಿದೆ ! ನಗರವಾಸಿಗಳು ಅದನ್ನ  ಮರೆತೇಬಿಟ್ಟಿದ್ದಾರೆ !" ಎನ್ನುತ್ತ ನಿಟ್ಟುಸಿರೆಳೆದ ಎರೆಯಂಗ .
" ನಗರವಾಸಿಗಳೆಲ್ಲರೂ ಕೆಟ್ಟವರಲ್ಲ ! ನಮ್ಮ ತ್ಯಾಗದ ಬಗ್ಗೆ ನಾವು ಅವರಿಗೆ ಜ್ಞಾಪಿಸ ಬೇಕು ಅಷ್ಟೇ . " ಎಂದು ನಿಧಾನವಾಗಿ ನುಡಿದ ಮಾರೆಯ . 


"ಅಷ್ಟೇ ಅಲ್ಲ ! ನಮ್ಮ ಹಕ್ಕಿಗಾಗಿ ನಾವು ಹೋರಾಡ್ಬೇಕು  !  ನಮ್ಮ ಸ್ಥಾನಮಾನಗಳನ್ನ ಉಳಿಸ್ಕೊ ಬೇಕು ! " 'ಬಾವಲಿ' ವ್ಯಕ್ತಿ ಗುಡುಗಿದ . 
" ಅದೆಲ್ಲ ಎಂಗಣ್ಣ ಸಾಧ್ಯ ? " ನಿರಾಶೆಯಿಂದ ಪ್ರಶ್ನಿಸಿದ ಬೇಡರರಾಜ.  
" ಮಹಾನಗರದ ಸಂದಿಗೊಂದಿಗಳಲ್ಲಿ , ಜನ ಓಡಾಡೋ ದಾರಿಗಳ ಬದಿಗಳಲ್ಲಿ , ಗದ್ದೆ ತೋಟಗಳಲ್ಲಿ , ಬೆಟ್ಟ ಗುಡ್ಡಗಳಲ್ಲಿ - ಎಲ್ಲೆಲ್ಲೂ ಕೇಳೋರಿಲ್ದೆ ಅನಾಥರಾಗಿ ನಿಂತಿದ್ದಾರೆ ನಮ್ಮಂತ ಅನೇಕ ವೀರರು. ಅವರೆಲ್ಲ ಹೊರಟು ಆಗೋ ಬರ್ತಿದ್ದಾರೆ ನೋಡಿ ! ನಾವೆಲ್ಲಾ ದಂಗೆ ಎದ್ರೆ ಆಗದ ಕೆಲಸವೂ ಉಂಟೆ ? " ಎಂದು ವೀರಾವೇಶದಿಂದ ನುಡಿದ 'ಬಾವಲಿ' ವ್ಯಕ್ತಿ .
ಅದೇ ಸಮಯ ಇಡೀ ಆಕಾಶವನ್ನು ಆಕ್ರಮಿಸಿಕೊಂಡು ನೂರಾರು ನೆರಳಿನಾಕಾರಗಳು ವಿಕ್ರಮನ ಬೇತಾಳದಂತೆ  'ಸೂಯ್ ಸೂಯ್ ' ಎಂದು ತೇಲುತ್ತ ಬಂದು ನೆಲಕ್ಕಿಳಿದವು  !

 ಸಿಂಚನಾ ನಂಬಲಾರದೆ ತನ್ನ ಕಣ್ಣುಗಳನ್ನು ಒಮ್ಮೆ ಗಟ್ಟಿಯಾಗಿ ಮುಚ್ಚಿ ತೆರೆದಳು  .
 'ಇಲ್ಲ ! ಇದು ಕೆಟ್ಟ ಕನಸಲ್ಲ ! ನಾನು ಕಾಣ್ತಿರೋದೆಲ್ಲ ನಿಜವೇ  !'
ಸಿಂಚನಾ ಭಯ ಭೀತಿಯಿಂದ  ಮೂರ್ಛೆ ಹೋಗುವ ಸ್ಥಿತಿಯಲ್ಲಿದ್ದಳು .

" ಹೊರಡಿ ನನ್ನ ಗೆಳೆಯರೇ ! ಈಗಲೇ ನಗರವಾಸಿಗಳನ್ನ ಭೇಟಿಯಾಗೋಣ  ! ''
ಎಲ್ಲ ನೆರಳಿನಾಕಾರಗಳೂ ತಮ್ಮ ಒಪ್ಪಿಗೆ ಸೂಚಿಸಿ ಒಟ್ಟಿಗೆ ಆಹಾಕಾರ ಮಾಡಿದವು .
" ಈ ಮಧ್ಯ ರಾತ್ರಿಯಲ್ಲಿ ಯಾರ ಬಳಿ ಹೋಗುವುದು ? ಏನೆಂದು ಹೇಳುವುದು ? ನಮ್ಮ ಅವಸ್ಥೆಯನ್ನು ಯಾರು  ನಂಬುವರು ? '' ಮಾರೆಯ ನಿಧಾನಿಸಿದ .
'' ಯಾಕೆ ನಂಬಲ್ಲ ? ನಂಬ್ತಾರೆ  ! ನಂಬ್ಸೋಣ  !  ಆಗೋ , ಆ ಅಬ್ಬೆ ನಮ್ಮ ಕಥೆಗಳನ್ನೆಲ್ಲ ಕೇಳಿಸ್ಕೊಂಡು ಅಷ್ಟೊತ್ನಿಂದ  ಕಿಟಕಿಯ ಬಳಿ ನಿಂತಿದ್ದಾಳೆ ! ಮೊದಲು ಅವಳನ್ನೇ ಮಾತಾಡ್ಸೋಣ  ! ಬನ್ನಿ ! ಎಲ್ರೂ ಹೊರಡೋಣ  !" 'ಬಾವಲಿ' ವ್ಯಕ್ತಿ ದಿಟವಾಗಿ ನುಡಿದ .

 ಅದೇ ಸಮಯ ಕಣ್ಣು ಕೋರೈಸುವ ಮಿಂಚಿನ ಬೆಳಕಿನಲ್ಲಿ ಸಿಂಚನಾ ಕಂಡದ್ದಾದರೂ ಏನು ?
 ತನ್ನಕಡೆ ಕೈ ಮಾಡಿ ತೋರಿಸುತ್ತಿದ್ದ ರುಂಡವಿಲ್ಲದ ವ್ಯಕ್ತಿ !
ಬಳಿಯಲ್ಲಿ ಸೊಂಟದ ಕೆಳಗೆ ಬರಿದಾಗಿದ್ದ ಅರ್ಧ ಮನುಷ್ಯ !
ಅವರಿಬ್ಬರನ್ನೂ ಸುತ್ತುವರೆದು ನಿಂತ ಇತರರು .
ಸಿಂಚನಾಳ  ಹೃದಯ ಭಯದಿಂದ ಒಡೆದುಹೋಗುವಂತೆ ಡವ ಡವ ಬಡಿದುಕೊಂಡಿತು  !
ಓಡಿ  ಹೋಗಲಾರದೆ ಕಾಲುಗಳು ಮರಗಟ್ಟಿದವು  !




ಮತ್ತೊಂದು ಕಣ್ಣು ಕೋರೈಸುವ ಮಿಂಚು !
ಈಗ  ನೆರಳಿನಾಕಾರಗಳ ಮೊಗಗಳು ಸ್ಪಷ್ಟವಾಗಿ ಗೋಚರವಾದವು !
ಎಲ್ಲ ನಿರ್ಜೀವ  ಮೊಗಗಳು ! ಬೂದು ಬಣ್ಣದ ಮೊಗಗಳು ! ಕಲ್ಲಿನಿಂದಾದ ಮೊಗಗಳು  !
ಅವರೆಲ್ಲ ಒಟ್ಟಿಗೆ  ಮೇಲಕ್ಕೆದ್ದು ತನ್ನ ಬಳಿ ಹಾರಿ ಬರುತ್ತಿರುವುದನ್ನು ಕಂಡು -
" ನೋ .... " ಕಿಟಾರನೆ ಕಿರುಚಿದಳು ಸಿಂಚನಾ !
-----------------------------------------------------------------------------------------------------------

ಬೆಳಗಿನ ಜಾವ ಎಂಟು ಗಂಟೆ. ಟ್ರಿಂಗುಟ್ಟಿದ ಮೊಬೈಲ್ ಸಿಂಚನಾಳನ್ನು ಎಚ್ಚರಿಸಿತು .
 "ಸಿಂಚೂ ! ಗುಡ್  ಮಾರ್ನಿಂಗ್ ! ಮೂರು ನಾಲ್ಕ್ಸಾರಿ ಕಾಲ್ ಮಾಡ್ದೆ ! ಈಗ ಎದ್ದೆಯಾ ? "
" ಗುಡ್ ಮಾರ್ನಿಂಗ್ ಮಮ್ಮಿ ! ರಾತ್ರಿ ಮಲಗಕ್ಕೆ ಲೇಟ್ ಆಯ್ತು ! ನೀನು ಎಬ್ಬಿಸಿದ್ದು ಒಳ್ಳೆದಾಯ್ತು !ಹತ್ತು ಗಂಟೆಗೆ ಕೋಚಿಂಗ್ ಕ್ಲಾಸ್ಗೆ ಹೋಗ್ಬೇಕು ! "
ಅಮ್ಮನೊಂದಿಗೆ ಕೆಟ್ಟ ಕನಸಿನ ಬಗ್ಗೆ ಮಾತ್ರ  ಪ್ರಸ್ತಾಪಿಸದೆ, ಮಾತು ಮುಗಿಸಿ  ತ್ವರಿತವಾಗಿ ತಯಾರಾಗಿ ರಸ್ತೆಗೆ ಇಳಿದಳು ಸಿಂಚನಾ . ರಾತ್ರಿ ಆದ ಮಳೆಯಿಂದ ರಸ್ತೆ ಎಲ್ಲ ಕೊಚ್ಛೆಯಿಂದ ರಾಡಿಯಾಗಿತ್ತು . ಬಸ್ ನಿಲ್ದಾಣವನ್ನು ಕುರಿತು ಬೇಗ ಬೇಗ ಹೆಜ್ಜೆ ಹಾಕಿದಳು .  ರಾತ್ರಿಯಾದ ಅನುಭವಗಳನ್ನು ಒಮ್ಮೆ ಜ್ಞಾಪಿಸಿಕೊಂಡಳು.
'ಹೌ ಕ್ರೇಜಿ  ! ಎಲ್ಲ ವೈಲ್ಡ್ ಇಮ್ಯಾಜಿನೇಷನ್ !  ಭ್ರಮೆ ! ' ಎಂದುಕೊಂಡಳು .

ಬೇವಿನ ಮರದ ಕೆಳಗೆ ಶ್ಯಾಮಣ್ಣನ ಗಾಡಿಯಲ್ಲಿ ಬಿಸಿ ಬಿಸಿ ನಾಷ್ಟಾ ವ್ಯಾಪಾರವಾಗುತ್ತಿತ್ತು . ಸಮೀಪದಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡದ ಕೆಲಸಗಾರರು ತಿಂಡಿ ತಿನ್ನುತ್ತ ನಿಂತಿದ್ದರು . ತಿಂದು ಮುಗಿಸಿದವರು ತಟ್ಟೆಗಳನ್ನು ಅಲ್ಲೇ ಎಸೆದು, ಗಾಡಿಯ ಸಮೀಪವೇ ಇದ್ದ ಬಕೆಟ್ ನೀರಿನಿಂದ ಬಾಯಿ ಕೈ ತೊಳೆದುಕೊಳ್ಳುತ್ತಿದ್ದರು. 
ಸಿಂಚನಾ ಚಕ್ಕೆಂದು ನಿಂತಳು .

" ಉಸಿರುಕಟ್ಟೋ ಇಕ್ಕಟ್ಟಲ್ಲಿ ಸಿಕ್ಕೊಂಡು , ದಿನಾಲು ಎಂಜಲು ನೀರಿನಲ್ಲಿ ಅಭಿಷೇಕ ಮಾಡಿಸ್ಕೊಂಡು ..."  ಸಿಂಚನಾಳಿಗೆ ಥಟ್ಟೆಂದು ಏನೋ ಹೊಳೆದಹಾಗೆ ಅನ್ನಿಸಿತು !  ಒಮ್ಮೆ ಊಟದ ಗಾಡಿಯನ್ನು ದಿಟ್ಟಿಸಿ ನೋಡಿದಳು ! ಮರು ಕ್ಷಣ ಗಾಡಿಯ ಬಳಿ ಹೋಗಿ ನಿಂತಳು !

" ಶ್ಯಾಮಣ್ಣ .. ! "
" ಓ ! ಮೇಡಂ ! ತಿಂಡಿ ಆಯ್ತ್ರಾ ?"
" ಹೂಂ ಆಯ್ತು ! ನಿನ್ನಿಂದ ಒಂದು ಸಣ್ಣ ಕೆಲಸವಾಗ್ಬೇಕಲ್ಲ ? "
" ಅದೇನ್ ಆಗ್ಬೇಕು ಏಳಿ ಮೇಡಂ ! "
" ನಿನ್ನ ಗಾಡಿ ಸ್ವಲ್ಪ ಆ ಕಡೆ ಜರುಗಿಸಕ್ಕಾಗತ್ತಾ ?  ಚಕ್ರಕ್ಕೆ ಅಡ್ಡವಾಗಿದೆಯಲ್ಲ , ಆ ಕಲ್ಲನ್ನ ಸ್ವಲ್ಪ  ನೋಡ್ಬೇಕು  !"
" ಅದು  ಅಡ್ಡವಿರೋದಿಂದ್ಲೇ ಗಾಡಿ ನಿಂತದೆ ! ಇಲ್ದಿದ್ರೆ ಡೌನಲ್ಲಿ ಉರುಳ್ಕೊಂಡೋಗ್ಬುಡ್ತದೆ ! "
ಶ್ಯಾಮಣ್ಣಾ ನಗುತ್ತ ಸಮೀಪವಿದ್ದ ಸೈಟಿನಿಂದ  ಒಂದು ಕಲ್ಲನ್ನು ತಂದ.  ಗಾಡಿಯನ್ನು ಜರುಗಿಸಿ ಅದನ್ನು ಚಕ್ರಕ್ಕೆ ಅಡ್ಡವಾಗಿ ಇಟ್ಟ .

ಸಿಂಚನಾ ಮಣ್ಣಲ್ಲಿ ಹುದುಗಿದ್ದ ಕಲ್ಲನ್ನು ಪರಿಶೀಲಿಸಿದಳು . ಒಂದು ಕಡ್ಡಿಯಿಂದ  ಸುತ್ತ ಇದ್ದ ಮಣ್ಣನ್ನು ಕೆದಕಿದಳು . ರಾತ್ರಿ ಭಾರೀ ಮಳೆಯಾಗಿದ್ದ ಕಾರಣ ಮಣ್ಣು ಸಡಿಲವಾಗಿದ್ದು ಕೆದುಕುವುದು  ಸುಲಭವಾಗಿತ್ತು . ಸಿಂಚನಾ ಏಕಾಗ್ರತೆಯೊಂದಿಗೆ ಕೆದುಕುತ್ತಲೇ ಇದ್ದಳು . 
" ಮೇಡಂ ! ಆ ಕಲ್ಲನ್ನ ಹೊರಕ್ಕೆ ತೆಗೀಬೇಕ್ರಾ ? ನೀವು ಎದ್ದೇಳಿ ! ನಾನು ತೆಕ್ಕೊಡ್ತೀನಿ ! " ಎಂದ ಶ್ಯಾಮಣ್ಣ .  ಎಳೆನೀರು ಮಾರುತ್ತಿದ್ದ ವ್ಯಕ್ತಿಯಿಂದ ಮಚ್ಚು ತಂದು ಮಣ್ಣನ್ನು ಸಡಿಲ ಮಾಡಲು ತೊಡಗಿದ.
" ಏನೈತೆ ಆ ಕಲ್ಲಲ್ಲಿ ? "  ತಿಂಡಿ ತಿಂದು ಮುಗಿಸಿ ಕುತೂಹಲದಿಂದ ನೋಡುತ್ತಿದ್ದ  ಕಟ್ಟಡದ ಕೆಲಸಗಾರು ಪಿಕಾಸಿ ಮತ್ತು ಹಾರೆಗಳನ್ನು ತಂದು ಅಗೆಯಲು ಸಹಕರಿಸಿದರು .



 ಮಣ್ಣು ಮೆತ್ತಿಕೊಂಡಿದ್ದ ಕಲ್ಲು ಮೆಲ್ಲಮೆಲ್ಲನೆ ಹೊರಕ್ಕೆ ಬಂದಿತು . ಮೂರು ಅಡಿಗಳಷ್ಟು ಎತ್ತರವೂ ಎರಡೂವರೆ ಅಡಿಗಳಷ್ಟು ಅಗಲವೂ ಇದ್ದ ಆ ಕಲ್ಲನ್ನು ಶ್ಯಾಮಣ್ಣನ ಗಾಡಿಯ ಸಮೀಪ ಮಲಗಿಸಿದರು . ಶ್ಯಾಮಣ್ಣ ಕಲ್ಲಿನ ಮೇಲಿದ್ದ ಮಣ್ಣನ್ನೆಲ್ಲ ಕೆರೆದು ಹಾಕಿ , ನೀರು ಹಾಕಿ ತೊಳೆದನು .

" ಹುರ್ರಾ ! "
ಎಡಗೈಯಲ್ಲಿ ಬಿಲ್ಲು ಬಲಗೈಯಲ್ಲಿ ಖಡ್ಗ ಹಿಡಿದುಕೊಂಡಿರುವ ವೀರನ ಕೊಳಕಾದ ಉಬ್ಬು ಶಿಲ್ಪ ಗೋಚರವಾದಾಗ  ತನ್ನನ್ನರಿಯದೆ ಗಟ್ಟಿಯಾಗಿ ಉದ್ಗರಿಸಿದಳು ಸಿಂಚನಾ .
" ಇದು ಎಂತ  ಕಲ್ಲು ಮೇಡಂ? " ಆಶ್ಚರ್ಯದಿಂದ ಪ್ರಶ್ನಿಸಿದ ಶ್ಯಾಮಣ್ಣ .
ಕಟ್ಟಡದ ಕೆಲಸಗಾರರು , ಎಳೆನೀರು ಮಾರುವವನು ಮತ್ತು ರಸ್ತೆಯಲ್ಲಿ ಓಡಾಡುತ್ತಿದ್ದ  ಕೆಲವರೂ  ಸುತ್ತ ನಿಂತು ಕುತೂಹಲದೊಂದಿಗೆ  ವೀಕ್ಷಿಸುತ್ತಿದ್ದರು .

" ಶ್ಯಾಮಣ್ಣ ! ಇದೊಂದು ವೀರಗಲ್ಲು! ಮುಂಗಾಲುಗಳನ್ನ ಎತ್ತಿ  ವೀರನ ಮೇಲೆರಗಕ್ಕೆ ಸಿದ್ಧವಾಗಿದೆ ಹುಲಿ ! ಅದನ್ನ ಬಿಲ್ಲು ಖಡ್ಗ ಹಿಡಿದು ಎದುರಿಸ್ತಿದ್ದಾನೆ  ಈ ವೀರ !"  ರೋಮಾಂಚನಗೊಂಡ ಸಿಂಚನಾ ವೀರನ ಶಿಲ್ಪದ ಮೇಲೆ ಕೈಯಾಡಿಸುತ್ತ ನುಡಿದಳು  .

"  ಈ ವೀರ ಯಾರು ಮೇಡಂ?"
" ಇವನು  ಎಷ್ಟೋ ನೂರು ವರುಷಗಳ ಹಿಂದೆ ಇದೇ ಹಳ್ಳೀಲಿ ಬಾಳಿ ಬದುಕಿದ್ದ ವೀರ ! ಹುಲಿ ಬೇಟೆಯಲ್ಲಿ ಈತ ಸತ್ತಿರಬೇಕು ! ಅವನ ಶೌರ್ಯವನ್ನ ಮೆಚ್ಚಿ , ಅವನ ನೆನಪಿಗಾಗಿ ಊರವರು  ಈ ಕಲ್ಲನ್ನ ಕೆತ್ತಿಸಿದ್ದಾರೆ ! "
"  ಈ ಕಲ್ಲಲ್ಲಿ ಅಷ್ಟೊಂದು ಕಥೆ ಐತ್ರಾ  ?"
" ಹೌದು ಶ್ಯಾಮಣ್ಣ ! ನಮ್ಮ ಪೂರ್ವಜರ ಬಗ್ಗೆ , ಅವರು ಹೇಗೆಲ್ಲಾ ಬಾಳಿದ್ರು , ಎಂತೆಂತಾ ರಾಜ ಮಹಾರಾಜರ ಆಳ್ವಿಕೆಯಲ್ಲಿ ಇದ್ರು , ಹೇಗೆಲ್ಲ ಯುದ್ಧ ಮಾಡಿದ್ರು , ಎಷ್ಟೆಲ್ಲಾ ಕಷ್ಟ ಸುಖ ಅನುಭವಿಸಿದ್ರೂ ಅನ್ನೋದ್ರ  ಬಗ್ಗೆಯೆಲ್ಲಇಂತಾ ವೀರಗಲ್ಲುಗಳೂ  ಕಲ್ಲುಶಾಸನಗಳೂ ನಮಗೆ ತಿಳಿಸಿಕೊಡ್ತವೆ . ಅವರುಗಳು ಅಂದು ಹಾಕಿದ ತಳಪಾಯದ ಮೇಲೇ ಈಗ ನಾವೆಲ್ಲಾ ನಿಂತಿರೋದು ! ಅವರುಗಳ ಸ್ಮಾರಕಗಳು ಎಲ್ಲಿದ್ರೂ ಅವನ್ನ ಪತ್ತೆ ಮಾಡಿ  ಅವನ್ನ ಪಾರಂಪರಿಕ ಸ್ವತ್ತಿನ ಹಾಗೆ ನಾವು ಕಾಪಾಡ್ಕೋಬೇಕು ! ಅದೇ ನಾವು ಅವರುಗಳಿಗೆ ಸಲ್ಲಿಸಬಹುದಾದ ಗೌರವ ! "
ಶ್ಯಾಮಣ್ಣ ಬೆರಗಿನಿಂದ ತಲೆದೂಗಿದ .

" ಇಂತದ್ದೇ ನಾಲ್ಕೈದು ಕಲ್ಲುಗಳು ನಮ್ಮ ಸೈಟಲ್ಲಿ ಬಿದ್ದಿದ್ವು ... " ಕಟ್ಟಡದ ಕೆಲಸಗಾರರಲ್ಲೊಬ್ಬ ಹೀಗೆಂದನು .
" ಎಲ್ಲಿ ? ಎಲ್ಲಿ ? ನಾನು ನೋಡ್ಬೇಕಲ್ಲ ? " ಸಿಂಚನಾ ಚಡಪಡಿಸಿದಳು .
" ಅವನ್ನೆಲ್ಲ ಆಗ್ಲೇ ಒಡೆದು ಜಲ್ಲಿ ಮಾಡಿ ಫೌಂಡೇಸನ್ಗೆ ಹಾಕ್ಬುಟ್ರಲ್ಲ  ಮೇಡಂ!"

-------------------------------------------------------------------------------------------------
ಆಧಾರ :
* ಕೈಕೊಂಡರಹಳ್ಳಿ ವೀರಗಲ್ಲು . 
* ಕೃಷ್ಣರಾಜಪುರಂ ವೀರಗಲ್ಲು . 
* 'ಬೆಂಗಳೂರು ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ ' ಎಂಬ ಪುಸ್ತಕದಲ್ಲಿ ಪ್ರಕಟವಾಗಿರುವ
ಡಾ . ಮುತ್ತುರಾಜು ಅವರ ' ಬೆಂಗಳೂರಿನ ಪ್ರಾಚೀನ ಸ್ಮಾರಕಗಳು ' ಎಂಬ ಲೇಖನ . 
--------------------------------------------------------------------------------------------------


                             The Foundation

Wind from the small wood lying beyond the layout , howled menacingly . Lightning tore through the dark sky at regular intervals , followed by deafening thunder claps .

Sinchana ,  overcome with alarm , covered both her ears and sat up straight  in bed . ‘O dear ! What an ear splitting boom ! Hope it doesn’t shatter my ear drums ! 

 Very soon, there  was a huge downpour . Followed ,very promptly ,by power cut . As the generator was not yet installed , she sat huddling in total darkness, cursing BESCOM .
‘ Now  it will be ages before power is restored . No reading , no internet , no TV !’

Overtaken by a dark mood , she sat staring out of her window .
Through the clatter of rain , she became aware of a clear , moaning sound …..
‘ Some stupid dog , why did it have to go out in rain !’

By and by, the moaning strengthened to a wail, which now did not sound like a wet dog , but quite like a person in agony .
Sinchana started shivering in fright .

She had been full of confidence when both her parents had to go out of town for their respective work , leaving her alone for the night . ‘ You don’t worry , I am going to be 18 this year end and am quite capable of being on my own for a day !’ She had convinced them . And all was well …….till that moment when the wailing started close to their building !
As she prepared to close the window of her fourth floor apartment , she heard another voice .

“ Hey , who is that ? Why are you crying , brother! ”



Sinchana peeped out . On the other side of  the road ,  the building under construction was engulfed in darkness, the steel rods poking into the inky sky like ugly claws.
   Shamanna’s snack cart was parked as usual under the huge Neem  tree in front of the construction site . A  shadowy figure was approaching , calling out to who ever was wailing under the tree .

“ Hey there ! Who is it , brother ? Show up !” Called the shadow again .
Another crouching shadow emerged from under the parked cart, wailing louder now. “ Oh , the misery of my life ! What can I say , brother! What a brave hero I was and what am I reduced to now ! O my miserable fate ! 

In the very poor light of the rainy night , Sinchana could barely make out the outlines of the two individuals now . They seemed to be villagers , in peculiarly short dhothis and hair bundled up in a knot .
Are they  tribals from that wood ?’ She wondered as she listened to their rather loud conversation .

“ You say you are a brave hero . Do heroes cry ? ”
“ What else can I do now ?! I am struggling and suffocating here, and getting doused in dirty wash water all the time ! How would you understand  my predicament ! 
“ Hmm ! Why would I not understand ? I am suffering similarly too …..I am Yereyanga …..those were glorious days when Nagattara was ruling over Kanneli . Since  incursions by enemies  were happening frequently , there were always calls  for recruiting fighters from among the strong youth of the villages . I volunteered and accepted the betel leaf to serve in the battalion of our Yereyamma gavunda . And I participated in a great battle soon ………my courage was celebrated in all villages around us ……look , I still have the pouch with the betel leaf of my pledge to serve our land ….” He held up a pouch which Sinchana could see too .

‘ Battle ? Soldiers ? How strange ! Perhaps these are stage actors rehearsing some play ? But why in the open in such a rainy night ?’

“ So what went wrong, brother? ” Asked the crouching shadow, who had now stopped weeping.

“ I was happily resting on the bank of  a beautiful lake , under the canopy of great big  trees……but now , I am imprisoned in a dirty little lane between two huge buildings, facing a drain and getting showered by garbage everyday …..” the man called Yereyanga stopped , overcome with  emotion.

“ Che ! What indignities these City Folk are heaping in us ……” came a new voice and Sinchana was surprised to see another shadowy figure suddenly in their company . She had not even noticed when he had  joined the two !

Yereyanga welcomed the new figure warmly “ O ! You are the Hunter King aren’t you ! 
“ Yes , I am….couldn’t bear this fellow’s wailing and came to tell him about my own plight !”
“ What misfortune has befallen you , friend? You were lording it over in that lovely  Sarangarama Pattana , weren’t you ? ”



“ True , our lovely Saramu , surrounded by lush forests , full of deer , used to be a paradise . Our  hunters always had good hunts and my people had plenty for food and attire ……but there was a bad season once  when we did not have good hunts . So I myself went looking for stags in the deeper forest …..and after a long search , spotted a deer behind a bush . Just as I was shooting my arrow , a great big stag burst out  from somewhere and attacked  me with its antlers . I put up a spirited fight and somehow managed to shoot another arrow at it . It was a great hunt . We had enough meat for everyone …..but , before it fell, its antlers had gored me deeply .”
“ Ayyo !”
Sinchana felt repulsed , imagining the scene . What a gory play these people are rehearsing !

“Everyone hailed me as a great hero . They even worshipped me....! But now …..the forest is gone ….deer are gone …..only people , by the thousands ……and I lie leaning to a crumbling wall in a dilapidated kalyana mantapa. People by the dozen pass by me every minute , but none to cast a glance in my direction . Time is cruel ! ”

A new voice said “ Your story , their story is also my story.”

Sinchana was startled . How did this one appear so suddenly ?

“ Who are you Sir ?” enquired the others , a bit alarmed “And what happened to you !!!?”

“ I belong to a very ancient world . The world of Sripurusha, the Ganga king . Pandyas , Pallavas and Rashtrakutas were frequently invading our land and I had fought in battles against them . In one fierce attack , our men were getting trampled under the legs of the enemy infantry . In a rage , I attacked with a sword in one hand and a strung bow in another cutting down the attackers in great numbers . The battle was win and I was hailed as a Hero , celebrated by the whole province ……For a long time I was enjoying my celebrity status…then suddenly everything went dark .”
“ What ! How ? Why ?”
“ I saw light only after a very long time ….all that while , I had been fully buried under  earth ! ”
“Ayyo Shivane ! ”
“After emerging from the earth , I stood leaning to a temple wall .”

Sinchana could not make out head or tail of this narration. What a strange folk tale they have chosen for a Village Theater !
“ I would have quietly carried on that way …..but first came the limewash ! While painting the temple , they painted over me too ….then came worse . Someone got the bright idea of burning garbage right beside me . The heat was too much to bear, everything below my midriff got blown to shreds .”

Sinchana’s  stomach churned , as she gasped in horror .

“ Ayyo ! What a fate to befall a martyr like you !......O , Somi , if I may call you so, sir,  where are you put up now ? ”

“ Some good soul carried me to the safety of a building . People who come there refer to me as Mareya , but know nothing about the story of my life . I was once looked upon as a role  model in my town , now as an amputee , I remain an  unknown . ”

There was a sudden , loud call and something like an enormous bat came gliding down from the sky towards the group and, wrapping itself up,  settled on the ground.



‘ What a huge batman ! ’ Sinchana’s eyes went round with wonder ‘Are they really Actors or some Wizards ?’

“ I was an equally great hero too ! ” Declared this new entrant. “ Our province had great cattle wealth and this attracted a lot of looters from neighbouring  provinces . Once they came as a large gang  to take away our cattle . I lead the charge to chase them away. With a sword in hand and a dagger ready at my waist belt  , I fell upon the marauders and saved our cattle . Though , in the fight , I was gravely wounded too.”

“ And then ? ”

“As you can expect , I was celebrated . For a longtime , I was even worshipped …….I watched from under a banyan tree , how our little province grew and grew to be a big, bustling City ……then , one day, due to the carelessness of City Dweller , there was an accident and I was beheaded …….and I have been searching since for my lost head ….in vain ! ”

Sinchana started  getting feverish . A headless man talking ?!

“ The reason for all our woes are City Dwellers, their negligence ! ” Declared the man who was weeping , angrily .

“ This Mega City has been built on the foundation of the sacrifices and bravery of people like us , but they care not !  Fumed the bat – man.

But Mareya spoke softly “ They are not all villains . They have just forgotten us because of their busy life . We need to just remind them of us.   
“ What do you mean ? How can we remind them ? ”asked Yereyanga .
“ Heroes like us , who were once revered , now stand forgotten in unknown fields and gardens, in dilapidated temples, in dried up tanks, in godforsaken gullies and backyards ….! They are all coming together now to fight for their rightful place in The City’s Memory ….look ! Look …..here they come ! ”

Dozens of misty, shadowy figures were massing together like a cloud and gliding down towards the Neem  tree .

Sinchana closed her eyes tightly “ This is a ridiculous nightmare ” she muttered to herself and opened them again . The shadows were still gliding down ! ‘ This is real ! ’

“ Come on Friends , to the task !” Called out the bat – person.
“ Its midnight and no City dweller seems awake …..whom do we target now? ”

“ I see a young lady at that window . She has been watching us for a long time …….come on. Lets get to her .

Terrified, Sinchana tried to close the window, but she could not move any of her limbs .
A flash of lightning lit up the night briefly and Sinchana could see the Headless man and The Half bodied man leading a large hoard of ancient people flying  towards her apartment …..



As they approached , by the light of  another lightening , she saw that their faces were all frozen,  blank and stony . With dead, unseeing  eyes…..
“ Nooooo ….”
She screamed in terror and collapsed in bed .  

---------------------------------------------------------------------------------------------------

8 AM . The continuously ringing mobile awakened her to a bright , fresh smelling morning .

“ Hullo , Sinchu ! I called thrice …..aren’t you awake yet ? 
“ Just woke up Mom …….slept late . Yes, it rained last night ….ok, I have to get ready  Coaching class ….bye Mom.”

She remembered her crazy dream vividly , but did not breathe a word of it to  her mother .

When she came out, she saw Shamanna’s snack cart , all ready and set up for business . Labourers ,  working at the construction site  behind the tree were lining up for piping hot breakfast . After eating , they threw the leaf and paper plates right next to the cart and washed their mouth and hands with water from a bucket Shamanna had provided  for the purpose. He too washed his spoons and bowls there itself. The dirty water was flowing over a stone that was placed  as the cart’s wheel-stop .

‘ ….struggling and suffocating here , being doused with dirty wash water all the time …..’ Sinchana suddenly recalled , very clearly , the wail of the Shadowy man from the night before .

She stopped in her track and called out “ Shamanna ! 
“ O , namaskara , Madam  ! Had breakfast ? 
“ Yes , done! Shamanna , I need a favour ….”
“Sure ! Whats it Madam ?”
“ Can you please move your cart a bit so that I can get that stone out ? 
He was surprised , but got another stone to stop his cart  from rolling away , and shifted the wheel away from the angular cut stone .

Sinchana took a twig and raked some wet mud away from it .
“ Madam , do you want it taken out ? Wait a minute …..” Shamanna called to the tender coconut vendor nearby and procured his sickle . They dug out a bit . Something carved on it was showing up .



Now the excitement caught on . Some labourers got a crowbar and iron rods. A few passersby stopped out of curiosity .
Soon it was out, washed  and lying in the open. The slab , about  3 feet by 2.5 feet in size showed a man holding a bow in the left hand and a sword in the right .
“ Hurrah ! ” Clapped Sinchana
“ What stone is this Madam ?  Shamanna was full of wonder .
“ This is a Veeragallu , Shamanna . A tiger with front paws raised is trying to attack him and he is tackling it with a sword and a bow .”
“ Who is he , Madam ? ”
“ A Hero , Shamanna , a  Veera who lived many hundreds of years ago in this same village. He died while fighting off a tiger , so his people had this memorial made for him so that his courage can be an inspiration for others.”
“ So much story in this stone ! ”
“ Yes ! These are our ancestors . How they lived , what they did , how their village functioned , what kind of rulers they had …..all such facts can be understood from such Hero stones and inscribed stones . We today , live in a society and City , built on the Foundation people like him laid for us . We owe it to them to remember them with gratitude. We should preserve all such records of the past and honour them .”

Shamanna  was totally captivated by the reality of what had lain under his cart all this time .

Some of the labourers who had  helped  in excavating the stone were equally astonished .

“ There   were four  or five similar stones lying in the Site when work started here  ……” said one of them.
“ Really ? ” Sinchana was overcome with excitement . “Where are they now? Can you show me ?”

“They were all crushed to jelly  then itself and filled into the foundation, Madam .
--------------------------------------------------------------------------
Based on :
*Kaikondarahalli Hero Stone
*Krishnarajapuram Hero Stone
*An article titled 'Bengaloorina Pracheena Smaarakagalu' 
by Dr. Mutturaju, published in the book ' Bengalooru Jilleya Ithihasa Mattu Puratatva.
-----------------------------------------------------------------

No comments:

Post a Comment